August 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 7
ಯಜ್ಞೋಪವೀತ ಧರಿಸುವ ಕಾರಣ ಮತ್ತು ಗಾಯಿತ್ರಿ ಮಂತ್ರದ ಅರ್ಥ.
(ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಒದುಗರಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಪ್ರಶ್ನೆ:- ಯಜ್ಞೋಪವೀತ ಧರಿಸುವ ಕಾರಣ (3 ಎಳೆ ಬ್ರಹ್ಮಚಾರಿಗೆ ಏಕೆ? 6 ಎಳೆ ವಿವಾಹಿತರಿಗೆ ಏಕೆ?) ಮತ್ತು ಗಾಯಿತ್ರಿ ಮಂತ್ರದ ಅರ್ಥ.
ಉತ್ತರ
“ ಓಂ – ಭೂರ್ಭುಸ್ಸ್ವ– ತತ್ಸವಿತುರ್ವರೇಣ್ಯಂಭರ್ಗೋದೇವಸ್ಯ ಧೀಮಹಿ,
ಧಿಯೋ ಯೋ ನಃ ಪ್ರಚೋದಯಾತ್” ಎಂಬುದೇ ಗಾಯತ್ರೀ ಮಂತ್ರ.
ಇದರಲ್ಲಿ ಮೂರು ಭಾಗಗಳಿವೆ. ಒಂದೊಂದು ಭಾಗದಲ್ಲೂ ಪುನಃ ಮೂರು ಅಂತರ್ಭಾಗಗಳಿವೆ. ‘ಓಂ’ ಅನ್ನುವ ಮೊದಲನೇ ಭಾಗದಲ್ಲಿ ಅ+ಉ+ಮ್ ಎಂಬ ಮೂರು ಅಂತರ್ಭಾಗಗಳಿವೆ. ಋಕ್, ಯಜುರ್, ಸಾಮ ಎಂಬ ಒಂದೊಂದೂ ವೇದದಲ್ಲಿ ಒಂದೊಂದು ವರ್ಣವನ್ನು ಸಾರವನ್ನಾಗಿ ತೆಗೆದು ಪ್ರಜಾಪತಿ ಓಂಕಾರವನ್ನು ಮಾಡಿದನು. ಎರಡನೇ ಭಾಗದಲ್ಲಿ ಸಹ ಭೂಃ, ಭುವಃ, ಸ್ವಃ ಎಂಬ ಮೂರು ಅಂತರ್ಭಾಗಗಳಿವೆ. ಇವನ್ನೂ ಮೂರು ವೇದಗಳಿಂದ ತೆಗೆದನು. ಹಾಗೆಯೇ ಮೂರನೇ ಭಾಗದಲ್ಲಿಯೂ ಮೂರು ಪಾದಗಳಿವೆ. 1) ತತ್ಸವಿತುರ್ವರೇಣ್ಯಂ 2) ಭರ್ಗೋದೇವಸ್ಯಧೀಮಹಿ 3) ಧಿಯೋಯೋನಃಪ್ರಚೋದಯಾತ್. ಈ ಮೂರು ಪಾದಗಳನ್ನೂ ಸಹ ಮೂರು ವೇದಗಳಿಂದ ತೆಗೆದನು. ಆದುದರಿಂದ ಈ ಗಾಯಿತ್ರಿ ಮಂತ್ರದ ಜಪ ಮೂರು ವೇದಗಳ ಅಧ್ಯನಕ್ಕೆ ಸಮಾನ ಎಂದು ಮನುಸ್ಮೃತಿಯು ತಿಳಿಸುತ್ತದೆ. ಅಂದರೆ ಈ ಗಾಯತ್ರಿ ಮಂತ್ರ ಸಮಸ್ತ ಜ್ಞಾನವನ್ನೂ ಒಳಗೊಂಡಿದೆ. ಇದು ಹೇಗೆ ಎಂಬ ವಿಷಯವನ್ನು ಚರ್ಚಿಸೋಣ.
ಜ್ಞಾನವೆಲ್ಲಾ ಹೊರಗಿನ ಪ್ರಪಂಚ ಮತ್ತು ಅದನ್ನು ಅನುಭವಿಸಿ ಅದರಿಂದ ಪರಿಣಾಮ ಹೊಂದುತ್ತ ಆನಂದಕ್ಕಾಗಿ ಮುಂದುವರಿಯುತ್ತಿರುವ ಒಳಗಿನ ಪ್ರಪಂಚಕ್ಕೆ ಸಂಬಂಧಿಸಿದ್ದು. ಇದು ಬಿಟ್ಟು ಬೇರೆ ಇನ್ನೇನೂ ಇಲ್ಲ. ಈ ಹೊರ ಮತ್ತು ಒಳಗಿನ ಪ್ರಪಂಚಗಳಲ್ಲಿ ಸದಾ ಏನು ನಡೆಯುತ್ತಿದೆ? ಅವೇ ಸೃಷ್ಟಿ, ಸ್ಥಿತಿ, ಲಯಗಳು. ಸೃಷ್ಟಿ ಒಂದು ಬೀಜದಿಂದ ಆಗುತ್ತೆ. ವ್ಯಾಪ್ತಿಯನ್ನು ಹೊಂದುತ್ತೆ. ಸ್ಥಿತಿಯಲ್ಲಿ ಅದರ ಲೀಲಾಮಯವಾದ ವಿಕಾಸ. ಲಯದಲ್ಲಿ ಎಲ್ಲಾ ಸಹಜವಾಗಿ ಮಾಯವಾಗುತ್ತೆ. ಇದು ಆಗಲೇಬೇಕು. ಇದರಿಂದಲೇ ನಿರ್ವತಿ ಅಥವಾ ಆನಂದ. ಓಂಕಾರದಲ್ಲಿನ ಆಕಾರ ಸೃಷ್ಟಿಗೆ ಸಂಕೇತ. ಬ್ರಹ್ಮನಿಗೆ ಸಂಕೇತ. ‘ಮ್’ ಅನ್ನುವುದು ಸದಾಶಿವನಿಗೂ ಮೌನಕ್ಕೂ ಆನಂದಕ್ಕೂ ಸಂಕೇತ. ಇದರಲ್ಲಿ ಆಕಾರ ಹ್ರಸ್ವವಾಗಿ ಹುಟ್ಟುತ್ತಲೇ ಉಕಾರದಲ್ಲಿ ಮಿಳಿತವಾಗಿ ದೀರ್ಘವಾದ ಸ್ಥಿತಿಯ ಲೀಲೆಯಲ್ಲಿ ವ್ಯಾಪಿಸಿ ಕೊನೆಗೆ ಮ್ ಎಂಬ ಅರ್ಧ ಮಾತ್ರೆಯಲ್ಲಿ ಮಾಯವಾದರೂ ಇದರ ಎಳೆತವಾದ ನಾದದಲ್ಲಿ ಆನಂದ ಸ್ವರೂಪವಾಗಿ ಅನಂತವಾಗಿ ನಿಂತುಹೋಗುತ್ತದೆ. ಈ ಹೊರ ಮತ್ತು ಒಳಗಿನ ಪ್ರಪಂಚಗಳ ಸಮಸ್ತ ಕಾರ್ಯಗಳೂ ಮೇಲ್ಕಂಡ ರೀತಿಯನ್ನೇ ಅನುಸರಿಸಿವೆ. ಆದುದರಿಂದಲೇ ಸಮಸ್ತವಾಗಿ ಬೃಹತ್ ಆಗಿರುವ ಬ್ರಹ್ಮ ಭಾವವನ್ನು ಈ ಓಂಕಾರ ಸೂಚಿಸುತ್ತದೆ. ಇದು ಬ್ರಹ್ಮನ ಶಬ್ದಮಯ ರೂಪ ನಾದಮಯ ರೂಪ ತದೇಕ ಧ್ಯಾನದಿಂದ ಈ ಪ್ರಣವವನ್ನು ಜಪಿಸುವಾಗ ಬ್ರಹ್ಮ ಭಾವನೆ ಇರಲೇ ಬೇಕು. ಇದರಲ್ಲಿ ವ್ಯಕ್ತವಾದ ಪ್ರಪಂಚದ ಆದಿಯನ್ನು ಆಕಾರದಲ್ಲಿ ಸೂಕ್ಷ್ಮವಾಗಿ ಭಾವಿಸಿ ಅಕಾರ ಉಕಾರ ಮಿಶ್ರಣವಾದಓಂಕಾರದಲ್ಲಿ ಸ್ಥಿತಿಗೆ ಸಂಬಂಧಿಸಿದ ಪ್ರಪಂಚ ವ್ಯಾಪಾರವನ್ನೆಲ್ಲಾ ಲೀಲಾಮಯವಾಗಿ ವಿಸ್ತೃತವಾಗಿ ಭಾವಿಸಿ ಇದೆಲ್ಲಾ ಒಂದೇ ತತ್ವವಾದ ‘ಮ್’
ನಲ್ಲಿ ಲೀನ ಮಾಡಿ ಅವ್ಯಕ್ತದ ಅನಂತದಲ್ಲಿ ಆ ಅನುಸ್ವಾರದ ಎಳೆತವನ್ನು ಆನಂದೈಕರಸಾತ್ಮಕವಾಗಿ ಭಾವಿಸಬೇಕು. ಇಂತಹ ಓಂಕಾರವನ್ನು ತೋರಿಸುವುದೇ ಶಿವಲಿಂಗ. ಇದರಲ್ಲಿ ಕೆಳಗೆ ಸಣ್ಣದಾಗಿ ಮುಂದುವರೆದ ರೂಪ ಮಧ್ಯದಲ್ಲಿ ವಿಸ್ತಾರವಾದ ಪಾಣಿವಟ್ಟವಾಗಿ ಪುನಃ ಅದರ ಮಧ್ಯದಲ್ಲಿ ಮೇಲಕ್ಕೆ ಮುಂದುವರೆದ ಲಿಂಗವಾಗಿ ಗೋಳಾರ್ಧದ ತುದಿಯಲ್ಲಿ ಬಿಂದುವಿನಲ್ಲಿ ನಿಂತುಹೋಗುತ್ತದೆ. ಕ್ರೈಸ್ತ ಮತದ “Amen” ಎಂಬುದು ‘ಓಂ’ ಕಾರಕ್ಕೆ ಸದೃಶವಾಗಿರುವುದೂ, ಕ್ರಾಸ್ ಚಿನ್ಹೆಯು ಶಿವಲಿಂಗ(ಅದನ್ನೇ ಹೋಲುವ ಇಂದಿನ ಓಂಕಾರ ಚಿನ್ಹೆಯನ್ನೂ ಸ್ವಸ್ತಿಕ ಚಿನ್ಹೆಯನ್ನೂ) ಅನುಕರಿಸುತ್ತಿರುವುದೂ ಆಲೋಚಿಸಬೇಕಾದ ವಿಷಯ. ಪ್ರಾಚೀನ ಕಾಲದ ಪ್ರಪಂಚದ ಎಲ್ಲ ಜನರೂ ಪರಮಾತ್ಮನನ್ನು ಓಂಕಾರ ರೂಪದಿಂದ ಭಾವಿಸುತ್ತಿರಬೇಕು. ಯೋಗಶಾಸ್ತ್ರದಲ್ಲಿ ಸಹ ಓಂಕಾರ ಧ್ಯಾನವನ್ನೇ ಈಶ್ವರ ಪ್ರಣಿಧಾನಕ್ಕೆ ಮಾರ್ಗವಾಗಿ ತೋರಿಸಿದ್ದಾರೆ.
