ಧರ್ಮವನ್ನು ವಿಜ್ಞಾನವನ್ನಾಗಿ ಭಾವಿಸಿ ಬೆಳಸಬೇಕೆ?
(ದಿನಾಂಕ 6 – 1- 1991 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಇತ್ತೀಚಿನವರೆಗೂ ಪ್ರಪಂಚದ ಎರಡು ಅತಿ ಬಲಿಷ್ಟ ರಾಷ್ಟ್ರಗಳ ನಡುವಿನ ಶಸ್ತ್ರಾಸ್ತ್ರಗಳ ಸ್ಪರ್ಧೆಯಿಂದಾಗಿ ಅಣು ಯುದ್ಧದ ಭಯದಿಂದ ಪ್ರಪಂಚವೇ ನಡುಗುತ್ತಿತ್ತು. ಆದರೆ ಈ ಎರಡು ರಾಷ್ಟ್ರಗಳ ನಡುವೆ ಇತ್ತೀಚೆಗೆ ಬೆಳೆದ ಸೌಹಾರ್ದದಿಂದ ಈ ಭಯವು ಸ್ವಲ್ಪ ಕಡಿಮೆಯಾಗಿದೆ. ಆದರೂ ಅಣು ಯುದ್ಧದ ಸಂಭವವೇ ತೊಲಗಿದೆ ಎಂದು ಹೇಳುವಂತಿಲ್ಲ. ಪ್ರಪಂಚದ ಒಂದು ಕಡೆ ಪರಿಸ್ಥಿತಿ ಸುಧಾರಿಸುತ್ತಿದ್ದರೆ ಮತ್ತೊಂದು ಕಡೆ ಹದಗೆಡುತ್ತಿದ್ದರೂ, ಇನ್ನೊಂದು ರೀತಿಯ ಹೊಸ ದ್ವೇಷಗಳು ಹೆಚ್ಚುತ್ತಿರುವುದೂ ಕಂಡುಬರುತ್ತಿದೆ. ಅಣು ಯುದ್ಧದ ವಿಚಾರದಲ್ಲಿ ಇನ್ನೂ ನಾವು ಅಜಾಕರೂಕತೆಯಿಂದ ಇರಲು ಸಾಧ್ಯವಿಲ್ಲ. ಅಣುಯುದ್ಧವೇ ನಡೆದಿದ್ದಾದರೆ ಇಂದಿನ ವಿಜ್ಞಾನ ಯುಗದಲ್ಲಿ ಮಾನವನು ಸಂಪಾದಿಸಿದ್ದೆಲ್ಲವೂ ನಾಶವಾಗುವುದಲ್ಲದೆ ಈ ಭೂಮಿ ಎಂಬ ಗ್ರಹದ ಮೇಲೆ ಮನುಷ್ಯ ಪ್ರಾಣಿಯ ಅಸ್ತಿತ್ವಕ್ಕೇ ಧಕ್ಕೆ ಬರುವುದು. ಇದು ಭವಿಷ್ಯದ ವಿಚಾರವೇ ಆದರೂ ಎಲ್ಲರೂ ಈ ವಿಷಯದಲ್ಲಿ ಜಾಗ್ರತೆಯಿಂದಿದ್ದು ಅಪಾಯವನ್ನು ತಪ್ಪಿಸುವ ಮಾರ್ಗವನ್ನು ಇಂದಿನಿಂದಲೇ ಹುಡುಕಬೇಕಾಗಿದೆ.
ಈಗ ಇಂದಿನ ಪ್ರಪಂಚದ ಪರಿಸ್ಥಿತಿಯನ್ನು ಸ್ವಲ್ಪ ಗಮನಿಸೋಣ. ಹಿಂದುಳಿದ ರಾಷ್ಟ್ರಗಳಲ್ಲಿ ಆಹಾರದ ಕೊರತೆ, ಮತ್ತು ಕನಿಷ್ಠ ಜೀವನಾವಶ್ಯತೆಗಳ ಆಘಾತದಿಂದಾಗಿ ಜನರು ನರಳುತ್ತಿದ್ದಾರೆ. ಕೆಲವೆಡೆ ದೀರ್ಘ ದ್ವೇಷಗಳಿಂದಲೂ ಕೊನೆಗಾಣದ ಯುದ್ಧಗಳಿಂದಲೂ ಜನರು ನರಳುತ್ತಿದ್ದಾರೆ. ನಮ್ಮ ಭಾರತ ದೇಶದಲ್ಲಿಯು, ಒಳ್ಳೆಯ ವೈಜ್ಞಾನಿಕ ಪ್ರಗತಿಯನ್ನು ಸಾಧಿಸಿದ್ದರೂ, ಪರಿಸ್ಥಿತಿ ದಿನ ದಿನಕ್ಕೂ ಹದಗೆಡುತ್ತಿದೆ. ಮಿಗಿಲಿಗೆ ಸಂಪನ್ನ ರಾಷ್ಟ್ರಗಳಲ್ಲಿನ ಜನರಲ್ಲಿಯು ದ್ವೇಷಾಸೂಯೆಗಳು, ಸ್ಪರ್ಧೆ, ಆವೇಶ, ಅಪರಾಧಗಳು, ಅಸಂತೃಪ್ತಿ ಮೊದಲಾದವುಗಳಿಂದ ಬಾಧೆಯು ನಿರಂತರವಾಗಿದ್ದೇ ಇದೆ ಎಂಬುದು ರಹಸ್ಯವೇನಲ್ಲ. ಅತ್ಯುತ್ತಮ ಮಟ್ಟಕ್ಕೆ ಬೆಳೆದಿರುವ ಭೌತವಿಜ್ಞಾನಗಳ ಸಹಾಯದಿಂದ ಐಹಿಕ ಸಂಪತ್ತನ್ನು ಬೆಳೆಸಲು ನಾವು ಎಷ್ಟಾದರೂ ಕಷ್ಟಪಡುತ್ತಿದ್ದೇವೆ. ಇಂದಿನ ಹೊಸ ಯುಗದಲ್ಲಿ ಮುಗಿಲೆತ್ತರಕ್ಕೆ ಬೆಳೆದ ಕಾನೂನು ಮೊದಲಾಗಿ ಸಮಾಜ ವಿಜ್ಞಾನಗಳನ್ನು ನಾವು ಚರ್ಚಿಸುತ್ತೇವೆ. ಅವುಗಳಿಂದ ಮಾನವರನ್ನು ದಾಸ್ಯವಿಮುಕ್ತರನ್ನಾಗಿ ಮಾಡಲು, ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ಕೊಡಲು, ಸಾಮಾಜಿಕ ಕಾನೂನನ್ನು ಜಾರಿಗೆ ತರಲು, ಇನ್ನೂ ಉತ್ತಮವಾದ ರಾಜಕೀಯ ವ್ಯವಸ್ಥೆಯನ್ನು ಸೃಷ್ಟಿಸಿ ಜನರ ಹಿತವನ್ನು ಸಾಧಿಸಲು ನಾವೆಲ್ಲರೂ ಪ್ರಯತ್ನಿಸುತ್ತಲೇ ಇದ್ದೇವೆ. ಸಾಹಿತ್ಯ ಮತ್ತು ಕಲೆಗಳ ಕ್ಷೇತ್ರದಲ್ಲಿಯೂ ಸ್ವಚ್ಛಂದ ವಿಚಾರವನ್ನು ಮತ್ತು ಮುಕ್ತ ಅಭಿವ್ಯಕ್ತಿಯನ್ನೂ ಅಂಗೀಕರಿಸಿದ್ದೇವೆ. ಮತಗಳ ಕ್ಷೇತ್ರದಲ್ಲಿಯೂ ಮತಶ್ರದ್ಧೆಗೆ ಲೋಪವೇನೂ ಬಂದಿಲ್ಲ. ದರ್ಶನಗಳ ವಿಷಯದಲ್ಲಿ ಅತಿ ದೊಡ್ಡ ವಿದ್ವಾಂಸರಿಂದಿಗೂ ಅನೇಕ ಜನ ಇದ್ದಾರೆ. ಅವರ ಭಾಷಣಗಳನ್ನು ಕೇಳಲು ಸಾವಿರಾರು ಜನ ಗುಂಪುಗೂಡುತ್ತಾರೆ. ಮೋಕ್ಷಕ್ಕೆ ಅಭ್ಯಾಸದ ರೂಪದಲ್ಲಿರುವ “ಯೋಗ”ವು ಸಹ ಇಂದು ಜನರಲ್ಲಿ ಹೆಚ್ಚಿನ ಪ್ರಚಾರವನ್ನು ಪಡೆದು ನವಜೀವನವನ್ನೂ ಕೊಡುತ್ತಿದೆ. ಇಷ್ಟಾದರೂ, ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಉಪಶಮನವಾಗಲಿ ಕಂಡುಬರುತ್ತಲೇ ಇಲ್ಲ. ಇಷ್ಟೊಂದು ಮಾನವ ಪ್ರಯತ್ನವಿದ್ದರೂ ಮಾನವರ ನಡುವಿನ ಸೌಹಾರ್ದ್ಯವು ದಿನದಿನಕ್ಕೂ ನಾಶವಾಗುತ್ತಿರುವುದನ್ನು ನೋಡಿದರೆ ಗತಿಕಾಣದಂತಾಗಿದೆ. ಎಷ್ಟು ವಿಧವಾದ ಕಾನೂನುಗಳನ್ನು ಮಾಡಿದರೂ ಪ್ರಯೋಜನ ಕಂಡು ಬರುತ್ತಿಲ್ಲ. ವೇದಾಂತಗಳ ಬೋಧನೆಗಳಿಂದ ನೈತಿಕ ಮೌಲ್ಯಗಳಿಲ್ಲದಿರುವುದವರನ್ನು ಪರಿವರ್ತಿಸುವುದು ಸಾಧ್ಯವೇ? ಆದುದರಿಂದ ನಮ್ಮಲ್ಲಿನ ಲೋಪವೆಲ್ಲಿದೆ ಎಂಬುದನ್ನು ಕಂಡುಹಿಡಿದು ನಿವಾರಿಸಬೇಕಾದುದು ಇಂದು ಅತ್ಯಾವಶ್ಯಕವಾಗಿದೆ.
