ಕೊಡೆಯ ಗೋಪಾಲ – 3
ಲಂಕಾ ಕೃಷ್ಣಮೂರ್ತಿ
೧
ಶ್ರೀ ರಾಮಚಂದ್ರನು ಸೀತಾ ವಿಯೋಗದಿಂದ ಪರಿತಪಿಸುತ್ತ ಲಕ್ಷ್ಮೀ ಸ್ವರೂಪಳಾದ ಆಕೆಯನ್ನು ಬಂಧನದಿಂದ ಬಿಡುಗಡೆ ಮಾಡಲು ತೀವ್ರ ನಿಷ್ಠೆಯನ್ನು ಕೈಕೊಂಡ ಪುಣ್ಯ ಪ್ರದೇಶವದು. ಆ ಪುಣ್ಯ ಸಂಕಲ್ಪಕ್ಕೆ ಅತಿಭಕ್ತಿಯಿಂದ ಅತ್ಮಾರ್ಪಣಸ್ವರೂಪವಾದ ನೆರವನ್ನು ನೀಡಿದ ಕಪಿಶ್ರೇಷ್ಠರ ಮತ್ತು ಭಲ್ಲೂಕಶ್ರೇಷ್ಠರ ಮನೋಜ್ಞ ನಿವಾಸವದು. ರಾಕ್ಷಸರ ನಾಶವನ್ನು ಮಾಡಿ ಲಕ್ಷ್ಮಿಯನ್ನುದ್ಧರಿಸಿ ಪರಮಾತ್ಮನಿಗರ್ಪಿಸಲು ಅಂದಿನ ಕಪಿಶ್ರೇಷ್ಠರು ಮಾಡಿದ ಸತ್ಯ ಪ್ರತಿಜ್ಞೆಯು ಅಲ್ಲಿನ ಶಿಲಾ ವೃಕ್ಷ ನದೀ ತಟಾಕಗಳಲ್ಲಿ ಯುಗ ಯುಗಾಂತರಗಳವರೆಗೂ ಪ್ರತಿಧ್ವನಿತವಾಗುತ್ತಿರುವುದು. ಕಿಷ್ಕಂಧಾ ದೇಶವನ್ನೂ ಕುಂತಲ ದೇಶವನ್ನೂ ಒಳಗೊಂಡ ಈ ಪ್ರದೇಶವು ಹನುಮಂತ, ಚಂದ್ರಹಾಸ, ಮಯೂರ-ಧ್ವಜ ಮುಂತಾದ ಪೌರಾಣಿಕಧೀರರನ್ನೂ, ಶ್ರೀ ಕೃಷ್ಣದೇವರಾಯ, ತಿಮ್ಮರಸು ಮುಂತಾದ ಚಾರಿತ್ರಿಕ ಪುರುಷರನ್ನೂ ಲೋಕಕ್ಕೆ ಕೊಟ್ಟು ಜಗದ್ವಿಖ್ಯಾತವಾಗಿದೆ. ಈ ಪ್ರದೇಶವೇ ಕರ್ನಾಟಕ ದೇಶದ ಕೇಂದ್ರವಾಗಿ ತೆಲುಗು ಮತ್ತು ಕನ್ನಡ ಮಾತಿನವರ ರಮ್ಯ ಸಂಗಮವಾಗಿ ವಿರಾಜಿಸುತ್ತಿದೆ.
