ಧರ್ಮಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ವಿಷ್ಣು ಸಹಸ್ರನಾಮ
ಸಹಸ್ರನಾಮ ಸ್ತೋತ್ರಗಳಲ್ಲಿ ವಿಷ್ಣು ಸಹಸ್ರನಾಮ ಸ್ತೋತ್ರವು ಅತಿಹೆಚ್ಚು ಪ್ರಚಾರವುಳ್ಳದ್ದು. ಈ ಸ್ತೋತ್ರವು ಮಹಾಭಾರತದಲ್ಲಿ ಬರುತ್ತದೆ. ಭೀಷ್ಮನು ಧರ್ಮರಾಯನಿಗೆ ಇದನ್ನು ಉಪದೇಶಿಸಿದ. ಇದಕ್ಕೆ ಶಂಕರಾಚಾರ್ಯರು ಭಾಷ್ಯ ಬರೆದಿದ್ದಾರೆ. ಶ್ರೀ ರಾಮಾನುಜಾಚಾರ್ಯರು ತಾವು ಸವತಃ ಭಾಷ್ಯ ಬರೆಯದೇ, ಪರಾಶರ ಭಟ್ಟರಿಂದ ಬರೆಯಿಸಿದರು. ಭೀಷ್ಮನಿಂದ ಧರ್ಮರಾಯನು ಅನೇಕ ಧರ್ಮಗಳನ್ನು ತಿಳಿದುಕೊಂಡ ಮೇಲೆ ಎಲ್ಲ ಧರ್ಮಗಳಲ್ಲೂ ಶ್ರೇಷ್ಠವಾದ ಧರ್ಮವನ್ನು ಉಪದೇಶಿಸಬೇಕೆಂದು ಕೋರಿದಾಗ ಭೀಷ್ಮನು ಈ ಸ್ತೋತ್ರವನ್ನು ಉಪದೇಶಿಸುತ್ತಾನೆ.
ವಿಷ್ಣು ಭಕ್ತಿಯೇ ಉತ್ತಮ ಧರ್ಮ ಹೇಗೆ?
ಧರ್ಮಕ್ಕೆ ಎರಡು ಪ್ರಯೋಜನಗಳಿವೆ. ಪ್ರಪಂಚದಲ್ಲಿ ಮಾನವನು ಇತರ ಮಾನವರೊಂದಿಗೆ ಸಹಕಾರದಿಂದಲೂ ಪ್ರೀತಿವಿಶ್ವಾಸಗಳಿಂದಲೂ, ಐಕಮತ್ಯದಿಂದಲೂ ವರ್ತಿಸಿ, ಇಹಲೋಕ ಸುಖವನ್ನು ಅನುಭವಿಸುವುದು ಮೊದಲನೆಯ ಪ್ರಯೋಜನ. ಎರಡನೆಯ ಪ್ರಯೋಜನ ತನ್ನ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಇದರಿಂದ ಪುಣ್ಯ ಲೋಕಗಳನ್ನು ಹೊಂದುವುದು ಮತ್ತು ತುದಿಗೆ ಮೋಕ್ಷ ಸಂಪಾದಿಸುವುದು. ವಿಷ್ಣು ಭಕ್ತಿ ಈ ಎರಡು ವಿಧವಾದ ಪ್ರಯೋಜನಗಳನ್ನೂ ಕೊಡುವುದರಿಂದ ಉತ್ತಮ ಧರ್ಮವಾಗಿದೆ. ಯಾಜ್ಞವಲ್ಕ್ಯ ಸ್ಮೃತಿಯ ಪ್ರಾರಂಭದಲ್ಲೇ “ಅಯಂ ತು ಪರಮೋ ಧರ್ಮೋ ಯದ್ಯೋಗೇನಾತ್ಮ ದರ್ಶನಂ” ಅಂದರೆ, ಯೋಗದಿಂದ ಪರಮಾತ್ಮನ ದರ್ಶನ ಮಾಡುವುದು ಎಲ್ಲ ಧರ್ಮಗಳಿಗಿಂತಲೂ ಶ್ರೇಷ್ಠವಾದ ಧರ್ಮವೆಂದು ಉಕ್ತವಾಗಿದೆ. ಪರಮಾತ್ಮ ದರ್ಶನವು ಉತ್ತಮವಾಗಬೇಕಾದರೆ ಧರ್ಮದಿಂದ ಉಂಟಾಗುವ ಮೇಲ್ಕಂಡ ಎರಡು ಪ್ರಯೋಜನಗಳನ್ನು ಕೊಡಬೇಕು ಎಂದು ಈ ಪರಮಾತ್ಮ ಭಕ್ತಿ ಮಾನವನ ಒಳಗೂ ಮತ್ತು ಹೊರಗೂ ಇರುವ ಪರಬ್ರಹ್ಮನಿಗೆ ಸಂಬಂಧಿಸಿದ್ದಾಗಿರಬೇಕು. “ಸರ್ವಂ ಖಲ್ವಿದಂ ಬ್ರಹ್ಮ” ಅಂದರೆ ಸಮಸ್ತವೂ ಬ್ರಹ್ಮವೇ ಎಂಬ ಸತ್ಯದ ಭಾವನೆಯಿಂದ ಕೂಡಿರುವುದಾಗಿರಬೇಕು. ಭಕ್ತಿ ಎಂದರೆ ಪ್ರೇಮ. ಸರ್ವ ಎಂದರೆ ವಿಶ್ವ. ಆದುದರಿಂದ ಈ ಭಕ್ತಿ ವಿಶ್ವಪ್ರೇಮವೂ ಆಗಿರಬೇಕು. ‘ವಿಷ್ಣು’ ಅಂದರೆ ವಿಶ್ವವ್ಯಾಪಿಯೂ, ವಿಶ್ವಾಧಾರವೂ, ವಿಶ್ವರೂಪಿಯೂ, ವಿಶ್ವವೇ ತಾನೂ ಆಗಿರುವ ಪರಮಾತ್ಮನೆಂದರ್ಥ. ವಿಷ್ಣು
ಸಹಸ್ರನಾಮದ ಮೊದಲನೇ ನಾಮವೇ ‘ವಿಶ್ವ’ವೆಂಬುದು. ಆದುದರಿಂದ ವಿಷ್ಣು ಭಕ್ತಿಯೇ ಮೇಲ್ಕಂಡ ಧರ್ಮದ ಎರಡು ಪ್ರಯೋಜನಗಳನ್ನೂ ಕೊಡುವುದಾಗಿ ಅತ್ಯುತ್ತಮವಾಗಿದೆ.
“ತ್ವಯಿಮಯಿ ಚಾನ್ಯತ್ರೈಕೋ ವಿಷ್ಣುಃ ವ್ಯರ್ಥಂ ಕುಪ್ಯಸಿಮಯ್ಯ ಸಹಿಷ್ಣುಃ” ಎಂಬ ‘ಭಜಗೋವಿಂದ’ ಸ್ತೋತ್ರದ ಶ್ಲೋಕವನ್ನು ಸದಾ ಸ್ಮರಿಸಬೇಕು. ಜ್ಞಾನಿಯನ್ನು ನೋಡಿ ಅಜ್ಞಾನಿ ಕೋಪಿಸಿಕೊಂಡಾಗ ಜ್ಞಾನಿ ಹೇಳಿದ ಮಾತಿದು. ಅಯ್ಯಾ ನಿನ್ನಲ್ಲಿ,ನನ್ನಲ್ಲಿ ಮತ್ತು ಎಲ್ಲೆಡೆಯಲ್ಲಿಯೂ ಇರುವ ಚೈತನ್ಯವೊಂದೇ. ಅದೇ ವಿಷ್ಣು. ಹೀಗಿರುವಾಗ ನನ್ನ ಮೇಲೆ ಕೋಪವೇಕೆ? ವಿಶ್ವಪ್ರೇಮವೇ ವಿಷ್ಣು ಭಕ್ತಿಗೆ ಹೊರಗಿನ ಲಕ್ಷಣ. ಭಕ್ತಿಯನ್ನು ಸಾಧಿಸಲು ಹೊರಟ ಜೀವಿ ಮೊದಲು ಪರಮಾತ್ಮನ ವಿರಾಟ್ಸ್ವರೂಪದ ಉಪಾಸನೆಯಿಂದ ಪ್ರಾರಂಭಿಸಬೇಕೆಂದು ಸನಾತನಧರ್ಮ ಬೋಧಿಸಿರುವ ಕ್ರಮ ಮಾರ್ಗ. ವೇದಗಳಲ್ಲಿನ ಕರ್ಮಕಾಂಡದ ಯಜ್ಞಗಳಲ್ಲಿ ಮಾಡುವ ಉಪಾಸನೆ ಸೃಷ್ಟಿಯಲ್ಲಿನ ಅಗ್ನಿ, ಇಂದ್ರ, ವರುಣ,ಸೂರ್ಯ, ವಾಯು, ಪ್ರಾಣ, ಮುಂತಾದ ಸಮಸ್ತ ಶಕ್ತಿಗಳೂ ಪರಮಾತ್ಮನ ಶಕ್ತಿ ಅರಿತು ಕೃತಜ್ಞತೆಯನ್ನು ತೋರಿಸಲು ವಿಧಿಸಿರುವುದು. ಇದನ್ನೇ ಮಾಡಲಾರದೆ, ದೇವರನ್ನು ಕಣ್ಣಿಗೆ ಕಾಣುವ ಸೃಷ್ಟಿಯಲ್ಲೇ ನೋಡದೆ, ಸಮಸ್ತ ಭೂತಗಳನ್ನೂ ತನ್ನಂತೆ ನೋಡಿಕೊಳ್ಳುವ ಧರ್ಮಮಾರ್ಗದಲ್ಲಿ ನಡೆಯುವುದನ್ನು ಕಲಿಯದೆ, ವಿಷ್ಣುವಿನ ಉಪಾಸ್ಯ ರೂಪಗಳನ್ನು ಧ್ಯಾನ ಮಾಡಲು ಹೊರಡುವುದು ಪ್ರಾಥಮಿಕ ಶಿಕ್ಷಣವಿಲ್ಲದೇ ಪ್ರೌಢಶಾಲೆಯ ಮೆಟ್ಟಿಲು ಹತ್ತಿದಂತೆ, ಪ್ರಕೃತಿ ಶಕ್ತಿಗಳ ತೆರೆಮರೆಯಲ್ಲಿರುವ ವಿಷ್ಣು ಸ್ವರೂಪವನ್ನು ನೋಡಲಾರದೆ ಹೋದರೆ ಇಷ್ಟು ದೊಡ್ಡ ವಿಶ್ವದಲ್ಲಿ ಒಂದಾನೊಂದು ದಿನವಾದ ದೇವರ ಸೃಷ್ಟಿಯಾಗಿರುವ ಮಾನವನ ಮನಸ್ಸು ಆ ಪರಬ್ರಹ್ಮತತ್ವವನ್ನು ಹೇಗೆ ತಿಳಿಯಲು ಸಮರ್ಥವಾಗುತ್ತದೆ?
ಭಾಗವತ ಪುರಾಣದ ಎರಡನೇ ಸ್ಕಂದದ ಮೊದಲನೇ ಅಧ್ಯಾಯದಲ್ಲಿ ಶುಕ ಮಹರ್ಷಿಯು ಪರೀಕ್ಷಿನ್ಮಹಾರಾಜನಿಗೆ ಭಕ್ತಿ ಮಾರ್ಗವನ್ನು ಬೋಧಿಸಲು ಪ್ರಾರಂಭ ಮಾಡುತ್ತಾನೆ. ಅದರಲ್ಲಿ ಆರಂಭದಲ್ಲೇ ವಿಷ್ಣುವಿನ ವಿಶ್ವರೂಪವನ್ನು ಧ್ಯಾನಿಸುವ ಕ್ರಮವನ್ನು ಬೋಧಿಸುತ್ತಾನೆ. ದೇವೀ ಭಾಗವತದಲ್ಲಿನ ಸಪ್ತಮ ಸ್ಕಂದದಲ್ಲಿ ಬರುವ ದೇವೀ ಗೀತೆಯಲ್ಲಿ ಸಹ ವಿಶ್ವರೂಪ ದರ್ಶನ ಮೊದಲು ಬರುತ್ತದೆ.