ಮಾನವರ ನಡುವಣ ಸಹಕಾರವು ಎಲ್ಲ ವಿಧದಲ್ಲೂ ಸಹಕರಿಸುವವರಿಗೆ ಒಳಿತನ್ನು ಮಾಡಿಯೇ ತೀರುತ್ತದೆ. ಅಸಹಕಾರ ಮತ್ತು ಸ್ಪರ್ಧೆ ಎಂದೆಂದಿಗೂ ನೆಮ್ಮದಿಯ ಬಾಳಿಗೆ ಕುಂದುಗಳೇ. ಅವುಗಳಿಗೆ ಸಿಲುಕಿಕೊಂಡವರ ಅಭಿವೃದ್ಧಿಗೆ ಮಾರಕಗಳೇ. ಸಹಕಾರದಲ್ಲಿ ಸಹಕರಿಸುವವರ ಶಕ್ತಿಗಳೆಲ್ಲವೂ ಒಟ್ಟುಗೂಡಿ ಅವರೆಲ್ಲರ ಹಿತದಲ್ಲಿ ಪರಿಣಮಿಸುತ್ತದೆ. ಆದರೆ ಸ್ಪರ್ಧೆಯಲ್ಲಿನವರ ಶಕ್ತಿಗಳಲ್ಲಿ ಬಹುಪಾಲು ವ್ಯರ್ಥವಾಗಿ ಸ್ಪರ್ಧಾಳುಗಳ ಹಿತಕ್ಕೆ ನೆರವಾಗುವುದು ಸ್ವಲ್ಪ ಮಾತ್ರ. ಅದರಿಂದ ಗಳಿಸುವ ಸಾಧನೆಯ ಆನಂದವನ್ನೂ ಸಹ ಸ್ಪರ್ಧೆಯಲ್ಲಿನ ಕಹಿ ಕೆಡಸಿಬಿಡುತ್ತದೆ. ಸಹಕಾರ ಸ್ಪರ್ಧೆಗಳ ಈ ರಹಸ್ಯವು ಎಲ್ಲರಿಗೂ ತಿಳಿದಿರುವುದೇ. ಆದರೆ ಯಾರೋ ಕೆಲವರು ಪುಣ್ಯಾತ್ಮರು ಮಾತ್ರ ಇತರರೊಂದಿಗೆ ಹೊಂದಾಣಿಕೆಯಿಂದ ಬಾಳಬಲ್ಲರು. ಉಳಿದೆಲ್ಲರೂ ಅವರ ಸ್ವಾರ್ಥದಿಂದಲೂ, ಸಂಕುಚಿತ ದೃಷ್ಟಿಯಿಂದಲೂ ವಂಚಿತರಾಗಿರುತ್ತಾರೆ. ತೃಪ್ತಿಯಿಲ್ಲದ ಆಸೆಯಿಂದಾಗಿ ಅವರು ಸದಾ ಇತರರೊಂದಿಗೆ ಸ್ಪರ್ಧಿಸುತ್ತಲೇ ಇರುತ್ತಾರೆ. ಈ ಸ್ಪರ್ಧೆಯಲ್ಲಿ ಅವರು ತಮ್ಮ ಸದ್ಗುಣಗಳನ್ನೂ, ಸುಖ ಶಾಂತಿಗಳನ್ನೂ ಒಂದೊಂದು ಸಲ ಪ್ರಾಣಗಳನ್ನು ಸಹ ತಾತ್ಕಾಲಿಕ ಪ್ರಯೋಜನಗಳಿಗಾಗಿ ಬಲಿ ಕೊಡುವುದುಂಟು. ಈ ರೀತಿಯ ಜೀವನ ವಿಧಾನವೇ ಇಂದಿನ ಸದ್ಗತಿಯಾಗಿರುವಾಗ ಮಾನವರಲ್ಲಿ ಸೌಹಾರ್ದದ ಬೆಳವಣಿಗೆಯನ್ನು ನಾವು ಅಪೇಕ್ಷಿಸಲು ಹೇಗೆ ಸಾಧ್ಯ? ಇಂತಹ ಸ್ವಭಾವದವರು ಅನೇಕ ಸಲ ದೊಡ್ಡ ಮನುಷ್ಯರಂತೆ ಕಂಡುಬಂದರೂ ಅದು ಬರೀ ತೋರಿಕೆ. ಅವರಲ್ಲಿ ಪ್ರಾಮಾಣಿಕತೆಯಿರುವುದಿಲ್ಲ. ತಮಗೆ ತೊಂದರೆಯಾಗದಿದ್ದರೆ ಅವರು ಕಾನೂನನ್ನು ಮುರಿಯಲು ಸಹ ಸಿದ್ಧರಾಗಿರುತ್ತಾರೆ. ಅವರು ತಮ್ಮ ಬುದ್ಧಿಶಕ್ತಿಯನ್ನು ಇತರರನ್ನು ವಂಚಿಸಲು ಮತ್ತು ಅಶಕ್ತರಿಂದ ಅಕ್ರಮ ಲಾಭ ಪಡೆಯಲು ಉಪಯೋಗಿಸುತ್ತಾರೆ. ಅವರಲ್ಲಿನ ದೈತ್ಯನು ಧರ್ಮಶಾಸ್ತ್ರಗಳ ಶ್ಲೋಕಗಳನ್ನು ಹೇಳುವುದೂ ಉಂಟು. ಆದರೆ ಎಂತಹವನೂ ಒಂದೇ ಸಮನೆ ಲೋಕವನ್ನು ವಂಚಿಸುವುದು ಅಸಾಧ್ಯ. ಚರಿತ್ರೆಯಲ್ಲಿ ಎಷ್ಟು ಜನ ನಿರಂಕುಶಾಧಿಕಾರಿಗಳ ಗತಿ ಕೊನೆಗೆ ಏನಾಯಿತು? ಅಧಿಕಾರ ದಾಹವುಳ್ಳ ಅವರ ಸ್ವಭಾವವು ಅಲ್ಪಕಾಲಿಕವಾದುದು. ಅದು ಅವರನ್ನೇ ತಲಕೆಳಗೆ ಉರುಳಿಸಿಬಿಡುತ್ತದೆ. ಮಾನವ ಸಂಬಂಧಗಳನ್ನು ಉತ್ತಮಪಡಿಸುವುದರಲ್ಲಿ ಕೊಳಕು ಹೃದಯಗಳ ಮತ್ತು ನಂಬಿಕೆಗೆ ಅನರ್ಹರಾದ ಅಧಿಕಾರಲಾಲಸರು ತಾನೆ ಅಡ್ಡಿ ನಿಂತಿರುವುದು? ಜಾತಿ ಮತ್ತು ಕೋಮು ಭಾಷೆ, ಸಂಸ್ಕೃತಿಗಳ ಹೆಸರುಗಳಲ್ಲಿ ಜನರ ನಡುವೆ ವೈಷಮ್ಯಗಳನ್ನು ಸೃಷ್ಟಿಸುತ್ತಿರುವ ಅಧಿಕಾರಲಾಲಸರ ಕೈಗೊಂಬೆಗಳಾಗಿ ಮಾನವರನ್ನು ಕೊಲ್ಲುವ ಭಯಂಕರ ಮತ್ತು ಅತಿಹೀನವಾದ ಮಾರಕಾಸ್ತ್ರಗಳ ತಯಾರಿಕೆಯಲ್ಲಿ ತೊಡಗುತ್ತಾರೆ. ನಾಗರಿಕರೆಂದೆನಿಸಿಕೊಳ್ಳುವ ನಾವು ಆತ್ಮವಿನಾಶಕರವಾದ ಹಾದಿಯಲ್ಲಿ ಪ್ರಳಯದತ್ತ ಸಾಗುತ್ತಿದ್ದೇವೆ.
ಅಸುರೀಶಕ್ತಿಯ ಹಾವಳಿ ಇಂದಿಗಿಂತಲೂ ಹಿಂದಿನ ಕಾಲದಲ್ಲಿ ಕಡಿಮೆಯಾಗಿರಲಿಲ್ಲ. ಆದರೆ ಅದಕ್ಕೆ ಸಹಾಯಕನಾಗಿ ಇಂದಿನ ಮಾರಕಾಸ್ತ್ರಗಳು ಅಂದು ಇರಲಿಲ್ಲ. ಇಂದಿನ ವಿಜ್ಞಾನದಿಂದುಂಟಾದ ಲಾಭಗಳು ಅದರಿಂದುಂಟಾಗುತ್ತಿರುವ ನಷ್ಟಗಳಿಗಿಂತಲೂ ಹೆಚ್ಚಾಗಿಲ್ಲ. ನಷ್ಟಗಳೇ ಹೆಚ್ಚಾಗಿವೆಯೆಂದು ಹೇಳಬಹುದು. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯಿಂದುಂಟಾದ ಐಹಿಕ ಸಂಪತ್ತಿನಿಂದ ಕೆಲವು ಅನುಕೂಲವುಂಟಾಗಿವೆಯಾದರೂ ಇದು ಮಾನವನ ಕೊನೆಯಿಲ್ಲದ ಆಸೆಗಳೆಂಬ ಅಗ್ನಿಯಲ್ಲಿ ತುಪ್ಪ ಸುರಿಯುತ್ತ ಹಿಂದಿನ ಕಾಲದಲ್ಲಿ ಒಂದೊಂದು ಸಲವಾದರೂ ಆತನಿಗೆ ಸಿಗುತ್ತಿದ್ದ ಶಾಂತಿಯನ್ನು ಸಹ ದೋಚುತ್ತಿದೆ. ವಿಜ್ಞಾನವು ಮಾನವನಲ್ಲಿನ ಅಸುರೀಶಕ್ತಿಗೆ ಮಾರಕಾಸ್ತ್ರಗಳನ್ನೊದಗಿಸಲು ಸಹಕಾರಿಯಾಗಿ ನಿಂತಿದೆ. ಈ ಹುಚ್ಚಿನಲ್ಲಿ ಮಾನವನು ತನ್ನನ್ನು ಸಾವಿರಗಟ್ಟಲೆ ವರ್ಷಗಳಿಂದ ಬೆಳೆಸಿ ಪೋಷಿಸುತ್ತ ಬಂದಿರುವ ಮಾನವೀಯ ಮೌಲ್ಯಗಳ ಬೆಲೆಯನ್ನು ಮರೆತಿದ್ದಾನೆ. ಇಂದು ನಾವು ಮಾನವರ ಮನಸ್ಸುಗಳನ್ನು ಬದಲಾಯಿಸಿ ಅವರು ಒಟ್ಟು ಜನರ ಹಿತದೃಷ್ಟಿಯಲ್ಲಿ ಪರಸ್ಪರ ಸಹಕರಿಸುವಂತೆ ಮಾಡಬೇಕಾಗಿದೆ.
ಒಂದು ಪ್ರಯೋಜನವಿದೆಯೆಂದು ತಿಳಿದುಬಂದರೆ ಯಾರಾದರೂ ಅದರ ಕಡೆ ಆಕರ್ಷಿತರಾಗುತ್ತಾರೆ. ಸಮುದ್ರದ ತಳದಲ್ಲಿ ಚಿನ್ನದ ರಾಶಿಯಿದೆಯೆಂದು ತಿಳಿದುಬಂದರೆ ಮಾನವನು ಅದಕ್ಕಾಗಿ ನೀರಿನಲ್ಲಿ ಮುಳುಗಲು ಸಾಹಸ ಮಾಡುತ್ತಾನೆ ಹಾಗೆಯೇ ಅಪಾಯವಿದೆಯೆಂದು ತಿಳಿದುಬಂದರೆ ಹೆದರಿಕೆಯಿಂದ ತನ್ನ ಉದ್ದೆಶಗಳನ್ನು ಬದಲಾಯಿಸಿಕೊಳ್ಳುತ್ತಾನೆ. ಆಸೆ ಮತ್ತು ಹೆದರಿಕೆ ಎಂಬೀ ಎರಡೂ ಮಾನವರ ದೃಷ್ಟಿಕೋನಗಳನ್ನು ಬದಲಾಯಿಸುವ ಪ್ರಬಲ ಶಕ್ತಿಗಳು.
ಮಾನವರಲ್ಲಿನ ಪರಸ್ಪರ ಸದ್ಭಾವದಿಂದ ಮತ್ತು ಸಹಕಾರದಿಂದ ಅವರಿಗೆ ಲಾಭವಿದೆಯೆಂಬುದು ನಿಸ್ಸಂಶಯ. ಪರಸ್ಪರ ವೈಷಮ್ಯಗಳಿಂದ ಅಪಾಯವಿದೆಯೆಂಬುದೂ ಅಷ್ಟೇ ನಿಜ. ಆದರೆ ಈ ಎರಡರಿಂದುಂಟಾಗುವ ಆಸೆ ಮತ್ತು ಹೆದರಿಕೆಯ ಶಕ್ತಿಗಳು ಮಾನವನ ಆವೇಶಗಳನ್ನು ಮೀರಿ ನಿಲ್ಲುವಷ್ಟು ಸಮರ್ಥಗಳಲ್ಲ. ಮಾನವನಲ್ಲಿನ ಲಾಲಸೆಯ ಶಕ್ತಿ ಆತನ ವಿವೇಕವನ್ನು ಕುಂಠಿತ ಮಾಡುತ್ತದೆ. ಹೇಗಾದರೂ ತಪ್ಪಿಸಿಕೊಳ್ಳುವ ಅವಕಾಶವಿದೆಯೆಂದು ಕಂಡುಬಂದರೆ, ಕಳ್ಳತನಕ್ಕೆ ಶಿಕ್ಷೆಯಿದೆಯೆಂದು ತಿಳಿದಿದ್ದರೂ ಮಾನವನು ಇನ್ನೊಬ್ಬನ ಚಿನ್ನದ ಸರವನ್ನು ಕದ್ದು ತಾನೇಕೆ ಕೂಡಲೆ ಧನಿಕನಾಗಬಾರದೆಂದು ಆಲೋಚಿಸುತ್ತಾನೆ. ಅಂದರೆ ಮಾನವನು ಸಮೀಪ ದೃಷ್ಟಿ ಉಳ್ಳವನು ಮಾತ್ರವೆಂಬುದು ತಿಳಿದುಬರುತ್ತದೆ. ಸದಾಚಾರ, ನೀತಿ,ನಡವಳಿಕೆಯಿಂದ ಲಭಿಸುವ ಶಾಶ್ವತ ಪ್ರಯೋಜನವು ಈತನಿಗೆ ಗೋಚರಿಸುವುದಿಲ್ಲ. ಗೋಚರಿಸಿದರೂ ಅದರ ಮೇಲೆ ಗಮನ ನಿಲ್ಲುವುದಿಲ್ಲ. ಸಮಾಜದಲ್ಲಿ ಇದೇ ಪ್ರವೃತ್ತಿಯೇ ತುಂಬಿರುವಾಗ ತಾತ್ಕಾಲಿಕ ಲಾಭದ ಗೀಳು ಹೆಚ್ಚಾಗಿರುವುದೂ ಅದರಿಂದ ಮುಂದೆ ಬರಬಹುದಾದ ಅನರ್ಥದ ಹೆದರಿಕೆ ಕಡಿಮೆಯಾಗಿರುವುದೂ ಸಹಜ.
