ಧರ್ಮದ ಬೀಜಾಕ್ಷರಗಳು
ಲೇಟ್ ಶ್ರೀ ಲಂಕಾ ಕೃಷ್ಣಮೂರ್ತಿಯವರು ಸನಾತನ ಧರ್ಮದಲ್ಲಿ ಅಂತರ್ಗತವಾದ ಮೌಲ್ಯಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ “ಸನಾತನ ಧರ್ಮ ಸಂರಕ್ಷಣ ಸಂಸ್ಥೆ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅವರು ಈ ಸಂಸ್ಥೆಗೆ ಒಂದು ಸೂಕ್ತವಾದ ಚಿಹ್ನೆಯನ್ನು ವಿನ್ಯಾಸ ಮಾಡಿದರು. ಧಾರ್ಮಿಕ ತತ್ವಗಳ ಪ್ರಸರಣಕ್ಕಾಗಿ “ಧರ್ಮಪ್ರಭ” ಎಂಬ ಪತ್ರಿಕೆಯನ್ನು ಸಹಾ ಸ್ಥಾಪಿಸಿದರು. ಸಂಸ್ಥೆಯ ಮತ್ತು ಪತ್ರಿಕೆಗಳೆರಡರಲ್ಲೂ ಬಳಸಲಾದ ಚಿಹ್ನೆಯ ಮಹತ್ವವನ್ನು ವಿವರಿಸುತ್ತಾ ಧರ್ಮದ ಮೂಲ ತತ್ವಗಳ ಪ್ರಮುಖಾಂಶಗಳನ್ನು “ ಧರ್ಮದ ಬೀಜಾಕ್ಷರಗಳು” ಎಂಬ ಶೀರ್ಷಿಕೆಯಲ್ಲಿ ಸರಣಿ ಲೇಖನಗಳನ್ನು “ಧರ್ಮಪ್ರಭ” ಪತ್ರಿಕೆಯಲ್ಲಿ ಬರೆದಿರುತ್ತಾರೆ. ಆ ಲೇಖನಗಳನ್ನು ಈಗ ಪ್ರಸ್ತುತ ಪಡಿಸುತ್ತಿದ್ದೇವೆ.
1-1-1983
ಧರ್ಮದ ಬೀಜಾಕ್ಷರಗಳು
ಈ ಪತ್ರಿಕೆಯ ಪ್ರತಿಸಂಚಿಕೆಯ ಒಂದನೇ ಪುಟದ ಅಗ್ರ ಭಾಗದಲ್ಲಿ ಕಾಣುವ ಚಿಹ್ನೆ ಸನಾತನ ಧರ್ಮ ಸಂರಕ್ಷಣ ಸಂಸ್ಥೆಯ ಚಿಹ್ನೆ. ಇದನ್ನು ಬೃಹದಾರಣ್ಯಕ ಉಪನಿಷತ್ತಿನಲ್ಲಿ ಒಂದು ಭಾಗದಲ್ಲಿರುವ ವಿಷಯದ ಆಧಾರದ ಮೇಲೆ ರಚಿಸಲಾಗಿದೆ. ಇದರಲ್ಲಿ ಒಂದು ಅರಳಿದ ಕಮಲವೂ ಅದರ ಮೇಲೆ ಒಂದು ಹೃದಯದ(ಗುಂಡಿಗೆಯ) ಆಕಾರವೂ, ಅದರ ನಡುವೆ ಮೇಘದ ಆಕಾರವೂ ಇದೆ. ಈ ಆಕಾರಗಳಲ್ಲದೆ ‘ಓಂ’ ಎಂಬ ಮಂತ್ರವೂ, ಅದರ ಕೆಳಗೆ ದ, ದ, ದ ಎಂಬ ಅಕ್ಷರಗಳೂ ಅಲ್ಲಿಂದ ಕೆಳಗೆ ದಮ, ದಾನ, ದಯೆ ಎಂಬ ಪದಗಳೂ ಕಂಡು ಬರುತ್ತವೆ. ಬೃಹದಾರಣ್ಯಕೋಪನಿಷತ್ತಿನಲ್ಲಿ ಹೇಳಿರುವಂತೆ ದೇವತೆಗಳೂ ಮಾನವರೂ, ಅಸುರರೂ ಪ್ರಜಾಪತಿಯ ಶಿಷ್ಯರಾಗಿದ್ದು ಆತನ ಉಪದೇಶವನ್ನು ಅರ್ಥಿಸಲಾಗಿ ಮೇಲ್ಕಂಡ ಒಂದೊಂದು ಜಾತಿಯವರಿಗೂ ‘ದ’ ಎಂಬ ಒಂದೇ ಅಕ್ಷರವನ್ನೇ ಪ್ರಜಾಪತಿಯು ಉಪದೇಶ ಮಾಡುತ್ತಾನೆ. ದೇವತೆಗಳಿಗೆ ಉಪದೇಶಿಸಿದ ‘ದ’ ಎಂಬ ಅಕ್ಷರಕ್ಕೆ ‘ದಮ’ ವೆಂದೂ, ಮಾನವರಿಗೆ ಉಪದೇಶಿಸಿದ ‘ದ’ ಎಂಬ ಅಕ್ಷರಕ್ಕೆ ‘ದಾನ’ವೆಂದೂ, ಅಸುರರಿಗೆ ಉಪದೇಶಿಸಿದ ‘ದ’ ಎಂಬ ಅಕ್ಷರಕ್ಕೆ ‘ದಯೆ’ಯೆಂದೂ ವಿವರಣೆ ಸಹ ಆ ಉಪನಿಷತ್ತಿನಲ್ಲಿ ಕೊಡಲಾಗಿದೆ. ಅಲ್ಲದೇ ಮೋಡಗಳು ಮಾಡುವ ಗುಡುಗಿನಲ್ಲಿನ ‘ದದದ’ ಎಂಬ ಧ್ವನಿಯ ಮೂಲಕ ಭಗವಂತನು ಲೋಕಕ್ಕೆ ಈ ಮೂರು ಅಕ್ಷರಗಳ ಅರ್ಥವಾದ ದಮ, ದಾನ, ಮತ್ತು ದಯೆಗಳನ್ನು ನೆನಪಿಗೆ ತರುತ್ತಿರುತ್ತಾನೆಂದೂ ಸೂಚಿಸಲಾಗಿದೆ. ಮುಂದೆ ಹೃದಯದ ಪ್ರಾಶಸ್ತ್ಯವನ್ನು ಸಹ ಹೇಳಲಾಗಿದೆ.
ಚಿಹ್ನದಲ್ಲಿನ ಅರಳಿದ ಕಮಲ ಬಹಿರ್ಮುಖವಾದ ಮಾನವನ ಚೈತನ್ಯವನ್ನು ಸೂಚಿಸುತ್ತದೆ. ಈ ಮಾನವ ಚೈತನ್ಯವು ಬಾಡದೆ, ನಾಶಹೊಂದದೆ, ವಿಕಾರವನ್ನು ಹೊಂದದೆ ಕಮಲದಂತೆ ಮನೋಹರವಾಗಿರಬೇಕಾದರೆ ಅದಕ್ಕೆ ಧರ್ಮದ ಪುಷ್ಟಿ ಬೇಕು. ಆದುದರಿಂದಲೇ ಧರ್ಮದ ಸಾರವಾದ ದಮ, ದಾನ ಮತ್ತು ದಯ ಈ ಪದಗಳನ್ನು ಕಮಲದ ಮೇಲೆ ಬರೆದಿರುವುದು. ಈ ಬಹಿರ್ಮುಖವಾದ ಚೈತನ್ಯದ ಒಳಗೆ ಗುಪ್ತವಾದ ಮೂಲ ಚೈತನ್ಯವಿದೆ. ಅದನ್ನು ಹೃದಯದ ರೂಪದಲ್ಲಿ ತೋರಿಸಲಾಗಿದೆ. ಮನುಷ್ಯನ ದೇಹದಲ್ಲಿ ಹೃದಯವು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿದೆ ಈ ಒಳಗಿನ ಚೈತನ್ಯ. “ಪದ್ಮ ಕೋಶ ಪ್ರತೀಕಾಶಗಂ ಹೃದಯಂ ಚಾಪ್ಯಧೋಮುಖಂ” ಎಂಬ ಶ್ರುತಿಯ ಆಧಾರದಂತೆ ಹೃದಯವು ಕೆಳಮುಖವಾಗಿರುವ ತಾವರೆಮೊಗ್ಗಿನ ಆಕಾರದಲ್ಲಿರುತ್ತದೆ. ಇದೇ ಆಕಾರವನ್ನೆ ಚಿಹ್ನೆಯಲ್ಲಿಯು ತೋರಿಸಲಾಗಿದೆ. ಈ ಹೃದಯದ ಅಂತರಾಳದಲ್ಲಿ ಪರಮಾತ್ಮನಿರುತ್ತಾನೆ. ಓಂಕಾರವು ಈ ಪರಮಾತ್ಮನನ್ನು ಸೂಚಿಸುತ್ತದೆ. ಪರಮಾತ್ಮನು ಮೇಘ ಶ್ಯಾಮಲನೂ, ಮೇಘದಂತೆ ಅಮೃತವರ್ಷಕನೂ ಆಗಿರುವುದನ್ನು ಮೇಘದ ಚಿತ್ರ ಸೂಚಿಸುತ್ತದೆ. ಇದರಲ್ಲಿರುವ ದ, ದ, ದ ಎಂಬ ಅಕ್ಷರಗಳು ದಮ. ದಾನ. ದಯೆ ಗಳನ್ನು ಸೂಚಿಸುತ್ತ ಮಂತ್ರಾಕ್ಷರಗಳಂತೆ ಜಪಯೋಗ್ಯಗಳಾಗಿವೆ. ಜಪವೇಕೆ? ಹೃದಯದ ನಿರಂತರ ಮಿಡಿತದಲ್ಲಿಯೇ ಇವು ಸೇರಿಕೊಂಡಿವೆ. ಹೃದಯವನ್ನು ಮಿಡಿಸುತ್ತಿರುವ ಪರಮಾತ್ಮ ಚೈತನ್ಯದ ನುಡಿಗಳಾಗಿಯೇ ಇವೆ ಈ ಅಕ್ಷರಗಳು.
ದೇವ, ಮಾನವ, ಅಸುರ ಎನ್ನುವ ಭೇದಗಳು ಜೀವಿಯ ಸಂಸ್ಕಾರ ಭೇದದಿಂದ ಬಂದಿರುವುವಾಗಿವೆ. ಸತ್ವರಜಸ್ತಮೋಗುಣಗಳಿಗನುಗುಣವಾಗಿವೆ.
1-2-1983
ಈ ಪತ್ರಿಕೆಯ ಒಂದನೇ ಪುಟದ ಅಗ್ರಭಾಗದಲ್ಲಿರುವ ಚಿಹ್ನೆಯಲ್ಲಿರುವ ‘ಓಂ’ ಎಂಬ ಅಕ್ಷರ ಪರಮಾತ್ಮ ಸೂಚಕ. ಆತನು ದೇವತೆಗಳಿಗೆ ‘ದ’ ಎಂಬ ಅಕ್ಷರದಿಂದ ‘ದಮ’ವನ್ನೂ, ಮಾನವರಿಗೆ ‘ದ’ ಎಂಬ ಅಕ್ಷರದಿಂದ ‘ದಾನ’ವನ್ನೂ, ಅಸುರರಿಗೆ ‘ದ’ ಎಂಬ ಅಕ್ಷರದಿಂದ ‘ದಯೆ’ಯನ್ನೂ ಉಪದೇಶಿಸಿದನೆಂಬ ವಿಷಯ ಹಿಂದಿನ ಸಂಚಿಕೆಯಲ್ಲಿ ಬಂದಿದೆ.
ಸನಾತನ ಧರ್ಮದ ಸ್ವರೂಪವೆಲ್ಲಾ ದಮ, ದಾನ ಮತ್ತು ದಯೆಗಳನ್ನು ಸೂಚಿಸುವ ‘ದ,ದ,ದ’ ಎಂಬ ಈ ಮೂರು ಬೀಜಾಕ್ಷರಗಳಲ್ಲಿ ಅಡಕವಾಗಿದೆ. ಧರ್ಮಗಳಲ್ಲಿ ಮಾನವ ಸಾಮನ್ಯ ಧರ್ಮಗಳು ಅತಿಮುಖ್ಯವಾದವು. ಅವು ಇಲ್ಲದೆ ಇತರ ವಿಶೇಷ ಧರ್ಮಗಳಿಂದ ಪ್ರಯೋಜನವಿಲ್ಲ. ಈ ಮಾನವ ಸಾಮಾನ್ಯ ಧರ್ಮಗಳನ್ನು ಯಾಜ್ಞವಲ್ಕ್ಯ ಸ್ಮೃತಿಯು ಈ ರೀತಿಯಾಗಿ ಬೋಧಿಸುತ್ತದೆ-
ಅಹಿಂಸಾ ಸತ್ಯಮಸ್ತೇಯಂ ಶೌಚಮಿಂದ್ರಿಯ ನಿಗ್ರಹಃ !
ದಾನಂ ದಮೋ ದಯಾಕ್ಷಾಂತಿ ಸರ್ವೇಷಾಂ ಧರ್ಮಸಾಧನಂ
ವಿಜ್ಞಾನೇಶ್ವರನು ತನ್ನ ‘ಮಿತಾಕ್ಷರಾ’ ಎಂಬ ವ್ಯಾಖ್ಯಾನದಲ್ಲಿ ಈ ಶ್ಲೋಕಕ್ಕೆ ಕೊಟ್ಟಿರುವ ವ್ಯಾಖ್ಯಾನ ಹೀಗಿದೆ-
ಹಿಂಸೆಯೆಂದರೆ ಪ್ರಾಣಿಗಳಿಗೆ ನೋವನ್ನುಂಟು ಮಾಡುವುದು ಅದನ್ನು ಮಾಡದಿರುವಿಕೆಯೇ ಅಹಿಂಸೆ. ಸತ್ಯವೆಂದರೆ ಪ್ರಾಣಿಗಳನ್ನು ನೋಯಿಸದ ಯಥಾರ್ಥ ವಚನ. ಒಬ್ಬರಿಂದ ಕೊಡಲ್ಪಡದೆ ಅವರ ವಸ್ತುವನ್ನು ತೆಗೆದುಕೊಳ್ಳುವುದೇ ಆಸ್ತೇಯ. ಶೌಚ(ಶುಚಿತ್ವ) ಎರಡು ವಿಧ. ಬಾಹ್ಯ ಶುಚಿತ್ವ ಮತ್ತು ಅಂತರಂಗ ಶುಚಿತ್ವ. ಜ್ಞಾನೇಂದ್ರಿಯಗಳನ್ನು( ಕಣ್ಣು, ಕಿವಿ, ಮೂಗು ಇತ್ಯಾದಿ) ಕರ್ಮೇಂದ್ರಿಯಗಳನ್ನು( ಮಾತು, ಕೈ, ಕಾಲು ಇತ್ಯಾದಿ) ಅವುಗಳ ವಿಷಯಗಳಲ್ಲಿ ಸ್ವೇಚ್ಛೆಯಾಗಿ ಹೋಗಲು ಬಿಡದೆ ನಿಯಮಕ್ಕನುಸಾರವಾದ ವಿಷಯಗಳಲ್ಲಿ ಮಾತ್ರ ಪ್ರವೃತ್ತವಾಗುವಂತೆ ಮಾಡುವುದು ಇಂದ್ರಿಯ ನಿಗ್ರಹ. ತನ್ನ ಶಕ್ತಿಗೆ ಅನುಸಾರವಾಗಿ ಪ್ರಾಣಿಗಳಿಗೆ ಆಹಾರ, ನೀರು ಮುಂತಾದವುಗಳನ್ನು ಕೊಟ್ಟು ಅವುಗಳ ಆರ್ತಿಯನ್ನು ಪರಿಹಾರ ಮಾಡುವುದಕ್ಕೆ ದಾನವೆಂದು ಹೆಸರು. ಮನಸ್ಸು, ಬುದ್ಧಿ, ಚಿತ್ತ, ಅಹಂಕಾರವೆಂಬ ಅಂತಃಕರಣವನ್ನು ಸಂಯಮ ಮಾಡುವುದು ‘ದಮ’. ಆಪತ್ತಿನಲ್ಲಿರುವ ಪ್ರಾಣಿಗಳನ್ನು ರಕ್ಷಿಸುವುದು ‘ದಯೆ’ಯೆನಿಸಿ ಕೊಳ್ಳುವುದು. ತನಗೆ ಅಪಕಾರವುಂಟಾದರೂ ಮನಸ್ಸನ್ನು ವಿಕಾರವಿಲ್ಲದಂತೆ ಇಟ್ಟುಕೊಳ್ಳುವುದಕ್ಕೆ ‘ಕ್ಷಾಂತಿ’ ಅಥವಾ ‘ಕ್ಷಮೆ’ ಎಂದು ಹೆಸರು. ಇವು ಬ್ರಾಹ್ಮಣರಿಂದ ಹಿಡಿದು ಚಂಡಾಲರವರೆಗಿನ ಎಲ್ಲ ಮಾನವರಿಗೂ ಧರ್ಮಸಾಧನಗಳಾಗಿವೆ.
ವಯೋಬುದ್ಧ್ಯರ್ಥವಾಗ್ವೇಷಶ್ರುತಾಭಿಜನ ಕರ್ಮಣಾಂ!
ಆಚರೇತ್ಸದೃಶೀಂ ವೃತ್ತಿಂ, ಅಜಿಹ್ಮಾಮಶಠಾಂ ತಥಾ!!
ಮಿತಾಕ್ಷರಾವ್ಯಾಖ್ಯಾನ:- ವಯಸ್ಸು ಎಂದರೆ ಬಾಲ್ಯ, ಯೌವನ ಮುಂತಾದುದು, ಬುದ್ಧಿ ಎಂದರೆ ಲೌಕಿಕ ವ್ಯವಹಾರದಲ್ಲೂ ವೇದಮಾರ್ಗಾನುಸರಣೆಯಲ್ಲೂ ಸಹಜವಾಗಿ ಕೆಲಸಮಾಡುವ ಬುದ್ಧಿ. ಅರ್ಥವೆಂದರೆ ಧನ, ಮನೆ, ಹೊಲ, ಮುಂತಾದುದು. ವಾಕ್ ಎಂದರೆ ಅಭಿಪ್ರಾಯವನ್ನು ಮಾತಿನಿಂದ ಹೇಳುವ ಶಕ್ತಿ. ವೇಷವೆಂದರೆ ಬಟ್ಟೆ, ಹೂವು ಮುಂತಾದ ಅಲಂಕಾರ. ಶ್ರುತವೆಂದರೆ ಧರ್ಮ ಅರ್ಥ ಕಾಮ ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳಿಗೆ ಸಂಬಂಧಿಸಿರುವ ಶಾಸ್ತ್ರಗಳನ್ನು ಕೇಳಿರುವುದು. ಅಭಿಜನವೆಂದರೆ ‘ಕುಲ’. ಕರ್ಮವೆಂದರೆ ವೃತ್ತಿ. ಹೀಗಿರುವ ವಯಸ್ಸು ಮುಂತಾದವುಗಳಿಗೆ ತಕ್ಕಂತೆ ಎಲ್ಲರೂ ನಡೆದುಕೊಳ್ಳಬೇಕು. ಉದಾಹರಣೆಗೆ- ಮುದುಕನು ತನಗೆ ತಕ್ಕ ಕೆಲಸ ಮಾಡಬೇಕೇ ಹೊರತು ಯುವಕನಿಗೆ ಅರ್ಹವಾದ ಆಚರಣೆಯನ್ನು ಮಾಡಬಾರದು. ಹೀಗೆಯೇ ‘ಬುದ್ಧಿ’ ಮುಂತಾದ ವಿಷಯಗಳಲ್ಲಿ ತನ್ನ ಬುದ್ಧಿ, ಅರ್ಥ, ಮಾತಿನ ಶಕ್ತಿ, ವಿದ್ಯೆ, ಕುಲ, ವೃತ್ತಿ ಇವುಗಳಿಗೆ ತಕ್ಕಂತೆ ಧರ್ಮವನ್ನು ಆಚರಿಸಬೇಕೆಂಬ ಭಾವ. ಹಾಗೆ ಮಾಡುವಾಗ ‘ಅಜಿಹ್ಮಾಂ’ ಅಂದರೆ ವಕ್ರತೆ ಇಲ್ಲದೆ( ಅಥವಾ ಆತ್ಮ ವಂಚನೆಯಿಲ್ಲದೆ, ನೇರವಾಗಿ) ‘ಅಶಠಾಂ’ ಅಂದರೆ ಮಾತ್ಸರ್ಯ ಅಥವಾ ಅಸೂಯೆಯಿಲ್ಲದೆ ವರ್ತಿಸಬೇಕು.
ಮೇಲೆ ಹೇಳಿದ ಧರ್ಮಗಳು ಮತ್ತು ತನ್ನ ಸ್ಥಿತಿಗನುಗುಣವಾದ ಧರ್ಮಾಚರಣೆ ಎಂಬುವು ಎಲ್ಲ ಕಾಲಗಳಲ್ಲಿಯು ಎಲ್ಲ ದೇಶದ ಮಾನವರಿಗೂ ಅನ್ವಯಿಸುತ್ತವೆ. ಇದೇ ಸನಾತನ ಧರ್ಮದ ಸಾರ. ಇದೇ ಎಲ್ಲ ವಿಶೇಷ ಧರ್ಮಗಳಿಗೂ ಪುಷ್ಟಿಯನ್ನು ಕೊಡುವ ಆಧಾರ, ವರ್ಣಾಶ್ರಮಧರ್ಮ, ದೇವರ ಉಪಾಸನೆ, ಕಠಿಣ ವ್ರತಗಳು: ತಪಸ್ಸು, ಮಂತ್ರ ಜಪ, ತೀರ್ಥಯಾತ್ರೆ, ಇತ್ಯಾದಿ ಎಲ್ಲ ವಿಶೇಷ ಧರ್ಮಗಳೂ ಮೇಲೆ ಹೇಳಿದ ಸಾಮಾನ್ಯ ಧರ್ಮದ ಪುಷ್ಟಿಯಿಲ್ಲದಿದ್ದರೆ, ಮೂಢಾಚಾರ, ಢಂಬಾಚಾರ ಅಥವಾ ಮೂರ್ಖತನವಾಗುತ್ತದೆಯೇ ಹೊರತು ನಿಜವಾದ ಧರ್ಮವಾಗುವುದಿಲ್ಲ.
ಮೇಲೆ ಹೇಳಿರುವ ಮಾನವ ಸಾಮಾನ್ಯ ಧರ್ಮಗಳೆಲ್ಲವೂ ದ, ದ, ದ ಎಂಬ ಧರ್ಮದ ಬೀಜಾಕ್ಷರಗಳಲ್ಲಿ ಹೇಗೆ ಅಡಕವಾಗಿವೆ ಎಂಬುದನ್ನು ವಿಚಾರಿಸೋಣ. ಅಹಿಂಸೆ, ಆಸ್ತೇಯ, ದಯೆ – ಇವು ಮೂರೂ ಕೊನೆಯ ‘ದ’ ಕಾರದ ಅರ್ಥವಾದ ದಯೆಯಲ್ಲಿ ಅಡಗಿಕೊಂಡಿವೆ. ದಾನವೆಂಬುದು ಎರಡನೆಯ ‘ದ’ ಕಾರದಲ್ಲಿ ಗರ್ಭಿತವಾಗಿದೆ. ಉಳಿದ ಸತ್ಯ, ಶುಚಿತ್ವ, ಇಂದ್ರಿಯ ನಿಗ್ರಹ, ದಮ, ಮತ್ತು ಕ್ಷಮೆಗಳು ಮೊದಲನೆಯ ‘ದ’ ಕಾರದಲ್ಲಿ ಸೇರಿವೆ.
1-3-1983
‘ದ’, ‘ದ’,’ದ’ ಎಂಬ ಈ ಮೂರು ಅಕ್ಷರಗಳಲ್ಲಿಯು ಅಡಗಿರುವ ಮಾನವ ಸಾಮಾನ್ಯ ಧರ್ಮದ ಸ್ವರೂಪವನ್ನು ವಿಸ್ತಾರ ಮಾಡಿ ತಿಳಿದುಕೊಳ್ಳುವುದಕ್ಕೆ ಮೊದಲು ಬೃಹದಾರಣ್ಯಕೋಪನಿಷತ್ತಿನಲ್ಲಿ ವಿಸ್ತಾರವಾದ ಧರ್ಮವನ್ನು ಈ ಪುಟ್ಟ ಅಕ್ಷರಗಳ ಮೂಲಕ ಉಪದೇಶಿಸುವುದರಲ್ಲಿನ ಉದ್ದೇಶವೇನೆಂಬುದನ್ನು ತಿಳಿಯಬೇಕಾಗಿದೆ. ಬಾಹ್ಯಜಗತ್ತನ್ನೆಲ್ಲಾ ಒಂದೇ ಶಕ್ತಿಯ ವಿವಿಧ ಚೇಷ್ಟೆಗಳು ಮಾತ್ರ ಎಂಬುವ ಸತ್ಯವನ್ನು ಭೌತಿಕ ವಿಜ್ಞಾನವು ನಿರೂಪಿಸಿದೆ. ಆದರೆ ಪ್ರಾಣ, ಮನಸ್ಸು,ಆತ್ಮ ಇವುಗಳಿಗೂ ಈ ಬಾಹ್ಯ ಜಗತ್ತಿನ ರೂಪದಲ್ಲಿರುವ ಶಕ್ತಿಗೂ ಇರುವ ಸಂಬಂಧ ವಿಜ್ಞಾನಿಗಳಿಗೂ ಇನ್ನೂ ಅರ್ಥವಾಗಿಲ್ಲ. ಪ್ರಾಣ, ಮನಸ್ಸು ಇತ್ಯಾದಿಗಳು ಸಹ ಒಂದು ಸಂಕಲ್ಪ ಶಕ್ತಿಯ ಚೇಷ್ಟೆಗಳೆಂದು ಊಹಿಸಬಹುದು. ಈ ಸಂಕಲ್ಪಶಕ್ತಿಗೇ ‘ಚಿತ್’ ಎಂದು ಹೆಸರು. ಇದು ಸರ್ವವ್ಯಾಪಿ ನೀರಿನಲ್ಲಿ ಶಕ್ತಿಯ ವಿವಿಧ ಚೇಷ್ಟೆಗಳಿಂದ ಹೇಗೆ ವಿವಿಧ ಅಕಾರಗಳುಳ್ಳ ಅಲೆಗಳು ಹುಟ್ಟುತ್ತವೆಯೋ, ನೀರಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಪರ್ಕವೂ, ಒಂದು ಕಡೆ ಪ್ರಯುಕ್ತವಾದ ಶಕ್ತಿಯ ಪ್ರಭಾವ ಎಲ್ಲ ಕಡೆಗಳಿಗೂ ವ್ಯಾಪಿಸುವುದೂ ಇರುತ್ತದೆಯೋ ಹಾಗೆಯೇ ಈ ‘ಚಿತ್’ನಲ್ಲಿ ಕಾರ್ಯಕಾರಣ ಸಂಬಂಧವಿರುವ ಅನಂತ ಸೃಷ್ಟಿಸ್ಥಿತಿಲಯ ಸ್ವರೂಪವಾದ ವಿಕಲ್ಪಗಳು ಉಂಟಾಗುತ್ತಿರುತ್ತವೆ. ಬಾಹ್ಯ ಜಗತ್ತಿನಲ್ಲಿ ಪ್ರಕೃತಿ ನಿಯಮಗಳು ಹೇಗಿರುತ್ತವೆಯೋ ಹಾಗೆಯೇ ಈ ವಿಕಲ್ಪಗಳೂ ನಿಯಮವಾಗಿರುತ್ತವೆ. ಈ ನಿಯಮಗಳಲ್ಲಿ ಒಂದು ಮುಖ್ಯ ನಿಯಮವಾವುದೆಂದರೆ ಪ್ರತಿ ಒಂದು ಭಾವವೂ ಸೂಕ್ಷ್ಮರೂಪದಲ್ಲಡಗಿದ್ದು ವಿಸ್ತೃತಿ ಹೊಂದುವುದೂ ಮತ್ತು ವಿಸ್ತೃತವಾಗಿರುವುದೆಲ್ಲಾ ಸೂಕ್ಷ್ಮರೂಪಕ್ಕೆ ಬರುವುದೂ. ಈ ಭಾವವನ್ನೇ ಒಬ್ಬ ಮಹಾಕವಿ “ವ್ಯಾಸ ಸಮಾಸೈಕರೂಪ ಹರಿಹರ ನಾಥಾ” ಎಂಬ ದೈವಸ್ತುತಿಯಲ್ಲಿ ವ್ಯಕ್ತಪಡಿಸಿದ್ದಾನೆ. ಸಂಕುಚಿತ ರೂಪ ಶಿವ. ವಿಸ್ತೃತ ರೂಪ ವಿಷ್ಣು. ಎರಡೂ ಒಂದೇ. “ಅಣೋರಣೀಯಾನ್ ಮಹತೋ ಮಹೀಯಾನ್” ಎಂಬ ಉಪನಿಷದ್ವಾಕ್ಯವು ಸಹ ಇದೇ ಭಾವವನ್ನೇ ವ್ಯಕ್ತಪಡಿಸುತ್ತದೆ. ಸೌರವ್ಯೂಹದ ರಚನೆಗೂ, ಅಣುವಿನ ರಚನೆಗೂ ಹೋಲಿಕೆ ಇದೆ. ‘ಚಿತ್ತ’ನ ವ್ಯಾಪಾರಕ್ಕೂ, ಮಾನವರು ಆಲೋಚಿಸುವ ಮತ್ತು ಆಡುವ ಭಾಷೆಗೂ ಹೋಲಿಕೆಯಿದೆ. ಆದುದರಿಂದ ಈ ‘ವೈಖರೀ’ ರೂಪವಾದ ವಾಕ್ಕಿನಿಂದ ‘ಪರಾ’ ರೂಪವಾದ ಚಿತ್ತಿಗೆ ಸಂಪರ್ಕವನ್ನು ಹೊಂದುವುದು ಸಾಧ್ಯವಾಗಿದೆ.
ನಾವು ಒಂದು ಮೋಟಾರ್ ಕಾರನ್ನು ನಡೆಸುವುದು ಕಲಿಯುವಾಗ ಎಷ್ಟೋ ವಿಷಯಗಳ ಮೇಲೆ ಗಮನ ಇಡಬೇಕಾಗುತ್ತೆ. ಆದರೆ ಅಭ್ಯಾಸ ಮಾಡಿದ ಮೇಲೆ ಬೇರೆ ಆಲೋಚನೆ ಮಾಡಿಕೊಂಡು ಕಾರು ನಡೆಸುತ್ತಿದ್ದರೂ
ನಮ್ಮ ಮನಸ್ಸಿನಲ್ಲಿ ಸೂಕ್ಷ್ಮ ರೂಪವನ್ನು ಹೊಂದಿರುವ ಅಭ್ಯಾಸಗಳು ನಮ್ಮ ನೆರವಿಗೆ ಬರುತ್ತವೆ. ಹೀಗೆಯೇ ಚಿಚ್ಛಕ್ತಿಯ ಅನೇಕ ವಿಸ್ತೃತ ರೂಪಗಳು ಒಂದು ಸೂಕ್ಷ್ಮರೂಪದಲ್ಲಿ ಅಡಗುವುದೂ, ಅಲ್ಲಿಂದ ಬೇಕಾದಾಗ ವಿಸ್ತೃತಿಯನ್ನು ಹೊಂದುವುದೂ ನಡೆಯುತ್ತಿರುತ್ತದೆ. ಈ ಸೂಕ್ಷ್ಮರೂಪಗಳಿಗೇ ದೇವತೆಗಳೆಂದು ಹೆಸರು. ಈ ದೇವತೆಗಳು ಬಾಹ್ಯ ಮತ್ತು ಒಳಗಿನ ಜಗತ್ತುಗಳೆರಡಕ್ಕೂ ಬೇರೆ ಬೇರೆ ಅಲ್ಲ. ಒಂದೇ ಎಂದು ವೇದಗಳು ತಿಳಿಸುತ್ತವೆ.
ಪ್ರಶ್ನೋಪನಿಷತ್ತಿನ ಭಾಷ್ಯದಲ್ಲಿ ಶಂಕರಾಚಾರ್ಯರು ಭೂಮಿ ದೇವತೆಯ ಪ್ರಸಾದದಿಂದಲೇ ನಾವು ಈಗಿನ ಸ್ಥಿತಿಯಲ್ಲಿದ್ದೇವೆ. ಇಲ್ಲದಿದ್ದರೆ ಬಹಳ ಹಗುರವಾಗಿ ಹಾರಿಹೋಗುತ್ತಿದ್ದೆವು. ಎಂಬ ಭಾವವನ್ನು ವ್ಯಕ್ತಪಡಿಸಿದ್ದಾರೆ. ಅಂದರೆ ಗುರುತ್ವಾಕರ್ಷಣವು ಸಹ ಸಂಕಲ್ಪ ಶಕ್ತಿಗೆ ಒಳಪಟ್ಟಿರುವುದೆಂದು ಭಾವಿಸಲು ಅವಕಾಶವಿದೆ. ಯೋಗಾಭ್ಯಾಸದಿಂದ ಮೇಲಕ್ಕೇಳುವವರು ಈಗಲೂ ಇದ್ದಾರೆ.
ಇದರಿಂದ ಬೀಜಾಕ್ಷರರೂಪಕ್ಕೆ ಬಂದ ಧರ್ಮ ಸಂಬಂಧವಾದ ಭಾವಗಳು ದೇವತಾ ಸ್ವರೂಪದಲ್ಲಿರುತ್ತವೆ ಎಂದು ಊಹಿಸಬಹುದು. ಬೃಹದಾರಣ್ಯಕೋಪನಿಷತ್ತಿನಲ್ಲಿ ಗುಡುಗಿನಲ್ಲಿ ಕೇಳಿಬರುವ ದ,ದ,ದ ಎಂಬ ಶಬ್ದದಿಂದ ಈ ಬೀಜಾಕ್ಷರಗಳ ರೂಪದಲ್ಲಿ ದೇವರು ಲೋಕಕ್ಕೆ ಧರ್ಮವನ್ನು ಜ್ಞಾಪಕ ಮಾಡಿಕೊಟ್ಟಿರುತ್ತಾರೆಂದೂ ಹೇಳಲ್ಪಟ್ಟಿದೆ. ಅದೇ ಉಪನಿಷತ್ತಿನಲ್ಲಿ ಮುಂದೆ ಹೃದಯದ ವರ್ಣನೆಯೂ ಇರುವುದರಿಂದ, ಹೃದಯದ ಶಬ್ದದಲ್ಲಿಯು ಈ ಬೀಜಾಕ್ಷರಗಳು ಕೇಳಿಬರುತ್ತಿವೆಯೆಂದು ಊಹಿಸಬಹುದು.
1-4-1983
೧. ದಮ
ಧರ್ಮದ ಬೀಜಾಕ್ಷರಗಳೆನಿಸಿಕೊಳ್ಳುವ ‘ದ,ದ,ದ’ ಎಂಬ ಅಕ್ಷರಗಳಲ್ಲಿ ಮೊದಲನೆಯ ‘ದ’ಕಾರ ದಮವನ್ನು ಸೂಚಿಸುತ್ತದೆ. ಇದರ ವಿಷಯವನ್ನು ಮೊದಲು ತಿಳಿದುಕೊಳ್ಳೋಣ. ‘ದಮ’ ಎಂಬ ಶಬ್ದಕ್ಕೆ ಅಡಗಿಸುವುದು ಮತ್ತು ವಶದಲ್ಲಿಟ್ಟುಕೊಳ್ಳುವುದು ಎಂಬ ಅರ್ಥವಿದೆ. ದುಷ್ಯಂತನ ಮಗನಾದ ಭರತನು ಚಿಕ್ಕ ಮಗುವಾಗಿದ್ದಾಗಲೇ ಸಿಂಹಗಳನ್ನು
ಹಿಡಿದುಕೊಂಡು ಅವುಗಳ ತಲೆಬಾಗಿಸಿ ಅವುಗಳ ಹಲ್ಲುಗಳನ್ನು ಎಣಿಸುತ್ತಿದ್ದನೆಂದು ನಾವು ಕೇಳಿದ್ದೇವೆ. ಆದುದರಿಂದ ಅವನಿಗೆ ‘ಸಿಂಹ ದಮನ’ ಎಂಬ ಹೆಸರು ಬಂದಿತು. ಆದರೆ ‘ದಮ’ ಎಂಬ ಶಬ್ದವು ಇಲ್ಲಿ ಹುಲಿಗಳನ್ನಾಗಲಿ, ಸಿಂಹಗಳನ್ನಾಗಲಿ, ಶತ್ರುಗಳನ್ನಾಗಲಿ ತನ್ನ ವಶಕ್ಕೆ ತಂದು
ಕೊಳ್ಳುವುದು ಎಂಬ ಅರ್ಥದಲ್ಲಿ ಪ್ರಯೋಗಿಸಲ್ಪಟ್ಟಿಲ್ಲ. ಅಂತಹ ಅಪಾಯಕಾರಿ ಪ್ರಾಣಿಗಿಂತಲೂ ಹೆಚ್ಚು ಅಪಾಯಕಾರಿಗಳಾಗಿರುವ ತನ್ನ ಇಂದ್ರಿಯಗಳನ್ನೂ ಮನಸ್ಸನ್ನು ವಶಪಡಿಸಿಕೊಳ್ಳುವುದನ್ನು ಈ ‘ದಮ’ ಸೂಚಿಸುತ್ತದೆ.
ನಮಗೆ ವಿಷಯ ಸುಖವನ್ನನುಭವಿಸಿ ಆನಂದಿಸುವುದಕ್ಕೆ ಸಾಧನಗಳಾದ ಇಂದ್ರಿಯಗಳು ಮತ್ತು ಮನಸ್ಸು ನಮಗೆ ಶತ್ರುಗಳೆ? ಅಪಾಯಕಾರಿಗಳೇ? ಎಂಬ ಪ್ರಶ್ನೆಯನ್ನು ಯಾರಾದರೂ ಕೇಳಬಹುದು. ಇವುಗಳನ್ನು ಹಿತ ಮಿತವಾಗಿ ಉಪಯೋಗಿಸಿಕೊಳ್ಳುತ್ತಿರುವವರೆಗೂ ಯಾವ ಅಪಾಯವೂ ಇಲ್ಲ. ಆದರೆ ಸ್ವಭಾವತಃ ಇವು ತೃಪ್ತಿ ಹೊಂದುವುವಲ್ಲ. ಬೆಂಕಿಯಲ್ಲಿ ತುಪ್ಪವನ್ನು ಎರೆಯುತ್ತಿದ್ದಷ್ಟೂ ಅದು ಶಾಂತವಾಗದೆ ಹೇಗೆ ಇನ್ನೂ ಬೆಳೆಯುತ್ತಲೇ ಇರುತ್ತದೆಯೋ ಹಾಗೆಯೇ ಈ ಇಂದ್ರಿಯಗಳ ಕೋರಿಕೆಗಳನ್ನು ತೀರಿಸಿದಷ್ಟೂ ಅವು ಇನ್ನೂ ಬೇಕು ಇನ್ನೂ ಬೇಕು ಎಂದು ಹಾತೊರೆಯುತ್ತವೆ ಹೊರತು ತೃಪ್ತಿಯನ್ನು ಹೊಂದುವುದಿಲ್ಲ. ಉದಾಹರಣೆಗೆ, ಸಿಹಿತಿಂಡಿ ತಿನ್ನುತ್ತಿದ್ದರೆ ಇನ್ನೂ ತಿನ್ನುತ್ತ ಇರಬೇಕೆಂದೇ ಆಸೆ ಹೆಚ್ಚಾಗುತ್ತೆ. ಈ ಆಸೆಗೆ ಸಿಕ್ಕಿ ಹೆಚ್ಚಾಗಿ ತಿಂದು ಖಾಯಿಲೆಗಳನ್ನು ಅನುಭವಿಸುವರು ಎಷ್ಟೋ ಜನ ಇದ್ದಾರೆ. ಕುದುರೆ ಪಂದ್ಯಕ್ಕೆ ಹಣ ಒಡ್ಡುತ್ತಿದ್ದರೆ ಇರುವುದೆಲ್ಲ ಕಳೆದುಕೊಂಡರೂ, ಸಾಲಗಳು ಮಾಡಿದರೂ, ಇನ್ನು ಒಡ್ಡುತ್ತಿರಬೇಕೆನಿಸುತ್ತದೆಯೇ ಹೊರತು ಸುಮ್ಮನಿರಲು ಮನಸ್ಸು ಬರುವುದಿಲ್ಲ. ಪ್ರಪಂಚದಲ್ಲಿ ನಾಶವಾದವರಲ್ಲಿ ಬಹುಭಾಗ ಇಂದ್ರಿಯಗಳ ಎಳೆತಕ್ಕೆ ಸಿಕ್ಕಿರುವವರೇ. ಹೊರಗಿನ ಶತ್ರುಗಳಾದರೆ ನಾವು ಎಚ್ಚರಿಕೆಯಿಂದಿರಬಹುದು. ಇಂದ್ರಿಯಗಳು ನಮ್ಮೊಳಗಿನ ಶತ್ರುಗಳಾಗಿರುವುದರಿಂದ ಇವುಗಳಿಂದ ಅಪಾಯ ಹೆಚ್ಚು. ಇವುಗಳನ್ನು ವಶದಲ್ಲಿಟ್ಟುಕೊಳ್ಳುವುದು ಬಹಳ ಕಷ್ಟ.
ಇಂದ್ರಿಯಗಳ ದ್ವಾರಾ ಅನುಭವಿಸುವ ವಿಷಯ ಸುಖ ಶಾಶ್ವತವಾದುದಲ್ಲ. ವಿಷಯಗಳು ಎಲ್ಲರಿಗೂ ಬೇಕು. ಅವುಗಳ ಪರಿಮಾಣ ಅಲ್ಪ. ಆದುದರಿಂದಲೇ ಅವುಗಳಿಗಾಗಿ ಮಾನವರಲ್ಲಿ ಸ್ಪರ್ಧೆ ಮತ್ತು ಯುದ್ಧಗಳು ಸಂಭವಿಸಬಹುದು. ಈ ವಿಷಯಗಳು ಸಹ ನಶ್ವರಗಳು. ಅವುಗಳ ವಿಷಯದಲ್ಲಿ ಇಂದ್ರಿಯಗಳು ಒಮ್ಮೆ ಚಟ ಹಿಡಿದರೆ ಅದರಿಂದ ಯಾವ ಕೆಟ್ಟ ಕೆಲಸವನ್ನಾದರೂ ಮಾಡಲು ಮನುಷ್ಯನು ಸಿದ್ಧನಾಗುತ್ತಾನೆ. ಅದರಿಂದ ಅನುಭವಿಸಲಾರದಷ್ಟು ದುಃಖ ಬರುತ್ತದೆ. ವಿಷಯ ಭೋಗವು ಪ್ರಾರಂಭದಲ್ಲಿ ಸುಖವೆನಿಸಿದರೂ ಕೊನೆಯಲ್ಲಿ ಮಹಾ ದುಃಖವನ್ನುಂಟುಮಾಡುತ್ತದೆ. “ದಮ” ಅಥವಾ “ಇಂದ್ರಿಯ ನಿಗ್ರಹವು” ಪ್ರಾರಂಭದಲ್ಲಿ ಕಷ್ಟವೆನಿಸಿದರೂ ಸಾಧಿಸಿದ ಮೇಲೆ ಶಾಶ್ವತವಾದ ಸುಖವನ್ನು ಕೊಡುತ್ತದೆ. ಇದು ಕೊಡುವ ಸುಖ ಹೊರಗಿನ ವಸ್ತುಗಳ ಮೇಲೆ ಆಧಾರ ಪಟ್ಟಿಲ್ಲ. ನಮ್ಮೊಳಗೇ ಆನಂದದ ಸಮುದ್ರವಿದೆ. ಅದನ್ನು ತಿಳಿಯದೆ ಸುಖದ ಹನಿಗಳಿಗಾಗಿ ಹೊರಗಡೆ ಅಲುಗಾಡುತ್ತಿದ್ದೇವೆ. ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡವನಿಗೆ ಎಲ್ಲರೂ ಮಿತ್ರರಾಗಿರುತ್ತಾರೆ.
1-5-1983
೧. ದಮ
ಮೊದಲನೆಯ ‘ದ’ ಕಾರವನ್ನು ಪ್ರಜಾಪತಿಯು ದೇವತೆಗಳಿಗೆ ಬೋಧಿಸಿದನೆಂದು ಹಿಂದೆಯೇ ಹೇಳಲಾಗಿದೆ. ಆದುದರಿಂದ ದೇವತೆಗಳು ‘ದಮ’ವನ್ನು ಅಭ್ಯಾಸ ಮಾಡಬೇಕೆಂಬ ಅಭಿಪ್ರಾಯವುಂಟಾಗುತ್ತದೆ. ಮಾನವರಲ್ಲಿ ಕೆಲವರು ಯಾವ ಸಂಸ್ಕಾರವೂ ಇಲ್ಲದೆ ಕೇವಲ ಕ್ರೂರಮೃಗಗಳಂತೆ ಜೀವಿಸುತ್ತಿರುತ್ತಾರೆ. ಇಂತಹವರನ್ನು ರಾಕ್ಷಸರೆಂದು ಹೇಳಬಹುದು. ಇವರು ಮಾನವತ್ವವನ್ನು ಪಡೆಯಲು ಮೊದಲು ಕಲಿಯಬೇಕಾದ್ದು ‘ದಯೆ’. ಆದುದರಿಂದ ಮೂರನೆಯ ‘ದ’ಕಾರದ ಅರ್ಥವಾದ ‘ದಯೆ’ಯನ್ನು ಇಂಥ ಮಾನವರಿಗೆ ಮುಖ್ಯವಾಗಿ ಬೋಧಿಸಲಾಗಿದೆ. ದಯಾವಂತರಾಗಿ ಅಹಿಂಸೆಯನ್ನು ಆಚರಿಸುತ್ತ ಸಂಸ್ಕೃತಿ ಉಳ್ಳ ಮಾನವರಿಗೆ ಎರಡನೆಯ ‘ದ’ ಕಾರದ ಅರ್ಥವಾದ ‘ದಾನ’ವನ್ನು ಉಪದೇಶಿಸಲಾಗಿದೆ. ದಯೆ ಮತ್ತು ದಾನ ಈ ಎರಡು ಗುಣಗಳಿದ್ದು ಪರಸ್ಪರ ಸಹಕಾರದಿಂದ ಜೀವಿಸುತ್ತ ಬುದ್ಧಿಶಕ್ತಿಯಿಂದ ಸಮಸ್ತ ಸುಖಗಳನ್ನು ಹೊಂದುತ್ತಿರುವವರನ್ನು ದೇವತೆಗಳಿಗೆ ಹೋಲಿಸಿ ಅವರಿಗೆ ‘ದಮ’ವನ್ನು ಉಪದೇಶಿಸಲಾಗಿದೆ. ದಮದಿಂದ ಧರ್ಮಕ್ಕೆ ಭದ್ರವಾದ ಅಡಿಪಾಯ ಲಭಿಸುವುದಲ್ಲದೆ, ಅವುಗಳಲ್ಲಿಯೇ ಮುಳುಗದೇ, ಮೋಕ್ಷದತ್ತ ಸಾಗುವುದಕ್ಕೆ ಮಾರ್ಗವುಂಟಾಗುವುದು. ‘ದಮ’ವಿಲ್ಲದಿದ್ದರೆ ಐಹಿಕ ಸುಖಾನುಭವದ ಅತಿರೇಕದಿಂದ ಸ್ವಾಭಾವಿಕವಾಗಿ ಉಂಟಾಗುವ ಖಾಯಿಲೆಗಳು ಪ್ರಮಾದಗಳು ಇತ್ಯಾದಿಗಳಿಗೆ ಮಾನವರು ಗುರಿಯಾಗಿ ದಯೆ ಮತ್ತು ದಾನವನ್ನು ಸಹ ಮರೆಯುವ ಸಂಭವವಿದೆ. ದಮವಿಲ್ಲದಿದ್ದರೆ ಶಾಶ್ವತವಾದ ಆನಂದ ಲಭಿಸುವುದಿಲ್ಲ. ಆದುದರಿಂದ ಐಹಿಕ ಸುಖವನ್ನು ಹೆಚ್ಚಿಸಿಕೊಂಡು, ಐಕಮತ್ಯದಿಂದ, ಪರಸ್ಪರ ಪ್ರೀತಿ ಗೌರವಗಳಿಂದ ವರ್ತಿಸುವ ದೇವತೆಗಳಂತಿರುವ ಪರಿಸ್ಥಿತಿ ಬಂದರೂ ಮಾವರು ‘ದಮ’ವನ್ನು ಆಚರಿಸಲೇಬೇಕು ಎಂಬ ಉಪದೇಶವನ್ನು ಮೊದಲನೆಯ ‘ದ’ಕಾರ ಕೊಡುತ್ತಿದೆ.
1-6-1983
೧. ದಮ
ಕಾಳಿದಾಸ ಕವಿಯ ಹೆಸರನ್ನು ಕೇಳದಿರುವರಾರಿದ್ದಾರೆ? ಆತನ ರಚನೆಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವುದು ಶಾಕುಂತಲ ನಾಟಕ. ಹಿಂದಿನ ಕವಿಗಳು ಬರೆದ ಕಾವ್ಯ ನಾಟಕಗಳು ಶೃಂಗಾರ, ವೀರ ಮುಂತಾದ ರಸಗಳಿಂದ ಆಕರ್ಷಕವಾಗಿದ್ದರೂ, ಧರ್ಮದ ಸಂದೇಶದಿಂದ ಪವಿತ್ರವಾಗಿವೆ. ವೇದಗಳು ಹೀಗೆ ವರ್ತಿಸಬೇಕು, ಹೀಗೆ ವರ್ತಿಸಬಾರದು ಎಂದು ವಿಧಿ ನಿಷೇಧಗಳನ್ನು ಸರ್ಕಾರದ ಶಾಸನದಂತೆ ಬೋಧಿಸುತ್ತಿರುವುದರಿಂದ ಅವುಗಳಿಗೆ ಪ್ರಭುಸಮ್ಮಿತಗಳೆಂದು ಹೆಸರು. ಸ್ಮೃತಿಗಳೂ ಪುರಾಣಗಳೂ, ಇತಿಹಾಸಗಳೂ, ಮಿತ್ರನಂತೆ ಹಿತಬೋಧೆ ಮಾಡುತ್ತಿರುವುದರಿಂದ ಅವುಗಳಿಗೆ ಸುಹೃತ್ ಸಮ್ಮಿತಗಳೆಂದೂ ಕಾವ್ಯ ನಾಟಕಗಳು ಹೆಂಡತಿ ಗಂಡನಿಗೆ ಮೃದು ಮಧುರವಾಗಿ ಬೋಧಿಸುತ್ತಿರುವುದರಿಂದ ಅದನ್ನು ಪರಿಶೀಲಿಸುವುದು ಅಗತ್ಯವಾಗಿದೆ.
ಶಾಕುಂತಲ ನಾಟಕವನ್ನು ಇತರ ಅನೇಕ ನಾಟಕಗಳಿಗೆ ಹೋಲಿಸಿ ನೋಡಿದರೆ ಕಾಣುವ ಒಂದು ವಿಶೇಷವೆಂದರೆ ಇಲ್ಲಿ ಖಳನಾಯಕನ ಪಾತ್ರವಿಲ್ಲದಿರುವಿಕೆ. ಖಳನಾಯಕನೆಂದರೆ ಕ್ರೂರಚಿತ್ತನೂ, ಸತ್ಪುರುಷರನ್ನು ಹಿಂಸಿಸುವನೂ ಆಗಿರುತ್ತಾನೆ. ನಾಯಕನು ಧರ್ಮಿಷ್ಠನಾಗಿರುತ್ತಾನೆ. ಖಳನಾಯಕನಿಗೆ ಅಪಜಯ. ನಾಯಕನಿಗೆ ಜಯವುಂಟಾಗುವುದರಿಂದ ಧರ್ಮಕ್ಕೇ ಜಯವುಂಟಾಗುವುದೆಂದು ತೋರಿಸಿಕೊಡಲಾಗುವುದು. ಇಂತಹ ಕಾವ್ಯ ನಾಟಕಗಳಿಂದ ಬರುವ ಸಂದೇಶ “ರಾಮಾದಿವದ್ವರ್ತಿತವ್ಯಂ ನ ರಾವಣಾದಿವತ್” ಅಂದರೆ ರಾಮನು ಮುಂತಾದ ಧರ್ಮಿಷ್ಠರನ್ನು ಅನುಸರಿಸಿ ಬಾಳಬೇಕೇ ಹೊರತು ರಾವಣ ಮುಂತಾದವರನ್ನು ಅನುಸರಿಸಿ ಅಲ್ಲ ಎಂಬುದು. ಆದರೆ ಶಕುಂತಲ ನಾಟಕದಲ್ಲಿ ಇದಕ್ಕೂ ಮಿಗಿಲಾದ ಸಂದೇಶವಿದೆ. ಮಾನವರು ಬುದ್ಧಿವಂತರಾಗಿ, ಪರಸ್ಪರ ಪ್ರೀತಿ ವಿಶ್ವಾಸವುಳ್ಳವರಾಗಿ, ಧರ್ಮಿಷ್ಠರಾಗಿ ಸುಖದಿಂದ ಬಾಳುತ್ತಿದ್ದ ಮಾತ್ರಕ್ಕೆ ಎಲ್ಲವನ್ನೂ ಸಾಧಿಸಿದಂತಲ್ಲ. ಸುಖೀ ರಾಜ್ಯವೆಂದು ನಾವು ಯಾವುದನ್ನು ಕರೆಯುತ್ತೇವೆಯೋ ಅದನ್ನು ಸಾಧಿಸಿದರೂ ಇನ್ನೂ ಸಾಧಿಸಬೇಕಾದ್ದಿದೆ. ಅದೇ ದಮ ಎಂಬ ಮೊದಲನೆಯ ‘ದ’ ಎಂಬ ಅಕ್ಷರದಿಂದ ದೇವತೆಗಳಿಗೆ ದೇವರು ಉಪದೇಶಿಸಿದ ‘ದಮ’ದ ಸಂದೇಶವನ್ನು ಕಾಳಿದಾಸ ರಚಿತವಾದ ಶಾಕುಂತಲ ನಾಟಕ ಲೋಕಕ್ಕೆ ಕೊಡುತ್ತಿದೆ.
ತನ್ನ ರಘುವಂಶ ಮುಂತಾದ ಕೃತಿಗಳಲ್ಲಿ’ದಯೆ’ ಮತ್ತು ‘ದಾನ’ದ ಸಂದೇಶವನ್ನು ಲೋಕಕ್ಕೆ ಕೊಟ್ಟ ಕಾಳಿದಾಸನು ‘ದಮ’ದ ಸಂದೇಶವನ್ನು ವಿಶಿಷ್ಟ ರೀತಿಯಲ್ಲಿ ಲೋಕಕ್ಕೆ ಕೊಡುವ ಉದ್ದೇಶದಿಂದಲೇ ಶಾಕುಂತಲ ನಾಟಕವನ್ನು ರಚಿಸಿದ್ದಾನೆ ಎಂದನಿಸುತ್ತದೆ. ಇದಕ್ಕಾಗಿ ಆತನು ಮಹಾಭಾರತಲ್ಲಿರುವ ಶಕುಂತಲೆಯ ಕಥೆಯನ್ನು ಬದಲಾವಣೆ ಮಾಡಿರುವುದಲ್ಲದೆ ನಾಟಕದಲ್ಲಿ ಅಸದೃಶ ಕಲಾ ಕೌಶಲವನ್ನು ತೋರುವ ಶಿಲ್ಪವನ್ನು ಸಹ ಸೃಷ್ಟಿಸಿದ್ದಾನೆ. ‘ಆಲೋಚನಾಮೃತ’ ಅಂದರೆ ಮೇಲಿಂದ ಮೇಲೆ ಓದಿ ವಿಚಾರಿಸಿದಷ್ಟೂ ಹೊಸ ಹೊಸ ಭಾವಗಳನ್ನು ತೋರುತ್ತಿರುವ ಉತ್ತಮ ಸಾಹಿತ್ಯವಾಗಿರುವ ಈ ನಾಟಕವೆಂಬ ಮಂದಿರವನ್ನು ಪ್ರವೇಶಿಸಿ ಅದರ ಶಿಲ್ಪಗಳನ್ನು ನೋಡಿ ಆನಂದಿಸಿ ‘ದಮ’ದ ಸಂದೇಶಾಮೃತವನ್ನು ಪಡೆಯಲು ಯತ್ನಿಸಬೇಕಾಗಿದೆ.
1-7-1983
೧. ದಮ
ಶಾಕುಂತಲ ನಾಟಕದ ಕಥಾವಸ್ತು ಹೀಗಿದೆ. ಮೊದಲನೇ ಅಂಕದಲ್ಲಿ ದುಷ್ಯಂತನು ಕಣ್ವರ ಆಶ್ರಮದಲ್ಲಿ ಸಖಿಯರೊಡನೆ ವೃಕ್ಷಗಳ ಪಾತಿಗಳಿಗೆ ನೀರೆರೆಯುತ್ತಿರುವ ಶಕುಂತಲೆಯನ್ನು ನೋಡುವನು. ಶಕುಂತಲೆಯು ದುಷ್ಯಂತನನ್ನು ನೋಡುವಳು. ಒಬ್ಬರ ರೂಪದಿಂದೊಬ್ಬರು ಆಕರ್ಷಿತರಾಗುವರು. ಎಲ್ಲರ ನಡುವೆ ನಡೆದ ಸಂಭಾಷಣೆಯಿಂದ ಪರಸ್ಪರ ಪರಿಚಯವಾಗುವುದು. ಬೇಟೆಯಾಡಲು ಬಂದಿದ್ದ ದುಷ್ಯಂತನನ್ನು ಹುಡುಕುತ್ತ ಆತನ ಸೈನ್ಯ ಬಂದಾಗ ಅದಕ್ಕೆ ಬೆದರಿದ ಆನೆ ಬಂದು ಆಶ್ರಮಿಗಳ ತಪಸ್ಸಿಗೆ ವಿಘ್ನ ಮಾಡುತ್ತಿದೆ ಎಂಬ ಕೂಗೆದ್ದು ದುಷ್ಯಂತನು ಉಪದ್ರವವನ್ನು ತಪ್ಪಿಸಲು
ಹೋಗುವನು. ಎರಡನೆಯ ಅಂಕದಲ್ಲಿ ದುಷ್ಯಂತನು ತನ್ನ ಸೈನಾಧಿಪತಿಗೆ ಬೇಟೆಯನ್ನು ನಿಲ್ಲಿಸಬೇಕೆಂದೂ ಆಜ್ಞಾಪಿಸುವನು. ಆಮೇಲೆ ವಿದೂಷಕನಿಗೆ ಶಕುಂತಲೆ ತನ್ನಲ್ಲಿನ ಅನುರಾಗದಿಂದ ಮಾಡಿದ ಚೇಷ್ಟೆಗಳನ್ನು ವರ್ಣಿಸುವನು. ಅಷ್ಟರೊಳಗೆ ಋಷಿಕುಮಾರರು ಬಂದು ಹೀಗೆ ಹೇಳುವರು. “ಕಣ್ವರು ಆಶ್ರಮದಲ್ಲಿಲ್ಲದ ಕಾರಣ ರಾಕ್ಷಸರು ನಮ್ಮ ಯಾಗಕ್ಕೆ ವಿಘ್ನವನ್ನಾಚರಿಸುವರು. ಆದುದರಿಂದ ನೀನು ರಥಿಕನಾಗಿ, ಆಯುಧಗಳನ್ನು ಧರಿಸಿ ಇಲ್ಲೇ ಸ್ವಲ್ಪ ದಿನ ಇದ್ದು ಯಾಗವನ್ನು ಕಾಪಾಡಬೇಕು” ಇದಕ್ಕೆ ರಾಜನು ಒಪ್ಪಿದ ಮೇಲೆ, ಆತನಿಗೆ ಪಟ್ಟಣದಲ್ಲಿರುವ ತನ್ನ ತಾಯಿಯಿಂದ ಆಕೆ ಕೈಗೊಂಡ ಉಪವಾಸ ವ್ರತಕ್ಕೆ ಆಗಮಿಸಬೇಕೆಂಬ ವಾರ್ತೆ ಬರುವುದು. ತಾನು ಋಷಿಕುಮಾರರಿಗೆ ಮಾತು ಕೊಟ್ಟಿರುವುದರಿಂದ, ತನ್ನ ಬದಲಾಗಿ ವಿದೂಷಕನನ್ನು ವ್ರತಕ್ಕೆ ಕಳುಹಿಸುವನು, ಆತನು ತನ್ನ ರಾಣಿಯರಿಗೆ ರಾಜನು ಶಕುಂತಲೆಯಲ್ಲಿ ಅನುರಕ್ತನಾಗಿದ್ದಾನೆಂದು ತಿಳಿಸಿದರೆ ಕಷ್ಟವೆಂದೂಹಿಸಿ ನನಗೆ ಶಕುಂತಲೆಯಲ್ಲಿ ಅನುರಾಗವಿಲ್ಲ. ಪರಿಹಾಸ್ಯಕ್ಕಾಗಿ ಹಾಗೆ ಮಾತಾಡಿದೆ ಎಂದು ಹೇಳುವನು.
ಮೂರನೆಯ ಅಂಕದಲ್ಲಿ ವಿರಹಿಯಾದ ದುಷ್ಯಂತನು ವಿರಹತಾಪದಿಂದ ಮಲಗಿದ್ದ ಶಕುಂತಲೆಯನ್ನು ಆಕೆಗೆ ಉಪಚಾರ ಮಾಡುತ್ತಿರುವ ಸಖಿಯರನ್ನೂ ಮರೆಯಲ್ಲಿದ್ದು ನೋಡುವನು. ಸಖಿಯರ ಸಲಹೆಯಂತೆ ಶಕುಂತಲೆ ದುಷ್ಯಂತನಿಗೆ ಒಂದು ಅನುರಾಗ ಪತ್ರವನ್ನು ಬರೆಯುವಳು. ಅದನ್ನಾಕೆ ಓದಿದ ಕೂಡಲೇ ದುಷ್ಯಂತನು ಪ್ರವೇಶಿಸುವನು. ಸಖಿಯರು ಪ್ರೇಮಿಗಳನ್ನು ಬಿಟ್ಟು ಹೊರಡುವ ಮುನ್ನ ಇತರ ರಾಣಿಗಳಿಗಿಂತಲೂ ದುಷ್ಯಂತನು ಶಕುಂತಲೆಗೆ ಅಗ್ರ ಸ್ಥಾನವನ್ನು ಕೊಡುವನೆಂದು ಆತನಿಂದ ತಿಳಿದುಕೊಂಡು ಸಮಾಧಾನ ಪಡುವರು. ಅವರು ಹೊರಟು ಹೋದ ಮೇಲೆ ದುಷ್ಯಂತನು ಶಕುಂತಲೆಗೆ ಗಾಂಧರ್ವ ವಿವಾಹವು ಧರ್ಮಸಮ್ಮತವೆಂದು ತಿಳಿಸುವನು. ಗೌತಮಿ ಎಂಬ ತಪಸ್ವಿನಿ ಶಕುಂತಲೆಗೆ ಮಂತ್ರೋದಕದಿಂದ ಶರೀರ ತಾಪ ಶಾಂತಮಾಡಲು ಬರುವುದಾಗಿ ತಿಳಿದು ರಾಜನು ತಪ್ಪಿಸಿ ಕೊಳ್ಳುವನು.
ನಾಲ್ಕನೆಯ ಅಂಕದ ವೇಳೆಗೆ ಗಾಂಧರ್ವ ವಿವಾಹ ಮುಗಿದು ಶಕುಂತಲೆ ಗರ್ಭವತಿಯಾಗಿರುವಳು. ದುಷ್ಯಂತನು ಶಕುಂತಲೆಗೆ ಒಂದು ಪತ್ರವನ್ನೂ ಬರೆಯಲಿಲ್ಲ. ನಾಲ್ಕನೇ ಅಂಕದಲ್ಲಿ, ಗಂಡನನ್ನೇ ಸ್ಮರಿಸುತ್ತಾ ಮೈಮರೆತಿದ್ದ ಶಕುಂತಲೆಯ ಬಳಿಗೆ ದುರ್ವಾಸನು ಬಂದು ಅತಿಥಿ ತಿರಸ್ಕಾರ ಮಾಡಿದಳೆಂದು ಆಕೆಗೆ, “ ನೀನು ಯಾರನ್ನು ಕುರಿತು ಆಲೋಚಿಸುತ್ತಿರುವೆಯೋ ಆತನು ನಿನ್ನನ್ನು ಮರೆಯುತ್ತಾನೆ. ಎಷ್ಟು ಪ್ರಯತ್ನಿಸಿದರೂ ನಿನ್ನ ವಿಷಯ ಜ್ಞಾಪಕಕ್ಕೆ ಬರುವುದಿಲ್ಲ.” ಎಂದು ಶಾಪ ಕೊಡುತ್ತಾನೆ. ಸಖಿಯ ಪ್ರಾರ್ಥನೆಯಿಂದ ಗುರುತಾಗಿ ಕೊಟ್ಟಿರುವ ಆಭರಣವನ್ನು ನೋಡಿದಾಗ ಜ್ಞಾಪಿಸಿಕೊಳ್ಳುತ್ತಾನೆ ಎಂದು ಅನುಗ್ರಹಿಸುತ್ತಾನೆ. ಈ ವಿಷಯವನ್ನು ಸಖಿಯರು ಶಕುಂತಲೆಗೂ, ಮತ್ಯಾರಿಗೂ ಹೇಳುವುದಿಲ್ಲ. ಕಣ್ವನು ಬಂದು ಸಮಾಚಾರ ತಿಳಿದು ಸಂತೋಷಿಸುವನು. ಗಂಡನ ಮನೆಗೆ ಶಕುಂತಳ ಪ್ರಯಾಣ. ಜೊತೆಗೆ ಗೌತಮಿ ಮತ್ತು ಇಬ್ಬರು ಋಷಿಕುಮಾರರು, ಕಣ್ವನು ಸಾಕು ಮಗಳಾದ ಶಕುಂತಲೆಯನ್ನಗಲುವಿಕೆ, ಶಕುಂತಲೆ ತಂದೆಯನ್ನು, ಸಖಿಯರನ್ನೂ ತಪೋವನದ ಪ್ರಾಣಿ ವೃಕ್ಷಗಳನ್ನೂ ಅಗಲುವ ಪ್ರೇಮಪೂರಿತ ದುಃಖಮಯ ಸನ್ನಿವೇಶ.
1-8-1983
೧. ದಮ
ಐದನೆಯ ಅಂಕದ ಪ್ರಾರಂಭದಲ್ಲಿ ದುಷ್ಯಂತನು ತನ್ನ ಅಂತಃಪುರದಲ್ಲಿರುವಾಗ ಹಂಸಪದಿಕೆಯೆಂಬ ರಾಣಿ ವಾಸದ ಸುಂದರಿಯೊಬ್ಬಳು ಹಾಡುವ ಹಾಡನ್ನು ಪರೋಕ್ಷದಲ್ಲಿ ಕೇಳುವನು.
ಆತನು ಆಕೆಯನ್ನು ಒಂದು ಸಲ ಪ್ರೇಮಿಸಿದವನು. ಪುನಃ ವಸುಮತೀ ದೇವಿಯನ್ನು ಬಿಟ್ಟು ಆಕೆಯ ಸಮೀಪಕ್ಕೆ ಹೋಗಲಿಲ್ಲ. ಆಕೆಯ ಹಾಡಿನಲ್ಲಿ ಈ ವಿಷಯ ಗೂಢವಾಗಿದೆ. ಇಷ್ಟರಲ್ಲಿ ಶಕುಂತಲೆಯನ್ನು ಕರೆದುಕೊಂಡು ಬಂದಿರುವ ಋಷಿಕುಮಾರರೂ, ಗೌತಮಿಯು, ರಾಜನ ಸಂದರ್ಶನವನ್ನು ಪಡೆದು ವಿಚಾರ ತಿಳಿಸುವರು. ದುರ್ವಾಸನ ಶಾಪದಿಂದ ಶಕುಂತಲೆಯ ವೃತ್ತಾಂತವನ್ನೇ ಮರೆತಿರುವ ರಾಜನಿಗೆ ಇದೆಲ್ಲಾ ವಿಚಿತ್ರವಾಗಿ ಕಂಡು ಬರುವುದು. ದುಷ್ಯಂತನು ವಿನಯದಿಂದ ನನಗೆ ಶಕುಂತಲೆಯನ್ನು ಮದುವೆಯಾದ ಸ್ಮರಣೆಯ ಇಲ್ಲ. ಗರ್ಭವತಿಯಾದ ಈಕೆಯನ್ನು ನಾನು ಹೇಗೆ ಪರಿಗ್ರಹಿಸಲಿ ಎಂದು ಉತ್ತರ ಕೊಡುವನು. ಶಕುಂತಲೆಯು ಕಪಟವನ್ನರಿಯದ ಮುಗ್ಧಳಾದ ತನ್ನನ್ನು ಶಪಥ ಪೂರ್ವಕವಾಗಿ ವಂಚಿಸಿ ಕಠಿನೋಕ್ತಿಗಳಿಂದ ತಿರಸ್ಕರಿಸುವುದು ನಿನಗೆ ಯುಕ್ತವಲ್ಲವೆಂದು ದುಃಖ ಕೋಪಗಳಿಂದ ರಾಜನಿಗೆ ಹೇಳಿದರೂ ಪ್ರಯೋಜನವಾಗಲಿಲ್ಲ, ಜ್ಞಾಪಕಕ್ಕಾಗಿ ಕೆಲವು ಸನ್ನಿವೇಶಗಳನ್ನು ವರ್ಣಿಸಿದರೂ ಫಲವುಂಟಾಗಲಿಲ್ಲ. ದುಷ್ಯಂತನು ಕೊಟ್ಟಿದ್ದ ಉಂಗುರವನ್ನು ತೋರಿಸಲು ಪ್ರಯತ್ನಿಸಿದಾಗ ಬೆರಳಿನಲ್ಲಿ ಉಂಗುರವಿರಲಿಲ್ಲ. ಅದು ದಾರಿಯಲ್ಲಿ ಶಚೀತೀರ್ಥದಲ್ಲಿ ಬಿದ್ದುಹೋಗಿತ್ತು. ಕಣ್ವ ಶಿಷ್ಯರು ಶಕುಂತಲೆಯನ್ನು ಅಲ್ಲಿಯೇ ಬಿಟ್ಟು ಹೊರಟುಹೋಗುವರು. ರಾಜನ ಪುರೋಹಿತನು ಶಕುಂತಲೆಯನ್ನು ತನ್ನ ಮನೆಯಲ್ಲಿಟ್ಟುಕೊಂಡಿರುವುದಾಗಿಯು. ಆಕೆಗೆ ಹುಟ್ಟುವ ಮಗ ಚಕ್ರವರ್ತಿ ಲಕ್ಷಣಗಳುಳ್ಳವನಾದರೆ ಆಕೆಯನ್ನು ರಾಜನು ಪರಿಗ್ರಹಿಸಬಹುದೆಂದೂ ಹೇಳಿ ಆಕೆಯನ್ನು ಕರೆದುಕೊಂಡುಹೋಗುವನು. ಸ್ವಲ್ಪ ಹೊತ್ತಾದ ಮೇಲೆ ಆತನು ಹಿಂದಿರುಗಿ ಬಂದು ಶಕುಂತಲೆಯನ್ನೆತ್ತಿಕೊಂಡು ಹೋಯಿತೆಂಬ ವಾರ್ತೆಯನ್ನು ತಿಳಿಸುವನು. ಒಂದು ದಿನ ಒಬ್ಬ ಅಂಬಿಗನಿಗೆ ಮೀನಿನ ಹೊಟ್ಟೆಯಲ್ಲಿ ದುಷ್ಯಂತನು ಶಕುಂತಲೆಗೆ ಕೊಟ್ಟಿದ್ದ ಉಂಗುರ ಸಿಗುವುದು. ರಾಜಭಟರು ಅದನ್ನು ರಾಜನಿಗೆ ತೋರಿಸಿದಾಗ ಆತನಿಗೆ ಶಾಪವಿಮೋಚನೆಯಾಗಿ ಶಕುಂತಲೆಯ ವಿಷಯ ನೆನಪಾಗುವುದು.
ಆರನೆಯ ಅಂಕದಲ್ಲಿ ದುಷ್ಯಂತನು ಶಕುಂತಲೆಯನ್ನು ತಿರಸ್ಕರಿಸಿದಕ್ಕಾಗಿ ದುಃಖ ಮತ್ತು ಪಶ್ಚಾತ್ತಾಪವನ್ನು ಅನುಭವಿಸುವನು. ಶಕುಂತಲೆಯ ಚಿತ್ರವನ್ನು ಬರೆಯುವನು. ಒಬ್ಬ ಸಮುದ್ರ ವ್ಯಾಪಾರಿಯು ಹಡಗು ಮುಳುಗಿ ಸತ್ತುಹೋದನೆಂದೂ, ಆತನಿಗೆ ಸಂತಾನವಿಲ್ಲದ ಕಾರಣ ಆತನ ಧನ ರಾಜನಿಗೆ ಸೇರಬೇಕೆಂದೂ ಬಂದ ಪತ್ರವನ್ನು ನೋಡಿ ಅವನ ಪತ್ನಿಯರಲ್ಲಿ ಯಾರಾದರೂ ಗರ್ಭಿಣಿಯಾಗಿದ್ದರೆ ವಿಚಾರಿಸಬೇಕೆಂದು ಹೇಳುವನು. ತನಗೆ ಮಕ್ಕಳಿಲ್ಲದ ಕಾರಣ ತನ್ನ ಪಿತ್ರುಗಳಿಗೆ ಆಗುವ ದುಃಖವನ್ನು ಸ್ಮರಿಸಿ ಮೂರ್ಛೆ ಹೊಂದುವನು. ರಾಜನ ಚೇಷ್ಟೆಗಳನ್ನೆಲ್ಲಾ ಸಾನುಮತಿ ಎಂಬ ಅಪ್ಸರಸ್ತ್ರೀ ಗಮನಿಸುತ್ತಿರುವಳು. ಶಕುಂತಲೆ ತನ್ನ ತಾಯಿಯಾದ ಮೇನಕೆಯೆಂಬ ಅಪ್ಸರಸ್ತ್ರೀಯಿಂದ ದೇವಲೋಕದಲ್ಲಿಡಲ್ಪಟ್ಟಿರುವಳು. ಸಾನುಮತಿ ರಾಜನ ಮನಸ್ಸನ್ನು ಶಕುಂತಲೆಗೆ ತಿಳಿಸುವನೆಂದು ಹೋಗುವಳು. ಇಷ್ಟರೊಳಗೆ ವಿದೂಷಕನ ಆರ್ತಧ್ವನಿ ಕೇಳಿಬರುವುದು. ಆತನನ್ನು ಇಂದ್ರನ ಸಾರಥಿಯಾದ ಮಾತಲಿಯು ಹಿಡಿದು ಕೊಂಡಿರುವನು, ದುಷ್ಯಂತನು ಕಾಣಿಸದ ಆತನನ್ನು ಹೊಡೆಯಲು ಬಾಣ ಪ್ರಯೋಗ ಮಾಡುತ್ತಿರಲು ಮಾತಲಿ ಕಾಣಿಸಿಕೊಂಡು “ ಇಂದ್ರನು ಕೆಲ ರಾಕ್ಷಸರನ್ನು ಗೆಲ್ಲಲು ನೀನೇ ಸಮರ್ಥನೆಂದು ರಥವನ್ನು ಕಳುಹಿಸಿದ್ದಾನೆ, ಬಾ” ಎಂದು ದುಷ್ಯಂತನನ್ನು ಕರೆದುಕೊಂಡು ಹೋಗುವನು.