ಪರಾಭಕ್ತಿಯ ಲಕ್ಷಣವನ್ನು ದೇವೀ ಭಾಗವತ ಪುರಾಣ ವಿವರಿಸುತ್ತಾ ಹೀಗೆ ಹೇಳುತ್ತದೆ–
ಪರಾನುರಕ್ತ್ಯಾ ಮಾಮೇವ ಚಿನ್ತಯೇದ್ಯೋಹ್ಯಂತಂದ್ರಿತಃ I
ಸ್ವಾಭೇದೇನೈವ ಮಾಂ ನಿತ್ಯಂ ಜಾನಾತಿನ್ಯವಿಭೇದತಃ II
ಮದ್ರೂಪತ್ವೇನ ಜೀವಾನಾಂ ಚಿಂತನಂ ಕುರುತೇತು ಯಃ I
ಯಥಾ ಸ್ವಸ್ಯಾತ್ಮನಿ ಪ್ರೀತಿಃ ತಥೈಮಚ್ಚಪರಾತ್ಮನಿ II
ಚೈತನ್ಯಸ್ಯ ಸಮಾನತ್ವಾ ನ್ನ ಭೇದಂ ಕುರುತೇತುಯಃ I
ಸರ್ವತ್ರವರ್ತಮಾನಾನಾಂ ಸರ್ವರೂಪಾಂಚ್ವಸರ್ವದಾ II
ನಮತೇ ಯಜತೇ ಚೈವಾಪ್ಯಾಚಾಂಡಾಲಾಂತ ಮೀಶ್ವರ I
ನ ಕುತ್ರಾಪಿ ದ್ರೋಹಂ ಬುದ್ಧಿಂ ಕುರತೇ ಭೇದವರ್ಜನಾತ್ II
ತಾತ್ಪರ್ಯ: ಪರಾಭಕ್ತಿಯುಳ್ಳವನು ಶ್ರದ್ಧೆಯಿಂದಲೂ ಅತ್ಯಂತ ಅನುರಾಗದಿಂದಲೂ ಪರಮಾತ್ಮನನ್ನೇ ಚಿಂತಿಸುತ್ತಿರುತ್ತಾನೆ. ಆ ಪರಮಾತ್ಮನಿಗೂ ತನಗೂ ಭೇದವಿಲ್ಲವೆಂದೇ ಭಾವಿಸುತ್ತಾನೆ. ತನ್ನಲ್ಲಿ ತನಗೆ ಹೇಗೆ ಪ್ರೀತಿಯಿದೆಯೋ ಇತರ ಜೀವಿಗಳೆಲ್ಲರ ಆತ್ಮದಲ್ಲೂ ಅಷ್ಟೇ ಪ್ರೀತಿ ತೋರಿಸುತ್ತಾನೆ. ಎಲ್ಲದರಲ್ಲಿರುವ ಚೈತನ್ಯವೊಂದೇ ಎಂದು ತಿಳಿದು ತಾನು, ಇತರರು ಎಂಬ ಭೇದವನ್ನು ಮಾಡುವುದಿಲ್ಲ. ಬ್ರಾಹ್ಮಣರಿಂದ ಚಂಡಾಲರವರೆಗೂ ಇರುವ ಎಲ್ಲರೂ ಒಂದೇ ಪರಮಾತ್ಮನ ರೂಪವೆಂದು ಭಾವಿಸಿ ಎಲ್ಲರಿಗೂ ನಮಸ್ಕಾರ ಮಾಡುತ್ತಾನೆ. ಎಲ್ಲರನ್ನೂ ಪರಮಾತ್ಮ ಭಾವನೆಯಿಂದ ಪೂಜಿಸುತ್ತಾನೆ.(ಎಲ್ಲರಿಗೂ ತನ್ನ ಸೇವೆ ಸಲ್ಲಿಸುತ್ತಾನೆ) ಸ್ವಾತ್ಮ ಪರಭೇದವಿಲ್ಲದಿರುವುದರಿಂದ ಯಾರಿಗೂ ದ್ರೋಹ ಬಗೆಯುವುದಿಲ್ಲ.