ಆದುದರಿಂದ ನೀತಿಯ ಲಾಭಗಳನ್ನು ಮತ್ತು ಅನೀತಿಯಾಪಾಯಗಳನ್ನು ಕುರಿತು ಜನರಿಗೆ ಸರಿಯಾದ ತಿಳುವಳಿಕೆಯನ್ನು ಕೊಡುವುದೊಂದೇ ಉಳಿದಿರುವ ಮಾರ್ಗ. ಸದ್ವರ್ದನೆ ಮತ್ತು ನೀತಿಯ ವಿಷಯವಾಗಿ ಜನರಲ್ಲಿರುವ ಅಭಿಪ್ರಾಯವನ್ನು ಉತ್ತಮಗೊಳಿಸಬೇಕಾಗಿದೆ. ಹೀಗೆ ಮಾಡುವುದರಿಂದ ಒಳಿತಿನ ಆಸೆಯ ಶಕ್ತಿಗೂ ಅಪಾಯಗಳ ಹೆದರಿಕೆಯ ಶಕ್ತಿಗೂ ಬೆಂಬಲ ನೀಡಿದಂತಾಗುವುದು.
ಮೂರನೆಯ ಶಕ್ತಿಯೂ ಒಂದಿದೆ. ಮಾನವನಲ್ಲಿ ಇತರ ಮಾನವರ ಮೇಲೆ ಸಹಜವಾಗಿರುವ ಮೇಲೆ ಸಹಜವಾಗಿರುವ ಪ್ರೇಮದಿಂದಲೂ ಸಹಜವಾದ ವಿವೇಕರಿಂದಲೂ ಸಹಜವಾಗಿ ಉಂಟಾಗುವ ಸದ್ಭಾವನೆಯ ಶಕ್ತಿಯೇ ಇದು. ಈ ಶಕ್ತಿಯು ಪ್ರತಿ ಒಬ್ಬನಲ್ಲಿಯೂ ಇದ್ದೇ ಇರುತ್ತದೆ. ಆದರೆ ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ಪ್ರಮಾಣದಲ್ಲಿರಬಹುದಷ್ಟೇ. ಸದ್ವರ್ತನೆ ಮತ್ತು ನೀತಿಯ ಒಪ್ಪುವ ರೀತಿಯ ಪ್ರಭಾವಶಾಲಿ ಪ್ರಚಾರದಿಂದ ಈ ಶಕ್ತಿಗೂ ಬಲವನ್ನೊದಗಿಸಲು ಸಾಧ್ಯ.
ಸದ್ವರ್ತನೆಯ ವಿಷಯವನ್ನಾಗಲಿ ನೀತಿಗಳನ್ನಾಗಲಿ ತಿಳಿಯದಿರುವ ಮನುಷ್ಯನೇ ಇಲ್ಲ. ಆದರೆ ಅವುಗಳಲ್ಲಿ ಧೃಢವಿಶ್ವಾಸ ಅಥವಾ ಶ್ರದ್ಧೆಯಿರುವುದು ಅಪರೂಪ. ನೀತಿಗಳಲ್ಲಿನ ಶ್ರದ್ಧೆ ಹಿಂದಿನ ಕಾಲದಲ್ಲಿ ಸಾಮಾನ್ಯ ಜನರಲ್ಲಿ ಹೆಚ್ಚಾಗಿದ್ದಿತು. ಇದಕ್ಕೆ ಕಾರಣ ಅವರಿಗೆ ಅವರವರ ಮತಗಳಲ್ಲಿದ್ದ ಶ್ರದ್ಧೆ. ಈಗಲೂ ಮತಗಳನ್ನು ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಿದರೆ ಅದೇ ಫಲ ದೊರೆಯುತ್ತದೆ. ಆದರೆ ದುರದೃಷ್ಟದಿಂದ ಬೋಧಕರ ವಿಷಯದಲ್ಲೂ ಶಿಷ್ಯರ ವಿಷಯದಲ್ಲೂ ಮತವೆಂಬುದು ಬರುಬರುತ್ತ ಗುಂಪುಗಾರಿಕೆಯನ್ನು ಬೆಳೆಸುವ ಸಾಧನವಾಗುತ್ತಿದೆ. ಮತ್ತು ದೇವರ ಪ್ರಾರ್ಥನೆಯಿಂದ ಐಹಿಕ ಸುಖವನ್ನು ಪಡೆಯಬಹುದೆಂಬ ಆಶೆಯನ್ನು ಬೆಳೆಸುವ ಸಾಧನವಾಗುತ್ತಿದೆ. ನೈತಿಕ ಮಟ್ಟವನ್ನು ಕೆಳಗಿಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಮತಗಳು ಕೈಬಿಟ್ಟಿವೆ. ಎಂದು ಅಧಿಕಾರದ ರಾಜಕೀಯವು ಮತಗಳಲ್ಲಿ ತಲೆಹಾಕಿತೋ ಅಂದೇ ಈ ದುಸ್ಥಿತಿ ತಲೆದೋರಿತು. ಅಮೆರಿಕಾದ ಅಧ್ಯಕ್ಷರು ಚರ್ಚೆಗೆ ಗೌರವ ತೋರಿಸುವವರಾಗಿದ್ದಾರೆ. ಆದರೆ ಆ ದೇಶವು ಹಿರೋಷಿಮಾ ಮೇಲೆ ಅಣುಬಾಂಬನ್ನೆಸೆದಾಗ ಚರ್ಚಿನವರು ಆತನನ್ನೇಕೆ ಆಕ್ಷೇಪಿಸಲಿಲ್ಲ? ಯುದ್ಧವನ್ನು ನಿಲ್ಲಿಸಲು ಅಮೇರಿಕಾ ತನ್ನ ಶಕ್ತಿಯನ್ನು ಬೇರೆ ರೀತಿಯಲ್ಲಿ ತೋರಿಸಿದ್ದರೆ ಆಗುತ್ತಿರಲಿಲ್ಲವೇ? ಕಮ್ಯುನಿಜಂ ತಲೆದೋರಲು ಕಾರಣವೇನು? ನೈತಿಕ ಮಟ್ಟವು ಸರಿಯಾಗಿದ್ದಿದ್ದರೆ ಕಾರ್ಲ್ ಮಾರ್ಕ್ಸ್ ಚರ್ಚಿಗೆ ವಿರುದ್ಧವಾಗಿ ಬಂಡಾಯ ಹೂಡಲು ಕಾರಣವಿತ್ತೇ? ಅನುದ್ದಿಷ್ಟವಾಗಿಯೇ ಆದರೂ ವೈಜ್ಞಾನಿಕ ಸತ್ಯಗಳು ಮತಗಳ ಪುರಾಣ ಸಾಹಿತ್ಯದ ಅನೇಕ ಅಂಶಗಳ ವಾಸ್ತವಿಕತೆಗೆ ಪೆಟ್ಟು ಹೊಡೆದಿವೆ. ಅಸ್ತಿಕ್ಯಕಲ್ಲ. ಈ ಅಂಶಗಳಿಂದ ಜನರಲ್ಲಿನ ನೈತಿಕ ಶ್ರದ್ಧೆಗೆ ಬಹಳ ಬೆಂಬಲವಿತ್ತು. ಸರಿಯಾಗಿ ವಿಚಾರ ಮಾಡಿದರೆ ನೈತಿಕ ಶ್ರದ್ಧೆಯು ಅಸ್ತಿಕ್ಯ ಅಥವಾ ಪುರಾಣ ಕಥೆಗಳ ಆಧಾರದ ಮೇಲೆಯೇನೂ ನಿಂತಿಲ್ಲ. ಆದರೆ ಇವು ನೈತಿಕಶ್ರದ್ಧೆಗೆ ಬೆಂಬಲ ನೀಡುತ್ತಿದ್ದವೆಂಬುದು ನಿಸ್ಸಂಶಯ. ಆದರೆ ನೈತಿಕ ಶ್ರದ್ಧೆಯು ಶೂನ್ಯವಾಗಿರುವ ಕೇವಲ ಆಸ್ತಿಕ್ಯ ಮತ್ತು ಪುರಾಣಕಥೆಗಳು ಜನರನ್ನು ವಂಚಿಸುವಂತಹವು ಮತ್ತು ಅಪಾಯಕರವೂ ಆಗಿರುತ್ತವೆ.
