(ದಿನಾಂಕ 1-5-1995 ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದ ಲೇಖನ)
ಬೀದಿ ಹುಡುಗರು
ದಿನಾಂಕ 7-4-95ರ ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ 3 ನೇ ಪುಟದಲ್ಲಿ ಪ್ರಕಟವಾದ ವೆಂಕಟೇಶ್ ಎಂಬ ಒಬ್ಬ ಬೀದಿ ಹುಡುಗನ ಕರುಣಾಜನಕ ಚರಿತ್ರೆಯನ್ನು ಓದುಗರೆಲ್ಲರೂ ಓದಿರಬಹುದು, ಮೂರು ವರ್ಷಗಳ ಹಿಂದೆ ಕಟುಕರಾದ ಆತನ ತಂದೆತಾಯಿಗಳು ಅತನನ್ನು ಮನೆಯಿಂದ ಓಡಿಸಿದ ಕಾರಣ ಆತನು ಬೀದಿಪಾಲಾದನು. ಚಿಂದಿ ಬಟ್ಟೆಗಳ ಸಂಗ್ರಹ ಮಾಡುತ್ತ ಅವನು ಜೀವನ ನಡೆಸುತ್ತಿರಲು ಒಂದು ರಾತ್ರಿ ಪೋಲೀಸಿನವರು ಆತನನ್ನು ಠಾಣೆಗೆ ಎಳೆದುಕೊಂಡು ಹೋಗಿ ಆತನ ಸೊಂಟಕ್ಕೆ ಒಂದು ಭಾರವಾದ ಇಟ್ಟಿಗೆಯನ್ನು ಕಟ್ಟಿ ಅದರೊಂದಿಗೆ ಅವನು ಅನೇಕ ಸಲ ಠಾಣೆಯನ್ನು ಸುತ್ತು ಹಾಗುವಂತೆ ಮಾಡಿದರು. ಆಗ ತನ್ನ ಭಾರ ಹೋರಲಾರದೆ ಕುಂಟುತ್ತಿದ್ದರೂ, ಅಳುತ್ತಿದ್ದರೂ ಬಿಡಲಿಲ್ಲ. ಯಾವ ತಪ್ಪನ್ನೂ ಮಾಡದ ಅತನಿಗೆ ಪೊಲೀಸರು ಏಕೆ ಈ ಕಷ್ಟವನ್ನು ಕೊಟ್ಟರು ಎಂಬದೇ ಅರ್ಥವಾಗಲಿಲ್ಲ. ಈ ವಿಷಯವನ್ನಾತನು ಯಾವ ಆವೇಶವೂ ಇಲ್ಲದೆ ವೈ.ಎಂ. ಸಿ.ಎ. ಅವರು ಬೀದಿಯ ಹುಡುಗರನ್ನು ಕುರಿತು ಏರ್ಪಡಿಸಿದ್ದ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಕಟಿಸಿದನು ಎಂಬ ವಾರ್ತೆ ಜನರಿಗೆ ಕಣ್ಣು ತೆರಿಸುವಂತಹುದಾಗಿದೆ.
“ದಯೆಯಿಲ್ಲದ ಧರ್ಮವದಾವುದಯ್ಯಾ, ದಯವೇ ಧರ್ಮದ ಮೂಲವಯ್ಯಾ” ಎಂಬ ಬಸವಣ್ಣನವರ ವಚನಾಮೃತವನ್ನು ಇಲ್ಲಿ ಎಲ್ಲರೂ ನೆನೆಯಬೇಕಾಗಿದೆ. ಈ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗುತ್ತಿರುವ ಸಂಸ್ಥೆಯ ಚಿಹ್ನೆಯಲ್ಲಿನ ಮೂರನೆಯ ‘ದ’ ಕಾರವು ಸಹ ದಯೆಯನ್ನು ಸೂಚಿಸುತ್ತದೆ. ಧರ್ಮದ ಹೆಸರಿನಲ್ಲಿ ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು ಒಂದು ಕಡೆ ಬೆಳೆಯುತ್ತ ಇನ್ನೊಂದು