ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
(ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನಗಳು)
1
ಧವಳಕೀರ್ತಿಯನ್ನುಳಿಸಿದ ಕೃಷ್ಣಮೂರ್ತಿ
– ಶತಾವಧಾನಿ ಆರ್, ಗಣೇಶ್
ಡಿವಿ ಜಿ ಯವರು ತಮ್ಮ “ಸಂಸ್ಕೃತಿ” ಎಂಬ ಸೊಗಸಾದ ಕಿರುಹೊತ್ತಿಗೆಯಲ್ಲಿ ಸುಸಂಸ್ಕೃತ ಮಾನವನ ಲಕ್ಷಣಗಳನ್ನು ನಿರೂಪಿಸುತ್ತಾ ಭರ್ತೃಹರಿಯ ಶ್ಲೋಕದ ಆಧಾರದಿಂದ ತಮ್ಮದೊಂದು ಪದ್ಯವನ್ನು ಉಲ್ಲೇಖಿಸುತ್ತಾರೆ.
ಕಲಿತಂ ಕಲ್ಲರೊಳ್, ಆಜ್ಞರೊಳ್ ತಿಳಿಯದಂ, ವಾಕ್ಯಜ್ಞರೊಳ್
ವಾಗ್ಮಿ ಮರ್ತೆ
ಎಳೆಯಂ ತಾನ್ ಎಳೆಯರ್ಕಳೊಳ್, ಬಡವರೊಳ್ ದೀನಂ.
ಸಖಂ ಸಖ್ಯರೋಳ್!
ನಲಿವಂ ಭೋಗದೆ ಭೋಗಿವೃಂದದೆ, ವಿರಾಗಂ
ರಾಗನಿರ್ಮುಕತರೋಳ್
ಸುಲಭಂ ಸಂಸ್ಕೃತನೆಲ್ಲರೊಳ್ ಸಮರಸಂ ವಿಶ್ವಾತ್ಮ
ಸಂಜ್ಞಾಪನಂII
ಇಂಥ ಮಹಾಲಕ್ಷಣಗಳನ್ನುಳ್ಳ ಮಹನೀಯರು ನಮ್ಮೊಡನೆ ಯಾರಾದರೂ ಇದ್ದರೇ? ನಾವು ಅವರನ್ನು ಚೆನ್ನಾಗಿ ಅರಿತು, ಅವರೊಡನೆ ನುರಿತಿದ್ದೇವೇ? ಎಂದು ಪ್ರಶ್ನಿಸಿಕೊಂಡಾಗ ನನಗೆ ಥಟ್ಟನೆ ಹೊಳೆಯುವ ಹೆಸರು ದಿವಂಗತ ಲಂಕಾ ಕೃಷ್ಣಮೂರ್ತಿಯವರದು. ಅವರನ್ನರಿತವರು ಈ ಮೇಲಣ ಪದ್ಯವು ಅವರಿಗಾಗಿಯೇ ರಚಿತವಾಯಿತೇನೋ ಎಂಬಂತಿದೆಯೆಂದು ಹೇಳದಿರಲಾರರು.
ಶ್ರೀಯುತ ಕೃಷ್ಣಮೂರ್ತಿಯವರ ಉದ್ಯೋಗದ ಸಾಧನೆಗಳನ್ನಾಗಲೀ, ಕೌಟುಂಬಿಕ ಸಂಗತಿಗಳನ್ನಾಗಲಿ ನಾನು ಹೆಚ್ಚಾಗಿ ಬಲ್ಲವನಲ್ಲ. ನಾನು ಕಂಡಿದ್ದು ಹೆಚ್ಚಾಗಿ ಅವರ ಸಾಹಿತ್ಯ ಮತ್ತು ಸಂಸ್ಕೃತಿಗಳ ಮುಖವನ್ನೇ. ಆದರೆ ಕೃಷ್ಣಮೂರ್ತಿಗಳ ಯಾವ ಮುಖವೂ ಕುರೂಪಿಯಲ್ಲ, ಕುಹಕಿಯಲ್ಲ. ಸರ್ವತ್ರ ಋಜುತ್ವವನ್ನೇ ಅವರು ಆರಾಧಿಸಿ ಅನುಸಂಧಾನಿಸಿದ್ದರು. ಅವರ ಕೆಲವೊಂದು ನಡೆಬೆಳಕಿನ ಸೊಬಗನ್ನು ನುಡಿಗುಡಿಯಾಗಿಸುವುದಷ್ಟೇ ನನ್ನ ಪ್ರಸ್ತುತ ಯತ್ನ.
ನಾನು ಮೊದಲಿಗೆ ಶ್ರೀ ಲಂಕಾ ಕೃಷ್ಣಮೂರ್ತಿಯವರನ್ನು ಕಂಡದ್ದು ಅವಧಾನ ಸಭೆಯೊಂದರಲ್ಲಿ. ಮೊದಲ ನೋಟಕ್ಕೆ ಅವರು ಅನಾಕರ್ಶಕವಾಗಿಯೇ ಕಂಡರು. ಅಲ್ಲದೆ ಅವರು ಸಭೆಯನ್ನು ಬೆರಗುಬಡಿಸುವಂಥ ವಾಚಾಳಿಯೂ ಅಲ್ಲ. ಹೀಗಾಗಿ ಅವರ ಬಗ್ಗೆ ಆಸಕ್ತಿಯೇ ಮೂಡಲಿಲ್ಲ. ಆದರೆ ಕೆಲವರ್ಷಗಳ ಬಳಿಕ ನನ್ನ ಮಿತ್ರರೂ, ಅವರಿಗೆ ಸಂಹಿತರೂ ಆದ ಶ್ರೀ ಬಿ. ಆರ್. ಪ್ರಭಾಕರ್ ಅವರ ಮೂಲಕ ನನಗೆ ಕೃಷ್ಣಮೂರ್ತಿಗಳ ನೇರ ಪರಿಚಯವಾಯಿತು. ಅಂದೇ ಅವರ ಸಂಸ್ಕೃತಕವಿತಾ ಕೌಶಲವೂ, ಸಮಸ್ಯಾಪೂರ್ಣಪಾಟವವೂ ಮನ ಮುಟ್ಟಿದವು. ಅಲ್ಲದೆ ಅವರು ಮಾತಿನಲ್ಲೆಷ್ಟು ಜಾಗರೂಕರೆಂಬುದೂ ತಿಳಿಯಿತು. ಆ ಸಮಯದಲ್ಲೇ ಅವರು ತೆಲುಗಿನಿಂದ ಸಂಸ್ಕೃತಕ್ಕೆ ಭಾಷಾಂತರಿಸುತ್ತಿದ್ದ ತಿಕ್ಕನ ಸೋಮಯಾಜಿಯ ನಿರ್ವಚನೋತ್ತರ ರಾಮಾಯಣದ ಭಾಗಗಳನ್ನೂ ಗಮನಿಸಿದೆ. ಅಲ್ಲಿ ನಾನು ತಪ್ಪೆಂದು ಭ್ರಮಿಸಿ ಯಾವುದೋ ಶಬ್ದರೂಪವನ್ನು ತೋರಿಸಿದೆ. ಕೂಡಲೆ ಅವರು ಅದರತ್ತ ಧಾವಿಸಿದರು.
ಹಸ್ತಪ್ರತಿಯ ಕಡತದಲ್ಲಿ ನಾನು ಸೂಚಿಸಿದ ಪದ್ಯವೆಲ್ಲೋ ಮರೆಯಾಗಿತ್ತು. ಅದಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಬೇಕಾಯಿತು. ಕಡೆಗೆ ನಾನು “ಅದು ಸರಿಯೇ ಇದ್ದಿರಬಹುದು. ನೀವು ಚಿಂತಿಸಬೇಡಿ” ಎಂದು ಹೇಳಿದರೂ ಒಪ್ಪದೆ ಅಂತೂ ಆ ಪದ್ಯವನ್ನು ಹುಡುಕಿ ತೆಗೆದರು! ಆದರೆ ಅದು ನಾನು ಭ್ರಮಿಸಿದಂತೆ ತಪ್ಪಾದ ಪದವನ್ನು ಹೊಂದಿರದೆ ಶುದ್ಧವಾಗಿಯೇ ಇದ್ದಿತು! ನನಗಾಗ ತುಂಬಾ ಖೇದವಾಯಿತಾದರೂ ಶ್ರೀ ಕೃಷ್ಣಮೂರ್ತಿಯವರು ಸಮಾಧಾನ ಹೇಳಿ, “ಮುಖ್ಯವಾಗಿ ನಮಗೆ ಬೇಕಾದದ್ದು ನಿರ್ದೋಷತ್ವ, ಭಾಷಾಶುದ್ಧಿ. ಅದಕ್ಕಾಗಿ ತಾನೆ ನೀವೂ ಕೇಳಿದ್ದು. ನಾನೂ ಹುಡಿಕಿದ್ದು. ಇನ್ನೇಕೆ ಚಿಂತೆ! ಎಲ್ಲಾ ಸರಿಯಾಯಿತಲ್ಲ!” ಎಂದರು. ಇದು ಲಂಕಾ ಕೃಷ್ಣಮೂರ್ತಿಗಳ ಭಾಷಾಶುದ್ಧಿ ಮತ್ತು ನಿರ್ದೋಷತಾ ಪ್ರೀತಿಗಳಿಗೊಂದು ಸಣ್ಣ ನಿದರ್ಶನ.
ಮತ್ತೊಮ್ಮೆ ಕೋಲಾರದಲ್ಲಿ ಅವಧಾನ ನಡೆಸಲು ತೆರಳಿದಾಗ ಕೃಷ್ಣಮೂರ್ತಿಯವರೂ ನಮ್ಮೊಡನೆ ಬಂದಿದ್ದರು. ಬಸ್ಸಿನಲ್ಲಿ ನನ್ನನ್ನು “ ನೀವು ಅವಧಾನಿಸಬೇಕಾದವರು ಶ್ರಮ ಮಾಡಿಕೊಳ್ಳಬಾರದು. ನೆರಳಿನತ್ತ ಕೂಡಿರಿ. ನಾನು ಬಿಸಿಲಿನತ್ತ ಕೂಡುವೆ. ನಮಗೇನು? “ಗೊರ್ರೆಲತೋ ತೋಲಿನಾ ಸರೇ ಗೇದೆಲತೋ ತೋಲಿನಾ ಸರೇ”. ಆದರೆ ನೀವು ಹಾಗಲ್ಲ. ಕಾರ್ಯಕ್ರಮದ ಜವಾಬ್ದಾರಿ ನಿಮ್ಮದಲ್ಲವೇ” ಎಂದು ಬೇರೆಯ ಕಡೆ ಕೂಡಿಸಿದ್ದರು. ಇದು ಅವರು ವಾತ್ಸಲ್ಯ ಮತ್ತು ಸಾರಳ್ಯಗಳ ಸೊಗಡಿಗೊಂದು ಸಣ್ಣ ಸಾಕ್ಷ್ಯ.
ಇನ್ನೊಮ್ಮೆ ಕೆ.ಜಿ.ಎಫ಼್ ನಲ್ಲಿ ಅವಧಾನವೊಂದನ್ನು ನಡೆಸಿ ಅದಾದ ಬಳಿಕ ಮೂಕಾಭಿನಯವನ್ನೊಂದನ್ನು ನೋಡುವ ಅವಕಾಶ ಬಂದಿತು. ನಮ್ಮಲ್ಲಿ ಕೆಲವರಿಗೆ (ನಾನೂ ಸೇರಿದಂತೆ) ಆ ಮೂಕಾಭಿನಯದ ಅತಿರೇಕ ರುಚಿಸಲಿಲ್ಲ. ಆದರೆ ಕೃಷ್ಣಮೂರ್ತಿಯವರು ವಿಮುಖರಾಗದೆ ಅದರ ಸ್ವಾರಸ್ಯವನ್ನಷ್ಟನ್ನೂ ಗ್ರಹಿಸಿ ಬಳಿಕ ನಮಗೆ ಆ ಕಾರ್ಯಕ್ರಮದ ಗುಣ–ದೋಷಗಳ, ವ್ಯಾಪ್ತಿ– ಪರಿಮಿತಿಗಳ ಬಗ್ಗೆ ಮನನೀಯವಾದ ಮಾತುಗಳಲ್ಲಿ ತಿಳುವಳಿಕೆ ನೀಡಿದರು. ಅವರು “ಹಳತೆಲ್ಲ ಹೊನ್ನು ಹೊಸತೆಲ್ಲ ಹೊಲ್ಲ” ಎನ್ನುವಂಥಹವರಲ್ಲವೆಂಬುದಕ್ಕೆ ಇದು ಸುಂದರ ನಿದರ್ಶನ.
ಇದೇ ರೀತಿ ಅವಧಾನ ಕಾರ್ಯಕ್ರಮವೊಂದಕ್ಕಾಗಿ ಚಿಂತಾಮಣಿಗೆ ಹೋಗಿ ಅಲ್ಲಿಂದ ಮರಳಿ ಬರುವಾಗ ನಮ್ಮೊಡನೆ ಹೊಸತಾಗಿ ಸೇರಿಕೊಂಡ ವಿದ್ವಾಂಸರೊಬ್ಬರು ಶ್ರೀಮದ್ಭಾಗವತದ ಮಂಗಳಶ್ಲೋಕಕ್ಕೆ ತಮ್ಮದಾದ ವ್ಯಾಖ್ಯೆಯನ್ನು ನೀಡತೊಡಗಿದರು. ಆಗ ಅವರ ಮಾತಿನಲ್ಲಿ ತಲೆದೋರಿದ ದೋಷವನ್ನೂ, ನಿರ್ವಚನದ ಅಸಾಧುತ್ವವನ್ನೂ ಗಮನಿಸಿ ಕೃಷ್ಣಮೂರ್ತಿಯವರು ಕೂಡಲೇ ಸಗೌರವವಾಗಿ ಆ ವಿದ್ವಾಂಸರ ವಾದವನ್ನು ಸಂಪೂರ್ಣವಾಗಿ ಖಂಡಿಸಿದರು. ಆದರೆ ಈ ಸಂದರ್ಭದಲ್ಲಿ ಅವರ ಧ್ವನಿ ಸ್ವಲ್ಪವೂ ಏರಲಿಲ್ಲ. ಮಾತಿನ ಜಾಡಿನಲ್ಲಿ ಎಳೆಯಷ್ಟೂ ಆವೇಶ–ಅಭಿವೇಶಗಳಿರಲಿಲ್ಲ. ಹೀಗೆಯೇ ಇನ್ನೊಮ್ಮೆ “ಧರ್ಮಪ್ರಭ” ಪತ್ರಿಕೆಗಾಗಿಯೇ ನಾನು ಬರೆದ ಲೇಖನದಲ್ಲಿ ಸ್ವಾಭಿಪ್ರಾಯಮಂಡನೆ ಹಾಗೂ ಭಿನ್ನಾಭಿಪ್ರಾಯ ಖಂಡನೆಯ ಹುಮ್ಮಸ್ಸಿನಲ್ಲಿ ಚುರುಕಾದ ಮಾತುಗಳನ್ನು ಬಳಸಿದುದನ್ನು ಕಂಡು ಅವನ್ನೆಲ್ಲ ಕತ್ತರಿಸಿ ‘ಸಾರ್! ನಮ್ಮ ವಿಚಾರಕ್ಕೆ ಮೊನಚುತನ ಬರಬೇಕಿಲ್ಲ, ವಿಚಾರದ ಪ್ರಖರತೆ ಮತ್ತು ಚಿಂತನೆಯ ಪ್ರಾಮಾಣಿಕತೆಗಳಿಂದಲೇ ಅದು ಬರುತ್ತದೆ’ ಎಂದು ಸಮಾಧಾನ ನೀಡಿದ್ದರು. ಒಟ್ಟಿನಲ್ಲಿ ಅವರ ವಾದಗಳಲ್ಲಿ ಕಾವಿರುತ್ತಿರಲಿಲ್ಲ. ಬೆಳಕಿರುತ್ತಿತ್ತು. ಅದೊಂದು ಶೀತಲಕಾಂತಿ ಸೌಭಾಗ್ಯ ಅವರ ಮಾತುಗಳಲ್ಲಿ ಮನೆ ಮಾಡಿಕೊಂಡಿತ್ತು.
ಪಾಂಡಿತ್ಯದ ದೃಷ್ಟಿಯಿಂದ ನೋಡಿದರಂತೂ ಕೃಷ್ಣಮೂರ್ತಿಯವರು ಸಂಸ್ಕೃತ ತೆಲುಗು – ಕನ್ನಡಗಳ ವಿದ್ವತ್ಕವಿತಾನಿಧಿ, ಹಿಂದಿ – ಇಂಗ್ಲೀಷ್, ತಮಿಳು ಭಾಷೆಗಳನ್ನೂ ಬಲ್ಲ ಮೇಧಾವಿ. ವಿಶೇಷತಃ ಅವರಿಗೆ ವೇದಾಂತ, ಧರ್ಮಶಾಸ್ತ್ರ, ಸಾಹಿತ್ಯಾದಿ ಕಲೆಗಳು ಮತ್ತು ವ್ಯಾಕರಣ ಪರಮ ಪ್ರಿಯವಾದ, ವಶಂವದವಿದ್ಯೆಗಳಾಗಿದ್ದವು. ಮನಸ್ಸಿನ ಸಂಸ್ಕಾಕಾರಕ್ಕಾಗಿ, ಆನಂದಕ್ಕಾಗಿ ಕಲಾ ಸಾಹಿತ್ಯ ಪ್ರಕಾರಗಳು, ಮಾತಿನ ಸಂಸ್ಕಾರಕ್ಕಾಗಿ ವ್ಯಾಕರಣ, ಲೋಕಸಂಸ್ಕಾರಕ್ಕಾಗಿ ಧರ್ಮಶಾಸ್ತ್ರ ಮತ್ತು ಸಮಸ್ತ ಸಂಸ್ಕಾರದ ಮೂಲಕ ಆತ್ಮೋನ್ನತಿಗಾಗಿ ವೇದಾಂತ ಎಂಬುದು ಅವರ ನಿಲುವಾಗಿತ್ತು. ಈ ನೆಲೆಯಿಂದಾಗಿಯೇ ಲಂಕಾ ಕೃಷ್ಣಮೂರ್ತಿಯವರಿಗೆ ವ್ಯಾಸ – ವಾಲ್ಮೀಕಿಗಳ ಬಳಿಕ ಕಾಳಿದಾಸ ಮತ್ತು ತಿಕ್ಕನ ಸೋಮಯಾಜಿ ತುಂಬ ಪ್ರಿಯ ಕವಿಗಳಾಗಿದ್ದರು. ಧರ್ಮಶಾಸ್ತ್ರಗಳ ಪೈಕಿ ಅವರಿಗೆ ಮನುಸ್ಮೃತಿ ತುಂಬ ಗೌರವಾರ್ಹವೆನಿಸಿತ್ತು. ಅನೇಕ ಬಾರಿ ನನಗೆ ಅವರು ಮನುವಿನ ಮಹನೀಯತೆಯನ್ನು ಸೋದಾಹರಣವಾಗಿ ವಿವರಿಸಿದ್ದರು. ಸಿದ್ಧಾಂತಕೌಮುದಿಯಂತೂ ಅವರಿಗೆ ಕರತಲಾಮಲಕ. ತಮ್ಮ ಮನೆಯಲ್ಲಿ ಅನೇಕ ವರ್ಷಗಳ ಕಾಲ ವ್ಯಾಕರಣದ ಪಾಠಗಳನ್ನವರು ಹೇಳಿದರು. ಅಲ್ಲದೆ ಪ್ರತಿಯೊಂದು ಶಬ್ದದ ಜಾಡು, ಚರಿತ್ರೆ, ವ್ಯಾಪ್ತಿ, ಅರ್ಥಚ್ಛಾಯೆಗಳ ಬಗೆಗೂ ಅವರ ಕೌತುಕ ಅಪಾರ. ಒಮ್ಮೆ ಕೋಲಾರದಲ್ಲಿ ನನ್ನ ಅವಧಾನದ ಬಳಿಕ ರಾತ್ರಿಯ ಭೋಜನಾ ನಂತರ ಎಂಟು – ಹತ್ತು ಜನ ವಿದ್ವದ್ರಸಿಕರಿರುವ ಆಪ್ತಘೋಷ್ಟಿಯಲ್ಲಿ ವೇದಗಳಲ್ಲಿ ಬರುವ ಜಲವಾಚಕ ಶಬ್ದಗಳನ್ನು ಕುರಿತು, ನೀರಿನ ಮಹಿಮೆಯ ಬಗ್ಗೆ ಮಾಡಿದ ಅಮೋಘ ಪ್ರವಚನವನ್ನು ನೆನೆದರೆ ಈಗಲೂ ಮೈನವಿರೇಳುತ್ತದೆ. ಇನ್ನೊಮ್ಮೆ ಸೊರಬದಲ್ಲಿ ಅವಧಾನಿಸಲು ರಾತ್ರಿಯ ಬಸ್ಸಿನಲ್ಲಿ ಹೊರಟಾಗ ಸುಪ್ರಸಿದ್ಧ ವಿದ್ವಾಂಸರಾದ ರಂಗನಾಥ ಶರ್ಮರೊಡನೆ ಲಂಕಾ ಕೃಷ್ಣಮೂರ್ತಿಯವರು ಸಂಸ್ಕೃತ – ಕನ್ನಡ ಭಾಷಾ ಶ್ಲೇಶದ ತೊಡಕಿನ ಶ್ಲೋಕವೊಂದರ ಅರ್ಥೈಸುವಿಕೆಯ ಚರ್ಚೆಗೆ ತೊಡಗಿದರು. ಇಡಿಯ ರಾತ್ರಿ ಆ ಚರ್ಚೆ ಸಾಗಿ ಬೆಳಗ್ಗೆ ಸೊರಬ ಸೇರಿದಾಗ ಕೃಷ್ಣಮೂರ್ತಿಯವರ ಅರ್ಥನಿರೂಪಣೆಯೇ ಸಿದ್ಧಾಂತವಾಗಿ ನಿಂತಿತು.
ಇಂಥದ್ದೇ ಒಂದು ಪದ್ಯಾರ್ಥ ನಿರೂಪಣೆಯು ಮತ್ತೊಂದು ಪ್ರಯಾಣದಲ್ಲಿ ಸಾಗಿತು. ಆಗ ಬಂದದ್ದು ಶ್ರೀ ಶಂಕರ ಭಗವತ್ಪಾದರ “ಶಿವಾನಂದ ಲಹರಿಯ” ಅಂಕೋಲಂ ನಿಜ ಬೀಜ ಸಂತತೀ…..” ಎಂಬ ಶ್ಲೋಕದ ಅತ್ಯದ್ಭುತ ಅಂತರಾರ್ಥಗಳ ವಿಶ್ಲೇಷಣೆ. ಅವಧಾನಗಳಲ್ಲಿ ಸಮಸ್ಯಾಪೂರಣಗಳಲ್ಲಿಯಾಗಲಿ, ವರ್ಣನಾದಿ ಪದ್ಯಗಳಲ್ಲಿಯಾಗಲಿ ಅವುಗಳ ಅಂತಸ್ವಾರಸ್ಯವನ್ನು ಅವಧಾನಿಗಿಂತ ಚೆನ್ನಾಗಿ ಬಿಡಿಸಿ ಹೊರಗಿಡುವ ವ್ಯಾಖ್ಯಾಕೌಶಲದಲ್ಲಿ ಇವರು ಅಸಮಾನರು. ಆದರೆ ಇವರ ವಿವರಣೆ ಹಿಸುಕಿ, ಹಿಂಜಿ ಬಲವಂತವಾಗಿ ಹೊರಡಿಸುವ ಕಾವ್ಯಹಿಂಸೆಯಲ್ಲ; ಆಳದ ಅಂತರ್ದೃಷ್ಟಿಯ ರಸ ಸಾಕ್ಷಾತ್ಕಾರ. ಇಂಥ ಬಲದಿಂದಾಗಿಯೆ ಇವರ ಚಿತ್ರಕವಿತ್ವ ಲೋಕೋತ್ತರವೆನಿಸುತ್ತದೆ. ಸಮಸ್ಯಾ ಪರಿಹಾರವು ಅತಿಪ್ರಬುದ್ಧವೆನಿಸಿದೆ. ಇವರ ಈ ಪರಿಯ ವ್ಯಾಖ್ಯಾ ವಿಶೇಷತೆಯಿಂದಾಗಿಯೇ “ಅದ್ಭುತ ಶಿಲ್ಪಂಲೋ ಆರ್ಷ ಸಂದೇಶಂ” ಎಂಬ ಶಾಕುಂತಲ ನಾಟಕದ ಅಂತರ್ದರ್ಶನ ಲೇಖನ ರೂಪದಿಂದ ಹೊಮ್ಮಿತು. ಕಾಳಿದಾಸನದೇ ಮತ್ತೊಂದು ಮಹಾಕೃತಿ ರಘುವಂಶಕ್ಕೆ ಇವರು ನೀಡುತ್ತಿದ್ದ ವಿವರಣೆಗಳಾಗಲಿ, ತಿಕ್ಕನನ ಪದ್ಯಗಳಿಗೆ ಕೊಡುತ್ತಿದ್ದ ಹೊಸ ನೋಟವಾಗಲಿ, ವೇದ ಮಂತ್ರಗಳಿಗೆ ಒದಗಿಸುತ್ತಿದ್ದ ಭಾಷ್ಯ ವಿಶೇಷವಾಗಲಿ, ಶ್ರೀಮದ್ಭಾಗವತದಲ್ಲಿ ತಾವೇ ಕಂಡುಹಿಡಿದು ಪ್ರಚುರಿಸಿದ ಶ್ರೀಕೃಷ್ಣ್ನನ “ಪ್ರಥಮಗೀತೆ” ಯಾಗಲೀ ಪ್ರತ್ಯೇಕ ಲೇಖನಗಳನ್ನೇ ಬಯಸುವ ಮಹತ್ವದ ಸಿದ್ಧಿಗಳಾಗಿವೆ. ಈ ದಾರಿಯಲ್ಲಿ ನಡೆದ ಇವರ ಪ್ರಾಯಶಃ ಕಡೆಯ ಬರಹ ಗಾಯತ್ರಿ ಮಂತ್ರಕ್ಕೆ ಸಂಬಂಧಿಸಿದ ಲೇಖನಮಾಲೆ. ಇವುಗಳಲ್ಲದೆ ಕೃಷ್ಣಮೂರ್ತಿಯವರು “ಧರ್ಮಪ್ರಭ’ ಪತ್ರಿಕೆಗೆ ಬರೆಯುತ್ತಿದ್ದ ಸಂಪಾದಕೀಯಗಳೂ, ಓದುಗರ ಪ್ರಶ್ನೆಗಳಿಗೆ ಒದಗಿಸುತ್ತಿದ್ದ ಉತ್ತರಗಳೂ ಮಹಾಜೀವವೊಂದರ ಆಳದ ಅಂತರ್ವಾಣಿಯೇ ಸರಿ.
ಲಂಕಾ ಕೃಷ್ಣಮೂರ್ತಿಯವರು ಹೆಚ್ಚು ಬರೆದವರಲ್ಲ. ನಿಚ್ಚ ಬರೆದವರಲ್ಲ. ಮೆಚ್ಚಿಸಲು ಬರೆಯುವ ಅಭ್ಯಾಸವಿರಲಿಲ್ಲ. ಆದರೆ ಇಚ್ಛೆಯೊಪ್ಪಿ ಬಗೆ ಬಿಚ್ಚಿದರೆ ಕಣ್ಣಿಗೆ ಕಾಡಿಗೆಯನ್ನು ತೀಡಿ ತಿದ್ದಿ ರೂಪಿಸುವಂತೆ ಜಗತ್ತಿಗೆ ಜ್ಞಾನಾಂಜನವನ್ನು ನೀಡುವಂಥದ್ದು ಇವರ ಬರವಣಿಗೆ. ತಮ್ಮ ಬಾಳಿನಲ್ಲಿ ಹೇಗೋ ಹಾಗೆಯೇ ಬರಹದಲ್ಲಿಯೂ ಪ್ರಸಾದ ಗಂಭೀರವಾಗಿ ರಮ್ಯೋಜ್ವಲ ರೀತಿಯಲ್ಲಿ ಅಭಿವ್ಯಕ್ತಿ ಸಾಗುತ್ತಿತ್ತು. ಲೇಪಾಕ್ಷಿಯನ್ನು ಆಧರಿಸಿದ “ತ್ಯಾಗಶಿಲ್ಪಮು” ಇವರ ರಮಣೀಯ ಅಖಂಡ ಖಂಡ ಕಾವ್ಯ. ಶ್ರೀವಿಲಾಸಮು, ದಾನಯಜ್ಞಮು, ಕೊಡೆಯಗೋಪಾಲ ಮುಂತಾದವು ಇವರ ಇನ್ನಿತರ ಪ್ರಕಟಿತ ಕಾವ್ಯ – ಕಾದಂಬರಿಗಳು.
ಇನ್ನು ಅವಧಾನಲೋಕಲೋಜ್ಜೀವನದಲ್ಲಿ ಕೃಷ್ಣಮೂರ್ತಿಯವರು ಪಾಲ್ಗೊಂಡ ಬಗೆಯಂತೂ ಒಂದು ಗ್ರಂಥದಷ್ಟಾಗುತ್ತದೆ. ಅವರಿಲ್ಲದ ಅವಧಾನ ಸಭೆ ಎಂದೂ ಅಪೂರ್ಣ. ನಿಷೇಧಾಕ್ಷರಿಯನ್ನು ಅವರಂತೆ ನಿರ್ವಸಬಲ್ಲವರಾರು? ಅಲ್ಲದೆ ಅವರಿಗೆ ನಿಯಮನಿಷ್ಠುರತೆ ಎಷ್ಟೋ, ರಸೋದಾರತೆಯೂ ಅಷ್ಟ್ವೆ, ಉದ್ದಂಡರಾದ ಅವಧಾನಿಯ ತೊದಲ್ನುಡಿಗೂ ಅವರು ಹರ್ಷಿಸಿ ಅಸಾಧುತ್ವವನ್ನೂ ಗಮನಿಸಿ ಕೃಷ್ಣಮೂರ್ತಿ ಕೂಡಲೇ ಆಶೀರ್ವದಿಸಿದವರೇ, ಕೃಷ್ಣಮೂರ್ತಿಯವರ ಸತ್ಯನಿಷ್ಠೆ ಮತ್ತು ಗುಣಗ್ರಹಣಗಳೆರಡೂ ಅಸಮಾನ. ಸಂಸ್ಕೃತಾಂದ್ರ ಕರ್ಣಾಟಾವಧಾನ ವೇದಿಕೆಗಳಲ್ಲಿ ಅವರಿಗಿದ್ದ ಸೌಲಭ್ಯ ಅನ್ಯಾದೃಶ. ಈ ಕಲಾರಸಿಕತೆ ಸಂಗೀತಕ್ಕೂ, ಚಿತ್ರಕಲೆಗೂ ಹರಿದಿತ್ತು. ಲಂಕಾ ಕೃಷ್ಣಮೂರ್ತಿಯವರು ಒಳ್ಳೆಯ ಸಂಗೀತವನ್ನು ಉತ್ತೇಜಿಸಿ, ಆಸ್ವಾದಿಸಿದವರಲ್ಲದೆ ಸ್ವಯಂ ಅರಿತು ಹರಿಕತೆಗಳನ್ನೂ ಮಾಡಿದವರು. ಅವರು ಒಳ್ಳೆಯ ಚಿತ್ರಕಾರರು ಕೂಡ.ವೈದ್ಯಕೀಯದಲ್ಲಿಯೂ ಅವರಿಗೆ ಅಭಿರುಚಿ ಇದ್ದಿತು. ಇನ್ನು ಸನಾತನಧರ್ಮಸಂರಕ್ಷಣ ಸಮಿತಿಯ ದ್ವಾರಾ ಅವರು ಮಾಡಿದ ಕೆಲಸಗಳು ನಿರುಪಮಾನ. ಸಾರ್ವಜನಿಕ ಸೇವಾ ಸಂಸ್ಥೆಗಳಲ್ಲಿ ಅವರು ಶುದ್ಧಿ, ವಿನಯ, ಶ್ರದ್ಧೆಗಳ ತ್ರಿವೇಣಿಯನ್ನೇ ಹರಿಸಿದರು. ಸಂಸ್ಥೆಯ ಕೆಲಸವೆಂದರೆ ಕಾಫಿಯ ಲೋಟಗಳನ್ನು ತಾವೇ ತೊಳೆದಿಡುವ ಮಟ್ಟಿಗೆ ಹಮ್ಮು ಬಿಮ್ಮಿಲ್ಲದೆತೊಡಗಿಕೊಳ್ಳುತ್ತಿದ್ದರು.
ಪದವಿ, ಪ್ರತಿಷ್ಠೆ, ಪೂಜೆ, ಪುರಸ್ಕಾರ, ಧನ, ಕನಕಗಳ ಹಂಬಲವಿಲ್ಲದೆ ಭಗವದ್ಗೀತೆಯ ದೈವೀ ಸಂಪತ್ತಿನ (ಅಧ್ಯಾಯ XVI – 1,2,3) ಆದರ್ಶ ಪ್ರತಿನಿಧಿಯೆಂಬಂತೆ ಅವರಿದ್ದರು. ಅವರ ನೈಜವಾದ ಸಜ್ಜನಿಕೆ ಯಾವ ಮಟ್ಟದ್ದೆಂದರೆ ಶ್ರೀ ಬಸವಣ್ಣನವರು ಹರಳಯ್ಯನಿಗೆ “ಶರಣುಶರಾಣಾರ್ಥಿ’ ಎಂದು ನಮ್ರತೆಯಿಂದ ಹೇಳಿದಂಥದ್ದು. ದೂರವಾಣಿಯಲ್ಲಿ ಯಾರೇ ಅವರೊಡನೆ ಮಾತನಾಡಿದರೂ ಮೊದಲ ‘ನಮಸ್ಕಾರ ಸಾರ್’ ಹಾಗೂ ಕಡೆಯ ‘ನಮಸ್ಕಾರ ಸರ್! ನಮಸ್ಕಾರ!’ ಎಂಬ ಉಕ್ತಿಗಳು ಅವರದೇ ಸೊತ್ತು. ನಾವೆಷ್ಟು ತಗ್ಗಿದರೂ, ನಮಗಿಂತ ತಗ್ಗಬಲ್ಲ ವಿನಯಶೀಲತೆ ಅವರದು. ಆದರೆ ಈ ಗುಣವು ಅವರ ಪ್ರಾಮಾಣಿಕತೆಯಿಂದಾಗಿ ಸಹಜವಾಗಿರುತ್ತಿತ್ತಲ್ಲದೆ ಎಂದೂ ಕೃತಕವೆನಿಸುತ್ತಿರಲಿಲ್ಲ. ಇನ್ನು ತಮ್ಮ ಇತಿ – ಮಿತಿಗಳ ವಿಚಾರದಲ್ಲಂತೂ ಎಣಿಕೆಯಿಲ್ಲದ ಆತ್ಮಸಮರ್ಪಣಭಾವವಿತ್ತು. ತಾವು ತಿಳಿಯದ ಸಂಗತಿಯನ್ನು ಅದೆಷ್ಟು ಪ್ರಾಂಜಲವಾಗಿ ಹೇಳುತ್ತಿದ್ದರೆಂದರೆ ಆ ಪಾರದರ್ಶಕ ಚಾರಿತ್ರ್ಯಕ್ಕೆ ಹೋಲಿಕೆಯೇ ಇಲ್ಲ. ಆ ನಡೆವಳಿಕೆಯ ಮುಂದೆ ಸ್ಫಟಿಕವೂ ಮಂಜುಮಂಜು, ಗಂಗೋದಕವೂ ಮಬ್ಬು ಮಬ್ಬು, ಅನ್ಯರ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಅವರೆಂದೂ ಅಡ್ಡಿಯಾಗಿರಲಿಲ್ಲ. ಆದರೆ ಆ ಧರ್ಮಕ್ಕೆ ಸೊಪ್ಪು ಹಾಕುತ್ತಿರಲಿಲ್ಲ.
ಶ್ರೀ ಲಂಕಾ ಕೃಷ್ಣಮೂರ್ತಿಯವರಿಗೆ ಪ್ರಿಯವೂ, ಆರಾಧ್ಯವೂ ಆದ ಮುಖ್ಯ ತತ್ವಗಳೆಂದರೆ ಸಾಮಾನ್ಯ ಧರ್ಮ(ಅಹಿಂಸೆ, ಸತ್ಯ, ಆಸ್ತೇಯ, ಶುಚಿತ್ವ, ಅಂತರಂಗ ಬಹಿರಂಗ ನಿಗ್ರಹ, ದಯೆ, ದಾನ, ಸಂತೃಪ್ತಿ ಮುಂತಾದ ಮೂಲಭೂತ ಮಾನವೀಯ ಮೌಲ್ಯಗಳು), ಋತ – ಧರ್ಮಗಳ ದರ್ಶನ, ಅದ್ವೈತ ವೇದಾಂತದ ಸಾರ್ವರ್ತಿಕ ಸಮೈಕ್ಯ ಪ್ರಜ್ಞೆ, ವ್ಯಾಸ – ವಾಲ್ಮೀಕಿಗಳ ಮಹಾಕಾವ್ಯ ದೀಪ್ತಿ, ಕಾಳಿದಾಸ ಮತ್ತು ತಿಕ್ಕನರ ಜೀವನ ಸೌಂದರ್ಯ ಸಮನ್ವಯ ಹಾಗೂ ಇಷ್ಟ ದೈವವಾದ ಶ್ರೀಕೃಷ್ಣನ ರೂಪದಲ್ಲಿ ಉಪಾಸನೆ ಮಾಡಿದ ಪರಭಕ್ತಿಯ ಅನುಸಂಧಾನಗಳು. ಇವೇ ಅವರ ಬಾಳನ್ನು ನಡೆಸಿದವು. ಅವರ ಕಡೆಯ ದಿನಗಳಲ್ಲೊಮ್ಮೆ ನಾನು ನನ್ನ ಅವಧಾನವೊಂದಕ್ಕೆ ಅವರನ್ನು ಕರೆತರುತ್ತಿದ್ದಾಗ ಅವರಾಗಿ ಹೀಗೆ ಹೇಳಿದ್ದರು. ‘ ಸಾರ್! ನನಗೀಗ ಜಗತ್ತೆಲ್ಲ ಈಶ್ವರನ ಲೀಲೆಯೆಂದು ಕಾಣುತ್ತಿದೆ. ಎಲ್ಲಿಯೂ ವೈಷಮ್ಯ ವಿರೋಧಗಳ, ಭೇದಖೇದಗಳ ವಿಕಾರವಿಲ್ಲ. ಸರ್ವತ್ರ ಆನಂದ ತುಂಬಿದೆ. ನನಗೀಗ ಜಗತ್ತು ಕರ್ತವ್ಯದಂತೆ ಭಾರವಾಗಿಲ್ಲ, ಲೀಲೆಯಂತೆ ಹಗುರಾಗಿದೆ. ಎಲ್ಲ ಬ್ರಹ್ಮವಾಗಿದೆ!’ ಇದು ಅವರಿಗಾದ ಸಾಕ್ಷಾತ್ಕಾರವೆಂದೇ ನಾನು ನಂಬಿದ್ದೇನೆ. ಅವರ ಬಗ್ಗೆ ನಾನೊಮ್ಮೆ ಅವಧಾನದಲ್ಲಿ ಹೇಳಿದ ಸಂಸ್ಕೃತ ಶ್ಲೋಕವೊಂದು ಇಲ್ಲಿ ಸ್ಮರಣೀಯ.
ಸೌಜನ್ಯಾಯತನಂ ಸುಧೀಸಹೃದಯಂ ಸಾಹಿತ್ಯ ಸತ್ವೇಸ್ಥಿತಂ
ನಿರ್ಲೇಪಕ್ರಿಯಾಯನ್ವಿತಂ ನಿಜಗುಣೈರ್ನವ್ಯಂ ನತಂ ನಿಸ್ತುಲಂI
ಆರ್ಷಶ್ರೀಕವಿತೇವ ಬಾಹ್ಯಸರಲಂ ಭೂಮಾನಮಂತಃಪ್ರಭಂ
ಲಂಕಾಂಕಂ ತ್ವಕಲಂಕಮೇವ ಕಲೆಯೇ ಕೃಷ್ಣಂ ಶುಚಿಕ್ಯಾಪಕಂII
(ಸೌಜನ್ಯದ ತವರಾದ, ಸಹೃದಯ ವಿದ್ವಾಂಸನೆಸಿದ, ಸಾಹಿತ್ಯದ ನೆಲೆಯಲ್ಲಿ ನಿಂತ, ನಿರ್ಲೇಪಕರ್ಮಯೋಗಿಯಾಗಿ ನೈಜಗುಣಗಳಿಂದ ಜಗದ ಗೌರವ ಪಡೆದೂ ನಿರುಪಮಾನ ವಿನಯದಿಂದ ಬೆಳಗಿದ, ವೇದವಾಣಿಯಂತೆ ಹೊರಗೆ ಸರಳವಾಗಿದ್ದು ಒಳಗೆ ಭವ್ಯತೆಯ ಬೆಳಕಾದ, ಅಕಲಂಕ ಚರಿತ್ರೆಯ, ಶುಚಿಜೀವನದ ಲಂಕಾಕೃಷ್ಣಮೂರ್ತಿಗಳಿಗೆ ನಮನ.)
ಮಹಾಕವಿ ಷೇಕ್ ಸ್ಪಿಯರ ಮಾತಿನಲ್ಲಿ ಹೇಳುವುದಾದರೆ:
“His life was gentle and the elements so mixed in him, that nature might stand up and say to all the
‘World This was a Man’ !”
2
ತಂಪುಹೊತ್ತಿನಲ್ಲಿ ನೆನೆಯಬೇಕಾದ ಅಪರೂಪದವರು
– ಟಿ.ಅರ್. ಮಹದೇವಯ್ಯ, ಸಂಪಾದಕ ವರ್ಗದ ಪರವಾಗಿ
ಮನುಷ್ಯನ ಹುಟ್ಟಿನ ಸಾರ್ಥಕತೆ ನಾಲ್ಕು ಕಾಲ ನಿಲ್ಲಬಲ್ಲ ಏನಾದರೂ ಜನೋಪಯೋಗಿ ಕೆಲಸ ಮಾಡುವುದಲ್ಲಿರುತ್ತದೆ. ತಾನು ತನ್ನ ಮನೆ, ತನ್ನ ಕುಟುಂಬ ಎನ್ನುವ ಸಂಕುಚಿತವಾದ ಸ್ವಾರ್ಥಪರ ದೃಷ್ಟಿಯಲ್ಲಿ ಬದುಕುವವ ಕಣ್ಮರೆಯಾಗಿ ಹೋದ ಮೇಲೆ ಅವನನ್ನು ಯಾರೂ ನೆನಸರು. ಸ್ವಾರ್ಥಪರ ದೃಷ್ಟಿಯಲ್ಲಿ ಬದುಕುವವ ಕಣ್ಮರೆಯಾಗಿ ಹೋದ ಮೇಲೆ ಅವನನ್ನು ಯಾರೂ ನೆನಸರು. ಸ್ವಾರ್ಥಲೇಶವಿಲ್ಲದೆ ಸಕಲರ ಒಳಿತಿಗಾಗಿ ಸೇವೆಗೈದ ಪುಣ್ಯಾತ್ಮರು ದೈಹಿಕವಾಗಿ ಕಣ್ಮರೆಯಾದರೂ ಜನಮನದಲ್ಲಿ ಜೀವಂತವಾಗಿರುತ್ತಾರೆ. ಅವರ ಸಾಧನೆಗಳು, ಅನುಕರಣೀಯವಾದ ಅವರ ನಡವಳಿಕೆಗಳು ಆದರ್ಶವೆನಿಸಿ ಅವರನ್ನು ಜೀವಂತವಾಗಿಸುತ್ತವೆ. ದಿII ಲಂಕಾ ಕೃಷ್ಣಮೂರ್ತಿ ಅವರುಗಳು ಅಂಥ ಅನನ್ಯ ಚೇತನ. ಇಂಥಹವರನ್ನೇ ಪ್ರಾತಃ ಸ್ಮರಣೀಯರು ಎನ್ನುವುದು.