ಭೂಃ, ಭುವಃ, ಸ್ವಃ ಎನ್ನುವ ಮೂರು ವ್ಯಾಹೃತಿಗಳೂ ಈ ತತ್ವವನ್ನೇ ಮುಂದುವರಿಸುತ್ತಿವೆ. ಭೂಲೋಕ ಬಾಹ್ಯ ಪ್ರಪಂಚ. ಭುವಲೋಕ ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಪಂಚ ಅತಿವಿಸ್ತಾರವಾದದ್ದು. ಭೂಲೋಕದಲ್ಲಿ ಅತ್ಯಲ್ಪ ಕಾಲದ ಜೀವದಲ್ಲಿನ ಪುಣ್ಯಪಾಪಗಳ ಫಲಗಳನ್ನು ದೀರ್ಘಕಾಲ ಚಿತ್ರವಿಚಿತ್ರವಾದ ಅನುಭವಗಳಲ್ಲಿ ಅನುಭವಿಸಲು ದೇವ, ಯಕ್ಷ, ಗಂಧರ್ವ ರಾಕ್ಷಸ ಇತ್ಯಾದಿ ಲೀಲಾರೂಪಮಯವಾದಲೋಕ, ಸ್ವರ್ಲೋಕ ಆನಂದಮಯವಾದದ್ದು.
ತತ್ಸವಿತುಃ ಇತ್ಯಾದಿ ಮುಂದಿನ ಗಾಯತ್ರಿ ಮಂತ್ರದ ಅರ್ಥ ವಿವರಿಸುವ ವಿದ್ಯಾರಣ್ಯರ ಶ್ಲೋಕಗಳು ಹೀಗಿವೆ:-
ತದಿತ್ಯವಾಜ್ಮನೋ ಗಮ್ಯಂ ಧ್ಯೇಯಂ ಯ ತ್ಸೂರ್ಯಮಂಡಲೇ
ಸವಿತುಃ ಸಕಲೋತ್ಪತ್ತಿ ಸ್ಥಿತಿ ಸಂಹಾರ ಕಾರಿಣಃ
ವರೇಣ್ಯಮಾಶ್ರಯಣೀಯಂ ಯದಾಧಾರಮಿದಂ ಜಗತ್
ಭರ್ಗಸ್ಸ ಸಾಕ್ಷಾತ್ಕಾರೇಣಾ ವಿದ್ಯಾ ತತ್ಕಾರ್ಯದಾಹಕಂ
ದೇವಸ್ಯ ದ್ಯೋತಮಾನಸ್ಯ ಹ್ಯಾನಂದಾತ್ಕ್ರೀಡತೋಪಿವಾ
ಧೀಮಹ್ಯ ಹಂಸ ಏವೇತಿ ತೇನೈವಾಭೇದ ಸಿದ್ಧಯೇ
ಧಿಯೋಂತಃಕರಣ ವೃತ್ತೀಃ ಪ್ರತ್ಯಕ್ಷ್ರವಣಚಾರಿಣೇಃ
ಯ ಇತ್ಯಲಿಂಗ ಧರ್ಮಂ ಯ ತ್ಸತ್ಯಜ್ಞಾನಾದಿ ಲಕ್ಷಣಂ
ಸೋಸ್ಮಾಕಂ ಬಹುಥಾಧ್ಯಸ್ತ ಭಿನ್ನ ಭೇದ ದೃಶಾಂತಥಾ
ಪ್ರಚೋದಯಾತ್ಪ್ರೇಯತು ಪ್ರಾರ್ಥನೇಯಂ ವಿಚಾರ್ಯತೇ
ಸಾರಾಂಶ:- ಧೀಮಃ – ಅದೇ ನಾನು ಎಂಬ ಭಾವದಿಂದ ಧ್ಯಾನಿಸೋಣ ಯಾವುದನ್ನು? ತತ್ – ವಾಕ್ಕಿಗೂ ಮನಸ್ಸಿಗೂ ಸಿಲುಕದ ಪರಮಾತ್ಮ ತತ್ವವನ್ನು ಅದು ಎಂತಹುದು? ಸವಿತುಃ ಪ್ರಪಂಚದ ಸೃಷ್ಟಿಸ್ಠಿತಿಲಯ ಕರ್ತನಾದ ಸೂರ್ಯನ ತತ್ವಕ್ಕೆ ಸಂಬಂಧಿಸಿದ್ದು, ಮತ್ತು ವರೇಣ್ಯಂ – ಆಶ್ರಯಿಸಲು ಅರ್ಹವಾದದ್ದು ಸಮಸ್ತ ಸಮಸ್ತ ಜಗದಾಧಾರವೂ ಮತ್ತು ಭರ್ಗಃ – ಅಜ್ಞಾನ, ಅದರ ಕಾರ್ಯ – ಇವನ್ನು ಸುಡುವಂಥದ್ದು– ಮತ್ತೆ ದೇವಸ್ಯ – ಪ್ರಕಾಶಿಸುವಂತಹುದು. ಆನಂದದಿಂದ ಲೀಲಾಮಯವಾಗಿರುವುದು. ಈ ರೀತಿಯಾಗಿ ಏಕೆ ಪ್ರಾರ್ಥಿಸಬೇಕು? ನಃ– ಭಿನ್ನಭಿನ್ನವಾಗಿರುವ ವಿವಿಧ ಜೀವಿಗಳಾದ ನಮ್ಮ, ಧಿಯಃ– ಪರಿಪರಿಯಾಗಿರುವ ಅಂತಃಕರಣ ಪ್ರವೃತ್ತಿಗಳನ್ನು ಯಹಃ– ಬಹುತ್ವದಲ್ಲಿ ಏಕ ರೂಪನಾಗಿ ನಾಮಲಿಂಗಾದಿ ಭೇದರಹಿತನಾಗಿ ಸತ್ಯ ಜ್ಞಾನಾದಿ ಲಕ್ಷಣಾಯುತನಾದ ಆ ಪರಮಾತ್ಮನು ಪ್ರಚೋದಯಾತ್ – ಒಳ್ಳೆಯ ಮಾರ್ಗದಲ್ಲಿ(ಧರ್ಮಾರ್ಥ ಕಾಮ ಮೋಕ್ಷ ಸಾಧನೆಗಾಗಿ) ಕೊಂಡೊಯ್ಯಲಿ ಎಂಬ ಪ್ರಾರ್ಥನೆಯಿಂದ ಧ್ಯಾನಿಸಬೇಕೆಂಬ ಭಾವ.