ಏಳನೆಯ ಅಂಕದಲ್ಲಿ ರಾಕ್ಷಸರನ್ನು ಗೆದ್ದ ದುಷ್ಯಂತನನ್ನು ಇಂದ್ರನು ಸತ್ಕರಿಸಿದ ಮೇಲೆ ಆತನನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಮಾತಲಿಯು ಕೆಳಕ್ಕಿಳಿಯುತ್ತಿರುವನು. ಆಮೇಲೆ ಭೂಲೋಕ ಬಂದಾಗ ಹೇಮಕೂಟವೆಂಬ ಕಿಂಪುರುಷ ಪರ್ವತಕ್ಕೆ ಇಬ್ಬರೂ ಬರುವರು. ಅದು ದೇವಭೂಮಿ. ಅಲ್ಲಿ ಮರೀಚಿಯ ಮಗನಾದ ಕಷ್ಯಪನು ತಪಸ್ಸು ಮಾಡುತ್ತಿರುವನು. ಆತನ ಹೆಂಡತಿಯೇ ಅದಿತಿ. ಆ ಪರ್ವತದಲ್ಲಿ ದುಷ್ಯಂತನು ತನ್ನ ಮಗನಾದ “ಸರ್ವದಮನ” ನನ್ನು ನೋಡುವನು. ಆ ಶಿಶು ಸಿಂಹದ ಮರಿಯನ್ನು ಹಿಡಿದು ಹಲ್ಲುಗಳನ್ನು ಲೆಕ್ಕ ಮಾಡುತ್ತಿರುವುದು, ತನ್ನ ಮಗನೆಂದು ರಾಜನಿಗೆ ಗೊತ್ತಿಲ್ಲ. ಅಲ್ಲಿ ಹುಡುಗನಿಗೆ ಕಾವಲಿದ್ದ ತಾಪಸಿಯ ಮಾತುಗಳಿಂದ ತನ್ನ ಮಗನಿರಬಹುದೆಂಬ ಆಸೆ ಹುಟ್ಟುತ್ತೆ. ಆ ಹುಡುಗನ ಮುಂಗೈಯಲ್ಲಿದ್ದ ರಕ್ಷಾಯಂತ್ರವು ಜಾರಿ ಬಿದ್ದಾಗ ದುಷ್ಯಂತನು ಅದನ್ನು ತೆಗೆದುಕೊಳ್ಳುವನು. ಆದರೆ ಅದನ್ನು ತಂದೆ ತಾಯಿಗಳೂ ಕಟ್ಟಿದವರೂ ಹೊರತಾಗಿ ಇತರರು ಮುಟ್ಟಿದರೆ ಅದು ಸರ್ಪವಾಗಿ ಅವರನ್ನು ಕೊಲ್ಲುವುದು. ಹಾಗೆ ನಡೆಯಲಿಲ್ಲ, ಇದರಿಂದ ಆತನು ತನ್ನ ಮಗನೆಂದು ದುಷ್ಯಂತನಿಗೆ ಸಂತೋಷವುಂಟಾಗುವುದು, ಆಮೇಲೆ ಶಕುಂತಲೆ ಪ್ರವೇಶಿಸುವಳು. ದುಷ್ಯಂತನು ಪಶ್ಚಾತ್ತಾಪದಿಂದ ಶಕುಂತಲೆಗೆ ನಮಸ್ಕರಿಸುವನು. ಮಾತಲಿ ಬಂದು ಇಬ್ಬರನ್ನೂ ಮಾರೀಚ ಮಹರ್ಷಿಯ ಸಮೀಪಕ್ಕೆ ಕರೆದು ಕೊಂಡು ಹೋಗುವನು, ಋಷಿಗೂ ಆತನ ಪತ್ನಿಗೂ ಅವರು ನಮಸ್ಕರಿಸಿ ಆಶೀರ್ವಾದ ಪಡೆಯುವರು, ಋಷಿಯು ದುರ್ವಾಸ ಶಾಪದ ವಿಷಯವನ್ನು ಅವರಿಗೆ ತಿಳಿಸಿದಾಗ ಅವರಿಗೆ ಸಮಾಧಾನವಾಗುವುದು. ಋಷಿ ತನ್ನ ಶಿಷ್ಯನಿಂದ ಶಕುಂತಲಾ ದುಷ್ಯಂತರ ಸಮಾಗಮವನ್ನು ಕಣ್ವರಿಗೆ ಹೇಳಿಕಳಿಸುವನು.
ಮುಂದೆ ಈ ನಾಟಕದಲ್ಲಿ “ದಮದ” ಉಪದೇಶ ಹೇಗೆ ಮಾಡಲ್ಪಟ್ಟಿದೆ ಎಂಬ ವಿಷಯವನ್ನು ಚರ್ಚಿಸಬೇಕಾಗಿದೆ.
1-9-1983
೧. ದಮ
ಮಾನವನ ಮನಸ್ಸು ಇಂದ್ರಿಯ ವಿಷಯಗಳ ಕಡೆಗೇ ಯಾವಾಗಲೂ ಧಾವಿಸುತ್ತಿರುವುದು ಸಹಜ. ಇದಕ್ಕೆ ಪ್ರವೃತ್ತಿ ಎಂದು ಹೆಸರು. ಇದನ್ನು ತಡೆಗಟ್ಟುವುದಕ್ಕೆ ‘ದಮ’ವೆಂದು ಹೆಸರು. ಈ ಪ್ರವೃತ್ತಿ ಅನಿಯಂತ್ರಿತವಾದರೆ ಅದಕ್ಕೆ ‘ ಕಾಮ ಚಾರಿತ್ವ’ ಅಂದರೆ ಇಷ್ಟಬಂದಹಾಗೆ ವ್ಯವಹರಿಸುವುದು ಎಂದು ಹೆಸರು. ಪಶುಗಳಿಗೆ ಸ್ವಭಾವದ ಪ್ರವೃತ್ತಿಯನ್ನು ಮೀರುವ ಶಕ್ತಿ ಇರುವುದಿಲ್ಲ. ಆದರೆ ಬುದ್ಧಿಜೀವಿಯಾದ ಮಾನವನು ವಿವೇಕದಿಂದ ಸ್ವಾಭಾವಿಕ ಪ್ರವೃತ್ತಿಯನ್ನು ಸ್ವಲ್ಪ ತಡೆಗಟ್ಟಿ ಅದನ್ನು ತನಗೂ ಲೋಕಕ್ಕೂ ಹಿತಕರವಾದ ರೀತಿಯಲ್ಲಿ ರೂಪಿಸಿಕೊಳ್ಲಲು ಸಮರ್ಥತೆಉಳ್ಳವನಾಗಿದ್ದಾನೆ. ಹೀಗೆ ಮಾಡುವುದಕ್ಕೆ ಸಂಸ್ಕಾರವೆಂದು ಹೆಸರು. ದಮದಿಂದಲೇ ಈ ಸಂಸ್ಕಾರ ಲಭಿಸುವುದು. ಕೆಲವರಲ್ಲಿ ಹುಟ್ಟಿದಾಗಲೇ ಈ ಸಂಸ್ಕಾರ ಕಂಡುಬಂದರೆ ಅದಕ್ಕೆ ಕಾರಣ ಅವರು ಹಿಂದಿನ ಜನ್ಮಗಳಲ್ಲಿ ಮಾಡಿದ್ದ ದಮದ ಅಭ್ಯಾಸ. ಈ “ದಮ”ವನ್ನು ಪರಿಪೂರ್ಣವಾಗಿ ಅಭ್ಯಾಸ ಮಾಡಿದರೆ ಇಂದ್ರಿಯ ಪ್ರವೃತ್ತಿಯನ್ನು ಪೂರ್ತಿ ತಡೆಗಟ್ಟಿ ಮನಸ್ಸನ್ನು ಆತ್ಮನ ಕಡೆಗೆ ತಿರುಗಿಸಲು ಸಮರ್ಥನಾಗುತ್ತಾನೆ. ಇದಕ್ಕೆ ನಿವೃತ್ತಿ ಎಂದು ಹೆಸರು.
ಹೀಗೆ ಪ್ರವೃತ್ತಿಯ ಕೀಳುಮಟ್ಟವಾದ ಕಾಮಚಾರಿತ್ವದಿಂದ ನಿಯಮಿತ ಪ್ರವೃತ್ತಿ ಅಥವ ಸಂಸ್ಕಾರವನ್ನು ಪಡೆದು ಕೊನೆಗೆ ನಿವೃತ್ತಿಯನ್ನು ಸಾಧಿಸುವುದೇ ಮಾನವನ ಲಕ್ಷ್ಯವಾಗಿರಬೇಕು ಇದರಿಂದಲೇ ಆತನಿಗೂ ಲೋಕಕ್ಕೂ ಹಿತ. ಇದರಿಂದಲೇ ಶಾಶ್ವತವಾದ ಆನಂದದ ಪ್ರಾಪ್ತಿ. ಪ್ರವೃತ್ತಿಯಲ್ಲಿನ ಹಂತಗಳನ್ನು ಕೆಳಮಟ್ಟದಿಂದ ಉನ್ನತಮಟ್ಟದವರೆಗೆ ಸ್ಥೂಲವಾಗಿ ಕಾಮ, ಪ್ರೇಮ, ನೇಮ ಎಂದು ಮೂರು ವಿಧವಾಗಿ ವಿಂಗಡಿಸಬಹುದು. ಕಾಮದ ಮಟ್ಟದಿಂದ ಮಾನವನು ಪ್ರೇಮದ ಮಟ್ಟಕ್ಕೆ ಏರಿ ಕೊನೆಗೆ ನಿವೃತ್ತಿ ಮಾರ್ಗವನ್ನು ಸೇರಬೇಕೆಂಬ ಅತ್ಯುತ್ತಮವಾದ ಸಂದೇಶವನ್ನು ಶಾಕುಂತಲ ನಾಟಕವು ಕೊಡುತ್ತಿದೆ. ಇದೇ ‘ದಮ’ದ ಸಂದೇಶ. ‘ದಯೆ’ ಮತ್ತು ‘ದಾನ’ ಎಂಬ ಇನ್ನೆರಡು ‘ದ’ ಅಕ್ಷರಗಳ ಸಂದೇಶಕ್ಕಿಂತಲೂ ಈ ನಾಟಕದಲ್ಲಿರುವುದು ‘ದಮ’ದ ಸಂದೇಶವೇ ಎನ್ನಲು ಕಾರಣ ಇದರಲ್ಲಿರುವ ಎಲ್ಲ ಪಾತ್ರಗಳೂ ‘ದಯೆ’ ಮತ್ತು ‘ದಾನ’ದ ರೂಪವಾದ ಧರ್ಮದ ಮೊದಲಿನ ಸೋಪಾನಗಳನ್ನು ಹತ್ತಿರುವವರೇ.
ಕಾಮದಲ್ಲಿ ಕೇವಲ ಸ್ವಾರ್ಥವಿರುತ್ತದೆ. ಕಾಮದಂತೆ ಪ್ರೇಮವೂ ಪ್ರವೃತ್ತಿಯ ತೀವ್ರತೆಯನ್ನು ಹೊಂದಿದ್ದರೂ ಇದರಲ್ಲಿ ಸ್ವಾರ್ಥಕ್ಕೆ ಬದಲಾಗಿ ತ್ಯಾಗವಿರುವುದರಿಂದ ಇದು ಕಾಮಕ್ಕಿಂತಲೂ ಉತ್ತಮವಾದುದು. ಇದು ಪ್ರಾಣಿಗಳಲ್ಲಿ ಹೆಂಡತಿ ಮಕ್ಕಳ ಮೇಲೆ ಮತ್ತು ಬಂಧು, ಮಿತ್ರರ ಮೇಲೆ ಸ್ವಲ್ಪಮಟ್ಟಿಗೆ ಸ್ವಾಭಾವಿಕವಾಗಿ ಕಂಡುಬರುತ್ತಿದ್ದರೂ ಈ ಪ್ರೇಮ ಪ್ರವೃತ್ತಿಯನ್ನು ಮಾನವನು ವಿಸ್ತಾರಗೊಳಿಸಿಕೊಳ್ಳುವುದರ ಮೂಲಕ ಅತ್ಯುತ್ತಮಸಂಸ್ಕಾರವನ್ನು ಪಡೆಯಬಹುದು. ಇಂತಹ ಪ್ರಯತ್ನಕ್ಕೆ ದಮದ ಬೆಂಬಲವಿರಲೇಬೇಕು.
ಶಾಕುಂತಲ ನಾಟಕದ ಪ್ರಾರಂಭದಲ್ಲಿನ ಶಕುಂತಲಾ ದುಷ್ಯಂತರ ಪಾತ್ರಗಳಿಗೂ ಕೊನೆಯಲ್ಲಿನ ಅದೇ ಪಾತ್ರಗಳಿಗೂ ಇರುವ ವ್ಯತ್ಯಾಸ ಗಮನಿಸಬೇಕಾಗಿದೆ. ಇದಕ್ಕನುಸಾವಾಗಿ ಪ್ರಥಮಾಂಕದ ಕಣ್ವಾಶ್ರಮದ ವರ್ಣನೆಗೂ, ಕೊನೆಯ ಅಂಕದಲ್ಲಿನ ಮಾರೀಚಾಶ್ರಮದ ವರ್ಣನೆಗೂ ಇರುವ ವ್ಯತ್ಯಾಸವನ್ನು ಗಮನಿಸಬೇಕಾಗಿದೆ. ನಡುವೆ ಬರುವ ಕಥೆ, ಸಂದರ್ಭಗಳೂ, ಮಾತುಗಳೂ ವರ್ಣನೆಗಳು ಸಹ ಗಮನಿಸಲು ಅರ್ಹವಾಗಿವೆ. ಈ ರೀತಿಯಾದ ಪರೀಕ್ಷೆಯಿಂದ ಈ ನಾಟಕದಲ್ಲಿ ಕ್ರಮವಾಗಿ ಕಾಮ, ಪ್ರೇಮ, ನೇಮ ಎಂಬ ಈ ಮೂರು ಹಂತಗಳು ನಮಗೆ ಗೋಚರಿಸುವುವು. ಇವುಗಳಲ್ಲಿ ಸ್ಪಷ್ಟವಾಗಿ ಹೇಳದಿದ್ದರೂ, ಧರ್ಮದ ಸಂದೇಶ ಧ್ವನಿರೂಪದಲ್ಲಿ ಸಹೃದಯರಿಗೆ ತಪ್ಪದೆ ಗೋಚರಿಸುತ್ತದೆ. ಭೂಲೋಕದಲ್ಲಿನ ಕಣ್ವಾಶ್ರಮದಲ್ಲಿ ಆರಂಭವಾದ ಕಥೆ ಮುಗಿಯುವ ವೇಳೆಗೆ ಶಕುಂತಲಾ ದುಷ್ಯಂತರು ದೇವಲೋಕಕ್ಕೇರುವರು ಇದು ಹೇಗೆ ಸಾಧ್ಯವಾಯಿತು? ಇದರಲ್ಲಿ ‘ದಮ’ದ ಪಾತ್ರವೆಷ್ಟರಮಟ್ಟಿಗೆ? ಭೂಲೋಕಕ್ಕೂ ದೇವಲೋಕಕ್ಕೂ ಇರುವ ಭೇದವೇನು? ಎಂಬ ವಿಷಯಗಳನ್ನು ಗಮನಿಸಬೇಕಾಗಿದೆ. ಹಾಗೆಯೇ ಉದ್ದಿಷ್ಟವಾದ ಸಂದೇಶವನ್ನು ಕೊಡಲು ಕವಿಯು ಈ ನಾಟಕದ ರಚನೆಯಲ್ಲಿ ತೋರಿಸಿರುವ ಶಿಲ್ಪವೆಂತಹುದು ಎಂಬುದರ ಕಡೆಗೂ ನಾವು ಗಮನ ಹರಿಸಬೇಕಾಗಿದೆ. ಕಾಮದ ಅಂಧಕಾರವನ್ನು ಬಿಟ್ಟು ಪ್ರೇಮದ ಬಣ್ಣ ಬಣ್ಣಗಳ ಬೆಳಕುಗಳಲ್ಲಿ ಆಟವಾಡಿ ನೇಮದ ದಿವ್ಯಕಾಂತಿಯಲ್ಲಿ ಸ್ಥಿರತೆಯನ್ನು ಪಡೆಯುವ ನಾಯಿಕಾ ನಾಯಕರಾದ ಶಕುಂತಲಾ ದುಷ್ಯಂತರ ಮನೋಹರ ಕಥೆಯಲ್ಲಿ ಗರ್ಭಿತವಾಗಿರುವ ಉದಾತ್ತ ಸಂದೇಶವನ್ನು ಶೇಕರಿಸಬೇಕಾಗಿದೆ.
1-10-1983
೧. ದಮ
ಕಾಮ, ಪ್ರೇಮ, ನೇಮ ಎಂಬ ಹಂತಗಳಲ್ಲಿ ಮೊದಲನೆಯದಾಗಿರುವ ‘ಕಾಮ’ದ ಲಕ್ಷಣಗಳನ್ನು ಸೂಚಿಸಲು ಬೇಕಾದ ಸನ್ನಿವೇಶವನ್ನು ಕವಿಯು ಶಾಕುಂತಲ ನಾಟಕದ ಪ್ರಾರಂಭದಲ್ಲಿ ಸೃಷ್ಟಿಸಿದ್ದಾನೆ. ಪ್ರಸ್ತಾವನೆಯಲ್ಲಿ ಸೂತ್ರದಾರನು ನಟಿಯೊಂದಿಗೆ ಮಾತನಾಡುತ್ತ ಗ್ರೀಷ್ಮಋತುವನ್ನುದ್ದೇಶಿಸಿ ಗಾನಮಾಡಬೇಕೆಂದು ಹೇಳುತ್ತಾನೆ. ಆತ ತಾನೇ ಗ್ರೀಷ್ಮಋತುವನ್ನು ಹೀಗೆ ವರ್ಣಿಸುತ್ತಾನೆ.
ಸಲಿಲಾವಗಾಹನಕ್ಕತಿ
ಲಲಿತತೆಯಂ, ಬನದೆಲ್ರ್ಗೆ ಪಾದರಿಗಂಪಂ
ಸುಲಭತೆಯಂ ನಿದ್ರೆಗೆ ನೆಳ
ಲೊಳಗಿತ್ತೆವು ಪರಿಣತಿಯೊಳೆ
ಸೊಗಯಿಪಪಗೆಲ್ಗಳ್
ಭಾವ- ಈ ಸೆಕೆಗಾಲದಲ್ಲಿ ನೀರಿನಲ್ಲಿ ಮುಳುಗಿದರೆ ಹಾಯಾಗಿರುತ್ತದೆ. ಪಾದರಿ ಹೂಗಳ ಪರಿಮಳವನ್ನುಕೊಡುವ ಉದ್ಯಾನವನಗಳ ಗಾಳಿಯನ್ನು ಸೇವಿಸುವುದು ಚಂದ. ನೆರಳಲ್ಲಿ ನಿದ್ರೆ ಸುಲಭವಾಗಿ ಬರುತ್ತದೆ. ಹಗಲು ಮುಗಿದು ರಾತ್ರಿಯಾದಾಗ ತಣ್ಣಗಾಗುತ್ತದೆ.
ಈ ವರ್ಣನೆಯಲ್ಲಿ ಧ್ವನಿತವಾಗುವುದು ಇಂದ್ರಿಯ ಸುಖದಿಂದ ಆಗುವ ಮೈ ಮರವು. ಇಂದ್ರಿಯ ಸುಖ ಭೋಗದ ಆಸಕ್ತಿ ಮತ್ತು ಅದರಿಂದ ಆಗುವ ಮೈಮರವು. ಇವು ಕಾಮದ ಪ್ರಧಾನ ಲಕ್ಷಣಗಳು. ಮೇಲಿನ ಪದ್ಯದಲ್ಲಿನ ಅವಗಾಹನ (ಮುಳುಗುವುದು). ನಿದ್ರೆ ಮತ್ತು ಹಗಲಿನ ಪರಿಣತಿ ಇತ್ಯಾದಿಗಳು ಮರವನ್ನೂ ತಮೋಗುಣವನ್ನೂ ಸೂಚಿಸುತ್ತವೆ. ಶಾಕುಂತಲ ಕಥೆಯಲ್ಲಿ ಮುಖ್ಯವಾಗಿರುವ ಘಟ್ಟ ದುಷ್ಯಂತ ಶಕುಂತಲೆಯನ್ನು ಮರೆಯುವುದು. ಈ ಮರವಿನ ಸೂಚನೆಯನ್ನು ಕವಿ ಈ ಪ್ರಸ್ತಾವನೆಯ ಪದ್ಯದಲ್ಲೇ ಕೊಟ್ಟಿದ್ದಾನೆ. ಗ್ರೀಷ್ಮ ಋತುವಿನ ತಾಪ ‘ಕಾಮ’ (ಸ್ವಾರ್ಥಕ್ಕಾದ ಕೋರಿಕೆ)ದಲ್ಲಿನ ಆವೇಶದ ತಾಪವನ್ನು ಸೂಚಿಸುತ್ತದೆ.
ಇದಾದ ಮೇಲೆ ನಟಿ ಗ್ರೀಷ್ಮಋತುವನ್ನು ವರ್ಣಿಸುತ್ತ ಹಾಡುವಳು-
ಯೋಷಾಜನ ಮೊಲವಿಂದೆ ಶಿ
ರೀಷಮನತಿ ಮೃದುಲ ಕೇಸ್ರಾಗ್ರನಳಿಯಂ!
ದೀಷ ಚ್ಚುಂಬಿತಮಂ ಸವಿ
ಶೇಷದಯಂ ಕನ್ನವುರವು ನೆಸಗುವುದಲ್ತೇ!!
ಭಾವ: ಹೆಂಗಸರು ಹೂಗಳಿಂದ ಅಲಂಕಾರ ಮಾಡಿಕೊಳ್ಳಲು ಆಸೆಪಡುತ್ತಾರೆ. ಆದರೆ ಅವರ ಹೃದಯ ಹೂವಿನಷ್ಟೇ ಕೋಮಲ. ಹೂಗಳಲ್ಲಿ ಬಹಳ ಮೃದುವಾಗಿರುವುದು ಶಿರೀಷ ಪುಷ್ಪ ಅದನ್ನು ದುಂಬಿ ಸಹ ಹೆಚ್ಚಾಗಿ ಚುಂಬಿಸಲು ಹಿಂಜರಿಯುತ್ತದೆ. ಅದನ್ನು ಹೆಂಗಸರು ಬಹಳ ದಯೆಯಿಂದ ನಲುಗದಂತೆ ತೆಗೆದುಕೊಂಡು ಕಿವಿಯ ಮೇಲೆ ಧರಿಸುತ್ತಾರೆ.
ಇದಕ್ಕೂ ಸೂತ್ರಧಾರನು ಮಾಡಿದ ಬೇಸಿಗೆಯ ವರ್ಣನೆಗೂ ಇರುವ ವ್ಯತ್ಯಾಸ ಗಮನಿಸಬೇಕಾಗಿದೆ. ಆತನ ವರ್ಣನೆ ಪುರುಷ ಪಾತ್ರ ದುಷ್ಯಂತನ ಪ್ರಾರಂಭ ಸ್ಥಿತಿಯ ಪಾತ್ರ ಚಿತ್ರಣಕ್ಕೆ ಸೂಚಕವಾಗಿದ್ದರೆ ನಟಿಯ ವರ್ಣನೆ ಪ್ರಾರಂಭದ ಸ್ಥಿತಿಯಲ್ಲಿನ ಶಕುಂತಲೆಯ ಹೃದಯಕ್ಕೆ ಸೂಚಕವಾಗಿದೆ ಎಂಬುದು ಮುಂದೆ ಗೊತ್ತಾಗುವುದು. ನಟಿಯ ವರ್ಣನೆಯಲ್ಲಿ ಎರಡನೆಯ ಹಂತವಾದ “ಪ್ರೇಮ”ದ ಲಕ್ಷಣ ಸೇರಿಕೊಂಡಿದೆ. ಇಲ್ಲಿ ಹೆಂಗಸರಿಗೆ ಸ್ವಾರ್ಥವಿದ್ದರೂ ಹೂವಿನ ವಿಷಯದಲ್ಲಿ ದಯೆ ಇರುವುದರಿಂದ ಇಲ್ಲಿ ‘ಪ್ರೇಮ’ದ ಲಕ್ಷಣ ಕಂಡುಬರುತ್ತದೆ.
ನಟಿಯ ಹಾಡನ್ನು ಕೇಳುತ್ತ ಸೂತ್ರಧಾರ ತಾನು ಆಡಿಸಬೇಕಾದ ನಾಟಕದ ಹೆಸರನ್ನೇ ಮರೆತು ಅದನ್ನು ನಟಿಯಿಂದ ಜ್ಞಾಪಕ ಮಾಡಿಸಿಕೊಳ್ಳುತ್ತಾನೆ. ಇದು ಭಾವೀ ಕಥೆಯಲ್ಲಿ ದುಷ್ಯಂತನು ಶಕುಂತಲೆಯನ್ನು ಮರೆಯುವುದಕ್ಕೂ ಸೂಚಕವಾಗಿದೆ.
ಈ ಸಂದರ್ಭದಲ್ಲಿ ಸೂತ್ರಧಾರ ಹೀಗೆ ಹೇಳುತ್ತಾನೆ.
ಅಂಗನೆ ಹೃತನಾದಂ ಹೃದ
ಯಂಗೊಳ್ವೀ ನಿನ್ನ ಗೀತರಾಗದೊಳೀಗಳ್!
ತುಂಗತರ ವೇಗಶಾಲಿ ಕು
ರಂಗದೆ ಹೃತನಾದ ತೆರದೊಳೀ ದುಷ್ಯಂತಂ!!
ಭಾವ: ನಟಿಯೇ, ಈಗ ಪ್ರವೇಶಿಸುತ್ತಿರುವ ದುಷ್ಯಂತನು ಹೇಗೆ ತಾನು ಬಾಣದಿಂದ ಹೊಡೆಯಲು ಇಚ್ಛಿಸುವ, ಓಡಿಹೋಗುತ್ತಿರುವ ಜಿಂಕೆಯಿಂದ ಆಕರ್ಷಿತನಾಗಿದ್ದಾನೆಯೋ ಹಾಗೆಯೇ ನಾನು ಸಹ ನಿನ್ನ ಹಾಡಿನ ಮಾಧುರ್ಯದಿಂದ ಆಕರ್ಷಿತನಾಗಿ ನಾಟಕದ ಹೆಸರನ್ನೇ ಮರೆತುಹೋದೆನು.
ಇದಕ್ಕನುಗುಣವಾಗಿ ರಥದಲ್ಲಿ ಕುಳಿತುಕೊಂಡು ಜಿಂಕೆಯನ್ನು ಹೊಡೆಯಲು ಬಾಣವನ್ನು ಗುರಿಯಿಟ್ಟು, ಅದರ ಹಿಂದೆ ಹೋಗುತ್ತಿದ್ದ ದುಷ್ಯಂತನ ಪ್ರವೇಶವಾಗುವುದು.
1-11-1983
೧. ದಮ
ಈಗ ನಾಟಕದ ಪ್ರಾರಂಭದಲ್ಲಿ ದುಷ್ಯಂತನ ಪಾತ್ರಚಿತ್ರಣ ಹೇಗಿದೆ ಎಂಬುದನ್ನು ಗಮನಿಸಿ ಆರನೇ ಅಂಕಕ್ಕೆ ಬಂದಾಗ ಈ ಕಥಾನಾಯಕನ ಪಾತ್ರದಲ್ಲಿ ಆಗಿರುವ ಬದಲಾವಣೆ ಏನು? ಕೊನೆಯ ಅಂಕದಲ್ಲಿನ ದುಷ್ಯಂತನ ಪಾತ್ರ ಹೇಗೆ ಉದಾತ್ತತೆಯನ್ನು ಪಡೆದಿದೆ? ಎಂಬುದನ್ನು ಸಹ ಕ್ರಮೇಣ ಅರಿಯಬೇಕಾಗಿದೆ. ದುಷ್ಯಂತನು ಧರ್ಮಿಷ್ಠನಾದ ರಾಜನಾದರೂ, ವ್ಯಸನವೆಂದು ಪರಿಗಣಿಸಲ್ಪಟ್ಟಿರುವ ಬೇಟೆಯಲ್ಲಿ ಬಹಳ ಆಸಕ್ತಿ ಉಳ್ಳವನು. ಕಣ್ವರ ಆಶ್ರಮಕ್ಕೆ ಬರುವುದಕ್ಕೆ ಮೊದಲೇ ಆತನಿಗೆ ರಾಣಿಯರೂ ಪ್ರೇಯಸಿಯರೂ ಇದ್ದರು. ಇವರ ವಿಷಯದಲ್ಲಿ ಆತನಿಗೆ “ಕಾಮ” ರೂಪವಾದ ಸಂಬಂಧವೇ ಹೊರತು ‘ಪ್ರೇಮದ’ ಗಾಢವಾದ ಅನುಭವ ಆದಂತಿಲ್ಲ. ಇನ್ನೂ ಆತನಿಗೆ ಸಂತಾನ ಪ್ರಾಪ್ತಿ ಆಗಿಲ್ಲ. ಈ ವಿಷಯಗಳಿಂದ ದುಷ್ಯಂತನು ಪ್ರಾರಂಭದಲ್ಲಿ ಇನ್ನೂ ‘ಕಾಮ’ದ ಹಂತದಲ್ಲೇ ಇದ್ದನೆಂಬುದು ಸ್ಪಷ್ಟವಾಗುತ್ತದೆ. ಹಿಂದೆಯೇ ಹೇಳಿದಂತೆ ಈ ಕಾಮದ ಲಕ್ಷಣಗಳೆರಡು. ಒಂದು ಇಂದ್ರಿಯ ಸುಖ ಭೋಗದ ಆಸಕ್ತಿ ಎರಡನೆಯದಾಗಿ ಇದರಿಂದಾಗುವ ಭ್ರಾಂತಿ ಅಥವಾ ಮರವು. ಇದು ರಜೋಗುಣ ಮತ್ತು ತಪೋಗುಣಗಳು ಬಲಿಷ್ಟವಾಗಿರುವ ಸ್ಥಿತಿ. ಈ ವಿಷಯ ಕವಿ ತೋರಿಸಿರುವ ನಾಟಕ ಶಿಲ್ಪದಲ್ಲಿ ಹೇಗೆ ಧ್ವನಿತವಾಗುತ್ತದೆ ಎಂಬುದನ್ನು ಗಮನಿಸೋಣ.
ಪ್ರಥಮಾಂಕದಲ್ಲಿ ಜಿಂಕೆಯನ್ನು ಬಾಣದಿಂದ ಹೊಡೆಯಲು ಹಿಂಬಾಲಿಸುತ್ತಿದ್ದ ದುಷ್ಯಂತನು ರಥದಲ್ಲಿ ಬಹಳ ವೇಗದಿಂದ ಮುಂದೆ ಸಾಗುತ್ತಿದ್ದಂತೆ ಚಿತ್ರಿಸಲ್ಪಟ್ಟಿದ್ದಾನೆ. ಈ ವೇಗವು ರಜೋಗುಣಕ್ಕೆ ಸೂಚಕವಾಗಿದೆ. ಇದರಲ್ಲಿ ಸತ್ಯವನ್ನು ಬಚ್ಚಿಡುವ ತಮೋಗುಣದ ಅಂಶವೂ ಸೇರಿಕೊಂಡಿದೆ. ಸ್ವಭವೋಕ್ತಿ ಎಂಬ ಅಲಂಕಾರದಿಂದ ಅತ್ಯಂತ ರಮ್ಯವಾಗಿರುವ, ರಥವೇಗವನ್ನು ವರ್ಣಿಸುವ, ಕೆಳಗಿನ ಪದ್ಯವನ್ನು ನೋಡಿ.
ಆವುದು ನೋಡೆ ಸೂಕ್ಷಮದೆ ವಿಸ್ತೃತಮಪ್ಪುದು;
ಮಧ್ಯದಲ್ಲಿ ತಾ ನಾವುದು ಭಿನ್ನಮಾಗಿರುವುದಂತದೆ ಜೋಡಿಸಿದಂತೆ
ತೋರ್ಪುದೈ!
ಆವುದು ವಕ್ರಮಿರ್ಪುದದೆ ತಾಂ ಋಜುವಾಗುತೆ
ಕಾಣ್ಬುದನ್ನ
ಕಣ್ಣಾವುದುಮಿಲ್ಲ ದೂರದೆ ಚಣಂ ರಥವೇಗದೆ
ಪಾರ್ಶ್ವದಲ್ಲಿಯುಂ,
ರೈಲು, ಬಸ್ಸು, ಮುಂತಾದ ವೇಗವಾಗಿ ಓಡುವ ವಾಹನಗಳಲ್ಲಿ ಪ್ರಯಾಣ ಮಾಡುವಾಗ ನಮಗಾಗುವ ಅನುಭವವನ್ನು ವರ್ಣಿಸಿರುವುದು ಆಶ್ಚರ್ಯಕರ. ನಾವು ಇಂತಹ ವಾಹನದಲ್ಲಿ ಪ್ರಯಾಣ ಮಾಡುವಾಗ ಎದುರುಗಡೆ ದೂರದಲ್ಲಿರುವ ಒಂದು ವಸ್ತು ಚಿಕ್ಕದಾಗಿ ಕಂಡುಬಂದು ಅದೇ ಅತ್ಯಲ್ಪ ಕಾಲದಲ್ಲಿ ದೊಡ್ಡದಾಗಿ ಬೆಳೆದಂತೆ ಕಾಣುವುದು ಎಲ್ಲರ ಅನುಭವದಲ್ಲೂ ಇದೆಯಷ್ಟೆ. ಹಾಗೆಯೆ ಮಧ್ಯದಲ್ಲಿ ಭಿನ್ನವಾಗಿರುವ ವಸ್ತುಗಳು ಜೋಡಿಸಿರುವಂತೆಯೇ ಕಂಡುಬರುತ್ತವೆ. ಈಗ ದೂರದಲ್ಲಿರುವ ವಸ್ತು ಮರುಕ್ಷಣದಲ್ಲಿ ಹತ್ತಿರಕ್ಕೆ ಬಂದು ಬಿಡುತ್ತದೆ. ಆದರೆ ಅದು ಹತ್ತಿರದಲ್ಲಿಯೂ ನಿಲ್ಲುವುದಿಲ್ಲ. ತಕ್ಷಣ ನಮ್ಮ ಹಿಂಭಾಗಕ್ಕೆ ಓಡಿಹೋಗುತ್ತೆ. ಮೇಲಿನ ಪದ್ಯದಲ್ಲಿರುವ ರಥವೇಗದ ವರ್ಣನೆ ಇದೇ.
ಈ ಪದ್ಯ ಕಾಮದ ಸ್ವಭಾವವನ್ನು ಎಷ್ಟು ಚನ್ನಾಗಿ ತಿಳಿಸುತ್ತದೆ ಎಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಮನುಷ್ಯನು ಕಾಮಿಸುವ ವಸ್ತು ಆದಷ್ಟು ಚಿಕ್ಕದಾಗಿದ್ದರೂ, ಕೋರಿಕೆಯ ಉತ್ಕಟತೆಯಿಂದ ಅದೇ ತನ್ನ ಸರ್ವಸ್ವವು, ಅದನ್ನು ಹೊಂದದಿದ್ದರೆ ಬದುಕಿರಲು ಸಾಧ್ಯವಿಲ್ಲ ಎನ್ನುವಷ್ಟು ದೊಡ್ಡದಾಗಿ ಬಿಡುತ್ತದೆ. ಸಂಬಂಧವಿಲ್ಲದ ವಸ್ತುಗಳ ನಡುವೆ ಸಂಬಂಧವಿದ್ದಂತೆ ತೋರುತ್ತದೆ. ವಕ್ರವಾಗಿರುವ(ಧರ್ಮ ವಿರುದ್ಧವಾಗಿರುವ) ಕೆಲಸಗಳು ಸಹ ಋಜು(ಧರ್ಮ ಸಂಮತ)ವೆಂಬಂತೆ ತೋರುತ್ತವೆ. ಆಸೆಪಟ್ಟ ವಸ್ತು ಲಭಿಸಿದರೆ ಅದು ತನ್ನ ಹತ್ತಿರ ಒಂದು ಕ್ಷಣವೂ ಇರುವುದಿಲ್ಲ ಅಂದರೆ ಅದರ ಅನುಭವದಿಂದ ತೃಪ್ತಿ ಉಂಟಾಗುವುದಿಲ್ಲ. ಕಾಮಿತದ ಸಿದ್ಧಿಯಿಂದ ಕಾಮವು ವೃದ್ಧಿ ಆಗುತ್ತದೆಯೇ ಹೊರತು ಶಾಂತವಾಗುವುದಿಲ್ಲ. ಎಂಬ ಭಾವಗಳು ಮೇಲಿನ ಪದ್ಯದಲ್ಲಿ ಧ್ವನಿತವಾಗುತ್ತವೆ.
ಮೊದಲನೆಯ ಅಂಕದಲ್ಲಿ ದುಷ್ಯಂತನು ರಥದಲ್ಲಿ ಎಷ್ಟು ವೇಗವಾಗಿ ಹೋಗುತ್ತಿದ್ದರೂ ಭೂಮಿಯಿಂದ ಒಂದು ಅಂಗುಲದಷ್ಟೂ ಮೇಲಕ್ಕೇಳುವುದಿಲ್ಲ. ಅಂದರೆ ಕಾಮದ ಹಂತದಲ್ಲಿರುವವರ ಪ್ರಯಾಸದಿಂದ ಅವರ ಮಟ್ಟ ಸ್ವಲ್ಪವೂ ಏರುವುದಿಲ್ಲವೆಂಬ ಭಾವ. ಇದೇ ದುಷ್ಯಂತನು ಏಳನೆಯ ಅಂಕದಲ್ಲಿ ಇಂದ್ರನ ರಥದಲ್ಲಿ ಕುಳಿತುಕೊಂಡು ಹಿಂತಿರುಗುವಾಗ ಸಹ ರಥವೇಗದ ವರ್ಣನೆ ಮಾಡುತ್ತಾನೆ. ಈ ವರ್ಣನೆಯೊಂದಿಗೆ ಮೇಲೆ ಹೇಳಿರುವ ರಥವೇಗದ ವರ್ಣನೆಯನ್ನು ಹೋಲಿಸಿದರೆ ಪ್ರಥಮಾಂಕದ ವರ್ಣನೆಯಲ್ಲಿ ಸತ್ಯವಾಗಿರುವುದು ಬೇರೆ ತರಹ ಕಂಡುಬರುವುದೂ, ಸಪ್ತಮಾಂಕದ ವರ್ಣನೆಯಲ್ಲಿ ದುರದಿಂದ ಕಾಣಲಾರದ ಸತ್ಯ ಸ್ವರೂಪ ಬರಬರುತ್ತ ಸ್ಪಷ್ಟವಾಗುವುದೂ ಕಂಡು ಬರುತ್ತದೆ. ಈ ವಿಷಯವನ್ನು ಮುಂದೆ ಇನ್ನೂ ವಿಪುಲವಾಗಿ ಚರ್ಚಿಸಲಾಗುವುದು.
ಬೇಟೆ ಎಂಬ ವ್ಯಸನದಲ್ಲಿ ಮುಳುಗಿದ್ದ ದುಷ್ಯಂತನು ಹೊಡೆಯಲು ಹೋಗುತ್ತಿದ್ದ ಮೃಗ ಆಶ್ರಮ ಮೃಗ. ಆಶ್ರಮದ ಮುನಿಗಳು ಇದನ್ನು ನೋಡಿ ಗಾಬರಿಯಿಂದ ದುಷ್ಯಂತನಿಗೆ ಓಹೋ, ಮಹಾರಾಜನೇ, “ಆಶ್ರಮ ಮೃಗವಿದು, ಕೊಲ್ಲತಕ್ಕದ್ದಲ್ಲ” ಎಂದು ಎಚ್ಚರಿಸುವರು. ಕಾಮದ ಪ್ರಭಾವದಲ್ಲಿರುವವನಿಗೆ ಧರ್ಮದೃಷ್ಟಿ ತಪ್ಪುವ ಸಂಭವವಿದೆ ಎಂಬ ಉಪದೇಶವಿಲ್ಲದೆ, ಮುನಿಗಳು “ಜನಪ, ದೀನರಂ ಪೊರೆವುದಕಲ್ಲದೆ ನಿರಪರಾಧ ಜಂತುವ ಸದೆಯಲ್ ನಿಮಗಲ್ತು ಶಸ್ತ್ರನವನೀತಳದೊಳ್” ಎಂದು ಹೇಳುವರು. ಧರ್ಮಿಷ್ಟನಾದ ದುಷ್ಯಂತನು ಅವರ ಮಾತನ್ನು ಕೇಳಿ ಬಾಣವನ್ನಿಳಿಸುವನು. ಅದಕ್ಕೆ ಸಂತೋಷಪಟ್ಟು ಮುನಿಗಳು ಹೀಗೆ ಹೇಳುವರು-
ಖ್ಯಾತ ಪುರುರಾಜ ಕುಲಸಂ
ಜಾತಂ ನೀಂ, ನಿನಗೆ ವಿನಯವಿಂತಿದು ಸಹಜಂ
ಈ ತೆರದ ಗುಣವನಾತಂ ವಿ
ನೀತಾತ್ಮನ ಚಕ್ರವರ್ತಿ ಪುತ್ರನ ಪಡೆಯೈ
ವಿನಯದ ಪ್ರಾಶಸ್ತ್ಯವನ್ನೂ ವಿನಯಶೀಲನಾದವನು ಚಕ್ರವರ್ತಿ ಆದರೆ ಪ್ರಪಂಚಕ್ಕಾಗುವ ಶುಭವನ್ನೂ ಸೂಚಿಸುವ ಈ ಪದ್ಯದಲ್ಲಿ “ದಮ”ದ ಸ್ತುತಿ ತಾನೇ ಇರುವುದು?
1-12-1983
೧. ದಮ
ಆಶ್ರಮ ಮೃಗದ ವಧೆಯನ್ನು ನಿಲ್ಲಿಸಿ, ಬೇಟೆಯ ವ್ಯಸನವನ್ನು ಬಿಟ್ಟು ಕಣ್ವರ ಆಶ್ರಮವನ್ನು ಪ್ರವೇಶಿಸಿದ ದುಷ್ಯಂತನು ‘ಕಾಮ’ದ ತಮೋಗುಣವನ್ನು ರಜೋಗುಣವನ್ನೂ ಬಿಟ್ಟು ಪ್ರೇಮದ ರಜೋಗುಣ ಮತ್ತು ಸತ್ವಗುಣಗಳಿಗೆ ಪ್ರವೇಶಿಸುವನು. ಮೊದಲ ನಾಲ್ಕು ಅಂಕಗಳ ಕಥೆ ಎಲ್ಲಾ ನಡೆಯುವುದು ಕಣ್ವಾಶ್ರಮದಲ್ಲೇ. ಈ ನಾಲ್ಕು ಅಂಕಗಳನ್ನು ಪರಿಶೀಲಿಸಿದರೆ ಇವುಗಳಲ್ಲಿ ಕಾಣುವುದು ಮುಖ್ಯವಾಗಿ ಪ್ರೇಮದ ಉನ್ನತ ಮಟ್ಟ. ನೇಮದ ಅತ್ಯುನ್ನತ ಮಟ್ಟವನ್ನು ನಾವು ಕಾಣುವುದು ಏಳನೆಯ ಅಂಶದಲ್ಲಿನ ಮಾರೀಚ ಋಷಿಯ ಆಶ್ರಮದ ವರ್ಣನೆಯಲ್ಲಿ. ಕಣ್ವಾಶ್ರಮದ ವರ್ಣನೆಗೂ ಮಾರೀಚಾಶ್ರಮದ ವರ್ಣನೆಗೂ ಇರುವ ಈ ವ್ಯತ್ಯಾಸವನ್ನು ಗಮನಿಸಿ, ಇದರಲ್ಲಿ ಕವಿಯು ತೋರಿಸಿರುವ ಶಿಲ್ಪವನ್ನೂ ಸಂದೇಶವನ್ನು ಅರ್ಥಮಾಡಿಕೊಂಡು ಶಕುಂತಲಾ ದುಷ್ಯಂತರ ಪ್ರಣಯಕಥೆಯನ್ನು ಆಮೇಲೆ ಸವಿನೋಡೋಣ.
ಕಣ್ವಾಶ್ರಮವಿರುವುದು ಅರಣ್ಯದಲ್ಲಿ. ಅಲ್ಲಿ ಸ್ತ್ರೀಪುರುಷರೂ, ವೃದ್ಧರು, ಯುವತೀ ಯುವಕರೂ, ಎಲ್ಲರು ಇದ್ದರೂ, ಎಲ್ಲರು ಕೆಲವು ನಿಯಮಗಳನ್ನನರುಸರಿಸುವರು. ಇದಕ್ಕೇ ತಪಸ್ಸೆಂದು ಹೆಸರು. ಅಹಿಂಸೆ, ಪ್ರಕೃತಿಯಲ್ಲಿನ ಪ್ರೇಮ, ಅಮಾಯಕತೆ, ಶರೀರ ಪೋಷಣೆಗೆ ಬೇಕಾದಷ್ಟು ಮಾತ್ರ ಅಡವಿಯಲ್ಲಿ ತಾನೇ ಬೆಳೆಯುವ ನೀವಾರ, ಕಂದ ಮೂಲಗಳು, ಹಣ್ಣುಗಳು ಇಂಥವುಗಳೆ ಆಹಾರ, ನಾರುಡೆಗಳನ್ನು ಧರಿಸುವಿಕೆ, ಶುಚಿತ್ವ, ಅಗ್ನಿ ಪರಿಚರ್ಯೆ, ವೇದಾಧ್ಯಯನ, ಯಜ್ಞಗಳನ್ನು ಮಾಡುವುದು, ಭೋಗಲಾಲಸೆಯನ್ನು ಬಿಡುವುದು, ಮುಂತಾದುವು ಈ ತಪಸ್ಸಿನ ಲಕ್ಷಣಗಳು. ಸತ್ವಗುಣದ ಲಕ್ಷಣಗಳೆಂದರೆ ಇವು ತಾನೆ? ಇಲ್ಲಿ ಪರಸ್ಪರ ಪ್ರೇಮ ಪರಿಶುದ್ಧವೂ, ವಿಶಾಲವೂ ಆದದ್ದು. ಕಣ್ವರ ತಪೋವನದ ವರ್ಣನೆಯಲ್ಲಿ ವಿಕಾರಗಳಿರಲಿಲ್ಲವೆಂಬ ವರ್ಣನೆಯು ಬಂದಿದ್ದರೂ, ಸತ್ವಸಂಬಂಧವಾದ ಪ್ರೇಮದ ವಿಕಾರಗಳು ಅಂದರೆ ಸಂತೋಷ ದುಃಖಗಳು ಅಲ್ಲಿದ್ದವು. ಆದುದರಿಂದ ಮೊದಲು ನಾಲ್ಕು ಅಂಕಗಳಲ್ಲಿ ನಾವು ಕಾಣುವುದು ಪ್ರೇಮದ ಮಟ್ಟವನ್ನೇ.
ಆಶ್ರಮದ ಪ್ರಕೃತಿಯನ್ನು ವರ್ಣಿಸುವ ಈ ಪದ್ಯವನ್ನು ನೋಡಿ-
ಅರೆಯ ಸೂಚಿಕುಂ ಗಿಳಿಗಳಿರ್ಪಗೆ ಕೋಟರದಿರಂ
ಜಗುಳ್ದ ನೀ
ವಾರಮು ಮಿಂಗುದೀ ಫಲ ವಿಭೇದದೆ
ನುಡಿಣ್ಪದಿರ್ಪಕಲ್ಗುಳುಂ!
ತೇರಿನ ಶಬ್ದಮಂ ಸಹಿಸಿ ನಂಬುಗೆಯಿಂ ಸುಳಿವೇಣ
ಬೃಂದಮುಂ
ನಾರುಡೆ ಯಂಚಿನಿಂದಿಳಿದ ನೀರ್ಗೆರೆಯಾಂತ
ತಟಾತಮಾರ್ಗಮುಂ!!
ಅಡವಿಯಲ್ಲಿ ಒಂದು ಜಲಾಶಯ. ದೊಡ್ಡ ಮರಗಳ ನಡುವೆ ಅಲ್ಲಲ್ಲಿ ತಾನೇ ಬೆಳೆದ ‘ನೀವಾರ’ವೆಂಬ ಭತ್ತದ ಬೆಳೆ. ದೊಡ್ಡ ಮರಗಳ ಪೊಟರೆಗಳಲ್ಲಿ ವಾಸಿಸುವ ಗಿಳಿಗಳು ಮರಿಗಳಿಗೆ ಉಣ್ಣಿಸಲು ತಂದ ನೀವಾರ ಧಾನ್ಯದಲ್ಲಿ ಕೆಳಕ್ಕೆ ಬಿದ್ದ ಕಾಳುಗಳು ಕಾಣಿಸುತ್ತಿರುವುವು. ಕೆರೆಯಲ್ಲಿ ಸ್ನಾನ ಮಾಡಲು ಬಂದ ಆಶ್ರಮವಾಸಿಗಳು ಅಲ್ಲಿಯೆ ಬೆಳೆದ ಇಂಗುದಿಯ(ಗಾರೇ ಗಿಡದ) ಹಣ್ಣುಗಳನ್ನು ಕಲ್ಲುಗಳ ಮೇಲೆ ಜಜ್ಜಿ ಅದರಲ್ಲಿನ ಎಣ್ಣೆಗಾಗಿ ತಲೆಗೆ ಇಟ್ಟುಕೊಳ್ಳುತ್ತಿದ್ದರು. ಕಲ್ಲುಗಳ ಮೇಲೆ ಜಜ್ಜಿದ ಜಾಗದಲ್ಲಿ ಎಣ್ಣೆಯ ಗುರ್ತುಗಳಿದ್ದವು. ಕಲ್ಲುಗಳು ಸಹ ನುಣ್ಣಗಾಗಿದ್ದವು. ಅಲ್ಲಿನ ಜಿಂಕೆಗಳ ಗುಂಪುಗಳು ಆಶ್ರಮವಾಸಿಗಳೊಡನೆ ಕಲೆತು ಜೀವಿಸುತ್ತಿದ್ದುದರಿಂದ ಬೇರೆ ನಿರ್ಜನಾರಣ್ಯಗಳ ಜಿಂಕೆಗಳಂತೆ ಶಬ್ದವಾದ ಕೂಡಲೇ ಬೆದರುತ್ತಿರಲಿಲ್ಲ. ಅವು ತೇರಿನ ಶಬ್ದವನ್ನು ಲೆಕ್ಕಿಸದೆ ಸುಳಿಯುತ್ತಿದ್ದವು. ಆಶ್ರಮವಾಸಿಗಳು ನಾರುಡೆಗಳನ್ನು ಧರಿಸಿದವರಾದುದರಿಂದ ಸ್ನಾನ ಮಾಡಿದ ಮೇಲೆ ಅವರು ಜಲಾಶಯಗಳಿಂದ ಕುಟೀರಗಳಿಗೆ ಹಿಂತಿರುಗುವವರೆಗೂ ವಲ್ಕಲಗಳಿಂದ ನೀರು ಸೋರುತ್ತಲೇ ಇದ್ದು ಆ ನೀರಿನ ಗೆರೆಗಳು ದಾರಿಯುದ್ದಕ್ಕೂ ಕಂಡು ಬರುತ್ತಿದ್ದವು.
ಎರಡನೆಯ ಅಂಕದಲ್ಲಿ, ಬೇಟೆಯನ್ನು ನಿಲ್ಲಿಸಿ ದುಷ್ಯಂತನು ಹೇಳುವ ಈ ಪದ್ಯವನ್ನು ನೋಡಿ-
ಮುಳುಗುಗೆ ಕೋಡುಗುಟ್ಟುತೆ ಜಲಾಶಯ
ಮಧ್ಯದೆ ಕಾಡಕೋಣಗಳ್,
ನೆಲೆಲೊಳೆ ಮೆಲ್ಕಮಾಡುಗೆ ಮೃಗಾವಳಿ ಸೇರುತೆ,
ಸೂಕರಾಳಿ
ಪಲ್ವಲದೊಳೆ ಮುಸ್ತೆಯಂ ಬಗಿದು ಕೀಳುಗೆ,
ನೆಮ್ಮದಿ ವೆತ್ತು ವಿಶ್ರಮಂ
ದಳೆಗೆ ಮದೀಯಚಾಪಮಿದುವಂ ಶಿಥಿಲೀಕೃತ
ರಜ್ಜು ಬಂಧನಂ!!
ಜಲಾಶಯಗಳ ತಣ್ಣೀರಿನಲ್ಲಿ ಕಾಡ ಕೋಣಗಳು ಕೊಂಬುಗಳಿಂದ ಕುಟ್ಟುತ್ತಾ ಸ್ವೇಚ್ಛೆಯಾಗಿ ಮುಳುಗಲಿ, ಮರಗಳ ನೆರಳಲ್ಲಿ ಜಿಂಕೆಗಳು ಸೇರಿ ಮೆಲಕು ಹಾಕುತ್ತಿರಲಿ, ಅಲ್ಪವಾಗಿ ನೀರು ನಿಂತಿರುವ ಪ್ರದೇಶಗಳಲ್ಲಿ ಬೆಳೆದಿರುವ ‘ಮುಸ್ತೆ’ ಗೆಡ್ಡೆಗಳನ್ನು ಕಾಡುಹಂದಿಗಳು ಬೇರ್ಪಡಿಸಿ ಕೀಳಲಿ. ನನ್ನ ಬಿಲ್ಲು ವಿಶ್ರಾಂತಿಯನ್ನು ಪಡೆಯಲಿ.
ಮೇಲೆ ಕೊಟ್ಟ ವರ್ಣನೆಗಳಿಂದ ದುಷ್ಯಂತನಲ್ಲಿ ಪ್ರಕೃತಿಯಲ್ಲಿನ ಪ್ರೇಮದ ಅವಿರ್ಭಾವ ಸೂಚಿತವಾಗುತ್ತದೆ. ಸಹಜವಾಗಿ, ಮತ್ತು ವ್ಯಾಪ್ತವಾಗಿರುವ ಪ್ರೇಮವೇ ನಿಜವಾದ ಪ್ರೇಮ. ಈ ನಿಜವಾದ ಪ್ರೇಮವಿರುವವರಲ್ಲಿ ಪ್ರಕೃತಿಯ ಸರ್ವ ಭೂತಗಳ ವಿಷಯದಲ್ಲೂ ಪ್ರೇಮ ಭಾವನೆ ಸಹಜವಾಗಿ ಉಂಟಾಗುತ್ತದೆ. ಇದು ಕಾಮದಂತೆ, ಸಂಕುಚಿತವೂ, ಸ್ವಾರ್ಥ ಸೀಮಿತವೂ ಅಲ್ಲ. ಪ್ರೇಮದ ಮಟ್ಟಕ್ಕೆ ಏರುವ ಮಾನವರಲ್ಲಿ ಪ್ರಕೃತಿಯನ್ನನುಸರಿಸಿ ಜೀವಿಸುವ ವಿಧಾನದಲ್ಲಿ ಒಲವು ಹೆಚ್ಚಾಗಿರುತ್ತದೆ.
ಕಣ್ವಾಶ್ರಮಕ್ಕೆ ಸಂಬಂಧಿಸಿದ ಕಥೆಯಲ್ಲಿ ನಾವು ನೋಡುವುದು ಈ ಪ್ರೇಮದ ಬೆಳಕನ್ನೇ. ಪ್ರೇಮವಿಲ್ಲದ ಮೇನಕಾ ಕೌಶಿಕರು ಬಿಟ್ಟು ಹೋದ ಮಗುವನ್ನು ಪ್ರಕೃತಿಯಲ್ಲಿನ ಅಂಗವಾದ ಪಕ್ಷಿಗಳು ಪ್ರೇಮದಿಂದ ಸಲುಹಿದವು. ಆ ಮಗುವನ್ನು ಆಜನ್ಮ ಬ್ರಹ್ಮಚಾರಿಯಾದ ಕಣ್ವ ಋಷಿ ಪ್ರೇಮದಿಂದ ತಂದು ಬೆಳೆಸಿದನು. ಆ ಶಕುಂತಲೆಯಲ್ಲೇ ಆತನಿಗೆ ಪಂಚಪ್ರಾಣಗಳು. ಶಕುಂತಲೆಗೆ ಸಾಕು ತಂದೆಯಲ್ಲೂ ಅಷ್ಟೇ ಪ್ರೀತಿ. ಆಕೆಯ ಹೃದಯ ಪ್ರೇಮದ ಸ್ವರೂಪ. ಆಶ್ರಮದ ವೃಕ್ಷಗಳಲ್ಲಿಯು ಮೃಗ ಪಕ್ಷಿಗಳಲ್ಲಿಯು ಆಕೆಯ ಪ್ರೇಮ ಅಸದೃಶ. ಆಕೆಗೂ ಸಖಿಯರಾದ ಅನುಸೂಯಾ ಪ್ರಿಯಂವದೆಯರಿಗೂ ನಡುವೆ ಇರುವ ಪ್ರೇಮವಂತೂ ಯಾವ ಅಕ್ಕತಂಗಿಯರ ಪ್ರೇಮವನ್ನು ಮೀರಿದ್ದು. ಶಕುಂತಲೆಯನ್ನು ಗಂಡನ ಮನೆಗೆ ಕಳುಹಿಸುವ ನಾಲ್ಕನೇ ಅಂಕವಂತೂ ಪವಿತ್ರ ಪ್ರೇಮಕ್ಕೆ ಹಿಡಿದ ಕನ್ನಡಿಯೇ ಸರಿ. ಈ ವಿಷಯ ವಿಸ್ತಾರವಾಗಿ ಮುಂದೆ ಚರ್ಚಿಸಲಾಗುವುದು.
ಏಳನೇ ಅಂಕದಲ್ಲಿನ ಮಾರೀಚಾಶ್ರಮದ ವರ್ಣನೆ ನೇಮದ ಅತ್ಯುನ್ನತ ಮಟ್ಟವನ್ನು ತೋರಿಸುತ್ತ, ದಮದ ಸಂದೇಶದ ಘೋಷಣೆ ಮಾಡುತ್ತ ಅಸಮಾನವಾಗಿದೆ ಎಂಬುದಕ್ಕೆ ಈ ಕೆಳಗಿನ ಎರಡು ಪದ್ಯಗಳನ್ನು ನೋಡಿ-
ಅರೆಮೆಯ್ ವಲ್ಕೀಕದೊಳ್ ತಾಂ ಪುದುಗಿರೆ
ಯುರದಲ್ಲೊಪ್ಪೆ ಸರ್ಪತ್ವಚಂಗಳ್
ಕೊರಲೊಳ್ ಜೀರ್ಣಂ ಲತಾಮಂಡಲಮಲೆಯೆ,
ಕರಂ ಸ್ಕಂದದೊಳ್ ಪಕ್ಷಿಗಳ್
ಕಟ್ಟೆರೆಗೂಡಂ ನೀಳ್ದಬಂಬಲ್ಜಡೆ ನೆರೆಮೆರೆಯಲ್
ಸ್ಥಾಣುವೋಲ್ ನಿಶ್ಚಲತ್ವಂ
ಬೆರಸಾದಂ ಸೂರ್ಯಬಿಂಬಕ್ಕಭಿಮುಖನೆನಿಪೀ
ಮೌನಿ ತಾನಿರ್ಪತಾಣಂ!!
ಆವರಿಸಿರ್ದ ಕಲ್ಪತರು ಕಾನನದೊಳ್ ಪವನಾಶನಂ,
ಮಣಿ ಎಗ
ಗ್ರಾವದೆ ಜಾನಮಂತೆ ಕನಕಾಬ್ಜ ಸರೋವರದಲ್ಲಿ
ಮಜ್ಜನಂ!
ದೇವವಧೂ ಸಮೀಪದೊಳೆ ಸಂಯಮಮೊಪ್ಪೆ
ಪೆರರ್ ಮುನೀಂದ್ರರೊಲ್ದಾವುದ
ಕಾಂಕ್ಸಿಪರ್ ತಪಗಳಿಂ ತಪಮಿರ್ದರಲ್ಲಿ ತಾಮಿವರ್!!
1-1-1984
೧. ದಮ
ಮೇಲಿನ ಪದ್ಯಗಳಲ್ಲಿರುವುದು ದೇವಲೋಕದಲ್ಲಿನ ಮುನಿಗಳ ತಪಸ್ಸಿನ ವರ್ಣನೆ. ಒಬ್ಬ ಮುನಿ ಸೂರ್ಯ ಬಿಂಬಕ್ಕೆ ಅಭಿಮುಖವಾಗಿ ನಿಂತುಕೊಂಡು ತಪಸ್ಸು ಮಾಡುತ್ತಿದ್ದಾನೆ. ಆತನು ಮೋಟು ಮರದಂತೆ ನಿಶ್ಚಲನಾಗಿದ್ದಾನೆ. ಆತನ ಶರೀರದ ಕೆಳಗಿನ ಅರ್ಧಭಾಗದವರೆಗೂ ಹುತ್ತ ಬೆಳೆದಿದೆ. ಎದೆಯ ಮೇಲೆ ಹಾವಿನ ಪರೆಗಳು ಅಂಟಿಕೊಂಡುವೆ. ಕೊರಳಿನ ಸುತ್ತಲೂ ಬಳ್ಳಿಗಳು ಸುತ್ತಿಕೊಂಡಿವೆ. ಹೆಗಲ ಮೇಲೆ ಹಕ್ಕಿಗಳು ಗೂಡುಕಟ್ಟಿವೆ. ಆತನ ಉದ್ದವಾದ ಜಡೆಗಳು ಹೆಣೆದುಕೊಂಡಿವೆ. ಇನ್ನೊಂದು ಕಡೆ ದೇವಲೋಕದ ಮುನಿಗಳು ಏನು ಬಯಸಿದರೆ ಅದನ್ನು ಕೊಡಬಲ್ಲ ಕಲ್ಪವೃಕ್ಷಗಳಿಂದ ತುಂಬಿರುವ ವನದಲ್ಲಿ ಕೇವಲ ಗಾಳಿಯನ್ನೇ ಸೇವಿಸುತ್ತ ತಪಸ್ಸು ಮಾಡುತ್ತಿದ್ದಾರೆ. ರತ್ನಶಿಲೆಗಳ ಮೇಲೆ ಕುಳಿತುಕೊಂಡು ಅವರು ಧ್ಯಾನ ಮಾಡುತ್ತಿದ್ದಾರೆ. ಚಿನ್ನದ ತಾವರೆ ಹೂಗಳಿಂದ ರಾರಾಜಿಸುತ್ತಿರುವ ಸರೋವರದಲ್ಲಿ ಅವರು ಮಾಡುವುದು ಕೆವಲ ಧರ್ಮಸ್ನಾನ. ಜಲಕ್ರೀಡೆಯಲ್ಲ. ದೇವಲೋಕದ ಸುಂದರಿಯರ ನಡುವೆ ಇದ್ದರೂ ಅವರು ಮಹಾನಿಯಮದಿಂದಿರುವರು. ಇತರ ಮುನಿಗಳು ಯಾವ ದೇವ ಲೋಕ ಸುಖವನ್ನು ಬಯಸಿ ತಪಸ್ಸು ಮಾಡುವರೋ ಅಂಥ ಸುಖ ಕೈಯಲ್ಲಿದ್ದರೂ ಅದನ್ನು ಬಿಟ್ಟು ಅಲ್ಲಿನ ಮುನಿಗಳು ಬಹಳ ನಿಯಮದಿಂದ ತಪಸ್ಸು ಮಾಡುತ್ತಿದ್ದಾರೆ.
ಕಣ್ವಾಶ್ರಮದಲ್ಲಿಯು ತಪಸ್ವಿಗಳಿದ್ದಾರೆ. ಆದರೆ ಕವಿ ಕಣ್ವಾಶ್ರಮವನ್ನು ಪ್ರೇಮದ ನೆಲೆಯಾಗಿಯೇ ವರ್ಣಿಸಿದ್ದಾನೆ. ಈ ನಾಟಕದ ಶಿಲ್ಪಕ್ಕೆ ಅದೇ ಉಚಿತ. ಈ ಪ್ರೇಮವು ನೇಮದ ಪರಮಾವಧಿಯನ್ನು ಸೇರಬೇಕೆಂಬ ತತ್ವವನ್ನು ದೇವಲೋಕದ ಮುನಿಗಳ ತಪಸ್ಸಿನ ವರ್ಣನೆ ಸೂಚಿಸುತ್ತಿದೆ. ಈ ನಾಟಕದಲ್ಲಿನ ಶಿಲ್ಪ ಕಾಮದಿಂದ ಪ್ರೇಮಕ್ಕೆ, ಅಲ್ಲಿಂದ ನೇಮಕ್ಕೆ ಕ್ರಮವಾಗಿಯೇರಬೇಕೆಂಬ ತತ್ವವನ್ನು ಸ್ಪಷ್ಟವಾಗಿ ತೋರಿಸುತ್ತಿದೆ.
ಕಾಮವು ಸ್ವಾಭಾವಿಕವಾದರೂ ಅದು ಮಿತಿ ಮೀರಿದರೆ ಅಪವಿತ್ರವಾದದ್ದು. ನೇಮವು ಮಾನವ ಸ್ವಭಾವವನ್ನೇ ಬದಲಾಯಿಸಿ ಮಾನವನನ್ನು ದೇವನನ್ನಾಗಿ ಮಾಡುವಂತಹುದು.
ಕಾಮದಲ್ಲಿ ಕೇವಲ ಸ್ವಾರ್ಥವಿದೆ. ಪ್ರೇಮದಲ್ಲಿ ಸ್ವಾರ್ಥವೂ ಪರಾರ್ಥವೂ ಎರಡೂ ಇವೆ. ನೇಮದಲ್ಲಿ ಪರಾರ್ಥ ಒಂದೇ ಇದೆ.
ಮುಂದೆ ಶಕುಂತಲಾ ದುಷ್ಯಂತರ ಪ್ರಣಯ ಕಥೆಯಲ್ಲಿ ಕಾಮವು ಪ್ರೇಮವಾಗಿ ಪರಿಣಾಮವಾಗಿ ಹೊಂದುವ ಬಗೆಯನ್ನುವಿಶ್ಲೇಷಿಸಿ ನೋಡಬೇಕಾಗಿದೆ. ದುಷ್ಯಂತನು ಮೊದಲು ನೋಡಿದ್ದು ಒಬ್ಬ ಶಕುಂತಲೆಯನ್ನು ಮಾತ್ರವಲ್ಲ. ಆತ ನೋಡಿದ್ದು ಮೂವರು ತಪಸ್ವಿ ಕನ್ಯೆಯರನ್ನು, ಅವರು ಶಕುಂತಲೆ ಮತ್ತು ಆಕೆಯ ಸಖಿಯರಾದ ಅನುಸೂಯ ಮತ್ತು ಪ್ರಿಯಂವದೆ. ದುಷ್ಯಂತನು ರಾಣಿವಾಸದಲ್ಲಿ ಅನೇಕ ರೂಪವತಿಯರನ್ನು ನೋಡಿರುವನು. ಈ ಮೂವರ ರೂಪವನ್ನು ನೋಡಿದ ಕೂಡಲೇ ಆತನ ಮನಸ್ಸನ್ನು ಆಕರ್ಷಿಸಿದ್ದು ಅವರ ರೂಪದಲ್ಲಿನ ಸ್ವಭಾವ ಮನೋಹರತೆ. ಆತನು ಕೂಡಲೇ ಅದನ್ನು ಮೆಚ್ಚುತ್ತಾ ಹೀಗೆ ಹೇಳುತ್ತಾನೆ:-
ಆಹಾ! ಇವರ ರೂಪು ಸ್ವಭಾವದಿಂದ ಮನೋಹರವಾಗಿರುವುದು.
ಓವೋ ತಪೋವನವಧುಗಳ
ಲಾವಣ್ಯಂ ರಾಣಿವಾಸ ಕರಿದೆನಪಡೆಯ
ಲ್ಯೇವೇಳ್ಡ ಪೆನುದ್ಯಾದಲ
ತಾವಳಿ ವನಲತೆಗಳಿಂ ತಿರಸ್ಕೃತವಲ್ತೇ
ಆಹಾ! ತಪೋವನದ ಕನ್ಯೆಯರ ಲಾವಣ್ಯ ರಾಣಿವಾಸದಲ್ಲಿ ಕಾಣಿಸುವುದಿಲ್ಲ. ಉದ್ಯಾನದಲ್ಲಿ ಲತೆಗಳನ್ನು ಎಷ್ಟು ಚನ್ನಾಗಿ ಬೆಳೆಸಿದ್ದರೂ, ಅರಣ್ಯಗಳಲ್ಲಿ ತಾವಾಗಿ ಬೆಳೆದಿರುವ ಲತೆಗಳ ಸೌಂದರ್ಯ ಅವುಗಳಲ್ಲಿ ಎಲ್ಲಿರುತ್ತದೆ?
ಕಾಳಿದಾಸ ಕವಿಯು ಪ್ರೇಮ ಕಥೆಯ ಆರಂಭದಲ್ಲೇ ಹೇಳೀರುವ ಈ ಮಾತು ಇಂದಿನ ಯುವಕರು ಕೇಳಿ ಆಳವಾಗಿ ಆಲೋಚಿಸಬೇಕಾದಂತಹುದು. ಈ ಕಾಲದಲ್ಲಂತೂ ಉದ್ಯಾನಗಳಲ್ಲಿ ಲತೆಗಳನ್ನು ಅನೇಕ ರೂಪಗಳು ಬರುವಂತೆ ಕತ್ತರಿಸುವುದು ವಾಡಿಕೆಯಾಗಿದೆ, ಇದರಲ್ಲಿ ಏನಾದರೂ ಸೌಂದರ್ಯವಿದಯೇ? ಅರಣ್ಯಗಳಲ್ಲಿ ಸ್ವೇಚ್ಛೆಯಿಂದ ಬೆಳದಿರುವ ಮತ್ತು ಹೂಗಳು ತುಂಬಿರುವ ಲತೆಗಳ ಸೌಂದರ್ಯ ಉದ್ಯಾನವನದಲ್ಲಿನ ಅಲ್ಪ ಪ್ರದೇಶದಲ್ಲಿ ಬೆಳೆದಿರುವ ಲತೆಗಳಲ್ಲಿ ಕಾಣಿಸುವುದಿಲ್ಲ. ಕೆಲವರಿಗೆ ಇದು ಸರಿಯಲ್ಲವೆಂದೆನಿಸಬಹುದು. ಆದರೆ ಕಾಳಿದಾಸನಂತಹ ರಸಿಕರಿಗೆ ಹಾಗೆ ಕಾಣಿಸುವುದಿಲ್ಲ. ರಸಿಕತೆ ಒಂದು ದೊಡ್ಡ ಗುಣ. ಅದು ಎಲ್ಲರಲ್ಲೂ ಇರುವುದಿಲ್ಲ.
ಕಾಮದಲ್ಲಿ ರಸಿಕತೆಯಿಲ್ಲ. ಪ್ರೇಮದಲ್ಲಿ ರಸಿಕತೆ ಇದೆ. ರಸಿಕನಾದವನು ಸುಂದರ ವಸ್ತುವನ್ನು ಪಶುವಿನಂತೆ ಉಪಭೋಗಿಸುವುದಿಲ್ಲ. ಆರಾಧಿಸುತ್ತಾನೆ. ಪ್ರೇಮದಲ್ಲಿ ಸ್ವಾರ್ಥವನ್ನು ಮೀರಿ ಪರಾರ್ಥವಿರಲು ಕಾರಣ ಈ ರಸಿಕತೆಯೇ. ನಿಜವಾದ ರಸಿಕನು ಪ್ರಕೃತಿಪ್ರೇಮಿ. ಪ್ರಕೃತಿಯಲ್ಲಿನ ಮಧುರ ಫಲಗಳ ರುಚಿಯಿಂದ ಆನಂದ ಪಡುವವನು ರಸಿಕ. ಆ ಫಲಗಳಿಂದ ಕೃತ್ರಿಮವಾಗಿ ತಯಾರಿಸಿರುವ ಮದ್ಯವನ್ನು ಕುಡಿಯುವವನು ಕಾಮಿ. ಇಂದು ಚಲನಚಿತ್ರಗಳಲ್ಲಿ ನಾಯಕ ನಾಯಕಿಯರು ಕೃತ್ರಿಮವಾಗಿ ಕುಣಿಯುವುದನ್ನೂ, ಇತರ ಕೆಲವು ಸನ್ನಿವೇಶಗಳನ್ನೂ ನೋಡಿದರೆ ರಸಿಕತೆಯ ದಾರಿದ್ರ್ಯಎಷ್ಟು ತಾಂಡವವಾಡುತ್ತಿದೆ ಎಂದು ಗೊತ್ತಾಗುತ್ತದೆ. “ ಶೃಂಗಾರ ಶ್ಯುಚಿರುಜ್ವಲಃ” ಅಂದರೆ ಶೃಂಗಾರ ರಸ ಶುದ್ಧವಾದದ್ದು ಮತ್ತು ದೀಪ್ತಿ ಉಳ್ಳದ್ದು ಎಂಬ ಮಾತನ್ನೇ ನಾವು ಮರೆತುಬಿಟ್ಟಂತಿದೆ. ಈ ದಿನದ ಈ ಸ್ಥಿತಿಗೆ ಮಾರ್ಗದರ್ಶಕರು ಹಿಂದಿನ ಕಾಲದಲ್ಲೇ ಹುಟ್ಟಿದ್ದರೆಂದರೇ ತಪ್ಪಗಲಾರದು. ಶೃಂಗಾರ ರಸದಲ್ಲಿ ಅಶ್ಲೀಲತೆಯ ಮದ್ಯವನ್ನು ಬೆರೆಸಿರುವ ಪ್ರಾಚೀನ ಕವಿಗಳೂ ಇದ್ದಾರೆ. ಆದರೆ ಇಂದಿನ ಅಶ್ಲೀಲತಾ ಪ್ರದರ್ಶನದ ಮುಂದೆ ಇವರೂ ಪರಾಜಿತರಾಗಿದ್ದಾರೆ.
ಸ್ವಾಭಾವಿಕವಾದ ಸೌಂದರ್ಯದ ಮುಂದೆ ಕೃತ್ರಿಮವಾದ ಸೌಂದರ್ಯ ನಿಲ್ಲಲಾರದೆಂಬುದು ನಿತ್ಯ ಸತ್ಯ. ಸ್ವಾಭಾವಿವಕವಾದ ಸೌಂದರ್ಯದಲ್ಲಿ ಎರಡು ಅಂಶಗಳಿವೆ. ಅಲಂಕಾರರಹಿತವಾದರೂ ಸುಂದರವಾಗಿರುವ ಮೈಕಟ್ಟು ಮತ್ತು ಚೇಷ್ಟೆಗಳಲ್ಲಿ ಪ್ರತಿಬಿಂಬಿಸುವ ವ್ಯಕ್ತಿಯ ಸ್ವಭಾವದಲ್ಲಿನ ರಮ್ಯತೆ, ಈ ಎರಡರಲ್ಲೂ ಕೃತ್ರಿಮತೆಯಿಂದ ಮೋಸಹೋಗುವವರು ಅರಸಿಕರೆಂದೂ, ಕಾಮಿಗಳೆಂದೂ ಹೇಳದೆ ಗತಿಯಿಲ್ಲ. ಸುಂದರವಾದ ಮೈಕಟ್ಟಿನಲ್ಲಿ ತಪಸ್ವೀ ಕನ್ಯೆಯರು ರಾಣಿವಾಸದವರನ್ನು ಮೀರದಿದ್ದರೂ ಚೇಷ್ಟೆಗಳಲ್ಲಿ ವಿನಯಸಮಾನವಾಗಿದ್ದರೂ ತಪಸ್ವಿ ಕನ್ಯೆಯರಲ್ಲಿರುವ ಅಮಾಯಕತೆ ನಾಗರೀಕತೆಯ ಕೃತ್ರಿಮತೆಯಲ್ಲಿ ಬೆಳೆದಿರುವ ರಾಣೀವಾಸವದವರಲ್ಲಿರಲು ಸಾಧ್ಯವಿಲ್ಲ. ಈ ಅಮಾಯಕತೆ ರಸಿಕನಾದ ದುಷ್ಯಂತನನ್ನು ಹೆಚ್ಚಾಗಿ ಆಕರ್ಷಿಸಿತೆಂದು ಭಾವಿಸಬೇಕು.
1-2-1984
೧. ದಮ
ವ್ಯಸನವಾದ ಬೇಟೆಯಲ್ಲಿ ಮೈ ಮರೆತಿದ್ದ ದುಷ್ಯಂತನನ್ನು ಪ್ರಕೃತಿ ಸೌಂದರ್ಯದ ಮತ್ತು ಪವಿತ್ರತೆಯ ನೆಲೆಯಾಗಿದ್ದ ಕಣ್ವಾಶ್ರಮವು ‘ಕಾಮ’ದ ಹಂತದಿಂದ ‘ಪ್ರೇಮ’ದ ಹಂತಕ್ಕೆ ಕ್ರಮ ಕ್ರಮವಾಗಿ ಕೊಂಡೊಯ್ಯುವ ಕವಿಯ ಶಿಲ್ಪವನ್ನು ಗಮನಿಸುತ್ತಾ ಹೋದರೆ ನಮಗೆ ಕಾಣುವುದು ಇನ್ನೊಂದು ವ್ಯಸನವಾದ ಹೆಂಗಸಿನ ವಿಷಯದಲ್ಲಿ ದುಷ್ಯಂತನ ಪರಿವರ್ತನೆ. ತಪೋವನದ ಕನ್ಯೆಯರ ಲಾವಣ್ಯದಲ್ಲಿನ ಅಮಾಯಕತೆಯ ವಿಶೇಷಕ್ಕೆ ಆಕರ್ಷಿತನಾದ ದುಷ್ಯಂತನು ಶಕುಂತಲೆಯ ದೇಹ ಸೌಂದರ್ಯದ ಮೇಲೆ ಮನಸ್ಸನ್ನು ಲಗ್ನಮಾಡುತ್ತಾನೆ. ಆಕೆ ನಾರಿನಿಂದ ಮಾಡಿದ (ಇಂದಿನ ಗೋಣಿ ಬಟ್ಟೆಯಂತಹುದು) ಸೀರೆಯನ್ನು ಧರಿಸಿದ್ದುದನ್ನು ನೋಡಿ ಒಣಗಿದ ಎಲೆಯ ಮರೆಯಲ್ಲಿನ ಹೂವಿನಂತೆ ಈಕೆಯ ಸೌಂದರ್ಯದ ಕಾಂತಿಮಂತವಾಗಿಲ್ಲವೆಂದು ಭಾವಿಸುತ್ತಾನೆ. ಆದರೆ ಮರುಕ್ಷಣವೇ ಆತನ ರಸಿಕತೆ ಆತನಿಂದ ಈ ಮಾತನ್ನು ಹೇಳಿಸುತ್ತದೆ:
ಶೈವಲದಿಂದೆ ತಾವರೆ ಮುಸುಂಕಿದೊಡಂ
ರಮಣೀಯ ಮಿಂದುವಿಂ,
ಗೀವುದು ಕಾಂತಿಯಂ ಮಲಿನ ಮಾದೊಡಮೇಂ
ಕರೆವ ಲ್ಕದಿಂದಿವಳ್!
ಪ್ರಾವೃತೆಯಾ ದೊಡಂ ಬಹು ಮನೋಜ್ಞೆ,
ಳ್ಗಾವುದು ತಾನೆ ತಾಳಿದೊಡೆ ಭೂಷಣ ಮಾಗದೆ
ಪೋಪುದುರ್ವಿಯೊಳ್.
ಪಾಚಿ ಮೇಲೆ ಬಿದ್ದಿದ್ದರೂ ತಾವರೆ ಸುಂದರವಾಗಿಯೇ ಕಾಣುವುದು. ಕಳಂಕವಿದ್ದರೂ ಚಂದ್ರನು ಸುಂದರನೇ. ನಾರು ಬಟ್ಟೆಯಿಂದಲೂ ಈ ಸುಂದರಿ ಮನೋಹರಳಾಗಿರುವಳು. ಮನೋಹರವಾದ ರೂಪಗಳಿಗೆ ಯಾವುದು ಭೂಷಣವಾಗುವುದಿಲ್ಲ.
