ಕೊಡೆಯ ಗೋಪಾಲ – 7
ಲಂಕಾ ಕೃಷ್ಣಮೂರ್ತಿ
೫
ಮನೆಗೆ ಬಂದ ಕೂಡಲೇ ರಾಮಕ್ಕ ಕಮಲಮ್ಮನಿಗೆ “ಈ ದಿನ ನೀನೇ ಅಡುಗೆ ಮಾಡು. ನಾನು ಸ್ನಾನ ಮಾಡಿ ಗಣಪತಿಯ ಪೂಜೆ ಮಾಡಲು
ಹೊರಡಬೇಕು” ಎಂದು ಹೇಳಿದಳು. ಅಂದು ಗುರುವಾರವಾಗಿತ್ತು. ಪ್ರತಿ ಗುರುವಾರವೂ ರಾಮಕ್ಕೆ ನೇಮದಿಂದ ತಲೆಗೆ ನೀರು ಹಾಕಿಕೊಂಡು ಒದ್ದೆ ಬಟ್ಟೆ ತೊಟ್ಟುಕೊಂಡೇ ತಂಬಿಟ್ಟು ತಯಾರು ಮಾಡಿ ಅದರಿಂದ ಎರಡು ಜ್ಯೋತಿಗಳನ್ನು ಮಾಡಿ ಅವುಗಳಲ್ಲಿ ತುಪ್ಪ ಹಾಕಿ ದೀಪ ಹೊತ್ತಿಸಿ ಎರಡು ಜ್ಯೋತಿಗಳನ್ನೂ, ಒಂದು ಎಳನೀರನ್ನೂ, ಪೂಜಾ ದ್ರವ್ಯಗಳನ್ನೂ ತಲೆಯ ಮೇಲೆ ಹೊತ್ತು ಕೊಂಡು ಕೋಟೆಯ ಪೂರ್ವ ಬಾಗಿಲಿನ ಪಕ್ಕದಲ್ಲಿರುವ ಗಣಪತಿಗೆ ಅರ್ಪಿಸಿ ಬರುತ್ತಿದ್ದಳು. ಆ ದಿನವೂ ಹಾಗೆಯೇ ಮಾಡಲು ತಂಬಿಟ್ಟಿನ ಜ್ಯೋತಿಗಳನ್ನೂ, ಎಳನೀರನ್ನೂ, ಪೂಜಾ ದ್ರವ್ಯಗಳನ್ನೂ ತೆಗೆದುಕೊಂಡು ಒದ್ದೆ ಬಟ್ಟೆ ಉಟ್ಟುಕೊಂಡೇ ಹೊರಟಳು. ಗಣಪತಿಯ ದೇವಸ್ಥಾನವೂ ಬಹಳ ಚಿಕ್ಕದಾಗಿದ್ದು, ಜನರಿಂದ ಅಲಕ್ಷಿತವಾಗಿದ್ದು ಆ ದೇವರಿಗೆ ಯಾರೂ ಪೂಜೆಯನ್ನೇ ಮಾಡುತ್ತಿರಲಿಲ್ಲ. ಆ ದೇವರು ಅಲ್ಲಿ ಎಷ್ಟು ವರ್ಷಗಳ ಹಿಂದೆ ಪ್ರತಿಷ್ಠಿತವಾಗಿತ್ತೋ, ಅದಕ್ಕೆ ಪೂಜೆಗೆ ಏನು ಏರ್ಪಾಡು ಮಾಡಿತ್ತೋ ಯಾರಿಗೂ ತಿಳಿಯದು. ರಾಮಕ್ಕನ ಕಾಲಕ್ಕೆ ಎಲ್ಲಾ ದೇವರಂತೆ ಮತ್ತು ವಿದ್ಯಾ ಕಲೆಗಳಂತೆ ಆ ಗಣಪತಿಯ ವಿಷಯದಲ್ಲೂ ಅನಾದರ ಹೆಚ್ಚಾಗಿತ್ತು. ಆದರೆ ರಾಮಕ್ಕನೊಬ್ಬಳೇ ತಪ್ಪದೆ ಆ ದೇವರಿಗೆ ಮೇಲೆ ಹೇಳಿದಂತೆ ವಾರಕ್ಕೊಂದು ಸಲ ಪೂಜೆ ಮಾಡುತ್ತಿದ್ದಳು. ಅವಳು ದೇವರ ಮುಂದೆ ಇಟ್ಟ ಜ್ಯೋತಿಗಳನ್ನೂ, ಎಳನೀರನ್ನೂ ಹಿಂದಕ್ಕೆ ತರುತ್ತಿರಲಿಲ್ಲ. ಆ ಗುಡಿಯಲ್ಲಿ ಗರ್ಭಗುಡಿ ಒಂದೇ ಇದ್ದಿದ್ದು ಅದಕ್ಕೆ ದ್ವಾರಬಂಧನವಿದ್ದರೂ ಬಾಗಿಲುಗಳು ಹೋಗಿದ್ದವು. ರಾಮಕ್ಕನು ಇಟ್ಟ ಪದಾರ್ಥಗಳನ್ನು ಆ ದಾರಿಯಲ್ಲಿ ಹೋಗುತ್ತಿದ್ದ ಯಾರಾದರೂ ಅನಾಥರು ಮಾತ್ರ ಕಣ್ಣಿಗೆ ಬಿದ್ದಾಗ ಉಪಯೋಗಿಸುತ್ತಿದ್ದರು.
ರಾಮಕ್ಕನು ಗುಡಿಗೆ ಹೋಗಿ ಬರುವವರೆಗೂ ಕಮಲಮ್ಮ ಆಡುಗೆ ಯನ್ನು ಮಾಡುತ್ತಿದ್ದಳು. ಈಚೆ ಗೋಪಾಲನು ಸೌದೆ ಕಡಿಯುತ್ತಿದ್ದನು. ರಾಮಕ್ಕೆ ಬಂದ ಕೂಡಲೇ ಕಮಲಮ್ಮನಿಗೆ ಬಿಡುಗಡೆಯಾಯಿತು. ಕಮಲಮ್ಮ ಹೊರಗೆ ಬಂದು ಗೋಪಾಲನೊಂದಿಗೆ ಅನೇಕ ವಿಷಯಗಳನ್ನು ಕುರಿತು ಮಾತನಾಡತೊಡಗಿದಳು. ಗೋಪಾಲನು ಬೇಗ ಸೌದೆ ಒಡೆಯುವುದನ್ನು
ಮುಗಿಸಿ ಮನೆಯೊಳಗೆ ಬಂದು ಕುಳಿತುಕೊಂಡನು. ಆತನೂ, ಕಮಲಮ್ಮನೂ, ಆಡುಗೆ ಮಾಡುತ್ತಿದ್ದ ರಾಮಕ್ಕನೂ ಅನೇಕ ವಿಷಯಗಳನ್ನು ಚರ್ಚಿಸುತ್ತಿದ್ದರು.
ಊಟವಾದ ಮೇಲೆ ಪುನಃ ಇವರೆಲ್ಲರೂ ಮಾತನಾಡುತ್ತಿದ್ದರು. ಕಮಲಮ್ಮನು ಓದಿ ತಿಳಿದುಕೊಂಡ ವಿಷಯಗಳನ್ನು ಇನ್ನಿಬ್ಬರಿಗೂ ತಿಳಿಸುತ್ತಿದ್ದಳು. ಇವರಿಬ್ಬರೂ ಕಮಲಮ್ಮನಿಗೆ ತಮ್ಮ ಅನುಭವಕ್ಕೆ ಬಂದ ವಿಷಯಗಳನ್ನು ಸ್ವಲ್ಪ ಸ್ವಲ್ಪ ತಿಳಿಸುತ್ತಿದ್ದರು. ನಡುವೆ ನಡುವೆ ಅವರು ಪಾತ್ರೆಗಳನ್ನು ತೊಳೆಯುವುದು, ದನ ಕರುಗಳನ್ನು ನೋಡಿಕೊಳ್ಳುವುದು ಮುಂತಾದ ಕೆಲಸಗಳನ್ನು ಮಾಡುತ್ತಲೇ ಇದ್ದರು.
ಪ್ರಾಸ್ತಾವಿಕವಾಗಿ ಗೋಪಾಲನು ಆ ದಿನ ಅರಮನೆಯಲ್ಲಿ ಮುದುಕಪ್ಪನು ತಿಳಿಸಿದ ಪರಸ್ಪರ ಬಂಧುತ್ವದ ವಿಚಾರವನ್ನು ಹೇಳಿದನು. ಹೇಳುತ್ತಿದ್ದಂತೆಯೇ ಅಕಸ್ಮಾತ್ ಮುದುಕಪ್ಪನು ಅಲ್ಲಿಗೆ ಬಂದನು. ಎಲ್ಲರೂ ಮುದುಕಪ್ಪನನ್ನು ನೋಡಿ ಎದ್ದು ನಿಂತರು. ರಾಮಕ್ಕ “ಏನು ಗವಿಯಪ್ಪಾ, ಚೆನ್ನಾಗಿದ್ದೀಯಾ?” ಎಂದು ಮುದುಕಪ್ಪನನ್ನು ವಿಚಾರಿಸಿದಳು.
ಮುದುಕಪ್ಪ – “ಚೆನ್ನಾಗಿದ್ದೀನಮ್ಮಾ, ನೀವೆಲ್ಲಾ ಚೆನ್ನಾಗಿದ್ದೀರಾ? ಕಮಲಮ್ಮನೂ ಬಂದಿದ್ದಾಳಲ್ಲಾ? ಅವಳನ್ನು ನೋಡಿ ಎಷ್ಟು ದಿನಗಳಾದವು? ಏನು ಕಮಲಮ್ಮಾ, ಹೇಗಿದೆ ವಿದ್ಯಾಭ್ಯಾಸ ?*
ಕಮಲಮ್ಮ “ನಡೆಯುತ್ತಾ ಇದೆ, ತಾತಾ, ಏದ್ಯೆಗೆ ಪಾರವಿದೆಯೇ*
ಗವಿಯಪ್ಪ “ಆಗಲಮ್ಮಾ, ನಮಗಂತೂ ವಿದ್ಯೆಯಿಲ್ಲ. ನಮ್ಮ ಗೋಪಾಲನಿಗೂ ಓದು ಬರಹಗಳೇ ಬರುವುದಿಲ್ಲ, ಅಂದರೆ ಅವನು ಕಲಿಯು ಅದಕ್ಕೆ ಹೋಗಲಿಲ್ಲ. ನೀನಾದರೂ ವಿದ್ಯೆ ಕಲಿತು ಬುದ್ದಿವಂತಳಾದೆಯಲ್ಲಾ. ವಿದ್ಯೆಗೆ ಈಗ ಬೆಲೆಯೇ ಇಲ್ಲ. ಹಾಗಾದರೂ ಕಲಿತವರಿಗೆ ಅದು ಒಂದು ದೊಡ್ಡ ಲಾಭವೇ, ಅದರಿಂದ ಬುದ್ಧಿ ಅರಳುತ್ತದೆ.”