ಸರಳಜೀವನ, ಉದಾತ್ತ ಚಿಂತನ ಅಂದರೇನು ಎಂಬುದಕ್ಕೆ ಅವರ ಬದುಕು ಉತ್ಕೃಷ್ಟ ಉದಾಹರಣೆಯಾಗಿತ್ತು. ವಿಜ್ಞಾನದಲ್ಲಿ ಪದವೀಧರರಾಗಿ, ನ್ಯಾಯಶಾಸ್ತ್ರ ಓದಿ ಬಿ.ಎಲ್. ಪದವಿ ಪಡೆದು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ವೃತ್ತಿಗೆ ಸೇರಿ ತಮ್ಮ ದಕ್ಷತೆ, ಪ್ರಾಮಾಣಿಕತೆ ಮತ್ತು ಕಾರ್ಯಸಮರ್ಥತೆಯಿಂದಾಗಿ ಹಂತ ಹಂತವಾಗಿ ಮೇಲೇರಿ ಜಂಟೀ ರಿಜಿಸ್ಟ್ರಾರ್ ಆಗಿ ನಿವೃತ್ತರಾದವರು ಅವರು ಎಂದರೇ ಯಾರೂ ನಂಬುವಂತಿರಲಿಲ್ಲ. ಅವರು ಕನ್ನಡ, ಸಂಸ್ಕೃತ, ತೆಲುಗು, ಹಿಂದಿ, ತಮಿಳು, ಇಂಗ್ಲೀಷ್ ಮೊದಲಾದ ಬಹುಭಾಷೆ ಪಂಡಿತರಾಗಿದ್ದರು. ತೆಲುಗಿನಲ್ಲಿ ಅವರು ಮಹಾಕಾವ್ಯಗಳನ್ನು ಬರೆದಿದ್ದಾರೆ. ಅವರ ಹವ್ಯಾಸ ವೈವಿಧ್ಯವನ್ನು ಕಂಡರೆ ಆಶ್ಚರ್ಯವೆನಿಸುತ್ತದೆ. ಅವರು ಸಂಗೀತಜ್ಞರಾಗಿದ್ದರು. ಚಿತ್ರಕಲೆಯಲ್ಲಿ ನೈಪುಣ್ಯ ಹೊಂದಿದ್ದರು. ಅಷ್ಟಾವಧಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ತೆಲುಗು ಮತ್ತು ಕನ್ನಡದ ಅಷ್ಟಾವಧಾನ, ಶತಾವಧಾನಗಳಲ್ಲಿ ಪೃಚ್ಛಕರಾಗಿ ಕೆಲಸ ಮಾಡಿ ಆ ವಿಶೇಷ ಕಲೆ ಜನಪ್ರಿಯವಾಗಲು ಕಾರಣಕರ್ತರಾಗಿದ್ದರು. ಇಷ್ಟಾದರೂ ಅವರದು ತುಂಬಿ ತುಳುಕದ ಹಿರಿಯ ಜೀವ. ಎಳೆಯರಿಗೆ ಅವರು ನೀಡುತ್ತಿದ್ದ ಪ್ರೋತ್ಸಾಹ. ತೋರುತ್ತಿದ್ದ ಮಾರ್ಗದರ್ಶನ ಉಲ್ಲೇಖನೀಯ.
ಲಂಕಾ ಅವರು ನಮ್ಮ ಸನಾತನ ಧರ್ಮದಲ್ಲಿ ಅಪಾರ ಆಸಕ್ತಿಯುಳ್ಳವರು. ಒಳ್ಳೆಯ ಆಚಾರವಂತರು. ಶಿಸ್ತಿನ ಜೀವನವನ್ನು ನಡೆಸಿಕೊಂಡು ಬಂದವರು. ನಡೆ – ನುಡಿಗಳೊಂದಾದ ಅಪರೂಪದವರು. ಮೇಲ್ನೋಟಕ್ಕೆ ಸಂಪ್ರದಾಯ – ಶರಣರಂತೆ ಅವರು ಕಂಡರೂ ಅವರದು ತೆರೆದ ಮನಸ್ಸು. ಒಳ್ಳೆಯದು ಯಾವ ಕಡೆಯಿಂದ ಬಂದರೂ ಸ್ವೀಕರಿಸಲು ಸಿದ್ಧ. ಮೂಢನಂಬಿಕೆ, ಕಂದಾಚಾರಗಳನ್ನು ಅವರು ಖಂಡಿಸುತ್ತಿದ್ದರು. ನಮ್ಮ ಆರ್ಷೇಯ ಆಚಾರ ವಿಚಾರಗಳನ್ನು ಆಧುನಿಕ ವೈಚಾರಿಕ ದೃಷ್ಟಿಯ ನಿಕಷಕ್ಕಿಟ್ಟು ನೋಡಿ ಅದರ ಸತ್ವವನ್ನು ಎತ್ತಿ ತೋರಿ, ಅವುಗಳ ಪ್ರಸ್ತುತತೆಯನ್ನು ಮನದಟ್ಟು ಮಾಡುವ ಬಗ್ಗೆ ಅವರು ತೀವ್ರ ಕಾಳಜಿಯನ್ನು ಹೊಂದಿದ್ದರು. ಧರ್ಮವನ್ನು ವೈಜ್ಞಾನಿಕ ದೃಷ್ಟಿಯಿಂದ ಅಭ್ಯಾಸ ಮಾಡುವ ಬಗ್ಗೆ ಅವರು ಸಾಕಷ್ಟು ಪ್ರಯೋಗಗಳನ್ನು ನಡೆಸಿದ್ದರು. ಲೇಖನಗಳಲ್ಲಿ ಬರೆದರು. ವಿಚಾರ ಸಂಕಿರಣವನ್ನು ನಡೆಸಿದರು. ಇಂಥ ಪ್ರಗತಿಪರ ವಿಚಾರಧೋರಣೆಯಿಂದಾಗಿ ಲಂಕಾ ಅವರು “ನಡೆಯುವ ನಾಣ್ಯ” ವಾಗಿದ್ದರು.
“ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು” ಎಂಬ ಡಿ.ವಿ. ಜಿ. ಯವರ ಮಾತಿನಂತೆ ಲಂಕಾ ಅವರಲ್ಲಿ ನಾನು ಸನಾತನತೆ ಮತ್ತು ಆಧುನಿಕತೆಯ ಸುಂದರ ಸಮರಸವನ್ನು ಕಾಣಬಹುದಾಗಿತ್ತು. ಇಂಥ ಆರೋಗ್ಯಕರ ಮನಸ್ಸಿನವರು ಕಟ್ಟಿದ ಸಂಸ್ಥೆ, ನಡೆಸಿದ ಪತ್ರಿಕೆ ಅವರ ಉನ್ನತ ಆದರ್ಶವನ್ನು ಮುಂದುವರಿಸಿವೆ. ಇದು ನಿಜವಾಗಿ ಅವರ ಆತ್ಮಕ್ಕೆ ಶಾಂತಿಯನ್ನು ತರುವ ವಿಚಾರ.
ನಿವೃತ್ತ ಜೀವನವನ್ನು ಸಂಪೂರ್ಣವಾಗಿ ಧರ್ಮಕಾರ್ಯಗಳಿಗಾಗಿ, ಸಾರಸ್ವತ ಸೇವೆಗಾಗಿ ಮೀಸಲಿಟ್ಟ ಲಂಕಾ ಕೃಷ್ಣಮೂರ್ತಿಯವರು ಹತ್ತು ಹಲವು ಬಗೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಯ ಯಾವುದೇ ಕೆಲಸವಿರಲಿ, ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ, ಉಚಿತ ಸಂಸ್ಕೃತ ಪಾಠ, ವಿವಿಧ ಸಮಾಲೋಚಕ ಸಭೆಗಳು, ಕಾರ್ಯಕಾರಿ ಸಮಿತಿ ಸಭೆ ವಿವಿಧ ಸಮಾರಂಭಗಳು ಯಾವುದೇ ಇರಲಿ ಅವರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ದುಡಿಯುತ್ತಿದ್ದರು. ಅವರ ಕ್ರಿಯಾಶೀಲತೆ ಯುವಕರನ್ನು ನಾಚಿಸುತ್ತಿತ್ತು. ಅರಿವ ಹಂಚುವಲ್ಲಿ ಅವರು ತೋರಿದ ಶ್ರದ್ಧಾಭಕ್ತಿಯನ್ನು ಯಾರು ಮರೆಯಲಾದೀತು? ಇಷ್ಟಾದರೂ ನಾನು ಮಾಡಿದೆ ಎಂಬ ಬಿಂಕವಿನಿತಿಲ್ಲ. ಮಾಡಿಯೂ ಮಾಡಿದಂತೆ ನಿಲ್ಲುವ ವೈಷಿಷ್ಟ್ಯ ಅವರದಾಗಿತ್ತು. ಅವರ ದೊಡ್ಡತನ ಅಡಗಿರುವುದೇ ಇಲ್ಲಿ! ದಿನೇ ದಿನೇ ಭ್ರಷ್ಟಗೊಳ್ಳುತ್ತಿರಿವ ಆಧುನಿಕ ಸಮಾಜದ ನಡುವೆ ಇಂಥವರೂ ಇದ್ದಾರಲ್ಲ ಎಂಬ ಆಶ್ಚರ್ಯ ಮೂಡುತ್ತಿತ್ತು.
ತಾವು ಅಷ್ಟು ದೊಡ್ಡ ಅನುಭಾವಿಗಳಿದ್ದರೂ ಚಿಕ್ಕವರು ಹೇಳುವುದನ್ನು ಕೇಳುವ ದೊಡ್ಡಮನಸ್ಸು ಅವರಲ್ಲಿತ್ತು. ಮೃದುವಾದ ಮಾತು. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವ ರೀತಿ, ಇನ್ನೊಬ್ಬರ ಸುಖದಲ್ಲಿ ತಮ್ಮ ಸುಖವನ್ನು ಕಾಣುವ ಹೃದಯವೈಶಾಲ್ಯ ಮೊದಲಾದ ಅಪರೂಪದ ಗುಣಗಳ ಗಣಿ ಅವರಾಗಿದ್ದರು. ನಿಷ್ಕಾಮಸೇವೆ ಎಂದರೇನು ಎಂಬುದಕ್ಕೆ ಅವರ ಬದುಕು ಒಂದು ಉಜ್ವಲ ಉದಾಹರಣೆ. ಆ ನಿಟ್ಟಿನಲ್ಲಿ ಅವರು ದಾರಿದೀಪ; ತೋರುಗಂಬ!
ಸನಾತನ ಧರ್ಮಸಂರಕ್ಷಣ ಸಂಸ್ಥೆಗೆ, “ಧರ್ಮಪ್ರಭ” ಪತ್ರಿಕೆಯ ಬಳಗಕ್ಕೆ ಸಂಸ್ಕೃತಿಯ ಆರಾಧಕರಿಗೆ ಲಂಕಾ ಕೃಷ್ಣಮೂರ್ತಿಯವರ ನೆನಪು ಹಚ್ಚ ಹಸಿರು. ಅವರು ಭೌತಿಕವಾಗಿ ಕಣ್ಮರೆಯಾಗಿ ಒಂದು ವರ್ಷವಾಯಿತು. ಅವರ ದಿವ್ಯ ಸ್ಮರಣೆಗಾಗಿ, ಅವರ ಅಮರಚೇತನಕ್ಕೆ ಕೃತಜ್ಞತೆಯ ಕಾಣಿಕೆ ಅರ್ಪಿಸುವ ಸಲುವಾಗಿ 1997 ನವಂಬರ್ ತಿಂಗಳ ಸಂಚಿಕೆಯನ್ನು ಅವರ ಗುಣಪಥಕ್ಕೆ ಮೀಸಲಾಗಿಟ್ಟಿದ್ದೇವೆ. ಆ ಮೂಲಕ “ಧರ್ಮಪ್ರಭ” ತನ್ನ ಸಂಸ್ಥಾಪಕರನ್ನು ಕೃತಜ್ಞತೆಯಿಂದ ಸ್ಮರಿಸುತ್ತದೆ.
3
ಅಮರ ಚೇತನಕ್ಕೊಂದು ನಮನ
– ಲಂಕಾ ರಾಧಾಕೃಷ್ಣ
ನನ್ನ ತಂದೆಯವರಾದ ದಿ ॥ ಶ್ರೀ ಲಂಕಾಕೃಷ್ಣಮೂರ್ತಿಯವರು ದಿನಾಂಕ 9-9-1925 ರಂದು ಬಡ ವೈದಿಕ ದಂಪತಿಗಳಾದ ಶ್ರೀ ಲಂಕಾ ವೆಂಕಟರಾಮಪ್ಪ ಮತ್ತು ದುರ್ಗಾಲಕ್ಷಮ್ಮನವರ ಎರಡನೆಯ ಮಗನಾಗಿ ಆಂಧ್ರದಲ್ಲಿ ಜನಿಸಿದರು. ಇವರ ಬಾಲ್ಯವೆಲ್ಲಾ ಸಾತ್ವಿಕ ಕುಟುಂಬದ ಪರಿಸರದಲ್ಲಿ ಕೊಂಡೂರು, ಕಂಚಿಸಮುದ್ರ ಮತ್ತು ಪೆನುಗೊಂಡೆಯಲ್ಲಿ ಕಳೆಯಿತು. ಮನೆಯಲ್ಲೆ ಅಮರಕೋಶ, ಸಂಸ್ಕೃತ ರಾಮಾಯಣ ಮತ್ತು ಭಾಗವತದ ಶ್ಲೋಕಗಳ ಪಾಠವಾಯಿತು. ಶೀಘ್ರಗ್ರಾಹಿಯಾದ ಇವರು ಅವನ್ನೆಲ್ಲಾ ಕಲಿತು ಇನ್ನೂ ಕಲಿಯಬೇಕೆಂಬ ಹಂಬಲದಿಂದ ಚಿಕ್ಕಂದಿನಿಂದಲೇ ಸ್ವಯಂಕೃಷಿ ಮಾಡತೊಡಗಿದರು. ಇವರ ಶಾಲಾ ಜೀವನವೆಲ್ಲಾ ಪೆನುಗೊಂಡೆಯಲ್ಲಿ ಜರುಗಿತು. ಗಂಭೀರ ಸ್ವಭಾವದವರಾದ ಇವರು ಆಟಪಾಟಗಳಲ್ಲಿ ಕಾಲಕಳೆಯದೆ ಶಾಲೆಯ ಓದು, ಸಂಸೃತ ಕಲಿಕೆ ಮತ್ತು ಗುರುಗಳೊಬ್ಬರ ಸಹಾಯದಿಂದ ಚಿತ್ರಕಲೆಯಲ್ಲಿ ಕೃಷಿ ಮಾಡುತ್ತಿದ್ದರು. ಹಿಡಿದ ಕೆಲಸವನ್ನು ಸಾಧಿಸಬೇಕೆಂಬ ಛಲ ಅವರಿಗೆ ಚಿಕ್ಕಂದಿನಿಂದಲೇ ರಕ್ತಗತವಾಗಿತ್ತು. ಅವರು ಹುಟ್ಟಿದ ನೆಲ ಪರಿಸರವನ್ನು ಬಹಳ ಪ್ರೀತಿಸುತ್ತಿದ್ದರು.
ನಂತರ ಕಾಲೇಜು ವಿದ್ಯಾಭ್ಯಾಸಕ್ಕೆಂದು ಅನಂತಪುರದಲ್ಲಿ ನೆಲೆಸಿದರು. ವಿಜ್ಞಾನದ ವಿದ್ಯಾರ್ಥಿಯಾದ ಅವರು ಗಣಿತದಲ್ಲಿ ಅಪಾರ ಪ್ರತಿಭೆಯುಳ್ಳವರಾಗಿದ್ದರು. ಇದಕ್ಕೆ ನಿದರ್ಶನವೆಂದರೆ ಇಂದು ಅಷ್ಟಾವಧಾನ ಪ್ರಕ್ರಿಯೆಯಲ್ಲಿ ಒಂದು ಅಂಗವಾದ ಸಂಖ್ಯಾಬಂಧವನ್ನು ಅವರೇ ಸ್ವತಃ ಸೃಷ್ಟಿಸಿರುವುದು. ಇದೆಂದರೆ 25 ಚೌಕಗಳಿರುವ (5×5) ಒಂದು ದೊಡ್ಡ ಚೌಕದಲ್ಲಿ ಸಂಖ್ಯೆಗಳನ್ನು ಅಳವಡಿಸಿದಾಗ, ಆ ಸಂಖ್ಯೆಗಳನ್ನು ಅಡ್ಡಡ್ಡಲಾಗಿ, ಉದ್ದುದ್ದವಾಗಿ ಮತ್ತು ಮೂಲೆಯಿಂದ ಮೂಲೆಗೆ ಕೂಡಿದಾಗ ಅದರ ಮೊತ್ತ ಒಂದೇ ಆಗಿರಬೇಕು. ಕೆಲವು ನಿರ್ದಿಷ್ಟ ಮೊತ್ತಗಳಿಗೆ ಯಾರು ಬೇಕಾದರೂ ಈ ರೀತಿ ಮಾಯಾಚೌಕವನ್ನು ತಯಾರಿಸಬಹುದು. ಆದರೆ ಇವರು ಸಾಧಿಸಿದ್ದೆಂದರೆ, ಯಾವುದೇ ಸಂಖ್ಯೆಯ ಮೊತ್ತಕ್ಕೆ ಈ ಮಾಯಾಚೌಕವನ್ನು ನಿರ್ಮಿಸುವ ಸೂತ್ರವನ್ನು ಕಂಡುಹಿಡಿದಿದ್ದು. ಕಾಲೇಜು ದಿನಗಳಲ್ಲಿ ಒಂದೆರಡು ನಾಟಕಗಳಲ್ಲಿ ಪಾತ್ರವಹಿಸಿದ್ದುದಾಗಿ ಹೇಳುತ್ತಿದ್ದರು. ಅಲ್ಲದೆ ಹರಿಕಥೆಯನ್ನೂ ಮಾಡುತ್ತಿದ್ದರು.
ತೀವ್ರ ಹಣದ ಮುಗ್ಗಟ್ಟಿದ್ದರೂ ಅವರ ಚಿಕ್ಕಪ್ಪನವರ ನೆರವಿನಿಂದ ಪ್ರಥಮ ದರ್ಜೆಯಲ್ಲಿ ವಿಜ್ಞಾನದ ಪದವೀಧರರಾದರು. ನಂತರ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ನಲ್ಲಿ ಉನ್ನತ ವ್ಯಾಸಂಗ ಪಡೆಯಬೇಕೆಂಬ ತೀವ್ರ ಹಂಬಲ ಅವರಿಗಿತ್ತು. ಆದರೆ ವಿಧಿ ಅವರನ್ನು ಅವರಿಗಿಷ್ಟವಿಲ್ಲದಿದ್ದ ಕಾನೂನು ವ್ಯಾಸಂಗದತ್ತ ಕೊಂಡೊಯ್ಯಿತು. ಕನ್ಯಾರ್ಥಿಯಾಗಿ ಬಂದು ದೊಡ್ಡಬಳ್ಳಾಪುರದ ಖ್ಯಾತ ವಕೀಲರಾದ ಆರೂಢಿ ರಾಮಚಂದ್ರಯ್ಯನವರ ದ್ವಿತೀಯ ಪುತ್ರಿಯಾದ ಲಲಿತಮ್ಮನವರನ್ನು 1948ರಲ್ಲಿ ವಿವಾಹವಾದರು. ಹಾಗೂ ಬೆಂಗಳೂರಿನ ಕಾನೂನು ವಿದ್ಯಾಲಯದಲ್ಲಿ ಲಾ ಓದಲು ಸೇರಿಕೊಂಡರು. ಸ್ಕೂಲೊಂದರಲ್ಲಿ ಉಪಾಧ್ಯಾಯ ವೃತ್ತಿ ಮಾಡುತ್ತಲೇ ತಮ್ಮ ವಿದ್ಯಾಭ್ಯಾಸವನ್ನೂ ಮುಗಿಸಿದರು. ಆಗ ಅವರಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಆದರೂ ಸ್ವಪ್ರಯತ್ನದಿಂದ ಕನ್ನಡದಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ಕಲಿತುಕೊಂಡರು. ಇದರ ಬಗ್ಗೆ “ಜೀವನ” ಪತ್ರಿಕೆಯಲ್ಲಿ ಪ್ರಕಟವಾದ ಅವರ “ದ್ವೈಮಾತೃಕಾ” ಎಂಬ ಕನ್ನಡ ಕವಿತೆಯಲ್ಲಿ ಮಾತೃಭಾಷೆಯಾದ ತೆಲುಗು ಮತ್ತು ಜೀವನಾಶ್ರಯ ನೀಡಿದ ಕರ್ನಾಟಕದ ಕನ್ನಡ ಭಾಷೆಗಳು ತನ್ನ ಇಬ್ಬರು ತಾಯಿಂದಿರೆಂದು ಸೊಗಸಾಗಿ ವಿವರಿಸಿದ್ದಾರೆ. ಲಾ ಮುಗಿದ ನಂತರ ನ್ಯಾಯವಾದಿ ವೃತ್ತಿಯನ್ನು ಕೈಗೊಂಡರು. ಜೀವನೋಪಾಯಕ್ಕಾಗಿ ಸುಮಾರು 3-4 ವರ್ಷಗಳಷ್ಟು ಕಾಲ ಈ ವೃತ್ತಿಯಲ್ಲಿ ದುಡಿದರು. ಹೈಕೋರ್ಟಿನಲ್ಲಿ ಇವರಿಗೆ ಅದೃಷ್ಟವಶಾತ್ ಡೆಪ್ಯೂಟಿ ರಿಜಿಸ್ಟ್ರಾರ್ ಹುದ್ದೆ ದೊರಕಿತು. ಆಗ ತಾವು ಕೇಸು ನಡೆಸುತ್ತಿದ್ದ ಕಕ್ಷಿದಾರರ ಹಣವನ್ನು ಅವರಿಗೇ ಹಿಂದಿರುಗಿಸಿಬಿಟ್ಟರು. ಇದು ಅವರ ಪ್ರಾಮಾಣಿಕತೆಗೆ ಒಂದು ನಿದರ್ಶನ. ಹೀಗೆ ಜೀವನದಲ್ಲಿ ಒಂದು ಸುಭದ್ರ ನೆಲೆ ಕಂಡುಕೊಂಡ ಅವರು ನಿವೃತ್ತರಾಗುವವರೆಗೆ ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಠೆಯಿಂದ ಸರ್ಕಾರದ ಸೇವೆಯನ್ನು ಮಾಡಿದರು.
