ಮಾತು, ಬರೀ ಮಾತು, ಕೃತಿ ಮಾತ್ರ ಶೂನ್ಯ
(ದಿನಾಂಕ 1-06-1995 ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದ ಲೇಖನ)
ಸ್ವಾತಂತ್ರ್ಯಾನಂತರದ ನಮ್ಮ ಸಾಧನೆಗಳನ್ನೊಮ್ಮೆ ನೋಡಿದಾಗ ಒಂದು ಎದ್ದು ಕಾಣುವ ಅಂಶವೆಂದರೆ ನಾವು ಚೆನ್ನಾಗಿ ಮಾತನಾಡಲು ಕಲಿತಿರುವುದು. ಇನ್ನೇನಿಲ್ಲದಿದ್ದರೂ ಸ್ವತಂತ್ರ ತಂದುಕೊಟ್ಟ ವಾಕ್ ಸ್ವಾತಂತ್ರ್ಯವನ್ನು ಧಾರಾಳವಾಗಿ ಬಳಸಲು ಕಲಿತಿದ್ದೇವೆ. ಪತ್ರಿಕೆಗಳು, ರೇಡಿಯೋ, ಟಿ.ವಿ. ಜಾಲಗಳು, ವಿವಿಧ ವೇದಿಕೆಗಳ ಭಾಷಣಗಳು ಮೊದಲಾದ ಮಾಧ್ಯಮಗಳು ಮಾತಾನಾಡಲು ಕಲಿಸಿವೆ. ಅಷ್ಟೇ ಅಲ್ಲ, ಮಾತಿಗೆ ಸಾಮಗ್ರಿ ಒದಗಿಸುತ್ತಿವೆ. ನಾವು ಮಾತನಾಡದೇ ಇರುವ ವಿಷಯವೇ ಇಲ್ಲ. ಮಾತಿನಂತೆ ಕೃತಿಯಿರಬೇಕೆಂಬ ಎಚ್ಚರವಾದರೂ ಇದ್ದರೆ ಮಾತಿಗೊಂದು ಹಿಡಿತವಿರುತ್ತಿತ್ತು; ನಡೆಯಲು ಆಗದೆ ಇರುವ ಮಾತುಗಳನ್ನು ನುಡಿಯಲು ಸ್ವಲ್ಪವಾದರೂ ಹಿಂದೆ ಮುಂದೆ ನೋಡುವಂತಾಗುತ್ತಿತ್ತು ಅಥವಾ ನುಡಿದಂತೆ ನಡೆಯಬೇಕೆಂಬ ಛಲವಿರಬೇಕಾಗುತ್ತಿತ್ತು. ಈಗ ಅಂಥದ್ದೇನೂ ಇಲ್ಲ. ಇಂದು ಜನಜೀವನದ ಯಾವುದೇ ಕ್ಷೇತ್ರಕ್ಕೆ ಹೋಗಿ ನೋಡಿ: ಅಲ್ಲಿ ಕಾಣುವುದೊಂದೇ, ಮಾತು ಬರೀ ಮಾತು : ಕೃತಿ ಮಾತ್ರ ಶೂನ್ಯ. ಸ್ವತಂತ್ರವೆಂದರೆ ಸ್ವಚ್ಛಂದವೆಂದು ಭ್ರಮಿಸಿದ್ದರ ಫಲವೇ ಇದಿರಬಹುದೆ ?
ಹೋಗಲಿ, ಆಡುವ ಮಾತುಗಳಾದರು ಎಂಥವು ? ಇಹಕ್ಕೂ ಇಲ್ಲ, ಪರಕ್ಕೂ ಇಲ್ಲ. ಬರೀ ಸ್ವಪ್ರಶಂಸೆ, ಪರ ನಿಂದೆಗಳೇ ! ಇನ್ನೊಬ್ಬರನ್ನು ಛೇಡಿಸುವುದು, ಆಡಿಕೊಳ್ಳುವುದು; ಎಲ್ಲಾ ಕದಡಿದ ಮನದ ರಾಡಿಯ ಸಿಂಪರಣೆಗಳು! ಇದು ಬಿಟ್ಟರೆ, ತಮಗೆ ಬರಬೇಕಾದ ಬಡ್ತಿ, ಭತ್ಯ, ಹೆಚ್ಚುವರಿ ಸಂಬಳಗಳ ಬಗ್ಗೆ ಲೆಕ್ಕಾಚಾರದ ಬರೀ ಸ್ವಾರ್ಥಮೂಲವಾದ ಮಾತುಗಳು. ಮಾತು ಮನೆ, ಮನಗಳ ಕೆಡಿಸುವುದು ಎಂಬ ಮಾತು ದಿಟವೆನಿಸುವುದು ಇಲ್ಲಿ. ಆಡುವ ಮಾತು ಆತ್ಮಕುಸುಮವು ಸೂಸುವ ನರುಗಂಪಾಗಿದ್ದರೆ, ಇನ್ನೊಬ್ಬನ ಮನವರಳಿಸುವ ಜ್ಞಾನದ ಕಿಡಿಯಾಗಿದ್ದರೆ ಅದಕ್ಕೂ ಸಾರ್ಥಕತೆಯಿರುತ್ತಿತ್ತು. ಹರಟೆ ಮಾತಿಗೂ ಒಂದು ಅರ್ಥವಿರುತ್ತಿತ್ತು.
