ಅಮರ ಚೇತನಕ್ಕೊಂದು ನಮನ
– ಲಂಕಾ ರಾಧಾಕೃಷ್ಣ
(ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ದಿ ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ)
ನನ್ನ ತಂದೆಯವರಾದ ದಿ ॥ ಶ್ರೀ ಲಂಕಾಕೃಷ್ಣಮೂರ್ತಿಯವರು ದಿನಾಂಕ 9-9-1925 ರಂದು ಬಡ ವೈದಿಕ ದಂಪತಿಗಳಾದ ಶ್ರೀ ಲಂಕಾ ವೆಂಕಟರಾಮಪ್ಪ ಮತ್ತು ದುರ್ಗಾಲಕ್ಷಮ್ಮನವರ ಎರಡನೆಯ ಮಗನಾಗಿ ಆಂಧ್ರದಲ್ಲಿ ಜನಿಸಿದರು. ಇವರ ಬಾಲ್ಯವೆಲ್ಲಾ ಸಾತ್ವಿಕ ಕುಟುಂಬದ ಪರಿಸರದಲ್ಲಿ ಕೊಂಡೂರು, ಕಂಚಿಸಮುದ್ರ ಮತ್ತು ಪೆನುಗೊಂಡೆಯಲ್ಲಿ ಕಳೆಯಿತು. ಮನೆಯಲ್ಲೆ ಅಮರಕೋಶ, ಸಂಸ್ಕೃತ ರಾಮಾಯಣ ಮತ್ತು ಭಾಗವತದ ಶ್ಲೋಕಗಳ ಪಾಠವಾಯಿತು. ಶೀಘ್ರಗ್ರಾಹಿಯಾದ ಇವರು ಅವನ್ನೆಲ್ಲಾ ಕಲಿತು ಇನ್ನೂ ಕಲಿಯಬೇಕೆಂಬ ಹಂಬಲದಿಂದ ಚಿಕ್ಕಂದಿನಿಂದಲೇ ಸ್ವಯಂಕೃಷಿ ಮಾಡತೊಡಗಿದರು. ಇವರ ಶಾಲಾ ಜೀವನವೆಲ್ಲಾ ಪೆನುಗೊಂಡೆಯಲ್ಲಿ ಜರುಗಿತು. ಗಂಭೀರ ಸ್ವಭಾವದವರಾದ ಇವರು ಆಟಪಾಟಗಳಲ್ಲಿ ಕಾಲಕಳೆಯದೆ ಶಾಲೆಯ ಓದು, ಸಂಸೃತ ಕಲಿಕೆ ಮತ್ತು ಗುರುಗಳೊಬ್ಬರ ಸಹಾಯದಿಂದ ಚಿತ್ರಕಲೆಯಲ್ಲಿ ಕೃಷಿ ಮಾಡುತ್ತಿದ್ದರು. ಹಿಡಿದ ಕೆಲಸವನ್ನು ಸಾಧಿಸಬೇಕೆಂಬ ಛಲ ಅವರಿಗೆ ಚಿಕ್ಕಂದಿನಿಂದಲೇ ರಕ್ತಗತವಾಗಿತ್ತು. ಅವರು ಹುಟ್ಟಿದ ನೆಲ ಪರಿಸರವನ್ನು ಬಹಳ ಪ್ರೀತಿಸುತ್ತಿದ್ದರು.