ಜೀವನದಲ್ಲಿ ಒಂದು ನೆಲೆ ಕಂಡುಕೊಂಡ ಬಳಿಕ ಅವರ ದೃಷ್ಟಿ ಸಹಜವಾಗಿ ಅವರ ಪ್ರಿಯ ಹವ್ಯಾಸಗಳಾದ ಕಾವ್ಯರಚನೆ, ಚಿತ್ರಕಲೆ ಇವುಗಳೆಡೆ ತಿರುಗಿತು. ವಾಟರ್ ಪೈಂಟಿಂಗ್ ಮತ್ತು ಆಯಿಲ್ ಪೈಂಟಿಂಗ್ ಎರಡೂ ಪ್ರಾಕಾರಗಳಲ್ಲಿ ಉತ್ತಮ ಭಾವಾಭಿವ್ಯಕ್ತವುಳ್ಳ “ಶ್ರೀ ಕೃಷ್ಣ ಸುಧಾಮ”, “ಬಾಳಿನ ಪಯಣದಲ್ಲಿ”, ಎಂಬ ಎರಡು ಅತ್ಯುತ್ತಮ ಕಲಾಕೃತಿಗಳನ್ನು ರಚಿಸಿದರು. ಇದಲ್ಲದೆ ನಿಸರ್ಗ ಸೌಂದರ್ಯದ ದೃಶ್ಯಗಳು. ಸರಸ್ವತಿ. ಮಹಾಭಾರತದ ಕತೆಯನ್ನಾಧರಿಸಿ ದೃಶ್ಯ. ನಮ್ಮ ಮನೆಯವರ ಪೊರ್ಟ್ರರೈಟ್ಗಳು ಹೀಗೆ ಅನೇಕ ವರ್ಣಚಿತ್ರಗಳನ್ನು ರಚಿಸಿದರು. ಇವರಿಗೆ ಭಾರತೀಯ ಚಿತ್ರಕಲೆಯ ಪ್ರಾಕಾರದ ಬಗ್ಗೆ ಬಹಳ ಒಲವಿತ್ತು. ಸ್ವಪರಿಶ್ರಮದಿಂದ ಚಿತ್ರಕಲೆಯನ್ನು ಆಳವಾಗಿ ಅಭ್ಯಸಿಸಿ ಅದರಲ್ಲಿ ಧನ್ಯತೆಯನ್ನು ಕಂಡುಕೊಂಡರು. ಇದಲ್ಲದೆ ಕರ್ನಾಟಕ ಸಂಗೀತದಲ್ಲಿ ಅಭಿರುಚಿಯನ್ನು ಹೊಂದಿದ್ದ ಇವರು ರಾಗ, ತಾಳ, ಲಯ ಜ್ಞಾನವನ್ನು ಸ್ವಯಂಕೃಷಿಯಿಂದ ಸಂಪಾದಿಸಿದ್ದರು. ಹಾರ್ಮೋನಿಯಂನನ್ನು ಸೊಗಸಾಗಿ ನುಡಿಸುತ್ತಿದ್ದರು. ವೀಣೆ ಮತ್ತು ಕೊಳಲು ವಾದನವನ್ನು ಕಲಿಯಲು ಪ್ರಯತ್ನ ಪಡುತ್ತಿದ್ದರು. ಸಂಗೀತದ ಮೇಲಿನ ಈ ಅಭಿರುಚಿಯೇ ಅವರು “ಇಂದಿರಾನಗರ ಸಂಗೀತ ಸಭೆ”ಯ ಸಂಸ್ಥಾಪಕರಾಗಲು ಕಾರಣ. ಆ ಸಭೆಯ ಆಶ್ರಯದಲ್ಲಿ ಒಂದು ಸಂಗೀತ ಪಾಠಶಾಲೆಯನ್ನು ತೆರೆದು ತಾನೇ ಆಳಾಗಿ ದುಡಿದರು.
ಸಂಸ್ಕೃತ, ತೆಲುಗು ಕನ್ನಡದಲ್ಲಿ ಪ್ರಕಾಂಡ ಪಂಡಿತರಾದ ಇವರಿಗೆ ಉರ್ದು, ತಮಿಳು ಭಾಷೆಗಳು ಗೊತ್ತಿದ್ದವು. ನಾವು ಮಲ್ಲೇಶ್ವರದಲ್ಲಿದ್ದಾಗ ನಮ್ಮ ತಂದೆಯವರಿಗೆ ಕರ್ನಾಟಕದ ಖ್ಯಾತ ಮತ್ತು ಹಿರಿಯ ಸಾಹಿತಗಳಾದ ಡಿ ವಿ ಜಿ, ಮಾಸ್ತಿ, ಯಡತೊರೆ ಸುಬ್ರಾಯ ಶರ್ಮ, ಅರ್ಚಿಕ ವೆಂಕಟೇಶ್, ಗೋಪಾಲಕೃಷ್ಣರಾಯರು, ಮುಂತಾದವರ ಒಡನಾಟ ಲಭಿಸಿತು. ಅವರ ಒಲವು, ಪ್ರೋತ್ಸಾಹ ಮತ್ತು ಆಶೀರ್ವಾದದ ಕೃಪೆಯಿಂದ ತೆಲುಗು ಕವಿಯಾದ ತಂದೆಯವರು ಕನ್ನಡ ಸಾಹಿತ್ಯಕ್ಕೆ ಪಾದಾರ್ಪಣ ಮಾಡಿದರು. ಮೊದಲಿಗೆ ಮಾಸ್ತಿಯವರು ನಡೆಸುತ್ತಿದ್ದ “ಜೀವನ” ಎಂಬ ಪತ್ರಿಕೆಗೆ ಲೇಖನ, ಕವನ ಇತ್ಯಾದಿಗಳನ್ನು ಬರೆದರು. ನಂತರ ಸಾಹಿತ್ಯಕೂಟಗಳಲ್ಲಿ ಕನ್ನಡ ಕವಿತೆಗಳನ್ನು ರಚಿಸಿ ಓದುತ್ತಿದ್ದರು. ಕೊನೆಗೆ “ಕೊಡೆಯ ಗೋಪಾಲ” ಎಂಬ ಐತಿಹಾಸಿಕ ಕಾದಂಬರಿಯನ್ನು ಬರೆದು ಪ್ರಕಟಿಸಿದರು. ಇದು “ಕನ್ನಡ ಪ್ರಭ” ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿಯೂ ಪ್ರಕಟಗೊಂಡಿತು. ಇತ್ತಿಚೆಗೆ “ಅತ್ತೆಯ ಎತ್ತರ” ಎಂಬ ಅಪ್ರಕಟಿತ ನಗೆನಾಟಕವನ್ನು ಬರೆದಿದ್ದರು. “ಧರ್ಮಪ್ರಭ” ಮಾಸಪತ್ರಿಕೆ ಪ್ರಾರಂಭವಾದಂದಿನಿಂದ ಇಂದಿನವರೆಗೆ ಅನೇಕ ಮೌಲ್ಯಾಧಾರಿತ ಸಂಪಾದಕೀಯಗಳನ್ನು ಬರೆದರು. “ಗಾಯತ್ರಿ” ಎಂಬ ವಿಶೇಷ ಲೇಖನವನ್ನು ಧಾರಾವಾಹಿಯಾಗಿ ಪ್ರಕಟಿಸಿದರು. ಕನ್ನಡ ಸಾಹಿತ್ಯದಲ್ಲಿ “ಜೈಮಿನಿ ಭಾರತ”, ಡಿ ವಿ ಜಿ ಯವರ “ಮಂಕುತಿಮ್ಮನ ಕಗ್ಗ”, ಕುವೆಂಪು ರವರ “ರಾಮಾಯಣ ದರ್ಶನಂ”, ಇವುಗಳನ್ನು ಬಹಳವಾಗಿ ಶ್ಲಾಘಿಸುತ್ತಿದ್ದರು. ಬೆಂಗಳೂರು ಆಕಾಶವಾಣಿಯ “ಚಿಂತನ” ಕಾರ್ಯಕ್ರಮದಲ್ಲಿ “ವಿಜ್ಞಾನಯುಗ”, “ವಿಶ್ವಸಂಗೀತ”, “ಹಂಸಗೀತೆ” ಮತ್ತು “ಪ್ರಥಮಗೀತೆ” ಎಂಬ ನಾಲ್ಕು ಭಾಷಣ ಮಾಡಿದ್ದಾರೆ. “ತ್ಯಾಗಶಿಲ್ಪ” ಎಂಬ ಅಪ್ರಕಟಿತ ನಾಟಕದಲ್ಲಿ ಲೇಪಾಕ್ಷಿ ಕ್ಷೇತ್ರದ ದೊರೆ ವಿರುಪಣ್ಣನ ತ್ಯಾಗದ ಬಗ್ಗೆ ಮಾರ್ಮಿಕವಾಗಿ ರಚಿಸಿದ್ದಾರೆ. ಇವರಿಗೆ ಶಿಲ್ಪಕಲೆಯ ಬಗ್ಗೆಯೂ ತಿಳಿದಿತ್ತು. ಒಮ್ಮೆ ನಮ್ಮ ತಂದೆಯವರ ಗೆಳೆಯರೊಬ್ಬರು ಶಿಲ್ಪಕಲೆಗೆ ಸಂಬಂಧಿಸಿದ ಪ್ರಾಚೀನ ಸಂಸ್ಕೃತ ಗ್ರಂಥವೊಂದನ್ನು ತಂದುಕೊಟ್ಟರು. ನಮ್ಮ ತಂದೆ ಅದನ್ನು ಅಮೂಲಾಗ್ರವಾಗಿ ಅಭ್ಯಸಿಸಿ ಅದರಲ್ಲಿ ವಿವರಿಸಲಾದ ಪ್ರಾಚೀನ ವಿಧಾನದ ಅಳತೆಗಳನ್ನು ತಮ್ಮ ತರ್ಕಶಕ್ತಿಯ ಬಲದಿಂದ ವಿಶ್ಲೇಷಿಸಿ ಮತ್ತು ಅದನ್ನು ಇಂದಿನ ಅಳತೆಯ ಮಾಪಕಗಳಿಗೆ ತರ್ಜುಮೆ ಮಾಡಿ ಒಂದೆರಡು ಚಿತ್ರಕೃತಿಗಳನ್ನು ರಚಿಸಿದರು. ಓಹ್, ಅದೆಷ್ಟು ನೈಜವಾಗಿ ಮತ್ತು ಪರಿಪೂರ್ಣವಾಗಿ ಮೂಡಿಬಂದಿತ್ತೆಂದರೆ ವರ್ಣಿಸಲಸದಳ. ಇದಲ್ಲದೆ “ಸಂಸ್ಕೃತ ಭಾಷೆಯ ವಿರಾಟ್ ಸ್ವರೂಪ” ಎಂಬ ಅಪೂರ್ಣ ಆದರೆ ಅತ್ಯುಪಯುಕ್ತ ಲೇಖನವೊಂದನ್ನು ಬರೆದಿದ್ದರು.
ಇನ್ನು ತೆಲುಗು ಸಾಹಿತ್ಯಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ. “ಶ್ರೀ ವಿಲಾಸಮು”, “ದಾನಯಜ್ಞಮು” ಮತ್ತು “ತ್ಯಾಗಶಿಲ್ಪಮು” ಎಂಬ ಮೂರು ಮಹಾಕಾವ್ಯಗಳ ಕರ್ತೃ ಅವರು. ಇವಲ್ಲದೇ ಅನೇಕ ಕವಿತೆಗಳು, ಲೇಖನಗಳು ಅವರ ಸಂಗ್ರಹದಲ್ಲಿದೆ.
ಕೆಲವು ತೆಲುಗು ರೇಡಿಯೋ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ. ಪ್ರಚಾರಪ್ರಿಯರಾಗಿಲ್ಲದಿದ್ದುದೇ ಇವರು ತೆಲುಗಿನಲ್ಲಿ ಮಹಾಕವಿಯಾಗದಿದ್ದುದಕ್ಕೆ ಕಾರಣವೆಂದು ನನ್ನ ಅಭಿಪ್ರಾಯ. ತಿಕ್ಕನ ಮತ್ತು ನನ್ನಯ ಎಂಬ ಪ್ರಾಚೀನ ಕವಿಗಳು ಇವರ ಅಚ್ಚುಮೆಚ್ಚಿನವರಾಗಿದ್ದರು. ತಿಕ್ಕನ ಕವಿಯ “ಉತ್ತರ ರಾಮಾಯಣ”ವೆಂಬ ತೆಲುಗು ಕಾವ್ಯವನ್ನು ಸಂಸ್ಕೃತಕ್ಕೆ ಭಾಷಾಂತರಿಸುವ ಇವರ ಯೋಜನೆ ಅಪೂರ್ಣವಾಗಿ ಉಳಿಯಿತು. ಸಂಸ್ಕೃತದಲ್ಲಿ ಪ್ರಕಾಂಡ ಪಂಡಿತರಾದ ಇವರು ಸಂದರ್ಭಾನುಸಾರವಾಗಿ ಅನೇಕ ಶ್ಲೋಕಗಳನ್ನು, ಪದ್ಯಗಳನ್ನು ತಕ್ಷಣವೇ ಉಲ್ಲೇಖಿಸುತ್ತಿದ್ದುದು ಇವರ ಆಳ ಅಧ್ಯಯನ ಮತ್ತು ಜ್ಞಾಪಕ ಶಕ್ತಿಯನ್ನು ಸೂಚಿಸುತ್ತದೆ. ಅವರು ವ್ಯಾಕರಣ ಮತ್ತು ಛಂದಸ್ಸುಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದರು. ನಿವೃತ್ತರಾದ ಬಳಿಕ ಉಚಿತ ಸಂಸ್ಕೃತ ಪಾಠಗಳನ್ನು ಮನೆಯಲ್ಲಿಯೇ ಹೇಳುತ್ತಿದ್ದರು. ಇದಲ್ಲದೇ ದೇವೀ ಭಾಗವತ ಮತ್ತು ಭಾಗವತದ ವ್ಯಾಖ್ಯಾನ ಮಾಡುತ್ತಿದ್ದರು. ಇವರ ಅಚ್ಚುಮೆಚ್ಚಿನ ಮತ್ತೊಂದು ಕ್ಷೇತ್ರವೆಂದರೆ “ಅಷ್ಟಾವಧಾನ”. “ಸಮಸ್ಯೆ” ಮತ್ತು “ನಿಷೇಧಾಕ್ಷರಿ”ಯ ಪೃಚ್ಛಕರಾಗಿ ಅನೇಕ ತೆಲುಗು ಅವಧಾನಗಳಲ್ಲಿ ಭಾಗವಹಿಸಿದ್ದ ಇವರಿಗೆ ಕನ್ನಡದಲ್ಲಿ ನಶಿಸಿಹೋಗಿದ್ದ ಅವಧಾನ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸಬೇಕೆಂಬ ಹಂಬಲವಾಗಿ ತೆಲುಗು ಅವಧಾನಿಯಾದ ಶ್ರೀ ಸದಾನಂದಶಾಸ್ತ್ರಿಗಳಿಗೆ ಪ್ರೋತ್ಸಾಹ ನೀಡಿ ಅವರಿಂದ ಕನ್ನಡ ಅಷ್ಟಾವದಾನವನ್ನು ಯಶಸ್ವಿಯಾಗಿ ನೆರವೇರಿಸಿದರು. ಅನಂತರ ಅರಳುತ್ತಿರುವ ಪ್ರತಿಭೆಯಾದ ಶ್ರೀ ಗಣೇಶ್ ರವರೊಡನೆ ಕೂಡಿ ಅಷ್ಟಾವಧಾನ, ಶತಾವಧಾನಗಳನ್ನೂ ಸಂಯೋಜಿಸಿದರು. ಬೆಂಗಳೂರಿನಲ್ಲಿ ಲಂಕಾ ಕೃಷ್ಣಮೂರ್ತಿಗಳಿಲ್ಲದ ಅವಧಾನ ಅಪರೂಪವೆಂದೇ ಹೇಳಬಹುದು. ಇಷ್ಟಕ್ಕೇ ತೃಪ್ತರಾಗದ ಇವರು ಸಂಖ್ಯಾಬಂಧ ಮತ್ತು ಚಿತ್ರಕವಿತ್ವವೆಂಬ ಹೊಸ ಪ್ರಕ್ರಿಯಯನ್ನು ಅವಧಾನದಲ್ಲಿ ಅಳವಡಿಸಿದರು. ನನಗೆ ತಿಳಿದಮಟ್ಟಿಗೆ ಇಂದು ಕರ್ನಾಟಕದಲ್ಲಿ ಚಿತ್ರಕವಿತ್ವವನ್ನು ರಚಿಸಬಲ್ಲವರು ಇಬ್ಬರೇ ಇಬ್ಬರು. ಒಬ್ಬರು ಲಂಕಾ ಕೃಷ್ಣಮೂರ್ತಿ ಮತ್ತೊಬ್ಬರು ಅವಧಾನಿ ಗಣೇಶ್. ಇದಲ್ಲದೆ ಅಡುಗೆ ಮಾಡುವುದರಲ್ಲೂ ಸಿದ್ಧಹಸ್ತರಾಗಿದ್ದರು. ಹಳೆಯ ಮಾಡೆಲ್ ಕಾರೊಂದನ್ನು ಹೊಂದಿದ್ದ ಇವರು ಅದರ ರಿಪೇರಿಯಲ್ಲೂ ಪರಿಣಿತರಾಗಿದ್ದರು.
ಸಾಂಸಾರಿಕ ಜೀವನದಲ್ಲಿ ಇವರೊಬ್ಬ ಸದ್ಗೃಹಸ್ಥರಾಗಿದ್ದರು. ಇವರಿಗೆ ಯಾವುದೇ ರೀತಿಯ ದುರಭ್ಯಾಸಗಳಿರಲಿಲ್ಲ.
ತಮ್ಮ ತಂದೆ ತಾಯಿಯರನ್ನು ತಮ್ಮ ಬಳಿಯೇ ಇರಿಸಿಕೊಂಡು ಅತಿ ಶ್ರದ್ಧೆಯಿಂದ ಅಹರ್ನಿಶಿ ಅವರ ಸೇವೆ ಮಾಡಿದರು.
1964 ರಲ್ಲಿ ಇಂದಿರಾನಗರದಲ್ಲಿ ಪ್ರಥಮ ಪ್ರಜೆಯಾಗಿ ಮನೆ ಕಟ್ಟಿಸಿ ವಾಸಿಸತೊಡಗಿದರು. ಈ ಬಡಾವಣೆಗೆ ಇಂದಿರಾನಗರವೆಂದು ಹೆಸರಿಟ್ಟವರೂ ಅವರೇ. ಪ್ರತಿ ಯಶಸ್ವೀ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆಂಬಂತೆ ನಮ್ಮ ತಾಯಿಯವರು ತಂದೆಯವರ ಎಲ್ಲಾ ಕಾರ್ಯಗಳಲ್ಲೂ ತಮ್ಮ ಸಹಕಾರವನ್ನಿತ್ತರು.
ಚಿಕ್ಕಂದಿನಲ್ಲಿ ಅವರ ಮಡಿಲಲ್ಲಿ ಕುಳಿತು ಅವರು ಹೇಳುತ್ತಿದ್ದ ರಾಮಾಯಣ, ಮಹಾಭಾರತದ ನೀತಿ ಕತೆಗಳ ನೆನಪು ನಮಗೆ ಇನ್ನೂ ಹಚ್ಚಹಸುರಾಗಿದೆ. ಇಂತಹ ತಂದೆಯನ್ನು ಪಡೆದ ನಾವು ನಿಜಕ್ಕೂ ಧನ್ಯರು.
