ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 13
ವೇದಕಾಲದಲ್ಲಿ ಸ್ತ್ರೀಯರ ಅಂತಸ್ತು (ದಿನಾಂಕ 1 – 9- 1996 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಶತಪತ ಬ್ರಾಹ್ಮಣರಲ್ಲಿ ಗಾರ್ಗಿ ಮುಂತಾದ ಸ್ತ್ರೀಯರು ವೇದಗಳನ್ನು ಅಧ್ಯಯನ ಮಾಡಿ ವಿದುಷೀಮಣಿಗಳಾಗಿ ವೇದಮಂತ್ರ ದೃಷ್ಟಾರರೂ ಆಗಿದ್ದರೆಂದು ಉಲ್ಲೇಖವಿದೆ. ಋಗ್ವೇದದಲ್ಲಿ (1-164 -41) ಸಾಂಗೋಪಾಂಗವಾಗಿ ವೇದಗಳನ್ನು ಓದಿ ಓದಿಸುವ ಸ್ತ್ರೀಯರು ಸಮಸ್ತ ಮಾನವ ಕಲ್ಯಾಣ ಮಾಡುತ್ತಾರೆಂದು ಹೇಳಿದೆ. ಯಜುರ್ವೇದದಲ್ಲಿ (37-4) ಸ್ತ್ರೀಯರು ವಿದುಷಿಗಳಾಗದ ಹೊರತು ಉತ್ತಮ ವಿದ್ಯೆಯು ವೃದ್ಧಿ ಹೊಂದಲಾರದು ಎಂದು ಹೇಳಿದೆ. ಯಜುರ್ವೇದದಲ್ಲಿ (6-14) ಗುರುಗಳೂ, ಗುರುಪತ್ನಿಯರೂ, ವೇದವೇದಾಂತಗಳನ್ನು ಸಮಸ್ತ ಯುವಕ ಯುವತಿಯರಿಗೆ ಬೋಧಿಸಿ ಅವರಲ್ಲಿ ಒಳ್ಳೆಯ ಗುಣಕರ್ಮ ಸ್ವಬಾವಗಳನ್ನು ವೃದ್ಧಿಪಡಿಸಬೇಕೆಂದು ಹೇಳಿದೆ. (ವೇದತರಂಗ ಮಾಸ ಪತ್ರಿಕೆಯ ಜೂನ್ 96ರ ಸಂಚಿಕೆಯಲ್ಲಿ ಸಂಧ್ಯಾವಂದನಂ ಲಕ್ಷ್ಮೀದೇವಿಯವರು ಬರೆದಿರುವ ಲೇಖನದಿಂದ ಮೇಲ್ಕಂಡ ವಿಷಯಗಳನ್ನು ಗ್ರಹಿಸಿರುತ್ತೇನೆ.)
ವೇದಗಳ ತರುವಾಯ ಬಂದ ಸ್ಮೃತಿಗಳಲ್ಲಿ ಮನುಸ್ಮೃತಿಯು ಅತ್ಯಂತ ಶ್ರೇಷ್ಠವಾದುದು. ಸ್ಮೃತಿಗಳು ವೇದಗಳಲ್ಲಿ ಹೇಳಿರುವ ವಿಷಯಗಳನ್ನು ಶ್ಲೋಕಗಳ ರೂಪದಲ್ಲಿ ಎಲ್ಲರಿಗೂ ತಿಳಿಯುವಂತೆ ಸ್ಪಷ್ಟಪಡಿಸಿರುತ್ತವೆ. ಶ್ರುತಿಗಳು(ವೇದಗಳ) ಕಾಲದಿಂದ ಸ್ಮೃತಿಗಳ ಕಾಲಕ್ಕೆ ಸಮಾಜದಲ್ಲಿ ಕೆಲವು ಬದಲಾವಣೆಗಳಾಗಿದ್ದರೂ ಸ್ಮೃತಿಗಳಲ್ಲಿ ಹೇಳಿರುವ ವಿಷಯಗಳೆಲ್ಲಾ ಪ್ರಧಾನವಾಗಿ ವೇದಗಳಲ್ಲಿ ಹೇಳಿರುವ ವಿಷಯಗಳೇ. ಮನುಸ್ಮೃತಿಯಲ್ಲಿನ ಕೆಳಕಂಡ ಭಾವಗಳು ಸ್ತ್ರೀಯರಿಗೆ ಅತ್ಯುನ್ನತ ಸ್ಥಾನವನ್ನು ಕೊಡುವುದಾಗಿದೆ.