ನಂತರ ಕಾಲೇಜು ವಿದ್ಯಾಭ್ಯಾಸಕ್ಕೆಂದು ಅನಂತಪುರದಲ್ಲಿ ನೆಲೆಸಿದರು. ವಿಜ್ಞಾನದ ವಿದ್ಯಾರ್ಥಿಯಾದ ಅವರು ಗಣಿತದಲ್ಲಿ ಅಪಾರ ಪ್ರತಿಭೆಯುಳ್ಳವರಾಗಿದ್ದರು. ಇದಕ್ಕೆ ನಿದರ್ಶನವೆಂದರೆ ಇಂದು ಅಷ್ಟಾವಧಾನ ಪ್ರಕ್ರಿಯೆಯಲ್ಲಿ ಒಂದು ಅಂಗವಾದ ಸಂಖ್ಯಾಬಂಧವನ್ನು ಅವರೇ ಸ್ವತಃ ಸೃಷ್ಟಿಸಿರುವುದು. ಇದೆಂದರೆ 25 ಚೌಕಗಳಿರುವ (5×5) ಒಂದು ದೊಡ್ಡ ಚೌಕದಲ್ಲಿ ಸಂಖ್ಯೆಗಳನ್ನು ಅಳವಡಿಸಿದಾಗ, ಆ ಸಂಖ್ಯೆಗಳನ್ನು ಅಡ್ಡಡ್ಡಲಾಗಿ, ಉದ್ದುದ್ದವಾಗಿ ಮತ್ತು ಮೂಲೆಯಿಂದ ಮೂಲೆಗೆ ಕೂಡಿದಾಗ ಅದರ ಮೊತ್ತ ಒಂದೇ ಆಗಿರಬೇಕು. ಕೆಲವು ನಿರ್ದಿಷ್ಟ ಮೊತ್ತಗಳಿಗೆ ಯಾರು ಬೇಕಾದರೂ ಈ ರೀತಿ ಮಾಯಾಚೌಕವನ್ನು ತಯಾರಿಸಬಹುದು. ಆದರೆ ಇವರು ಸಾಧಿಸಿದ್ದೆಂದರೆ, ಯಾವುದೇ ಸಂಖ್ಯೆಯ ಮೊತ್ತಕ್ಕೆ ಈ ಮಾಯಾಚೌಕವನ್ನು ನಿರ್ಮಿಸುವ ಸೂತ್ರವನ್ನು ಕಂಡುಹಿಡಿದಿದ್ದು. ಕಾಲೇಜು ದಿನಗಳಲ್ಲಿ ಒಂದೆರಡು ನಾಟಕಗಳಲ್ಲಿ ಪಾತ್ರವಹಿಸಿದ್ದುದಾಗಿ ಹೇಳುತ್ತಿದ್ದರು. ಅಲ್ಲದೆ ಹರಿಕಥೆಯನ್ನೂ ಮಾಡುತ್ತಿದ್ದರು.
ತೀವ್ರ ಹಣದ ಮುಗ್ಗಟ್ಟಿದ್ದರೂ ಅವರ ಚಿಕ್ಕಪ್ಪನವರ ನೆರವಿನಿಂದ ಪ್ರಥಮ ದರ್ಜೆಯಲ್ಲಿ ವಿಜ್ಞಾನದ ಪದವೀಧರರಾದರು. ನಂತರ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ನಲ್ಲಿ ಉನ್ನತ ವ್ಯಾಸಂಗ ಪಡೆಯಬೇಕೆಂಬ ತೀವ್ರ ಹಂಬಲ ಅವರಿಗಿತ್ತು. ಆದರೆ ವಿಧಿ ಅವರನ್ನು ಅವರಿಗಿಷ್ಟವಿಲ್ಲದಿದ್ದ ಕಾನೂನು ವ್ಯಾಸಂಗದತ್ತ ಕೊಂಡೊಯ್ಯಿತು. ಕನ್ಯಾರ್ಥಿಯಾಗಿ ಬಂದು ದೊಡ್ಡಬಳ್ಳಾಪುರದ ಖ್ಯಾತ ವಕೀಲರಾದ ಆರೂಢಿ ರಾಮಚಂದ್ರಯ್ಯನವರ ದ್ವಿತೀಯ ಪುತ್ರಿಯಾದ ಲಲಿತಮ್ಮನವರನ್ನು 1948ರಲ್ಲಿ ವಿವಾಹವಾದರು. ಹಾಗೂ ಬೆಂಗಳೂರಿನ ಕಾನೂನು ವಿದ್ಯಾಲಯದಲ್ಲಿ ಲಾ ಓದಲು ಸೇರಿಕೊಂಡರು. ಸ್ಕೂಲೊಂದರಲ್ಲಿ ಉಪಾಧ್ಯಾಯ ವೃತ್ತಿ ಮಾಡುತ್ತಲೇ ತಮ್ಮ ವಿದ್ಯಾಭ್ಯಾಸವನ್ನೂ ಮುಗಿಸಿದರು. ಆಗ ಅವರಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಆದರೂ ಸ್ವಪ್ರಯತ್ನದಿಂದ ಕನ್ನಡದಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ಕಲಿತುಕೊಂಡರು. ಇದರ ಬಗ್ಗೆ “ಜೀವನ” ಪತ್ರಿಕೆಯಲ್ಲಿ ಪ್ರಕಟವಾದ ಅವರ “ದ್ವೈಮಾತೃಕಾ” ಎಂಬ ಕನ್ನಡ ಕವಿತೆಯಲ್ಲಿ ಮಾತೃಭಾಷೆಯಾದ ತೆಲುಗು ಮತ್ತು ಜೀವನಾಶ್ರಯ ನೀಡಿದ ಕರ್ನಾಟಕದ ಕನ್ನಡ ಭಾಷೆಗಳು ತನ್ನ ಇಬ್ಬರು ತಾಯಿಂದಿರೆಂದು ಸೊಗಸಾಗಿ ವಿವರಿಸಿದ್ದಾರೆ. ಲಾ ಮುಗಿದ ನಂತರ ನ್ಯಾಯವಾದಿ ವೃತ್ತಿಯನ್ನು ಕೈಗೊಂಡರು. ಜೀವನೋಪಾಯಕ್ಕಾಗಿ ಸುಮಾರು 3-4 ವರ್ಷಗಳಷ್ಟು ಕಾಲ ಈ ವೃತ್ತಿಯಲ್ಲಿ ದುಡಿದರು. ಹೈಕೋರ್ಟಿನಲ್ಲಿ ಇವರಿಗೆ ಅದೃಷ್ಟವಶಾತ್ ಡೆಪ್ಯೂಟಿ ರಿಜಿಸ್ಟ್ರಾರ್ ಹುದ್ದೆ ದೊರಕಿತು. ಆಗ ತಾವು ಕೇಸು ನಡೆಸುತ್ತಿದ್ದ ಕಕ್ಷಿದಾರರ ಹಣವನ್ನು ಅವರಿಗೇ ಹಿಂದಿರುಗಿಸಿಬಿಟ್ಟರು. ಇದು ಅವರ ಪ್ರಾಮಾಣಿಕತೆಗೆ ಒಂದು ನಿದರ್ಶನ. ಹೀಗೆ ಜೀವನದಲ್ಲಿ ಒಂದು ಸುಭದ್ರ ನೆಲೆ ಕಂಡುಕೊಂಡ ಅವರು ನಿವೃತ್ತರಾಗುವವರೆಗೆ ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಠೆಯಿಂದ ಸರ್ಕಾರದ ಸೇವೆಯನ್ನು ಮಾಡಿದರು.
ಜೀವನದಲ್ಲಿ ಒಂದು ನೆಲೆ ಕಂಡುಕೊಂಡ ಬಳಿಕ ಅವರ ದೃಷ್ಟಿ ಸಹಜವಾಗಿ ಅವರ ಪ್ರಿಯ ಹವ್ಯಾಸಗಳಾದ ಕಾವ್ಯರಚನೆ, ಚಿತ್ರಕಲೆ ಇವುಗಳೆಡೆ ತಿರುಗಿತು. ವಾಟರ್ ಪೈಂಟಿಂಗ್ ಮತ್ತು ಆಯಿಲ್ ಪೈಂಟಿಂಗ್ ಎರಡೂ ಪ್ರಾಕಾರಗಳಲ್ಲಿ ಉತ್ತಮ ಭಾವಾಭಿವ್ಯಕ್ತವುಳ್ಳ “ಶ್ರೀ ಕೃಷ್ಣ ಸುಧಾಮ”, “ಬಾಳಿನ ಪಯಣದಲ್ಲಿ”, ಎಂಬ ಎರಡು ಅತ್ಯುತ್ತಮ ಕಲಾಕೃತಿಗಳನ್ನು ರಚಿಸಿದರು. ಇದಲ್ಲದೆ ನಿಸರ್ಗ ಸೌಂದರ್ಯದ ದೃಶ್ಯಗಳು. ಸರಸ್ವತಿ. ಮಹಾಭಾರತದ ಕತೆಯನ್ನಾಧರಿಸಿ ದೃಶ್ಯ. ನಮ್ಮ ಮನೆಯವರ ಪೊರ್ಟ್ರರೈಟ್ಗಳು ಹೀಗೆ ಅನೇಕ ವರ್ಣಚಿತ್ರಗಳನ್ನು ರಚಿಸಿದರು. ಇವರಿಗೆ ಭಾರತೀಯ ಚಿತ್ರಕಲೆಯ ಪ್ರಾಕಾರದ ಬಗ್ಗೆ ಬಹಳ ಒಲವಿತ್ತು. ಸ್ವಪರಿಶ್ರಮದಿಂದ ಚಿತ್ರಕಲೆಯನ್ನು ಆಳವಾಗಿ ಅಭ್ಯಸಿಸಿ ಅದರಲ್ಲಿ ಧನ್ಯತೆಯನ್ನು ಕಂಡುಕೊಂಡರು. ಇದಲ್ಲದೆ ಕರ್ನಾಟಕ ಸಂಗೀತದಲ್ಲಿ ಅಭಿರುಚಿಯನ್ನು ಹೊಂದಿದ್ದ ಇವರು ರಾಗ, ತಾಳ, ಲಯ ಜ್ಞಾನವನ್ನು ಸ್ವಯಂಕೃಷಿಯಿಂದ ಸಂಪಾದಿಸಿದ್ದರು. ಹಾರ್ಮೋನಿಯಂನನ್ನು ಸೊಗಸಾಗಿ ನುಡಿಸುತ್ತಿದ್ದರು. ವೀಣೆ ಮತ್ತು ಕೊಳಲು ವಾದನವನ್ನು ಕಲಿಯಲು ಪ್ರಯತ್ನ ಪಡುತ್ತಿದ್ದರು. ಸಂಗೀತದ ಮೇಲಿನ ಈ ಅಭಿರುಚಿಯೇ ಅವರು “ಇಂದಿರಾನಗರ ಸಂಗೀತ ಸಭೆ”ಯ ಸಂಸ್ಥಾಪಕರಾಗಲು ಕಾರಣ. ಆ ಸಭೆಯ ಆಶ್ರಯದಲ್ಲಿ ಒಂದು ಸಂಗೀತ ಪಾಠಶಾಲೆಯನ್ನು ತೆರೆದು ತಾನೇ ಆಳಾಗಿ ದುಡಿದರು.
ಸಂಸ್ಕೃತ, ತೆಲುಗು ಕನ್ನಡದಲ್ಲಿ ಪ್ರಕಾಂಡ ಪಂಡಿತರಾದ ಇವರಿಗೆ ಉರ್ದು, ತಮಿಳು ಭಾಷೆಗಳು ಗೊತ್ತಿದ್ದವು. ನಾವು ಮಲ್ಲೇಶ್ವರದಲ್ಲಿದ್ದಾಗ ನಮ್ಮ ತಂದೆಯವರಿಗೆ ಕರ್ನಾಟಕದ ಖ್ಯಾತ ಮತ್ತು ಹಿರಿಯ ಸಾಹಿತಗಳಾದ ಡಿ ವಿ ಜಿ, ಮಾಸ್ತಿ, ಯಡತೊರೆ ಸುಬ್ರಾಯ ಶರ್ಮ, ಅರ್ಚಿಕ ವೆಂಕಟೇಶ್, ಗೋಪಾಲಕೃಷ್ಣರಾಯರು, ಮುಂತಾದವರ ಒಡನಾಟ ಲಭಿಸಿತು. ಅವರ ಒಲವು, ಪ್ರೋತ್ಸಾಹ ಮತ್ತು ಆಶೀರ್ವಾದದ ಕೃಪೆಯಿಂದ ತೆಲುಗು ಕವಿಯಾದ ತಂದೆಯವರು ಕನ್ನಡ ಸಾಹಿತ್ಯಕ್ಕೆ ಪಾದಾರ್ಪಣ ಮಾಡಿದರು. ಮೊದಲಿಗೆ ಮಾಸ್ತಿಯವರು ನಡೆಸುತ್ತಿದ್ದ “ಜೀವನ” ಎಂಬ ಪತ್ರಿಕೆಗೆ ಲೇಖನ, ಕವನ ಇತ್ಯಾದಿಗಳನ್ನು ಬರೆದರು. ನಂತರ ಸಾಹಿತ್ಯಕೂಟಗಳಲ್ಲಿ ಕನ್ನಡ ಕವಿತೆಗಳನ್ನು ರಚಿಸಿ ಓದುತ್ತಿದ್ದರು. ಕೊನೆಗೆ “ಕೊಡೆಯ ಗೋಪಾಲ” ಎಂಬ ಐತಿಹಾಸಿಕ ಕಾದಂಬರಿಯನ್ನು ಬರೆದು ಪ್ರಕಟಿಸಿದರು. ಇದು “ಕನ್ನಡ ಪ್ರಭ” ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿಯೂ ಪ್ರಕಟಗೊಂಡಿತು. ಇತ್ತಿಚೆಗೆ “ಅತ್ತೆಯ ಎತ್ತರ” ಎಂಬ ಅಪ್ರಕಟಿತ ನಗೆನಾಟಕವನ್ನು ಬರೆದಿದ್ದರು. “ಧರ್ಮಪ್ರಭ” ಮಾಸಪತ್ರಿಕೆ ಪ್ರಾರಂಭವಾದಂದಿನಿಂದ ಇಂದಿನವರೆಗೆ ಅನೇಕ ಮೌಲ್ಯಾಧಾರಿತ ಸಂಪಾದಕೀಯಗಳನ್ನು ಬರೆದರು. “ಗಾಯತ್ರಿ” ಎಂಬ ವಿಶೇಷ ಲೇಖನವನ್ನು ಧಾರಾವಾಹಿಯಾಗಿ ಪ್ರಕಟಿಸಿದರು. ಕನ್ನಡ ಸಾಹಿತ್ಯದಲ್ಲಿ “ಜೈಮಿನಿ ಭಾರತ”, ಡಿ ವಿ ಜಿ ಯವರ “ಮಂಕುತಿಮ್ಮನ ಕಗ್ಗ”, ಕುವೆಂಪು ರವರ “ರಾಮಾಯಣ ದರ್ಶನಂ”, ಇವುಗಳನ್ನು ಬಹಳವಾಗಿ ಶ್ಲಾಘಿಸುತ್ತಿದ್ದರು. ಬೆಂಗಳೂರು ಆಕಾಶವಾಣಿಯ “ಚಿಂತನ” ಕಾರ್ಯಕ್ರಮದಲ್ಲಿ “ವಿಜ್ಞಾನಯುಗ”, “ವಿಶ್ವಸಂಗೀತ”, “ಹಂಸಗೀತೆ” ಮತ್ತು “ಪ್ರಥಮಗೀತೆ” ಎಂಬ ನಾಲ್ಕು ಭಾಷಣ ಮಾಡಿದ್ದಾರೆ. “ತ್ಯಾಗಶಿಲ್ಪ” ಎಂಬ ಅಪ್ರಕಟಿತ ನಾಟಕದಲ್ಲಿ ಲೇಪಾಕ್ಷಿ ಕ್ಷೇತ್ರದ ದೊರೆ ವಿರುಪಣ್ಣನ ತ್ಯಾಗದ ಬಗ್ಗೆ ಮಾರ್ಮಿಕವಾಗಿ ರಚಿಸಿದ್ದಾರೆ. ಇವರಿಗೆ ಶಿಲ್ಪಕಲೆಯ ಬಗ್ಗೆಯೂ ತಿಳಿದಿತ್ತು. ಒಮ್ಮೆ ನಮ್ಮ ತಂದೆಯವರ ಗೆಳೆಯರೊಬ್ಬರು ಶಿಲ್ಪಕಲೆಗೆ ಸಂಬಂಧಿಸಿದ ಪ್ರಾಚೀನ ಸಂಸ್ಕೃತ ಗ್ರಂಥವೊಂದನ್ನು ತಂದುಕೊಟ್ಟರು. ನಮ್ಮ ತಂದೆ ಅದನ್ನು ಅಮೂಲಾಗ್ರವಾಗಿ ಅಭ್ಯಸಿಸಿ ಅದರಲ್ಲಿ ವಿವರಿಸಲಾದ ಪ್ರಾಚೀನ ವಿಧಾನದ ಅಳತೆಗಳನ್ನು ತಮ್ಮ ತರ್ಕಶಕ್ತಿಯ ಬಲದಿಂದ ವಿಶ್ಲೇಷಿಸಿ ಮತ್ತು ಅದನ್ನು ಇಂದಿನ ಅಳತೆಯ ಮಾಪಕಗಳಿಗೆ ತರ್ಜುಮೆ ಮಾಡಿ ಒಂದೆರಡು ಚಿತ್ರಕೃತಿಗಳನ್ನು ರಚಿಸಿದರು. ಓಹ್, ಅದೆಷ್ಟು ನೈಜವಾಗಿ ಮತ್ತು ಪರಿಪೂರ್ಣವಾಗಿ ಮೂಡಿಬಂದಿತ್ತೆಂದರೆ ವರ್ಣಿಸಲಸದಳ. ಇದಲ್ಲದೆ “ಸಂಸ್ಕೃತ ಭಾಷೆಯ ವಿರಾಟ್ ಸ್ವರೂಪ” ಎಂಬ ಅಪೂರ್ಣ ಆದರೆ ಅತ್ಯುಪಯುಕ್ತ ಲೇಖನವೊಂದನ್ನು ಬರೆದಿದ್ದರು.
ಇನ್ನು ತೆಲುಗು ಸಾಹಿತ್ಯಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ. “ಶ್ರೀ ವಿಲಾಸಮು”, “ದಾನಯಜ್ಞಮು” ಮತ್ತು “ತ್ಯಾಗಶಿಲ್ಪಮು” ಎಂಬ ಮೂರು ಮಹಾಕಾವ್ಯಗಳ ಕರ್ತೃ ಅವರು. ಇವಲ್ಲದೇ ಅನೇಕ ಕವಿತೆಗಳು, ಲೇಖನಗಳು ಅವರ ಸಂಗ್ರಹದಲ್ಲಿದೆ.