ಅವರಿಗೆ ಎಂದೂ ಅಹಂಭಾವ ಇರಲಿಲ್ಲ. ಎಲ್ಲವನ್ನೂ ತಮ್ಮಿಂದ ದೇವರು ಮಾಡಿಸುತ್ತಿದ್ದಾನೆ, ತನ್ನ ಪಾತ್ರವೇನೂ ಅದರಲ್ಲಿಲ್ಲ ಎಂಬುದಾಗಿ ಹೇಳುತ್ತಿದ್ದರು. ಅವರು ಸಂಸಾರದಲ್ಲಿದ್ದರೂ ಯೋಗಿಯಂತೆ ಬಂಧಮುಕ್ತರಾಗಿದ್ದರು. ಅವರು ಮನುಷ್ಯರಲ್ಲಿ, ಪ್ರಾಣಿಗಳಲ್ಲಿ, ಸಮಸ್ತ ವಸ್ತುಗಳಲ್ಲಿ ದೇವರ ಸ್ವರೂಪವನ್ನು ಕಾಣುತ್ತಿದ್ದರು. ವಿದ್ಯೆಯಿಂದ, ಸತತ ಅಭ್ಯಾಸದಿಂದ ಮತ್ತು ಕರ್ಮದಿಂದ ಅವರು ಜ್ಞಾನಿಯಾಗಿದ್ದರು. ಅವರು ಅನ್ನದಾನ, ವಿದ್ಯಾದಾನ, ಸಂಪತ್ತು ದಾನ ಮುಂತಾದ ದಾನಗಳನ್ನು ಮಾಡುತ್ತಿದ್ದರು. “ಪರೋಪಕಾರಾಂ ಸತಾಂ ವಿಭೂತಯಃ” ಎಂಬುದು ಅವರ ಮಂತ್ರವಾಗಿತ್ತು. ಸ್ವಧರ್ಮ ಮತ್ತು ಸಾಮಾಜಿಕ ಧರ್ಮಗಳ ಮೌಲ್ಯಗಳನ್ನು ನಿಷ್ಠೆಯಿಂದ ಅನುಸರಿಸುತ್ತಿದ್ದರು ಮತ್ತು ಎರಡಕ್ಕೂ ಪ್ರಾಮುಖ್ಯತೆ ನೀಡುತ್ತಿದ್ದರು. ದೇವರ ಅಸ್ತಿತ್ವದಲ್ಲಿ ಬಲವಾದ ನಂಬಿಕೆಯನ್ನಿರಿಸಿಕೊಂಡಿದ್ದರು. ಆದರೆ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಖಂಡಿಸುತ್ತಿದ್ದರು. ಪ್ರತಿಯೊಂದನ್ನೂ ವೈಜ್ಞಾನಿಕವಾಗಿ ಪರಿಶೀಲಿಸುತ್ತಿದ್ದರು. ಹೀಗಾಗಿ ಧರ್ಮದ ವೈಜ್ಞಾನಿಕ ವಿಶ್ಲೇಷಣೆ (Scientific Study of Dharma) ಎಂಬ Study Circle ನ್ನು ಸ್ಥಾಪಿಸಿ ತಾವು ಲೇಖನಗಳನ್ನು ಬರೆದು, ಇತರರಿಂದ ಲೇಖನಗಳನ್ನು ಅಪೇಕ್ಷಿಸಿದರು. ಮನುಧರ್ಮ ಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿ ಇಂದಿನ ಸಮಾಜಕ್ಕೆ ಅದನ್ನು ಪ್ರಸ್ತುತ ಪಡಿಸಲು, ಅದರ ಬಗ್ಗೆ ಇಂದಿನ ಜನರಲ್ಲಿನ ಅಸಹನೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಸತ್ಯ, ಅಹಿಂಸೆ, ದಯೆ, ಧರ್ಮ, ಸರಳ ಜೀವನ ಇವುಗಳನ್ನು ವ್ರತವಾಗಿ ಜೀವಮಾನವಿಡೀ ಪಾಲಿಸಿದರು. ಅವರು ಎಂದೂ ಸುಳ್ಳನ್ನು ನುಡಿದಿಲ್ಲ. ತಮಾಷೆಗೆ ಸುಳ್ಳು ಹೇಳುವುದನ್ನು ಅವರು ಖಂಡಿಸುತ್ತಿದ್ದರು. ತಮ್ಮ ಸದ್ಗುಣಗಳಿಂದ ಅಜಾತಶತ್ರುವಾಗಿದ್ದರು.
ಒಟ್ಟಾರೆ ಹೇಳಬೇಕೆಂದರೆ ಲಂಕಾ ಕೃಷ್ಣಮೂರ್ತಿಯವರು ಒಳ್ಳೆಯ ವಿದ್ಯಾರ್ಥಿ, ಉಪಾಧ್ಯಾಯರು, ಗೃಹಸ್ಥರು, ಕವಿ, ವಿದ್ವಾಂಸರು, ಚಿತ್ರಕಾರರು, ಉಪನ್ಯಾಸಕರು, ವಕೀಲರು, ಆಡಳಿತಾಧಿಕಾರಿ, ಸಮಾಜ ಸೇವಕ ಮತ್ತು ಎಲ್ಲಕ್ಕೂ ಮಿಗಿಲಾಗಿ ಮಾನವತಾವಾದಿ.
ಎರಡು ವರ್ಷಗಳ ಹಿಂದೆ ಅಪಘಾತದಲ್ಲಿ ತಲೆಗೆ ಪೆಟ್ಟುಬಿದ್ದು ಅವರ ಜ್ಞಾಪಕ ಶಕ್ತಿ ನಶಿಸಲಾರಂಭಿಸಿತು. ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಹೋದರು. ಆದರೂ ತಮ್ಮ ಕಾಯಕವನ್ನು ನಿಲ್ಲಿಸಲಿಲ್ಲ. ಅವರ ಪ್ರಾಣ ಪಂಚಭೂತಗಳಲ್ಲಿ ದಿನಾಂಕ 11-11-1996 ರಂದು ಲೀನವಾಯಿತು. ಭೌತಿಕವಾಗಿ ಅವರು ನಮ್ಮನ್ನಗಲಿದರೂ ಅವರ ಆತ್ಮ ಅಮರ. ಅದೊಂದು ಚೈತನ್ಯ ಸ್ವರೂಪ. ಅವರದು ಅಮರ ಚೇತನ. ಆ ಅಮರ ಚೇತನಕ್ಕೊಂದು ನಮನ ನನ್ನೀ ಲೇಖನ.
LKMF Website Feb 2021
4
ನಾ ಕಂಡ ಕೃಷ್ಣಮೂರ್ತಿಗಳು – ಎಲ್ಲರಂತಲ್ಲ ಈ ಮಹಾನುಭಾವರು
–ವಾಣೀರಾವ್
ಈಗ ಹದಿನೈದು ವರ್ಷಗಳ ಹಿಂದೆ ಬೇಸಿಗೆಯ ಬಿಸಿಲಿಲಲ್ಲಿ ಒಬ್ಬರು ಮನೆ ಹುಡುಕುತ್ತ ಬಂದರು. ಆದರೆ ಅವರನ್ನು ಸರಿಯಾಗಿ ಗಮನಿಸದೆ ನಾನು ನನ್ನ ಮಗಳು ಹೊರಗೆ ಹೋಗಿ ಕೊಂಚ ಕಾಲದ ಮೇಲೆ ಮನೆಗೆ ಬಂದೆವು. ಆಗ ಹಿರಿಯರೊಬ್ಬರು ಕುಳಿತಿದ್ದರು. ನನ್ನ ಮಗಳು. ಇವರೇ ನನ್ನ ಸಂಗೀತ ಕಾರ್ಯಕ್ರಮದ ವಿವರವನ್ನು ಕೊಡಲು ಮನೆ ಹುಡುಕುತ್ತ ಬಂದವರು ಎಂದು ಹೇಳಿದಾಗ ಮನಸ್ಸಿಗೆ ನೋವಾಯಿತು. ಅವರನ್ನು ಕ್ಷಮೆ ಕೇಳಿದಾಗ ಮೃದುಮಾತಿನಲ್ಲಿ ಸಮಾಧಾನಪಡಿಸಿದರು.
ಈ ಮಾತಿಗೆ ಹದಿನೈದು ವರ್ಷಗಳೇ ಆಗಿವೆ. ಅಂದಿನಿಂದ ಅವರು ನನಗೆ ಗುರುಗಳು. ಮಾರ್ಗದರ್ಶಕರೂ ಆಗಿ ಅನೇಕ ಸಮಸ್ಯೆಗಳಲ್ಲಿ, ಅನುಕಂಪ, ಸಹಾನುಭವತಿಯನ್ನು ತೋರಿಸುತ್ತಿದ್ದರು. ಅವರನ್ನು ಹೆಚ್ಚು ಹೆಚ್ಚು ತಿಳಿದಂತೆಲ್ಲಾ, ಅವರ ಮೇಲಿನ ಗೌರವ ಹೆಚ್ಚುತ್ತಿತ್ತು. ಕಾರಣ ಅವರು ಎಲ್ಲರಂತಲ್ಲ. ಆ ಸರಳ ವ್ಯಕ್ತಿಯ ಹೃದಯದಲ್ಲಿ ಅಗಾಧವಾದ ವ್ಯಕ್ತಿತ್ವ ಅಡಗಿತ್ತು. ಎಷ್ಟು ಬೇಕೋ ಅಷ್ಟೇ ಮಾತು. ಸರಳವಾದ ಉಡಿಗೆ ತೊಡಿಗೆ. ಮಹಾ ಮೇಧಾವಿ. ತತ್ವ ಜ್ಞಾನಿ. ಎಂಥವರ ಮೇಲೂ ಅಪಾರ ಗೌರವ. ಯಾರ ಮೇಲೂ ಒಂದು ಸಣ್ನ ಮಾತಿಲ್ಲ. ಎಲ್ಲರಲ್ಲೂ ಒಂದು ಆತ್ಮೀಯತೆ. ವಿಶ್ವಾಸ, ಸ್ನೇಹಪರತೆ, ಆಡಂಬರವಿಲ್ಲದ ನಡತೆ. ಈ ಗುಣಗಳು ಅವರನ್ನು ಒಬ್ಬ ಶ್ರೇಷ್ಠವ್ಯಕ್ತಿಯನ್ನಾಗಿ ಮಾಡಿದ್ದವು.
ಎರಡು – ಮೂರು ವರ್ಷ ಅವರು ನಮ್ಮಲ್ಲಿ ಕೆಲವರಿಗೆ ಸಂಸ್ಕೃತ ಕಲಿಸಿದರು. ಆಗ ನಾವು ಕಲಿತ ವಿಷಯದಲ್ಲಿ ಬರೇ ಸಂಸ್ಕೃತ ಭಾಷೆಯೇ ಅಲ್ಲದೆ ಅದೆಷ್ಟೋ ವಿಷಯಗಳನ್ನು ತಿಳಿಯ ಹೇಳುತ್ತಿದ್ದರು. ಅವರೊಂದು
“ಎನ್ ಸೈಕ್ಲೋಪೀಡಿಯಾ” ಎಂದುಕೊಳ್ಳುತ್ತಿದ್ದೆ. ಅಷ್ಟು ಪಾಂಡಿತ್ಯವಿದ್ದರೂ ತೋರಿಸಿಕೊಳ್ಳದೆ ಇರುವ ಅವರ ಸ್ವಭಾವ ನನಗೆ ಬಹು ಮೆಚ್ಚಿಗೆಯಾಗಿತ್ತು.
ಸಂಸ್ಕೃತ, ತೆಲುಗು, ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ನುರಿತರಾಗಿದ್ದರಲ್ಲದೆ, ಅಷ್ಟಾವಧಾನಿಗಳಾಗಿದ್ದರು. ಸಂಗೀತ, ಸಾಹಿತ್ಯ, ಚಿತ್ರಕಲೆಯಲ್ಲಿಯೂ ಪಳಗಿದ್ದರು.
ಅದೆಷ್ಟೋ ಬಾರಿ ಏನಾದರೊಂದನ್ನು ಅರ್ಥೈಸಿಕೊಳ್ಳಲು ಅವರಲ್ಲಿಗೆ ಹೋದಾಗ, ಅದಾವ ಸಮಯವೇ ಆಗಿರಲಿ. ಅವರಿಗೆ ಎಷ್ಟೇ ಕೆಲಸವಿರಲಿ. ಅಕ್ಕರೆಯಿಂದ ಕೂಡಿಸಿಕೊಂಡು ವಿವರವಾಗಿ ತಿಳಿಸಿಕೊಡುತ್ತಿದ್ದ ಆವರ ದೊಡ್ಡಗುಣವನ್ನು ಹೇಗೆ ತಾನೆ ಮರೆಯಲಿ? ಇಂತಹ ಅಪೂರ್ವ ವ್ಯಕ್ತಿಯನ್ನು ಮರೆಯುವುದಾದರೂ ಹೇಗೆ? ಅವರ ಆತ್ಮಕ್ಕೆ ದೇವರು ಶಾಂತಿ ನೀಡಲೆಂದು ಕೋರುತ್ತ ಇದೊಂದು ನನ್ನ ಪುಟ್ಟ ಶ್ರದ್ಧಾಂಜಲಿಯನ್ನು ಆ ಹಿರಿಯ ವ್ಯಕ್ತಿಗೆಂದು ಧರ್ಮಪ್ರಭೆಗೆ ಅರ್ಪಿಸುತ್ತಿದ್ದೇನೆ. ಅವರ ಆತ್ಮ ಅಮರವಾಗಲಿ!
5
ಶಾಂತಿ ಪುರುಷ:ದಿII ಲಂಕಾ ಕೃಷ್ಣಮೂರ್ತಿ
–ಅಬ್ಬಯ್ಯ
ಇವರು ಶ್ರೀರಾಮ, ಬುದ್ಧ, ಯೇಸು, ಅಕ್ಬರ್, ಮಹಾತ್ಮಾಗಾಂಧಿ ಇವುರಗಳಿಗೆ ಸರಿಸಮಾನರೆಂದರೆ ತಪ್ಪಾಗಲಾರದು. ಇವರು ದೈವಸಂಭೂತರೂ ಹೌದು. ಇವರ ಸದ್ಗುಣಗಳನ್ನು ವರ್ಣಿಸಲು ನನ್ನಿಂದ ಅಸಾಧ್ಯವಾದರೂ ಅಲ್ಪನಾದ ನಾನು ಅವರ ಬಗ್ಗೆ ಬರೆಯಲು ಇಚ್ಛಿಸುತ್ತೇನೆ.
ಇವರು ಉನ್ನತ ಉದ್ಯೋಗದಲ್ಲಿದ್ದರೂ ಸಾಮಾನ್ಯ ವ್ಯಕ್ತಿಯಂತೆ ವರ್ತಿಸುತ್ತಿದ್ದರು. ಅಲ್ಲದೆ ದೈವಭಕ್ತರು. ದೈವಸೇವೆಗಿಂತ ಜನಸೇವೆಯಲ್ಲಿ ಹಗಲಿರುಳೆನ್ನದೆ ದುಡಿಯುತ್ತಿದ್ದರು. ಬಡಮಕ್ಕಳಲ್ಲಿ, ವೃದ್ಧರಲ್ಲಿ ಬಹಳ ಗೌರವ ಪ್ರೀತಿ. ಇವ ಬಡವ, ಇವ ಬಲ್ಲಿದನೆಂಬ ಭೇದ ಭಾವನೆ ಇರಲಿಲ್ಲ. ಎಲ್ಲರು ಸರಿಸಮನರೆ, ದೈವದೃಷ್ಟಿಯಲ್ಲಿ ಎಲ್ಲರೂ ಒಂದೇ. ಸರ್ವ ಧರ್ಮಗಳೂ ಒಂದೇ. ಸರ್ವರಲ್ಲಿಯೂ ಪರಮಾತ್ಮನು ದಿವ್ಯಚೇತನವಾಗಿ ಬೆಳಗುತ್ತಾನೆ. ಇವನು ಮೇಲು ಇವನು ಕೀಳು ಎಂದು ವರ್ತಿಸಿದವರಲ್ಲ. ಇವರು ಕುಟುಂಬಸ್ಥರಾದರು ಸಂಬಂಧಿಗಳಿಗೆ ನಂಬಿದವರಿಗೆ ಅನ್ಯಾಯ, ಅಧರ್ಮ, ಮೋಸ, ವಂಚನೆಗಳನ್ನು ಮಾಡಲಿಲ್ಲ. ಯಾವ ವಿಧದಲ್ಲಿ ಆಗಲಿ ಅವರುಗಳ ಸುಖಕ್ಕಾಗಿ ಆಸ್ತಿಪಾಸ್ತಿಗಳನ್ನ ಸಂಪಾದಿಸಲಿಲ್ಲ. ಪುರಂದರದಾಸರಂತೆ “ದಾಸರಿಗೆ ದಾಸನಾಗಿ ಜನಸೇವೆಯೇ ಜನಾರ್ಧನನ ಸೇವೆಯೆಂದು” ಬಾಳಿದವರು. “ಧರ್ಮಪ್ರಭ” ಸಂಸ್ಥಾಪಕರಾಗಿ ಇಡೀ ಜೀವನವನ್ನೇ ಅದಕ್ಕಾಗಿ ಮುಡುಪಾಗಿಟ್ಟರು.
ಇವರಿಗೆ ಜನಸೇವೆ, ಪ್ರಕೃತಿಸೇವೆಯಲ್ಲಿ ಬಹಳ ಆಸಕ್ತಿ. ಯಾವ ಸಂಘ ಸಂಸ್ಥೆಗಳೇ ಆಗಲಿ ಆಹ್ವಾನಕೊಟ್ಟರೆ ಸಂಕೋಚವಿಲ್ಲದೆ ಭಾಗವಹಿಸಿ ಅಲ್ಲಿನ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಟ್ಟು ಅವುಗಳಲ್ಲಿ ಏನಾದರೂ ತಪ್ಪುಗಳಿದ್ದರೆ ಅವುಗಳನ್ನು ತಿದ್ದಿ ಜ್ಞಾನಾರ್ಜನೆಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವುದು, ಅವರಲ್ಲಿನ ಅಜ್ಞಾನವನ್ನು ಹೋಗಲಾಡಿಸುವು ಇವರ ಧ್ಯೇಯವಾಗಿತ್ತು.
ಅವರ ಹಿತವಚನ, ಕಾವ್ಯ, ಹಿತವಚನ. ಹಿತೋಪದೇಶವನ್ನು ನಮ್ಮ ಧರ್ಮಪ್ರಭದ ಸದಸ್ಯರ್ಯಾರೂ ಜೀವನಪರ್ಯಂತ ಮರೆಯುವಂತಿಲ್ಲ. ಅವರಿಲ್ಲದ ಕಾರಣ ನಮ್ಮ ಸಂಸ್ಥೆಗೆ ಬಹಳ ನಷ್ಟವಾಗಿದೆ. ಲಂಕಾಕೃಷ್ಣಮೂರ್ತಿ ಅವರಂತಹ ಮಹಾವ್ಯಕ್ತಿಯ ಆದರ್ಶಗುಣಗಳು ನಮಗೆ ಮಾರ್ಗದರ್ಶಕವಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಓಂ ಶಾಂತಿಃ : ಓಂ ಶಾಂತಿಃ : ಓಂ ಶಾಂತಿಃ
6
ಪೂಜ್ಯ ದಿII ಲಂಕಾ ಕೃಷ್ಣಮೂರ್ತಿ – ಮೂರು ದಶಕಗಳ ಸ್ಮರಣೆ
– ಶ್ರೀಮತಿ ಪದ್ಮ ಪುಟ್ಟಣ್ಣ
ಸುಮಾರು ೪೦ ವರ್ಷಗಳ ಹಿಂದಿನ ಮಾತು. ಆಗ ನಾವು ಐದು ಸಂಸಾರಗಳಿದ್ದ ಒಂದು ವಠಾರದಲ್ಲಿ ಸಂಸಾರ ಹೂಡಿದ್ದವು. ೧೯೫೮ನೇ ಇಸವಿ. ಆ ವಠಾರದಲ್ಲಿ ನಮ್ಮ ಮನೆ ಎದುರಿಗೇ ಶ್ರೀ ಲಂಕಾ ಕೃಷ್ಣಮೂರ್ತಿ ಅವರ ಸಂಸಾರ ಇದ್ದದ್ದು. ಶ್ರೀ ಲಂಕಾರವರಿಗೆ ಆಗ 25 – 26 ವರ್ಷ ವಯಸ್ಸು. ಅವರ ಶ್ರೀಮತಿ ಲಲಿತಮ್ಮನವರಿಗೆ 22 ವರ್ಷ ವಯಸ್ಸು. ಅವರ ಮಗ ಸುಬ್ರಹ್ಮಣ್ಯನಿಗೆ ಮೂರು ವರ್ಷ. ಅವರ ತಂದೆ, ತಾಯಿ, ತಮ್ಮ ಕೂಡ ಇವರಲ್ಲೇ ಇದ್ದರು. ಆವೇಳೆಗೆ ಇವರು ದೈವತ್ವವನ್ನು ಅಪ್ಪಿದ್ದರು. ಪ್ರಾತಃಕಾಲ ಸಂಧ್ಯಾವಂದನೆ, ಸೂರ್ಯ ನಮಸ್ಕಾರ, ಅನಂತರ ಭೋಜನ. ಸುಮಾರು ಹತ್ತು 10 ಘಂಟೆಗೆ ಕೆಲಸಕ್ಕೆ ಹೊರಟಾಗ ಅನನ್ಯ ಭಕ್ತಿಯಿಂದ ತುಳಸಿ ಬೃಂದಾವನಕ್ಕೆ ನಮಿಸಿ ತೆರಳುತ್ತಿದ್ದರು, ಆಗಲೂ ಪೋಷಾಕು ಪ್ರಿಯರಲ್ಲ್. ಮಿತಭಾಷಿ. ಗಾಂಭೀರ್ಯ ನಿಧಿ. ಆಮೇಲೆ ಒಂದು ದಶಕ ಸಂಪರ್ಕ ಅಷ್ಟಾಗಿರಲಿಲ್ಲ. 1967ನೇ ಇಸವಿಯಲ್ಲಿ ನಾವು ಜಯನಗರದ ೯ನೇ ಬ್ಲಾಕಿನಲ್ಲಿ ನೆಲಸಿದೆವು. ಅವರು ಇಂದಿರಾನಗರದಲ್ಲಿ ಮನೆ ಮಾಡಿ ಸಂಸಾರ ಹೂಡಿದ್ದರು. ಆವೇಳೆಗೆ ಮೂರು ಮಕ್ಕಳು ಆಗಿದ್ದರು. ಇವರದು ಅಚ್ಚುಕಟ್ಟಾದ ಸಂಸಾರ. ಮನೆ ನಂದನವನ. ಒಲವು ಪ್ರೀತಿಗಳ ಆಗರ. ಮಕ್ಕಳೆಲ್ಲರೂ ತಾಯಿ ತಂದೆಗಳಂತೆ ಸುಸಂಸ್ಕೃತರು. ವಿದ್ಯಾಸಂಪನ್ನರು. ಮನೆಯಲ್ಲಿ ಆಧ್ಯಾತ್ಮಿಕ ಪ್ರಭೆ ತುಂಬಿರುತ್ತಿತ್ತು. ಉಚ್ಚ ನ್ಯಾಯಾಲಯದಲ್ಲಿ ಅಡಿಷನಲ್ ರಿಜಿಸ್ಟ್ರಾರರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನವನ್ನು ಸಾರ್ಥಕ ಪಡಿಸಿಕೊಂಡವರು ಶ್ರೀಲಂಕಾ ಅವರು. ಅವರು ವೃತ್ತಿಯಿಂದ ನಿವೃತ್ತರಾದರೇ ಹೊರತು, ಜೀವನದಿಂದಲ್ಲ. ಜೀವನೋತ್ಸಾಹ ಇನ್ನೂ ವಿಕಸಿತವಾಯಿತು. ಯಾವುದೇ ಸ್ವಂತ ಹಿತಾಸಕ್ತಿ ಅಥವಾ ಪೂರ್ವಾಗ್ರಹ ಪೀಡಿತವಿಲ್ಲದೆ, ಅವರ ಜೀವನ ಸಮಾಜದ ಸುವ್ಯವಹಾರದಲ್ಲಿ ಲೀನವಾಯಿತು. ಅವರ ಸಹವಾಸದಿಂದ ಪ್ರತಿಯೊಬ್ಬರಿಗೂ ಒಳ್ಳೆಯ ಜೀವನದರ್ಶನ ಲಭ್ಯವಾಯಿತು.