ಕಮಲಮ್ಮ “ಏನು ತಾತಾ, ವಿದ್ಯೆ ಕಲಿಯದಿದ್ದರೆ ಅಥವಾ ಓದು ಬರಹ ಕಲಿಯದಿದ್ದರೆ ಬುದ್ಧಿ ಅರಳುವುದಿಲ್ಲವೇ? ನೀವೆಲ್ಲಾ ಬುದ್ಧಿಯಲ್ಲಿ ಯಾರಿಗೇನು ಕಡಿಮೆ? ನಮ್ಮ ಗೋಪಾಲ ಏನು ಕಡಿಮೆ?” ಓದಿ ಓದಿ ಮರುಳಾದವನಿಲ್ಲವೇ”
ರಾಮಕ್ಕ – “ಈಗ ತಾನೇ ನಿನ್ನ ಮಾತೇ ಆಡುತ್ತಾ ಇದ್ದೆವು, ಗವಿಯಪ್ಪಾ. ನೀನೂ ಬಂದು ಬಿಟ್ಟೆ. ನೀನು ನಮ್ಮ ಯಜಮಾನರ ಕೊಡೆಯನ್ನು ಹುಡುಕಿ ಕೊಟ್ಟಿದ್ದೂ, ಭಾಗ್ಯಲಕ್ಷ್ಮಿ, ರಂಗಯ್ಯ ಇವರಿಗೂ ಇರುವ ಬಂಧುತ್ವವನ್ನು ಹೇಳಿದ್ದೂ ಎಲ್ಲಾ ಈಗ ತಾನೇ ಗೋಪಾಲನು ನೆನೆದುಕೊಳ್ಳುತ್ತಿದ್ದ.”
ಗವಿಯಪ್ಪ- “ಹೌದು, ಇನ್ನೈದಾರು ದಿನಗಳು ತಾನೇ ಉಳಿದಿರುವುದು ಗೋಪಾಲನು ತನ್ನ ವಂಶದ ಕೆಲಸಕ್ಕೆ ಸೇರಲು. ನನಗಂತೂ ಬಹಳ ಸಂತೋಷ. ಗೋಪಾಲನ ವಿಷಯದಲ್ಲಿ ನನಗಂತೂ ಬಹಳ ಹೆಮ್ಮೆ. ಇವನು ನಮ್ಮ ಬಂಧುಗಳಲ್ಲೆಲ್ಲಾ ಬಹಳ ಉತ್ತಮ. ರಂಗಯ್ಯನಿಗೂ ಭಾಗ್ಯಲಕ್ಮಿಗೂ ಐಶ್ವರ್ಯವಿರಬಹುದು, ಅಂತಸ್ತು ಇರಬಹುದು. ಆದರೆ ಗೋಪಾಲ, ಕಮಲಮ್ಮ ಇವರಿಗಿರುವ ಸಂಸ್ಕಾರ ಅವರಿಗಿಲ್ಲ. ನಾನು ಈಗ ಬಂದಿದ್ದು ಏಕೆಂದು ಗೊತ್ತೋ? ಇವರನ್ನು ಸೈನ್ಯಾಧಿಪತಿ ವೀರಪ್ಪನ ಮನೆಗೆ ಕರೆದುಕೊಂಡು ಹೋಗಬೇಕೆಂದು. ಕಮಲಮ್ಮನು ಭಾಗ್ಯಲಕ್ಷ್ಮಿಗೆ ಖಾಸಾ ಒಡ ಹುಟ್ಟಿದವಳಲ್ಲವೆ? ಗೋಪಾಲನು ನಾಳೆ ಅರಮನೆಯ ಕೆಲಸಕ್ಕೆ ಸೇರುವವನು. ಮುಂಚಿತವಾಗಿಯೇ ಮಂತ್ರಿ, ಸೈನ್ಯಾಧಿಪತಿ, ಕೋಶಾಧಿಪತಿ ಇವರನ್ನೆಲ್ಲಾ ನೋಡಿ ಅವರಿಗೆ ನಮಸ್ಕಾರ ಮಾಡಿ ಬರುವುದು ಪರಿಚಾರಕರ ಧರ್ಮ”
ರಾಮಕ್ಕ – “ನೀನು ನಮಗೆ ಒಳ್ಳೆಯದನ್ನೇ ಬಯಸುವವನು. ಆರಮನೆಯಲ್ಲೇ ಪಳಗಿದವನು. ನಮ್ಮ ಗೋಪಾಲನಿಗೆ ಇನ್ನೂ ಪರಿಚಾರಕರು ಹೇಗೆ ನಡೆದುಕೊಳ್ಳಬೇಕು ಎನ್ನುವುದು ಗೊತ್ತಿಲ್ಲ. ನೀನೇ ಇಂದಿನಿಂದ ಎಲ್ಲಾ ಕಲಿಸಿಕೊಡು. ಬಂಧುಗಳಲ್ಲಿ ವೀರಪ್ಪನಿಗೆ ಅದೃಷ್ಟ ಬಂತು. ಸೈನ್ಯಾಧಿಪತಿಯಾದ. ಅದೆಲ್ಲಾ ಅವರವರ ಅದೃಷ್ಟ. ಅಂತಸ್ತಿನ ವ್ಯತ್ಯಾಸಗಳಿಂದ ಒಬ್ಬರ ಮನೆಗೆ ಒಬ್ಬರು ಹೋಗಿ ಬರುವುದೂ, ಕೊಡುವುದೂ ತೆಗೆದುಕೊಳ್ಳುವುದೂ ಅಪರೂಪವಾಗಿದ್ದರೂ ನಮಗೇನೋ ಬಂಧುಗಳ ಮೇಲೆಲ್ಲಾ ಅಕ್ಕರೆಯೇ. ಸ್ವಲ್ಪ ಮೇಲಿನ ಅಂತಸ್ತಿನವರು ಒಂದು ವಿಧವಾಗಿ ಪ್ರವರ್ತಿಸಬಹುದು. ಆಗಲಿ, ನಮಗೆ ಅಸೂಯೆಯೂ ಇಲ್ಲ. ದ್ವೇಷವೂ ಇಲ್ಲ. ಯಾರು ಹೇಗೆ ಪ್ರವರ್ತಿಸಿದರೂ ನಾವು ನಮ್ಮ ಅಂತಸ್ತಿಗೆ ತಕ್ಕಂತೆ ನಡೆಯಬೇಕು. ನಮ್ಮ ಕರ್ತವ್ಯವನ್ನು ನಾವು ಮಾಡಬೇಕು. ಇಷ್ಟು ಗಮನದಲ್ಲಿ ಇಟ್ಟು ಕೊಂಡರೆ ಸಾಕು.
ಗೋಪಾಲನೂ ಕಮಲಮ್ಮನೂ ಸುಮ್ಮನೆ ಕೇಳುತ್ತಿದ್ದರು. ಗವಿಯಪ್ಪನಿಗೆ ಸತ್ಕಾರ ಮಾಡಿದಮೇಲೆ ಆತನು ಗೋಪಾಲನನ್ನೂ ಕಮಲಮ್ಮನನ್ನೂ ಸೈನ್ಯಾಧಿಪತಿ ವೀರಪ್ಪನ ಮನೆಗೆ ಕರೆದುಕೊಂಡು ಹೋದನು. ವೀರಪ್ಪನ ಮನೆ ಆತನ ಹುದ್ದೆಗೆ ತಕ್ಕಂತೆ ದೊಡ್ಡದಾಗಿದ್ದು, ವೈಭವದಿಂದ ಕೂಡಿತ್ತು. ಮನೆಯ ಮುಂದೆ ಇಬ್ಬರು ಶಸ್ತ್ರಪಾಣಿಗಳಾದ ಸೈನಿಕರು ಕಾವಲಿದ್ದರು. ಮನೆಯ ಒಳಗೆಲ್ಲಾ ಸೈನಿಕರು ಸಡಗರದಿಂದ ಓಡಾಡುತ್ತ ಏನೇನೋ ಕೆಲಸಗಳನ್ನು ಮಾಡುತ್ತಿದ್ದರು. ಒಂದು ಕೋಣೆಯಲ್ಲಿ ಕಿಟಕಿಯ ಬಳಿ ಕುಳಿತು ಕೊಂಡಿದ್ದ ವೀರಪ್ಪನ ಏಕೈಕ ಪಾಲಿತ ಪುತ್ರಿ ಭಾಗ್ಯಲಕ್ಷ್ಮಿಯು ಬೀದಿಯಲ್ಲಿ ತಮ್ಮ ಮನೆಯ ಕಡೆ ಬರುತ್ತಿದ್ದ ಗೋಪಾಲನನ್ನೂ, ಗವಿಯಪ್ಪನನ್ನೂ, ಇನ್ನೊಬ್ಬ ಹೆಣ್ಣುಮಗಳನ್ನೂ ನೋಡಿದಳು. ಪರಿಚಾರಕರನ್ನು ಕಳುಹಿಸಿ ಅವರನ್ನು ತನ್ನ ಕೋಣೆಯೊಳಕ್ಕೆ ಬರಮಾಡಿಸಿಕೊಳ್ಳೋಣವೇ ಎನ್ನಿಸಿತು. ಆದರೆ ಗೋಪಾಲನ ಮೇಲೆ ಅವಳಲ್ಲಿ ಆಗಲೇ ಮೂಡಿದ್ದ ಆಕರ್ಷಣೆಯು ಅವಳನ್ನು ಎಬ್ಬಿಸಿ ಹೊರ ಬಾಗಿಲಿನವರೆಗೂ ಎಳೆದುಕೊಂಡುಬಂತು. ಅವಳೇ ಬಂದು ಈ ಬಡವರನ್ನು ಸ್ವಾಗತಿಸಿಸುವುದನ್ನು ನೋಡಿ ಕಾವಲುಗಾರರು ಬೆರಗಾದರು. ಭಾಗ್ಯಲಕ್ಷ್ಮಿಯು ಬಂದವರನ್ನು ನಡುಮನೆಯಲ್ಲಿದ್ದ ತಂದೆಯ ಬಳಿಗೆ ಕರೆದುಕೊಂಡು