(ದಿ. 1-11-1991 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಒದುಗರಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಪ್ರಶ್ನೆ:- ವೈದಿಕ ಧರ್ಮದ ದೃಷ್ಟಿಯಿಂದ ಆರ್ಷ ಗ್ರಂಥಗಳು ಯಾವುವು? ಅನಾರ್ಷ ಗ್ರಂಥಗಳು ಯಾವುವು?
ಉತ್ತರ:- ವೈದಿಕ ಧರ್ಮವು ಯಾವುದೋ ಒಂದು ಗ್ರಂಥಕ್ಕೆ ಅಥವಾ ಒಬ್ಬ ಋಷಿಯ ಅಥವಾ ಜ್ಞಾನಿ ಬೋಧನೆಗೆ ಸೀಮಿತವಾಗಿಲ್ಲ. ‘ವೈದಿಕ’ ಎಂಬ ಶಬ್ದವು ‘ವೇದ’ವೆಂಬ ಶಬ್ದದಿಂದ ಹುಟ್ಟಿದೆ. ಸಂಸ್ಕೃತ ಭಾಷೆಯ ಸಾಹಿತ್ಯದಲ್ಲಿ ರೂಢಿಯಲ್ಲಿ ಇದಕ್ಕೆ ನಾಲ್ಕು ವೇದಗಳೆಂಬ ಅರ್ಥ ಬಂದಿದೆ. ‘ಋಷಿ’ ಶಬ್ದವಾಗಲಿ, ವೇದ ಶಬ್ದವಾಗಲಿ ರೂಢಿಯ ಅರ್ಥಕ್ಕೆ ಸೀಮಿತವಾಗಬೇಕಾಗಿಲ್ಲ. ಪ್ರಪಂಚದ ಎಲ್ಲ ಕಾಲಗಳ ಎಲ್ಲ ದೇಶಗಳ ಜ್ಞಾನಿಗಳೂ ಋಷಿಗಳೇ. ಅವರ ಬೋಧನೆಗಳೆಲ್ಲಾ ವೇದಗಳೇ. ಆದರೆ ರೂಢಿಯಲ್ಲಿ ಸೀಮಿತವಾದ ಅರ್ಥವೇ ಇರುವುದರಿಂದ ಈ ದೃಷ್ಟಿಯಿಂದ ನಾನು ಮೇಲ್ಕಂಡ ಪ್ರಶ್ನೆಗೆ ನನಗೆ ತಿಳಿದ ಮೠಇಗೆ ಉತ್ತರ ಕೊಡಲು ಪ್ರಯತ್ನಿಸುತ್ತೇನೆ.
ವೈದಿಕ ಧರ್ಮದ ಸಂಪ್ರದಾಯದಂತೆ ಋಷಿ ಶಬ್ದವು ವೇದಮಂತ್ರ ದ್ರಷ್ಟಾರುಗಳಿಗೇ ಅಲ್ಲದೆ ಇತರರಿಗೂ ಅನ್ವಯಿಸುತ್ತದೆ. ಸಕಲ ಪುರಾಣ ಕರ್ತೃವೆಂಬ ಕೀರ್ತಿಯುಳ್ಳ ವ್ಯಾಸರೂ ಸಹ ಋಷಿ ಶ್ರೇಷ್ಠರು. ವೇದಗಳ ಜೊತೆಗೆ ಪುರಾಣವಾಜ್ಮಯವೆಲ್ಲಾ ಆರ್ಷವೇ. ಹಾಗೆಯೇ ಸ್ಮೃತಿಗೂ ದರ್ಶನಗಳೂ ಆಗಮಗಳೂ, ಮತ್ತು ತಂತ್ರಗಳು. ಇವುಗಳ ಮೂಲಗ್ರಂಥಗಳೆಲ್ಲಾ ಆರ್ಷ ಗ್ರಂಥಗಳು. ಆದರೆ ಇವುಗಳಿಗೆ ಆಚಾರ್ಯರು, ಪಂಡಿತರು ಬರೆದಿರುವ ವ್ಯಾಖ್ಯಾನಗಳೆಲ್ಲಾ ಅನಾರ್ಷ ಗ್ರಂಥಗಳು. ಅಲ್ಲದೆ ಇವುಗಳಿಗೆ ಆಚಾರ್ಯರು, ಪಂಡಿತರು ಬರೆದಿರುವ ವ್ಯಾಖ್ಯಾನಗಳೆಲ್ಲಾ ಅನಾರ್ಷ ಗ್ರಂಥಗಳು. ಅಲ್ಲದೆ ಬೇರೆ ಭಾಷೆಗಳಲ್ಲಿ ಇವುಗಳ ವಿಷಯಗಳನ್ನೇ ಬರೆದಿದ್ದರೂ ಅವೆಲ್ಲಾ ಅನಾರ್ಷ ಗ್ರಂಥಗಳೇ. ವೇದದಷ್ಟು ಪ್ರಾಚೀನ ಮತ್ತು ಗೌರವಾಸ್ಪದವಾದ ದ್ರಾವಿಡ ಪ್ರಬಂಧಗಳು ಅನಾರ್ಷಗಳಾದರೂ ಆರ್ಷ ಗ್ರಂಥಗಳಷ್ಟೇ ಪೂಜ್ಯಗಳು. ಇವಲ್ಲದೆ ಹಿಂದೀ ಭಾಷೆಯಲ್ಲಿ ತುಲಸೀ ರಾಮಾಯಣ, ಮರಾಠೀಯಲ್ಲಿ ದಾಸಬೋಧ ಇತ್ಯಾದಿ ದೇಶಭಾಷಾ ಗ್ರಂಥಗಳೂ ಇಷ್ಟೇ ಮಾನ್ಯವಾಗಿದೆ. ಕಾಲಕ್ರಮೇಣ ವೇದಗಳ ಅರ್ಥ ತಿಳಿಯುವುದು ಕಷ್ಟವಾಗಿ ಧರ್ಮಪ್ರಚಾರಕ್ಕೆ ಪುರಾಣಾಗಮ ದರ್ಷನಗಳೂ ಮತ್ತು ಮೇಲೆ ಹೇಳಿದ ಅನಾರ್ಷವಾಜ್ಮಯವೇ ಹೆಚ್ಚು ಉಪಯೋಗಕ್ಕೆ ಬಂದಿತು. ಪ್ರತಿ ಭಾಷೆಯಲ್ಲಿಯೂ ಇರುವ ಕೀರ್ತನ ಸಾಹಿತ್ಯ, ವಚನ ಸಾಹಿತ್ಯವಾಗಿದೆ. ವೈದಿಕ ಧರ್ಮದ ಪೋಷಣೆ ಇವುಗಳಿಂದಲೇ ನಡೆಯುತ್ತಿದೆ.
ಆರ್ಷವಾಜ್ಮಯದಲ್ಲಿ ಸೇರಿಕೊಂಡಿರುವುದಕ್ಕೆ ಮಹಾಭಾರತದಲ್ಲಿನ ಧರ್ಮವ್ಯಾಧ ಮತ್ತು ತುಲಾಧಾರನ ಕಥೆಗಳೇ ಸಾಕ್ಷಿ. ಧರ್ಮವ್ಯಾಧನು ಕೌಶಿಕನೆಂಬ ಬ್ರಾಹ್ಮಣನಿಗೆ ಮಾಡಿದ ಧರ್ಮ ಬೋಧೆ ವಿಸ್ತಾರವಾಗಿದೆ. ಇದು ಧರ್ಮವ್ಯಾಧನ ಕೊಡುಗೆ. ಅದನ್ನು ಹಾಗೆಯೇ ವ್ಯಾಸಮಹರ್ಷಿ ಭಾರತದಲ್ಲಿ ಸೇರಿಸಿರುತ್ತಾನೆ. ಜಾಜಲಿ ಎಂಬ ಋಷಿ ತಪಸ್ಸು ಮಾಡುತ್ತಿರುತ್ತಾನೆ. ಆತನ ಜಡೆಗಳಲ್ಲಿ ಹಕ್ಕಿಗಳು ಗೂಡು ಕಟ್ಟುತ್ತವೆ. ಅದನ್ನು ನೋಡಿ ಆತನ ಮನಸ್ಸಿನಲ್ಲಿ ತಾನು ಅಷ್ಟು ದೊಡ್ಡ ತಪಸ್ವಿ ಎಂಬ ಅಹಂಕಾರ ಹುಟ್ಟಿದ ಕೂಡಲೇ ಆ ಹಕ್ಕಿಗಳು ಆತನ ಜಡೆಗಳನ್ನು ಬಿಟ್ಟು ಹಾರಿ ಹೋಗುತ್ತವೆ. ಆತನು ಕರೆದರೆ ಅವು ಹಿಂದಕ್ಕೆ ಬರುವುದಿಲ್ಲ. ನಿನಗಿಂದಲೂ ಜ್ಞಾನಿಯಾದ ತುಲಾಧಾರನೆಂಬ ವೈಶ್ಯನ ಬಳಿಗೆ ಹೋಗಿ ಜ್ಞಾನವನ್ನು ಗಳಿಸು ಎಂದು ಅವು ಬೋಧಿಸುತ್ತವೆ. ಆಗ ಜಾಜಲಿ ತುಲಾಧಾರನ ಬಳಿಗೆ ಹೋಗಿ ಜ್ಞಾನವನ್ನು ಪಡೆಯುತ್ತಾನೆ. ತುಲಾಧಾರನು ಯಾವ ಪ್ರತ್ಯೇಕ ನಿಷ್ಠೆಗಳೂ ಇಲ್ಲದ ಪ್ರಾಮಾಣಿಕ ನಿರಹಂಕಾರೀ ಕರ್ಮಜೀವಿ. ಆತನ ಬೋಧನೆಯೂ ಅನಾರ್ಷ ಸಾಹಿತ್ಯವೇ. ಅದನ್ನು ವ್ಯಾಸರು ಗ್ರಹಿಸಿದ್ದಾರೆ. ಕವಿಗಳ ಮತ್ತು ಸಂತರ ಅನಾರ್ಷ ಸಾಹಿತ್ಯದಲ್ಲಿ ಆರ್ಷ ಸಾಹಿತ್ಯದಲ್ಲಿ ಆರ್ಷ ಸಾಹಿತ್ಯ ಪ್ರತಿಬಿಂಬಿಸಿದೆ.