ಹಿಂದಿನ ಸಂಚಿಕೆಯಲ್ಲಿ ಗಾಯತ್ರೀ ಮಂತ್ರಕ್ಕೆ ವಿದ್ಯಾರಣ್ಯರು ಕೊಟ್ಟಿರುವ ಅರ್ಥದ ವಿವರಣೆ ಪ್ರಾರಂಭವಾಗಿತ್ತು. ಇದರಂತೆ ಗಾಯತ್ರೀ ಮಂತ್ರದ ಭಾವಾರ್ಥ ಹೀಗಿದೆ–
ಈ ವಿಶ್ವವನ್ನು ಸೃಷ್ಟಿಸಿ, ಪರಿಪಾಲಿಸಿ, ಕೊನೆಗೆ ಲಯಮಾಡಿ ಇದೇ ರೀತಿ ಪುನಃ ಪುನಃ ಸೃಷ್ಟಿ ಸ್ಥಿತಿ ಲಯಗಳನ್ನು ಮಾಡುತ್ತ ಅನಂತವಾದ ಕಾಲದಲ್ಲಿ ಲೀಲಾಮಯವಾದ ವಿಚಾರವನ್ನು ಮಾಡುತ್ತಿರುವ ಯಾವ ಪರಬ್ರಹ್ಮನಿದ್ದಾನೋ ಆತನನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳುವುದೇ ಅಸಾಧ್ಯ. ಆತನನ್ನು ಮಾತುಗಳಲ್ಲಿ ವರ್ಣಿಸುವುದೇ ಅಸಾಧ್ಯ. ಮಾನವರಾದ ನಾವು ಈ ವಿಶ್ವದಲ್ಲಿ ಪ್ರೇಮಿಸಿ, ಗೌರವಿಸಿ, ಆಶ್ರಯಿಸಬೇಕಾದ ಸರ್ವಶ್ರೇಷ್ಠನು ಆ ಪರಮಾತ್ಮನೇ, ಆತನೇ ನಿಜವಾದ ಬೆಳಕು. ಶಾಶ್ವತವಾದ ಬೆಳಕು. ಉಳಿದದ್ದೆಲ್ಲಾ ಮಾಯಾಮಯ ಮತ್ತು ಅಶಾಶ್ವತ. ಆತನನ್ನು ತಿಳಿಸದೆ ಅಶಾಶ್ವತವಾದ ವಸ್ತುಗಳ ಕಡೆಗೆ ನಮ್ಮ ಮನಸ್ಸನ್ನು ಪ್ರೇರೇಪಿಸುತ್ತಿರುವ ಅಜ್ಞಾನವನ್ನು ಸುಡುವ ಶಕ್ತಿ ಆ ಸೂರ್ಯನಂತೆ ಬೆಳಗುವ ಆ ಪರಮಾತ್ಮನೊಬ್ಬನಿಗೇ ಇರುವುದು. ಅಂತಹ ಪರಮಾತ್ಮನನ್ನು ಮಾನವರಾದ ನಾವೆಲ್ಲರೂ ಧ್ಯಾನಿಸೋಣ. ಅಜ್ಞಾನದಿಂದ ಕಲುಷಿತವಾಗಿ ನಾನು ಬೇರೆ, ಇವನು ಬೇರೆ ಎಂಬ ಭಾವನೆಯಿಂದ ತಪ್ಪು ದಾರಿ ಹಿಡಿದಿರುವ ನಮ್ಮ ಬುದ್ಧಿಗಳನ್ನು ಆ ಪರಮಾತ್ಮನು ಎಲ್ಲರಲ್ಲೂ ಇರುವ ಆತ್ಮವೊಂದೇ ಎಂಬ ಭಾವದಿಂದ ಪವಿತ್ರಗೊಳಿಸಿ ಎಲ್ಲರೂ ಸೇರಿ ಎಲ್ಲರ ಹಿತವನ್ನು ಸಾಧಿಸಲು ಉಪಯುಕ್ತವಾದ ಜ್ಞಾನ ಮಾರ್ಗದಲ್ಲಿ ಪ್ರೇರೇಪಿಸಲಿ.
ಜನಿವಾರ
ಈ ಅರ್ಥವನ್ನು ಭಾವಿಸುತ್ತ ಗಾಯತ್ರೀ ಮಂತ್ರವನ್ನು ಜಪಿಸಬೇಕು. “ಇಂತಹ ಸರ್ವೋತ್ತಮವಾದ ಮಂತ್ರದ ಜಪ ಮಾಡುತ್ತೇನೆ. ನಾನು ಇದರಿಂದ ಪವಿತ್ರನಾಗಿ ಇತರರನ್ನು ನನ್ನಂತೆ ಭಾವಿಸುತ್ತ, ಅವರ ಹಿತಕ್ಕಾಗಿ ದುಡಿಯುತ್ತ ಇದನ್ನೇ ಪರಬ್ರಹ್ಮನ ಸೇವೆಯೆಂದು ಭಾವಿಸುತ್ತೇನೆ.” ಎಂದು ಮುಂದೆ ಬಂದವರೇ ದ್ವಿಜರು. ಅಂದರೆ ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು. ಇವರು ಈ ಮಂತ್ರದ ಉಪದೇಶದಿಂದ ತಾವು ಇತರ ಪ್ರಾಣಿಗಳಂತೆ ಕೇವಲ ಇಂದ್ರಿಯ ಸುಖಕ್ಕಾಗಿ ಜೀವಿಸುವ ಉದ್ದೇಶವನ್ನು ಬಿಟ್ಟು ಪರಮಾತ್ಮನ ಸೇವೆಗಾಗಿಯೇ ಹೊಸ ಜೀವನವನ್ನು ಮಾಡಲು ಸಿದ್ಧರಾಗಿ ಬಂದವರು. ಇವರು ಈ ಹೊಸ ಜೀವನಕ್ಕಾಗಿ ಗಾಯತ್ರೀ ಮಂತ್ರದ ಹೊಸ ಉಪದೇಶದಿಂದ ತಾವು