(ದಿ. 1-7-1987 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಒದುಗರಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಪರಶುರಾಮಾವತಾರ :-
ಪ್ರಶ್ನೆ:- ಬಹಳ ದಿನಗಳಿಂದ ನನಗೆ ಪರಶುರಾಮರ ಚರಿತ್ರೆ ತಿಳಿಯಬೇಕೆಂದಿದ್ದೆ. ಅದರಲ್ಲೂ ಅವರ ತಾಯಿಯನ್ನೇ ಕೊಂದರೆಂದು ತಿಳಿದಿದೆ. ನಂಜನಗೂಡಿನಲ್ಲಿ ಪರಶುರಾಮ ಕ್ಷೇತ್ರವಿದೆ. ಅಲ್ಲಿ ಪ್ರಾಣಿ ಬಲಿ ಕೊಡುತ್ತಾರೆ. ಇದರ ಮಹತ್ವವನ್ನು ದಯಮಾಡಿ ತಿಳಿಸಿ:-
ಉತ್ತರ:- ಈ ಸಂಚಿಕೆಯಲ್ಲಿನ “ ಶುಭ ಚಿಂತನ”ವನ್ನು ಓದಬೇಕಾಗಿ ವಿನಂತಿ. ದೇವರೇ ಪರಶುರಾಮರು ಹೇಗೆ ಆದರು ಎಂಬುದಕ್ಕೆ ನನಗೆ ಸಮಾಧಾನ ಹೀಗೆ ತೋಚುತ್ತಿದೆ. ಪರಶುರಾಮರ ಅವತಾರವು ರೌದ್ರಾವತಾರಗಳಲ್ಲಿ ಒಂದು. ಕಾಳಿ, ವೀರಭದ್ರ ಇವರಂತೆ. ದೇವರಲ್ಲಿನ ರುದ್ರತ್ವವನ್ನು ವೇದಗಳು ಸಹ ಹೊಗಳಿವೆ. ರುದ್ರನೇ ಶಿವನೂ ಆಗಿರುವುಂತೆ ಪರಶುರಾಮನೇ ಶ್ರೀರಾಮನು ಎಂಬ ತತ್ವವನ್ನು ಪುರಾಣಗಳು ಬೋಧಿಸುತ್ತಿವೆ. ಧರ್ಮದ ಪ್ರಶ್ನೆ ಬಂದಾಗ ಪರಶುರಾಮನು ಯಾವ ಅಧರ್ಮ ಕಾರ್ಯವನ್ನೂ ಮಾಡಿಲ್ಲ. ದುಷ್ಟ ಕ್ಷತ್ರಿಯರನ್ನು ವಧಿಸಿದ. ಇದು ಮಹಾಧರ್ಮ ಕಾರ್ಯ. ಕ್ಷತ್ರಿಯ ಕುಲ ಕಂಟಕನೆಂದು ಮೇಲಕ್ಕೆ ಕಾಣಿಸಿದರೂ ಪರಶುರಾಮನು ಕ್ಷತ್ರಿಯ ಕುಲವನ್ನು ಪರಿಶುದ್ಧ ಮಾಡಿದವನು. ಪ್ರಜಾಪ್ರಭುತ್ವದ ನಾಯಕರೆಂದು ಹೇಳಿಕೊಳ್ಳುತ್ತ ಯುದ್ಧಗಳಲ್ಲಿ ಬಂದೂಕುಗಳನ್ನೂ ಬಾಂಬುಗಳನ್ನೂ ಪ್ರಯೋಗಿಸಿ ಅಧರ್ಮ ಯುದ್ಧವನ್ನು ಜಾರಿಗೆ ತಂದ ಈ ವಿಜ್ಞಾನ ಯುಗದಲ್ಲಿ ಹೊಗಳಿಕೆ ಗಳಿಸಿದ ಷಂಡರಿಗಿಂತಲೂ ಧರ್ಮದಲ್ಲಿ ಬಹಳ ಎತ್ತರದಲ್ಲಿದ್ದ, ಯಾವ ಕ್ಷತ್ರಿಯರನ್ನೂ ಅಧರ್ಮ ಯುದ್ಧದಲ್ಲಿ ಕೊಲ್ಲಲಿಲ್ಲ. ನಿಸ್ವಾರ್ಥವಾಗಿ ದುಷ್ಟರನ್ನೂ ಮದಾಂಧರನ್ನೂ ದಾರಿಗೆ ತಂದು ಭೂಮಂಡವನ್ನೆಲ್ಲಾ ಗೆದ್ದು ಕಶ್ಯಪಋಷಿಗೆ ದಾನ ಮಾಡಿದ.
