ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 12
ಮಾನವರಲ್ಲಿ ಗುಣಕ್ಕೆ ಪ್ರಾಶಸ್ತ್ಯ
(ದಿನಾಂಕ 1 – 10- 1996 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಇಂದಿನ ವಿಜ್ಞಾನಯುಗದಲ್ಲಿ ವಿಜ್ಞಾನವು ವಿಶೇಷವಾಗಿ ಬೆಳೆದಿದೆಯೇ ಹೊರತು ಮಾನವರಲ್ಲಿ ಗುಣಗಳು ಬೆಳೆದಿಲ್ಲ. ಯಾವ ದೇಶದವನೇ ಆಗಲಿ, ಯಾವ ಜಾತಿಯವನೇ ಆಗಲಿ, ಮಾನವರೆಲ್ಲರೂ ಗುಣವಂತನಿಗೆ ಗೌರವ ಕೊಡಬೇಕು. ಕೆಟ್ಟ ಗುಣಗಳಿರುವವನಿಗೆ ಗೌರವ ಕೊಡಬಾರದು. ವಾರ್ತಾಪತ್ರಿಕೆಗಳನ್ನು ನೋಡುತ್ತಿದ್ದರೆ ಇತ್ತೀಚೆಗೆ ಎಲ್ಲ ವೃತ್ತಿಗಳಲ್ಲೂ ಗುಣಹೀನರ ಸಂಖ್ಯೆ ಬೆಳೆಯುತ್ತಿರುವುದು ತಿಳಿಯುತ್ತದೆ. ಇದು ಬಹಳ ಶೋಚನೀಯ ಸ್ಥಿತಿ. ರಾಜಕಾರಣಿಗಳೇ ಆಗಲಿ, ಇತರ ವೃತ್ತಿಗಳವರಾರೇ ಆಗಲಿ ಗುಣಕ್ಕೆ ಪ್ರಾಶಸ್ತ್ಯವನ್ನು ಕೊಡಬೇಕೇ ಹೊರತು ಜಾತಿ ಮತಗಳಿಗೆ ಪ್ರಾಶಸ್ತ್ಯವನ್ನು ಕೊಡಬೇಕಾಗಿಲ್ಲ.
ಮನುಸ್ಮೃತಿಯಲ್ಲಿ ಕೆಳಕಂಡ ಶ್ಲೋಕವು ಗುಣಗಳಿಗೆ ಪ್ರಾಶಸ್ತ್ಯ ಕೊಡುತ್ತಿದೆ:-
“ಅಹಿಂಸಾ ಸತ್ಯಮಸ್ತೇಯಂ ಶೌಚಮಿಂದ್ರಿಯನಿಗ್ರಹಃ
ಏತಂ ಸಾಮಾಸಿಕಂ ಧರ್ಮಂ ಚಾತುರ್ವರ್ಣ್ಯೇಬ್ರವೀನ್ಮನುಃ
ಅಹಿಂಸೆ, ಸತ್ಯ, ಕಳ್ಳತನ ಮಾಡದಿರುವಿಕೆ, ಶುಚಿತ್ವ, ಇಂದ್ರಿಯ ಜಯ ಇವು ನಾಲ್ಕು ವರ್ಣಗಳವರಿಗೂ ಮುಖ್ಯವಾದ ಧರ್ಮಗಳು.
ಮನುಸ್ಮೃತಿಯಲ್ಲಿನ ಕೆಳಕಂಡ ವಾಕ್ಯವೂ ಗುಣಗಳಿಗೆ ಪ್ರಾಶಸ್ತ್ಯ ಕೊಡುತ್ತಿದೆ:-
“ಶೂದ್ರೋ ಬ್ರಾಹ್ಮಣತಾ ಮೇತಿ ಬ್ರಾಹ್ಮಣಶ್ಚೈತಿ ಶೂದ್ರತಾಂ”
ಶೂದ್ರನು ಗುಣಗಳಿಂದ ಬ್ರಾಹ್ಮಣತ್ವವನ್ನು ಪಡೆಯುತ್ತಾನೆ. ಬ್ರಾಹ್ಮಣನು ಗುಣಹೀನನಾಗಿ ಶೂದ್ರತ್ವವನ್ನು ಪಡೆಯುತ್ತಾನೆ.
ಆದುದರಿಂದ ಎಲ್ಲ ಮಾನವರೂ ದೇಶ, ಜಾತಿ, ಮತ ಮುಂತಾದುದಕ್ಕೆ ಪ್ರಾಶಸ್ತ್ಯವನ್ನು ಕೊಡದೆ ಸದ್ಗುಣಗಳಿಗೆ ಪ್ರ್ರಾಶಸ್ತ್ಯವನ್ನು ಕೊಡುವುದನ್ನು ಇಂದಿನ ವಿಜ್ಞಾನ ಯುಗದಲ್ಲಿ ಕಲಿಯುವುದು ತುಂಬಾ ಮುಖ್ಯ. ಮಾನವರಲ್ಲಿ ಜಾತಿ ಮತ ಭೇದಗಳು ಸಹಜ. ಎಲ್ಲ ಮತಗಳೂ ಆದಿಯಲ್ಲಿ ಮಾನವರ ಶ್ರೇಯಸ್ಸಿಗಾಗಿ ಹುಟ್ಟಿವೆ .ಒಂದೊಂದು ದೇಶದಲ್ಲಿ ಹುಟ್ಟಿದ ಮತ ಆಯಾ ದೇಶದ ಮಾನವರಲ್ಲಿನ ಪರಿಸ್ಥಿತಿಗಳನ್ನನುಸರಿಸಿ ಧರ್ಮಬೋಧೆ ಮಾಡಿದೆ. ಸೃಷ್ಟಿಯಲ್ಲಿ ವೈವಿಧ್ಯ ಸಹಜ. ಆದರೆ ಈ ವೈವಿಧ್ಯದಲ್ಲಿ ನಾವು ಶ್ರೇಷ್ಠವಾದ ಭಾವಗಳಿಗೆ ಬೆಲೆಯನ್ನು ಕೊಡುವುದನ್ನು ಕಲಿಯಬೇಕು. ಆಗ ಮತ ವೈಷಮ್ಯಗಳು ಕಡಿಮೆಯಾಗಿ ಲೋಕಕಲ್ಯಾಣವಾಗುತ್ತದೆ.
ಹೀಗೆ ಲೋಕಕಲ್ಯಾಣಕ್ಕೆ ಪ್ರಯತ್ನಿಸುವುದು ಬುದ್ಧಿವಂತರ ಲಕ್ಷಣ. ಮತ ಭೇದಗಳಿಗೆ ಪ್ರಾಶಸ್ತ್ಯವನ್ನು ಕೊಡುತ್ತ ಮಾನವರಲ್ಲಿ ದ್ವೇಷಾಸೂಯೆಗಳನ್ನು ಬೆಳೆಸುವುದು ದಡ್ಡರ ಕೆಲಸ. ಸ್ವಾರ್ಥಿಗಳ ಕೆಲಸ. ಇದನ್ನು ಸಾಮಾನ್ಯ ಮಾನವರು ಪೂರ್ತಿಯಾಗಿ ನಿರ್ರಕರಿಸಬೇಕು.
-ಲಂಕಾ ಕೃಷ್ಣಮೂರ್ತಿ