ಗಾಯತ್ರಿ
ಲೇಟ್ ಶ್ರೀ ಲಂಕಾ ಕೃಷ್ಣಮೂರ್ತಿಯವರು “ಗಾಯತ್ರಿ” ಎಂಬ ಶೀರ್ಷಿಕೆಯಲ್ಲಿ ಸರಣಿ ಲೇಖನಗಳನ್ನು “ಧರ್ಮಪ್ರಭ” ಪತ್ರಿಕೆಯಲ್ಲಿ ಬರೆದಿರುತ್ತಾರೆ. ಆ ಲೇಖನಗಳನ್ನು ಈಗ ಪ್ರಸ್ತುತ ಪಡಿಸುತ್ತಿದ್ದೇವೆ.
1
(Published in Dharmaprabha dated 1-5-1993)
ಏಪ್ರಿಲ್ ತಿಂಗಳ “ಧರ್ಮ ಪ್ರಭ” ಪತ್ರಿಕೆಯಲ್ಲಿನ “ಓದುಗರ ಪತ್ರಗಳು” ಎಂಬ ಶೀರ್ಷಿಕೆಯಲ್ಲಿ ಶ್ರೀ ಗಾಯತ್ರಿ ದೇವಿ ದೇವಸ್ಥಾನದ ಅರ್ಚಕರು ಅಪೇಕ್ಷಿಸಿದಂತೆ ನಾನು ಈ ಸಂಚಿಕೆಯಿಂದ “ಗಾಯತ್ರಿ”ಯ ವಿಷಯವಾಗಿ ನನ್ನ ಅಲ್ಪಮತಿಗೆ ತೋಚುವ ಭಾವನೆಗಳನ್ನು ಬರೆಯುತ್ತಿದ್ದೇನೆ. ಗಾಯತ್ರೀ ಮಂತ್ರವು ನಮಗೆಲ್ಲರಿಗೂ ಮೊದಲು ಬೋಧಿಸುತ್ತಿರುವ ವಿಷಯವೆಂದರೆ ನಮ್ಮೆಲ್ಲರ ಬುದ್ಧಿಯನ್ನು ಸರಿಯಾದ ಲಕ್ಷ್ಯದ ಕಡೆ ಹುರಿದುಂಬಿಸುತ್ತಿರುವುದು ಈ ಜಗತ್ತಿನ ಮೂಲ ಚೈತನ್ಯವಾದ ಪರಮಾತ್ಮ ಶಕ್ತಿ ಎಂಬುದು. ಆದುದರಿಂದ ಮೊದಲು ಆ ಪರಮಾತ್ಮ ಶಕ್ತಿಯಾದ ಗಾಯತ್ರೀ ದೇವಿಗೆ ಭಕ್ತಿ ಪೂರ್ವಕ ನಮಸ್ಕಾರ ಮಾಡಿ ನನ್ನ ಬರವಣಿಗೆಯನ್ನು ಆರಂಭಿಸುತ್ತಿದ್ದೇನೆ.
ಗಾಯತ್ರೀ ಮಂತ್ರವು ಹೀಗಿರುತ್ತದೆ.
ತತ್ ಸವಿತುರ್ವರೇಣಿಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್
ಇದರಲ್ಲಿ 8 ಅಕ್ಷರಗಳ 3 ಪಾದಗಳಿರುವುದನ್ನು ಕಾಣಬಹುದು. ಇದರಲ್ಲಿನ ಪದಗಳು ಹೀಗಿವೆ;-
ತತ್, ಸವಿತುಃ, ವರೇಣಿಯಂ,
ಭರ್ಗಃ, ದೇವಸ್ಯ, ಧೀಮಹಿ,
ಧಿಯಃ, ಯಃ, ನಃ, ಪ್ರಚೋದಯಾತ್
ಈ ಪದಗಳ ಅರ್ಥ ಹೀಗಿರುತ್ತದೆ:-
‘ತತ್’ ಎಂದರೆ ಅದು ಎಂಬ ಅರ್ಥ ರೂಢಿಯಲ್ಲಿದೆ. ಆಂಗ್ಲ ಭಾಷೆಯ ‘That’ ಎಂಬುದು ಇದಕ್ಕೆ ಸಂಬಂಧಿಸಿದೆ. ‘ಸವಿತುಃ’ ಎಂದರೆ ಸೂರ್ಯನ ಅಥವಾ ಜನಕನ ಎಂಬ ಅರ್ಥ ಬರುತ್ತದೆ. ‘ವರೇಣಿಯಂ’ ಎಂದರೆ ಆವರಿಸಿಕೊಂಡಿರುವುದು. ವರಿಸಲು ಅಂದರೆ ಅಪೇಕ್ಷಿಸಿ ನಮ್ಮದನ್ನಾಗಿಕೊಳ್ಳಲು ಯೋಗ್ಯವಾದುದು ಎಂಬ ಅರ್ಥಗಳು ಬರುತ್ತವೆ. ಭರ್ಗಃ ಎಂದರೆ ‘ಹುರಿಯುವಿಕೆ’ ಎಂದು ಅರ್ಥ. ಅಂದರೆ ಪರಿಣಾಮವನ್ನುಂಟು ಮಾಡುವುದೆಂದರ್ಥ. ದೇವಸ್ಯ ಎಂದರೆ ‘ದೇವನ’ ಎಂದು ಅರ್ಥ. ದೇವ ಶಬ್ದಕ್ಕೆ ಮುಖ್ಯವಾಗಿ ಪ್ರಕಾಶಿಸುತ್ತಿರುವನು ಮತ್ತು ಕ್ರೀಡಿಸುತ್ತಿರುವನು ಎಂಬ ಅರ್ಥಗಳಿವೆ. ‘ಧೀಮಹಿ’ ಎಂದರೆ ನಾವೆಲ್ಲರೂ ಧ್ಯಾನಿಸಬೇಕು ಎಂದು ಅರ್ಥ. ಧೀಯಃ ಎಂದರೆ ಬುದ್ಧಿಗಳನ್ನು ಎಂದು. ‘ಯಃ’ ಎಂದರೆ ಯಾವನಾದರೆ, ‘ನಃ’ ಎಂದರೆ ನಮ್ಮ. “ಪ್ರಚೋದಯಾತ್” ಎಂದರೆ ಸರಿಯಾಗಿ ನಡೆಸುವನು ಎಂಬುದಾಗಿ ಅರ್ಥಗಳಿವೆ.
ಯಾವನು ನಮ್ಮ ಬುದ್ಧಿಗಳನ್ನು ಮುಂದಕ್ಕೆ ಸರಿಯಾಗಿ ಕೊಂಡೊಯ್ಯುವನೋ ಆ ಸೂರ್ಯರೂಪಿಯು, ಜಗತ್ಪಿತನೂ ಆಗಿ ಪ್ರಕಾಶಿಸುತ್ತಿರುವ ಮತ್ತು ಕ್ರೀಡಿಸುತ್ತಿರುವವನಿಂದುಂಟಾಗುತ್ತಿರುವ ರಮಣೀಯವಾದ ಮತ್ತು ವಿಶ್ವವ್ಯಾಪ್ತವಾದ ಕ್ಷಣ ಕ್ಷಣ ಪರಿಣಾಮವನ್ನು ನಾವು ಧ್ಯಾನಿಸುತ್ತಿರಬೇಕು ಎಂಬುದು ಗಾಯತ್ರೀ ಮಂತ್ರದ ಸ್ಥೂಲವಾದ ಅರ್ಥ. ಸಂಸ್ಕೃತ ಭಾಷೆಯಲ್ಲಿ ಒಂದೊಂದು ಶಬ್ದಕ್ಕೂ ‘ವ್ಯುತೃತ್ತಿ’ ಎಂದರೆ ಆ ಶಬ್ದವು ಹೇಗೆ ಹುಟ್ಟಿದೆ ಎಂಬ ವಿಷಯದ ಜ್ಞಾನವಿರುತ್ತದೆ. ಇದು ಮಂತ್ರದ ಭಾವನೆಯಲ್ಲಿ ಬಹಳ ಉಪಕರಿಸುತ್ತದೆ. ಅಲ್ಲದೆ ಈ ಭಾಷೆಯಲ್ಲಿ ಪ್ರತಿ ಓಂದು ಪದವೂ ಹಿಂದೆ ಮುಂದೆ ಬರುವ ಇತರ ಪದಗಳ ಸಂಬಂಧವಿಲ್ಲದೆಯೇ ತನ್ನ ಉದ್ದಿಷ್ಟಾರ್ಥವನ್ನು ಕೊಡಲು ಸ್ವಯಂಪೂರ್ಣವಾಗಿರುತ್ತದೆ. ಆದುದರಿಂದ ಒಂದು ವಾಕ್ಯದಲ್ಲಿನ ಪದಗಳನ್ನು ಯಾವ ರೀತಿಯಲ್ಲಿ ಬೋಧಿಸಿದರೂ ವಾಕ್ಯದ ಅರ್ಥಕ್ಕೆ ಚ್ಯುತಿ ಬರುವುದಿಲ್ಲ. ಉದಾಹರಣೆಗೆ-
ರಾಮಃ ರಾವಣಂ ಅವಧೀತ್
ರಾಮನು ರಾವಣನನ್ನು ಕೊಂದನು.
Rama Killed Ravana
ಇಲ್ಲಿ ಸಂಸ್ಕೃತ ಮತ್ತು ಕನ್ನಡ ವಾಕ್ಯಗಳಲ್ಲಿ ಪದಗಳ ಕ್ರಮವನ್ನು ಹೇಗೆ ಬದಲಾಯಿಸಿದರೂ ಒಂದೇ ಅರ್ಥ ಬರುತ್ತದೆ. ಆದರೆ Ravana Killed Rama ಎಂದು ಬದಲಾಯಿಸಿ ಹೇಳಿದರೆ ವಿರುದ್ಧಾರ್ಥವೇ ಬರುತ್ತದೆ. ಈ ಎರಡು ಅನುಕೂಲಗಳು ಸಂಸ್ಕೃತ ಭಾಷೆಯ ವಿಶೇಷಗಳು. ಪದಗಳ ಸ್ಥಾನವನ್ನು ಬದಲಾಯಿಸಲು ಇರುವ ಈ ಅನುಕೂಲದಿಂದ ಸಂಸ್ಕೃತ ಭಾಷೆಯಲ್ಲಿ ಪದ್ಯ ರಚನೆ ಸುಲಭವಾಯಿತು. ಆದುದರಿಂದಲೇ ಈ ಭಾಷೆಯ ಸಾಹಿತ್ಯ ಹೆಚ್ಚಾಗಿ ಪದ್ಯದಲ್ಲಿರುವುದು ಮತ್ತು ನಾನಾ ರೀತಿಯ ವೃತ್ತಗಳ ವಿಲಾಸದಿಂದ ಶೋಭಿಸುತ್ತಿರುವುದು. ಈ ಅನುಕೂಲವನ್ನು ವೇದ ಮಂತ್ರಗಳು ಸಹ ಉಪಯೋಗಿಸಿಕೊಂಡು ಮಂತ್ರದ ವಾಕ್ಯದಲ್ಲಿನ ಶಬ್ದಗಳ ಕ್ರಮವನ್ನು ತಮಗೆ ಇಷ್ಟಬಂದಂತೆ ಮಾಡಿಕೊಳ್ಳುತ್ತಾರೆ. ಆದರೆ ಒಂದು ಸಲ ಮಂತ್ರದಲ್ಲಿ ಪದಗಳ ಸ್ಥಾನವನ್ನು ನಿಗದಿ ಮಾಡಿದ ಮೇಲೆ ಆ ಸ್ಥಾನಗಳನ್ನು ಬದಲಾಯಿಸುವ ಹಾಗಿಲ್ಲ. ಇದಕ್ಕೆ ಕಾರಣ ಒಂದೊಂದು ಪದಕ್ಕೆ ಕೊಟ್ಟಿರುವ ಸ್ಥಾನದಲ್ಲಿ ಶಿಲ್ಪವಿರುವುದೇ. ಈ ಶಿಲ್ಪವು ಕೇವಲ ಛಂದಸ್ಸಿಗಾಗಿರುವುದಿಲ್ಲ. ಶಿಲ್ಪದಿಂದ ಧ್ವನಿ ರೂಪವಾದ ನಾನಾ ಭಾವಗಳನ್ನು ಸಾಧಿಸುವುದೇ ಇದರ ಉದ್ದೇಶ. ಮಂತ್ರವೆಂದರೆ ಜಪ ಮಾಡಲು ಯೋಗ್ಯವಾದುದೆಂಬ ವಿಷಯವು ಎಲ್ಲರಿಗೂ ತಿಳಿದೇ ಇದೆ. ಜಪ ಮಾಡುವುದರಿಂದ ಮಂತ್ರದ ಭಾವನೆಯು ಧೃಢವಾಗುವುದಲ್ಲದೆ ಅದರಲ್ಲಿನ ಶಬ್ದಗಳ ವ್ಯತೃತ್ತಿಯ ಮೇಲೂ, ಶಬ್ದಸ್ಥಾನಗಳ ಶಿಲ್ಪದ ಮೇಲೂ ಮನಸ್ಸನ್ನಿಟ್ಟು ಆಲೋಚಿಸುತ್ತ ಹೋದರೆ ಅನೇಕ ಉತ್ತಮ ಭಾವಗಳು ಧ್ವನಿ ರೂಪದಲ್ಲಿ ಸ್ಫುರಿಸುತ್ತಲೆ ಇರುತ್ತವೆ.
ಈ ಹಿನ್ನೆಲೆಯಲ್ಲಿ ಗಾಯತ್ರಿ ಮಂತ್ರದ ಸಮಗ್ರವಾದ ಅರ್ಥವನ್ನು ವಿಚಾರಿಸೋಣ.
2
(Published in Dharmaprabha dated 1-6-1993)
ಗಾಯತ್ರಿ ಮಂತ್ರದಲ್ಲಿನ ಪ್ರತಿ ಒಂದು ಪದದ ಅರ್ಥವನ್ನು ಮೊದಲು ತಿಳಿದುಕೊಳ್ಳಬೇಕು. ಈ ಸಂದರ್ಭದಲ್ಲಿ ಆಯಾ ಪದಗಳ ವ್ಯುತ್ಪತ್ತಿಯನ್ನು ಸಹ ಗಮನಿಸಬೇಕು. ಈ ವ್ಯುತ್ಪತ್ತಿಯಿಂದ ಮಂತ್ರವನ್ನು ಮೇಲಿಂದ ಮೇಲೆ ಧ್ಯಾನಿಸುತ್ತಿದ್ದರೆ ಧ್ವನಿರೂಪದಲ್ಲಿ ನವನವವಾಗಿ ಅನೇಕ ಉತ್ತಮ ಭಾವನೆಗಳು ಸ್ಫುರಿಸುತ್ತವೆ. ಪದಗಳ ಜೋಡಣೆ ಅಥವಾ ಶಿಲ್ಪದಿಂದಲೂ ಧ್ವನಿರೂಪವಾಗಿ ಅನೇಕ ಉತ್ತಮ ಭಾವನೆಗಳು ಸ್ಫುರಿಸುತ್ತವೆ. ಈ ರೀತಿಯಾದ ಪ್ರಯತ್ನವನ್ನು ನನ್ನ ಅಲ್ಪಮತಿಗೆ ಸಾಧ್ಯವಾದಷ್ಟು ಮತ್ತು ಈ ಪತ್ರಿಕೆಯ ಗಾತ್ರವನ್ನು ಗಮನದಲ್ಲಿತ್ತುಕೊಂಡು ಸೂಚನಾಪ್ರಾಯವಾಗಿ ಮಾಡುತ್ತಿದ್ದೇನೆ.
ಗಾಯತ್ರಿಯ ಶಿಲ್ಪದಲ್ಲಿ ಮೂರು ಪಾದಗಳಿವೆ. ಇವಲ್ಲದೆ “ಪರೋರಜಸಿ ಸಾವದೋಂ” ಎಂಬ ನಾಲ್ಕನೇ ಪಾದವೊಂದಿದೆ. ಅದನ್ನು ಸನ್ಯಾಸಿಗಳು ಮಾತ್ರ ಜಪಿಸುತ್ತಾರೆ. ಪ್ರಕೃತ ನಾನು ಮೂರು ಪಾದಗಳ ಗಾಯತ್ರೀ ಮಂತ್ರದ ವಿಷಯವಾಗಿ ಮಾತ್ರ ವಿವರಿಸಲು ಪ್ರಯತ್ನಿಸುತ್ತೇನೆ. ಗಾಯತ್ರಿಯ ಮೂರು ಪಾದಗಳ ವಿಷಯವಾಗಿ ಮನುಸ್ಮೃತಿಯು ಋಗ್ಯಜುಸ್ಸಾಮಗಳೆಂಬ ಮೂರು ವೇದಗಳಿಂದ ಗಾಯತ್ರಿಯ ಮೂರು ಪಾದಗಳು ಸಾರಭೂತವಾಗಿ ತೆಗೆಯಲ್ಪಟ್ಟಿವೆ ಎಂದು ತಿಳಿಸುತ್ತದೆ. ಹಾಗೆಯೇ ಭೂಃ, ಭುವಃ, ಸ್ವಃ ಎಂಬ ಮೂರು ವ್ಯಾಹೃತಿಗಳೂ ಮತ್ತು ‘ಓಂ’ ಕಾರದಲ್ಲಿನ ಅಕಾರ ಉಕಾರ ಮಕಾರಗಳೂ ಹೀಗೆಯೇ ಬಂದಿವೆಯೆಂದು ತಿಳಿಸುತ್ತದೆ. “ಓಂ ಭೂರ್ಭುವಸ್ಸ್ವಃ ತತ್ಸ ವಿತುರ್ವರೇಣಿಯಂ ಭರ್ಗೋ ದೇವಸ್ಯ ಧೀಮ ಹಿ ಧಿಯೋಯೋ ನಃ ಪ್ರಚೋದಯಾತ್” ಎಂಬುದು ಜಪ ಮಾಡಬೇಕಾದ ಗಾಯತ್ರೀ ಮಂತ್ರದ ಸ್ವರೂಪ. ಇದು ಬ್ರಹ್ಮನ ಮುಖ ಅಂದರೆ ಪರಬ್ರಹ್ಮ ತತ್ವವನ್ನು ಅರಿಯಲು ದ್ವಾರವೆಂದು ಮನುಸ್ಮೃತಿಯು ತಿಳೀಸುತ್ತಿದೆ. ಇದು ಹೇಗೆಂದು ವಿಚಾರಿಸೋಣ.
ವೇದಗಳಲ್ಲಿ ಪರಮಾತ್ಮನನ್ನು ಬ್ರಹ್ಮವೆಂದು ಕರೆದಿದ್ದಾರೆ. ಅಲ್ಲದೆ ಈ ಬ್ರಹ್ಮ ಶಬ್ದಕ್ಕೆ “ವೇದ”ವೆಂಬ ಅರ್ಥವೂ ಇದೆ. ವೇದವೆಂದರೆ ಜ್ಞಾನ. ಬ್ರಹ್ಮವೆಂಬ ಶಬ್ದವು “ಬೃಂಹ್” ಎಂಬ ಧಾತುವಿನಿಂದ ಬಂದಿದೆ. ಇದಕ್ಕೆ ದೊಡ್ಡದಾಗಿ ಬೆಳೆದಿರುವುದು ಎಂದು ಮೂಲವಾದ ಅರ್ಥ. ಈ ವಿಶ್ವವೇ ಬ್ರಹ್ಮ. ವಿಶ್ವದಲ್ಲಿ ಭಿನ್ನ ಭಿನ್ನ ವಸ್ತುಗಳಿದ್ದರೂ ಅವೆಲ್ಲವೂ ಮೂಲಭೂತವಾದ ಒಂದೇ ತತ್ವದ ಬೆಳವಣಿಗೆಯಲ್ಲಿನ ಸ್ವರೂಪಗಳು. ಆ ಮೂಲತತ್ವವು ಈ ವಿಶ್ವಕ್ಕೆ ನಿರ್ಮಾಣ ಶಕ್ತಿಯಾಗಿ ಮಾತ್ರವಿಲ್ಲ. ಮಡಿಕೆಗೆ ಮಣ್ಣು ಹೇಗೆಯೋ ಹಾಗೆ ವಿಶ್ವವೆಲ್ಲವೂ ತಾನೇ ಆಗಿರುವುದು ಈ ಮೂಲತತ್ವ. ಇಂತಹ ತಾನೇ ಬೆಳೆದು ನಾನಾ ರೂಪವಾದ ವಿಶ್ವವಾಗಿ ಕೊನೆಗೆ ತನ್ನಲ್ಲೇ ಲೀನ ಮಾಡಿಸಿಕೊಳ್ಳುವ ಕೇವಲ ಚೈತನ್ಯರೂಪನಾದ ತತ್ವವು ಯಾವುದಿದೆಯೋ ಅದೇ ಬ್ರಹ್ಮ. ಅಂತಹ ಬ್ರಹ್ಮನನ್ನು ತಿಳಿಸುವುದರಿಂದ ವೇದಗಳು ಬ್ರಹ್ಮ. ವೇದಗಳ ಸಾರಾಭೂತವಾದ ಗಾಯತ್ರಿ ಮಂತ್ರವು ಬ್ರಹ್ಮಸ್ವರೂಪವೇ ಆಗಿದೆ.
ಆಟಂಬಾಂಬನ್ನು ತಯಾರಿಸಿರುವ ಇಂದಿನ ವಿಜ್ಞಾನವು ವಿಶ್ವದಲ್ಲಿನ ಭಿನ್ನ ಭಿನ್ನ ವಸ್ತುಗಳೆಲ್ಲಾ ೯೨ ಮೂಲ ಪದಾರ್ಥಗಳಿಂದ ಬಂದಿರುವುದೆಂದು ತಿಳಿಸುವುದಲ್ಲದೆ ಇದೆಲ್ಲಾ ಒಂದೇ ಶಕ್ತಿಯ ಸ್ವರೂಪವೆಂದು ತೋರಿಸಿದೆ. ಈ ಶಕ್ತಿ ಹೇಗೆ ಬಂದಿದೆ? ಇದರ ಮೂಲ ಸ್ವರೂಪವೇನು? ಎಂಬುದು ವಿಜ್ಞಾನಿಗಳಿಗೆ ತಿಳಿದಿಲ್ಲ. ನಮ್ಮಲ್ಲಿ ಶಕ್ತಿ ಇದೆ. ಅದರಿಂದಲೇ ನಮ್ಮ ಶರೀರ ಕೆಲಸ ಮಾಡುತ್ತಿರುವುದು. ಆದರೆ ಈ ಶಕ್ತಿಗಿಂತಲೂ ಸೂಕ್ಷ್ಮವಾದ ಮನಸ್ಸೆಂಬುದು ಸಹ ಇದೆ. ಇದಕ್ಕೇ ‘ಚಿತ್’ ಎಂದು ಹೆಸರು. ವಸ್ತು ಮತ್ತು ಶಕ್ತಿ “ಸತ್” ಎನಿಸಿಕೊಳ್ಳುತ್ತದೆ. ಈ ‘ಚಿತ್’ ಎಂಬುದು ‘ಸತ್’ ನ ಸ್ವರೂಪವನ್ನು ನಿರ್ಣಯಿಸುತ್ತ ವಿಶ್ವ ವ್ಯಾಪಾರವನ್ನು ನಡೆಸುತ್ತಿರುತ್ತದೆ. ಇದಕ್ಕೆ ಪ್ರೇರಣೆಯಾಗಿ ಆನಂದವಿರುತ್ತದೆ. ಆನಂದಕ್ಕಾಗಿಯೇ ನಮ್ಮ ಮನಸ್ಸು ಹಾತೊರೆಯುತ್ತಾ ಕೆಲಸ ಮಾಡುತ್ತಿರುವುದು. ಅದಕ್ಕನುಗುಣವಾಗಿಯೆ ಜಡವಾದ ದೇಹದಲ್ಲಿ ಪ್ರಾಣಶಕ್ತಿಯು ಕೆಲಸ ಮಾಡುತ್ತಿರುವುದು. ವಿಶ್ವ ವ್ಯಾಪಾರವೂ ಹೀಗೆಯೇ. ಈ ಆನಂದಕ್ಕೂ ಮೂಲಭೂತವಾಗಿರುವುದು ಆತ್ಮ. ವಿಶ್ವಕ್ಕೂ ಆತ್ಮವಿದೆ. ಅದೇ ಪರಮಾತ್ಮ. ಆ ಪರಮಾತ್ಮನಿಂದಲೇ ಚರಾಚರವಾದ ವಿಶ್ವವು ಉಧ್ಭವಿಸಿ ನಾಟಕವನ್ನಾಡಿ ಅವನಲ್ಲಿಯೇ ಲೀನವಾಗುತ್ತಿದೆ. ಇದು ಆತನ ಆಟ. ಲೀಲೆ. “ “ಬ್ರಹ್ಮ” ಶಬ್ದದಲ್ಲಿ ಇಷ್ಟು ಭಾವಗಳು ಅಡಗಿವೆ. ವೇದಗಳೂ ಮತ್ತು ಅವುಗಳ ಸಾರವಾದ ಗಾಯತ್ರಿಯು ಈ ಬ್ರಹ್ಮ ಸಂಬಂಧವಾದ ಜ್ಞಾನವನ್ನು ಹೇಗೆ ಕೊಡುತ್ತಿದೆ ಎಂಬುದನ್ನು ಮುಂದೆ ಗಮನಿಸೋಣ.
3
(Published in Dharmaprabha dated 1-7-1993)
ಪರಮಾತ್ಮ, ಆತನ ಅಂಶಗಳಾದ ಜೀವಾತ್ಮರು, ಪರಮಾತ್ಮನ ಮೂಲ ಸ್ವರೂಪವಾದ ಆನಂದ, ಜೀವಾತ್ಮರು ನಿರಂತರ ಬಯಸುತ್ತಿರುವ ಆನಂದದ ನಾನಾ ಛಾಯೆಗಳು, ಪರಮಾತ್ಮನ ಲೀಲೆಯಾದ ಸೃಷ್ಟಿಸ್ಥಿತಿಲಯಾತ್ಮಕವಾದ ವಿಶ್ವವ್ಯಾಪಾರ, ಇದಕ್ಕಾಗಿ ಚಿತ್ತಿನ ನಾನಾ ರೂಪಗಳು, ಈ ನಾನಾತತ್ವಕ್ಕಾಗಿ ಕತ್ತಲೆ, ಬೆಳಕು, ಸುಖ ದುಃಖ ದ್ವಂದ್ವಗಳು, ಸತ್ವ, ರಜಸ್ತಮೋಗುಣಗಳು, ಈ ಲೀಲೆಗೆ ಬೇಕಾಗಿರುವ ಶಕ್ತಿಯ ನಾನಾ ರೂಪಗಳು, ನಾನಾ ರೀತಿಯ ವಸ್ತುಗಳು, ಈ ರೀತಿಯಾಗಿರುವ ಬ್ರಹ್ಮ ತತ್ವವನ್ನು ಗಾಯತ್ರೀ ಮಂತ್ರವು ಅದರಲ್ಲಿನ ಪದಗಳ ವಾಚ್ಯಾರ್ಥ, ಲಕ್ಷ್ಯಾರ್ಥ ವ್ಯಂಗ್ಯಾರ್ಥಗಳಿಂದ ತೋರಿಸುತ್ತಿದೆ. ಅಲ್ಲದೆ ಪದಗಳ ಜೋಡಣೆಯಲ್ಲಿನ ಶಿಲ್ಪದಿಂದಲೂ ಅನೇಕ ವ್ಯಂಗ್ಯರ್ಥಗಳನ್ನು ಕೊಡುತ್ತ ತತ್ವವನ್ನು ಸಾರುತ್ತಿದೆ. ಇದನ್ನು ಪರಿಶೀಲಿಸಲು ಒಂದು, ಎರಡು, ಮೂರು, ನಾಲ್ಕು, ಐದು, ಆರು ಇತ್ಯಾದಿ ಸಂಖ್ಯೆಗಳಿಂದ ಪ್ರಸಿದ್ಧವಾದ ವಿಶ್ವದ ಅಂಶಗಳನ್ನು ಮುಂದಿಟ್ಟುಕೊಳ್ಳಬೇಕು. ಉದಾಹರಣೆಗೆ :
ಪರಮಾತ್ಮನು ಒಬ್ಬನೇ. ಪರಮ ಸತ್ಯವು ಒಂದೇ. ಅಲ್ಪ ಸತ್ಯಗಳು ನಾನಾ ವಿಧ. ಆ ಪರಮಾತ್ಮನೇ ಪ್ರಕೃತಿ, ಪುರುಷ ಎಂಬ ಎರಡು ಭೇದಗಳಲ್ಲಿದ್ದಾನೆ. ಭೌತಿಕ ಪ್ರಪಂಚದಲ್ಲಿ ಋಣಾತ್ಮಕ ಮತ್ತು ಧನಾತ್ಮಕಗಳು ಆಕರ್ಷಣ, ವಿಕರ್ಷಣಗಳು, ಬೆಳಕು, ಕತ್ತಲೆ, ಸುಖ, ದುಃಖ, ಗಂಡಸು, ಹೆಂಗಸು, ಇತ್ಯಾದಿ ಎರಡೆರಡು ಭೇದಗಳು ಸಹ ಇವೆ.
