]
(ದಿ. 1-5-1991 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಒದುಗರಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಪ್ರಶ್ನೆ:-
1.ದೇಶ, ಕಾಲ, ಪರಿಸ್ಥಿತಿ, ಸನ್ನಿವೇಶ, ಪರಿಸರಗಳನ್ನು ಅನುಸರಿಸಿ ಲಂಚವನ್ನು ಪಡೆಯಬಹುದೇ?
2. ದೇಶ, ಕಾಲ, ಪರಿಸ್ಥಿತಿ, ಸನ್ನಿವೇಶ, ಪರಿಸರಗಳಿಗೆ ಅಳತೆಗೋಲು ಒಂದೇ ಸಮನಾಗಿರುತ್ತದೆಯೆ ಅಥವಾ ಬೇರೆ ಬೇರೆ ಇರುತ್ತದೆಯೇ?
ಉತ್ತರ:- ಈ ಪತ್ರಿಕೆಯ ಹಿಂದಿನ ಸಂಚಿಕೆಗಳಲ್ಲಿ ಅನ್ನವಿಕ್ರಯ ಮತ್ತು ವಿದ್ಯಾವಿಕ್ರಯ ಎಂಬುವು ಒಂದಾನೊಂದು ಕಾಲದಲ್ಲಿ ಅಧರ್ಮವೆಂದು ಪರಿಗಣಿಸಲ್ಪಟ್ಟಿದ್ದರೂ, ಇಂದು ಅಧರ್ಮವೆಂದು ಹೇಳಲಾಗುವುದಿಲ್ಲವೆಂಬ ನನ್ನ ಅಭಿಪ್ರಾಯಕ್ಕೆ ಪೋಷಕವಾಗಿ ಧರ್ಮವು ದೇಶ ಕಾಲ ಪರಿಸ್ಥಿತ್ಗಳನ್ನನುಸರಿಸಿ ನಿರ್ಣಯಿಸಲ್ಪಡಬೇಕೆಂಬ ಅಭಿಪ್ರಾಯವನ್ನು ನಾನು ಕೊಟ್ಟಿದ್ದೆನು. ಅದಕ್ಕೆ ಸಂಬಂಧಿಸಿ ನನ್ನ ಮಿತ್ರರು ಮೇಲ್ಕಂಡ ಪ್ರಶ್ನೆಗಳನ್ನು ಹಾಕಿರುತ್ತಾರೆ. ನನ್ನ ಅಲ್ಪ ಮತಿಗೆ ಸಾಧ್ಯವಾದಷ್ಟು ಉತ್ತರ ಕೊಡಲು ಪ್ರಯತ್ನಿಸುತ್ತೇನೆ.
ಒಂದು ಕೆಲಸವಾಗಲಿ ಒಂದು ಆಚಾರ ಅಥವಾ ಪದ್ಧತಿ ಆಗಲಿ ಧರ್ಮವೇ ಅಧರ್ಮವೇ ಎಂಬ ಪ್ರಶ್ನೆ ಅನೇಕ ಸಲ ಉಧ್ಭವಿಸುತ್ತಲೇ ಇರುತ್ತದೆ. ಒಂದು ಕೆಲಸ ಅಥವಾ ಆಚಾರ ಅಥವಾ ಪದ್ಧತಿ ಒಂದು ಕಾಲದಲ್ಲಿ ಆಯಾ ಪದ್ಧತಿಗಳಲ್ಲಿ(ದೇಶವೂ ಸೇರಿ) ಧರ್ಮ ಅಥವಾ ಅಧರ್ಮವೆಂದು ಪರಿಗಣಿಸಲ್ಪಟ್ಟಿದ್ದರೂ ಸಹ ದೇಶ ಕಾಲ ಪರಿಸ್ಥಿತಿಗಳು ಬದಲಾವಣೆ ಆದಾಗಲೂ ಸಹ ಹಾಗೆಯೇ ಪರಿಗಣಿಸಪಡಿಸಬೇಕು ಎಂಬುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಶಾಸ್ತ್ರಗಳಲ್ಲಿನ ಅಭಿಪ್ರಾಯವೂ ಇದೇ. ಧರ್ಮವನ್ನು ಸ್ಥೂಲವಾಗಿ ನಿರ್ಣಯಿಸಬಾರದು. ಸೂಕ್ಷ್ಮದೃಷ್ಟಿಯಿಂದ ಪರೀಕ್ಷಿಸಿ ನಿರ್ಣಯಿಸಬೇಕು. ಇದಕ್ಕೇ ಸೂಕ್ಷ್ಮಧರ್ಮವೆಂದು ಹೆಸರು.
