ಕೊಡೆಯ ಗೋಪಾಲ – 1
ಮುನ್ನುಡಿ
ಲಂಕಾ ಕೃಷ್ಣಮೂರ್ತಿಗಳ ‘ಕೊಡೆಯ ಗೋಪಾಲ’ ಕಾದಂಬರಿಯನ್ನು ‘ಕನ್ನಡಪ್ರಭ’ದಲ್ಲಿ ಪ್ರಕಟನೆಗಾಗಿ ಪರಿಶೀಲಿಸಿದಾಗ, ಅದರಲ್ಲಿ ಗಮನ ಸೆಳೆದ ಪ್ರಮುಖ ಅಂಶವೆಂದರೆ, ಕಥೆಯ ನಿರೂಪಣೆಯಲ್ಲಿನ ಸರಳತೆ. ಈ ಕಥೆಯು ಐತಿಹಾಸಿಕವಾಗಿರುವಂತೆ ತೋರಿದರೂ, ಲೇಖಕರ ಪ್ರಕಾರ, ಇದು ಜಾನಪದವೇ. ಎಂದರೆ, ಇದು ನಡೆದಿರಬಹುದು, ಆದರೆ ನಡೆಯಿತೆನ್ನುವುದಕ್ಕೆ ಆಧಾರ ಗಳಿಲ್ಲ; ಆದರೂ ಜನಜನಿತ. ಇಲ್ಲಿನ ನಾಯಕ ರಾಜನಲ್ಲ, ಮಂತ್ರಿಯಲ್ಲ, ಸೇನಾಪತಿಯಲ್ಲ, ಒಬ್ಬ ಸಾಮಾನ್ಯ ರಾಜನಿಗೆ ಕೊಡೆ ಹಿಡಿಯುವ ಸೇವಕ, ಅವನ ಸ್ವಾಮಿನಿಷ್ಠೆಯೇ ಇಲ್ಲಿನ ಕೇಂದ್ರ ವಿಷಯ.
ಕೆಲವಾರು ಶತಮಾನಗಳ ಹಿಂದೆ ಕನ್ನಡ ಮತ್ತು ತೆಲುಗು ಪ್ರದೇಶಗಳ ಸಂಧಿ ಕ್ಷೇತ್ರದಲ್ಲಿ ಇರಬಹುದಾಗಿದ್ದ ಸಾಮಾಜಿಕ, ರಾಜಕೀಯ ವಾತಾವರಣದ ಚಿತ್ರಣ ಸ್ಪುಟವಾಗಿದೆ. ಆಗಲೂ ಭಾಷಾ ವಿವಾದ ಜನರಲ್ಲಿ ಇದ್ದಿರಬಹುದು ಎಂಬ ಭಾವನೆ ಉಂಟಾಗುತ್ತದೆ. ಆದರೆ ಅದು ಜನಜೀವನದ ಮೇಲೆ ಅಂಥ ಪರಿಣಾಮ ಬೀರಿರಲಾರದು. ಅರಮನೆಯ ರಾಜಕೀಯ, ಒಂದು ರಾಜ್ಯದ ಅವನತಿ-ಇವುಗಳ ಚಿತ್ರಣವೂ ಇಲ್ಲಿದೆ.
ಶ್ರೀ ಕೃಷ್ಣಮೂರ್ತಿಗಳು ಹೈಕೋರ್ಟಿನ ಅಧಿಕಾರಿ. ಅವರನ್ನು ಮೊದಲ ಬಾರಿ ಭೇಟಿ ಮಾಡಿದಾಗ ‘ಲಂಕಾ’ ಪದದ ಬಗ್ಗೆ ನನ್ನಲ್ಲಿದ್ದ ತಪ್ಪು ತಿಳುವಳಿಕೆ ಅವರಿಂದ ಮಾಯವಾಯಿತು. ಅಂಧ್ರದ ಪ್ರಮುಖ ನದಿಗಳಾದ ಕೃಷ್ಣಾ ಮತ್ತು ಗೋದಾವರಿಗಳ ನದೀ ಮುಖಜಭೂಮಿಗಳಲ್ಲಿನ ನಡುಗಡ್ಡೆಗಳನ್ನು ‘ಲಂಕಾ’ ಎಂದು ಕರೆಯುವರಂತೆ, ಅವರ ಪೂರ್ವಜರು ಅಲ್ಲಿನವರಂತೆ. ತಮ್ಮ ನೌಕ ರಿಯ ಜಂಜಾಟದ ನಡುವೆ ಲೇಖನ ವ್ಯವಸಾಯವು ಕೃಷ್ಣಮೂರ್ತಿಯವರ ‘ಲಂಕಾ’ ಆಗಿದೆ. ಅವರ ಲೇಖನ ವ್ಯವಸಾಯವು ವಿಸ್ತಾರವಾಗಿ ನಡೆಯಬೇಕಾಗಿದೆ.
ಹೆಚ್. ಎನ್, ಮೂರ್ತಿ
ಸಹಾಯಕ ಸಂಪಾದಕ
ಕನ್ನಡಪ್ರಭ