ಕೆಲವು ತೆಲುಗು ರೇಡಿಯೋ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ. ಪ್ರಚಾರಪ್ರಿಯರಾಗಿಲ್ಲದಿದ್ದುದೇ ಇವರು ತೆಲುಗಿನಲ್ಲಿ ಮಹಾಕವಿಯಾಗದಿದ್ದುದಕ್ಕೆ ಕಾರಣವೆಂದು ನನ್ನ ಅಭಿಪ್ರಾಯ. ತಿಕ್ಕನ ಮತ್ತು ನನ್ನಯ ಎಂಬ ಪ್ರಾಚೀನ ಕವಿಗಳು ಇವರ ಅಚ್ಚುಮೆಚ್ಚಿನವರಾಗಿದ್ದರು. ತಿಕ್ಕನ ಕವಿಯ “ಉತ್ತರ ರಾಮಾಯಣ”ವೆಂಬ ತೆಲುಗು ಕಾವ್ಯವನ್ನು ಸಂಸ್ಕೃತಕ್ಕೆ ಭಾಷಾಂತರಿಸುವ ಇವರ ಯೋಜನೆ ಅಪೂರ್ಣವಾಗಿ ಉಳಿಯಿತು. ಸಂಸ್ಕೃತದಲ್ಲಿ ಪ್ರಕಾಂಡ ಪಂಡಿತರಾದ ಇವರು ಸಂದರ್ಭಾನುಸಾರವಾಗಿ ಅನೇಕ ಶ್ಲೋಕಗಳನ್ನು, ಪದ್ಯಗಳನ್ನು ತಕ್ಷಣವೇ ಉಲ್ಲೇಖಿಸುತ್ತಿದ್ದುದು ಇವರ ಆಳ ಅಧ್ಯಯನ ಮತ್ತು ಜ್ಞಾಪಕ ಶಕ್ತಿಯನ್ನು ಸೂಚಿಸುತ್ತದೆ. ಅವರು ವ್ಯಾಕರಣ ಮತ್ತು ಛಂದಸ್ಸುಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದರು. ನಿವೃತ್ತರಾದ ಬಳಿಕ ಉಚಿತ ಸಂಸ್ಕೃತ ಪಾಠಗಳನ್ನು ಮನೆಯಲ್ಲಿಯೇ ಹೇಳುತ್ತಿದ್ದರು. ಇದಲ್ಲದೇ ದೇವೀ ಭಾಗವತ ಮತ್ತು ಭಾಗವತದ ವ್ಯಾಖ್ಯಾನ ಮಾಡುತ್ತಿದ್ದರು. ಇವರ ಅಚ್ಚುಮೆಚ್ಚಿನ ಮತ್ತೊಂದು ಕ್ಷೇತ್ರವೆಂದರೆ “ಅಷ್ಟಾವಧಾನ”. “ಸಮಸ್ಯೆ” ಮತ್ತು “ನಿಷೇಧಾಕ್ಷರಿ”ಯ ಪೃಚ್ಛಕರಾಗಿ ಅನೇಕ ತೆಲುಗು ಅವಧಾನಗಳಲ್ಲಿ ಭಾಗವಹಿಸಿದ್ದ ಇವರಿಗೆ ಕನ್ನಡದಲ್ಲಿ ನಶಿಸಿಹೋಗಿದ್ದ ಅವಧಾನ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸಬೇಕೆಂಬ ಹಂಬಲವಾಗಿ ತೆಲುಗು ಅವಧಾನಿಯಾದ ಶ್ರೀ ಸದಾನಂದಶಾಸ್ತ್ರಿಗಳಿಗೆ ಪ್ರೋತ್ಸಾಹ ನೀಡಿ ಅವರಿಂದ ಕನ್ನಡ ಅಷ್ಟಾವದಾನವನ್ನು ಯಶಸ್ವಿಯಾಗಿ ನೆರವೇರಿಸಿದರು. ಅನಂತರ ಅರಳುತ್ತಿರುವ ಪ್ರತಿಭೆಯಾದ ಶ್ರೀ ಗಣೇಶ್ ರವರೊಡನೆ ಕೂಡಿ ಅಷ್ಟಾವಧಾನ, ಶತಾವಧಾನಗಳನ್ನೂ ಸಂಯೋಜಿಸಿದರು. ಬೆಂಗಳೂರಿನಲ್ಲಿ ಲಂಕಾ ಕೃಷ್ಣಮೂರ್ತಿಗಳಿಲ್ಲದ ಅವಧಾನ ಅಪರೂಪವೆಂದೇ ಹೇಳಬಹುದು. ಇಷ್ಟಕ್ಕೇ ತೃಪ್ತರಾಗದ ಇವರು ಸಂಖ್ಯಾಬಂಧ ಮತ್ತು ಚಿತ್ರಕವಿತ್ವವೆಂಬ ಹೊಸ ಪ್ರಕ್ರಿಯಯನ್ನು ಅವಧಾನದಲ್ಲಿ ಅಳವಡಿಸಿದರು. ನನಗೆ ತಿಳಿದಮಟ್ಟಿಗೆ ಇಂದು ಕರ್ನಾಟಕದಲ್ಲಿ ಚಿತ್ರಕವಿತ್ವವನ್ನು ರಚಿಸಬಲ್ಲವರು ಇಬ್ಬರೇ ಇಬ್ಬರು. ಒಬ್ಬರು ಲಂಕಾ ಕೃಷ್ಣಮೂರ್ತಿ ಮತ್ತೊಬ್ಬರು ಅವಧಾನಿ ಗಣೇಶ್. ಇದಲ್ಲದೆ ಅಡುಗೆ ಮಾಡುವುದರಲ್ಲೂ ಸಿದ್ಧಹಸ್ತರಾಗಿದ್ದರು. ಹಳೆಯ ಮಾಡೆಲ್ ಕಾರೊಂದನ್ನು ಹೊಂದಿದ್ದ ಇವರು ಅದರ ರಿಪೇರಿಯಲ್ಲೂ ಪರಿಣಿತರಾಗಿದ್ದರು.