ಹೋದಳು. ಎಲ್ಲರೂ ಸೈನ್ಯಾಧಿಪತಿಗೆ ಉಚಿತ ರೀತಿಯಲ್ಲಿ ನಮಸ್ಕರಿಸಿದರು. ಒಂದು ವೀರಾಸನದ ಮೇಲೆ ಕುಳಿತಿದ್ದ ವೀರಪ್ಪನು ಅವರಿಗೆಲ್ಲಾ ಕುಳಿತುಕೊಳ್ಳಲು ನೆಲದ ಮೇಲೆ ಹಾಸಿದ್ದ ತಿವಾಸಿಯನ್ನು ತೋರಿಸಿದನು. ಅವರೆಲ್ಲಾ ನಮ್ರತೆಯಿಂದ ಕುಳಿತುಕೊಂಡರು. ಭಾಗ್ಯಲಕ್ಷ್ಮಿ ನಿಂತುಕೊಂಡೇ ಇದ್ದಳು.
ವೀರಪ್ಪ – “ಏನು ಗವಿಯಪ್ಪಾ, ಚೆನ್ನಾಗಿದ್ದೀಯಾ? ಈಚೆಗೆ ಇತ್ತ ಕಡೆ ಬರಲೇ ಇಲ್ಲವಲ್ಲಾ. ಈ ಹುಡುಗ ಹುಡುಗಿಯರು ಯಾರು ?”
ಗವಿಯಪ್ಪ- “ಸೈನ್ಯಾಧಿಪತಿ ವೀರಪ್ಪನ ರಕ್ಷಣೆಯಲ್ಲಿ ಘನಗಿರಿ ರಾಜ್ಯದ ಪ್ರಜೆಗೊಳೊಂದಿಗೆ ನಾವೆಲ್ಲಾ ಸೌಖ್ಯವಾಗಿದ್ದೇವೆ. ತಮಗೆ ಜಯವನ್ನೂ, ಐಶ್ವರ್ಯವನ್ನೂ, ಆರೋಗ್ಯವನ್ನೂ ಯಾವಾಗಲೂ ಕೋರುತ್ತಾ ಇದ್ದೇವೆ. ತಮ್ಮ ಕೊಡೆ ಹಿಡಿಯುವ ಸೀನಪ್ಪ ಇದ್ದನಲ್ಲಾ ಆತನ ಮಗ ಈತ. ಹೆಸರು
ಗೋಪಾಲ. ಇವಳು ನಿಮ್ಮ ಭಾಗ್ಯಲಕ್ಷ್ಮಮ್ಮನ ಒಡ ಹುಟ್ಟಿದವಳು ಕಮಲಮ್ಮ – ಸೀನಪ್ಪನ ಹೆಂಡತಿ ರಾಮಕ್ಕೆ ಸಾಕಿದವಳು.
ಭಾಗ್ಯಲಕ್ಷ್ಮಿ ನನ್ನ ತಂಗೀನಾ ಈ ಹುಡುಗಿ. ನನ್ನ ತಂಗಿ !
ವೀರಪ್ಪ-ಹೌದಮ್ಮ, ಭಾಗ್ಯಲಕ್ಷ್ಮೀ, ನೀನು ನನ್ನ ಸಾಕುಮಗಳಲ್ಲವೇ, ನೀನೂ, ಈ ಹುಡುಗಿಯೂ, ಅವಳಿ ಜವಳಿಯಾಗಿ ಹುಟ್ಟಿದವರು ತಂದೆ ತಾಯಿಗಳಿಲ್ಲದ ನಿನ್ನನ್ನು ನಾನು ಬೆಳೆಸಿಕೊಂಡೆ. ರಾಮಕ್ಕ ಈ ಹುಡುಗಿಯನ್ನು ಬೆಳೆಸಿಕೊಂಡಳು. ಇವಳ ಹೆಸರು ಕಮಲಮ್ಮನೇ? ಇವನು ರಾಮಕ್ಕನ ಮಗನೇ ? ಇವಳು ಈಗ ವರದಪ್ಪ ಸ್ವಾಮಿಗಳ ಹತ್ತಿರ ವಿದ್ಯೆ ಕಲಿಯುತ್ತಾ ಇದ್ದಾಳೆಂದು ಯಾರೋ ಹೇಳಿದರು. ಯಾರು ಹೇಳಿದರು? ನಮ್ಮ ರಂಗಯ್ಯ ಹೇಳಿದಹಾಗಿದೆ. ರಂಗಯ್ಯ ಅಂದರೆ ಯಾರು ಗೊತ್ತಾ ಗವಿಯಪ್ಪಾ? ರಂಗಯ್ಯ ನಮ್ಮ ಕೋಶಾಧಿಪತಿ ರಾಮಪ್ಪನ ಒಬ್ಬನೇ ಮಗ. ಒಳ್ಳೆಯ ಬುದಿವಂತ, (ಒಬ್ಬ ಸೈನಿಕನನ್ನು ಕುರಿತು) ಎಲಾ, ಆ ರಂಗಯ್ಯನು ಇಲ್ಲೆ ಎಲ್ಲಾದರೂ ಇದ್ದಾನೇನೋ ನೋಡು.