ಅವರ ಜೀವನದಲ್ಲಿ ಸನಾತನ ಧರ್ಮ ಸಂರಕ್ಷಣ ಸಂಸ್ಥೆ ಸ್ಥಾಪನೆ ಮತ್ತು “ಧರ್ಮಪ್ರಭ” ಮಾಸಿಕದ ಪ್ರಕಟಣೆ ಅಸಾಧಾರಣ ಮೈಲಿಗಲ್ಲುಗಳು. ಇವೆರಡಕ್ಕೂ ಅವರ ನಿಸ್ವಾರ್ಥ ಸೇವೆ ಅನುಪಮ. ನಮ್ಮ ಯಜಮಾನರೂ ಇವರ ಜೊತೆ ನಾರಿನಂತೆ ಸೇರಿ ಹೋದರು. ಶ್ರೀ ಲಂಕಾರವರು ಧರ್ಮ ಸೂಕ್ಷ್ಮವನ್ನೊಳಗೊಂಡ ಪ್ರಶ್ನೆಗಳಿಗೆ ಅಸದೃಶ ಉತ್ತರಗಳನ್ನು ಪಾಂಡಿತ್ಯಪೂರ್ವಕ ಅಧಿಕಾರಿವಾಣಿಯಿಂದ ಕೊಡುತ್ತಿದ್ದರು. ಇವರನ್ನು “ಮಹಾತ್ಮ”ರೆಂದೇ ಕರೆಯಬಹುದು. ಇವರಲ್ಲಿ ಮೋಸ, ವಂಚನೆ, ಕೃತ್ರಿಮ, ಯಾವುವೂ ಹತ್ತಿರ ಸುಳಿಯುತ್ತಿರಲಿಲ್ಲ. ಪ್ರೀತಿ, ವಾತ್ಸಲ್ಯ, ಸತ್ಯ, ಶಾಂತಿ, ನಿಷ್ಕಪಟ ಸೇವೆ ಇವರಲ್ಲಿ ತಾಂಡವವಾಡುತ್ತಿತ್ತು.
ಇವರನ್ನು ಶ್ರೀ ಈಶ್ವರ ಚಂದ್ರ ವಿದ್ಯಾಸಾಗರರಿಗೆ ಹೋಲಿಸಬಹುದು. ಅವರಲ್ಲಿದ್ದ ಸರಳತೆ, ವಿದ್ವತ್ತು, ನಿರಾಡಂಬರಿಕೆ, ಉತ್ಕಟದೇಶಪ್ರೇಮ, ಸಮಾಜಪ್ರೀತಿ, ಶ್ರೀ ಲಂಕಾದವರಲ್ಲೂ ಎದ್ದು ಕಾಣುತ್ತಿತ್ತು. ಆಂಜನೇಯನಲ್ಲಿದ್ದ ಭಗವತ್ ಭಕ್ತಿ ವಿವೇಕ, ಮಾತಿನಲ್ಲಿ ವಿದ್ವತ್ತು, ಶ್ರದ್ಧೆ ಇವುಗಳನ್ನು ಇವರು ಅಳವಡಿಸಿಕೊಂಡಿದ್ದರು. ಜ್ಯೋತಿಷ್ ಶಾಸ್ತ್ರ, ಚಿತ್ರಕಲೆ, ಸಂಗೀತ, ಸಾಹಿತ್ಯ, ಅಸ್ಟಾವಧಾನ, ಧರ್ಮಶಾಸ್ತ್ರಗಳಲ್ಲಿ ನುರಿತವರು. ಸರಸ್ವತೀ ಪುತ್ರರೇ ಆಗಿದ್ದರು. ಅವರಲ್ಲಿದ್ದ ಜ್ಞಾನಭಂಡಾರವನ್ನು ಬೇರೆಯವರಿಗೂ ಸಮೂಹ ಮಾಧ್ಯಮಗಳಲ್ಲಿ ಹಂಚುತ್ತಿದ್ದರು.
ಇವರು ನಮ್ಮನ್ನು ಇಷ್ಟು ಬೇಗ ಅಗಲುವರೆಂದು ಯಾರೂ ತಿಳಿದಿರಲಿಲ್ಲ. ಅವರು ಶಿವಸಾಯುಜ್ಯವನ್ನು ಪಡೆದಂದು, ಅವರ ಅಧ್ಯಾತ್ಮಿಕ ಇಂದ್ರಚಾಪ ಸಮಾಜವನ್ನು ಆವರಿಸಿತ್ತು. ಅವರ ಹೆಸರು ಎಂದಿಗೂ ಹಸಿರು.
7
ಸ್ಲೀಪಿಂಗ್ ಬ್ಯೂಟಿ – ಒಂದು ಸವಿನೆನಪು
– ಬ. ವೆಂ. ಗೋವಿಂದರಾಜು
ದಿವಂಗತ ಲಂಕಾ ಕೃಷ್ಣಮೂರ್ತಿಗಳು 1949 ರಿಂದಲೂ ನನ್ನ ಸ್ನೇಹಿತರು. ನಾನು, ಅವರು ಮತ್ತು ಶ್ರೀ ಬಿ. ಭಗವಾನ್ ಸಿಂಗ್ ರವರು ಎಲ್ಲಾ ಒಟ್ಟಿಗೆ ಲಾ ಕಾಲೇಜ್ ಹಾಸ್ಟಲ್ ನಲ್ಲಿದ್ದೆವು. ನಾವೆಲ್ಲ ಶ್ರೀ ಲಂಕಾ ರವರಿಗೆ “ಸ್ಲೀಪಿಂಗ್ ಬ್ಯೂಟಿ” ಎಂದು ಹೆಸರಿಟ್ಟಿದ್ದೆವು. ಅವರ ಕೆದರಿದ ತಲೆ ಕೂದಲು ಮತ್ತು ಯಾವಾಗಲೂ ಸ್ವಲ್ಪ ಮಂಕಾಗಿರುತ್ತಿದ್ದ ಅವರ ಸ್ವಭಾವ ಇದಕ್ಕೆ ಕಾರಣ. ಜೊತೆಗೆ ಅವರು ಮಿತಭಾಷಿಗಳು. ಇವರು ಶೇಷಾದ್ರಿಪುರಂ ಹೈಸ್ಕೂಲಿನಲ್ಲಿ ಅರೆಕಾಲಿಕ ಉಪಾಧ್ಯಾರಾಗಿ ಸಹ ಕೆಲಸಮಾಡುತ್ತಿದ್ದರೆಂದು ನನ್ನ ನೆನಪು. ನಾನೂ ಅವರೂ ತೆಲುಗಿನಲ್ಲೆ ಮಾತನಾಡುತ್ತಿದ್ದೆವು. ಅವರ ಸ್ವಾರಸ್ಯಕರವಾದ ತೆಲುಗು ಚಾಟು ಪದ್ಯಗಳೇ ನನ್ನನ್ನು ಅವರು ಆಕರ್ಷಿಸಲು ಕಾರಣ. ಅವರು ನಗುತ್ತಿದ್ದುದೇ ಅಪರೂಪ. ಒಮ್ಮೊಮ್ಮೆ ಮಾತ್ರ ಮುಗುಳುನಗೆ, ಸರಳತೆಯ ಸಕಾರಮೂರ್ತಿ. ಉಡುಪು ಮತ್ತು ನಡೆ–ನುಡಿ ಎಲ್ಲವೂ ಸರಳ. ಆಡಂಬರ, ಕಪಟರೂಪ ಯಾವುದರಲ್ಲೂ ಇಲ್ಲ. ಬಿಚ್ಚು ಮನಸ್ಸು, ಮಕ್ಕಳ ಮನಸ್ಸಿನಂತೆ. ಒಮ್ಮೆಅವರನ್ನು ನಾನು ಉಪಹಾರಕ್ಕಾಗಿ ರಾಮಕೃಷ್ಣ ಲಂಚ್ ಹೋಂಗೆ ಕರೆದುಕೊಂಡು ಹೋಗಿದ್ದೆ. ಇಬ್ಬರೂ ತಿಂಡಿ ತಿಂದೆವು. ನಾನು ಇಬ್ಬರಿಗೂ ಕಾಫಿ ತರಲು ಹೇಳಿದೆ. ಅವರು ಕಾಫಿ ಬೇಡ, ಇನ್ನೊಂದು ಪ್ಲೇಟು ತಿಂಡಿಯನ್ನೇ ತೆಗೆದುಕೊಳ್ಳುತ್ತೇನೆ ಎಂದರು. ಅದು ಅವರ ಮುಗ್ಧ ನಡುವಳಿಕೆ. ಅವರಲ್ಲಿ ಹೃದಯವಂತಿಕೆ ಇತ್ತು. ಧರ್ಮಾಸಕ್ತರು, ದೈವಭಕ್ತರು ಮತ್ತು ಸತ್ಯವಂತರು. ನಾನು ನ್ಯಾಯಾಧೀಶನ ಕೆಲಸಕ್ಕೆ ಸೇರಿದೆ. ಅವರು ಹೈಕೋರ್ಟಿನಲ್ಲಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಗಿದ್ದರು. ನನ್ನ ಸ್ನೇಹಿತರೆಂಬ ಸಲಿಗೆಯಿಂದ ನಾನು ಅವರಿಂದ ಕೆಲೊವೊಂದು ಮಾಹಿತಿ ಅಪೇಕ್ಷಿಸಿದೆ. ಅವರು ಕರ್ತವ್ಯದ ದೃಷ್ಟಿಯಿಂದ ನಿರಾಕರಿಸಿದರು. ನಿಯಮಗಳಿಗೇ ಅಂಟಿಕೊಂಡರು. ನನಗೆ ಸ್ವಲ್ಪ ಬೇಸರವಾಯ್ತು. ಆದರೂ ಅವರ ಕರ್ತವ್ಯನಿಷ್ಠೆಯನ್ನು ಮೆಚ್ಚದಿರಲಾಗಲಿಲ್ಲ. ಶಿಸ್ತಿನಿಂದ ಕೆಲಸ ಮಾಡಿ, ಹೆಸರು ಗಳಿಸಿದರು. ಅವರ ಸಾಮಾಜಿಕ ಕಳಕಳಿ, ಆಧ್ಯಾತ್ಮಿಕ ಅರಿವು, ಸೇವಾ ಮನೋಭಾವ ಗಮನಾರ್ಹ. ಸನಾತನ ಧರ್ಮ ಸಂಸ್ಥೆಗೆ, “ಧರ್ಮಪ್ರಭ” ಪತ್ರಿಕೆಗೆ ಅವರ ಸೇವೆ, ಕೊಡುಗೆ ಅಪಾರ. ಬೆಲೆಬಾಳುವ ಕಲೆಗಾರಿಕೆ ಅವರಿಗೆ ತಿಳಿದಿತ್ತು. ಸಾರ್ಥಕ ಜೀವನ, ತುಂಬು ಜೀವನ ನಡೆಸಿದರು. ಅವರೊಬ್ಬ ಆದರ್ಶವ್ಯಕ್ತಿ. ಅವರ ನೆನಪು ಸದಾ ಸವಿನೆನಪು.
8
ಲೆಂಕರ ಲೆಂಕ ದಿII ಲಂಕಾ ಕೃಷ್ಣಮೂರ್ತಿ
ನಾ. ಮ. ಸಿದ್ಧರಾಮಯ್ಯ
ಮನುಷ್ಯನಿಗೆ ಚತುರ್ವಿಧ ಪುರುಷಾರ್ಥಗಳುಂಟು. ಧರ್ಮ, ಅರ್ಥ, ಕಾಮ, ಮೋಕ್ಷ. ಈ ನಾಲ್ಕರಲ್ಲಿ ಲೋಕದ ಜನರು ಅರ್ಥ – ಕಾಮಗಳನ್ನು ಹಿಡಿದುಕೊಂಡು ಕೊನೆಯಲ್ಲಿರುವ ಧರ್ಮ – ಮೋಕ್ಷಗಳೆರಡನ್ನು ಬಿಟ್ಟು ಜ್ಞಾನಶೂನ್ಯರಾಗಿ ಪ್ರಾಪಂಚಿಕದಲ್ಲಿ ದುಃಖಿಗಳಾಗಿರುತ್ತಾರೆ. ಅರ್ಥವಿರುವುದು ಧರ್ಮಕ್ಕಾಗಿಯೇ ಮತ್ತು ಕಾಮವಿರುವುದು ಮೋಕ್ಷಕ್ಕಾಗಿಯೇ ಎಂದು ತಿಳಿದವರೇ ಮಾನವರು. ಮನುಷ್ಯತ್ವ ಉಳ್ಳವರು! ಮನುಷ್ಯತ್ವ ಪಡೆದು ಮಾನವರಾಗಿ ತಮ್ಮ ಜೀವನವನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರೆಂದರೆ ಭಕ್ತರ ಭಕ್ತ (ಲೆಂಕರ ಲೆಂಕ ) ನಾಗಿ ಬಾಳು ಸಾರ್ಥಕ ಪಡಿಸಿಕೊಂಡವರೆಂದರೆ ದಿII ಲಂಕಾ ಕೃಷ್ಣಮೂರ್ತಿಯವರು. ಅವರು “ಧರ್ಮಪ್ರಭ” ಮಾಸಿಕಕ್ಕೆ ಸಂಸ್ಥಾಪಕರಾಗಿ, ಚೈತನ್ಯ ಪುರುಷರಾಗಿ ಬಾಳಿದವರು. ಸನಾತನ ಧರ್ಮವನ್ನು ಎತ್ತಿ ಹಿಡಿದ ಲೇಖನಗಳನ್ನು ಅನುಭವ ಸಾಹಿತಿಗಳಿಂದ ಬರೆದು ತರಿಸಿ, ಪ್ರಕಟಿಸಿ ಕನ್ನಡನಾಡಿನಲ್ಲಿ ಸಾಹಿತ್ಯ ಸರಸ್ವತಿಯ ಸೇವೆ ಮಾಡಿದ್ದಾರೆ. 11-11-97ಕ್ಕೆ ನಮ್ಮನ್ನಗಲಿ ಒಂದು ವರ್ಷವಾದರೂ ಅವರು ಬಿಟ್ಟು ಹೋದ “ಧರ್ಮಪ್ರಭ” ಆಚಂದ್ರಾರ್ಕವಾಗಿ ಭೂಮಾನುಭೂತಿಯಲ್ಲಿ ಬೆಳಗಿ, ಸದಾ ಕಂಗೊಳಿಸುವುದು ಋತುಸತ್ಯವಾದ ಮಾತಾಗಿದೆ. ಒಳ್ಳೆಯ ವಿಚಾರಗಳು ಸಮಾಜದ ಹಿತಚಿಂತಕರು ಮಾಡುವ ಧ್ಯೇಯ ಧೋರಣೆಗಳು ದಿII ಲಂಕಾ ಕೃಷ್ಣಮೂರ್ತಿಯವರ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ಓತಪ್ರೋತದಂತೆ ನೈಜತೆಯ ನಿಲುಗನ್ನಡಿಯಲ್ಲಿ ಬಿಂಬ ಪ್ರತಿಬಿಂಬದಂತೆ ಬೆಳಗಿ ಪ್ರತಿಮಾರೂಪದಲ್ಲಿ ಮಹೋಪಮೆಯಾಗಿದ್ದವು. ಶ್ರೀ ಕೃಷ್ಣಮೂರ್ತಿಯವರು ದೈಹಿಕವಾಗಿ ಕಣ್ಮರೆಯಾಗಿದ್ದರೂ ಅವರ ಸಮಾಜ ಸೇವಾಭಾವನೆಯ ದೃಷ್ಟಿಕೋನದಿಂದ ನಮ್ಮೆಲ್ಲರ ಕಣ್ಮಣಿಗಳಾಗಿದ್ದಾರೆ.
9
ಅಧ್ಯಕ್ಷರ ನುಡಿ
ಸನಾತನ ಧರ್ಮ ಸಂರಕ್ಷಣ ಸಂಸ್ಥೆಯ ಹಿರಿಯ ಟ್ರಸ್ಟಿಗಳೂ ಮತ್ತು ಈ ಸಂಸ್ಥೆಯ ಮುಖವಾಣಿ ಆಗಿರುವ “ಧರ್ಮಪ್ರಭ” ಮಾಸಿಕವನ್ನು ಹುಟ್ಟುಹಾಕಿದವರೂ, ಅದರ ಸಹಾಯಕ ಸಂಪಾದಕರೂ ಆಗಿದ್ದ ಪೂಜ್ಯ ಶ್ರೀ ಲಂಕಾ ಕೃಷ್ಣಮೂರ್ತಿಯವರು ನಮ್ಮೆಲ್ಲರನ್ನೂ ಅಗಲಿ ಇಂದಿಗೆ ಒಂದು ವರ್ಷವಾಗಿದೆ. ಈ ಪುಣ್ಯಶ್ಲೋಕರನ್ನು ನಾವು ನೆನಸದ ದಿನವಿಲ್ಲ. ಈ ಸಂಚಿಕೆಯನ್ನು ಅವರ ಸ್ಮರಣಾರ್ಥ ಭಕ್ತಿಪೂರ್ವಕವಾಗಿ ಹೊರತರುತ್ತಿದ್ದೇವೆ. ಹೋದ ವರ್ಷ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದಾಗ ಹೀಗೆ ಬರೆದಿದ್ದೆ.
“ಅವರು ನಮ್ಮ ಸನಾತನ ಧರ್ಮಸಂರಕ್ಷಣ ಸಂಸ್ಥೆಯ ಜೀವನಾಡಿಯಾಗಿ, ಅಖಂಡ ಸೇವೆ ಸಲ್ಲಿಸುತ್ತಿದ್ದರು. ಸಂಸ್ಥೆಯು, ಒಬ್ಬ ಉದ್ದಾಮ ಪಂಡಿತನನ್ನು ಕಳೆದುಕೊಂಡು ಅನಾಥವಾಗಿದೆ. “ಧರ್ಮಪ್ರಭ” ಪತ್ರಿಕೆಯಲ್ಲಿನ ಅವರ ಸಂಪಾದಕೀಯ ಲೇಖನಗಳು, ಉದಾತ್ತ ಚಿಂತನೆಗಳಿಂದ ಕೂಡಿದ್ದು, ಓದುಗರ ಮೆಚ್ಚಿಗೆಯನ್ನು ಪಡೆದಿದ್ದುವು. ಅವರ ಲೇಖನಿ ಈಗ ಬತ್ತಿದೆ. ಆದರೆ ಅವರ ಚಿಂತನೆಗಳ ಸೊಗಸು ಯಾವತ್ತೂ ಉಳಿಯತಕ್ಕುವು. ನಮ್ಮ ಸಂಸ್ಥೆಗೆ ಅನೇಕ ದೇಣಿಗಳನ್ನು ಒದಗಿಸಿಕೊಟ್ಟು ಸಂಸ್ಥೆಯನ್ನು ಒಪ್ಪವಾಗಿ ಬೆಳಸಿದರು. ಅವರು ಅತ್ಯಂತ ಸರಳಜೀವಿಗಳಾಗಿದ್ದು, ಸಮಭಾವದಿಂದ ಕೂಡಿ ಖುಷಿ ಸದೃಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. ಅವರು ಇನ್ನಿಲ್ಲ. ಅವರ ಮಾರ್ಗದರ್ಶನವನ್ನು ನಾವು ಎಂದೂ ಮರೆಯುವ ಹಾಗಿಲ್ಲ”
ಅವರ ಶಾಶ್ವತವಾಣಿ, ಬರಹಗಳು ಹಾಗೂ ಅವರ ಪರಮ ಸಾತ್ವಿಕ ವ್ಯಕ್ತಿತ್ವ ಈಗಲೂ ನಮ್ಮ ಕೈ ಹಿಡಿದು ನಡೆಸುತ್ತಿವೆ. ಋಷಿವಾಣಿ ಹೀಗಿದೆ:
“ಯಸ್ತು ವಿಜ್ಞಾನವಾನ್ ಭವತಿ ಸುಮನಸ್ಕಃ ಸದಾ ಶುಚಿಃI
ಸತು ತತ್ವದ ಮಾಪ್ನೋತಿ ಯಸ್ಮಾದ್ಭೂಯೋ ನಜಾಯತೆII”
ಯಾವನು ಯಾವಾಗಲೂ ಜ್ಞಾನವುಳ್ಳವನಾಗಿ, ನಿಗ್ರಹಿಸಿದ ಮನವುಳ್ಳವನಾಗಿ ಶುಚಿಯಾಗಿರುವನೋ ಅವನು ಪರಮ ಪದವನ್ನು ಹೊಂದುತ್ತಾನೆ. ಆದ್ದರಿಂದ ಅವನು ಪುನಃ ಹುಟ್ಟುವುದಿಲ್ಲ. ಪೂಜ್ಯ ಶ್ರೀ ಲಂಕಾ ಅವರಿಗೆ ಮುಕ್ತಿ ಲಭ್ಯವಾಗಿದೆ. ಅವರನ್ನು ನಾವೆಲ್ಲರೂ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತೇವೆ.