ಎರಡನೇಸಲ ಹುಟ್ಟಿದವನು ಎಂದು ಅರ್ಥ. ಇವರು “ಬ್ರಹ್ಮ” (ಪರಮಾತ್ಮನ) ಸೇವಕರು. ಆದುದರಿಂದ ಅವನ ಆದೇಶದಿಂದ ಬ್ರಹ್ಮಚರ್ಯ, ಗೃಹಸ್ಥ, ಮುಂತಾದ ಆಶ್ರಮಗಳಲ್ಲಿ ಲೋಕಸೇವೆ ಮಾಡಲು ನಾವು ಸಿದ್ಧರಾಗಿದ್ದೇವೆ. ನಮ್ಮ ಸೇವೆಯನ್ನು ಎಲ್ಲರೂ ಸ್ವೀಕರಿಸಿ, ಎಂದು ಲೋಕಕ್ಕೆ ತೋರಿಸಲು “ಬ್ರಹ್ಮಸೂತ್ರ”ವನ್ನು ಧರಿಸುತ್ತಾರೆ. ಈ ಕಾಲದಲ್ಲಿ ಇಂತಹ ಸೇವಾ ಚಿಹ್ನೆಯನ್ನು (ಪಟ್ಟಿಯನ್ನು) ಕೇವಲ ೪ನೇ ದರ್ಜೆಯ ಸರ್ಕಾರಿ ನೌಕರರು ಧರಿಸುತ್ತಾರೆ. ಉನ್ನತ ಅಧಿಕಾರಿಗಳು ಇದನ್ನು ಏಕೆ ಧರಿಸುವುದಿಲ್ಲವೋ ಗೊತ್ತಾಗುವುದಿಲ್ಲ. ಆದರೆ ದ್ವಿಜರಲ್ಲಿ ಅತ್ಯಂತ ದೊಡ್ಡ ಅಧಿಕಾರಿ(ಹಾಗೆಯೇ ಅತ್ಯಂತ ಬಡತನದಲ್ಲಿ ಜೀವಿಸುವ) ಬ್ರಾಹ್ಮಣನು ಈ ಬ್ರಹ್ಮಸೂತ್ರವನ್ನು ಬಹಳ ಪ್ರೀತಿಯಿಂದ ಧರಿಸುತ್ತಾನೆ.
ಈ ಬ್ರಹ್ಮಸೂತ್ರವೇ ಯಜ್ಞೋಪವೀತ. ಯಜ್ಞವೆಂದರೆ ಪೂಜಿಸುವುದು ಅಂದರೆ ಸೇವೆ ಮಾಡುವುದು. ಯಾರನ್ನು ಪೂಜಿಸುವುದು? ಎಲ್ಲರನ್ನೂ, ಏಕೆ. ಅದೇ ದೇವರ ಪೂಜೆ. ಈ ಎಲ್ಲರೂ ಯಾರು? ೧) ದೇವತೆಗಳು – ನಮ್ಮ ಪ್ರಾಣಗಳನ್ನೂ ಇಂದ್ರಿಯಗಳನ್ನೂ ಮತ್ತು ಹೊರಗಿನ ಪ್ರಕೃತಿಯನ್ನೂ ಧರಿಸುವ ಶಕ್ತಿಗಳು. ೨) ಋಷಿಗಳು– ನಮಗೆ ವಿದ್ಯೆಯನ್ನೂ ಜ್ಞಾನವನ್ನೂಕೊಟ್ಟವರು. ೩) ಪಿತೃಗಳು– ನಮಗೆ ಜನ್ಮಕೊಟ್ಟು ಬೆಳೆಸಿ ಕಾಪಾಡಿದವರು. ೪) ಮನುಷ್ಯರು– ನಮಗೆ ಜೀವನದಲ್ಲಿ ನೆರವಾಗಿರುವವರು. ೫) ಗಿಡಮರಗಳು, ಪಶುಪಕ್ಷಿಗಳು– ನಮಗೆ ಜೀವನಾಧಾರ.
‘ಯಜ್ಞೋಪವೀತ’ ಎಂಬ ಹೆಸರಿಗೆ ಈ ಅರ್ಥವಿದ್ದರೆ ‘ಬ್ರಹ್ಮ ಸೂತ್ರ’ ಎಂಬ ಹೆಸರಿಗೆ ಪರಬ್ರಹ್ಮ ಪರವಾದ ಅರ್ಥವಿದೆ. ಈ ಜನಿವಾರವನ್ನು ಹೇಗೆ ತಯಾರುಮಾಡುತ್ತಾರೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಉದ್ದವಾದ ದಾರವನ್ನು ಮೂರೆಳೆಗಳು ಬರುವಂತೆ ಜೋಡಿಸುತ್ತಾರೆ. ಈ ಎಳೆಗಳನ್ನು ಹೆಣೆದು ಪುನಃ ಆ ಹೆಣೆದ ದಾರವನ್ನುಮೂರೆಳೆಗಳು ಬರುವಂತೆ ಜೋಡಿಸಿ ಅದನ್ನೂ ಹೆಣೆಯುತ್ತಾರೆ. ಈಗ 9 ಎಳೆಗಳುಳ್ಳ ದಾರದ ಉದ್ದ ಮೊದಲಿನ ದಾರದ ಉದ್ದದಲ್ಲಿ 9ನೇ ಒಂದು ಭಾಗಕ್ಕೆ ಇಳಿಯುತ್ತೆ. ಮೊದಲಿನ ದಾರದಲ್ಲಿ ಹುರಿ ಒಂದು ದಿಕ್ಕಿಗೆ ಇದ್ದರೆ ಅದನ್ನು ಮೂರು ಭಾಗ ಮಾಡಿ ಹೆಣೆಯುವಾಗ ಹುರಿ ಅದಕ್ಕೆ ವಿರುದ್ಧವಾದ ದಿಕ್ಕಿಗೆ ಬರುತ್ತೆ. ಇದನ್ನು ಮೂರು ಭಾಗ ಮಾಡಿ ಪುನಃ ಹೆಣೆಯುವಾಗ ಅದಕ್ಕೆ ವಿರುದ್ಧವಾದ ದಿಕ್ಕಿಗೆ ಅಂದರೆ (ಈವ್)ಮೊದಲಿನ ದಿಕ್ಕಿಗೇ ಬರುತ್ತೆ, ಸೃಷ್ಟಿಯ ಆದಿಯಲ್ಲಿ ಋಷಿಗಳು, ಆದಂ ಅವ್ವ, ಮುಂತಾದ ಜೀವಿಗಳ ದೃಷ್ಟಿ ಪರಮಾತ್ಮನ ಕಡೆಗೆ ಇರುತ್ತೆ. ಆಮೇಲೆ ಅದು ಪ್ರಪಂಚದ ಸುಖಗಳ ಕಡೆ ತಿರುಗುತ್ತೇ, (Paradise Lost) ಆಮೇಲೆ ಅದನ್ನು ಪರಮಾತ್ಮನ ಕಡೆ ತಿರುಗಿಸಬೇಕು (Paradise Regained) ಈ ಸ್ಥಿತಿಗೆ ಬಂದ ದಾರದ ಮೂರೆಳೆಗಳನ್ನು ಸೇರಿಸಿ ಹೆಣೆಯದೆ, “ಬ್ರಹ್ಮ ಗಂಟು” ಹಾಕಿ ಬಿಗಿಯುತ್ತಾರೆ. ಈಗ ಬ್ರಹ್ಮ ಸೂತ್ರ ತಯಾರಾಗಿದೆ. ಮೊದಲು ಪರಿಶುದ್ಧನಾದ ಅನಂತನಾದ ಪರಮಾತ್ಮನ ಅಂಶವಾದ, ಉದ್ದ ದಾರದಂತಿರುವ, ಜೀವನು ಸತ್ವ, ರಜಸ್, ತಮಸ್ ಎಂಬ ಮೂರು ಗುಣಗಳಲ್ಲಿ ಬಂಧಿತನಾಗಿ ಸಂಸಾರದ ಕಡೆ ತಿರುಗುತ್ತಾನೆ. ಆಮೇಲೆ ತನ್ನ ಮೂರು ಶಕ್ತಿಗಳಾದ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳನ್ನು ದೇವರ ಕಡೆ ಮರಳಿಸಿ ಇನ್ನೂ ಸಣ್ಣದಾಗಿಬಿಡುತ್ತಾನೆ. ಆಮೇಲೆ ‘ಓಂ’ಕಾರದ ಮೂರು ಅಂಶಗಳಾದ ಬ್ರಹ್ಮ ವಿಷ್ಣು ಶಿವರ ತತ್ವಗಳನ್ನೇ ಚಿಂತಿಸುತ್ತಿರುತ್ತಾನೆ. ಹಾಗೆಯೇ ಮಂಡೂಕ್ಯೋಪನಿಷತ್ತಿನಲ್ಲಿ ಕೊಟ್ಟಿರುವ ಓಂಕಾರದ ವಿವರಣೆಯಂತೆ ವಿಶ್ವ, ತಜಸ, ಪ್ರಾಜ್ಞರೂಪಗಳನ್ನು ಗುರುತಿಸಿಕೊಳ್ಳುತ್ತಾನೆ. ಓಂಕಾರದ ತುದಿಯ ಅರ್ಧ ಮಾತ್ರದ ಪರಮಾತ್ಮ ಸ್ವರೂಪದಲ್ಲಿ ಅಥವಾ ಮಾಂಡೂಕ್ಯ ಹೇಳಿರುವ ‘ತುರೀಯ’ ಸ್ಥಿತಿಯ ಬ್ರಹ್ಮಗಂಟಿನಲ್ಲಿ ಪರಮಾತ್ಮನ ಉಪಾಸಿಸನಾಗಿ ಬಿಡುತ್ತಾನೆ. ಇದು ಬ್ರಹ್ಮಸೂತ್ರದ ಸಂಕೇತ.
ಉಪನಯ ಕಾಲದಲ್ಲಿ ಗಾಯತ್ರಿ ಮಂತ್ರದ ಪರಬ್ರಹ್ಮೋಪಾಸನೆಗಾಗಿ ಒಂದು ಬ್ರಹ್ಮಸೂತ್ರವನ್ನು ವಟುಹಾಕುತ್ತಾನೆ. ವಿವಾಹ ಕಾಲದಲ್ಲಿಅಲ್ಲಿಂದ ಗೃಹಸ್ಥಾಶ್ರಮದಲ್ಲಿ ತಾನು ಪ್ರತಿದಿನ ಮಾಡಬೇಕಾದ ಪಂಚಯಜ್ಞ ರೂಪಕವಾದ ಸೇವೆಗೆ ಚಿಹ್ನೆಯಾಗಿ ಇನ್ನೊಂದು ಯಜ್ಞೋಪವೀತವನ್ನೂ ಹಾಕಿ ಕೊಳ್ಳುತ್ತಾನೆ. ಈ ಎರಡನೆಯ ಯಜ್ಞೋಪವೀತ ಹೆಂಡತಿಯ ಪರವಾಗಿ ಧರಿಸುತ್ತಾನೆ ಎಂದು ಹೇಳುವುದೂ ಉಂಟು. ಅದೂ ಸರಿಯೇ. ಪಂಚಯಜ್ಞಗಳಲ್ಲಿ ಗಂಡ ಹೆಂಡರಿಗೆ ಸಮಾನವಾದ ಅಧಿಕಾರವಿದೆಯಲ್ಲವೇ?
ಮೇಲ್ಕಂಡ ಸೇವೆ ಮಾಡುವಾಗ ದೇವರ ಸೇವೆಯಲ್ಲಿ ಇದನ್ನು ಬಲಕ್ಕೆ ಹಾಕಿಕೊಳ್ಳಬೇಕೆಂದೂ, ಮನುಷ್ಯರ ಸೇವೆಯಲ್ಲಿ ಹಾರ ಹಾಕಿಕೊಂಡಂತೆ ಹಾಕಿಕೊಳ್ಳಬೇಕೆಂದೂ, ಪಿತೃಗಳ ಸೇವೆಯಲ್ಲಿ ಎಡಕ್ಕೆ ಹಾಕಿಕೊಳ್ಳಬೇಕೆಂದೂ, ನಿಯಮವಿದೆ. ಶೌಚಕಾಲದಲ್ಲಿ ಬಲ ಕಿವಿಗೆ ಸುತ್ತಿಕೊಳ್ಳಬೇಕೆಂಬ ನಿಯಮವೂ ಇದೆ.