ಈ ಪ್ರದೇಶಕ್ಕೆ ಒಳಪಟ್ಟು ಮೇಲೆ ವರ್ಣಿಸಿದ ಪೌರಾಣಿಕ ಮತ್ತು ಐತಿಹಾಸಿಕ ಕೀರ್ತಿ ಕಿರೀಟವನ್ನು ಧರಿಸಿ ವೀರ ಪುರಷನಂತೆ, ನಿಶ್ಚಲ ಯೋಗಿಯಂತೆ, ಅಕ್ಷಯ ಬಲಶಾಲಿಯಂತೆ, ಚಿರಂಜೀವಿಯಂತೆ, ಮೌನಿಯಂತೆ ಘನಗಿರಿಯು ವಿರಾಜಿಸುತ್ತಿರುವುದು. ನಾನಾ ವಿಧವಾದ ವೃಕ್ಷಗಳಿಂದಲೂ, ಬಳ್ಳಿಗಳಿಂದಲೂ, ಪೊದರು ಮೆಳೆಗಳಿಂದಲೂ ಅಲಂಕೃತವಾದ ಈ ಉತ್ತುಂಗ ಪರ್ವತದ ಮೈಯಲ್ಲಿ ಬೃಹತ್ ಪ್ರಮಾಣದ ಶಿಲೆಗಳು ಬಲಿಷ್ಠನ ಮೈಯಲ್ಲಿನ ಮಾಂಸಖಂಡಗಳಂತೆ ನಡುವೆ ನಡುವೆ ಕಾಣಿಸುತ್ತಿರುವುವು. ಮೆಟ್ಟಿಲುಗಳ ಪಂಕ್ತಿಗಳು ವೀರಪುರುಷನು ಧರಿಸಿರುವ ಹವಳದ ಸರಗಳಂತೆ ಹಬ್ಬಿದ ಗಿಡ ಮರಗಳ ನಡುವೆ ಅಲ್ಲಲ್ಲಿ ಕಾಣಿಸುತ್ತಿರುವುವು. ಈ ಮೆಟ್ಟಿಲುಗಳ ನಡುವೆ ಅಲ್ಲಲ್ಲಿ ಕಾಣುವ ಮಂಟಪಗಳೂ, ದ್ವಾರಗಳೂ, ಗೋಪುರಗಳೂ, ಸರಗಳ ನಡುವೆ ಪೋಣಿಸಿರುವ ವಿವಿಧಾಕಾರದ ಮಣಿಗಳ ಗೊಂಚಲುಗಳಂತಿವೆ. ಈ ಪರ್ವತದಲ್ಲಿನ ದೇವಸ್ಥಾನಗಳು ಭಕ್ತನು ಧರಿಸಿರುವ ಭಗವಂತನ ವಿವಿಧ ಮುದ್ರೆಗಳಂತಿವೆ.
ಇಂಥ ಘನಗಿರಿಯ ತಪ್ಪಲಿನಲ್ಲಿ ವಿಶಾಲವೂ ಸಂಪದ್ಭರಿತವೂ ಆದ ಪಟ್ಟಣವೊಂದು ನೆಲೆಸಿತ್ತು. ಈ ಪಟ್ಟಣವನ್ನು ಘನಗಿರಿ ಪಟ್ಟಣವೆಂದೂ ತೆಲುಗಿನಲ್ಲಿ ‘ಪೆನುಗೊಂಡ’ ಎಂದೂ ಕರೆಯುತ್ತಿದ್ದರು. ವಿಜಯನಗರದ ಸಾಮ್ರಾಟರು ಬೇಸಿಗೆಯಲ್ಲಿ ಈ ಪಟ್ಟಣಕ್ಕೆ ಬಂದು ತಂಗುತ್ತಿದ್ದರು. ಪರ್ವತದ ಅಡಿಯಲ್ಲಿ ನಿರ್ಮಿತವಾದ ‘ಗಗನ ಮಹಲು’ ಎಂಬ ಸುಂದರ ಭವನವೇ ಅವರ ಗ್ರೀಷ್ಮ ನಿವಾಸವಾಗಿತ್ತು. ಬೆಟ್ಟದ ನೆರವು ನೆರಳುಗಳಿಂದಲೂ ಸುತ್ತಲೂ ಬೆಳೆಸಿದ ಪುಷ್ಪಫಲಭರಿತಗಳಾದ ಉದ್ಯಾನವನಗಳಿಂದಲೂ ಅವುಗಳಲ್ಲಿನ ಪಕ್ಷಿಗಳ ಕಲಕಲರವದಿಂದಲೂ, ಸಮೀಪದಲ್ಲಿರುವ ಕೆರೆಯ ನೀರಿನ ತಂಪಿ ನಿಂದಲೂ ವಿಜಯನಗರ ಸಮ್ರಾಟರಿಗೆ ಗ್ರೀಷ್ಮವು ವಸಂತವಾಗಿಯೇ ಕಳೆಯುತ್ತಿತ್ತು.
ವಿಜಯನಗರದ ಕಾಲಕ್ಕೆ ಹಿಂದೆ ಗಗನಮಹಲೇ ಸ್ಥಳೀಯ ಅರಸನ ಅರಮನೆಯಾಗಿತ್ತು. ಅದರ ಸುತ್ತಲೂ ಉದ್ಯಾನವನಗಳೂ ಅವುಗಳ ನಡುವೆ ಅಲ್ಲಲ್ಲಿ ದೇವಸ್ಥಾನಗಳೂ ಇದ್ದವು. ಉದ್ಯಾನಗಳಿಗೆ ಪೂರ್ವೋತ್ತರ ದಿಕ್ಕುಗಳಲ್ಲಿ ಅರಸು ಬಂಧುಗಳ ಸೌಧಗಳೂ, ಕೋಶಾಗಾರವೂ, ಸೈನ್ಯಾಗಾರಗಳೂ, ಮಂತ್ರಿಗಳು, ಸೈನ್ಯಾಧಿಪತಿ, ದಂಡನಾಯಕರು ಮುಂತಾದವರ ಗೃಹಗಳೂ, ಪರಿಚಾರಕರ ಕೇರಿಗಳೂ, ಇವುಗಳ ಸುತ್ತಲೂ ಬಲಿಷ್ಠವಾದ ಕಲ್ಲು ಕೋಟೆಯೂ ಇದ್ದವು. ಕೋಟೆಯು ಅಂತಃಪುರಾದಿಗಳನ್ನು ಉತ್ತರ, ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಸುತ್ತಿಕೊಂಡು ಪಶ್ಚಿಮದಲ್ಲಿರುವ ಬೆಟ್ಟದ ಮೇಲೆ ಹರಡಿತ್ತು. ದಕ್ಷಿಣ ದಿಕ್ಕಿನಿಂದ ಬೆಟ್ಟವನ್ನು ಹತ್ತಿದ್ದ ಕೋಟೆಯು ಉತ್ತರ ದಿಕ್ಕಿನಿಂದ ಬೆಟ್ಟವನ್ನು ಹತ್ತಿದ್ದ ಕೋಟೆಯನ್ನು ಬೆಟ್ಟದ ಶಿಖರದಿಂದಾಚೆ ಸೇರಿಕೊಂಡಿತ್ತು. ಈ ಕೋಟೆಯಲ್ಲಿ ಪೂರ್ವ ದಿಕ್ಕಿನಲ್ಲೊಂದೂ, ದಕ್ಷಿಣ ದಿಕ್ಕಿನಲ್ಲೊಂದೂ, ಉತ್ತರ ದಿಕ್ಕಿನಲ್ಲೊಂದೂ ಬಾಗಿಲುಗಳಿದ್ದವು. ಪಶ್ಚಿಮ ದಿಕ್ಕಿನಲ್ಲಿ ಬೆಟ್ಟದ ಶಿಖರದಲ್ಲಿ ಕೋಟೆಗೆ ಸೇರಿ ‘ಕಿಲ್ಲೆ’ ಎಂಬ ಒಂದು ಸೈನಿಕರ ವಿವಾಸವಿತ್ತು. ದಕ್ಷಿಣದ ಕೋಟೆಯ ಬಾಗಿಲಿನ ಪಕ್ಕದಲ್ಲೇ ಪರ್ವತಗಳ ನಡುವೆ ಒಂದು ಕೆರೆ ಇತ್ತು. ಈ ಕೆರೆಯು ತುಂಬಿ ಕೋಡಿ ಹರಿದರೆ ಅದರ ನೀರು ಕೋಟೆಯ ಸುತ್ತಲೂ ಪೂರ್ವ ಮತ್ತು ಉತ್ತರ ದಿಕ್ಕುಗಳಲ್ಲಿ ಆಗೆದಿದ್ದ ಆಳವಾದ ಕಂದಕವನ್ನು ತುಂಬುತ್ತಿತ್ತು. ಕೋಟೆಗೆ ಹೊರಗಡೆ ವಾಯವ್ಯ ದಿಕ್ಕಿನಲ್ಲಿ ಯುದ್ಧ ಭೂಮಿಗಳೂ, ಪೂರ್ವೋತ್ತರ ದಿಕ್ಕುಗಳಲ್ಲಿ ವಿಶಾಲ ಮತ್ತು ಸಂಪದ್ಭರಿತವಾದ ಘನಗಿರಿ ಪಟ್ಟಣವೂ ಇದ್ದವು. ಗಗನ ಮಹಲಿನಿಂದ ‘ಕಿಲ್ಲೆ’ ಯವರೆಗೂ ಬೆಟ್ಟದ ಮೈಯೊಳಗೆ ಸುರಂಗ ಮಾರ್ಗವಿತ್ತು. ಕೋಟೆಯ ಮೇಲೆ ಶತ್ರುಗಳ ಬರುವಿಕೆಯನ್ನು ಕಾದು ನೋಡುತ್ತಿರುವುದಕ್ಕೆ ಅಲ್ಲಲ್ಲಿ ಬುರುಜುಗಳಿದ್ದವು. ಇವುಗಳಲ್ಲಿ ರಾಮ ಬುರುಜು, ಲಕ್ಷ್ಮಣ ಬುರುಜು ಎಂಬವು ಪ್ರಸಿದ್ಧವಾದವು.