ಸಾಂಸಾರಿಕ ಜೀವನದಲ್ಲಿ ಇವರೊಬ್ಬ ಸದ್ಗೃಹಸ್ಥರಾಗಿದ್ದರು. ಇವರಿಗೆ ಯಾವುದೇ ರೀತಿಯ ದುರಭ್ಯಾಸಗಳಿರಲಿಲ್ಲ.
ತಮ್ಮ ತಂದೆ ತಾಯಿಯರನ್ನು ತಮ್ಮ ಬಳಿಯೇ ಇರಿಸಿಕೊಂಡು ಅತಿ ಶ್ರದ್ಧೆಯಿಂದ ಅಹರ್ನಿಶಿ ಅವರ ಸೇವೆ ಮಾಡಿದರು.
1964 ರಲ್ಲಿ ಇಂದಿರಾನಗರದಲ್ಲಿ ಪ್ರಥಮ ಪ್ರಜೆಯಾಗಿ ಮನೆ ಕಟ್ಟಿಸಿ ವಾಸಿಸತೊಡಗಿದರು. ಈ ಬಡಾವಣೆಗೆ ಇಂದಿರಾನಗರವೆಂದು ಹೆಸರಿಟ್ಟವರೂ ಅವರೇ. ಪ್ರತಿ ಯಶಸ್ವೀ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆಂಬಂತೆ ನಮ್ಮ ತಾಯಿಯವರು ತಂದೆಯವರ ಎಲ್ಲಾ ಕಾರ್ಯಗಳಲ್ಲೂ ತಮ್ಮ ಸಹಕಾರವನ್ನಿತ್ತರು.
ಚಿಕ್ಕಂದಿನಲ್ಲಿ ಅವರ ಮಡಿಲಲ್ಲಿ ಕುಳಿತು ಅವರು ಹೇಳುತ್ತಿದ್ದ ರಾಮಾಯಣ, ಮಹಾಭಾರತದ ನೀತಿ ಕತೆಗಳ ನೆನಪು ನಮಗೆ ಇನ್ನೂ ಹಚ್ಚಹಸುರಾಗಿದೆ. ಇಂತಹ ತಂದೆಯನ್ನು ಪಡೆದ ನಾವು ನಿಜಕ್ಕೂ ಧನ್ಯರು.
ಅವರಿಗೆ ಎಂದೂ ಅಹಂಭಾವ ಇರಲಿಲ್ಲ. ಎಲ್ಲವನ್ನೂ ತಮ್ಮಿಂದ ದೇವರು ಮಾಡಿಸುತ್ತಿದ್ದಾನೆ, ತನ್ನ ಪಾತ್ರವೇನೂ ಅದರಲ್ಲಿಲ್ಲ ಎಂಬುದಾಗಿ ಹೇಳುತ್ತಿದ್ದರು. ಅವರು ಸಂಸಾರದಲ್ಲಿದ್ದರೂ ಯೋಗಿಯಂತೆ ಬಂಧಮುಕ್ತರಾಗಿದ್ದರು. ಅವರು ಮನುಷ್ಯರಲ್ಲಿ, ಪ್ರಾಣಿಗಳಲ್ಲಿ, ಸಮಸ್ತ ವಸ್ತುಗಳಲ್ಲಿ ದೇವರ ಸ್ವರೂಪವನ್ನು ಕಾಣುತ್ತಿದ್ದರು. ವಿದ್ಯೆಯಿಂದ, ಸತತ ಅಭ್ಯಾಸದಿಂದ ಮತ್ತು ಕರ್ಮದಿಂದ ಅವರು ಜ್ಞಾನಿಯಾಗಿದ್ದರು. ಅವರು ಅನ್ನದಾನ, ವಿದ್ಯಾದಾನ, ಸಂಪತ್ತು ದಾನ ಮುಂತಾದ ದಾನಗಳನ್ನು ಮಾಡುತ್ತಿದ್ದರು. “ಪರೋಪಕಾರಾಂ ಸತಾಂ ವಿಭೂತಯಃ” ಎಂಬುದು ಅವರ ಮಂತ್ರವಾಗಿತ್ತು. ಸ್ವಧರ್ಮ ಮತ್ತು ಸಾಮಾಜಿಕ ಧರ್ಮಗಳ ಮೌಲ್ಯಗಳನ್ನು ನಿಷ್ಠೆಯಿಂದ ಅನುಸರಿಸುತ್ತಿದ್ದರು ಮತ್ತು ಎರಡಕ್ಕೂ ಪ್ರಾಮುಖ್ಯತೆ ನೀಡುತ್ತಿದ್ದರು. ದೇವರ ಅಸ್ತಿತ್ವದಲ್ಲಿ ಬಲವಾದ ನಂಬಿಕೆಯನ್ನಿರಿಸಿಕೊಂಡಿದ್ದರು. ಆದರೆ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಖಂಡಿಸುತ್ತಿದ್ದರು. ಪ್ರತಿಯೊಂದನ್ನೂ ವೈಜ್ಞಾನಿಕವಾಗಿ ಪರಿಶೀಲಿಸುತ್ತಿದ್ದರು. ಹೀಗಾಗಿ ಧರ್ಮದ ವೈಜ್ಞಾನಿಕ ವಿಶ್ಲೇಷಣೆ (Scientific Study of Dharma) ಎಂಬ Study Circle ನ್ನು ಸ್ಥಾಪಿಸಿ ತಾವು ಲೇಖನಗಳನ್ನು ಬರೆದು, ಇತರರಿಂದ ಲೇಖನಗಳನ್ನು ಅಪೇಕ್ಷಿಸಿದರು. ಮನುಧರ್ಮ ಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿ ಇಂದಿನ ಸಮಾಜಕ್ಕೆ ಅದನ್ನು ಪ್ರಸ್ತುತ ಪಡಿಸಲು, ಅದರ ಬಗ್ಗೆ ಇಂದಿನ ಜನರಲ್ಲಿನ ಅಸಹನೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಸತ್ಯ, ಅಹಿಂಸೆ, ದಯೆ, ಧರ್ಮ, ಸರಳ ಜೀವನ ಇವುಗಳನ್ನು ವ್ರತವಾಗಿ ಜೀವಮಾನವಿಡೀ ಪಾಲಿಸಿದರು. ಅವರು ಎಂದೂ ಸುಳ್ಳನ್ನು ನುಡಿದಿಲ್ಲ. ತಮಾಷೆಗೆ ಸುಳ್ಳು ಹೇಳುವುದನ್ನು ಅವರು ಖಂಡಿಸುತ್ತಿದ್ದರು. ತಮ್ಮ ಸದ್ಗುಣಗಳಿಂದ ಅಜಾತಶತ್ರುವಾಗಿದ್ದರು.
ಒಟ್ಟಾರೆ ಹೇಳಬೇಕೆಂದರೆ ಲಂಕಾ ಕೃಷ್ಣಮೂರ್ತಿಯವರು ಒಳ್ಳೆಯ ವಿದ್ಯಾರ್ಥಿ, ಉಪಾಧ್ಯಾಯರು, ಗೃಹಸ್ಥರು, ಕವಿ, ವಿದ್ವಾಂಸರು, ಚಿತ್ರಕಾರರು, ಉಪನ್ಯಾಸಕರು, ವಕೀಲರು, ಆಡಳಿತಾಧಿಕಾರಿ, ಸಮಾಜ ಸೇವಕ ಮತ್ತು ಎಲ್ಲಕ್ಕೂ ಮಿಗಿಲಾಗಿ ಮಾನವತಾವಾದಿ.
ಎರಡು ವರ್ಷಗಳ ಹಿಂದೆ ಅಪಘಾತದಲ್ಲಿ ತಲೆಗೆ ಪೆಟ್ಟುಬಿದ್ದು ಅವರ ಜ್ಞಾಪಕ ಶಕ್ತಿ ನಶಿಸಲಾರಂಭಿಸಿತು. ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಹೋದರು. ಆದರೂ ತಮ್ಮ ಕಾಯಕವನ್ನು ನಿಲ್ಲಿಸಲಿಲ್ಲ. ಅವರ ಪ್ರಾಣ ಪಂಚಭೂತಗಳಲ್ಲಿ ದಿನಾಂಕ 11-11-1996 ರಂದು ಲೀನವಾಯಿತು. ಭೌತಿಕವಾಗಿ ಅವರು ನಮ್ಮನ್ನಗಲಿದರೂ ಅವರ ಆತ್ಮ ಅಮರ. ಅದೊಂದು ಚೈತನ್ಯ ಸ್ವರೂಪ. ಅವರದು ಅಮರ ಚೇತನ. ಆ ಅಮರ ಚೇತನಕ್ಕೊಂದು ನಮನ ನನ್ನೀ ಲೇಖನ.