ನನಗೆ ತೋಚಿದ ಪ್ರಸಿದ್ಧವಾದ ಮೂರು ಮೂರು ಭೇದಗಳ ಪಟ್ಟಿ ಹೀಗಿರುತ್ತದೆ:-
ಅ. ದೇಶ ಸಂಬಂಧವಾದವು-
೧) ಭೂಲೋಕ, ಭುವರ್ಲೋಕ, ಸುವರ್ಲೋಕ.
೨) ಊರ್ಧ್ವಲೋಕ, ಮಧ್ಯಲೋಕ, ಅಧೋಲೋಕ.
೩) ಅಂಡ, ಪಿಂಡ, ಬ್ರಂಹಾಂಡಗಳು.
೪) ಆದಿ, ಮಧ್ಯ, ಅಂತಗಳು.
ಆ. ಕಾಲ ಸಂಬಂಧವಾದವು-
೫) ಭೂತ, ವರ್ತಮಾನ, ಭವಿಷ್ಯ.
೬) ಹ್ರಸ್ವ, ದೀರ್ಘ, ಪ್ಲುತ ಸ್ವರಗಳು.
೭) ಪ್ರಾತಃಕಾಲ, ಮಧ್ಯಾಹ್ನ, ಸಾಯಂಕಾಲ.
ಇ. ವಸ್ತುಗಳು-
೮) ಸೂರ್ಯ, ಚಂದ್ರ, ಅಗ್ನಿ.
೯) ಸತ್ತು, ಚಿತ್ತು ಮತ್ತು ಆನಂದ.
೧೦) ಅಲೆಯಲ್ಲಿನ ಮೇಲಕ್ಕೇರುವ ಭಾಗ, ಎತ್ತರದಲ್ಲಿರುವ ಮಧ್ಯ ಭಾಗ ಮತ್ತು ಇಳಿಮುಖವಾಗುವ ಭಾಗ.
೧೧) ಜಡ ವಸ್ತುಗಳು, ಜೀವಿಗಳು, ಬುದ್ಧಿವಂತ ಜೀವಿಗಳು.
೧೨) ಜ್ಞಾನ, ಜ್ಞಾತೃ, ಜ್ಞೇಯ.
೧೩) ಇಡಾ, ಪಿಂಗಳಾ, ಸುಷುಮ್ನಾ ನಾಡಿಗಳು.
೧೪) ಋಗ್ವೇದ, ಯಜುರ್ವೇದ, ಸಾಮವೇದ.
ಈ. ಗುಣಗಳು ಅಥವಾ ಅವಸ್ಥೆಗಳು-
೧೫) ಸತ್ವ, ರಜಸ್ಸು, ತಮಸ್ಸು.
೧೬) ಜಾಗ್ರತ್, ಸ್ವಪ್ನ, ಸುಷುಪ್ತಿ.
೧೭) ಉದಾತ್ತ, ಅನುದಾತ್ತ, ಸ್ವರಿತ.
೧೮) ವಾಚ್ಯಾರ್ಥ, ಲಕ್ಷ್ಯಾರ್ಥ, ವ್ಯಂಗ್ಯಾರ್ಥ.
೧೯) ನೀಲಿ, ಕೆಂಪು, ಹಳದಿ.
೨೦) ಸತ್ಯಂ, ಶಿವ, ಸುಂದರಂ.
೨೧) ವಾತ, ಪಿತ್ತ, ಸ್ಲೇಷ್ಮಗಳು.
೨೨) ಉತ್ತಮ, ಮಧ್ಯಮ, ಅಧಮ.
೨೩) ದೇವ, ಮನುಷ್ಯ, ಅಸುರ.
೨೪) ಭಕ್ತಿ, ಜ್ಞಾನ, ವೈರಾಗ್ಯ.
ಉ. ಕ್ರಿಯೆಗಳು-
೨೫) ಸೃಷ್ಟಿ, ಸ್ಥಿತಿ, ಲಯ.
೨೬) ದಮ, ದಾನ, ದಯೆ.
ಊ. ಕರ್ತೃಗಳು-
೨೭) ಪ್ರಕೃತಿ, ಜೀವ, ಈಶ್ವರ.
೨೮) ಬ್ರಹ್ಮ, ವಿಷ್ಣು, ರುದ್ರ.
ಋ. ಕರ್ಣಗಳು-
೨೯) ಮನಸ್ಸು, ವಾಕ್ಕು, ಕಾಯ.
೩೦) ಯಂತ್ರ, ತಂತ್ರ, ಮಂತ್ರ.
ನಾಲ್ಕು ವಸ್ತುಗಳಾಗಿ ಪ್ರಸಿದ್ಧವಾದವುಗಳು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಪುರುಷಾರ್ಥಗಳು ಇತ್ಯಾದಿಗಳು.
ಐದು ರೂಪಗಳಲ್ಲಿರುವುವು ಪಂಚ ಭೂತಗಳು, ಪಂಚ ಕೋಶಗಳು ಇತ್ಯಾದಿಗಳು.
ಆರು ಸಂಖ್ಯೆಯಲ್ಲಿರುವುವು ಕಾಮ ಕ್ರೋಧಾದಿಗಳು, ಷಟ್ಚಕ್ರಗಳು ಇತ್ಯಾದಿಗಳು.
ಏಳಕ್ಕೆ ಸಪ್ತ ಧಾತುಗಳು ಮುಂತಾದುವು ಉದಾಹರಣೆಗಳು.
ಮೊದಲು ಗಾಯತ್ರೀ ಮಂತ್ರದಲ್ಲಿ ಏಕ ಸಂಖ್ಯೆಯ ವಿಷಯವನ್ನು ಕುರಿತು ವಿಚಾರಿಸೋಣ. ಈ ಮಂತ್ರದ ಮೊದಲನೇ ಪದವಾದ ‘ತತ್’ ಎಂಬುದನ್ನು ಇಲ್ಲಿ ನಾವು ಗಮನಿಸಬೇಕು. ಇದು ನಪುಂಸಕಲಿಂಗದಲ್ಲಿರುವುದರಿಂದ ‘ಸ್ತ್ರೀ, ಪುಂ’ ಎಂಬ ಎರಡು ಭೇದಗಳಿಗೆ ಅವಕಾಶವಿಲ್ಲ. ಈ ಮಂತ್ರದಲ್ಲಿನ ವಾಕ್ಯದಲ್ಲಿ ಬೇರೆ ಪದಗಳಿಗೂ ಇದಕ್ಕೂ ಸಂಬಂಧ ಮಾಡಲು ಸಾಧ್ಯತೆ ಇದ್ದರೂ ಮಾಡಲೇ ಬೇಕೆಂದಿಲ್ಲ. ಇದನ್ನೇ ಪ್ರತ್ಯೇಕವಾಗಿ ತೆಗೆದುಕೊಂಡು ಪರಮಾತ್ಮನು ಪರಮ ಸತ್ಯವು ಎಂಬ ಭಾವವನ್ನು ಇದರಿಂದ ಪಡೆಯಬಹುದು. ಕಾರಣ ಸಂಸ್ಕೃತ ಭಾಷೆಯಲ್ಲಿ ‘ತತ್’ ಎಂಬ ಶಬ್ಡವು ಪ್ರಾಚೀನ ಕಾಲದಲ್ಲಿ ಪರೋಕ್ಷವಾಗಿರುವುದನ್ನು ಸೂಚಿಸುತ್ತಿತ್ತು. ಪ್ರತ್ಯಕ್ಷವಾಗಿ, ದೂರದಲ್ಲಿರುವವನಿಗೆ “ ಅಸೌ” ಎಂದು ಹೇಳುತ್ತಿದ್ದರು. ‘ ಅಸಾವಾದಿತ್ಯೋ ಬ್ರಹ್ಮ’ ಎಂದರೆ ದೂರದಲ್ಲಿರುವ ಆ ಸೂರ್ಯನು ಬ್ರಹ್ಮನು ಎಂದರ್ಥ. ಆದುದರಿಂದ ತಚ್ಛಬ್ದವು ಪರೋಕ್ಷದಲ್ಲಿರುವ ವಿಶ್ವ ಮೂಲವಾದ ಪರಮಾತ್ಮನ ಅಥವಾ ಏಕೈಕ ಪರಮಸತ್ಯದ ಪ್ರತೀಕವಾಗಿದೆ.
ಯೋಗ ಯಾಜ್ಞವಲ್ಕ್ಯದಲ್ಲಿ ಮುಂದಿನಂತೆ ವಿವರಣೆ ಇರುತ್ತದೆ:-
ತಚ್ಛಬ್ದೇನತು ಯಚ್ಛಬ್ದೋ ಬೋದ್ಧವ್ಯಃ ಸತತಂ ಬುಧೈಃ
ಉದಾಹೃತೇತು ಯಚ್ಛಬ್ದೇ ತಚ್ಛಬ್ದಃ ಸ್ಯಾದುದಾಹೃತಃ
ಗಾಯತ್ರೀ ಮಂತ್ರದಲ್ಲಿ ಮೂರನೇ ಪಾದದಲ್ಲಿ “ಯಃ” ಎಂಬ ಶಬ್ದವೂ ಪ್ರಾರಂಭದ ತತ್ಛಬ್ದವೂ ಒಂದೇ ಇದರ ಭಾವ. ನಮ್ಮ ಬುದ್ಧಿಯನ್ನು ಮುಂದೆ ಕೊಂಡೊಯ್ಯುವ ಪರಮ ಸತ್ಯದ ಸ್ವರೂಪವೇ ಈ ಎರಡು ಶಬ್ದಗಳಿಂದಲೂ ಸೂಚಿಸಲ್ಪಟ್ಟಿರುವುದು.
ಅಲ್ಲದೆ ಭಗವದ್ಗೀತೆಯಲ್ಲಿಯೂ ಓಂ ತತ್ಸದ್ ಇತಿ ನಿರ್ದೇಶಃ ತ್ರಿವಿಧೋ ಬ್ರಹ್ಮಣಃ ಸ್ಮೃತಃ ಎಂದು ಹೇಳಿರುವುದರಿಂದ ‘ ಓಂ’ಕಾರವು ಹೇಗೆ ಪರಬ್ರಹ್ಮ ನಿರ್ದೇಶಕವೋ “ತತ್” ಶಬ್ದವೂ ಹಾಗೆಯೇ.
4
(Published in Dharmaprabha dated 1-8-1993)
‘ತತ್’ ಶಬ್ದವು ಗಾಯತ್ರೀ ಮಂತ್ರದ ಪ್ರಾರಂಭದಲ್ಲಿದ್ದು ಪರೋಕ್ಷವಾದ, ವಿಶ್ವಮೂಲವಾದ, ಪರಮಸತ್ಯವಾದ, ಏಕೈಕವಾದ ಪರಮಾತ್ಮನನ್ನು ಸೂಚಿಸುತ್ತಿದ್ದರೂ ನಾನಾತ್ವದಿಂದ ಶೋಭಿಸುತ್ತಿರುವ ದೃಶ್ಯ ವಿಶ್ವವೂ ಸಹ ಆಗಿರುತ್ತದೆ ಎಂಬ ಭಾವವನ್ನು ಪೂರ್ತಿ ಮಂತ್ರದ ಮೊದಲನೆಯ ಮತ್ತು ಕೊನೆಯ ಅಕ್ಷರಗಳು ಶಿಲ್ಪದಿಂದ ಬರುವ ಧ್ವನಿಯ ರೂಪದಲ್ಲಿ ತೋರಿಸುತ್ತಿವೆ. ಮೊದಲನೆಯ “ತ” ಎಂಬ ಅಕ್ಷರವನ್ನು “ಪ್ರಚೋದಯಾತ್” ಎಂಬ ಪದದಲ್ಲಿನ ಕೊನೆಯ ವರ್ಣ “ತ್” ಎಂಬುದನ್ನು ಸೇರಿಸಿ ಉಚ್ಛರಿಸಿದರೆ “ತತ್” ಎಂಬ ಪದವೇ ಬರುತ್ತದೆ. ಇದರಲ್ಲಿ ಇಡೀ ವಿಶ್ವದ ಪ್ರತೀಕವಾಗಿರುವ ಪೂರ್ಣ ಗಾಯತ್ರೀ ಮಂತ್ರವು “ತತ್” ಎಂಬ ಏಕೈಕ ತತ್ವವನ್ನೇ ಸೂಚಿಸುತ್ತದೆ ಎಂಬ ಧ್ವನಿಯಿರುತ್ತದೆ.
ಆ ಒಂದೇ ವಸ್ತು ಪ್ರಕೃತಿ ಪುರುಷರ ರೂಪದಲ್ಲಿ ಎರಡಾಯಿತು. ಅದೇ ಜೀವ ಜಗತ್ತಿನಲ್ಲಿ ಪುರುಷ, ಸ್ತ್ರೀ ಎಂಬ ಎರಡು ರೂಪದಲ್ಲಿದ್ದು ಸ್ಥಿತಿಗೆ ಕಾರಣವಾಗಿರುತ್ತದೆ. ಮಕ್ಕಳು ಮೊಮ್ಮಕ್ಕಳು ಮುಂತಾದ ವಂಶದವರು ತಾವು ಮಾತಾ ಪಿತೃಗಳಿಗಾಗಿ ಸೃಷ್ಟಿಯನ್ನು ಬೆಳಸಲು ಮೂಲ ಮಾತಾಪಿತೃಗಳ ರೂಪದಲ್ಲಿದ್ದ ಆ ಒಂದೇ ವಸ್ತು ಲಯವನ್ನು ಹೊಂದಿ ಮುಂದಿನ ಸೃಷ್ಟಿಗೆ ಎಡೆಮಾಡಿಕೊಡುತ್ತದೆ. ಈ ಸ್ತ್ರೀ ಪುರುಷ ತತ್ವಗಳು ಗಾಯತ್ರೀ ಮಂತ್ರದಲ್ಲಿ ಮೊದಲು ನಮಗೆ ಕಾಣಿಸುವುದು ವಾಕ್ಕು ಮತ್ತು ಅರ್ಥದ ರೂಪದಲ್ಲಿ. ಕಾಳಿದಾಸ ಮಹಾಕವಿಯು
ವಾಗರ್ಥಾವಿವ ಸಂಪ್ಕೃಕ್ತೌ ವಾಗರ್ಥ ಪ್ರತಿಪತ್ತಯೇ!
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ!!
ಎಂದು ಹೇಳುತ್ತಾನೆ. ವಾಕ್ಕು ಜಗತ್ತಿಗೆ ತಾಯಿ. ಅರ್ಥವು ತಂದೆ. ವಾಕ್ಕು ಪರ್ವತ ಪುತ್ರಿಗೆ ಎಂದರೆ ಪ್ರಕೃತಿಗೆ ಪ್ರತೀಕವಾಗಿರುವುದು. ಅರ್ಥವು ಪರಮೇಶ್ವರ ಎಂದರೆ ಪುರುಷನಿಗೆ ಪ್ರತೀಕವಾಗಿರುವುದು. “ಧಿಯಃ ಯಃ” ಎಂಬಲ್ಲಿ ಧೀ ಶಬ್ದವು ಸ್ತ್ರೀ ಲಿಂಗದಲ್ಲಿದೆ. ಯಃ ಎಂಬುದು ಪುಲ್ಲಿಂಗದಲ್ಲಿದೆ. “ಧಿಯಃ” ಎಂಬುದನ್ನು ಷಷ್ಠೀ ವಿಭಕ್ತಿಯ ಏಕವಚನದ ರೂಪವಾಗಿ ಭಾವಿಸಿದರೆ “ಧಿಯಃ ಯಃ” ಎಂಬ ಮಾತಿಗೆ ಬುದ್ಧಿಗೆ ಸಂಬಂಧಿಸಿದವನು ಎಂಬ ಅರ್ಥ ಬರುತ್ತದೆ. ಅವನನ್ನು ಪ್ರತ್ಯೇಕವಾಗಿ ನಿರ್ದೇಶನ ಮಾಡಿರುವುದರಿಂದ ಬುದ್ಧಿಯಿಂದ ಊಹಿಸಿಕೊಳ್ಳತಕ್ಕ ಪರಮ ಸತ್ಯಸ್ವರೂಪನು ಎಂಬ ಭಾವವು ಬರುತ್ತದೆ. ಆದುದರಿಂದ ಸ್ತ್ರೀ ಪುರುಷರ ಮತ್ತು ಪ್ರಕೃತಿ ಪುರುಷರ ತತ್ವಗಳು ಇಲ್ಲಿ ಗೋಚರಿಸುತ್ತಿವೆ. “ ನಃ” ಅಂದರೆ ನಮ್ಮನ್ನು ಎಂಬ ಅರ್ಥವನ್ನು ತೆಗೆದುಕೊಂಡರೆ ಒಟ್ಟಿಗೆ ಬುದ್ಧಿಯಿಂದ ಮಾತ್ರ ಊಹಿಸಿಕೊಳ್ಳಲು ಸಾಧ್ಯವಾದ ಪರಮಾತ್ಮನು ನಮ್ಮನ್ನು ಉತ್ತಮ ಧ್ಯೇಯದ ಕಡೆ ಪ್ರಚೋದಿಸಲಿ ಎಂಬ ಅರ್ಥವು ಮೂರನೆಯ ಪಾದಕ್ಕೆ ಬರುತ್ತದೆ. ನಃ ಎಂಬುದು ಪುಲ್ಲಿಂಗ ಸ್ತ್ರೀಲಿಂಗ ಎರಡರಲ್ಲಿಯೂ ಇರುವ ಶಬ್ದ. ಆದುದರಿಂದ ಬುದ್ಧಿ ಮತ್ತು ಆತ್ಮವೆಂಬ ತಾಯಿತಂದೆಯರ ಮಕ್ಕಳೇ “ನಾವು” ಎಂಬ ವ್ಯವಹಾರದಲ್ಲಿರುವ ಜೀವಾತ್ಮರು ಎಂಬ ಭಾವವೂ ಸಹ ಇಲ್ಲಿ ಸ್ಫುರಿಸುತ್ತದೆ.
ಗಾಯತ್ರೀ ಮಂತ್ರದ ಮಾಮೂಲು ಅರ್ಥದಲ್ಲಿ ಪುಂಲಿಂಗದ ಶಬ್ದಗಳಿಂದ ಸೂಚಿಸಲ್ಪಡುವ ಪರಮಾತ್ಮನೇ ಭಾಸಿಸುತ್ತಿದ್ದಾನೆ. “ ಸವಿತೃ” ಶಬ್ದದಲ್ಲಿ ಸೂರ್ಯ ಮತ್ತು ತಂದೆ ಎಂಬ ಅರ್ಥಗಳು ಮಾತ್ರ ಗೋಚರಿಸುತ್ತಿವೆ. “ದೇವಸ್ಯ” ಎಂಬುದೂ “ಯಃ” ಎಂಬುದೂ ಪುಂಲಿಂಗ ಶಬ್ದಗಳು. ಆದರೆ ಮಂತ್ರಕ್ಕೆ “ಗಾಯತ್ರೀ” ಎಂಬ ಸ್ತೀ ಲಿಂಗ ಶಬ್ದ ರೂಢಿಗೆ ಬಂದಿದೆ. ಮಂತ್ರದ ಧ್ಯಾನ ಶ್ಲೋಕದಲ್ಲಿ ಸ್ತ್ರೀ ದೇವತಾ ಸ್ವರೂಪಿಣಿಯನ್ನಾಗಿಯೇ ಗಾಯತ್ರಿಯನ್ನು ನಾವು ಧ್ಯಾನಿಸುತ್ತೇವೆ. ಪರಮಾತ್ಮನನ್ನು ಕೆಲವರು ಪುರುಷ ರೂಪದಲ್ಲಿರುವ ದೇವತಾ ಸ್ವರೂಪದಲ್ಲಿ ಉಪಾಸನೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಸ್ತ್ರೀ ರೂಪದಲ್ಲಿ ಉಪಾಸನೆ ಮಾಡುತ್ತಿದ್ದಾರೆ. ಗಾಯತ್ರೀ ಮಂತ್ರವನ್ನು ಎರಡು ರೀತಿಯಲ್ಲಿಯೂ ಅರ್ಥೈಸಲು ಸಾಧ್ಯವಿದೆ. “ಸವಿತೃ” ಶಬ್ದವು “ತೃಚ್” ಎಂಬ ಪ್ರತ್ಯಯದಿಂದ ಬಂದಿರುವ ಶಬ್ದ. ಇಂತಹ ಶಬ್ದಗಳ ಸ್ತ್ರೀಲಿಂಗ ರೂಪ ಪಡೆಯಲು “ಈ” ಎಂಬ ಪ್ರತ್ಯಯವನ್ನು ಸೇರಿಸಬೇಕು. ಆಗ “ತಾಯೀ” ಎನ್ನಲು ಸವಿತೃ + ಈ= ಸವಿತ್ರೀ ಎಂಬ ಶಬ್ದಉಂಟಾಗುತ್ತದೆ. ಆದರೆ “ಮಾತೃ” ಶಬ್ದದಲ್ಲಿ “ತೃಚ್” ಪ್ರತ್ಯಯವಿದ್ದರೂ “ಈ” ಕಾರವು ಸೇರದೆ ಅದು ಋಕಾರಾಂತವೇ ಉಳಿದಿದೆ. ಪ್ರಚೀನ ಕಾಲದಲ್ಲಿ ಈ ಸಾಧ್ಯತೆಯೂ ಇತ್ತೆಂದು ಭಾವಿಸಿದರೆ ಅತಿ ಪ್ರಾಚೀನವಾದ ಗಾಯತ್ರೀ ಮಂತ್ರ್ದದಲ್ಲಿನ ”ಸವಿತೃ” ಶಬ್ದಕ್ಕೆ ತಾಯಿ ಎಂಬ ಅರ್ಥವನ್ನು ಮಾಡಬಹುದು. ವೈದಿಕ ಭಾಷೆಗೂ ಲೌಕಿಕ ಸಂಸ್ಕೃತಕ್ಕೂ ಇಂತಹ ಭೇದಗಳು ಅಲ್ಲಲ್ಲಿ ಕಾಣಿಸುತ್ತಲೇ ಇವೆ. ಮೂರನೇ ಪಾದದಲ್ಲಿನ “ಯೋನಃ” ಎಂಬುದನ್ನು ಯಃ+ನಃ ಎಂದು ಪದ ವಿಭಾಗ ಮಾಡಿದರೆ ಯಃ ಎಂಬುದು ಪುಂಲಿಂಗವಾಗುತ್ತದೆ. ಆದರೆ ಇಲ್ಲಿ ಯಾ+ಊ+ನಃ ಎಂದು ಪದ ವಿಭಾಗ ಮಾಡಿದರೆ ಸ್ತ್ರೀಲಿಂಗ ಶಬ್ದವು ಬರುತ್ತದೆ. ‘ಉ’ ಎಂಬ ಹೊಸ ಶಬ್ದವು ಸಿಗುತ್ತದೆ. ‘ಉ’ ಎಂದರೆ “ದಯೆಯಿಂದ” ಎಂಬ ಅರ್ಥ ಬರುತ್ತದೆ. “ತಾಯಿ” ಕರುಣಾಮಯಿ ಅಲ್ಲವೇ. ಪಾರ್ವತಿಯ ತಾಯಿಯು “ನೀನು ತಪಸ್ಸು ಮಾಡಲು ಹೋಗಬೇಡ” ಎಂದು ಹೇಳುವ ಉದ್ದೇಶದಿಂದ ಮಗಳನ್ನು “ ಉಮಾ” ಎಂದು ಕರುಣೆಯಿಂದ ಸಂಬೋಧಿಸಿದಳು. ಆದುದರಿಂದಲೇ ಪಾರ್ವತಿಗೆ “ಉಮಾ” ಎಂಬ ಹೆಸರು ಬಂತು. ಯಾ, ಉ, ನಃ ಪ್ರಚೋದಯಾತ್ ಎಂದರೆ ಕರುಣೆಯಿಂದ ನಮ್ಮ ಬುದ್ಧಿಗಳನ್ನು ತಾಯಿಯು ಸನ್ಮಾರ್ಗದಲ್ಲಿ ಮುಂದುವರಿಸಲಿ ಎಂಬ ಭಾವವು ಬರುತ್ತದೆ. “ದೇವಸ್ಯ” ಎಂಬಲ್ಲಿ “ಸವಿತುಃ ದೇವಸ್ಯ” ಎಂದರೆ “ತಾಯಿಯ ಕ್ರೀಡೆಯ” ಎಂದು ಅರ್ಥ ಮಾಡುವುದರಿಂದ ಅದು ಪರಮಾತ್ಮರೂಪಿಣಿಯಾದ ತಾಯಿಗೆ ಪುಂಲಿಂಗ ವಿಶೇಷಣವಾಗುವುದು ತಪ್ಪುತ್ತದೆ. ಹೀಗೆ ಗಾಯತ್ರೀ ಮಂತ್ರಕ್ಕೆ ಪುರುಷ ದೇವತಾ ಪರವಾಗಿಯೂ ಸ್ತ್ರೀ ದೇವತಾ ಪರವಾಗಿಯೂ ಅರ್ಥ ಹೇಳಲು ಸಾಧ್ಯವಿದೆ.
ಸೂರ್ಯನು ಭೂಮಿ ಮತ್ತು ಗ್ರಹಗಳನ್ನು ಹೊರತಳ್ಳಿದ್ದಾನೆ. ಆದರೆ ಆಕರ್ಷಣದಿಂದ ಅದನ್ನು ಹಿಡಿದಿದ್ದಾನೆ. ತನ್ನ ಕಿರಣಗಳಿಂದ ಸಮುದ್ರದ ನೀರನ್ನು ಮೇಲಕ್ಕೆತ್ತಿ ಪುನಃ ಕೆಳಕ್ಕೆ ಬೀಳುವಂತೆ ಮಾಡುತ್ತಿದ್ದಾನೆ. ತಾಯಿಯು ಮಗುವನ್ನು ಗರ್ಭದಿಂದ ಹೊರತಳ್ಳುತ್ತಾಳೆ. ಆದರೆ ಪ್ರೀತಿಯಿಂದ ಅದನ್ನು ಎತ್ತಿಕೊಂಡು ಸಲಹುತ್ತಾಳೆ. ಕವಿಯು ಭಾವಗಳಿಂದ ಸೃಷ್ಟಿ ಮಾಡುತ್ತಾನೆ. ಅದನ್ನು ರಕ್ಷಿಸಿ ಬೆಳಸುತ್ತಾನೆ. ಹೀಗೆ ವಿಕರ್ಷಣ ಮತ್ತು ಆಕರ್ಷಣಗಳು ಕೆಲಸ ಮಾಡುತ್ತಿವೆ. ಗಾಯತ್ರೀ ಮಂತ್ರದಲ್ಲಿ ‘ತತ್’ ಎಂಬ ಮೂಲ ಶಕ್ತಿಯು “ಸವಿತೃ” ಎಂದರೆ ಹೆರುವವನು ಅಥವಾ ಹೆರುವವಳು ಅಥವಾ ಸೂರ್ಯ ಈ ರೂಪಗಳಲ್ಲಿ ತನ್ನೊಳಗಿರುವುದನ್ನು ಹೊರತಂದು
‘ವರೇಣ್ಯಂ’ ಎಂದರೆ ಪ್ರೀತಿಸುತ್ತಾ ಮತ್ತು ತನ್ನೆಡೆಗೆ ಸೆಳೆಯುತ್ತಾ “ಭರ್ಗಃ” ಎಂದರೆ ಶಕ್ತಿ ರೂಪದ ಪರಿಣಾಮವನ್ನುಂಟುಮಾಡುತ್ತಿದೆ. ‘ದೇವಸ್ಯ’ ಎಂದರೆ ಇದು ಅವನ ಲೀಲೆ. ಈ ಅರ್ಥದಲ್ಲಿ ಆಕರ್ಷಣ ವಿಕರ್ಷಣ ರೂಪವಾದ ದ್ವಂದ್ವಗಳ ಸೂಚನೆಯು ಈ ಮಂತ್ರದಲ್ಲಿದೆ. ‘ವರೇಣಿಯಂ’ ಎಂದರೆ ಆವರಿಸಿರುವುದು ಎಂಬ ಅರ್ಥ ಇರುವುದರಿಂದ ಮುಚ್ಚುವುದು ಎಂಬ ಭಾವ ಬರುತ್ತದೆ. ಸವಿತೃ ಶಬ್ದದಲ್ಲಿ ಬೆಳಕನ್ನು ಕೊಡುವ ಭಾವವಿದೆ. ‘ವರೇಣಿಯಂ’ ನಲ್ಲಿ ತದ್ವಿರುದ್ಧವಾದ ‘ಮುಚ್ಚುವಿಕೆ’ ಎಂಬ ಭಾವವಿದೆ. ದ್ವಂದ್ವ ರೂಪದಲ್ಲಿರುವ ಬೆಳಕು, ಕತ್ತಲೆ, ಸುಖ, ದುಃಖ ಎಂಬೆಲ್ಲವೂ ಈ ಎರಡು ಶಬ್ದಗಳಲ್ಲಿ ಸ್ಫುರಿಸುತ್ತಿವೆ. ‘ ವಿಶ್ವ ವ್ಯಾಪಾರವೆಂಬ ಲೀಲೆಯನ್ನು ಧ್ಯಾನಿಸೋಣ’ ಎಂಬ ಮೊದಲಿನ ಎರಡು ಪಾದಗಳ ಭಾವದಲ್ಲಿ ಪ್ರವೃತ್ತಿ ಸೂಚಿತವಾಗಿದೆ. ಆದರೆ ಧೀಯಃ= ಬುದ್ಧಿಯಿಂದಾಚೆಗೆ (ಪಂಚಮೀ ವಿಭಕ್ತಿ) ಯಃ= ಆ ಪರಮಾತ್ಮನು ನಃ= ನಮ್ಮನ್ನು ಪ್ರಚೋದಯಾತ್= ಹೋಗುವಂತೆ ಮಾಡಲಿ ಎಂಬ ಮೂರನೇ ಪಾದದಲ್ಲಿ ನಿವೃತ್ತಿ ಸೂಚಿತವಾಗಿದೆ. ಇಲ್ಲಿಯವರೆಗೆ ವಿಶ್ವದಲ್ಲಿನ ಒಂದು ಮತ್ತು ಎರಡು ಸಂಖ್ಯೆಗಳಿಂದ ಸೂಚಿತವಾದ ಮೂಲ ತತ್ವಗಳ ಚರ್ಚೆ ಸಂಗ್ರಹವಾಗಿ ಮಾಡಲ್ಪಟ್ಟಿತು. ಮುಂದೆ ಮೂರನೇ ಸಂಖ್ಯೆಗೆ ಹೋಗೋಣ.
5
(Published in Dharmaprabha dated 1-9-1993)
ಗಾಯತ್ರಿಯಲ್ಲಿನ ಮೂರು ಪಾದಗಳು ವಿಶ್ವದಲ್ಲಿರುವ ವಿವಿಧ ರೀತಿಯ ತ್ರಿವರ್ಗಗಳನ್ನು ಸೂಚಿಸುತ್ತದೆ. ಮೊದಲು ಸತ್ತು, ಚಿತ್ತು, ಆನಂದ ಎಂಬಿವುಗಳನ್ನು ಕುರಿತು ಆಲೋಚಿಸೋಣ. ನಮ್ಮ ಇಂದ್ರಿಯಗಳಿಗೆ ಗೋಚರಿಸುತ್ತಿರುವ ವಿಶ್ವದ ಅಂಶವೇ ‘ಸತ್ತು’ ಎಂದು ಸ್ಥೂಲವಾಗಿ ಹೇಳಬಹುದು. ಅದರ ಹಿಂದೆ ಸೂಕ್ಷ್ಮವಾಗಿ ಇಂದ್ರಿಯಗಳಿಗೆ ಅಗೋಚರವಾಗಿ ತರ್ಕದಿಂದ ಊಹಿಸಿಕೊಳ್ಳಲು ಸಾಧ್ಯವಾದ ವಿಶ್ವದ ವ್ಯಾಪಾರವೇ ಚಿತ್ತು. ಅದಕ್ಕೆ ಕಾರಣವಾಗಿ ಎಂದರೆ ಆ ವಿಶ್ವ ವ್ಯಾಪಾರವನ್ನು ಮಾಡಿಸುತ್ತಿರುವ ಮೂಲಭೂತವಾದ ಏಕೈಕ ತತ್ವವೇ ಆನಂದ.
ಗಾಯತ್ರಿಯ ಮೊದಲನೇ ಪಾದದ ಮೊದಲನೇ ಶಬ್ದ ತತ್ ಎಂದರೆ ಅದು. ಇದು ನಪುಂಸಕ ಲಿಂಗದಲ್ಲಿ ಇರುವುದರಿಂದ ನಿರ್ಜೀವ ಪದಾರ್ಥದ ಸಂಕೇತವೆಂದು ಭಾವಿಸಲು ಅವಕಾಶವುಂಟು. ದೂರದಲ್ಲಿದ್ದು ಅಂತಹ ಅನೇಕ ಪದಾರ್ಥಗಳಲ್ಲಿ ಒಂದಾಗಿರುವುದು ಎಂಬ ಭಾವನೆಗೂ ಅವಕಾಶವಿದೆ. ಅನೇಕ ಪದಾರ್ಥಗಳಲ್ಲಿ ಒಂದಾಗಿರುವಾಗಿರುವಾಗಲೇ ನಾವು ‘ಅದು’ ಎಂದು ಉದ್ದಿಷ್ಟವಾದುದನ್ನು ತೋರಿಸಬೇಕಾಗುತ್ತದೆಯಲ್ಲವೇ. ಸವಿತುಃ ಎರಡನೇ ಪದ ಸೂರ್ಯನನ್ನು ಸೂಚಿಸುತ್ತಿದೆ. ಅದೂ ಅಲ್ಲದೇ ಗಾಯತ್ರೀ ಮಂತ್ರಕ್ಕೂ ಸೂರ್ಯೋದಯ, ಮಧ್ಯಾಹ್ನ, ಸೂರ್ಯಾಸ್ತಮಯ ಇವುಗಳಿಗೂ ಸಂಬಂಧಿಸಿರುವುದು ಎಲ್ಲರಿಗೂ ತಿಳಿದೇ ಇರುತ್ತದೆ. ಇಲ್ಲಿ ತತ್ ಎಂಬುದು ಸೂರ್ಯನಿಗೆ ಅನ್ವಯಿಸಿ ಹೇಳಿರುವ ಪದ. ಈ ಸೂರ್ಯನನ್ನು ಪ್ರತ್ಯೇಕವಾಗಿ “ಅದು” ಎಂದು ತೋರಿಸುವುದರಿಂದ ಇಂತಹ ಸೂರ್ಯ
ಸದೃಶವಾದ ನಕ್ಷತ್ರಗಳಲ್ಲಿ ಒಂದಾಗಿ ನಮಗೆ ಸಮೀಪವಾಗಿ ನಮಗೆ ಸಂಬಂಧಿಸಿರುವ ನಕ್ಷತ್ರವಾದ ಸೂರ್ಯನು ಎಂಬ ಭಾವ ಬರುತ್ತದೆ.
ಸವಿತುಃ ಎಂಬುದು “ಸೂ” ಎಂಬ ಧಾತುವಿನಿಂದ ಬಂದಿದೆ. “ಸೂ” ಎಂದರೆ ಪ್ರಾಣಿ ಗರ್ಭದಿಂದ ಹೊರಕ್ಕೆ ಸೂರ್ಯನ ಗರ್ಭದಿಂದ ಹೊರಕ್ಕೆ ತಳ್ಳಲ್ಪಟ್ಟಿರುವ ವಸ್ತು. ಆ ಸಮಯದಲ್ಲಿ ವಿಕರ್ಷಣವಿತ್ತು. ಆದರೆ ಹೊರ ಹೋದ ಕೂಡಲೆ ಅದನ್ನು ಆಕರ್ಷಿಸಲು ಪ್ರಾರಂಭಿಸುತ್ತಾನೆ ಸೂರ್ಯನು. ಈ ತಳ್ಳಿ ಹಾಕುವಶಕ್ತಿ ಮತ್ತು ಆಕರ್ಷಿಸುವ ಶಕ್ತಿಗಳ ಪ್ರಭಾವದಿಂದಲೇ ಭೂಮಿ ತನ್ನ ಸುತ್ತಲೂ ತಾನು ತಿರುಗುತ್ತಾ ಸೂರ್ಯನ ಸುತ್ತಲೂ ತಿರುಗುತ್ತಿರುವುದು.
ಸವಿತುಃ ಎಂಬ ಶಬ್ದವು ಹೊರ ಚಿಮ್ಮುವುದು ಎಂಬ ಅರ್ಥವನ್ನು ಕೊಡುತ್ತಿದೆ. ಆದರೆ ಭೂಮಿ ಸೂರ್ಯನ ಕಡೆಗೇ ಆಕರ್ಷಿತವಾಗಿದೆ ಮತ್ತು ತನ್ನ ಸುತ್ತಲೂ ತಿರುಗುತ್ತ ಆತನ ಸುತ್ತಲೂ ತಿರುಗುತ್ತಿದೆ. ಭೂಮಿಯ ಈ ಆಕರ್ಷಣ ಮತ್ತು ಸುತ್ತಲೂ ತಿರುಗುವಿಕೆ ಎಂಬ ಭಾವಗಳನ್ನು “ವರೇಣಿಯಂ” ಎಂಬ ಪದವು ಸೂಚಿಸುತ್ತಿದೆ. ಇದರ ಮೂಲ ಧಾತುವಾದ “ವೃ” ಎಂಬುದಕ್ಕೆ ಆಕರ್ಷಣೆಯನ್ನು ಹೊಂದುವುದು (ವರಿಸುವುದು) ಮತ್ತು ಮುಚ್ಚುವುದು (ಆವರಿಸುವುದು) ಮತ್ತು ಸುತ್ತಲೂ ತಿರುಗುವುದು ಎಂಬ ಅರ್ಥಗಳಿವೆ. ಭೂಮಿಯು ಸೂರ್ಯನನ್ನು ಮುಚ್ಚುತ್ತಿದೆ. ಆದುದರಿಂದಲೇ ರಾತ್ರಿ ಆಗುವುದು. “ವರೇಣಿಯಂ” ಎಂಬ ಒಂದೇ ಶಬ್ದದಲ್ಲಿ ಇಷ್ಟು ಅರ್ಥಗಳಿದ್ದು ಮೊದಲನೇ ಪಾದವು ಈ ವಿಶ್ವದಲ್ಲಿನ ಅನೇಕ ನಕ್ಷತ್ರ ರಾಶಿಗಳಲ್ಲಿ ಒಂದು ನಕ್ಷತ್ರವಾಗಿರುವ ನಮ್ಮ ಸೂರ್ಯನನ್ನು ವರಿಸುವ ನಮ್ಮ ಭೂಮಿಯ ನಿತ್ಯ ವ್ಯಾಪಾರವಾದ ಅ) ಸೂರ್ಯನ ಕಡೆ ಆಕರ್ಷಿಸಲ್ಪಡುವುದು ಆ) ತನ್ನ ಸುತ್ತಲೂ ತಾನು ತಿರುಗುವುದು ಇ) ಹೀಗೆ ಮಾಡುತ್ತಾ ರಾತ್ರಿ ಸಮಯದಲ್ಲಿ ಸೂರ್ಯನನ್ನು ಮುಚ್ಚುವುದು ಮತ್ತು ಈ) ಸುರ್ಯನ ಸುತ್ತಲೂ ತಿರುಗುತ್ತಿರುವುದು ಎಂಬ ಇದೆಲ್ಲವೂ ಸ್ಪಷ್ಟವಾಗಿ ಸೂಚಿಸಲ್ಪಟ್ಟಿದೆ. ಇತರ ಗ್ರಹಗಳ ಮತ್ತು ಚಂದ್ರರ ವ್ಯಾಪಾರಕ್ಕೂ ಇದು ಅನ್ವಯಿಸುತ್ತೆ. ಹೀಗೆ ಮೊದಲನೇ ಪಾದ ‘ಸತ್’ ನ ಸ್ವರೂಪವನ್ನು ಸ್ಥೂಲವಾಗಿ ವರ್ಣಿಸುತ್ತದೆ.
ಈ ಸತ್ತಿನಲ್ಲಿ ನಾವು ಕಾಣುತ್ತಿರುವುದೇನು? ಇದರಲ್ಲಿನ ವಸ್ತುಗಳು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆ ಆಗುತ್ತಲೇ ಇರುತ್ತವೆ. ಭೌತಿಕ ಪರಿಣಾಮಗಳೂ ರಾಸಾಯಿನಿಕ ಪರಿಣಾಮಗಳಿಗೂ ಆಗುತ್ತಲೇ ಇರುತ್ತವೆ. ಸೃಷ್ಟಿ ಸ್ಥಿತಿ ಲಯಗಳು ಪಡೆಯುತ್ತಲೇ ಇರುತ್ತವೆ. ಈ ಪರಿಣಾಮಗಳನ್ನು ಜೀವಿಗಳೆಲ್ಲರೂ ಹತ್ತಿರದಿಂದ ಗಮನಿಸುತ್ತಿರುವುದು ಕಾಯಿ ಹಣ್ಣಾಗುವುದರಲ್ಲಿ, ಅಡಿಗೆ ಮಾಡುವುದರಲ್ಲಿ ಮತ್ತು ಆಹಾರವು ಹೊಟ್ಟೆಯಲ್ಲಿ ಜೀರ್ಣವಾಗುವುದರಲ್ಲಿ. ಇದಕ್ಕೆಲ್ಲಾ ಸಂಸ್ಕೃತದಲ್ಲಿ “ಪಾಕ” ಎಂಬ ಒಂದು ಶಬ್ದವು ಸೂಚಿವಾಗಿದೆ. ಭ್ರಸ್ಜ (ಭೃಜ್ಜ್) ಪಾಕೇ ಎಂಬ ಧಾತುವಿನಿಂದ ಬಂದಿರುವ “ಭರ್ಗಃ” ಎಂಬ ಶಬ್ದವು ಈ ಪಾಕವನ್ನು ಅಂದರೆ ವಿಶ್ವದಲ್ಲಿನ ಅಥವಾ ಸತ್ತಿನಲ್ಲಿನ ನಿರಂತರ ಪರಿಣಾಮವನ್ನು ಸೂಚಿಸುತ್ತಿದೆ. ಈ ಪರಿಣಾಮವು ನಿಯಮಬದ್ಧವಾಗಿದೆ ಮತ್ತು ಇದರಲ್ಲಿ ಪರಸ್ಪರ ಸಂಬಂಧ ರೂಪವಾದ ಒಂದು ರಚನೆಯಿದೆ. ಈ ನಿಯಮ ಮತ್ತು ರಚನೆ ಒಂದು ಬುದ್ಧಿಶಕ್ತಿಯಿಲ್ಲದೆ ಸಾಧ್ಯವಿಲ್ಲ. ಈ ಬುದ್ಧಿ ಅಥವಾ ಸಂಕಲ್ಪಶಕ್ತಿಯೇ ಚಿತ್ತು. ಇದರ ಸ್ವರೂಪವನ್ನು ತರ್ಕದಿಂದ ಮಾತ್ರ ತಿಳಿಯಲು ಸಾಧ್ಯ. ಇಂದಿನ ವಿಜ್ಞಾನಿಗಳು ಅಣುಗಳು, ಪರಮಾಣುಗಳ ಸ್ವರೂಪ, ಅಣುಶಕ್ತಿ ಇವುಗಳ ವಿಷಯವನ್ನು ತಿಳಿದಿರುತ್ತಾರೆ. ಇದೆಲ್ಲಾ ಪ್ರಕೃತಿ ಎಂದು ಹೇಳುತ್ತಾ ಸತ್ತಿಗೆ ಸೇರಿಸುತ್ತಾರೆ. ಅಡ್ಡಿಯಿಲ್ಲ. ಪರಮಾಣುವಿನ ಸ್ವರೂಪ ಸೌರವ್ಯೂಹದ ಸ್ವರೂಪವನ್ನು ಹೋಲುತ್ತಿರುವುದೆಂದೂ ಕಂಡುಹಿಡಿದಿದ್ದಾರೆ. ಆದುದರಿಂದ ಗಾಯತ್ರಿಯ ಮೊದಲನೇ ಪಾದ ಪರಮಾಣುವಿನ ಸ್ವರೂಪದವರೆಗೂ ಅನ್ವಯಿಸುತ್ತದೆ. ಸವಿತೃ ಎಂದರೆ ಸೂ ಪ್ರೇರಣೆ ಎಂಬ ಧಾತುವಿನಿಂದ ಪ್ರೇರಕ ಶಕ್ತಿ ಎಂಬ ಅರ್ಥ ಬರುವುದರಿಂದ ಶಕ್ತಿಯ ಸತ್ತಿನಲ್ಲೇ ಸೇರುತ್ತೆ ಎಂದು ಭಾವಿಸಬಹುದು. ಆದರೆ ಈ ಸತ್ತಿನಲ್ಲಿನ ಪರಿಣಾಮಗಳಿಗೆ ಕಾರಣವಾದ ಚಿತ್ತಿನ ವಿಷಯವಾಗಿಯು ಅದಕ್ಕೆ ಮೂಲಭೂತವಾದ ಆನಂದದ ವಿಷಯವಾಗಿಯು ವಿಜ್ಞಾನಿಗಳು ಸೂಕ್ಷ್ಮವಾದ ಪರಿಶೋಧನೆಯನ್ನು ಇನ್ನೂ ಮಾಡಬೇಕಾಗಿದೆ.
ಆದುದರಿಂದ ‘ಭರ್ಗಃ’ ಎಂಬ ಪರಿಣಾಮ ಸೂಚಕವಾದ ಶಬ್ದವು ಚಿತ್ತಿನ ಅಸ್ತಿತ್ವದ ದ್ಯೋತಕವಾಗಿದೆ. ಋಷಿಗಳು ಚಿ ಚ್ಛಕ್ತಿಯ ವೈಜ್ಞಾನಿಕ ಪರಿಶೋಧಕರೂ ಸಾಧಕರೂ ಆಗಿದ್ದರು. ಅವರು ಈ ಪರಿಣಾಮಕ್ಕೆ ಕಾರಣವಾದ ಚಿತ್ತಿನ ವ್ಯಾಪಾರವನ್ನು “ದೇವ” ಎಂದು ಕರೆದರು. “ದೇವ” ಶಬ್ದವು “ದಿವು” ವಿಜಿಗೀಷಾ ವ್ಯವಹಾರ ದ್ಯುತಿ ಸ್ತುತಿ ಮೋದ ಮದ ಸ್ವಪ್ನ ಕಾಂತಿ ಗತಿಷು”ಎಂಬ ಧಾತುವಿನಿಂದ ಬಂದಿದೆ. ಇಲ್ಲಿ ಕೊಟ್ಟಿರುವ ಅನೇಕ ಅರ್ಥಗಳಲ್ಲಿ ನಾವು ಪ್ರಕೃತ ಕ್ರೀಡೆ, ವ್ಯವಹಾರ, ದ್ಯುತಿ (ಬೆಳಗುವುದು), ಕಾಂತಿ(ಕಾಮನೆ ಎಂಬ ಅರ್ಥ) ಮೋದ ಎಂಬ ಅರ್ಥಗಳನ್ನು ತೆಗೆದುಕೊಳ್ಳಬಹುದು. ಒಂದು ಮೋದಕ್ಕಾಗಿ ಕಾಮನೆಯಿಂದ ಬೆಳಗುತ್ತ ಕ್ರೀಡಾರೂಪವಾದ ವ್ಯವಹಾರವನ್ನು ನಡೆಸುತ್ತಿರುವುದೇ ‘ದೇವ’ ಎಂಬುದು. ಇದೇ ಚಿತ್ತಿನ ಸ್ವರೂಪ. “ಧೀಮಹಿ” ಎಂದರೆ ನಾವು ಧ್ಯಾನಿಸೋಣ ಅಥವಾ ಧ್ಯಾನಿಸಬೇಕು ಎಂದು ಅರ್ಥ. ಈ ಚಿತ್ತು ಬುದ್ಧಿ ಅಥವಾ ಧ್ಯಾನ ರೂಪದಲ್ಲಿ ಕೆಲಸ ಮಾಡುತ್ತದೆ. ಸಚ್ಚಿದಾತ್ಮಕವಾದ ನಮ್ಮ ಬಾಹ್ಯ ವ್ಯಾಪರವನ್ನು ಬುದ್ಧಿಯಿಂದ ಗಮನಿಸಿ ಅದು ದೇವತಾ ಶಕ್ತಿಗಳ ಲೀಲೆ ಎಂದು ತಿಳಿಯೋಣ ಎಂದು ಎರಡನೇ ಪಾದದಲ್ಲಿನ “ಧೀಮಹಿ” ಎಂಬ ಶಬ್ದದ ಭಾವ.
ಮೂರನೇ ಪಾದದಲ್ಲಿ ಬುದ್ಧಿಯಿಂದ ಆ ಪರಮಾತ್ಮನು ನಮ್ಮನ್ನು ಮುಂದಕ್ಕೆ ಸರಿಯಾದ ಗುರಿಯ ಕಡೆ ಕೊಂಡೊಯ್ಯಲಿ ಎಂಬ ಭಾವವಿದೆ. ಬುದ್ಧಿಯವರೆಗೆ ‘ಚಿತ್’ ವ್ಯಾಪಿಸಿಕೊಂಡಿದೆ. ಅಲ್ಲಿಂದ ಮುಂದಕ್ಕೆ ಇರುವುದೇ ಪರಮಾತ್ಮ. ನಮ್ಮಲ್ಲಿರುವ ‘ನಾನು’ ಎಂಬ ಭಾವನೆಯೇ ಎಲ್ಲದಕಿಂತಲೂ ಮೂಲವಾಗಿರುವುದು. ಇದೇ ಜೀವಾತ್ಮ. ಮನಸ್ಸು, ವಾಕ್ಕು, ಕಾರ್ಯಕ್ರಮಗಳೆಂಬ ತ್ರಿಕರಣಗಳಿಗೂ ಮೂಲಭೂತವಾಗಿರುವುದೇ ಈ ಜೀವಾತ್ಮ. ಆದರೆ ಇದು ಆಯಾ ದೇಹಗಳಿಗೆ ಸೀಮಿತವಾಗಿ ಸಂಕುಚಿತವಾಗಿರುತ್ತದೆ. ಆದರೆ ಅತ್ಯಂತ ವಿಶಾಲವಾದ ಈ ವಿಶ್ವದಲ್ಲಿ ಇದು ಒಂದು ಅಣುವಿದ್ದಂತೆ. ಇದಕ್ಕೆ ದೊರಕುವ ಆನಂದವು ಅಷ್ಟೇ. ಇದರ ಚಿತ್ತೂ ಅಷ್ಟೆ. ವಿಶ್ವದ ದರ್ಶನದಿಂದ ಬೃಹದಾಕಾರವಾಗಿ ಬೆಳೆಸಿಕೊಂಡು ಇದರ ಆನಂದವನ್ನು ಸಹ ಅದೇ ರೀತಿ ಬೆಳೆಸಿಕೊಳ್ಳುವ ಇಚ್ಛೆಯೇ ಮೂರನೇ ಪಾದದಲ್ಲಿ ಮೂಲಭಾವ. ಎರಡನೇ ಪಾದದಲ್ಲಿರುವ ‘ಧೀಮಹಿ’ ಎಂಬುದು ಈ ಮಂತ್ರದಲ್ಲೇ ಜೀವಾತ್ಮನಿಗೆ ಸಂಬಂಧಿಸಿರುವ ಮೊದಲನೆಯ ಪದ. ಇದು ‘ವಿಧಿಲಿಜ್’ ನಲ್ಲಿದ್ದು ಧ್ಯಾನಿಸೋಣ. ಧ್ಯಾನಿಸಬೇಕು ಎಂಬ ಭಾವಗಳನ್ನು ಹೊಂದಿ ಕ್ರಿಯಾತ್ಮಕವಾದ ಭಾವನೆಯಾಗಿದೆ. ಆದರೆ ಪ್ರಚೋದಯಾತ್ ಎಂಬುದು ಅತೀರ್ಲಿಜ್ಞಲ್ಲಿದ್ದು ಕೇವಲ ಬಯಕೆಯ ರೂಪದಲ್ಲಿದೆ. ಈ ಬಯಕೆ ಯಾವ ಕ್ರಿಯೆಗೂ ಸಂಬಂಧಿಸಿಲ್ಲ. ‘ಯಃ’ ಎಂದರೆ ಅಗೋಚರವಾದ, ಪರಮಾತ್ಮನು ಎಂಬ ಭಾವನೆ ಬರುತ್ತದೆ. ನಃ ಎಂಬುದು ಬಹುವಚನದಲ್ಲಿರುವುದರಿಂದ ಬಯಕೆಯು ಒಬ್ಬನೇ ಜೀವಾತ್ಮನಿಗೆ ಸಂಕುಚಿತವಾಗದೇ ಎಲ್ಲ ಜೀವಾತ್ಮರಿಗೂ ಅನ್ವಯಿಸುತ್ತ ವಿಶಾಲಭಾವವುಳ್ಳದ್ದಾಗಿದೆ. ಈ ಉದಾರ ಭಾವವು ಸಹ ‘ಬ್ರಹ್ಮ’ ಎಂದರೆ ಬೃಹತ್ತಾಗಿರುವುದರ ಭಾವನೆಗೆ ಪೋಷಕ. ‘ಚಿತ್’ ನ ಮೇರೆಯನ್ನು ಜೀವರುಗಳ ಕ್ರಿಯೆಗಳ ಮೇರೆಯನ್ನು ಮೀರಿ ಕೇವಲ ಪರಮಾತ್ಮನ ಕಡೆ ಮುಂದುವರಿಸುವ ಬಯಕೆಯು ಸಫಲತೆಯಲ್ಲಿ ತಾನೆ ಇರುವುದು. ಮೇಲ್ಕಂಡ ಸಚ್ಚಿದ್ರೂಪವಾದ ಜಗತ್ತಿನ ವ್ಯಾಪಾರವನ್ನು ಮೀರಿ ಅಗೋಚರ ಆದರೆ ವಿಶ್ವಮೂಲವಾದ ಪರಮಾತ್ಮನ ಕಡೆಗೆ ಉನ್ಮುಖವಾಗಿರುವ ಈ ಬಯಕೆಯ ಪೂರೈಕೆಯ ಆನಂದವೇ ಪರಮ ಶಾಶ್ವತವಾದ ಆನಂದ. ಇದೇ ಸಚ್ಚಿತ್ತುಗಳ ಕಾರ್ಯಕ್ಕೂ ಮೂಲ ಪ್ರೇರಣೆ. ಈ ರೀತಿಯಾಗಿ ಮೂರನೆಯ ಪಾದವು “ಆನಂದ”ದ ದ್ಯೋತಕವಾಗಿದೆ.
6
(Published in Dharmaprabha dated 1-11-1993)
ಇದುವರೆಗೂ ಚರ್ಚಿಸಿದ ವಿಶ್ವದಲ್ಲಿನ ಮೂಲ ಭೂತವಾದ ಮೂರು ಭೇದಗಳಾದ ಸತ್ತು, ಚಿತ್ತು, ಮತ್ತು ಆನಂದ, ಇವುಗಳನ್ನು ಹಿಂದೆ ‘ವಸ್ತುಗಳು’ ಎಂಬ ಶೀರ್ಷಿಕೆಯಲ್ಲಿ ಕೊಡಲಾಗಿತ್ತು. ಇದೇ ಶೀರ್ಷಿಕೆಯಲ್ಲಿನ ಇತರ ವಿಷಯಗಳನ್ನು ಕುರಿತು ಚರ್ಚೆಯನ್ನು ಮುಂದುವರಿಸೋಣ.