ಕಾಮದ ಕಣ್ಣು ತನಗೆ ಪ್ರಿಯವಾದ ವಸ್ತುವಿಗೆ ಅಪ್ರಿಯವಾದದ್ದು ಯಾವುದು ಸೇರಿದರೂ ಸಹಿಸಲಾರದು. ಆದರೆ ಪ್ರೇಮದ ಕಣ್ಣು ಪ್ರಿಯಕ್ಕೆ ಸೇರಿದ ಅಪ್ರಿಯವನ್ನು ಸಹ ಪ್ರಿಯವನ್ನಾಗಿಯೇ ಭಾವಿಸುತ್ತದೆ ಅಲ್ಲವೇ.
ಕಾಮದಲ್ಲಿ ಅಭಿಲಾಷಿತವಾದ ವ್ಯಕ್ತಿಯ ಮನಸ್ಸಿನ ಸ್ಥಿತಿಯನ್ನು ಕುರಿತ ಯೋಚನೆ ಕಾಮಿಗಿರುವುದಿಲ್ಲ. ಪ್ರೇಮದಲ್ಲಿ ಆ ವ್ಯಕ್ತಿಯ ಹಿತಚಿಂತನೆಯು ಸೇರಿಕೊಂಡಿರುತ್ತೆ. ದುಷ್ಯಂತನು ಶಕುಂತಲೆಯ ಸಖಿಯರನ್ನು ಹೀಗೆ ಕೇಳುತ್ತಾನೆ:-
ಪರಿಣಯಮ ಪ್ಪನ್ನೆಗಮೀ,
ಸರಸಿಜಮುಖಿ ಮದನ ರೋಧಿ ನಿಯಮವ
ನಂಗೀ,
ಕರಿವಳೊ ತಾನಲ್ಲದೊಡೀ,
ಹರಿಣಗಳೊಡ ನಾಡುತೆಂದು ಮಾ ವಾ ಸಿ
ಪಳೋ?
ಈಕೆಯ ವೃತಾಚರಣೆ ಮದುವೆಯಾಗುವವರೆಗೆ ಮಾತ್ರವೋ ಅಥವಾ ಈಕೆಯ ಉದ್ದೇಶ ಜೀವನದುದ್ದಕ್ಕೂ ಬ್ರಹ್ಮಚಾರಿಣಿಯಾಗಿರಬೇಕೆಂದೋ.
ಅಲ್ಲದೆ ದುಷ್ಯಂತನು ಶಕುಂತಲೆಯ ಭಾವವನ್ನೂ ಗ್ರಹಿಸುತ್ತಾನೆ. ಆಕೆಗೂ ತನ್ನಲ್ಲಿ ಅಭಿಲಾಷೆ ಉಂಟಾಗಿದೆಯೆಂದು ದೃಢಮಾಡಿಕೊಳ್ಳುತ್ತಾನೆ. ಶಕುಂತಲೆ ಬ್ರಾಹ್ಮಣ ಕನ್ಯೆಯಲ್ಲವೆಂದೂ ಧೃಢಪಡಿಸಿಕೊಳ್ಳುತ್ತಾನೆ.
ದುಷ್ಯಂತನು ಶಕುಂತಲೆಯ ರೂಪಕ್ಕೆ ಮೋಹಿತನಾದರೂ ಆಕೆಯ ಮೇಲೆ ಕಾಮವಲ್ಲದೆ ಪ್ರೇಮವಿರುವುದರಿಂದ ಕೆಲವುದಿನ ಆಶ್ರಮದ ಸುರಕ್ಷನಾಗಿದ್ದು ಆಕೆಯಿಂದ ಪ್ರೇಮ ಸಂದೇಶ ಬರುವವರೆಗೂ ಕಾದಿರುತ್ತಾನೆ.
ಶಕುಂತಲೆಯ ಜನನ ಕಾಮದ ವಾತಾವರಣದಲ್ಲಿ. ಆಕೆಯ ತಂದೆ ತಾಯಿಗಳು ಪ್ರೇಮರಹಿತರಾಗಿ ಮಗುವನ್ನು ಅರಣ್ಯದಲ್ಲಿ ಬಿಟ್ಟು ಹೊರಟು ಹೋಗುವರು. ಈ ಹಂತದ ಮೇಲೆ ಆಕೆಯ ಕಥೆಯೆಲ್ಲಾ ಪವಿತ್ರ ಪ್ರೇಮದ ಕಥೆಯೇ. ಹಕ್ಕಿಗಳು ಆಕೆಯನ್ನು ಪ್ರೇಮದಿಂದ ಸಲಹಿದವು. ಸಂಸಾರವಿಲ್ಲದ ಕಣ್ವನು ಪ್ರೇಮದಿಂದ ಆಕೆಯನ್ನು ಮಗಳನ್ನಾಗಿ ಮಾಡಿಕೊಂಡನು. ಆಕೆಗೆ ಆಶ್ರಮದ ಮೃಗಪಕ್ಷಿಗಳ ಮೇಲೆ ಮತ್ತೆ ಸಖಿಯರ ಮೆಲೆ ಅತ್ಯಂತ ಪ್ರೇಮ. ಆಶ್ರಮ ವೃಕ್ಷಗಳಿಗೆ ಆಕೆ ನೀರೆರೆಯುವುದು ಕೇವಲ ತಂದೆಯ ಆಜ್ಞೆಯಿಂದಲ್ಲ. ಆಕೆಗೆ ಅವುಗಳಲ್ಲಿ ಸೋದರ ಸ್ನೇಹವಿದೆಯೆಂದು ಆಕೆ ಹೇಳುವಳು. ಆಕೆ ಒಂದು ಎಳೆ ಮಾವಿನ ಮರಕ್ಕೆ ಒಂದು ನವಮಾಲಿಕಾ ಲತೆಯನ್ನು ಸ್ವಯಂವರ ವಧುವನ್ನಾಗಿ ಮಾಡಿ ಅದಕ್ಕೆ ವನಜ್ಯೋತ್ಸ್ನೆಎಂದು ಹೆಸರಿಟ್ಟಿದ್ದಳು. ಆ ಲತೆಯನ್ನು ತಾನು ಮರೆತರೆ ತನ್ನ ಶರೀರವನ್ನು ಮರೆಯುತ್ತೇನೆ ಎಂದು ಆಕೆ ಹೇಳುವಳು. ದುಷ್ಯಂತನಲ್ಲಿ ಆಕೆಯ ಹೃದಯದಲ್ಲಿ ಯೌವನ ಸಹಜವಾಗಿ ಹುಟ್ಟಿದ ಕಾಮವನ್ನು ನೋಡಿ ಆಕೆಗೇ ಆಶ್ಚರ್ಯ. ಆಕೆ “ಇದೇನು, ಈತನನ್ನು ನೋಡಿ ತಪೋವನಕ್ಕೆ ವಿರೋಧಿಯಾದ ವಿಕಾರಕ್ಕೆ ಒಳಗಾದೇನು” ಎಂದು ತನ್ನಲ್ಲಿ ಭಾವಿಸುವಳು. ಆಕೆ ಮದನ ಬಾಧೆಯಿಂದ ಕೃಶಳಾದಳು. ಆದರೂ ತನ್ನ ಪ್ರಾಣ ಸಖಿಯರಿಗೆ ಹೇಳಲಿಲ್ಲ. ಕೊನೆಗೆ ಆಕೆಯ ಸುಖ ದುಃಖಗಳಲ್ಲಿ ಸಮಾನ ಅನುಭವವುಳ್ಳ ಆಕೆಯ ಪ್ರಿಯ ಸ್ತ್ರೀಯರೇ ಬಲಾತ್ಕಾರದಿಂದ ಕೇಳಿದಾಗ ತನ್ನ ಅಭಿಪ್ರಾಯವನ್ನು ತಿಳಿಸುವಳು. ಅವರ ಸಲಹೆಯಂತೆ ಪತ್ರ ಬರೆದು ಓದುವಳು.
ಮರೆಯಲ್ಲಿದ್ದ ದುಷ್ಯಂತನು ಪ್ರವೇಶಿಸುವನು.
ಸಖಿಯರ ಸಲಹೆಯಂತೆ ದುಷ್ಯಂತನು ಶಕುಂತಲೆಯನ್ನು ಮದುವೆಯಾಗಲು ಸಮ್ಮತಿ ಕೊಡುವನು. ಆದರೂ ಶಕುಂತಲೆ ಆತನಿಗೆ ಇತರ ಪತ್ನಿಯರಿರುವಾಗ ಆತನನ್ನು ನಿರ್ಬಂಧಿಸಬಾರದೆಂದೇ ಹೇಳುವಳು, ಆಗ ದುಷ್ಯಂತನು ಶಕುಂತಲೆಯಲ್ಲಿ ತನಗಿರುವ ಪ್ರೇಮವನ್ನು ತಿಳಿಸುವನು. ಸಖಿಯರು ಇತರ ಪತ್ನಿಯರಾತನಿಗಿರುವುದರಿಂದ ಶಕುಂತಲೆಯ ವಿಷಯದಲ್ಲಿ ಆಕೆಯ ಬಂಧುಗಳು ವ್ಯಸನ ಪಡದಹಾಗೆ ನಿರ್ವಹಿಸಿಕೊಳ್ಳಬೇಕೆಂದು ಸೂಚಿಸಿದಾಗ ದುಷ್ಯಂತನು ಆಕೆಯೇ ತನ್ನ ವಂಶವನ್ನು ಬೆಳೆಸುವ ಪತ್ನಿಯೆಂದು ಆಶ್ವಾಶಿಸುವನು. ಇಷ್ಟಾದ ಮೇಲೆ ಕ್ಷತ್ರಿಯೋಚಿತವಾದ ಗಾಂಧರ್ವ ವಿವಾಹದಿಂದ ಅವರ ವಿವಾಹವಾಗುವುದು.
1-3-1984
೧. ದಮ
ಈಗ ಶಾಕುಂತಲ ನಾಟಕದಲ್ಲೇ ಶ್ರೇಷ್ಠ ಭಾಗವೆಂದೆಣಿಸಲ್ಪಡುವ ನಾಲ್ಕನೆಯ ಅಂಕವನ್ನು ಪರಿಶೀಲಿಸೋಣ. ಇದರಲ್ಲಿ ಧ್ವನಿತವಾಗುವ ಪ್ರೇಮದ ಸಿದ್ಧಾಂತವೊಂದಿದೆ. ಪ್ರೇಮದ ತೀವ್ರತೆಗಿಂತಲೂ ಪ್ರೇಮದ ವೈಶಾಲ್ಯ ಮುಖ್ಯ ಎಂಬುದೇ ಈ ಸಿದ್ಧಾಂತ. ಈಗ ನಾವಿರುವುದು ಪ್ರೇಮದ ಹಂತದಲ್ಲಿ. ಮುಂದೆ ಬರಲಿರುವುದು ನೇಮದ ಹಂತ. ತಮೋಗುಣದ ಕಾಮದ ಹಂತದಿಂದ ರಜೋಗುಣಪ್ರಧಾನವಾದ ಕಾಮಮಿಶ್ರಿತ ಪ್ರೇಮದ ಹಂತವನ್ನು ಮುಗಿಸಿಕೊಂಡು ರಜೋಗುಣ ಸತ್ವಗುಣಮಿಶ್ರಣವಾದ ವಿಶಾಲ ಪ್ರೇಮ ಹಂತದ ಪರಿಶೀಲನೆ ಇಲ್ಲಿ ಮಾಡಬೇಕಾಗಿದೆ. ಪ್ರೇಮದ ವೈಶಾಲ್ಯವಿಲ್ಲದೆ ಕೇವಲ ಪ್ರೇಮದ ತೀವ್ರತೆಯಿಂದ ಸತ್ವಗುಣ ಲಭಿಸುವುದಿಲ್ಲ ಅಥವಾ ಕೇವಲ ನೇಮದ ತೀವ್ರತೆಯಿಂದಲೂ ಸತ್ವಗುಣ ಲಭಿಸುವುದಿಲ್ಲ. ಪ್ರೇಮದ ವೈಶಾಲ್ಯ ಧರ್ಮದ ಲಕ್ಷಣ. ಪ್ರೇಮದ ತೀವ್ರತೆ ಕಾಮ ಪುರುಷಾರ್ಥದ ಲಕ್ಷಣ. ಧರ್ಮವಿಲ್ಲದ ಅರ್ಥಕಾಮಗಳು ಅಗ್ರಾಹ್ಯಗಳು. ಧರ್ಮವಿಲ್ಲದ ಮೋಕ್ಷ ಪುರುಷಾರ್ಥಕ್ಕೆ ಅರ್ಹತೆಯೇ ಇಲ್ಲ. ಪ್ರೇಮದ ವೈಶಾಲ್ಯವಿಲ್ಲದ ನೇಮಗಳು ಅಧೋಗತಿಯನ್ನುಂಟುಮಾಡುವುವು.
ಯಮಾನ್ ಸೇವತ ಸತತಂ ನ ನಿತ್ಯಂ
ನಿಯಮಾನ್ ಬುಧಃ!
ಯಮಾನ್ ಪತತ್ಯಕುರ್ವಾಣೋ ನಿಯಮಾನ್
ಕೇವಲಾನ್ ಭಜನ್!!
ಎಂದು ಮನುಸ್ಮೃತಿ ಹೇಳುತ್ತದೆ. ದಯೆ, ಸಹನೆ, ಸತ್ಯ, ಅಹಿಂಸೆ, ಮೃದುತ್ವ ದೇವತಾಧ್ಯಾನಗಳು ಯಮವೆಂದೂ, ಸ್ನಾನ, ಮೌನ, ಉಪವಾಸ, ಅಧ್ಯಯನ ಜನನೇಂದ್ರಿಯವಶತೆ, ಗುರುಶುಶ್ರೂಷಗಳು ನಿಯಮವೆಂದೂ ಹೇಳಲ್ಪಟ್ಟಿವೆ. ಇವುಗಳೆಲ್ಲ ಯಮಗಳನ್ನು ಸದಾ ಸೇವಿಸುತ್ತಲೇ ಇರಬೇಕು. ನಿಯಮಗಳಿಗೆ ಇಷ್ಟು ಪ್ರಾಧಾನ್ಯವಿಲ್ಲ. ಯಾರು ಯಮಗಳನ್ನು ಬಿಟ್ಟು ಕೇವಲ ನಿಯಮಗಳನ್ನು ಆಚರಿಸುತ್ತಾರೋ ಅವರು ಸತಿತರಾಗುತ್ತಾರೆ ಎಂದು ಇದರ ತಾತ್ಪರ್ಯ.
ಮೇಲೆ ಹೇಳಿರುವ ಯಮಗಳು ಪ್ರೇಮದ ವೈಶಾಲ್ಯದಿಂದ ಮಾತ್ರ ಸಾಧಿಸಲು ಶಕ್ಯ. ಅಷ್ಟಾಂಗಯೋಗದಲ್ಲೂ ಸಹ ಯಮಗಳಾದ ಮೇಲೆ ನಿಯಮಗಳು ಆಮೇಲೆ ಆಸನ, ಪ್ರಾಣಾಯಾಮ, ಧ್ಯಾನ, ಧಾರಣ, ಸಮಾಧಿಗಳು, ಹೇಳಲ್ಪಟ್ಟಿವೆ. ವೈಶಾಲ್ಯವಿಲ್ಲದ ಪ್ರೇಮದ ತೀವ್ರತೆ ಸಮಾಧಿಯುನ್ನುಂಟು ಮಾಡಿದರೂ ಒಳ್ಳೆಯದಲ್ಲ ಎಂಬ ತತ್ವ ಶಕುಂತಲೆ ಪತಿಯ ಧ್ಯಾನದಲ್ಲಿ ಮಗ್ನಳಾಗಿ ಮೈಮರೆತಿದ್ದರೂ ಅತಿಥಿ ಸತ್ಕಾರ ಮಾಡುವುದರಿಂದ ಶಾಪವೇ ಇದರ ಫಲವಾಯಿತೆಂಬ ಕಥಾಭಾಗದಲ್ಲಿ ಧ್ವನಿತವಾಗುತ್ತದೆ. ಅಲ್ಲಿಂದ ಮುಂದೆ ಬರುವ ನಾಲ್ಕನೇ ಅಂಕದ ವಿಷಯಗಳೆಲ್ಲ ಪ್ರೇಮದ ವೈಶಾಲ್ಯಕ್ಕೆ ಸಂಬಂಧಿಸಿರುವುವು
ಇಲ್ಲಿನ ಪ್ರೇಮ ವೈಶಾಲ್ಯದ ಚಿತ್ರಣದಲ್ಲಿ ಸ್ತ್ರೀ ಪುರುಷರು, ಪಶುಪಕ್ಷಿಗಳು, ವೃಕ್ಷಲತೆಗಳು ಎಲ್ಲಾ ಸಮಾನವಾಗಿ ಭಾಗವಿಹಿಸಿವೆ. ಶಕುಂತಲೆಯನ್ನು ಗಂಡನ ಮನೆಗೆ ಕಳುಹಿಸುವ ಸನ್ನಿವೇಶವನ್ನು ತಾಪಸಿಯರು ಶಕುಂತಲೆಗೆ ಆಶ್ರಮದಲ್ಲಿ ದೊರೆಯುವ ವಸ್ತುಗಳಿಂದ ಅಲಂಕಾರ ಮಾಡುತ್ತಿರುವಾಗ ಋಷಿ ಕುಮಾರರು ದಿವ್ಯವಾದ ಅಲಂಕಾರಗಳನ್ನು ತಂದು ಕೊಡುವರು. ಅದಕ್ಕೆ ಆಶ್ಚರ್ಯಪಟ್ಟು ಇವೆಲ್ಲಿಂದ ಬಂದವೆಂದು ಕೇಳಿದಾಗ ಅವರು “ ಕಣ್ವರು ಶಕುಂತಲೆಯ ನಿಮಿತ್ತವಾಗಿ ವೃಕ್ಷಗಳಿಂದ ಪುಷ್ಪಗಳನ್ನು ಕೊಯ್ದುಕೊಂಡು ಬನ್ನಿರೆಂದು ನಮ್ಮನ್ನು ಆಜ್ಞಾಪಿಸಿದರು. ನಾವು ವೃಕ್ಷಗಳ ಬಳಿಗೆ ಹೋದೆವು. ಒಂದು ವೃಕ್ಷ ಬೆಳ್ಳಗಿರುವ ಈ ವಸ್ತ್ರವನ್ನು ಕೊಟ್ಟಿತು. ಇನ್ನೊಂದು ವೃಕ್ಷ ಅರಗನ್ನು ಕೊಟ್ಟಿತು. ಇತರ ವೃಕ್ಷಗಳಲ್ಲಿದ್ದ ವನದೇವಿಯರು ಈ ದಿವ್ಯಾಭರಣಗಳನ್ನು ಕೊಟ್ಟರು ಎಂದು ಹೇಳುವರು. ಕಣ್ವನು ಸಾಕುಮಗಳಾದರೂ ಶಕುಂತಲೆಯಲ್ಲಿನ ಪ್ರೀತಿಯಿಂದ ಅಳುವನು. ಆತ ತಪೋವನದ ವೃಕ್ಷಗಳನ್ನು ಕುರಿತು ಹೀಗೆ ಹೇಳುವನು.
ಜಲವ ನದಾವಳೀಂಟಳೆರೆದಲ್ಲದೆ ನಿಮ್ಮಯ
ಪಾತಗಂಬುವೆಂ
ತಳಿರ್ಗಳ ಕೊಯ್ಯಳಾವಳೊಲವಿಂ ಮಿಗೆ ಸಿಂಗರ
ಅಲರ್ಗಳ ತಾಳೆ ನೀವು ಮೊದಲುತ್ಸವವಾಂತ
ಪಳಾವಳಾಶಕುಂ
ತಳೆ ಪತಿ ಸದ್ಮಕೈದಿದ ಪಳಾಕೆಗನುಜ್ಞೆಯ ನೀವು
ದೆಲ್ಲರುಂ
ನಿಮಗೆ ನೀರೆರೆಯದೆ ಯಾವಳು ತಾನು ನೀರು ಕುಡಿಯುವುದಿಲ್ಲವೋ ಅಲಂಕಾರ ಮಾಡಿಕೊಳ್ಳಬೇಕೆಂಬ ಆಸೆಯಿದ್ದರೂ, ಯಾವಳು ನಿಮ್ಮ ತಳಿರುಗಳನ್ನು ಕೀಳುವುದಿಲ್ಲವೋ, ನೀವು ಮೊದಲಬಾರಿಗೆ ಹೂಗಳನ್ನು ಬಿಟ್ಟಾಗ ಯಾವಳು ಹಬ್ಬವನ್ನಾಚರಿಸುವಳೋ, ಅಂತಹ ಶಕುಂತಲೆ ಗಂಡನ ಮನೆಗೆ ತೆರಳಿದ್ದಾಳೆ. ನೀವೆಲ್ಲರೂ ಅನುಜ್ಞೆಯನ್ನು ಕೊಡಿ.
ಇದಕ್ಕೆ ಆಕಾಶವಾಣಿಯ ಮೂಲಕ ವನ ದೇವತೆಗಳು ಆಕೆಗೆ ಶುಭವನ್ನು ಕೋರುವರು. ನವಿಲುಗಳು ಕುಣಿತವನ್ನು ಬಿಟ್ಟವು. ಜಿಂಕೆಗಳು ಬಾಯಲ್ಲಿಟ್ಟುಕೊಂಡ ಹುಲ್ಲು ಕೆಳಕ್ಕೆ ಬೀಳುತ್ತಿದ್ದರೂ ಗಮನಿಸದೆ ಹಾಗೆಯೇ ಶಕುಂತಲೆಯನ್ನು ನೋಡುತ್ತಿದ್ದವು. ಶಕುಂತಲೆ ತನ್ನ ಪ್ರಿಯ ಸಖಿಯರಿಗೆ ತಾನು ಬೆಳಸಿದ್ದ ಒಂದು ಲತೆಯನ್ನು ತೋರಿಸಿ ಇದನ್ನು ನಿನ್ನ ವಶಕ್ಕೆ ಕೊಟ್ಟಿದ್ದೇನೆ ಎಂದು ಹೇಳಿದಾಗ ಸಖಿಯರು “ ಇದನ್ನೇನೋ ನಮ್ಮ ವಶಕ್ಕೆ ಕೊಟ್ಟೆ ನಮ್ಮನ್ನು ನೀನು ಯಾರ ವಶಕ್ಕೆ ಕೊಟ್ಟೆ? ಯೆಂದು ಕೇಳಿ ಅಳುವರು. ಪರ್ಣಶಾಲೆಯ ಬಳಿ ತಿರುಗುವ ಒಂದು ಪೂರ್ಣ ಗರ್ಭಿಣಿಯಾದ ಒಂದು ಹುಲ್ಲೆಯನ್ನು ತಂದೆಗೆ ತೋರಿಸಿ ಶಕುಂತಲೆ ಇದಕ್ಕೆ ಸುಖಪ್ರಸವವಾದಾಗ ನನಗೆ ಕುಶಲ ಪತ್ರಿಕೆಯನ್ನು ಕಳುಹಿಸಬೇಕೆಂದು ಬೇಡಿದಳು. ಜಿಂಕೆಯ ಮರಿ ಬಂದು ಶಕುಂತಲೆಯ ಸೀರೆಯ ಸೆರಗನ್ನು ಹಿಡಿದು ಸೆಳೆಯುತ್ತದೆ. ಅದು ಹುಟ್ಟಿದ ಕೂಡಲೇ ತಾಯಿಯನ್ನು ಕಳೆದುಕೊಂಡಿತ್ತು. ಅದನ್ನು ಶಕುಂತಲೆಯೆ ಸಾಕಿದಳು. ಆಗ ಕಣ್ವನು ಹೇಳುವನು:-
ಮಗಳ ಕುಶಸೂಚಿ ತಾಗಿದ
ಮೊಗದೊಳ್ ವ್ರಣಹರಣ ತೈಲವೆರೆಯುವಂತೆ ನೀವಾ!
ರಗಳ ಹಿಡಿಯಿತ್ತು ಪೊರೆದೀ
ಮೃಗಾರ್ಭಕಂ ನಿನ್ನ ಮಾರ್ಗಮಂ ಬಿಟ್ಟುಪುದೇ?
ಮಗಳೇ, ದರ್ಭೆತಿನ್ನಲು ಹೋದಾಗ ಈ ಜಿಂಕೆಯ ಮರಿಯು ಮೃದುವಾದ ಬಾಯಿಗೆ ಅದರ ಕೊನೆ ಚುಚ್ಚಿಕೊಂಡು ಗಾಯವಾಯಿತು. ನೀನು ಅದಕ್ಕೆ ಔಷಧದ ಎಣ್ಣೆ ಇಟ್ಟು, ನೀವಾರ ಧಾನ್ಯದ ತುತ್ತುಗಳನ್ನು ಇದರ ಬಾಯಿಗಿಟ್ಟು ಇದನ್ನು ಸಲಹಿದ್ದೀಯೆ. ಇದು ನಿನ್ನ ದಾರಿಯನ್ನು ಹೇಗೆ ಬಿಡುವುದು?
ಶಕುಂತಲೆಯು ಬಹಳ ದುಃಖದಿಂದ ತಂದೆಯನ್ನು, ಸಖಿಯರನ್ನು ತಪೋವನದಲ್ಲಿನ ಪಶುಪಕ್ಷಿ ವೃಕ್ಷಲತೆಗಳನ್ನು ಬಿಟ್ಟು ಹೊರಡುವಳು.
1-4-1984
೧. ದಮ
ಪ್ರಾಣಿಗಳ ಪ್ರವೃತ್ತಿ ಮಾನವರಲ್ಲೂ ಇದೆ. ಆದರೆ ಪ್ರಾಣಿಗಳಿಗೆ ಪ್ರವೃತ್ತಿಯನ್ನು ಮೀರುವ ಶಕ್ತಿ ಇಲ್ಲ. ಮಾನವರಿಗೆ ಈ ಶಕ್ತಿ ಇದೆ. ಕಾಮ ಮತ್ತು ಸಂಕುಚಿತವಾದ ಪ್ರೇಮ ಈ ಪ್ರವೃತ್ತಿಯಲ್ಲಿ ಸೇರಿವೆ. ಪ್ರೇಮವನ್ನು ವಿಶಾಲಗೊಳಿಸುವುದು ನಿವೃತ್ತಿಯ ಮೊದಲನೆಯ ಮೆಟ್ಟಲು. ನೇಮದ ಹಂತ ನಿವೃತ್ತಿಯ ಮುಂದಿನ ಮೆಟ್ಟಲುಗಳು. ಪ್ರೇಮವನ್ನು ವಿಶಾಲಗೊಳಿಸುವುದು ನಿವೃತ್ತಿ ಮಾರ್ಗದಲ್ಲಿ ತುಂಬಾ ಮುಖ್ಯವಾದ ಮತ್ತು ಕಠಿಣವಾದ ಸಾಧನೆ. ಇದು ಕೇವಲ ನಿಯಮಗಳಿಂದ ಮಾತ್ರ ಸಾಧ್ಯವಿಲ್ಲ. ಪ್ರೇಮವು ಪ್ರವೃತ್ತಿ ಶಕ್ತಿಯಿಂದಲೇ ವಿಶಾಲವಾಗಬೇಕು. ನೇಮದ ಶಕ್ತಿಯಿಂದಲ್ಲ. ಸೌಂದರ್ಯೋಪಾಸನೆ, ಕಲೋಪಾಸನೆ, ರಸಾನುಭವ, ಇವೆಲ್ಲಾ ಪ್ರವೃತ್ತಿಯ ಪರಿಪಕ್ವತೆಗೆ ಸಾಧನಗಳು. ಮಾನವನು ಮಾಡುವ ಸಾಧನೆಯಲ್ಲಿ, ಮನಸ್ಸನ್ನು, ಕರ್ಮಗಳನ್ನು, ಲಕ್ಷ್ಯಗಳನ್ನು, ಪ್ರವೃತ್ತಿಗಳನ್ನು, ರಸಿಕತೆಯನ್ನು, ಪ್ರೇಮವನ್ನು, ಬೇರೆ ಬೇರೆ ಮಾಡುವುದು ಸಾಧ್ಯವಿಲ್ಲ. ಹೊರಕ್ಕೆ ಸಾಧನವನ್ನು ನಾವು ದಿನದಲ್ಲಿ ಯಾವುದೋ ಒಂದು ಭಾಗದಲ್ಲಿ ಮಾಡಿದರೂ ಅದರಿಂದ ಚೇತನಗೊಂಡ ಆತ್ಮದ ವಿಕಾಸ ಹಗಲಿರುಳೆಂಬ ಭೇದವಿಲ್ಲದೆ ನಡೆಯಲೇಬೇಕು. ಈ ಸಾಧನೆ, ಈ ವಿಕಾಸ, ಸುಖ ದುಃಖಗಳೆರಡರಲ್ಲಿಯು ನಡೆಯುತ್ತಿರುತ್ತದೆ. ಇದು ಜನ್ಮಜನ್ಮಾಂತರಗಳಲ್ಲೂ ಮುಂದುವರೆಯುತ್ತದೆ.
ಶಾಕುಂತಲೆಯ 5 ಮತ್ತು 6ನೇ ಅಂಕಗಳಲ್ಲಿ ರಸಿಕತೆಯೊಂದಿಗೆ ಪ್ರೇಮದ ಪ್ರವೃತ್ತಿ ವಿಶಾಲವಾಗುವ, ಪರಿಪಕ್ವವಾಗುವ ಮತ್ತು ಅಗ್ನಿ ಪರೀಕ್ಷೆಗೊಳಗಾಗಿ ಧೃಢವಾಗುವ ಸನ್ನಿವೇಶಗಳು ತುಂಬಿಕೊಂಡಿವೆ.
ದುಷ್ಯಂತನು ಹಂಸಪದಿಕೆಯನ್ನು ಪ್ರೀತಿಸಿ ಪಟ್ಟದರಸಿಯಾದ ವಸುಮತಿಯ ಕಡೆ ಹಿಂದಿರುಗಿ ಪುನಃ ಹಂಸಪದಿಕೆಯನ್ನು ಮಾತಾಡಿಸಲಿಲ್ಲ. ಪ್ರೇಮದ ನೋವಿಗೊಳಗಾದ ಹಂಸಪದಿಕೆ ಸಂಗೀತಾಭ್ಯಾಸದಲ್ಲಿ ಒಂದು ಗೀತೆಯನ್ನು ರಚಿಸಿ ಹಾಡುತ್ತಿರುವಳು:-
ಪೊಸತೊಪ್ಪ ಮಧುವ ಬಯಸುತೆ
ರಸಾಲ ಮಂಜರಿಯ ನಂತು ಚುಂಬಿಸಿ ನೀಂ ಸಾ!
ರಸ್ವಾಸಮಾತ್ರ ದಿಂ ಸಂ
ತಪವಾಂತದನೆಂತು ಮರೆದೆಯೆಲೆ ಮಧುಕರನೇ!!
ದುಂಬಿಯೇ, ನೀನು ಕಮಲದಲ್ಲಿ ಮಧುವನ್ನು ಆಸ್ವಾದಿಸುತ್ತಿರವವನು. ಆದರೆ ನಿನಗೆ ಇನ್ನೊಂದು ವಿಧವಾದ ಮಧುವನ್ನು ಆಸ್ವಾದಿಸಬೇಕೆಂಬ ವಾಂಛೆ ಉಂಟಾಗಿ ನೀನು ಮಾವಿನ ಹೂವಿನ ಗೊಂಚಲ ಚುಂಬಿಸಿದೆ. ಪುನಃ ನೀನು ಕಮಲಕ್ಕೆ ಹಿಂತಿರುಗಿ ಮಾವಿನ ಹೂಗೊಂಚಲನ್ನು ಮರೆತುಬಿಟ್ಟೆಯಲ್ಲಾ!
ಈ ಗೀತೆಯನ್ನು ಕೇಳಿದ ದುಷ್ಯಂತನು ಹಂಸಪದಿಕೆಗೆ ಉಚಿತ ರೀತಿಯ ಉತ್ತರವನ್ನು ಹೇಳಿಕಳುಹಿಸುತ್ತಾನೆ. ಆ ಮೇಲೆ ಆತನಿಗೆ ಮನಸ್ಸಿನಲ್ಲಿ ಏನೋ ಒಂದು ಹೊಸ ಕಳವಳ ಪ್ರಾರಂಭವಾಗುತ್ತೆ. ಆಗ ಆತನು ಹೀಗೆಂದು ಭಾವಿಸುತ್ತಾನೆ.
ಇನಿ ದೆನಿಸೆರ್ಪ ಶಬ್ದಮನೆಕೇಳಿ ವಿಲೋಕಿಸಿ
ರಮ್ಯ ವಸ್ತು ವಂ
ಜನಮಿಳೆಯಲ್ಲಿ ನೆಮ್ಮದಿಯನಾಂತಿರು
ತಿರ್ದೊಡ ಮುಮ್ಮುಳಿಪ್ಪುದೇ
ನೆನಲಿದು ನಿಕ್ಕುವಂ ಪರಿಕಿಸಲ್ ಬಗೆ
ಯಿಂದ ಮಬೋಥ ಪೂರ್ವಕಂ
ನೆನೆದಪನಂತು ಭಾವದೊಳೆ ನಟ್ಟ ಪುರಾ
ಭವಾಸೌ ಹೃದಂಗಳಂ!
ರಸಿಕನಾದವನಿಗೆ ಇಂಪಾದ ಸಂಗೀತವನ್ನು ಕೇಳಿದಾಗಲೂ, ಸುಂದರ ಚಿತ್ರವನ್ನು ನೋಡಿದಾಗಲೂ, ಆತನ ಮನಸ್ಸಿಗೆ ಬಾಧೆಯನ್ನುಂಟುಮಾಡುವ ಸನ್ನಿವೇಶವಾವುದೂ ಇಲ್ಲದಿದ್ದರೂ, ಒಂದೊಂದುಸಲ ಮನಸ್ಸು ಕಳವಳಕ್ಕೊಳಗಾಗುತ್ತದೆ. ಇದಕ್ಕೆ ಕಾರಣ ಬಹುಶಃ ಆ ಸಮಯದಲ್ಲಿ ಆತನ ಮನಸ್ಸು ಹಿಂದಿನ ಜನ್ಮಗಳ ಯಾವುದೋ ಒಂದು ಸ್ನೇಹ ಬಂಧವನ್ನು ಸ್ಮರಿಸುತ್ತದೆ ಎಂಬುದಾಗಿರಬೇಕು.
ಕಲೋಪಾಸನೆ ಜನ್ಮಾಂತರಗಳಲ್ಲಿ ಅಗಲಿ ಹೋಗಿದ್ದ ಸಾಧನೆಯ ಬೇರೆ ಬೇರೆ ತಂತುಗಳನ್ನು ಒಟ್ಟುಗೂಡಿಸುತ್ತದೆ ಎಂದು ಇದರ ಭಾವ.
ಕಾಳಿದಾಸನ ನಾಟಕಗಳಲ್ಲೆಲ್ಲಾ ನಾಯಕರು ಒಂದಕ್ಕಿಂತಾ ಹೆಚ್ಚು ಹೆಂಡತಿಗಳಿದ್ದವರು. ಇವುಗಳಲ್ಲಿ ಸವತಿಗಳ ಮಾತ್ಸರ್ಯದ, ಬೆಳವಣಿಗೆಯನ್ನು ತೋರಿಸದೆ, ಕವಿ ನಾಯಕನ ಪ್ರೇಮದಲ್ಲಿ ಪರಿಪಕ್ವತೆಯನ್ನು, ಸವತಿಗಳಲ್ಲಿ ಮಾತ್ಸರ್ಯ ಮಾಯವಾಗಿ ಸೌಹಾರ್ದ ಬೆಳೆಯಬೇಕೆಂಬ ಭಾವನೆಯನ್ನು ತೋರಿಸುತ್ತಾನೆ. ಇದು ಕಾಳಿದಾಸನ ಉದಾತ್ತತೆ. ಶಾಕುಂತಲದಲ್ಲಿ ಋಷಿಯ ಶಾಪದಿಂದ ದುಷ್ಯಂತನ ಮನಸ್ಸಿಗೆ ಮಂಕು ಕವಿದಿದ್ದರೂ, ಆಶ್ರಮವಾಸಿನಿ, ದಿವ್ಯಸೌಂದರ್ಯವತಿ, ಅಮಾಯಕಳು, ಆದ ಶಕುಂತಲೆಯಲ್ಲಿನ ಪ್ರೇಮ ಒಳಗೆ ಕೆಲಸ ಮಾಡುತ್ತಲೇ ಇದೆ ಎಂಬುದಕ್ಕೆ ಮೇಲಿನ ಪದ್ಯವೇ ಸಾಕ್ಷಿ.
ಕಣ್ವನು ಸಹ ಶಕುಂತಲೆಯನ್ನು ಕಳುಹಿಸುವಾಗ ಆಕೆಗೆ ಹೇಳುವ ಬುದ್ಧಿವಾದದಲ್ಲಿ “ಸವತಿಯರಲ್ಲಿ ಇಷ್ಟ ಸಖಿಯಂತೆ ವರ್ತಿಸು” ಎಂದು ಹೇಳುತ್ತಾನೆ.
ಐದನೇ ಅಂಕದ ಕೊನೆಯಲ್ಲಿ ಶಕುಂತಲೆಯ ಪ್ರೇಮಕ್ಕೆ ಅಗ್ನಿ ಪರೀಕ್ಷೆ. ಪ್ರೇಮಿಸಿ ಮದುವೆಯಾದವನೇ ಗರ್ಭಿಣಿಯಾದ ಹೆಂಡತಿಯನ್ನು ನೀನಾರೋ ನನಗೆ ತಿಳಿಯದೆಂದು ಹೇಳಿದರೆ ಆಕೆಗೆ ಎಷ್ಟು ಕೋಪಬರಬೇಕು. ಕೋಪ ಬರುತ್ತೆ. ಗಂಡನನ್ನು ಮೋಸಗಾರನೆಂದು ಆಕ್ಷೇಪಿಸುತ್ತಾಳೆ. ಆದರೆ ಆತನಿಗೆ ಕೇಡಾಗಲೆಂಬ ಒಂದು ಶಾಪದ ಮಾತನ್ನು ಹೇಳುವುದಿಲ್ಲ. ಪುರಾಣಗಳಲ್ಲಿ ಕಿಂಚಿತ್ತು ತಪ್ಪುಗಳಿಗೆ ಗಂಡ ಹೆಂಡತಿ ಶಾಪಗಳ ಕಥೆಗಳಿವೆ. ಇಂದಿನ ಪ್ರೇಮಕಥೆಗಳಲ್ಲಿ, ಇಂತಹ ಸಂದರ್ಭದಲ್ಲಿ ಖೂನಿಗಳಾಗುತ್ತವೆ. ಕಣ್ವಶಿಷ್ಯರು ಧರ್ಮ ಹೇಳುತ್ತಾರೆ. ನೀನು ಪತಿಗೃಹದಲ್ಲಿ ದಾಸಿಯಾಗಾದರೂ ಇರಬೇಕೇ ಹೊರತು, ಪತಿಯನ್ನು ಬಿಟ್ಟು ತೌರುಮನೆಗೆ ಬರಬಾರದು ಎಂದು.
1-5-1984
೧. ದಮ
ನೀನಾರೋ ನನಗೆ ತಿಳಿಯದೆಂದು ಗಂಡನೇ ಹೇಳಿದಾಗ ಶಕುಂತಲೆ ಅಗ್ನಿ ಪರೀಕ್ಷೆಗೊಳಗಾಗುತ್ತಾಳೆ. ಮೊದಲು ಆಕೆ ಮೃದುತ್ವದಿಂದ, ನಡೆದ ಘಟನೆಗಳನ್ನು ಆತನ ನೆನಪಿಗೆ ತರಲು ಎಷ್ಟೋ ಪ್ರಯತ್ನಿಸುತ್ತಾಳೆ. ಅದಕ್ಕೆ ದುಷ್ಯಂತನು ತಮ್ಮ ಕಾರ್ಯ ನೆರವೇರುವುದಕ್ಕಾಗಿ ಸ್ತ್ರೀಯರು ಜೇನುತುಪ್ಪದಿಂತಿರುವ ಸುಳ್ಳು ಮಾತುಗಳನ್ನಾಡುತ್ತಾರೆಂದು ಉತ್ತರ ಹೇಳಿದಾಗ ಆಕೆಗೆ ಕೋಪ ಬಂದು ಅನಾರ್ಯನೆಂದೂ, ವಂಚಕನೆಂದೂ ಗಂಡನನ್ನು ಅಕ್ಷೇಪಿಸುತ್ತಾಳೆ. ಕೊನೆಗೆ ಪ್ರಯತ್ನವೆಲ್ಲ ವಿಫಲವಾದಾಗ ನನ್ನ ದೌರ್ಭಾಗ್ಯವೆಂದು ದುಃಖಿಸುತ್ತಾಳೆಯೇ ಹೊರತು ಗಂಡನಿಗೆ ಕೇಡಾಗಲೆಂದು ಒಂದು ಶಾಪದ ಮಾತನ್ನೂ ಹೇಳುವುದಿಲ್ಲ. ಕಣ್ವ ಶಿಷ್ಯನು ಆಕೆಯನ್ನು ಆಶ್ರಮಕ್ಕೆ ಕರೆದುಕೊಂಡು ಹೋಗಲು ಒಪ್ಪುವುದಿಲ್ಲ. ಆಗ ರಾಜನ ಪುರೋಹಿತನು ನಿರ್ಗತಿಕಳಾದ ಆಕೆಯನ್ನು ಹೆರಿಗೆ ಆಗುವವರೆಗೂ ತನ್ನ ಮನೆಯಲ್ಲಿಟ್ಟುಕೊಳ್ಳುತ್ತೇನೆಂದೂ, ಆಕೆಗೆ ರಾಜಲಕ್ಷಣಗಳಿರುವ ಮಗು ಹುಟ್ಟಿದರೆ ಆಕೆಯನ್ನು ರಾಜನು ಪರಿಗ್ರಹಿಸಬಹುದೆಂದೂ ಹೇಳಿ ಆಕೆಯನ್ನು ತನ್ನ ಸಂಗಡ ಕರೆದುಕೊಂಡು ಹೋಗುತ್ತಾನೆ. ದೈವವು ಪರೀಕ್ಷೆಮಾಡಿ ಗೆದ್ದವರಿಗೆ ಖಂಡಿತವಾಗಿಯೂ ಸಹಾಯ ಮಾಡುತ್ತೆ ಎಂದು ತೋರಿಸಲು ದೇವಲೋಕದಲ್ಲಿರುವ ಶಕುಂತಲೆಯ ತಾಯಿಯು ಆಕೆಯನ್ನು ಅಲ್ಲಿಗೆ ಎತ್ತಿಕೊಂಡು ಹೋಗುತ್ತಾಳೆ.
ಇಲ್ಲಿಂದ ಮುಂದಕ್ಕೆ ‘ದಮ’ಕ್ಕೆ ಸಂಬಂಧಿಸಿದ ಅತಿ ಮುಖ್ಯವಾದ ಸಂದೇಶ ಪ್ರಾರಂಭವಾಗುತ್ತದೆ. ಹಿಂದೆ ಹೇಳಿದಂತೆ ದುರ್ವಾಸನ ಶಾಪ ಪ್ರೇಮದ ತೀವ್ರತೆಗಿಂತಲೂ ಅದ ವೈಶಾಲ್ಯ ಮುಖ್ಯವೆಂಬ ತತ್ವವನ್ನು ಸೂಚಿಸುತ್ತದೆ. ಹೃದಯ ಲೋಹವು ವಿಶಾಲವಾಗಬೇಕಾದರೆ ಕಷ್ಟಗಳ ಅಗ್ನಿ ಮತ್ತು ಆಘಾತಗಳಿಲ್ಲದಿದ್ದರೆ ಸಾಧ್ಯವಿಲ್ಲ. ಸನ್ಮಾರ್ಗದಲ್ಲಿರುವವರಿಗೆ ದೈವ ಕೊಡುವ ಕಷ್ಟಗಳು ಅವರ ಹೃದಯವನ್ನು ಇನ್ನೂ ಪರಿಶುದ್ದ ಮಾಡಲಿಕ್ಕೆ ಮಾತ್ರ. ಉಂಗುರ ನೋಡಿ ತನ್ನ ತಪ್ಪಿಗೆ ಪಶ್ಚಾತಾಪಪಟ್ಟ ದುಷ್ಯಂತನ ಹೃದಯದಲ್ಲಿನ ಪ್ರೇಮ ವಿಶಾಲವಾಗುತ್ತದೆ. ಆರನೆಯ ಅಂಕದ ಕೊನೆಯಲ್ಲಿಯ ಒಂದು ಘಟನೆ ಇದನ್ನು ಸೂಚಿಸುತ್ತದೆ. ಧನಮಿತ್ರನೆಂಬ ಒಬ್ಬ ವರ್ತಕನು ಸಮುದ್ರ ಪ್ರಯಾಣ ಮಾಡುತ್ತಿರುವಾಗ ಹಡಗು ಮುಳುಗಿ ಸತ್ತು ಹೋಗಿದ್ದಾನೆಂಬ ವಾರ್ತೆ ಬರುವುದು. ಆತನಿಗೆ ಮಕ್ಕಳಿಲ್ಲದ ಕಾರಣ ಆತನ ಧನವೆಲ್ಲಾ ರಾಜನಿಗೆ ಸೇರಬೇಕೆಂದು ಮಂತ್ರಿಯ ಅಭಿಪ್ರಾಯ. ಈ ಸಂದರ್ಭದಲ್ಲಿ ಕೊನೆಗೆ ದುಷ್ಯಂತನ ಹೃದಯದಿಂದ ಬರುವ ಈ ಮಾತು ಬಹಳ ಬೆಲೆಯುಳ್ಳದ್ದು:-
ಜನರಾವಾವ ಸುಬಾಂಧವ
ಜನಮಂಗಲ್ದಿರ್ಪು ದವರ್ಗೆಪಾಪಂ ವೆರಗಂ
ದೆನಿಸಿರ ಲಾಯಾ ಬಾಂಧವ
ನೆನಿಪಂ ದುಷ್ಯಂತನೆಂದು ಸಾರುಗೆ ಪುರದೊಳ್
ದುಷ್ಯಂತನು ತನ್ನ ಪ್ರಿಯೆಯಾದ ಶಕುಂತಲೆಯನ್ನಗಲಿ ದುಃಖದಿಂದ ನೊಂದು ಇಂತಹ ಸಂದರ್ಭದಲ್ಲಿ ಇತರರ ದುಃಖವೂ ಹೀಗೆಯೇ ಅಲ್ಲವೇ ಎಂದರಿತು ಅಂತಹ ದುಃಖಿತರೆಲ್ಲರಲ್ಲೂ ತಾನು ಬೇರೆ ಅವರು ಬೇರೆ ಎಂಬ ಭೇದ ತೊರೆದು ವಿಶಾಲವಾದ ಪ್ರೇಮವನ್ನಿಟ್ಟು ಹೇಳುತ್ತಾನೆ. ನನ್ನ ರಾಜ್ಯದಲ್ಲಿ ಯಾವ ಮನುಷ್ಯನೇ ಆಗಲಿ ತನ್ನ ಬಂಧುವನ್ನು ಕಳೆದುಕೊಂಡು ದುಃಖಿಸುತ್ತಿದ್ದರೆ ಆ ಕಳೆದ ಬಂಧುವಾಗಿ ತಾನಿದ್ದೇನೆಂದು ಅವರಿಗೆ ಆಶ್ವಾಸನೆಯನ್ನು ದುಷ್ಯಂತ ಕೊಡುತ್ತಿದ್ದಾನೆ. ಪಾಪಕರವಲ್ಲದ ಎಲ್ಲ ಸಂದರ್ಭಗಳಲ್ಲೂ ಸ್ತ್ರೀಪುರುಷರೆಲ್ಲರೂ ಹೀಗೆ ಭಾವಿಸಲಿ. ಹೀಗೆಂದು ನನ್ನ ಪಟ್ಟಣದಲ್ಲೆಲ್ಲಾ ಸಾರಿ ಎಂದು ದುಷ್ಯಂತನು ಆಜ್ಞಾಪಿಸುವನು.
ಕಾಳಿದಾಸನ ನಾಟಕಗಳಲ್ಲೆಲ್ಲಾ ನಾಯಕರು ಒಂದಕ್ಕಿಂತ ಹೆಚ್ಚು ಜನ ಹೆಂಡತಿಗಳುಳ್ಳವರು ಎಂಬ ಒಂದು ಅಕ್ಷೇಪಣೆ ಇದೆ. ಇದು ಸರಿಯಲ್ಲ. ಈ ಕವಿ ಪ್ರೇಮದ ತೀವ್ರತೆಗಿಂತಲೂ ವೈಶಾಲ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿರುವನು. ಈ ಸಿದ್ಧಾಂತದ ಪೋಷಣೆಗಾಗಿಯೇ ಈತನು ಇಂತಹ ನಾಯಕರನ್ನು ಆರಿಸಿಕೊಂಡಿದ್ದಾನೆಂದು ಕಂಡು ಬರುತ್ತದೆ. ಶಾಕುಂತಲದ ೬ನೇ ಅಂಕದಲ್ಲಿ ಸಾನುಮತಿ ಎಂಬ ಅಪ್ಸರ ಸ್ತ್ರೀಯು ದುಷ್ಯಂತನು ಶಕುಂತಲೆಯ ವಿರಹವನ್ನು ಅನುಭವಿಸುತ್ತಿದ್ದುದನ್ನು ರಹಸ್ಯವಾಗಿ ಗಮನಿಸುತ್ತಿರುವಳು. ಆ ಸಮಯದಲ್ಲೂ ಆತನು ತನ್ನ ಹಿರಿಯ ಹೆಂಡತಿಯ ಮೇಲೆ ಪ್ರೇಮವಿಟ್ಟಿರುವುದನ್ನು ನೋಡಿ ಆಕೆ ಹೀಗೆ ಹೇಳುವಳು:-
“ ಈತನು ಮತ್ತೊಬ್ಬಳಲ್ಲಿ ಮನಸ್ಸುಳ್ಳವನಾದರೂ ಮೊದಲನೆಯವಳ ಪುರಸ್ಕಾರವನ್ನು ಇಚ್ಛೈಸುವನು. ಆದುದರಿಂದ ಇವನ ಮೈತ್ರಿಯು ಸ್ಥಿರವಾದದ್ದು.”
ಕಾಳಿದಾಸ ಕವಿಯು ತನ್ನ ನಾಟಕಗಳಿಂದ ಜಗತ್ತಿಗೆ ಕೊಟ್ಟಿರುವ ಪ್ರೇಮ ಸಿದ್ಧಾಂತಗಳನ್ನು ಹೀಗೆ ಸಂಗ್ರಹಿಸಬಹುದು:-
- ಪ್ರೇಮ ಧರ್ಮಕ್ಕೆ ವಿರೋಧವಿಲ್ಲದ್ದಾಗಿರಬೇಕು.
- ಪ್ರೇಮ ಹೃದಯಕ್ಕೆ ಸಂಬಂಧಿಸಿರುವುದರಿಂದ ಹೃದಯವಿರುವ ಎಲ್ಲಾ ಮಾನವರಿಗೂ ಇದರಲ್ಲಿ ಸ್ಥಾನವಿದೆ.( ಮಾಳವಿಕಾಗ್ನಿಮಿತ್ರ ನಾಟಕದಲ್ಲಿ ಮಹರಾಜನು ದಾಸಿಯಾದ ಮಾಳವಿಕೆಯನ್ನು ಪ್ರೇಮಿಸುವನು. ಶಾಕುಂತಲದಲ್ಲಿ ಅಡವಿಯಲ್ಲಿರುವವಳನ್ನು ಪ್ರೇಮಿಸುವನು) ವರ್ಗ ಭೇದವಿಲ್ಲ.
- ಸತ್ವಗುಣ ಪಕ್ಷಪಾತಿ. ( ರೂಪ, ವಿನಯ, ವಿದ್ಯೆ, ರಸಿಕತೆ, ಕಲೆ, ಇವುಗಳ ಆಧಾರದ ಮೇಲೆ ಪ್ರೇಮ ಬೆಳೆಯುವುದು.)
- ಪ್ರೇಮಕ್ಕೆ ಮಾನವರು ದೇವತೆಗಳು ಎಂಬ ಭೇದವಿಲ್ಲ.
- ಪ್ರೇಮಿಗೆ ಪ್ರಕೃತಿ ಎಲ್ಲಾ ಪ್ರೇಮಮಯ.
- ಕಾಮವು ತಮೋಗುಣ ಪ್ರಧಾನ. ಪ್ರೇಮವು ರಜೋಗುಣದಿಂದ ಸತ್ವಗುಣಕ್ಕೆ ಕರೆದೊಯ್ಯುವುದು. ಕಾಮದಲ್ಲಿ ಕೇವಲ ಸ್ವಾರ್ಥವಿದೆ. ಪ್ರೇಮದಲ್ಲಿ ಪ್ರೇಮಿಸಲ್ಪಡುವ ವ್ಯಕ್ತಿಯ ಹೃದಯಕ್ಕೂ ಪ್ರೇಮಿಸುವ ವ್ಯಕ್ತಿಯ ಹೃದಯಕ್ಕೂ ಸಮಾನವಾದ ಪ್ರಾಧಾನ್ಯವಿದೆ. ಪರಸ್ಪರತೆ ಇದೆ.
- ಪ್ರೇಮದ ತೀವ್ರತೆಗಿಂತಲೂ ವೈಶಾಲ್ಯ ಮುಖ್ಯವಾದುದು.
- ತಿರಸ್ಕಾರದಿಂದಲೂ ಪ್ರೇಮ ನಶಿಸುವುದಿಲ್ಲ.
- ಪ್ರೇಮ ವಿಶ್ವವ್ಯಾಪ್ತವಾಗಿ ಯೋಗದಲ್ಲಿ ಪರಿಣಮಿಸಿ ಮೋಕ್ಷಸಾಧನವಾಗಬೇಕು.
6ನೇ ಅಂಕದ ಕೊನೆಯಭಾಗದಲ್ಲಿ, ದುಷ್ಯಂತನು ತಾನು ಬಂಧುಗಳನ್ನಗಲಿದವರ ಬಂಧುವೆಂದು ಘೋಷಿಸಿ ಪ್ರೇಮ ಪರೀಕ್ಷೆಯಲ್ಲಿ ಉತ್ತೀರ್ಣನಾದ ಕೂಡಲೇ ಆತನನ್ನು ಯೋಗದ ಮೆಟ್ಟಿಲಿಗೇರಿಸಲು ಇಂದ್ರನ ಸಾರಥಿ ಬರುವನು. ಅಲ್ಲಿಂದ ರಾಕ್ಷಸ ಸಂಹಾರಕ್ಕಾಗಿ ದುಷ್ಯಂತನು ಇಂದ್ರನ ರಥದಲ್ಲಿ ಕುಳಿತು ಪ್ರಯಾಣ ಮಾಡುವನು. ಇಲ್ಲಿಂದ ಮುಂದಿನ ಕಥೆಯೆಲ್ಲ ನೇಮದ ಹಂತದಲ್ಲಿರುತ್ತೆ.
1-6-1984
೧. ದಮ
ಶಾಕುಂತಲ ನಾಟಕದಲ್ಲಿ ಇನ್ನು ಉಳಿದಿರುವುದು ಏಳನೆಯ ಅಂಕ. ಇದರ ಕಥೆ ನಡೆಯುವುದು ಭೂಲೋಕ ದೇವಲೋಕಗಳ ನಡುವೆ. ಇಲ್ಲಿನ ಸಂದೇಶ ವಿಶ್ವವ್ಯಾಪ್ತವಾಗಿರುವ ಪ್ರೇಮವುಳ್ಳ ಅಧಿಕಾರಿ ಯೋಗಸಾಧನೆಯಲ್ಲಿ ತೊಡಗಬೇಕೆಂಬುದೇ. ಯೋಗವೇ ನೇಮದ ಲಕ್ಷಣ. ಯೋಗವೆಂದರೆ ಮನೋವೃತ್ತಿಯನ್ನು ನಿರೋಧಿಸಿ ಹಿಂತಿರುಗಿಸಿ ವಿಶ್ವದ ಮೂಲ ತತ್ವದೆಡೆಗೆ ಕೊಂಡೊಯ್ಯುವುದು. ಇದರಲ್ಲಿ ಮೂಲ ಪ್ರವೃತ್ತಿ ಶಕ್ತಿಗಳನ್ನು ಎದುರಿಸಿ ಜಯಿಸಬೇಕಾಗಿರುತ್ತದೆ. ಕಾಮ, ಕ್ರೋಧ, ಅಹಂಕಾರ, ಅಜ್ಞಾನ ಮುಂತಾದ ಈ ಪ್ರವೃತ್ತಿ ಶಕ್ತಿಗಳ ಪ್ರತೀಕವೇ ರಾಕ್ಷಸರು. ಸಾತ್ವಿಕ- ಆನಂದದ ಪ್ರತೀಕವಾಗಿರುವ ದೇವತೆಗಳಿಗೆ ಇವರು ವೈರಿಗಳು. ಈ ದೇವತೆಗಳಿಗೆ ಒಡೆಯ ಇಂದ್ರ. ಈತನು ಪರಮಾತ್ಮ ತತ್ವಕ್ಕೆ ಪ್ರತೀಕನಾಗಿರುವನು. ದುಷ್ಯಂತನು ಜೀವಾತ್ಮ ಯೋಗ ಮಾರ್ಗದಲ್ಲಿ ರಾಕ್ಷಸ ಶಕ್ತಿಗಳನ್ನು ಗೆಲ್ಲುವವನು ಜೀವತ್ಮನೆ. ಪರಮಾತ್ಮನಲ್ಲ. ಆದುದರಿಂದಲೇ ಇಂದ್ರನು ರಾಕ್ಷಸರನ್ನು ಗೆಲ್ಲಲು ದುಷ್ಯಂತನ ಸಹಾಯವನ್ನಪೇಕ್ಷಿಸಿದ್ದು. ರಾಕ್ಷಸರನ್ನು ಗೆದ್ದ ದುಷ್ಯಂತನನ್ನು ಇಂದ್ರನು ತನ್ನ ಅರ್ಧಸನದಲ್ಲಿ ಕುಳ್ಳಿರಿಸಿ ಗೌರವಿಸುವನು. ದುಷ್ಯಂತನು ರಾಕ್ಷಸರನ್ನು ಗೆಲ್ಲಲು ತನ್ನಲ್ಲಿದ್ದ ಶಕ್ತಿ ಇಂದ್ರನದೇ ಎಂದು ಭಾವಿಸುವನು. ಈ ಸಂದರ್ಭದಲ್ಲಿ ಸೂರ್ಯನು ಅರುಣನನ್ನು ಮುಂದಿಡದಿದ್ದರೆ ಆ ಅರುಣನು ಕತ್ತಲನ್ನು ಹೇಗೆ ದೂರಮಾಡಬಲ್ಲನು? ಎಂಬ ಉಪಮಾನವನ್ನು ದುಷ್ಯಂತನು ಬಳಸುತ್ತಾನೆ. ಸೂರ್ಯನ ತೇಜಸ್ಸೇ ಅರುಣನದು. ಆದುದರಿಂದ ಜೀವಾತ್ಮ ಪರಮಾತ್ಮನ ತೆಜಸ್ಸಿನಿಂದ ಬೆಳಗುವವದಲ್ಲದೆ ಬೇರೆ ಚೈತನ್ಯವಲ್ಲವೆಂಬ ಸಿದ್ಧಾಂತವನ್ನು ಇಲ್ಲಿ ಊಹಿಸಿಕೊಳ್ಳಬೇಕು. ಇಂದ್ರನ ರಥದಲ್ಲಿ ಭೂಮಿಗಿಳಿಯುವ ದುಷ್ಯಂತನು ಸಪ್ತಮಾರುತಗಳ ಪ್ರಸ್ತಾವ ಮಾಡುವನು. ಇದು ಸಹ ಯೋಗ ಸೂಚಕ.
ಹೇಮಕೂಟ ಪರ್ವತದಲ್ಲಿಳಿದ ದುಷ್ಯಂತನು ಅಲ್ಲಿನ ಮಾರೀಚಾಶ್ರಮವನ್ನು ಪ್ರವೇಶಿಸುವನು. ಅಲ್ಲಿನ ತಪಸ್ವಿಗಳ ತಪಸ್ಸಿನ ವರ್ಣನೆ ‘ದಮ’ದ ಪರಾಕಾಷ್ಟೆಯನ್ನು ಸೂಚಿಸುತ್ತದೆ. ಅವರು ಬಯಸಿದ್ದನ್ನು ಕೊಡಬಲ್ಲ ಕಲ್ಪವೃಕ್ಷಗಳ ನಡುವೆ ಇದ್ದರೂ, ಗಾಳಿಯನ್ನು ಮಾತ್ರ ಸೇವಿಸುವರು. ರತ್ನ ಶಿಲೆಗಳ ಮೇಲೆ ಕುಳಿತಿದ್ದರೂ ಅವರ ಮನಸ್ಸು ಧ್ಯಾನದಲ್ಲಿ ಮುಳುಗಿರುತ್ತದೆ. ಚಿನ್ನದ ತಾವರೆಗಳಿರುವ ನೀರಿನಲ್ಲಿ ಧರ್ಮಕ್ಕಾಗಿ ಮಾತ್ರ(ವಿಹಾರಕ್ಕಲ್ಲ) ಸ್ನಾನ. ಅಪ್ಸರ ಸ್ತ್ರೀಯರ ನಡುವೆ ಸಂಯಮ. ಭೂಲೋಕದ ಮುನಿಗಳು ತಪಸ್ಸುಮಾಡಿ ಯಾವ ದೇವಲೋಕದ ಸುಖಗಳನ್ನು ಅನುಭವಿಸಬೇಕೆಂದು ಬಯಸುವರೋ ಆ ಸುಖಗಳು ತಮ್ಮ ಬಳಿಯಿದ್ದರೂ ಅವುಗಳ ಮೇಲೆ ಆಸಕ್ತಿಯಿಲ್ಲದೆ ಇವರು ತಪಸ್ಸು ಮಾಡುತ್ತಿದ್ದಾರೆ. ಎಂಬ ವರ್ಣನೆಗಳಲ್ಲಿ ಪರಮಾವಧಿಯಲ್ಲವೇ?
ಇಲ್ಲಿ ದುಷ್ಯಂತನು ತನ್ನ ಪುತ್ರನನ್ನೂ ಶಕುಂತಲೆಯನ್ನೂ ನೋಡುವನು. ಇವರ ಸಮಾಗಮ ಮೊದಲನೆಯ ಅಂಕದಲ್ಲಿನ ಶಕುಂತಲಾ ದುಷ್ಯಂತರ ಸಮಾಗಮಕ್ಕಿಂತಲೂ ಭಿನ್ನವಾದುದು. ಇಲ್ಲಿ ಕಾಮದ ವಾಸನೆ ಎಳ್ಳಷ್ಟೂ ಇಲ್ಲ. ಪ್ರೇಮದ ಪರಾಕಾಷ್ಠೆಯನ್ನಿಲ್ಲಿ ನೋಡಬಹುದು. ಮುಂದೆ ಮಾರೀಚ ಋಷಿಯ ಆಶೀರ್ವಾದದಲ್ಲಿ ಗೃಹಸ್ಥ ಧರ್ಮದ ಸೂಚನೆ. ಭರತವಾಕ್ಯದಲ್ಲಿ ಪುನರ್ಜನ್ಮವಿಲ್ಲದಿರಲಿ ಎಂಬ ಬಯಕೆಯೊಂದಿಗೆ ಕೊನೆಯದಾದ ಮೋಕ್ಷಪುರುಷಾರ್ಥದ ಸಂದೇಶ. ಇಂತಹ ಉದಾತ್ತ ಭೂಮಿಕೆಯಲ್ಲಿ ನಾಟಕ ಮುಗಿಯುವುದು. ಸಿಂಹಾವಲೋಕನ ಮಾಡಿದರೆ ದಮದ ಮೂಲ ಶಕ್ತಿಯಿಂದ ಮಾನವನು ಕಾಮದಿಂದ ಪ್ರೇಮ ಮತ್ತು ನೇಮದ ಹಂತಗಳನ್ನು ಹೇಗೆ ಕ್ರಮವಾಗಿ ಹೊಂದಬಲ್ಲನೆಂಬ ಸಂದೇಶ ವಿಶದವಾಗುತ್ತದೆ.
1-7-1984
೨.ದಾನ
ಬೃಹದಾರಣ್ಯಕೋಪನಿ಼ಷತ್ತಿನಲ್ಲಿ ಕೊಟ್ಟಿರುವ ಧರ್ಮದ ಬೀಜಾಕ್ಷರಗಳಲ್ಲಿ ಎರಡನೆಯ “ದ” ಕಾರ “ದಾನ”ವನ್ನು ಸೂಚಿಸುತ್ತದೆ. ಇದು ಮಾನವರಿಗೆ ಉಪದೇಶಿಸಲ್ಪಟ್ಟಿರುವ ಮುಖ್ಯ ಧರ್ಮ. ಮನುಸ್ಮೃತಿಯಲ್ಲಿನ-
ತಪಃ ಪರಂ ಕೃತಯುಗೇ
ತ್ರೇತಾಯಾಂ ಜ್ನಾನ ಮುಚ್ಯತೇ
ದ್ವಾಪರೇ ಯಜ್ನಮೇವಾಹಃ
ದಾನ ಮೇಕಂ ಕಲೌಯುಗೆ !!
ಎಂಬ ಶ್ಲೋಕದಂತೆ ಮನಃಸ್ಥ್ಯೆರ್ಯವೂ ದೇಹಬಲವು ಕಡಿಮೆಯಾಗಿರುವುದರಿಂದ ದ್ವಾಪರ ಯುಗದಲ್ಲಿ ಯಜ್ಙವನ್ನೂ, ಕಲಿಯುಗದಲ್ಲಿ ದಾನವನ್ನೂ ಮುಖ್ಯ ದಮಗಳಾಗಿ ಮಾನವರಿಗೆ ಭೋಧಿಸಲಾಗಿದೆ. ಯಜ್ನವು ಧರ್ಮ ಮತ್ತು ದಾನಗಳ ಮಿಶ್ರಣವಾಗಿರುವುದರಿಂದ ಅದನ್ನೂ ‘ದಾನ ‘ ದಲ್ಲಿ ಸೇರಿಸಿಕೊಳ್ಳಬಹುದು. ‘ದಮ’ ದ ಚರ್ಚೆಯಲ್ಲಿ ಮಾನವನ ಪ್ರವೃತ್ತಿಯಲ್ಲಿ ಅದು ಹೇಗೆ ಕಾಮವನ್ನು ಪ್ರೇಮವನ್ನಾಗಿ ಪರಿವರ್ತಿಸಿ ಪ್ರೇಮವನ್ನು ವಿಶಾಲಗೊಳಿಸಿ ನೇಮದ ನಿವೃತ್ತಿ ಮಾರ್ಗಕ್ಕೆ ಕೊಂಡೊಯ್ಯುತ್ತದೆ ಎಂಬ ವಿಷಯ ವಿವರಿಸಲಾಯಿತು. ಪ್ರೇಮದ ಪರಿಣಾಮವೇ ದಾನ. ವಿವೇಕ ಮತ್ತು ಪ್ರೇಮ ಎಂಬ ಎರಡು ದೈವೀ ಗುಣಗಳೂ ದಾನದಲ್ಲಿ ಸೇರಿಕೊಂಡಿವೆ. ದಾನದ ವಿಷಯದಲ್ಲಿ ಕೊಡುವವನ ಮತ್ತು ತೆಗೆದುಕೊಳ್ಳುವವನ ಪಾತ್ರಾಪಾತ್ರ ವಿವೇಕದ ವಿಷಯದಲ್ಲಿ ಪ್ರೇಮವೂ ಕೆಲಸಮಾಡುತ್ತವೆ. ದಾನವನ್ನು ಕೊಡಲು ಪ್ರೇರಕವಾದ ಪ್ರೇಮದ ಹೃದಯ ಭಾವವನ್ನು ಆದರವೆಂದು ಕರೆಯುವುದೂ ಉಂಟು. ಇದರಲ್ಲಿ ದಯೆಯೂ ಸೇರಿದೆ. “ಸರ್ವ ಭೂತ ಹಿತೇ ರಥಃ”- ಸಮಸ್ತ ಭೂತಗಳ ಹಿತದಲ್ಲಿಯು ಆಸಕ್ತಿಯುಳ್ಳವನು ಎಂಬ ವಾಕ್ಯ ಅನೇಕ ಕಡೆ ಬರುತ್ತದೆ. ಈ ಆಸಕ್ತಿಯು, ಮೇಲೆ ಹೇಳಿದ ವಿಶಾಲವಾದ ಪ್ರೇಮದ ರೂಪವೇ. ನಿಷ್ಠೆ ಮತ್ತು ಅದರ ಸೇರಿ ಶ್ರದ್ಧೆ ಎನ್ನಲ್ಪಡುತ್ತದೆ. ಶ್ರದ್ದೆಯಿಂದ ದಾನಮಾಡಬೇಕು. ಅಶ್ರದ್ಧೆಯಿಂದ ದಾನಮಾಡಬಾರದು ಎಂಬುದು ಉಪನಿಷತ್ತಿನ ಉಪದೇಶ.
ದಾನವೆಂದರೆ ಹಣ ಕೊಡುವುದೂ ವಸ್ತುಗಳನ್ನು ಕೊಡುವುದು ಮಾತ್ರವೇ ಅಲ್ಲ. ವಿದ್ಯೆ ಬೋಧಿಸುವುದು, ದೇಹ ಶಕ್ತಿಯಿಂದ ಸಹಾಯ ಮಾಡುವುದು, ಅಭಯ, ರಕ್ಷಣೆ ಇತ್ಯಾದಿಗಳೆಲ್ಲವೂ ಇದರಲ್ಲಿ ಸೇರಿಕೊಂಡಿವೆ. ದಾನವೆಂದರೂ ಪರೋಪಕಾರವೆಂದರೂ ಒಂದೇ. ಪ್ರತಿಫಲಾಪೇಕ್ಷೆಯಿಂದ ಕೊಡುವುದೂ, ಧರ್ಮವಾಗಿ ಹೇಳಲ್ಪಟ್ಟಿರುವ ದಾನಗಳಲ್ಲಿ ಸೇರುವುದಿಲ್ಲ. ಬಡತನವೆಂದು ಕನಿಕರದಿಂದ ದಾನ ಮಾಡಿದರೂ ತೆಗೆದುಕೊಂಡ ಧನದ ಅಥವಾ ವಸ್ತುವಿನ ಉಪಯೋಗ ಹೇಗಿರುತ್ತೆಂಬುದನ್ನೂ ಗಮನಿಸಬೇಕು. ಜೂಜು, ಕುಡಿತ ಮುಂತಾದ ಕೆಟ್ಟ ಅಭ್ಯಾಸಗಳಿಂದ ದರಿದ್ರನಾಗಿರುವವನಿಗೆ ಅನ್ನದಾನ ಮಾಡಬಹುದೇ ಹೊರತು ಹಣ ಕೊಟ್ಟರೆ ಪುನಃ ಜೂಜಿಗೋ, ಕುಡಿತಕ್ಕೂ ದುರ್ವ್ಯಯ ಮಾಡುತ್ತಾನೆ.
ತ್ಯೆತ್ತೀರಿಯೋಪನಿಷತ್ತಿನಲ್ಲಿ ದಾನವನ್ನು ಶ್ರದ್ಧೆಯಿಂದಲೂ, ಲಜ್ಜೆಯಿಂದಲೂ, ಭಯದಿಂದಲೂ, ಮೈತ್ರೀ ಭಾವದಿಂದಲೂ ಕೊಡಬೇಕೆಂದು ಉಪದೇಶಿಸಲ್ಪಟ್ಟಿದೆ. ಲಜ್ಜೆಯಿಂದ ಕೊಡಬೇಕೆಂದರೆ ಅಹಂಕಾರ ಬಿಟ್ಟು ವಿನಯದಿಂದ ಕೊಡಬೇಕೆಂದು ಅರ್ಥ. ಹೆದರಿಕೆಯಿಂದ ಕೊಡಬೇಕೆಂದರೆ ದಾನದಿಂದ ವಿಪರೀತ ಪರಿಣಾಮಗಳಾಗದಂತೆ ಎಚ್ಚರಿಕೆಯಿಂದ ಕೊಡಬೇಕೆಂದರ್ಥ ಈ ವಿಷಯದಲ್ಲಿ ನಮ್ಮ ಮನೆಯವರ ಮರೆಯಲಾಗದ ಒಂದು ವಿಷಾದ ಘಟನೆಯನ್ನು ಪ್ರಕಟಪಡಿಸಲಿಚ್ಛಿಸುತ್ತೇನೆ.
ನಮ್ಮ ತಾಯಿ ಈ ಘಟನೆಯನ್ನು ನಮ್ಮ ಚಿಕ್ಕಂದಿನಲ್ಲೇ ನನಗೆ ತಿಳಿಸಿದರು. ಅದನ್ನು ನಮ್ಮ ಮನೆಯಲ್ಲಿ ಯಾವಾಗಲೂ ಜ್ಞಾಪಕ ಮಾಡಿಕೊಳ್ಳುತ್ತ ಇರುತ್ತೇವೆ. ನಮ್ಮ ತಾಯಿ ಒಬ್ಬರೇ ಮನೆಯಲ್ಲಿರುವಾಗ ಒಬ್ಬ ಭಿಕ್ಷುಕ ಬಾಗಿಲಿಗೆ ಬಂದು ಕೂಗಿದ. ಆಕೆ ಬಂದು ಬಾಗಿಲು ತೆಗೆದು ನೋಡುವುದರಲ್ಲಿ ಆತ ಒಬ್ಬ ಮೂಗನಾಗಿದ್ದ. ಬಾಯಾರಿಕೆಯೆಂದೂ ನೀರು ಬೇಕೆಂದು ಸನ್ನೆ ಮಾಡಿ ತೋರಿಸಿದ. ನಮ್ಮ ತಾಯಿ ಅಡಿಗೆ ಮನೆಗೆ ಹೋಗಿ ನೀರಿದ್ದ ತಂಬಿಗೆಯನ್ನು ತಂದು ನೀರು ಹಾಕಿದಳು. ನೀರು ಬಾಯಲ್ಲಿ ಹೋದ ಕೂಡಲೇ ಆ ಭಿಕ್ಷುಕ ನೀರು ಕುಡಿಯುವುದನ್ನು ನಿಲ್ಲಿಸಿ ನಮ್ಮ ತಾಯಿಯನ್ನು ಶಪಿಸುವಂತೆ ಕೋಪದಿಂದ ನೋಡಿ ಹೊರಟುಹೋದ.
ಮೂಗನಾಗಿರುವುದರಿಂದ ನಮ್ಮ ತಾಯಿ ಆತನ ಕ್ಯೆಯಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ. ನಮ್ಮ ತಾಯಿಯು ಹೀಗೇಕೆ ಈತ ನೀರು ಕುಡಿಯದೆ ಹೊರಟುಹೋದನೆಂಬ ಭ್ರಾಂತಿಯಿಂದ ಮನೆಯೊಳಕ್ಕೆ ಹೋಗಿ ಸ್ವಲ್ಪ ಆಲೋಚಿಸುವಷ್ಟರಲ್ಲಿ ಆಕೆಯ ನೆನಪಿಗೆ ಬಂತು. ಅದಕ್ಕೆ ಮುಂಚಿತವಾಗಿ ಆಕೆ ಮೆಣಸಿನ ಪುಡಿಯನ್ನು ಕುಟ್ಟಿ ಪುಡಿ ಅಂಟಿಕೊಂಡಿರುವ ಕ್ಯೆಯನ್ನು ಆ ತಂಬಿಗೆಯ ನೀರಲ್ಲಿ ಅದ್ದಿದ್ದಳೆಂದು. ಕೂಡಲೇ ಆಕೆಗೆ ಮನಸ್ಸಿಗೆ ಬಹಳ ವ್ಯಥೆ ಆಯಿತು. ಆಕೆಗೆ ನಾಲ್ಕನೇ ಗಂಡುಮಗು ಸುಮಾರು 4 ವರ್ಷದ್ದು ಒಂದಿತ್ತು. ಆ ಮಗು ಆರೋಗ್ಯವಾಗಿದ್ದರೂ ಅದೇ ದಿನ ಸಾಯಂಕಾಲಕ್ಕೆ ಎಳವು ಬಂದಿತು. ಅವರೂ ಇವರೂ ಸೇರಿ ಚಿಕಿತ್ಸೆ ಮಾಡುತ್ತಿರುವಷ್ಟರಲ್ಲಿ ಮೇಲಿಂದ ಮೇಲೆ ಎಳವು ಬಂದು ತೀರಿಕೊಂಡಿತು. ನೀರಿನ ದಾನದಲ್ಲಿ ಅಶ್ರದ್ಧೆ ಮಾಡಿದ್ದರಿಂದ ಬಾಯಾರಿದ ಭಿಕ್ಷುಕನ ಬಾಯಿಗೆ ಕಾರದ ಪುಡಿಯ ನೀರು ಹೋಗಿ ಅವನ ಮನಸ್ಸಿಗೆ ಬಹಳ ನೋವಾಗಿ ಮೂಗನಾದ ಅವನ ಶಾಪದಿಂದ ಮಗು ಸತ್ತನೆಂದು ಆಕೆ ಭಾವಿಸಿದಳು.
ಈ ಕಥೆ ಕೇಳಿದವರಿಗೆ ದಾನವನ್ನು ಹೆದರಿಕೆಯಿಂದಲೂ ಮಾಡಬೇಕೆಂದು ಮನದಟ್ಟಾಗುತ್ತದೆ.
