ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
ವೇದಗಳು
(ದಿ. 1-7-1986 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)
ವೇದವೆಂದರೆ ಜ್ಞಾನ. ಎಲ್ಲ ಪುರುಷಾರ್ಥಗಳಿಗೂ ಸಂಬಂಧಿಸಿದ ಜ್ಞಾನ ಇದರಲ್ಲಿದೆ. ವೇದಗಳು ಅನಂತಗಳು. ಅದರಲ್ಲಿ ಸ್ವಲ್ಪ ಭಾಗ ಮಾತ್ರ ಈಗ ಉಳಿದಿದೆ. ವೇದಗಳು ಪ್ರಪಂಚದ ಸಾಹಿತ್ಯದಲ್ಲೆ ಅತ್ಯಂತ ಪ್ರಾಚೀನವಾದುವು. ಅವುಗಳಲ್ಲಿ ವರ್ಣಿಸಿರುವ ನಕ್ಷತ್ರಗಳ ಸ್ಥಾನಗಳಿಂದ ಆ ಮಂತ್ರಗಳು ೫೦ ಸಾವಿರ ವರ್ಷಗಳಷ್ಟು ಹಳೆಯವು ಎಂದು ಹೇಳುವ ನಿದರ್ಶನಗಳೂ ಇವೆ. ವೇದಗಳ ಕಾಲದಲ್ಲಿ ಭೌತವಿಜ್ಞಾನವು ಸಹ ಅತ್ಯುನ್ನತ ಮಟ್ಟಕ್ಕೆ ಬಂದಿದ್ದು ಪುನಃ ನಶಿಸಿ ಹೋಯಿತು ಎಂದು ಹೇಳಲು ಅವಕಾಶವಿದೆ. ಸ್ವಾಮೀ ದಯಾನಂದ ಸರಸ್ವತಿ ಅವರು ಒಂದು ಮಂತ್ರದಲ್ಲಿ ವಿಮಾನ ಪ್ರಯಾಣದ ಸ್ಪಷ್ಟವಾದ ವರ್ಣನೆಯನ್ನು ತೋರಿಸಿ ವಿಮಾನ ಪ್ರಯಾಣವು ಹಿಂದೆ ಇತ್ತೆಂದು ಸಾರಿದರು. ಅವರು ಈ ಮಾತನ್ನು ಹೇಳಿದಾಗ ಅಂದಿನ ವಿಜ್ಞಾನಿಗಳು ವಿಮಾನಪ್ರಯಾಣವು ಅಸಾಧ್ಯವೆಂದು ಭಾವಿಸುತ್ತಿದ್ದರು. ಪೂರೀ ಶಂಕರಾಚಾರ್ಯರು ಅಥರ್ವಣವೇದದಲ್ಲಿನ ಮಂತ್ರಗಳಲ್ಲಿ ಪರಿಣಿತವಾದ ಗಣಿತಶಾಸ್ತ್ರವಿರುವುದನ್ನು ನಿರೂಪಿಸಿದ್ದಾರೆ. ಶಕ್ತಿ ಮತ್ತು ಪದಾರ್ಥ ಇವೆರಡೂ ಬೇರೆ ಬೇರೆ ಅಲ್ಲ ಒಂದೇ ಎಂಬುದು ಅಣು ವಿಜ್ಞಾನ ಯುಗದಲ್ಲಿ ಕಂಡುಹಿಡಿದ ಸತ್ಯ. ಆದರೆ ಉಪನಿಷತ್ತುಗಳಲ್ಲಿ ಭಿನ್ನ ಭಿನ್ನವಾಗಿ ಕಾಣುವ ಈ ಜಗತ್ತೆಲ್ಲಾ ಒಂದೇ ಬ್ರಹ್ಮ ಚೈತನ್ಯದ ಸ್ವರೂಪವೆಂದು ಎಂದೋ ಹೇಳಲ್ಪಟ್ಟಿದೆ. ಪ್ರಾಣವೆಂದರೇನು, ಮನಸ್ಸೆಂದರೇನು, ಆತ್ಮವೆಂದರೇನು ಎಂಬುದನ್ನು ವಿಜ್ಞಾನಿಗಳು ಇಂದೂ ಕಂಡುಹಿಡಿದಿಲ್ಲ. ಪರಾಮಾನಸಶಾಸ್ತ್ರದಲ್ಲಿ ಸಂಗ್ರಹಿಸಿರುವ ದೂರಪ್ರಜ್ಞೆ, ಅನಾಗತಪ್ರಜ್ಞೆ, ಅತೀಂದ್ರಿಯ ಪ್ರಜ್ಞೆ, ಸಂಕಲ್ಪದಿಂದ ವಸ್ತುಗಳನ್ನು ಚಲಿಸುವಂತೆ ಮಾಡುವುದು ಇತ್ಯಾದಿ ಸಂಘಟನೆಗಳಿಗೆ ಇಂದಿನ ವಿಜ್ಞಾನ ವಿವರಣೆ ಕೊಡಲು ಅಸಮರ್ಥವಾಗಿದೆ. ಈ ಮಟ್ಟದ ಪ್ರಕೃತಿ ರಹಸ್ಯಗಳನ್ನು ವೇದಗಳ ಸಹಾಯದಿಂದ ತಿಳಿಯಲು