ಒಳ್ಳೆಯ ಲಕ್ಷ್ಯವೂ, ಅದಕ್ಕೆ ಪುಷ್ಟಿಕೊಡುವ ಒಳ್ಳೆಯ ನಿಯಮಗಳೂ, ಅದಕ್ಕೆ ತಕ್ಕ ಅರ್ಥಪೂರ್ಣವಾದ ಸಂಕೇತವೂ ಧರ್ಮಾಭಿಮಾನಿಗಳೆಲ್ಲರಿಗೂ ಮೆಚ್ಚುಗೆಯಾಗುತ್ತಲ್ಲವೇ?
ಪ್ರಶ್ನೆ:- ಬ್ರಹ್ಮಚಾರಿಗಳು ಮತ್ತು ಗೃಹಸ್ಥರು ಜನಿವಾರವನ್ನು ಹಾಕಿಕೊಳ್ಳುವ ಕಾರಣವೇನು? ಬ್ರಹ್ಮಚಾರಿಗಳು ಒಂದು ಜನಿವಾರವನ್ನು ಗೃಹಸ್ಥರು ಎರಡು ಅಥವಾ ಮೂರು ಜನಿವಾರಗಳನ್ನು ಹಾಕಿಕೊಳ್ಳುತ್ತಾರೆ. ಈ ವ್ಯತ್ಯಾಸಕ್ಕೆ ಏನು ಕಾರಣ? ಪ್ರತಿ ಜನಿವಾರದಲ್ಲಿಯೂ ಒಂದು ಬ್ರಹ್ಮಗಂಟು ಇರುತ್ತದೆ. ಅದರ ಅರ್ಥವೇನು? ಮಹತ್ವವೇನು? ಇತ್ಯಾದಿ.
ಉತ್ತರ
ಜನಿವಾರಕ್ಕೆ ಯಜ್ಞೋಪವೀತವೆಂದು ಹೆಸರು. ಯಜ್ಞ ಶಬ್ದವು ‘ಯಜ’ ಎಂಬ ಧಾತುವಿನಿಂದ ಧಾತುವಿನಿಂದ ಬಂದಿದೆ. “ಯಜ…ದೇವರ ದೇವಪೂಜಾ ಸಂಗತಿಕರಣ ದಾನೇಷು” ಎಂಬ ಧಾತುವಿನಿಂದ ದೇವರ ಪೂಜೆ ಮಾಡುವುದು, ಸಂಗತೀಕರಣವೆಂದರೆ ನಮ್ಮ ಮನಸ್ಸಿನಲ್ಲಿನ ಮುಖ್ಯವಾದ ಭಾವನೆಗಳನ್ನು ಒಳ್ಳೆಯ ಭಾವನೆಗಳೆಗೆ ಜೋಡಿಸುವುದು, ದಾನ ಮಾಡುವುದುಎಂಬ ಮೂರು ಅರ್ಥಗಳು ಯಜ್ಞಕ್ಕಿವೆ. ಎಲ್ಲ ಯಜ್ಞಗಳಲ್ಲೂ ದೇವರಪೂಜೆ ಎಂದರೆ ಸಮಸ್ತವೂ ಆ ಪರಮಾತ್ಮನ ಲೀಲೆ, ನನ್ನದೇನೂ ಇಲ್ಲ ಎಂಬ ಭಾವನೆ,ಸಂಗತಿಕರಣಎಂದರೆ ಯಾವುದನ್ನು ನೋಡಿದರೂ ಆ ದೇವರನ್ನು ನೆನೆಸಿಕೊಳ್ಳುವುದಕ್ಕೆ, ಮಾಡುವ ಮಾನಸಿಕ ಸಾಂಗತ್ಯಗಳು ಮತ್ತು ದಾನವೆಂದರೆ ಪರೋಪಕಾರೆ ಇರುತ್ತದೆ. ಒಂದೊಂದು ಜನಿವಾರದಲ್ಲೂ ಮೂರು ದಾರಗಳಿರುತ್ತವೆ. ಇವನ್ನು ಗಂಟಿನಲ್ಲಿ ಜೋಡಿಸಿರುತ್ತಾರೆ. ಒಂದೊಂದು ದಾರದಲ್ಲೂ ಅನೇಕ ದಾರಗಳಿರುತ್ತವೆ. ಈ ಸೃಷ್ಟಿಯಲ್ಲಿರಿವ ಮತ್ತು ಮನಸ್ಸಿನಲ್ಲಿ ಪ್ರತಿಬಿಂಬಿಸುವ ನಾನಾ ರೀತಿಯ ಮೂಲ ಭಾವನೆಗಳನ್ನು ಮೂರು ಹಂತಗಳಲ್ಲಿ ವಿಂಗಡಿಸಬಹುದು. “ಭೂಃ” ಎಂದರೆ ನಿರ್ಜೀವವಾದ ಪ್ರಕೃತಿ. “ಭುವಃ” ಅದರಿಂದ ಬಂದಿರುವ ಪ್ರಾಣಿಗಳು ಅವುಗಳ ಶರೀರ ವ್ಯಾಪಾರ ಮತ್ತು ಮಾನಸಿಕ ವ್ಯಾಪಾರ. “ಸುವಃ” ಎಂದರೆ ಪ್ರತಿ ಒಂದು ಜೀವಿಯ ಮನಸ್ಸಿನಲ್ಲೂ ಮೂಲಭೂತವಾಗಿರುವ ಆತ್ಮತತ್ವ. ಸ್ವರ್ಲೋಕ ಅಂದರೆ ದೇವಲೋಕ ಇರುವುದು. ಈ ಆತ್ಮ ತತ್ವದಲ್ಲಿಯೇ, ಬಾಹ್ಯವಾದ ಸಮಸ್ತವನ್ನೂ ಪರಮಾತ್ಮನ ಲೀಲೆಯನ್ನಾಗಿ ಭಾವಿಸುವವನಿಗೆ ಆತ್ಮದಲ್ಲಿ ಆನಂದದ ಅನುಭವವೊಂದೇ ಆಗುತ್ತಿರುತ್ತದೆ. ಹೀಗೆ ಭಾವಿಸುವುದೇಬ್ರಹ್ಮತತ್ವ. ಬ್ರಹ್ಮ ಶಬ್ದವು “ಬೃಹಿವೃದ್ಧೌ” ಎಂಬ ಧಾತುವಿನಿಂದ ಬಂದಿದೆ.”