ನಮ್ಮ ಕೋರಿಕೆಯನ್ನು ಮನ್ನಿಸಿ ಅನೇಕ ಸಹೃದಯ ಲೇಖಕ ಲೇಖಕಿಯರು, “ಧರ್ಮಪ್ರಭ” ಅಭಿಮಾನಿಗಳು, ಅವರ ವ್ಯಕ್ತಿತ್ವ – ಸಾಧನೆಗಳ ಬಗ್ಗೆ ಹಲವಾರು ಲೇಖನ, ಸಂದೇಶಗಳನ್ನು ಬರೆದು ಕಳುಹಿಸಿದ್ದಾರೆ. ಇವರಿಗೆಲ್ಲ ನಮ್ಮ ಅನಂತ ವಂದನೆಗಳು. ಆ ಎಲ್ಲ ಲೇಖನಗಳನ್ನು ಈ ಸಂಚಿಕೆಯಲ್ಲಿ ಸ್ಥಳಾವಕಾಶದ ಕೊರತೆಯಿಂದ ಪ್ರಕಟಿಸಲಾಗಿಲ್ಲ. ಕ್ಷಮಿಸಬೇಕು. ಸೂಕ್ತ ಕಾಲದಲ್ಲಿ ಯುಕ್ತ ಲೇಖನಗಳನ್ನು ಉಪಯೋಗಿಸಿಕೊಳ್ಳಲಾಗುವುದು.
ಈ ಸಂಚಿಕೆಯನ್ನು ಹೊರತರಲು “ಧರ್ಮಪ್ರಭ” ಪತ್ರಿಕೆಯ ಗೌರವ ಸಂಪಾದಕರಾದ ಶ್ರೀ ಭಗವಾನ್ ಸಿಂಗ್, ಗೌರವ ಸಹ ಸಂಪಾದಕರಾದ ಶ್ರೀ ಟಿ. ಆರ್. ಮಹದೇವಯ್ಯ ಮತ್ತು ಶತಾವಧಾನಿ ಆರ್. ಗಣೇಶ್ ಅವರು ಅಪಾರ ಶ್ರಮವಹಿಸಿದ್ದಾರೆ. “ಧರ್ಮಪ್ರಭ” ಸಂಪಾದಕ ಮಂಡಳಿ ಸದಸ್ಯರು ಮತ್ತು ನಮ್ಮ ಸಂಸ್ಥೆಯ ಧರ್ಮದರ್ಶಿಗಳೂ ಈ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಈ ಸಂಚಿಕೆಯನ್ನು ಅಚ್ಚುಕಟ್ಟಾಗಿ ಸಕಾಲದಲ್ಲಿ ಹೊರತರಲು ಉತ್ಸಾಹೀ ಯುವ ಉದ್ಯಮಿ ಓರಿಯಂಟ್ ಪವರ್ ಪ್ರೆಸ್ಸಿನ ಒಡೆಯರಾದ ಶ್ರೀ ಜಿ.ಎಸ್. ಕುಮಾರಸಸ್ವಾಮಿಯವರು ಶ್ರದ್ಧೆಯಿಂದ ದುಡಿದಿದ್ದಾರೆ. ಇವರಿಗೆಲ್ಲ ನನ್ನ ಹೃತ್ಪೂರಕ ವಂದನೆಗಳು. ಜಾಹೀರಾತುದಾರರಿಗೂ ನನ್ನ ಗೌರವಪೂರ್ವಕ ವಂದನೆಗಳು.
ಯೈ.ಯಂ.ಸಿ. ಶರ್ಮ
ಅಧ್ಯಕ್ಷ, ಸನಾತನ ಧರ್ಮಸಂರಕ್ಷಣ ಸಂಸ್ಥೆ (ರಿ)
10
ದಿII ಲಂಕಾ ಕೃಷ್ಣಮೂರ್ತಿ ಅವರ ನೆನಪು
- ಬಿ. ಎಸ್. ವಿರೂಪಾಕ್ಷಪ್ಪ
ದಿII ಲಂಕಾ ಕೃಷ್ಣಮೂರ್ತಿಗಳ ವ್ಯಕ್ತಿತ್ವ ಅರಳಿಸುವ ಶಕ್ತಿ ಖಂಡಿತಾ ನನ್ನ ಲೇಖನಿಗಿಲ್ಲ. ಹಾಗೆಂದು ಸುಮ್ಮನಿರಲು ಒಪ್ಪದ ನನ್ನ ಮನದ ಒತ್ತಡಕ್ಕೆ ಮಣಿದು ಶ್ರೀಯುತರ ಬಗೆಗೆ ಈ ಕಿರು ಲೇಖನ ಸಮರ್ಪಿಸುವೆ.
“ಹುಟ್ಟಿದವರೆಲ್ಲಾ ಸಾಯಲೇ ಬೇಕು”. ಇದು ಪ್ರಕೃತಿ ಧರ್ಮ. ಇದಕ್ಕೂ ಮಿಗಿಲಾದ ಧರ್ಮ “ಬದುಕಿರುವಾಗ ಸತ್ತು ಸತ್ತ ಮೇಲೆ ಬದುಕುವುದು”. ಈ ಮೇರು ಧರ್ಮದ ಹಾದಿ ಹಿಡಿದವರು ನಮ್ಮ ದಿII ಲಂಕಾ ಕೃಷ್ಣಮೂರ್ತಿಗಳು.
ಶ್ರೀಯುತರು ನಾ ಕಂಡ ಹಿರಿಯ ಚೇತನಗಳಲ್ಲಿ ಒಬ್ಬರಾಗಿರುವರು. ಅವರನ್ನು ಸ್ಮರಿಸುವುದೂ ಒಂದು ಪುಣ್ಯಕಾರ್ಯವೆಂದು ಬಗೆವೆ. ಅವರಿಂದ ಉಪಕೃತರಾದವರು ಎಷ್ಟೋ ಮಂದಿ. ಅವರಲ್ಲಿ ನಾನೂ ಒಬ್ಬ. ಅವರು ನನ್ನ ಲೇಖನಿಗೆ ಅಮೃತಸೇಚನ ನೀಡಿರುವರು. ಅವರನ್ನು ನಾನೆಂದೂ ಮರೆಯಲಾರೆ. ನನ್ನ ಅವರ ಪರಿಚಯವಾದದ್ದು 1993ರಲ್ಲಿ. ಪರಿಚಯದ ಸಂದರ್ಭ ಎಂದರೆ ನಾನು ಬರೆದು ಪ್ರಕಟಿಸಿದ ಎರಡು ಕೃತಿಗಳು “ಶಬರಿಮಲೆ ಯಾತ್ರಾ ಮೋಡಿ” “ಕರಡಿ ಅಜ್ಜಯ್ಯ ದರ್ಶನ” ಅವರ ಕೈ ಸೇರಿ, ಅವರು ಅವುಗಳನ್ನು ತಮ್ಮ ಪತ್ರಿಕೆ “ಧರ್ಮಪ್ರಭ”ದಲ್ಲಿ ಲೇಖನ ಬರೆದು ಪರಿಚಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು. ಶ್ರೀಯುತರ ಕಾರ್ಯದಲ್ಲಿ ಅವರ ಬಲಗೈ ಬಂಟರಂತೆ ದುಡಿದ ಮತ್ತೊಬ್ಬ ಹಿರಿಯ ಚೇತನ ಅವರ ಗೆಳೆಯರಾದ(ನನಗೂ ಗೆಳೆಯರೆ) ಶ್ರೀ ಬಿ. ಭಗವಾನ್ ಸಿಂಗ್ ರವರು ಬೆಂಗಳೂರು ವಕೀಲ ಸಂಘದ ನಂಟಿನವರು. ಅವರಲ್ಲಿ ಒಮ್ಮೆ ನಾನು ಲಂಕಾ ಕೃಷ್ಣಮೂರ್ತಿಗಳನ್ನು ಕಂಡು ಮುಖತಃ ವಿಚಾರ ವಿನಿಮಯ ಮಾಡಿಕೊಳ್ಳುವ ನನ್ನ ಅಭಿಲಾಷೆಯನ್ನು ವ್ಯಕ್ತಪಡಿಸಿ ಅದಕ್ಕಾಗಿ ಅವಕಾಶ ಕಲ್ಪಿಸಲು ವಿನಂತಿಸಿದ್ದೆ. ಈ ವಿಚಾರ ಅರಿತ ಲಂಕಾ ಕೃಷ್ಣಮೂರ್ತಿಗಳು ಶ್ರೀ ಬಿ. ಭಗವಾನ್ ಸಿಂಗ್ ರವರೊಂದಿಗೆ ಮಾರನೆ ದಿನವೆ ನಮ್ಮ ವಕೀಲರ ಸಂಘಕ್ಕೆ ಬಂದು ನನ್ನನ್ನು ಭೇಟಿ ಮಾಡಿ ಒಂದು ತಾಸು ವಿಚಾರವಿನಿಮಯಕ್ಕೆ ಅವಕಾಶಮಾಡಿಕೊಟ್ಟರು. ಇದು ದಿII ಲಂಕಾ ಕೃಷ್ಣಮೂರ್ತಿಗಳ ಹೃದಯ ವಿಶಾಲತೆಗೆ ಹಿಡಿದ ಕನ್ನಡಿ ಅಲ್ಲವೆ?
ನಂತರದ ಸಂಪರ್ಕದಿಂದ ನನಗೆ ಅವರ ಸರಳತೆ, ಸಜ್ಜನಿಕೆ, ಆಳವಾದ ಪಾಂಡಿತ್ಯ, ಸೇವಾಮನೋಧರ್ಮ, ಧರ್ಮಪಾಲನೆಯಲ್ಲಿ ಆಸಕ್ತಿ ಮುಂತಾಗಿ ಅನೇಕ ಗುಣಗಳ ಕಂಡು ಬೆರಗಾದೆ. ಇಷ್ಟೆಲ್ಲಾ ಗುಣನಿಧಿಯಾಗಿದ್ದರೂ ಶ್ರೀಯುತರು ತೋರಿಕೆ ಹಂಬಲ ಎಳ್ಳಷ್ಟು ಇಲ್ಲದೆ ಅವರ ಬಗ್ಗೆ ಒಲವು ತಾನೇ ತಾನಾಗಿ ಮೂಡಿತು. ಅವರ ಲೇಖನಗಳನ್ನು “ಧರ್ಮಪ್ರಭ” ದಲ್ಲಿ ಆಸಕ್ತಿಯಿಂದ ಓದತೊಡಗಿದೆ. ಗಾಯತ್ರಿ ಮಂತ್ರದ ಬಗೆಗಿನ ಅವರ ಲೇಖನ ಮನಸೂರೆಗೊಂಡವು. ಅವು ಉಪಯುಕ್ತ ಹಾಗೂ ಮಹತ್ವದ ಲೇಖನಗಳು. ಬಿಡಿ ಲೇಖನಗಳನ್ನು ಒಂದು ಪುಸ್ತಕ ರೂಪದಲ್ಲಿ ತರಲು ಶ್ರೀಯುತರಲ್ಲಿ ವಿನಂತಿಸಿದೆ. ಅವರು “ಅದಕ್ಕೆ ಕಾಲ ಬರಲಿ” ಎಂದು ಹೇಳಿದ್ದರು. 11-11-1996ರಲ್ಲಿ ಅವರಿಗೆ ಕಾಲನ ಕರೆ ಬಂದದ್ದು, ಒಬ್ಬ ಆತ್ಮೀಯ ಬಂಧುವನ್ನು ಕಳೆದುಕೊಂಡ ದುಃಖವಾಯಿತು. ಲಂಕಾ ಕೃಷ್ಣಮೂರ್ತಿಗಳ ಶರೀರ ಅಳಿಯಿತು. ನಿಜ. ಆದರೆ ಅವರ ಮನ ನಮ್ಮೊಂದಿಗಿದೆ ಎನ್ನುವುದು ಸತ್ಯ! ಅವರು ಬೆಳಸಿ ಪೋಷಿಸಿದ “ಸನಾತನ ಧರ್ಮ ಸಂರಕ್ಷಣಾ ಸಂಸ್ಥೆ” ಸಾಕಷ್ಟು ಬೆಳೆದಿದೆ. ಅವರ ಆಶೋತ್ತರ ಈಡೇರಿರುವುದೆಂದು ನಂಬಿರುವೆ. ಸಾರ್ಥಕ ಬಾಳು ಬಾಳಿದ ಲಂಕಾ ಕೃಷ್ಣಮೂರ್ತಿಗಳ ಆತ್ಮಕ್ಕೆ ಶಾಂತಿ ಕೋರಿ ನಮಿಸುವೆ.
ಓಂ ಶಾಂತಿಃ ಶಾಂತಿಃ ಶಾಂತಿಃ
ಇಂದು ನನ್ನ ಪೂಜ್ಯ ತಂದೆಯವರಾದ ದಿII ಲಂಕಾ ಕೃಷ್ಣಮೂರ್ತಿಯವರ 24ನೇ ಪುಣ್ಯತಿಥಿ. ಅವರ ಸಂಸ್ಮರಣ ಲೇಖನಗಳನ್ನು ಪ್ರಸ್ತುತಪಡಿಸುತ್ತಿದ್ದೇನೆ.
11
ದಿ || ಲಂಕಾ ಕೃಷ್ಣಮೂರ್ತಿಯವರ ವಿಚಾರಧಾರೆ
– ಎ. ಅರ್. ಸೀತಾರಾಮ್
1. ದೇವರು ಇದ್ದಾನೆಯೇ? :- ಈ ತರ್ಕ ಹಾಗೂ ವಿಚಾರಧಾರೆ ಅನುಚಿತ. ಅಗೋಚರ ಶಕ್ತಿಯನ್ನು ಹುಡುಕುವುದೇ ದೇವರಿದ್ದಾನೆ ಎಂಬುದಕ್ಕೆ ಸಾಕ್ಷಿ.
2. ತೃಪ್ತಿ:- ಇರುವುದನ್ನು ಅನುಭವಿಸಿ. ಇಲ್ಲದೇ ಇರುವುದರ ಬಗ್ಗೆ ಚಿಂತಿಸದೇ ಇರುವುದೇ ತೃಪ್ತಿ.
3. ಆಸೆ :- ಇದು ಮಾನವನ ಒಂದು ಗುಣ. ಬೇರೆಯವರ ಧನ ಹಾಗೂ ಸುಖವನ್ನು ಆಶಿಸುವುದೇ ತಪ್ಪು. ನಿನಗೆ ಎಟುಕಿದ ಹಾಗೂ ಅದು ಧರ್ಮ ನಿಷಿದ್ಧವಲ್ಲದಿದ್ದರೆ ಅದರ ಅನುಭವ ಯೋಗ್ಯ.
4. ಕಾಮ:- ಕಾಮ ಪ್ರಕೃತಿ ನಿಯಮದ ಒಂದು ಅಂಗ. ಅದು ವರವೂ ಹೌದು. ಶಾಪವೂ ಹೌದು. ಅತಿಕಾಮ, ಪ್ರಕೃತಿ ಪುರುಷನ ವಿಲಕ್ಷಣ ಅವತಾರ. ನಿಷಿದ್ಧ ವರ್ಗದ ಕಾಮ ಒಂದು ಕರ್ಮ. ಪ್ರಕೃತಿದತ್ತವಾದ ಕಾಮ ಪವಿತ್ರ. ಅತಿಕಾಮ ನಿಷಿದ್ಧ. ಕಾಮದ ತೃಪ್ತಿ ಒಂದು. ಮೋಕ್ಷ ಕಾಮದ ಮೋಕ್ಷ ಕೊಡುವವಳು ಸತಿ. ಇಚ್ಛೆಯನ್ನರಿತ ಸತಿ ಪತಿವ್ರತೆ. ಅತೃಪ್ತ ಕಾಮದಿಂದ ಪುರುಷ ಕಂಟಕನಾಗುತ್ತಾನೆ.
5. ಕರ್ಮ :- ಸಮಾಜ ದೃಷ್ಟಿಯಿಂದ ಮಾಡಿದ ಕೆಲಸ ಧರ್ಮ. ಅಧರ್ಮ ಕಾರ್ಯಗಳಿಂದ ಮಾಡಿದ ಕೆಲಸ ಕರ್ಮ. ಇದಕ್ಕೆ ದಯೆ, ದಾನ ಹಾಗೂ ಧರ್ಮ ಮೋಕ್ಷ ಮಾರ್ಗಗಳು.
6. ಸುಖ–ದುಖಃ :- ಸಮಾಜವನ್ನು ಸನ್ಮಾರ್ಗದಲ್ಲಿ ಅನುಸರಿಸುವುದೇ ಸುಖ. ಅದಕ್ಕೆ ತಪ್ಪಿ ನಡೆದರೆ ಸಿಗುವುದೇ ದುಃಖ.
7. ಪ್ರೀತಿ :- ಇತರರನ್ನು ಅಯ್ಯೋ ಎನಿಸದಿರುವುದೇ ಪ್ರೀತಿ. ಪ್ರೀತಿ ಕೊಡುವ ವಸ್ತುವಲ್ಲ. ಅದು ಪಡೆಯುವ ವಸ್ತು.
8. ಕಾರ್ಯ :- ಅಂತರಾತ್ಮನಿಗೆ ತೃಪ್ತಿ ಕೊಡುವ ಕೆಲಸವೇ ಉತ್ತಮ ಕಾರ್ಯ.
9. ನಡವಳಿಕೆ :- ಅಧರ್ಮ ಕಾರ್ಯಗಳನ್ನು ಖಂಡಿಸುವುದೇ ಉತ್ತಮ ನಡುವಳಿಕೆ.
10. ಚತುರ :- ಇತರರ ಅಧರ್ಮ ಕಾರ್ಯದಲ್ಲಿ ಭಾಗಿಯಾಗದೆ ಉಳಿಯುವವನೇ ಚತುರ. ಅದರಿಂದ ಧರ್ಮ ರಕ್ಷಣೆಯಾಗುತ್ತದೆ. ಕಷ್ಟದಲ್ಲಿ ಶತೃವಿನ ರಕ್ಷಣೆ, ಉಪಚಾರವೇ ಚತುರನ ಲಕ್ಷಣ.
11. ಶಕ್ತಿ :- ಶಕ್ತಿ ಅಗೋಚರ. ಲಂಕೆಗೆ ಹಾರಿದ ಹನುಮಂತನಿಗೆ ತನ್ನ ಶಕ್ತಿ ಗೊತ್ತಿರಲಿಲ್ಲ. ಪ್ರಯತ್ನವೇ ಶಕ್ತಿ.
12. ಲಂಕೆ :- ನಾನು ರಾವಣನ ಲಂಕೆಯಿಂದ ಬಂದಿಲ್ಲ. ಕ್ಷೀರಸಾಗರವೆಂಬ ಲಂಕೆಯಲ್ಲಿ ನಾರಾಯಣ ಸ್ಮರಣೆಗಾಗಿ ಇದ್ದೇನೆ.
13. ಗೃಹಸ್ಥ :- ಜಿಗುಪ್ಸೆ, ತಾತ್ಸಾರ, ಪ್ರೀತಿ, ಆಸೆ ಮತ್ತು ತೃಪ್ತಿಗಳಿಂದ ಆರ್ಜಿತ. ಅದರ ಆದರಣೆ ಹಾಗೂ ಆಚರಣೆ ಗೃಹಸ್ಥಧರ್ಮದ ಕನ್ನಡಿ. ಉತ್ತಮ ಆರ್ಜಿತಗಳಿಂದ ಉತ್ತಮ ಗೃಹಸ್ಥನಾಗುತ್ತಾನೆ.
14. ಬಡತನ, ಸಿರಿತನ ಮಾನವ ನಿರ್ಮಿತ ವರ್ಗಗಳು. ನಾವು ಯಾವ ಕಷ್ಟಗಳು ಬಂದರೂ ಎದುರಿಸಬಹುದು. ಆದರೆ ಸಿರಿವಂತನಿಗೆ ಕೂಡಲೇ ಬಂದ ಬಡತನ, ಬಡವನಿಗೆ ಕೂಡಲೇ ಬರುವ ಸಿರಿತನ ಅನುಭವಿಸುವುದು ಬಹಳ ಕಷ್ಟ.
15. ನಾನು :- ನಾನು ಎಂಬುದು ಕೇವಲ ಭ್ರಮೆ. ಎಲ್ಲವೂ ದೇವರ ಚಿತ್ತ. ನನಗೇನೋ ದೇವರಲ್ಲಿ ನಂಬಿಕೆ ಇದೆ. ಬೇರೆಯವರಲ್ಲಿ ತಪ್ಪು ಹುಡುಕುವ ಯೋಗ್ಯತೆ ನನಗಿಲ್ಲ. ಬೇರೆಯವರನ್ನು ದೂಷಿಸುವುದು ನನಗೆ ಸರಿಹೋಗುವುದಿಲ್ಲ. ಇಷ್ಟವಿಲ್ಲದೇ ಹೋದರೆ ಅವರ ಸಹವಾಸ ನನಗೆ ಬೇಕಿಲ್ಲ. ನನಗೆ ತೋಚಿದ್ದು ನಾನು ಹೇಳುತ್ತೇನೆಯೇ ವಿನಃ ಬಲವಂತ ಮಾಡುವುದಿಲ್ಲ. ಅದು ನನ್ನ ಇಷ್ಟ.
16. ಅವಧಾನಿಗಳು ನಿಷೇಧಾಕ್ಷರಿ ಅಂದರೆ ನೀರು ಕುಡಿಸುತ್ತೇನೆ ಎಂದಿದ್ದಾರೆ. ನಾರಾಯಣ ಸ್ಮರಣೆಯಲ್ಲಿ ನೀರಿನ ರುಚಿ ವರ್ಣಿಸಬೇಕೆಂದು ಕೇಳುತ್ತೇನೆ.
