ದಿII ಲಂಕಾ ಕೃಷ್ಣಮೂರ್ತಿಯವರ ಹೃತ್ಪೂರ್ವಕ ನೆನಪು
– ಪಾರ್ವತಿ ಶ್ರೀಕಂಠಶಾಸ್ತ್ರಿ
(ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ದಿ ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ)
ಕೋಟಿ ಕೋಟಿಗೊಬ್ಬರಾದ ಸುಪೂಜ್ಯ ಮಾನ್ಯ ದಿII ಲಂಕಾ ಕೃಷ್ಣಮೂರ್ತಿಯವರ ಬಗ್ಗೆ ಎಷ್ಟು ಒಳ್ಳೆಯ ವಿಚಾರಗಳನ್ನು ನೆನೆಸಿಕೊಂಡರೂ ಅದು ಕಡಿಮೆಯೇ. ಗುರುಹಿರಿಯರನ್ನು ಪ್ರೀತಿ, ಗೌರವ, ಭಕ್ತಿ, ಹಿರಿಕಿರಿಯರೆಲ್ಲರಲ್ಲೂ ಸೇವಾಮನೋಭಾವ, ಪ್ರೀತಿ ವಿಶ್ವಾಸಗಳನ್ನೊಳಗೊಂಡ ಆ ದಿವ್ಯಚೇತನ ನಮಗೆ ಇಲ್ಲವಾದದ್ದು ನಮ್ಮ ದುರಾದೃಷ್ಟವೇ ಸರಿ. ಇಂಥಹ ಕ್ಷೇತ್ರದಲ್ಲಿ ಅವರ ಅತ್ಯುತ್ಕೃಷ್ಟ ಸೇವೆ ಇಲ್ಲವೆಂಬುದಿಲ್ಲ.
ಉಜ್ವಲ ರಾಷ್ಟಭಕ್ತಿ, ಸಮಾಜಪ್ರೇಮ, ಕಲಾಭಿಮಾನ, ಸಾಹಿತ್ಯಾಭಿಮಾನ ಅವರಲ್ಲಿದ್ದವು. ಅತ್ಯುನ್ನತವಾದ ಸರ್ಕಾರಿ ಹುದ್ದೆಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸಮಾಡಿ ನಿವೃತ್ತಿ ಹೊಂದಿದ್ದ ಧೀರ ವ್ಯಕ್ತಿತ್ವ ಅವರದು.
ಸ್ವತಃ ಸಾಹಿತಿಯೂ, ಕಲಾಕಾರರೂ ಆಗಿ ಕ್ಷೇತ್ರಗಳಲ್ಲಿ ಅಮೋಘ ಸೇವೆಗೈದಂತ ಹೆಮ್ಮೆಯ ಭಾರತಪುತ್ರ ನಮ್ಮ ಲಂಕಾ ಕೃಷ್ಣಮೂರ್ತಿಯವರು.
ನಮಗೂ ಅವರಿಗೂ ದೂರದ ಬಂಧುತ್ವ. ಒಮ್ಮೆ ನನ್ನ ತಾಯಿಯೊಂದಿಗೆ ಅವರ ಮನೆಗೆ ಹೋಗಿ, ಅವರ ಪ್ರೀತಿ, ವಿಶ್ವಾಸ, ಕಾಫಿ, ತಿಂಡಿ ಎಲ್ಲದರ ಸವಿಯುಂಡು ವಾಪಸ್ ಹೊರಟು ಬಸ್ ಸ್ಟ್ಯಾಂಡ್ ಗೆ ತೆರಳಿದೆವು. ಆತ್ಮೀಯತೆಯಿಂದ ಅವರು ಬೀಳ್ಕೊಟ್ಟರು. ಬಸ್ ಬರುವ ವೇಳೆಯಾಯಿತು. ನೋಡುತ್ತೇನೆ. ಕಾಲಲ್ಲಿ ಚಪ್ಪಲಿ ಇಲ್ಲ. ಅವರ ಮನೆಯಲ್ಲಿ ಮರೆತು ಬಂದಿರುವೆ. ಎದುರಿಗೆ ನೋಡಿದರೆ ಆ ದಿವ್ಯಚೇತನ, ದೇವತಾಮನುಷ್ಯ ಚಪ್ಪಲಿಗಳನ್ನು ಬುಸ್ ಸ್ಟ್ಯಾಂಡಿಗೆ ತಂದಿದ್ದಾರೆ. ಹಠಾತ್ ಅದನ್ನು ಕಂಡು ನನಗೆ ನನ್ನ ಬಗ್ಗೆಯೇ ಬಹಳ ಬೇಸರವೂ ದುಃಖವೂ ಉಂಟಾಯಿತು.
ಅಳುಬಂತು. ನನಗೆ ಅವರೇ ಸಮಾಧಾನ ಹೇಳಿದರು.
ಮಹಾತ್ಮಾ ಗಾಂಧಿಯವರಲ್ಲಿದ್ದ ಅಮೋಘವಾದ ಸೇವಾಮನೋಭಾವ, ಅವರು ಮಾಡುತ್ತಿದ್ದ ಕೆಲಸಗಳು ಇವುಗಳನ್ನು ಓದಿ ತಿಳಿದಿದ್ದ ನನಗೆ ಇನ್ನೊಬ್ಬ ಮಹಾತ್ಮನನ್ನು ಕಣ್ಣಾರೆ ಕಂಡು ಮಾತನಾಡಿಸಿ ಅವರೊಡನೆ ಅವರ ಅಮೂಲ್ಯ ವೇಳೆಯನ್ನು ಸ್ವಲ್ಪ ಕಾಲ ಹಂಚಿಕೊಂಡ ನನಗೆ ಅವರ ಸಾಮೀಪ್ಯವೇ ಅತ್ಯಂತ ಸಂತಸದ ಕ್ಷಣವಾಯಿತು.
ಧೀಮಂತ ವ್ಯಕ್ತಿತ್ವದ ಅಪರೂಪದ ಚೇತನ ಲಂಕಾ ಕೃಷ್ಣಮೂರ್ತಿಯವರು ಅಮರರು. ಸಕಲರಿಗೂ ಆದರ್ಶಪ್ರಾಯರು. ಆ ದಿವ್ಯ ಚೇತನಕ್ಕೆ ನಮ್ಮ ಅನಂತಾನಂತ ನಮನಗಳು.
Leave a Reply