ಸೂರ್ಯ, ಚಂದ್ರ, ಅಗ್ನಿ
ಈ ಮೂರೂ ಬೆಳಗುವ ವಸ್ತುಗಳು. ಆದರೆ ಇವುಗಳಲ್ಲಿ ಅನೇಕ ಭೇದಗಳಿವೆ. ಸೂರ್ಯನು ಮತ್ತು ಅಗ್ನಿ ತಾವೇ ಬೆಳಗುವ ವಸ್ತುಗಳು. ಚಂದ್ರನು ಸ್ವಪ್ರಕಾಶರಹಿತನು. ಸೂರ್ಯನ ಪ್ರಕಾಶ ಬೀಳುವುದರಿಂದ ಬೆಳಗುವವನು. ಸೂರ್ಯನು ಸದಾ ಬೆಳಗುತ್ತಿರುವವನು. ಅದರೆ ಅಗ್ನಿ ಅಲ್ಪ ಕಾಲ ಬೆಳಗಿ ಶಮನವಾಗುತ್ತದೆ. ಸೂರ್ಯನು ಅತಿ ದೊಡ್ಡ ಮತ್ತು ಇತರ ಎಲ್ಲ ವಸ್ತುಗಳಿಗೆಲ್ಲಾ ಮೂಲಭೂತವಾದ ವಸ್ತು. ಅಗ್ನಿ ಅತಿ ಚಿಕ್ಕ ವಸ್ತು. ಸೂರ್ಯನು ಒಬ್ಬನೇ. ಅಗ್ನಿಗಳು ಅಸಂಖ್ಯಾತಗಳು. ಸೂರ್ಯನು ರಾತ್ರಿ ಕಾಣುವುದೇ ಇಲ್ಲ, ಚಂದ್ರನು ರಾತ್ರಿ ಹೊತ್ತು ಮಾತ್ರ ಕಾಣಿಸಿಕೊಂಡರೂ ಭೂಮಿಯಲ್ಲಿರುವ ನಮಗೆ ಕ್ರಮೇಣ ಹೆಚ್ಚುತ್ತ ತಗ್ಗುತ್ತ ಕಾಣಿಸಿಕೊಳ್ಳುತ್ತಾನೆ. ಸೂರ್ಯ ಚಂದ್ರರು ನಮ್ಮ ವಶದಲ್ಲಿಲ್ಲ. ಅಗ್ನಿ ನಮ್ಮ ವಶದಲ್ಲಿದೆ ಸೂರ್ಯನ ಬೆಳಕು ಅತಿ ತೀಕ್ಷ್ಣ, ಅಗ್ನಿಯ ಬೆಳಕು ಹಿತಕರ, ಚಂದ್ರನ ಬೆಳಕು ಆಹ್ಲಾದಕರ. ಸೂರ್ಯನೂ ಚಂದ್ರನೂ ಗುಂಡಾಗಿರುತ್ತಾರೆ. ಅಗ್ನಿ ಕೆಳಗಡೆ ಅಗಲವಾಗಿದ್ದು ಮೇಲಕ್ಕೆ ಶಿಖಾಕಾರವಾಗಿ ಹರಡುತ್ತೆ. ಸೂರ್ಯ ಚಂದ್ರರು ಕೆಳಗಿನಿಂದ ಮೇಲಕ್ಕೆ ಬಂದು ಪುನಃ ಕೆಳಗೆ ಬರುತ್ತಾರೆ. ಅಗ್ನಿ ಯಾವಾಗಲೂ ಮೇಲಕ್ಕೆ ಮಾತ್ರ ಬೆಳೆಯುತ್ತಾನೆ. ಸೂರ್ಯ ಚಂದ್ರರಲ್ಲಿ ಹೊಗೆಯಿಲ್ಲ. ಅಗ್ನಿಯಲ್ಲಿ ಹೊಗೆಯಿದೆ.
ಚಂದ್ರನಿಗೂ ಅಗ್ನಿಗೂ ಸಹ ಸೂರ್ಯನೇ ಮೂಲ. ಆದುದರಿಂದ ಸೂರ್ಯನು ವಿಶ್ವಮೂಲವಾದ ಪರಮಾತ್ಮನಿದ್ದಂತೆ. ಅಗ್ನಿಗೆ ಸೂರ್ಯನಂತೆ ಸ್ವಪ್ರಕಾಶವಿದ್ದರೂ ಅತ್ಯಲ್ಪ ನಾನಾತ್ವವಿರುವುದಾದುದರಿಂದ ಜೀವಾತ್ಮನನ್ನು ಸೂಚಿಸುತ್ತಾನೆ. ಸೂರ್ಯನೆ ಚಂದ್ರನಿಗೂ ಮೂಲ. ಒಬ್ಬನಾದ ಆತನು ಈ ರೀತಿಯಾಗಿ ಎರಡಾಗಿದ್ದಾನೆ. ಬೇರೆ ಬೇರೆ ನೀರಿನ ಪಾತ್ರೆಗಳಲ್ಲಿ ಬೇರೆ ಬೇರೆ ಪ್ರತಿಬಿಂಬಿಸುವ ಸೂರ್ಯ ಚಂದ್ರರಂತೆ, ಈ ಸೂರ್ಯ ಚಂದ್ರರು ಒಬ್ಬೊಬ್ಬ ಜೀವಿಯ ದೇಹದಲ್ಲೂ ಆಧಾರವಾಗಿ ಪ್ರತಿಬಿಂಬಿಸುತ್ತಿದ್ದಾರೆ. ಇವರು ನಮ್ಮ ವಶದಲ್ಲಿಲ್ಲದೆ ನಮ್ಮ ದೇಹ, ಪ್ರಾಣ, ಬುದ್ಧಿ ಚೈತನ್ಯ ಇತ್ಯಾದಿಗಳೆಲ್ಲವನ್ನೂ ನಡೆಸುತ್ತಿದ್ದಾರೆ. ಸೂರ್ಯನು ತೀಕ್ಷ್ಣತೆಯಿಂದ ಜೀವ ವ್ಯಾಪಾರದಲ್ಲಿ ಶಕ್ತಿಯನ್ನು ಒದಗಿಸುತ್ತಿರುವಾಗ ಚಂದ್ರನು ತಣ್ಣಗಿರುವ ತನ್ನ ಪ್ರಕಾಶದಿಂದ ಆನಂದವನ್ನು ಕೊಡುತ್ತಿದ್ದಾನೆ. ಹೀಗೆ ಈ ಎರಡು ಶಕ್ತಿಗಳೂ ಬಿಗಿ, ಸಡಿಲ, ಈ ರೂಪಗಳಲ್ಲಿ (ಸೂರ್ಯನಾಡೀ ಚಂದ್ರನಾಡೀ) ಕೆಲಸ ಮಾಡುತ್ತಿದೆ. ಈ ಕೆಲಸ ಜೀವಿಯ ವಶದಲ್ಲಿಲ್ಲ. ಇವುಗಳ ನಡುವೆ ಜೀವಿಯ ವಶದಲ್ಲಿರುವಂತೆ ಭಾಸಮಾನವಾಗಿರುವ ಶಕ್ತಿಯೇ ಅಗ್ನಿ. ಜೀವಿಗಳೆಲ್ಲಾ ಈ ಅಗ್ನಿ ಇದ್ದರೂ ಮಾನವರಲ್ಲಿ ಇದು ಸ್ಪಷ್ಟವಾಗಿದೆ. ಇದರ ವರ್ಣನೆಯನ್ನು ನಾವು ಋಗ್ವೇದದ ಮೊದಲನೆಯ ಮಂತ್ರದಲ್ಲಿ ಕಾಣಬಹುದು.
“ಅಗ್ನಿಂ, ಈಳೇ, ಪುರೋಹಿತಂ, ಯಜ್ಞಸ್ಯದೇವಮ ಋತ್ವಿಜಂ, ಹೋತಾರಂ, ರತ್ನಧಾತಮಂ.” ಇದರಲ್ಲಿ, ಮಾನವಾಂತರ್ಗತವಾಗಿ ಜೀವಾತ್ಮದ ವಿಜೃಂಭಣೆಯಾಗಿರುವ ಈ ಅಗ್ನಿ ತತ್ವದ ವರ್ಣನೆಯು ಅದ್ಭುತವಾದ ರೀತಿಯಲ್ಲಿ ಮಾಡಲ್ಪಟ್ಟಿದೆ. ಇದು ಮುಂದೆ ಬೆಳೆದು ಸುಷುಮ್ನಾ ನಾಡಿಯಲ್ಲಿನ ಚಕ್ರಗಳ ಮೂಲಕ ಮೇಲಕ್ಕೆ ಹೋಗಿ ಮುಕ್ತಿಯನ್ನು ಕೊಡುವ ಸಮರ್ಥತೆಯನ್ನು ಸಹ ಹೊಂದಿರುತ್ತದೆ, ಎಂಬುದಕ್ಕೆ ರಾಮಾಯಣದ ಅಂತರಾರ್ಥದಲ್ಲಿ ಬರುವ ಲಂಕಾದಹನ, ಸೀತಾಗ್ನಿ ಪ್ರವೇಶ ಇತ್ಯಾದಿಗಳ ಘಟ್ಟಗಳು ನಿದರ್ಶನವಾಗಿವೆ. ಸೂರ್ಯಚಂದ್ರರ ತತ್ವಗಳು ಸಂಕಲ್ಪಾತೀತವಾದ ವ್ಯಾಪಾರಕ್ಕೆ (Involuntary functions) ಅನ್ವಯಿಸಿದರೆ ಅಗ್ನಿತತ್ವವು ಸಂಕಲ್ಪ ಪೂರ್ವಕ ವ್ಯಾಪಾರಕ್ಕೆ (Voluntary functions) ಅನ್ವಯಿಸುವುದನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಅದಕ್ಕಾಗಿಯೇ ಮೇಲ್ಕಂಡ ಮಂತ್ರದಲ್ಲಿ ಅಗ್ನಿಯ ಮೊದಲನೇ ವಿಶೇಷಣವು “ಪುರೋಹಿತ” ಎಂಬುದು ಪುರಾ+ಊಹಿತ ಎಂದರೆ ಮುಂಚಿತವಾಗಿ ಊಹಿಸಲ್ಪಟ್ಟಿರುವುದು ಎಂದು ಅರ್ಥ. ಇದು ಈ ವಿಷಯವನ್ನು ತಾನೆ ತಿಳಿಸುತ್ತಿರುವುದು? ಪುರಃ+ಹಿತ ಎಂಬ ಅರ್ಥದಲ್ಲಿ ಮುಂದಕ್ಕೆ ಇಡಲ್ಪಟ್ಟದ್ದು ಎಂಬ ಅರ್ಥವು ಬರುತ್ತದೆ. ಈ ಎರಡು ಅರ್ಥಗಳಿಂದ ನಮ್ಮಲ್ಲಿ ಅಗ್ನಿತತ್ವಕ್ಕೆ ಸೇರಿದ ಸಂಕಲ್ಪವು ಪೂರ್ವಭಾವಿಯಾಗಿ ಊಹಿಸಲ್ಪಟ್ಟಿರುವುದೂ, ಮುಂದಕ್ಕೆ ಕೊಂಡೊಯ್ಯಲ್ಪಟ್ಟಿರುವುದೂ ಆಗಿದೆ ಎಂಬ ಭಾವವು ಬರುತ್ತದೆ. ಅಲ್ಲಿಂದ ಮುಂದಿನ ಕಾರ್ಯವನ್ನು ಮುಂದಿನ ವಿಶೇಷಣವಾದ “ಯಜ್ಞಸ್ಯದೇವ” ತಿಳಿಸುತ್ತದೆ. ಯಜ್ಞ ಶಬ್ದವು ‘ಯಾಜ್’ ಎಂಬ ಭಾತುವಿನಿಂದ ಬಂದಿರುತ್ತದೆ. ಇದಕ್ಕೆ “ಯಜದೇವ ಪೂಜಾ ಸಂಗತಿಕರಣದಾನೇಷು” ಎಂಬುದು ಧಾತುಸಾರ. ಇದರಲ್ಲಿ “ಸಂಗತಿಕರಣ” ಎಂಬ ಅರ್ಥವಿರುವುದನ್ನು ಗಮನಿಸಬೇಕು. ಇದಕ್ಕೆ ಸಾಂಗತ್ಯವನ್ನು ಮಾಡುವುದು (to associate with) ಎಂಬ ಅರ್ಥವಿರುವುದರಿಂದ ನಮ್ಮ ಸಂಕಲ್ಪಗಳು ಹಿಂದಿನ ಕರ್ಮ ಸಂಸ್ಕಾರವನ್ನನುಸರಿಸಿಕೊಂಡು ಇರುವುವೆಂದೂ, ಭಾವಗಳು ಯಾವಾಗಲೂ ಶಬ್ದರೂಪಕ್ಕೆ ಬರುವಾಗ “ಸಾದೃಶ್ಯ”ವನ್ನು ಹೊಂದಿರುತ್ತವೆಂದೂ ತಿಳಿದುಬರುತ್ತಿದೆ. ಭಾಷೆ ಇರುವುದೇ ಸಾದೃಶ್ಯಗಳ ಮೇಲೆ. “ಹಸ್ತಗತ”ವಾಯಿತು ಎಂದರೆ ವಶಕ್ಕೆ ಬಂತು ಎಂಬ ಭಾವವು ಸಾದೃಶ್ಯದ ಮೇಲೆ ತಾನೆ ಬಂದಿರುವುದು. ಈ ತರದ “ಸಾದೃಶ್ಯ”ಗಳ associations ರೂಪದಲ್ಲಿ ನಮ್ಮ ಸಂಕಲ್ಪಗಳು ವ್ಯಕ್ತವಾಗುತ್ತವೆ ಮತ್ತು ಹೊಸ ಸಾಂಗತ್ಯಗಳನ್ನು ಸೃಷ್ಟಿ ಮಾಡುತ್ತಿರುತ್ತವೆ ಎಂಬ ಭಾವವು “ಯಜ್ಞಸ್ಯದೇವ” ಎಂಬುದರಲ್ಲಿದೆ. ಇಲ್ಲಿ ‘ದೇವ’ ಶಬ್ದವಿರುವುದರಿಂದ ಈ ಕೆಲಸ ಯಾವುದೋ ದೈವೀಶಕ್ತಿಯಿಂದ ಅದಷ್ಟಕ್ಕದೇ ನಡೆದುಹೋಗುತ್ತದೆ ಎಂಬ ಭಾವನೆಯು ಇಲ್ಲಿದೆ. ಅಲ್ಲದೆ ಸಾಂಗತ್ಯ ಮತ್ತು ದೇವಭಾವಗಳು ಪ್ರೇಮ ತತ್ವದ ದ್ಯೋತಕಗಳೂ ಆಗಿವೆ. ಮೂರನೇ ವಿಶೇಷಣವಾದ “ಋತ್ವಿಜೆ’ ಎಂಬುದರ ಅರ್ಥ ಋತುವನ್ನು (order) ಉಂಟುಮಾಡುವುದು ಈ ಅಗ್ನಿತತ್ವ ಎಂಬುದು. ಇದಾದ ಮೇಲೆ ನಡೆಯುವ ಕಾರ್ಯ ಮುಂದಿನ ವಿಶೇಷಣವಾದ “ಹೋತೃ” ತಿಳಿಸುತ್ತದೆ. “ಹುದಾನಾದನಯೋಃ” ಎಂಬ ಧಾತು ಪಾಠದಿಂದಲೂ ಮತ್ತು ಕರ್ತೃವಾಚಕವಾದ “ತೃ” ಪ್ರತ್ಯಯದಿಂದಲೂ ಈ ವಿಶೇಷಣವು ನಾನು ಇತರರಿಗಾಗಿ ಈ ಸಂಕಲ್ಪ ಮಾಡುತ್ತಿದ್ದೇನೆ. ಇದರ ಫಲ ನಾನು ತಿನ್ನುತ್ತೇನೆ. ಎಂಬ ಭಾವನೆ ಬರುತ್ತದೆ. ಮುಂದಿನ ವಿಶೇಷಣವು “ರತ್ನ ಧಾತಮ”. “ರತ್ನ” ಶಬ್ದವು “ರಮ್” ಧಾತುವಿನಿಂದ ಬಂದಿದೆ. ಆನಂದವನ್ನು ಕೊಡುವುದರಲ್ಲಿ ಉತ್ಕೃಷ್ಟವಾದುದು ಎಂದು ಇದರ ಅರ್ಥ. ಇದಲ್ಲದೆ ಅಗ್ನಿಯುವಾಕ್ಕಿಗಿ ಅಧಿದೇವತೆ ಎಂಬುದಕ್ಕೆ ಅನೇಕ ಆದಾರಗಳಿವೆ.
ಹೀಗೆ ಈ ಅಗ್ನಿತತ್ವವು ಮಾನವರ ಸಂಕಲ್ಪ ಶಕ್ತಿಗೆ ಸಂಬಂಧಿಸಿ ವಾಕ್ಯಕ್ತಿ, ಪ್ರೇಮಶಕ್ತಿ, ಧರ್ಮ, ಪುಣ್ಯಫಲಪ್ರಾಪ್ತಿ, ಪರೋಪಕಾರ, ಉತ್ತಮವಾದ ಆನಂದ ಇವುಗಳ ದ್ಯೋತಕವಾಗಿದೆ. ಆದುದರಿಂದಲೇ ಅಗ್ನಿಯ ಯಜ್ಞಗಳೂ, ಅಗ್ನಿತತ್ವದ ಯಜ್ಞಗಳೂ ವೈದಿಕ ಸಂಪ್ರದಾಯದಲ್ಲಿ ತುಂಬಿರುವುದು.
ಈ ಸಂದರ್ಭದಲ್ಲಿ ‘ಅಗ್ನಿ’ ಎಂದರೆ ‘ಭೂಮಿ’ ಎಂಬ ಅರ್ಥವು ಸಹ ಬರುತ್ತದೆ ಎಂಬ ವಿಷಯವನ್ನು ಸಹ ನಾವು ಗಮನಿಸಬೇಕು. ಸೂರ್ಯ, ಭೂಮಿ, ಚಂದ್ರ – ಇವು ನಮ್ಮ ಭೌತಿಕ ಜಗತ್ತಿಗೆ ಸಂಬಂಧಿಸಿದ ಮೂಲ ವಸ್ತುಗಳಲ್ಲವೇ. ಭೂಮಿಯು ಒಂದು ಅಗ್ನಿಗೊಳವೆಂದು ಎಲ್ಲರಿಗೂ ತಿಳಿದೇ ಇದೆ. ಅಗ್ನಿಪರ್ವತಗಳೇ ಇದಕ್ಕೆ ಸಾಕ್ಷಿ. ಮೇಲ್ಕಂಡ ಋಗ್ವೇದದ ಮೊದಲನೇ ಮಂತ್ರವನ್ನು ಭೂಮಿಯ ಪರವಾಗಿಯು ಅರ್ಥೈಸಬಹುದು.
ಪುರೋಹಿತ ಎಂದರೆ ಮುಂದಿನ ಭಾಗದಲ್ಲಿ ಹಿತವಾಗಿರುವುದು. ಭೂಮಿಯ ಮೇಲಿನ ಭಾಗ ಆರಿ ಹಿತವಾಗಿದೆ. ಯಜ್ಞಸ್ಯದೇವ ಎಂಬುದು ಆರಿ ಹಿತಕರವಾದ ಮೇಲಿನ ಭಾಗದಲ್ಲಿ ಜೀವಿಗಳಿಗೆ ಬೇಕಾದ ಎಲ್ಲ ವಸ್ತುಗಳನ್ನೂ ಕೊಡುತ್ತಿರುವುದು ಎಂಬ ಭಾವವನ್ನು ಸೂಚಿಸುತ್ತದೆ.
7
(Published in Dharmaprabha dated 1-12-1993)
“ಋತ್ವಿಜ” ಎಂಬುದು ಋತುಗಳನ್ನು ಅನುಸರಿಸಿ ಕೊಡುತ್ತಿರುವುದು ಎಂಬ ಅರ್ಥವನ್ನು ಕೊಡುತ್ತಿದೆ. “ಹೋತೃ” ಎಂಬುದು “ಹು-ದಾನಾದನಯೋ:” ಎಂಬ ಧಾತು ಪಾಠದಂತೆ ಕೊಡುತ್ತಿರುವುದು ಮತ್ತು ತಿನ್ನುತ್ತಿರುವುದು ಎಂಬ ಅರ್ಥವನ್ನು ಕೊಡುತ್ತದೆ. ಭೂಮಿಯೆ ಸಕಲ ಜೀವಿಗಳಿಗೂ ಆಹಾರವನ್ನು ಕೊಡುತ್ತ ಆ ಜೀವಿಗಳನ್ನು ತನ್ನೊಳಗೆ ಸೇರಿಸಿಕೊಂಡು ಜೀರ್ಣಿಸಿಕೊಳ್ಳುತ್ತ ಪುನಃ ಎಲ್ಲ ಜೀವಿಗಳಿಗೂ ಆಹಾರ ಕೊಡುತ್ತಿದೆ. ಆದುದರಿಂದ “ಹೋತೃ” ಎಂಬುದನ್ನು ಭೂಮಿಗೆ ಅನ್ವಯಿಸಬಹುದು. ಕೊನೆಯದಾಗಿ “ರತ್ನಧಾತಮ” ಎಂಬ ಶಬ್ದವು ಅಹ್ಲಾದಕರವಾದ ಅನೇಕ ವಸ್ತುಗಳನ್ನು ಹೊಂದಿರುವುದರಲ್ಲಿ ಅತ್ಯಂತ ಶ್ರೇಷ್ಠವಾದುದು ಎಂಬ ಅರ್ಥವನ್ನು ಕೊಡುತ್ತಿದೆ. ಭೂಮಿ “ರತ್ನಗರ್ಭೆ” ಭೂಮಿಯಲ್ಲಿರುವ ಇಷ್ಟು ಗುಣಗಳು ಬೇರೆ ಯಾವ ಗ್ರಹದಲ್ಲೂ ಇಲ್ಲ “ಭೂರಿತಿವಾ ಅಗ್ನಿಃ” ಎಂಬ ವಾಕ್ಯವು ಸಹ ಅಗ್ನಿ ಭೂಮಿಯನ್ನು ಸೂಚಿಸುತ್ತಿದೆ ಎಂಬ ಭಾವನೆಯನ್ನು ಕೊಡುತ್ತಿದೆ.
ಭೌತಿಕ ಜಗತ್ತಿನಲ್ಲಿನ ಮತ್ತು ಮಾನವರಲ್ಲಿನ ಸೂರ್ಯ, ಚಂದ್ರ ಅಗ್ನಿಗಳ ವಿಷಯ ಇಲ್ಲಿಯವರೆಗೆ ಚರ್ಚಿಸಲ್ಪಟ್ಟಿತು. ಇದಲ್ಲದೆ ಈ ಎರಡರ ನಡುವೆ ಪ್ರಾಣಿ ಜಗತ್ತಿದೆ. ಅದರಲ್ಲಿಯು ಈ ಮೂರರ ತತ್ವಗಳಿವೆ. ಸರ್ವ ಪ್ರಾಣಿಗಳಲ್ಲಿಯು ಮುಖ್ಯವಾಗಿರುವ ಮೂರು ವ್ಯಾಪಾರಗಳೆಂದರೆ ಆಹಾರ ಜೀರ್ಣಿಸಿಕೊಳ್ಳುವುದು, ಉಚ್ಛ್ವಾಸ ಮತ್ತು ನಿಶ್ವಾಸ. ಉಚ್ಛ್ವಾಸವು ಸೂರ್ಯ ತತ್ವವಾದ ನರಗಳಲ್ಲಿ ಬಿಗಿಯನ್ನು ಸೂಚಿಸುತ್ತಿದ್ದರೆ ನಿಶ್ವಾಸವು ಚಂದ್ರ ತತ್ವವಾದ ಸಡಿಲವನ್ನು ಸೂಚಿಸುತ್ತಿದೆ. ಆಹಾರವು ಜೀರ್ಣವಾಗುವುದು ಅಗ್ನಿ ತತ್ವವನ್ನು ಸೂಚಿಸುತ್ತದೆ.
ಈಗ ಗಾಯತ್ರೀ ಮಂತ್ರದಲ್ಲಿ ಮೇಲೆ ಹೇಳಿದ ಭಾವಗಳು ಹೇಗಿವೆ ಎಂಬುದನ್ನು ಪರಿಶೀಲಿಸೋಣ.
‘ತತ್’ ಮತ್ತು ‘ಸವಿತುಃ” ಎಂಬ ಶಬ್ದಗಳು ಸೂರ್ಯ ತತ್ವವನ್ನು ಸೂಚಿಸುತ್ತಿವೆ ಇವು ಸ್ವತಂತ್ರವಾದ ಶಬ್ದಗಳು. ಆದರೆ ಮೂರನೇ ಪಾದದಲ್ಲಿನ ‘ಯಃ’ ಎಂಬುದು ಇವುಗಳಿಗೆ ಸಂಬಂಧಿಸಿದ ಶಬ್ದವೇ ಹೊರತು ಸ್ವತಂತ್ರವಾದ ಶಬ್ದವಲ್ಲ. ‘ಯಃ’ ಎಂದರೆ ಯಾವನು ಹಿಂದೆ ಸೂಚಿಸಲ್ಪಟ್ಟಿರುವನೋ ಆತನು ಎಂಬ ಭಾವನೆ ಬರುತ್ತದೆ. ಆದುದರಿಂದ ಈ ‘ಯಃ’ ಎಂಬುದು ಚಂದ್ರನನ್ನು ಸೂಚಿಸುತ್ತಿದೆ. ಚಂದ್ರನು ಸ್ವಪ್ರಕಾಶನಲ್ಲ ಸೂರ್ಯನ ಬೆಳಕಿನಿಂದ ಬೆಳಗುತ್ತಿರುವವನು. ಸೂರ್ಯನು ತೀಕ್ಷ್ಣತೆಯ ಮತ್ತು ಶಕ್ತಿಯ ಪ್ರತೀಕವಾದರೆ ಚಂದ್ರನು ಸೌಂದರ್ಯದ ಮತ್ತು ಆನಂದದ ಪ್ರತೀಕವಾಗಿದ್ದಾನೆ. ಸೂರ್ಯನು ನರಗಳ ಬಿಗಿಯನ್ನು, ಚಂದ್ರನು ಸಡಿಲವನ್ನು ಸೂಚಿಸುತ್ತಿದ್ದಾನೆ. ಈ ಎರಡರ ನಡುವೆ ನಡೆಯುತ್ತದೆ ಜೀವ ವ್ಯಾಪಾರದ ಆಟವೆಲ್ಲವೂ. ‘ದೇವ’ ಎಂದರೆ ಕ್ರೀಡಿಸುವವನು ಎಂಬ ಅರ್ಥ. ಈ ವಿಷಯವು ಹಿಂದೆಯೇ ಬಂದಿದೆ. ಆದುದರಿಂದ ಈ ಸೂರ್ಯ ಚಂದ್ರರ ಅಥವಾ ಇವರ ತತ್ವಗಳ ನಡುವೆ ಕ್ರೀಡಿಸುತ್ತಿರುವ ಭೂಮಿ ಮತ್ತು ಪ್ರಾಣಿ ಜಗತ್ತಿನಲ್ಲಿನ ಆಹಾರಪಚನ, ಮಾನವರಲ್ಲಿನ ಅಂತಃಕರಣ ವ್ಯಾಪಾರ ಮತ್ತು ಅದನ್ನು ಸೂಚಿಸುವ ವಾಕ್ಕಿನ ವ್ಯಾಪಾರ ಇವೆಲ್ಲವೂ ‘ದೇವ’ ಶಬ್ದದಿಂದ ಸೂಚಿಸಲ್ಪಟ್ಟಿವೆ. ಮೇಲಿನ ವಿವರಣೆಯಂತೆ ಇದೇ ಅಗ್ನಿಯ ತತ್ವ.
‘ತತ್‍ಸವಿತುಃ’ ಎಂದು ಹೇಳುವಾಗ ಅಲ್ಲಿ ಮಾನವರ ವ್ಯಾಪಾರವೇನೂ ಇಲ್ಲ. ಭೂಮಿಯ ಮೇಲೆ ನಡೆಯುತ್ತಿರುವ ಯಾವ ವ್ಯಾಪಾರವೂ ಇಲ್ಲ. ಜೀವಿಗಳ ವ್ಯಾಪಾರವಾವುದೂ ಇಲ್ಲ. ಆದರೆ ‘ವರೇಣಿಯಂ’ ಎಂಬ ಶಬ್ದವು ಬಂದ ಕೂಡಲೇ ‘ವರಿಸುವುದು’ ಎಂಬ ಅರ್ಥ ಬಂದು ಏಕತ್ವದಿಂದ ನಾನಾತ್ವಕ್ಕೆ ಬರುತ್ತೇವೆ. ‘ಭರ್ಗಃ’ ಎಂದರೆ ‘ಪಾಕ’. ಪಾಕವೆಂದರೆ ಭೌತಿಕ ಜಗತ್ತಿನಲ್ಲಿ ನಡೆಯುವ ಪರಿಣಾಮಗಳೂ, ಜೀವ ಜಗತ್ತಿನಲ್ಲಿ ನಡೆಯುವ ಹಣ್ಣಾಗುವಿಕೆ, ಆಹಾರಪಚನ ಮುಂತಾದ ವ್ಯಾಪಾರಗಳೂ, ಮಾನವರಲ್ಲಿ ಮಾನಸಿಕ ಕ್ರಿಯೆ ಅಥವಾ ಅಂತಃಕರಣಗಳಲ್ಲಿನ ಪರಿಣಾಮಗಳೂ ಸೂಚಿಸಲ್ಪಡುತ್ತಿವೆ.