1-8-1984
೨. ದಾನ
ದಾನವನ್ನು ಪವಿತ್ರವನ್ನಾಗಿ ಮಾಡುವುದು ಶ್ರದ್ದೆ. ದಾನ ಪಡೆಯುವವನ ಹಿತದಲ್ಲಿ ಆಸಕ್ತಿಯೇ ಈ ಶ್ರದ್ಧೆಯ ಮುಖ್ಯ ಗುಣ. ಇದರಲ್ಲಿ ಸ್ವಾರ್ಥವಿರುವುದಿಲ್ಲ. ಅಹಂಕಾರವಿರುವುದಿಲ್ಲ. ತಾಯಿ ಮಗುವಿಗೆ ಮೊಲೆಯುಣಿಸುವಾಗ ಮಗುವಿನ ಹಿತದ ಆಸಕ್ತಿ ಬಿಟ್ಟು, ಸ್ವಾರ್ಥವಾಗಲಿ, ಅಹಂಕಾರವಾಗಲಿ ಇರುವುದಿಲ್ಲವೋ ಆ ರೀತಿಯಾದ ಮನೋಭಾವದಿಂದ ದಾನಮಾಡಬೇಕು. ಒಬ್ಬ ವೇದ ಶಾಸ್ತ್ರ ಪಾರಂಗತನಿದ್ದ. ಆತನು ನಿತ್ಯಕರ್ಮದಲ್ಲಿ ಅನ್ನ (ಆಹಾರ ಪದಾರ್ಥ)ವನ್ನು ಹವಿಸ್ಸಿನ ರೂಪದಲ್ಲಿ ದೇವತೆಗಳಿಗೆ ಕೊಡುತ್ತಿದ್ದ. ಆದರೆ ಆತನು ಲೋಭಿ. ಆದುದರಿಂದ ಬಡವರಿಗೆ ದಾನಮಾಡುತ್ತಿರಲಿಲ್ಲ. ಇನ್ನೊಬ್ಬನು ಅಷ್ಟು ಶಾಸ್ತ್ರ ನಿಯಮಗಳನ್ನು ಅನುಸರಿಸುತ್ತಿರಲಿಲ್ಲ. ಬ್ರಾಹ್ಮಣರಿಗೆ ನಿಷಿದ್ಧವಾದ ಬಡ್ಡಿಗೆ ಹಣ ಕೊಡುವ ವೃತ್ತಿಯಿಟ್ಟುಕೊಂಡಿದ್ದ. ಆದರೆ ಆತನ ಹೃದಯದಲ್ಲಿ ಪ್ರೇಮ ಮತ್ತು ದಯೆ ತುಂಬಿದ್ದವು. ಬಡವರಿಗೆ ಕೈಲಾದಷ್ಟು ಮನಃಪೂರ್ತಿಯಾಗಿ ದಾನಮಾಡುತ್ತಿದ್ದ. ಆತನೂ ದೇವತೆಗಳಿಗೆ ಹವಿಸ್ಸನ್ನು ಕೊಡುತ್ತಿದ್ದ. ದೇವತೆಗಳು ಈ ಇಬ್ಬರು ಕೊಡುವ ಹವಿಸ್ಸಿನ ತಾರತಮ್ಯವನ್ನು ಕುರಿತು ಚರ್ಚೆ ಮಾಡಿದರು. ಇಬ್ಬರಲ್ಲೂ ಒಂದು ದೋಷವಿದೆ. ಒಂದು ಗುಣವೂ ಇದೆ. ಮೊದಲನೆಯವನ ದೋಷ ಲೋಭಿತ್ವ. ಎರಡನೆಯವನ ದೋಷ ನಿಷಿದ್ಧವಾದ ಬಡ್ಡಿಯ ಜೀವನ. ಮೊದಲನೆಯವನ ಗುಣ ವೇದಶಾಸ್ತ್ರಗಳ ಜ್ಞಾನ. ಎರಡನೆಯವನ ಗುಣ ಬಡವರಿಗೆ ದಾನ ಕೊಡುವ ಉದಾರ ಹೃದಯ. ದೇವತೆಗಳು ಇಬ್ಬರಲ್ಲೂ ಗುಣದೋಷಗಳು ಸಮಾನವೆಂದು ಭಾವಿಸಿ ಅವರು ತಮಗೆ ಕೊಡುತ್ತಿರುವ ಅನ್ನ ಸಮಾನವೆಂದು ತೀರ್ಮಾನಿಸಿದರು. ಆಗ ಬ್ರಹ್ಮದೇವನು ಬಂದು “ಅಯ್ಯಾ! ನಿಮ್ಮ ತೀರ್ಮಾನ ಸರಿಯಲ್ಲ. ಒಂದು ಹೆಚ್ಚು, ಒಂದು ಕಡಿಮೆಯಿರುವಾಗ ಎರಡೂ ಸಮಾನವೆಂದು ಭಾವಿಸಬೇಡಿ. ದಾನಿ ಕೊಡುವ ಹವಿಸ್ಸಿನಲ್ಲಿ ಅವನ ಹೃದಯದಲ್ಲಿನ ಉದಾರತೆ ಎಂಬ ಶ್ರದ್ಧೆಯಿದೆ. ಆ ಶ್ರದ್ಧೆಯಿಂದ ಅವನ ಅನ್ನ ಪವಿತ್ರವಾಗಿದೆ. ಆದರೆ ವೇದಶಾಸ್ತ್ರಜ್ಞಾನವುಳ್ಳವನ ಹೃದಯದಲ್ಲಿ ಲೋಭಿತನವೆಂಬ ಅಶ್ರದ್ಧೆಯಿದೆ. ( ಆತನು ಹವಿಸ್ಸನ್ನು ಕೊಡುವಾಗಲೂ ಇಷ್ಟು ಖರ್ಚಾಯಿತಲ್ಲ ಎಂದು ಅಂತರಂಗದಲ್ಲಿ ಲೆಕ್ಕ ಹಾಕುತ್ತಲೇ ಇರುತ್ತಾನೆ.) ಇವನ ಈ ಶ್ರದ್ಧೆಯಿಂದ ಅವನ ದಾನ ಕಲುಷಿತವಾಗಿದೆ.) ಎಂದು ದೇವತೆಗಳಿಗೆ ಬುದ್ಧಿವಾದ ಹೇಳಿದ ಎಂಬುದಾಗಿ ಮನುಸ್ಮೃತಿಯಲ್ಲಿ ಹೇಳಲಾಗಿದೆ.
“ ಶ್ರೋತ್ರಿಯಸ್ಯ ಕದರ್ಯಸ್ಯ
ವದಾನಸ್ಯಚ ವಾರ್ಧುಷೇಃ!
ಮೀಮಾಂತ್ವೂಭಯಂ ದೇವಾಹಃ
ಸಹಮನ್ನಮ ಕಲ್ಪಯನ್ !
ತಾನ್ಪ್ರಜಾಪತಿ ರಾಹೈತ್ಯ
ಮಾಕೃದ್ವಮ್ ವಿಷಮಂಸಮಂ!
ಶ್ರದ್ಧಾಪೂತಂ ವದಾನ್ಯಸ್ಯ
ಹತ ಮಶ್ರದ್ಧಯೇತರತ್ !
ಅಲ್ಲದೆ ಮನುಸ್ಮೃತಿಯು ಬೇಡಿದವರಿಗೆ ಏನಾದರೂ ಕೊಡುವ ಪ್ರವೃತ್ತಿಯನ್ನು ಬೆಳಿಸಿಕೊಳ್ಳಬೇಕೆಂದೂ, ಅವರಿಂದ ಸತ್ಪಾತ್ರದಾನಕ್ಕೆ ಅವಕಾಶ ಲಭಿಸುವುದೆಂದೂ, ಆ ಸತ್ಪಾತ್ರದಾನದಿಂದ ತನ್ನ ನಿಜವಾದ ಉದ್ಧಾರ ಆಗುವುದೆಂದೂ ಬೋಧಿಸುತ್ತದೆ. ದಾನದಲ್ಲಿ ಆದರ( ಶ್ರದ್ಧೆ)ಕ್ಕೆ ಮನುಸ್ಮೃತಿಯು ಅತ್ಯಂತ ಪ್ರಾಶಸ್ತ್ಯವನ್ನು ಕೊಟ್ಟಿದೆ. ಇದು ಹೃದಯದಿಂದ ಬರಬೇಕು. ಒಳ್ಳೆಯ ಹೃದಯದಿಂದ ಈ ಆದರ ಬರುವುದರಿಂದ ಪವಿತ್ರವಾದದ್ದು. ಒಳ್ಳೆಯ ಹೃದಯ ಇನ್ನೊಂದು ಹೃದಯವನ್ನು ಒಳ್ಳೆಯದನ್ನಾಗಿ ಮಾಡಬಲ್ಲುದು. ಆದುದರಿಂದ ಆದರದಿಂದ ಕೂಡಿದ ದಾನವು ಕೊಡುವವರನ್ನೂ, ತೆಗೆದುಕೊಳ್ಳುವವರನ್ನೂ ಪವಿತ್ರರನ್ನಾಗಿ ಮಾಡಬಲ್ಲದು. ಇಂತಹ ಪರೋಪಕಾರ ಮಾರ್ಗದಿಂದ ಒಬ್ಬರ ಹೃದಯದಿಂದ ಇನ್ನೊಬ್ಬರ ಹೃದಯ ಹೀಗೆ ಎಲ್ಲರ ಹೃದಯಗಳನ್ನೂ ಪವಿತ್ರಗೊಳಿಸುವ ಅವಕಾಶವಿದೆ. ದಾನದಲ್ಲಿ ವಸ್ತುವಿನ ಉಪಯೋಗಕ್ಕಿಂತಲೂ ಹೃದಯದ ಪವಿತ್ರೀಕರಣಕ್ಕೆ ಪ್ರಾಧಾನ್ಯವಿದೆ. ಸಾಧಾರಣವಾಗಿ ದಾನ ಕೊಡುವವನಿಗೆ ಸದ್ಗತಿ, ತೆಗೆದುಕೊಳ್ಳುವವನಿಗೆ ವಸ್ತುವಿನ ಪ್ರಯೋಜನವೊಂದೇ ಎಂಬ ನಮ್ಮೆಲ್ಲರ ತಿಳುವಳಿಕೆಯನ್ನು ತಿದ್ದುವಂತೆ “ಮನು” ಮೇಲ್ಕಂಡ ಹೃದಯ ಪವಿತ್ರೀಕರಣವನ್ನು ಮನಸ್ಸಿನಲ್ಲಿಟ್ಟುಕೊಂಡು ಇಬ್ಬರಿಗೂ ಸದ್ಗತಿ ಉಂಟೆಂದು ಹೀಗೆ ಹೇಳುತ್ತಾನೆ :-
ಯೋರ್ಚಿತಮ್ ಪ್ರತಿ ಗೃಹಣಾತಿ ದದಾತ್ಯರ್ಚಿತಾಮೇವಚ
ತಾವುಭೌಗಚ್ಛತಃ ಸ್ವರ್ಗಂ ನರಕಂತು ವಿಪರ್ಯಾಯೇ !!
ಕೊಡುವಾಗ ಆದರವಿದ್ದರೆ ಇಬ್ಬರೂ ಸ್ವರ್ಗಕ್ಕೆ ಹೋಗುವರು. ಅನಾದರವಿದ್ದರೆ ಇಬ್ಬರೂ ನರಕಕ್ಕೆ ಹೋಗುವರು.
ತಾಯಿ ಮಗುವಿಗೆ ಹಾಲು ಕುಡಿಸಿದ ಮೇಲೆ ತಾನೆಂತಹ ದೊಡ್ಡ ಕೆಲಸ ಮಾಡಿದನೆಂದು ಡಂಗುರ ಹೊಡೆಯುವುದಿಲ್ಲ. ಹಾಗೆಯೇ ಇದ್ದವನು ಇಲ್ಲದವನಿಗೆ ಸಹಾನುಭೂತಿಯಿಂದಲೋ ದಯೆಯಿಂದಲೂ ಕೊಟ್ಟರೆ ಅದನ್ನು ಹೇಳಿಕೊಳ್ಳಬಾರದು.
“ನ ದತ್ವಾ ಪರಿಕೀರ್ತಯೇತ್ “ ಎಂದು ಮನು ಹೇಳುತ್ತಾನೆ.
ಈ ದಿನ ಒಬ್ಬರು ಐಶ್ವರ್ಯವುಳ್ಳವರಾಗಿದ್ದರೆ ಅದು ಹಿಂದಿನ ಜನ್ಮದಲ್ಲಿ ಮಾಡಿದ ದಾನದ ಫಲ. ದಾನ ಮಾಡಿದ ಆ ವಸ್ತುವಿಗೆ ತಕ್ಕಂತೆ ಮುಂದಿನ ಜನ್ಮದಲ್ಲಿ ಫಲ ತಪ್ಪದೆ ದೊರಕುವುದು. ದಾನ ಮಾಡದಿರುವವರು ದರಿದ್ರರಾಗಿ ಹುಟ್ಟುವರು ಎಂಬುದಾಗಿ ಶಾಸ್ತ್ರಗಳೂ ಪುರಾಣಗಳೂ ಒತ್ತಿ ಒತ್ತಿ ಹೇಳಿವೆ. ಮನುಸ್ಮೃತಿಯಲ್ಲಿ ಯಾವ ಯಾವ ವಸ್ತುಗಳ ದಾನದಿಂದ ಯಾವ ಫಲ ಸಿಗುತ್ತದೆಂದು ಈ ರೀತಿ ಹೇಳಿ ಕೊನೆಗೆ ಬ್ರಹ್ಮಜ್ಞಾನದ ದಾನ ಎಲ್ಲಕ್ಕಿಂತಲೂ ಶ್ರೇಷ್ಠವೆಂದು ತಿಳಿಸಲಾಗಿದೆ;-
ಜಲ ದಾನದಿಂದ ತೃಪ್ತಿ, ಅನ್ನದಾನದಿಂದ ಅಕ್ಷಯ ಸುಖ, ತಿಲ ದಾನದಿಂದ ಸಂತಾನ, ದೀಪ ದಾನದಿಂದ ಒಳ್ಳೆಯ ದೃಷ್ಟಿ, ಭೂದಾನದಿಂದ ಭೂಮಿ, ಚಿನ್ನದದಾನದಿಂದ ಆಯುಸ್ಸು, ಗೃಹ ದಾನದಿಂದ ಒಳ್ಳೆಯ ಮನೆ, ಬೆಳ್ಳಿಯ ದಾನದಿಂದ ಸೌಂದರ್ಯ ಲಭಿಸುವುವು. ವಸ್ತ್ರ ದಾನದಿಂದ ಚಂದ್ರಲೋಕವಾಸ, ಕುದುರೆಯ ದಾನದಿಂದ ಅಶ್ವಿನೀ ದೇವತೆಗಳ ಲೋಕದ ವಾಸ, ಎತ್ತಿನ ದಾನದಿಂದ ಐಶ್ವರ್ಯ ದೇವತೆಯ ಪ್ರೀತಿ, ಗೋದಾನದಿಂದ ಸೂರ್ಯಲೋಕ ವಾಸ ಲಭಿಸುವವು. ವಾಹನ, ಶಯ್ಯೆಗಳ ದಾನದಿಂದ ಒಳ್ಳೆಯ ಹೆಂಡತಿ, ಅಭಯದಾನದಿಂದ ಐಶ್ವರ್ಯ, ಧಾನ್ಯದಾನದಿಂದ ಶಾಶ್ವತಸುಖ, ಬ್ರಹ್ಮಜ್ಞಾನದಿಂದ ಬ್ರಹ್ಮಲೋಕವಾಸ ಲಭಿಸುವೆವು ಎಂದು ಹೇಳಲಾಗಿದೆ.
1-9-1984
೨.ದಾನ
ದಾನದಲ್ಲಿ ಶ್ರದ್ಧೆ ಅಥವಾ ಆದರದ ಪ್ರಾಮುಖ್ಯವನ್ನು ಕುರಿತು ಚರ್ಚಿಸಲಾಯಿತು. ಅಷ್ಟೇ ಪ್ರಾಮುಖ್ಯ ಸತ್ಪಾತ್ರಕ್ಕೂ ಇದೆ. “ಪಾತ್ರವರಿತು ದಾನ” ಎಂಬ ನಾಣ್ನುಡಿ ಎಲ್ಲರಿಗೂ ಗೊತ್ತೇ ಇದೆ. ಯಾವನಿಗೆ ಯಾವುದರ ಅಗತ್ಯವಿದೆಯೋ ಯಾವುದರಿಂದ ಆತನಿಗೆ ಒಳ್ಳೆಯದಾಗುತ್ತದೆಯೋ, ಇತರರಿಗೆ ಅಪಕಾರವಾಗುವುದಿಲ್ಲವೋ ಅವನ್ನು ಆತನಿಗೆ ಕೊಡಬೇಕು. ಕಳ್ಳನಿಗೆ ಧನವನ್ನು ಕೊಟ್ಟರೆ ಕಳ್ಳತನವನ್ನು ಹೆಚ್ಚಾಗಿ ಮಾಡುತ್ತಾನೆ. ಧಾರ್ಮಿಕನಂತೆ ನಟನೆ ಮಾಡುವ ಧರ್ಮಹೀನನಿಗೆ ಧನ ಕೊಟ್ಟರೆ ಧರ್ಮಕ್ಕೆ ಧಕ್ಕೆ ಉಂಟಾಗುತ್ತದೆಯೇ ಹೊರತು ಪ್ರಯೋಜನವಿರುವುದಿಲ್ಲ. ಭಿಕ್ಷೆಯನ್ನು ಸಂಪಾದಿಸುವುದೇ ಒಂದು ಉದ್ಯಮವಾಗಿಟ್ಟುಕೊಂಡಿರುವವನಿಗೆ ಕನಿಕರದಿಂದ ಜನ ಕಾಸುಕೊಟ್ಟರೆ ಅವನು ಮಕ್ಕಳನ್ನು ಕಳುವುಮಾಡಿ, ಅಂಗವಿಕಲರನ್ನಾಗಿ ಮಾಡಿ ತನ್ನ ವ್ಯಾಪಾರಕ್ಕೆ ಒಪಯೋಗಿಸಿಕೊಳ್ಳುತ್ತಾನೆ. ಕುಡಿಯುವವನಿಗೂ ಜೂಜಾಡುವವನಿಗೂ ದಾನ ಕೊಟ್ಟರೆ ಏನುಮಾಡುತ್ತಾನೆಂದು ಗೊತ್ತೇ ಇದೆ. ಧನವನ್ನು ದರಿದ್ರನಿಗೆ ಕೊಡಬೇಕೇ ಹೊರತು ಧನಿಕರಿಗೆ ಕೊಡುವುದರಲ್ಲಿ ಧರ್ಮವಿಲ್ಲ. ಅಲ್ಲದೆ ಧನವಿರುವವನು ದರಿದ್ರರಿಗೆ ದಾನ ಮಾಡುವುದು, ಆತನ ಕರ್ತವ್ಯವೇ ಆಗಿದೆ. ಎಲ್ಲ ಜನರಿಗೂ ಮಾರ್ಗ ತೋರಿಸುವ ಶ್ರೀ ಶಂಕರಾಚಾರ್ಯರ ಈ ಶ್ಲೋಕವನ್ನು ನೋಡಿ-
ಗೇಯಂ ಗೀತಾ ನಾಮ ಸಹಸ್ರಂ
ಧ್ಯೇಯಂ ಶ್ರೀಪತಿ ರೂಪಮಜಸ್ರಂ
ನೇಯಂ ಸಜ್ಜನ ಸಂಗೇ ಚಿತ್ತಂ
ದೇಯಂ ದೀನ ಜನಾಯಚರಿತ್ರಂ
ಭಗವದ್ಗೀತೆಯನ್ನೂ ವಿಷ್ಣುಸಹಸ್ರನಾಮವನ್ನೂ ಪಾರಾಯಣ ಮಾಡುತ್ತಿರಬೇಕು.
ಶ್ರೀ ವಿಷ್ಣುವಿನ ದಿವ್ಯ ಮಂಗಳ ರೂಪವನ್ನು ಸದಾ ಧ್ಯಾನ ಮಾಡುತ್ತಿರಬೇಕು. ಮನಸ್ಸನ್ನು ಸದಾ ಸತ್ಪುರುಷರ ಸಾಂಗತ್ಯದ ಕಡೆ ಕೊಂಡೊಯ್ಯಬೇಕು. ದರಿದ್ರರಿಗೆ ಸದಾ ಧನವನ್ನು ದಾನ ಮಾಡುತ್ತಿರಬೇಕು. “ದಾನದಿಂದ ಹಣ ಪಡೆದು ಜೀವನ ಸಾಗಿಸೋಣ. ದಾನಿಗಳಿದ್ದಾರೆ. ಏಕೆ ಕಷ್ಟಪಡಬೇಕು?” ಎಂಬ ಭಾವನೆ ಬೆಳೆದು ಜನ ಸೋಮಾರಿಗಳಾಗುವ ಸಂಭವವೂ ಇದೆ. ಅದಕ್ಕಾಗಿಯೇ ಸ್ಮೃತಿಗಳು ಕ್ಷತ್ರಿಯ, ವೈಶ್ಯ, ಶೂದ್ರರಿಗೆ ದಾನ ಪಡೆಯುವ ಅಧಿಕಾರ ಕೊಟ್ಟಿಲ್ಲ. ಅಂದರೆ ಕಷ್ಟ ಕಾಲದಲ್ಲೂ ಇವರು ದಾನ ಪಡೆಯಬಾರದೆಂದಲ್ಲ. ದಾನದ ಮೇಲೆ ಜೀವನ ನಡೆಸಬಾರದೆಂದು ಮಾತ್ರ. ಕಷ್ಟಪಟ್ಟು ದುಡಿದು ಜೀವನ ಮಾಡಬೇಕು. ಆದರೆ ಬ್ರಾಹ್ಮಣನಿಗೆ ಮಾತ್ರ ದಾನದ ಮೇಲೆ ಜೀವಿಸುವ ಅಧಿಕಾರ ಕೊಟ್ಟಿದೆ. ಆದರೆ ಉಂಛ ವೃತ್ತಿಯಿಂದ (ನೆಲದಲ್ಲಿ ಬಿದ್ದ ಕಾಳನ್ನಾರಿಸಿಕೊಂಡು) ಜೀವಿಸಲು ಸಾಧ್ಯವಾದರೆ ದಾನವನ್ನು ತೆಗೆದುಕೊಳ್ಳದೆ ಕಷ್ಟಪಟ್ಟು ಆ ಕೆಲಸವನ್ನು ಮಾಡುವುದು ಇನ್ನೂ ಶ್ರೇಷ್ಠವೆಂದು ವಿಧಿಸಿವೆ. ದಾನದ ಮೇಲೆ ಜೀವಿಸುವ ಬ್ರಾಹ್ಮಣನಿಗೆ ಆತನು ಕಷ್ಟಪಟ್ಟು ವೇದ ವಿದ್ಯೆಯನ್ನು ಕಲಿಯಬೇಕೆಂದೂ, ಆಸೆಯನ್ನೂ ಸ್ವಾರ್ಥ್ವವನ್ನೂ ಸುಖಲೋಲುಪತೆಯನ್ನು ಬಿಡಬೇಕೆಂದೂ, ನಿಯಮಬದ್ಧವಾದ ಜೀವನ ನಡೆಸಬೇಕೆಂದೂ ವಿಧಿ ಇದೆ. ಇದಕ್ಕೆ ಮನುಸ್ಮೃತಿಯ ಸ್ಲೋಕಗಳು ಹೀಗಿವೆ:
ಹಿರಣ್ಯಂ ಭೂಮಿಮಶ್ವಂ ಗಾಂ ಅನ್ನಂ
ವಾಸಸ್ತಿಲಾನ್ ಘೃತಂI
ಪ್ರತಿಗೃಹ್ಣನ್ನ ವಿದ್ವಾಂಸ್ತು ಭಸ್ಮೀಭವತಿ ದಾರುವತ್ II
ವಿದ್ಯಾವಂತನಾಗದ ವಿಪ್ರನು, ಚಿನ್ನ, ಭೂಮಿ, ಕುದುರೆ, ಗೋವು, ಅನ್ನ, ಬಟ್ಟೆ, ಎಳ್ಳು, ತುಪ್ಪ- ಇವುಗಳ ದಾನ ಸ್ವೀಕರಿಸಿದರೆ ಮರವು ಬೆಂಕಿಯಲ್ಲಿ ಉರಿದಂತೆ ತಾನು ಸುಟ್ಟುಹೋಗುವನು.
ಅತಪಾಸ್ತ್ವನಧೀಯಾನಃ ಪ್ರತಿಗ್ರಹರುಚಿರ್ದ್ವಿಜಃI
ಅಂಭಾಸ್ಯಶ್ಮಪ್ಲವೇನೇವ ಸಹ ತೇನೈವ ಮಜ್ಜತಿII
ತಪಸ್ಸು, ಅಧ್ಯಯನ ಒಂದೂ ಇಲ್ಲದೆ ದಾನ ರುಚಿಯನ್ನು ಕಂಡು ಆಸೆಪಟ್ಟ ದ್ವಿಜನು ಆ ದಾನ ಪಡೆದ ವಸ್ತುವಿನೊಂದಿಗೆ ಕಲ್ಲಿನ ದೋಣಿಯಿಂದ ನೀರಲ್ಲಿ ತೇಲಲು ಪ್ರಯತ್ನಿಸುವಂತೆ ಮುಲುಗಿ ಹೋಗುವನು.
ಧನದ ಆಸೆಯಿಂದ ಧರ್ಮದ ಕಪಟ ವರ್ತನೆಯನ್ನು ನಡೆಸುತ್ತ ಜನರನ್ನು ಮೋಸಮಾಡಿ ಅವರಿಗೆ ನೋವನ್ನುಂಟುಮಾಡುತ್ತಿರುವ ಬ್ರಾಹ್ಮಣನನ್ನು ಬೆಕ್ಕಿಗೆ ಹೋಲಿಸಿ ಮನುಸ್ಮೃತಿ ಹೀಗೆ ಹೇಳುತ್ತದೆ
ಧರ್ಮಧ್ವಜೀ ಸದಾಲುಬ್ಧಃ ಛಾದ್ಮಿಕೋ
ಲೋಕದಂಭಕಃ I
ಬೈಡಾಲವ್ರತಿಕೋ ಜ್ಞೇಯಃ ಹಿಂಸ್ರಃ ಸರ್ವಾಭಿ
ಸಂಧಕಃII
ಮಹಾವಿನಯವುಳ್ಳವನಂತೆ ನಟಿಸಿ ದುರಾಸೆಯಿಂದ ಕಾದಿದ್ದು ಇತರರನ್ನು ಮೋಸ ಮಾಡುವ ಬ್ರಾಹ್ಮಣರನ್ನು ಮನುಸ್ಮೃತಿ ಕೊಕ್ಕರೆಗೆ ಹೋಲಿಸಿ ಹೀಗೆ ಹೇಳುತ್ತದೆ-
ಅಧೋ ದೃಷ್ಟೀ ನೈಷ್ಕೃತಿಕಃ ಸ್ವಾರ್ಥಸಾಧನ ತತ್ಪರಃII
ಶಠೋಮಿಥ್ಯಾವಿನೀತಸ್ಚ ಬಕವ್ರತಚರೋದ್ವಿಜಃII
ಇಂತಹವರಿಗೆ ಧರ್ಮವನ್ನು ತಿಳಿದವನು ನೀರನ್ನು ಸಹ ದಾನ ಮಾಡಬಾರದೆಂದು ಅದೇ ಸ್ಮೃತಿಯು ಹೀಗೆ ಹೇಳುತ್ತದೆ-
ನ ವಾರ್ಯಪಿ ಪ್ರಯಚ್ಛೇತ್ತು
ಬೈಡಾಲವೃತಿಕೇದ್ವಿಜೇI
ನ ಬಕವ್ರತಿಕೇ ವಿಪ್ರೇ ನಾವೇದವಿದಿ ಧರ್ಮವಿತ್II
ಇಷ್ಟು ಹೇಳಿದರೂ ಸ್ಮೃತಿಗಳು ಅನ್ನದಾನದ ವಿಷಯದಲ್ಲಿ ಮಾನವ ಮಾತ್ರನಿಗೆ ಅರ್ಹತೆಯನ್ನು ಕೊಟ್ಟಿವೆ.
“ನಪಚೇದನ್ನಮಾತ್ಮನೇ” ತನಗೊಬ್ಬನಿಗಾಗಿ ಅಡಿಗೆ ಮಾಡಿಕೊಳ್ಳಬಾರದು ಎಂದು ಹೇಳುತ್ತಾ ಸ್ಮೃತಿಗಳು ಗೃಹಸ್ಥನು ಪ್ರತಿದಿನ ಪ್ರಾಣಿಗಳಿಗೂ, ಪಾಪಿಗಳಿಗೂ ಹೊರಗೆ ನೆಲದ ಮೇಲೆ ನಿಧಾನವಾಗಿ ಅನ್ನ ನೀಡಬೇಕೆಂದೂ ಉಳಿದ ಮಾನವರಿಗೆ ಅಂದರೆ( ಶತ್ರುಗಳಾಗಿದ್ದರೂ) ಅತಿಥಿಗಳಿಗಾಗಿ ಬಂದವನನ್ನು ಯಥಾ ಶಕ್ತಿ ಅನ್ನ, ಜಲ, ನೆರಳು, ಶಯೈ, ಇತ್ಯಾದಿಗಳಿಂದ ಉಪಚರಿಸಲೇಬೇಕೆಂದು ಶಾಸ್ತ್ರಗಳು ಹೇಳುತ್ತವೆ.
1-10-1984
೨.ದಾನ
ಯಾರಿಂದ ದಾನ ಪಡೆಯಬಾರದು ?
ಇಲ್ಲಿಯವರೆಗೆ ಯಾರಿಗೆ ದಾನ ಕೊಡಬಹುದು? ಯಾರಿಗೆ ಕೊಡಬಾರದು ಎಂಬ ವಿಷಯವನ್ನು ಚರ್ಚಿಸಲಾಯಿತು. ನಮಗನ್ನಿಸುತ್ತದೆ –“ದಾನವನ್ನು ಯಾರಾದರೂ ಮಾಡಬಹುದು. ಅದು ಪುಣ್ಯ ಕಾರ್ಯವಲ್ಲವೇ? ಧರ್ಮವಲ್ಲವೇ? ಅದು ಯಾರು ಮಾಡಿದರೇನು? ಅವರಿಂದ ಶಂಕೆ ಇಲ್ಲದೆ ದಾನವನ್ನು ಸ್ವೀಕರಿಸಬಹುದು” ಎಂದು. ಆದರೆ ಶಾಸ್ತ್ರಗಳು ಈ ವಿಷಯದಲ್ಲಿ ಸಹ ಕೆಲವು ನಿಯಮಗಳನ್ನು ಬೋಧಿಸಿವೆ. ಸತ್ಪುರುಷರಿಂದ ಮಾತ್ರ ದಾನವನ್ನು ಪಡೆಯಬಹುದು. ಕೆಟ್ಟವರು ಕೊಡುವುದನ್ನು ತೆಗೆದುಕೊಳ್ಳುವುದಕ್ಕೆ ‘ಅಸತ್ಪ್ರತಿಗ್ರಹ’ ಎಂದು ಹೆಸರು. ಇದನ್ನು ಮಾಡಬಾರದು. ಇದು ಪಾಪ. ಇದನ್ನು ಮಾಡಿದರೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಇದು ಸಾಮಾನ್ಯ ನಿಯಮ. ಆದರೆ ಇದಕ್ಕೆ ಅಪವಾದವೂ ಇದೆ. ಕೆಟ್ಟ ಕೆಲಸ ಮಾಡಿದವನು ಆಮೇಲೆ ಒಳ್ಳೆಯ ಮನಸ್ಸಿನಿಂದ ಪಾಪಕ್ಷಯಾರ್ಥವಾಗಿಯೂ, ಪುಣ್ಯವನ್ನು ಗಳಿಸುವುದಕ್ಕಾಗಿಯೂ ದಾನ ಮಾಡಿದರೆ ಅದನ್ನು ತೆಗೆದುಕೊಳ್ಳಬೇಕು. ಕಟ್ಟಿಗೆ, ನೀರು, ಹಣ್ಣು, ಆಹಾರ, ಅಭಯ, ಜೇನು ಇಂತಹ ಸಾಮಾನ್ಯ ವಸ್ತುಗಳನ್ನು ಯಾರಿಂದಲಾದರೂ ತೆಗೆದುಕೊಳ್ಳಬಹುದು. ಈ ರೀತಿಯಾದ ಕೆಲವು ಅಪವಾದಗಳನ್ನುಳಿದು ಸಾಧಾರಣವಾಗಿ ಕೆಟ್ಟವರಿಂದ ದಾನ ಪಡೆಯಬಾರದೆಂದು ನಿಯಮವನ್ನು ಶಾಸ್ತ್ರಗಳು ಮಾಡಿವೆ. ಇದಕ್ಕೆ ಕಾರಣವಿಷ್ಟೇ. ಕೆಟ್ಟವನಿಂದ ದಾನವನ್ನು ಪಡೆದರೆ ಅವನಿಗೆ ಗೌರವ ಕೊಟ್ಟಂತಾಗುವುದು. ಅಲ್ಲದೆ ಅವನು ದಾನದ ಪ್ರಲೋಭದಿಂದ ದಾನ ತೆಗೆದುಕೊಳ್ಳುವ ಒಳ್ಳೆಯವರನ್ನು ತನ್ನ ವಶ ಮಾಡಿಕೊಂಡು ಕೆಟ್ಟ ಕೆಲಸಗಳಿಗೆ ಉಪಯೋಗಿಸಿಕೊಳ್ಳುವ ಸಂಭವ ಇದೆ. ಇದು ಸಮಾಜಕ್ಕೆ ಹಾನಿಕರ. ದಾನ ಪಡೆಯಲು ಅರ್ಹರಾದ ಬ್ರಾಹ್ಮಣರು ಧರ್ಮಕ್ಕೆ ಪ್ರಭುಗಳಾಗಿರುವುದರಿಂದಲೂ ಧರ್ಮದ ವಿಷಯದಲ್ಲಿ ಅವರ ಆಚರಣೆ ಇತರರಿಗೆ ಅನುಕರಣೀಯವಾಗಿರುವುದರಿಂದಲೂ, ಅವರು ಅಸತ್ಪ್ರತಿಗ್ರಹ ಮಾಡದಿದ್ದರೆ ಸಮಾಜದಲ್ಲಿ ಕೆಟ್ಟವರನ್ನು ಬೇರ್ಪಡಿಸಿದಂತಾಗುವುದು. ಇದರಿಂದ ಪಾಪ ಮಾಡುವವರಿಗೆ ಹೆದರಿಕೆ ಉಂಟಾಗುವುದು.
ದುಷ್ಟರು ತಮ್ಮ ಶಕ್ತಿಯಿಂದಲೂ ಇತರರನ್ನು ಹೆದರಿಸುವುದರಿಂದಲೂ ರಾಜರಾಗುವ ಸಂಭವವಿದೆ. ಇಂತಹ ಕೆಟ್ಟ ರಾಜರು ರಾಜರಾಗುವ ಉದ್ದೇಶ ಧನವನ್ನು ಸಂಗ್ರಹಿಸುವುದು ಮತ್ತು ಅಧಿಕಾರ ಚಲಾಯಿಸುವುದು. ಇವರ ಉದ್ದೇಶ ಕ್ಷತ್ರಿಯ ಧರ್ಮಕ್ಕೆ ವಿರೋಧವಾದದ್ದು. ಇಂತವಹರು ಪ್ರಜಾಪೀಡಕರು. ಇವರು ಮಾಡುವ ಹಿಂಸೆ ಅತಿ ದೊಡ್ಡ ಪ್ರಮಾಣದ್ದು. ಮನುಸ್ಮೃತಿಯು ಇಂತಹ ರಾಜರನ್ನು ದಾನದ ವಿಷಯದಲ್ಲಿ ಬ್ರಾಹ್ಮಣರು ಬಹಿಷ್ಕರಿಸಬೇಕೆಂದು ಬೋಧಿಸುತ್ತಾ ಧರ್ಮದ ಗೌರವವನ್ನು ಎತ್ತಿಹಿಡಿದಿದೆ. ಹೀಗೆಯೇ ಕಸಾಯಿ ಕೆಲಸದಿಂದ ಜೀವಿಸುವವರನ್ನೂ, ತೈಲ ಕೊಡುವ ಧಾನ್ಯಗಳನ್ನು ಜನರು ಹಾಗೆಯೇ ಉಪಯೋಗಿಸಿ ಸುಖಿಸುವುದನ್ನು ತಪ್ಪಿಸಿ ಅವುಗಳಿಂದ ತೈಲವನ್ನು ತಯಾರು ಮಾಡಿ ಅದರಿಂದ ಜೀವಿಸುವವರನ್ನೂ, ಹೆಂಡ ಮಾರಿ ಜೀವಿಸುವವರನ್ನೂ ವೇಶ್ಯಾವೃ ತ್ತಿಯಿಂದ ಜೀವಿಸುವವರನ್ನೂ ದಾನದ ವಿಷಯದಲ್ಲಿ ಬಹಿಷ್ಕರಿಸಲಾಗಿದೆ. ಮನುವಿನ ಮಾತುಗಳಲ್ಲಿ ಇವರು ಒಬ್ಬರಿಗಿಂತ ಹತ್ತರಷ್ಟು ಮುಂದೆ ಪಾಪಿಗಳು. ವೇಶ್ಯಾವೃತ್ತಿಯಿಂದ ಜೀವಿಸುವ ಹತ್ತು ಜನರಿಗೆ ಒಬ್ಬ ಕೆಟ್ಟ ರಾಜನು ಸಮಾನ. ಹತ್ತು ಸಾವಿರ ಪ್ರಾಣಿಗಳನ್ನು ಕೊಂದ ಕಸಾಯಿಗೆ ಒಬ್ಬ ಕೆಟ್ಟ ರಾಜನ ಸಮಾನ. ಅವನಿಂದ ದಾನ ಪಡೆಯುವುದು ಮಹಾಪಾಪ. ಹಾಗೆ ದಾನ ಪಡೆದವನು
ಸತ್ತ ಮೇಲೆ ಘೋರವಾದ ನರಕ ಬಾಧೆಯನ್ನು ಅನುಭವಿಸುತ್ತಾನೆ ಎಂದು ಮನುವಿನ ವಚನ.
ಮನುಸ್ಮೃತಿಯು ಅಸತ್ಪ್ರತಿಗ್ರಹದ ಪ್ರಾಯಶ್ಚಿತ್ತ ವಿಧಿಯನ್ನು ಹೀಗೆ ಹೇಳುತ್ತದೆ –
ಬ್ರಾಹ್ಮಣರು ನಿಂದಿತ ಕರ್ಮದಿಂದ ಧನವನ್ನು ಸಂಪಾದಿಸಿದರೆ, ಆ ಧನವನ್ನು ಬಿಟ್ಟುಕೊಡಬೇಕು. ಜಪ ತಪಸ್ಸನ್ನು ಮಾಡಬೇಕು. ಮೂರು ಸಾವಿರ ಗಾಯತ್ರೀ ಜಪ ಮಾಡಿ ಒಂದು ತಿಂಗಳು ಹಟ್ಟಿಯಲ್ಲಿ ವಾಸವಾಗಿದ್ದು ಹಾಲು ಕುಡಿದು ಬದುಕಿದರೆ ಅಸತ್ಪ್ರತಿಗ್ರಹದಿಂದ ಉಂಟಾದ ಪಾಪವನ್ನು ಕಳಚಿಕೊಲ್ಲಬಹುದಾಗಿದೆ.
1-11-1984
೨.ದಾನ
ಬಡವರಿಂದ ಹಿಡಿದು ಬಲ್ಲಿದರವರೆಗೆ ಮತ್ತು ಅಜ್ಞಾನಿಗಳಿಂದ ಹಿಡಿದು ಸುಜ್ಞಾನಿ ಗಳವರಿಗೆ, ಅನಾಗರೀಕರಿಂದ ನಾಗರೀಕರವರೆಗೆ ಇರುವ ಎಲ್ಲ ಮಾನವರ ಗುಂಪುಗಳಲ್ಲೂ ಅಲ್ಲಲ್ಲಿ ದಾನಿಗಳು ಇದ್ದೇ ಇದ್ದಾರೆ. ಇವರ ಹೃದಯ ಒಳ್ಳೆಯದಾಗಿದೆ. ಪ್ರತಿಫಲಾಪೇಕ್ಷೆ ಇಲ್ಲದೆ ದಾನ ಮಾಡುತ್ತಾರೆ. ಇಂತಹವರ ದಾನಗಳಲ್ಲಿ ಯಾವುದು ಹೆಚ್ಚು? ಯಾವುದು ಕಡಿಮೆ? ಈ ಹೆಚ್ಚು ಕಡಿಮೆ ಎನ್ನುವುದು ದಾನ ಮಾಡುವವನ ಐಶ್ವರ್ಯದ ಮೇಲೆ ನಿಂತಿದೆಯೇ, ವಿದ್ಯೆಯ ಮೇಲೆ ನಿಂತಿದೆಯೇ, ನಾಗರೀಕತೆಯ ಮೇಲೆ ನಿಂತಿದೆಯೇ, ಕೊಟ್ಟ ವಸ್ತುವಿನ ಗಾತ್ರದ ಮೇಲೆ ನಿಂತಿದೆಯೇ ಎಂಬ ಪ್ರಶ್ನೆ ಹುಟ್ಟುತ್ತದೆ. ಈ ಪ್ರಶ್ನೆಗೆ ಉತ್ತರ ಕೊಡಲು ವ್ಯಾಸ ಮಹರ್ಷಿಯು ತಾನು ರಚಿಸಿದ ಮಹಾಭಾರತದಲ್ಲಿ ಒಂದು ವಿಚಿತ್ರವಾದ ಕಥೆಯನ್ನು ಬರೆದಿದ್ದಾನೆ.
ಭೃಗು ಮಹರ್ಷಿಯ ವಂಶದಲ್ಲಿ ಜಮದಗ್ನಿ ಎಂಬ ಋಷಿ ಹುಟ್ಟಿದ. ಆತನು ಅಡವಿಯಲ್ಲಿ ತಪಸ್ಸು ಮಾಡಿಕೊಳ್ಳುತ್ತಿದ್ದ. ಆತನ ತಂದೆಯ ಶ್ರಾದ್ಧ ಬಂತು. ಅಡವಿಯಲ್ಲಿ ಅದಕ್ಕಾಗಿ ಆತನಿಗೆ ಸಿಕ್ಕಿದ್ದು ತಾನು ಸಾಕಿದ್ದ ಒಂದು ಹಸುವಿನ ಹಾಲು. ಒಂದು ಪಾತ್ರೆಯ ತುಂಬಾ ಹಾಲನ್ನು ಪಡೆದು ಆತ ಆ ಪಾತ್ರೆಯನ್ನು ಭದ್ರವಾಗಿಟ್ಟು ಬೇರೆ ಕೆಲಸದಲ್ಲಿ ತೊಡಗಿದ್ದ. ಈತನು ಶೀಘ್ರ ಕೋಪಿಗಳಾದ ಭೃಗು ವಂಶದವರ ನಡುವೆ ಹುಟ್ಟಿದ್ದರೂ ಮಹಾ ಶಾಂತ ಸ್ವಭಾವದವನು. ಕೋಪಕ್ಕೆ ಅಧಿಪತಿಯಾದ ದೇವತೆಗೆ ಇದು ತಿಳಿಯಿತು. ಆಗಲಿ ಇವನಿಗೂ ಕೊಪ ಬರುವಂತೆ ಮಾಡುತ್ತೇನೆ. ನನ್ನ ಶಕ್ತಿಯನ್ನು ಲೋಕಕ್ಕೆ ತೋರಿಸುತ್ತೇನೆ ಎಂದು ಮೀಸೆ ತಿರುವಿ ಆ ದೇವತೆ ಆ ಸಮಯಕ್ಕೆ ಸರಿಯಾಗಿ ಆ ಜಮದಗ್ನಿಗೆ ಕಾಣಿಸಿಕೊಂಡು ಆತ ನೋಡುತ್ತಿದ್ದಂತೆಯೇ ಹೋಗಿ ಆತ ಶೇಖರಿಸಿಟ್ಟಿದ್ದ ಅಷ್ಟು ಹಾಲನ್ನೂ ಚೆಲ್ಲಿಹಾಕಿತು. ಉದ್ದೇಶಪೂರ್ವಕವಾಗಿ ಮಾಡಿದ ಈ ಅಪಕಾರಕ್ಕೆ ಯಾರಿಗೆ ತಾನೆ ಸಿಟ್ಟು ಬರುವುದಿಲ್ಲ? ಆದರೆ ಆ ಜಮದಗ್ನಿ ಋಷಿಗೆ ಕೋಪವೇ ಬರಲಿಲ್ಲ. ಆದರೆ ಆತನ ಪಿತೃದೇವತೆಗಳಿಗೆ ಇದನ್ನು ತಡೆಯಲಾಗಲಿಲ್ಲ. ಅವರು ಶಾಪ ಕೊಟ್ಟರು, ಯಾರಿಗೆ? ಕೋಪದ ದೇವತೆಗಲ್ಲ, ಜಮದಗ್ನಿ ಋಷಿಗೆ ಕಾರಣ, ಆತ ಅಧರ್ಮದ ವಿರುದ್ಧ ಕೋಪ ಮಾಡಿಕೊಳ್ಳಲಿಲ್ಲವಲ್ಲಾ ಎಂದು. ಕೋಪಿಷ್ಠರಾದ ಭೃಗು ಕುಲಕ್ಕೇ ಈ ಜಮದಗ್ನಿಯ ಸಹನೆ ಅವಮಾನಕರವೆಂದು ಅವರು ಭಾವಿಸಿದರು. ಅದಕ್ಕಾಗಿಯೇ ಶಾಪಕೊಡುವಾಗ ನೀನು ‘ನಕುಲ’ ಕುಲದ ಗುಣ ಬಿಟ್ಟವನು. ನೀನು ನಕುಲವಾಗು(ಮುಂಗುಸಿಯಾಗು) ಎಂದು ಶಾಪಕೊಟ್ಟರು. ಜಮದಗ್ನಿಗೆ ದುಃಖವೂ ಆಗಲಿಲ್ಲ. ಮುಂಗುಸಿ ಆದ. ತಮ್ಮ ಸಂತತಿಯವ ಮುಂಗುಸಿ ಆಗಿಬಿಟ್ಟನಲ್ಲಾ ಎಂದು ಪಿತೃ ದೇವತೆಗಳಿಗೇ ಕರುಣೆ ಉಂಟಾಯಿತು. ವಿಶಾಪವನ್ನು ಅನುಗ್ರಹಿಸಿದರು.ಈ ವಿಶಾಪ ಜಮದಗ್ನಿಗೆ ಗೊತ್ತಿಲ್ಲ. ಅದು ವಿಚಿತ್ರವಾದದ್ದು. ನೀನು ಸಕಾರಣವಾಗಿ ಯಾವುದಾದರೊಂದು ಧರ್ಮಕಾರ್ಯವನ್ನು ಆಕ್ಷೇಪಿಸಿದರೆ ನಿನಗೆ ಶಾಪ ಹೋಗುವುದು ಎಂದು. ಒಂದು ಕಾರ್ಯ ಧರ್ಮಕಾರ್ಯವೆಂದು ಒಪ್ಪಿಕೊಂಡಮೇಲೆ ಅದನ್ನು ಆಕ್ಷೇಪಿಸುವುದಕ್ಕಾಗುತ್ತದೆಯೇ? ಅದು ಹೇಗಾಯಿತೋ ನೋಡೋಣ.
ದ್ವಾಪರ ಯುಗದ ಕೊನೆಯಲ್ಲಿ ಧರ್ಮರಾಯ ಮಹಾಭಾರತದ ಯುದ್ಧದಲ್ಲಿ ಗೆದ್ದು ರಾಜನಾದ. ಆತ ಬಹಳ ಧರ್ಮಾತ್ಮ. ಹಿಂಸೆಯಿಂದ ಪಡೆದ ಈ ರಾಜ್ಯ ನನಗೆ ಬೇಡ, ಅಡವಿಗೆ ಹೋಗುತ್ತೇನೆ ಎಂದು ಹಠ ಹಿಡಿದ. ಕೊನೆಗೆ ಆತನು ಪಾಪ ಪರಿಹಾರಕ್ಕಾಗಿ ಅಷ್ವಮೇಧ ಯಾಗ ಮಾಡಬೇಕೆಂದು ತೀರ್ಮಾನವಾಯಿತು. ಮಾಡತೊಡಗಿದ. ಅದರಲ್ಲಿ ಪ್ರತಿದಿನ ಅನೇಕ ಸಾವಿರ ಬ್ರಾಹ್ಮಣರಿಗೆ ಅನ್ನದಾನ ನಡೆಯುತ್ತಿತ್ತು. ಊಟ ಮಾಡಿದ ಬ್ರಾಹ್ಮಣರು ಬಂದು ಕೈತೊಳೆದುಕೊಂಡ ನೀರು ಹಳ್ಳದಂತೆ ಹರಿಯತೊಡಗಿತು. ಒಂದು ದಿನ ಮೇಲ್ಕಂಡ ಮುಂಗುಸಿ ಅಲ್ಲಿಗೆ ಬಂತು.ಅದರಲ್ಲಿ ಅರ್ಧಭಾಗ ಚಿನ್ನವಾಗಿತ್ತು. ಅಲ್ಲಿನ ಬ್ರಾಹ್ಮಣರೆಲ್ಲರೂ ಇದನ್ನು ನೋಡಿ ಆಶ್ಚರ್ಯಪಟ್ಟರು. ಅದು ಬಂದು ಕೈತೊಳೆದ ನೀರಿನಲ್ಲಿ ಅನೇಕ ಸಲ ಹೊರಳಾಡಿತು. ಕೊನೆಗೆ ಬೇಸರ ಪಟ್ಟು ಆ ಮುಂಗುಸಿ ಮಾನವರ ಭಾಷೆಯಲ್ಲಿ “ ಸಕ್ತುಪ್ರಸ್ಥನ ದಾನದ ಮುಂದೆ ಈ ಧರ್ಮರಾಯನ ದಾನ ಯಾವ ದಾನ?” ಎಂದು ನುಡಿಯಿತು. ಇದನ್ನು ಕೇಳಿದ ವಿಪ್ರರಿಗೆ ಆಶ್ಚರ್ಯವಾಯಿತು. ಅವರು ನೀನು ಯಾರು? ಧರ್ಮರಾಯ ಮಾಡುತ್ತಿರುವ ಈ ಅನ್ನದಾನವನ್ನು ತೆಗಳಲು ಕಾರಣವೇನು? ಎಂದು ಕೇಳಿದರು. ಧರ್ಮರಾಯನೇ ಬರಲಿ, ಸಕಾರಣವಾಗಿ ಹೇಳುತ್ತೇನೆ. ಎಂದಿತು ಆ ಮುಂಗುಸಿ. ಧರ್ಮರಾಯನು ಬಂದನು. ಆ ಮುಂಗುಸಿ ಕಥೆ ಹೇಳಲು ಪ್ರಾರಂಭಿಸಿತು.
“ಕುರುಕ್ಷೇತ್ರದಲ್ಲಿ ಸಕ್ತುಪ್ರಸ್ಥನೆಂಬ ಬ್ರಾಹ್ಮಣನಿದ್ದ. ಆತನೂ, ಆತನ ಹೆಂಡತಿ, ಮಗ ಮತ್ತು ಸೊಸೆ ಈ ನಾಲ್ವರೂ ಶಿಲೋಭ ವೃತ್ತಿಯಿಂದ ಜೀವಿಸುತ್ತಿದ್ದರು. ಕಂಗಾಣವಾದ ಮೇಲೆ ನೆಲದಲ್ಲಿ ಬಿದ್ದ ತೆನೆಗಳನ್ನು ಆರಿಸುವುದಕ್ಕೆ ಉಂಛ ವೃತ್ತಿಯೆಂದೂ ಹೆಸರು. ಒಂದು ಸಲ ಬರಗಾಲ ಬಂತು. ಮೊದಲೇ ಊಟಕ್ಕಿಲ್ಲದ ಇವರಿಗೆ ಬಹಳ ಕಷ್ಟವಾಯಿತು. ಕೆಲವು ದಿನ ಉಪವಾಸವಿದ್ದ ಮೇಲೆ ಇವರಿಗೆ ಒಂದು ಬಳ್ಳದಷ್ಟು ಕಾಳು ಶೇಖರಣೆ ಆಯಿತು. ಅದನ್ನು ಕಷ್ಟಪಟ್ಟು ಹಿಟ್ಟು ಮಾಡಿ ನಾಲ್ಕು ಜನರೂ ತಿನ್ನಬೇಕೆಂದು ಹಂಚಿಕೊಂಡರು. ಅಷ್ಟು ಹೊತ್ತಿಗೆ ಒಬ್ಬ ಅತಿಥಿ ಬಂದ. ಆತ ಇವರಿಗಿಂತಲೂ ಆಹಾರವಿಲ್ಲದೆ ಸವೆದಿದ್ದ. ಅತಿಥಿಯನ್ನು ನೋಡಿದ ಕೂಡಲೇ ಆ ಸಕ್ತುಪ್ರಸ್ಥನು ಸ್ವಾಗತಿಸಿದ. ಕುಳ್ಳಿರಿಸಿದ. ತನ್ನ ಭಾಗದ ಹಿಟ್ಟನ್ನು ಆತನಿಗೆ ಕೊಟ್ಟ. ಆತ ತಿಂದ. ಆದರೆ ಹಸಿದ ಆತನಿಗೆ ಅದರಿಂದ ತೃಪ್ತಿ ಉಂಟಾಗಲಿಲ್ಲ. ಸಕ್ತುಪ್ರಸ್ಥನ ಹೆಂಡತಿ ತನ್ನ ಭಾಗದ ಹಿಟ್ಟನ್ನು ಕೊಟ್ಟಳು. ಆದರೂ ಆ ಅತಿಥಿಗೆ ಹೊಟ್ಟೆ ತುಂಬಲಿಲ್ಲ. ಆತನ ಇಂಗಿತವನ್ನು ಗಮನಿಸಿ ಸಕ್ತುಪ್ರಸ್ಥನ ಮಗ ತನ್ನ ಭಾಗವನ್ನು ಕೊಟ್ಟ. ಅಲ್ಲಿಗೂ ಅತಿಥಿಗೆ ತೃಪ್ತಿ ಆಗಲಿಲ್ಲ. ಕೊನೆಗೆ ಸೊಸೆಯು ತನ್ನ ಭಾಗದ ಹಿಟ್ಟನ್ನು ಕೊಟ್ಟಳು. ಅದು ತಿಂದ ಅತಿಥಿಗೆ ತೃಪ್ತಿ ಆಯಿತು. ಗುಡಿಸಲ ಹೊರಕ್ಕೆ ಬಂದು ಅತಿಥಿ ಕೈ ತೊಳೆದುಕೊಂಡು ಹೋದ. ಬಿಸಿಲಿಗೆ ಬಳಲಿದ್ದ ನಾನು ಹೋಗಿ ಅತಿಥಿ ಕೈ ತೊಳೆದ ನೀರಿನಲ್ಲಿ ಹೊರಳಾಡಿದೆ. ಕೂಡಲೇ ನನ್ನ ಮೈಯಲ್ಲಿ ಅರ್ಧಭಾಗ ಚಿನ್ನವಾಯಿತು. ಇದು ಆ ಸಕ್ತುಪ್ರಸ್ಥನ ಕುಟುಂಬ ಮಾಡಿದ ದಾನದ ಮಹಿಮೆ. ಆಮೇಲೆ ಮಳೆ ಬಂದು ಸುಭಿಕ್ಷವಾಯಿತು. ಅಂದಿನಿಂದ ನಾನು ಈ ದಾನಕ್ಕೆ ಸಮವಾದ ದಾನದ ಮಹಿಮೆಯಿಂದ ನನ್ನ ದೇಹದ ಉಳಿದ ಅರ್ಧ ಭಾಗವನ್ನೂ ಚಿನ್ನ ಮಾಡಿಕೊಲ್ಲೋಣವೆಂದು ಕಾದಿದ್ದೆ. ಕೆಲವು ದಾನಗಳು ನಡೆದವು. ನಾನು ಅವುಗಳ ಜಾಗಕ್ಕೆ ಹೋಗಲಿಲ್ಲ. ಆದರೆ ಧರ್ಮರಾಯನು ಮಾಡುತ್ತಿರುವ ಈ ಅನ್ನದಾನ ಅತಿ ದೊಡ್ಡ ದಾನವೆಂದು ತಿಳಿದು ನನ್ನ ಆಸೆ ತೀರಬಹುದೆಂದು ಇಲ್ಲಿಗೆ ಬಂದೆ. ಆದರೆ ಈ ದಾನಕ್ಕೆ ನನ್ನ ಶರೀರದ ಉಳಿದ ಅರ್ಧಭಾಗವನ್ನು ಚಿನ್ನ ಮಾಡುವ ಶಕ್ತಿ ಇಲ್ಲ. ಈ ಕಾರಣದಿಂದ ನಾನು ಧರ್ಮರಾಜನ ದಾನವನ್ನು ಆಕ್ಷೇಪಿಸಿದೆ”
ಸಕಾರಣವಾಗಿ ಮಾಡಿದ ಈ ಧರ್ಮಕಾರ್ಯದ ಆಕ್ಷೇಪಣೆಯಿಂದ ಜಮದಗ್ನಿ ಶಾಪಮುಕ್ತನಾದ. ಆಗ ಆತನ ಪಿತೃ ದೇವತೆಗಳು ಆತನಿಗೆ ಕಾಣಿಸಿಕೊಂಡು ತಾವು ಮಾಡಿದ್ದ ವಿಶಾಪದ ವಿಷಯವನ್ನು ತಿಳಿಸಿದರು. ಸಮುದ್ರದಂತಿದ್ದ ಆ ಬ್ರಹ್ಮಜ್ಞಾನಿಯ ಆನಂದ ಶಾಪ ಬಂದಾಗ ಕುಗ್ಗಲಿಲ್ಲ. ಶಾಪ ಕಳೆದಾಗ ಹೆಚ್ಚಲಿಲ್ಲ.
1-12-1984
೨.ದಾನ
ಮರೆಯಲಾಗದ ಆತಿಥ್ಯಗಳು
ಸಕ್ತುಪ್ರಸ್ಥನೂ ಆತನ ಕುಟುಂಬದವರೂ ಮಾಡಿದ ಅನ್ನದಾನದ ವೃತ್ತಾಂತ ಒಂದು ಕಥೆ. ಇದು ಪೂರ್ತಿಯಾಗಿ ಕಟ್ಟುಕಥೆಯಲ್ಲ. ಧರ್ಮರಾಜನ ದಾನವೂ, ಸಕ್ತುಪ್ರಸ್ಥನ ದಾನವೂ ನಡೆದ ಸಂಗತಿಗಳೇ. ಆದರೆ ಇವುಗಳನ್ನು ಒಂದಕ್ಕೊಂದು ಹೋಲಿಸಿ ದಾನದ ಮಹಿಮೆಯ ಸಿದ್ಧಾಂತವನ್ನು ಪ್ರಚಾರಮಾಡಲು ಉಳಿದ ಕಥಾ ಭಾಗವನ್ನು ಕವಿಯು ಕಲ್ಪಿಸಿರಬಹುದು. ಪುರಾಣ ಕಥೆಗಳಲ್ಲಿ ಚಾರಿತ್ರಿಕ ಸತ್ಯವನ್ನು ನಾವು ಹುಡುಕಬೇಕಾಗಿಲ್ಲ. ಅವುಗಳ ಸಂದೇಶವನ್ನು ಮಾತ್ರ ಗ್ರಹಿಸಬೇಕು. ಆದರೆ ಇಂದು ನಡೆದ ಮತ್ತು ನಡೆಯುತ್ತಿರುವ ಘಟನೆಗಳು ಇನ್ನೂ ಹೆಚ್ಚಿನ ಮಹತ್ವವುಳ್ಳವು. ಇವುಗಳನ್ನು ನಾವು ಗಮನಿಸಿ ಪ್ರಚಾರ ಮಾಡುವುದು ಅತ್ಯಗತ್ಯ. ಈ ಸಂದರ್ಭದಲ್ಲಿ ಇತ್ತೀಚಿಗೆ ನಮಗೆ ದೊರೆತ ಎರಡು ಚಿರಸ್ಮರಣೀಯಗಳಾದ ಆತಿಥ್ಯಗಳನ್ನು ಉದಾಹರಣೆಗಾಗಿ ಓದುಗರಿಗೆ ತಿಳಿಸ ಬಯಸುತ್ತೇನೆ. ಇಂತಹ ಉದಾರ
ಹೃದಯಿಗಳು ಇನ್ನೂ ಅನೇಕ ಜನ ಇದ್ದಾರೆ. ದಿನಾಂಕ 5-10-1984ರಂದು ಹೊಂಗೇನಹಳ್ಳಿಯಲ್ಲಿ ಏರ್ಪಡಿಸಿದ್ದ ಧರ್ಮಪ್ರಚಾರ ಭಾಷಣಗಳನ್ನು ನಡೆಸಲು ನಾನೂ ಶ್ರೀ ಬಿ. ಭಗವಾನ್ ಸಿಂಗ್ ಅವರೂ ಶ್ರೀ ಎ. ಎನ್. ಪುಟ್ಟಣ್ಣನವರೂ ಹೊರಟು ಮೊದಲು ಮಾಲೂರನ್ನು ತಲುಪಿದೆವು. ನಾವು ಬೆಳಗ್ಗೆ ಊಟವಿಲ್ಲದೆ ಹೊರಟಿದ್ದೆವು. ಮಾಲೂರಿನಲ್ಲಿ ಈ ಪತ್ರಿಕೆಗೆ ಚಂದಾದಾರರನ್ನು ಮಾಡುವ ಸಲುವಾಗಿ ಅನೇಕ ಮನೆಗಳಿಗೆ ಭೇಟಿ ಕೊಡುತ್ತಾ ಹೋಗುತ್ತಿದ್ದ ನಮಗೆ ಊಟದ ಕಡೆ ಗಮನವೇ ಹೋಗಲಿಲ್ಲ. ಹೀಗೆಯೇ ಮುಂದುವರೆದು ಸಾಯಂಕಾಲ 5 ಘಂಟೆಗೆ ಅಲ್ಲಿ ಕೋದಂಡರಾಮಸ್ವಾಮಿ ದೇವಾಲಯದ ಅರ್ಚಕರಾದ ಶ್ರೀ ವೇಣುಗೋಪಾಲಾಚಾರ್ಯರ ಮನೆಗೆ ಹೋದೆವು. ಶ್ರೀ ವೇಣುಗೋಪಾಲಾಚಾರ್ಯರು ಬೇರೆ ಊರಿನಲ್ಲಿರುವ ತಮ್ಮ ಉದ್ಯೋಗದ ಕೆಲಸ ಮುಗಿಸಿಕೊಂಡು ಆಗ ತಾನೇ ಮನೆಗೆ ಹಿಂತಿರುಗಿದ್ದರು. ನಮ್ಮನ್ನು ನೋಡಿದ ಕೂಡಲೇ ಅವರು ಬಹಳ ಸಂತೋಷದಿಂದಲೂ, ಅಕ್ಕರೆಯಿಂದಲೂ ಪ್ರೀತಿಯಿಂದಲೂ ಆಹ್ವಾನಿಸಿ ಕೋಣೆಯಲ್ಲಿ ಕುಳ್ಳಿರಿಸಿದರು. ಅವರ ಮನೆಯಲ್ಲಿ ಮಾಡಿದ್ದ ತಿನಿಸುಗಳನ್ನೂ ಕೊಟ್ಟರು. ನಮಗೆ ಹಸಿವಾಗಿದ್ದುದರಿಂದ ಅವರು ಕೊಟ್ಟಷ್ಟೂ ತಿನ್ನುತ್ತಿದ್ದೆವು. ಅವರು ಮೇಲಿಂದ ಮೇಲೆ ಕೊಡುತ್ತಲೇ ಇದ್ದರು. ನಾವು ಊಟ ಮಾಡಿಲ್ಲವೆಂಬುದು ಅವರಿಗೆ ತಿಳಿದಿಲ್ಲ. ಅವರ ಆತಿಥ್ಯಕ್ಕೆ ತೃಪ್ತಿಪಟ್ಟು ಭಗವಾನ್ ಸಿಂಗರು ಬಾಯಿಜಾರಿ “ ನಾವು ಈ ದಿವಸ ಊಟಮಾಡಿಲ್ಲ ನೀವು ಒಳ್ಳೆಯ ತಿಂಡಿ ಕೊಟ್ಟದ್ದು ಒಳ್ಳೆಯದಾಯಿತು” ಎಂದು ಮೆಲ್ಲನೆ ಹೇಳಿದ್ದೇ ತಡ ವೇಣುಗೊಪಾಲಾಚಾರ್ಯರ ಹೃದಯ ಕರಗಿತು. ತಕ್ಷಣ ಬಿಸಿಬಿಸಿಯಾಗಿ ಅಡಿಗೆ ಮಾಡಿಸುತ್ತೀನೆ ಊಟ ಮಾಡಿಕೊಂಡು ಹೋಗಿ” ಎಂದು ಎಷ್ಟೋ ಬಲವಂತ ಮಾಡಿದರು. ಆದರೆ ಹೊಟ್ಟೆ ತುಂಬಾ ತಿಂಡಿ ತಿಂದಿದ್ದ ನಾವು ಊಟ ಮಾಡುವುದಕ್ಕಾಗುವುದಿಲ್ಲವೆಂದೇ ಹೇಳಬೇಕಾಗಿ ಬಂತು. ಅಲ್ಲಿಂದ ಷುರು ಆಯಿತು ಅವರ ಪುನರಾತಿಥ್ಯ. ದೇವರಿಗೆ ಪೂಜೆಯಲ್ಲಾ ಮಾಡಿದ ಮೇಲೆ ಪುನಃ ಪೂಜೆ ಎಂದು ಕೊನೆಯಲ್ಲಿ ಮಾಡುವುದುಂಟು. ಹಾಗಿತ್ತು ಅವರು ಪುನಃ ಷುರು ಮಾಡಿದ ಆತಿಥ್ಯ. ಬೇಡ ಬೇಡವೆಂದರೂ ಕಾಫಿ, ಚಹ, ಪಾನಕ, ಇವು ಅವರವರು ಕುಡಿಯುವುದನ್ನು ಅವರವರಿಗೆ ತಂದುಕೊಟ್ಟ ಮೇಲೆ ಬಾಳೆಯಹಣ್ಣು ನಂತರ ಅಲ್ಮೈರಾದಿಂದ ಸೇಬು ಮತ್ತು ಮೋಸಂಬಿಹಣ್ಣು ತೆಗೆದು ತಟ್ಟೆಯಲ್ಲಿಟ್ಟರು. ಮೋಸಂಬೀ ಹಣ್ಣನ್ನು ತಾವೇ ಚಕಚಕ ಬಿಡಿಸಿ ನಾವು ತಿನ್ನುತ್ತಿದ್ದಷ್ಟೂ ಕೊಡುತ್ತಲೇ ಇದ್ದರು. ಇದಾದ ಮೇಲೆ ಸೇಬುಗಳನ್ನು ಚಾಕುವಿನಿಂದ ಸಿಪ್ಪೆ ಬಿಡಿಸಿ ಹೋಳು ಮಾಡಿಕೊಡುತ್ತಾ ಅಷ್ಟರೊಳಗೇ ಸರಕ್ ಅಂತ ಎಲ್ಲಿಂದಲೋ ಕಲ್ಲು ಸಕ್ಕರೆ, ಒಣದ್ರಾಕ್ಷಿ, ಗೋಡಂಬಿ ತಂದು ಹಾಕಿದರು. ಅವರ ಆದರ, ಅವರ ಸಂಭ್ರಮ, ಅವರು ಧರ್ಮದ ವಿಷಯವಾಗಿ ಮಾಡುತ್ತಿದ್ದ ಚರ್ಚೆ ಇವೆಲ್ಲವೂ ಅವರು ಕೊಟ್ಟ ಪದಾರ್ಥಗಳ ಸಿಹಿಯನ್ನು ಇಮ್ಮಡಿಸುತ್ತಿದ್ದವು. ಆ ದಿನ ಅವರು ತಮ್ಮ ಮನೆಯಲ್ಲಿದ್ದ ರುಚಿಕರವಾದ ವಸ್ತುಗಳೆಲ್ಲವನ್ನೂ ಒಂದನ್ನೂ ಬಚ್ಚಿಡದೆ, ಬೆಲೆ ನೋಡದೆ, ನಮಗೆ ಅರ್ಪಿಸಿ ಸಂತೋಷಪಟ್ಟರು. ಅವರ ಆತಿಥ್ಯ ಅದ್ವಿತಿಯವೂ ಅವಿಸ್ಮರಣೀಯವೂ ಆಗಿತ್ತು.
ಇತ್ತೀಚಿಗೆ ಒಂದು ಸಾಯಂಕಾಲ ನಾನೂ ಮತ್ತು ಭಗವಾನ್ ಸಿಂಗರು ಪತ್ರಿಕಾ ಪ್ರಚಾರಕ್ಕಾಗಿ ಮಲ್ಲೇಶ್ವರಕ್ಕೆ ಹೋಗಿದ್ದೆವು. ಅಲ್ಲಿ ಒಬ್ಬರ ಮನೆ ಇಂತಹ ಕ್ರಾಸಿನಲ್ಲಿದೆ ಎಂದು ತಿಳಿದಿತ್ತೇ ಹೊರತು ಮನೆ ನಂಬರು ತಿಳಿದಿರಲಿಲ್ಲ. ಹೇಗೆ ಹುಡುಕುವುದು? ಅದೃಷ್ಟವಶಾತ್ ಅವರ ದೂರವಾಣಿ ಸಂಖ್ಯೆ ಗೊತ್ತಿತ್ತು. ಎಲ್ಲಿಂದ ದೂರವಾಣಿ ಮಾಡಬಹುದೆಂದು ಯೋಚಿಸುತ್ತಿರುವಾಗ ಹತ್ತಿರದಲ್ಲೇ ವೆಸ್ಟ್ ಪಾರ್ಕ್ ರಸ್ತೆಯಲ್ಲಿರುವ ನಮ್ಮ ಮಿತ್ರ ಶ್ರೀ ಸಿ.ಎನ್.ರಾಜನ್ ಅವರ ಮನೆ ನೆನಪಿಗೆ ಬಂತು. ಅವರ ಮನೆಗೆ ಹೋಗಿ ಕಾಲಿಂಗ್ ಬೆಲ್ ಮಾಡಿದೆವು. ಅವರ ಮಗಳು ಬಂದು ಯಾರೆಂದು ವಿಚಾರಿಸುವಷ್ಟರಲ್ಲಿ ನಾನೇ ನನ್ನ ಹೆಸರನ್ನು ಹೇಳಿದೆ. ಕೂಡಲೇ ಆಕೆಗೆ ಗೊತ್ತಾಗಿ ಅತ್ಯಾದರದಿಂದ ‘ ಬನ್ನಿ ಕುಳಿತುಕೊಳ್ಳಿ’ ಎಂದು ಹೇಳಿ ಕುಶಲ ಪ್ರಶ್ನೆ ಮಾಡಿದಳು. ಆಕೆಯ ತಂದೆ ತಾಯಿಗಳು ಮದ್ರಾಸ್ ಗೆ ಹೋಗಿದ್ದರು. ನಾವು ಫೋನ್ ಮಾಡಿ ಹೊರಟು ಬಿಡೋಣವೆಂದುಕೊಂಡು ಫೋನ್ ಮಾಡಿದೆವು. ಹೋಗಿ ಬರುತ್ತೇವೆಂದು ಹೇಳಿದಾಗ ಆಕೆ ಉಪಹಾರ ತೆಗೆದುಕೊಳ್ಳಬೇಕೆಂದು ನಿರ್ಬಂಧ ಮಾಡಿ ಸಿಹಿ ಮತ್ತು ಕಾರ ತಿಂಡಿಗಳನ್ನು ತಂದು ಕೊಟ್ಟಳು. “ ಯಾಕಮ್ಮಾ ಇಷ್ಟು ತೊಂದರೆ ತೆಗೆದುಕೊಳ್ಳುತ್ತಿದ್ದೀರಿ?” ಎಂದು ಹೇಳಿದ್ದಕ್ಕೆ “ನಮ್ಮ ತಂದೆ ತಾಯಿಗಳು ಮನೆಯಲ್ಲಿ ಇದ್ದಿದ್ದರೆ ನಿಮಗೆ ತಿಂಡಿ ಪಾನೀಯ ಕೊಡದೆ ಹಾಗೆಯೇ ಕಳುಹಿಸುತ್ತಿದ್ದರೇ?” ಎಂದು ಹೇಳಿದ್ದು ಸತ್ಪುರುಷರ ಮನೆತನದ ಮರ್ಯಾದೆಯಲ್ಲಿನ ಮಾಧುರ್ಯವನ್ನು ನಮಗೆ ತೋರಿಸಿತು. ಆಮೇಲೆ ಹಣ್ಣಿನ ರಸ ತಂದು ಕೊಟ್ಟು “ ನಾನೂ, ನನ್ನ ತಮ್ಮ ಇಬ್ಬರೇ ಮನೆಯಲ್ಲಿರುವುದು. ತಮ್ಮ ಎಲ್ಲಿಗೋ ಹೋಗಿದ್ದಾನೆ ಈಗ ಬರುತ್ತಾನೆ. ಹಣ್ಣಿನ ರಸ ಮಾಡುತ್ತಾ ನಾನು ಈಗ ತಾನೇ ಮನಸ್ಸಿನಲ್ಲಿ ಯಾರಾದರೂ ಅತಿಥಿಗಳು ಬಂದರೆ ಇದನ್ನು ಕೊಟ್ಟರೆ ಎಷ್ಟು ಚೆನ್ನಾಗಿರುತ್ತೆ ಎಂದು ಆಲೋಚಿಸುತ್ತಿದ್ದೆ. ಆಷ್ಟರಲ್ಲಿ ನೀವು ಬಂದಿರಿ” ಎಂದು ಹೇಳಿದಳು. ಆಕೆಯ ಹೃದಯ ಎಷ್ಟು ಉದಾರವಾದದ್ದು. ಎಷ್ಟು ಪವಿತ್ರವಾದದ್ದು ಎಂದು ಓದುಗರೇ ಊಹಿಸಿಕೊಳ್ಳಬೇಕು.
ಇದಾದ ಮೇಲೆ ಆ ಚಿಕ್ಕ ವಯಸ್ಸಿನ ಹುಡುಗಿ “ ನಾವೀಗ ಬೀದರ್ ಜಿಲ್ಲೆಯಲ್ಲಿದ್ದೇವೆ. ನಮ್ಮ ಯಜಮಾನರಿಗೆ ಅಲ್ಲಿ ಬ್ಯಾಂಕಿನಲ್ಲಿ ಕೆಲಸ. ನಾನು ತೌರು ಮನೆಗೆ ಬಂದಿದ್ದೇನೆ ನಮ್ಮ ಮನೆಗೂ ಧರ್ಮ ಪ್ರಭ ಪತ್ರಿಕೆ ಬೇಕು” ಎಂದು ಹೇಳಿ ಹಣ ಕೊಟ್ಟು ಚಂದಾದಾರರಾದಳು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಈಕೆ ಇಷ್ಟು ಗುಣವತಿ ಆಗಿರುವಾಗ ಮುಂದೆ ಈಕೆ ಗೃಹಿಣಿಯರಿಗೆ ಆದರ್ಶಳಾಗುವುದರಲ್ಲಿ ಸಂಶಯವಿಲ್ಲ ಎಂದು ನಾವಿಬ್ಬರೂ ನಮ್ಮ ಮನಸ್ಸಿನಲ್ಲೇ ಅಭಿನಂದಿಸಿದೆವು. ಆ ಕೂಡಲೇ ಆಕೆಯ ತಮ್ಮನೂ ಬಂದು ಸೇರಿದನು. ಇದಾದ ಮೇಲೆ ಅಕ್ಷತೆ ತಂದು ನಮ್ಮಿಬ್ಬರ ಕೈಗೆ ಕೊಟ್ಟು ಇಬ್ಬರೂ ನಮಸ್ಕಾರ ಮಾಡಿದರು. ಆಕೆಯ ಗುಣ, ಆತಿಥ್ಯ, ಮತ್ತು ಆಕೆಗೆ ನಮ್ಮ ಅಂತರಂಗ ಬಯಸಿದ ಶುಭ ಚಿರಸ್ಮರಣೀಯಗಳಲ್ಲವೇ.
1-1-1985
೨.ದಾನ
ಫಲಾಪೇಕ್ಷೆಯಿಲ್ಲದೆ, ಕೇವಲ ಪ್ರೀತಿಯಿಂದ ಮಾಡುವ ದಾನ ಶ್ರೇಷ್ಟವಾದದು. ಪ್ರೀತಿಯ ಲಕ್ಷಣಗಳಲ್ಲಿ ಕೊಡುವುದೂ, ತೆಗೆದುಕೊಳ್ಳುವುದೂ, ಮುಖ್ಯವಾದವು. ಒಂದು ಸುಭಾಷಿತ ಪ್ರೀತಿಯ ಲಕ್ಷಣಗಳನ್ನು ಹೀಗೆ ವಿವರಿಸಿದೆ:
ದದಾತಿ ಪ್ರತಿಗೃಹ್ಣಾತಿ ಗುಹ್ಯಮಾಖ್ಯಾತಿ ಪೃಚ್ಛತಿ !
ಭುಂಕ್ತೇ ಭೋಜಯತೇ ನಿತ್ಯಂ ಷಡ್ವಿಥಂ ಪ್ರೀತಿಲಕ್ಷಣಂ !!
ಇಬ್ಬರು ಮಾನವರಲ್ಲಿ ಪರಸ್ಪರ ಪ್ರೀತಿಯಿದ್ದರೆ ಒಬ್ಬರೊನ್ನೊಬ್ಬರಿಗೆ ಕೊಡುತ್ತಾರೆ. ಅವರಿಂದ ತೆಗೆದು ಕೊಳ್ಳುತ್ತಾರೆ. ಒಬ್ಬರನ್ನೊಬ್ಬರು ರಹಸ್ಯವಾದ ವಿಷಯಗಳನ್ನು ಕೇಳುತ್ತಾರೆ. ಅವರಿಗೆ ರಹಸ್ಯವಾದ ವಿಷಯಗಳನ್ನು ಸಹ ತಿಳಿಸುತ್ತಾರೆ. ಪರಸ್ಪರ ಊಟಮಾಡುತ್ತಾರೆ. ಉಣಿಸುತ್ತಾರೆ. ಹೀಗೆ ಪ್ರೀತಿಯ ಲಕ್ಷಣ ಆರುವಿಧ.