ಬೃಹತ್ವಾತ್ ಬೃಹ್ಮಣ ತ್ವಾಚ್ಚ ಬ್ರಹ್ಮೇತಿ ಪರಿಕೀರ್ತ್ಯತೇ” ಎಂದರೆ ಬಹಳ ದೊಡ್ಡದಾಗಿರುವುದರಿಂದಲೂ, ಸದಾ ವೃದ್ಧಿಯನ್ನು ಹೊಂದುತ್ತಲೇ ಇರುವುದರಿಂದಲೂ ಪರಮಾತ್ಮನಿಗೆ ಬ್ರಹ್ಮನೆಂದು ಹೆಸರು. ಇಂದಿನ ವಿಜ್ಞಾನವು ಈ ವಿಶ್ವದ ಅತ್ಯಂತ ವಿಶಾಲವಾದ ಪರಿಮಾಣವನ್ನು ತಿಳಿಸುವುದಲ್ಲದೆ ಈ ವಿಶ್ವವು ಒಂದು ಸಬೂನಿನ ಗುಳ್ಳೆಯಂತೆ ಸದಾ ವಿಸ್ತಾರಗೊಳ್ಳುತ್ತಲೇ ಇದೆ ಎಂದು ತೋರಿಸಿಕೊಟ್ಟಿದೆ. ಈ ವಿಶ್ವಕ್ಕೆ ಮೂಲಭೂತವಾಗಿರುವ ತತ್ವವೇ ಪರಮಾತ್ಮ. ಆದುದರಿಂದ ದೇಶ ಕಾಲಗಳ ವಿಶಾಲವಾದ ಮತ್ತು ಅನಂತವಾದ ಸ್ಥಿತಿಗಳನ್ನು ಗಮನಿಸಿ ಎಲ್ಲವೂ ಮೂಲಭೂತವಾದ ಪರಮಾತ್ಮನ ಲೀಲೆ ಎಂದು ತಿಳಿಯುವುದೇ ಬ್ರಹ್ಮಜ್ಞಾನ. ಈ ಜ್ಞಾನಕ್ಕೆ ಸಾಂಕೇತಿಕವಾಗಿರುವುದೇ ಬ್ರಹ್ಮಗಂಟು.
ಉಪನಯನದಿಂದ ಬ್ರಹ್ಮಚಾರಿಗಳು ಒಂದು ಯಜ್ಞೋಪವೀತವನ್ನು ಧರಿಸುತ್ತಾರೆ. ಇದರಿಂದ ಬ್ರಹ್ಮತತ್ವದ ಅರಿವುಂಟಾಗಿ ಅದು ಸದಾ ನೆನಪಿಗೆ ಬರುತ್ತಿರುತ್ತದೆ. ಗೃಹಸ್ಥರಲ್ಲಿ ಗಂಡನು ಎರಡುಯಜ್ಞೋಪವೀತಗಳನ್ನು ಹಾಕಿಕೊಳ್ಳುವುದರಲ್ಲಿ ಒಂದು ತನ್ನ ಯಜ್ಞೋಪವೀತ, ಇನ್ನೊಂದು ಹೆಂಡತಿಯ ಯಜ್ಞೋಪವೀತ. ಪ್ರಾಚೀನ ಕಾಲದಲ್ಲಿ ಹೆಂಗಸರಿಗೂ ಉಪನಯನ ಮತ್ತು ಯಜ್ಞೋಪವೀತ ಧಾರಣೆಯಿತ್ತು. ಅದು ತಪ್ಪಿ ಹೋಗಿ ಗಂಡಸು ಎರಡು ಯಜ್ಞೋಪವೀತಗಳನ್ನು ಧರಿಸುವ ರೂಢಿ ಉಂಟಾಯಿತು. ಮೂರನೆಯದು ಉತ್ತರೀಯಾರ್ಥವಗಿ. ಇದಕ್ಕೆ ಮಾಮೂಲು ಅರ್ಥ ಮೇಲೆ ಹೊದ್ದುಕೊಳ್ಳುವ ಬಟ್ಟೆಗೆ ಬದಲು ಎಂದು. ಆದರೆ ಎರಡು ಯಜ್ಞೋಪವೀತಗಳು ಗಂಡ ಹೆಂಡತಿಗಳನ್ನು ಸೂಚಿಸುತ್ತ ಗೃಹಸ್ಥಧರ್ಮವಾದ ಪಂಚ ಯಜ್ಞಗಳಿಗೆ ಸೂಚಕವಾಗಿದ್ದು, “ಉತ್ತರೀಯ” ಎಂದರೆ ಇವುಗಳನ್ನು ದಾಟಿ ಸರ್ವ ಸಮತ್ವ ಭಾವನೆಗೆ ಹೋಗುವುದಕ್ಕೆ ಸಾಂಕೇತಿಕವೆಂದು ಭಾವಿಸಬಹುದು.
ಸಂನ್ಯಾಸಿಗಳು ಈ ಮೂರು ಜನಿವಾರಗಳನ್ನು ತೆಗೆದುಹಾಕಿರುತ್ತಾರೆ. ಎಂದರೆ ಈ ಜನಿವಾರಗಳು ಕರ್ಮಮಾರ್ಗದಲ್ಲಿರುವವರಿಗೆ ಧರ್ಮದ ಮತ್ತು ಜ್ಞಾನದ ಉಪದೇಶಕ್ಕಾಗಿರುತ್ತವೆ. ಸಂನ್ಯಾಸಿಗಳು ಕರ್ಮವನ್ನು ಬಿಟ್ಟು ಕೇವಲ ಜ್ಞಾನಮಾರ್ಗವನ್ನು ಅನುಸರಿಸುವುದರಿಂದ ಅವರಿಗೆ ಅವು ಬೇಕಾಗಿಲ್ಲ.
–ಲಂಕಾ ಕೃಷ್ಣಮೂರ್ತಿ