ಭಾಗ್ಯಲಕ್ಷ್ಮಿ – ನನ್ನ ತಂಗಿ ಕಮಲಮ್ಮ ಹೇಗಿದ್ದಾಳೆ ನೋಡಪ್ಪಾ, ಪಾಪ, ಎಷ್ಟು ಬಡವಳಾಗಿದ್ದಾಳೆ. ಪಾಪ, ನನಗೆ ಬಂದ ಅದೃಷ್ಟ ಅವಳಿಗೆ ಇಲ್ಲವಾಯಿತಲ್ಲಾ? ಏನು ದುರದೃಷ್ಟವಂತಳು.
ಕಮಲಮ್ಮ (ಗದ್ಗದ ಸ್ವರದಿಂದ) – ನಾನೇನು ದುರದೃಷ್ಟವಂತಳಲ್ಲ.
ಇಷ್ಟರೊಳಗೆ ರಂಗಯ್ಯನು ಪ್ರವೇಶಿಸಿದನು ; ಗೋಪಾಲನನ್ನು ಈರ್ಷ್ಯೆಯಿಂದ ನೋಡಿದನು. ಕಮಲಮ್ಮನನ್ನು ತೋರಿಸಿ ಸೈನ್ಯಾಧಿಪತಿ ವೀರಪ್ಪನೊಂದಿಗೆ “ಈ ಹುಡುಗಿ ಯಾರು ಮಾವಯ್ಯ?” ಎಂದು ಕೇಳಿದನು.
ವೀರಪ್ಪ- ನೀನೇ ಹೇಳಿದೆಯಲ್ಲಾ, ಮೊನ್ನೆ ವಿದ್ಯೆಗಳು ಕಲಿಯುತ್ತಿರುವವರ ವಿಚಾರವಾಗಿ ಮಾತನಾಡುತ್ತಾ ಭಾಗ್ಯಲಕ್ಷ್ಮಿಯ ಒಡಹುಟ್ಟಿದವಳು ಕಮಲಮ್ಮ ವರದಪ್ಪ ಸ್ವಾಮಿಗಳ ಹತ್ತಿರ ವಿದ್ಯೆಯನ್ನು ಕಲಿಯುತ್ತಿದ್ದಾಳೆಂದು. ಅವಳೇ ಈ ಕಮಲಮ್ಮ.
ರಂಗಯ್ಯ- ಇವಳೇನಾ ಕಮಲಮ್ಮ, ನಾನು ಇದುವರೆಗೂ ನೋಡಿಲ್ಲ. ಈ ಮುದುಕಪ್ಪನು ಹೇಳಿದ ವಿಷಯ ಮಾತ್ರ ಕೇಳಿದ್ದೆ. ಅಲ್ಲದೆ ನಮ್ಮ ಸ್ನೇಹಿತರು ಕೆಲವರು ಹೇಳಿದರು. ಕಮಲಮ್ಮ ಎಂಬ ಹುಡುಗಿ ಚೆನ್ನಾಗಿ ವಿದ್ಯೆ ಯನ್ನು ಕಲಿಯುತ್ತಿದ್ದಾಳೆಂದು. ನೀನೇ ಭಾಗ್ಯಶಾಲಿನಿ ಕಮಲಮ್ಮಾ. ವಿದ್ಯೆ ಯಲ್ಲಿ ಅಭಿರುಚಿ ಮತ್ತು ಪರಿಶ್ರಮ ಎರಡೂ ಇವೆ ನಿನಗೆ. ಸಾಹಿತ್ಯ ರಸಾಸ್ವಾದನವು ಎಷ್ಟು ಆನಂದವನ್ನು ಕೊಡುತ್ತೆ ಅನ್ನುವುದನ್ನು ಬಲ್ಲವರು ಮಾತ್ರ ಬಲ್ಲರು. ಇದಕ್ಕೆಲ್ಲಾ ಪೂರ್ವಜನ್ಮ ಸಂಸ್ಕಾರ ಬೇಕು.
ಕಮಲಮ್ಮ – ಪೂರ್ವಜನ್ಮಸಂಸ್ಕಾರ ಬೇಕೆಂದೇ ಕಾಣುತ್ತೆ. ಹೇಳಿಲ್ಲವೇ ಕುಮಾರ ಸಂಭವದಲ್ಲಿ “ಪ್ರಪೇದಿರೇ ಪ್ರಾಕ್ತನ ಜನ್ಮ ವಿದ್ಯಾಃ ” ಎಂದು.