ದೇವಸ್ಯ ಎಂದರೆ ಈ ‘ಪಾಕ’ವೆಲ್ಲವು ಮೂಲಭೂತವಾದ ಸೂರ್ಯಶಕ್ತಿಯ ಅಂಶಭೂತಗಳಾದ ಮತ್ತು ಜೀವಾತ್ಮರೂಪಗಳಲ್ಲಿ ಭಿನ್ನ ಭಿನ್ನವಾಗಿರುವ ಒಂದೇ ಅಗ್ನಿತತ್ವದ ಕ್ರೀಡೆ ಎಂಬ ಭಾವನೆಯು ಬರುತ್ತದೆ. ‘ಧೀಮಹಿ’, ‘ಧಿಯಃ’, ‘ನಃ’ ಎಂಬ ಪದಗಳಲ್ಲಿನ ಬಹು ವಚನವು ಸಹ ಇದೇ ಭಾವನೆಯನ್ನು ಬಲಪಡಿಸುತ್ತದೆ. ‘ಯಃ’, ಪ್ರಚೋದಯಾತ್’ ಎಂಬ ಶಬ್ದಗಳು ಆನಂದ ರೂಪವಾದ ಚಂದ್ರ ತತ್ವವೇ, ಈ ದೇವರ ಪಾಕರೂಪವಾದ ಮತ್ತು ಬುದ್ಧಿಶಕ್ತಿಯ ಕೆಲಸದ ರೂಪವಾದ ಕ್ರೀಡೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ ಎಂಬ ಭಾವವು ಬರುತ್ತದೆ. ಹೀಗೆ ಸೂರ್ಯ, ಅಗ್ನಿ ಮತ್ತು ಚಂದ್ರರ ತತ್ವಗಳು ಗಾಯತ್ರೀ ಮಂತ್ರದಲ್ಲಿ ಗರ್ಭಿತವಾಗಿದೆ.
ಸೂರ್ಯನ ಆಕಾರ ವರ್ತುಲ, ಅಗ್ನಿಯ ಆಕಾರ ತ್ರಿಕೋಣ. ಪೂರ್ಣಚಂದ್ರನ ಆಕಾರ ಪುನಃ ವರ್ತುಲ. ಅಪೂರ್ಣ ಚಂದ್ರನ ಆಕಾರವನ್ನು ಅರ್ಧ ವರ್ತುಲವನ್ನಾಗಿ ಗ್ರಹಿಸಬಹುದು. ಯಂತ್ರಗಳಲ್ಲಿ ಬರುವ ಈ ಆಕಾರಗಳಿಗೂ ಸೂರ್ಯ, ಅಗ್ನಿ ಚಂದ್ರರ ತತ್ವಗಳಿಗೂ ಸಂಬಂಧವಿರಬೇಕೆಂದು ಊಹಿಸಬಹುದು.
ಅಗ್ನಿಯನ್ನು ಉಪಯೋಗಿಸಿಕೊಂಡು ಅನೇಕ ವಿಧವಾದ ಯಜ್ಞಗಳು ಬಳಕೆಗೆ ಬಂದಿವೆ. ಇವುಗಳಲ್ಲಿ ಯಂತ್ರ, ಮಂತ್ರ ಮತ್ತು ತಂತ್ರ ಎಂಬ ಮೂರು ಅಂಶಗಳಿರುತ್ತವೆ. ಇವೆಲ್ಲವನ್ನೂ ಸಾಂಕೇತಿಕವಾಗಿ ತಿಳಿಯಲು ಗಾಯತ್ರೀ ಮಂತ್ರದ ಭಾವನೆಗಳು ಸಹಾಯಕವಾಗಿವೆ.
ಈಗ ಮೂರು ಸಂಖ್ಯೆಯ ವಿಷಯಗಳನ್ನು ಕುರಿತು ಚರ್ಚೆಯನ್ನು ಮುಂದುವರಿಸೋಣ.
8
(Published in Dharmaprabha dated 1-1-1994)
ಈಗ ಅಲೆಯಲ್ಲಿನ ಮೇಲಕ್ಕೇರುವ ಭಾಗ, ಎತ್ತರದಲ್ಲಿರುವ ಮಧ್ಯಭಾಗ ಮತ್ತು ಇಳಿಮುಖವಾಗುವ ಭಾಗ, ಇವುಗಳನ್ನು ಕುರಿತು ಆಲೋಚಿಸೋಣ. ಭೌತಿಕ ಪ್ರಪಂಚದಲ್ಲಿ ಶಕ್ತಿಯು ಅಲೆಗಳ ರೂಪದಲ್ಲಿ ಹರಡುತ್ತಿರುವ ವಿಷಯವು ವಿಜ್ಞಾನದಲ್ಲಿ ಸುಪ್ರಸಿದ್ಧವಾಗಿದೆ. ಭೌತಿಕ ವಸ್ತುಗಳಲ್ಲಿ, ಭೂಮಿ ತತ್ವ ಸೂಚಕವಾದ ಘನ ಪದಾರ್ಥಗಳಲ್ಲಿ ಅಲೆಯ ರೂಪದ ಶಕ್ತಿ ಪ್ರಸಾರವು ಸಾಧಾರಣವಾಗಿ ಕಂಡುಬರುವುದಿಲ್ಲ. ಆದರೆ ನೀರಿನ ತತ್ವವನ್ನು ಸೂಚಿಸುವ ದ್ರವ ಪದಾರ್ಥಗಳಲ್ಲಿ ಶಕ್ತಿ ಪ್ರಸಾರವು ಕಂಡುಬರುತ್ತದೆ. ಭೂತತ್ವದಲ್ಲಿ ಶಕ್ತಿ ಪ್ರಸಾರವು ಗುರುತ್ವಾಕರ್ಷಣ, ಎಸೆಯುವಿಕೆ, ತಳ್ಳುವಿಕೆ ಇತ್ಯಾದಿಗಳಲ್ಲಿ ಸರಳರೇಖೆಯ ರೂಪದಲ್ಲಿ ನಡೆಯುತ್ತಿದೆ. ಗುರುತ್ವಾಕರ್ಷಣದಿಂದ ಮೇಲಕ್ಕೆಸೆದ ವಸ್ತು ಹಿಂದಕ್ಕೆ ಬಗ್ಗಿ ನೆಲಕ್ಕೆ ಬಂದರೂ ಇದು ಪುನರಾವೃತ್ತಿ ಆಗುವುದಿಲ್ಲ. ಇದು ಸಹಜವಾದುದು. ಆದರೆ ಇದನ್ನೇ ಚಕ್ರಗಳಲ್ಲಿ ವರ್ತುಲಾಕಾರಕ್ಕೆ ಮತ್ತು ಯಂತ್ರಗಳಲ್ಲಿ ಇಷ್ಟ ಬಂದ ರೂಪಕ್ಕೆ ಕೃತಕವಾಗಿ ಪರಿವರ್ತಿಸಲಾಗುತ್ತಿದೆ. ಪುನಃ ಈ ಅಲೆಗಳನ್ನು ನಾವು ಆಕಾಶ ತತ್ವದಲ್ಲಿ ಕಾಣುತ್ತೇವೆ. ಬೆಳಕು, ದೂರಶ್ರವಣ ಮತ್ತು ದೂರದರ್ಶನದ ಶಕ್ತಿ ತರಂಗಗಳು ಇತ್ಯಾದಿಗಳು ಇಲ್ಲಿ ಬರುತ್ತವೆ. ಶಬ್ದ ಪ್ರಸಾರಕ್ಕೆ ಸಂಬಂಧಿಸಿದ ಪ್ರಕಂಪನಗಳಲ್ಲಿಯು ಅಲೆಯ ತತ್ವದ ಶಕ್ತಿಯ ಏರಿಳಿತಗಳು ಕಂಡುಬರುತ್ತಿವೆ. ಬೆಳಕು ಮುಂತಾದ ತರಂಗಗಳು ಸಹ ಪೂರ್ತಿ ಅಲೆಗಳ ರೂಪದಲ್ಲಿಲ್ಲದೆ ಶಕ್ತಿಯ ಬಿಡಿ ಬಿಡಿ ಪ್ರಮಾಣಗಳ ಸರಪಳಿಯ ರೂಪದಲ್ಲಿರುವುದಾಗಿಯು ವಿಜ್ಞಾನವು ತಿಳಿಸುತ್ತಿದೆ. ಒಟ್ಟಿನಲ್ಲಿ ವಿಶ್ವವ್ಯಾಪಾರದಲ್ಲಿ ಸ್ಥೂಲವಾಗಿ ಶಕ್ತಿಯ ವ್ಯಾಪಾರವು ನಾನ ರೂಪದಲ್ಲಿ ಕಂಡುಬರುತ್ತಿದ್ದರೂ ಸೂಕ್ಷ್ಮದಲ್ಲಿ ಅದು ಒಂದು ಪ್ರಕಂಪನ ಅಥವಾ ಅಲೆಯಲ್ಲಿರುವ ಮೂರು ಭಾಗಗಳಾದ ಆರಂಭ, ಉನ್ನತ ಸ್ಥಿತಿ ಮತ್ತು ಮುಕ್ತಾಯ ಮತ್ತು ಈ ಕ್ರಮದ ಪುನರಾವೃತ್ತಿ ಈ ರೂಪದಲ್ಲಿ ಇರುವುದಾಗಿ ಕಂಡುಬರುತ್ತಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ಈ ಮೂರು ಭೇದಗಳೂ ವ್ಯಾಪಾರದಲ್ಲಿನ ಭೇದಗಳೇ ಹೊರತು ವಸ್ತು ಹಾಗೆಯೇ ಇರುತ್ತದೆ. ಅಲೆಗಳಲ್ಲಿ ಮೂಲಭೂತವಾದ ನೀರಿದ್ದಂತೆ ಮತ್ತು ಶಕ್ತಿಯ ಸ್ಪಂದನಗಳಲ್ಲಿ ಮೂಲಭೂತವಾದ ಶಕ್ತಿ ಇದ್ದಂತೆ. ಈ ಶಕ್ತಿಯು ಒಂದು ರೂಪದಿಂದ ಇನ್ನೊಂದು ರೂಪವನ್ನು ಹೊಂದುತ್ತದೆಯೇ ಹೊರತು ನಾಶವಾಗುವುದಿಲ್ಲ. ಶಕ್ತಿಯೇ ವಸ್ತುರೂಪವನ್ನು ತಾಳಿರುತ್ತದೆ. ಇತ್ಯಾದಿ ವೈಜ್ಞಾನಿಕ ಸತ್ಯಗಳನ್ನನುಸರಿಸಿ ಜೀವ ಜಗತ್ತಿನಲ್ಲಿ ಮತ್ತು ಮಾನಸಿಕ ಜಗತ್ತಿನಲ್ಲಿಯು ಒಂದೇ ಮೂಲಭೂತವಾದ ತತ್ವವು ಸೃಷ್ಟಿಸ್ಥಿತಿ ಲಯಗಳ ರೂಪದಲ್ಲಿ ಪುನರಾವೃತ್ತವಾಗುತ್ತಿರುವುದು ಸತ್ಯವೆಂದು ಭಾವಿಸಲು ಆಧಾರವಿದೆ.
ಇಲ್ಲಿ ಎರಡು ಉದಾಹರಣೆಗಳನ್ನು ನಾವು ಗಮನಿಸಿದರೆ ಸಾಕು ನಮಗೆ ವಿಶ್ವವ್ಯಾಪಾರದಲ್ಲಿ ಏಕತ್ವವೇ ನಾನಾತ್ವದಲ್ಲಿ ಹೇಗೆ ಆಟವಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಮತ್ತು ಅತ್ಯಾಶ್ಚರ್ಯವಾಗುತ್ತದೆ. ಬೆಳಕಿನ ಕಿರಣಗಳು ಒಂದು ಸೆಕೆಂಡಿಗೆ ಒಂದು ಲಕ್ಷ ಎಂಬತ್ತು ಸಾವಿರ ಮೈಲಿ ದೂರ ಪ್ರಯಾಣ ಮಾಡುತ್ತವೆ. ಇದು ಎಷ್ಟು ಅದ್ಭುತ ಹಾಗೆಯೇ ಪ್ರಪಂಚದ ಸೃಷ್ಟಿ ಆದಲಾಗಾಯಿತು ಒಂದು ಪ್ರಾಣಿ ಸಹ ಅಪರೂಪವಾಗಿ ಆಯುಃ ಪರಿಮಾಣವನ್ನು ದಾಟಿ ಬಹಳ ಹೆಚ್ಚಿನ ಕಾಲ ಬದುಕಿಲ್ಲ. ಕೋಟಿಗಟ್ಟಲೆ ನಿದರ್ಶನಗಳಲ್ಲಿ ಒಂದು ಅಪವಾದವೂ ನಮಗೆ ಸಿಗುತ್ತಿಲ್ಲ. ಇದು ಎಷ್ಟು ಅದ್ಭುತ.
ನೀರು ಮತ್ತು ಅಲೆಗಳು ಎಂಬುದು ಮೇಲೆ ಹೇಳಿದ ವಿಶ್ವವ್ಯಾಪಾರಕ್ಕೆ ಒಳ್ಳೇಯ ಸಂಕೇತವಾಗಿವೆ. ಸಂಸ್ಕೃತದಲ್ಲಿ ನೀರಿಗೆ ‘ಆಪಃ’ ಎಂಬ ಶಬ್ದವಿದೆ. ಇದರ ವ್ಯುತ್ಪತ್ತಿ ಆಪ್ಲ ವ್ಯಾಪ್ತೌ ಎಂಬುದನ್ನನುಸರಿಸಿ ವ್ಯಾಪಿಸುವುದು ಎಂಬ ಅರ್ಥದಿಂದ ಅಲ್ಲದೆ ಈ ಶಬ್ದವು ಯಾವಾಗಲೂ ಬಹುವಚನದಲ್ಲಿರುವುದು. ಆದುದರಿಂದ ಅಪಃ ಅನ್ನುವ ಶಬ್ದವು ಮೇಲೆ ಹೇಳಿದ ಸಂಕೇತವನ್ನು ಅನುಸರಿಸಿ ವಿಶ್ವವ್ಯಾಪಾರವನ್ನು ಸೂಚಿಸುತ್ತಿದೆ.
“ಆಪೋವಾ ಇದಂ ಸರ್ವಂ ವಿಶ್ವಾ ಭೂತಾನ್ಯಾಪಃ ಪ್ರಾಣಾವಾಆಪಃ ಪಶವ ಅಪೋನ್ನ ಮಾಪೋs ಮೃತಮಾಪಸ್ಸಂರಾಡಾಪೋ ವಿರಾಡಾಪಸ್ಸ್ವರಾಡಾಪ ಶ್ಛಂದಾಂಸ್ಯಾಪೋ ಜ್ಯೋತೀಂಷ್ಯಾಪೋಯಜೂಂಷ್ಯಾಪ ಸ್ಸತ್ಯಮಾಪ ಸ್ಸರ್ವಾದೇವತಾ ಆಪೋ ಭೂರ್ಭುವಸ್ಸುವರಾಪ ಓಂ” ಎಂಬ ಮಂತ್ರವು ಈ ಪರಮ ಸತ್ಯವನ್ನು ತಿಳಿಸುತ್ತಿದೆ. ಈ ವಿಶ್ವವೆಲ್ಲವೂ ನೀರೇ. (ಸಾಂಕೇತಿಕವಾಗಿ) ಸಮಸ್ತ ಭೂತಗಳು, ಪ್ರಾಣಿಗಳು, ಪಶುಗಳು, ಅನ್ನ, ನೀರು ಇತ್ಯಾದಿ ಇತ್ಯಾದಿ ಎಲ್ಲವೂ ನೀರೇ ಎಂಬುದಾಗಿ ಹೇಳಿರುವ ವೇದಗಳು ನೀರು ಮತ್ತು ಅಲೆಗಳ ಸಂಕೇತಕ್ಕೆ ಹೆಚ್ಚು ಪ್ರಾಧಾನ್ಯವನ್ನು ಕೊಟ್ಟಿರುತ್ತವೆ.
ಗಾಯತ್ರೀ ಮಂತ್ರದ ಮೊದಲನೆಯ ಪಾದದಲ್ಲಿನ ತತ್ ಶಬ್ದವು ಅಲೆಯಲ್ಲಿ ಮೂಲಭೂತವಾಗಿರುವ ನೀರನ್ನು ಸೂಚಿಸುತ್ತದೆ. ಸವಿತುಃ ಎಂಬುದು ಸೃಷ್ಟಿಯ ಪ್ರಾರಂಭವನ್ನು ಸೂಚಿಸುವುದರಿಂದ ಅಲೆಯ ಪ್ರಾರಂಭವನ್ನು ಸೂಚಿಸುತ್ತಿದೆ. ವರೇಣಿಯಂ ಎಂಬುದು ವರ್ತುಲಾಕಾರದ ಸೂಚಕವಾಗಿ ಅಲೆಯ ಪ್ರಗತಿಯನ್ನು ಅದು ವರ್ತುಲಾಕಾರದ ಸೂಚಕವಾಗಿ ಅಲೆಯ ಪ್ರಗತಿಯನ್ನು ಅದು ವರ್ತುಲದ ಭಾಗದ ಆಕಾರದಲ್ಲಿ ಮುಂದುವರಿಯುವುದನ್ನು ಸೂಚಿಸುತ್ತದೆ. ಭರ್ಗಃ ಎಂಬುದು ಈ ಸಂಚಲನದಲ್ಲಿ ಶಕ್ತಿ ಇದೆ ಎಂಬುದನ್ನು ಸೂಚಿಸುತ್ತದೆ. ದೇವಸ್ಯ ಎಂಬುದು ಪ್ರಕಾಶಮಾನವಾಗಿ ಅಲೆ ಕಾಣಿಸಿಕೊಳ್ಳುತ್ತಿದೆ ಎಂದರೆ ಅದು ತನ್ನ ಎತ್ತರದ ಮಟ್ಟವನ್ನು ಮುಟ್ಟಿದೆ ಎಂಬ ಭಾವವನ್ನು ಸೂಚಿಸುತ್ತಿದೆ. ಧೀಮಹಿ ಎಂದರೆ ನಾವು ಇದನ್ನು ಧ್ಯಾನಿಸಬೇಕು ಎಂಬ ಭಾವನೆ. ಮೂರನೇ ಪಾದದಲ್ಲಿನ ನಃ, ಯಃ, ಪ್ರಚೋದಯಾತ್ ಎಂಬ ಪದಗಳು ಅದೇ ಮೂಲ ತತ್ವವಾದ ನೀರೇ ಅಲೆಗಳ ರೂಪದಲ್ಲಿ ಮುಂದುವರೆಯುವುದನ್ನು ಸೂಚಿಸುತ್ತದೆ. ಯಃ ಎಂಬುದು ತತ್ ಎಂಬುದರ ಪ್ರತಿಬಿಂಬವೆಂಬ ವಿಷಯವು ಹಿಂದೆಯೇ ಬಂದಿದೆ. ಆದುದರಿಂದ ಅಲೆಯ ಪೂರ್ವ ಭಾಗದ ಪ್ರತಿಬಿಂಬವಾದ ಉತ್ತರ ಭಾಗ ಅಂದರೆ ಅಲೆಯ ಇಳಿಯುವ ಭಾಗವನ್ನು ಸೂಚಿಸುತ್ತದೆ. ಮತ್ತು ಪ್ರಚೋದಯಾತ್ ಎಂಬುದು ಈ ಕ್ರಿಯೆಯು ಮುಂದುವರಿಯುತ್ತ ಅಲೆಗಳು ಮುಂದಕ್ಕೆ ಪ್ರಸರಿಸುತ್ತವೆ ಎಂಬ ಭಾವನೆಯನ್ನು ಕೊಡುತ್ತಿದೆ ‘ನಃ’ ಎಂಬುದು ಬಹುವಚನದಲ್ಲಿರುವುದರಿಂದ ಮತ್ತು ಅದರ ಸಂಬಂಧವಾದ ‘ಧಿಯಃ’ ಎಂಬುದೂ ಬಹುವಚನದಲ್ಲಿರುವುದರಿಂದ ಗಮನಿಸುತ್ತಿರುವ ವಿಶ್ವಾತ್ಮನು ಒಬ್ಬನೇ ಆದರೂ ಈ ಅಲೆಗಳ ರೂಪದ ವಿಶ್ವವ್ಯಾಪಾರದಲ್ಲಿ ನಾನಾತ್ವವನ್ನು ಹೊಂದಿ ಜೀವಾತ್ಮಗಳ ರೂಪದಲ್ಲಿರುವನೆಂದೂ ಈ ಜೀವಾತ್ಮರಿಗೆ ಬುದ್ದಿ ಗೋಚರವಾಗುವಂತೆ ವಿಶ್ವವ್ಯಾಪಾರವು ಅಲೆಗಳ ರೂಪದಲ್ಲಿ ಮುಂದುವರಿಯುತ್ತಿದೆ ಎಂದೂ ಭಾಸವಾಗುತ್ತದೆ. ನೀರು ಮತ್ತು ಅಲೆಗಳ ತತ್ವವನ್ನು ಸತ್, ಚಿತ್, ಆನಂದಗಳ ಎಲ್ಲ ಹಂತಗಳಲ್ಲೂ ಅನ್ವಯಿಸಿ, ‘ಆಪಃ’ ಎಂಬ ಶಬ್ದವನ್ನುಪಯೋಗಿಸಿ ಹೇಳಿರುವ ಮೇಲ್ಕಂಡ ಮಂತ್ರವು ಸದಾ ಭಾವಿಸಲು ಯೋಗ್ಯವಾಗಿದೆ.
ಈಗ ಜಡವಸ್ತುಗಳು, ಜೀವಿಗಳು, ಬುದ್ಧಿಜೀವಿಗಳು ಎಂಬ ವಿಷಯವನ್ನು ಕುರಿತು ಆಲೋಚಿಸೋಣ. ಗಾಯತ್ರಿಯ ಮೊದಲನೇ ಪಾದವು ಸೂರ್ಯ ಮತ್ತು ಭೂಮಿಯ ರೂಪದಲ್ಲಿ ಜಡವಸ್ತುಗಳಿಗೆ ಸಂಕೇತವಾಗಿರುವುದು ಸ್ಪಷ್ಟ. 2ನೇ ಪಾದವು “ಭಗವಃ” ಎಂದರೆ ಪಾಕವೆಂಬ ಅರ್ಥದಂತೆ ಪ್ರಾಣಿ ಜಗತ್ತಿಗೆ ಸೂಚಕ. ದೇವಸ್ಯ, ಧೀಮಹಿ ಎಂಬ ಶಬ್ದಗಳು ಪ್ರಾಣಿ ಜಗತ್ತನ್ನೂ ಮೀರಿದ ಬುದ್ಧಿಯ ಹಂತವನ್ನು ಸೂಚಿಸುತ್ತಿವೆ. ಮೂರನೇ ಪಾದವು ಬುದ್ಧಿ ಜೀವಿಗಳ ಉನ್ನತ ಸ್ಥಿತಿಯನ್ನು ಮುಂದೆ ಅವರು ಬೆಳೆಯಬೇಕಾದ ಲಕ್ಷ್ಯವನ್ನೂ ಸೂಚಿಸುತ್ತಿದೆ.
9
(Published in Dharmaprabha dated 1-2-1994)
ಈಗ ಜ್ಞಾನ, ಜ್ಞಾತೃ, ಜ್ಞೇಯ ಎಂಬ ತ್ರಿಪುಟವನ್ನು ಕುರಿತು ಆಲೋಚಿಸೋಣ. ಜ್ಞಾನವೆಂದರೆ ತಿಳಿಯುವುದೆಂದು ಅರ್ಥ. ನಾವು ಪಂಚೇಂದ್ರಿಯಗಳ ಮೂಲಕ ಹೊರ ಜಗತ್ತಿನ ವಿಷಯಗಳನ್ನು ತಿಳಿದು ಕೊಳ್ಳುತ್ತಿರುತ್ತೇವೆ. ಇದಕ್ಕೆ ಪ್ರತ್ಯಕ್ಷ ಜ್ಞಾನವೆಂದು ಹೆಸರು. ಇದಲ್ಲದೆ ಪ್ರತ್ಯಕ್ಷ ಜ್ಞಾನ ಮುಂತಾದುವನ್ನು ಆಧಾರ ಮಾಡಿಕೊಂಡು ನಮ್ಮ ಮನಸ್ಸಿನಲ್ಲೇ ತರ್ಕ ಮಾಡಿಕೊಂಡು ಕೆಲವು ನಿರ್ಣಯಗಳಿಗೆ ಬರುತ್ತೇವೆ. ಇದಕ್ಕೆ ಅನುಮಾನದಿಂದ ಬಂದ ಜ್ಞಾನವೆಂದು ಹೆಸರು. ಅಲ್ಲದೆ ಕೆಲವು ವಿಷಯಗಳನ್ನು ಬಲ್ಲವರಿಂದ ತಿಳಿದುಕೊಳ್ಳುತ್ತೇವೆ. ಇದಕ್ಕೆ ಆಪ್ತ ವಾಕ್ಯದಿಂದ ಬಂದ ಜ್ಞಾನವೆಂದು ಹೆಸರು. ಪ್ರತ್ಯಕ್ಷವಾಗಿ ನೋಡಿದರೂ ತಪ್ಪು ತಿಳುವಳಿಕೆಗೆ ಅವಕಾಶವಿದೆ. ತರ್ಕ ಮಾಡಿಯೂ ತಪ್ಪು ತಿಳುವಳಿಕೆಯನ್ನು ಒಂದೊಂದು ಸಲ ಪಡೆಯಬಹುದು. ಆಪ್ತವಾಕ್ಯವನ್ನು ಅರ್ಥಮಾಡಿಕೊಳ್ಳುವುದರಲ್ಲಿಯು ತಪ್ಪು ಮಾಡಬಹುದು. ಎಷ್ಟು ಬುದ್ಧಿವಂತರಾದರೂ ಬುದ್ಧಿವಂತರ ನಡುವೆಯೇ ಅಭಿಪ್ರಾಯ ಭೇದಗಳಿಗೆ ಅವಕಾಶವಿದೆ. ಜ್ಞಾನವು ಹೀಗೆ ನಾನಾ ರೂಪಗಳಲ್ಲಿದ್ದರೂ ವಿಜ್ಞಾನ ರೂಪದಲ್ಲಿ ಎಲ್ಲರಿಂದಲೂ ಅಂಗೀಕರಿಸಲ್ಪಡುವಷ್ಟು ಏಕರೂಪತೆಯನ್ನು ಪಡೆಯುವುದನ್ನು ನಾವು ಇಂದಿನ ವಿಜ್ಞಾನ ಯುಗದಲ್ಲಿ ನೋಡುತ್ತಿದ್ದೇವೆ. ಜ್ಞಾನವೆಂದು ಏಕರೂಪತೆಯನ್ನು ಪಡೆಯಬೇಕಾದರೆ ಅದು ಸತ್ಯವಾಗಿರಬೇಕು. ಸತ್ಯವಾದ ಸ್ಥಿತಿ ಒಂದೇ. ಅದಕ್ಕೆ ಭಿನ್ನವಾಗಿ ಅಸತ್ಯವಾದ ಅಥವಾ ಅಲ್ಪ ಸತ್ಯವಾದ ಸ್ಥಿತಿಗಳು ಎಷ್ಟಾದರೂ ಇರಬಹುದು ಆದುದರಿಂದ ಸತ್ಯವಾದ ಜ್ಞಾನವನ್ನೇ ಜ್ಞಾನವೆಂದು ಭಾವಿಸಬೇಕು. ಸತ್ಯವೆಂದರೆ ದೇಶ ಕಾಲಗಳಲ್ಲಿ ಒಂದೇ ರೂಪ ಹೊಂದಿರುವುದು. ಅಥವಾ ಶಾಶ್ವತವಾಗಿರುವುದು. ಬೆಂಕಿ ಸುಡುತ್ತದೆ ಎಂಬುದು ಸತ್ಯ. ಕಾರಣ ಇದು ಎಲ್ಲ ದೇಶ ಕಾಲಗಳಲ್ಲೂ ನಡೆಯುತ್ತದೆ. ಆದುದರಿಂದ ಸತ್ಯದ ಬೆಳಕಿರುವುದೇ ಜ್ಞಾನ. ಇತರ ವಿಧವಾದ ಜ್ಞಾನಗಳೆಲ್ಲವೂ ಅಜ್ಞಾನದ ಅಥವಾ ಅಲ್ಪ ಜ್ಞಾನದ ನಾನಾ ಸ್ವರೂಪಗಳು ಮಾತ್ರ.
