ಕರ್ಮದಲ್ಲಿ ಅಕರ್ಮ ಮತ್ತು ಅಕರ್ಮದಲ್ಲಿ ಕರ್ಮ
(ದಿನಾಂಕ 1 – 7- 1996 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಭಗವದ್ಗೀತೆಯಲ್ಲಿನ ಈ ಕೆಳಕಂಡ ಶ್ಲೋಕವು ಅತ್ಯಂತ ಉತ್ತಮ ಜ್ಞಾನವನ್ನು ಕೊಡುವುದಾಗಿದೆ:-
ಕರ್ಮಣ್ಯಕರ್ಮಯಃ ಪಶ್ಯೇದಕರ್ಮಣಿ ಚ ಕರ್ಮಯ
ಸ ಬುದ್ಧಿಮಾನ್ ಮನುಷ್ಯೇಷು ಸ ಯುಕ್ತಃ ಕೃತ್ಸ್ನ ಕರ್ಮಕೃತ್
ಯಾವನು ಕರ್ಮದಲ್ಲಿ ಅಕರ್ಮವನ್ನು ನೋಡುತ್ತಾನೋ ಮತ್ತು ಅಕರ್ಮದಲ್ಲಿ ಕರ್ಮವನ್ನು ನೋಡುತ್ತಾನೋ ಅವನು ಮನುಷ್ಯರಲ್ಲಿ ಬುದ್ಧಿವಂತನು ಮತ್ತು ಯೋಗಿ. ಅವನು ಸಮಸ್ತ ಕರ್ಮವನ್ನೂ ಮಾಡುವನು.
ಈ ಶ್ಲೋಕಕ್ಕೆ ಬೇರೆ ಬೇರೆ ಪಂಡಿತರು ಬೇರೆ ಬೇರೆ ಅರ್ಥಗಳನ್ನು ಕೊಟ್ಟಿದ್ದಾರೆ. ಇದರ ಉದ್ದಿಷ್ಯಾರ್ಥವನ್ನು ಹೀಗೆ ಹೇಳಬಹುದು. ಎಲ್ಲ ಮಾನವರೂ ಕರ್ಮವನ್ನು ಮಾಡುತ್ತಲೇ ಇರುತ್ತಾರೆ. ಆದರೆ ‘ ನಾನು ಮಾಡುತ್ತಿದ್ದೇನೆ’ ಎಂಬ ಭಾವನೆಯಿಂದ ಮಾಡುತ್ತಿರುತ್ತಾರೆ. ಇದು ಪರಮ ಸತ್ಯವಲ್ಲ. ದೇವರು ಸೃಷ್ಟಿ ಮಾಡಿರುವ ಈ ವಿಶ್ವದಲ್ಲಿ ನಡೆಯುವ ಎಲ್ಲಾ ವ್ಯಾಪರವೂ ಪ್ರಕೃತಿ ನಿಯಮಗಳನ್ನನುಸರಿಸಿಕೊಂಡು ನಡೆಯುತ್ತದೆ ಎಂಬುದು ಪರಮ ಸತ್ಯ. ನಮ್ಮ ಮನಸ್ಸು ಸಹ ಪ್ರಕೃತಿ ನಿಯಮಗಳಿಗೆ ಒಳಪಟ್ಟಿದೆ. ದೇಹದ ವ್ಯಾಪಾರವೂ ಅಷ್ಟೇ. ಆದರೆ ನಮ್ಮಲ್ಲಿ ‘ನಾನು’ ಎಂಬ ಭಾವನೆ ಇದ್ದೇ ಇರುತ್ತದೆ. ಇದು ಅತ್ಯಂತ ಮೂಲಭೂತವಾದ ಭಾವನೆ. ಪ್ರಕೃತಿ ನಿಯಮಗಳಂತೆ ನಡೆಯುವ ದೇಹವ್ಯಾಪಾರ, ಮನೋವ್ಯಾಪಾರ ಇವೆಲ್ಲಾ ನಾನು ಮಾಡುತ್ತಿದ್ದೇನೆ ಎಂಬ ಭಾವನೆ ಎಲ್ಲರಲ್ಲೂ ಉಂಟಾಗುತ್ತಿರುತ್ತದೆ. ಆದರೆ ಸತ್ಯಾಂಶವೇನೆಂದರೆ ‘ನಾನು’ ಎಂಬ ಭಾವನೆಗೆ ಸಂಬಂಧಿಸಿದ ಆತ್ಮತತ್ವವು ಯಾವ ಕೆಲಸವನ್ನೂ ಮಾಡುತ್ತಿಲ್ಲ. ಅದು ಸಚ್ಚಿದಾನಂದ ಸ್ವರೂಪವಾಗಿರುತ್ತದೆ. ಈ ಆತ್ಮ ತತ್ವವನ್ನು ತಿಳಿಯುವುದೇ ಪರಮ ಜ್ಞಾನ. ಜ್ಞಾನಿಗಳು ತಾವು ಯಾವ ಕರ್ಮವನ್ನೂ ಮಾಡುತ್ತಿಲ್ಲವೆಂದು ಭಾವಿಸಬೇಕು. ಇದೇ ಕರ್ಮದಲ್ಲಿಅಕರ್ಮವನ್ನು ನೋಡುವುದು. ಜ್ಞಾನಿಗಳಾದರೂ ಅವರ ಮನಸ್ಸು ಮತ್ತು ದೇಹದ ಕರ್ಮವನ್ನು ಮಾಡುವಾಗ ಅದು ಧರ್ಮಸಹಿತವಾಗಿರಬೇಕು. ಅಷ್ಟು ಉದ್ದೇಶವನ್ನು ಜ್ಞಾನಿಗಳು ಸಹ ಇಟ್ಟುಕೊಂಡಿರಬೇಕು. ಇದೇ ಅಕರ್ಮದಲ್ಲಿ ಕರ್ಮವನ್ನು ನೋಡುವುದು. ಹೀಗೆ ಜ್ಞಾನಿಗಳಾಗಿ, ಸಮಸ್ತವನ್ನೂ ಪರಮಾತ್ಮನ ಲೀಲೆಯನ್ನಾಗಿ ನೋಡುತ್ತ ತಮ್ಮ ಮನಸ್ಸು ದೇಹವು ಧರ್ಮಸಹಿತವಾದ ಕೆಲಸವನ್ನು ಮಾತ್ರ ಮಾಡುವಂತೆ ಎಚ್ಚರದಿಂದಿರುವವರೇ ಬುದ್ಧಿವಂತರು. ಅವರೇ ಯೋಗಿಗಳು. ಅವರೇ ಸಮಸ್ತ ಧಾರ್ಮಿಕ ಕರ್ಮವನ್ನು ಮಾಡುವವರು, ಎಂದು ಮೇಲಿನ ಶ್ಲೋಕಕ್ಕೆ ಅರ್ಥವನ್ನು ಹೇಳಬಹುದು.
ಈ ಶ್ಲೋಕದ ಉದ್ದೇಶವನ್ನು ಎಲ್ಲರೂ ಸದಾ ಮನನ ಮಾಡುತ್ತಿದ್ದು ಜ್ಞಾನಿಗಳೂ, ಯೋಗಿಗಳೂ ಆಗುವುದಕ್ಕೆ ಪ್ರಯತ್ನಿಸುವುದೇ ಮಾನವ ಜನ್ಮದ ಸಫಲತೆ ಎಂಬುದರಲ್ಲಿ ಸಂದೇಹವಿಲ್ಲ.
- ಲಂಕಾ ಕೃಷ್ಣಮೂರ್ತಿ