ತಾಯಿಯನ್ನು ಕೊಂದ ಸಂದರ್ಭದಲ್ಲಿ ಭಕ್ತ ಪೋತನನು ಬರೆದಿರುವ ತೆಲುಗು ಭಾಗವತದಲ್ಲಿ ಒಂದು ವಿವರಣೆಯಿದೆ. ಪರಶುರಾಮನಿಗೆ ತನ್ನ ತಂದೆಯ ಮಹಿಮೆ ಗೊತ್ತಿತ್ತು. ಆತನನ್ನು ತೃಪ್ತಿಪಡಿಸಿ ಅದರಿಂದ ಪುನಃ ತಾಯಿಯನ್ನೂ, ಸೋದರನನ್ನೂ ಬದುಕಿಸಬಹುದೆಂದು ನಂಬಿಕೆ ಆತನಿಗಿತ್ತು. ಆದುದರಿಂದ ಅವರನ್ನು ತಂದೆಯ ಆಜ್ಞೆಯಂತೆ ಕೊಂದನು. ಇದನ್ನು ನೋಡಿಕೊಂಡು ಬೇರೆ ಯಾರೂ ತಂದೆ ಆಜ್ಞಾಪಿಸಿದರೂ ತಾಯಿಯನ್ನು ಕೊಲ್ಲಬಾರದು ಎಂದು ಆ ಕವಿಯು ಮೂಲದ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾನೆ.
ಸಮಾಜವು ತೀರಾ ಕೆಟ್ಟು ಹೋದಾಗ ವಿಪ್ಲವವೇ ಅದಕ್ಕೆ ಮದ್ದು. ಅದರಲ್ಲಿ ಪರಶುರಾಮರಂತಹವರೇ ಬೇಕು. ಸಮಾಜ ಶುದ್ಧಿ ಆದಮೇಲೆ ಶ್ರೀ ರಾಮರಂತಹವರ ಪಾತ್ರ ಕೆಲಸ ಮಾಡುತ್ತದೆ.
ದೇವರ ರುದ್ರ ಶಕ್ತಿ ವಿದ್ಯುಚ್ಛಕ್ತಿಯಂತೆ. ವಿದ್ಯುಚ್ಛಕ್ತಿಯ ಲಾಭ ಪಡೆಯಬೇಕಾದವರು ಯಾರೇ ಆಗಲಿ ಅದನ್ನು ಮುಟ್ಟಿದವನೂ, ಅವನನ್ನು ಮುಟ್ಟಿದವನೂ ಸಾಯುತ್ತಾನೆ ಎಂದು ಅರಿತಿರಬೇಕು. ಆಮೇಲೆ ಅವನಿಗೆ ಆ ಶಕ್ತಿಯನ್ನು ರೇಡಿಯೋ ಮತ್ತು ಟಿ.ವಿ.ಗಳಲ್ಲಿ ಉಪಯೋಗಿಸಿ ಸುಮಧುರ ಸಂಗೀತವನ್ನು, ಸುಂದರ ದೃಶ್ಯಗಳನ್ನೂ ಅನುಭವಿಸಲು ಅರ್ಹತೆ ಬರುತ್ತದೆ. ಒಂದೇ ದೈವಶಕ್ತಿಯೇ ಪರಶುರಾಮ, ಶ್ರೀ ರಾಮರಲ್ಲಿ ಹರಿಯುತ್ತಿರುವುದು.
ಪ್ರಾಣಿ ಬಲಿ ಕೊಡಬೇಕೆಂದು ಯಾವ ಪುರಾಣವೂ ಹೇಳುತ್ತಿಲ್ಲ. ಮೂಢ ಜನರ ದುಷ್ಟ ಸಂಪ್ರದಾಯಗಳು ವೇದಶಾಶ್ತ್ರ ಪುರಾಣಗಳ ಪ್ರಚಾರದಿಂದ ನಿರ್ಣಾಮವಾಗಬೇಕಾಗಿದೆ.
– ಲಂಕಾ ಕೃಷ್ಣಮೂರ್ತಿ