ಮಾನವರ ಸಹ ಬಾಳ್ವಿಕೆಯಲ್ಲಿ ದಾನ ಪ್ರತಿಗ್ರಹಗಳು ನಡೆಯುತ್ತಲೇ ಇರಬೇಕು. ಆದರೆ ಪ್ರೀತಿಯಿಲ್ಲದಾಗ್ಯೂ ದಾನ ಮಾಡುವ ಸಂಧರ್ಭಗಳೂ ಉಂಟು. ಅಂತಹ ದಾನಗಳಲ್ಲಿ ಧರ್ಮದ ಅಂಶವಿಲ್ಲ. ಸಾಮ, ದಾನ, ಭೇದ, ದಂಡ ಎಂಬ ನಾಲಕ್ಕು ಉಪಾಯಗಳಲ್ಲಿ ಬರುವ ದಾನ ಇಂತಹುದು. ಒಂದೊಂದುಸಲ ಲಾಭ ದೃಷ್ಟಿಯಿಂದಲೂ ದಾನ ಮಾಡುವುದುಂಟು. ಕೆಡಕುಮಾಡುವ ಉದ್ದೇಶದಿಂದಲೂ ದಾನ ಮಾಡಬಹುದು. ಇಂತಹ ದಾನಗಳು ಅಧರ್ಮದ ದಾನಗಳು.
ಇಂತಹ ದಾನಕ್ಕೂ ಮತ್ತು ಅದರಿಂದ ಆ ದಾನಿಗೆ ದೇವರು ಕೊಟ್ಟ ಶಿಕ್ಷೆಗೂ ನಿದರ್ಶನವಾದ ಒಂದು ಕಥೆ ಇದೆ. ಒಂದು ಗ್ರಾಮದಲ್ಲಿ ಶಿವಾಲಯವೊಂದಿತ್ತು. ಆ ದೇವಾಲಯದ ಪುಜಾರಿ ಬಹಳ ಒಳ್ಳೆಯವನು. ಬಹಳ ಭಕ್ತಿ ಮತ್ತು ನಿಷ್ಠೆಯಿಂದ ದೇವರನ್ನು ಪೂಜಿಸುತ್ತಿದ್ದನು. ಆದರೆ ಅವನು ಕಡು ಬಡವನಾಗಿದ್ದನು. ಆ ಊರಿನಲ್ಲಿ ಒಬ್ಬ ಲೋಭಿಯಾದ ಸಾಹುಕಾರನೂ ಇದ್ದ. ಈತ ಒಂದು ದಿನ ಸಾಯಂಕಾಲ ಶಿವಾಲಯದ ಪಕ್ಕದ ಹಾದಿಯಲ್ಲಿ ಹೋಗುತ್ತಿದ್ದ. ನಿರ್ಜನವಾದ ಪ್ರದೇಶ. ದೇವಾಲಯಕ್ಕೆ ಬೀಗ ಹಾಕಿತ್ತು, ಬೀಗವನ್ನು ಗಮನಿಸಿ ಎರಡು ಹೆಜ್ಜೆ ಇಡುವಷ್ಟರೊಳಗೆ ದೇವಾಲಯದೊಳಗೆ ಯಾರೋ ಮಾತಾಡುತ್ತಿದ್ದುದನ್ನು ಕೇಳಿ ಆಶ್ಚರ್ಯಪಟ್ಟ. ಅವನ ಕುತೂಹಲ ಕೆರಳಿತು. ಅಲ್ಲಿಯೇ ನಿಂತು ಮಾತುಗಳನ್ನು ಕೇಳುತ್ತಿದ್ದ. ಒಳಗಡೆ ಶಿವಲಿಂಗವೇ ಅಲ್ಲದೆ ಗಣೇಶನ ವಿಗ್ರಹವೂ ಇತ್ತು. ಶಿವನೂ ಗಣೇಶನೂ ಮಾತನಾಡುತ್ತಿದ್ದರು. ಗಣೀಶನು ತಂದೆಯಾದ ಶಿವನನ್ನು ಆಕ್ಷೇಪಿಸುತ್ತಿದ್ದ. “ನೀನು ಸ್ಥಾಣು(ಅಚಲ)ಮೊದ್ದಿನಂತೆ ಇದ್ದು ಯಾವುದನ್ನೂ ಗಮನಿಸುವುದಿಲ್ಲ ನಿನಗೆ ಇಷ್ಟು ಭಕ್ತಿಯಿಂದ ಪೂಜೆ ಮಾಡುತ್ತಿದ್ದರೂ ನಿನ್ನ ಪೂಜಾರಿ ಬಡತನದಿಂದ ನರಳುತ್ತಿದ್ದಾನೆ. ಅವನಿಗೆ ನೀನೇನು ಮಾಡಿದ್ದೀಯ?” ಶಿವನು ಹೇಳಿದ- “ಅಪ್ಪಾ ನಾನು ವಿರಕ್ತ. ನಿನಗೆ ಆ ಪೂಜಾರಿಯ ಮೇಲೆ ಮರುಕವಿದ್ದರೆ ನೀನೇ ಅವನಿಗೆ ಸಹಾಯ ಮಾಡು”. “ ಬರುವ ಸಂಕ್ರಾಂತಿ ಹಬ್ಬದ ದಿನ ಆ ಪೂಜಾರಿಗೆ ಒಂದು ಸಾವಿರ ರೂಪಾಯಿ ವರಮಾನವನ್ನು ನಾನು ಅನುಗ್ರಹಿಸಿದ್ದೇನೆ” – ಎಂದು ಗಣೀಶ ಹೇಳಿದ. ಇದನ್ನು ಕೇಳಿದ ಸಾಹುಕಾರನ ಕಿವಿಗಳು ನೆಟ್ಟಗಾದವು. ಅವನಿಗೆ ಒಂದು ಊಹೆ(ಆಲೋಚನೆ) ಬಂದು ತನ್ನೊಳಗೆ ತಾನೇ ಸಂತೋಷಪಟ್ಟುಕೊಂಡ. ಇದನ್ನು ಯಾರಿಗೂ ತಿಳಿಸದೆ ಕಾರ್ಯ ಸಾಧಿಸಬೇಕೆಂದು ಸಂಕಲ್ಪಿಸಿಕೊಂಡು ಮುಂದೆ ಹೊರಟ.
ಮಾರನೇ ದಿನ ಪೂಜಾರಿ ಎಂದಿನಂತೆ ಸಾಹುಕಾರನ ಮನೆಯ ಮುಂದಿನ ಬೀದಿಯಲ್ಲಿ ಶಿವನಾಮಸ್ಮರಣೆಯನ್ನು ಮಾಡುತ್ತ ಭಿಕ್ಷೆ ಬೇಡುತ್ತಾ ಹೋಗುತ್ತಿದ್ದ. ಆತನಿಗೆ ಸಾಹುಕಾರರ ಮನೆಯಲ್ಲಿ ಭಿಕ್ಷೆ ಎಂದಿಗೂ ಇಲ್ಲವೆಂದು ತಿಳಿದಿದ್ದರಿಂದ ಆ ಕಡೆ ನೋಡುತ್ತಲೂ ಇರಲಿಲ್ಲ. ಆ ದಿನ ಆತನಿಗೆ ಸಾಹುಕಾರರ ಕರೆ ಕೇಳಿಸಿ ಆಶ್ಚರ್ಯವಾಯಿತು. “ಪೂಜಾರಿಗಳೇ, ಬನ್ನಿ” ಎಂದು ಸಾಹುಕಾರ ಮನೆಯ ಬಾಗಿಲಿನಿಂದ ಕರೆದ. ಆಶ್ಚರ್ಯ ಮತ್ತು ಆಸೆಯಿಂದ ಪೂಜಾರಿ ಹೋದ. ಆ ಲೋಭಿ ಈತನಿಗೆ ಮಣೆ ಹಾಕಿ ಕುಳ್ಳಿರಿಸಿದ. ಪ್ರೀತಿಯ ನಟನೆ ಮಾಡುತ್ತ, ಭಿಕ್ಷೆ ಹಾಕಿ, ಸಾಹುಕಾರ ಹೇಳಿದ- “ ಸ್ವಾಮೀ, ನಮ್ಮ ಅಂಗಡಿಗಳಿರುವಾಗ ನೀವೇಕೆ ಇಷ್ಟು ಕಷ್ಟ ಪಡಬೇಕು? ದಿನಸಿ ಅಂಗಡಿಯಲ್ಲಿ ದಿನಸಿ ತೆಗೆದುಕೊಳ್ಳಿ, ಬಟ್ಟೆ ಅಂಗಡಿಯಲ್ಲಿ ಬಟ್ಟೆ ತೆಗೆದುಕೊಳ್ಳಿ. ನೀವು ಬರಬೇಕಾದ್ದಿಲ್ಲ ನಿಮ್ಮ ಮಕ್ಕಳಿಗೆ ಹೇಳಿಬಿಡಿ, ಯಾವಾಗ ಏನು ಬೇಕಾದರೂ ತೆಗೆದುಕೊಂಡು ಹೋಗಲಿ” ಪೂಜಾರಿ ಉಬ್ಬಿಹೋದ. ಸಾಹುಕಾರನನ್ನು ಆಶೀರ್ವದಿಸಿ ಮುಂದೆ ಹೊರಟ. ಅಂದಿನಿಂದ ಪುಜಾರಿಯ ಮಕ್ಕಳು ದಿನಸಿ ಅಂಗಡಿಗೂ ಬಟ್ಟೆ ಅಂಗಡಿಗೂ ಹೋಗಿ ಮನೆಗೆ ಬೇಕಾದ ವಸ್ತುಗಳನ್ನು ತಂದುಕೊಳ್ಳುತ್ತಿದ್ದರು.
ಸಂಕ್ರಾಂತಿ ಹಬ್ಬ ಇನ್ನು ಮೂರುದಿನಗಳಿವೆ ಅನ್ನುವಾಗ ಸಾಹುಕಾರನು ಪುನಃ ಬೀದಿಯಲ್ಲಿ ಹೋಗುತ್ತಿದ್ದ ಪುಜಾರಿಯನ್ನು ಕರೆದ. ಪೂಜಾರಿ ಹೋಗಿ ಕುಳಿತುಕೊಂಡ. ಸಾಹುಕಾರ ಮೆಲ್ಲಗೆ –“ಲೆಕ್ಕ ನೋಡೋಣವೇ” ಎಂದ. ಪೂಜಾರಿಗೆ ಆಶ್ಚರ್ಯವಾಯಿತು, ಹೆದರಿಕೆಯೂ ಆಯಿತು. ಏನು ಲೆಕ್ಕ ಸಾಹುಕಾರರೇ ಎಂದು ನಡುಗುತ್ತಾ ಕೇಳಿದ. “ನಿಮ್ಮ ಮನೆಗೆ ಎರಡು ಅಂಗಡಿಗಳಿಂದ ಇಷ್ಟು ದಿನ ತೆಗೆದು ಕೊಂಡುಹೋದ ವಸ್ತುಗಳ ಬೆಲೆ ಕೊಡಬೇಡವೇ ನೀವು?” ಎಂದು ಸಾಹುಕಾರ ನುಡಿದ. “ ಅಯ್ಯೋ ಸಾಹುಕಾರರೆ, ನಾನು ನೀವು ದಾನ ಕೊಡುತ್ತೀರಿ ಅಂತ ಅಂದುಕೊಂಡೆ. ಸಾಲವೆಂದು ಗೊತ್ತಿದ್ದರೇ ತೆಗೆದು ಕೊಳ್ಳುತ್ತಲೇ ಇರಲಿಲ್ಲವಲ್ಲಾ, ನಿಮಗೆ ಸಾಲ ತೀರಿಸುವುದಕ್ಕೆ ಬಡವನಾದ ನನ್ನಲ್ಲಿ ಏನಿದೆ” ಎಂದು ಪೂಜಾರಿ ಅಂಗಲಾಚಿದ. “ ಪುಕ್ಕಟೆ ಕೊಡೋದಕ್ಕಲ್ಲ ನಾವು ಅಂಗಡಿ ಇಟ್ಟಿರೋದು. ಯಾರಿಗೂ ಸಾಲವನ್ನೇ ಕೊಡುವದಿಲ್ಲ ನಾವು, ನಿಮಗಾಗಿ ಸಾಲ ಕೊಟ್ಟರೆ ಅದನ್ನು ತೀರಿಸುವುದಿಲ್ಲ ಎಂದರೆ ಯಾವನ್ಯಾಯ ಪೂಜರಿಗಳೇ?” ಎಂದು ಸಾಹುಕಾರನು ಗದರಿಸಿಮಾತಾಡಿದ. ಪೂಜಾರಿ ತೆಪ್ಪಗಾದ. “ನೀವೇನಾದರೂ ಮಾಡಿಕೊಳ್ಳಿ, ನನ್ನ ಸ್ಥಿತಿ ಹೇಳಿದ್ದೇನೆ” ಎಂದ. ಸಾಹುಕಾರ ಪ್ರೀತಿಯನ್ನು ನಟಿಸುತ್ತ ಹತ್ತಿರಕ್ಕೆ ಸರಿದು ಪೂಜಾರಿಗೆ ಹೇಳಿದ. “ ಈ ಸಂಕ್ರಾತಿ ಹಬ್ಬದ ದಿನ ನಿನಗೆ ಏನೇನು ದಾನ ಬರುತ್ತೋ ಅದೆಲ್ಲಾ ನನಗೆ ಕೊಟ್ಟುಬಿಡು, ನಿನ್ನ ಲೆಕ್ಕ ಹೊಡೆದು ಹಾಕುತ್ತೇನೆ”. “ ಈ ಮಾತು ಕೇಳಿ ಪೂಜಾರಿಗೆ ಹೋದ ಪ್ರಾಣ ಹಿಂತಿರುಗಿ ಬಂತು. “ ಸಂಕ್ರಾಂತಿದಿನ ಅಬ್ಬಬ್ಬ ಅಂದರೆ ಒಂದು ಹತ್ತು ಕುಂಬಳಕಾಯಿ, ಐದುರೂಪಾಯಿ ದಕ್ಷಿಣೆ ಬಂದರೆ ಹೆಚ್ಚು” ಎಂದು ಕೊಂಡು ಅದಕ್ಕೆ ಒಪ್ಪಿದ.
ಸಾಹುಕಾರನ ಸಂಚು ಹೀಗಿತ್ತು. ಸಾಲಕೊಟ್ಟಿದ್ದು ಕೇವಲ ಐದು ನೂರುಗಳಷ್ಟು. ಗಣೇಶನ ಮಾತಿನಂತೆ ಪೂಜಾರಿಗೆ ಒಂದು ಸಾವಿರ ರೂಪಾಯಿ ಬರುತ್ತೆ. ಅದನ್ನು ಕಿತ್ತುಕೊಂಡರೆ ಐದುನೂರು ರೂಪಾಯಿಗಳು ಲಾಭ ಬರುತ್ತೆ ಎಂದು ಆತನ ಆಸೆ. ಸಂಕ್ರಾಂತಿ ಹಬ್ಬದ ಬೆಳಗಿನ ಜಾವಕ್ಕೆ ಸಾಹುಕಾರ ತನ್ನ ಮಗನನ್ನು ಪೂಜಾರಿಯ ಮನೆಗೆ ಕಳುಹಿಸಿದ. ಪೂಜಾರಿಯ ಜೊತೆಯಲ್ಲಿಯೇ ಮನೆಗಳಿಗೆಲ್ಲಾ ತಿರುಗಿ ಬಂದ ದಾನವೆಲ್ಲ ವಸೂಲಿ ಮಾಡಿಕೊಂಡು ಬರುವುದಕ್ಕೆ. ಮಧ್ಯಾಹ್ನ ಸಾಹುಕಾರ ಕಬ್ಬಿಣದ ಪೆಟ್ಟಿಗೆಗೆ ಬೀಗದ ಕೈ ಜೋಡಿಸಿ ಕಾದಿದ್ದಾನೆ. ಸಾವಿರ ರೂಪಾಯಿಗಳು ಬಂದ ಕೂಡಲೇ ಅದರೊಳಕ್ಕೆ ಹಾಕಿ ಬೀಗ ಹಾಕಬೇಕು ಅಂತ ಮುಂಬಾಗಿಲಿನಿಂದ ಮಗನ ಆಗಮನವನ್ನು ನಿರೀಕ್ಷಿಸುತ್ತಿದ್ದ. ಕುಂಬಳಕಾಯಿಗಳ ಚೀಲವನ್ನು ಹೊರಲಾರದೆ ಹೊತ್ತುಕೊಂಡು ಬೆವರು ಸುರಿಸುತ್ತ ಹುಡುಗ ಬಂದ. ಅವನನ್ನು ಮಾತನಾಡಿಸಲಿಲ್ಲ. ಸೀದಾ ಕಬ್ಬಿಣದ ಪೆಟ್ಟಿಗೆಯ ಹತ್ತಿರಕ್ಕೆ ಕರೆದುಕೊಂಡು ಹೋಗಿ ಮೆಲ್ಲಗೆ ಕೇಳಿದೆ – “ ಎಲ್ಲಿ ಸಾವಿರ ರೂಪಾಯಿಗಳು” ಎಂದು. ಅವನು ತಂದೆಯ ಬೆಪ್ಪತನ ನೋಡಿ ಪೆಚ್ಚಾದ. ಎಲ್ಲಿದೆ ಸಾವಿರ ರೂಪಾಯಿ? ಎಲ್ಲಾ ಸೇರಿಸಿದರೂ ಐದಾರು ರೂಪಾಯಿ ಚಿಲ್ಲರೆ ಕಾಸು. ಸಾಹುಕಾರನಿಗೆ ನಿರಾಶೆಯ ಮತ್ತು ಹಸಿವಿನ ಬಾಧೆಗಳೊಂದಿಗೆ ಕೋಪದ ಆವೇಶ ಬಂತು. ಸೀದಾ ದೇವಾಲಯಕ್ಕೆ ಹೋದ. ಗಣೇಶನ ಡೊಳ್ಳು ಹೊಟ್ಟೆಗೆ ಕಾಲಿನಿಂದ ಒದೆದ. ಕಾಲು ಗಣೇಶನ ಹೊಟ್ಟೆಗೆ ಕಚ್ಚಿಕೊಂಡು ಹೋಯಿತು. ಒದ್ದಾಡಿದ. ಕೂಗಾಡಿದ, ಅತ್ತ . ಏನು ಮಾಡಿದರೂ ಕಾಲು ಈಚೆ ಬರಲಿಲ್ಲ. ಗಣೇಶನು ವಿಕಟವಾಗಿ ನಕ್ಕು ಸಾಹುಕಾರನಿಗೆ ಹೇಳಿದ – ನೀನು ಪೂಜಾರಿಗೆ ಮೋಸಮಾಡಲು ಯತ್ನಿಸಿದೆಯಲ್ಲಾ: ಅದರ ಫಲ ಅನುಭವಿಸಲೇ ಬೇಕು. ಅವನ ಲೆಕ್ಕ ಹೊಡೆದುಹಾಕಿ ಅವನಿಗೆ ಮೇಲೆ ಐದುನೂರು ರೂಪಾಯಿಗಳು ಕೊಟ್ಟರೆ ನಿನ್ನ ಕಾಲು ಬಿಡುತ್ತೇನೆ. ಇಲ್ಲದಿದ್ದರೆ ಇಲ್ಲ ಎಂದು ಹೇಳಿದ. ಪೂಜಾರಿ ಇದೆಲ್ಲಾ ನೋಡಿ ಆಶ್ಚರ್ಯಪಟ್ಟ. ಸಾಹುಕಾರ ಪೂಜಾರಿಯನ್ನೇ ಬೇಡಿಕೊಂಡ ತನ್ನ ಮಗನನ್ನು ಕರೆಯಬೇಕೆಂದು. ಮಗ ಬಂದ, ಸೊಂಟದಲ್ಲಿ ಸಿಕ್ಕಿಕೊಂಡಿದ್ದ ಬೀಗದ ಕೈ ಮಗನಕೈಗೆ ಕೊಟ್ಟು ಐದುನೂರು ರೂಪಾಯಿಗಳನ್ನು ತರಿಸಿ ಪೂಜಾರಿಗೆ ಕೊಡಿಸಿದ. ಕಾಲು ಈಚೆ ಬಂತು.
ಆ ದಿನ ಸಾಯಂಕಾಲ ಗುಡಿಗೆ ಬೀಗ ಹಾಕಿತ್ತು. ಒಳಗೆ ಗಣೇಶ ಶಿವನಿಗೆ ಹೇಳಿದ. “ ನೋಡಿದೆಯಾ ಅಪ್ಪಾ ಪೂಜಾರಿಗೆ ಈದಿನ ಒಂದು ಸಾವಿರ ರೂಪಾಯಿ ಲಾಭ ಕೊಡಿಸಿದೆ. ಸಾಹುಕಾರನ ಹತ್ತಿರ ಮಾಡಿದ್ದ ಐದುನೂರು ರೂಪಾಯಿಗಳ ಸಾಲ ತೀರಿತು. ಮೇಲೆ ಐದು ನೂರು ರೂಪಾಯಿಗಳು ಅವನಿಂದಲೇ ಕೊಡಿಸಿದೆ. ಒಟ್ಟು ಸಾವಿರ ಆಗಲಿಲ್ಲವೇ?” ವಿರಕ್ತನಾದ ಶಿವನಿಗೇ ನಗು ಬಂತು.
1-2-1985
೨.ದಾನ
ದಾನವೇ ಧರ್ಮದ ಜೀವ
ಧರ್ಮದ ಮೂರು ಬೀಜಾಕ್ಷರಗಳು ಸೂಚಿಸುವ ದಮ , ದಾನ ಮತ್ತು ದಯೆ ಇವುಗಳಲ್ಲಿ ಅತ್ಯಂತ ಮುಖ್ಯವಾದುದು ದಾನ. ಈ ದಾನದಲ್ಲಿ ಧರ್ಮದ ಜೀವವೆಲ್ಲಾ ಸೇರಿಕೊಂಡಿದೆ. ದಾನವಿಲ್ಲದ ‘ ದಮ’ ವಾಗಲಿ ‘ ದಯೆಯಾಗಲಿ’ ಪ್ರಯೋಜನಕಾರಿಯಲ್ಲ. ಧರ್ಮವೆನಿಸಿಕೊಳ್ಳುವುದಿಲ್ಲ. ಕಪಟದಾನವಲ್ಲದೆ, ನಿಜವಾದ ದಾನವೆಲ್ಲಿದ್ದರೂ ಅಲ್ಲಿ ‘ದಮ’ ಮತ್ತು “ದಯೆ” ತಪ್ಪದೆ ಸೇರಿಕೊಂಡಿರುತ್ತೆ. ಆದುದರಿಂದ ದಾನಕ್ಕೇ ಪ್ರಾಧಾನ್ಯ ಹೆಚ್ಚು. ಈ ವಿಷಯವನ್ನು ಇನ್ನೂ ವಿವರವಾಗಿ ಚರ್ಚಿಸಬೀಕಾಗಿದೆ. ಅದಕ್ಕಾಗಿ ಧರ್ಮದ ಸ್ವರೂಪವೇನೆಂಬುದರ ಮೀಮಾಂಸೆ ಸ್ವಲ್ಪ ಮಾಡಬೇಕಾಗಿದೆ.
ಒಂದು ವಸ್ತುವಿನ ವಿಷಯ ತಿಳಿದುಕೊಳ್ಳಬೇಕಾದರೆ ಅದರ ಹೊರ ಲಕ್ಷಣಗಳಲ್ಲದೇ ಅದರಲ್ಲಿರುವ ಪದಾರ್ಥವೇನು? ಅದರ ಧರ್ಮಗಳೇನು? ಎಂಬುದು ಸಹ ತಿಳಿಯಬೇ ಕಾಗಿರುತ್ತೆ. ಹಾಗೆಯೇ ಒಂದು ಪ್ರಾಣಿಯ ಅಥವಾ ಮನುಷ್ಯನ ವಿಷಯದಲ್ಲೂ, ಹೊರಗಿನ ಅಂಗಾಗಗಳಲ್ಲದೆ ಮನಃಪ್ರವ್ರುತ್ತಿ, ಒಳಗಿರುವ ಪ್ರಾಣ, ಆತ್ಮ – ಇವೆಲ್ಲದರ ವಿಶಯವು ತಿಳಿದುಕೊಳ್ಳಬೇಕು. ಧರ್ಮವನ್ನು ಈ ರೀತಿಯಾದ ದ್ರಷ್ಟಿಯಿಂದ ಪರಿಶೀಲಿಸಿದರೆ ಅದರ ಬಾಹ್ಯ ಸ್ವರೂಪ ವಿಧಿ ನಿಶೇಧಗಳಿಂದ ಏರ್ಪಟ್ಟಿರುತ್ತೆ. ಈ ಭಾಹ್ಯ ಸ್ವರೂಪವಾದ ವಿಧಿ ನಿಶೇದಗಳನ್ನು ತಿಳಿಯದಿದ್ದರೆ ಮತ್ತು ಆಚರಿಸದಿದ್ದರೆ ಧರ್ಮವು ಕೇವಲ ಶರೀರವಿಲ್ಲದ ಪಿಶಾಚಿಯಂತೆ ನಿರುಪಯೋಗವಾಗಿರುತ್ತೆ . ವಿಧಿ ಎಂದರೆ ಯಾರು ಯಾವ ಸಮಯ ಸಂಧರ್ಭಗಳಲ್ಲಿ ಏನು ಮಾಡಬೇಕು ಎಂಬುದು. ನಿಷೇದವೆಂದರೆ ಯಾರು ಯಾವ ಸಮಯ ಸಂಧರ್ಭಗಳಲ್ಲಿ ಏನು ಮಾಡಬಾರದೆಂಬುದು. ಇವುಗಳು ಸರಿಯಾಗಿ ಎಲ್ಲರಿಂದಲೂ ಆಚರಿಸಲ್ಪಡುತ್ತಿದ್ದರೆ ಮಾತ್ರ ಧರ್ಮವಿದ್ದಂತೆ. ಈ ರೀತಿಯಾದ ಆಚರಣೆ ಇಲ್ಲದ ಕಡೆ ಧರ್ಮವಿಲ್ಲ. ಆದರೆ ಯಾವುದೋ ಒಂದು ವಿಧಿ ನಿಷೇಧಗಳಿಟ್ಟುಕೊಂಡು ಆಚರಿಸುತ್ತಿದ್ದೇನೆಂದು ಮಾನವನು ಅಂದುಕೊಂಡರೆ ಇದು ಧರ್ಮವಾಗುವುದಿಲ್ಲ. ಆದರಲ್ಲಿ ಧರ್ಮದ ಆತ್ಮ ಮತ್ತು ಪ್ರಾಣ ಸೇರಿಸಿಕೊಂಡಿರಬೇಕು, ಅದಿಲ್ಲದ ವಿಧಿ ನಿಷೇದಗಳು ಜೀವನವಿಲ್ಲದ ಶವದಂತೆ.
ಧರ್ಮದ ಪ್ರಾಣವೇ “ದಾನ” ವೆಂದು ಹೇಳಬಹುದು. ಸರಿಯಾದ ದಾನದಲ್ಲಿ ದಯೆ ಮತ್ತು ಧರ್ಮ ಸೇರಿಕೊಂಡೇ ಇರುತ್ತದೆ. ಆದುದಿರಿಂದಲೇ ಧರ್ಮದ ಜೀವವಿರುವುದು ದಾನದಲ್ಲಿ. ಸಂಗ್ರಹವಾಗಿ ಧರ್ಮವನ್ನು ನಿರ್ವಹಿಸಬೇಕಾದರೆ “ದಾನ” ಅಥವಾ “ಪರೋಪಕಾರ “ ವೆಂದೇ ಹೇಳಬೇಕಾಗಿರುತ್ತದೆ.
ಶ್ಲೋಕಾರ್ಥೇನ ಪ್ರವಕ್ಷ್ಯಾಮಿ ಯದುಕ್ತಂ ಗ್ರಂಥ ಕೋಟಿಭಿಃ I
ಪರೋಪಕಾರಃ ಪುಣ್ಯಾಯ ಪಾಪಾಯ ಪರ ಪೀಡನಂ II
ಅಂದರೆ ಕೋಟಿ ಧರ್ಮಗ್ರಂಥಗಳ ಉಪದೇಶದ ಸಾರವನ್ನು ಅರ್ಧ ಶ್ಲೋಕದಲ್ಲಿ ಹೇಳುತ್ತಿದ್ದೇನೆ. ಪರೋಪಕಾರವೇ ಪುಣ್ಯ, ಪರಹಿಂಸೆಯೇ ಪಾಪ.
ದಾನವೆಂದರೂ ಪರೂಪಕಾರವೆಂದರೂ ಒಂದೇ.
ಯಾಜ್ನಯವಲ್ಕ್ಯಸ್ಮೃತಿಯಲ್ಲಿನ ಈ ಶ್ಲೋಕ ಈ ಅಭಿಪ್ರಾಯವನ್ನು ಸಮರ್ಥಿಸುತ್ತದೆ:
ದೇಶೇ ಕಾಲ ಉಪಾಯೇನ ದ್ರವ್ಯಂ ಶ್ರದ್ಧಾ ಸಮನ್ವಿತಂ I
ಪಾತ್ರೇ ಪ್ರದೀಯತೇ ಯತ್ತತ್ಸಕಲಂ ಧರ್ಮಲಕ್ಷಣಂ II
ದೇಶ, ಕಾಲಗಳನ್ನನುಸರಿಸಿ, ಶಾಸ್ತ್ರಬೋಧನೆಯಂತೆ ಶ್ರದ್ಧೆಯಿಂದ ಸತ್ಪಾತ್ರಕ್ಕೆ ಅಗತ್ಯವಾದ ದ್ರವ್ಯವನ್ನು ಕೊಡುವುದೇ ಧರ್ಮ ಲಕ್ಷಣ.
ಈ ದಾನದ ಇನ್ನೊಂದು ರೂಪವೇ ಯಜ್ಞ. ದೇವತೆಗಳಿಗರ್ಪಿಸಲಿ, ಪಿತೃಗಳಿಗರ್ಪಿಸಲಿ, ಮನುಷ್ಯರಿಗರ್ಪಿಸಲಿ, ಪವಿತ್ರ ಭಾವನೆಯಿಂದ ಕೊಡುವ ದಾನವೆಲ್ಲವೂ ಯಜ್ಞವೇ. ಇಲ್ಲಿ ದ್ರವ್ಯ ದಾನವೊಂದೇ ಅಲ್ಲ. ಸ್ವಾರ್ಥ ಬಿಟ್ಟು ತನಗೆ ಪ್ರಿಯವಾದ ಯಾವ ವಸ್ತುವನ್ನಾಗಲಿ, ಮನಸ್ಸನ್ನಾಗಲೀ ಪ್ರಕಾಶಮಾನವಾಗಿರುವ ಶ್ರೇಷ್ಠವಾದ, ಅರ್ಹವಾದ, ಪಾತ್ರಕ್ಕೆ ಕೊಡುವುದೇ ಯಜ್ಞ. ಆದುದರಿಂದ ಸನಾತನ ಧರ್ಮದಲ್ಲಿ ಹೇಳಿರುವ ಯಜ್ಞಗಳೆಲ್ಲವೂ ದಾನದ ಸ್ವರೂಪವೇ ಆಗಿರುತ್ತವೆ ಪರೋಪಕಾರದ ಪಣತೊಟ್ಟು ಮಾಡುವ ಜೀವನವೇ ಧರ್ಮ ಜೀವನವಾಗಿರುತ್ತದೆ. ವರ್ಣಾಶ್ರಮ ಧರ್ಮ, ಜಾತಿ ಧರ್ಮ, ಗುಣ ಧರ್ಮ, ಇತ್ಯಾದಿ ವಿಶೇಷ ಧರ್ಮಗಳೆಲ್ಲವೂ ವಿಧಿ ನಿಷೇಧಗಳೆಂಬವುಗಳಿಂದ ಧರ್ಮಕ್ಕೆ ಒಂದು ಆಕಾರವನ್ನು ಕೊಟ್ಟರೂ ಇವೆಲ್ಲವುಗಳಲ್ಲೂ ಜೀವವಾಗಿ ದಾನ ಅಥವಾ ಪರೋಪಕಾರದ ಭಾವವಿದ್ದರೆ ಮಾತ್ರ ಈ ವಿಶೇಷ ಧರ್ಮಗಳು ‘ ಧರ್ಮಗಳು’ ಎನಿಸಿಕೊಳ್ಳುತ್ತವೆ. ಅದು ಇಲ್ಲದಿದ್ದರೆ ಅಥವಾ ಈ ಮೂಲಧರ್ಮಕ್ಕೆ ವಿರುದ್ಧವಾದವುಗಳಾದರೆ ಅಂತಹ ವಿಶೇಷ ಧರ್ಮಗಳು ಧರ್ಮಗಳಲ್ಲ. ಆಚರಿಸಲು ಅರ್ಹಗಳೂ ಅಲ್ಲ. ವಿಶೇಷ ಧರ್ಮಗಳನ್ನು ಈ ದೃಷ್ಟಿಯಲ್ಲಿ ಶೋಧಿಸುವುದು ತುಂಬಾ ಮುಖ್ಯ. ಇದೇ ಧರ್ಮ ಸೂಕ್ಷ್ಮ. ಮೂಲ ಧರ್ಮಕ್ಕೆ ಚ್ಯುತಿ ತರುವ ಆಚಾರಗಳು ಮೇಲಕ್ಕೆ ಧರ್ಮದಂತೆ ತೋರಿದರೂ ಅವು ಅಧರ್ಮ. ಆದುದರಿಂದ ಸೂಕ್ಷ್ಮ ಧರ್ಮ ಸಿದ್ಧಾಂತವನ್ನನುಸರಿಸಿ ಅವುಗಳನ್ನು ಬಿಡಬೇಕು. ಅಧರ್ಮದಂತೆ ಕಂಡುಬಂದರೂ, ಸೂಕ್ಷ್ಮ ದೃಷ್ಟಿಯಲ್ಲಿ ಮೂಲಧರ್ಮಕ್ಕೆ ಪೋಷಕವಾದರೆ ಅವುಗಳನ್ನು ಆಚರಿಸಬೇಕು.
ಸಂಗ್ರಹಿಸಿ ಹೇಳಬೇಕಾದರೆ, ತನ್ನಂತೆ ಇತರ ಪ್ರಾಣಿಗಳನ್ನು ಬಗೆದು ಸ್ವಾರ್ಥಕ್ಕಾಗಿ ಅವುಗಳನ್ನು ದುರುಪಯೋಗಪಡಿಸಿಕೊಳ್ಳದೆ ತನ್ನ ಶಕ್ತಿಯಿಂದ ಇತರ ಪ್ರಾಣಿಗಳಿಗೆ ಸಾಧ್ಯವಾದಷ್ಟು ಸೇವೆ ಮಾಡುವುದೇ ಮೂಲಧರ್ಮವೆಂದು ಹೇಳಬಹುದು.
ವೇದಗಳಲ್ಲಿಯೂ, ಸ್ಮೃತಿಗಳಲ್ಲಿಯೂ, ಪುರಾಣಗಳಲ್ಲಿಯೂ ಹೇಳಿರುವ ವಿಶೇಷ ಧರ್ಮಗಳು ಸಾಧಾರಣವಾಗಿ ಎಲ್ಲವೂ ಈ ಮೂಲ ಧರ್ಮದ ಆಧಾರದ ಮೇಲೆ ನಿಂತಿವೆ. ಇದನ್ನು ತಿಳಿದುಕೊಳ್ಳಲು ಈ ಸಾಹಿತ್ಯವನ್ನು ಪೂರ್ವಾಗ್ರಹವಿಲ್ಲದ, ಉದಾರ ಮತ್ತು ಯುಕ್ತ ದೃಷ್ಟಿಯಿಂದ ನೋಡಬೇಕು. ಅವುಗಳಿಗೆ ಈ ಹಿನ್ನೆಲೆಯಲ್ಲಿ ಅರ್ಥ ಹೇಳಬೇಕು. ಕಾಲಾನುಸಾರ ಅವುಗಳನ್ನು ಆಚರಿಸುವುದರಲ್ಲಿ ಅಥವಾ ಬದಲಾಯಿಸಿಕೊಳ್ಳುವುದರಲ್ಲಿ ಈ ಮೂಲ ಧರ್ಮದ ದೃಷ್ಟಿಯಿರಲೇಬೇಕು. ಕೇವಲ ಸ್ವಾರ್ಥ ದೃಷ್ಟಿಯನ್ನೂ, ಸ್ಪರ್ಧೆಯನ್ನೂ ಬಲಪಡಿಸುವ ಉದ್ದೇಶವಿರಬಾರದು.
ಸಾವಿರಾರು ವರ್ಷಗಳ ಹಿಂದಿನ ವೈದಿಕ ಧರ್ಮದಲ್ಲಿ ಈ ಮೂಲ ಧರ್ಮ ಹೇಗೆ ತುಂಬಿಕೊಂಡಿದೆ? ಈ ದಿನ ಆಚರಣೆಯಲ್ಲಿರುವ ಹಿಂದೂ ಧರ್ಮದಲ್ಲಿ ಈ ದಾನದ ಅಂಶ ಹೇಗೆ ಲೋಪವಾಗಿದೆ? ಎಂಬುದನ್ನು ವಿವೇಚನೆ ಮಾಡಿ ತಿಳುದುಕೊಳ್ಳುವುದು ಅವಶ್ಯಕವಾಗಿದೆ.
1-3-1985
೨.ದಾನ
ಸನಾತನ ಧರ್ಮದಲ್ಲಿ ದಾನ.
ಯಾಜ್ಞವಲ್ಕ್ಯ ಸ್ಮೃತಿಯ ವ್ಯಾಖ್ಯೆಯಾದ ಮಿತಾಕ್ಷರೆಯಲ್ಲಿ ಸ್ಮೃತಿಗಳು ಹೇಳುವ ಧರ್ಮದ ಸಮಗ್ರ ಸ್ವರೂಪವನ್ನು ಹೀಗೆ ವರ್ಣಿಸಲಾಗಿದೆ-
“ ಅತ್ರ ಚ ಧರ್ಮಶಬ್ದಃ ಷಡ್ವಿಧಸ್ಮಾರ್ತಧರ್ಮ ವಿಷಯಃ ತದ್ಯಥಾ –ವರ್ಣಧರ್ಮಃ , ಆಶ್ರಮ ಧರ್ಮಃ, ವರ್ಣಾಶ್ರಮ ಧರ್ಮಃ, ಗುಣ ಧರ್ಮಃ, ನಿಮಿತ್ತ ಧರ್ಮಃ, ಸಾಧಾರಣ ಧರ್ಮಶ್ಚೇತಿ. ತತ್ರ ವರ್ಣಧರ್ಮಃ ನಿತ್ಯಂ ಮದ್ಯಂ ಬ್ರಾಹ್ಮಣೋವರ್ಜಯೇ ದಿತ್ಯಾದಿಃ,
ಆಶ್ರಮ ಧರ್ಮಃ ಅಗ್ನೀಂಧನ ಭೈಕ್ಷ್ಯಚರ್ಯಾದಿಃ, ವರ್ಣಾಶ್ರಮ ಧರ್ಮಃ ಪಾಲಾಶೋ ದಂಡೋ ಬ್ರಾಹ್ಮಣಸ್ಯೇತ್ಯೇವಮಾದಿ ಗುಣ ಧರ್ಮಃ ಶಾಸ್ತ್ರಿಯಾಭೇಷೇಕಾದಿ ಗುಣ ಯುಕ್ತಸ್ಯ ರಾಜ್ಞಃ ಪ್ರಜಾಪಾಲನಾದಿಃ, ನಿಮಿತ್ತ ಧರ್ಮಃ ವಿಹಿತಾಕರಣ ಪ್ರತಿಷಿದ್ಧ ಸೇವನ ನಿಮಿತ್ತ ಪ್ರಾಯಶ್ಚಿತ್ತಂ, ಸಾಧಾರಣೋ ಧರ್ಮಃ ಅಹಿಂಸಾದಿಃ ನಹಿಂಸ್ಯಾತ್ಸರ್ವ ಭೂತಾನಿ ಇತ್ಯಾಚಂಡಾಂ ಸಾಧಾರಣೋ ಧರ್ಮಃII”
ಇದರಂತೆ ಧರ್ಮವನ್ನು ಆರು ಭಾಗಗಳಾಗಿ ವಿಂಗಡಿಸಲಾಗಿದೆ –
- ವರ್ಣಧರ್ಮ – ಬ್ರಾಹ್ಮಣನು ಯಾವಾಗಲೂ ಯಾವ ವಿಧವಾದ ಮದ್ಯವನ್ನೂ ಸೇವಿಸಬಾರದು; ಮುಂತಾದ ವಿಧಿನಿಷೇಧಗಳು-
- ಆಶ್ರಮಧರ್ಮ – ಅಗ್ನಿಕಾರ್ಯ, ಭಿಕ್ಷಾಟನೆಗಳನ್ನೂ ದ್ವಿಜಬ್ರಹ್ಮಚಾರಿಗಳೆಲ್ಲರೂ ಮಾಡಬೇಕು ಮುಂತಾದವು.
- ವರ್ಣಾಶ್ರಮಧರ್ಮ- ಬ್ರಾಹ್ಮಣನು ಬ್ರಹ್ಮಚರ್ಯಾಶ್ರಮದಲ್ಲಿ ಮುತ್ತುಗದ ದಂಡವನ್ನು ಉಪಯೋಗಿಸಬೇಕು ಮುಂತಾದವು.
- ಗುಣಧರ್ಮ – ಶಾಸ್ತ್ರದಲ್ಲಿ ಹೇಳಿರುವ ರೀತಿಯಿಂದ ಅಭಿಷೇಕ ಮುಂತಾದ ಗುಣಗಳುಳ್ಳ ರಾಜನು ಪ್ರಜಾಪಾಲನೆ ಮುಂತಾದುವನ್ನು ಮಾಡಬೇಕು, ಇತ್ಯಾದಿ.
- ನಿಮಿತ್ತ ಧರ್ಮ- ತಾನು ಮಾಡಬೇಕಾದ ಕರ್ತವ್ಯವನ್ನು ಮಾಡದಿರುವಾಗ ಮಾಡಬಾರದ್ದನ್ನು ಮಾಡಿದಾಗ ದೋಷವನ್ನು ಪರಿಹಾರ ಮಾಡಲು ಮಾಡುವ ಪ್ರಾಯಶ್ಚಿತ್ತ.
- ಸಾಧಾರಣಧರ್ಮ- ಸರ್ವಭೂತಗಳನ್ನೂ ಹಿಂಸಿಸಬಾರದು ಎಂಬ ಅಹಿಂಸೆ ಮುಂತಾದ ಧರ್ಮ – ಇದನ್ನು ಬ್ರಾಹ್ಮಣರಿಂದ ಚಂಡಾಲರವರೆಗೂ ಇರುವ ಸಮಸ್ತ ಮಾನವರು ಆಚರಿಸಬೇಕು;
ಇದನ್ನು ಪರಿಶೀಲಿಸಿದರೆ ನಮಗೆ ಗೊತ್ತಾಗುವುದೇನೆಂದರೆ-
ಅಹಿಂಸೆ, ಸತ್ಯ, ಕಳ್ಳತನ ಮಾಡದಿರುವಿಕೆ, ಬಾಹ್ಯ ಶುಚಿತ್ವ, ಇಂದ್ರಿಯ ನಿಗ್ರಹ, ದಮ, ದಾನ, (ಪರೋಪಕಾರ) ದಯೆ, ಸಹನೆ ಇತ್ಯಾದಿ ಧರ್ಮಗಳನ್ನು ಎಲ್ಲ ಮಾನವರೂ ಆಚರಿಸಬೇಕು. ಇವು ಇಲ್ಲದ ವಿಶೇಷ ಧರ್ಮಗಳು ಪ್ರಯೋಜನಕರವಲ್ಲ. ಇದು ಮೊದಲನೆಯ ವಿಷಯ.
ಮೇಲ್ಕಂಡ ಧರ್ಮಗಳೆಲ್ಲವೂ ದಮ, ದಾನ ಮತ್ತು ದಯೆಯೊಳಗೆ ಸೇರಿಕೊಂಡಿವೆ. ಇವುಗಳಲ್ಲಿ ದಾನವೇ ಹೇಗೆ ಮುಖ್ಯ ಎಂಬುದನ್ನು ಈಗಾಗಲೇ ಚರ್ಚಿಸಲಾಗಿದೆ.
ಈ ಸಾಧಾರಣ ಧರ್ಮಗಳು ಶುದ್ಧ ಧರ್ಮಗಳು. ಜೀವನದಲ್ಲಿ ಧರ್ಮವಲ್ಲದೆ ಶಕ್ತಿಯೂ ಇರುತ್ತದೆ. ವಿದ್ಯೆ, ಬುದ್ಧಿ, ಧನ, ದೇಹಶಕ್ತಿ, ಅಧಿಕಾರ ಇತ್ಯಾದಿ ಶಕ್ತಿಗಳನ್ನು ಧರ್ಮದ ಪೋಷಣೆಗಾಗಿ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬ ಪ್ರಶ್ನೆ ಬರುತ್ತದೆ. ಈ ಶಕ್ತಿಗಳು ಒಬ್ಬಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಈ ಭಿನ್ನತೆ ಇರುವುದರಿಂದ
ಧರ್ಮಬೋಧಿಸುವ ವಿಧಿನಿಶೀಧಗಳು ಬೇರೆ ಬೇರೆಯಾಗುತ್ತವೆ. ಆದುದರಿಂದ ಈ ಸಾಧಾರಣ ಧರ್ಮವೆಂಬ ಗಿಡ ಎರಡು ಕವಲೊಡೆಯುತ್ತದೆ. (1) ಗುಣ ಧರ್ಮ, (2) ನಿಮಿತ್ತ ಧರ್ಮ. ಅವರವರ ಗುಣ, ಶಕ್ತಿಗಳಿಗನುಸಾರವಾಗಿ ಧರ್ಮಾಚರಣೆಯಲ್ಲಿ ಭೇದ ಎಂಬ ಈ ಎರಡು ಶಾಖೆಗಳು ಪ್ರಪಂಚದ ಎಲ್ಲ ಧರ್ಮಗಳಲ್ಲೂ ಇದ್ದೇ ಇರುತ್ತವೆ. ಇವು ಸಹಜವಾದವು.
ಆದರೆ ಭಾರತ ದೇಶದಲ್ಲಿ ಬ್ರಹ್ಮಾವರ್ತವೆಂಬ ಒಂದು ಪ್ರಾಂತದಲ್ಲಿ ಈ ವಿಶೇಷ ಧರ್ಮಗಳು ವರ್ಣಾಶ್ರಮ ಧರ್ಮ ರೂಪವನ್ನು ತಾಳಿತು. (ಇದರಲ್ಲಿ ಗುಣಧರ್ಮದಿಂದ ವರ್ಣಧರ್ಮವೂ, ನಿಮಿತ್ತ ಧರ್ಮದಿಂದ ಆಶ್ರಮಧರ್ಮವೂ ಹುಟ್ಟಿರಬಹುದು) ಇದು ಕ್ರಮೇಣ ಕೃಷ್ಣಮೃಗವಿರುವ ಯಜ್ಞಿಯ ದೇಶಕ್ಕೆ ಮಾತ್ರ ವ್ಯಾಪಿಸಿತು. ಇದಕ್ಕೆ ಹೊರಗಿನ ಪ್ರಪಂಚವೆಲ್ಲಾ ಮ್ಲೇಚ್ಛದೇಶ. ಯಜ್ಞಿಯ ದೇಶದ ಹೆಸರಿನಿಂದಲೀ ಈ ದೇಶದ ಜನರು ಯಜ್ಞ ದೀಕ್ಷಿತರೆಂದು ಗೊತ್ತಾಗುತ್ತೆ. ಯಗ್ನವೆಂದರೂ, ದಾನವೆಂದರೂ ಒಂದೇ. ಪಂಚಯಜ್ಞಗಳ ರೂಪವಾದ ಪರೋಪಕಾರವನ್ನು ನಾವು ಮಾಡುತ್ತೇವೆ. ಕಾಮವನ್ನು ಸಾಧ್ಯವಾದಷ್ಟು ಬದಿಗಿಡುತ್ತೇವೆ ಎಂಬ ಆದರ್ಶವುಳ್ಳವರೇ ದ್ವಿಜರು. ಇವರು ಈ ಯಜ್ಞಿಯ ದೇಶದಲ್ಲೇ ಇರಬೇಕೆಂದೂ, ಇವರಲ್ಲದ ಶೂದ್ರ ಪ್ರಪಂಚದ ಯಾವ ದೇಶದಲ್ಲಾದರೂ ಜೀವಿಸಬಹುದೆಂದೂ ಮನುಸ್ಮೃತಿ ಹೇಳುತ್ತದೆ.
ಬ್ರಾಹ್ಮಣ, ಕ್ಷತ್ರಿಯ, ವೈಶ್ಯರೆಂಬ ವರ್ಣದವರು ದ್ವಿಜರು. ಇವರಿಗೆಲ್ಲಾ ಆಶ್ರಮಗಳು ಸಂಸ್ಕಾರಗಳು ಎಂಬ ಧರ್ಮದ ನಿಯಮಗಳು ವಿಧಿಸಲ್ಪಟ್ಟಿವೆ. ಸಮಾಜದಲ್ಲಿ ನೂರಕ್ಕೆ 90ರಷ್ಟು ಜನ ಇವರಾದರು. ಮೊದಲು ಈ ವರ್ಣಗಳೇ ಇದ್ದು ಎಲ್ಲರೂ ದ್ವಿಜರಾಗಿ ಎಲ್ಲರೂ ವೇದಾಧಿಕಾರಿಗಳೂ ಮಹಾ ಧರ್ಮಿಷ್ಠರೂ ಆಗಿದ್ದರೆಂದು ಒಂದು ವಾದವಿದೆ. ಇದು ಹೀಗೆಯೇ ಇರಬೇಕೆಂದು ನನಗನ್ನಿಸುತ್ತೆ. ಕಾರಣ ‘ ವಿಟ್’ ಅನ್ನುವ ಪದಕ್ಕೆ ವೈಶ್ಯ ಮನುಷ್ಯರು ಎಂಬ ಎರಡು ಅರ್ಥಗಳೂ ಇವೆ. ಆದುದರಿಂದ ಬಹಳ ಹಿಂದಿನ ಕಾಲದಲ್ಲಿ ಬ್ರಹ್ಮಾವರ್ತದ ಸಮಸ್ತಜನರೂ ದ್ವಿಜರಾಗಿಯೇ ಇದ್ದಿರಬಹುದು. ಕ್ರಮೇಣ ದ್ವಿಜರಾಗಲು ಸಿದ್ಧರಾಗದವರು ಮಾತ್ರ ಶೂದ್ರರೆನಿಸಲ್ಪಟ್ಟಿರಬಹುದು. ಇವರಲ್ಲಿ ಹೆಚ್ಚು ಜನ ಕಪ್ಪು ಬಣ್ಣದವರೂ ಬೇರೆ ಸಂಸ್ಕೃತಿಗೆ ಸೇರಿದವರೂ ಆಗಿರಬಹುದು. ಇದಕ್ಕೆ ಕಾರಣ ಚಾರಿತ್ರಿಕ ಸ್ಥಿತಿಗಳೇ ಹೊರತು ಧರ್ಮವಲ್ಲ. ವೈದಿಕ ಧರ್ಮದಲ್ಲಿ ಬಿಳಿಯವರು ಕಪ್ಪು ಬಣ್ಣದವರು ಇತ್ಯಾದಿ ಭೇದ ಹೇಳಿಲ್ಲ. ಅಲ್ಲದೆ ಅನೇಕ ಬ್ರಾಹ್ಮಣರೂ, ಕ್ಷತ್ರಿಯರೂ, ವೈಶ್ಯರೂ, ಪುರಾಣ ಕಥೆಗಳಂತೆಯೂ, ಇಂದಿನ ಅವರ ವಂಶಜರ ದೇಹ ಲಕ್ಷಣಗಳಂತೆಯೂ, ಕಪ್ಪು ಬಣ್ಣದವರಾಗಿಯೇ ಇದ್ದರು.
ಆದುದರಿಂದ ದ್ವಿಜಧರ್ಮವೇ ನಿಜವಾದ ವೈದಿಕ ಧರ್ಮವೆಂದು ನನ್ನ ಅಭಿಪ್ರಾಯ. ಇದನ್ನು ಅನುಸರಿಸಲು ಯಾರಿಗಾದರೂ ಅರ್ಹತೆ ಇದೆ. ಶ್ರೀ ರಮಣ ಮಹರ್ಷಿಗಳ ಶಿಷ್ಯರಲ್ಲಿ ಶ್ರೇಷ್ಟರಾದ ಶ್ರೀ ವಾಸಿಷ್ಠಗಣಪತಿಮುನಿ ಎಂಬ ದೊಡ್ಡ ಪಂಡಿತರು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಂದು ಪ್ರಪಂಚ ವಿನಾಶದತ್ತ ಸಾಗುತ್ತಿದೆ. ಈಗ ಧರ್ಮವಲ್ಲದೇ ಪ್ರಪಂಚವನ್ನು ಕಾಪಾಡಲು ಸಮರ್ಥವಾದುದು ಯಾವುದೂ ಕಂಡು ಬರುತ್ತಿಲ್ಲ. ಮಂತ್ರ ಶಕ್ತಿಯ ವಿಷಯ, ಆಧ್ಯಾತ್ಮದ ವಿಷಯ ಬದಿಗಿಟ್ಟು, ಕೇವಲ ಧರ್ಮದ ದೃಷ್ಟಿಯಿಂದ ನೋಡಿದರೂ ಈ ದ್ವಿಜ ಧರ್ಮವೆನ್ನುವುದು ಅಂತ್ಯಂತ ಶ್ರೇಷ್ಠವಾಗಿದೆ. ಇಂದು ವಿಚಾರಪರರೂ, ಧರ್ಮಾಸಕ್ತರೂ ತಪ್ಪು ಅಭಿಪ್ರಾಯಗಳನ್ನು ಬಿಟ್ಟು ಈ ದ್ವಿಜಧರ್ಮವನ್ನು ಯಥಾತಥವಾಗಿ ಆಚರಿಸದಿದ್ದರೂ, ಅದರ ಮೂಲ ತತ್ವಗಳನ್ನು ಅನುಸರಿಸಲು ಮುಂದೆ ಬಂದರೆ ಲೋಕಕ್ಕೆ ಬಹಳ ಉಪಕಾರವಾಗುವುದರಲ್ಲೂ ಅಂತಹವರ ವೈಯಕ್ತಿಕ ಸಂಸ್ಕೃತಿ ಬೆಳೆಯುವುದರಲ್ಲೂ ಸಂಶಯವಿಲ್ಲ.
1-4-1985
2 – ದಾನ
ದ್ವಿಜಧರ್ಮಕ್ಕೆ ಪ್ರಾಣವಾಗಿರುವುದು ‘ದಾನ’. ಸ್ವಾರ್ಥ ಕಡಿಮೆ ಮಾಡಿಕೊಂಡು, ಸಾಧ್ಯವಾದಷ್ಟು ಇತರರಿಗಾಗಿ ದುಡಿಯುವುದು. ಈ ವಿಷಯವನ್ನು ಮುಂದೆ ಈ ಕೆಳಗಿನ ಶೀರ್ಷಿಕೆಗಳಲ್ಲಿ ಚರ್ಚಿಸಲಾಗುವುದು. 1) ಅರ್ಥ ಕಾಮಗಳಲ್ಲಿ ಅಲ್ಪಾಸಕ್ತಿ ಮತ್ತು ತ್ಯಾಗ ಗುಣ, 2) ಅರ್ಥಶೌಚ, 3) ಬ್ರಹ್ಮಚರ್ಯ, 4) ಭಿಕ್ಷೆ ಬೇಡುವುದು ಕೊಡುವುದು, 5) ಯಜ್ಞಗಳು ಅ) ದೇವ ಯಜ್ಞ, ಆ) ಋಷಿಯಜ್ಞ, ಇ) ಪಿತೃ ಯಜ್ಞ, ಈ) ನರಯಜ್ಞ, ಉ) ಭೂತಯಜ್ಞ; 6) ಸಂವಿಭಾಗ.
1) ಅರ್ಥ ಕಾಮಗಳಲ್ಲಿ ಅಲ್ಪಾಸಕ್ತಿ ಮತ್ತು ತ್ಯಾಗ ಗುಣ
ದಾನಕ್ಕೆ ಇವು ಮೂಲ. ಆದುದರಿಂದ ಇವುಗಳ ಚರ್ಚೆ ಮೊದಲು ಮಾಡಬೇಕು. ಸುಖವನ್ನು ಬಯಸುವುದು ಮಾನವನಿಗೆ ಸಹಜ. ಅರ್ಥ ಕಾಮ ಪುರುಷಾರ್ಥಗಳಲ್ಲಿ ಸುಖವಿದೆ. ಈ ಸುಖವನ್ನು ಬಿಟ್ಟು ತ್ಯಾಗ ಗುಣವನ್ನು ಅಭ್ಯಾಸ ಮಾಡುವುದರಿಂದ ಮಾನವನು ಆನಂದವನ್ನು ಬಿಟ್ಟು ಕಷ್ಟವನ್ನೂ ದುಃಖವನ್ನೂ ವರಿಸಿದಂತಾಗುವುದಿಲ್ಲವೇ? ಇದು ದಡ್ಡತನವಲ್ಲವೇ? ಒಂದು ವೇಳೆ ಎಲ್ಲರೂ ಪರೋಪಕಾರರಾದರೆ ಅದರ ಉಪಕಾರ ತನಗೂ ಇರುತ್ತಲ್ಲಾ ಎಂದು ಹೇಳಬಹುದು. ಆದರೆ ಎಲ್ಲರೂ ಹೀಗಾಗುವುದು ಕನಸು. ಆದರೂ ಸ್ವಲ್ಪ ಪರ ಹಿತಾಶಕ್ತಿ ಇದ್ದರೆ ಸಮಾಜದ ಶ್ರೇಯಸ್ಸಿಗೆ ಸಾಕು. ತ್ಯಾಗವನ್ನೇಕೆ ಆರಾಧಿಸಬೇಕು? ಎಂಬ ಪ್ರಶ್ನೆಯನ್ನು ಈ ದಿನ ಎಲ್ಲರೂ ಕೇಳುತ್ತಾರೆ. ಈ ದಿನ ಬುದ್ಧಿವಂತರ ಮತ್ತು ಪ್ರಜಾ ನಾಯಕರ ದೃಷ್ಟಿ ಹೀಗೆಯೇ ಇರುವುದು. ಇವರು ಅತಿ ಧರ್ಮಿಷ್ಠರನ್ನು ಹುಚ್ಚರೆಂದೇ ಭಾವಿಸುತ್ತಾರೆ. ದೇವರ ಹೆಸರಿನಲ್ಲಿ, ಪರಲೋಕದ ಕಲ್ಪನೆಯಲ್ಲಿ ಈ ಹುಚ್ಚನ್ನು ಕೆಲವರು ಬೆಳೆಸಿಕೊಂಡಿದ್ದಾರೆಂದು ಭಾವಿಸುತ್ತಾರೆ.
ಈ ಪ್ರಶ್ನೆ ಧರ್ಮಶಾಸ್ತ್ರಕಾರರಿಗೆ ತಿಳಿಯದೆ ಇಲ್ಲ. ಅವರು ಇದನ್ನು ಸಾಕಷ್ಟು ಆಲೋಚಿಸಿ ಚರ್ಚಿಸಿಯೂ ಇದ್ದಾರೆ. ಅದೆಲ್ಲಾ ನಾವು ಬಿಚ್ಚಿದ ಮನಸ್ಸಿನಿಂದ ತಿಳಿದುಕೊಳ್ಳಬೇಕಷ್ಟೇ. ಮನು ಒಂದು ಕಡೆ ದೇವರ ಮತ್ತು ಪರಲೋಕದ ಪ್ರಸಂಗವನ್ನು ತರದೆಯೇ ಈ ಪ್ರಶ್ನೆಯನ್ನು ಕುರಿತು ಚರ್ಚಿಸಿದ್ದಾನೆ. ಮನುಸ್ಮೃತಿಯ 2ನೇ ಅಧ್ಯಾಯದ 88ನೇ ಶ್ಲೋಕದಿಂದ 100ನೇ ಶ್ಲೋಕದವರೆಗೂ ಇಂದ್ರಿಯ ನಿಗ್ರಹದ ವಿಚಾರ ಬರುತ್ತದೆ. ಈ ಶ್ಲೋಕಗಳಲ್ಲಿ ಹೇಳಿರುವ ಮುಖ್ಯ ವಿಷಯಗಳು ಹೀಗಿವೆ: ಇಂದ್ರಿಯಲೋಲುಪತೆ ಅಜ್ಞಾನದ ಲಕ್ಷಣ. ಜ್ಞಾನಕ್ಕೆ ಬೆಲೆ ಕೊಡುವವನು ಇಂದ್ರಿಯ ನಿಗ್ರಹವನ್ನು ಅಭ್ಯಾಸ ಮಾಡಬೇಕು. ಇಂದ್ರಿಯ ಜಯಕ್ಕೆ ಜ್ಞಾನದಿಂದ ಮನೋಜಯವನ್ನು ಮಾಡಿಕೊಳ್ಳುವುದು ಅವಶ್ಯಕ. ಹೀಗೆ ಮಾಡದೆ ಬಲಾತ್ಕಾರದಿಂದ ಇಂದ್ರಿಯಗಳನ್ನು ನಿಗ್ರಹಿಸಲು ಹೊರಡುವುದು ವಿಫಲ ಮತ್ತು ಅಪಾಯಕರ. ತುಪ್ಪವನ್ನು ಹಾಕಿದಷ್ಟೂ ಅಗ್ನಿ ಶಮನವಾಗದೆ ಇನ್ನೂ ಬೆಳೆಯುವಂತೆ ಇಂದ್ರಿಯಗಳನ್ನು ತೃಪ್ತಿ ಪಡಿಸಿದಷ್ಟೂ ಅವುಗಳ ಅತೃಪ್ತಿ ಜಾಸ್ತಿ ಆಗುತ್ತದೆ. ಇಂದ್ರಿಯ ಜಯದಿಂದ ಬರುವ ಸಿದ್ಧಿ ಬಹಳ ಉತ್ತಮವಾದುದು. ಇಂದ್ರಿಯಗಳನ್ನು ಜಯಿಸಿದವ ಯೋಗಿ. ಇಂದ್ರಿಯ ಲೋಲುಪನಿಗೆ ಆಗುವ ಶರೀರಾಯಾಸ ಮತ್ತು ಒಂದು ವಿಧವಾದ ಶಕ್ತಿನಾಶ ಮತ್ತು ಅತೃಪ್ತಿಯ ಬಾಧೆ ಯೋಗಿಗೆ ಆಗುವುದಿಲ್ಲ. ಆತನು ಶ್ರಮವಿಲ್ಲದೆ ಅರ್ಥಗಳನ್ನು ಸಾಧಿಸಬಹುದು. ( ಈತನು ಕೋರಿಕೆ ಇಲ್ಲದೆ ಕರ್ಮ ಮಾಡುವುದು ಲೋಕ ಹಿತಕ್ಕಾಗಿ). ಇಂದ್ರಿಯ ಲೋಲುಪನಿಗೆ ಹರ್ಷ ಶೋಕಗಳೆರಡೂ ಇರುತ್ತವೆ. ಇಂದ್ರಿಯಗಳನ್ನು ಜಯಿಸಿದವನಿಗೆ ಈ ಎರಡರ ಪೀಡೆ ಇರುವುದಿಲ್ಲ. ಉತ್ತಮವಾದ ಆನಂದ ಲಭಿಸುತ್ತದೆ. ಸಮಸ್ತ ಕೋರಿಕೆಗಳನ್ನೂ ಒಬ್ಬನು ಅದೃಷ್ಟದಿಂದ ಪಡೆಯಬಹುದು. ಇನ್ನೊಬ್ಬರು ಜ್ಞಾನದಿಂದ ಇಂದ್ರಿಯಗಳನ್ನು ಜಯಿಸಿ ಆ ಸಮಸ್ತ ಕಾಮಗಳನ್ನು ತ್ಯಜಿಸಿ ತೃಣಪಾಯವಾಗಿ ನೋಡಬಹುದು. ಈ ಎರಡನೆಯವನ ಸಿದ್ದಿಯೇ ಹೆಚ್ಚು. ಅವನಿಗೆ ಆನಂದ ತನ್ನಲ್ಲೇ ಇದೆ. ಆ ಆನಂದ ಮೊದಲನೆಯವನು ಪಡೆಯುವ ಸುಖಕ್ಕಿಂತಲೂ ಶ್ರೇಷ್ಟವಾದದ್ದು, ಶಾಶ್ವತವಾದದ್ದು. ದುಖಃದಲ್ಲಿ ಪರ್ಯವಸಾನ ಹೊಂದುವುದಿಲ್ಲ.
ವೈಜ್ಞಾನಿಕ ಯುಗದ ಮಾನವ ಮೇಲೆ ಹೇಳಿದ ಮನುವಿನ ವಿಚಾರ ಧಾರೆಯನ್ನು ಯಾವ ಕಾರಣ ಕೊಟ್ಟು ಪ್ರತಿಭಟಿಸುತ್ತಾನೆ? ತೂಕಡಿಸುತ್ತಿರುವವನು ಹಾಸಿಗೆಯನ್ನು ಬಯಸುತ್ತಾನೆಯೆ ಹೊರತು ಎಚ್ಚತ್ತುವುದರಲ್ಲಿಯ ಲಾಭವು ಹೇಳಿದರೂ ತಿಳಿದರೂ ಅದಕ್ಕೆ ಮನವೊಪ್ಪುವುದಿಲ್ಲ. ಇದು ಅಶಕ್ತಿಯ ಲಕ್ಷಣವಲ್ಲವೇ.
ಸ್ವಾರ್ಥ ಬುದ್ಧಿಗಿಂತಲೂ ತ್ಯಾಗದಲ್ಲಿನ ಆನಂದ ಮಹತ್ತರವೆಂಬುದು ಸತ್ಯವಾದ ಮಾತು. ಮಾನವನಿಗೆ ಇರುವ ಜ್ಞಾನ ಶಕ್ತಿಯಿಂದ ಅವನು ಈ ಉತ್ತಮವಾದ ಆನಂದವನ್ನು ಸಾಧಿಸಲು ಪ್ರಯತ್ನಿಸಬೇಕು.
ಮನುಸ್ಮೃತಿಯಲ್ಲಿ ಮೇಲೆ ಹೇಳಿದ ಶ್ಲೋಕಗಳು ಬ್ರಹ್ಮಚರ್ಯಾಶ್ರಮದ ನಿಯಮಗಳ ಸಂದರ್ಭದಲ್ಲಿ ಬಂದಿವೆ. ಈ ಆಶ್ರಮ ಎಲ್ಲಾ ದ್ವಿಜರಿಗೂ ಇದೆ. ಅಂದಮೇಲೆ ದ್ವಿಜ ಧರ್ಮಕ್ಕೆ ಅರ್ಥ ಕಾಮಗಳಲ್ಲಿ ಅಲ್ಪಾಸಕ್ತಿ ಮತ್ತು ತ್ಯಾಗ ಗುಣ ತಳಪಾಯ.
ಮನು ಸ್ಪಷ್ಟವಾಗಿ ಹೇಳಿದ್ದಾನೆ:
“ ಅರ್ಥ ಕಾಮೇಷ್ವ ಸಕ್ತಾನಾಂ ಧರ್ಮಜ್ಞಾನಂ
ವಿಧೀಯತೇ!!”
ಅಂದರೆ ಅರ್ಥ ಕಾಮಗಳಲ್ಲಿ ಹೆಚ್ಚು ಆಸಕ್ತಿ ಇಲ್ಲದವರಿಗೆ ಮಾತ್ರ ಧರ್ಮವನ್ನು ತಿಳಿಯಲು ಅರ್ಹತೆ ಇದೆ.
ತೈತ್ತಿರೀಯೋಪನಿಷತ್ತಿನ ಬ್ರಹ್ಮಾನಂದವಲ್ಲಿಯಲ್ಲಿ ಆನಂದದ ಮೀಮಾಂಸೆ ಮಾಡಲಾಗಿದೆ. ಅಲ್ಲಿ ಅತ್ಯಂತ ಸುಖಾಪೇಕ್ಷೆಯುಳ್ಳ ಒಬ್ಬ ರಾಜನೂ ಯುವಕನೂ, ಶಕ್ತಿವಂತನೂ, ಒಳ್ಳೆಯವನೂ, ವಿದ್ಯಾವಂತನೂ, ಬೇಕಾದಷ್ಟು ಧನವುಳ್ಳವನೂ ಆಗಿದ್ದರೆ ಅವನಿಗೆ ಎಷ್ಟು ಸಂತೋಷ ಉಂಟಾಗುತ್ತೋ ಅದನ್ನು ಒಂದು ಮಾನುಷಾನಂದವೆಂದು ವರ್ಣಿಸಿ, ಅವಿದ್ಯೆ, ಕೋರಿಕೆಗಳು ಮತ್ತು ಕರ್ಮಬಂಧನವನ್ನು ಬಿಡುತ್ತಾ ಹೋದವನ ಆನಂದ ಕ್ರಮ ಕ್ರಮವಾಗಿ ಈ ಮಾನುಷಾನಂದಕ್ಕೆ ನೂರರಷ್ಟು, ಅದಕ್ಕೆ ನೂರರಷ್ಟು ಹೀಗೆ ಬೆಳೆಯುತ್ತ ಹೋಗುತ್ತದೆಯೆಂದು ವರ್ಣಿಸಲಾಗಿದೆ. ಈ ರೀತಿ ಒಂದಕ್ಕಿಂತಾ ಇನ್ನೊಂದು ನೂರರಷ್ಟಿರುವ ಆನಂದಗಳನ್ನು ಕ್ರಮವಾಗಿ ಮಾನುಷಾನಂದ, ಮನುಷ್ಯ ಗಂಧರ್ವರ ಆನಂದ, ದೇವ ಗಂಧರ್ವರ ಆನಂದ, ಪರಲೋಕದಲ್ಲಿರುವ ಪಿತೃಗಳ ಆನಂದ, ಆಜಾನ ಲೋಕದಲ್ಲಿರುವ ದೇವತೆಗಳ ಆನಂದ, ಕರ್ಮದಿಂದ ದೇವತೆಗಳಾಗುವವರ ಆನಂದ, ದೇವತೆಗಳ ಆನಂದ, ಇಂದ್ರನ ಆನಂದ, ಬೃಹಸ್ಪತಿಯ ಆನಂದ, ಪ್ರಜಾಪತಿಯ ಆನಂದ, ಬ್ರಹ್ಮನ ಆನಂದ ಎಂದು ವರ್ಣಿಸಲಾಗಿದೆ. ಒಳ್ಳೆಯತನ, ವಿದ್ಯೆ, ಜ್ಞಾನ ಇರುವವನು ಕೋರಿಕೆಯನ್ನು ಬಿಡುತ್ತ ಬಿಡುತ್ತ ಹೋದಷ್ಟೂ ಈ ಆನಂದಗಳನ್ನೆಲ್ಲಾ ಪಡೆದು ಕೊನೆಗೆ ಬ್ರಹ್ಮನ ಆನಂದವೇ ಲವಲೇಶವಾಗಿರುವ ಪರಬ್ರಹ್ಮಾನಂದವನ್ನು ಪಡೆಯುವನು. ಇದರಿಂದ ನಮ್ಮ ಹಿರಿಯರು ಕಾಮ ವೃತ್ತಿಯನ್ನು ಎಷ್ಟು ಅಲ್ಪವೆಂದು ಭಾವಿಸಿದರೋ ನಿಷ್ಕಾಮತ್ವದ ಅಭ್ಯಾಸ ಎಷ್ಟು ಶ್ರೇಷ್ಠವೆಂದು ಭಾವಿಸಿದರೋ ತಿಳಿಯುತ್ತದೆ.
1-5-1985
2 – ದಾನ
ಅರ್ಥ ಶೌಚ
ಸರ್ವೇಷಾಮೇವ ಶೌಚಾನಾಂ ಅರ್ಥಶೌಚ ಪರಂ ಸ್ಮೃತಂ !
ಯೋರ್ಥೇ ಶುಚಿರ್ಹಿ ಸ ಶುಚಿಃ ನ ಮೃದ್ವಾರಿ ಶುಚಿಶ್ಯುಚಿಃ !!
ಎಂಬುದು ಮನುಸ್ಮೃತಿಯಲ್ಲಿ ಒಂದು ಶ್ಲೋಕ, ಎಲ್ಲ ಶುಚಿತ್ವಗಳಿಗಿಂತಲೂ ಶ್ರೇಷ್ಠವಾದ ಶುಚಿತ್ವ ಹಣದ ವಿಷಯದಲ್ಲಿ ಶುಚಿಯಾಗಿರುವುದು, ಯಾರು ಹಣದ ವಿಷಯದಲ್ಲಿ ಶುಚಿಯಾಗಿರುತ್ತಾರೋ ಅವರೇ ನಿಜವಾದ ಶುಚಿತ್ವವುಳ್ಳವರು. ಕೇವಲ ಮಣ್ಣಿನಿಂದಲೂ ನೀರಿನಿಂದಲೂ ದೇಹ ಶುದ್ಧಿ ಮಾಡಿಕೊಳ್ಳುವವರು ನಿಜವಾದ ಶುಚಿತ್ವವುಳ್ಳವರಲ್ಲ – ಎಂಬುದು ಈ ಶ್ಲೋಕದ ತಾತ್ಪರ್ಯ.
ಧರ್ಮವಿರುವುದು ಎಲ್ಲರ ಹಿತಕ್ಕಾಗಿ. ಒಬ್ಬನ ಹಿತಕ್ಕಾಗಿಯಾಗಲಿ ಕೆಲವರ ಹಿತಕ್ಕಾಗಿಯಾಗಲಿ ಅಲ್ಲ. ಧನ ಎಲ್ಲರಿಗೂ ಬೇಕು. ಆದುದರಿಂದ ಯಾರೇ ಆಗಲಿ ಇತರರಿಗೆ ಸಲ್ಲಬೇಕಾದ ಧನವನ್ನು ತನಗಾಗಿ ಗ್ರಹಿಸುವುದು ಧರ್ಮವಲ್ಲ. ತನಗೂ ಮತ್ತು ತನ್ನ ಪೋಷಣೆಯಲ್ಲಿರುವವರಿಗೂ ಆಹಾರ, ಬಟ್ಟೆ ಮುಂತಾದ ಕನಿಷ್ಠ ಅವಶ್ಯಕತೆಗಳಿಗೆ ಎಷ್ಟು ಬೇಕೋ ಅಷ್ಟು ಧನಕ್ಕೆ ಮಾತ್ರ ಅವನಿಗೆ ಅರ್ಹತೆ ಇರುತ್ತೆ. ಇದಕ್ಕಿಂತಲೂ ಹೆಚ್ಚಾಗಿ ಕೂಡಿಟ್ಟು ಇತರರು ಕಷ್ಟಪಡುತ್ತಿದ್ದರೆ ತಾನು ಸುಖ ಪಡುತ್ತಿರುವುದು ಧರ್ಮವಲ್ಲ. ಇಷ್ಟರಮಟ್ಟಿಗೆ ಧರ್ಮದ ಜಿಜ್ಞಾಸೆ ಮಾಡುವ ಯಾವನಿಗಾದರೂ ಅರ್ಥವಾಗುತ್ತೆ. ಆದರೆ ಪ್ರಪಂಚದಲ್ಲಿ ನಾವು ಧರ್ಮಿಷ್ಠರು ಎಂದು ಭಾವಿಸುವ ಮತ್ತು ಹೇಳಿಕೊಳ್ಳುವ ಅನೇಕರಲ್ಲಿ ಹಣದ ವಿಷಯದಲ್ಲಿ ಈ ಭಾವನೆ ಇರುವುದೇ ಇಲ್ಲ. ಅಂತಹವರು ನನ್ನ ಶಕ್ತಿಯಿಂದ ನಾನು ಎಷ್ಟಾದರೂ ಸಂಪಾದಿಸಿಕೊಳ್ಳಬಹುದು. ಹಾಗೆ ಸಂಪಾದಿಸಿದ್ದು ನನ್ನ ಹಣ, ಇನ್ನೊಬ್ಬನು ಬಡವನಾಗಿದ್ದರೆ ಅದು ಅವನ ಪಾಪದ ಫಲ. ನನಗೂ ಅದಕ್ಕೂ ಸಂಬಂಧವಿಲ್ಲ ಎಂದೇ ಭಾವಿಸುತ್ತಾರೆ. ಆದರೆ ಇವರಿಗೆ ನಿಜವಾಗಿಯೂ ಧರ್ಮದ ತತ್ವವೇ ಗೊತ್ತಿಲ್ಲವೆಂದು ಹೇಳಬಹುದು. ಆದರೂ ಇಂತಹವರ ಮಾತೇ ಲೋಕದಲ್ಲಿ ಚಲಾವಣೆಯಲ್ಲಿರುವುದರಿಂದ ಯಾರಿಗೆ ಧನದ ವಿಷಯದಲ್ಲಿ ಎಷ್ಟು ಹಕ್ಕಿದೆ ಎಂಬುದನ್ನು ಧರ್ಮಶಾಸ್ತ್ರಗಳ ಆಧಾರದ ಮೇಲೆ ಪರಿಶೀಲಿಸಬೇಕಾಗಿದೆ. ನಮ್ಮ ಪ್ರಾಚೀನ ಧರ್ಮ ಶಾಸ್ತ್ರಗಳಲ್ಲಂತೂ ಕಪಟ ಧರ್ಮಗಳ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕೆಂದು ಸ್ಪಷ್ಟವಾಗಿ ಬೋಧಿಸಿರುತ್ತೆ.
