ಆರ್ಷ ಮತ್ತು ಅನಾರ್ಷ
(ದಿ. 1-10-1991 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಒದುಗರಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಪ್ರಶ್ನೆ:- ಆರ್ಷ, ಅನಾರ್ಷ ಅಂದರೇನು? ಇವು ಒಂದಕ್ಕೊಂದು ವಿರುದ್ಧವೇ? ಪೂರಕವೆ? ಉವುಗಳಲ್ಲಿ ಯಾವುದು ಅನುಕರಣೀಯ”
ಉತ್ತರ:- ಋಷಿಗೆ ಸಂಬಂಧಿಸಿದ್ದು ಆರ್ಷ. ಋಷಿ ಎಂದರೆ ವೇದವೆಂಬ ಅರ್ಥವೂ ಇರುವುದರಿಂದ ಆರ್ಷವೆಂದರೆ ವೈದಿಕವೆಂದೂ ಅರ್ಥ. ತಪಸ್ಸಿನಿಂದ ಸಕಲ ಪಾಪಗಳನ್ನು ಕಳೆದುಕೊಂಡವನೂ, ಸತ್ಯಸಂಧನೂ, ವೇದಗಳತತ್ವವನ್ನು ತಿಳಿದವನೂ ಋಷಿ ಎನ್ನಿಸುವನು. ಅಲ್ಲದೆ ವೇದಮಂತ್ರಗಳನ್ನು ಮೊದಲಬಾರಿಗೆ ನೋಡಿದವರೂ ಋಷಿಗಳೇ. ಸಂಸ್ಕೃತ ವ್ಯಾಕರಣದಲ್ಲಿ ಆ ಕಾಲದಲ್ಲಿದ್ದ ಭಾಷೆಯನ್ನು ಅಂಗೀಕರಿಸಿ ತದ್ವಿರುದ್ಧವಾಗಿ ವೇದಗಳು ಮುಂತಾದ ಪ್ರಾಚೀನ ಗ್ರಂಥಗಳಲ್ಲಿ ಕಂಡುಬರುವ ಪ್ರಯೋಗಗಳನ್ನು ಆರ್ಷ ಪ್ರಯೋಗಗಳೆಂದು ಒಪ್ಪಿಕೊಂಡಿರುತ್ತಾರೆಯೇ ಹೊರತು, ಅವು ಅನುಕರಣೀಯಗಳಲ್ಲ. ಧರ್ಮದಲ್ಲಿ ಆರ್ಷಧರ್ಮವೆಂದರೆ ಶ್ರುತಿ ಸ್ಮೃತಿಗಳಲ್ಲಿರುವ ಧರ್ಮ. ಧರ್ಮಶಾಸ್ತ್ರಗಳ ರಚನೆಯ ಕಾಲದಲ್ಲಿನ ಪರಿಸ್ಥಿತಿಗಳನ್ನು ಗಮನಿಸಿ ಶಾಸ್ತ್ರಕಾರರು ಆರ್ಷಧರ್ಮಕ್ಕೆ (ವೈದಿಕ ಧರ್ಮಕ್ಕೆ) ಪ್ರಾಶಸ್ತ್ಯ ಕೊಟ್ಟಿದ್ದರು. ಅಷ್ಟೇ ಹೊರತು ವೈದಿಕಧರ್ಮ ಬಿಟ್ಟರೆ ಮಾನವ ಜಾತಿಗೆ ಬೇರೆ ಧರ್ಮವೇ ಇಲ್ಲವೆಂದು ಎಲ್ಲೂ ಹೇಳಿಲ್ಲ. ಅದೂ ಅಲ್ಲದೆ ವೈದಿಕ ಧರ್ಮಕ್ಕೆ ಯಜ್ಞಿಯ ದೇಶವೆಂಬ ಹೆಸರುಳ್ಳ ಭಾರತ ದೇಶವನ್ನು ಬಿಟ್ಟರೆ ಬೇರೆ ಕಡೆ ವ್ಯಾಪ್ತಿಯನ್ನು ಅವರು ಕೊಡಲಿಲ್ಲ. ಅಲ್ಲದೆ ಸದಾಚಾರವು ಸಹ ಧರ್ಮ ಮೂಲಗಳಲ್ಲಿ ಒಂದಾಗಿರುವುದರಿಂದ ಬೇರೆ ದೇಶಗಳವರು ಆ ದೇಶದ ಜ್ಞಾನಿಗಳು ಮತ್ತು ಸತ್ಪುರುಷರ ಬೋಧನೆಗಳನ್ನನುಸರಿಸುವುದು ಧರ್ಮವೆಂದೇ ಅಭಿಪ್ರಾಯ. ಆರ್ಷ ಸಂಪ್ರದಾಯದಲ್ಲಿ ಬಂದವರಿಗೆ ಆರ್ಷಧರ್ಮವು ಆಚರಣೀಯವೇ ಹೊರತು, ಬೇರೆಯವರಿಗೆ ಅನಾರ್ಷಧರ್ಮವೇ ಆಚರಣೀಯ. ಆದುದರಿಂದ ಇವೆರಡೂ ಪರಸ್ಪರ ವಿರುದ್ಧವಲ್ಲ, ಪೂರಕಗಳೇ. ಭಕ್ತಿಮಾರ್ಗವು ದಕ್ಷಿಣ ಭಾರತದಲ್ಲಿ ಹುಟ್ಟಿರುವುದಾಗಿ ಪುರಾಣಗಳಲ್ಲಿ ಪ್ರಸಿದ್ಧಿ. ಇದನ್ನು ಪುರಾಣ ಋಷಿಗಳು ಅಂಗೀಕರಿಸಿ ಸರ್ವಶ್ರೇಷ್ಠವೆಂದು ಸಾರಿಲ್ಲವೇ?
– ಲಂಕಾ ಕೃಷ್ಣಮೂರ್ತಿ