ತತ್ವದಲ್ಲಿ ವಿಜ್ಞಾನದ ಮತ್ತು ಕಲೆಯ ಅಂಶಗಳು(ದಿನಾಂಕ 1 – 10- 1996 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ
ಕೃಷ್ಣಮೂರ್ತಿಯವರ ಲೇಖನ)
ಮಾನವನ ಮನಸ್ತತ್ತ್ವದಲ್ಲಿ ವೈಜ್ಞಾನಿಕ ದೃಷ್ಟಿಕೋನವೂಕಲೆಯ ದೃಷ್ಟಿಕೋನವೂ ಎರಡೂ ಸೇರಿವೆ.
ಈ ದೃಷ್ಟಿಯಿಂದ ವಿವಿಧ ಮತಗಳಿಂದ ತತ್ತ್ವಗಳನ್ನು ನಾವು ಗಮನಿಸಬೇಕೇ ಹೊರತು ಇವುಗಳಲ್ಲಿ ಯಾವುದಾದರೊಂದು ದೃಷ್ಟಿಕೋನದಿಂದ ಮಾತ್ರ ಗಮನಿಸಬಾರದು. ಇಂದಿನ ವಿಜ್ಞಾನ ಯುಗದಲ್ಲಿ ವಿಜ್ಞಾನವು ಈ ಸಮಸ್ತ ವಿಶ್ವದ ಹಿನ್ನೆಲೆಯಲ್ಲಿ ಒಂದು ಚೈತನ್ಯವಿರುವುದನ್ನು ದೃಢಪಡಿಸುತ್ತದೆ. ಈ ಚೈತನ್ಯವನ್ನು ಪರಮಾತ್ಮನೆಂದು ಹೇಳಿದರೂ ಒಂದೇ. ದೇವರೆಂದು ಹೇಳಿದರೂ ಒಂದೇ. ಅಲ್ಲಾ ಎಂದು ಹೇಳಿದರೂ ಒಂದೇ. ಭಿನ್ನ ಭಿನ್ನ ಮತಗಳು ಬೇರೆ ಬೇರೆ ರೀತಿಯಲ್ಲಿ ವರ್ಣಿಸಿದ್ದರೂ ಭೇದಗಳು ಕಲೆಯ ದೃಷ್ಟಿಯಿಂದ ಬಂದಿವೆಯೇ ಹೊರತು ವೈಜ್ಞಾನಿಕ ದೃಷ್ಟಿಯಿಂದಲ್ಲ. ಕಲೆಯ ದೃಷ್ಟಿಯಿಂದ ನಾವು ನೋಡಿದರೆ ಭಿನ್ನ ಭಿನ್ನ ಮತಗಳಲ್ಲಿ ದೇವರ ವಿಷಯದಲ್ಲಿ ಭಿನ್ನಭಿನ್ನವಾಗಿ ಮಾಡಿರುವ ವರ್ಣನೆಗಳೆಲ್ಲವನ್ನೂ ನಾವು ತಿಳಿದು ಆನಂದಿಸಲು ಸಾಧ್ಯವಾಗಿದೆ. ಸಾಕಾರವಾದ ದೇವರನ್ನು ಆರಾಧಿಸುವ ಪದ್ಧತಿಗಳನ್ನು ಈ ಕಲಾದೃಷ್ಟಿಯಿಂದ ನಾವು ನೋಡಿ ಆನಂದಿಸಬೇಕು. ನಿರಾಕಾರನಾದ ದೇವರ ವಿಷಯವಾಗಿ ವೈಜ್ಞಾನಿಕ ದೃಷ್ಟಿಯಿಂದ ನೋಡಿ ಆನಂದಿಸಲು ಅವಕಾಶವಿದೆ. ಈ ದೃಷ್ಟಿಕೋನದಿಂದ ಇಂದಿನ ವಿಜ್ಞಾನಯುಗದಲ್ಲಿ ಮಾನವರೆಲ್ಲರೂ ಭಿನ್ನಭಿನ್ನ ಮತಗಳಲ್ಲಿ ಹೇಳಿರುವ ವಿಷಯಗಳನ್ನು ನೋಡಿ ಆನಂದಿಸಿ ಭೇದಭಾವವನ್ನು ಬಿಡಬೇಕಾಗಿದೆ. ಇದೇ ಸರಿಯಾದ ಜ್ಞಾನ. ಭೇದಭಾವದಿಂದ ಮತವೈಷಮ್ಯಗಳನ್ನು ಪ್ರೋತ್ಸಾಹಮಾಡುವುದು ಅಜ್ಞಾನ. ಎಲ್ಲಾ ಮಾನವರೂ ಒಬ್ಬನೇ ದೇವರ ಮಕ್ಕಳಾಗಿರುವುದರಿಂದ ಭೇದಭಾವವನ್ನು ಬಿಟ್ಟು ಏಕತ್ವದಲ್ಲಿ ವಿಜ್ಞಾನವನ್ನೂ ಭೇದದಲ್ಲಿ ಕಲೆಯನ್ನೂ ನೋಡಿ ಆನಂದಿಸಬೇಕಾಗಿದೆಯಲ್ಲವೇ?