ಜ್ಞಾತೃ ಎಂದರೆ ಈ ಸತ್ಯ ರೂಪವಾದ ಜ್ಞಾನವನ್ನು ಪಡೆಯುತ್ತಿರುವವನು. ಜ್ಞೇಯವೆಂದರೆ ತಿಳಿಯತಕ್ಕ ವಿಷಯ. ಇದು ಜ್ಞಾನದ ಉದ್ದೇಶವನ್ನು ಅನುಸರಿಸಿಕೊಂಡಿರುತ್ತದೆ. ಜ್ಞಾನದ ಉದ್ದೇಶವೇನು? ಎಲ್ಲರ ಜಿಜ್ಞಾಸೆಯು ಒಟ್ಟಿನಲ್ಲಿ ಸುಖಪ್ರಾಪ್ತಿಯ ಉದ್ದೇಶವುಳ್ಳದ್ದೇ. ಈ ಸುಖಗಳಲ್ಲಿ ಸ್ವಲ್ಪ ಹೊತ್ತಿದ್ದು ದುಃಖವಾಗಿ ಪರಿಣಮಿಸುವ ಸುಖವು ನಿಜವಾದ ಸುಖವಲ್ಲ. ಆದುದರಿಂದ ಶಾಶ್ವತವಾದ ಸುಖವೇ ಎಲ್ಲರ ಆತ್ಮವೂ ಬಯಸುವುದು. ಇದಕ್ಕೆ ಆನಂದವೆಂದು ಹೆಸರು.
ಈ ಆನಂದವು ಬಾಹ್ಯವಸ್ತುಗಳಿಂದ ಸಿಗುವುದಿಲ್ಲ. ಕಾರಣ ಅವುಗಳಿಗೆ ಪರಿಮಿತಿ ಇದೆ. ಬಾಹ್ಯವಸ್ತುಗಳೇಕೆ? ನಮ್ಮ ಶರೀರವೇ ಶಾಶ್ವತವಲ್ಲ. ಆದರೆ ಆತ್ಮ ಶಾಶ್ವತ. ಅದಕ್ಕೆ ಮರಣವಿಲ್ಲ. ಈ ಆತ್ಮಕ್ಕೆ ಶಾಶ್ವತವಾದ ಆನಂದವು ಬೇಕಾದರೆ ಯಾವ ಜ್ಞಾನವು ಬೇಕೋ ಅದೇ ಉತ್ತಮವಾದ ಮತ್ತು ಪೂರ್ತಿಯಾಗಿ ನಿಜವಾದ ಜ್ಞಾನ. ಅದಕ್ಕೆ ಅಮರಕೋಶದಲ್ಲಿ “ಮೋಕ್ಷೇ ಧೀಜ್ಞಾನ ಮನ್ಯತ್ರ ವಿಜ್ಞಾನಂ ಶಿಲ್ಪ ಶಾಸ್ತ್ರಯೋಃ” ಎಂದು ಹೇಳಿರುವುದು ಆದುದರಿಂದ ವಸ್ತು ವಿಜ್ಞಾನವನ್ನು ಸಹ ಮೀರಿ ಶಾಶ್ವತಾನಂದ ರೂಪವಾದ ಮೋಕ್ಷಕ್ಕೆ ಸಂಬಂಧಿಸಿದ ಜ್ಞಾನವಾವುದಿದೆಯೋ ಅದೇ ನಿಜವಾದ ಜ್ಞಾನ. ಅದು ನಮ್ಮೆಲ್ಲರ ಗುರಿ. ಅಜ್ಞಾನವು ಯಾವ ಪರಮಸತ್ಯ ಸ್ಥಿತಿಯನ್ನು ತೋರಿಸುತ್ತದೆಯೋ ಅದೇ ಜ್ಞೇಯ. ಅದನ್ನು ಪಡೆಯುವವನೇ ಜ್ಞಾತೃ.
ಜ್ಞಾತೃತ್ವದ ಮೊದಲನೆಯ ಹಂತದಲ್ಲಿರುವ ನಾವು ಮೊದಲನೇ ಹಂತದ ಜ್ಞೇಯಗಳ ಮೊದಲನೇ ಹಂತದ ಜ್ಞಾನವನ್ನು ಪಡೆಯುತ್ತ ಈ ಸಂಸಾರದಲ್ಲಿದ್ದೇವೆ. ಇದನ್ನು ಅತ್ಯುತ್ತಮ ಹಂತಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಸಾಧನವು ‘ಬುದ್ಧಿ’ ಇದಕ್ಕೆ “ಧೀ” ಎಂಬ ಹೆಸರೂ ಇದೆ. ಗಾಯತ್ರಿ ಮಂತ್ರದಲ್ಲಿನ “ಧೀಮಹಿ” “ಧಿಯಃ” ಎಂಬ ಶಬ್ದಗಳು ಈ ಬುದ್ಧಿಗೆ ಸಂಬಂಧಿಸಿರುವುವು. ಈ ಬುದ್ಧಿಯನ್ನು ಸರಿಯಾದ ಗುರಿಯತ್ತ ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಭಾವವು “ಪ್ರಚೋದಯಾತ್” ಎಂಬುದರಲ್ಲಿದೆ. ‘ನಃ’ ಎಂದರೆ ನಮ್ಮ ಎಂಬುದರಲ್ಲಿ ಸೂಚಿತವಾದ ಭಿನ್ನ ಬಿನ್ನ ಮತ್ತು ಪ್ರಾರಂಭದ ದಸೆಯಲ್ಲಿರುವ ಜ್ಞಾತೃಗಳನ್ನು “ಯಃ” ಎಂಬ ಏಕವಾದ ಗುರಿಯು ಮುಂದಕ್ಕೆ ತೆಗೆದುಕೊಂಡು ಹೋಗಲಿ ಎಂದು ಹೇಳಿರುವುದರಿಂದ ‘ಯಃ’ ಎಂಬುದೇ ಜ್ಞೇಯ. ಜ್ಞೇಯವು ಎಂದರೆ ತಿಳಿಯಬೇಕಾದ ಸತ್ಯ ಎಂಬ ಗುರಿಯೇ ಜ್ಞಾತೃವನ್ನು ಅಂದರೆ ತಿಳಿಯಲು ಪ್ರಯತ್ನಿಸುತ್ತಿರುವವನ್ನು “ಜ್ಞಾನ” ಎಂದರೆ ತಿಳಿಯುವಿಕೆ ಎಂಬ ಕಾರ್ಯದಲ್ಲಿ ಪ್ರಚೋದಿಸುತ್ತಿರುವುದು.
ಆದುದರಿಂದ ‘ನಃ’ ಎಂಬುದು ಜ್ಞಾತೃವನ್ನು, ‘ಯಃ’ ಎಂಬುದು ಜ್ಞೇಯವನ್ನು ‘ಧೀ’ ಎಂಬುದು ಜ್ಞಾನವನ್ನು ಸೂಚಿಸುತ್ತಿವೆ.
ಈ ‘ಧೀ’ ಅಥವಾ ಬುದ್ಧಿ ಎಂಬುದರ ಗುಣಗಳನ್ನು ಕೆಳಗಿನ ಶ್ಲೋಕವು ತಿಳಿಸುತ್ತಿದೆ.
“ಶುಶ್ರೂಷಾ ಶ್ರವಣಂ ಚೈವ ಗ್ರಹಣಂ ಧಾರಣಂ ತಥಾ,
ಊಹಾಪೋಹೋsರ್ಥ ವಿಜ್ಞಾನಂ ತತ್ವಜ್ಞಾನಂಚ ಧೀ ಗುಣಾಃ”
ಶುಶ್ರೂಷೆ ಮೊದಲನೇ ಗುಣ. ಕೇಳಬೇಕೆಂಬ ಇಚ್ಛೆಯೇ ಶುಶ್ರೂಷೆ. ಇದನ್ನು “ವರೇಣಿಯಂ” ಶಬ್ದವು (ವರಿಸುವುದೆಂದರೆ ಇಚ್ಛಿಸುವುದು) ಸೂಚಿಸುತ್ತಿದೆ. ಶ್ರವಣಂ ಎಂದರೆ ಕೇಳುವುದು ಗ್ರಹಣಂ ಎಂದರೆ ಕೇಳಿದ್ದನು ಗ್ರಹಿಸುವುದು, ಧಾರಣಂ ಎಂದರೆ ಅದನ್ನು ಗಟ್ಟಿಯಾಗಿ ಹಿಡಿದಿರುವುದು ಎಂಬ ಭಾವಗಳು ಇಚ್ಚೆಯನ್ನು ಕಾರ್ಯರೂಪಕ್ಕೆ ತರುವ ಕೆಲಸಗಳು. ಇವುಗಳಿಗೆ ಶಕ್ತಿ ಬೇಕು. ಶಕ್ತಿಯಿಲ್ಲದೆ ಬಯಕೆಯನ್ನು ಕಾರ್ಯರೂಪಕ್ಕೆ ತರದಿದ್ದರೆ ನಿಷ್ಫಲವಲ್ಲವೇ. ಈ ಶಕ್ತಿಯನ್ನು “ಸವಿತೃ” ಶಬ್ದವು ಸೂಚಿಸುತ್ತಿದೆ. “ಸವಿತೃ” ಎಂದರೆ ಪ್ರೇರಕನು ಎಂದು ಅರ್ಥ. ಪ್ರೇರಣೆ ಎಂಬುದು ಶಕ್ತಿ ಸೂಚಕ. ಅಲ್ಲದೆ ಸೂರ್ಯನು ಸಮಸ್ತ ಶಕ್ತಿಗೂ ಮೂಲ. ಆಮೇಲೆ ನಡೆಯಬೇಕಾದ ಬುದ್ಧಿಯ ಕೆಲಸಗಳು ಊಹಾಪೋಹಗಳು ಮತ್ತು ಅರ್ಥ ವಿಜ್ಞಾನ. ಇವು ನಮ್ಮೊಳಗೇ ನಡೆಯುವ ಬುದ್ಧಿ ಕಾರ್ಯಗಳು, ಇದರಿಂದ ಜ್ಞಾನವು ಪರಿಪಕ್ವವಾಗುತ್ತೆ. ಈ ಪರಿಪಕ್ವ ಮಾಡುವುದನ್ನು “ಭರ್ಗಃ” ಎಂಬ ಶಬ್ದವು ಸೂಚಿಸುತ್ತದೆ. ಭರ್ಗಃ ಎಂದರೆ “ಪಾಕ”ವೆಂಬುದಾಗಿ ಹಿಂದೆಯೇ ತಿಳಿಸಿದೆ ಕೊನೆಗೆ ಇದರ ಫಲವಾಗಿ ಬರುವುದೇ “ತತ್ವಜ್ಞಾನ” ಇದು ಪ್ರಕಾಶದಂತೆ ಉದ್ಭವಿಸುತ್ತದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ತಿಳಿಯದ ಒಂದು ಸತ್ಯ ತಿಳಿದು ಬಂದರೆ ಕತ್ತಲಿನಲ್ಲಿ ಪ್ರಕಾಶವುಂಟಾದಂತೆ ಆಗುವುದಿಲ್ಲವೆ? “ದೇವ” ಎಂದರೆ ಪ್ರಕಾಶಿಸುವವನು. ಆದುದರಿಂದ ಈ ಶಬ್ದವು ಈ ತತ್ವ ವಿಜ್ಞಾನವನ್ನು ಸೂಚಿಸುತ್ತಿದೆ. ಆದುದರಿಂದ “ಸವಿತುಃ” ಎಂಬುದರಿಂದ “ದೇವಸ್ಯ” ವರೆಗಿನ ಶಬ್ದಗಳು ಮೇಲಿನ ಶ್ಲೋಕದಲ್ಲಿನ ಧೀ ಗುಣವನ್ನು ಸೂಚಿಸುತ್ತಿವೆ.
ತತ್ ಎಂಬ ಮೊದಲನೇ ಶಬ್ದವು ಅವ್ಯಕ್ತ ಮೂಲತತ್ವದ ಸೂಚಕವೆಂದೂ ‘ಯಃ’ ಎಂಬುದು ಇದರ ಪ್ರತಿಬಿಂಬವೆಂದೂ ಹಿಂದೆಯೇ ತಿಳಿದು ಕೊಂಡಿರುತ್ತೇವೆ. ಆದುದರಿಂದ “ಜ್ಞೇಯ”ವನ್ನೇ ಸೂಚಿಸುವ ಶಬ್ದ. (ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)
10
(Published in Dharmaprabha dated 1-3-1994)
ಈಗ ಇಡಾ, ಪಿಂಗಳಾ ಮತ್ತು ಸುಷುಮ್ನಾ ನಾಡಿಗಳ ವಿಷಯವನ್ನು ಕುರಿತು ಆಲೋಚಿಸೋಣ. ಶರೀರದಲ್ಲಿ ಅನೇಕ ನಾಡಿಗಳು (ನರಗಳು) ಇದ್ದು ಮಿದುಳಿನ ಕೆಲಸಕ್ಕೆ ಸಹಾಯಕವಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಯೋಗಶಾಸ್ತ್ರದಲ್ಲಿ (ಮುಖ್ಯವಾಗಿ ಹಠಯೋಗದಲ್ಲಿ) ಈ ಸಾವಿರಾರು ನಾಡಿಗಳಲ್ಲಿನ ಮೂಲಭೂತವಾದ ಎರಡು ನಾಡಿಗಳನ್ನು ಗುರುತಿಸಿರುತ್ತಾರೆ. ಇವೇ ಇಡಾ ಮತ್ತು ಪಿಂಗಳಾ ಎಂಬುವು. ಹೊರಗಿನಿಂದ ಬರುವ ಶಬ್ದಾದಿ ವಿಷಯಗಳ ಇಂದ್ರಿಯ ಸಂವೇದನೆಯು ‘ಇಡಾ’ ನಾಡಿಯ ಮೂಲಕ ಮೆದುಳಿನ ಒಳಗೆ, ಮನಸ್ಸಿಗೆ, ತಲುಪುತ್ತದೆ. ಮೆದುಳಿನಲ್ಲಿ ಅಭಿವ್ಯಕ್ತವಾದ ಮನಸ್ಸಿನ ಪ್ರತಿಕ್ರಿಯಾ ಶಕ್ತಿ ಪ್ರವಾಹವು ‘ಪಿಂಗಳಾ’ ನಾಡಿಯ ಮೂಲಕ ಹೊರಗೆ ಹರಿಯುತ್ತದೆ. ಹೀಗೆ ಮನಸ್ಸಿಗೂ ಬಾಹ್ಯಪ್ರಪಂಚಕ್ಕೂ ಸಂಬಂಧವನ್ನು ಕಲ್ಪಿಸುವ ಈ ಎರಡು ನಾಡಿಗಳ ಕೆಲಸ ಪ್ರಾಣವಿರುವವರೆಗೂ ನಡೆಯುತ್ತಲೇ ಇರುತ್ತದೆ. ಪ್ರಾಣವಿರುವವರೆಗೂ ನಡೆಯುವ ಶರೀರ ವ್ಯಾಪಾರಕ್ಕೆ ಮೂಲಭೂತವಾದ ನರಗಳ ವ್ಯಾಪಾರವು ಎರಡು ಬಗೆಯಾಗಿರುತ್ತದೆ. ಉದಾಹರಣೆಗೆ ಉಸಿರನ್ನು ಎಳೆದುಕೊಳ್ಳುವುದು ಬಿಡುವುದೂ. ಒಂದರಲ್ಲಿ ನರಗಳ ಬಿಗಿತವೂ ಇನ್ನೊಂದರಲ್ಲಿ ಸಡಿಲವೂ ಇರುತ್ತದೆ. ಸೂರ್ಯಚಂದ್ರರು ಹೇಗೆ ಪ್ರಕೃತಿಯಲ್ಲಿ ಒಂದಕ್ಕೊಂದು ಇದುರಾಗಿದ್ದು ಬೇರೆ ಬೇರೆ ಕಾರ್ಯಗಳಿಗೆ ಪ್ರೇರಕರಾಗಿ ಉಷ್ಣ, ಶೈತ್ಯ, ತೇಜಸ್ಸು, ಆಹ್ಲಾದ ಇತ್ಯಾದಿ ಭಿನ್ನಭಾವಗಳಿಗೆ ಪ್ರೇರಕಗಳಾಗಿದ್ದಾರೆಯೋ, ಹಾಗೆಯೇ ಇವೂ ಇರುವುದರಿಂದ ಇಡಾನಾಡಿಗೆ ಚಂದ್ರನಾಡಿಯೆಂದೂ, ಪಿಂಗಳಿಗೆ ಸೂರ್ಯನಾಡಿಯೆಂದು ಹೆಸರುಗಳು ಬಂದಿವೆ.
ಇವೆರಡಲ್ಲದೆ ಮಾನವನಲ್ಲಿ ಜ್ಞಾನದ ಪ್ರತ್ಯೇಕ ಬೆಳವಣಿಗೆಯಿರುವುದರಿಂದ ಇದಕ್ಕೆ ಸಂಬಂಧಪಟ್ಟ ಮೂರನೆಯ ನಾಡಿಯಾದ ಸುಷುಮ್ನಾ ನಾಡಿಯು ನಡುವೆ ಗುದಸ್ಥಾನದಿಂದ ಮಿದುಳಿನವರೆಗೂ ವ್ಯಾಪಿಸಿದೆ ಎಂದು ಭಾವಿಸಲಾಗಿದೆ. ಲೌಕಿಕ ವ್ಯವಹಾರದಲ್ಲಿ ಇದು ಕೆಲಸಮಾಡುವುದಿಲ್ಲ. ಆದರೆ ಆಧ್ಯಾತ್ಮಕ ಜ್ಞಾನವು ಬೆಳೆದಷ್ಟೂ ಇದು ಕೆಲಸ ಮಾಡುತ್ತದೆ. ಇದರಲ್ಲಿ ಮೂಲಾಧಾರದಿಂದ ಸಹಸ್ರಾರದವರೆಗೂ 6 ಚಕ್ರಗಳಿರುತ್ತವೆ. ಕುಂಡಲಿನೀಶಕ್ತಿ (ಹಾವಿಗೆ ಹೋಲಿಸಲ್ಪಟ್ಟಿದೆ) ಮೂಲಾಧಾರದಲ್ಲಿ ಹಾವಿನಂತೆ ಸುರುಳಿಸುತ್ತಿಕೊಂಡು ನಿದ್ರೆಮಾಡುತ್ತಿರುತ್ತದೆ. ಆಧ್ಯಾತ್ಮಿಕ ಜ್ಞಾನದ ಪ್ರಗತಿಯಿಂದ (ಹಠಯೋಗದಲ್ಲಿ ಇಡಾಪಿಂಗಳಾನಾಡಿಗಳ ಬಲಾತ್ಕಾರವಾದ ನಿರೋಧದಿಂದ) ಈ ಕುಂಡಲಿನೀ ಶಕ್ತಿಯು ಕ್ರಮೇಣ ಮೇಲಕ್ಕೆ ಪ್ರಸರಿಸಿ ಒಂದೊಂದು ಚಕ್ರವನ್ನೂ ಭೇದಿಸಿಕೊಂಡು ಹೋಗಿ ಕೊನೆಗೆ ಸಹಸ್ರಾರವನ್ನು ತಲುಪಿದರೆ ಯೋಗಿ ಮುಕ್ತನಾಗುತ್ತಾನೆ. ಈ ಸುಷುಮ್ನಾನಾಡಿಗೆ ಅಗ್ನಿಯನ್ನು ಸಂಕೇತವಾಗಿ ಕೊಡಲಾಗಿದೆ. ರಾಮಾಯಣದ ಅಂತರಾರ್ಥದಲ್ಲಿ ಲಂಕಾದಹನ, ಸೀತಾಗ್ನಿಪ್ರವೇಶ ಈ ಕಥೆಗಳಲ್ಲಿನ ಅಗ್ನಿಗೂ ಸುಷುಮ್ನಾ ನಾಡಿಯಲ್ಲಿ ನಡೆಯುವ ಅಗ್ನಿಯ ಕೆಲಸಕ್ಕೂ ಸಂಬಂಧವನ್ನು ಹೇಳಲಾಗಿದೆ. ಆದುದರಿಂದ ಹಿಂದೆ ಚರ್ಚಿಸಲ್ಪಟ್ಟಿರುವ ಸೂರ್ಯ, ಚಂದ್ರ ಮತ್ತು ಅಗ್ನಿಯ ವಿಷಯಗಳನ್ನು ಪಿಂಗಳ ಇಡಾ ಮತ್ತು ಸುಷುಮ್ನಾ ನಾಡಿಗಳಿಗೂ ಅನ್ವಯಿಸಿಕೊಂಡು ನೋಡಬಹುದು.
‘ಸವಿತುಃ’ ಎಂಬ ಶಬ್ದವು ಪಿಂಗಳಾನಾಡಿಗೂ ಯಃ ಎಂಬುದು ಇಡಾನಾಡಿಗೂ ಸೂಚಕಗಳಾಗಿವೆ. ಸೂರ್ಯ ಚಂದ್ರರಿಗೆ ಇದನ್ನು ಹಿಂದೆಯೇ ಅನ್ವಯಿಸಲಾಗಿದೆ. ವರೇಣಿಯಂ ಭರ್ಗಃ, ದೇವಸ್ಯ, ಧೀಮಹಿ, ದಿಯಃ, ಈ ಶಬ್ದಗಳು ಅಗ್ನಿಸಂಕೇತವುಳ್ಳ ಸುಷುಮ್ನಾ ನಾಡಿಗೆ ಸೂಚಕಗಳು.
ಸುಷುಮ್ನಾ ನಾಡಿಯಲ್ಲಿನ ಆರು ಚಕ್ರಗಳು
1. ಮೂಲಾಧಾರ – ಭೂಮಿತತ್ವ
2. ಸ್ವಾಧಿಷ್ಮಾನ – ಜಲತತ್ವ
3. ಮಣಿಪುರ – ಅಗ್ನಿತತ್ವ
4. ಅನಾಹತ – ವಾಯುತತ್ವ
5. ವಿರುದ್ಧ – ಆಕಾಶತತ್ವ
6. ಆಜ್ಞಾ – ಮನಸ್ತತ್ವ
ಇದಕ್ಕಿಂತಲೂ ಮೇಲೆ ಇರುವುದೇ ಸಹಸ್ರಾರ ಕಮಲ, ಕುಂಡಲಿನಿ ಇದನ್ನು ತಲುಪಬೇಕು.
ಈಗ ಗಾಯಿತ್ರೀ ಮಂತ್ರದಲ್ಲಿನ ಶಬ್ದಗಳಿಗೂ ಈ ಚಕ್ರಗಳಿಗೂ ಸಹಸ್ರಾರ ಕಮಲಕ್ಕೂ ಇರುವ ಹೋಲಿಕೆಯನ್ನು ಗಮನಿಸೋಣ.
1. ವರೇಣಿಯಂ- ಇದು ‘ವೃ’ ಎಂಬ ದಾತುವಿನಿಂದ ಬಂದಿದೆ. ಇದಕ್ಕೆ ಆವರಿಸುವುದು, ಸುತ್ತಿಕೊಳ್ಳುವುದು ಎಂಬ ಅರ್ಥಗಳಿರುವುದರಿಂದ ಕುಂಡಲಿನೀ ಶಕ್ತಿಯು ಹಾವಿನ ರೂಪದಲ್ಲಿ ಸುರಳಿಹಾಕಿಕೊಂಡು ಮಲಗಿರುವ ಸ್ಥಿತಿಗೆ ಸೂಚಕವಾಗಿದೆ. ಮೂಲಾಧಾರದಲ್ಲಿ ಹೀಗಿರುವ ಕುಂಡಲಿನೀ ಶಕ್ತಿಯು ಎಚ್ಚರ ಹೊಂದಿದಾಗ ಸ್ವಲ್ಪ ಮೇಲಕ್ಕೆದ್ದು ಸ್ವಾಧಿಷ್ಟಾನ ಚಕ್ರವನ್ನು ತಲುಪುತ್ತದೆ. ಈ ಎರಡು ಚಕ್ರಗಳು ಭೂಮಿ ಮತ್ತು ನೀರಿನ ತತ್ವಗಳುಳ್ಳವು. ನೀರು ಭೂಮಿಯನ್ನು ಆವರಿಸಿಕೊಂಡಿರುದುದರಿಂದ ವರೇಣಿಯಂ ಶಬ್ದವು ನೀರಿನ ಸೂಚಕವೂ ಆಗಿದೆ. ಆದುದರಿಂದ ಈ ಶಬ್ದವು ಮೂಲಾಧಾರ ಮತ್ತು ಸ್ವಾಧಿಷ್ಠಾನ ಚಕ್ರಗಳ ಸಂಕೇತವಾಗಿದೆ.
2. ಭರ್ಗ: – ಇದಕ್ಕೆ ಪಾಕ ಅಥವಾ ಪಚನವಾಗುವುದು ಎಂದು ಅರ್ಥವೆಂದೂ, ಇದು ಅಗ್ನಿ ತತ್ವ ಸೂಚಕವೆಂದೂ ಹಿಂದೆಯೇ ತಿಳಿಸಿರುತ್ತೆ. ಆದುದರಿಂದ ಇದು ಜಠರಾಗ್ನಿ ಇರುವ ಹೊಟ್ಟೆಯ ಭಾಗಕ್ಕೆ ಸರಿಯಾಗಿ ಹಿಂದೆಯಿರುವ ಮಣಿಪುರ ಚಕ್ರಕ್ಕೆ ಸಂಕೇತವಾಗಿದೆ.
3. ದೇವಸ್ಯ – ದೇವ ಎಂದರೆ ಕ್ರೀಡಿಸುವವನುಎಂಬ ಅರ್ಥವಿರುವುದರಿಂದಲೂ ಗಾಳಿಯು ಸ್ವೇಚ್ಛಾ ವಿಹಾರಕ್ಕೆ ಸೂಚಕವಾಗಿರುವುದರಿಂದಲೂ, ವಾಯು ತತ್ವದ ಮತ್ತು ಎದೆಯ ಭಾಗದಲ್ಲಿರುವ ಅನಾಹುತ ಚಕ್ರಕ್ಕೆ ಸಂಕೇತವಾಗಿದೆ.
4. ಧೀಮಹಿ – ಧ್ಯಾನಿಸಬೇಕು ಎಂದು ಅರ್ಥ. ಧ್ಯಾನಕ್ಕೆ ಯಾವ ಅಡಚಣೆಯೂ ಇಲ್ಲದ ಆಕಾಶತತ್ವ್ವದ ವಿಶುದ್ಧ ಚಕ್ರವನ್ನು ಇದಕ್ಕೆ ಜೋಡಿಸಬಹುದು. ಧ್ಯಾನವು ಭಾವನಾತ್ಮಕವಾಗಿ ಶಬ್ದರೂಪದಲ್ಲಿರುತ್ತದೆ. ಆಕಾಶವು ಶಬ್ದಗುಣವುಳ್ಳದ್ದು. ಆದುದರಿಂದಲೂ ಇದು ಹೊಂದಾಣಿಕೆಯಾಗುತ್ತದೆ. ಮತ್ತು ಕಂಠಕ್ಕೂ ಶಬ್ದಕ್ಕೂ ಇರುವ ಸಂಬಂಧವನ್ನೂ ಗಮನಿಸಬೇಕು.
5. ಧಿಯಃ – ಬುದ್ಧಿಗಳನ್ನು ಎಂದು ಅರ್ಥ. ಬುದ್ಧಿಗೂ ಮನಸ್ತತ್ವದ ಆಜ್ಞಾ ಚಕ್ರಕ್ಕೂ ಸಂಬಂಧವಿದೆ. ಇದು ಭ್ರೂಮಧ್ಯದಲ್ಲಿರುವ ಚಕ್ರ. ಮಿದುಳಿನ ಶಕ್ತಿಗಳ ಕೇಂದ್ರ ಭ್ರೂಮಧ್ಯ.