ನನ್ನ ಮಿತ್ರರ ಪ್ರಶ್ನೆಗಳಲ್ಲಿ ಎರಡನೆಯ ಪ್ರಶ್ನೆಯನ್ನು ಕುರಿತು ಮೊದಲು ಆಲೋಚಿಸಬೇಕಾಗಿದೆ. ದೇಶ, ಕಾಲ, ಪರಿಸ್ಥಿತಿ, ಸನ್ನಿವೇಶ, ಪರಿಸರಗಳಿಗೆ ಅಳತೆಗೋಲಿನ ಪ್ರಶ್ನೆ ಬರುವುದೇ ಇಲ್ಲ. ಧರ್ಮನಿರ್ಣಯಕ್ಕೆ ಒಂದು ಅಳತೆಗೋಲಿರಲೇಬೇಕು. ಧರ್ಮವೆಂದರೆ ಏನು ಎಂಬುದರ ಮೇಲೆ ಈ ಅಳತೆಗೋಲನ್ನು ನಾವು ನಿರ್ಣಯಿಸಿ ಇಟ್ಟುಕೊಳ್ಳಬೇಕು.
ಧರ್ಮವೆಂಬ ಶಬ್ದಕ್ಕೆ ಧರಿಸುವುದುಎಂದು ಅರ್ಥ. ಅಂದರೆ ಕೆಳಕ್ಕೆ ಬೀಳದಂತೆ ಎತ್ತಿ ಹಿಡಿದು ಕೊಂಡಿರುವುದು ಎಂದು ಅರ್ಥ. ಯಾವುದು ಕೆಳಕ್ಕೆ ಬೀಳದಂತೆ? ಅಂದರೆ ಸಮಸ್ತ ಪ್ರಪಂಚವೂ ಕೆಳಕ್ಕೆ ಬೀಳದಂತೆ ಎಂದೇ ಅರ್ಥ. ನಾವು ಪ್ರಕೃತಿಯನ್ನು ಸೂಕ್ಷ್ಮವಾಗಿ ನೋಡಿದರೆ ಮಾತ್ರ ಧರ್ಮದ ಸ್ವರೂಪವು ತಿಳಿಯುವುದು. ಸೃಷ್ಟಿ, ಸ್ಥಿತಿ, ಲಯಗಳ ರೂಪದಲ್ಲಿರುವ ಈ ಪ್ರಕೃತಿಯ ನಿರಂತರ ವ್ಯಾಪಾರದಲ್ಲಿ ಅಂತರ್ಗತವಾದ ಒಂದು ವಿಧಾನವು ಈ ಪ್ರಪಂಚವು ಪೂರ್ತಿ ನಾಶವಾಗದಂತೆ ಮತ್ತು ಕ್ರಮೇಣ ನಿರ್ಜೀವ ಪದಾರ್ಥದಿಂದ ಜೀವಪದಾರ್ಥಕ್ಕೂ ಜೀವಿಗಳಲ್ಲೂ ಕ್ರಮೇಣ ಬುದ್ಧಿಜೀವಿಗಳ ಸ್ವರೂಪಕ್ಕೂ ನಿರಂತರವಾದ ವಿಕಾಸವನ್ನು (Evolution) ಹೊಂದುತ್ತಲೇ ಇರುವಂತೆ ಭದ್ರವಾಗಿ ನಿಲ್ಲಿಸಿಕೊಂಡು ಬರುತ್ತಿದೆ. ಇದಕ್ಕೇ ಧರ್ಮವೆಂದು ಹೆಸರು.