“ ಈಶಾವಾಸ್ಯಮಿದಗಂ ಸರ್ವಂ ಯತಿಂಚ ಜಗತ್ಯಾಂ ಜಗತ್ !!
ತೇನ ತ್ಯಕ್ತೇನ ಭುಂಜೀಥಾಃ ಮಾಗ್ಭಧಃ ಕಸ್ಯಸ್ವಿದ್ಧನಂ !!
ಎಂಬ ಈಶಾವಾಸ್ಯೋಪನಿಷತ್ತಿನ ಮಂತ್ರ ಮೇಲ್ಕಂಡ ಜಿಜ್ಞಾಸೆಗೆ ಬಹಳ ಮುಖ್ಯವಾದುದು. ಎಲ್ಲ ಪ್ರಾಣಿಗಳಲ್ಲಿಯೂ ಇರುವ ಚೈತನ್ಯವು ಒಂದೇ. ಅದೇ ಸರ್ವೇಶ್ವರನ ಚೈತನ್ಯ. ಒಬ್ಬ ಜೀವಿ ಇನ್ನೊಬ್ಬ ಜೀವಿಯ ಧನವನ್ನು ಆಶಿಸಬಾರದು. ಎಲ್ಲಾ ಜೀವಿಗಳೂ ಈ ವಿಧವಾದ ದುರಾಶೆಯನ್ನು ಬಿಟ್ಟು ತಮಗೆ ನಿಜವಾಗಿಯೂ ಅನುಭವಿಸಲು ಎಷ್ಟು ಅರ್ಹತೆ ಇದೆಯೋ ಅಷ್ಟರೊಳಗೆ ತೃಪ್ತಿಯೊಂದಿರಬೇಕು, ಎಂಬುದೇ ಈ ಮಂತ್ರದ ಸಂದೇಶ. ಧರ್ಮದ ಮೂಲ ಸೂತ್ರವೆಂದರೆ ಪ್ರತಿಯೊಬ್ಬರೂ ಇತರರನ್ನು ತನ್ನಂತೆಯೇ ಭಾವಿಸಬೇಕು ಎಂಬುದು. ಈ ತಳಹದಿಯ ಮೇಲೆ ಧರ್ಮಶಾಸ್ತ್ರಕಾರರು ಹಣದ ವಿಷಯದಲ್ಲಿ ಕೆಲವು ಮೂಲಭೂತವಾದ ನಿಯಮಗಳನ್ನು ಬೋಧಿಸಿದ್ದಾರೆ.
- ಜೀವನ ವೃತ್ತಿ ಇದು ಹಣದ ಸಂಪಾದನೆಗೆ ಮುಖ್ಯವಾದದ್ದು. ಇದರ ವಿಷಯದಲ್ಲಿ ಸ್ಪರ್ಧೆಗೆ ಅವಕಾಶ ಕೊಟ್ಟರೆ ಬಲಿಷ್ಠರು ದುರ್ಬಲರನ್ನು ಶೋಷಣೆ ಮಾಡುತ್ತಾರೆ. ಪ್ರತಿಯೊಬ್ಬನಿಗೂ ಯಾವುದಾದರೊಂದು ಜೀವನ ವೃತ್ತಿ ಮೀಸಲಾಗಿರಬೇಕು. ಇದು ಇಲ್ಲದಿದ್ದರೆ ವೃತ್ತಿ ಇಲ್ಲದವನು ಬೀದಿ ಪಾಲಾಗುತ್ತಾನೆ. ವರ್ಣಾಶ್ರಮ ಧರ್ಮವಿರುವುದು ಈ ದಿಸೆಯಲ್ಲಿ ಎಲ್ಲರಿಗೂ ಒಂದು ನಿಗದಿಯಾದ ಜೀವನೋಪಾಯವನ್ನು ಏರ್ಪಡಿಸುವುದಕ್ಕೆ. ವರ್ಣಧರ್ಮದಲ್ಲಿ ಆಯಾ ವರ್ಣದವರು ಅವರ ವೃತ್ತಿಯನ್ನೇ ಮಾಡಬೇಕೆಂಬುದಾಗಿ ನಿಶ್ಚಿತವಾಗಿ ಕುಲಧರ್ಮದಲ್ಲಿ ಇದು ಎಲ್ಲ ವೃತ್ತಿಗಳಿಗೂ ಹಬ್ಬಿತು. ಇದರಿಂದ ನಿರುದ್ಯೋಗ ಸಮಸ್ಯೆ ಬಹಳಮಟ್ಟಿಗೆ ಪರಿಹಾರವಾಗುತ್ತದೆ. ಆಶ್ರಮ ಧರ್ಮದಿಂದ ಸರಿಯಾದ ಹರೆಯದಲ್ಲಿರುವವರೇ ಆಯಾ ವೃತ್ತಿ ಮಾಡಲು ಅಧಿಕಾರಿಗಳಾಗಿದ್ದು ಚಿಕ್ಕ ವಯಸ್ಸಿನವರ ಮತ್ತು ಮುದುಕರ ಪೋಷಣೆ ಮಾಡಬೇಕೆಂದು ನಿಯಮಿತವಾಗಿರುವುದರಿಂದ ನಿರುದ್ಯೋಗ ಸಮಸ್ಯೆ ತಲೆ ಎತ್ತದಂತೆ ಮಾಡಲಾಗಿತ್ತು.
- ವೃತ್ತಿಗೌರವ- ಧರ್ಮಶಾಸ್ತ್ರಗಳು ಎಲ್ಲಾ ವೃತ್ತಿಗಳಿಗೂ ಸಮಾನವಾದ ಗೌರವವನ್ನು ಕೊಟ್ಟಿವೆ. ಯಾರೂ ಅವರ ವೃತ್ತಿ ನೀಚವೆಂದು ಭಾವಿಸದಂತೆ ಬೋಧನೆಯನ್ನು ಮಾಡಿವೆ. ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲದಲ್ಲಿ ಈ ಪ್ರಶ್ನೆ ಬಂದಾಗ ಬೆಸ್ತನು ರಾಜಭಟರೊಂದಿಗೆ “ ನನ್ನ ವೃತ್ತಿ ಮೀನನ್ನು ಹಿಡಯುವುದು. ಇದರಲ್ಲಿ ಹಿಂಸೆ ಇರಬಹುದು ಆದರೆ ಇದನ್ನು ಮಾಡುವವರೆಲ್ಲಾ ಚರಿತ್ರಹೀನರೆಂದು ಭಾವಿಸುವುದು ತಪ್ಪು. ಶ್ರೋತ್ರಿಯನು ಯಜ್ಞದಲ್ಲಿ ಪಶುವನ್ನು ಕೊಲ್ಲುತ್ತಾನೆ. ಆದರೆ ಅವನ ಹೃದಯದಲ್ಲಿ ಕರುಣೆಯಿಲ್ಲವೆಂದು ಹೇಳಲಾಗುತ್ತದೆಯೆ?” ಎಂದು ಹೇಳುತ್ತನೆ. ಮಾಂಸ ವಿಕ್ರಯ ವೃತ್ತಿಯಲ್ಲಿದ್ದ ಧರ್ಮವ್ಯಾಧನನ್ನು ಧರ್ಮಬೋಧಕನನ್ನಾಗಿ ಮಹಾಭಾರತದಲ್ಲಿ ಚಿತ್ರಿಸಲಾಗಿದೆ. ಧರ್ಮರಾಯನು ಯುದ್ಧದ ಫಲಿತದಿಂದ ಮನನೊಂದು “ ನಾನು ಅಡವಿಯಲ್ಲಿ ವಾಸಮಾಡುತ್ತೇನೆ. ಈ ಕ್ಷತ್ರಿಯ ವೃತ್ತಿ ನನಗೆ ಬೇಡ” ಎಂದು ಮೊರೆಯಿಟ್ಟರೂ ಧರ್ಮಜ್ಞರು ಆತನಿಗೆ ಅವಕಾಶ ಕೊಡಲಿಲ್ಲ. ಆತನ ವೃತ್ತಿಯಿಂದ ಆತನಿಗೆ ಅತ್ಯಂತ ಶ್ರೇಷ್ಠ ಫಲ ದೊರೆಯುವುದರಲ್ಲಿ ಸಂಶಯವಿಲ್ಲವೆಂದು ಬೋಧಿಸಿದರು.ಮನುಸ್ಮೃತಿಯಲ್ಲಿ ಶೂದ್ರನಿಗೆ ವಿಹಿತವಾದ ಸೇವಾ ವೃತ್ತಿಯೇ ಆತನಿಗೆ ತಪಸ್ಸೆಂದು ಬೋಧಿಸುತ್ತದೆ.
- ಬೇರೆ ಬೇರೆ ವೃತ್ತಿಗಳಿಂದ ಬರುವ ಆದಾಯಗಳಲ್ಲಿ ತಾರತಮ್ಯ:
ಇಂದು ಹಿಂದುಳಿದ ವರ್ಗಗಳಿಗೆ ಮಾಡಿರುವ ಮೀಸಲಾತಿಯ ವಿಷಯದಲ್ಲಿ ಎದ್ದಿರುವ ಅಭಿಪ್ರಾಯ ಭೇದದ ದುಷ್ಪರಿಣಾಮಗಳು ಭಯಂಕರವಾಗಿವೆ. ಈ ಸಮಸ್ಯೆ ದೇಶಾದ್ಯಂತ ವ್ಯಾಪಿಸಿ ಜನತೆಯನ್ನು ಪರಸ್ಪರ ದ್ವೇಷಿಸುವ ಎರಡು ಹೋಳಾಗಿ ಒಡೆದುಬಿಡುವ ಸಂಭವವಿದೆ. ಈ ಸಮಸ್ಯೆ ಅರ್ಥಕ್ಕೆ ಸಂಬಂಧಪಟ್ಟದ್ದು. ಯಾವ ತೀರ್ಮಾನಕ್ಕೆ ಬಂದರೂ ಎಲ್ಲರಿಗೂ ಸಮಾಧಾನ ಮಾಡುವುದು ಕಷ್ಟ. ಇದರಂತಹ ಕೆಟ್ಟ ಸಮಸ್ಯೆಗಳು ಇನ್ನೂ ಬೇರೆ ಬೇರೆ ರೀತಿಯಲ್ಲಿ ತಲೆದೋರುವ ಸಂಭವವಿದೆ. ಇದಕ್ಕೆಲ್ಲಾ ಮೂಲ ಕಾರಣ ಸಮಾನವಾದ ಅವಕಾಶ ಎಲ್ಲರಿಗೂ ಕೊಡುತ್ತೇವೆಂದು ಭಾವಿಸುತ್ತಾ ಧನಕ್ಕಾಗಿ ಕಾದಾಡುವಂತೆ ಜನರನ್ನು ಹುರಿದುಂಬಿಸಿ ಬಿಟ್ಟಿರುವುದು. ಹಣಕ್ಕಾಗಿ ಒಬ್ಬರೊಂದಿಗೆ ಇನ್ನೊಬ್ಬರು ಕಾದಾಡಲು ಎಲ್ಲರಿಗೂ ಸಮಾನವಾದ ಅಧಿಕಾರವನ್ನು ಕೊಟ್ಟು ನಾವು ಎಂದಿಗೂ ಇಲ್ಲದ ಧರ್ಮವನ್ನು ಮಾಡಿದ್ದೇವೆ ಎಂದು ಹೇಳಿದರೆ ಎಷ್ಟು ಹಾಸ್ಯಾಸ್ಪದವಾಗುತ್ತದೆಯೋ ಅಷ್ಟು ಹಾಸ್ಯಾಸ್ಪದವಾಗಿದೆ ಇಂದಿನ ನಮ್ಮ ದೇಶದ ಪ್ರಭುತ್ವದ ನೀತಿ.
ಒಬ್ಬನು ಬುದ್ಧಿವಂತನಾಗಿದ್ದರೆ ಅವನು ಹೆಚ್ಚು ಅರ್ಹನಾಗಿದ್ದರೆ ಅವನಿಗೇ ಕೊಡಿ ಡಾಕ್ಟರು ಕೆಲಸ ಅಥವಾ ಇಂಜಿನಿಯರಿಂಗ ಕೆಲಸ. ಆದರೆ ಅವನಿಗೆ ಬೇರೆ ವೃತ್ತಿಗಳು ಮಾಡುವವರಿಗಿಂತ ಹೆಚ್ಚು ಸಂಪಾದನೆ ಮಾಡಿಕೊಂಡು ಇತರರಲ್ಲಿ ಮಾತ್ಸರ್ಯವನ್ನು ಹುಟ್ಟಿಸಲು ಅವಕಾಶವೇತಕ್ಕೆ ಕೊಡಬೇಕು? ಈ ಪ್ರಶ್ನೆಗೆ ತಲೆ ಹಾಕುವವರೇ ಕಾಣುತ್ತಿಲ್ಲ. ಅವನು ಶಕ್ತಿವಂತ, ಅವನು ಎಷ್ಟಾದರೂ ಸಂಪಾದಿಸಿಕೊಳ್ಳಬಹುದು. ಇನ್ನೊಬ್ಬನಿಗೆ ಶಕ್ತಿ ಇಲ್ಲ. ಅವನು ಭಿಕಾರಿಯಾಗಿಯೇ ಇರಲಿ ಎಂಬುದು ಇಂದಿನ ನಮ್ಮ ದೇಶದ ಸಾಮಜಿಕ ನ್ಯಾಯದ ನೀತಿ ಮತ್ತು ರೀತಿ. ಹೀಗಿರುವಾಗ ಸಮಸ್ಯೆಗಳು ಹುಟ್ಟುವುದರಲ್ಲಿ ಆಶ್ಚರ್ಯವೇನಿದೆ? ಕೊಳಕು ನೀರನ್ನು ಹಾಗೇ ಬಿಟ್ಟು ಸೊಳ್ಳೆ ಕಾಟ ಎಂದು ಹೇಳಿದರೆ ಅರ್ಥವಿದೆಯೇ.
1-6-1985
2 – ದಾನ
ಅರ್ಥಶೌಚ
3) ಬೇರೆ ಬೇರೆ ವೃತ್ತಿಗಳಿಂದ ಬರುವ ಆದಾಯಗಳಲ್ಲಿ ತಾರತಮ್ಯ-
ಯಾವ ವರ್ಣದವರು ಅವರ ವೃತ್ತಿಯಿಂದ ಎಷ್ಟು ಹಣ ಸಂಪಾದಿಸಬಹುದು? ಭೋಗಮಯವಾದ ಜೀವನವನ್ನು ನಡೆಸಬಹುದೇ? ಧನವನ್ನು ಹೆಚ್ಚಾಗಿ ಕೂಡಿಡಬಹುದೇ? ಹೆಚ್ಚಾಗಿರುವ ಧನವನ್ನು ಏನುಮಾಡಬೇಕು? ಧನದಿಂದ ಗೌರವ ಪಡೆಯಲು ಅರ್ಹತೆ ಇದೆಯೇ? ಇವೇ ಮೊದಲಾದ ಮುಖ್ಯವಾದ ಪ್ರಶ್ನೆಗಳಿಗೆ ಧರ್ಮಶಾಸ್ತ್ರ ಏನು ಉತ್ತರ ಕೊಟ್ಟಿದೆ ಎಂಬುದನ್ನು ಪರಿಶೀಲಿಸೋಣ.
ಮನುಸ್ಮೃತಿಯಲ್ಲಿ ಪ್ರಾರಂಭದಲ್ಲೇ “ ದಾನಮೇಕಂ ಕಲೌಯುಗೇ” ಎಂದರೆ ಕಲಿಯುಗದಲ್ಲಿ ದಾನ ( ಅಂದರೆ ಪರೋಪಕಾರವೇ) ಶ್ರೇಷ್ಠವಾದ ಧರ್ಮ ಎಂದು ಹೇಳಿರುವುದನ್ನು ಈ ಸಂದರ್ಭದಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದೆ. ಧನ ಹೆಚ್ಚಾಗಿ ಒದಗಿ ಬಂದರೆ ಅದರಿಂದ ಭೋಗಮಯವಾದ ಜೀವನವನ್ನು ನಡೆಸದೆ ಅದನ್ನು ಅರ್ಹರಾದ ನಿರ್ಧನರಿಗೆ ದಾನ ಮಾಡಬೇಕು ಎಂಬುದು ಧರ್ಮದ ಕಹಳೆಯ ಕೂಗು.
“ ಸರ್ವಸ್ಯಾಸ್ಯತುಸರ್ಗಸ್ಯ ಗುಪ್ತ್ಯರ್ಥಂ” ಎಂದರೆ ಈ ಸೃಷ್ಟಿಯಲ್ಲಿನ ಎಲ್ಲಾ ಜೀವಿಗಳ ರಕ್ಷಣೆ ಮತ್ತು ಹಿತಕ್ಕಾಗಿ ನಾಲ್ಕು ವರ್ಣದವರು ಮಾಡಬೇಕಾದ ಕೆಲಸಗಳನ್ನು ಭಗವಂತನು ಏರ್ಪಡಿಸಿದ್ದಾನೆ ಎಂದು ಮನುಸ್ಮೃತಿಯು ಹೇಳುವುದರಿಂದ ಒಬ್ಬನು ತನ್ನ ಶಕ್ತಿಯಿಂದ ಇತರರನ್ನು ಶೋಷಣೆ ಮಾಡುವುದನ್ನು ಧರ್ಮಶಾಸ್ತ್ರ ಬಹಿಷ್ಕರಿಸಿದೆಯೆಂದು ತಿಳಿಯುತ್ತದೆ. ಅವರವರಲ್ಲಿ ಸ್ವಭಾವತಃ ಇರುವ ಗುಣಶಕ್ತಿಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಆಯಾ ವರ್ಣದವರು ಸ್ವಕರ್ಮದಿಂದ ಸಮಾಜ ಸೇವೆಯನ್ನು ಮಾಡಬೇಕೆಂಬುದೇ ಧರ್ಮದ ಉದ್ದೇಶ. “ ಸ್ವಕರ್ಮಣಾತಮಭ್ಯರ್ಚ್ಯ” ಎಂಬ ಗೀತಾವಾಕ್ಯವು ಇದೇ ದೇವರ ಸೇವೆ ಎಂದು ತಿಳಿಸುತ್ತದೆ. ಹೀಗಿರುವಾಗ ಸಬಲರು ದುರ್ಬಲರನ್ನು ಆರ್ಥಿಕವಾಗಿ ಶೋಷಣೆ ಮಾಡುವುದಕ್ಕೆ ಧರ್ಮ ಶಾಸ್ತ್ರದಲ್ಲಿ ಸ್ಥಾನವೇ ಇಲ್ಲ.
ಬ್ರಾಹ್ಮಣರು ಎಷ್ಟು ಧನ ಸಂಪಾದಿಸಬಹುದು? ಎಂಬುದಾಗಿ ಮನುಸ್ಮೃತಿಯು ಹೀಗೆ ಬೋಧಿಸುತ್ತದೆ. ಜೀವನಯಾತ್ರೆಯನ್ನು ಮುಂದೆ ಸಾಗಿಸುವುದಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಧನವನ್ನು ಸಂಪಾದಿಸಬೇಕು. ‘ತಿಲೋಂಛವೃತ್ತಿ’ ಅಂದರೆ ಗದ್ದೆಯ ಬೆಳೆಕೊಯ್ದು ಯಾರೂ ಹೆಕ್ಕದೆ ಬಿಟ್ಟ ಧಾನ್ಯದ ಕಾಲನ್ನು ಅಥವಾ ತೆನೆಯನ್ನು ಹೆಕ್ಕಿ ಅದನ್ನು ತಿಂದು ಜೀವಿಸುವುದು ಬ್ರಾಹ್ಮಣನಿಗೆ ಅತಿ ಶ್ರೇಷ್ಠವಾದ ವೃತ್ತಿ. ಅದರಿಂದ ಜೀವಿಸಲು ಸಾಧ್ಯವಾಗದಿದ್ದರೆ, ತಾನು ಯಾಚಿಸದೆ ಸತ್ಪುರಷರು ಕೊಟ್ಟ ದಾನದಿಂದ ಜೀವಿಸಬೇಕು. ಅದರಿಂದಲೂ ಜೀವನ ನಡೆಯದಿದ್ದರೆ ಸತ್ಪುರುಷರನ್ನು ಯಾಚಿಸಿ ಜೀವಿಸಬಹುದು ಜೀವನ ನಡೆಯದಿದ್ದರೆ ಆರಂಭಮಾಡುವುದರಿಂದ ಅದರಿಂದಲೂ ಆಗದಿದ್ದರೆ ವ್ಯಾಪಾರಮಾಡುವುದರಿಂದ ಜೀವಿಸಬಹುದೆಂದು ಸ್ಮೃತಿ ಹೇಳುತ್ತದೆ. ಸಂಪಾದಿಸಿದ್ದನ್ನು ಸಾಧ್ಯವಾದಷ್ಟೂ ಧರ್ಮಕ್ಕೆ ಖರ್ಚು ಮಾಡಬೇಕು. ಕೂಡಿಡುವರಿಗಿಂತ ಅಶ್ವಸ್ತನನು ( ನಾಳೆಗೆ ಎನೂ ಇಟ್ಟುಕೊಳ್ಳದವನು) ಶ್ರೇಷ್ಠ ಬ್ರಾಹ್ಮಣನು.
ಆದಾನ ನಿತ್ಯಾಚ್ಚಾದಾತುರಾಹರೇದ ಪ್ರಯಚ್ಚತಃ!
ತಥಾ ಯಶೋಯಪ್ರಥತೇ ಧರ್ಮಶ್ಚೈವ ಪ್ರವರ್ಥತೇ!!
ಅಂದರೆ ಯಾವ ಬ್ರಾಹ್ಮಣನು ಯಾವಾಗಲೂ ದಾನವನ್ನು ತೆಗೆದುಕೊಳ್ಳುವುದೇ ಹೊರತು ತಾನು ದಾನ ಮಾಡುವುದಿಲ್ಲವೋ ಅಂತಹವನು ತನಗಿರುವ ಹೆಚ್ಚಾದ ಧನವನ್ನು ರಾಜನಿಗೆ ಕೊಡದಿದ್ದರೆ ರಾಜನು ಅದನ್ನು ಬಲಾತ್ಕಾರದಿಂದ ತೆಗೆದುಕೊಂಡು ಧರ್ಮಕಾರ್ಯಕ್ಕೆ ವಿನಿಯೋಗಿಸಬೇಕು. ಇದರಿಂದ ಆ ರಾಜನ ಕೀರ್ತಿ ಹೆಚ್ಚುತ್ತದೆ. ಧರ್ಮವು ಬೆಳೆಯುತ್ತದೆ. ಎಂದು ಮನುಸ್ಮೃತಿಯು ಹೇಳುತ್ತಿದೆ.
ಬ್ರಾಹ್ಮಣರಲ್ಲಿ ಜ್ಞಾನ ಹೆಚ್ಚಾಗಿ ಉಳ್ಳವನಿಗೆ ಗೌರವವೇ ಹೊರತು ಧನಿಕನಿಗಲ್ಲ.
ಕ್ಷತ್ರಿಯರಲ್ಲಿ ವೀರ್ಯ ಹೆಚ್ಚಾಗಿರುವವನಿಗೆ ಗೌರವ. ಕ್ಷತ್ರಿಯರು ಇಂದ್ರಿಯನಿಗ್ರಹವುಳ್ಳವರಾಗಿರಬೇಕೆಂದು ಮನು ಒತ್ತಿ ಒತ್ತಿ ಹೇಳಿದ್ದಾನೆ. ಅಲ್ಲದೆ ತನ್ನ ಧರ್ಮವಾದ ದುಷ್ಟ ಶಿಕ್ಷಣ ಶಿಷ್ಟ ರಕ್ಷಣವನ್ನು ಮಾಡುವ ರಾಜನು ದರಿದ್ರನಾಗಿದ್ದರೂ ಕೀರ್ತಿವಂತನಾಗುತ್ತಾನೆಂದು ಮನುಸ್ಮೃತಿ ಹೇಳುತ್ತದೆ.
ಮನುವಿನ ಈ ಮುಂದಿನ ಶ್ಲೋಕದಂತಹುದನ್ನು ನಾನಿನ್ನೆಲ್ಲಿಯೂ ನೋಡಲಿಲ್ಲ.
ಏವಂ ವೃತ್ತಸ್ಯ ನೃಪತೇ ಶಿಲೋಂ ಛೇನಾಪಿ
ಜೀವತಃ!
ವಿಸ್ತೀರ್ಯತೇ ಯಶೋಲೋಕೇ ತೈಲಬಿಂದು
ರಿವಾಂಭಸಿ!!
ಅಂದರೆ ನಿಷ್ಠಾವಂತನಾಗಿ ದುಷ್ಟ ಶಿಕ್ಷಣ ಶಿಷ್ಟಪರಿಪಾಲನೆ ಮಾಡುತ್ತಿರುವ ರಾಜನು ದರಿದ್ರನಾಗಿ ತಾನು ಜೀವಿಸಿರಲು ಶಿಲೋಂಛವೃತ್ತಿಗಳನ್ನು ಅವಲಂಬಿಸಿದ್ದರೂ ಚಿಂತೆಯಿಲ್ಲ. ಅವನ ಕೀರ್ತಿ ನೀರಿನಲ್ಲಿ ಬಿದ್ದ ಎಣ್ಣೆಯಂತೆ ವಿಸ್ತರಿಸಬಹುದು.
ಚರಿತ್ರೆಯಲ್ಲಿ, ಕಾವ್ಯಗಳಲ್ಲಿ, ಕಥೆಗಳಲ್ಲಿ ಬರುವ ರಾಜರ ವೈಭವಯುತವಾದ ಜೀವನವೇ ಜನರ ಮನಸ್ಸಿನಲ್ಲಿ ಹತ್ತಿಕೊಂಡು ಹೋಗಿದೆ. ಒಂದು ಕಡೆ ಒಬ್ಬ ಮಾನವನು ತನ್ನ ಶಕ್ತಿಯಿಂದ ಬೇಕಾದಷ್ಟು ಸಂಪಾದಿಸಿ ಸ್ವರ್ಗಸುಖಗಳನ್ನನುಭವಿಸುತ್ತಿದ್ದರೆ ಇನ್ನೊಂದು ಕಡೆ ದಲಿತರೂ, ಅಭಾಗಿಗಳೂ ಅನಿಕೃಷ್ಟವಾಗಿ ಜೀವಿಸುತ್ತಿರುವುದು ಚರಿತ್ರೆಯ ತುಂಬಾ ನೋಡುತ್ತಿದ್ದೇವೆ. ಇದೇ ಮಾನವರ ಜೀವನ ಪದ್ಧತಿ ಎಂಬ ಒಂದು ಅಸತ್ಯ ನಂಬಿಕೆ ಜನರಲ್ಲಿ ಬೇರೂರಿಬಿಟ್ಟಿದೆ. ಆದರೆ ಮಹರ್ಷಿಗಳು ಧರ್ಮ ಶಾಸ್ತ್ರಗಳಲ್ಲಿ ಅರ್ಥಕಾಮಗಳನ್ನು ಧರ್ಮದ ಶಕ್ತಿಗೆ ವಶಮಾಡಿಕೊಟ್ಟು ಧರ್ಮದ ಸ್ಥಾನವನ್ನು ಬಹಳ ಎತ್ತರದಲ್ಲಿಟ್ಟಿದ್ದಾರೆ. ಮಹಭಾರತದಲ್ಲಿ ಬರುವ ಅಗಸ್ತ್ಯನ ಕಥೆಯಲ್ಲಿ ಅಗಸ್ತ್ಯನು ಕೆಲವರು ರಾಜರ ಹತ್ತಿರ ಹೋಗಿ ಹಣ ಬೇಡಿದರೆ ಅವರು ತಮ್ಮ ಆದಾಯವ್ಯಯಗಳು ಸಮಾನವಾಗಿರುವುದರಿಂದ ದಾನಮಾಡಲು ತಮ್ಮ ಬಳಿ ಧನವಿಲ್ಲವೆಂದು ಹೇಳುತ್ತಾರೆ.
ಆದುದರಿಂದಲೇ ವೇದಗಳಲ್ಲಿ, ಪುರಾಣಗಳಲ್ಲಿ, ಶಾಸ್ತ್ರಗಳಲ್ಲಿ ಬ್ರಾಹ್ಮಣರನ್ನೂ ಕ್ಷತ್ರಿಯರನ್ನೂ ಅಷ್ಟು ಕೊಂಡಾಡಿರುವುದು, ಗುಣಗಳಲ್ಲಿ ಸದ್ಬ್ರಾಹ್ಮಣರೂ, ಸತ್ ಕ್ಷತ್ರಿಯರೂ ಆದವರು ಇಲ್ಲದ ಈ ಭೂಮಂಡಲದಲ್ಲಿ ಧರ್ಮಕ್ಕೆ ಸ್ಥಾನವೆಲ್ಲಿದೆ? ಆದುದರಿಂದಲೇ ಇಂದು ಹುಲ್ಲಿನಿಂದ ಮುಚ್ಚಲ್ಪಟ್ಟಿರುವ ಭಾವಿಯಂತೆ ಅಪಾಯಕರವಾಗಿರುವ, ಧರ್ಮದ ಹೆಸರಿನಲ್ಲಿನ ಅಧರ್ಮವು, ಎಲ್ಲರನ್ನೂ ವಂಚಿಸುತ್ತಿರುವುದು.
1-7-1985
2 – ದಾನ
ಕೆಲವು ವಿಶಯಗಳ ಬಗ್ಗೆ ವಿವರಣೆ
ಇದೇ ಸಂಚಿಕೆಯಲ್ಲಿ ‘ ಓದುಗರ ವೇದಿಕೆ ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿರುವ ‘ ಜಾತೀಯತೆಯ ನಿರ್ಮೂಲನ ‘ ಎಂಬ ಓದುಗರ ಪತ್ರವನ್ನುನೋಡಬೇಕಾಗಿ ವಿನಂತಿ. ಅದರಲ್ಲಿ ಮೇಲ್ಕಂಡ ಶೀರ್ಷಿಕೆಯಲ್ಲಿ ನಾನು ಬರೆಯುತ್ತಿರುವ ವಿಶಯಗಳ ಪ್ರಸ್ತಾಪವಿರುವುದರಿಂದ ಅದಕ್ಕೆಸಂಬಂಧಿಸಿದ ನನ್ನ ವಿವರಣೆಯನ್ನು ಈಗ ಕೊಡಬೇಕಾಗಿ ಬಂದಿದೆ. ಲೇಖಕರು ನಾನು ಇಂದಿನ ಬ್ರಾಹ್ಮಣ ಜಾತಿ ಇತರ ಜಾತಿಗಳಿಗಿಂತ ಉತ್ತಮವೆಂಬ ಅಭಿಪ್ರಾಯ ಬರುವಂತೆ ಬರೆದಿದ್ದೇನೆಂದು ಭಾವಿಸಿದ್ದಾರೆ. ವರ್ಣಗಳ ವಿಷಯದಲ್ಲಿ ಈ ಪತ್ರಿಕೆಯನ್ನು ನಡೆಸುತ್ತಿರುವ ಸನಾತನಧರ್ಮ ಸಂರಕ್ಷಣ ಸಂಸ್ಥೆಯ ನಿಯಮಾವಳಿಯಲ್ಲಿನ 17ನೆಯ ನಿಯಮ ಹೀಗಿದೆ:
“ ವರ್ಣಾಶ್ರಮ ಧರ್ಮವನ್ನು ದೂಷಿಸಬಾರದು. ಅದರ ಮೂಲತತ್ವದ ಮಹತ್ವವನ್ನರಿಯಬೇಕು. ರಾಜ್ಯ ಶಾಸನಕ್ಕೆ ವಿರೋಧವಿಲ್ಲದೆ ಲೋಕದ ಹಿಯಾಳಿಕೆಗೆ ಪಾತ್ರವಾಗದಂತೆ ಕಾಲಾನುಸಾರವಾಗಿ ಮತ್ತು ಯಥಾಶಕ್ತಿ ಅದನ್ನು ಪರಿಪಾಲಿಸಬೇಕು. ಒಂದು ವರ್ಣದವರು ಇನ್ನೊಂದು ವರ್ಣದವರಿಗಿಂತಲೂ ಉತ್ತಮರೆಂದಾಗಲಿ, ನೀಚರೆಂದಾಗಲಿ ನಂಬಬಾರದು ಮತ್ತು ಪ್ರಚಾರ ಮಾಡಬಾರದು. ಸಮಾಜದಲ್ಲಿ ಸ್ಪರ್ಧೆಯಿಲ್ಲದೆ ಸಹಕಾರದಿಂದ ಜನರು ತಮ್ಮ ತಮ್ಮ ಕೆಲಸಗಳನ್ನು ಮಾಡುವುದಕ್ಕಾಗಿಯೇ ಈ ವರ್ಣಾಶ್ರಮ ಧರ್ಮವನ್ನು ವೇದ ಶಾಸ್ತ್ರಗಳು ವಿಧಿಸಿದವು ಎಂದು ನಂಬಬೇಕು.”
ಆದುದರಿಂದ ನಾನು ಇಂದಿನ ವರ್ಣಗಳಲ್ಲಾಗಲಿ ಜಾತಿಗಳಲ್ಲಾಗಲಿ ಉಚ್ಚನೀಚ ಭಾವನೆಯನ್ನು ಇಟ್ಟುಕೊಂಡೇ ಇಲ್ಲ. ನಾನು ಬರೆದಿರುವುದು ಶಾಸ್ತ್ರಗಳಲ್ಲಿನ ವರ್ಣವ್ಯವಸ್ಥೆಯ ವಿಷಯ. ಈ ದಿನ ವರ್ಣಸಂಕರವಾಗಿರುವುದಲ್ಲದೆ ಮಾನವಸಾಮಾನ್ಯ ಧರ್ಮಗಳನ್ನೇ ಅನೇಕರು ಮರೆತಿದ್ದಾರೆ. ಅದರಲ್ಲೂ ಬುದ್ಧಿಶಕ್ತಿ, ಧನಶಕ್ತಿ, ಮಾತಿನಶಕ್ತಿ ಹೆಚ್ಚಾಗಿರುವವರು ಸ್ವಾರ್ಥಪರರಾಗಿ ಇತರರನ್ನು ಶೋಷಣೆ ಮಾಡುತ್ತಿದ್ದಾರೆ. ಆದುದರಿಂದ ಮೂಲ ಧರ್ಮಕ್ಕೇ ಚ್ಯುತಿ ಬಂದಿರುವಾಗ ವರ್ಣಧರ್ಮವೆಲ್ಲಿದೆ? ಧರ್ಮವೆಂದರೆ ಎಲ್ಲರ ಹಿತಕ್ಕಾಗಿಯು ಮಾಡಿಕೊಂಡಿರುವ ನಿಯಮಗಳು, ಹಿಂದುಳಿದವರ ಸಂಖ್ಯೆ ಇಷ್ಟು ಹೆಚ್ಚಿರುವಾಗ, ಅವರ ಉದ್ಧಾರಕ್ಕೆ ಶ್ರಮಿಸುವುದೇ ಇಂದಿನ ಪ್ರಮುಖ ಧರ್ಮ. ಇದು ಹೇಗೆ ಸಾಧ್ಯ? ಅರ್ಥಕಾಮಗಳ ವಿಷಯದಲ್ಲಿ ಸಂಯಮವುಳ್ಳ ಮತ್ತು ಪರೋಪಕಾರವುಳ್ಳ ಜೀವನವನ್ನು ಪ್ರೋತ್ಸಾಹ ಮಾಡುವುದರಿಂದ ಮಾತ್ರ ಇದು ಸಾಧ್ಯ. ಆದುದರಿಂದ ಬುದ್ಧಿಶಕ್ತಿ, ದೇಹಶಕ್ತಿ, ಧನಶಕ್ತಿ ಮತ್ತು ಇತರ ಶಕ್ತಿಗಳಿರುವವರು ಆಯಾ ಶಕ್ತಿಗಳನ್ನು ಸಮಾಜದ ಹಿತಕ್ಕಾಗಿ ವಿನಿಯೋಗಿಸಲು ಮುಂದೆ ಬರುವುದೊಂದೇ ಇದಕ್ಕೆ ಮಾರ್ಗ. ಸಾವಿರಾರುವರ್ಷಗಳ ಹಿಂದೆ ಇದನ್ನರಿತ ಒಂದು ಸಣ್ಣ ಸಮಾಜದಲ್ಲಿ ಕೆಲವರು ಈ ವಿಧವಾದ ತ್ಯಾಗ ಮಾಡಿ ಮುಂದೆ ಬಂದರು. ಇವರೇ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು. ಇವರಿಗೆಲ್ಲಾ ಒಂದು ಜೀವನ ವಿಧಾನವನ್ನು ಏರ್ಪಡಿಸಲಾಯಿತು. ಬ್ರಹ್ಮಚರ್ಯಾಶ್ರಮದಲ್ಲಿ ಎಲ್ಲರೂ ಒಂದು ಕಡೆ ಇದ್ದು, ಗುರುಕುಲದಲ್ಲಿ ವಿದ್ಯಾಭ್ಯಾಸಮಾಡುತ್ತ ಧರ್ಮಸಾಧನೆ ಮಾಡಬೇಕು. ಈ ಧರ್ಮಸಾಧನೆ ಯಾವುದು? ಭಿಕ್ಷೆ ಬೇಡಿಕೊಂಡು ತಿನ್ನುವುದು ಮತ್ತೆ ಮದ್ಯ ಮಾಂಸಗಳ ವರ್ಜನೆ, ಬ್ರಹ್ಮಚರ್ಯ,ನೆಲದ ಮೇಲೆ ಮಲಗುವುದು, ಗುರು ಶುಶ್ರೂಷೆ, ಗಾಯತ್ರೀ ಜಪ, ಇದನ್ನು ಮಾಡಿಕೊಂಡುಹೋದವರು ಅವರವರ ವೃತ್ತಿಯನ್ನು ಧರ್ಮಪರರಾಗಿ ಮಾಡಬೇಕು. ಅರ್ಥ ಶುಚಿತ್ವ, ಕಾಮದಲ್ಲಿ ನಿಯಂತ್ರಣ ಇರಬೇಕು. ಅವರವರವರ್ಣದ(ವೃತ್ತಿಯಲ್ಲ) ಹೆಂಗಸರನ್ನೇ ಮದುವೆಯಾಗಬೇಕು ಏಕೆ? ಧರ್ಮಕ್ಕಾಗಿ. ಆಕೆ ಧರ್ಮಪತ್ನಿ. ಅಕೆಯಲ್ಲಿ ಹುಟ್ಟಿದ ಮೊದಲನೇ ಮಗ ಮಾತ್ರಧರ್ಮ ಪುತ್ರ. ಆಮೇಲಿನ ಮಕ್ಕಳು ಕೇವಲ ಕಾಮಪುತ್ರರು. ಆ ಮೇಲೆ ವಾನಪ್ರಸ್ಥ, ಸನ್ಯಾಸಾಶ್ರಮಗಳು. ಇದಕ್ಕಿಂತಲೂ ಧರ್ಮಜೀವನಕ್ಕೆ ಭದ್ರವಾದ ತಳಪಾಯವಿದೆಯೇ? ಇದನ್ನು ಅಲ್ಲಗಳೆಯಲು ಹೊರಟರೆ ಅದು ಸ್ವಾರ್ಥದಿಂದಲೇ ಹೊರತು ಸಮಾಜದ ಒಟ್ಟು ದೃಷ್ಟಿಯಿಂದಆಗುವುದಿಲ್ಲ. ಆಯಾ ವರ್ಣವನ್ನು ಜಾತಿಯಿಂದ ಸಂರಕ್ಷಿಸುವುದು ಸ್ವಾರ್ಥಕಲ್ಲ. ಲೋಕ ಹಿತಕ್ಕೆ ಜಾತಿಯಲ್ಲಿ ವಂಶದ ಅ ಪ್ರಕೃತಿ ನಿಯಮದಪ್ರಭಾವವೂ ಪರಿಸರದ ಪ್ರಭಾವವೂ ಇದೆ. ಗಾಂಧಿ ಮಹಾತ್ಮನ ಮಗ ಗಾಂಧೀ ಮಹಾತ್ಮನ ಹಾದಿಯನ್ನೇ ಅನುಸರಿಸಿದ್ದರೆ ಆತನನ್ನುಮೀರುತ್ತಿರಲಿಲ್ಲವೇ? ವಿನೋಬಾ ಮದುವೆ ಮಾಡಿಕೊಂಡು ಧರ್ಮ ಪುತ್ರನನ್ನು ಪಡೆದು ಬೆಳೆಸಿದ್ದರೆ ಲೋಕಕ್ಕೆ ಹಿತವಾಗುತ್ತಿರಲಿಲ್ಲವೇ? ಈ ವಿಷಯ ಹಾಗಿರಲಿ. ಒಟ್ಟಿನಲ್ಲಿ ಶಾಸ್ತ್ರಗಳ ತತ್ವವನ್ನು ತಿಳಿಯದೆ ಜನರು ಇಷ್ಟಾನುಸಾರ ವ್ಯವಹರಿಸಿದರೆ ಅದರಿಂದಾಗುವ ದುಷ್ಪರಿಣಾಮಗಳಿಗೆ ಶಾಸ್ತ್ರವನ್ನು ದೂಷಿಸಬಹುದೇ?
ಮೇಲ್ಕಂಡ ಮೂರು ವರ್ಣಗಳೇ ವೇದಗಳಲ್ಲಿ ಹೆಚ್ಚಾಗಿ ಹೆಚ್ಚಾಗಿ ಬರುವುದು. ಆ ಸಣ್ಣ ಸಮಾಜ ಅಷ್ಟು ಮುಂದುವರಿದ ಮೇಲೆ ಅದರ ಸಮಾಜ ವ್ಯವಸ್ಥೆ ಇತರ ಪ್ರಾಂತಗಳಿಗೆ ವ್ಯಾಪಿಸುವಾಗ ಈ ಧರ್ಮದಂತೆ ನಡೆಯಲು ಅಸಮರ್ಥರಾದ ಅಥವಾ ಇಷ್ಟವಿಲ್ಲದವರ ಗುಂಪೊಂದು ಸೃಷ್ಟಿ ಆಯಿತು. ಅದೇ ಶೂದ್ರವರ್ಣ. ಆ ಕಾಲಕ್ಕೆ ತಕ್ಕಂತೆ ನಿಯಮಗಳನ್ನು ಶಾಸ್ತ್ರಗಳು ಬೋಧಿಸಿದವು. ಆ ನಿಯಮಗಳನ್ನು ಹಾಗೆಯೇ ಎಲ್ಲಕಾಲಗಳಲ್ಲೂ ಅನುಸರಿಸಬೇಕೆಂದಲ್ಲ. ಅದರ ಮೂಲತತ್ವಗಳು ಮಾತ್ರ ಮುಖ್ಯ.
ಮೇಲೆ ಹೇಳಿದ ದ್ವಿಜ ಧರ್ಮ ಶ್ರೇಷ್ಠವಲ್ಲವೇ? ದ್ವಿಜರಲ್ಲಿ ಕಠಿಣವಾದ ಬ್ರಾಹ್ಮಣ ಕ್ಷತ್ರಿಯ ಧರ್ಮಗಳನ್ನು ಅನುಸರಿಸುತ್ತಿದ್ದವರು ಶ್ರೇಷ್ಠರಲ್ಲವೇ? ಈ ಮಾತನ್ನು ಹೇಳಿದರೆ ತಪ್ಪೇನಿದೆಯೋ ನನಗೆ ತಿಳಿಯುತ್ತಿಲ್ಲ.
ಇಂದಿನ ಜಾತಿತತ್ವ ಶಾಸ್ತ್ರ ವಿರುದ್ಧವಾದುದು. ವರ್ಣಧರ್ಮದಲ್ಲಿ ಒಂದೇ ವರ್ಣದವರಲ್ಲಿ ಜಾತಿ ಭೇದವಿಲ್ಲ. ಈಗ ವೃತ್ತಿಯನ್ನು ಬಿಟ್ಟು ಬಾಂಧವ್ಯವೇ ಜಾತಿ ಆಗಿದೆ. ಎಲ್ಲ ಜಾತಿಗಳಲ್ಲೂ ಗುಣಗಳ ವ್ಯತ್ಯಾಸವೇನೂ ಕಂಡುಬರುತ್ತಿಲ್ಲ. ಶಾಸ್ತ್ರಗಳ ಅಳತೆಗೋಲಿನಿಂದ ನೋಡಿದರೆ ಹೀನ ಜಾತಿಯೆನಿಸಿಕೊಂಡವರೇ ಹೆಚ್ಚು ಧರ್ಮಿಷ್ಠರಾಗಿ ಸ್ವಾರ್ಥರಹಿತರಾಗಿ ಇತರರನ್ನು ಕಾಪಾಡುತ್ತಿದ್ದಾರೆಂದು ಹೇಳಬಹುದು. ಇವರ ಉದ್ಧಾರವಾಗಲು ಧರ್ಮದ ಭದ್ರವಾದ ಸಮಾಜರಚನೆ ಆಗಬೇಕು. ಪುನಃ ನಾವು ಮೂರು ವರ್ಣಗಳಿಗೇ ಹೋಗಬೇಕು. ನಾಲ್ಕು ಆಶ್ರಮಗಳಿಗೇ ಹೋಗಬೇಕು. ಬ್ರಹ್ಮಚರ್ಯಾಶ್ರಮದ ತರಬೇತಿಯಿಲ್ಲದೆ ಬರಿ ಮಾತುಗಳಿಂದ ಧರ್ಮವನ್ನು ಪುನರುದ್ಧಾರ ಮಾಡಲು ಸಾಧ್ಯವಿಲ್ಲ. ಮುಖ್ಯವಾಗಿ ಇನ್ನೂ ಮೂಲ ಧರ್ಮ ಉಳಿದುಕೊಂಡಿರುವ ಅಮಾಯಕರಾದ, ಕಷ್ಟಸಹಿಷ್ಣುಗಳಾದ ಹಿಂದುಳಿದ ವರ್ಗದವರು ಹೆಚ್ಚು ಹೆಚ್ಚು ವಿದ್ಯಾವಂತರಾಗಬೇಕು. ನಮ್ಮ ಶಾಸ್ತ್ರಗಳನ್ನು ಓದಬೇಕು. ದ್ವಿಜ ಧರ್ಮವನ್ನು ಅನುಸರಿಸಲು ಮುಂದೆ ಬರಬೇಕು. ಧಮಶಾಸ್ತ್ರಗಳಲ್ಲಿ ಹೇಳಿರುವ ಗುಣಗಳಂತೆ ಪುನಃ ವರ್ಣವ್ಯವಸ್ಥೆ ಆಗಬೇಕು. ಧರ್ಮವೀರರು ಮೂಲೆ ಮೂಲೆಯಿಂದ ಉದಯಿಸಿ ಬರಬೇಕು.
ಈ ರೀತಿಯಾಗಿ ಇಂದಿನ ಜಾತಿಪದ್ಧತಿ ನಿಜವಾದ ದ್ವಿಜ ಧರ್ಮದ ವರ್ಣ ವ್ಯವಸ್ಥೆಯಾಗಿ ಅಥವಾ ಅದರ ತಾತ್ಪರ್ಯವುಳ್ಳ ವ್ಯವಸ್ಥೆಯಾಗಿ ಪರಿಣಾಮವನ್ನು ಹೊಂದಬೇಕೇ ಹೊರತು ಇದಕ್ಕೆ ಪ್ರಯತ್ನಿಸದೆ ಬರೀ ಜಾತಿಯ ನಿರ್ಮೂಲನ ಮಾಡಿ ಈಗಿರುವ ಕೆಲವಾದರೂ ಒಳ್ಳೆಸಂಪ್ರದಾಯಗಳನ್ನು ಕೆಡಿಸಿ ಸ್ವೇಚ್ಛಾಪ್ರವೃತ್ತಿಗೂ ಸ್ಪರ್ಧೆಗೂ ಇನ್ನೂ ಹೆಚ್ಚಿನ ಅವಕಾಶ ಕೊಟ್ಟು ಬಡವ ಬಲ್ಲಿದರ ಅಂತರವನ್ನು ಇನ್ನೂ ಹೆಚ್ಚಿಸುವುದರಿಂದ ಯಾವ ಪ್ರಯೋಜನವೂ ಉಂಟಾಗಲಾರದೆಂದು ನನ್ನ ನಂಬಿಕೆ.
ನನಗೆ ಮನುಸ್ಮೃತಿಯಲ್ಲಿ ಪಕ್ಷಪಾತವೇನೂ ಇಲ್ಲ. ಅದರಲ್ಲಿರುವ ಮೂಲ ತತ್ವಗಳು ಬಹಳ ಬೆಲೆಯುಳ್ಳವು. ಆದುದರಿಂದ ಅದನ್ನುಉಪಯೋಗಿಸಿಕೊಳ್ಳುತ್ತೇನೆ. ಮೇಲೆ ಹೇಳಿದ್ದು ನನ್ನ ನಿಷ್ಪಕ್ಷಪಾತವಾದ ಮತ್ತು ಚೆನ್ನಾಗಿ ಆಲೋಚಿಸಿದ ಅಭಿಪ್ರಾಯ.
1-8-1985
2 – ದಾನ
ಅರ್ಥ ಶೌಚ
- ಬೇರೆ ಬೇರೆ ವೃತ್ತಿಗಳಿಂದ ಬರುವ ಆದಾಯಗಳಲ್ಲಿ ತಾರತಮ್ಯ–
(ಮುಂದುವರಿದಿದೆ)
ಶಾಸ್ತ್ರೋಕ್ತ ಧರ್ಮವನ್ನು ಆಚರಿಸುತ್ತಿದ್ದ ಕ್ಷತ್ರಿಯ ಪರಿಪಾಲಕನು ಧನದ ವಿಷಯದಲ್ಲಿ ಹೇಗೆ ನಿರ್ಲಿಪ್ತನಾಗಿದ್ದನೆಂಬುದನ್ನು ಹಿಂದೆ ವಿವರಿಸಲಾಯಿತು. ಈ ಸಂದರ್ಭದಲ್ಲಿ ಮನುಸ್ಮೃತಿಯು ಅಂತಹವರ ವಿಷಯದಲ್ಲಿ ಇನ್ನೊಂದು ನಿಯಮವನ್ನು ವಿಧಿಸಿದೆ. ಪಾಪಗಳಲ್ಲಿ ಮಹಾಪಾಪಗಳನ್ನು ಮಾಡಿರುವವರಿಗೆ ವಿಧಿಸಿದ ದಂಡನೆಯಿಂದ ತನ್ನ ಕೈಗೆ ಬರುವ ಹಣವನ್ನು ರಾಜನು ತನ್ನ ಸ್ವಂತಕ್ಕೆಉಪಯೋಗಿಸಿಕೊಳ್ಳಬಾರದೆಂದೂ, ಅದನ್ನು ನೀರಿನಲ್ಲಿ ಹಾಕಿಬಿಟ್ಟು ವರುಣನಿಗೆ ಅರ್ಪಿಸಬೇಕೆಂದೂ ಅಥವಾ ವಿದ್ಯಾವಂತನೂ ಶೀಲವಂತನೂ ಆಗಿ ಅರ್ಹನಾದ ಬ್ರಾಹ್ಮಣನಿಗೆ ಕೊಡಬೇಕೆಂದೂ ಈ ಸ್ಮೃತಿ ವಿಧಿಸಿದೆ, ಅಂತಹ ನಿಸ್ಪೃಹನಾದ ರಾಜನ ದೇಶದಲ್ಲಿ ಜನರು ದೀರ್ಘಾಯುಷ್ಮಂತರಾಗಿರುತ್ತಾರೆ, ಸಸ್ಯಗಳು ಚೆನ್ನಾಗಿ ಬೆಳೆ ಕೊಡುತ್ತವೆ. ಅಕಾಲ ಮರಣವಿರುವುದಿಲ್ಲ, ಅಂಗಹೀನರು ಹುಟ್ಟುವುದಿಲ್ಲವೆಂದು ಮನುಸ್ಮೃತಿ ಹೇಳುತ್ತದೆ.
ಇನ್ನು ವೈಶ್ಯ ಶೂದ್ರರಿಗೆ ಅಥವಾ ಸಾಧಾರಣವಾಗಿ ಎಲ್ಲರಿಗೂ ಮನುಸ್ಮೃತಿ ಬೋಧಿಸಿರುವ ಅರ್ಥಶುಚಿತ್ವದ ವಿವರಗಳನ್ನು ಗಮನಿಸೋಣ. ಒಟ್ಟಿನಲ್ಲಿ ನೋಡಿದರೆ ಈ ಸ್ಮೃತಿಯ ಪ್ರಕಾರ ಯಾವನೇ ಆಗಲಿ ತನ್ನ ಶಕ್ತಿಯಿಂದ ಇತರರಿಗೆ ಕಡಿಮೆಯಾಗಿ ತನಗೆ ಹೆಚ್ಚಾಗಿ ಬರುವಂತೆ ಸಂಪಾದಿಸಿಕೊಳ್ಳುವುದು ನ್ಯಾಯವಲ್ಲ ಎಂದು ಕಂಡುಬರುತ್ತದೆ. ಇಂದಿನ ಕಾನೂನಿಗಿಂತಲೂ ಮನುಸ್ಮೃತಿಯ ದೃಷ್ಟಿ ಒಟ್ಟು ಸಮಾಜದ ಹಿತದ ವಿಷಯದಲ್ಲಿ ಬಹಳ ಮುಂದುವರಿದಿತ್ತು. ಇಂದಿನ ಕಾನೂನಿನಲ್ಲಿ ಕಳ್ಳತನ, ದರೋಡೆ, ಲಂಚ, ಮೋಸ ಇವು ಮಾತ್ರ ಶಿಕ್ಷಾರ್ಹವಾಗಿವೆ. ಆದರೆಬುದ್ಧಿಶಕ್ತಿ, ಕಲಾನಿಪುಣತೆ, ಇತ್ಯಾದಿಗಳುಳ್ಳವರು ಪ್ರಲೋಭನ ಹುಟ್ಟಿಸಿ ತಮಗೆ ಹೆಚ್ಚು ಲಾಭ ಬರುವಂತೆ ವಸ್ತುಗಳನ್ನು ಮಾರುವುದು, ಅಥವಾ ತಾವು ಮಾಡುವ ವಿಷಿಷ್ಟವಾದ ಸೇವೆಗೆ ಹೆಚ್ಚು ಧನವನ್ನು ವಸೂಲು ಮಾಡಿ ಧನಿಕರಾಗುವುದೂ, ಇತ್ಯಾದಿಗಳನ್ನು ಮನು ಕಳ್ಳತನವೆಂದೇ ವರ್ಣಿಸಿರುತ್ತಾನೆ. ಇಂತಹವರು ಹಗಲು ಹೊತ್ತು ಜನರು ನೋಡುತ್ತಿರುವಾಗಲೇ, ಅವರ ಒಪ್ಪಿಗೆಯಿಂದಲೇ ಅವರ ಸುಲಿಗೆ ಮಾಡುವ ಕಳ್ಳರೆಂದು ಆತನ ಅಭಿಪ್ರಾಯ. ಇಂತಹ ಹಗಲು ಕಳ್ಳರನ್ನು ಮನು ಹೀಗೆ ಪಟ್ಟಿ ಮಾಡಿದ್ದಾನೆ.
ವಸ್ತುಗಳ ಮಾರಾಟಗಾರರು, ಲಂಚ ತೆಗೆದುಕೊಳ್ಳುವವರು, ಹೆದರಿಸಿ ಹಣ ತೆಗೆದುಕೊಳ್ಳುವವರು, ಕಲಬೆರಕೆ ಮಾಡುವವರು, ಜೂಜು, ಲಾಟರಿ ಮುಂತಾದುವನ್ನು ನಡೆಸುವವರು, ಶಕುನ ಹೇಳಿ ಹಣ ತಿನ್ನುವವರು, ಸಾಮುದ್ರಿಕ ಹೇಳುವವರು, ಅಕ್ರಮ ಮಾರ್ಗ ಹಿಡಿಯುವ ದೊಡ್ಡಅಧಿಕಾರಿಗಳು, ವೈದ್ಯರು, ಕಲಾವಿದರು, ಸೂಳೆಯರು, ಮುಂತಾದವರನ್ನು ರಾಜನು ಗೂಢಚಾರಿಗಳ ಮೂಲಕ ಗಮನಿಸುತ್ತ, ಇತರರನ್ನು ಮರಳುಮಾಡಿ ಅವರ ಧನವನ್ನು ಅಪಹರಿಸುವ ಇಂತಹ ಹಗಲುಗಳ್ಳರನ್ನು, ಅವರು ಮರ್ಯಾದಸ್ಥರಂತೆ ವೇಷ ಅಥವಾ ನಟನೆಉಳ್ಳವರಾದರೂ, ಶಿಕ್ಷಿಸಬೇಕೆಂದು ಮನುಸ್ಮೃತಿ ಹೇಳುತ್ತದೆ.
ಇಷ್ಟು ಬಿಟ್ಟು ಮನುಸ್ಮೃತಿ ವೈಶ್ಯ ಶೂದ್ರರು ಧನಿಕರಾಗಿರುವುದನ್ನೇನು ನಿಷೇದಿಸಿಲ್ಲ. ಕಷ್ಟಪಟ್ಟು ಅಥವಾ ಅದೃಷ್ಟದಿಂದ ಹೆಚ್ಚು ಧನಿಕರಾಗಬಹುದು. ಇವರು ಕಷ್ಟಪಟ್ಟು ಬೆಳೆ, ಪಶುಗಳು ಇತ್ಯಾದಿ ಧನವನ್ನು ಹೆಚ್ಚಾಗಿ ಉಂಟುಮಾಡಬೇಕು. ಆಪತ್ತು ಬಂದರೆ ಬ್ರಾಹ್ಮಣನು ಜಪ ಹೋಮಗಳಿಂದ ಪಾರಾಗಬೇಕು. (ಅಂದರೆ ಅವರು ಸಾಧನೆ ಮಾಡಿ ಅಂತಹ ಮಂತ್ರಶಕ್ತಿಯನ್ನು ಪಡೆಯಬೇಕು. ಆಪತ್ತಿಗಾಗಿ ಧನವನ್ನುಕೂಡಿಡಬಾರದು.) ಹಾಗೆಯೇ ಕ್ಷತ್ರಿಯನು ಆಪತ್ತಿನಿಂದ ಪಾರಾಗಲು ತನ್ನ ಬಾಹುಶಕ್ತಿಯನ್ನು ಉಪಯೋಗಿಸಬೇಕು. ವೈಶ್ಯ ಶೂದ್ರರು ಧನದಿಂದ ಆಪತ್ತನ್ನು ನಿವಾರಿಸಿಕೊಳ್ಳಬೇಕು ಎಂದು ಮನುಸ್ಮೃತಿ ಹೇಳುತ್ತಿದೆ. ಅಲ್ಲದೆ ಶೂದ್ರನು ಹೆಚ್ಚು ಧನಿಕನಾಗುವ ದೃಷ್ಟಿಯನ್ನು ಬಿಡಬೇಕು. ಕಾರಣ ಇದರಿಂದ ಬ್ರಾಹ್ಮಣನಿಗೆ ಜೀವನಕ್ಕೆ ಬೇಕಾದ ಧನದ ಅಭಾವವುಂಟಾಗುತ್ತದೆ ಎಂದು ಸಹ ಮನುಸ್ಮೃತಿ ಹೇಳುತ್ತದೆ. ವೈಶ್ಯನು ಧನ ಹೆಚ್ಚಾಗಿ ಕೂಡಿ ಬಂದಾಗ ಯಜ್ಞ ಮಾಡಿ ಅದನ್ನು ಖರ್ಚು ಮಾಡಬೇಕು, ಹಾಗೆ ಮಾಡದಿದ್ದರೆ ರಾಜನು ಅವನ ಧನವನ್ನು ಕಿತ್ತುಕೊಂಡು ಯಜ್ಞಕ್ಕೆ ಉಪಯೋಗಿಸಬೇಕು ಎಂದೂ ಇಲ್ಲಿ ಹೇಳಲ್ಪಟ್ಟಿದೆ.
ಅರ್ಥದ ವಿಷಯದಲ್ಲಿ ಸಾರ್ವಕಾಲಿಕವಾದ ಧರ್ಮದ ಮೂಲ ತತ್ವವೊಂದನ್ನು ಮನುಸ್ಮೃತಿ ಹೀಗೆ ತಿಳಿಸುತ್ತಿದೆ:
ಯೋ ಸಾಧುಭ್ಯೋರ್ಥಮಾದಾಯ ಸಾಧುಭ್ಯಃ ಸಂಪ್ರಯಚ್ಛತಿI
ಸಕೃತ್ವಾಪ್ಲವಮಾತ್ಮಾನಂ ಸಂತಾರಯತಿ ತಾವುಭೌ II
ಸತ್ಪುರುಷರಲ್ಲದೆ( ಸ್ವಾರ್ಥಪರರೂ ಭೋಗಲಾಲಸರೂ ಆಗಿ) ಇರುವವರಿಂದ ಧನವನ್ನು ತೆಗೆದುಕೊಂಡು ಯಾರು ಆ ಧನವನ್ನುಸತ್ಪುರುಷರಿಗೆ ( ಸ್ವಾರ್ಥರಹಿತರೂ, ಇಂದ್ರಿಯನಿಗ್ರಹವುಳ್ಳವರೂ, ಪರೋಪಕಾರಪಾರೀಣರೂ ಆದವರಿಗೆ) ಕೊಡುತ್ತಾರೋ ಅವರುನೀರಿನಲ್ಲಿ ಮುಳುಗುತ್ತಿರುವ ಆ ಇಬ್ಬರನ್ನೂ ತಾವು ದೋಣಿಯಂತೆ ಬಂದು ಉದ್ಧಾರ ಮಾಡಿದಂಥವರಾಗುತ್ತಾರೆ.
ಅಂದರೆ ಸತ್ಪುರುಷರು ಇತರರಿಗಾಗಿ ಬಡವರಾಗಿ ನರಳುತ್ತಿರುತ್ತಾರೆ. ಕೆಟ್ಟವರು ಧನ ಹೆಚ್ಚಾಗಿ ಕೂಡಿ ಬಂದ ಹಾಗೆಲ್ಲಾ ಹೆಚ್ಚು ಪಾಪಮಾಡುತ್ತ ಹೆಚ್ಚು ದುರಭ್ಯಾಸಗಳಿಗೊಳಗಾಗಿ ಆರೋಗ್ಯವನ್ನೂ ಮನಶ್ಯಾಂತಿಯನ್ನೂ ಕೆಡಿಸಿಕೊಳ್ಳುತ್ತಿರುತ್ತಾರೆ. ಇವರಿಬ್ಬರನ್ನೂ ಅವರವರ ಕಷ್ಟದಿಂದ ಉದ್ಧಾರ ಮಾಡಲು ಮಾರ್ಗವೆಂದರೆ ಕೆಟ್ಟವರಿಗಿರುವ ಧನದ ಭಾರವನ್ನು ಕಡಿಮೆ ಮಾಡಿ ಆ ಧನವನ್ನು ಸಾಧುಗಳಿಗೆ ಕೊಟ್ಟು ಅವರ ಬಡತನ ನೀಗುವುದು.
ಅಲ್ಲದೆ ಮನುವಿಗೆ ಇಂದಿನಂತೆ ವಿಜ್ಞಾನ ಮುಂದುವರೆದು ಜನರು ದೊಡ್ಡ ದೊಡ್ಡ ಯಂತ್ರಗಳನ್ನು ಮಾಡುವ ಸಂಭವವಿದೆಯೆಂಬದೂ ಇದರಿಂದ ಉಂಟಾಗಬಹುದಾದ ಅನರ್ಥಗಳೂ ತಿಳಿದಿದ್ದವು ಎಂದು ತೋರುತ್ತದೆ.
ದೊಡ್ದ ಪಾಪಗಳಲ್ಲದೆ ಇತರ ಪಾಪಗಳ ಪಟ್ಟಿಯಲ್ಲಿ ಮನು ಭೂಮಿಯಿಂದ ಸಿಕ್ಕಿದ ವಸ್ತುಗಳನ್ನೆಲ್ಲಾ ತೆಗೆದು ಬಿಡುವುದು, ದೊಡ್ಡ ದೊಡ್ದಯಂತ್ರಗಳನ್ನು ರಚಿಸುವುದು, ಮರಗಳನ್ನು ಸಿಕ್ಕಾಪಟ್ಟೆ ಕಡೆಯುವುದು ಇವುಗಳನ್ನೂ ಸಹ ಸೇರಿಸಿದ್ದಾನೆ. ಮನುಷ್ಯನು ತನಗೆ ಶಕ್ತಿಯಿದೆ ಎಂದು ಪ್ರಕೃತಿಯನ್ನು ಕೊಳ್ಳೆ ಹೊಡೆಯುವುದೂ, ಮತ್ತು ಬುದ್ಧಿವಂತರು ಮಹಾ ಯಂತ್ರಗಳನ್ನು ಮಾಡಿ ಜನರಲ್ಲಿನ ವೃತ್ತಿಗಳನ್ನು ಕೆಡಿಸಿ ಕೆಲವರು ಬೀದಿಪಾಲಾಗುವಂತೆ ಮಾಡುವುದೂ, ಜನರಲ್ಲಿ ಭೋಗ ಲಾಲಸೆಯನ್ನು ಬೆಳೆಸುವುದೂ, ಪಾಪವೆಂದೇ ಮನುವಿನ ಅಭಿಪ್ರಾಯ.
1-9-1985
2 – ದಾನ
ಅರ್ಥ ಶೌಚ
3) ಬೇರೆ ಬೇರೆ ವೃತ್ತಿಗಳಿಂದ ಬರುವ ಆದಾಯಗಳಲ್ಲಿ ತಾರತಮ್ಯ
(ಮುಂದುವರಿದಿದೆ)
ವ್ಯಾಪಾರದಲ್ಲಿ ತೊಡಗಿರುವವರು ಸಾಧ್ಯವಾದಷ್ಟು ಬೇಗ ಧನಿಕರಾಗಲು ಪ್ರಯತ್ನಿಸಿವುದು ಸಹಜ. ಒಂದೊಂದು ಸಲ ನಷ್ಟ ಬರುವ ಸಂಭವವು ಇರುವುದರಿಂದಲೂ ಮತ್ತು ಮೂಲ ಧನವನ್ನು ಬೆಳೆಸಿದಷ್ಟೂ ವ್ಯಾಪಾರದ ಪ್ರಮಾಣ ಹೆಚ್ಚಾಗಿ ಇನ್ನೂ ಹೆಚ್ಚು ಲಾಭ ಸಂಪಾದಿಸುವ ಅವಕಾಶವಿರುವುದರಿಂದಲೂ ಈ ಪ್ರವೃತ್ತಿ ಇರುವುದು ಸಹಜ. ಈ ಸಂಧರ್ಭದಲ್ಲಿ ಗಿರಾಕಿಯ ಸ್ಥಿತಿಯನ್ನೂ ಗಮನಿಸಬೇಕಾಗಿದೆ. ಇಬ್ಬರ ಪರಿಸ್ಥಿತಿಯನ್ನೂ ನೋಡಿಕೊಂಡು ವ್ಯಾಪಾರದಲ್ಲಿನ ಅರ್ಥ ಶೌಚವನ್ನು ನಿರ್ಣಯಿಸಬೇಕಾಗಿದೆ. ಧರ್ಮಬುದ್ಧಿ ಇಲ್ಲದ ವ್ಯಾಪಾರಿಗಳು ಸುಲಭವಾಗಿ ಬೆಲೆಗಳನ್ನು ಏರಿಸಿ ಗಿರಾಕಿಗಳಿಗೆ ಅನ್ಯಾಯ ಮಾಡುವ ಸಂಭವವಿದೆ. ಆದುದರಿಂದ ಪ್ರಭುತ್ವ ಈ ವಿಷಯದಲ್ಲಿ ಗಮನ ಇಟ್ಟುಕೊಂಡೇ ಇರಬೇಕು. ಈ ವಿಷಯದಲ್ಲಿ ಇಂದಿನ ಪರಿಸ್ಥಿತಿಗಿಂತಲೂ ಮನುಸ್ಮೃತಿಯಲ್ಲಿ ಮಾಡಿರುವ ವ್ಯವಸ್ಥೆ ಬಹಳ ಉತ್ತಮವೆಂದು ಕಾಣುತ್ತದೆ. ಈ ಶ್ಲೋಕವನ್ನುನೋಡಿ–
ಆಗಮಂ ನಿರ್ಗಮಂ ಸ್ಥಾನಂ ತಥಾ ವೃದ್ಧಿ ಕ್ಷಯಾವುಭೌ!
ವಿಚಾರ್ಯ ಸರ್ವಪಣ್ಯಾನಾಂ ಕಾರಯೇತ್ಕರಾಯ ವಿಕ್ರಯೌ!!
ಮಾಲಿನ ಉತ್ಪತ್ತಿ, ಬೇಡಿಕೆ, ದಾಸ್ತಾನು, ಬೆಳವಣಿಗೆ ಅಥವಾ ಕಡಿಮೆ ಆಗುವಿಕೆ ಎಂಬ ಎಲ್ಲ ವಿಷಯಗಳನ್ನೂ ಆಲೋಚಿಸಿ ರಾಜನಿಂದ ನಿಯೋಜಿತರಾದ ತಜ್ಞರು ಎಲ್ಲ ಮಾರಾಟ ವಸ್ತುಗಳ ಕೊಂಡುಕೊಳ್ಳುವಿಕೆ ಮತ್ತು ಮಾರುವಿಕೆಯನ್ನು ಮಾಡಿಸುತ್ತಿರಬೇಕು.
ಈವತ್ತಿನ ‘ ಕಂಟ್ರೋಲು’ ನೀತಿಗೆ ಹೋಲಿಸಿದರೆ ಮೇಲ್ಕಂಡ ಶ್ಲೋಕದ ಸಾರ್ವಕಾಲಿಕ ಮೌಲ್ಯ ಮತ್ತು ಅತ್ಯುನ್ನತ ಧ್ಯೇಯಸ್ಪಷ್ಟವಾಗುವುದಲ್ಲವೇ?
ಪಂಚರಾತ್ರೇ ಪಂಚರಾತ್ರೇ ಪಕ್ಷೇ ಪಕ್ಷೇ ಥವಾಗತೇ!
ಕುರ್ವೀತ ಚೈಷಾಂ ಪ್ರತ್ಯಕ್ಷ ಮರ್ಘ ಸಂಸ್ಥಾಪನಂ ನೃಪಃ!!
ಎಲ್ಲಾ ಮಾರಾಟ ವಸ್ತುಗಳ ಬೆಲೆಗಳನ್ನೂ, ರಾಜನು ಸ್ವತಃ, ಕ್ಷಣಿಕ ಬೆಲೆಯ ಸಾಮಾನಿಗೆ ಪ್ರತಿ ಐದು ದಿನಗಳಿಗೊಂದು ಸಲ ಸ್ಥಿರಮೂಲ್ಯದಸಾಮಾನಿಗೆ ಪ್ರತಿ ಹದಿನೈದು ದಿನಗಳಿಗೊಮ್ಮೆ, ನಿಶ್ಚಯಿಸಿ ಸ್ಥಾಪನೆ ಮಾಡಬೇಕು.
ತುಲಾಮಾನಂ ಪ್ರತೀಮಾನಂ ಸರ್ವಂ ಚ ಸರ್ವಂ ಚ
ಸ್ಯಾತ್ಸುಲಕ್ಷಿತಮ್!
ಷಟ್ಸು ಷತ್ಸುಚ ಮಾಸೇಷು ಪುನರೇವ ಪರೀಕ್ಷಯೇತ್!!
ತೂಕದ ಪಡಿಗಳನ್ನು ಅಳತೆ ಮಾನಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆಗೆ ಗುರಿಪಡಿಸುತ್ತಿರಬೇಕು.
ಇನ್ನು ಸರ್ಕಾರಿ ನೌಕರರ ಸಂಬಳದ ವಿಷಯದಲ್ಲಿ ಮನುಸ್ಮೃತಿ ಏನು ಹೇಳುತ್ತದೋ ನೋಡೋಣ.
ಪಣೋ ದೇಯೋವಕೃಷ್ಟಸ್ಯ ಷಡುತೃಪ್ಟಸ್ಯ ವೇತನಂ!
ಷಾಣ್ಮಾಸಿಕಸ್ತ ಥಾಚ್ಚಾದೋ ಧಾನ್ಯ ದ್ರೋಣಸ್ತು ಮಾಸಿಕಃ!!
ಈ ನೌಕರರಿಗೆಲ್ಲರಿಗೂ ತಿಂಗಳಿಗೊಮ್ಮೆ ಆಹಾರ ಧಾನ್ಯಗಳನ್ನೂ, ಆರು ತಿಂಗಳಿಗೊಮ್ಮೆ ಬಟ್ಟೆಗಳನ್ನೂ, ಕೊಡಬೇಕು. ಇದರ ಮೇಲೆ ಹಣದರೂಪದಲ್ಲಿ ಸ್ವಲ್ಪ ವೇತನವನ್ನು ಕೊಡಬೇಕು. ಕೊನೆಯ ದರ್ಜೆಯ ನೌಕರನಿಗೆ ಒಂದರಷ್ಟು ವೇತನವನ್ನು ಕೊಟ್ಟರೆ ಮೊದಲನೇ ದರ್ಜೆಯನೌಕರನಿಗೆ ಆರರಷ್ಟು ವೇತನ ಕೊಡಬೇಕು.
ಆಹಾರ ಮತ್ತು ಬಟ್ಟೆಯ ಅವಶ್ಯಕತೆಯಲ್ಲಿ ಎಲ್ಲರನ್ನೂ ಸಮಾನರೆಂದು ಪರಿಗಣಿಸಬೇಕೆಂಬ ಧರ್ಮದ ಸನಾತನವಾದ ಮೂಲ ತತ್ವ ಈ ಶ್ಲೋಕದಲ್ಲಿಲ್ಲವೇ? ಈ ಮೂಲ ತತ್ವವನ್ನು ನಮ್ಮ ದೇಶದ ಸಂವಿಧಾನದಲ್ಲಿ ಏಕೆ ಸೇರಿಸಿಲ್ಲವೋ ಗೊತ್ತಾಗುವುದಿಲ್ಲ. ಇದು ನೌಕರರ ವಿಷಯದಲ್ಲಿ ಇಲ್ಲಿ ಹೇಳಲ್ಪಟ್ಟರೂ ಎಲ್ಲ ಜನರಿಗೂ ಅನ್ವಯಿಸುವಂತಹುದು. ಇದರ ಜೊತಗೆ ವಸತಿಯನ್ನೂ ಸೇರಿಸಿಕೊಳ್ಳಬೇಕು. ಈ ಮೂರೂ ವಿಷಯಗಳಲ್ಲಿ ನಮ್ಮ ದೇಶದ ಸಮಸ್ತ ಜನರೂ ಸಮಾನಾಗಿರುವಂತೆ ಮಾಡಿದರೆ ಕಲಿಯುಗ ಅಂತ್ಯವಾಗಿ ಕೃತಯುಗ ಬರುತ್ತದೆ. ಪ್ರಭುತ್ವದ ಎಲ್ಲಯೋಜನೆಗಳು, ನೀತಿಗಳೂ, ಶಾಸನಗಳೂ ಇದನ್ನು ಸಾಧಿಸಲು ಏಕೆ ಪ್ರಯತ್ನಿಸುತ್ತಿಲ್ಲ? ಕಾರಣ ಇಂದಿನ ಪ್ರಭುತ್ವ ಧನ ಲಾಲಸರ ಮತ್ತು ಭೋಗಲಾಲಸರ ಕೈಲ್ಲಿದೆ. ಮಾನವ ಧರ್ಮದ ವಾಸನೆಯೇ ಇಲ್ಲದ ಇವರಿಂದ ಈ ಕೆಲಸ ಹೇಗೆ ಸಾಧ್ಯ? ಒಂದೇ ಕಡೆ ಒಂದೇ ದೇವರಿಂದ ಸೃಷ್ಟಿಸಲ್ಪಟ್ಟು, ಆಡಿಸಲ್ಪಟ್ಟು, ಸಾಯಿಸಲ್ಪಡುತ್ತಿರುವ ಜನರ ನಡುವೆ ಆಹಾರ, ಬಟ್ಟೆ ಮತ್ತು ವಸತಿ ಇವುಗಳಲ್ಲಿ ಇಷ್ಟು ಭೇದವಿರುವುದೇ! ನಿರ್ಗತಿಗನಿಗೆ ಪಕ್ಕದಲ್ಲೇ ಆಹಾರ, ಬಟ್ಟೆ, ವಸತಿಯ ಸಮೃದ್ಧಿ ತಾಂಡವಿಸುತ್ತಿದೆ. ದೇಶಾಂತರದಲ್ಲಲ್ಲ. ಅದನ್ನು ಸ್ವಲ್ಪ ತೆಗೆದು ಇವನಿಗೆ ಕೊಡುವುದಕ್ಕೆ ಪ್ರಭುತ್ವಕ್ಕೆ ಶಕ್ತಿಯಿಲ್ಲವೋ ಮನಸ್ಸಿಲ್ಲವೋ ಗೊತ್ತಾಗುವುದಿಲ್ಲ.
ಪ್ರಭುತ್ವವು ಸಮಸ್ತ ಭೂತಗಳನ್ನೂ ಸಮ ಬುದ್ಧಿಯಿಂದ ನೋಡಬೇಕೆಂಬ ಮೂಲ ಸಿದ್ಧಾಂತವನ್ನು ಮನು ಕೆಳಗಿನ ಶ್ಲೋಕದಲ್ಲಿಪ್ರತಿಪಾದಿಸಿದ್ದಾನೆ.
ಯಥಾ ಸರ್ವಾಣಿ ಭೂತಾನಿ ಧರಾ ಧರಾಯತೇ ಸಮಂ!
ತಥಾ ಸರ್ವಾಣಿ ಭೂತಾನಿ ರ್ಭಿಭ್ರತಃ ಪಾರ್ಥಿವಂ ವ್ರತಂ!!