ಓಂದು ವಿಷಯವನ್ನುಕುರಿತು ಜನರು ಸರಿಯಾದ ಆಲೋಚನೆಯನ್ನು ಸಹ ಮಾಡ್ಡದಿರುವುದು ಬಹಳ ಶೋಚನೀಯ, ಆ ವಿಷಯವಿದು. ಎಲ್ಲಾ ಮತಗಳೂ ನೀತಿ ನಡವಳಿಕೆಗಳ ಮಹತ್ವವನ್ನು ಒಂದೇ ರೀತಿಯಲ್ಲಿ ಹೇಳಿರುತ್ತವೆ. ಎಲ್ಲ ಮತಗಳ ಗುರುಗಳೂ ಈ ವಿಷಯದಲ್ಲಿ ಬೇರೆ ಮತ ವಿಷಯಗಳನ್ನು ಸೇರಿಸದೆ, ಒಟ್ಟಾಗಿ ಜನರಿಗೆ ಬೋಧನೆ ಮಾಡುವ ಪ್ರಯತ್ನವನ್ನು ಏಕೆ ಮಾಡಲಿಲ್ಲ? ಅವರವರ ಮತಗಳಿಗೆ ಪ್ರತ್ಯೇಕವಾದ ವಿಷಯಗಳನ್ನು ಅವರು ನೀತಿ ನಡವಳಿಕೆಗಳ ಮಹತ್ವವನ್ನೂಸೇರಿಸಿ ಪ್ರತ್ಯೇಕವಾಗಿ ಅವರವರ ಅನುಯಾಯಿಗಳಿಗೆ ಬೋಧಿಸುವುದರ ಜೊತೆಗೆ ಒಟ್ಟಾಗಿ ಮೇಲೆ ಹೇಳಿದಂತೆ ನೀತಿಬೋಧನೆಯನ್ನು ಪ್ರಭಾವಶಾಲಿಯಾಗಿ ಮಾಡಲು ಏಕೆ ಮುಂದೆ ಬರಲಿಲ್ಲ? ಹೀಗೆ ಮಾಡಿದ್ದರೆ ದೇವರಿಗೆ ಎಷ್ಟೋ ತೃಪ್ತಿಯಾಗುತ್ತಿತ್ತು ಮತ್ತು ಇಂದು ಸ್ವರ್ಗದಲ್ಲಿರುವ ಎಲ್ಲ ಮತಗಳ ಸ್ಥಾಪಕರೂ ಸಂತೋಷಪಡುತ್ತಿದ್ದರು. ಮಾನವ ಜಾತಿಗೂ ಬಹಳ ಉಪಕಾರವಾಗುತ್ತಿತ್ತು. ಇದಕ್ಕೆ ಕಾರಣ ಈ ಮತ ಗುರುಗಳೆಲ್ಲರೂ ತಮ್ಮ ತಮ್ಮ ಮತವೇ ದೊಡ್ಡದೆಂಬ ಒಂದು ಮಾನಸಿಕ ಪಕ್ಷಪಾತಕ್ಕೆ ಗುರಿಯಾಗಿರುವುದೇ ಎಂದು ಭಾವಿಸಬೇಕು. ಈ ಪ್ರಪಂಚಕ್ಕೆಲ್ಲಾ ಇರುವ ದೇವರೊಬ್ಬನೇ, ಮತಗಳಲ್ಲಿನ ಭಿನ್ನತೆ ಆ ಒಬ್ಬನೇ ದೇವನ ಸೃಷ್ಟಿಯಲ್ಲೇ ಕಾಣುವ ವೈವಿಧ್ಯದಿಂದ ಮಾತ್ರ ಉಂಟಾಗಿದೆ ಎಂಬ ಸತ್ಯವೇ ಅವರಿಗೆ ಕಂಡುಬಂದಂತೆ ಕಾಣುವುದಿಲ್ಲ.
ಮೇಲಿನ ವಿಚಾರದಿಂದ ಸದಾಚಾರ, ಸದ್ವರ್ತನೆ, ನೀತಿ ಅಥವಾ ಧರ್ಮವೆಂಬುದಾವುದಿದೆಯೋ ಅದನ್ನು ಇಂದು ಮತದಿಂದ ಪ್ರತ್ಯೇಕಿಸಿ ಪ್ರಚಾರ ಮಾಡಬೇಕಾದ ಅತ್ಯವಸರ ಅವಶ್ಯಕತೆ ಇದೆ ಎಂದು ಸ್ಪಷ್ಟವಾಗುತ್ತದೆ. ಇದರ ಜತೆಗೆ ಧರ್ಮಕ್ಕೆ ಪ್ರಾಧಾನ್ಯ ಕೊಟ್ಟು ವಿವಿಧ ಮತಗಳ ಪ್ರತ್ಯೇಕವಾದ ಪ್ರಚಾರವೂ ನಡೆಯಲಿ. ಮತದಿಂದ ಬೇರ್ಪಡಿಸುವುದರಿಂದ ಧರ್ಮಕ್ಕೆ ಮತದ ಜೋಡಣೆಯಿಂದ ಸಿಗುತ್ತಿದ್ದ ಆಸಕ್ತಿ ಸಿಗದೇ ಇರಬಹುದು. ಆದರೆ ಇದನ್ನು ವೈಚಾರಿಕತೆಯ ಶಕ್ತಿಯಿಂದ ಪೂರೈಸಬೇಕು. ಅಂದರೆ ಧರ್ಮವನ್ನು ಒಂದು ಸಮಾಜ ಮತ್ತು ಮಾನಸಿಕ ವಿಜ್ಞಾನವನ್ನಾಗಿ ಪ್ರಚಾರ ಮಾಡಬೇಕಾಗಿದೆ. ಆರೋಗ್ಯ ಶಾಸ್ತ್ರವು ಒಂದು ವಿಜ್ಞಾನ. ವೈದ್ಯ ಶಾಸ್ತ್ರವು ಒಂದು ವಿಜ್ಞಾನ. ಜನರು ಇವುಗಳಿಗೆ ಮನ್ನಣೆ ಕೊಟ್ಟು ಆಸೆಗಳನ್ನು ಚಪಲಗಳನ್ನು ಬಿಟ್ಟು, ಸಾಕಷ್ಟು ಹಣ ವೆಚ್ಚ ಮಾಡಿ ಆರೋಗ್ಯದ ಅಪೇಕ್ಷಯಿಂದಲೂ ಖಾಯಿಲೆಗಳ ಹೆದರಿಕೆಯಿಂದಲೂ ಮುನ್ನೆಚ್ಚರವನ್ನು, ಚಿಕಿತ್ಸೆಯನ್ನೂ ಪಡೆಯುತ್ತಿಲ್ಲವೇ? ಧರ್ಮದ ವೈಜ್ಞಾನಿಕ ಪ್ರಚಾರದಲ್ಲಿ ಸಮಾಜದಲ್ಲಿನ ಶ್ರೇಷ್ಠರೆನಿಸಿಕೊಂಡವರು ಆಸಕ್ತಿಯನ್ನು ತೋರಿಸಿ ಪ್ರಯತ್ನವನ್ನು ಆರಂಭಿಸಬೇಕಷ್ಟೇ. ಬೇರೆ ಎಲ್ಲರೂ ಹಿಂದೆ ಬರುತ್ತಾರೆ. ಇಂದಿನ ನೈತಿಕ ಪತನಕ್ಕೆ ಇದೊಂದೇ ಮದ್ದು. ಇದಕ್ಕೂ ಮತಗಳಿಗೂ, ವೇದಾಂತ ಅಥವಾ ದರ್ಶನಕ್ಕೂ ಯಾವ ವಿರೋಧವೂ ಇಲ್ಲ. ಅವು ಸಹ ಧರ್ಮದ ಬೆಳವಣೆಗೆಗೆ ಸಹಾಯ ಮಾಡಬಲ್ಲವು.
ಧರ್ಮವನ್ನು ಸಮಾಜ ಮತ್ತು ಮಾನಸಿಕ ವಿಜ್ಞಾನವನ್ನಾಗಿ ಭಾವಿಸಲು ಸಾಧ್ಯವೇ ಎಂಬ ಪ್ರಶ್ನೆ ಉಳಿಯುತ್ತದೆ. ನನ್ನ ಅಭಿಪ್ರಾಯದಂತೆ ಇದು ಸಾಧ್ಯ. ಈ ಕೆಳಗೆ ಧರ್ಮದ ಕೆಲವು ಮೂಲತತ್ವಗಳನ್ನು ನಮೂದಿಸುವ ಪ್ರಯತ್ನ ಮಾಡಿರುತ್ತೇನೆ. ಇವು ಸ್ವಯಂ ಸಿದ್ಧ ಸತ್ಯಗಳೂ, ಅನುಭವ ಮತ್ತು ಪ್ರಯೋಗಗಳಿಂದ ಸಾಧಿಸಲ್ಪಟ್ಟ ಅಥವಾ ಸಾಧಿಸಬಹುದಾದ ಸತ್ಯಗಳೂ ಆಗಿರುತ್ತವೆ. ಇವುಗಳಲ್ಲಿ ಸ್ವಯಂಸಿದ್ಧ ಸತ್ಯಗಳಿಗೆ ಬೆಂಬಲವಾಗಿ ಅತಿ ಪ್ರಾಚೀನ ಕಾಲದಿಂದ ಪ್ರಪಂಚದ ಎಲ್ಲ ದೇಶಗಳ ಮಹಾ ಮೇಧಾವಿಗಳೂ ತಮ್ಮ ಅನುಭವದ ಮೇಲೆ ಪಕ್ಷಪಾತವಿಲ್ಲದೆ ಲೋಕ ಹಿತಕ್ಕಾಗಿ ಹೇಳಿರುವ ಅಭಿಪ್ರಾಯಗಳ ಸಾಕ್ಷ್ಯವು ಸಾಕಷ್ಟಿದೆ. ಕೆಳಕಂಡ ತತ್ವಗಳನ್ನು ಭಿನ್ನಭಿನ್ನ ರಾಜಕೀಯ ವ್ಯವಸ್ಥೆಗಳವರೆಲ್ಲರೂ ಉಪಯೋಗಿಸಿ ಪ್ರಯೋಜನವನ್ನು ಪಡೆಯಬಹುದು.