ಧರ್ಮದ ವೈಜ್ಞಾನಿಕ ಅಧ್ಯನದ ಪ್ರಯತ್ನವು ನಮ್ಮ ಸಂಸ್ಥೆಯು ಮಾಡುತ್ತಿರುವ ವಿಚಾರ ಈ ಪತ್ರಿಕೆಯ ಓದುಗರಿಗೆ ತಿಳಿದೇ ಇರುತ್ತದೆ. ಈ ವಿಷಯದಲ್ಲಿ ಕೆಲಸ ಮುಂದುವರಿಸಲು “ಧರ್ಮ”ದ ನಿರ್ವಚನವನ್ನು ಮೊದಲು ಸರಿಯಾಗಿ ಮಾಡಬೇಕಾಗುತ್ತದೆ.
ಈ ವಿಷಯದಲ್ಲಿ ಕೈಲಾದಷ್ಟು ಶ್ರಮಪಟ್ಟು ನಾನು ಕೆಳಕಂಡ ನಿರ್ವಚನಕ್ಕೆ ಬಂದಿರುತ್ತೇನೆ. ಇದನ್ನು ಮುಂದಿನ ಸಮಾವೇಶಗಳಲ್ಲಿ ಚರ್ಚಿಸಬೇಕಾಗಿದೆ.
Dharma is the action – harmonising, welfare stabilising, built – in – machanism of the world.
ಧರ್ಮವೆಂಬುದು ಕ್ರಿಯೆಗಳನ್ನು ಹೊಂದಾಣಿಸುವ ಮತ್ತು ಕ್ಷೇಮವನ್ನು ಭದ್ರಪಡಿಸುವ ವಿಶ್ವಾಂತರ್ನಿರ್ಮಿತ ವ್ಯವಸ್ಥೆ.
ಮಾನವನು ಸಹ ಈ ಪ್ರಕೃತಿಗೆ ಹೊರತಲ್ಲ. ಆದುದರಿಂದ ಮಾನವರ ಸಂಕಲ್ಪಗಳು ಮತ್ತು ಕ್ರಿಯೆಗಳು ಈ ಧರ್ಮಕ್ಕೆ ಪೋಷಕವಾದರೆ ಮಾತ್ರ ಧರ್ಮವೆನಿಸುತ್ತದೆ. ಬಾಧಕಗಳಾಗಿದ್ದರೆ ಅಧರ್ಮವೆನಿಸುತ್ತದೆ. ಇದೇ ಮೂಲಭೂತವಾದ ಅಳತೆಗೋಲು. ಇದರಲ್ಲಿ ಬದಲಾವಣೆ ಸಾಧ್ಯವಿಲ್ಲ.
ಮಾನವ ಸಮಾಜಗಳ ಆಚಾರ ವ್ಯವಹಾರಗಳು ಯುಗ ಯುಗಗಳಿಂದ ಮಾನವ ಸಮಾಜದ ಕ್ಷೇಮ ಮತ್ತು ವಿಕಾಸಕ್ಕಾಗಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಸ್ವಭಾವದ ಜನರಲ್ಲಿ ಬೇರೆ ಬೇರೆ ಜನಾಂಗಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ರೂಪುಗೊಳ್ಳುತ್ತ ಬಂದಿರುತ್ತವೆ. ಇವುಗಳಲ್ಲಿ ಧರ್ಮದ ಅಂಶವುಳ್ಳವುಗಳೇ ಹೆಚ್ಚು. ಅಧರ್ಮದ ಅಂಶವುಳ್ಳವುಗಳು ಕಡಿಮೆ. ಈ ಅಧರ್ಮದ ಅಂಶವುಳ್ಳವುಗಳ ದುಷ್ಪರಿಣಾಮಗಳ ಅನುಭವದಿಂದ ಪಾಠ ಕಲಿತ ಕಲಿತ ಜನರು ಅವುಗಳನ್ನು ಬದಲಾಯಿಸುಕೊಳ್ಳುವುದು ಸಹ ನಡೆಯುತ್ತಲೇ ಬಂದಿದೆ. ಒಂದೊಂದು ಸಲ ಧರ್ಮವು ಕ್ಷೀಣಿಸುವುದು ಸಂಭವಿಸುತ್ತದೆ. ಆಗ ಏಶ್ವಾಂತರಗತವಾದ ಧರ್ಮಶಕ್ತಿಯು ಯಾವುದೋ ಒಂದು ರೂಪದಲ್ಲಿ ಹೊರಕ್ಕೆ ಬಂದು ಪುನಃ ಧರ್ಮವನ್ನು ಉದ್ಧರಿಸುತ್ತದೆ.
