ಭಾರತೀಯ ಸಂಸ್ಕೃತಿ
(ದಿ. 1-10-1991 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಪ್ರಶ್ನೆ:- ತಮ್ಮ ಜುಲೈ ತಿಂಗಳ ಸಂಚಿಕೆಯಲ್ಲಿ ಸಂಪಾದಕೀಯನ್ನು ಬರೆಯುತ್ತ “ಬಹು ಸಂಖ್ಯಾತರಾದ ಸಜ್ಜನರು ಕಾಲ ದೇಶಗಳಿಗೆ ಮೀರಿದ ಭಾರತೀಯ ಸಂಸ್ಕೃತಿಯನ್ನು ಬೆಳೆಸುವುದೇ ಇದಕ್ಕೆ ನಿವಾರಣೋಪಾಯ”. ಎಂಬುದಾಗಿ ತಿಳಿಸಿದ್ದೀರಿ. ತಾವು ಬರೆದಿರುವ ವಾಕ್ಯದ ವ್ಯಾಖ್ಯಾನವನ್ನು ಬರೆದು ತಿಳಿಸಿದರೆ ಬಹಳ ಒಳ್ಳೆಯದು.
ಉತ್ತರ:- ಸಂಪಾದಕೀಯದಲ್ಲಿ ಸಂಸ್ಕೃತಿಯು ಬಾಹ್ಯವಸ್ತುಗಳಿಗಾಗಲಿ, ಸ್ಥೂಲ ಶರೀರಕ್ಕಾಗಲಿ ಸೇರಿದ್ದಲ್ಲವೆಂಬ ವಿಶಯವೂ ಮತ್ತು ಅದು ಸೂಕ್ಷ್ಮಶರೀರಕ್ಕೆ ಸೇರಿದ ಮನಸ್ಸಿಗೂ ಕಾರಣ ಶರೀರಕ್ಕೆ ಸೇರಿದ ಒಳ್ಳೆಯ ಮತ್ತು ಕೆಟ್ಟ ವಾಸನೆಗಳಿಗೂ ಸಂಬಂಧಿಸಿರುವುದೆಂಬ ವಿಷಯವೂ ಪ್ರತಿಪಾದಿತವಾಗಿದೆ. ಇದು ಸೂಕ್ಷ್ಮ ತತ್ವಕ್ಕೆ ಸೇರಿರುವುದರಿಂದ ದೇಶ ಕಾಲಗಳಿಗೆ ಮೀರಿರುತ್ತದೆ. ಇದು ಸುಸಂಸ್ಕೃತಿ ಆದರೆ ಅದು ಸ್ಥೂಲ ರೂಪದಲ್ಲಿ ವ್ಯವಹಾರದಲ್ಲಿ ದೇಶ ಕಾಲ ಪರಿಸ್ಥಿತಿಗಳನ್ನನುಸರಿಸಿ ಅವುಗಳಿಗೆ ತಕ್ಕ ಲೋಕೋಪಕರವಾದ ಮತ್ತು ಆತ್ಮೋದ್ಧಾರಕವಾದ ಒಳ್ಳೆಯ ಧರ್ಮಾಚರಣೆಗಳ ರೂಪದಲ್ಲಿ ಪ್ರತಿಬಿಂಬವಾಗುತ್ತದೆ. ಕೆಟ್ಟ ಸಂಸ್ಕೃತಿ ಆದರೆ ತದ್ವಿರುದ್ಧವಾದ ಪರಿಣಾಮವಾಗುತ್ತದೆ. ಏನೂ ಹೇಳದೆ ಬರೀ ಸಂಸ್ಕೃತಿ ಎಂದು ಹೇಳಿದರೆ ಸುಸಂಸ್ಕೃತಿ ಎಂದು ಅರ್ಥ. ಭಾರತೀಯ ಸಂಸ್ಕೃತಿ ಎಂದರೆ ಭಾರತೀಯ ಧರ್ಮಗ್ರಂಥಗಳಲ್ಲಿ ಹೇಳಿರುವ ಧರ್ಮವೇ ಮೂಲಭೂತವಾದ ಸುಸಂಸ್ಕೃತಿ ಎಂದು ಅರ್ಥ. ಇದು ಸೂಕ್ಷ್ಮ ಮತ್ತು ಕಾರಣ ಶರೀರಕ್ಕೆ ಸಂಬಂಧಿಸಿರುವುದರಿಂದ ಕಾಲ ದೇಶಗಳಿಗೆ ಮೀರಿರುವುದು. ಭಾರತೀಯ ಸಂಸ್ಕೃತಿಯು ಅತಿ ಪ್ರಾಚೀನವಾಗಿರುವುದರಿಂದಲೂ, ಅನ್ಯ ದೇಶಗಳಲ್ಲಿನ ಮತಧರ್ಮಗಳಂತೆ ಯಾರೋ ಒಬ್ಬ ಪ್ರವಾದಿಗಳ ಮತವಲ್ಲದೆ ಅನೇಕ ಋಷಿಗಳ ಅಭಿಪ್ರಾಯಗಳನ್ನು ಆಧರಿರುವುದರಿಂದಲೂ, ಇಲ್ಲಿ ದೇಶ ಕಾಲ ಪರಿಸ್ಥಿತಿಗಳನ್ನನುಸರಿಸಿ ಬಾಹ್ಯ ಸ್ವರೂಪಕ್ಕೆ ನಾನಾ ರೂಪಗಳನ್ನು ಅಂಗೀಕರಿಸ್ರುವುದರಿಂದಲೂ ಇದು ಸರ್ವ ದೇಶ ಸರ್ವ ಕಾಲಗಳಿಗೆ ಸುಲಭವಾಗಿ ಅನ್ವಯವಾಗುತ್ತದೆ. ಆದುದರಿಂದ ಇದನ್ನು ಇಲ್ಲಿ ಮಾದರಿಯಾಗಿ ತೆಗೆದುಕೊಳ್ಳಲಾಗಿದೆ.
– ಲಂಕಾ ಕೃಷ್ಣಮೂರ್ತಿ