ರಾಜನಿಗೆ ಪಾರ್ಥಿವನೆಂಬ ಹೆಸರಿದೆ. ಅವನು ಪಾರ್ಥಿವ ವೃತವನ್ನು ಆಚರಿಸಬೇಕು. ಈ ವೃತವೇನೆಂದರೆ, ಪೃಥ್ವಿ (ಅಂದರೆ ಭೂಮಿ) ಮನುಷ್ಯರು, ಪಶುಪಕ್ಷಿಗಳು, ವೃಕ್ಷಗಳು ಮುಂತಾದ ಸಮಸ್ತ ಭೂತಗಳನ್ನೂ ಹೇಗೆ ಸಮವಾಗಿ ಧರಿಸಿದೆಯೋ ಹಾಗೆ ಸಮಸ್ತ ಭೂತಗಳಿಗೂ ದುಷ್ಟರಿಂದ ನಾಶವುಂಟಾಗದಂತೆ ಸಮಾನ ದೃಷ್ಟಿಯಿಂದ ನಡೆದುಕೊಳ್ಳುವುದೇ ಈ ವೃತ.
ಇಂದಿನ ವೈಜ್ಞಾನಿಕ ಯುಗದ ಮನುಷ್ಯರು ಮನುಷ್ಯರನ್ನೂ ಇತರ ಭೂತಗಳನ್ನೂ ಸಿಕ್ಕಾಪಟ್ಟೆ ನಾಶ ಮಾಡುವುದರಲ್ಲಿ ಸಹಜವಾದ ವಿಮುಖತೆಯನ್ನು ಹೊಂದಿಲ್ಲವೆಂದರೆ ಇಂದು ಧರ್ಮ ಯಾವ ಕೆಳಮಟ್ಟಕ್ಕೆ ಇಳಿದಿದೆ ಎಂಬುದು ಗೊತ್ತಾಗುತ್ತದೆ.
1-10-1985
2 – ದಾನ
ಬ್ರಹ್ಮಚರ್ಯ
ಈಗ “ದಾನ” ವೆಂಬ ಧರ್ಮದ ಅತಿ ಮುಖ್ಯವಾದ ಅಂಗದಲ್ಲಿ ಬ್ರಹ್ಮಚರ್ಯದ ಪಾತ್ರವೇನೆಂಬುದನ್ನು ಗಮನಿಸೋಣ. ಬ್ರಹ್ಮಚರ್ಯವೆಂದರೆ ಮದುವೆ ಮಾಡಿಕೊಳ್ಳದೆ ಅಥವಾ ಸ್ತ್ರೀಸಂಪರ್ಕವಿಲ್ಲದೆ ಇರುವುದು ಎಂಬ ವಿಷಯ ಎಲ್ಲರಿಗೂ ಗೊತ್ತೇ ಇದೆ. ಮದುವೆಯಾಗಿದ್ದರೂ ಕೆಲವು ನಿಯಮಗಳನ್ನು ಪರಿಪಾಲಿಸುತ್ತಿದ್ದರೆ ಅದೂ ಬ್ರಹ್ಮಚರ್ಯೆಯೇ ಎಂಬ ಭಾವನೆಯನ್ನು ಸಹ ನಮ್ಮ ಋಷಿಗಳುಪ್ರಚಾರ ಮಾಡಿದ್ದಾರೆ. ಬ್ರಹ್ಮಚರ್ಯ ಅನ್ನುವ ಪದದ ಅರ್ಥವನ್ನು ತೆಗೆದುಕೊಂಡರೆ ನಿಷ್ಠೆಯಿಂದ ವೇದಗಳನ್ನು ಅಭ್ಯಾಸ ಮಾಡುವುದು ಅಥವಾ ಪರಬ್ರಹ್ಮತತ್ವವನ್ನೇ ಉಪಾಸನೆ ಮಾಡುತ್ತಿರುವುದು ಎಂಬ ಅರ್ಥಗಳು ಬರುತ್ತವೆ. ನಾವು ಬ್ರಹ್ಮಚರ್ಯದ ಚರ್ಚೆ ಮಾಡುವಾಗ ಈ ಎಲ್ಲಾ ಅರ್ಥಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
‘ದಮ’ ಎಂಬುವ ಧರ್ಮದ ಮೊದಲನೇ ಬೀಜಾಕ್ಷರಕ್ಕೂ ಬ್ರಹ್ಮಚರ್ಯಕ್ಕೂ ಹೆಚ್ಚಿನ ಸಂಬಂಧವಿದೆ. ದಮವೆಂದರೆ ಇಂದ್ರಿಯಗಳನ್ನೂ ಮನಸ್ಸನ್ನೂ ವಶದಲ್ಲಿಟ್ಟುಕೊಂಡಿರುವುದು. ಬ್ರಹ್ಮಚರ್ಯದಲ್ಲಿ ಮೇಲ್ನೋಟಕ್ಕೆ ದಮವೇ ಕಂಡುಬರುತ್ತಿದ್ದರೂ ಇದರಲ್ಲಿ ದಾನದ ಅಂಶವು ಇಲ್ಲವೇ ಇಲ್ಲ. ದಾನವು ಧರ್ಮದ ಹೃದಯವಾದರೆ ಬ್ರಹ್ಮಚರ್ಯೆಯು ದಾನದ ಹೃದಯ ಮತ್ತು ಮೂಲಶಕ್ತಿ ಎನ್ನಬಹುದು. ದಾನವೆಂದರೆ ಪರೋಪಕಾರ, ಸರ್ವಭೂತಹಿತವೆಂದರ್ಥ. ಮಾನವನಲ್ಲಿ ಇದಕ್ಕೆ ವಿರೋಧವಾಗಿ ಸ್ವಾರ್ಥವಿರುತ್ತದೆ. ಸ್ವಾರ್ಥದ ನಾಶವಾಗುವವರೆಗೂ ದಾನದಲ್ಲಿ ಆಸಕ್ತಿಹುಟ್ಟುವುದಿಲ್ಲ. ಮನುಷ್ಯನಿಗೆ ಸಹಜವಾದ ಮತ್ತು ಧರ್ಮದ ಮೂರನೇ ಅಂಗವಾದ ‘ದಯೆ’ ಸಹ ದಾನಕ್ಕೆ ಪ್ರಚೋದಕವಾಗಿದೆ. ಆದರೆ ಸಾಧಾರಣವಾಗಿ ಸ್ವಾರ್ಥ ಅಥವಾ ಇಂದ್ರಿಯಗಳ ಬಲ ಈ ‘ದಯೆ’ ಯ ಬಲಕ್ಕಿಂತಲೂ ಹೆಚ್ಚಾಗಿರುತ್ತದೆ. ಈ ಅಸುರೀ ಶಕ್ತಿಯನ್ನು ತಡೆಗಟ್ಟದಿದ್ದರೆದಯೆ ತನ್ನ ಕೆಲಸವನ್ನು ಮಾಡಲಾರದು. ದಾನಕ್ಕೆ ಪುಷ್ಟಿ ದೊರೆಯಲಾರದು. ಈ ತಡೆಗಟ್ಟುವಿಕೆಯೇ ದಮ. ಆದರೆ ಈ ‘ದಮ’ ದ ವಿಷಯದಲ್ಲಿಮಾನವನಿಗೆ ಆಸಕ್ತಿ ಹೇಗೆ ಹುಟ್ಟುತ್ತದೆ? ದಮದಲ್ಲಿ ಮಾನವನಿಗೆ ಆಸಕ್ತಿಯನ್ನು ಬೆಳೆಸಿ, ದಾನಕ್ಕೆ ಪೋಷಕವಾಗಿ ದಯೆಯನ್ನು ಬೆಳೆಸುವುದೇ ಬ್ರಹ್ಮಚರ್ಯ.
ಬ್ರಹ್ಮಚರ್ಯ ಎಂಬುದರಲ್ಲಿನ ಬ್ರಹ್ಮ ಮತ್ತು ಚರ್ಯ ಎಂಬ ಎರಡು ಪದಗಳನ್ನು ಚೆನ್ನಾಗಿ ಗಮನಿಸಿದರೆ ಈ ವಿಷಯ ಸ್ಪಷ್ಟವಾಗಿತಿಳಿಯುತ್ತದೆ. ದಮದಲ್ಲಿ ಆಸಕ್ತಿ ಹುಟ್ಟಿ, ದಾನಕ್ಕೆ ಬುದ್ಧಿ ಹುಟ್ಟಿ, ದಯೆ ಬೆಳೆಯಬೇಕಾದರೆ ಇವುಗಳು ‘ನನ್ನ ಕರ್ತವ್ಯ’ ಎಂಬ ಒಂದು ಜ್ಞಾನ ಮತ್ತು ನಂಬಿಕೆ ಉಂಟಾಗಬೇಕು. ಇದಕ್ಕೆ ‘ಬ್ರಹ್ಮ’ ಎಂಬ ಭಾವನೆ ಬಹಳ ಸಹಾಯಕವಾಗಿದೆ. ಈ ಜ್ಞಾನ ಧೃಢವಾಗಬೇಕಾದರೆ, ಇದು ಫಲಕೊಡಲೇಬೇಕಾದರೆ ಸತತವಾಗಿ ಈ ದಿಶೆಯಲ್ಲಿ ಅಭ್ಯಾಸ ನಡೆಯಬೇಕು. ಈ ಅಭ್ಯಾಸ ಮಾನಸಿಕ, ವಾಚಿಕ ಮತ್ತು ಕಾಯಕವಾಗಿ ನಡೆಯಬೇಕು. ಇದಕ್ಕೆ ಒಂದು ಆಚಾರ ಬೇಕು. ಈ ಆಚಾರದ ಅವಶ್ಯಕತೆಯನ್ನು “ಚರ್ಯ” ಎಂಬ ಪದವು ಸೂಚಿಸುತ್ತದೆ.
‘ಬ್ರಹ್ಮ’ವೆಂಬುದನ್ನು ತಿಳಿದು ಉಪಾಸನೆ ಮಾಡುವುದರಿಂದ ಬರುವ ಹೊಸದಾದ ಜ್ಞಾನ ಮತ್ತು ನಂಬಿಕೆ ಎಂತಹುದು? ಈ ಜ್ಞಾನವು ಪರೋಪಕಾರಕ್ಕೆ ಹೇಗೆ ಉಪಯೋಗವಾಗುವುದು ಎಂಬುದನ್ನು ಪರಿಶೀಲಿಸೋಣ. ನಿಜವಾದ ಜ್ಞಾನವೂ ಅಚಲವಾದ ನಂಬಿಕೆಯೂ ನಮಗೆ ಹುಟ್ಟಬೇಕಾದರೆ ನಾವು ಸತ್ಯವಾವುದು ಎಂಬುದರ ಜಿಜ್ಞಾಸೆಯನ್ನು ಮಾಡಿಕೊಳ್ಳಬೇಕು. ಎಲ್ಲಾ ವಿಮರ್ಶೆಗಳಿಂದಲೂ ಇಂತಹುದೇ ಸತ್ಯ, ಇಂತಹುದೇ ಕೇವಲ ಭ್ರಾಂತಿ, ಇಂತಹ ಮಾರ್ಗ ಹಿಡಿದರೇನೇ ಶಾಶ್ವತವಾದ ಸುಖ ದೊರೆಯುವುದು, ಎಂಬುದನ್ನು ಕಂಡುಕೊಂಡರೆ ಅವನಿಗೆ ಅದರಲ್ಲಿ ಶ್ರದ್ಧೆ ಉಂಟಾಗುತ್ತದೆ. ಆಮೇಲೆ ಯಾವ ಶಕ್ತಿಯು ಅದನ್ನು ಅಲುಗಾಡಿಸಲು ಸಾಧ್ಯವಿರುವುದಿಲ್ಲ. ಈ ವಿಮರ್ಶೆಗಳು ಪ್ರಾರಂಭವಾಗುವುದು ಹಿರಿಯರು ಈ ವಿಷಯದಲ್ಲಿ ವಿಮರ್ಶೆಮಾಡಿ ಸಿದ್ಧವಾಗಿ ಇಟ್ಟಿರುವ ಕೆಲವು ಸಿದ್ಧಾಂತಗಳಿಂದ. ಈ ಸಿದ್ಧಾಂತಗಳನ್ನುಅವರು ಹೇಳಿದ ಹಾಗೆಯೇ ನುಂಗಬೇಕು. ಅವುಗಳನ್ನು ತರ್ಕಿಸಬಾರದು ಎಂಬ ನಿರ್ಬಂಧ ಹಾಕಿದರೆ ಜಿಜ್ಞಾಸುವಿನ ಶ್ರದ್ಧೆ ಪರಿಶುದ್ಧವಾಗಿಯು ಬಲಿಷ್ಠವಾಗಿಯೂ ಇರುವುದಿಲ್ಲ. ಹಿಂದಿನವರ ಸಿದ್ಧಾಂತಗಳು ಜಿಜ್ಞಾಸೆಗೆ ಸಹಾಯಕವಾಗಿರಬೇಕಷ್ಟೇ. ಅಲ್ಲದೆ ಇವು ಮಾನವರೆಲ್ಲರ ಅನುಭವಕ್ಕೆ ಸಮೀಪವಾಗಿಯು ಇರಬೇಕು. ಬ್ರಹ್ಮಜಿಜ್ಞಾಸೆ ಇರುವುದು ಹೀಗೆಯೇ. ಇಲ್ಲಿ ಕಣ್ಣಿಗೆ ಕಾಣದ, ಮನಸ್ಸಿಗೆ ಎಟುಕದ ಯಾವುದೋ ಒಂದು ಊಹಾತೀತವಾದ ತತ್ವವನ್ನು ಚರ್ಚಿಸಲು ಮೊದಲು ಹೊರಡುವುದಿಲ್ಲ. ಬ್ರಹ್ಮ ಎನಿಸಿಕೊಂಡ ವೇದಗಳು ಪ್ರಕೃತಿಯಲ್ಲಿನ, ದೇಹದಲ್ಲಿನ ಮನಸ್ಸಿನಲ್ಲಿನ ವಿವಿಧ ಶಕ್ತಿಗಳ ಪ್ರಾರ್ಥನೆಯಿಂದ ಪ್ರಾರಂಭವಾಗುತ್ತದೆ. ಸತ್ಯವನ್ನು ಹುಡುಕಲು ಇದೇ ಸರಿಯಾದ ಕ್ರಮ. ಇಂದಿನ ವಿಜ್ಞಾನಿಗಳೂ ಈ ಶಕ್ತಿಗಳನ್ನು ಅರ್ಥಮಾಡಿಕೊಂಡು ಜಗತ್ತಿನ ಸತ್ಯದ ತಳಹದಿಯನ್ನೇ ಮುಟ್ಟಿದ್ದಾರಲ್ಲಾ, ಇನ್ನು ವೇದಗಳು ಮಾಡಿರುವುದೇನು ಎಂದು ಕೆಲವರು ವಾದಿಸಬಹುದು. ಇಲ್ಲಿ ವೇದಗಳ ಹಿರಿಮೆ ಇರುವುದು ಪ್ರಕೃತಿಯನ್ನು ವಿಶ್ಲೇಷಿಸುವುದರಲ್ಲಿ ಮಾತ್ರವಲ್ಲ. ಆದರೆ ಪ್ರಕೃತಿಯನ್ನು ಆರಾಧಿಸುವಲ್ಲಿ ಆನಂದವು ಎಂಬುದು ಮನುಷ್ಯರ ಮನಸ್ಸನ್ನು ಬಿಟ್ಟರೆ ಬೇರೆ ಎಲ್ಲಾದರೂ ಉಂಟೋ? ನೋಡಿದರೆ ಉಂಟು, ಇಲ್ಲದಿದ್ದರೆ ಇಲ್ಲ. ಹೊರ ಪ್ರಪಂಚದಲ್ಲಿರುವ ವಿದ್ಯುಚ್ಛಕ್ತಿಯನ್ನು ವಿಜ್ಞಾನಿ ಕಂಡು ಹಿಡಿದ. ಅಣುಶಕ್ತಿಯವರೆಗೂ ಎಲ್ಲಾ ಶಕ್ತಿಗಳನ್ನು ಕಂಡುಹಿಡಿದ. ಎಲ್ಲಿಯಾದರೂ ಆನಂದವೆಂಬುದು ಇವನ ಕಣ್ಣಿಗೆ ಬಿದ್ದಿದೆಯೇ? ಇಲ್ಲ. ಆನಂದವು ಮನುಷ್ಯರ ಮನಸ್ಸಿನಲ್ಲಿದೆ. ಹೊರ ಜಗತ್ತಿನ ವಸ್ತುಗಳು ಇದನ್ನುಪಡೆಯುವುದಕ್ಕೆ ಸ್ವಲ್ಪ ಸಹಾಯಕವಾಗಬಹುದು. ಆದರೆ ಇವುಗಳ ಸಮೃದ್ಧಿ ಹೆಚ್ಚಿದಷ್ಟೂ ಆನಂದವಿಲ್ಲದೇ ನರಳುತ್ತಿರುವವರು ಎಷ್ಟು ಜನ ಇಲ್ಲ? ವೇದಗಳೂ ಪ್ರಕೃತಿಯನ್ನೇ ವಿಶ್ಲೇಷಿಸುತ್ತಾ ಹೊರಟಿವೆಯಾದರೂ ಈ ವಿಶ್ಲೇಷಣೆಯ ಉದ್ದೇಶ ಬೇರೆ. ರೀತಿಯು ಬೇರೆ. ಈ ವಿಶ್ಲೇಷಣೆಮಾಡುವವನು ಮೊದಲೇ ಪ್ರಕೃತಿಯಿಂದ ತಾನು ಪಡೆದಿರುವ ಆನಂದವನ್ನು ಅರ್ಥಮಾಡಿಕೊಳ್ಳಲು ಹೊರಟಿದ್ದಾನೆ. ವಿಜ್ಞಾನಿ ತನ್ನನ್ನು ತಾನು ದರಿದ್ರನಂತೆ ಭಾವಿಸಿಕೊಂಡು ಪ್ರಕೃತಿಯ ಮೇಲೆ ಆಕ್ರಮಣ ಮಾಡಲು ಹೊರಟರೆ, ವೈದಿಕನು ತೃಪ್ತಿಯಿಂದ ಪ್ರಕೃತಿಯಲ್ಲಿನ ಆನಂದದಾಯಕಶಕ್ತಿಯ ವಿಶ್ಲೇಷಣವನ್ನು ಮಾಡ ಹೊರಟಿದ್ದಾನೆ. ಆದುದರಿಂದ ಈತನಿಗೆ ಪ್ರಕೃತಿಯಲ್ಲಿ ಎಲ್ಲಿ ನೋಡಿದರೂ ಆನಂದ ಕಂಡು ಬರುತ್ತಿದೆ. ಪ್ರಕೃತಿಯವಿವಿಧ ದೇವತಾ ಶಕ್ತಿಗಳಿಗೆ ಈತನು ಅಡಿ ಅಡಿಗೂ ಕೃತಜ್ಞತೆಯಿಂದ ನಮಸ್ಕರಿಸುತ್ತಾನೆ. ಮನುಷ್ಯನು ಸಂತೋಷದಿಂದಿರಬೇಕಾದರೆ, ಅವನಿಗೆ ಉಸಿರಾಡಲು ಗಾಳಿ ಬೇಕು, ಕುಡಿಯಲು ನೀರುಬೇಕು. ತಿನ್ನಲು ಆಹಾರ ಬೇಕು. ಇವುಗಳ ನಂತರ ವಿಜ್ಞಾನಿಗಳು ಆಸೆ ಪಡುವ ವಸ್ತುಗಳು ಬರುತ್ತವೆ. ಈ ಮೂಲಭೂತವಾದ ವಸ್ತುಗಳನ್ನು ಕುರಿತು ಇವು ನನ್ನ ಪ್ರಾಣ, ನನ್ನ ಮನಸ್ಸು ಎಂಬ ಸತ್ಯ ದೃಷ್ಟಿಯಿಂದ ವಿಜ್ಞಾನಿಗಳಲ್ಲಿ ಒಬ್ಬನಾದರು ಆಲೋಚಿಸಿ ಅವುಗಳಿಗೆ ಕೃತಜ್ಞತೆಯಿಂದ ತಲೆ ಬಾಗಿದ್ದಾನೆಯೆ? ಈ ಪರಮ ಸತ್ಯವನ್ನರಿಯಲಾರದ ವಿಜ್ಞಾನಿಯಲ್ಲಿ ನಿಜವಾದ ಜ್ಞಾನವೆಲ್ಲಿಂದ ಬರುತ್ತದೆ?
1-11-1985
2 – ದಾನ
ಬ್ರಹ್ಮಚರ್ಯ
ಬ್ರಹ್ಮಚರ್ಯಾಶ್ರಮದ ನಿಯಮಗಳಲ್ಲಿ ಮೇಲಿನ ಭಾವಗಳೆಲ್ಲವೂ ಅಡಕವಾಗಿವೆ. ಉಪನಯನದಿಂದ ಬ್ರಹ್ಮಚರ್ಯಾಶ್ರಮವು ಪ್ರಾರಂಭವಾಗುತ್ತದೆ. ಉಪನಯನವೆಂದರೆ ಮಗುವನ್ನು ಗುರುವಿನ ಹತ್ತಿರಕ್ಕೆ ಕರೆದುಕೊಂಡು ಹೋಗುವುದು. ಇದಾದ ಮೇಲೆ ಗುರು ವಟುವಿಗೆ ಶುಚಿತ್ವವನ್ನೂ, ಆಚಾರವನ್ನೂ ಮೊದಲು ಹೇಳಿಕೊಡಬೇಕು. ಅಗ್ನಿಕಾರ್ಯವನ್ನೂ, ಸಂಧ್ಯಾವಂದನವನ್ನೂ ಹೇಳಿಕೊಡಬೇಕು ಎಂದು ಮನುಸ್ಮೃತಿ ತಿಳಿಸುತ್ತಿದೆ. ಇದಾದ ಮೇಲೆ ವೇದವನ್ನು ಹೇಳಿಕೊಡಬೇಕು. ಈ ಸಂದರ್ಭದಲ್ಲಿ ವಿದ್ಯಾಬೋಧನಾ ಕ್ರಮವನ್ನು ಹೀಗೆಂದುನಿರ್ಣಯಿಸಲಾಗಿದೆ.:-
‘ಪ್ರಾಗುಪನಯನಾತ್ ಕಾಮಾಚಾರ ಕಾಮವಾದ ಕಾಮಭಕ್ಷಾಃ!
ಊರ್ಧ್ವಮುಪಯನಾತ್, ಪ್ರಾಕ್ ವೇದಾಧ್ಯಯನೋಪಕ್ರಮಾತ್,
ಧರ್ಮಶಾಸ್ತ್ರಾಧ್ಯಯನಂ, ತತಃ ಧರ್ಮಶಾಸ್ತ್ರ ವಿಹಿತ
ಯಮನಿಯಮೋಪೇತಸ್ಯ ವೇದಾಧ್ಯಯನಂ, ತತಃ ತದರ್ಥ ಜಿಜ್ಞಾಸಾ,
ತತಃ ತದ್ನಿಷ್ಠಾನಂ ಇತಿ’
ಉಪನಯನವಾಗುವುದಕ್ಕೆ ಮೊದಲು ಬಾಲಕನು ಇಷ್ಟಬಂದ ಕೆಲಸ ಮಾಡಬಹುದು, ಇಷ್ಟಬಂದಹಾಗೆ ಮಾತಾಡಬಹುದು. ಇಷ್ಟವಾದದನ್ನು ತಿನ್ನಬಹುದು. ಆದರೆ ಆಮೇಲೆ ನಿಯಮ ಬದ್ಧವಾದ ಜೀವನವನ್ನು ನಡೆಸಬೇಕು. ವೇದಾಧ್ಯಯನವನ್ನು ಮಾಡುವುದಕ್ಕೆಮೊದಲು ಬ್ರಹ್ಮಚಾರಿಯು ಗುರುವಿನಿಂದ ಧರ್ಮಶಾಸ್ತ್ರವನ್ನು ತಿಳಿದುಕೊಳ್ಳಬೇಕು. ಅದರಲ್ಲಿ ಹೇಳಿರುವಂತೆ ಯಮ ನಿಯಮಗಳನ್ನುಆಚರಿಸುವುದನ್ನು ಕಲಿತಮೇಲೆ ವೇದಾಧ್ಯಯನ. ಆಮೇಲೆ ವೇದಕ್ಕೆ ಅರ್ಥವನ್ನೂ ತಿಳಿದುಕೊಳ್ಳಬೇಕು. ಇದಾದ ಮೇಲೆ ಅವನು ವೇದಮಂತ್ರಗಳ ಅನುಷ್ಠಾನ ಮಾಡಲು ಅರ್ಹನಾಗುತ್ತಾನೆ ಎಂದು ಇದರ ತಾತ್ಪರ್ಯ.
ಧರ್ಮದ ಮೂಲ ತತ್ವಗಳ ತಿಳುವಳಿಕೆ, ಯಮಗಳೆಂಬ ಅವುಗಳ ಅಭ್ಯಾಸ, ಇವುಗಳನ್ನು ಕಾಪಾಡಲು ನಿಯಮಗಳ ಆಚರಣೆ, ಇತ್ಯಾದಿಗಳ ತಳಹದಿಯಿಂದ ಪ್ರಾರಂಭವಾಗುವ ಬ್ರಹ್ಮಚರ್ಯಾಶ್ರಮದಿಂದ ಬರುವ ಪುಷ್ಟಿ ಧರ್ಮಕ್ಕೆ ಇನ್ಯಾವುದರಿಂದಲೂ ಬರಲಾರದು.
ಪ್ರಾಣಾಯಾಮ, ಪ್ರಣವೋಚ್ಚಾರಣೆ, ವ್ಯಾಹೃತಿಗಳ ಉಚ್ಚಾರಣೆ, ಗಾಯತ್ರೀಜಪ, ಸಂಧ್ಯೋಪಾಸನೆ, ಅಗ್ನಿಕಾರ್ಯ, ವೇದಾಧ್ಯಯನಇವುಗಳಿಂದ ಬ್ರಹ್ಮಚಾರಿಯು ತತ್ವವನ್ನು ಉಪಾಸನೆ ಮಾಡುತ್ತಾನೆ. ಇದರಿಂದ ಆತನಿಗೆ ಸತ್ಯದ ಅರಿವುಂಟಾಗುತ್ತದೆ. ಸರ್ವಾತ್ಮ ಭಾವನೆಯು ಬೆಳೆಯುತ್ತದೆ. ಸ್ವಾರ್ಥ ನಾಶವಾಗುತ್ತದೆ. ಸರ್ವಪ್ರಾಣಿಗಳಲ್ಲಿಯು ಬ್ರಹ್ಮ ತತ್ವವನ್ನು ನೋಡುತ್ತ ಪರೋಪಕಾರ ವ್ರತಕ್ಕೆ ಅರ್ಹತೆಯನ್ನುಪಡೆಯುತ್ತಾನೆ.
ಬ್ರಹ್ಮಚರ್ಯಾಶ್ರಮದಲ್ಲಿ ಇಂದಿನಂತೆ ಮನೆಯಲ್ಲಿ ಇರಲು ಅವಕಾಶವಿಲ್ಲ. ಟಿ.ವಿ, ರೇಡಿಯೋ, ಕತೆಪುಸ್ತಕ, ಸಿನಿಮಾ, ಗರ್ಲ್ ಫ಼್ರೆಂಡ್ಸ್ ಇವುಗಳಿಗೆ ಅವಕಾಶವಿಲ್ಲ. ಭಿಕ್ಷಾಟಣೆಯನ್ನು ಮಾಡಿ ಬಂದ ಅನ್ನದಲ್ಲಿ ಗುರುವಿಗೂ ಇಟ್ಟು ತಾನು ಇತರ ಶಿಷ್ಯರೂ ಊಟ ಮಾಡಬೇಕು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯರೆಂಬ ದ್ವಿಜರೆಲ್ಲರೂ ಬ್ರಹ್ಮಚರ್ಯಾಶ್ರಮದಲ್ಲಿ ಮಾಂಸವನ್ನು ವರ್ಜಿಸಬೇಕು. ಯಾವ ತರಹದ ಮದ್ಯವನ್ನು ಸೇವಿಸಬಾರದು. ಯಾವ ಪ್ರಾಣಿಯನ್ನು ಹಿಂಸೆ ಮಾಡಬಾರದು. ಅನೇಕ ವರ್ಷಗಳು ಭಿಕ್ಷೆ ಬೇಡಿದ ಈ ದ್ವಿಜನು ಗೃಹಸ್ಥನಾದಮೇಲೆ ಬ್ರಾಹ್ಮಣನಾಗಿ ರಾಜಪುರೋಹಿತನಾದರೂ, ಮುಖ್ಯನ್ಯಾಯಾಧಿಪತಿ ಆದರೂ, ಇತರರಿಗೆ ಗುರುವಾದರೂ, ಕ್ಷತ್ರಿಯನಾಗಿ ರಾಜನಾದರೂ, ವೈಶ್ಯನಾಗಿ ಸಂಪತ್ತನ್ನು ಅಭಿವೃದ್ಧಿ ಮಾಡುವವನಾದರೂ ಆತನಿಗೆ ಬಡವರ ಕಷ್ಟ ತಿಳಿಯದೆ ಇರುತ್ತದೆಯೆ? ಆತ ಹಣದ ದಾಸನಾಗುತ್ತಾನೆಯೆ? ಆತ ಇತರರನ್ನು ತನ್ನಂತೆ ಭಾವಿಸದಿರುತ್ತಾನೆಯೇ? ಬ್ರಹ್ಮಚರ್ಯಾಶ್ರಮಕ್ಕಿಂತಲೂ ಧರ್ಮಕ್ಕೆ ಹೆಚ್ಚಿನ ಬುನಾದಿ ಇನ್ನೆಲ್ಲಿ ಸಿಗುತ್ತೋ ಊಹಿಸಲೂಸಾಧ್ಯವಿಲ್ಲ. ನಮ್ಮಲ್ಲಿ ಅನೇಕ ಸಹಸ್ರ ವರ್ಷಗಳಿಂದ ಬೆಳೆದು ಬಂದ ಇಂತಹ ಒಂದು ಸಂಪ್ರದಾಯವನ್ನಿಟ್ಟುಕೊಂಡು ನಾವು ಇದರ ಉಪಯೋಗವನ್ನೂ ಲಾಭವನ್ನೂ ಪಡೆಯದೆ ಇದ್ದೇವೆಂದರೆ ಅಜ್ಞಾನದ ಪರಮಾವಧಿ ಬೇರೆ ಇಲ್ಲವೆಂದೇ ಹೇಳಬೇಕು.
1-12-1985
2 – ದಾನ
ಭಿಕ್ಷೆ ಬೇಡುವುದು ಕೊಡುವುದು
ಭಿಕ್ಷಾಟನೆಯನ್ನು ಕುರಿತು ಇನ್ನೂ ಸ್ವಲ್ಪ ಆಲೋಚಿಸಬೇಕಾಗಿದೆ. ಈ ಸಮಾಜದಲ್ಲಿ ಪ್ರೀತಿ ವಿಶ್ವಾಸಗಳನ್ನು ಬೆಳೆಸಲು, ಪರೋಪಕಾರಗುಣವನ್ನು ಹೆಚ್ಚಿಸಲು, ಹೃದಯವನ್ನು ವಿಶಾಲಗೊಳಿಸಲು, ಮತ್ತು ಸಮಾಜದ ಬಂಧವನ್ನು ಧೃಢವಾಗಿಮಾಡಲು ಭಿಕ್ಷೆ ಕೇಳುವುದು ಮತ್ತು ಭಿಕ್ಷೆ ಕೊಡುವುದು ಎಂಬ ಈ ಸಂಪ್ರದಾಯಕ್ಕಿಂತಲೂ ಒಳ್ಳೆಯ ಸಂಪ್ರದಾಯ ಮತ್ತೊಂದಿಲ್ಲ. ಈ ಭಿಕ್ಷಾಟನೆಯನ್ನು ಬ್ರಹ್ಮಚಾರಿಗಳೂ ಸನ್ಯಾಸಿಗಳೂ ಮಾಡಬೇಕು. ವಾನಪ್ರಸ್ಥಾಶ್ರಮದಲ್ಲಿ ಯಾವ ಕಾರಣದಿಂದಾಗಲಿ ಅಡವಿಯಲ್ಲಿ ಜೀವಿಸಲು ತೊಂದರೆಯುಂಟಾದರೆ ಈ ಆಶ್ರಮಿಗಳೂ ಭಿಕ್ಷೆ ಬೇಡಬಹುದು. ಈ ಭಿಕ್ಷೆಬೇಡುವುದು ಸೋಮಾರಿತನವನ್ನು ಹೆಚ್ಚಿಸುವ ಭಿಕ್ಷೆ ಬೇಡಿಕೆ ಅಲ್ಲ. ಬ್ರಹ್ಮಚರ್ಯಾಶ್ರಮದಲ್ಲಿ ವಿದ್ಯಾರ್ಥಿಗಳು ಎಂದಿಗೂ ದುಡಿಯುವವರಲ್ಲ. ವಾನಪ್ರಸ್ಥಾಶ್ರಮ ಮತ್ತು ಸನ್ಯಾಸಾಶ್ರಮದಲ್ಲಿರುವವರು ಮುದುಕರು. ಇಂದಿನ ಉದ್ಯೋಗ ನಿವೃತ್ತರಂತೆ ಇರುವವರು. ಇವರಿಗೆ ನಿವೃತ್ತಿವೇತನ ಕೊಡುತ್ತಿಲ್ಲವೇ? ಗೃಹಸ್ಥರಲ್ಲಿ ಬ್ರಾಹ್ಮಣರಲ್ಲದೆ ಬೇರೆಯವರಿಗೆ ದಾನ ಪಡೆಯುವ ಅರ್ಹತೆಯನ್ನು ಶಾಸ್ತ್ರಗಳು ಕೊಟ್ಟಿಲ್ಲ. ಆದುದರಿಂದ ಗಟ್ಟಿಮುಟ್ಟಿರಾಗಿರುವವರು ಭಿಕ್ಷೆ ಬೇಡುವುದನ್ನು ಶಾಸ್ತ್ರವು ಒಪ್ಪುವುದಿಲ್ಲ. ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಪೋಷಣೆಯನ್ನೇ ಪಡೆಯುತ್ತಿದ್ದರೆ ಪರಸ್ಪರ ಪ್ರೀತಿ ವಿಶ್ವಾಸಗಳು ಅವರಿಗೆ ಮಾತ್ರ ಸೀಮಿತವಾಗಿರುತ್ತವೆ. ವಿದ್ಯಾರ್ಥಿಗಳಿಗೆ ಎಲ್ಲರೂ ಭಿಕ್ಷೆಕೊಡುವ ಪದ್ಧತಿಯಿದ್ದರೆ ಸಮಾಜದಲ್ಲೆಲ್ಲಾ ಪ್ರೀತಿ ವಿಶ್ವಾಸಗಳು ಬೆಳೆಯುತ್ತವೆ. ಉದ್ಯೋಗ ನಿವೃತ್ತರಿಗೆ ಸರ್ಕಾರದಿಂದ ನಿವೃತ್ತಿ ವೇತನ ಬಂದರೆಅದರಲ್ಲಿ ತಾವೂ ಭಾಗಿಗಳೆಂದು ಪ್ರಜೆಗಳು ಭಾವಿಸುವುದಿಲ್ಲ. ಅವರ ಕೈಯಾರೆ ಭಿಕ್ಷೆ ಕೊಟ್ಟರೆ, ಬೆಳೆಯುವ ಪ್ರೀತಿ ವಿಶ್ವಾಸಗಳು ನಿವೃತ್ತಿವೇತನದಿಂದ ಬರುವುದಿಲ್ಲ.
ಮಾಡಿರುವ ಅಡಿಗೆಯಲ್ಲಿ ಕ್ಷಾರ ವಸ್ತುಗಳನ್ನು ಸೇರಿಸದೆ ಸ್ವಲ್ಪ ಅಗ್ನಿಯಲ್ಲಿ ಆಹುತಿ ಕೊಡಬೇಕೆಂಬುದು ಗೃಹಸ್ಥನ ಧರ್ಮ. ಇದಕ್ಕೆವೈಶ್ವದೇವವೆಂದು ಹೆಸರು. ಒಂದು ವೇಳೆ ವೈಶ್ವದೇವಕ್ಕಾಗಿ ಅನ್ನ ಇಟ್ಟುಕೊಂಡಿರುವ ಸಮಯದಲ್ಲಿ ಭಿಕ್ಷುಕರು ಬಂದರೆ ಏನು ಮಾಡಬೇಕು? ಎಂಬ ಪ್ರಶ್ನೆಗೆ ಸಮಾಧಾನವಾಗಿ ದೇವಿಭಾಗವತದಲ್ಲಿ ಹೀಗೆ ಹೇಳಿದೆ:-
ಆಕೃತೇ ವೈಶ್ವದೇವೇತು ಭಿಕ್ಷೌಭಿಕ್ಷಾರ್ಥಮಾಗತೇ
ಉದ್ಧೃತ್ಯ ವೈಶ್ವದೇವಾರ್ಥಂ ಭಿಕ್ಷಾಂ ದತ್ವಾವಿಸರ್ಜಯೇತ್!!
ವೈಶ್ವದೇವ ಕೃತಂ ದೋಷಂ ಶಕ್ತೋ ಭಿಕ್ಷುರ್ವ್ಯ ಪೋಷಿತಮ್!
ನತು ಭಿಕ್ಷುಕೃತಂ ದೋಷಂ ವೈಶ್ವದೇವೋವ್ಯಪೋಹತಿ!!
ಯತಿಶ್ಚ ಬ್ರಹ್ಮಚಾರಿಚ ಪಕ್ವಾನ್ನ ಸ್ವಾಮಿನಾವುಭೌ!
ತಯೋರನ್ನ ಮದತ್ವಾತು ಭುಕ್ತ್ವಾ ಚಾಂದ್ರಾಯಣಂ ಚರೇತ್!!
ಅಂತಹ ಸಮಯದಲ್ಲಿ ವೈಶ್ವದೇವ ಮಾಡಲು ತೆಗೆದಿಟ್ಟುರುವ ಅನ್ನವನ್ನು ಹಾಗೆಯೇ ಭಿಕ್ಷುಕನಿಗೆ ಹಾಕಿ ಆತನನ್ನು ಕಳುಹಿಸಿ ಕೊಡಬೇಕು.
ವೈಶ್ವದೇವ ಮಾಡದ ದೋಷವನ್ನು ಭಿಕ್ಷುಕನು ಪರಿಹಾರ ಮಾಡಬಲ್ಲನು. ಆದರೆ ಭಿಕ್ಷುಕನಿಗೆ ಭಿಕ್ಷೆಕೊಡದ ದೋಶವನ್ನು ವೈಶ್ವದೇವವುಪರಿಹಾರ ಮಾಡಲಾರದು. ಬ್ರಹ್ಮಚಾರಿ ಮತ್ತು ಸನ್ಯಾಸಿ ಇವರು ಬೇಯಿಸಿರುವ ಆಹಾರಕ್ಕೆ ಅಧಿಕಾರಿಗಳು. ಅಂತಹವರಿಗೆ ಅನ್ನವನ್ನು ಹಾಕದೆತಾನು ಊಟ ಮಾಡಿದರೆ ಬರುವ ಪಾಪವನ್ನು ಹೋಗಲಾಡಿಸಲು ಚಾಂದ್ರಾಯಣ ವ್ರತವನ್ನು ಮಾಡಬೇಕು.
ಇಂದಿಗೂ ನಮ್ಮಲ್ಲಿ ಭಿಕ್ಷೆ ಬೇಡುವುದೂ ಕೊಡುವುದೂ ಒಂದು ಪವಿತ್ರ ಕಾರ್ಯಕ್ಕಾಗಿ ಕೆಲವು ಸಂಪ್ರದಾಯಗಳು ಉಳಿದುಕೊಂಡಿದೆ. ಶ್ರಾವಣ ಶನಿವಾರಗಳಲ್ಲಿ ಮಕ್ಕಳಿಂದ ‘ವೆಂಕಟೇಶಾಯ ಮಂಗಳಂ’ ಎಂದು ಹೇಳಿಸಿ ಭಿಕ್ಷೆ ಬೇಡಿಸುವುದು ಎಲ್ಲರಿಗೂ ಗೊತ್ತೇ ಇದೆ. ಗಾಣಗಾಪುರದಲ್ಲಿ ಯಾತ್ರಿಕರು ಭಿಕ್ಷೆ ಬೇಡುವ ಪದ್ಧತಿಯು ಪ್ರಸಿದ್ಧವಾದುದು. ತ್ಯಾಗರಾಜರ ಸಂಪ್ರದಾಯದಂತೆ ಸಂಗೀತ ವಿದ್ವಾಂಸರು ‘ ಉಂಭವೃತ್ತಿ’ ಎಂಬ ಹೆಸರಿನಲ್ಲಿ ಭಿಕ್ಷೆ ಬೇಡುವ ಸಂಪ್ರದಾಯವೂ ಎಲ್ಲರಿಗೂ ಗೊತ್ತು. ಇದರಿಂದ ದೈವಭಕ್ತಿ, ಅಹಂಕಾರ ದಮನ, ಸಮಾಜದಲ್ಲಿಪರಸ್ಪರ ಪ್ರೀತಿ ವಿಶ್ವಾಸಗಳೂ ಬೆಳೆಯುವುದಲ್ಲದೆ ಮುಖ್ಯವಾಗಿ ಧರ್ಮದ ಮೂಲವಾದ “ದಾನ” ತತ್ವದ ಪ್ರಚಾರ ನಡೆಯುತ್ತದೆ.
1-1-1986
2 – ದಾನ
ಯಜ್ಞಗಳು– (ಅ) ದೇವ ಯಜ್ಞ
ಯಜ್ಞವೆಂಬ ಶಬ್ದವು “ಯಜ – ದೇವಪೂಜಾ ಸಂಗತಿಕರಣ ದಾನೇಷು” ಎಂಬ ಧಾತುವುನಿಂದ ಹುಟ್ಟಿದೆ. ಅಂದರೆ ದೇವಪೂಜೆ, ಸಾಂಗತ್ಯಮಾಡುವುದು, ದಾನ ಮಾಡುವುದು ಎಂಬ ಅರ್ಥಗಳಲ್ಲಿ ಈ ಶಬ್ದವಿರುವುದು. ಆದುದರಿಂದ ಯಜ್ಞದಲ್ಲಿ ‘ದಾನ’ ದ ಭಾವ ತುಂಬಿಕೊಂಡಿದೆ. ದೇವಯಜ್ಞ, ಪಿತೃಯಜ್ಞ, ಋಷಿಯಜ್ಞ, ಮನುಷ್ಯಯಜ್ಞ, ಭೂತಯಜ್ಞ ಎಂದು ಐದು ವಿಧವಾದ ಯಜ್ಞಗಳಿವೆ. ಈ ಎಲ್ಲಾ ಯಜ್ಞಗಳಲ್ಲೂ ದೇವಪೂಜೆ, ಸಾಂಗತ್ಯ ಮಾಡುವುದು, ದಾನ ಎಂಬ ಮೂರೂ ಅಂಶಗಳೂ ಸೇರಿಕೊಂಡೇ ಇರುತ್ತವೆ. ದೇವಯಜ್ಞವೆಂದರೆ ಚರಾಚರವಾದ ಸಮಸ್ತ ವಿಶ್ವಪ್ರಪಂಚವನ್ನೂ ನಡೆಸುತ್ತಿರುವ ಮೂಲ ಚೈತನ್ಯಕ್ಕೆ ಸಂಬಂಧಿಸಿದ ಮತ್ತು ಮಾನವನ ಮನಸ್ಸಿಗೆ ಬಗೆಬಗೆಯಾಗಿ ಗೋಚರಿಸುತ್ತಿರುವ ಚಿದ್ವಿಲಾಸಗಳ ಆರಾಧನೆ. ಇದರಲ್ಲಿ ದೇವತಾಬುದ್ಧಿ, ಭಕ್ತಿ ರೂಪವಾದ ಸಾಂಗತ್ಯ, ತನ್ನದು ಎಂಬುದನ್ನು ಅರ್ಪಿಸುವುದು ಇವೆಲ್ಲವೂಇರುವುದರಿಂದ ಇದು ಯಜ್ಞವೆನಿಸಿಕೊಂಡಿದೆ. ಪಿತೃಯಜ್ಞದಲ್ಲೂ ಋಷಿಯಜ್ಞದಲ್ಲೂ, ನರಯಜ್ಞದಲ್ಲೂ– ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವ– ಎಂಬಂತೆ ದೇವತ ಬುದ್ಧಿ ಇರಲೇಬೇಕು. ಭೂತಯಜ್ಞದಲ್ಲಿ ಪರಮಾತ್ಮನ ವಿರಾಟ್ಸ್ವರೂಪದಭಾವನೆ ಇರಲೇಬೇಕು. ಇವೆಲ್ಲವುಗಳಲ್ಲೂ ದೇವತಾಬುದ್ಧಿ, ಭಕ್ತಿ ಅಥವಾ ಪ್ರೇಮ, ದಾನ ಎಂಬ ಅಂಶಗಳು ಇದ್ದೇ ಇವೆ.
ಈ ಐದು ಯಜ್ಞಗಳಿಗೂ ಪ್ರೇರಕವಾಗಿರುವುದು ಕೃತಜ್ಞತಾಭಾವ ಸಜ್ಜನರ ದೊಡ್ಡ ಗುಣವೆಂದರೆ ಉಪಕಾರವನ್ನು ಸ್ಮರಿಸುವುದು ಮತ್ತು ಪ್ರತ್ಯುಪಕಾರ ಮಾಡುವುದು. ಸಮಾಜದ ಒಗ್ಗಟ್ಟು ಮತ್ತು ಶ್ರೇಯಸ್ಸಿಗೆ ಮೂಲಭೂತವಾದುದು ಕೃತಜ್ಞತೆ. ಯಾವ ಪಾಪಕ್ಕಾದರೂ ನಿಷ್ಕೃತಿ ಇದೆ. ಆದರೆ ಕೃತಘ್ನತೆಗೆ ನಿಷ್ಕೃತಿಯಿಲ್ಲ. ನಮಗೆ ಎಲ್ಲರಿಗಿಂತಲೂ ಹೆಚ್ಚು ಉಪಕಾರ ಮಾಡುತ್ತಿರುವವರು ದೇವತೆಗಳು. ಆದುದರಿಂದಲೇ ದೇವಯಜ್ಞವನ್ನು ಮೊದಲನೇ ಯಜ್ಞವಾಗಿ ಹೇಳಿರುತ್ತಾರೆ. ನಾವು ನಮಗೆ ಸಹಾಯ ಮಾಡುವ ಮನುಷ್ಯರನ್ನು ಕೃತಜ್ಞತೆಯಿಂದ ನೋಡುತ್ತೇವೆ. ಆದರೆ ಗಾಳಿ, ನೀರು, ಸೂರ್ಯ, ಭೂಮಿ, ಇಂದ್ರಿಯ ವ್ಯಾಪಾರ ನಡೆಸುತ್ತಿರುವ ಶಕ್ತಿಗಳು, ಬುದ್ಧಿವ್ಯಾಪಾರ, ಶರೀರವ್ಯಾಪಾರ, ನಡೆಸುತ್ತಿರುವಶಕ್ತಿಗಳು ಇತ್ಯಾದಿಗಳು ನಮಗೆ ಮಾಡುವಷ್ಟು ಸಹಾಯವನ್ನು ಯಾವ ಮನುಷ್ಯನಾದರೂ ಮಾಡಲು ಸಾಧ್ಯವಿದಯೆ? ಆದರೂ ನಾವೇಕೆ ಇವುಗಳನ್ನು ಕೃತಜ್ಞತಾದೃಷ್ಟಿಯಿಂದ ನೋಡುತ್ತಿಲ್ಲ? ಇದರ ಬಗ್ಗೆ ನಮ್ಮ ಅಜ್ಞಾನವೇ ಇದಕ್ಕೆ ಕಾರಣ. ಇದು ಎಲ್ಲಾ ಅಜ್ಞಾನಗಳಿಗಿಂತಲೂ ದೊಡ್ಡ ಅಜ್ಞಾನ. ವೇದಗಳು ಈ ಅಜ್ಞಾನವನ್ನು ತೊಲಗಿಸುತ್ತಿರುವುದರಿಂದ ಅವುಗಳ ಜ್ಞಾನವೇ ದೊಡ್ಡ ಜ್ಞಾನ.
ಹೆಂಗಸರಿಗೆ ಪತಿಯೇ ದೈವವೆಂದು ಪುರಾಣಗಳು ಬೋಧಿಸುತ್ತವೆ. ಇದು ಮಾನವ ಲೋಕದ ದೃಷ್ಟಿಯಿಂದ ಉದಾತ್ತವಾದ ಭಾವನೆ. ಆದರೆ ಮಾನವನ ಸುತ್ತಲೂ ವಿಶಾಲವಾಗಿರುವ ಮತ್ತು ಅವನ ಒಳಗೆ ಅಂತು ಕಾಣದೆ ಇರುವ ಲೋಕಗಲ ದೃಷ್ಟಿಯಲ್ಲಿ ಈ ಪತಿ ಹೆಣ್ಣಿಗೆ ನಾಲ್ಕನೇ ಗಂಡ ಎಂದು ವೇದ ಹೇಳುತ್ತಿದೆ. ಮದುವೆಗಳಲ್ಲಿ ಅರ್ಥ ತಿಳಿಯದೆ ಹೇಳಲ್ಪಡುವ ಒಂದು ಮಂತ್ರದಲ್ಲಿ ನಿನಗೆ ಮೊದಲನೇ ಪತಿ ಸೋಮನು, ಎರಡನೆಯವನು ಗಂಧರ್ವನು, ಮೂರನೆಯವನು ಅಗ್ನಿ, ನಾಲ್ಕನೆಯವನು ಈ ಮನುಷ್ಯನಾದ ಗಂಡ ಎಂದು ಹೆಣ್ಣನ್ನು ಕುರಿತು ಹೇಳಲ್ಪಟ್ಟಿದೆ. ಸೋಮನೆಂದರೆ ಪರಮಾತ್ಮ. ಹೆಂಗಸರು ಸಹ ಆತ್ಮಜ್ಞಾನವನ್ನು ಹೊಂದಿ ಪರಮಾತ್ಮನೇ ಸಮಸ್ತ ಜಗತ್ತಿನ ಮೂಲ ಚೈತನ್ಯ, ಪರಿಪಾಲಕನು, ಎಂದು ಅರಿಯಬೇಕು ಎಂಬ ಉದ್ದೇಶದಿಂದಲೇ ವೇದ ಹೀಗೆ ಬೋಧಿಸಿರುವುದು. ಗಂಧರ್ವನು ಅಂದರೆ ಮನಸ್ಸು. ಅಗ್ನಿ ಅಂದರೆ ವಾಕ್ಕು, ಇವು ಪರಮಾತ್ಮನ ಮೇಲೆ ಎಲ್ಲ ಮಾನವರಂತೆ ಹೆಂಗಸರನ್ನೂ ರಕ್ಷಿಸುತ್ತಿರುವ ಚೈತನ್ಯಗಳು. ಹೆಂಗಸರೂ ಇವುಗಳನ್ನು ತಿಳಿದು ಇವುಗಳನ್ನು ಸರಿಪಡಿಸಿಕೊಳ್ಳಲು ಜ್ಞಾನವತಿಯರಾಗಬೇಕು.
ಮೇಲೆ ಸೂಚಿಸಿರುವ ದೃಷ್ಟಿಯಿಂದ ದೇವ ಯಜ್ಞವನ್ನು ಮಾಡುವವರಿಗೆ ‘ದಾನ’ ಗುಣ ತನ್ನಷ್ಟಕ್ಕೆ ತಾನೇ ಬೆಳೆಯುವುದು.
1-2-1986
2 – ದಾನ
(ಅ) ದೇವಯಜ್ಞ
ಧನಿಕರಾಧ ದ್ವಿಜರೆಲ್ಲರೂ ತಮಗೆ ಹೆಚ್ಚಾಗಿ ಕೂಡಿ ಬಂದ ಧನವನ್ನು ಯಜ್ಞಕ್ಕಾಗಿ ಖರ್ಚು ಮಾಡಬೇಕೆಂದು ಮನುಸ್ಮೃತಿಯ ಅಭಿಪ್ರಾಯ. ಒಂದು ಕಡೆ ಯಜ್ಞಕ್ಕೆ ಧನ ಸಾಲದೆ ಬಂದರೆ ಯಜ್ಞ ಮಾಡದ ಇತರ ಧನಿಕರಿಂದ ರಾಜನು ಧನವನ್ನು ಬಲಾತ್ಕಾರದಿಂದ ಸಂಗ್ರಹಿಸಿ ಆ ಯಜ್ಞಕ್ಕೆ ಕೊಡಬೇಕೆಂದು ಈ ಸ್ಮೃತಿಯಲ್ಲಿ ಹೇಳಲ್ಪಟ್ಟಿದೆ. ಜನರಲ್ಲಿ ಬಡವ ಬಲ್ಲಿದರ ಅಂತರವನ್ನು ಕಡಿಮೆ ಮಾಡಲು ಈ ಯಜ್ಞಗಳು ಉಪಯೋಗನಾಗುತ್ತಿದ್ದವು. ಯಜ್ಞಗಳಲ್ಲಿ ಬಡವರೂ ವಿದ್ಯಾವಂತರೂ ಆದ ಬ್ರಾಹ್ಮಣರಿಗೆ ಅನ್ನದಾನದ ಜೊತೆಗೆ ದಕ್ಷಿಣೆ ಕೊಡಲ್ಪಡುತ್ತಿತ್ತು. ಇತರರಿಗೆ ಅನ್ನದಾನವು ನಡೆಯುತ್ತಿತ್ತು. ಯಜ್ಞೋಪಕರಣಗಳ ಸಂಪಾದನೆಯಲ್ಲಿ ಅನೇಕ ವೃತ್ತಿಗಳವರಿಗೆ ಜೀವನ ನಡೆಯುತ್ತಿತ್ತು. ಧನವನ್ನುಹೆಚ್ಚಾಗಿ ಸಂಪಾದಿಸಿಕೊಳ್ಳಲು ಅವಕಾಶವಿರುವ ಬಂಡವಾಳಶಾಹಿ ಸಮಾಜದ ಜನರಲ್ಲಿ ಕಾರ್ಯಪ್ರವೃತ್ತಿ ಹೆಚ್ಚಾಗಿರುತ್ತೆಂದೂ ಅದರಿಂದ ಒಟ್ಟು ಸಮಾಜದ ಸಂಪತ್ತು ಹೆಚ್ಚುವುದೆಂದೂ ಕೆಲವರ ವಾದ. ತದ್ವಿರುದ್ಧವಾಗಿ ವಾದಿಸುವ ಸಾಮ್ಯವಾದಿಗಳು “ ಬಡವ ಬಲ್ಲಿದರ ಅಂತರವೇತಕ್ಕಿರಬೇಕು? ಎಲ್ಲರಿಗೂ ಹೆಚ್ಚು ಕಡಿಮೆ ಒಂದೇ ಸಮವಾದ ಆದಾಯವಿರಲಿ” ಎಂದು ವಾದಿಸುತ್ತಾರೆ. ಈ ಎರಡು ದೃಷ್ಟಿಕೋನಗಳಲ್ಲಿರುವ ಒಳ್ಳೆಯ ಅಂಶವನ್ನು ಉಳಿಸಿಕೊಳ್ಳುವುದೇ ಸನಾತನ ಧರ್ಮದ ಉದ್ದೇಶ. ಇದರಲ್ಲಿ ಬಲಾತ್ಕಾರವಿಲ್ಲ. ಸಂಪಾದನೆಗೆ ಪ್ರೋತ್ಸಾಹವಿದೆ. ಆದರೆ ದಾನ ಮಾಡಬೇಕೆಂಬ ಒಂದು ನಿಯಮವನ್ನು ಹೃತ್ಪೂರಕವಾಗಿ ಜನರು ಅನುಸರಿಸವಂತೆ ಈ ಧರ್ಮ ಮಾಡುತ್ತದೆ. ಹೀಗಾಗಿ ಮಾನವರಲ್ಲಿ ಸಂಪತ್ತಿನ ಹಂಚಿಕೆಯನ್ನೂ, ಪರಸ್ಪರ ಸೌಹಾರ್ದವನ್ನೂ, ಧರ್ಮದಲ್ಲಿ ಹೆಚ್ಚಿನ ಆಸಕ್ತಿಯನ್ನೂ ಯಜ್ಞಗಳು ಮೂಡಿಸುತ್ತಿದ್ದವು. ಅಶ್ವಮೇಧಯಾಗ ಮುಂತಾದವುಗಳಿಂದ ದೇಶವು ಸಣ್ಣಪುಟ್ಟ ರಾಜರ ಕೈಕೆಳಗೆ ತುಂಡಾಗಿರುವುದನ್ನು ತಪ್ಪಿಸಿ ಸಾಮ್ರಾಜ್ಯ ಸ್ಥಾಪನೆಗೆ ಸಹಕಾರ ದೊರೆಯುತ್ತಿತ್ತು. ಸಾಮ್ರಾಟರು ಯಜ್ಞಶೀಲರಾದುದರಿಂದ ದೇವತಾಭಕ್ತಿ, ಧರ್ಮಾಸಕ್ತಿ, ಇವರಲ್ಲಿ ತುಂಬಿರುತ್ತಿತ್ತು. ವಿಶ್ವಜಿದ್ಯಾಗವನ್ನು ಮಾಡಿ ತನ್ನ ಸಮಸ್ತ ಧನವನ್ನೂ ದಾನ ಮಾಡಿ ಮಣ್ಣಿನ ಪಾತ್ರೆಗಳನ್ನಿಟ್ಟುಕೊಂಡಿದ್ದ ರಘು ಮಹಾರಾಜನಂತಹ ರಾಜರ್ಷಿಗಳ ಸಾಮ್ರಾಜ್ಯಗಳಲ್ಲಿ ದೊರೆತಷ್ಟು ಗೌರವ, ಧರ್ಮಕ್ಕೆ ಬೇರೆ ಯಾವ ಸಂಧರ್ಭದಲ್ಲಿ ದೊರಕಲು ಸಾಧ್ಯ?
ಯಜ್ಞಕ್ಕೆ ಬೇಕಾಗಿರುವುದು ಹಸುಗಳು. ಅಂದರೆ ಇವುಗಳು ಹಾಲಿನಿಂದ ತಯಾರಾದ ತುಪ್ಪ. ಅನೇಕ ಹಸುಗಳಿದ್ದೂ ಯಜ್ಞ ಮಾಡದವನನ್ನು ಮನುಸ್ಮೃತಿ ಧರ್ಮವಿರೋಧಿಯನ್ನಾಗಿ ಚಿತ್ರಿಸುತ್ತದೆ. ಯಜ್ಞಗಳನ್ನು ಮಾಡುವ ಜನತೆ ಪಶು ಸಂಪತ್ತಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತದೆ. ಗೋವುಗಳು ಇವರಿಗೆ ದೇವತೆಗಳ ಸಮಾನ. ಹಸುಗಳ ಮಾಂಸವನ್ನು ತಿನ್ನುವ ಜನರಲ್ಲಿ ಯಜ್ಞಗಳಿಲ್ಲ. ತಾಯಿಯಂತೆ ಹಾಲನ್ನು ಕೊಡುವ ಹಸುಗಳನ್ನು ಕೊಂದು ಕೇವಲ ರುಚಿಗಾಗಿ ಅದರ ಮಾಂಸ ತಿನ್ನುವ ಜನರಲ್ಲಿನ ದೇವತಾ ಭಕ್ತಿ ಕೇವಲ ಮೂಢ ಭಕ್ತಿ ಅಥವಾ ಸ್ವಾರ್ಥಕ್ಕಾಗಿ ಮಾಡುವ ಭಕ್ತಿ. ಜ್ಞಾನದಿಂದ ಕೂಡಿದ ಭಕ್ತಿ ಆಗಲಾರದು. ಸರ್ವಭೂತಗಳಲ್ಲೂ ದೇವರನ್ನು ಕಾಣದವನ ದೇವರು ಕಾಲ್ಪನಿಕ ದೇವರು. ನಿಜವಾದದೇವರಲ್ಲ.
ಮಾನವರಲ್ಲಿ ಮಾಂಸಾಹಾರದಲ್ಲಿನ ಆಸಕ್ತಿಯನ್ನು ಕಡಿಮೆ ಮಾಡಲು ಮಾಡಿದ ಪ್ರಯತ್ನಗಳಲ್ಲಿ ಯಜ್ಞಗಳ ಅವಿರ್ಭಾವ ಮೊದಲನೆಯ ಹಂತದಲ್ಲಿ ಬರುತ್ತದೆ. ಯಜ್ಞಶೀಲರಾದ ದ್ವಿಜರಲ್ಲಿ ಯಜ್ಞದಲ್ಲಿ ಬಿಟ್ಟು ಬೇರೆ ಮಾಂಸಾಹಾರ ಪಾಪ ಕರ್ಮವೆಂಬ ಭಾವನೆ ಮೂಡಿದ್ದೂ, ಹಸುಗಳಿಗೆ ಮಹತ್ವಸ್ಥಾನ ದೊರೆತದ್ದೂ ಮಾನವನ ಸಂಸ್ಕೃತಿಯಲ್ಲಿ ಮೊದಲನೆಯ ಹೆಜ್ಜೆಗಳು. ಈ ಸಂಸ್ಕೃತಿ ಬೆಳೆದು ಪಶುಯಜ್ಞಗಳಿಗಿಂತಲೂ ಉತ್ತಮಗಳಾದ ಇತರ ಅನೇಕ ಯಜ್ಞಗಳು ಜಾರಿಗೆ ಬಂದವು. ಯಜ್ಞಗಳಲ್ಲಿ ತುಪ್ಪದಿಂದ ಮಾಡುವ ನಿರಂತರ
ವಾದ ಹೋಮದಿಂದ ಹುಟ್ಟಿಬರುವ ಧೂಮದಿಂದ ದುಷ್ಟ ಕ್ರಿಮಿಗಳ ನಾಶ, ವಾತಾವರಣದ ನೈರ್ಮಲ್ಯ, ಸುವಾಸನೆ ಮತ್ತು ಮೇಘಗಳ ಉತ್ಪತ್ತಿ ಉಂಟಾಗುತ್ತಿದ್ದವು. ಮಂತ್ರಪಠನೆಯಿಂದ ದೇವತೆಗಳಿಗೆ ಆನಂದವುಂಟಾಗಿ ಅವರು ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ ಮುಂತಾದ ದೈವಿಕ ಆಪತ್ತುಗಳಿಂದ ಜನರನ್ನು ಕಾಪಾಡುತ್ತಿದ್ದರು. ವೇದ ಮಂತ್ರಗಳು ಪ್ರಕೃತಿಯಲ್ಲಿನ ಅತ್ಯಂತ ಮೂಲಶಕ್ತಿಗಳಿಗೂ ಮೂಲಭೂತವಾದ ದೇವತಾಶಕ್ತಿಗಳ ಅನುಗ್ರಹವನ್ನು ಪಡೆಯಲು ಆ ಶಕ್ತಿಗಳೊಂದಿಗೆ ಸಂಪರ್ಕವನ್ನುಂಟು ಮಾಡುವ ಸಾಧನಗಳು.
ಯಜ್ಞಗಳು ಫಲಿಸಲು ಮೂರು ಶುದ್ಧಿಗಳಿರಬೇಕು. ಮೊದಲನೆಯದು ದ್ರವ್ಯ ಶುದ್ಧಿ. ಅಂದರೆ ಆ ದ್ರವ್ಯ ಧರ್ಮದಿಂದ ಸಂಪಾದಿಸಿದ್ದಿರಬೇಕು. ಇಂಗ್ಲೆಂಡಿನಲ್ಲಿ ಒಬ್ಬ ಪುಣ್ಯಾತ್ಮನಿಗೆ ಒಂದು ಅಪಘಾತ ನಡೆದ ಮೇಲೆ ಯಾವ ವಸ್ತುವನ್ನು ಮುಟ್ಟಿದರೂ ಆ ವಸ್ತುವನ್ನು ಉಪಯೋಗಿಸಿದವರ ವಿಷಯವೆಲ್ಲಾ ತಿಳಿದುಕೊಳ್ಳುವ ಶಕ್ತಿ ಬಂತಂತೆ. ಆತನು ಈ ಶಕ್ತಿ ಯಿಂದ ಅನೇಕಸಲ ಅಪರಾಧಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಮುಟ್ಟಿ ಅಪರಾಧಿಗಳನ್ನು ಗುರುತಿಸಲು ಬೇಕಾದ ವಿವರಗಳನ್ನು ತಿಳಿಸಿದನಂತೆ. ಅಂದಮೇಲೆ ಪುಣ್ಯ ಪಾಪಗಳು ವಸ್ತುಗಳಿಗೆ ಅಂಟಿಕೊಂಡೇ ಇರುತ್ತವೆಂದು ನಂಬಲು ಅವಕಾಶವಿದೆ. ಹೀಗಿರುವಾಗ, ದೇವತೆಗಳಿಗೆ ಸಂಬಂಧಿಸಿದ ಯಜ್ಞದಲ್ಲಿ ದ್ರವ್ಯಶುದ್ಧಿ ಇಲ್ಲದಿದ್ದರೆ ಫಲ ಹೇಗೆ ಲಭಿಸುತ್ತೆ. ಎರಡನೆಯದು ಮಂತ್ರಶುದ್ಧಿ. ಮೂರನೆಯದು ಆತ್ಮಶುದ್ಧಿ. ಆತ್ಮಶುದ್ದಿ ಇಲ್ಲದವನ ಮನಸ್ಸಿನಲ್ಲಿ ಜಗನ್ನಿಯಾಮಕನಾದ ಪರಮಾತ್ಮನ ಸಂಕಲ್ಪಕ್ಕನುಗುಣವಾದ ಸಂಕಲ್ಪಗಳು ಹುಟ್ಟಲಾರವು. ಆದುದರಿಂದ ಯಜ್ಞ ಫಲಕಾರಿ ಆಗಲಾರದು.
1-3-1986
2 – ದಾನ
(ಆ) ಋಷಿ ಯಜ್ಞ
ಮನುಸ್ಮೃತಿಯಲ್ಲಿ “ಸ್ವಾಧ್ಯಾಯೇನಾರ್ಚಯೇತರ್ಷೀನ್” ಮತ್ತು “ಅಧ್ಯಾಪನಂ ಬ್ರಹ್ಮಯಜ್ಞಃ” ಎಂದು ವೇದಗಳನ್ನು ತಾನು ಅಭ್ಯಾಸ ಮಾಡುವುದೂ, ಇತರರಿಗೆ ಹೇಳಿರುವುದರಿಂದ ಹೇಳಿಕೊಡುವುದೂ, ಇದೇ ಋಷಿಯಜ್ಞ. ತಾನು ಜ್ಞಾನವನ್ನು ಪಡೆದು ಇತರರಿಗೆ ಜ್ಞಾನವನ್ನು ದಾನ ಮಾಡುವುದರಿಂದ ಋಷಿಗಳ ಋಣ ತೀರಿಸಿದಂತಾಗುತ್ತದೆ. ಜ್ಞಾನದಾನ ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠವಾದುದು. ಆದುದರಿಂದ ಋಷಿಯಜ್ಞವು ಸಹ ದಾನದ ಹಿರಿಮೆಯನ್ನು ಎತ್ತಿ ಹಿಡಿಯುತ್ತದೆ.
(ಇ) ಪಿತೃಯಜ್ಞ
ಎಲ್ಲಾ ಯಜ್ಞಗಳಲ್ಲೂ ಇರುವಂತೆ ಪಿತೃಯಜ್ಞದಲ್ಲೂ ಕೃತಜ್ಞತೆ ಮತ್ತು ದಾನ ಈ ಎರಡು ಅಂಶಗಳೂ ಸೇರಿಕೊಂಡಿವೆ. ದ್ವಿಜರೆಲ್ಲರೂ ಪ್ರತಿದಿನ ಪಿತೃಗಳಿಗೆ ತರ್ಪಣ ಕೊಡಬೇಕು. ಆಯಾ ಕಾಲಗಳಲ್ಲಿ ಶಾಸ್ತ್ರೋಕ್ತ ರೀತಿಯಲ್ಲಿ ಶ್ರಾದ್ಧಗಳನ್ನು ಮಾಡಬೇಕು. ಪಿತೃಯಜ್ಞವು ಮೊದಲು ಅವರವರ ಪಿತೃಗಳ ವಿಷಯದಲ್ಲಿ ಪ್ರೇಮವನ್ನೂ ಕೃತಜ್ಞತೆಯನ್ನೂ ವ್ಯಕ್ತಪಡಿಸುವುದರಿಂದ ಪ್ರಾರಂಭವಾಗಿ ಕೊನೆಗೆ ವಸು, ರುದ್ರ, ಆದಿತ್ಯರೆಂಬ ದೇವತೆಗಳ ಮೂಲಕ ಪಿತೃಗಳಿಗೆ ತೃಪ್ತಿಯನ್ನುಂಟು ಮಾಡುವವರೆಗೂ ಹೋಗುತ್ತದೆ. ಯಾವ ವಸ್ತುವೇ ಆಗಲೀ ರೂಪಾಂತರ ಹೊಂದುವುದೇ ಹೊರತು ನಾಶವಾಗುವುದಿಲ್ಲವೆಂಬುದು ವಿಜ್ಞಾನ ತೋರಿಸಿ ಕೊಟ್ಟ ಒಂದು ಪ್ರಕೃತಿ ನಿಯಮ. ಮನುಷ್ಯರಿಗೆ ಸಂತಾನದ ಮೇಲೆ ಮಮಕಾರವೂ ಪ್ರೀತಿ ವಿಶ್ವಾಸಗಳೂ ಪ್ರಕೃತಿಯ ಒಂದು ನಿಯಮವಾಗಿ ಬಂದಿದೆಯೇ ಹೊರತು ಈ ಜನ್ಮದಲ್ಲಿ ಯಾವುದೋ ಒಂದು ಹೊಸ ವಿದ್ಯೆಯನ್ನುಕಲಿಯುವಂತೆ ಕಲಿಯುವುದಲ್ಲ. ಆದುದರಿಂದ ಶರೀರ ಸತ್ತು ಹೋದರೂ ಆತ್ಮಕ್ಕೆ ಅಂಟಿಕೊಂಡಿರುವ ಈ ಮಮಕಾರಗಳು ನಾಶವಾಗುವುದಿಲ್ಲ. ಹಾಗೆಯೇ ಬದುಕಿರುವವರಿಗೂ ತಮ್ಮ ಪಿತೃಗಳೆಂದರೆ ಆತ್ಮಕ್ಕೆ ಅಂಟಿಕೊಂಡಿರುವ ಪ್ರೀತಿ ಮಮಕಾರಗಳು ಇದ್ದೇ ಇರುತ್ತವೆ. ಆದುದರಿಂದ ಆಧ್ಯಾತ್ಮಿಕ ಮಟ್ಟದಲ್ಲಿ ಇವುಗಳಿಗೆ ಸಂಬಂಧಿಸಿರುವ ಪಿತೃಯಜ್ಞ ಕರ್ತವ್ಯವಾಗಿದೆ. ಆದುದರಿಂದ ಪಿತೃಗಳ ಆಶೀರ್ವಾದ ಲಭಿಸಿ ಸಂತಾನ ಪ್ರಾಪ್ತಿಯು, ಶುಭ ಪ್ರಾಪ್ತಿಯು ಉಂಟಾಗುವುದು. ಪಿತೃಗಳ ಆತ್ಮಗಳು ಅವರವರ ಕರ್ಮಾನುಸಾರ ಸ್ವರ್ಗನರಕಾದಿಲೋಕಗಳನ್ನನುಭವಿಸಿ ಪುನರ್ಜನ್ಮವನ್ನು ಹೊಂದಿದರೂ ಅವರಿಗೆ ಸಂತಾನದ ಮೇಲಿರುವ ವಾತ್ಸಲ್ಯವೆಂಬುದು ದೇವತಾತ್ಮಕವಾಗಿ ಉಳಿದೇಇರುತ್ತದೆ. ವಸು ಎಂಬ ದೇವತೆಗಳ ರೂಪದಲ್ಲಿದ್ದು ಅಲ್ಲಿಂದ ರುದ್ರರೆಂಬ ದೇವತೆಗಳ ರೂಪಕ್ಕೆ ಇದು ಹೋಗುತ್ತದೆ.
ಸತ್ತಮೇಲೆ ಸತ್ತವರ ಆತ್ಮಗಳಿಗೆ ಒಂದು ವರ್ಷದವರೆಗೂ ಹಸಿವು, ಬಾಯಾರಿಕೆ ಹೆಚ್ಚಾಗಿರುತ್ತವೆಂದು ಶಾಸ್ತ್ರಗಳು ಹೇಳುತ್ತವೆ. ಆಮೇಲೆ ಅವು ಅವುಗಳ ಪಿತೃಗಳ ಆತ್ಮಗಳೊಂದಿಗೆ ಸೇರಿಕೊಂಡು ಕೊನೆಗೆ ಅವುಗಳ ಒಂದು ಅಂಶವು ಮೇಲೆ ಹೇಳಿದಂತೆ ವಸು, ರುದ್ರ ಆದಿತ್ಯರೆಂಬ ದೇವತೆಗಳಲ್ಲಿ ಸೇರಿಕೊಳ್ಳುತ್ತದೆ. ಈ ಪಿತೃಗಳಿಗೆ ತೃಪ್ತಿಯುನ್ನುಂಟುಮಾಡಲು ಹೇಗೆ ಸಾಧ್ಯ? ಈ ದೇವತೆಗಳೂ ಪಿತೃಗಳೂ ಕಣ್ಣಿಗೆ ಕಾಣುವುದಿಲ್ಲ. ಮನಸ್ಸಿಗಿಂತಲೂ ಮೇಲೆ ಆಧ್ಯಾತ್ಮ ಮಟ್ಟದಲ್ಲಿರುವ ಇವರನ್ನು ಸಂಪರ್ಕಿಸಲು ಮನಸ್ಸೊಂದೇ ಸಾಧನ. ಇದರ ವಿಧಾನ ಹೀಗೆವರ್ಣಿಸಲ್ಪಟ್ಟಿದೆ. ಶ್ರಾದ್ಧಕ್ಕೆ ಕರೆಯಲ್ಪಟ್ಟ ಬ್ರಾಹ್ಮಣರು ಬಹಳ ಶ್ರೇಷ್ಠರಾಗಿರಬೇಕು. ಅವರು ನಿಮಂತ್ರಣ ಮಾಡಿದಾಗಲಿಂದ ಮನಸ್ಸನ್ನು ನಿಗ್ರಹಿಸಿಕೊಂಡಿರಬೇಕು. ಪಿತೃಗಳು ಗಾಳಿಯಂತೆ ಅವರನ್ನು ಹಿಂಬಾಲಿಸಿಕೊಂಡಿರುತ್ತಾರೆ ಎಂದು ಮನುಸ್ಮೃತಿಯಲ್ಲಿ ಹೇಳಲ್ಪಟ್ಟಿದೆ. ಯಾಜ್ಞವಲ್ಕ್ಯಸ್ಮೃತಿಯ ವ್ಯಾಖ್ಯಾನವಾದ “ಮಿತಾಕ್ಷರ” ಯಲ್ಲಿ ವಸು, ರುದ್ರ ಆದಿತ್ಯರೆಂಬ ದೇವತೆಗಳನ್ನು ಗರ್ಭಿಣೀಸ್ತ್ರೀಯರಿಗೂ ಅವರೊಳಗೆ ಸೇರಿಕೊಂಡಿರುವ ಪಿತೃಗಳ ಅಂಶಗಳನ್ನು ಗರ್ಭದಲ್ಲಿರುವ ಶಿಶುಗಳಿಗೂ ಹೋಲಿಸಲಾಗಿದೆ. ಗರ್ಭಿಣಿಗೆ ಅನ್ನ ಉಣಿಸಿದರೆ ಅದು ಹೇಗೆ ಆಕೆಯ ಗರ್ಭದಲ್ಲಿರುವ ಶಿಶುಗಳಿಗೂ ಹೋಲಿಸಲಾಗಿದೆ. ಗರ್ಭಿಣಿಗೆ ಅನ್ನ ಉಣಿಸಿದರೆ ಅದು ಹೇಗೆ ಆಕೆಯ ಗರ್ಭದಲ್ಲಿರುವ ಶಿಶುವಿಗೂ ತಲುಪತ್ತದೆಯೋ ಹಾಗೆಯೇ ಮೇಲ್ಕಂಡ ದೇವತೆಗಳಿಗೆ ತೃಪ್ತಿ ಉಂಟು ಮಾಡಿದರೆ ಅದರಲ್ಲಿರುವ ಪಿತೃಗಳಿಗೂ ತೃಪ್ತಿ ಆಗುತ್ತದೆಂದು ಇಲ್ಲಿ ಹೇಳಲ್ಪಟ್ಟಿದೆ.
ಮಹಾಲಯ ಶ್ರಾದ್ಧದಲ್ಲಿ ಪಿತೃಗಳೇ ಅಲ್ಲದೆ, ಶ್ರಾದ್ದ ಮಾಡುವವನ ವಂಶದಲ್ಲಿ ಹುಟ್ಟಿದ ಮತ್ತು ಅಗತಿಕರಾದ ಎಲ್ಲಾ ಆತ್ಮಗಳಿಗೂ ತೃಪ್ತಿಮಾಡಲಾಗುತ್ತೆ. ಅಲ್ಲದೆ ಅವನ ವಂಶದಲ್ಲಿದ್ದ ದಾಸ ದಾಸಿಯರಿಗೂ, ವಂಶದವರಿಗೆ ಉಪಕಾರ ಮಾಡಿದ ಪ್ರಾಣಿಗಳಿಗೂ, ಪಕ್ಷಿಗಳಿಗೂ, ಸ್ನೇಹಿತರಿಗೂ ಇತ್ಯಾದಿ ಎಲ್ಲ ಆತ್ಮಗಳಿಗೂ ತೃಪ್ತಿ ಮಾಡಲ್ಪಡುತ್ತದೆ. “ಪಿತೃರೂಪೀ ಜನಾರ್ಧನಃ” ಎಂಬ ವಾಕ್ಯದಿಂದ ಆತ್ಮದಸರ್ವವ್ಯಾಪಕತೆಯನ್ನೂ ಸಮಾನತೆಯನ್ನು ಲಕ್ಷ್ಯವಾಗಿಟ್ಟುಕೊಂಡು ಮಾಡುವ ಪಿತೃಯಜ್ಞ ಧರ್ಮದಲ್ಲಿ ಅತ್ಯಾವಷ್ಯಕವೆನ್ನುವುದರಲ್ಲಿ ಸಂದೇಹವಿದಯೇ?