ಧರ್ಮಕ್ಕೆ ಇಷ್ಟು ದೊಡ್ಡ ಹಿನ್ನೆಲೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡೇಧರ್ಮನಿರ್ಣಯ ಮಾಡಬೇಕಾಗಿದೆ.. ಆದರೆ ದೈನಂದಿನ ವ್ಯವಹಾರದಲ್ಲಿ ಪ್ರತಿ ಒಂದು ಕಾರ್ಯವನ್ನು ಈ ಹಿನ್ನೆಲೆಯಲ್ಲಿ ಚರ್ಚಿಸಿ ನಿರ್ಣಯಿಸುವುದು ಅಸಾಧ್ಯವಾಗಿರುವುದರಿಂದ ಕೆಲವು ಪದ್ಧತಿಗಳು ಬೇಕಾಗುತ್ತವೆ. ಇವುಗಳನ್ನು ಧರ್ಮ ಶಾಸ್ತ್ರಗಳು ಆಚಾರ, ವ್ಯವಹಾರ, ಮತ್ತು ಪ್ರಾಯಶ್ಚಿತ್ತ ಎಂಬ ಮೂರು ಭಾಗಗಳನ್ನಾಗಿ ವಿಂಗಡಿಸಿವೆ. ಇಂದು ಕಾನೂನಿನ ರೂಪದಲ್ಲಿಯು ಸಭ್ಯತೆಯ ವ್ಯವಹಾರ ರೂಪದಲ್ಲಿಯು ಇರುವುದು ವ್ಯವಹಾರ ಭಾಗ. ಇದಕ್ಕೆ ಬೆಂಬಲವಾಗಿರಬೇಕಾದ ಆಚಾರ ಮತ್ತು ಪ್ರಾಯಶ್ಚಿತ್ತ ಭಾಗಗಳು ಇಂದು ವಿಶ್ವದಾದ್ಯಂತ ಖಿಲವಾಗಿಬಿಟ್ಟಿವೆ. ಅದುದರಿಂದಲೇ ವ್ಯವಹಾರ ಧರ್ಮದಲ್ಲೂ ಸಾಕಷ್ಟು ಒಡಕುಗಳು ಬಿದ್ದಿರುವುದು. ಈ ಆಚಾರ, ವ್ಯವಹಾರ, ಪ್ರಾಯಶ್ಚಿತ್ತರೂಪವಾದ ಧರ್ಮವು ಬೇರೆ ಬೇರೆ ದೇಶಗಳಲ್ಲಿ ಕಾಲಗಳಲ್ಲಿ ಬೇರೆ ಬೇರೆ ರೂಪಗಳಲ್ಲಿರುವುದು ಸಹಜ. ಕೇವಲ ಬಾಹ್ಯ ರೂಪದಿಂದ ಧರ್ಮ ನಿರ್ಣಯ ಮಾಡಿದೆ ಅದರ ಪರಿಣಾಮದಿಂದ ಧರ್ಮ ನಿರ್ಣಯ ಮಾಡಬೇಕಾಗಿದೆ. ಈ ನಿರ್ಣಯಕ್ಕೆ ಬೇಕಾದ ಅಳತೆಗೋಲನ್ನು ಕುರಿತು ಮೇಲೆ ಹೇಳಿದೆ. ಆದರೆ ದೈನಂದಿನ ವ್ಯವಹಾರಕ್ಕೆ ಇದರ ಅಳತೆಗೋಲುಗಳನ್ನು ಧರ್ಮಶಾಸ್ತ್ರಗಳು ಕೆಳಕಂಡ ವಿಭಾಗಗಳಲ್ಲಿ ತೋರಿಸಿವೆ.