ಪಿತೃಭಿ ಭ್ರಾತೃಭಿ ಶ್ಚೈತಾಃ ಪತಿಭಿರ್ದೇವರೈಸ್ತಥಾ I
ಪೂಜ್ಯಾ ಭೂಷಯಿತವ್ಯಾಶ್ಚ ಬಹುಕಲ್ಯಾಣಮೀಪ್ಸುಭಿಃ II (3-55)
ತಂದೆ – ತಾಯಿಗಳಿಗಿಂತಲೂ, ಅಣ್ಣ ತಮ್ಮಂದಿರಿಂದಲೂ, ಗಂಡ, ಅವನ ಅಣ್ಣತಮ್ಮಂದಿರಿಂದಲೂ ಹೆಂಗಸರು ಪೂಜಿಸಲ್ಪಡಬೇಕು. ಅಲಂಕರಿಸಲ್ಪಡಬೇಕು. ಇದರಿಂದ ಅವರಿಗೆ ತುಂಬ ಒಳ್ಳೆಯದಾಗುತ್ತದೆ.
ಯತ್ರನಾರ್ಯಸ್ತು ಪೂಜ್ಯಂತೇ ರಮಂತೇ ತತ್ರದೇವತಾಃ I
ಯತ್ರೈತಾಸ್ತು ನಪೂಜ್ಯಂತೇ ಸರ್ವಾಸ್ತತ್ರಾಫಲಾಃಕ್ರಿಯಾ II (3-56)
ಎಲ್ಲಿ ಹೆಂಗಸರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತೋಷಗೊಳ್ಳುತ್ತವೆ. ಎಲ್ಲಿ ಹೆಂಗಸರು ಪೂಜಿಸಲ್ಪಡುವುದಿಲ್ಲವೋ ಅಲ್ಲಿ ಎಲ್ಲ ಕೆಲಸಗಳೂ ಫಲಹೀನವಾಗುತ್ತವೆ.
ಶೋಚಂತಿ ಜಾಮಯೋಯತ್ರ ವಿನಶ್ಯತ್ಯಾಶುತಲ್ಕುತಂ I
ನ ಶೋಚಂತಿತುಯತ್ರೈತಾ ವರ್ಧತೇ ತದ್ಧಿ ಸರ್ವದಾ II (3-57)
ಎಲ್ಲಿ ಹೆಂಗಸರು ದುಃಖಿಸುತ್ತಾರೋ ಆ ಕುಲವು ಬೇಗ ನಾಶವಾಗುತ್ತದೆ. ಎಲ್ಲಿ ಹೆಂಗಸರು ದುಃಖಿಸುವುದಿಲ್ಲವೋ ಆ ಕುಲವು ಯಾವಾಗಲೂ ವೃದ್ಧಿಹೊಂದುತ್ತಲೇ ಇರುತ್ತದೆ.