ಈಗ ನಃ ಮತ್ತು ಪ್ರಚೋದಯಾತ್ ಎಂಬ ಶಬ್ದಗಳನ್ನು ಸಹಸ್ರಾರ ಕಮಲಕ್ಕೆ ಅನ್ವಯಿಸಿ ನೋಡೋಣ. ಕಮಲದಲ್ಲಿ ಸೌಂದರ್ಯವಿದೆ. ಸಹಸ್ರಾರ ಕಮಲವು ಸಾವಿರಾರು ದಳಗಳ ಸುಂದರವಾದ ರೂಪದಿಂದ ಅಧೋಮುಖವಾಗಿ ಪ್ರಕಾಶಿಸುತ್ತಿರುತ್ತದೆ. ಇದನ್ನು ಕುಂಡಲಿನೀ ಶಕ್ತಿ ಸ್ಪರ್ಶಿಸಿದಾಗ ಇದರಿಂದ ಅಮೃತವು ಸುರಿಯುತ್ತದೆ. ಇದರಿಂದಲೇ ಮೋಕ್ಷ ಪ್ರಾಪ್ತಿ. ಅತ್ಯುತ್ತಮವಾದ ಆನಂದಪ್ರಾಪ್ತಿ. “ನಃ” ಎಂಬುವ ಶಬ್ದಕ್ಕೆ ಅರ್ಥ “ನಮ್ಮೆಲ್ಲರ” ಎಂದು. ಇಲ್ಲಿ ನಾವು ಸಾವಿರಾರು ಜನ ಅಲ್ಲವೇ? ನಮ್ಮೆಲ್ಲರ ಹಿತವನು ಯೋಚಿಸುವನ ಹೃದಯವು ಎಷ್ಟು ಸುಂದರ. ಅದರಲ್ಲಿನ ಪ್ರೇಮವು ಎಷ್ಟು ಮಧುರ. ಅದೇ ಅಮೃತವಲ್ಲವೇ. ಅಮೃತ ಕಿರಣವಾದ ಚಂದ್ರನನ್ನು ಸೂಚಿಸುವ “ಯಃ” ಎಂಬ ಶಬ್ದವು ಕರ್ತೃವಾಗಿರುವ ಪ್ರಚೋದಯಾತ್ ಎಂಬ ಶಬ್ದವು ಸೂಚಿಸುವುದು ಅಮೃತಸಾರವನ್ನಲ್ಲವೇ. ಸಹಸ್ರಾರ ಕಮಲದಲ್ಲಿನ ಸಾವಿರಾರು ದಳಗಳ ಒಕ್ಕೂಟಕ್ಕೂ “ನಃ” ಎಂಬ ಶಬ್ದದಲ್ಲಿನ ಮಾನವ ಲೋಕದ ಒಕ್ಕೂಟದ ಭಾವನೆಗೂ ಹೋಲಿಕೆಯಿರುವುದನ್ನು ಇಲ್ಲಿ ಗಮನಿಸಬಹುದು.
11
(Published in Dharmaprabha dated 1-4-1994)
ಈಗ ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳನ್ನು ಕುರಿತು ಚರ್ಚಿಸೋಣ, ಮೊದಲು ಈ ಮೂರು ವೇದಗಳೇ ಇದ್ದವು. ಅದಕ್ಕೆ ವೇದಗಳಿಗೆ “ತ್ರಯೀ” ಎಂಬ ಹೆಸರು ಬಂದಿರುವುದು. ಅಲ್ಲದೆ ಗಾಯತ್ರೀ ಮಂತ್ರ ಸಂಬಂಧವಾಗಿ ಮನುಸ್ಮೃತಿಯಲ್ಲಿ ಈ ಮೂರು ವೇದಗಳ ಪ್ರಸ್ತಾವ ಮಾತ್ರ ಬಂದಿದೆ. ಋಗ್ವೇದದಿಂದ ಓಂಕಾರದಲ್ಲಿನ ‘ಅ’ ಕಾರವೂ, ‘ಭೂಃ” ಎಂಬ ವ್ಯಾಹೃತಿಯು, ಗಾಯತ್ರಿಯ ಮೊದಲನೇ ಪಾದವೂ ಸಾರಭೂತವಾಗಿ ಬಂದಿವೆಯೆಂದೂ, ಓಂಕಾರದಲ್ಲಿನ ‘ಉ’ ಕಾರವೂ ‘ಭುವಃ’ ಎಂಬ ವ್ಯಾಹೃತಿಯು, ಗಾಯತ್ರಿಯ ಎರಡನೇ ಪಾದವೂ ಯಜುರ್ವೇದದಿಂದ ಬಂದಿವೆಯೆಂದೂ, ಓಂಕಾರದಲ್ಲಿನ ‘ಮ’ ಕಾರವೂ ‘ಸ್ವಃ’ ಎಂಬ ವ್ಯಾಹೃತಿಯು, ಗಾಯತ್ರಿಯ ಮೂರನೇ ಪಾದವೂ ಸಾಮವೇದರಿಂದ ಬಂದಿವೆಯೆಂದೂ ಮನುಸ್ಮೃತಿ ತಿಳಿಸುತ್ತದೆ.
ಋಗ್ವೇದವೆಂಬ ಶಬ್ದವು “ಋಚಸ್ತುತೌ” ಎಂಬ ಧಾತುವಿನಿಂದ ಬಂದಿದೆ. ಅಂದರೆ ಸ್ತೋತ್ರ ಮಾಢುವುದು ಎಂದು ಇದರ ಅರ್ಥ. ಯಜುರ್ವೇದ ಎಂಬ ಶಬ್ಧವು “ಯಜ ದೇವಪೂಜಾ ಸಂಗತಿಕರಣದಾನೇಷು” ಎಂಬ ಧಾತುವಿನಿಂದ ಬಂದಿದೆ ಎಂದರೆ ಯಜ್ಞ ಅಥವಾ ದೇವಪೂಜೆ ಮಾಡುವುದು, ಸಾಂಗತ್ಯ ಮಾಡುವುದು, ಮತ್ತು ದಾನ ಮಾಡುವುದು ಎಂಬ ಅರ್ಥಗಳು ಬರುತ್ತವೆ. ಸಾಮವೇದವೆಂಬ ಶಬ್ದವು “ಷೋ ಅಂತ ಕರ್ಮಣಿ” ಎಂಬ ಧಾತುವಿನಿಂದ ಉತ್ಪನ್ನವಾಗಿದೆ. “ಸ್ಯತಿ ಛಿನತ್ತಿ ಪಾಪಂ” ಅಂದರೆ ಪಾಪವನ್ನು ಅಂತ ಮಾಡುವುದು ಎಂಬ ಅರ್ಥದಲ್ಲಿ ಸಾಮವೇದವೆಂಬ ಹೆಸರು ಬಂದಿದೆ, ಸಮತ್ವವೆಂಬ ಅರ್ಥವನ್ನೂ ಗ್ರಹಿಸಬಹುದು. ಸಮತ್ವದಿಂದಲೇ ಪಾಪ ನಾಶವಾಗುವುದು. ವಿಷಮತೆಯಲ್ಲಿಯೇ ಪಾಪ ಬರುವುದು.
ಜ್ಞಾನ ಪ್ರಧಾನವಾದುದು ಋಗ್ವೇದ, ಕರ್ಮ ಪ್ರಧಾನವಾದುದು ಯಜುರ್ವೇದ, ಭಕ್ತಿ ಪ್ರಧಾನವಾದುದು ಸಾಮವೇದವೆಂದು ಈ ಪತ್ರಿಕೆಯ ಸಹ ಸಂಪಾದಕರಾಗಿದ್ದ ಶ್ರೀ ಹೆಚ್.ಜೆ.ರಾಮಯ್ಯಂಗಾರ್ ಅವರು ತಮ್ಮ “ಹಿಂದೂ ಧರ್ಮದರ್ಶನ”ವೆಂಬ ಗ್ರಂಥದಲ್ಲಿ ಸೊಗಸಾಗಿ ವಿವರಿಸಿರುತ್ತಾರೆ. ಅಥರ್ವ ವೇದವು ವಿಜ್ಞಾನ ಪ್ರಧಾನವಾದುದು ಎಂದೂ ಬರೆದಿರುತ್ತಾರೆ.
ಅದಲ್ಲದೆ ಋಗ್ವೇದವನ್ನು ಪ್ರಕಟಪಡಿಸಿದ ಋಷಿಯ ಹೆಸರು ಅಗ್ನಿಯೆಂದು, ಯಜುರ್ವೇದವನ್ನು ಪ್ರಕಟಪಡಿಸಿದ ಋಷಿಗೆ ವಾಯುವೆಂದೂ ಸಾಮವೇದವನ್ನು ಪ್ರಕಟಪಡಿಸಿದ ಋಷಿಯು ಆದಿತ್ಯನೆಂದೂ ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆ. ಋಗ್ವೇದದಲ್ಲಿ ಛಂದೋ ಬದ್ಧವಾದ ಮಂತ್ರಗಳೂ ಯಜುರ್ವೇದದಲ್ಲಿ ಛಂದೋ ಬದ್ಧವಲ್ಲದೆ ವಚನ ರೂಪದಲ್ಲಿರುವ ಮಂತ್ರಗಳೂ ಸಾಮವೇದದಲ್ಲಿ ಹಾಡುವ ಮಂತ್ರಗಳೂ ಹೆಚ್ಚಾಗಿ ಕಂಡು ಬರುತ್ತವೆ. ಅಲ್ಲದೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು “ನಾನು ವೇದಗಳಲ್ಲಿ ಸಾಮವೇದವಾಗಿದ್ದೇನೆ” ಎಂದು ಹೇಳಿರುವುದನ್ನು ಸಹ ಇಲ್ಲಿ ಗಮನಿಸಬೇಕಾಗಿದೆ.
ನಮಗೆ ಧರ್ಮದ ಅಥವಾ ಸತ್ಯದ ಜ್ಞಾನವು ಮೊದಲು ಉಂಟಾಗುತ್ತದೆ. ಅದನ್ನು ಭದ್ರಪಡಿಸಿಕೊಳ್ಳಲು ಸ್ತ್ರೋತ್ರ ಮಾಡುತ್ತೇವೆ. ಇದರಿಂದ ಅದರಲ್ಲಿ ಆಸಕ್ತಿ ಸ್ಥಿರವಾಗುತ್ತದೆ. ಋಗ್ವೇದವು ಈ ವಿಷಯವನ್ನು ಸೂಚಿಸುತ್ತಿದೆ. ಇದರ ಋಷಿಯ ಹೆಸರಾದ “ಅಗ್ನಿ” ಶಬ್ದವು ಸಹ ಇದಕ್ಕೆ ಪೋಷಕವಾಗಿದೆ. ಅಗ್ನಿಯ ವಿಷಯವಾಗಿ ಹಿಂದೆ (ನವಂಬರ್ 93ರ ಸಂಚಿಕೆಯಲ್ಲಿ) ಹೀಗೆ ಬರೆದಿರುತ್ತೆ.
“ಹೀಗೆ ಈ ಅಗ್ನಿ ತತ್ವವು ಮಾನವರ ಸಂಕಲ್ಪ ಶಕ್ತಿಗೆ ಸಂಬಂಧಿಸಿ ವಾಕ್ ಶಕ್ತಿ, ಪ್ರೇಮಶಕ್ತಿ, ಧರ್ಮ, ಪುಣ್ಯಫಲಪ್ರಾಪ್ತಿ, ಪರೋಪಕಾರ, ಉತ್ತಮವಾದ ಆನಂದ ಇವುಗಳ ದ್ಯೂತಕವಾಗಿದೆ”.
ಸಂಕಲ್ಪ ಶಕ್ತಿಗೆ ಮೀರಿ ನಮ್ಮಲ್ಲಿ ಪ್ರಾಣಶಕ್ತಿ ಕೆಲಸ ಮಾಡುತ್ತಿದೆ. ಸಂಕಲ್ಪ ಶಕ್ತಿಯಿಂದ ಜ್ಞಾನವನ್ನು ಪಡೆಯುವುದನ್ನು ಅಗ್ನಿ ಸೂಚಿಸುತ್ತಿದೆ. ಋಗ್ವೇದವು ಈ ಅಂಶವನ್ನು ಸೂಚಿಸುತ್ತಿದೆ. ಇದು ಜ್ಞಾನ ಪ್ರಧಾನವಾದುದು ಆದರೆ ಕೇವಲ ಜ್ಞಾನವೇ ಸಾಕಾಗುವುದಿಲ್ಲ. ಅದು ಕರ್ಮದಲ್ಲಿ ಪರಿಣಮಿಸಿ ನಮ್ಮ ಸಂಕಲ್ಪ ಶಕ್ತಿಯನ್ನು ಮೀರಿದ ದೇವತಾ ಶಕ್ತಿಗಳ ಬೆಳವಣಿಗೆ ಮತ್ತು ಅನುಗ್ರಹದಲ್ಲಿ ಪರಿಣಮಿಸಬೇಕಾಗಿದೆ. ಇದನ್ನು ಕರ್ಮಪ್ರಧಾನವಾದ ಯಜುರ್ವೇದ ಸೂಚಿಸುತ್ತಿದೆ. ಇದರ ಋಷಿ “ವಾಯು”. ವಾಯು “ಪ್ರಾಣ” ಸೂಚಕ. ಕರ್ಮಕ್ಕೆ ಪ್ರಾಣವೇ ಆಧಾರ. ನಾನಾ ವಿಧವಾದ ಜ್ಞಾನವು ಈ ರೀತಿಯಾಗಿ ಕರ್ಮದಿಂದ ಪುಷ್ಟವಾದರೆ ಮಾತ್ರ ಸಾಲದು. ಇದು ನಾನಾತ್ವದಿಂದ ಏಕತ್ವಕ್ಕೆ ಹೋದರೆ ಮಾತ್ರವೇ ಆನಂದ ಲಭಿಸುವುದು. ಇದನ್ನು ಸಾಮವೇದ ಸೂಚಿಸುತ್ತದೆ. ನಾನಾತ್ವ ಭಾವನೆಯನ್ನು ಅಂತಮಾಡಿ ಸಮತ್ವ ಭಾವನೆಯನ್ನು ಮಾಡಿಸುವುದರ ಸಂಕೇತವಾಗಿ ಸಾಮವೇದವಿದೆ. ಇದರ ಋಷಿಯ ಹೆಸರಾದ ‘ಆದಿತ್ಯ’ ಎಂಬ ಶಬ್ದವು ಈ ಭಾವನೆಗೆ ಪೋಷಕವಾಗಿದೆ. “ದಿತಿ” ಎಂದರೆ ತುಂಡು ಮಾಡುವುದು, ಭೇದಿಸುವುದು ಎಂದು ಅರ್ಥ. ಅದಿತಿ ಎಂದರೆ ಜೋಡಿಸುವುದು ಎಂದು ಅರ್ಥ. ಆದುದರಿಂದ “ಆದಿತ್ಯ”ನೆಂಬ ಹೆಸರು ಇಲ್ಲಿ ಯುಕ್ತವಾಗಿದೆ. ಭಕ್ತಿ ಪ್ರಧಾನವಾದ ಸಾಮವೇದವು ಈ ಐಕ್ಯವನ್ನು ತಾನೆ ಸೂಚಿಸುತ್ತಿರುವುದು?
ಗಾಯತ್ರಿಯ ಮೊದಲನೇ ಪಾದದಲ್ಲಿ ಅವ್ಯಕ್ತವಾಗಿರುವ “ತತ್” ಎಂಬ ಪರಮಾತ್ಮ ತತ್ವವು ಸವಿತೃ ಅಂದರೆ ಸೂರ್ಯನ ರೂಪದಲ್ಲಿ ಜ್ಞಾನದ ಬೆಳಕನ್ನು ನೀಡುತ್ತದೆ. ಇದರಲ್ಲಿ “ವರೇಣಿಯಂ” ಎಂದರೆ ಪ್ರೀತಿ ಹುಟ್ಟುತ್ತದೆ. ಆಗಲೇ ಇದರ ಸ್ತೋತ್ರ ಪ್ರಾರಂಭವಾಗುತ್ತದೆ. ಆದುದರಿಂದ ಋಗ್ವೇದಕ್ಕೂ ಗಾಯತ್ರಿಯ ಮೊದಲನೇ ಪಾದಕ್ಕೂ ಇಂದ್ರಿಯ ಗೋಚರ, ಮನೋಗೋಚರವಾದ “ಭೂಃ” ಎಂದರೆ ಅಸ್ತಿತ್ವದ ಸತ್ಯಕ್ಕೂ ಸಂಬಂಧ ಕಾಣಿಸುತ್ತಿದೆ. ಓಂಕಾರದಲ್ಲಿನ ಅಕಾರವು ಸಹ ಇದರ ಸಂಕೇತವೇ.
ಗಾಯತ್ರಿಯ ಎರಡನೇ ಪಾದದಲ್ಲಿನ ಕರ್ಮರೂಪವಾದ “ಭರ್ಗಃ” ಎಂದರೆ ಪಚನ ಅಥವಾ ಪರಿಣಾಮ, ದೇವ ಎಂದರೆ ಆಟ, ಧೀಮಹಿ ಎಂದರೆ ಧ್ಯಾನಮಾಡಬೇಕು ಎಂಬ ಭಾವಗಳು ಕರ್ಮಪ್ರಧಾನವಾದ (ಅದರಲ್ಲಿ ಯಜ್ಞರೂಪ ಕರ್ಮಪ್ರಧಾನವಾದ) ಯಜುರ್ವೇದಕ್ಕೆ ಸಂಕೇತಗಳಾಗಿವೆ. ಮತ್ತು “ಭುವಃ” ಎಂದರೆ ಭೂಮಿಯಿಂದ ಬಂದ ಪ್ರಾಣಿ ಜಗತ್ತು ಇದಕ್ಕೂ ಸಂಕೇತವಾಗಿದೆ. ಓಂಕಾರದಲ್ಲಿನ ಉಕಾರಕ್ಕೂ ಸಂಕೇತವಾಗಿದೆ.
ಗಾಯತ್ರಿಯ ಮೂರನೇ ಪಾದದಲ್ಲಿನ ಯಃ ಎಂದರೆ “ತತ್” ಶಬ್ದ ವಾಚ್ಯವಾದ ಅವ್ಯಕ್ತ ಪರಮಾತ್ಮನಾವನೋ ಅವನೇ ಎಂಬ ಅರ್ಥ ಬಂದು ನಮ್ಮ ಜ್ಞಾನದ ಅತ್ಯುನ್ನತ ಮತ್ತು ನಾನಾತ್ವದಿಂದ ಏಕತ್ವಕ್ಕೆ ಏರಿದ ಸ್ಥಿತಿಯನ್ನು ತಲುಪುತ್ತೇವೆ. ಇಲ್ಲಿ ಆನಂದದಿಂದ ಸಂಗೀತ ಹುಟ್ಟುತ್ತದೆ. ಆದುದರಿಂದ ಗಾನ ಪ್ರಧಾನವಾದ ಸಮತ್ವ ಪ್ರಧಾನವಾದ ಪರಮಾತ್ಮ ಸೂಚಕವಾದ ಮತ್ತು ಭಕ್ತಿ ಪ್ರಧಾನವಾದ ಸಾಮವೇದಕ್ಕೆ ಇದು ಸಂಕೇತವಾಗಿದೆ. ಅಲ್ಲದೆ ‘ನಃ’ ಎಂಬ ಶಬ್ದದಲ್ಲಿ ಸೂಚಿತವಾದ ಬಹುತ್ವದಲ್ಲಿನ ಏಕತ್ವದ ಭಾವವೂ ಇದಕ್ಕೆ ಪೋಷಕವಾಗಿದೆ. ಅಲ್ಲದೆ “ಪ್ರಚೋದಯಾತ್” ಎಂಬ ಶಬ್ದದಲ್ಲಿನ “ಮುಂದಕ್ಕೆ ಕೊಂಡೊಯ್ಯಲಿ” ಎಂಬ ಭಾವನೆಯು ಆನಂದ ತತ್ವವನ್ನು ಸೂಚಿಸುತ್ತ ಸಾಮವೇದಕ್ಕೆ ದ್ಯೋತಕವಾಗಿದೆ. ಸ್ವಃ ಎಂದರೆ ಆನಂದವೆಂಬ ಅರ್ಥವುಳ್ಳ ಸ್ವರ್ಗಲೋಕ ಮತ್ತು ಬಾಯಿಯನ್ನು ಮುಚ್ಚಿ ದೀರ್ಘವಾಗಿ ಎಳೆಯುವ ಮಕಾರವು ಸಹ ಸಾಮವೇದ ಸೂಚಕಗಳಾಗಿವೆ.
12
(Published in Dharmaprabha dated 1-5-1994)
1993ನೇ ಇಸ್ವಿಯ ಜುಲೈ ಸಂಚಿಕೆಯಲ್ಲಿ ನಮೂದಿಸಿರುವ ಸೃಷ್ಟಿಯಲ್ಲಿನ ಅನೇಕ ಭೇದಗಳ ಪಟ್ಟಿಗಳಲ್ಲಿನ ಕೆಲವು ವಿಷಯಗಳನ್ನು ಕುರಿತು ಇದುವರೆಗೂ ಚರ್ಚೆಮಾಡಿ ಗಾಯತ್ರೀ ಮಂತ್ರದಲ್ಲಿ ಆ ಭೇದಗಳು ಧ್ವನಿ ರೂಪದಲ್ಲಿ ಹೇಗೆ ಪ್ರತಿಬಿಂಬಿತವಾಗಿದೆ ಎಂದು ತಿಳಿಯಲು ಪ್ರಯತ್ನ ಮಾಡಲಾಯಿತು. ಇದೇ ರೀತಿ ಉಳಿದ ಭೇದಗಳ ವಿಷಯದಲ್ಲೂ ಚರ್ಚೆಯನ್ನು ಮುಂದುವರಿಸಬಹುದು. ಆದರೆ ಗ್ರಂಥವಿಸ್ತರ ಭೀತಿಯಿಂದ ಅದನ್ನು ಮಾಡುವುದನ್ನು ಬಿಟ್ಟು ಆ ಕೆಲಸವನ್ನು ಓದುಗರೇ ತಮ್ಮ ಮನಸ್ಸಿನಲ್ಲಿ ಮಾಡಿಕೊಳ್ಳಬೇಕಾಗಿ ಕೋರುತ್ತಿದ್ದೇನೆ. ಮನನ ಮಾಡಿದಷ್ಟೂ ಸೃಷ್ಟಿಯ ಪ್ರತಿಬಿಂಬವನ್ನು ತನ್ನೊಳಗೆ ತೋರಿಸುವ ಸಾಮಥ್ರ್ಯವು ಗಾಯತ್ರಿ ಮಂತ್ರಕ್ಕಿದೆ. ಆದುದರಿಂದಲೇ “ನ ಗಾಯತ್ರ್ಯಾಃ ಪರಂ ಮಂತ್ರಂ ನಾ ಮಾತುಃ ಪರದೈವತಂ” ಎಂದರೆ ಗಾಯತ್ರಿಗಿಂತಲೂ ಶ್ರೇಷ್ಠವಾದ ಮಂತ್ರವಿಲ್ಲ. ತಾಯಿಗಿಂತಲೂ ಮಿಗಿಲಾದ ದೇವರಿಲ್ಲ ಎಂಬ ಮಾತು ಪ್ರಸಿದ್ದವಾಗಿದೆ.
ಈಗ ಗಾಯತ್ರೀ ಜಪದಲ್ಲಿ ಬರುವ ಗಾಯತ್ರೀ ಸ್ತೋತ್ರದ ವಿವರಣೆಯನ್ನು ಮಾಡಿ ಈ ಲೇಖನವನ್ನು ಮುಗಿಸಬಯಸುತ್ತೇನೆ.
ಗಾಯತ್ರೀದೇವಿಯ ಧ್ಯಾನ ಶ್ಲೋಕವು ಹೀಗಿರುತ್ತದೆ:-
“ಮುಕ್ತಾ ವಿದ್ರುಮ ಹೇಮ ನೀಲ ಧವಳ ಚ್ಛಾಯೈ ರ್ಮುಖೈ ಸ್ತ್ರೀಕ್ಷಣೈ|
ಯುಕ್ತಾ ಮಿಂದು ನಿ ಬದ್ಧರತ್ಮ ಮಕುಟಾಂ ತತ್ತ್ವಾರ್ಥ ವರ್ಣಾತ್ಮಿಕಾಂ|
ಗಾಯತ್ರೀಂ ವರದಾಭಯಾಂಕುಶಕಶಾಃ ಶುಭ್ರಂ ಕಪಾಲಂ ಗದಾಂ
ಶಂಖಂ ಚಕ್ರ ಮಥಾರವಿಂದ ಯುಗಳಂ ಹಸ್ತೈರ್ವ ಹಂತೀಂ ಭಜೇ||
ತಾತ್ಪರ್ಯ|| ಮುತ್ತು, ಹವಳ, ಚಿನ್ನ ಇವುಗಳ ಬಣ್ಣಗಳೂ ಮತ್ತು ನೀಲಿ ಅಥವಾ ಕಪ್ಪುಬಣ್ಣ ಮತ್ತು ಬಿಳುಪು, ಈ ಐದು ಬಣ್ಣಗಳುಳ್ಳ ಮೂರು ಕಣ್ಣುಗಳುಳ್ಳ ಮುಖಗಳಿಂದ ಶೋಭಿತಳಾದ ಚಂದ್ರನಿಂದ ಕೂಡಿರುವ ರತ್ನಾ ಕಿರೀಟಗಳನ್ನು ಧರಿಸಿರುವ, ತತ್ವವನ್ನು ಸೂಚಿಸುವ ವರ್ಣಗಳಿರುವ ಗಾಯತ್ರೀ ಮಂತ್ರ ಸ್ವರೂಪಿಣಿಯಾದ, ವರದ ಮತ್ತು ಅಭಯ ಮುದ್ರೆಗಳೂ ಅಂಕುಶ, ಕಶೆ (ಚಾಟಿ) ಬೆಳ್ಳಗಿರುವ ಕಪಾಲ (ತಲೆಬುರುಡೆ) ಗದೆ, ಶಂಖ, ಚಕ್ರ ಮತ್ತು ಎರಡು ತಾವರೆ ಹೂಗಳು ಈ ರೀತಿಯಾಗಿ ಒಟ್ಟು ಹತ್ತು ವಸ್ತುಗಳನ್ನು ಧರಿಸಿರುವ ಹತ್ತು ಕೈಗಳಿರುವವಳೂ ಆದ ಗಾಯತ್ರಿಯನ್ನು ಭಜಿಸುತ್ತೇನೆ.
13
(Published in Dharmaprabha dated 1-6-1994)
ಐದು ಮುಖಗಳಿಗೆ ಕೊಟ್ಟಿರುವ ಐದು ಬಣ್ಣಗಳಲ್ಲಿ ಮಧ್ಯದಲ್ಲಿರುವ ಚಿನ್ನದ ಬಣ್ಣವನ್ನು ಕುರಿತು ಮೊದಲು ಆಲೋಚಿಸೋಣ. ಚಿನ್ನಕ್ಕೆ ಹಿರಣ್ಯವೆಂಬ ಹೆಸರಿದೆ. ವಿಷ್ಣುವಿಗೆ ಹಿರಣ್ಯಗರ್ಭನೆಂಬ ಹೆಸರಿದೆ. ಕಾರಣ ಆತ ನಿತ್ಯ ವಾಸಿಸುವ ಪರಂಧಾಮವು ಹಿರಣ್ಯವೆನಿಸಿದೆ. ಹಿರಣ್ಯವೆಂದರೆ ಚಿನ್ನದಂತೆ ಹಿತವೂ, ರಮಣೀಯವೂ ಆಗಿರುವುದು. ಅಂದರೆ ಲೋಕದಲ್ಲಿ ಚಿನ್ನವು ಅತ್ಯಂತ ಬೆಲೆಯುಳ್ಳದ್ದು ಎಂದರೆ ಸ್ವಲ್ಪ ಪ್ರಮಾಣದಲ್ಲಿದ್ದರೂ ಅತ್ಯಂತ ಉಪಯೋಗಕರ ಮತ್ತು ತನ್ನ ಅಸದೃಶವಾದ ಮತ್ತು ದೀರ್ಘಕಾಲ ಇರುವ ಕಾಂತಿಯಿಂದ ರಮಣೀಯವೂ ಆಗಿದೆ. ಈ ಸಂದರ್ಭದಲ್ಲಿ ನಿಘಂಟುವಿನಲ್ಲಿ ಹೀಗೆ ಬರೆದಿರುತ್ತೆ. “ಹಿರಣ್ಯಸಾಮ್ಯಾತ್ ಹಿತಂ ರಮಣೀಯಂ ವಾಹಿರಣ್ಯಂ ಪರಮಂ ಧಾಮ – ತಸ್ಯಗರ್ಭಭೂತಃ ತತ್ರ ನಿತ್ಯವಾಸಾತ್”.
