December 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 11
ಗಾಂಧೀ ಜಯಂತಿ
(ದಿನಾಂಕ 1 – 11- 1996 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಅಕ್ಟೋಬರ್ 2 ನೇ ತಾರೀಖು ಗಾಂಧೀ ಜಯಂತಿ ಆದುದರಿಂದ ರಜಾದಿನವಾಗಿತ್ತು. ಆದರೆ ಆದಿನ ಗಾಂಧೀಜೀಯನ್ನು ನೆನೆಸಿಕೊಂಡವರು ಬಹಳ ವಿರಳ. ವಯಸ್ಸಾದವರಿಗೆ ಗಾಂಧೀಜಿಯನ್ನು ಕುರಿತು ಸ್ವಲ್ಪ ತಿಳಿದಿದೆಯೇ ಹೊರತು ಸಣ್ಣ ವಯಸ್ಸಿನವರಿಗೆ ಅವರ ವಿಷಯ ಏನೂ ಗೊತ್ತಿಲ್ಲವೆಂದೇ ಹೇಳಬೇಕು. ಗಾಂಧೀಜಿಯವರು ಪ್ರಪಂಚದಲ್ಲೇ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರು ಅನುಸರಿಸುತ್ತಿದ್ದ ಸತ್ಯ, ಅಹಿಂಸೆ, ಅಸ್ಪೃಶ್ಯತೆಯ ವಿರೋಧ, ಮತ ಸಾಮರಸ್ಯ, ಭೂತದಯೆ ಇತ್ಯಾದಿ ಗುಣಗಳನ್ನು ಎಷ್ಟು ಹೊಗಳಿದರೂ ಸಾಲದು. ಅಂತಹ ಮಹಾತ್ಮರ ದಿನಾಚರಣೆಯಂದು ಅವರನ್ನು ಕುರಿತ ಪ್ರಚಾರ ಅತ್ಯಲ್ಪವಾಗಿ ನಡೆದುದು ಶೋಚನೀಯ.
ಈವತ್ತಿನ ರಾಜಕಾರಣಿಗಳ ವಿಷಯವಾಗಿ ಕೋರ್ಟುಗಳಲ್ಲಿ ದಾಖಲಾದ ಕೇಸುಗಳನ್ನು ನೋಡಿದರೆ ಮಹಾತ್ಮಾ ಗಾಂಧಿ ಅವರ ಕಾಲಕ್ಕೂ ಈಗಿನ ಕಾಲಕ್ಕೂ ರಾಜಕಾರಣಿಗಳಲ್ಲಿ ಅಜಗಜಾಂತರ ವ್ಯತ್ಯಾಸವುಂಟಾಗಿದೆ. ಸತ್ಯ ಧರ್ಮಗಳು ಎಲ್ಲಿ ನೋಡಿದರೂ ಹೀನ ಸ್ಥಿತಿಯನ್ನು ಹೊಂದಿದೆ. ದೂರದರ್ಶನದಲ್ಲಿ ಬರುವ ಕಥೆಗಳನ್ನು ನೋಡಿದರೆ ಗಾಂಧೀಜಿಯ ಮಾರ್ಗಕ್ಕೆ ತುಂಬಾ ವಿರೋಧವಾಗಿರುವುದೇ ಹೆಚ್ಚಾಗಿ ಬರುತ್ತಿವೆ. ಬಲಿಷ್ಠರಲ್ಲಿ ಎಲ್ಲಿ ನೋಡಿದರೂ ಸತ್ಯ ಧರ್ಮಗಳು ಹೀನ ಸ್ಥಿತಿಗೆ ಬಂದಿವೆ.
ಜ್ಞಾನಿಗಳು ಈಗಲಾದರೂ ಮತ ವೈಷಮ್ಯಗಳನ್ನು ತೊರೆದು ಎಲ್ಲ ಮತಗಳಲ್ಲಿರುವ ಒಳ್ಳೆಯ ವಿಷಯಗಳಿಗೆ ಪ್ರಾಧಾನ್ಯ ಕೊಟ್ಟು ಪ್ರಚಾರಮಾಡಬೇಕಾದುದು ಅತ್ಯವಶ್ಯಕವಾಗಿದೆ. ಗಾಂಧೀಜಿ ಅವರು ಹಾಗೆ ಮಾಡುತ್ತಿದ್ದರು. ಅವರನ್ನು ಕುರಿತು ಈ ದಿನ ಪ್ರಚಾರ ನಡೆಸಬೇಕಾದುದು ಸರ್ಕಾರದ ಕರ್ತವ್ಯ. ಹೀಗೆ ಮಾಡದಿದ್ದರೆ ನಮ್ಮ ದೇಶದ ನೈತಿಕ ಪರಿಸ್ಥಿತಿ ಇನ್ನೂ ಕೆಟ್ಟು ಹೋಗುವುದು ಖಂಡಿತ. ಅದರಿಂದ ರಾಜಕಾರಣಿಗಳಲ್ಲಿ ಜಗಳಗಳೂ, ಸಾಮಾನ್ಯ ಜನರಲ್ಲಿ ನೈತಿಕ ಮಟ್ಟದ ಹೀನಸ್ಥಿತಿಯು ಉಂಟಾಗಿ ನಮ್ಮ ದೇಶದ ಪರಿಸ್ಥಿತಿ ಇನ್ನೂ ಕೆಟ್ಟುಹೋಗುತ್ತದೆ.
- ಲಂಕಾ ಕೃಷ್ಣಮೂರ್ತಿ