ಸಂತುಷ್ಟೋ ಭಾರ್ಯಯಾ ಭತ್ರಾನ್ ಭಾರ್ಯಾತಥೈವಚ I
ಯಸ್ಮಿನ್ನೇವ ಕುಲೇನಿತ್ಯಂ ಕಲ್ಯಾಣಂ ತತ್ರವೈಧ್ರುವಂ II (3-60)
ಪತ್ನಿಯಿಂದ ಪತಿಯು ಸಂತುಷ್ಟನಾಗಬೇಕು. ಪತಿಯಿಂದ ಪತ್ನಿಯು ಸಂತುಷಳಾಗಬೇಕು. ಯಾವ ಕುಲದಲ್ಲಿ ಯಾವಾಗಲೂ ಹೀಗೆ ಇರುತ್ತದೆಯೋ ಆ ಕುಲದಲ್ಲಿ ಶಾಶ್ವತವಾಗಿ ಕಲ್ಯಾಣವು ರಾಜಿಸುತ್ತದ.
ಸಂತ್ಯಜ್ಯ ಗ್ರಾಮ್ಯಮಾಹಾರಂ ಸರ್ವಂಚೈವ ಪರಿಚ್ಛದಂ I
ಪುತ್ರೇಷು ಭಾರ್ಯಾಂ ನಿಕ್ಷಿಪ್ಯವನಂ ಗಚ್ಛೇತ್ಸಹೈವವಾ II (6-3)
ಮೇಲಿನ ಶ್ಲೋಕದಲ್ಲಿ ಗೃಹಸ್ಥಾಶ್ರಮವು ಮುಗಿದಮೇಲೆ ದ್ವಿಜರು (ಬ್ರಾಹ್ಮಣ ಕ್ಷತ್ರಿಯ ವೈಶ್ಯರು) ವಾನಪ್ರಸ್ಥಾಶ್ರಮಕ್ಕೆ ಹೇಗೆ ಹೋಗಬೇಕೆಂದು ಹೇಳಲ್ಪಟ್ಟಿದೆ. ಗ್ರಾಮದಲ್ಲಿ ತಿನ್ನುವ ಆಹಾರವನ್ನು ಬಿಟ್ಟುಬಿಡಬೇಕು. ತನ್ನ ಸ್ವತ್ತುಗಳೆಲ್ಲಾ ಬಿಟ್ಟುಬಿಡಬೇಕು. ಭಾರ್ಯೆಯು ತನ್ನ ಜೊತೆಯಲ್ಲಿ ಬರುವುದಕ್ಕೆ ಇಷ್ಟಪಡದಿದ್ದರೆ ಅವಳನ್ನು ಮಕ್ಕಳಲ್ಲಿ ಬಿಟ್ಟು ಅರಣ್ಯಕ್ಕೆ ಹೋಗಬೇಕು. ಅವಳು ತನ್ನ ಜೊತೆಯಲ್ಲಿ ಬರುವುದಕ್ಕೆ ಒಪ್ಪಿಕೊಂಡರೆ ಅವಳನ್ನು ಕರೆದುಕೊಂಡು ಹೋಗಬೇಕು.
ಮೇಲಿನ ಶ್ಲೋಕದಲ್ಲಿ ಹೆಂಗಸರು ಸಹ ವಾನಪ್ರಸ್ಥಾಶ್ರಮಕ್ಕೆ ಹೋಗಬಹುದೆಂದು ಹೇಳಿದೆ. ವಾನಪ್ರಸ್ಥಾಶ್ರಮಕ್ಕೆ ಹೋಗುವ ಹೆಂಗಸರಿಗೆ ಎಷ್ಟು ಜ್ಞಾನವಿರಬೇಕು? ಎಷ್ಟು ಸಂಸ್ಕಾರವಿರಬೇಕು? ಊಹಿಸಿಕೊಂಡರೆ ಆಶ್ಚರ್ಯವಾಗುತ್ತದೆ.
ಆದುದರಿಂದ ಶೃತಿಸ್ಮೃತಿಗಳಲ್ಲಿ ಹೆಂಗಸರಿಗೆ ಅತ್ಯುನ್ನತ ಸ್ಥಾನವು ಕೊಡಲ್ಪಟ್ಟಿದೆ.
- ಲಂಕಾ ಕೃಷ್ಣಮೂರ್ತಿ