ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 19
ಎರಡು ಮಾರ್ಗಗಳು
(ದಿನಾಂಕ 1 – 3- 1996 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಲೋಕೇಸ್ಮಿನ್ ದ್ವಿವಿಧಾನಿಷ್ಚಾ
ಪುರಾಪ್ರೋಕ್ತಾ ಮಯಾ ನಘು I
ಜ್ಞಾನಯೋಗೇನ ಸಾಂಖ್ಯಾನಾಂ
ಕರ್ಮಯೋಗೀನ ಯೋಗಿನಾಂ II
(ಭಗವದ್ಗೀತೆ – 3ನೇ ಅಧ್ಯಾಯ – 3ನೇ ಶ್ಲೋಕ)
ಶ್ರೀ ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ – ಈ ಲೋಕದಲ್ಲಿ ನನ್ನಿಂದ ಎರಡು ವಿಧವಾದ ನಿಷ್ಠೆಯು ಪ್ರಜೆಗಳ ಸೃಷ್ಟಿಯ ಆದಿಯಲ್ಲಿಯೇ ಹೇಳಲ್ಪಟ್ಟಿದೆ. ಸಾಂಖ್ಯರಿಗೆ ಜ್ಞಾನಯೋಗದ ನಿಷ್ಠೆ ಮತ್ತು ಯೋಗಿಗೆಗಳಿಗೆ ಕರ್ಮ ಯೋಗದ ನಿಷ್ಠೆ – ಇದೇ ಆ ಎರಡು ವಿಧವಾದ ನಿಷ್ಠೆ.
ಇದರ ಸಾರಾಂಶವನ್ನು ಶಂಕರಾಚಾರ್ಯರ ಭಾಷ್ಯದಲ್ಲಿ ಹೀಗೆಂದು ಹೇಳಲ್ಪಟ್ಟಿದೆ. ಕರ್ಮಯೋಗ ಮತ್ತು ಜ್ಞಾನಯೋಗವೆಂಬ ಎರೆಡು ಯೋಗಗಳಿವೆ. ಕರ್ಮಯೋಗದಲ್ಲಿ ಶಾಸ್ತ್ರವಿಹಿತವಾದ (ಎಂದರೆ ಧರ್ಮಸಮ್ಮತವಾದ) ಕರ್ಮವನ್ನು ಫಲಾಪೇಕ್ಷೆಯಿಲ್ಲದೆ ನಿಷ್ಠೆಯಿಂದ ಆಚರಿಸಬೇಕು. ಜ್ಞಾನಯೋಗದಲ್ಲಿ ಸಮಸ್ತವನ್ನೂ ಎಂದರೆ ಒಳ್ಳೆಯದು ಕೆಟ್ಟದ್ದು ಎಲ್ಲವನ್ನೂ ಪರಮಾತ್ಮನ ಲೀಲೆಯನ್ನಾಗಿ ನೋಡುತ್ತ ಕರ್ಮದಲ್ಲಿ ಆಸಕ್ತಿಯಿಲ್ಲದೆ ಸನ್ಯಾಸಿಗಳಾಗಿ ಜೀವಿಸಲು ಭಿಕ್ಷಾಟಣೆಯನ್ನು ಮಾಡುತ್ತ, ಏನು ಬಂದರೂ ಆನಂದವಾಗಿ ನೋಡುತ್ತಿರಬೇಕು.
ಶಂಕರಾಚಾರ್ಯರು ಮೇಲೆ ಹೇಳಿದಂತಹ ಕರ್ಮಯೋಗವು ಮನುಷ್ಯನನ್ನು ಜ್ಞಾನಯೋಗಕ್ಕೆ ಕೊಂಡೊಯ್ಯುತ್ತದೆ ಎಂದೂ ವಿವರಿಸುತ್ತಾರೆ.