ಕಡೆ ನಿರ್ಗತಿಕರಾದ ಬೀದಿ ಹುಡುಗರ ಸಂಖ್ಯೆ ಬೆಳೆಯುತ್ತಿದ್ದರೆ ಸಮಾಜದಲ್ಲಿ ಧರ್ಮದ ವಿಷಯವಾದ ನಿಜವಾದ ತಿಳುವಳಿಕೆ ಇಲ್ಲವೆಂದೇ ಹೇಳಬೇಕಾಗಿದೆ. ಪ್ರಭುತ್ವವು ಸಹ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲವೆಂದೇ ಹೇಳಬೇಕಾಗಿದೆ. ಜಾತಿ, ಮತ, ಅಂತಸ್ತು ಮುಂತಾದ ಎಲ್ಲ ಭೇದಭಾವಗಳನ್ನೂ ಬದಿಗಿಟ್ಟು ಸಹಾನುಭೂತಿ, ಔದಾರ್ಯ, ಕನಿಕರದಿಂದ ಕೂಡಿದ ಸಮಸ್ತ ಜನರೆಲ್ಲರೂ ಆ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಮುಂದೆ ಬರಬೇಕಾಗಿದೆ. ಅಲ್ಲದೆ ಈ ಒಂದು ವರ್ಗದ ಬಾಲಕ-ಬಾಲಕಿಯರಿಗೆ ಅನಿವಾರ್ಯ ಸಿದ್ಧಾಂತವೆಂದು ಮಾನವೀಯ ಹಕ್ಕು ರಕ್ಷಣೆಗೆ ಶ್ರಮಿಸ ಬೇಕಾಗಿದೆ. ಅನಗತ್ಯ ಅಮುಖ್ಯ ವಿಚಾರಗಳನ್ನು ವೃಥಾ ಹುಟ್ಟು ಹಾಕುವುದಕ್ಕೆ ಪ್ರಯತ್ನಿಸಬಾರದು. ಅಮಾನವೀಯ ಶಿಕ್ಷೆ ಯಾರಿಗೂ ಯಾವಾಗ್ಯೂ ಸಲ್ಲದು.
ಮನುಸ್ಮೃತಿಯಲ್ಲಿನ ಮುಂದಿನ ಎರಡು ಶ್ಲೋಕಗಳ ಸಾರಾಂಶವನ್ನು ಪ್ರಭುತ್ವವು ಗಮನಿಸಬೇಕಾಗಿದೆ:-
ನ ಮಾತಾ ನ ಪಿತಾ ನಸ್ತ್ರೀ ನಪುತ್ರಸ್ತ್ಯಾಗಮರ್ಹತಿ |
ತ್ಯಜನ್ನಪತಿತಾನ್ ರಾಜ್ಞಾದಂಡ್ಯಃ ಶತಾನಿ ಷಟ್ ||
ತಾಯಿ, ತಂದೆ, ಹೆಂಡತಿ, ಮಕ್ಕಳು ಇವರನ್ನು ಯಾರೂ ಮನೆಯಿಂದ ಓಡಿಸಿ ಬೀದಿಪಾಲು ಮಾಡಬಾರದು, ನೀತಿಬಾಹ್ಯರಲ್ಲದ ಇವರನ್ನೂ ಪೋಷಣೆ ಮಾಡದೆ ಓಡಿಸಿ ಬೀದಿಪಾಲು ಮಾಡಿದವನನ್ನು ರಾಜನು ಆರುನೂರು ಪಣಗಳ ದಂಡನೆ ವಿಧಿಸಿ ಶಿಕ್ಷಿಸಬೇಕು.
ಶ್ರೋತ್ರಿಯಂ ವ್ಯಾಧಿತಾರ್ತೌಚ ಬಾಲವೃದ್ಧಾವ ಕಿಂಚನಂ |
ಮಹಾ ಕುಲೀನಮಾರ್ಯಂಚ ರಾಜಾ ಸಂಪೂಜಯೇತ್ಸದಾ ||
ನಿಜವಾದ ಜ್ಞಾನಿಯನ್ನು, ರೋಗಿಯನ್ನು, ಕಷ್ಟದಲ್ಲಿರುವವನನ್ನು, ಬಾಲಕನನ್ನು, ಮುದುಕನನ್ನು, ದರಿದ್ರನನ್ನು, ಒಂದು ವೃತ್ತಿಯನ್ನು ಚೆನ್ನಾಗಿ ಪೋಷಿಸು ತ್ತಿರುವವನನ್ನೂ ರಾಜನು ಯಾವಾಗಲೂ ಗೌರವಿಸಿ ಅವನಿಗೆ ಸಹಾಯ ಮಾಡುತ್ತಿರಬೇಕು.
ಲಂಕಾ ಕೃಷ್ಣಮೂರ್ತಿ
ಸಹಾಯಕ ಸಂಪಾದಕ