1. ಮಾನವ ಸಾಮಾನ್ಯ ಧರ್ಮಗಳು
ಅಹಿಂಸೆ,ಸತ್ಯ, ಕದಿಯದಿರುವಿಕೆ, ಶುಚಿತ್ವ, ಇಂದ್ರಿಯನಿಗ್ರಹ, ದಾನ, ದಯಾ, ಕ್ಷಮಾ ಮುಂತಾದುವು.
2. ಗುಣಧರ್ಮಗಳು
ವರ್ಣಧರ್ಮಗಳು ಅಂದರೆ ಯಾವ ಯಾವ ಗುಣಉಳ್ಳವರು ಯಾವ ರೀತಿಯ ಕರ್ಮ ಮಾಡುವುದು ಒಳ್ಳೆಯದು ಎಂಬ ವಿಚಾರ ಮತ್ತು ಅವರ ವಿಚಾರ ಮತ್ತು ಆಚಾರದ ವಿಷಯ ಆಶ್ರಮ ಧರ್ಮಗಳು ಅಂದರೆ ಬಾಲ್ಯ ಮುಂತಾದ ಗುಣಗಳಿಗೆ ಅನುಗುಣವಾದ ಆಶ್ರಮ ಧರ್ಮಗಳು.
3.ನಿಮಿತ್ತ ಧರ್ಮಗಳು
ಆಯಾ ಸಂಧರ್ಭಗಳಿಗೆ ಅನುಗುಣವಾಗಿ ಆಚರಿಸುವುದು. ಜಾತಿ ಧರ್ಮವು ಮತ್ತು ವ್ಯವಹಾರ ಧರ್ಮವು(ಕಾನೂನು) ಸಹ ಇದರಲ್ಲಿ ಬರುತ್ತದೆ. ಪ್ರಾಯಶ್ಚಿತ್ತವು ಸಹ ನಿಮಿತ್ತ ಧರ್ಮವೇ.
ಇವುಗಳಲ್ಲಿ ಸಾಮಾನ್ಯ ಧರ್ಮಗಳಿಗೆ ಬಲ ಹೆಚ್ಚು. ಈ ಧರ್ಮಗಳಲ್ಲಿನ ಮೂಲ ತತ್ವಗಳೇ ಧರ್ಮಶಾಸ್ತ್ರಗಳು ವಿಧಿಸುವ ಅಳತೆಗೋಲು. ಇವುಗಳನ್ನು ಅಳತೆಗೋಲಾಗಿಟ್ಟುಕೊಂಡು ಆಯಾ ದೇಶ ಕಾಲ ಪರಿಸ್ಥಿತಿಗಳನ್ನು ಗಮನಿಸಿ ಒಂದು ಕೆಲಸ ಅಥವಾ ಆಚಾರವು ಧರ್ಮವೇ ಅಧರ್ಮವೇ ಎಂದು ನಿರ್ಣಯಿಸಬೇಕು. ಮೇಲ್ಕಂಡ ಅಳತೆಗೋಲಿನಲ್ಲಿ ಬದಲಾವಣೆ ಸಾಧ್ಯವಿಲ್ಲ.