ಧರ್ಮದ ಮೂಲತತ್ವಗಳು
1. ನಿರ್ವಚನ
1. ಅಂತರಾತ್ಮನನ್ನು ಪರಿಶುದ್ಧವಾಗಿರಿಸಲು, ನೈತಿಕ ಪ್ರವರ್ತನೆಯನ್ನು ಧೈರ್ಯದಿಂದ ಮುಂದುವರಿಸಲು ಆಧ್ಯಾತ್ಮಿಕ ಉನ್ನತಿಯನ್ನು ಪಡೆಯಲು, ಮನಸ್ಥೈರ್ಯವನ್ನು ಬೆಳೆಸಿಕೊಳ್ಳಲು ಮತ್ತು ವ್ಯಕ್ತಿಗತವಾಗಿ ಶಾಶ್ವತವಾದ ಆನಂದವನ್ನು ಪಡೆಯಲು ಮತ್ತು 2. ಸಮಾಜದಲ್ಲಿ ವೈಷಮ್ಯಗಳು ಮತ್ತು ಸ್ಪರ್ಧೆಗಳು ಕಡಿಮೆಯಾಗಿ ಸಹಕಾರವು ಹೆಚ್ಚುವುದರಿಂದ ಅತಿ ಗರಿಷ್ಠ ಪ್ರಯೋಜನವನ್ನು ಸಾಧಿಸಿ ಅದನ್ನು ಸಮಾಜದ ಎಲ್ಲರೂ ಸಮಾನವಾಗಿ ಹಂಚಿಕೊಳ್ಳಲು ಜನರೆಲ್ಲರೂ ಅನುಸರಿಸಬೇಕಾದ ನೀತಿ ನಿಯಮಗಳ ಗುಂಪಿಗೆ ಧರ್ಮವೆಂದು ಹೆಸರು.
2. ಧರ್ಮದ ಅವಶ್ಯಕತೆ
ಅರ್ಥ ಎಂದರೆ ಐಹಿಕ ಸಂಪತ್ತು ಮತ್ತು ಕಾಮ ಎಂದರೆ ಇಂದ್ರಿಯ ಸುಖ. ಈ ಎರಡೂ ವ್ಯಕ್ತಿಯ ಮತ್ತು ಸಮಾಜದ ಸುಖಕ್ಕೆ ಅವಶ್ಯವಾದವು ವ್ಯಕ್ತಿಯ, ಸಮಾಜದ ಸುಖವನ್ನು ಸಾಧಿಸಲು ಮಾನವನು ಮಾಡುವ ನಿರಂತರವಾದ ಪರಿಶ್ರಮಕ್ಕೆ ಮೇಲ್ಕಂಡವುಗಳಲ್ಲಿನ ಆಸೆಯೇ ಮುಖ್ಯವಾದ ಪ್ರಚೋದಕ ಶಕ್ತಿ. ಆದರೆ ಈ ಆಸೆಯು ನಿಯಂತ್ರಿತವೂ, ಸರಿಯಾದ ಮಾರ್ಗದಲ್ಲಿ ಪ್ರೇರಿತವೂ ಆಗಿರಬೇಕು. ಇಲ್ಲದಿದ್ದರೆ ಇದರಿಂದ ಮಾನವರಲ್ಲಿ ವೈಷಮ್ಯಗಳು ಹುಟ್ಟಿ ಎಲ್ಲರಿಗೂ ಪ್ರತಿಕೂಲಕರವೂ, ವಿನಾಶಕರವೂ ಆಗುತ್ತದೆ. ಮೇಕಂಡ ಆಸೆಗಳ ನಿಯಂತ್ರಣವು ಸ್ವಲ್ಪಮಟ್ಟಿಗೆ ಪ್ರತಿ ಒಂದು ರಾಷ್ಟವು ಜಾರಿಗೆ ತರುವ ಕಾನೂನಿನಿಂದ ಮಾಡಲ್ಪಡುತ್ತದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಂತೂ ಈ ಕಾನೂನಿನಿಂದುಂಟಾದ ನಿಯಂತ್ರಣವು ಅತ್ಯಲ್ಪವೇ ಸರಿ. ನಿಯಂತ್ರಣದ ವಿಷಯದಲ್ಲೂ ಅರ್ಥ ಕಾಮಗಳಾಸೆಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವ ವಿಷಯದಲ್ಲೂ ಕಾನೂನು ಸಾಧಿಸಲಾರದುದನ್ನು ಧರ್ಮವು ಸಾಧಿಸಬೇಕಾಗಿದೆ. ಕಾನೂನಿನಿಂದುಂಟಾಗುವ ನಿಯಂತ್ರಣವು ಬಲಾತ್ಕಾರದ ರೂಪದಲ್ಲಿರುತ್ತದೆ. ಆದರೆ ಧರ್ಮದ ನಿಯಂತ್ರಣವು ಇಚ್ಛಾಪೂರ್ವಕವಾದುದು. ಇಚ್ಛಾಪೂರ್ವಕವಾದ ನಿಯಂತ್ರಣವೇ ಮಾನವನು ಸಾಧಿಸಿರುವ ಪ್ರಗತಿಗೆ ಲಕ್ಷಣ. ಅದು ಮಾತ್ರ ಮಾನವನ ಸಮಸ್ಯೆಗಳನ್ನು ಶಾಶ್ವತವಾದ ರೀತಿಯಲ್ಲಿ ಪರಿಹರಿಸಬಲ್ಲುದು. ಅದರಲ್ಲೂ ಇಂದಿನ ವಿಜ್ಞಾನದ ಮತ್ತು ವಿದ್ಯೆಯ ಪ್ರಗತಿಯ ಯುಗದಲ್ಲಿ ಇದು ಹೆಚ್ಚಿನ ಸತ್ಯ.
3. ಧರ್ಮದ ಉದ್ದೇಶಗಳ ಬಗ್ಗೆ ವಿವರಣೆ
ಅ. ಸಾಮಾಜಿಕ ದೃಷ್ಟಿಕೋನ
1. ಪ್ರಾಣರಕ್ಷಣೆ 2. ಆಹಾರ, ಬಟ್ಟೆ ಮತ್ತು ಮನೆ 3. ವೈದ್ಯಕೀಯ ಸಹಾಯ 4. ಮನಶ್ಯಾಂತಿ 5. ಮರ್ಯಾದೆ 6. ಸಭ್ಯ ಮನರಂಜನೆ 7. ಜ್ಞಾನಾರ್ಜನೆಗೆ ಅವಕಾಶ 8. ಆಧ್ಯಾತ್ಮಿಕ ಪ್ರಗತಿಗೆ ಅವಕಾಶ ಮುಂತಾದವು ಎಲ್ಲ ಮಾನವರಿಗೂ ಬೇಕಾಗಿದೆ. ಲಿಂಗಬೇಧ,ಜಾತಿ, ಜಾತೀಯತೆ, ವೃತ್ತಿ ಮುಂತಾದ ಯಾವ ಬೇಧವನ್ನು ಗಣಿಸದೆ ಇವೆಲ್ಲವನ್ನೂ ಎಲ್ಲರಿಗೂ ಸಾಧ್ಯವಾದಷ್ಟುಸಮಾನವಾಗಿ ಒದಗಿಸುವುದೇ ಧರ್ಮದ ಉದ್ದೇಶವಾಗಿರಬೇಕು. ಇದರಿಂದ ಮಾತ್ರ ಪರಸ್ಪರ ವೈಷಮ್ಯವನ್ನುನಿವಾರಿಸಲು ಸಾಧ್ಯವೆಂಬುದು ನಿಸರ್ಗ ನಿಯಮ. ಈ ಗುರಿಯನ್ನು ಸಾಧಿಸದಿದ್ದರೆ ವೈಷಮ್ಯವು ತಪ್ಪದೆ ಬೆಳೆಯುತ್ತಿರುತ್ತದೆ. ಇದರಿಂದ ಮಾನವ ಲೋಕಕ್ಕೇ ಅನಾನುಕೂಲ. ಮೇಲ್ಕಂಡ ಪ್ರಯೋಜನಗಳನ್ನು ಪ್ರತಿಯೊಬ್ಬ ವ್ಯಕ್ತಿಯು ಸಮಾಜದ ಅಂಗವಾಗಿ ಅಪೇಕ್ಷಿಸಬೇಕೆ ಹೊರತು ಸಮಾಜವನ್ನು ಲಕ್ಷಿಸದೆ ಅಪೇಕ್ಷಿಸಬೇಕು.
ಆ. ವೈಯಕ್ತಿಕ ದೃಷ್ಟಿಕೋನ
ಮೇಲೆ ಧರ್ಮದ ನಿರ್ವಚನದಲ್ಲಿ ಹೇಳಿರುವ ವ್ಯಕ್ತಿಯ ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಗತಿಯ ವಿಷಯದಲ್ಲಿ ಮಾತ್ರ ಸಮಾಜವನ್ನು ಗಮನಿಸದೆ ವೈಯಕ್ತಿಕ ದೃಷ್ಟಿಕೋನದಿಂದ ಧರ್ಮವನ್ನು ನೋಡಬಹುದು. ಇಲ್ಲಿನ ರಹಸ್ಯವೇನೆಂದರೆ ಈ ಪ್ರಗತಿ ವಯಕ್ತಿಕವಾದರೂ ಇದರಿಂದ ಸಮಾಜಕ್ಕೆ ಪ್ರಯೋಜನವಿದ್ದೇ ಇರುತ್ತದೆ.
4. ವೈಜ್ಞಾನಿಕ ದೃಷ್ಟಿಕೋನ
ಧರ್ಮದ ತತ್ವಗಳನ್ನು ಕಂಡುಹಿಡಿದು, ಪರಿಸ್ಥಿತಿಗಳನ್ನನುಸರಿಸಿ ಅವುಗಳ ಅನ್ವಯದಿಂದ ಆಚರಣ ಯೋಗ್ಯವಾದ ಧರ್ಮವನ್ನು ನಿರ್ಣಯಿಸುವುವುದರಲ್ಲಿ ವೈಜ್ಞಾನಿಕ ದೃಷ್ಟಿಕೋನವಿರಬೇಕು. ಇದರಿಂದ ಫಲ ಹೀಗೇ ಆಗುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗುತ್ತದೆ. ಆವೇಶದ ಅಥವಾ ನಂಬಿಕೆಯ ದೃಷ್ಟಿಕೋನದಿಂದ ಧರ್ಮಕ್ಕೆ ಹೆಚ್ಚಿನ ಶಕ್ತಿ ಲಭಿಸುವ ಸಂಭವವಿದ್ದರೂ ಅದರಿಂದ ಅನರ್ಥಗಳ ಸಂಭವವೂ ಇದೆ. ವೈಜ್ಞಾನಿಕ ದೃಷ್ಟಿಕೋನದಿಂದಲೂ ಶಕ್ತಿ ಇರುತ್ತದೆ. ಈ ಶಕ್ತಿ ಧೃಢವಾದುದು. ವೈಜ್ಞಾನಿಕ ದೃಷ್ಟಿಕೋನದಲ್ಲಿ ಆಲೋಚನೆ, ಅನುಭವ ಮತ್ತು ಪ್ರಯೋಗಗಳಿಗೆ ಹೆಚ್ಚಿನ ಮಹತ್ವವಿದೆ.
5. ಮಾನವ ಮಾನವರಲ್ಲಿರುವ ಭೇದ
ವೈಜ್ಞಾನಿಕ ದೃಷ್ಟಿಕೋನದಲ್ಲಿ ಬುದ್ಧಿಶಕ್ತಿ, ದೇಹ ಶಕ್ತಿ, ಮುಂತಾದವು ಮತ್ತು ಕಲಾ ಪ್ರತಿಭೆ, ಸ್ವಭಾವ ನುಂತಾದ ವಿಷಯದಲ್ಲಿ ಬೇರೆ ಬೇರೆ ಮಾನವರಲ್ಲಿರುವ ವ್ಯತ್ಯಾಸಗಳನ್ನು ಗಮನಿಸದಿರಬಾರದು. ಈ ವಿಷಯದಲ್ಲಿ ಆವೇಶದಿಂದಾಗಲಿ,ತೋರಿಕೆಗಾಗಲಿ ಇಲ್ಲದ ಸಮಾನತ್ವವನ್ನು ಇದೆಯೆಂದು ಭಾವಿಸುವುದು ಜನರನ್ನು ತಪ್ಪು ದಾರಿಗೆಳೆಯುತ್ತದೆ.
6. ಧರ್ಮದ ಮೂಲತತ್ವಗಳು
ಕೆಳಕಂಡವೂ ಮತ್ತು ಅಂತಹವೇ ಆದ ಬೇರೆಯವು ಧರ್ಮದ ಸಾರ್ವರ್ತ್ರಿಕ ಮೂಲತತ್ವಗಳೆಂದು ಪರಿಗಣಿಸಬಹುದು:
1.ನನಗೆ ಸಾಧ್ಯವಾದಷ್ಟು ಪ್ರಾಣಿಹಿಂಸೆ ಮಾಡದಿರುವುದು(ಅಹಿಂಸೆ)
2. ಸತ್ಯ
3.ಕದಿಯದಿರುವಿಕೆ(ಆಸ್ತೇಯ)
4. ಮಾನಸಿಕ, ಶಾರೀರಿಕ ಮತ್ತು ಅರ್ಥಶುಚಿತ್ವ
5. ದಮ ಮತ್ತು ಇಂದ್ರಿಯ ನಿಗ್ರಹ
6. ದಾನ ಮತ್ತು ಪರೋಪಕಾರ
7. ದಯೆ
8. ಕ್ಷಮೆ
9. ಆರ್ಜವ(ಕುಟಲತೆ ಇಲ್ಲದಿರುವಿಕೆ)
10. ವಿವೇಕ
11. ಸಂಯಮ
ಮೇಲ್ಕಂಡ ಮೂಲತತ್ವಗಳ ಮೇಲೆ ಆಧಾರ ಪಟ್ಟಿದ್ದರೂ ಬೇರೆ ಬೇರೆ ಸಂದರ್ಭಗಳಲ್ಲಿ ಧರ್ಮದ ಆಚರಣೆಯು ಭಿನ್ನವಾಗಿರಲು ಸಾಧ್ಯ.
7. ತಲೆ ಮತ್ತು ಹೃದಯ
ತಲೆ ಮತ್ತು ಹೃದಯ – ಇವುಗಳ ಸಹಜವಾದ ಶಕ್ತಿಗಳಾದ ವಿವೇಕ ಮತ್ತು ಔದಾರ್ಯಗಳೇ ಧರ್ಮವನ್ನು ಪೋಷಿಸುತ್ತಿರುವ ನೈಸರ್ಗಿಕ ಶಕ್ತಿಗಳು. ಇವು ಎಲ್ಲ ಮಾನವರಲ್ಲೂ ಇದ್ದೇ ಇವೆ. ಆದರೆ ಸ್ವಾರ್ಥದ ದುಷ್ಟ ಶಕ್ತಿಗಳಿಂದ ಮುಚ್ಚಲ್ಪಟ್ಟಿವೆ. ಮೇಲ್ಕಂಡ ಸಚ್ಛಕ್ತಿಗಳನ್ನು ತಿರಸ್ಕರಿಸಿ ಮೇಲ್ಕಂಡ ದುಷ್ಟಶಕ್ತಿಗಳನ್ನು ತಿರಸ್ಕರಿಸಿ ಮೇಲ್ಕಂಡ ದೈವೀಶಕ್ತಿಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದೇ ಧರ್ಮವನ್ನು ಬೆಳೆಸುವ ರೀತಿ.
8. ಸೂಕ್ಷ್ಮ ಧರ್ಮ
ಆಚರಣಯೋಗ್ಯವಾದ ಧರ್ಮವನ್ನು ನಿರ್ಣಯಿಸುವಾಗ ಸೂಕ್ಷ್ಮವಾದ ವಿಚಾರ ಬೇಕು. ಸ್ಥೂಲವಾದ ನಿರ್ಣಯ ಸರಿಹೋಗುವುದಿಲ್ಲ. ಆಚರಣೆಯ ಬಾಹ್ಯ ಸ್ವರೂಪಪಕ್ಕಿಂತಲೂ ಅದು ಧರ್ಮದ ಮೂಲ ತತ್ವಗಳಿಗೂ ಉದ್ದೇಶಕ್ಕೂ ಅನುಗುಣವಾಗಿಯೇ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಬಹಳ ಮುಖ್ಯ.