ಪರಿಶೋಧನೆಯನ್ನು ಮುಂದುವರಿಸಬೇಕೆಂದು ಇಂದಿನ ಅನೇಕ ವಿಜ್ಞಾನಿಗಳು ಅಭಿಪ್ರಾಯಪಡುತ್ತಿದ್ದಾರೆ. ಬೇರೆ ಯಾವ ದೇಶದ ಯಾವ ಸಾಹಿತ್ಯಕ್ಕೂ ಆಯಾ ಜನರು ವೇದಗಳಿಗೆ ಪ್ರಾಚೀನಕಾಲದಲ್ಲಿ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಕೊಟ್ಟಿರಲಿಲ್ಲ. ವೇದಗಳನ್ನು ಬಾಯಿಪಾಠದ ರೂಪದಲ್ಲೇ ಒಂದು ಅಕ್ಷರ ಮತ್ತು ಒಂದು ಸ್ವರ ಕೆಡದಂತೆ ಸಾವಿರಾರು ವರ್ಷಗಳು ಕಾಪಾಡಿಕೊಂಡು ಬರಬೇಕಾದರೆ ಅದರಿಂದ ಅವರು ಏನೋ ಪ್ರಯೋಜನವನ್ನು ಪಡೆಯುತ್ತಿರಬೇಕೆಂದು ತಿಳಿಯುವುದಿಲ್ಲವೇ? ವೇದ ಮಂತ್ರಗಳಿಂದ ಮಳೆ ತರಿಸುವುದು ಮುಂತಾದ ಅದ್ಭುತ ಕಾರ್ಯಗಳನ್ನು ಮಾಡುತ್ತಿದ್ದರೆಂದು ಪುರಾಣ ಸಾಹಿತ್ಯದಿಂದ ತಿಳಿಯುತ್ತದೆ. ಬೇರೆ ದೇಶಗಳ ಸಾಹಿತ್ಯದಲ್ಲಿ ಉಚ್ಚಾರಣೆಗೆ ವೇದಗಳಿಗೆ ಕೊಟ್ಟಷ್ಟು ಪ್ರಾಮುಖ್ಯ ಕೊಟ್ಟಿಲ್ಲ. ವೇದ ಮಂತ್ರಗಳ ಉಚ್ಚಾರಣೆಗೆ ತಿಳಿಯಬೇಕಾದ ಅಂಶಗಳು ವರ್ಣ, ಸ್ವರ, ಮಾತ್ರಾ, ಬಲ, ಸಾಮ, ಸಂತಾನ ಎಂಬ ಆರು. ಇವುಗಳಲ್ಲಿ ಮೊದಲ ಮೂರೇ ಇತರ ಭಾಷೆಗಳಲ್ಲಿರಿವುದು. ಬಲ, ಸಾಮ, ಸಂತಾನ ಎಂಬುದು ಮಂತ್ರಶಕ್ತಿಯನ್ನು ಪಡೆಯಲು ಸಹಾಯವಾಗುವ ಮಂತ್ರಯೋಗದ ಅಂಶಗಳೆಂದು ಊಹಿಸಲು ಅವಕಾಶವಿದೆ. ವೇದ ಭಾಷೆಯಾದ ಸಂಸ್ಕೃತ ಉಳಿದ ಎಲ್ಲ ಭಾಷೆಗಳಿಗಿಂತಲು ವಿಶಿಷ್ಟವಾದುದು. ಕಂಪ್ಯೂಟರಿಗೆ ಸಂಸ್ಕೃತ ಭಾಷೆಯಷ್ಟು ಅನುಕೂಲವಾದ ಭಾಷೆ ಮತ್ತೊಂದಿಲ್ಲವೆಂದು ಇತ್ತೀಚೆಗೆ ಕಂಡುಹಿಡಿದಿದ್ದಾರೆ. ವೇದಗಳ ವಿಷಯದಲ್ಲಿ ಇತರ ದೇಶಗಳಲ್ಲಿ ತೋರಿಸುತ್ತಿರುವಷ್ಟು ಆಸಕ್ತಿ ನಮ್ಮ ದೇಶದ ವಿಜ್ಞಾನಿಗಳು ತೋರಿಸದಿರುವುದು ಶೋಚನೀಯ. ರಾಜಕಾರಣಿಗಳ ಅವಿವೇಕದಿಂದ ದಿನಂಪ್ರತಿ ನಮ್ಮ ದೇಶದಲ್ಲಿ ಅನರ್ಥಗಳು ಹೆಚ್ಚುತ್ತಿವೆ. ಇವುಗಳಲ್ಲಿ ವಿಶ್ವಮಾನ್ಯವಾದ ಸಂಸ್ಕೃತ ಭಾಷೆಯ ಅನಾದರಣೆಯೂ ಸೇರಿದೆ. ದೇಶದ ಪ್ರಗತಿಯನ್ನು ಬಯಸುವವರೆಲ್ಲರೂ ತಾತ್ಕಾಲಿಕ ಪ್ರಯೋಜನಕರವಾದ ಸಣ್ಣ ಪುಟ್ಟ ದೃಷ್ಟಿಕೋನಗಳನ್ನು ಬಿಟ್ಟು ಶಾಶ್ವತವಾದ ಪ್ರಗತಿಗಾಗಿ ವೇದಗಳ ಹಿರಿಮೆಯ ವೈಜ್ಞಾನಿಕ ಮತ್ತು ವೈಚಾರಿಕ ಸಂಶೋಧನೆಗಾಗಿ ಪ್ರಯತ್ನಿಸಲಿ.
– ಲಂಕಾ ಕೃಷ್ಣಮೂರ್ತಿ