ಧಾರ್ಮಿಕ ಸಾಹಿತ್ಯದಲ್ಲಿ ಜಾತಿ, ದೇಶಗಳ ಪಕ್ಷಪಾತವಿಲ್ಲವೆಂದು ತೋರಿಸಲು ಅಮಾವಾಸ್ಯಾ ಸೋಮವಾರ ವ್ರತ ಕಥೆಯು ಒಂದು ಸಾಕ್ಷಿಯಾಗಿದೆ. ಇದು ಭವಿಷ್ಯೋತ್ತರ ಪುರಾಣದ್ದು. ಈ ವ್ರತವು ಒಂದು ಪ್ರಸಿದ್ಧವಾದ ವ್ರತ. ನಮ್ಮ ಮನೆಯಲ್ಲಿ ಮುದಿ ಹೆಂಗಸರು ಅದನ್ನು ಮಾಡುತ್ತಿದ್ದರು. ಈ ಕಥೆಯಲ್ಲಿ “ಸೋಮಾ” ಎಂಬ ಅಗಸರವಳು ಈ ವ್ರತದ ಆಚರಣೆಯನ್ನು ಮಾಡುತ್ತಿದ್ದಳು. ಈಕೆ ಸಿಂಹಳದಲ್ಲಿದ್ದಳು. ಬ್ರಾಹ್ಮಣರು ಭಾರತ ದೇಶದಿಂದ ಸಿಂಹಳಕ್ಕೆ ಹೋಗಿ ಪ್ರತಿದಿನ ಬೆಳಗಾಗುವಷ್ಟುರೊಳಗೆ ಸೋಮೆಯ ಮನೆಯ ಮುಂದೆ ಕಸ ಗುಡಿಸಿ ನೀರು ಚೆಲ್ಲಿ ರಂಗೋಲಿಯಿಡುತ್ತಿದ್ದರು. ಸೋಮೆಯು ಇದನ್ನು ನೋಡಿ ಅವರ ಕೋರಿಕೆ ನೆರವೇರಿಸಲು ಭಾರತಕ್ಕೆ ಬರುವಳು. ಇತ್ಯಾದಿಯಾಗಿ ಕಥೆ ಬಹಳ ಸೋಗಸಾಗಿದೆ. ನಮ್ಮ ಧರ್ಮ ಗ್ರಂಥಗಳನ್ನು ಓದುವಾಗ ನಾವು ಯಾವ ವಿಷಯವನ್ನು ಯಾವ ಕಾಲದಲ್ಲಿ ಯಾವ ಸಂದರ್ಭದಲ್ಲಿ ಧರ್ಮದ ಯಾವ ಮೂಲ ತತ್ವವನ್ನು ಆಧರಿಸಿ ಹೇಳಿದ್ದಾರೆ ಎಂದು ನೋಡುವ ದೃಷ್ಟಿಯನ್ನು ನಾವು ಬೆಳೆಸಿಕೊಳ್ಳುವುದು ಅತಿ ಮುಖ್ಯ. ಇದನ್ನು ಬಿಟ್ಟು ಪರಸ್ಪರ ದ್ವೇಷಾಸೂಯೆಗಳನ್ನು ಬೆಳೆಸುವುದಕ್ಕೆ ಈ ಧರ್ಮಗ್ರಂಥಗಳನ್ನು ಉಪಯೋಗಿಸಿಕೊಳ್ಳುವುದು ಸರಿಯಲ್ಲ.
– ಲಂಕಾ ಕೃಷ್ಣಮೂರ್ತಿ