17. ಕಾಶಿಗೆ ಹೋಗಿ ಕೋಪವನ್ನು ಬಿಟ್ಟು ಬಂದು ಮತ್ತೆ ಕೋಪಮಾಡಿಕೊಂಡಿದ್ದೀರಾ ಎನ್ನುವರಲ್ಲ. ನಾನು ಹಿರಿಯವನಾಗಿ ಕೋಪಮಾಡಿಕೊಂಡಿಲ್ಲ. ಕೇವಲ ಆಕ್ಷೇಪಣೆ ಮಾತ್ರ ಮಾಡುತ್ತಿದ್ದೇನೆ. ಇದು ಗೃಹಸ್ಥನ ಧರ್ಮ.
18. ಸಾವು ಮಾನವನಿಗೆ ಮುಕ್ತಿ ಕೊಡುವ ಮಾರ್ಗ. ಸತ್ತವರೆಲ್ಲರೂ ಪುಣ್ಯಾತ್ಮರು. ಏಕೆಂದರೆ ಅವರಿಂದ ಧರ್ಮಕ್ಕೆ ಹಾನಿಯಾಗುವುದಿಲ್ಲ. ಅವರ ಕರ್ಮಗಳು ಸಮಾಜಕ್ಕೆ ಪಾಠವಾಗುತ್ತವೆ. ಕೆಲವರಿಗೆ ದಾರಿ ದೀಪವಾಗುತ್ತವೆ, ಅವರ ಉತ್ತಮ ಕಾರ್ಯಗಳು ಸಮಾಜಕ್ಕೆ ರಕ್ಷೆಯಾಗುತ್ತವೆ.
19. ಪಾಲಿಗೆ ಬಂದದ್ದು ಅನುಭವಿಸಲಾಗದಿರುವುದೇ ಕಷ್ಟ. ದೇವರ ಕೃಪೆ ಎಂದು ಬಂದಿದ್ದನ್ನು ಧರ್ಮ ರೀತಿಯಲ್ಲಿ ಅನುಸರಿಸುವುದೇ ಇದಕ್ಕೆ ಪರಿಹಾರ. ಕ್ರಮೇಣ ಕಷ್ಟಗಳು ಖಂಡಿತ ಪರಿಹಾರವಾಗುತ್ತವೆ. ಅದಕ್ಕೆ ಧರ್ಮವೇ ಸಾಕ್ಷಿ.
20 ಇತರರನ್ನು ಆಧರಿಸಿ ಅನುಸರಿಸುವುದೇ ಸಮಾಜ. ಅದರಿಂದ ಘನತೆ ಹೆಚ್ಚಾಗುತ್ತದೆ. ಇದೇ ನಮ್ಮ ಸಮಾಜ ಹಾಗೂ ಸನಾತನ ಧರ್ಮ.
12
ಧರ್ಮಸೂಕ್ಷ್ಮ – ಶ್ರೀ ಲಂಕಾಕೃಷ್ಣಮೂರ್ತಿಯವರು ಹೇಳಿದ ಕಥೆ – ಆರೂಢಿ ಸುಮಂತ್
ಅಣ್ಣ ತಮ್ಮಂದಿರ ನಡುವೆ ಆಸ್ತಿ ವಿವಾದ, ಮೋಸ ಅಥವಾ ತಾರತಮ್ಯ ಸಾಮಾನ್ಯ ಸನ್ನಿವೇಶ. ಯುಗ ಯುಗದಿಂದಲೂ ಈ ಅಪರಾಧ ನಡೆಯಯುತ್ತಲೇ ಇದೆ. ಇದಕ್ಕೆ ಯಾವ ಮನೆಯು ಹೊರತಲ್ಲ. ಈ ಬಗ್ಗೆ ಒಂದು ಕಥೆ ಇದೆ.
ಹಿಂದೆ ಶಂಖಡು ಹಾಗೂ ಲಿಖಿತಡು ಎಂಬ ಸೋದರರು ಇದ್ದರು. ಇವರು ಉತ್ತಮಕುಲದಲ್ಲಿ ಹುಟ್ಟಿ ಧರ್ಮದ ಬಗ್ಗೆ ತಿಳಿದುಕೊಂಡರು. ಇವರಿಗೆ ಪಿತ್ರಾರ್ಜಿತವಾದ ಆಸ್ತಿಯಾಗಿ ಒಂದು ಹಣ್ಣಿನ ಮರ ಇತ್ತು. ಈ ಮರದಲ್ಲಿ ಬಿಡುವ ಹಣ್ಣಿನಿಂದಲೇ ಇವರು ಹೊಟ್ಟೆ ಹೊರೆಯುತ್ತಿದ್ದರು.ಸಮಾನ ಹಕ್ಕುದಾರರಾದ ಇಬ್ಬರಿಗೂ ತಲಾ ಅರ್ಧದಂತೆ ಹಣ್ಣುಗಳು ಹಂಚಿಕೆಯಾಗುತ್ತಿದ್ದವು. ಆದರೆ ಒಬ್ಬ ಸಹೋದರ, ಮತ್ತೊಬ್ಬನ ಭಾಗದ ಹಣ್ಣನ್ನೂ ಸಹ ಅನುಭವಿಸತೊಡಗಿದನು. ಇದರಿಂದ ಒಬ್ಬನು ತನ್ನ ಭಾಗದ ಫಲದಿಂದ ವಂಚಿತನಾದನು. ವಿಷಯ ನ್ಯಾಯಕ್ಕೆ ಮೊರೆಯಿಡಲಾಯಿತು. ರಾಜನು ಧರ್ಮವನ್ನರಿತ ಸೋದರರ ಒತ್ತಾಸೆಯ ಮೇರೆಗೆ ವಿವಾದ ಕೇಳಿ, ಬೇರೆಯವನ ಭಾಗವನ್ನು ಅನುಭವಿಸಿದ ಸಹೋದರನಿಗೆ ಎರಡು ಕೈಗಳನ್ನು ಕತ್ತರಿಸಬೇಕೆಂದು ತೀರ್ಮಾನ ನೀಡಿ, ಕೈಗಳನ್ನು ಕತ್ತರಿಸಲಾಯಿತು. ಅನಂತರ ತಪ್ಪಿಗೆ ಶಿಕ್ಷೆ ಪಡೆದ ಸಹೋದರ ತಾನು ಪಾಪದಿಂದ ವಿಮುಕ್ತಿ ಹೊಂದಿದೆನೆಂದು ತಕ್ಕ ಶಿಕ್ಷೆ ಧರ್ಮದಂತೆ ತನಗೆ ಲಭಿಸಿತೆಂದೂ, ತನ್ನ ಅಧರ್ಮ ಮುಂದಿನ ಪೀಳಿಗೆಗೆ ಶಾಪವಾಗಿಲ್ಲವೆಂದೂ ಸಂತೋಷದಿಂದ ಪ್ರಾಯಶ್ಚಿತ್ತಕ್ಕಾಗಿ ನದಿಯಲ್ಲಿ ಸ್ನಾನ ಮಾಡಿದನು. ತಪ್ಪನ್ನು ಅರಿತು, ಧರ್ಮದಂತೆ ಶಿಕ್ಷೆ ಅನುಭವಿಸಿ ಪ್ರಾಯಶ್ಚಿತ್ತ ಹೊಂದಿದ ಕಾರಣ, ಕಳೆದುಕೊಂಡ ಕೈಗಳನ್ನು ಮತ್ತೆ ಪಡೆದು ಧರ್ಮದಿ ಬಾಳಿದನು. ಈ ನದಿ ಇಂದಿಗೂ “ಬಾಹುದ” ನದಿಯಿಂದು ಆಂಧ್ರದಲ್ಲಿ ಇದೆ. ಆದ್ದರಿಂದ ಧರ್ಮಾಚರಣೆಯಲ್ಲಿ ಏನು ಕಳೆದುಕೊಂಡವೆಂಬುದು ಮುಖ್ಯವಲ್ಲ. ಧರ್ಮಾಚರಣೆ ಮುಖ್ಯ
13
ಸಂತೃಪ್ತಿಯ ಬಾಳು
–ಎ.ಎಸ್. ರಾಜೇಶ್ವರಿ
ಮಾನವನ ನಡವಳಿಕೆ, ಅವನು ಇತರರಲ್ಲಿ ಬೆರೆಯುವ ರೀತಿ, ಅವನು ಗೃಹಸ್ಥ ಜೀವನದಲ್ಲಿ ಪಡೆದ ತೃಪ್ತಿಯನ್ನು ಅನುಸರಿಸುತ್ತದೆ. ಇದರಲ್ಲಿ ಗೃಹಣಿಯ ಪಾತ್ರ ಬಹಳ ಮುಖ್ಯ. ಚಂಡೀಯಜ್ಞ(ಹೋಮ) ಮಾಡುವಾಗ ಒಂದು ಶ್ಲೋಕ ಬರುತ್ತದೆ. ಯಜ್ಞ ಮಾಡುವವನು ತಾಯಿ – ಚಂಡಿಕೆ(ದುರ್ಗಾ ದೇವಿ) ಯನ್ನು ಹೀಗೆ ಕೇಳಿಕೊಳ್ಳುತ್ತಾನೆ. “ಪತ್ನೀಂ ಮನೋರಮಾಂ ದೇಹಿ. ಮನೋವೃತ್ಯಾನುಸಾರಿಣೀಂ, ತಾರಿಣೀಂ ದುರ್ಗ ಸಂಸಾರಂ, ಸಾಗರಸ್ಯ ಕುಲೋದ್ಭವಾಂ”. ಅಂದರೆ ಉತ್ತಮ ಕುಲದಲ್ಲಿ ಹುಟ್ಟಿದವಳು ಕಷ್ಟವೆಂಬ ಸಂಸಾರ ಸಾಗರವನ್ನು ದಾಟುವುದಕ್ಕೆ ಸಹಾಯ ಮಾಡುವಂತವಳು. ಮನಸ್ಸಿಗೆ ಸಂತೋಷವನ್ನು ಕೊಡುವಂತವಳು. ಮನಸ್ಸನ್ನು ಅರಿತು ನಡೆಯುವಂಥ(ಮನೋರಮಾ) ಪತ್ನಿಯನ್ನು ಕೊಡು ತಾಯಿ, ಎಂದು.
ಶ್ರೀ ಲಂಕಾ ಕೃಷ್ಣಮೂರ್ತಿಯವರು ಸಮಾಜದಲ್ಲಿ ನಡೆದುಕೊಂಡ ರೀತಿ, ಅವರು ಬದುಕಿ ಬಾಳಿದ ರೀತಿಯನ್ನು ನೋಡಿದರೆ, ಅವರು ಗೃಹಸ್ಥ ಜೀವನದಲ್ಲಿ ತೃಪ್ತರಾಗಿದ್ದರು. ಉತ್ತಮ ಮಕ್ಕಳನ್ನು ಪಡೆದಿದ್ದರು. ಅವರ ಸಮಾಜ ಕಾರ್ಯದಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಲಲಿತಮ್ಮನವರ ಪಾತ್ರ ಅಗಾಧವಾದುದು.
ಶ್ರೀ ಲಂಕಾ ಕೃಷ್ಣಮೂರ್ತಿಯವರ ಸ್ನೇಹಿತರು, ಅವರ ಜೀವನದಲ್ಲಿ ಹೊಸ ಪರ್ವ ಬರೆಯಲು ಪ್ರೇರೇಪಿಸಿದರು. ಅವರ ಅನೇಕ ಹಳೇ ಅಥವಾ ಹೊಸ ಆಚಾರ ವಿಚಾರ (ಕೆಲವು ಸಲ ವಿಭಿನ್ನವಾಗಿದ್ದರೂ ಸಹ) ತಾವೂ ಭಾಗವಹಿಸಿ, ಅವರ ಬಾಳು ತೃಪ್ತಿಯಾಗಲು ಸಹಕರಿಸಿ, ಅವರ ಜನ್ಮವನ್ನು ಒಂದು ಅಧ್ಯಾಯವಾಗುವಂತೆ ಮಾಡಿದ ಅವರ ಸ್ನೇಹಿತರು ಧನ್ಯರು. ಅದರಲ್ಲೂ ಸನಾತನ ಧರ್ಮಸಂರಕ್ಷಣ ಸಂಸ್ಥೆ ಕಾರ್ಯಕರ್ತರು ಧರ್ಮಪ್ರಭ ಪತ್ರಿಕೆಯ ಪರಿಪಾಲಕರು, ದಿವಂಗತ ಲಂಕಾ ಕೃಷ್ಣಮೂರ್ತಿಯವರ ಅಚ್ಚುಮೆಚ್ಚಿನ ಬಾಂಧವರು.
ಶ್ರೀ ಲಂಕಾ ಕೃಷ್ಣಮೂರ್ತಿಯವರ ಅಗಲಿಕೆಯಿಂದ ಆಗಿರುವ ದುಃಖವನ್ನು ಭರಿಸಲು ಇವರೆಲ್ಲರಿಗೂ ದೇವರು ಶಕ್ತಿಕೊಡಲಿ ಎಂಬುದೇ ಪ್ರಾರ್ಥನೆ.
ಅವರ ನೆಚ್ಚಿನ ಪತ್ರಿಕೆ “ಧರ್ಮಪ್ರಭ” ಅವರನ್ನು ನಮ್ಮಲ್ಲಿ ಪ್ರತಿಬಿಂಬಿಸಲಿ ಎಂದೂ, ಸದಾ ಅವರು ಈ ರೀತಿಯಲ್ಲಿ ನಮ್ಮಲ್ಲಿ ಉಳಿಯಲಿ ಎಂದು ಧರ್ಮಪ್ರಭ ಪರಿಪಾಲಕರನ್ನು ಕೇಳಿಕೊಳ್ಳುತ್ತೇನೆ.
14
ದಿII ಲಂಕಾ ಕೃಷ್ಣಮೂರ್ತಿಯವರ ಹೃತ್ಪೂರ್ವಕ ನೆನಪು
– ಪಾರ್ವತಿ ಶ್ರೀಕಂಠಶಾಸ್ತ್ರಿ
(ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ದಿ ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ)
ಕೋಟಿ ಕೋಟಿಗೊಬ್ಬರಾದ ಸುಪೂಜ್ಯ ಮಾನ್ಯ ದಿII ಲಂಕಾ ಕೃಷ್ಣಮೂರ್ತಿಯವರ ಬಗ್ಗೆ ಎಷ್ಟು ಒಳ್ಳೆಯ ವಿಚಾರಗಳನ್ನು ನೆನೆಸಿಕೊಂಡರೂ ಅದು ಕಡಿಮೆಯೇ. ಗುರುಹಿರಿಯರನ್ನು ಪ್ರೀತಿ, ಗೌರವ, ಭಕ್ತಿ, ಹಿರಿಕಿರಿಯರೆಲ್ಲರಲ್ಲೂ ಸೇವಾಮನೋಭಾವ, ಪ್ರೀತಿ ವಿಶ್ವಾಸಗಳನ್ನೊಳಗೊಂಡ ಆ ದಿವ್ಯಚೇತನ ನಮಗೆ ಇಲ್ಲವಾದದ್ದು ನಮ್ಮ ದುರಾದೃಷ್ಟವೇ ಸರಿ. ಇಂಥಹ ಕ್ಷೇತ್ರದಲ್ಲಿ ಅವರ ಅತ್ಯುತ್ಕೃಷ್ಟ ಸೇವೆ ಇಲ್ಲವೆಂಬುದಿಲ್ಲ.
ಉಜ್ವಲ ರಾಷ್ಟಭಕ್ತಿ, ಸಮಾಜಪ್ರೇಮ, ಕಲಾಭಿಮಾನ, ಸಾಹಿತ್ಯಾಭಿಮಾನ ಅವರಲ್ಲಿದ್ದವು. ಅತ್ಯುನ್ನತವಾದ ಸರ್ಕಾರಿ ಹುದ್ದೆಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸಮಾಡಿ ನಿವೃತ್ತಿ ಹೊಂದಿದ್ದ ಧೀರ ವ್ಯಕ್ತಿತ್ವ ಅವರದು.
ಸ್ವತಃ ಸಾಹಿತಿಯೂ, ಕಲಾಕಾರರೂ ಆಗಿ ಕ್ಷೇತ್ರಗಳಲ್ಲಿ ಅಮೋಘ ಸೇವೆಗೈದಂತ ಹೆಮ್ಮೆಯ ಭಾರತಪುತ್ರ ನಮ್ಮ ಲಂಕಾ ಕೃಷ್ಣಮೂರ್ತಿಯವರು.
ನಮಗೂ ಅವರಿಗೂ ದೂರದ ಬಂಧುತ್ವ. ಒಮ್ಮೆ ನನ್ನ ತಾಯಿಯೊಂದಿಗೆ ಅವರ ಮನೆಗೆ ಹೋಗಿ, ಅವರ ಪ್ರೀತಿ, ವಿಶ್ವಾಸ, ಕಾಫಿ, ತಿಂಡಿ ಎಲ್ಲದರ ಸವಿಯುಂಡು ವಾಪಸ್ ಹೊರಟು ಬಸ್ ಸ್ಟ್ಯಾಂಡ್ ಗೆ ತೆರಳಿದೆವು. ಆತ್ಮೀಯತೆಯಿಂದ ಅವರು ಬೀಳ್ಕೊಟ್ಟರು. ಬಸ್ ಬರುವ ವೇಳೆಯಾಯಿತು. ನೋಡುತ್ತೇನೆ. ಕಾಲಲ್ಲಿ ಚಪ್ಪಲಿ ಇಲ್ಲ. ಅವರ ಮನೆಯಲ್ಲಿ ಮರೆತು ಬಂದಿರುವೆ. ಎದುರಿಗೆ ನೋಡಿದರೆ ಆ ದಿವ್ಯಚೇತನ, ದೇವತಾಮನುಷ್ಯ ಚಪ್ಪಲಿಗಳನ್ನು ಬುಸ್ ಸ್ಟ್ಯಾಂಡಿಗೆ ತಂದಿದ್ದಾರೆ. ಹಠಾತ್ ಅದನ್ನು ಕಂಡು ನನಗೆ ನನ್ನ ಬಗ್ಗೆಯೇ ಬಹಳ ಬೇಸರವೂ ದುಃಖವೂ ಉಂಟಾಯಿತು.
ಅಳುಬಂತು. ನನಗೆ ಅವರೇ ಸಮಾಧಾನ ಹೇಳಿದರು.
ಮಹಾತ್ಮಾ ಗಾಂಧಿಯವರಲ್ಲಿದ್ದ ಅಮೋಘವಾದ ಸೇವಾಮನೋಭಾವ, ಅವರು ಮಾಡುತ್ತಿದ್ದ ಕೆಲಸಗಳು ಇವುಗಳನ್ನು ಓದಿ ತಿಳಿದಿದ್ದ ನನಗೆ ಇನ್ನೊಬ್ಬ ಮಹಾತ್ಮನನ್ನು ಕಣ್ಣಾರೆ ಕಂಡು ಮಾತನಾಡಿಸಿ ಅವರೊಡನೆ ಅವರ ಅಮೂಲ್ಯ ವೇಳೆಯನ್ನು ಸ್ವಲ್ಪ ಕಾಲ ಹಂಚಿಕೊಂಡ ನನಗೆ ಅವರ ಸಾಮೀಪ್ಯವೇ ಅತ್ಯಂತ ಸಂತಸದ ಕ್ಷಣವಾಯಿತು.
ಧೀಮಂತ ವ್ಯಕ್ತಿತ್ವದ ಅಪರೂಪದ ಚೇತನ ಲಂಕಾ ಕೃಷ್ಣಮೂರ್ತಿಯವರು ಅಮರರು. ಸಕಲರಿಗೂ ಆದರ್ಶಪ್ರಾಯರು. ಆ ದಿವ್ಯ ಚೇತನಕ್ಕೆ ನಮ್ಮ ಅನಂತಾನಂತ ನಮನಗಳು.
15
Spiritual Guru
-A.R.Nagarajan
It is in the fitness of things that I have to recollect my association with late Sri.Lanka Krishna Murti .
Late Sri.Lanka Krishna Murti was a man of truthful character, honest, sincere and always helpful to every person. He was divine personality with blemishless character , sincerity and dedication in the service of mankind.
He had just then passed his Degree Examination and he had married my sister Smt. Lalithamma. When my late father Sri. Ramachandraiah asked him to join Law course he had explained his stand, by saying that he cannot speak untruth and hence cannot join law.
However, destiny wanted him to practice law and uphold Truth and Justice for the poorer sections.
Late Sri.Lanka Krishna Murti was not financially sound when he joined the Law College. When his father – in – law offered financial assistance, he had politely refused saying that he would carry out his education. He was working as a teacher for his earnings and completed his Law Degree course.
Late Sri.Lanka Krishna Murti was appointed as the Deputy Registrar of High Court of Karnataka when he was practicing as an advocate. He was selected for his persuasive skills, honesty, sincerity and dedication to work. While relinquishing his duties as advocate he returned the money which had been given to him by his clients on the ground that he could not complete the cases entrusted to him. This is a lesson to the present day young advocates and a model code of conduct for legal fraternity.
After his retirement as the Addional Registrar of High Court of Karnataka, many of his collegues asked him to practice law. He did not do so saying that he should not compete with youngsters at the bar saying that they must be given all oppurtunities to come up in the profession.
After retirement he founded the monthly magazine “Dhama Prabha” to propogate the values of Sanathana Dharma. He used to conduct free Sanskrit classes. He was also responsible for the formation of Indiranagar Sangeetha Sabha. In a way he was a spiritual Guru for one and all. His philosophy was that we as human beings have only to act according to the wishes of the Divine Force. He would say that we should not have any appointments, but we have disappointments. Everything would happen according to His wishes and we have to act accordingly.
Sri.Lanka Krishna Murti was a linguist and knew fine arts like music, painting,etc. He was a great scholor.