ಈ ಶ್ಲೋಕಗಳು ದೇವೀಪರವಾದರೂ ದೇವಿ ಬೇರೆ ವಿಷ್ಣು ಬೇರೆ ಅಲ್ಲವಾದುದರಿಂದ ವಿಷ್ಣುಭಕ್ತಿಯ ಲಕ್ಷಣವೇ ಮೇಲೆ ಹೇಳಿರುವುದು. ಪ್ರಾಣಿಗಳ ಜೀವಾತ್ಮರುಗಳಲ್ಲೇ ತತ್ವತಃ ಭೇದವಿಲ್ಲವೆಂದು ಮೇಲೆ ಬೋಧಿಸಿರುವಾಗ ವಿಷ್ಣು, ಶಿವ, ಬ್ರಹ್ಮ, ದೇವಿ ಮುಂತಾದ ದೇವತೆಗಳಲ್ಲಿ ಭೇದವೆಲ್ಲಿದೆ? ಈ ಶ್ಲೋಕಗಳನ್ನು ಸರ್ಕಾರದವರು ಎಲ್ಲ ದೇವಸ್ಥಾನಗಳಲ್ಲೂ ಅರ್ಥದೊಂದಿಗೆ ಈಗಾಗಲೇ ಏಕೆ ಕೆತ್ತಿಸಲಿಲ್ಲವೋ ಎನಿಸುತ್ತಲ್ಲವೇ? ಇದಕ್ಕಿಂತಲೂ ಧರ್ಮ ಪ್ರಚಾರ ಬೇಕೇ?
ವಿಷ್ಣು ಸಹಸ್ರನಾಮದಲ್ಲಿನ ಅನೇಕ ನಾಮಗಳು ಸೃಷ್ಟಿಯಲ್ಲಿನ ದಿವ್ಯ ಚೈತನ್ಯದ ವೈವಿಧ್ಯದ ಮತ್ತು ಏಕತೆಯನ್ನು ವರ್ಣಿಸುವವು. ಆದುದರಿಂದ ಇದು ಪರಮ ಧರ್ಮವಾದ ಪರಾಭಕ್ತಿಯನ್ನು ಬೋಧಿಸುವುದಾಗಿ ಅತ್ಯುತ್ತಮ ಸಹಸ್ರನಾಮವಾಗಿದೆ.
ಪರಾಭಕ್ತಿ ಒಂದೇ ಸಲಕ್ಕೆ ಯಾರಿಗೂ ಬರುವುದಿಲ್ಲ. ಅನೇಕ ಜನ್ಮಗಳಲ್ಲಿನ ಸಾಧನೆಯ ಫಲವದು. ಈ ಸಾಧನೆಗೆ ಉಪಾಸನೆ ಎಂದು ಹೆಸರು. ಮಾನವನ ಮನಸ್ಸು ಗುಣಗಳ ಕಡೆ ಆಕರ್ಷಿತವಾಗುತ್ತದೆ. ವಿಶ್ವ ಸ್ವರೂಪಿಯಾದ ವಿಷ್ಣುವಿನಲ್ಲಿನ ಸಕಲ ಕಲ್ಯಾಣ ಗುಣಗಳನ್ನೂ ಧ್ಯಾನಿಸುತ್ತ ಆತನಲ್ಲಿ ಭಕ್ತಿಯನ್ನು ಬೆಳಿಸಿಕೊಂಡರೆ ಅದು ಭದ್ರವಾಗಿರುತ್ತೆ. ಆದುದರಿಂದಲೇ ಉಪಾಸನಾ ಯೋಗ್ಯಗಳಾದ ರೂಪಗಳನ್ನು ಶಾಸ್ತ್ರಗಳು ನಿರ್ಣಯಿಸಿರುವುದು, ಇದರಲ್ಲಿ ಮನೆಯಲ್ಲಿ ಪೂಜಿಸಲು ಅನುವಾದ ‘ಅರ್ಚಾ’ ಸ್ವರೂಪಗಳಿಂದ ಹಿಡಿದು ಭಗವಂತನ ವಿವಿಧ ವೈಭವಗಳಿಗೆ ಸಂಕೇತಗಳಾಗಿರುವ ಅನೇಕ ರೂಪಗಳಿವೆ. ಶೈವ, ಶಾಕ್ತ, ಇತ್ಯಾದಿ ಮತಗಳಿಗಿಂತಲೂ ವಿಷ್ಣು ಸಹಸ್ರ ನಾಮದಲ್ಲಿನ ನಾಮಗಳಲ್ಲಿ ಬರುವ ಉಪಾಸ್ಯ ಮೂರ್ತಿಗಳು ಹೆಚ್ಚು ವ್ಯಾಪಕಗಳೂ, ಸೌಮ್ಯಗಳೂ, ಸತ್ವಗುಣ ಪ್ರಧಾನಗಳೂ ಆಗಿರುವುದರಿಂದ ಎಲ್ಲರಿಗೂ, ಆಕರ್ಷಣೀಯಗಳೂ ಆರಾಧ್ಯಗಳೂ ಆಗಿರುತ್ತವೆ. ಈ ದೃಷ್ಟಿಯಿಂದಲೂ ವಿಷ್ಣು ಸಹಸ್ರ ನಾಮವು ಅತ್ಯುತ್ತಮವೆಂದು ಭಾವಿಸಲು ಸಾಧ್ಯವಿದೆ. ಅಲ್ಲದೆ ಇದು ಕೇವಲ ಮೂರ್ತ್ಯುಪಾಸನೆಗೆ ಸೀಮಿತವಾಗದೆ ರುದ್ರ, ಶಿವ, ವಿಷ್ಣು ಮುಂತಾದ ನಾಮಗಳು ಅಭಿನ್ನವಾದ ಒಂದೇ ಪರಮಾತ್ಮನ ಕಲ್ಯಾಣ ಗುಣಗಳನ್ನು ವರ್ಣಿಸುವ ನಾಮಗಳಾಗಿ ಮಾತ್ರ ಪ್ರಯೋಗಿಸಲ್ಪಟ್ಟಿರುವ ವೇದಗಳ ಅತಿ ಶ್ರೇಷ್ಠ ಮಾರ್ಗದಲ್ಲಿ ನಡೆದುಬಂದಿರುವುದರಿಂದಲೂ ಈ ವಿಷ್ಣು ಸಹಸ್ರ ನಾಮ ಅತ್ಯುತ್ತಮವೆಂದು ಭಾವಿಸಲು ಸಾಧ್ಯವಿದೆ.
ಇದರಲ್ಲಿ ಶ್ರೀ ಲಲಿತಾ ಸಹಸ್ರ ನಾಮದಂತೆ ಸಿದ್ಧಾಂತಗಳನ್ನು ಬೇರೆ ಬೇರೆ ಪ್ರಕರಣಗಳಲ್ಲಿ ಸೂಚಿಸುವ ಪದ್ಧತಿ ಕಂಡುಬಂದಿದ್ದರೂ, ಪರಬ್ರಹ್ಮ ತತ್ವದ ಅನುಭವದ ಪರಿಪೂರ್ಣ ಸ್ಥಿತಿಯಲ್ಲಿ ಸಹ ಪಾರಾಯಣ ಯೋಗ್ಯವಾಗಿ ಭಾವ ಪ್ರಕಟಣೆಯನ್ನು ಪದಪ್ರಯೋಗ ವೇದ ಮಂತ್ರಗಳಲ್ಲಿನ ಪದಪ್ರಯೋಗದಂತೆ ವೀರ್ಯವತ್ತಾಗಿರುವುದರಿಂದ ಸಮಸ್ತ ಆಸಕ್ತರೂ ತಪ್ಪದೆ ಓದಿ ಆರಾಧಿಸಬೇಕಾದ್ದು ಈ ವಿಷ್ಣು ಸಹಸ್ರನಾಮ ವೇದದಲ್ಲಿನ ರುದ್ರಾಧ್ಯನಯದ ಓಜಸ್ಸು ನಮಗೆ ಬೇರೆ ಸಾಹಿತ್ಯದಲ್ಲಿ ಮೊತ್ತ ಮೊದಲಿಗೆ ಕಂಡುಬಂದಿರುವುದು ವಿಷ್ಣು ಸಹಸ್ರ ನಾಮದಲ್ಲಿ.