ರಂಗಯ್ಯ-ಭೇಷ್, ಕಮಲಮ್ಮಾ, ಚೆನ್ನಾಗಿ ಕಾವ್ಯದ ಸಾರವನ್ನು ಗ್ರಹಿಸಿದ್ದೀಯೆ. ನಿನ್ನ ಬುದ್ಧಿಯೂ ಚುರುಕಾಗಿದೆ. ಕಾವ್ಯಗಳನ್ನು ಕೇವಲ ಕಂಠಪಾಠ ಮಾಡುವವರಿಗೆ ಹೀಗೆ ಸಮಯಕ್ಕೆ ತಕ್ಕಂತೆ ಸ್ಪುರಿಸುವುದಿಲ್ಲ.
ವೀರಪ್ಪ- ನಮ್ಮ ರಂಗಯ್ಯನು ಮೆಚ್ಚಿಕೊಂಡ ಮೇಲೆ ನೀನು ನಿಜವಾಗಿಯೂ ಒಳ್ಳೆಯ ಬುದ್ದಿವಂತಳೂ ವಿದ್ಯಾವಂತಳೂ ಆಗಿರಲೇಬೇಕು. ನನಗೆ ತುಂಬಾ ಸಂತೋಷ.
ಭಾಗ್ಯಲಕ್ಷ್ಮಿ- ಬರೀ ಒಂದು ವಿದ್ಯೆಯಿದ್ದರೆ ಸಾಲದು. ಶಕ್ತಿ ಇರಬೇಕು. ಪರಾಕ್ರಮ ಇರಬೇಕು. ಅದೃಷ್ಟವಿರಬೇಕು.
ವೀರಪ್ಪ- (ಗೋಪಾಲನನ್ನು ಕುರಿತು) ನೀನು ಏನೇನು ಕಲಿತಿದ್ದೀಯ ಹುಡುಗಾ? ನಿಮ್ಮ ತಂದೆ ನಮಗೆಲ್ಲಾ ಬಹಳ ಬೇಕಾದವನು.
ಗೋಪಾಲ – ನಾನು ಓದುಬರಹ ಕಲಿಯಲಿಲ್ಲ ಸ್ವಾಮೀ. ಇವು ಬಿಟ್ಟು ನೋಟದಿಂದ, ಕೇಳುವಿಕೆಯಿಂದ, ಅನುಭವಿಸುವುದರಿಂದ, ಆಲೋಚಿಸುವುದರಿಂದ ಏನೇನು ಕಲಿಯುವುದಕ್ಕೆ ಸಾಧ್ಯವೋ ಅದೆಲ್ಲಾ ಕಲಿತುಕೊಳ್ಳುವುದಕ್ಕೆ ಪ್ರಯತ್ನ ಮಾಡಿದ್ದೇನೆ.
ಗವಿಯಪ್ಪ – ನಮ್ಮ ಗೋಪಾಲ ಅಂದರೆ ಬಲಭೀಮ. ಏನು ಇವನ ದೇಹಶಕ್ತಿ! ಅಲ್ಲದೆ ಓಡಿದರೆ ಗಾಳಿ ಬೀಸಿದ ಹಾಗೆಯೇ.
ವೀರಪ್ಪ – ಗೋಪಾಲಾ, ನೀನು ನಿಜವಾಗಿಯೂ ಈ ಕಾಲಕ್ಕೆ ಅದೃಷ್ಟವಂತ. ಓದು ಬರಹ ಯಾರಿಗೆ ಬೇಕು? ನೀನು ಬಲಿಷ್ಠನೂ ಸಾಹಸಿಯೂ ಆದರೆ ಸಾಕು. ಕಸರತ್ತು ಮಾಡಿದ್ದೀಯಾ ? ಬೇಟೆ ಆಡುವುದನ್ನು ಕಲಿತಿದ್ದೀಯಾ? ಕುದುರೆ ಸವಾರಿ ಗೊತ್ತಾ ನಿನಗೆ?
ಗೋಪಾಲ-ತಕ್ಕಮಟ್ಟಿಗೆ. ಆದರೆ ಅವುಗಳಿಗೆ ಪ್ರಾ ಮುಖ್ಯ ಕೊಡಲಿಲ್ಲ ನಾನು.
ವೀರಪ್ಪ- ಕತ್ತಿ ವರಸೆ ಕಲಿತಿದ್ದೀಯಾ ?
ಗೋಪಾಲ – ತಕ್ಕಮಟ್ಟಿಗೆ.
ವೀರಪ್ಪ, ಥಟ್ಟನೆ ತನ್ನ ಸಿಂಹಾಸನಕ್ಕೆ ಲಗತ್ತಿಸಿದ್ದ ಒರೆಯಿಂದ ಒಂದು ಭಾರಿ ಕತ್ತಿಯನ್ನು ಎಳೆದು ‘ಇದರಲ್ಲಿ ಕತ್ತಿ ವರಸೆ ತೋರಿಸು’ ಎಂದು ಗೋಪಾಲನಿಗೆ ತೋರಿಸಿದನು. ಗೋಪಾಲನು ತತ್ ಕ್ಷಣ ಎದ್ದು ತನ್ನ ಮೈ ಮೇಲಿನ ಅಂಗಿಯನ್ನು ಬಿಚ್ಚಿ ಕತ್ತಿಯನ್ನು ತೆಗೆದುಕೊಂಡು ಅವಲೀಲೆಯಾಗಿ ಅದನ್ನು ತಿರುವುತ್ತ ಕತ್ತಿ ವರಸೆಯನ್ನು ತೋರಿಸಿದನು. ವೀರಪ್ಪನೂ, ಭಾಗ್ಯಲಕ್ಷ್ಮಿಯೂ. ಅಲ್ಲಿದ್ದ ಸೈನಿಕರೂ, ತದಿತರರೂ, ಆತನ ದೇಹದ ಸೌಷ್ಟವಕ್ಕೂ, ಸ್ನಾಯು ಬಂಧಗಳಿಗೂ, ಶಕ್ತಿಗೂ, ಚಾಕಚಕ್ಯಕ್ಕೂ ಬೆರಗಾಗಿ ಮೆಚ್ಚಿಕೊಂಡರು.
ವೀರಪ್ಪನು ಗೋಪಾಲನಿಗೆ ಸೈನ್ಯಕ್ಕೆ ಸೇರುವುದು ಬಹಳ ಒಳ್ಳೆಯದೆಂದೂ, ಆತನ ಭವಿಷ್ಯವು ಅದರಿಂದ ಬೆಳಗುವುದೆಂದೂ ಉಪದೇಶಿಸಿದನು. ಭಾಗ್ಯಲಕ್ಷ್ಮಿಯು ಪ್ರಾರ್ಥನಾ ಧೋರಣೆಯಿಂದ ಗೋಪಾಲನಿಗೆ “ಸೈನ್ಯಕ್ಕೆ ಸೇರು, ಗೋಪಾಲಾ,” ಎಂದು ಹೇಳಿದಳು. ಗೋಪಾಲನು ಸುಮ್ಮನಿದ್ದನು. ಗವಿಯಪ್ಪ, “ಗೋಪಾಲನು ಸೈನ್ಯಕ್ಕೆ ಸೇರುವುದು ರಾಮಕ್ಕನಿಗೆ ಇಷ್ಟವಿಲ್ಲ. ಸ್ವಾಮೀ, ಅವನ ತಂದೆಯ ವೃತ್ತಿಯಾದ ಕೊಡೆ ಹಿಡಿಯುವುದನ್ನೇ ಇವನು ಮಾಡಬೇಕೆಂದು ಅವಳ ಇಚ್ಛೆ. ಆ ವೃತ್ತಿಗೆ ಕೊಟ್ಟಿರುವ ಮಾನ್ಯದಿಂದ ಇವರಿಗೆ ಜೀವನ ನಡೆಯುತ್ತೆ. ಅವರಿಗೆ ಅದಕ್ಕಿಂತಲೂ ಹೆಚ್ಚು ಬೇಕೆಂಬ ಆಸೆ ಇಲ್ಲ. ಇನ್ನು ಐದಾರು ದಿನಗಳಲ್ಲಿ ಇವನಿಗೆ ಇಪ್ಪತ್ತು ವರ್ಷ ತುಂಬುವುದು. ಕೂಡಲೇ ಇವನು ತನ್ನ ತಂದೆಯ ವೃತ್ತಿಗೆ ಸೇರಬೇಕು. ಆದ್ದರಿಂದ ಮುಂಚಿತವಾಗಿ ಸ್ವಾಮಿಯ ದರ್ಶನ ಮಾಡಿಕೊಂಡು ಸ್ವಾಮಿಯ ಆಶೀರ್ವಾದ ತೆಗೆದುಕೊಂಡು ಹೋಗಲಿ ಎಂದೇ ನಾನು ಈತನನ್ನು ಈಗ ಇಲ್ಲಿಗೆ ಕರೆತಂದದ್ದು.
ವೀರಪ್ಪ- ಸರಿಯೇ, ಅವರವರ ಇಷ್ಟ ಹೇಗಿದ್ದರೆ ಹಾಗೆ ಆಗಲಿ. ಗವಿಯಪ್ಪನ ಪ್ರೇರಣೆಯಿ೦ದ ಗೋಪಾಲನು ವೀರಪ್ಪನಿಗೆ ನಮಸ್ಕಾರ ಮಾಡಿದನು. ವೀರಪ್ಪನು ಆಶೀರ್ವಾದ ಮಾಡಿದನು.
ಎಲ್ಲರೂ ವೀರಪ್ಪನ ಅನುಮತಿ ಪಡೆದು ಹೊರಡಲು ಸಿದ್ದವಾದರು. ವೀರಪ್ಪನು ಬಂದವರಿಗೆಲ್ಲ ಸೈನಿಕರಿಂದ ತರಿಸಿ ಭಾಗ್ಯಲಕ್ಷ್ಮಿಯಿಂದ ಫಲ ತಾಂಬೂಲಗಳನ್ನು ಕೊಡಿಸಿದನು. ಭಾಗ್ಯಲಕ್ಷ್ಮಿ ಕಮಲಮ್ಮನಿಗೆ ಅರಿಸಿನ ಕುಂಕುಮಗಳನ್ನೂ ಕೊಟ್ಟಳು.