1-4-1986
2 – ದಾನ
(ಈ) ನರಯಜ್ಞ
ಬೇರೆ ಊರಿನಿಂದ ಬಂದು ರಾತ್ರಿ ಮಾತ್ರ ತನ್ನ ಮನೆಯಲ್ಲಿ ತಂಗುವವನಿಗೆ ಅತಿಥಿ ಎಂದು ಹೆಸರು. ಇತರರ ಮನೆಯಲ್ಲಿ ಊಟಮಾಡಿಕೊಂಡು ತಾನು ದುಡಿಯದೆ ಇರುವವನು ಅತಿಥಿ ಆಗಲಾರನು. ಅತಿಥಿ ಒಂದು ವೇಳೆ ಸಾಯಂಕಾಲ ಮನೆಗೆ ಬಂದರೂ ಆತನಿಗೆ ಅನ್ನವಿಡಬೇಕು. ಅತಿಥಿಗೆ ಅನ್ನವಿಡದೆ ಗೃಹಸ್ಥನು ತಾನು ಊಟಮಾಡಬಾರದು. ಅತಿಥಿಗಳಲ್ಲಿ ಅವರವರಿಗೆ ತಕ್ಕಂತೆ ಸ್ಥಳ, ಆಸನ,ಶಯ್ಯೆ, ಮುಂತಾದ ಉಪಚಾರವನ್ನು ಮಾಡಬೇಕು. ಬಲಿಹರಣಕ್ಕಾಗಿ ಅನ್ನವಿಟ್ಟುಕೊಂಡಿರುವಾಗ ಅತಿಥಿ ಬಂದರೆ ಬಲಿಹರಣಕ್ಕೆ ಉಪಯೋಗಿಸದೆ ಆ ಅನ್ನವನ್ನು ಅತಿಥಿಗೆ ಇಡಬೇಕು. ಯಾವ ವರ್ಣದವರು ಅತಿಥಿಯಾಗಿ ಬಂದರೂ ತನ್ನ ಕುಟುಂಬದವರೊಡನೆ ಅವರಿಗೆ ಅನ್ನವಿಡಬೇಕು. ಬ್ರಾಹ್ಮಣರಾದ ಅತಿಥಿಗಳಿಗೆ ಮೊದಲು ಅನ್ನವಿಡಬೇಕು. ಅತಿಥಿಯಾಗಿ ಬಂದ ಬ್ರಾಹ್ಮಣನು ತನ್ನ ಕುಲಗೋತ್ರಗಳನ್ನು ಹೇಳಬಾರದು. ಗೃಹದ ಯಜಮಾನನೂ, ಆತನ ಹೆಂಡತಿಯು, ಅತಿಥಿಗಳಿಗೂ ಅಭ್ಯಾಗತರಿಗೂ, ತನ್ನ ಮನೆಯಲ್ಲಿರುವ ಇತರರಿಗೂ ಸೇವಕರಿಗೂ ಉಣಿಸಿದ ಮೇಲೆ ಉಳಿದ ಅನ್ನವನ್ನು ತಿನ್ನಬೇಕು. ಸೊಸೆ, ಮಗಳು ಮುಂತಾದ ಆಗಲೇ ಮದುವೆಯಾದ ಹೆಣ್ಣುಮಕ್ಕಳಿಗೂ, ಮದುವೆಯಾಗದ ಹುಡುಗಿಯರಿಗೂ, ರೋಗಿಗಳಿಗೂ, ಗರ್ಭಿಣಿಯರಿಗೂ, ಅತಿಥಿಗಳಿಗಿಂತಲೂ ಮೊದಲೇ ಊಟ ಕೊಡಬಹುದು. ಯಾವನೇ ಆಗಲಿ ಅತಿಥಿ ಅಭ್ಯಾಗತರಿಗೂ, ಭೃತ್ಯರಿಗೂ ಇಡದೆ ತಾನು ಊಟ ಮಾಡುತ್ತಾನೋ ಅವನು ಪಾಪಿ. ಎಂತಹ ಕಷ್ಟದಲ್ಲಿದ್ದರೂ ಸತ್ಪುರುಷರು ಬಂದವರಿಗೆ ನೀರು, ಇರಲು ಜಾಗ, ಜೊತೆಯಲ್ಲಿ ಬಂದ ಪಶುಗಳಿಗೆ ಹುಲ್ಲು, ಒಳ್ಳೆಯ ಮಾತು ಇವುಗಳಿಂದರಾದರು ಉಪಚಾರ ಮಾಡದೆ ಇರುವುದಿಲ್ಲ. ಪತಿತರು, ಶ್ವಪಚರು, ಪಾಪರೋಗಿಗಳು ಇವರಿಗಾಗಿ ಅನ್ನವನ್ನು ಮೆಲ್ಲಗೆ ನೆಲದ ಮೇಲೆ ಇಡಬೇಕು. ಶತ್ರು ಅತಿಥಿಯಾಗಿ ಬಂದರೂ ಸತ್ಕರಿಸಬೇಕು. ಅತಿಥಿಯನ್ನುಸಾಕ್ಷಾದ್ವಿಷ್ಣುವೆಂದು ಭಾವಿಸಿ ಗೌರವಿಸಬೇಕು. ಹೀಗೆ ಸ್ಮೃತಿಗಳು ನರಯಜ್ಞವನ್ನು ಬೋಧಿಸುತ್ತವೆ.
1-5-1986
2 – ದಾನ
ಉ) ಭೂತಯಜ್ಞ
ವೈದಿಕ ಮತದಲ್ಲಿ ಬ್ರಹ್ಮತತ್ವಕ್ಕೆ ಪ್ರಾಧಾನ್ಯ. ಇಲ್ಲಿ ದೇವರೆಂಬಾತನು ಎಲ್ಲೋ ಪ್ರತ್ಯೇಕವಾಗಿದ್ದುಕೊಂಡು ಈ ಪ್ರಪಂಚವನ್ನು ಪರಿಪಾಲಿಸುತ್ತಿದ್ದಾನೆ ಎಂಬ ಭಾವನೆಗಿಂತಲೂ, ಪರಮಾತ್ಮನೇ ವ್ಯಾಪಕವಾಗಿ ಈ ವಿಶ್ವವಾಗಿದ್ದಾನೆ ಎಂಬ ಭಾವನೆಗೆ ಪ್ರಾಧಾನ್ಯ ಹೆಚ್ಚು. ಮನುಸ್ಮೃತಿಯಲ್ಲಿನ ಕೊನೆಯ ಶ್ಲೋಕ ಈ ಬ್ರಹ್ಮತತ್ವದ ಸಾರಾಂಶವನ್ನು ಹೀಗೆ ವಿವರಿಸುತ್ತದೆ:
ಏವಂ ಯಃ ಸರ್ವಭೂತೇಷು ಪಶ್ಯತ್ಯಾತ್ಮಾನ ಮಾತ್ಮಾನಾ!
ಸ ಸರ್ವ ಸಮತಾಮೇತ್ಯ ಬ್ರಹ್ಮಾಭ್ಯೇತಿ ಪರಂ ಪದಂ!!
ತನ್ನ ಮತ್ತು ಹೊರಗಿರುವ ಸಮಸ್ತ ಭೂತಗಳ ಆತ್ಮ ಒಂದೇ ಎಂಬ ಸತ್ಯವನ್ನು ತಿಳಿದು ಸರ್ವ ಸಮತತ್ವವನ್ನು ಹೊಂದಿದವನು ಶ್ರೇಷ್ಠ ಮತ್ತು ಶಾಶ್ವತವಾದ ಬ್ರಹ್ಮತತ್ವವನ್ನು ಹೊಂದುತ್ತಾನೆ.
ವಿರಾಟ ಪರ್ವದ ಪ್ರಾರಂಭದಲ್ಲಿ ದ್ರೌಪದಿಯನ್ನು ‘ ಬ್ರಹ್ಮವಾದಿನಿ’ ಎಂದು ವ್ಯಾಸರು ವರ್ಣಿಸಿರುತ್ತಾರೆ. ಇದಕ್ಕೆ ‘ಬ್ರಹ್ಮ’ ವೆಂದರೆ ಶ್ರೀ ಕೃಷ್ಣ. ದ್ರೌಪದಿ ಶ್ರೀ ಕೃಷ್ಣನ ಭಕ್ತಳಾಗಿದ್ದಳು ಎಂಬಷ್ಟೇ ಅರ್ಥ ಹೇಳುವುದರಲ್ಲಿ ವೈದಿಕ ಧರ್ಮದ ನಿಜವಾದ ಸ್ವರೂಪ ವ್ಯಕ್ತವಾಗುವುದಿಲ್ಲ. ಶ್ರುತಿಸ್ಮೃತಿಗಳ ಧರ್ಮ ಬ್ರಹ್ಮತತ್ವದ ಮೇಲೆ ನಿಂತಿದೆ. ಈ ಧರ್ಮವನ್ನು ತಿಳಿದು ಆಚರಿಸುವವಳು ದ್ರೌಪದಿ ಎಂಬ ಅರ್ಥ ಸಮಂಜಸವೆಂದು ನನಗೆ ತೋರುತ್ತದೆ. “ಭೂತಯಜ್ಞ” ವು ಬ್ರಹ್ಮತತ್ವದ ಅನುಷ್ಠಾನಕ್ಕೆ ಭದ್ರವಾದ ತಳಪಾಯವೆಂದು ಹೇಳಬಹುದು.
ಮಾನವನು ತನ್ನ ಮಕ್ಕಳ, ಬಂಧುಗಳ, ಸ್ನೇಹಿತರ ಅಥವಾ ಇತರ ಮಾನವರ ವಿಷಯದಲ್ಲಿ ಸಹಾನುಭೂತಿಯನ್ನು ಹೊಂದಿರುವುದು ಸಹಜ. ಆದರೆ ಇತರ ಪ್ರಾಣಿಗಳ ವಿಷಯದಲ್ಲೂ, ಸಹಾನುಭೂತಿಯನ್ನು ಹೊಂದಿರುವುದು ಸಹಜ. ಆದರೆ ಇತರ ಪ್ರಾಣಿಗಳ ವಿಷಯದಲ್ಲೂ, ಸಹಾನುಭೂತಿಯನ್ನೂ, ಕೃತಜ್ಞತಾ ಭಾವವನ್ನೂ, ದೈವಭಾವನೆಯನ್ನೂ, ಆತ್ಮ ಸಮಭಾವನೆಯನ್ನೂ ಹೊಂದಿರುವುದು ಜ್ಞಾನದ ಮತ್ತು ಸಂಸ್ಕಾರದ ಪರಿಪ್ಕ್ವತೆಯನ್ನು ಸೂಚಿಸುತ್ತದೆ.
ಭೂತಯಜ್ಞವೂ ಸೇರಿರುವ ಪಂಚ ಯಜ್ಞಗಳನ್ನು, ಮಾನವನು ವಿಧಿಯಿಲ್ಲದೆ ಮಾಡುತ್ತಿರುವ ಭೂತಹಿಂಸೆಗೆ ಪ್ರಾಯಶ್ಚಿತ್ತವಾಗಿ ಮಾಡಬೇಕೆಂದೇ ಶಾಸ್ತ್ರ ಹೇಳುತ್ತಿವೆ.
ಪಂಚಸೂನಾ ಗೃಹಸ್ಥಸ್ಯ ಚುಲ್ಲೀ ಷೇಷಣ್ಯುಪಸ್ಕರಃ!
ಕಂಡನೀ ಚೋದ ಕುಂಬಶ್ಚ ಬಧ್ಯತೇಯಾಸ್ತು ವಾಹಯನ್!!
ತಾಸಾಂ ಕ್ರಮೇಣ ಸರ್ವಾಸಾಂ ನಿಷ್ಕೃತ್ಯರ್ಥಂ ಮಹರ್ಷಿಭಿಃ!
ಪಂಚ ಕ್ಲಪ್ತಾ ಮಹಾಯಜ್ಞಾಃ ಪ್ರತ್ಯಹಂ ಗೃಹಮೇಧಿನಾಂ!!
1-6-1986
2 – ದಾನ
ಉ) ಭೂತಯಜ್ಞ
ಪ್ರತಿ ಮನೆಯಲ್ಲೂ ಇರುವ ಒಲೆ, ಬೀಸುವಕಲ್ಲು, ಕಸಬರಿಗೆ, ಒನಕೆ, ಜಲಪಾತ್ರ ಈ ಐದರಿಂದ ಜೀವಹಿಂಸೆ ನಡೆಯುತ್ತಿರುತ್ತೆ. ಈ ಅಪರಾಧದ ನಿವೃತ್ತಿಗಾಗಿ ಗೃಹಸ್ತರು ಪಂಚಯಜ್ಞಗಳನ್ನು ಮಾಡಬೇಕು, ಎಂದು ಮನುಸ್ಮೃತಿಯಲ್ಲಿ ಹೇಳಲ್ಪಟ್ಟಿದೆ.
ವೈಶ್ವದೇವ ಹೋಮವನ್ನು ಮಾಡಿದ ಮೇಲೆ ಗೃಹಸ್ಥರು ಎಲ್ಲ ದಿಕ್ಕುಗಳಲ್ಲಿ ಪ್ರದಕ್ಷಿಣಾಕಾರದಿಂದ ಇಂದ್ರ, ಯಮ, ಇಂದು ಎಂಬ ಸಪರಿವಾರದೇವತೆಗಳಿಗೆ ಬಲಿಹರಣ ಮಾಡಬೇಕು. ಹೀಗೆಯೇ ಮನೆ ಬಾಗಿಲಲ್ಲಿ, ನೀರಿನಲ್ಲಿ, ಒರಳು–ಒನಕೆಗಳಲ್ಲಿ ಇತ್ಯಾದಿಯಾಗಿ ಅನೇಕಕಡೆ ನಾನಾದೇವತೆಗಳಿಗೆ ಬಲಿಹರಣಕ್ಕಾಗಿರುವ ಅನ್ನವನ್ನು ಹಾಕಬೇಕು. ಆಮೇಲೆ ನಾಯಿಗಳಿಗೂ, ಪತಿತರಿಗೂ, ಪಾಪರೋಗಿಗಳಿಗೂ, ಶ್ವಪಚರಿಗೂ, ಕಾಗೆಗಳಿಗೂ, ಕ್ರಿಮಿಗಳಿಗೂ ಆಹಾರವನ್ನು ಮೆಲ್ಲಗೆ ನೆಲದ ಮೇಲೆ ಇಡಬೇಕು.
ಪುನಃ ಸಾಯಂಕಾಲ ಅಡಿಗೆ ಮಾಡಿ ಗೃಹಸ್ಥನ ಹೆಂಡತಿಯು ತಾನೇ ಮಂತ್ರಗಳಿಲ್ಲದೆ ಮೌನವಾಗಿ ಮೇಲೆ ಹೇಳಿದಂತೆ ಬಲಿಹರಣಮಾಡಬೇಕು. ಹೀಗೆ ಭೂತಯಜ್ಞವು ಬೆಳಗ್ಗೆ ಮತ್ತು ಸಾಯಂಕಾಲ, ಎರಡುಸಲ ನಡೆಯಬೇಕು.
ಸಂನ್ಯಾಸಿಗಳು ಭಿಕ್ಷೆ ಬೇಡಲು ಹೊರಟಾಗ, ಯಾವ ಮನೆಯಲ್ಲಾದರೂ ಆಗಲೇ ಆಹಾರಕ್ಕಾಗಿ ತಪಸ್ವಿಗಳಾಗಲಿ, ಬ್ರಾಹ್ಮಣರಾಗಲಿ, ಹಕ್ಕಿಗಳಾಗಲಿ, ನಾಯಿಗಳಾಗಲಿ, ಬೇರೆ ಭಿಕ್ಷುಕರಾಗಲಿ ಕಾದಿದ್ದರೆ ಅಂತಹ ಮನೆಗೆ ಹೋಗಬಾರದೆಂದು ಮನುಸ್ಮೃತಿಯು ಬೋಧಿಸುತ್ತದೆ. ಇದರಿಂದ ಭೂತಗಳ ವಿಷಯದಲ್ಲಿ ಎಷ್ಟು ಸಹಾನುಭೂತಿ ತೋರಿಸಲಾಗಿದೆಯೆಂದು ತಿಳಿಯುತ್ತದೆ.
1-7-1986
ದಾನ
1.ಸಂವಿಭಾಗ
ಸಂವಿಭಾಗವೆಂದರೆ ಹಂಚುವುದು ಅಥವಾ ಹಂಚಿಕೊಳ್ಳುವುದು ಎಂದು ಅರ್ಥ. ಪ್ರತಿ ಮನುಷ್ಯನೂ ತನಗಿರುವ ಸಂಪತ್ತನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂಬುವ ಮೂಲ ತತ್ವದ ಮೇಲೆ ಸಂವಿಭಾಗವೆಂಬ ಧರ್ಮವು ನಿಂತಿದೆ. ಮಹಾಭಾರತದ ಕಥೆಯ ಪ್ರಧಾನ ಸಂದೇಶವು ಈ ಸಂವಿಭಾಗ ಧರ್ಮವೇ. ದುರ್ಯೋಧನನು ಪಾಂಡವರಿಗೆ ಭಾಗ ಕೊಡಲು ಒಪ್ಪುವುದಿಲ್ಲ. ಭೀಷ್ಮ ದ್ರೋಣಾದಿಗಳು ಆತನಿಗೆ ಬುದ್ಧಿ ಹೇಳುವಷ್ಟು ಮಾತ್ರ ತಮ್ಮ ಕರ್ತವ್ಯವನ್ನು ನಿರ್ವಹಿಸಿದರೇ ಹೊರತು ‘ ಸಂವಿಭಾಗ’ ವೆಂಬ ಧರ್ಮದ ತಳಪಾಯವನ್ನು ಸಂರಕ್ಷಿಸಲು ಮುಂದೆ ಬರಲಿಲ್ಲ. ಅವರು ಈ ಧರ್ಮಕ್ಕಿಂತಲೂ, ಭೃತ್ರ ಧರ್ಮಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ಕೊಟ್ಟರು. ಯುದ್ಧದಲ್ಲಿ ಪಾಂಡವರಿಗೆ ಎದುರಾಗಿ ನಿಂತರು. ಮಹಾಭಾರತದ ಪಾತ್ರಗಳನ್ನೆಲ್ಲಾ ಶ್ರೀ ಕೃಷ್ಣನೊಬ್ಬನೇ ಈ ಸಂವಿಭಾಗ ಧರ್ಮಕ್ಕೆ ಕೊನೆವರೆಗೂ ಸಹಾಯಕನಾಗಿ ನಿಂತು ಅದಕ್ಕಿಂತಲೂ ಅಲ್ಪಗಳಾದ ಕೆಲವು ಧರ್ಮಗಳನ್ನು ಕೈಬಿಟ್ಟು, ಗಾಂಧಾರಿಯ ಶಾಪಕ್ಕೆ ಗುರಿಯಾಗಿ, ಕೊನೆಗೂ ಈ ದೊಡ್ಡ ಧರ್ಮಕ್ಕೆ ಜಯವನ್ನು ಸಾಧಿಸಿಕೊಟ್ಟುಇದನ್ನು ಲೋಕದಲ್ಲಿ ಸ್ಥಾಪಿಸಿದನು. ಆತನು ದೇವರ ಅವತಾರವಾಗಿದ್ದುದರಿಂದ ಇದನ್ನು ಆತನು ಮಾಡಲೇಬೇಕಾಯಿತು. ಈ ದೊಡ್ಡ ಧರ್ಮಕ್ಕೆ ಚ್ಯುತಿ ಬಂದರೆ ಇತರ ಯಾವ ಧರ್ಮಗಳೂ ಲೋಕದ ಸ್ಥಿತಿಯನ್ನು ಸಂರಕ್ಷಿಸಲಾರವು. ಇದು ಪ್ರಕೃತಿಯ ನಿಯಮ. ಮಹಾಭಾರತ ಬರೆದ ವ್ಯಾಸನ ಅಂತರಂಗವನ್ನೇ ಅರಿಯಲಾರದ ಅನೇಕ ವಿದ್ಯಾವಂತರು ಕೃಷ್ಣನ ಈ ಹಿರಿಮೆಯನ್ನು ಸರಿಯಾಗಿ ಅಳಿಯಲಾರದೆ ಆತನಲ್ಲಿ ತಪ್ಪುಗಳನ್ನು ಕಂಡು ಹಿಡಿಯುತ್ತ, ಕರ್ಣ, ದುರ್ಯೋಧನ, ಅಶ್ವತ್ತಾಮ ಮುಂತಾದವರಲ್ಲಿದ್ದ ಕೆಲವು ಗುಣಗಳನ್ನೇ ದೊಡ್ಡದಾಗಿ ಮಾಡಿ ತೋರಿಸಿ ಜನರಲ್ಲಿ ಬುದ್ಧಿ ಭ್ರಮಣವನ್ನುಂಟು ಮಾಡುತ್ತಿರುವುದು ಶೋಚನೀಯ.
ಧರ್ಮದ ಬೀಜಾಕ್ಷರಗಳಲ್ಲಿ ಮಧ್ಯದಲ್ಲಿರುವ ಮತ್ತು ಮನುಸ್ಮೃತಿಯಲ್ಲಿ “ದಾನಮೇಕಂ ಕಲೌಯುಗೇ” ಎಂದು ಹೇಳಿರುವಂತೆ ಈ ಯುಗದಲ್ಲಿ ಅತ್ಯಂತಮುಖ್ಯವಾದ ‘ದಾನ’ ದ ಪ್ರಾಣವೆಲ್ಲವೂ ಪ್ರತಿ ಒಬ್ಬನೂ ಸ್ವಾರ್ಥಪರನಾಗದೆ, ತನ್ನ ಸಂಪತ್ತನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂಬ ಈ ‘ಸಂವಿಭಾಗ’ ಧರ್ಮದಲ್ಲಿದೆ.
1-8-1986
ದಾನ 6. ಸಂವಿಭಾಗ
ಮನುಸ್ಮೃತಿಯ 4ನೇ ಅಧ್ಯಾಯದ 32ನೇ ಶ್ಲೋಕವು ಗೃಹಸ್ಥ ಧರ್ಮಗಳಲ್ಲಿ ಸಂವಿಭಾಗವನ್ನು ಸೇರಿಸಿದೆ.
ಸಂವಿಭಾಗಶ್ಚ ಭೂತೇಭ್ಯಃ ಕರ್ತವ್ಯೋನುಪರೋಧಕಃ!!
ಅಂದರೆ, ತನಗೂ ತನ್ನ ಪೋಷ್ಯ ವರ್ಗಕ್ಕೂ ತೊಂದರೆಯುನ್ನುಂಟುಮಾಡಿಕೊಳ್ಳದೆ ಹೆಚ್ಚಗಿರುವುದನ್ನು ಇತರ ಪ್ರಾಣಿಗಳಿಗೆ ಹಂಚಬೇಕು ಎಂದು ಅಲ್ಲಿ ಹೇಳಲ್ಪಟ್ಟಿದೆ. ಭಾಗವತ ಪುರಾಣದ ಸಪ್ತಮಸ್ಕಂದದ 11ನೇ ಅಧ್ಯಾಯದಲ್ಲಿ ಸನಾತನ ಧಮವನ್ನು ವರ್ಣಿಸುತ್ತ ಸಮಸ್ತ ಮಾನವರೂ ಪರಿಪಾಲಿಸಬೇಕಾದ ಧರ್ಮಗಳಲ್ಲಿ-
ಅನ್ನದ್ಯಾದೇಃ ಸಂವಿಭಾಗೋ ಭೂತೇಭ್ಯಶ್ಚಯಥಾರ್ತಃ
ತೇಷ್ಟಾತ್ಮ ದೇವತಾ ಬುದ್ಧಿಃ ಸುತರಾಂ ನೃಷು ಪಾಂಡವ!!
ಅಂದರೆ ಆಹಾರ ಮುಂತಾದವುಗಳನ್ನು ಮನುಷ್ಯರೇ ಮೊದಲಾದ ಎಲ್ಲ ಪ್ರಾಣಿಗಳಿಗೂ ಅವುಗಳಿಗೆ ತಕ್ಕಂತೆ ಹಂಚಬೇಕೆಂದೂ, ಇವುಗಳಲ್ಲಿ ತಾನು ಉಪಾಸಿಸುವ ದೇವರನ್ನು ಕಾಣಬೇಕೆಂದೂ ಹೇಳಲ್ಪಟ್ಟಿದೆ.
ಮಹಾಭಾರತದ ಶಾಂತಿಪರ್ವದಲ್ಲಿನ ಪರಾಶರ ಗೀತೆಯಲ್ಲಿ (296ನೇ ಅಧ್ಯಾಯದಲ್ಲಿ) ಸರ್ವಮಾನವ ಸಾಧಾರಣಗಳಾದ ಧರ್ಮಗಳಲ್ಲಿ
“ ಸಂವಿಭಾಗಿತೆ” ಯನ್ನು ಸೇರಿಸಲಾಗಿದೆ.
ಅನೃಶಂಸ್ಯ ಮಹಿಂಸಾಚಾಪ್ರಮಾದಃ ಸಂವಿಭಾಗಿತಾ
ಶ್ರಾದ್ಧ ಕರ್ಮಾತಿಥೇಯಂ ಚ ಸತ್ಯಮಕ್ರೋಧಏವಚ!
ಸ್ವೇಷು ದಾರೇಷು ಸಂತೋಷಃ ಶೌಚಂ ನಿತ್ಯಾನಸೂಯತಾ!
ಆತ್ಮಜ್ಞಾನಂ ತಿತಿಕ್ಷಾಚ ಧರ್ಮಾಃ ಸಾಧಾರಣಾ ನೃಪ!!
ಇದರಿಂದ ಸಮಸ್ತ ಮಾನವರೂ ಆತ್ಮಜ್ಞಾನವನ್ನು ಸಂಪಾದಿಸಿ, ಶುಚಿರ್ಭೂತರಾಗಿ, ದಮ, ದಾನ ಮತ್ತು ದಯೆಯುಳ್ಳವರಾಗಿ, ದೇವ ಪಿತೃ ಕಾರ್ಯಾಸಕ್ತರಾಗಿ ಬಾಳಬೇಕೆಂಬುದು ಸನಾತನ ಧರ್ಮದ ಉದ್ದೇಶವೆಂದು ತಿಳಿಯುತ್ತಿರುವಾಗ ಧರ್ಮಪರರೂ ಜ್ಞಾನಿಗಳೂ ಆದ ಸಮಸ್ತ ಮಾನವರಲ್ಲೂ ಕೀಳು ಮೇಲು ಎಂಬ ಭಾವನೆಗೆ ಅವಕಾಶವೆಲ್ಲಿದೆ? ವರ್ಣಾಶ್ರಮಾದಿ ವಿಶೇಷ ಧರ್ಮಗಳನ್ನು, ಸುಗಮವಾಗಿ ಲೋಕ ವ್ಯವಹಾರ ನಡೆಯುವ ಉದ್ದೇಶವೆಂದಿಂದಲೂ, ಮಾನವ ಪ್ರಕೃತಿಯನ್ನು ಚೆನ್ನಾಗಿ ಗಮನಿಸಿ ಮಾನವರನ್ನು ಸಂಸ್ಕರಿಸಲು ಒಂದು ಉತ್ತಮವಿಧಾನವನ್ನಾಗಿಯು ಹೇಳಿದ್ದಾರೆ. ಮೇಲೆ ಹೇಳಿದ ಮಾನವ ಸಾಮಾನ್ಯ ಧರ್ಮಗಳಲ್ಲಿ ನಿಜವಾದ
ಆಸಕ್ತಿ ಉಳ್ಳ ಯಾವ ಮಾನವನೂ ವರ್ಣಾಶ್ರಮ ಧರ್ಮವನ್ನು ಆಕ್ಷೇಪಿಸುವುದಿಲ್ಲವೆಂದು ಧೃಢವಾಗಿ ಹೇಳಬಹುದು. ಅಂತಹವರು ಲೋಕವ್ಯವಹಾರಕ್ಕಾಗಿ ಆಯಾ ಮಾನವರಲ್ಲಿ ಏರ್ಪಟ್ಟಿರುವ ಬೇರೆ ಯಾವ ವಿಧವಾದ ಸಮಾಜರಚನೆಯನ್ನೂ ಆಕ್ಷೇಪಿಸುವುದಿಲ್ಲ. ಕಾರಣ ಸಮಾಜರಚನೆ ಹೆಚ್ಚು ಕಡಿಮೆ ಹೇಗಿದ್ದರೂ, ಮೇಲ್ಕಂಡ ಮಾನವಧರ್ಮವೊಂದು ತೇಜಸ್ವಿಯಾಗಿದ್ದರೆ ಯಾವಕುಂದು ಕೊರತೆಗಳಿಗೂ ಅವಕಾಶವಿರುವುದಿಲ್ಲ.
1-9-1986
೩. ದಯೆ
ಧರ್ಮದ ಬೀಜಾಕ್ಷರಗಳಲ್ಲಿ ಮೂರನೆಯ ‘ದ’ ಕಾರದಿಂದ ಸೂಚಿತವಾದ ‘ದಯೆ’ ಯನ್ನು ಕುರಿತು ವಿಚಾರವನ್ನು ಪ್ರಾರಂಭಿಸೋಣ. ಇದನ್ನು ಪರಮಾತ್ಮನು ಅಸುರರಿಗೆ ಉಪದೇಶಿಸಿದನೆಂದು ಹಿಂದೆಯೇ ತಿಳಿಸಲಾಗಿದೆ. ಅಸುರರಲ್ಲಿ ಶಕ್ತಿಯಿರುತ್ತದೆ. ಅರ್ಥ ಕಾಮಗಳ ಸಾಧನೆಗಾಗಿ ಮಾಡುವ ಹೋರಾಟದಲ್ಲಿ ಪ್ರಾಣಬಿಡಲೂ ಸಿದ್ಧರಾಗಿರುತ್ತಾರೆ. ಆದರೆ ಇವರ ಹೃದಯ ಪರಿಪಕ್ವವಾಗಿಲ್ಲ. ಸ್ವಾರ್ಥದ ಕಪಿ ಮುಷ್ಟಿಯನ್ನು ಬಿಡುವ ಶಕ್ತಿ ಇವರಲ್ಲಿಲ್ಲ. ಕಪಿ ಮುಷ್ಟಿಯೆಂದರೆ ಏನೆಂಬುದನ್ನು ತಿಳಿಯಬೇಕು. ಕೋತಿಗಳನ್ನು ಹಿಡಿಯಲು ತೆಂಗಿನ ಕಾಯಿಯೊಳಗೆ ಸಣ್ಣ ತೂತು ಮಾಡಿ ಅದರಲ್ಲಿ ಅಕ್ಕಿ ಹಾಕಿ ಕೋತಿಗಳ ಮುಂದೆ ಇಡುತ್ತಾರೆ. ಕೋತಿ ಒಳಗಿರುವ ಅಕ್ಕಿಯನ್ನು ತೆಗೆದು ಕೊಳ್ಳಲು ಕಾಯಿಯೊಳಕ್ಕೆ ಕೈ ಹಾಕಿ ಅಕ್ಕಿಯನ್ನು ಮುಷ್ಟಿಯಲ್ಲಿ ಹಿಡಿದು ಕೈ ಹಿಂತೆಗೆಯಲು ಪ್ರಯತ್ನಿಸುತ್ತದೆ. ಆದರೆ ತೂತು ಸಣ್ಣಗಿರುವುದರಿಂದ ಕೈ ಈಚೆಗೆ ಬರುವುದಿಲ್ಲ. ಮನುಷ್ಯನು ಕಪಿಯನ್ನು ಹಿಡಿಯಲು ಬರುತ್ತಾನೆ ಆದರೆ ಕೋತಿ ಮುಷ್ಟಿಯನ್ನು ಬಿಟ್ಟು ಕೈಯನ್ನು ಎಳೆದುಕೊಂಡು ಓಡಿ ಹೋಗಲು ಅದರ ಸ್ವಭಾವ ಅನುಕೂಲವಾಗಿಲ್ಲ. ಅದು ಹಿಡಿದ ಮುಷ್ಟಿಯನ್ನು ಬಿಡಲಾರದೆ ಮನುಷ್ಯನ ವಶವಾಗುತ್ತದೆ. ಸ್ವಾರ್ಥದ ಕಪಿಮುಷ್ಟಿ ಇರುವವರೆಲ್ಲರ ಗತಿಯು ಇಂತಹುದೇ. ಇವರಿಗೆ ಹೃದಯದ ಪರಿಪಾಕವನ್ನು ಉಂಟುಮಾಡಿ ಇವರನ್ನು ಕಾಪಾಡಬಲ್ಲ ಗುಣ ‘ದಯೆ’ ಒಂದೇ. ಇತರರ ಕಷ್ಟ ನೋಡಿ( ಸುಖ ನೋಡಿ) ಸಹಾನುಭೂತಿ ಹೊಂದುವ ಸ್ವಭಾವವೇ ದಯೆ. ಇದು ಹುಟ್ಟು ಗುಣ. ಕಲಿತರೆ ಬರುವುದಿಲ್ಲ. ಅಸುರರಲ್ಲಿ ಇದು ಇಲ್ಲವೆಂದಲ್ಲ. ಅಲ್ಪವಾಗಿರುತ್ತೆ. ಇದನ್ನು ಬೆಳೆಸಿಕೊಳ್ಳಬೇಕೆಂದೇ ಅವರಿಗೆ ದೇವರು ಮಾಡಿದ ಉಪದೇಶ.
‘ದಯೆಯೇ ಧರ್ಮದ ಮೂಲವಯ್ಯಾ. ದಯೆಯಿಲ್ಲದ ಧರ್ಮವದಾವುದಯ್ಯಾ…’ ಎಂದು ಹಾಡಿದ ದಯಾ ಸ್ವರೂಪನಾದ ಬಸವೇಶ್ವರನ ಮಾತು ನಿತ್ಯ ಸತ್ಯ. ದಯೆಯನ್ನು ಪುರಾಣಗಳು ಹೀಗೆ ಹೊಗಳಿವೆ:-
ನದಯಾ ಸದೃಶೋ ಧರ್ಮೋ ನದಯಾ ಸದೃಶಂತಪಃ!
ನ ದಯಾ ಸದೃಶಂ ದಾನಂ, ನ ದಯಾ ಸ ದೃಶಃ ಸಖಾ!
ಪರದುಃಖೇನಯೋ ದುಃಖೀ ಸುಖೀ ಪರಸುಖೇನ ಹ!
ಸಂಸಾರೇವರ್ತಮಾನೋಪಿ ಜ್ಞೆಯಃ ಸಾಕ್ಷಾತ್ ಹರಿಃ ಸ್ವಯಂ!
ಭೂನಾಂ ದುಃಖ ಮಗ್ನಾನಾಂ ದುಃಖೋದ್ಧರ್ತಾಹಿಯೋ ನರಃ
ಸ ಏವ ಸುಕೃತೀ ಲೋಕೇ ಜ್ಞೇಯೋ ನಾರಾಯಣಾಂಶಜಃ!!
1-10-1986
೩. ದಯೆ
ದಯೆಗೆ ಸಮಾನವಾದ ಧರ್ಮವಿಲ್ಲ. ದಯೆಗೆ ಸಮಾನವಾದ ತಪಸ್ಸಿಲ್ಲ. ದಯೆಗೆ ಸಮಾನವಾದ ದಾನವಿಲ್ಲ. ದಯೆಗೆ ಸಮನಾದ ಗೆಳೆಯನಿಲ್ಲ. ಇತರರ ದುಃಖ ನೋಡಿ ಯಾವನು ದುಃಖವನ್ನು ಅನುಭವಿಸುವನೋ ಅಂತಹವನು ಈ ಲೋಕದಲ್ಲಿದ್ದರೂ ಸಾಕ್ಷಾತ್ ವಿಷ್ಣು ಎಂದು ಭಾವಿಸಲು ಅರ್ಹನು. ಯಾವನು ದುಃಖದಲ್ಲಿ ಮುಳುಗಿರುವ ಇತರ ಪ್ರಾಣಿಗಳನ್ನು ದುಃಖದಿಂದ ಮೇಲಕ್ಕೆ ಎಬ್ಬಿಸುವನೋ ಅಂತಹ ದಯಾಳುವೇ ಈ ಲೋಕದಲ್ಲಿ ಪುಣ್ಯಪುರುಷನು. ಅವನು ನಾರಾಯಣಾಂಶದಿಂದ ಹುಟ್ಟಿದವನು ಎಂದು ಪುರಾಣಗಳು ಸಾರುತ್ತಿವೆ.
ಮಾನವನ ಇಹಪರ ಸೌಖ್ಯ ಸಾಧನೆಗೆ ಅಂದರೆ ಇಹದಲ್ಲಿ ಧರ್ಮ, ಅರ್ಥ, ಕಾಮಗಳೆಂಬ ಮೂರು ಪುರುಷಾರ್ಥಗಳನ್ನು ಸಾದಿಸುವುದಕ್ಕೂ ಪರದಲ್ಲಿ ಮೋಕ್ಷ ಪುರುಷಾರ್ಥ ಸಾಧನೆಗೂ ಬೇಕಾಗಿರುವ ಎರಡು ಗುಣಗಳೆಂದರೆ ಜ್ಞಾನ ಮತ್ತು ದಯೆ. ಈ ಎರಡೂ ಎಲ್ಲಿ ಸಮೃದ್ಧವಾಗಿರುವುವೋ ಅಲ್ಲಿ ಲಕ್ಷ್ಮಿಯು ನೆಲಸಿರುವಳು. ಆನಂದವು ನರ್ತಿಸುತ್ತಿರುವುದು. ಇತರ ಎಲ್ಲ ಗುಣಗಳೂ ಈ ಎರಡು ಮೂಲ ಗುಣಗಳಿಂದ ಉದ್ಭವಿಸುತ್ತವೆ ಎಂಬ ನಿತ್ಯ ಸತ್ಯವನ್ನು ಗಮನಿಸಿದ ಅಮರಸಿಂಹ ಕವಿಯು ತನ್ನ ಅಮರ ಕೋಶದ ಮೊದಲನೆಯ ಶ್ಲೋಕದಲ್ಲಿ ಮಾಡಿರುವ ಬುದ್ದ ದೇವನ ಸ್ತೋತ್ರವು ಅತ್ಯಮೂಲ್ಯವಾದುದು.
ಯಸ್ಯ ಜ್ಞಾನ ದಯಾ ಸಿಂಧೋಃ
ಅಗಾಧಸ್ಯಾನಘಾ ಗುಣಾಃ
ಸೇವ್ಯತಾಮಕ್ಷಯೋ ಧೀರಃ
ಸಶ್ರಿಯೈಚಾಮೃತಾಯ ಚ.
ಆತನು ಜ್ಞಾನ ಮತ್ತು ದಯೆಗೆ ಸಮುದ್ರದಂಥವನು. ಆತನ ಆಳ ಇಷ್ಟೆಂದು ತಿಳಿಯಲು ಸಾಧ್ಯವಿಲ್ಲ. ಆತನು ನಾಶರಹಿತನು. ಆತನ ಗುಣಗಳು ಪಾಪರಹಿತವಾದುವು. ಮನೋ ನಿಗ್ರಹವುಳ್ಳವರೇ, ಐಹಿಕ ಸುಖವನ್ನೂ ಶಾಶ್ವತವಾದ ಮೋಕ್ಷವನ್ನೂ ಹೊಂದಲು, ಆತನನ್ನು ಸೇವಿಸಿ ಎಂದು ಈ ಶ್ಲೋಕದ ಅರ್ಥ.
ಜ್ಞಾನಕ್ಕೆ ಎಷ್ಟು ಬೆಲೆ ಇದೆಯೋ ದಯೆಗೂ ಅಷ್ಟೇ ಬೆಲೆಯಿದೆ. ಒಂದು ಸೂರ್ಯನಾದರೆ ಇನ್ನೊಂದು ಚಂದ್ರನಂತೆ. ಒಂದು ಹಗಲಾದರೆ ಇನ್ನೊಂದು ರಾತ್ರಿಯಂತೆ. ಮಾನವನು ಕೇವಲ ವಿಜ್ಞಾನದ ಬೆಳವಣಿಗೆಯಲ್ಲಿ ನಿರತನಾಗಿ ದಯೆಯನ್ನು ಮರೆತಿರುವುದೇ ಇಂದಿನ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ. ನಮ್ಮ ದೇಶದ ಹಳ್ಳಿ ಹಳ್ಳಿಯಲ್ಲೂ ಎಲ್ಲರ ಬಾಯಲ್ಲೂ ನಿನ್ನೆ ಮೊನ್ನೆಯವರೆಗೂ ಓಡಾಡುತ್ತಿದ್ದ ಈ ಅಮರ ಕೋಶದ ಮೊದಲನೆಯ ಶ್ಲೋಕವನ್ನು ಇಂದಿನ ಪ್ರಭುತ್ವವು ಗುರುತಿಸಿಲ್ಲ?
1-11-1986
೪. ದಯೆ
ಲೋಕ ಕಲ್ಯಾಣವೆಂಬ ವೃಕ್ಷಕ್ಕೆ ದಯೆಯೇ ತಾಯಿ ಬೇರು. ಜ್ಞಾನವೇ ಫಲ. ಈ ಎರಡನ್ನೂ ಗುರುತಿಸದೆ ಲೋಕ ಕಲ್ಯಾಣ ಸಾಧಿಸಲು ಪ್ರಭುತ್ವ ಮಾಡುತ್ತಿರುವ ಪ್ರಯತ್ನವು ಫಲಿಸುವುದು ಹೇಗೆ ಸಾಧ್ಯ? ಲೋಕ ಕಲ್ಯಾಣವು ಧರ್ಮದಿಂದ ಮಾತ್ರ ಸಾಧ್ಯ. ಇಂದಿನ ಪ್ರಭುತ್ವ ಮಾಡಿರುವ ಮತ್ತು ಮಾಡುತ್ತಿರುವ ಕಾನೂನು ಕೇವಲ ವ್ಯವಹಾರ ಧರ್ಮಕ್ಕೆ ಸಂಬಂದಿಸಿದ್ದ್ದು. ಆಚಾರ ಮತ್ತು ಪ್ರಾಯಶ್ಚಿತ್ತ ಧರ್ಮಗಳು ನಾಶವಾದರೆ ಕೇವಲ ವ್ಯವಹಾರ ಧರ್ಮವು ಯಾವ ಕೆಲಸವನ್ನೂ ಮಾಡಲಾರದು. ಇಂದಿನ ಪ್ರಭುತ್ವದವರಿಗೆ ರಾಷ್ಟ್ರಹಿತವನ್ನು ಸಾಧಿಸುವ ಮೂಲಶಕ್ತಿಗಳ ಅರಿವೇ ಇಲ್ಲದಂತೆ ಕಾಣುತ್ತದೆ.
ವೇದದಲ್ಲಿನ ಒಂದು ಮಂತ್ರದಲ್ಲಿ ರಾಷ್ಟ್ರವನ್ನು ರಕ್ಷಿಸುವ ದೇವತೆಗಳಾವುವೆಂಬುದನ್ನು ಬಹಳ ಸೊಗಸಾಗಿ ವರ್ಣಿಸಲಾಗಿದೆ.
ಧ್ರುವಂ ತೇ ರಾಜಾ ವರುಣೋಧ್ರುವಂ ದೇವೋ
ಬೃಹಸ್ಪತಿಃ ಧ್ರುವಂತ ಇಂದ್ರಶ್ಚಾಗ್ನಿಶ್ಚ ರಾಷ್ಟ್ರಂ
ಧಾರಯತಾಂ ಧ್ರುವಂ
ಈ ಮಂತ್ರದಂತೆ ರಾಷ್ಟ್ರಕ್ಷೇಮವನ್ನು ಉಂಟುಮಾಡುವ ಮೊದಲನೇ ದೇವನು, ರಾಜನಾದ ವರುಣನು. ಎಲ್ಲರನ್ನೂ ರಂಜಿಸುವುದರಿಂದ ಈ ದೇವನು ರಾಜನಾಗಿದ್ದಾನೆ. ಎಲ್ಲರನ್ನೂ ಆವರಿಸಿಕೊಳ್ಳುವ ಶಕ್ತಿಯಿರುವುದರಿಂದ ಈತನು ‘ವರುಣ’ನಾಗಿದ್ದಾನೆ. ರಾಷ್ತ್ರದ ಪ್ರಜೆಗಳೆಲ್ಲರನ್ನೂ ರಂಜಿಸುತ್ತ ಆವರಿಸಿಕೊಳ್ಳುವುದು ಪ್ರೇಮ ಶಕ್ತಿ. ಇದನ್ನು ಪ್ರೇಮ ತತ್ವವೆನ್ನಬಹುದು. ಹೃದಯ ತತ್ವವೆನ್ನಬಹುದು. ರಸತತ್ವವೆನ್ನಬಹುದು. ದಯಾತತ್ವವೆನ್ನಬಹುದು. ಆನಂದ ತತ್ವವೆನ್ನಬಹುದು. ಶಾಂತಿತತ್ವವೆನ್ನಬಹುದು. ರಾಜನೆಂದರೆ ಚಂದ್ರ. ಈತನು ವರುಣನು ಅಧಿಪತಿಯಾದ, ಮತ್ತು ರಸಮಯನಾದ, ಸಮುದ್ರದಲ್ಲಿ ಹುಟ್ಟಿರುವವನು. ವರುಣನು ಜಲಕ್ಕೆ ಅಧಿಪತಿ. ಅಂದರೆ ರಸಕ್ಕೆ ಅಧಿಪತಿ. ಸೂರ್ಯನು ಹಗಲಿಗೆ ಅಧಿಪತಿ ಆದರೆ ವರುಣನು ರಾತ್ರಿಯ ಅಧಿದೇವತೆ. ರಾತ್ರಿ ವಿಶ್ರಾಂತಿ ಸುಖದ ಸಮಯ. ಬಹಿರ್ಮುಖವಾದ ಜಗತ್ತು ಅಂತರ್ಮುಖವಾಗುವ ಸಮಯ. ಪಾಪಗಳನ್ನುಹೋಗಲಾಡಿಸುವ ದೇವತೆಯು ವರುಣನೆಂದು ಅಘಮರ್ಷಣ ಸೂಕ್ತ ವರ್ಣಿಸುತ್ತದೆ. ವರುಣನು ಪಾಶಹಸ್ತನು, ಎಲ್ಲರ ಹೃದಯಗಳನ್ನೂ ಒಂದು ಪಾಶದಲ್ಲಿ ಬಂಧಿಸುವ ಶಕ್ತಿ ವರುಣನಿಗೆ ಮಾತ್ರವಿದೆ. ಮೂಲಭೂತವಾದ ಈ ವರುಣತತ್ವದ ಪೋಷಣೆಗೆ ಪ್ರಭುತ್ವ ಮಾಡಿರುವುದೂ ಮಾಡಿತ್ತಿರುವುದೂ ಏನೂ ಕಾಣುತ್ತಿಲ್ಲ. ಇದಕ್ಕೆ ಬದಲಾಗಿ ತದ್ವಿರುದ್ಧವಾದ ಸ್ಪರ್ಧಾತ್ಮಕ ನೀತಿಯನ್ನು ಅನುಸರಿಸುತ್ತಿರುವುದು ವಿಷಾದಕರ. ವರುಣನ ಅಂಶವಿಲ್ಲದ ದೇಶಭಕ್ತಿಯ ಪ್ರಚಾರ ತಾತ್ಕಾಲಿಕ ಉತ್ತೇಜನವು ಮಾತ್ರ. ಅದರಲ್ಲಿ ದೃಢತ್ತ್ವವಿರುವುದಿಲ್ಲ. ಪವಿತ್ರತೆಯಿರುವುದಿಲ್ಲ.
1-12-1986
ದಯೆ
ಈ ಸಂದರ್ಭದಲ್ಲಿ ಮನುಸ್ಮೃತಿಯಲ್ಲಿನ ಈ ಶ್ಲೋಕಗಳನ್ನು ಸಹ ಗಮನಿಸಬಹುದು.
ವರುಣೇನಯಥಾಪಾಶೈರ್ಬದ್ಧ ಏವಾಭಿದೃಶ್ಯತೇ!
ತಥಾಪಾಪಾನ್ನಿಗೃಹ್ಣೀಯಾತ್ ವ್ರತಮೇತದ್ಧಿವಾರುಣಾಂ.
ರಾಜನು ಪ್ರಜಾಪಾಲನೆಯಲ್ಲಿ ವರುಣ ಸಂಬಂಧವಾದ ವ್ರತವನ್ನು ಆಚರಿಸಬೇಕು. ವರುಣನು ಮಾನವರನ್ನು ಪಾಶದಿಂದ ಬಂಧಿಸುತ್ತಾನೆ. ವರುಣ ಪಾಶಬದ್ಧರು. ಪರಸ್ಪರ ಪ್ರೀತಿಯಿಂದ ನೋಡುತ್ತಾರೆ. ರಾಜನು ಪ್ರಜೆಗಳನ್ನು ವರುಣ ಪಾಶ ಬದ್ಧರನ್ನಾಗಿ ಮಾಡಿ ಅವರು ಪಾಪ ಕೃತ್ಯಗಳನ್ನು ಮಾಡದಂತೆ ತಡೆಗಟ್ಟಬೇಕು.
ಪರಿಪೂರ್ಣಂಯಥಾಚಂದ್ರಂದೃಷ್ಟ್ವಾಹೃಷ್ಯನ್ತಿಮಾನವಾಃ!
ತಥಾಪ್ರಕೃತಯೋಸ್ಮಿನ್ ಸ ಚಾಂದ್ರವೃತಿಕೋನೃಪಃ!!
ಪೂರ್ಣಚಂದ್ರನನ್ನು ನೋಡಿ ಎಲ್ಲರೂ ಆನಂದಿಸುತ್ತಾರೆ. ಹಾಗೆಯೇ ರಾಜನನ್ನು ನೋಡಿದರೆ ಜನರೆಲ್ಲರೂ ಆನಂದಿಸುವಂತೆ ರಾಜನು ವರ್ತಿಸಬೇಕು. ಅಂದರೆ ರಾಜನು ತನ್ನ ಧೀರೋಧಾತ್ತಗುಣಗಳಿಂದ ಲೋಕರಂಜಿಸಬೇಕು. (ಐಂದ್ರ ವ್ರತದಲ್ಲಿ ಪ್ರಜೆಗಳ ಕೋರಿಕೆಗಳನ್ನು ತೀರಿಸುವುದು ಬರುವುದರಿಂದ ಇಲ್ಲಿ ಪ್ರಜೆಗಳಿಗೆ ರಾಜನು ಕೊಡುವುದು ರಸಾನುಭೂತಿಯಿಂದ ಬರುವ ಆನಂದ ಮಾತ್ರ).
ರಾಷ್ಟ್ರಕ್ಷೇಮವನ್ನುಂಟುಮಾಡುವ ಎರಡನೇ ದೇವನು ಬೃಹಸ್ಪತಿ. ಮೊದಲನೆಯದಾದ ಪ್ರೇಮ, ರಸತತ್ವ( ವರುಣ ತತ್ವ) ದ ನಂತರ ಪ್ರಜೆಗಳಲ್ಲಿ ವ್ಯಾಪಿಸಬೇಕಾದುದು ಜ್ಞಾನ. ಇದೇ ಬೃಹಸ್ಪತಿ ತತ್ವ. ಸಮಸ್ತ ದೇವತೆಗಳ ಗುರು ಬೃಹಸ್ಪತಿ. ಈತನು ಸಮಸ್ತ ಇಂದ್ರಿಯಗಳ ಮಾರ್ಗದರ್ಶಕವಾದ ಬುದ್ಧಿತತ್ವವನ್ನು ಸೂಚಿಸುತ್ತಾನೆ. ರಾಷ್ಟ್ರಪ್ರಜೆಗಳ ಅನೇಕ ವಿಪತ್ತುಗಳಿಗೆ ಕಾರಣ ಅಜ್ಞಾನ. ಉತ್ತಮ ವಿದ್ಯಾ ಪ್ರಚಾರ ರಾಷ್ಟ್ರ ಹಿತಕ್ಕೆ ಬಹಳ ಮುಖ್ಯವೆಂಬುದನ್ನು ಇದರಿಂದ ಗ್ರಹಿಸಬೇಕು.
ಮೂರನೇ ದೇವನಾದ ಇಂದ್ರನು ಶಕ್ತಿಯನ್ನು ಸೂಚಿಸುತ್ತಾನೆ. ಈ ಶಕ್ತಿಯು ಆಹಾರ ಮುಂತಾದವುಗಳಿಂದ ಬರುತ್ತದೆ. ಇಂದ್ರನು ಮಳೆಯನ್ನು ಸುರಿಸಿ ಆಹಾರೋತ್ಪತ್ತಿಗೆ ಕಾರಣನಾದ ದೇವನು. ಪ್ರಜೆಗಳ ಸಂಪತ್ತು ಅಬ್ಭಿವೃದ್ಧಿಯಾಗಲು ರಾಜನು ಶ್ರಮಿಸಬೇಕೆಂದು ಇದರಿಂದ ಊಹಿಸಬೇಕು.
1-10-1987
ದಯೆ
ಇಂದ್ರವೃತವನ್ನು ರಾಜನು ಮಾಡುವ ವಿಧಾನವನ್ನು ಮನುಸ್ಮೃತಿಯು ಹೀಗೆ ತಿಳಿಸುತ್ತದೆ.
ವಾರ್ಷಿಕಾಂ ಶ್ಚತುರೋಮಾಸಾನ್ ಯಥೇಂದ್ರೋಭಿ ಪ್ರವರ್ಷತಿ !
ತಥಾಭಿವರ್ಷೇ ತ್ಸ್ವಂ ರಾಷ್ಟ್ರಂ ಕಾಮೈರಿಂದ್ರವ್ರತಂ ಚರನ್ !!
ಸೂರ್ಯನು ವರ್ಷದ ಎಂಟು ತಿಂಗಳ ಕಾಲ ನೀರನ್ನು ಹೀರಿದಂತೆ ರಾಜನು ಪ್ರಜೆಗಳಿಂದಕರವನ್ನೆತ್ತಿ ತನ್ನ ಕೋಶವನ್ನು ತುಂಬಿಕೊಳ್ಳುವುದು ಸೂರ್ಯವ್ರತ. ಆ ನೀರನ್ನು ಇಂದ್ರನು ಮಳೆಯ ರೂಪದಲ್ಲಿ ಪುನಃ ಭೂಮಿಗೆ ಸುರಿಸುವಂತೆ ರಾಜನು ಕರವನ್ನು ಪುನಃ ಭೂಮಿಗೆ ಪ್ರಜೆಗಳ ಹಿತಕ್ಕಾಗಿ ಉಪಯೋಗಿಸುವುದೇ ಇಂದ್ರ ವ್ರತ.
ನಾಲ್ಕನೇ ದೇವನಾದ ಅಗ್ನಿಯು ರಾಜನು ಪ್ರಯೋಗಿಸುವ ದಂಡವನ್ನು ಸೂಚಿಸುತ್ತಾನೆ.
ಪ್ರತಾಪಯುಕ್ತ ಸ್ತೇಜಸ್ವೀ ನಿತ್ಯಂ ಸ್ಯಾತ್ಪಾಪ ಕರ್ಮಸು !
ದುಷ್ಟಸಾಮಂತ ಹಿಂಸ್ರಶ್ಚ ತದಾಗ್ನೇಯಂ ವ್ರತಂ ಸ್ಮೃತಂ !!
ರಾಜನು ಪ್ರತಾಪವಂತನೂ ತೇಜಸ್ವಿಯಾಗಿದ್ದು ಸದಾ ಪಾಪಕಾರ್ಯಗಳನ್ನು ಮಾಡುವವರನ್ನೂ ದುಷ್ಟರಾದ ಸಾಮಂತರನ್ನೂ ದಂಡಿಸುತ್ತಿರುವುದೇ ಅಗ್ನಿವ್ರತವೆಂದು ಮನುಸ್ಮೃಯು ಹೇಳಿತ್ತಿದೆ.
ರಾಷ್ಟ್ರದ ಭದ್ರತೆಗೆ ದಂಡಪ್ರಯೋಗವು ಕೊನೆಯ ಉಪಾಯವೇ ಹೊರತು ಮೊದಲನೆಯ ಉಪಾಯವಲ್ಲವೆಂಬುದನ್ನು ಇಂದಿನ ಪ್ರಭುತ್ವವು “ಧೃವಂತೇ ರಾಜಾ” ಎಂಬ ವೇದ ಮಂತ್ರದ ಅರ್ಥದಿಂದ ಎಷ್ಟು ಬೇಗ ತಿಳಿದುಕೊಂಡರೆ ಅಷ್ಟು ಒಳ್ಳೆಯದು. ರಾಷ್ಟ್ರದ ಭದ್ರತೆಗೆ ವರುಣತತ್ವವಾದ “ದಯೆ”ಯ ಅಭಿವೃದ್ಧಿ ಅತ್ಯಂತ ಮುಖ್ಯವಾದುದು. ಧರ್ಮದ ತಳಹದಿಯಾದ “ದಯೆ”ಯ ಪ್ರಚಾರಕ್ಕೆ ತಕ್ಕ ಪ್ರಯತ್ನ ಮಾಡದೆ ಇತರ ಯಾವ ಪ್ರಯತ್ನಗಳನ್ನು ಮಾಡಿದರೂ ಸಫಲವಾಗುವುದಿಲ್ಲ.
ದಯಾಗುಣದ ಪ್ರಚಾರವು ಕೇವಲ ಪ್ರಭುತ್ವದ ಕರ್ತವ್ಯವೆಂದು ಭಾವಿಸುವುದು ತಪ್ಪು. ವಿದ್ವಾಂಸರೂ, ಲೇಖಕರೂ, ಪತ್ರಿಕೆಗಳನ್ನು ನಡೆಸುವವರೂ, ಪ್ರಚಾರ ಮಾಧ್ಯಮದವರೂ ಇವರೆಲ್ಲರೂ ಈ ಕೆಲಸವನ್ನು ಮಾಡಲು ಸೊಂಟಕಟ್ಟಿ ನಿಂತರೆ ಮಾತ್ರ ರಾಷ್ಟ್ರಹಿತವನ್ನು ಸಾಧಿಸಬಹುದು. ದಯಾಗುಣದ ಪ್ರಚಾರಕ್ಕೆ ಎರಡು ಮಾರ್ಗಗಳು ಅನುಸರಿಸಬೇಕು. ಮೊದಲನೆಯದು ದಯಾಗುಣವನ್ನು ಹೊಂದಿರುವವರು ಇತರರ ಗಮನಕ್ಕೆ ಸದಾ ಬರುತ್ತಿರುವಂತೆ ವ್ಯವಸ್ಥೆಯಾಗಬೇಕು ಮತ್ತು ದಯಾಗುಣವನ್ನು ಸಂದೇಶಿಸುವ ವಾರ್ತೆಗಳೂ, ಸಾಹಿತ್ಯವೂ ಜನರ ಮುಂದೆ ಹೆಚ್ಚಾಗಿ, ಆಕರ್ಷಕವಾಗಿ, ಪ್ರಭಾವಶಾಲಿಯಾಗಿ ಬರುತ್ತಿರಬೇಕು. ಎರಡನೆಯ ಮಾರ್ಗ ಕ್ರೂರ ಮತ್ತು ಪಾಪಕೃತ್ಯಗಳ ಮತ್ತು ಸ್ಪರ್ಧೆಯ ವಾರ್ತೆಗಳು ವಿಷಯಗಳೂ ಜನರ ಗಮನಕ್ಕೆ ಹೆಚ್ಚಾಗಿ ಬಾರದಂತೆ ತಡೆಗಟ್ಟುವುದು.
1-2-1987
ದಯೆ
ತನ್ನಂತೆ ಇತರ ಪ್ರಾಣಿಗಳು ಎಂಬ ಜ್ಞಾನವೇ ದಯೆಗೆ ಪ್ರೇರಕ. ಇತರರ ನೋವನ್ನು ನೋಡಿದಾಗ ತನಗೆ ನೋವಾದಂತೆ ಯಾರಿಗೆ ಆಗುವುದೋ ಅವರಲ್ಲಿಯೇ ದಯೆ ಬರುವುದು. “ಆತ್ಮವತ್ಸರ್ಪಭೂತಾನಿ ಯಃ ಪಶ್ಯತಿ ಸಪಶ್ಯತಿ” ಅಂದರೆ ತನ್ನಂತೆ ಇತರ ಸಮಸ್ತಪ್ರಾಣಿಗಳನ್ನೂ ಯಾರು ಭಾವಿಸುತ್ತಾರೋ ಅವರೇ ಜ್ಞಾನಿಗಳು ಎಂದು ಅರ್ಥ. ದಯೆಯಿಲ್ಲದೆ ಇರುವವರು ಜ್ಞಾನಿಗಳಲ್ಲ. ಭಗವದ್ಭಕ್ತರೂ ಅಲ್ಲ. ಯೋಗಿಗಳೂ ಅಲ್ಲ. ಭಕ್ತಿರಸಭರಿತವಾದ ಭಾಗವತ ಪುರಾಣದ ಆದಿಯಲ್ಲಿಯೇ ಬರುವ ದ್ರೌಪದಿಯ ಪಾತ್ರಚಿತ್ರಣವು ಎಲ್ಲರೂ ಮೊದಲು ಗಮನಿಸತಕ್ಕದ್ದು.
ದ್ರೌಪದಿಯ ಐದು ಜನ ಪುತ್ರರು ನಿದ್ರಿಸುತ್ತಿದ್ದಾಗ ಅಶ್ವತ್ಠಾಮನು ಬಂದು ಅವರನ್ನು ಕೊಂದ ಕಥೆ ಎಲ್ಲರಿಗೂ ಗೊತ್ತಿದೆ. ಅಂತಹ ಪಾಪಿಯನ್ನು ಅರ್ಜುನನು ಹಿಡಿದು ತಂದು ದ್ರೌಪದಿಯ ಮುಂದೆ ನಿಲ್ಲಿಸುತ್ತಾನೆ. ಇವನು ಮಾಡಿದ ಪಾಪಕ್ಕೆ ಮತ್ತು ಅಪಕಾರಕ್ಕೆ ಅವನನ್ನು ಕೊಲ್ಲುವುದೇ ಸರಿ ಎಂದು ಗಂಡಸರು ಹೇಳುತ್ತಿರುವಾಗ ಹೆಂಗಸಾದ ದ್ರೌಪದಿ ಅವನ ಸ್ಥಿತಿಯನ್ನು ನೋಡಿ ದಯಾಮಯಳಾದ ಸನ್ನಿವೇಶವು ಧರ್ಮಗ್ರಂಥಗಳಲ್ಲಿಯೇ ಮೇಲ್ಪಂಕ್ತಿಯಾಗಿರುತ್ತದೆ. ತನ್ನ ಮಕ್ಕಳನ್ನು ಕಳೆದುಕೊಂಡು ತಾನು ದುಃಖಿಸುತ್ತಿದ್ದರೂ, ಅವರನ್ನು ಅನ್ಯಾಯದಿಂದ ಕೊಂದ ಪಾಪಿಯು ಎದುರಿಗೆ ಬಂದು ನಿಂತಿದ್ದರೂ ದ್ರೌಪದಿಯ ಮನಸ್ಸಿನಲ್ಲಿ ಹುಟ್ಟಿದ ಭಾವವೆಂತಹುದು. ಪುತ್ರ ಶೋಕವೆಂದರೆ ಭರಿಸುವುದು ಎಷ್ಟು ಕಷ್ಟವೆಂಬುದು ನನಗೆ ಈಗ ಅನುಭವಕ್ಕೆ ಬಂದಿದೆ. ಈ ಅಶ್ವತ್ಥಾಮನನ್ನು ಕೊಂದರೆ ಈತನ ತಾಯಿಗೆ ಇದೇ ರೀತಿಯ ಪುತ್ರ ಶೋಕವುಂಟಾಗಿ ಆಕೆ ಆಕೆಯು ಎಷ್ಟು ಬಾಧೆ ಪಡುವಳೋ? ನನಗೆ ಗಂಡಂದಿರಾದರೂ ಬದುಕಿದ್ದಾರೆ. ಆಕೆಯ ಗಂಡನಾದ ದ್ರೋಣನೂ ಯುದ್ಧದಲ್ಲಿ ಮಡಿದ ಗಂಡನನ್ನು ಕಳೆದುಕೊಂಡು ಪರಿತಪಿಸುತ್ತಿರುವ ಕೃಪಿಗೆ ಪುತ್ರಶೋಕವು ಬೇರೆ ಉಂಟಾದರೆ ಎಷ್ಟು ಪರಿತಪಿಸುವಳೋ! ನನ್ನಂತಯೇ ಅಲ್ಲವೇ ಆಕೆಯ ಆತ್ಮವೂ ಸಹ. ಎಂಬ ದಯಾರಸಪೂರ್ಣವಾದ ಭಾವನೆಗಳು ದ್ರೌಪದಿಯ ಮನಸ್ಸಿನಲ್ಲಿ ಉದ್ಭವಿಸಿದವು. ಆಕೆಯು ಅಶ್ವತ್ಥಾಮನನ್ನು ಬಿಡಿಸಿ ಬುದ್ಧಿ ಹೇಳಿ ಕಳುಹಿಸುವಳು. ಧರ್ಮಮೂರ್ತಿಯಾದ ಧರ್ಮರಾಯನೂ ಪರಮಾತ್ಮನಾದ ಶ್ರೀಕೃಷ್ಣನು ದ್ರೌಪದಿಯ ಈ ದಯಾಗುಣವನ್ನು ಬಹಳ ಮೆಚ್ಚುವರು.
ದ್ವೇಷಾಗ್ನಿಗಳು ಹುಟ್ಟಿದಂತೆ ತಡೆಗಟ್ಟಬಲ್ಲದು ದಯಾ ಗುಣವೊಂದೇ. ಪ್ರಜ್ವಲಿಸುವ ದ್ವೇಷಾಗ್ನಿಗಳನ್ನು ತಣ್ಣಗೆ ಮಾಡುವ ಶಕ್ತಿ ದಯಾಗುಣಕ್ಕಲ್ಲದೆ ಬೇರೆ ಯಾವುದಕ್ಕೂ ಇಲ್ಲ. ದಯಾಗುಣದ ಅಮೃತ ಸ್ಪರ್ಶದಿಂದ ರಾಕ್ಷಸರನ್ನು ದೇವತೆಗಳನ್ನಾಗಿ ಬದಲಾಯಿಸಲು ಸಾಧ್ಯ. ದಯಾಗುಣಕ್ಕೆ ಹೃದಯವಿರುವ ಸಮಸ್ತ ಪ್ರಾಣಿಗಳೂ ಅಧಿಕಾರಿಗಳು. ಸ್ತ್ರೀ, ಪುರುಷ, ಜಾತಿ, ಮತ, ಮನುಷ್ಯ, ಪಶು, ಪಕ್ಷಿ, ಇತ್ಯಾದಿ ಯಾವ ಭೇದವೂ ಇಲ್ಲ. ಯಾವ ಹೃದಯದಲ್ಲಿ ದಯೆ ಎಂಬ ಅಮೃತವಿರುವುದೋ ಅದೇ ದಿವ್ಯವಾದ ಹೃದಯ.
1-3-1987
ದಯೆ
ಮಹಾಭಾರತದಲ್ಲಿ ಬರುವ ಪಾರಿವಾಳದ ಕಥೆ ಈ ವಿಷಯಕ್ಕೆ ನಿದರ್ಶನವಾಗಿದೆ. ಒಬ್ಬ ಬೇಡನು ಹಕ್ಕಿಗಳನ್ನು ಬಲೆಯಲ್ಲಿ ಹಿಡಿಯುತ್ತಿರುತ್ತಾನೆ. ಸಾಯಂಕಾಲವಾಗಿ ಕತ್ತಲು ಕವಿದಾಗ ಜೋರಾದ ಮಳೆ ಬರುತ್ತದೆ. ಅವನು ಒಂದು ದೊಡ್ಡ ಮರದ ಕೆಳಗಿನ ಬಂಡೆಯ ಮೇಲೆ ಕುಳಿತುಕೊಳ್ಳುತ್ತಾನೆ. ಎಷ್ಟು ಹೊತ್ತಾದರೂ ಮಳೆ ಬಿಡಲಿಲ್ಲ. ಚಳಿಯಿಂದ ಗಡಗಡ ನಡಗುತ್ತಿರುತ್ತಾನೆ. ಆ ಮರದ ಪೊಟರೆಯಲ್ಲಿ ಪಾರಿವಾಳ ದಂಪತಿಗಳು ವಾಸವಾಗಿರುತ್ತವೆ. ಹೆಣ್ಣು ಪಾರಿವಾಳ ಈ ಬೇಡನ ಬಲೆಯಲ್ಲಿ ಬಿದ್ದಿರುತ್ತದೆ. ಗಂಡು ಪಾರಿವಾಳ ಹೆಣ್ಣು ಪಾರಿವಾಳದ ಸ್ಥಿತಿಯನ್ನು ನೋಡಿ ಏನೂ ಮಾಡಲಾರದೆ ದುಃಖಿಸುತ್ತಿರುತ್ತದೆ. ಆಗ ಆ ಹೆಣ್ಣು ಪಾರಿವಾಳ ತನ್ನ ಗಂಡನಿಗೆ- “ ಈ ಬೇಡನು ನಮ್ಮ ಮನೆಗೆ ಬಂದಿದ್ದಾನೆ. ಚಳಿಯಿಂದ ಈತನ ಪ್ರಾಣ ಹೋಗುತ್ತಿದೆ. ಈತನನ್ನು ಕಾಪಾಡುವುದು ನಮ್ಮ ಧರ್ಮ” ಎಂದು ಹೇಳುತ್ತದೆ. ಆ ಪಕ್ಷಿಯ ಹೃದಯ ಕರಗುತ್ತದೆ. ಮಳೆ ನಿಂತ ಕೂಡಲೆ ಒಣಗಿದ ಕಡ್ಡಿಗಳನ್ನು ಆ ಬೇಡನ ಮುಂದೆ ಗುಡ್ಡೆಹಾಕಿ ಹತ್ತಿರದ ಹಳ್ಳಿಗೆ ಹಾರಿ ಹೋಗಿ ಅಲ್ಲಿ ಬೆಂಕಿಯಿದ್ದ ಕಡೆಯಿಂದ ಒಂದು ಕೊಳ್ಳಿಯನ್ನು ಕೊಕ್ಕಿನಿಂದ ತಂದು ಹಾಕಿ ತನ್ನ ರೆಕ್ಕೆಗಳನ್ನು ಬೀಸಿ ಬೆಂಕಿ ಉರಿಯುವಂತೆ ಮಾಡುತ್ತದೆ. ಅದರಿಂದ ತನ್ನ ಮೈಯನ್ನು ಬೆಚ್ಚಗೆ ಮಾಡಿಕೊಂಡ ಬೇಡನನ್ನು ಆ ಪಾರಿವಾಳ ಈಗ ಸುಖವಾಗಿದ್ದೀಯೇ ಎಂದು ಕೇಳುತ್ತದೆ. ಆತ ಹಸಿವಿನಿಂದ ಪ್ರಾಣ ಬಿಡಲಿರುವನೆಂದು ಹೇಳಿದಾಗ ಆತನ ಪ್ರಾಣವನ್ನುಳಿಸಲು ಆ ಗಂಡು ಪಾರಿವಾಳವು “ ನಾವು ಮನುಷ್ಯರಂತೆ ಧಾನ್ಯವನ್ನು ಇಟ್ಟುಕೊಂಡಿರುವರಲ್ಲ. ನನ್ನ ಶರೀರವನ್ನೇ ತಿನ್ನು” ಎಂದು ಹೇಳಿ ತಾನು ಆ ಬೆಂಕಿಯೊಳಕ್ಕೆ ಬೀಳುತ್ತದೆ. ಈ ಮಹಾತ್ಯಾಗಕ್ಕೆ ಚಕಿತನಾದ ಬೇಡನಿಗೆ ತಾನು ಪಾಪಿಯೆಂಬ ಅರಿವುಂಟಾಗುತ್ತದೆ. ಬಲೆಯಲ್ಲಿನ ಹಕ್ಕಿಗಳನ್ನೆಲ್ಲಾ ಬಿಟ್ಟುಬಿಡುತ್ತಾನೆ. ಹೆಣ್ಣು ಪಾರಿವಾಳ ಸಹಗಮನ ಮಾಡುತ್ತದೆ. ಆ ಎರಡು ಪಾರಿವಾಳಗಳನ್ನು ದೇವದೂತರು ವಿಮಾನದಲ್ಲಿ ಸ್ವರ್ಗಕ್ಕೆ ಕರೆದುಕೊಂಡು ಹೋಗುವುದನ್ನು ಬೇಡನು ನೋಡುತ್ತಾನೆ. ಆತನು ಮಹಾಪ್ರಸ್ಥಾನ ಮಾಡುತ್ತಾನೆ. ಕಾಡುಕಿಚ್ಚಿನಲ್ಲಿ ಹೊಕ್ಕಾಗ ಆತನ ಭೌತಿಕ ಶರೀರವು ಹೋಗಿ ಆತನು ದಿವ್ಯಪುರುಷನಾಗಿ ವಿಮಾನದಲ್ಲಿ ಸ್ವರ್ಗಕ್ಕೆ ಹೋಗುತ್ತಾನೆ.
1-4-1987
ದಯೆ
ಪ್ರಪಂಚದ ಎಲ್ಲಾ ದೇಶಗಳ ಧಾರ್ಮಿಕ ಸಾಹಿತ್ಯದಲ್ಲಿಯೂ ದಯಾಗುಣವನ್ನು ಬೆಳೆಸುವ ಕಥೆಗಳು, ಉಪದೇಶಗಳೂ ಸಾಕಷ್ಟಿವೆ. ದಯೆಯೆಂಬ ಬೇರಿನಿಂದಲೇ ಧರ್ಮದ ವೃಕ್ಷವು ಜೀವಿಸಿರುವುದು. ದಾನವು ಧರ್ಮವೃಕ್ಷದ ಶಾಖೆಗಳು, ಪತ್ರಗಳು, ಪುಷ್ಪಗಳು ಇರುವಂತೆ ನಾನಾ ರೀತಿಗಳಲ್ಲಿ ರಮಣೀಯನಾದ ಪುಣ್ಯ ಕರ್ಮದ ಬಾಹ್ಯ ಸ್ವರೂಪವನ್ನು ತೋರಿಸುತ್ತಿರುತ್ತದೆ. ದಮವು ಧರ್ಮವೃಕ್ಷದ ಫಲದಂತೆ ಮಧುರವೂ ಧರ್ಮಬೀಜಪ್ರದವೂ ಆಗಿರುತ್ತದೆ. ದಯೆಯು ಇಚ್ಛಾಶಕ್ತಿಗೆ ಸಂಬಂಧಿಸಿದ್ದು. ದಾನವು ಕ್ರಿಯಾಶಕ್ತಿಗೆ ಸೇರಿದ್ದು. ದಮವು ಜ್ಞಾನ ಶಕ್ತಿಗೆ ಸೇರಿದ್ದು.
ಧರ್ಮದ ಬೀಜಾಕ್ಷರಗಳ ಅರ್ಥವಾದ ದಮ, ದಾನ ಮತ್ತು ದಯೆ ಇವುಗಳನ್ನು ಕುರಿತ ಚರ್ಚೆಯನ್ನು ಇಲ್ಲಿಗೆ ಮುಗಿಸಲು ಇಚ್ಛಿಸುತ್ತೇನೆ. ಕಲಿಯುಗದಲ್ಲಿ ದಮ, ದಾನ, ದಯೆ ಎಂಬ ಈ ಮೂರು ಎಲ್ಲಿರುತ್ತಿವೆಯೋ ಅಲ್ಲಿ ಧರ್ಮವಿರುತ್ತದೆ. ಈ ಮೂರೇ ಧರ್ಮಸ್ವರೂಪ ಎಂಬ ಭಾವವನ್ನು ಶಿವತತ್ವರತ್ನಾಕರದಲ್ಲಿನ ಈ ಕೆಳಗಿನ ಶ್ಲೋಕವು ಬಹಳ ಸೊಗಸಾಗಿ ನಿರೂಪಿಸುತ್ತದೆ.
ತಪೋ ಧರ್ಮ: ಕೃತಯುಗೇ ಜ್ಞಾನಂ ತ್ರೇತಾಯುಗೇ ಸ್ಮೃತಂ!
ದ್ವಾಪರೇ ಚಾಧ್ವರಃ ಪ್ರೋಕ್ತಸ್ತಿಷ್ಯೇ ದಾನಂ ದಯಾ ದಮಃ!!
ನಮ್ಮ ಸನಾತನಧರ್ಮಸಂರಕ್ಷಣ ಸಂಸ್ಥೆಯ ಚಿಹ್ನೆಯಲ್ಲಿ ದಮ, ದಾನ ಮತ್ತು ದಯೆ ಇವುಗಳೇ ಧರ್ಮದ ಸರ್ವಸ್ವವೆಂದು ತೋರಿಸುವುದನ್ನು ಓದುಗರು ಗಮನಿಸಬೇಕಾಗಿ ವಿನಂತಿ. ಈ ಪತ್ರಿಕೆಯು ಸಹ ಈ ಉದಾತ್ತ ಧ್ಯೇಯವನ್ನಿಟ್ಟುಕೊಂಡು ಎಲ್ಲ ಧರ್ಮಗಳ ಸರ್ವಕಾಲಿಕ ಸಾರ್ವಜನೀನ ಮೂಲ ತತ್ವಗಳ ಪ್ರಚಾರದಲ್ಲಿ ತನ್ನ ಅಲ್ಪ ಸೇವೆಯನ್ನು ಸಲ್ಲಿಸುತ್ತಿರಲಿ.
ಲೋಕಾಸ್ಸಮಸ್ತಾಸ್ಸುಖಿನೋಭವಂತು