9. ಧರ್ಮಪುರುಷ:
ವಿಧಿ ನಿಷೇದಗಳು ಧರ್ಮದ ಶರೀರವಿದ್ದಂತೆ. ತನ್ನ ಶಕ್ತಿಗಳು ಕೇವಲ ಸ್ವಾರ್ಥಕ್ಕೆ ಉಪಯೋಗಿಸಲಿ ಎಂದು ಭಾವಿಸದೆ ಇತರರ ಸೇವೆಗೂ ಉಪಯೋಗವಾಗಲಿ ಎಂಬ ಉದಾತ್ತವಾದ ಹಂಬಲವೇ ಧರ್ಮದ ಪ್ರಾಣ. ಒಂದೇ ಆತ್ಮವೇ ಎಲ್ಲ ಪ್ರಾಣಿಗಳಲ್ಲಿದೆ, ಅಥವಾ ಎಲ್ಲರೂ ಒಬ್ಬನೇ ದೇವರ ಮಕ್ಕಳು ಅಥವಾ ನನ್ನಂತೆಯೇ ಇತರರು ಎಂಬ ಭಾವನೆಯೇ ಧರ್ಮದ ಆತ್ಮ.
10. ಆಚಾರದ ಪ್ರಾಮುಖ್ಯ:
ಧರ್ಮವು ಆಚರಿಸಲ್ಪಟ್ಟರೆ ಮಾತ್ರ ಧರ್ಮವಾಗುತ್ತದೆ. ಆಚರಿಸದೆ ಬೋಧಿಸಿದರೆ ಅದು ಧರ್ಮವಲ್ಲ.
11. ತಾನೇ ವಿಧಿಸಿಕೊಂಡ ನಿಯಮಗಳು:
ನಿಯಮಗಳನ್ನು ತಾನೇ ವಿಧಿಸಿಕೊಂಡು ನಿತ್ಯ ಜೀವನದಲ್ಲಿಯೂ ಅನುಸರಿಸುವುದೂ, ತಪ್ಪು ಮಾಡಿದರೆ ಪಶ್ಚಾತ್ತಾಪಪಡುವುದೂ ಮತ್ತು ಪ್ರಾಯಶ್ಚಿತ್ತ ಮಾಡಿಕೊಳ್ಳುವುದೂ, ಧರ್ಮದ ಶುದ್ಧಿಯನ್ನೂ ಪ್ರಕಾಶವನ್ನೂ ಕಾಪಾಡಿಕೊಳ್ಳಲು ತುಂಬಾ ಮುಖ್ಯ.
12. ಮತಭೇದಗಳು:
ಭಿನ್ನ ಭಿನ್ನ ಮತಗಳ ವಿಷಯದಲ್ಲಾಗಲಿ, ದರ್ಶನಗಳಲ್ಲಿನ ಮತಭೇದಗಳ ವಿಶಯದಲ್ಲಾಗಲಿ, ವೈಜ್ಞಾನಿಕಕರ ಅಭಿಪ್ರಾಯ ಭೇದದ ವಿಷಯದಲ್ಲಾಗಲಿ ತಾಳ್ಮೆಯನ್ನು ತೋರಿಸುವುದೂ, ಒಳ್ಳೆಯದು ಎಲ್ಲಿದ್ದರೂ ಗ್ರಹಿಸುವುದೂ, ಭೇದಗಳ ವಿಷಯವಾಗಿ ಅತಿ ಮಾಡದಿರುವುದೂ ಮುಖ್ಯ.
13. ಸಂಪ್ರದಾಯಗಳೆಲ್ಲವೂ ಧರ್ಮವಲ್ಲ:
ಅನೇಕ ಸಂಪ್ರದಾಯಗಳನ್ನು ನಾವು ಧರ್ಮ ಭೋದೆಗಳೆಂದು ಭಾವಿಸುತ್ತೇವೆ. ಯಾವ ಯಾವ ಸಂಪ್ರದಾಯವು ಎಷ್ಟರಮಟ್ಟಿಗೆ ಧರ್ಮಕ್ಕಾಗಿ ಜಾರಿಗೆ ಬಂದಿದೆ, ಎಷ್ಟರಮಟ್ಟಿಗೆ ಇತರ ಉದ್ದೇಶಗಳಿಂದ ಜಾರಿಗೆ ಬಂದಿದೆ ಎಂಬುದನ್ನು ವಿವೇಚಿಸಬೇಕು. ಸಂಪ್ರದಾಯಗಳ ಅಂಧಾನುಕರಣೆಯು ಧರ್ಮದ ವಿರುದ್ಧವಾದರೆ, ಅಂತಹ ಸಂಪ್ರದಾಯವನ್ನು ಕೂಡಲೇ ಬಿಡಬೇಕು.
14. ಶಕ್ತಿಧರ್ಮ ಸಂಯೋಗ:
ಬುದ್ಧಿಶಕ್ತಿ, ದೇಹಶಕ್ತಿ, ಹಣದ ಶಕ್ತಿ, ಕಲಾ ಪ್ರತಿಭೆ ಮೊದಲಾಗಿ ಶಕ್ತಿಯು ಅನೇಕ ರೂಪಗಳಲ್ಲಿರುತ್ತೆ. ಧರ್ಮ ಮತ್ತು ಶಕ್ತಿಯ ಸಂಯೋಗವು ಸಮಾಜಕ್ಕೆ ಹಿತಕರವೆಂಬುದು ಶಾಶ್ವತ ಸತ್ಯ. ಇದನ್ನನುಸರಿಸಿ, ಸಮಾಜ ಕಲ್ಯಾಣಕ್ಕಾಗಿ ಧರ್ಮಕ್ಕೆ ಶಕ್ತಿಯನ್ನು ಜೋಡಿಸಬೇಕು. ಶಕ್ತಿಗೆ ಧರ್ಮವನ್ನು ಜೋಡಿಸಬೇಕು, ಶಕ್ತಿಯಿಂದ ಅಧರ್ಮವನ್ನು ತೊಲಗೆಸಬೇಕು. ಅಧರ್ಮದಿಂದ ಶಕ್ತಿಯನ್ನು ತೊಲಗಿಸಬೇಕು ಎಂಬ ನಾಲ್ಕು ಉಪಸಿದ್ಧಾಂತಗಳನ್ನು ಗ್ರಹಿಸಬಹುದು.
15. ಧರ್ಮದಲ್ಲಿನ ರಮ್ಯತೆ ಮತ್ತು ಆನಂದ:
ಧರ್ಮವೆಂದರೆ ತನ್ನ ಮೇಲೆ ತಾನೇ ವಿಧಿಸಿಕೊಂಡ ನಿಯಮಗಳಾದುದರಿಂದ ಇದರಲ್ಲಿ ರಮಣೀಯತೆ ಆಗಲೀ ಆನಂದವಾಗಲೀ ಇರಲು ಸಾಧ್ಯವೇ ಎಂದು ಶಂಕಿಸುವುದು ಸರಿಯಲ್ಲ. ಕಾಲಾಂತರದಲ್ಲಿ ಇದರಿಂದ ಸ್ವಾರ್ಥಪೂಜೆಗಿಂತಲೂ ಮಿಗಿಲಾದ ಮತ್ತು ಶಾಶ್ವತವಾದ ಆನಂದವು ಲಭಿಸುತ್ತದೆ. ಆದುದರಿಂದ ಸತ್ಕರ್ಮಾಚರಣೆಯಲ್ಲಿ ಈ ಧರ್ಮಾನಂದವು ದೊಡ್ಡ ಶಕ್ತಿಯಾಗಿ ಕೆಲಸ ಮಾಡುತ್ತದೆ.
16. ಹಕ್ಕು– ಭಾವನೆ ಮತ್ತು ಕರ್ತವ್ಯ ಭಾವನೆ:
ಹಕ್ಕುಗಳಿಗೂ ಕರ್ತವ್ಯಗಳಿಗೂ ಅವಿನಾಭಾವ ಸಂಬಂಧವಿದ್ದರೂ ಸಹ ಧರ್ಮವು ಹಕ್ಕುಭಾವನೆಗಿಂತಲೂ ಹೆಚ್ಚಾಗಿ ಕರ್ತವ್ಯ ಭಾವನೆಯ ಮೇಲೆ ನಿಂತಿದೆ.