ಈಗ ಮೊದಲನೆಯ ಪ್ರಶ್ನೆಗೆ ಬರೋಣ. ಲಂಚವೆಂಬ ಶಬ್ದದಿಂದ ಪ್ರತೀತವಾಗುವುದು ಒಬ್ಬ ಅಧಿಕಾರಿಯು ತನ್ನ ಕರ್ತವ್ಯವನ್ನು ನೆರವೇರಿಸಿ ತನಗೆ ನಿರ್ದಿಷ್ಟವಾದ ಆದಾಯಕ್ಕಿಂತಲೂ ಭಿನ್ನವಾದ ಆದಾಯವನ್ನು ಗಳಿಸುವುದು ಅಥವಾ ತನ್ನ ಕರ್ತವ್ಯವನ್ನು ಮಾಡದಿರಲು ಹಾಗೆ ಗಳಿಸುವುದು ಅಥವಾ ತನ್ನ ಕರ್ತವ್ಯವನ್ನು ಮಾಡದಿರಲು ಹಾಗೆ ಗಳಿಸುವುದು ಅಥವಾ ಕರ್ತವ್ಯ ಲೋಪ ಮಾಡಿ ಹಣ ಕೊಟ್ಟವರಿಗೆ ಅನುಕೂಲ ಮಾಡುವುದು ಇತ್ಯಾದಿ ಭಾವನೆಗಳು. ಇಲ್ಲಿ ಕರ್ತವ್ಯಚ್ಯುತಿಯಿರುವುದರಿಂದ ವ್ಯವಹಾರದಲ್ಲಿನ ಹೊಂದಾಣಿಕೆಯನ್ನು ಕೆಡಿಸುವುದರಿಂದ ಇದು ಯಾವ ದೇಶ ಕಾಲ ಪರಿಸ್ಥಿತಿಗಳಲ್ಲೂ ಧರ್ಮವಾಗಲಾರದು. ಅನ್ನವಿಕ್ರಯ ಮತ್ತು ವಿದ್ಯಾವಿಕ್ರಯಗಳಲ್ಲಿ ಈ ದೋಶವಿಲ್ಲ. ಇಲ್ಲಿಯು ಸಹ, ನಮ್ಮ ದೇಶದಲ್ಲಿ ಹಿಂದಿನ ಕಾಲದಲ್ಲಿ ಅಧಿಕಾರಿಗಳಿಗೆ ಪ್ರೀತಿಯಿಂದ ಕೊಡುವ ಉಪಹಾರಗಳು ಲಂಚವೆನಿಸಿಕೊಳ್ಳುತ್ತಿರಲಿಲ್ಲ. ಶಾಕುಂತಲ ನಾಟಕದಲ್ಲಿ ಮೀನುಗಾರನು ಅಧಿಕಾರಿಗಳಿಗೆ ಸಂತೋಷದಿಂದ ಹೂವು ತೆಗೆದುಕೊಳ್ಳಲು ಹಣ ಕೊಡುತ್ತಾನೆ. ಆಂಗ್ಲೇಯರ ಕಾಲದಲ್ಲಿ ಅದಿಕಾರಿಗಳನ್ನು ಭೇಟಿಮಾಡಲು ಹೋದಾಗ ನಿಂಬೆಹಣ್ಣನ್ನು ಕೊಡುವುದು ರೂಢಿಯಲ್ಲಿತ್ತು. ಈಗಲೂ ಕ್ಷಾಮಡಾಮರುಗಳು ಬಂದಾಗ ಅಧಿಕಾರಿಗಳು ನಿಧಿಗಳಿಗೆ ಹಣ ವಸೂಲಿ ಮಾಡಲಾಗುತ್ತದೆ. ಆದುದರಿಂದ ಪ್ರತಿ ಒಂದು ವಿಷಯದಲ್ಲೂ ಮೂಲ ತತ್ವದ ಅಳತೆಗೋಲನ್ನಿಟ್ಟುಕೊಂಡು ಪರಿಸ್ಥಿಗಳನ್ನನುಸರಿಸಿ ಧರ್ಮನಿರ್ಣಯ ಮಾಡಬೇಕೇ ಹೊರತು ಪಂಕ್ತಿಗೆ ಶರಣು ಹೋಗುವುದು ಸಮಂಜಸವಲ್ಲ. ಕಾನೂನು ಶಾಸ್ತ್ರದಲ್ಲಿಯೂ ಸಹ ಕಾನೂನಿನ ನ್ಯಾಯಕ್ಕೂ ಸಹಜ ನ್ಯಾಯಕ್ಕೂ ಇರುವ ವ್ಯತ್ಯಾಸವನ್ನು ಒಪ್ಪಿಕೊಳ್ಳಲಾಗಿದೆ. – ಲಂಕಾ ಕೃಷ್ಣಮೂರ್ತಿ