ಅಲ್ಲದೆ ಮನುಸ್ಮೃತಿಯು ಸೃಷ್ಟಿ ಕ್ರಮವನ್ನು ತಿಳಿಸುತ್ತ ಅವ್ಯಕ್ತ ಸ್ವರೂಪದಿಂದ ಪರಮಾತ್ಮನು ವ್ಯಕ್ತನಾಗಿ ಮೊದಲು ಅಪ್ಪುಗಳನ್ನು (ನೀರೆಂದು ವ್ಯಾವಹಾರಿಕವಾದ ಅರ್ಥ-ಆದರೆ ಇದಕ್ಕೆ ನೀರಿನ ಸಾಮ್ಯವಿರುವ ಸೃಷ್ಟಿಯಲ್ಲಿನ ಮೂಲ ಅಂಶವೆಂದು ಅರ್ಥ ಮಾಡಬೇಕು) ಸೃಷ್ಟಿಮಾಡಿದನು. ಅದರಲ್ಲಿ ತನ್ನ ಬೀಜವನ್ನು ಬಿಟ್ಟನು. ಅದು ಚಿನ್ನದ ಅಂಡವಾಯಿತು. ಆ ಚಿನ್ನದ ಅಂಡವು ಸೂರ್ಯನಂತೆ ಉಜ್ಜ್ವಲವಾಗಿತ್ತು. ಸರ್ವಲೋಕಗಳನ್ನು ಸೃಷ್ಟಿ ಮಾಡಿದ ಬ್ರಹ್ಮನು ಆ ಚಿನ್ನದ ಅಂಡದಲ್ಲಿ ಹುಟ್ಟಿದನು ಎಂದು ಹೇಳುತ್ತಿದೆ. ಆದುದರಿಂದ ಬ್ರಹ್ಮನಿಗೂ ಹಿರಣ್ಯಗರ್ಭನೆಂಬ ಹೆಸರು ಬಂತು.
ಇಲ್ಲಿ ಬ್ರಹ್ಮಾಂಡವು ಚಿನ್ನದ ಮೊಟ್ಟೆಯಂತೆ ಸೃಷ್ಟಿ ಆಯಿತು ಎಂಬ ಭಾವವಿದೆ. ಇಂದು ವಿಶ್ವದ ಸ್ವರೂಪವೇನೆಂದು ವಿಜ್ಞಾನಿಗಳು ಪರೀಕ್ಷಿಸುತ್ತಿದ್ದಾರೆ. ಅವರು ಕಂಡುಹಿಡಿದ ಒಂದು ಅದ್ಭುತ ವಿಷಯವೆಂದರೆ ಅತಿವೇಗದಲ್ಲಿ ಮುಂದಕ್ಕೆ ಹೋಗುವ ಬೆಳಕಿನ ಕಿರಣಗಳು ಸಾಧಾರಣವಾಗಿ ಸರಳರೇಖೆಯ ರೂಪದಲ್ಲಿ ಮುಂದುವರಿಯುತ್ತಿದ್ದರೂ ಬ್ರಹ್ಮಾಂಡದ ವಿಶಾಲ ದೃಷ್ಟಿಯಿಂದ ಪರಿಶೀಲಿಸಿದಾಗ ಬೆಳಕಿನ ಕಿರಣಗಳು ಸಹ ಸರಳರೇಖೆಯ ಆಕಾರವನ್ನು ಬಿಟ್ಟು ವಕ್ರವಾಗುತ್ತವೆ ಎಂಬುದು, ನಮಗೆ ದೂರದಲ್ಲಿರುವ ಒಂದು ವಸ್ತುವಿನ ಸ್ವರೂಪ ತಿಳಿಯಲು ಬೆಳಕಿನ ಕಿರಣಗಳೇ ಆಧಾರ. ಇವೇ ಬಗ್ಗಿದರೆ ಈ ವಿಶ್ವವು ಒಂದು ಅಂಡದ ರೂಪದಲ್ಲಿದೆ ಎಂದು ಭಾವಿಸಬೇಕಾಗಿದೆ. ಚಿನ್ನವನ್ನು ಬೆಳಕಿಗೆ ಸಂಕೇತವಾಗಿಟ್ಟುಕೊಂಡು ಈ ವಿಶ್ವವನ್ನು (ಬ್ರಹ್ಮಾಂಡವನ್ನು) ಚಿನ್ನದ ಮೊಟ್ಟೆಗೆ ಹೋಲಿಸಿರುವರೆಂದು ಊಹಿಸಿಕೊಳ್ಳಲು ಸಾಧ್ಯತೆಯಿದೆ.
ಹೀಗೆ ಬಾಹ್ಯವಾದ ಭೌತಿಕ ಜಗತ್ತಿನಲ್ಲಿ ಬೆಳಕಿನ ದೃಷ್ಟಿಯಿಂದ ಚಿನ್ನದ ಬಣ್ಣಕ್ಕೆ ಪ್ರಾಶಸ್ತ್ಯವಿದೆ. ಆಂತರಿಕ ಜಗತ್ತಿನಲ್ಲಿಯು ಮೇಲೆ ಹೇಳಿದಂತೆ, ಹಿತ ಮತ್ತು ರಮಣೀಯತೆಯೆಂಬ ಭಾವನೆಗಳಿಂದಲೂ ಇದರಲ್ಲಿನ ‘ಹಿ’ ಮತ್ತು ‘ರ’ ಎಂಬ ಅಕ್ಷರಗಳ ಸಾಮ್ಯದಿಂದಲೂ ಹಿರಣ್ಯ ಅಥವಾ ಚಿನ್ನದ ಬಣ್ನಕ್ಕೆ ಪ್ರಾಶಸ್ತ್ಯವಿದೆ. ಇದು ಪರಮಾತ್ಮನ ವ್ಯಕ್ತ ರೂಪದ ಪ್ರತೀಕವಾಗಿದೆ. ಆದುದರಿಂದಲೇ ಈ ಬಣ್ಣವನ್ನು ಮಧ್ಯದಲ್ಲಿರುವ ಮುಖಕ್ಕೆ ಕೊಟ್ಟಿರುವುದು.
ಅಲ್ಲದೆ ಚಿನ್ನದ ಬಣ್ಣಕ್ಕೆ ಸಮೀಪದಲ್ಲಿರುವ ಹಳದಿ ಬಣ್ಣ ಎಲ್ಲಾ ಬಣ್ಣಗಳ ನಡುವೆ ಎತ್ತಿ ಕಾಣುವ ಬಣ್ಣ. ಅಲ್ಲದೆ ಕಾಮನಬಿಲ್ಲಿನ ಬಣ್ಣಗಳಲ್ಲಿ ಸಹ ಇದು ಮಧ್ಯದಲ್ಲಿ ಬರುತ್ತದೆ. ಈ ವಿಷಯವನ್ನು ಸಹ ಇಲ್ಲಿ ಗಮನಿಸಬಹುದು.
ಈಗ ಮುತ್ತುಗಳ ಬಣ್ಣವನ್ನು ಮೊದಲನೆಯದಾಗಿ ಕೊಡಲು ಕಾರಣವೇನೆಂದು ಆಲೋಚಿಸೋಣ. ಮುತ್ತುಗಳಲ್ಲಿ ಬೆಳಕು ಪ್ರತಿಬಿಂಬಿತವಾಗುತ್ತದೆ. ಬೆಳಕು ಚಲಿಸಿದರೂ, ಮುತ್ತು ಚಲಿಸಿದರೂ ಪ್ರತಿಬಿಂಬಿತವಾದ ಬೆಳಕು ಸಹ ಚಲಿಸುತ್ತದೆ. ಆದುದರಿಂದಲೇ ಮುತ್ತುಗಳಲ್ಲಿನ ಪ್ರಕಾಶವು ಅಲುಗಾಡುತ್ತಿರುವಂತೆ ಇರುತ್ತದೆ. ಆದರೆ ಕೊನೆಯ ಮುಖದ ಬಣ್ಣವಾದ ಬಿಳುಪು ಹೀಗೆ ಚಲಿಸುವುದಿಲ್ಲ. ಈ ಭೇದವನ್ನು ನಾವು ಗಮನದಲ್ಲಿಟ್ಟುಕೊಂಡು ನೋಡಬೇಕು. ಚಲಿಸುತ್ತಿರುವ ಮುತ್ತುಗಳ ಬಣ್ಣವು ಸಹ ಒಂದೇ ವಿಧವಾಗಿರುವುದಿಲ್ಲ. ಮುತ್ತುಗಳ ಮೇಲೆ ಕೆಂಪು, ಹಳದಿ ಇತ್ಯಾದಿ ಬೇರೆ ಬೇರೆ ಬೆಳಕುಗಳು ಬಿದ್ದರೂ ಅವುಗಳಿಂದಾಗುವ ಬದಲಾವಣೆಸಹ ಬಹಳ ಸೂಕ್ಷ್ಮವಾಗಿರುತ್ತದೆ. ಬಿಳುಪಿನ ಮೇಲೆ ಇಷ್ಟು ಸೂಕ್ಷ್ಮವಾದ ಬದಲಾವಣೆ ಕಾಣವುದಿಲ್ಲ.
ಮುತ್ತುಗಳಲ್ಲಿ ತರಳವಾದ (ಚಲಿಸುತ್ತಿರುವ) ಬೆಳಕುಗಳನ್ನು ಕವಿಗಳು ಕಾವ್ಯಗಳಲ್ಲಿ ಬರುವ ವ್ಯಂಗ್ಯಾರ್ಥಗಳಿಗೆ (ಧ್ವನಿಗಳಿಗೆ) (suggestions) ಹೋಲಿಸಿರುತ್ತಾರೆ. ಆದುದರಿಂದ ಮುತ್ತುಗಳ ಬಣ್ಣ ಇಂತಹುದೇ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದುದರಿಂಧ ಇದು ‘ಅವ್ಯಕ್ತ’ ತತ್ವವನ್ನು ಸೂಚಿಸುತ್ತಿದೆ. ಗಾಯತ್ರಿ ಮಂತ್ರದಲ್ಲಿ ‘ತತ್’ ಎಂಬ ಮೊದಲನೇ ಪದವು ಪರೋಕ್ಷವಾದ ಅವ್ಯಕ್ತ ಪರಬ್ರಹ್ಮಕ್ಕೆ ಸೂಚಕವೆಂದೂ ಕೊನೆಯಲ್ಲಿ ಬರುವ ‘ಯಃ’ ಎಂಬುದು ಇದರ ಪ್ರತಿಬಿಂಬದಂತೆ ಇದ್ದು ನಾವು ಎಷ್ಟು ಹೊತ್ತಾದರೂ ನೋಡಲು ಸಾಧ್ಯವಾದ ಬಿಳುಪಿನ ಕಾಂತಿಯುಳ್ಳ ಚಂದ್ರನಿಗೆ ಸೂಚಕವೆಂದೂ ಹಿಂದೆಯೇ ಬಂದಿರುತ್ತದೆ. ಆದುದರಿಂದ ಮುತ್ತುಗಳ ಬಣ್ಣದ ಮೊದಲನೆಯ ಮುಖವನ್ನು ‘ತತ್’ ಶಬ್ದವೂ ಬಿಳುಪಿನ ಕೊನೆಯ ಮುಖವನ್ನು ಆನಂದ ಸ್ವರೂಪ ಚಂದ್ರ ತತ್ವದ ‘ಯಃ” ಎಂಬ ಕೊನೆಯಲ್ಲಿ ಬರುವ ಪದವು ಸೂಚಿಸುತ್ತಿವೆ. ಮಧ್ಯದ ಚಿನ್ನದ ಬಣ್ಣದ ಮುಖವನ್ನು “ದೇವಸ್ಯ” ಎಂಬ ಕಾಂತಿಸೂಚಕ ಶಬ್ದವು ಸೂಚಿಸುತ್ತಿದೆ.
ಕೆಂಪು ಬಣ್ಣದ ಮುಖವನ್ನು ಸವಿತೃ ಶಬ್ದಕ್ಕೆ ಸೂಚಿಸಬಹುದು. ನೀಲ (ಕಪ್ಪು ಅಥವಾ ನೀಲಿ) ಬಣ್ಣದ ಮುಖವನ್ನು “ಧಿಯಃ” ಶಬ್ದವು ಸೂಚಿಸುತ್ತದೆ. ಕಾರಣ ಈ “ಧಿಯಃ” ಎಂಬುದು ಮನಸ್ಸಿನಲ್ಲಿ ಗುಪ್ತವಾದ ಚೈತನ್ಯ ( Sub Concious Mind ). ಕೊನೆಯಲ್ಲಿರುವ ಧವಳ ವರ್ಣವು ಎಲ್ಲ ಬಣ್ಣಗಳ ಸಮೂಹವೆಂಬುದನ್ನು ಸಹ ಇಲ್ಲಿ ಗಮನಿಸಬೇಕು.
14
(Published in Dharmaprabha dated 1-7-1994)
ಗಾಯತ್ರೀ ಮಂತ್ರದ ಧ್ಯಾನ ಶ್ಲೋಕದಲ್ಲಿ ಗಾಯತ್ರೀ ದೇವಿಯ ಒಂದೊಂದು ಮುಖದಲ್ಲಿಯು ಮೂರು ಕಣ್ಣುಗಳಿರುವಂತೆ ವರ್ಣನೆಯಿದೆ. “ತ್ರಿಕ್ಷಣೈಃ” ಎಂಬ ಶಬ್ದವು ಇದನ್ನು ಸೂಚಿಸುತ್ತಿದೆ. 1993ರ ಜೂನ್ ಸಂಚಿಕೆಯಲ್ಲಿ ಗಾಯತ್ರಿಯಲ್ಲಿನ ಮೂರು ಪಾದಗಳಿಗೂ ಋಗ್ಯಜುಸ್ಸಾಮಗಳೆಂಬ ಮೂರು ವೇದಗಳಿಗೂ, ಭೂಃ, ಭುವಃ ಸುವಃ ಎಂಬ ಮೂರು ವ್ಯಾಹೃತಿಗಳಿಗೂ ಮತ್ತು ಓಂಕಾರದಲ್ಲಿನ ಆಕಾರ ಉಕಾರ ಮುಕಾರಗಳಿಗೂ ಇರುವ ಸಂಬಂಧವನ್ನು ಕುರಿತು ಚರ್ಚಿಸಲಾಗಿದೆ. ಅಲ್ಲದೆ ಸೆಪ್ಟೆಂಬರ್ ಸಂಚಿಕೆಯಿಂದ ವಿಶ್ವದಲ್ಲಿರುವ ಕೆಲವು ತ್ರಿವರ್ಗಗಳ ವಿಚಾರ ವಿವರವಾಗಿ ಮಾಡಲ್ಪಟ್ಟಿದೆ. “ಮೂರು ಕಣ್ಣುಗಳು” ಎಂಬುದಕ್ಕೆ ಇದೆಲ್ಲವನ್ನೂ ಅನ್ವಯಿಸಿಕೊಂಡು ನೋಡಬೇಕಾಗಿದೆ. ಮಾನವರಿಗೆ ಎರಡು ಕಣ್ಣುಗಳು ಮಾತ್ರವಿದೆ. ಮೂರು ಕಣ್ಣುಗಳಿರುವ ದೇವರಲ್ಲಿ ಶಿವನು ಪ್ರಧಾನನು. ಈ ದೇವರ ಮೂರನೆಯ ಕಣ್ಣು “ಅಗ್ನಿ” ಮಯವಾಗಿ ಲಯ ಸೂಚಕವಾಗಿರುವುದು ಎಲ್ಲಿರಗೂ ಗೊತ್ತು. ‘ಜ್ಞಾನಾಗ್ನಿಃ ಸರ್ವ ಕರ್ಮಾಣಿ ಭಸ್ಮಸಾತ್ ಕುರುತೇರ್ಜುನ” ಎಂಬ ಗೀತೋಕ್ತಿಯಂತೆ ಅಗ್ನಿ ರೂಪವಾದ ಮೂರನೆಯ ಕಣ್ಣು ಜ್ಞಾನ ಸ್ವರೂಪವಾದುದು. ಮೋಕ್ಷಪ್ರದವಾದುದು. ಕೇವಲ ಐಹಿಕ ಸುಖಕ್ಕೆ ಮಾನವರಿಗೆ ಸಮೀಪವನ್ನು ನೋಡುವ ಕಣ್ಣೊಂದೂ ದೂರವನ್ನು ನೋಡುವ ಕಣ್ಣೊಂದೂ ಹೀಗೆ ಎರಡು ಕಣ್ಣುಗಳು ಸಾಕು. ಇಲ್ಲಿ ನಾವು ಮೂರೂ ಸ್ತರಗಳ ಚಿತ್ರ (Three dimensional picture) ನೋಡಿದಂತೆ ಪ್ರಪಂಚವನ್ನು ನೋಡಲು ಎರಡು ಕಣ್ಣುಗಳ ಇರುವಿಕೆಯೇ ಕಾರಣ ಎಂಬ ವೈಜ್ಞಾನಿಕ ಸತ್ಯವನ್ನು ಸಹ ಗಮನಿಸಬೇಕು. ಆದರೆ ಸುಖವು ಮರಣದೊಂದಿಗೆ ನಾಶವಾಗುತ್ತದೆ. ಆಮೇಲೆಯೂ ಶಾಶ್ವತವಾಗಿ ಆನಂದ ಪಡೆಯುತ್ತಿರಲು ಮತ್ತು ಮರಣ ಭಯವನ್ನೇ ಕಳೆದುಕೊಳ್ಳಲು ಜ್ಞಾನ ನೇತ್ರವೊಂದೇ ಸಹಾಯಕ. ಈ ತತ್ವವನ್ನು ಗಾಯತ್ರಿಯ ಮೂರು ನೇತ್ರಗಳನ್ನು ಧ್ಯಾನಿಸುವಾಗ ಗಮನಿಸಬೇಕಾಗಿದೆ.
“ಇಂದುನಿಬದ್ಧರತ್ನ ಮುಕುಟಾಂ” ಎಂದರೆ ಚಂದ್ರನಿರುವ ರತ್ನ ಕಿರೀಟಗಳನ್ನು ಧರಿಸಿರುವಳು ಎಂದು ಅರ್ಥ. ಚಂದ್ರನು ಆನಂದ ತತ್ವದ ಸಂಕೇತವೆಂಬುದು ಹಿಂದೆಯೇ ಬಂದಿರುತ್ತದೆ. ಅಲ್ಲದೆ ರತ್ನ ಶಬ್ದಕ್ಕೆ ಮೆರೆಯುತ್ತಿರುವ ಮಣಿಗಳು ಎಂಬ ಅರ್ಥದ ಜತೆಗೆ ಶ್ರೇಷ್ಠವಸ್ತು ಎಂಬ ಅರ್ಥವೂ ಇದೆ. ಅಲ್ಲದೆ ರತ್ನ ಶಬ್ದವು “ರಮ್” ಧಾತುವಿನಿಂದ ಹುಟ್ಟಿರುವುದರಿಂದ ಆನಂದ ಸೂಚಕವಾಗಿದೆ. “ಆನಂದೋ ಬ್ರಹ್ಮ” ಎಂಬ ಉಪನಿಷದ್ವಾಕ್ಯದಂತೆ ಈ ರತ್ನ ಶಬ್ದವು ಸಹ ಚಂದ್ರನಂತೆ ಆನಂದ ಸೂಚಕವಾಗಿ ಪರತತ್ವದ ಮಕುಟ ಪ್ರಾಯವಾಗಿದೆ.
‘ತತ್ತ್ವಾರ್ಥ ವರ್ಣಾತ್ಮಿಕಾಂ’ ಎಂಬುದು ಗಾಯತ್ರೀ ಮಂತ್ರದಲ್ಲಿನ ಪ್ರತಿ ಒಂದು ವರ್ಣವೂ ಒಂದೊಂದು ತತ್ತ್ವವನ್ನು ಸೂಚಿಸುತ್ತಿದೆ ಎಂದು ತಿಳಿಸುತ್ತಿದೆ. ಗಾಯತ್ರಿಯಲ್ಲಿನ 24 ವರ್ಣಗಳೂ 24 ತತ್ತ್ವಗಳನ್ನು ಸೂಚಿಸುತ್ತಿವೆ. ಮೂಲಪ್ರಕೃತಿ, ಮಹತ್, ಅಹಂಕಾರ, ಮನಸ್ಸು 4) ಐದು ಜ್ಞಾನೇಂದ್ರಿಯಗಳು 5) ಐದು ಕರ್ಮೇಂದ್ರಿಯಗಳು 5) ಪಂಚತನ್ಮಾತ್ರಗಳು 5) ಪೃಥಿವ್ಯಾದಿ ಪಂಚಭೂತಗಳು 5) ಇವು 24 ತತ್ತ್ವಗಳು. ಗಾಯತ್ರಿ ಈ ಇಪ್ಪತ್ತುನಾಲ್ಕು ತತ್ತ್ವಗಳಿಗೆ ಆತ್ಮದಂತೆ ಇರುವ ಪರಮಾತ್ಮ ಸ್ವರೂಪಿಣಿ ಎಂಬ ಭಾವವಿಲ್ಲಿದೆ.
ಗಾಯತ್ರಿಯ ಹತ್ತು ಕೈಗಳಲ್ಲಿರುವ ವಸ್ತುಗಳನ್ನು ಧ್ಯಾನ ಶ್ಲೋಕವು ಹೀಗೆ ವರ್ಣಿಸುತ್ತಿದೆ. “ವರದಾಭಯಾಂಕುಶಕಶಾಃ ಶುಭ್ರಂ ಕಪಾಲಂ ಗದಾಂ ಶಂಖಂ ಚಕ್ರಮಥಾರವಿಂದ ಯುಗಳಂ” ಎಂದರೆ ವರದ ಮುದ್ರೆ, ಅಭಯಮುದ್ರೆ, ಅಂಕುಶ, ಕಶಾ (ಚಾವಟಿ) ಬೆಳ್ಳಾಗಿರುವ ಕಪಾಲ (ಹುರಿಯುವ ಓಡು) ಗದೆ, ಶಂಖ, ಚಕ್ರ, ಎರಡು ಕಮಲಗಳು. ಇವು ಗಾಯತ್ರೀ ದೇವಿಯ ಹತ್ತು ಕೈಗಳಲ್ಲಿರುವುವು. ಇವು ಕ್ರಮವಾಗಿ ಮಾನವನಿಗೆ ಬೇಕಾಗಿರುವ ವಸ್ತುಗಳನ್ನು ಸೂಚಿಸುತ್ತಿವೆ. “ವರದ” ಎಂಬುದು ಶ್ರೇಷ್ಠವಾದ ಅವಶ್ಯಕ ವಸ್ತುಗಳನ್ನು ಒದಗಿಸುವುದನ್ನು ಸೂಚಿಸುತ್ತದೆ. ಇದು ಮಾನವರಿಗೆ ಬೇಕಾದವುದನ್ನು ಸೂಚಿಸುತ್ತದೆ. ಇದು ಮಾನವರಿಗೆ ಬೇಕಾದವುಗಳಲ್ಲಿ ಮೊದಲನೆಯದು. ಅಭಯವು ಭಯದಿಂದ ರಕ್ಷಣೆಯನ್ನು ಸೂಚಿಸುತ್ತಿದೆ. ಇದು ಎರಡನೆಯದಾಗಿರುವುದು ಸೂಕ್ತವಾಗಿದೆ. ಅಂಕುಶ, ಚಾವಟಿ ಇವು ಅಜ್ಞಾನವನ್ನು ತೊಲಗಿಸಲು ಬೇಕಾದವು. ಹುರಿಯುವ ಓಡು ಸಂಸ್ಕಾರವನ್ನು ಸೂಚಿಸುತ್ತಿದೆ. ಗದೆ, ಶಂಖ, ಚಕ್ರ ಮತ್ತು ಕಮಲ ಇವು ವಿಷ್ಣುವಿನ ನಾಲ್ಕು ಕೈಗಳಲ್ಲಿರುವುವು. ಇವುಗಳು ಮನಸ್ಸು ಬುದ್ಧಿಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯಕ್ಕೆ ಸೂಚಕವೆಂದು ಶಂಕರಾಚಾರ್ಯರು ವಿಷ್ಣು ಸಹಸ್ರನಾಮ ಭಾಷ್ಯದಲ್ಲಿ ತಿಳಿಸಿರುತ್ತಾರೆ. ಇವು ಅಂತಃಕರಣ ಚಟುಷ್ಟಯವನ್ನು ಭಗವಂತನಿಗೆ ಅರ್ಪಿಸಬೇಕಾದ ತತ್ವವನ್ನು ಸೂಚಿಸುತ್ತಿವೆ. ಕೊನೆಯದಾದ ಇನ್ನೊಂದು ಕಮಲವು ಸೃಷ್ಟಿ ಸ್ಥಿತಿ ಲಯ ಸೂಚಕವಾಗಿ ಓಂಕಾರ ಮತ್ತು ವ್ಯಾಹೃತಿತ್ರಯ ಮತ್ತು ಗಾಯತ್ರಿ ಮಂತ್ರದ ಮೂರು ಪಾದಗಳ ಸೂಚಕವಾಗಿದೆ. ಹೇಗೆಂದರೆ ಕಮಲದಲ್ಲಿ ಕೆಳಗಿಂದ ಮೇಲಕ್ಕೆ ಬಂದಿರುವ ಮೂಲವು ಸೃಷ್ಟಿಯನ್ನೂ, ಅರಳಿರುವ ಪತ್ರಗಳಿಂದ ಅಡ್ಡಡ್ಡವಾಗಿ ಕಾಣುವ ಮಧ್ಯಭಾಗವು ಸ್ಥಿತಿಯನ್ನೂ, ಕಮಲದ ಮಧ್ಯದಲ್ಲಿರುವ ಕರ್ಣಿಕೆ (ಬೀಜಕೋಶ) ಪುನಃ ಮೇಲಕ್ಕೆ ಬಂದು ಲಯವನ್ನೂ ಅದರಲ್ಲಿ ಅಂತರ್ಗತವಾಗಿರುವ ಬೀಜಗಳು ಪುನಃ ಸೃಷ್ಟಿಯನ್ನೂ ಸೂಚಿಸುತ್ತಿವೆ.
ಈ ಕಮಲದಂತೆಯೇ ಶಿವಲಿಂಗವೂ ಕೆಳಗಿಂದ ತೆಳುವಾಗಿ ಸ್ವಲ್ಪ ಮೇಲಕ್ಕೆ ಬಂದು ಮಧ್ಯದಲ್ಲಿ ಅಡ್ಡಡ್ಡವಾಗಿ ವಿಸ್ತಾರವನ್ನು ಹೊಂದಿ ಪುನಃ ತೆಳುವಾಗಿ ಮೇಲಕ್ಕೆ ಹೋಗಿ ಮುಗಿಯುತ್ತ ಸೃಷ್ಟಿ ಸ್ಥಿತಿ ಲಯಗಳ ಸೂಚಕವಾಗಿದೆ. ಸ್ವಸ್ತಿಕ ಚಿಹ್ನವೂ ಹೀಗೆಯೇ ಇದೆ ಅದನ್ನು ಹೋಲುವ ಶಿಲುಬೆಯ ಗುರುತೂ ಮತ್ತು ಓಂಕಾರವನ್ನು ದೇವನಾಗರಿಯಲ್ಲಿ ಸೂಚಿಸುವ ಚಿಹ್ನವೂ ಹೀಗೆಯೇ ಇವೆ. ಹೀಗೆ ಸಂಪೂರ್ಣವಾದ ದೃಷ್ಟಿಯನ್ನು ಬೆಳೆಸುವ ಅನೇಕ ಚಿಹ್ನೆಗಳಿಂದ ಗಾಯತ್ರೀ ಸ್ವರೂಪವು ಶೋಭಿತವಾಗಿರುವುದನ್ನು ಎಲ್ಲರೂ ಗಮನಿಸಿ ಸಂಕುಚಿತ ದೃಷ್ಟಿಯನ್ನು ಬಿಟ್ಟು ಪೂರ್ಣ ದೃಷ್ಟಿಯನ್ನು ಪಡೆದು ಇಹಪರ ಸುಖವನ್ನು ಪಡೆಯುವಂತಾಗಲಿ ಎಂದು ಹಾರೈಸುತ್ತ ಅಲ್ಪಜ್ಞನಾದ ನನ್ನ ಈ ಲೇಖನವನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ.