ವೈದಿಕ ಧರ್ಮದಲ್ಲಿನ ವೈಜ್ಞಾನಿಕ ತಳಹದಿ
(ಮಾರ್ಚ್ 1995 ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದ ಲೇಖನ)
ಅತ್ಯಂತ ಪ್ರಾಚೀನವಾದ ವೈದಿಕ ಧರ್ಮವು ಚಾರಿತ್ರಿಕ ಕಾರಣಗಳಿಂದ ಕಾಲದಿಂದ ಕಾಲಕ್ಕೆ ತನ್ನ ಹೊರಗಿನ ಸ್ವರೂಪವನ್ನು ಬದಲಾಯಿಸಿಕೊಂಡು ಬಂದಿದೆ. ಈ ಬದಲಾವಣೆಗಳಲ್ಲಿ ಬಹಳ ಮೆಚ್ಚತಕ್ಕ ವಿಷಯವೆಂದರೆ ಬೇರೆ ಬೇರೆ ಮಹಾತ್ಮರು ಬೇರೆ ಬೇರೆ ರೀತಿಗಳಲ್ಲಿ ಹೇಳಿರುವ ದೇವರ ಉಪಸನಾ ಕ್ರಮಗಳೆಲ್ಲಕ್ಕೂ ಗೌರವ ಕೊಟ್ಟಿರುವುದು. ದೇವರನ್ನು ವಿಷ್ಣು, ಶಿವ, ಗಣಪತಿ, ದೇವಿ ಇತ್ಯಾದಿಯಾಗಿ ಯಾವ ರೂಪದಲ್ಲಾದರೂ ಉಪಾಸನೆ ಮಾಡಲು ಇಲ್ಲಿ ನಿಷೇಧವಿಲ್ಲ. ಯಾವ ರೂಪವನ್ನೂ ಕೊಡದೆ ನಿರ್ಗುಣ ಬ್ರಹ್ಮದ ಉಪಾಸನೆ ಮಾಡುವುದಕ್ಕೂ ಒಪ್ಪಿಗೆಯಿದೆ. ಮಹಾ ಭಾರತದಲ್ಲಿ ಬ್ರಾಹ್ಮಣ ಋಷಿಗಳಿಗೆ ಎಷ್ಟು ಗೌರವ ಕೊಟ್ಟಿದ್ದಾರೋ ಅಷ್ಟೇ ಗೌರವ ಧರ್ಮವ್ಯಾಧ, ತುಲಾಧಾರ ಮೊದಲಾದ ಅಬ್ರಾಹ್ಮಣ ವಿಜ್ಞಾನಿಗಳಿಗೂ ಕೊಟ್ಟಿದ್ದಾರೆ. ಹೀಗಿದ್ದರೂ ಈ ಪ್ರಾಚೀನ ಧರ್ಮದ ತಳಹದಿಯಾಗಿ ಅತ್ಯಂತ ನವೀನವಾದ ವಿಜ್ಞಾನದ ಸ್ವರೂಪವಿರುವುದು ಬಹಳ ಮೆಚ್ಚತಕ್ಕ ವಿಷಯ. ದೇಶ, ಜಾತಿ, ಮತ ಇತ್ಯಾದಿ ಬೇಧಭಾವಗಳಿಲ್ಲದೆ ಇಂದಿನ ಸಮಸ್ತ ಮಾನವರೂ ಇದನ್ನು ಗಮನಿಸಿ ಉಪಯೋಗಿಸಿಕೊಳ್ಳಬೇಕಾಗಿದೆ. ಇದೇ ಬ್ರಹ್ಮತತ್ವ.
ಬ್ರಹ್ಮವೆಂದರೆ ಈ ಸಮಸ್ತ ವಿಶ್ವವೂ ಯಾವ ಮೂಲತತ್ವದಿಂದ ಹೊರಬಂದಿದೆಯೋ, ಯಾವ ಮೂಲ ತತ್ವದ ಆಧಾರದ ಮೇಲೆ ನಿಂತಿದೆಯೋ, ಕೊನೆಗೆ ಯಾವ ಮೂಲ ತತ್ವದೊಳಕ್ಕೆ ಸೇರಿಬಿಡುವುದೋ ಅದು, ಇಂದಿನ ವಿಜ್ಞಾನವು ಅನೇಕ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಭೌತಿಕ ಪ್ರಪಂಚವೆಲ್ಲವೂ ಒಂದೇ ಮೂಲಭೂತವಾದ ಶಕ್ತಿಯ ಸ್ವರೂಪವೆಂದು ದೃಢಪಡಿಸಿರುತ್ತೆ, ಅಣುಬಾಂಬುಗಳಿಂದ ಇದನ್ನು ದುರುಪಯೋಗಪಡಿಸಿದೆ. ಆದರೆ ವೈದಿಕ ಧರ್ಮವು ಈ ಸತ್ಯವನ್ನೇ ಇನ್ನೂ ಮುಂದಕ್ಕೆ ಹೋಗಿ ಎಲ್ಲರ ಹಿತದೃಷ್ಟಿಯಿಂದ ಒತ್ತಿ ಹೇಳಿದೆ. ಪುರಾಣಗಳೂ, ಕಾವ್ಯಗಳೂ, ಇದೇ ಸತ್ಯವನ್ನೇ ಸಾಂಕೇತಿಕವಾಗಿ ವಿವಿಧ ರೀತಿಗಳಲ್ಲಿ ವರ್ಣಿಸಿರುತ್ತವೆ.
ಈ ವಿಶಾಲ ಜಗತ್ತಿನಲ್ಲಿ ನಾವು ಕಾಣುತ್ತಿರುವುದೆಲ್ಲಾ ಮೂರು ವರ್ಗಗಳಲ್ಲಿದೆ. ಜೀವವಿಲ್ಲದ ಭೌತಿಕ ಜಗತ್ತು, ಜೀವವಿರುವ ಪ್ರಾಣಿ ಜಗತ್ತು, ಆಲೋಚನಾ ಶಕ್ತಿಯ ಮತ್ತು ಅದನ್ನು ವ್ಯಕ್ತಪಡಿಸುವ ಮಾತಿನ ಜಗತ್ತು. ವೈದಿಕ ಧರ್ಮದಲ್ಲಿ ಇವುಗಳಿಗೆ ಭೂಃ, ಭುವಃ, ಸುವಃ ಎಂಬ ಹೆಸರುಗಳನ್ನು ಕೊಟ್ಟಿರುತ್ತಾರೆ. ‘ಭೂಃ‘ ಎಂದರೆ ಭೂಮಿ. ಇದು ನಿರ್ಜಿವ ಜಗತ್ತಿನ ಸಂಕೇತ. ಭುವಃ ಎಂದರೆ ಭೂಮಿಗೆ ಸಂಬಂಧಿ ಸಿರುವುದು. ಶರೀರಗಳು ಭೂಮಿ ಅಲ್ಲ. ಆದರೆ ಭೂಮಿಯಲ್ಲಿನ ಪದಾರ್ಥಗಳಿಂದ ತಯಾರಾಗಿ ಅದಕ್ಕೆ ಸಂಬಂಧಿಸಿರುತ್ತವೆ. ಪ್ರಾಣಿ ಜಗತ್ತಿಗೆ ಇದು ಸರಿಯಾದ ಸಂಕೇತ. ಸುವಃ ಎಂದರೆ “ಸ್ವ” ಎಂಬುದಕ್ಕೆ ಸಂಬಂಧಿಸಿದ್ದು. ನಾನು, ನಾನು ಎಂಬ ಭಾವನೆಗೆ ಸಂಬಂಧಿಸಿರುವ ಮನಸ್ಸಿಗೆ ಇದು ಸರಿಯಾದ ಸಂಕೇತ. ಈ “ನಾನು” ಎಂಬ “ಅಹಂಕಾರ” ತತ್ವಕ್ಕೂ ಮೀರಿರುವುದೇನಿದೆ ? ನಾವು ಏಕಾಗ್ರ ಚಿತ್ತದಿಂದ ಆಲೋಚಿಸಿದರೆ ನಮ್ಮ ಮನಸ್ಸಿನಲ್ಲಿ ಸುಖ, ದುಃಖ, ಹೆದರಿಕೆ ಮುಂತಾದ ವಿಕಾರಗಳೆಷ್ಟಿದ್ದರೂ ಯಾವಾಗಲೂ ಅವುಗಳ ಹಿಂದೆ ಒಂದೇ ರೀತಿಯಾಗಿ ನಾನು, ನಾನು ಎಂಬ ಒಂದು ಭಾವನೆ ಇರುವ ಅನುಭವ ಎಲ್ಲರಿಗೂ ಉಂಟಾಗುತ್ತದೆ. ಇದಕ್ಕೇ ಆತ್ಮವೆಂದು ಹೆಸರು. ಅತ್ಯಂತ ವೈವಿಧ್ಯವಿರುವ ಭೌತಿಕ ಜಗತ್ತೇ ಒಂದು ಶಕ್ತಿಯ ರೂಪವಾಗಿದೆಯೆಂದು ವಿಜ್ಞಾನವು ತೋರಿಸಿರುವಾಗ ಬೇರೆ ಬೇರೆ ಜೀವದಲ್ಲಿರುವ ಈ ಆತ್ಮ ಒಂದೇ ಎಂದು ಭಾವಿಸಲೇಬೇಕಾಗಿದೆ. ಇದೇ ಪರಮಾತ್ಮ. ವೈದಿಕ ಮತವು ವಿಜ್ಞಾನಕ್ಕಿಂತಲೂ ಮುಂದೆ ಹೋಗಿ ಈ ಪರಮಾತ್ಮ ತತ್ವವೇ ಈ ವಿಶ್ವದ ರೂಪದಲ್ಲಿ ಭಾಸಿಸುತ್ತಿದೆ ಎಂಬ ಪರಮ ವೈಜ್ಞಾನಿಕ ಸತ್ಯವನ್ನು ತಿಳಿಸುತ್ತಿದೆ. ಸಮಸ್ತವೂ ಪರಮಾತ್ಮನೇ ಎಂಬ ಪರಮ ವೈಜ್ಞಾನಿಕ ಸತ್ಯವನ್ನು ವೈದಿಕ ಮತವು ತಳಹದಿಯಾಗಿಟ್ಟುಕೊಂಡಿದೆ. ವಿಷ್ಣುವಿನ ರೂಪದ ವರ್ಣನೆಯಲ್ಲಿಯಾಗಲಿ, ಶಿವನ ವರ್ಣನೆಯಲ್ಲಿಯಾಗಲಿ ದೇವಿಯ ವರ್ಣನೆಯಲ್ಲಿಯಾಗಲೀ ಇದೇ ಸತ್ಯವೇ ಸಾಂಕೇತಿಕವಾಗಿ ಮತ್ತು ಕವಿತಾಮಯವಾಗಿ ಹೇಳಲ್ಪಟ್ಟಿದೆ. ಉದಾಹರಣೆಗೆ ಕೆಳಗಿನ ಶ್ಲೋಕವನ್ನು ಗವನಿಸಬಹುದು.
ಭೂಃ ಪಾದೌ ಯಸ್ಯ ನಾಭಿರ್ವಿಯದ
ಸುರ ನಿಲಶ್ಚಂದ್ರ ಸೂರ್ಯೌಚ ನೇತ್ರೇ
ಕರ್ಣಾವಾಶಾಃ ಶಿರೋದ್ಯೌರ್ಮುಖಮಪಿದ
ಹನೋಯಸ್ಯ ವಾಸ್ತೇಯಮಬ್ಧಿಃ ।
ಅಂತಃಸ್ಥಂ ಯಸ್ಯ ವಿಶ್ವಂ ಸುರ ನರ
ಖಗಗೋಭೋಗಿ ಗಂಧರ್ವದೈತ್ಯೈಃ
ಚಿತ್ರಂ ರಂ ರಮ್ಯತೇ ತಂ ತ್ರಿಭುವನ ವಪುಶಂ
ವಿಷ್ಣುಮೀಶಂ ನಮಾಮಿ॥
ಭೂಮಿಯೇ ಯಾವನ ಪಾದಗಳೋ, ಆಕಾಶವು ಯಾವನ ನಾಭಿಯೋ, ಯಾವನಿಗೆ ವಾಯುವೇ ಪ್ರಾಣವೋ, ಸೂರ್ಯ ಚಂದ್ರರೇ ಕಣ್ಣುಗಳೋ, ದಿಕ್ಕಗಳೇ ಕಿವಿಗಳೋ, ಸ್ವರ್ಗವೇ ತಲೆಯೋ, ಆಗ್ನಿಯೇ ಮುಖವೋ, ಸಮುದ್ರವೇ ಬಟ್ಟೆಯೋ, ಯಾವನಲ್ಲಿ ವಿಶ್ವವು ನಿಂತು ದೇವತೆಗಳು, ಮನುಷ್ಯರು, ಹಕ್ಕಿಗಳು. ಪಶುಗಳು, ಹಾವುಗಳು, ಗಂಧರ್ವರು, ರಾಕ್ಷಸರು, ಈ ರೀತಿಯಾಗಿ ಚಿತ್ರವಾಗಿ ರಮಣೀಯವಾಗಿದೆಯೋ ಆಂತಃ ತ್ರಿಭುವನ ಶರೀರನೂ, ಈಶ್ವರನೂ ಆದ ವಿಷ್ಣುವನ್ನು ನಮಸ್ಕರಿಸುತ್ತೇನೆ.
ಇಲ್ಲಿ ರಾಕ್ಷಸರನ್ನೂ ಸಹ ಸೇರಿಸಿಕೊಂಡಿರುವುದು ಗಮನಾರ್ಹ, ಪರಮಾತ್ಮ ತತ್ವದಲ್ಲಿ ಒಳ್ಳೆಯದು, ಕೆಟ್ಟದ್ದು ಎಂಬ ಭೇದವಿಲ್ಲ. ಭಾಗವತ ಪುರಾಣದಲ್ಲಿ ಅಧರ್ಮವು ಮುಂತಾದ ಕೆಟ್ಟ ವಿಷಯಗಳೆಲ್ಲವೂ ಬ್ರಹ್ಮನ ಬೆನ್ನಿನಿಂದ ಹುಟ್ಟಿವೆಯೆಂಬ ವರ್ಣನೆಯಿದೆ. ಒಂದು ಸಲ ಶ್ರೀ ರಾಮಾನಜಾಚಾರ್ಯರು ತಾವು ಉಪಾಸನೆ ಮಾಡುತ್ತಿದ್ದ ಶ್ರೀ ವಿಷ್ಣುವಿನ ವಿಗ್ರಹದ ಅಂಗಾಂಗಗಳನ್ನು ಭಕ್ತಿಯಿಂದ ಸ್ಪಶಿಸಿದರಂತೆ, ಆಗ ಅವರಿಗೆ ವಿಷ್ಣುವಿನ ಬೆನ್ನಿನಲ್ಲಿ ಒಂದು ಗಾಯವು ಕಂಡು ಬಂದಿತಂತೆ. ಆಗ ಅವರು ಬಹಳ ದುಃಖಿಸಿದಾಗ ದೇವರು ಅವರಿಗೆ ಹೇಳಿದರಂತೆ, ಅಪ್ಪಾ, ನೀನು ಕೆಟ್ಟವರನ್ನ ಬಹಳ ತೀವ್ರವಾಗಿ ವಾದದಲ್ಲಿ ಖಂಡಿಸಿದ್ದೀಯೆ, ಅವರು ನನ್ನ ಬೆನ್ನು ಆದುದರಿಂದ ಬೆನ್ನಿನಲ್ಲಿ ಗಾಯವಾಗಿದೆ ಎಂದು. ಅಂದಿನಿಂದ ಆಚಾರ್ಯರು ಮೌನವನ್ನು ತಾಳಿದರಂತೆ. ಪರಮ ಸತ್ಯದಲ್ಲಿ ಒಳ್ಳೆಯದು, ಕೆಟ್ಟದು ಎಂಬ ಭೇದವು ಸಹ ಇಲ್ಲ. ಎಲ್ಲವೂ ಪರಮಾತ್ಮ ಸ್ವರೂಪವೇ. ಆದರೆ ವ್ಯವಹಾರದಲ್ಲಿ ಧರ್ಮಾ ಧರ್ಮಗಳ ಭೇದ ಬೇಕೇ ಬೇಕು. ಆದುದರಿಂದ ವ್ಯವಹಾರದಲ್ಲಿ ಭೇದ ಮಾಡಿ ಧರ್ಮವನ್ನು ಮಾತ್ರ ನಾವು ಆಚರಿಸಬೇಕು ಅಷ್ಟೇ. ಇದು ಆಚರಣೆ ಮಾತ್ರ, ಮಾನಸಿಕವಾಗಿ ಅಧರ್ಮದ ವಿಷಯದಲ್ಲೂ, ಕೆಟ್ಟವರ ವಿಷಯದಲ್ಲೂ ಯಾವ ದ್ವೇಷ ಭಾವವೂ ಇರಬಾರದು. ಪತಂಜಲಿಯ ಯೋಗ ಸೂತ್ರ ಗಳಲ್ಲಿ ಅಧರ್ಮವನ್ನು ಉಪೇಕ್ಷೆಯಿಂದ ನೋಡ ಬೇಕೆಂದಿದೆ, ಮಹಾನುಭಾವನಾದ ಏಸು ಕ್ರಿಸ್ತನು ಸಹ ತನ್ನನ್ನು ಶಿಲುಬೆಗೇರಿಸಿದವನನ್ನು ಕ್ಷಮಿಸಬೇಕೆಂದು ದೇವರನ್ನು ಪ್ರಾರ್ಥಿಸಿದನು,
ವೈಜ್ಞಾನಿಕವಾಗಿ ಸಮಸ್ತ ವಿಶ್ವದ ವ್ಯಾಪಾರವು ಪ್ರಕೃತಿ ನಿಯಮಗಳನ್ನನುಸರಿಸಿಕೊಂಡು ನಡೆಯುತ್ತಿದೆ. ಇದರಲ್ಲಿ ನಾನು ಮಾಡಿದೆ, ಅವನು ಮಾಡಿದ ಎಂಬುದು ಬರುವುದೇ ಇಲ್ಲ. ಓಂಕಾರದಲ್ಲಿನ ನಾಲ್ಕು ಭಾಗಗಳೂ, ಭೌತಿಕ ಪ್ರಪಂಚ, ಪ್ರಾಣಿ ಜಗತ್ತು. ಬುದ್ಧಿ ಜೀವಿಗಳು ಮತ್ತು ಪರಮಾತ್ಮ ತತ್ವಕ್ಕೆ ಸಂಕೇತಗಳಾಗಿ ಎಲ್ಲವೂ ಒಂದೇ ಪರಮಾತ್ಮನ ಸ್ವರೂಪವೆಂಬ ಪರಮ ಸತ್ಯವನ್ನು ತೋರಿಸುತ್ತಿವೆ.
ಲಂಕಾ ಕೃಷ್ಣಮೂರ್ತಿ
(ಸಹಾಯಕ ಸಂಪಾದಕ ಧರ್ಮಪ್ರಭ)