ಆದುದರಿಂದ ಸಮಸ್ತ ಪ್ರಜೆಗಳೂ ಮೊದಲು ನಿಷ್ಕಾಮವಾಗಿ ನಿಷ್ಠೆಯಿಂದ ಧರ್ಮಸಮ್ಮತವಾದ ಕರ್ಮವನ್ನು ಮಾಡುವುದನ್ನು ಅಭ್ಯಾಸಮಾಡಿಕೊಳ್ಳಬೇಕು. ಇದರಿಂದ ಸಮಸ್ತ ಪ್ರಜೆಗಳಿಗೂ ಮತ್ತು ಅವರಲ್ಲಿ ಒಬ್ಬನಾದ ತನಗೂ ಸುಖ ಸಂತೋಷಗಳು ಲಭಿಸುತ್ತವೆ. ಇದನ್ನು ನಿಷ್ಕಾಮವಾಗಿ ಮಾಡುವುದರಿಂದ ಅದು ಜ್ಞಾನಯೋಗಕ್ಕೆ ದಾರಿಯನ್ನು ತೋರಿಸುತ್ತದೆ.
ಪ್ರಪಂಚದಲ್ಲಿ ಪರಮಸತ್ಯವೆಂದರೆ ಏನು ನಡೆದರೂ ಪ್ರಕೃತಿ ನಿಯಮಗಳನ್ನನುಸರಿಸಿಕೊಂಡೇ ನಡೆಯುತ್ತದೆ. ಮನಸ್ಸಿನ ಕೆಲಸವು ಸಹ ಪ್ರಕೃತಿ ನಿಯಮಗಳನ್ನನುಸರಿಸಿಕೊಂಡೇ ನಡೆಯುತ್ತದೆ. ಆದುದರಿಂದ ನಿಜವಾದ ಜ್ಞಾನವೆಂದರೆ ಏನೇನು ನಡೆದರೂ ಅದೆಲ್ಲವೂ ಪರಮಾತ್ಮನಲೀಲೆ ಎಂಬುದೇ. ಆದರೆ ಮಾಯೆಯಿಂದ ನಮ್ಮ ಮನಸ್ಸಿನಲ್ಲಿ ನಾನು ಮಾಡಿದೆ, ಅವನು ಮಾಡಿದ, ಎಂಬ ಭಾವನೆಗಳು ಹುಟ್ಟುತ್ತಿರುತ್ತವೆ. ಈ ಮಾಯೆಯ ಹಿಡಿತವಿರುವವರೆಗೂ ನಾವು ಧರ್ಮ ಮಾರ್ಗವನ್ನೇ ಅನುಸರಿಸುತ್ತಿರಬೇಕು. ಆದರಿಂದಲೇ ಸಮಸ್ತ ಪ್ರಜೆಗಳಿಗೂ ಅವುಗಳಲ್ಲಿ ಒಬ್ಬನಾದ ತನಗೂ ಕ್ಷೇಮ ಎಂಬ ವಿಷಯವನ್ನು ಸದಾ ನೆನಪಿನಲ್ಲಿಟ್ಟುಕೊಂಡು ಫಲಾಪೇಕ್ಷೆಯಿಲ್ಲದೆ ಕರ್ತವ್ಯ ಬುದ್ಧಿಯಿಂದ ಕರ್ಮವನ್ನು ಮಾಡುತ್ತಿರಬೇಕು.
ಇಂದು ವಾರ್ತಾ ಪತ್ರಿಕೆಗಳಲ್ಲಿ ಅನೇಕ ವಾರ್ತೆಗಳನ್ನು ಪ್ರಕಟಿಸುತ್ತಿರುವವರು ಈ ಮೂಲಭೂತವಾದ ತತ್ವಗಳ ವಿಷಯವಾಗಿ ಜ್ಞಾನಿಗಳ ಬರಹಗಳನ್ನು ಪ್ರಕಟಿಸುತ್ತ ಹೋದರೆ ಲೋಕಕ್ಕೆ ಮಹೋಪಕಾರವಾಗುತ್ತದೆ ಅಲ್ಲವೇ?
- ಲಂಕಾ ಕೃಷ್ಣಮೂರ್ತಿ