ಮಾತನ್ನು ಮಂತ್ರವಾಗಿಸಿ ಆತ್ಮೋನ್ನತಿ ಸಾಧಿಸಿದ ಹಿರಿಯ ಸಂಸ್ಕೃತಿಗೆ ಸೇರಿದವರು ನಾವು. ಜಗವೆಲ್ಲಾ ಇನ್ನೂ ಅಜ್ಞಾನಾಂಧಕಾರದಲ್ಲಿ ಮುಳುಗಿದ್ದಾಗ, ಜ್ಞಾನದ ಹಿಲಾಲು ಹಿಡಿದು ಬೆಳಕಿನ ಮಾತುಗಳಿಂದ ಎಲ್ಲರನ್ನು ಎಚ್ಚರಿಸಿದ ಕೀರ್ತಿ ನಮ್ಮ ಹಿರಿಯರದು. ಆದರೆ ನಾವು ಮಾತನಾಡಿ ಮಾಡುತ್ತಿರುವದೇನು? ಮಹಾನುಭಾವಿ ಸರ್ವಜ್ಞನು ಹೇಳಿರುವಂತೆ ಕಾರ್ಯ ಸಾಧಿಸುವ ಉತ್ತಮ ಗುಣಿಗಳು ನಾವಾಗದಿದ್ದರೂ, ಅಡಿದ್ದನ್ನಾದರೂ ಆಚರಿಸಿ ತೋರುವ ಮಧ್ಯಮ ಗುಣವನ್ನಾದರೂ ಹೊಂದಬಾರದೆ? ನಡೆ ನುಡಿಗಳೊಂದಾದ ಪ್ರಾಮಾಣಿಕ ಬದುಕು ನಮಗಿಂದು ಆದರ್ಶವಾಗಬೇಕಾಗಿದೆ.
ಶ್ರದ್ಧೆಯಿಂದ ಕಲಿಯಬೇಕಾದ ವಿದ್ಯಾರ್ಥಿ ಹರಟೆ ಮಾತಲ್ಲಿ ಐಷಾರಾಮನಾಗಿ ಕಾಲ ಕಳೆದರೂ ಅವನು ಪಾಸಾಗಬೇಕು. ದುಡಿಯುವ ಕಾರ್ಮಿಕ ಕಾಡು ಹರಟೆಯಲ್ಲಿ ಕಾಲ ಕಳೆದರೂ ಅವನಿಗೆ, ತಿಂಗಳಿಗೆ ಸರಿಯಾಗಿ ಪಗಾರ ದೊರೆಯಬೇಕು. ಕಛೇರಿಗಳಲ್ಲಿ ನೌಕರ ಬೆಳಗಿನಿಂದ ಸಂಜೆಯ ತನಕ ಮಾತುಕತೆಗಳಲ್ಲಿ ವ್ಯರ್ಥ ಕಾಲಕಳೆದರೂ ಅವನು ತಿಂಗಳಿಗೆ ಸರಿಯಾಗಿ ಸಂಬಳ ಎಣಿಸಿಕೊಳ್ಳಬೇಕು. ಕೈ ಕೆಸರು ಮಾಡಿಕೊಳ್ಳದೆ ಸುಲಭವಾಗಿ ಬಾಯಿ ಮೊಸರು ಮಾಡಿಕೊಳ್ಳುವ ಸುಖೇಚ್ಛೆ ಇದಕ್ಕೆ ಕಾರಣ. ನೀತಿನಿಯಮಗಳನ್ನು ಗಾಳಿಗೆ ತೂರಿ ಹೇಗಾದರೂ ಮಾಡಿ ಹಣ ಗಳಿಸಬೇಕು, ಅಧಿಕಾರ ಗಿಟ್ಟಿಸಬೇಕೆಂಬ ಆಪಾಯಕಾರಿ ಪ್ರವ್ಯತ್ತಿ ಬೆಳೆಯುತ್ತಿರುವುದು ಶಿಷ್ಟಸಮಾಜದ ಲಕ್ಷಣವಲ್ಲ. ಇಂಥ ಅನಾರೋಗ್ಯದ ಚಾಳಿ ಇಂದು ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಪೂರ್ಣ ಸ್ವರೂಪದಲ್ಲಿ ಪಾಪಾಸುಕಳ್ಳಿಯಂತೆ ಚಾಚಿಕೊಂಡಿದೆ. ಇದರ ಎದುರು ಆದರ್ಶಗಳು ನಿಲ್ಲದಂತಾಗಿದೆ.
ಆಲ್ಲೊಂದು ಇಲ್ಲೊಂದು ಅಪವಾದವೆಂಬಂತೆ ಕಾಣುತಿದ್ದ ದುಷ್ಟತನ ಇಂದು ಸಹಜ ಜೀಪನ ವ್ಯಾಪಾರವೆಂಬಂತೆ ಎಲ್ಲಾ ಕಡೆ ವ್ಯಾಪಿಸಿ ರಾಜಾರೋಷಾಗಿ ಕಂಡುಬರುತ್ತಿದೆ. ‘ಜನ ಸೇವೆಯೇ ಜನಾರ್ದನ ಸೇವೆ’, ‘ಧರ್ಮವನು ರಕ್ಷಿಪನ ಧರ್ಮ ರಕ್ಷಿಪುದು’, ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಧ್ಯೇಯವಾಕ್ಯಗಳು ಪುಸ್ತಕದಲ್ಲಿ ಉಳಿದಿವೆ; ಇಲ್ಲವೆ ಗೋಡೆಬರಹವಾಗಿ ರಾರಾಜಿಸಿದೆ. ಜನರಲ್ಲಿ ಶ್ರದ್ಧೆಯ ದುಡಿಮೆ, ಪ್ರಾಮಾಣಿಕತೆಗಳು ಇಲ್ಲದಿದ್ದರೆ ದೇಶೋದ್ಧಾರವೆ೦ಬುದು ಬರಿಯ ಕನಸಿನ ಮಾತಾಗುತ್ತದೆ.
ಇಂಥ ಪರಿಸ್ಥಿತಿಯಿಂದ ನಾವು ಪಾರಾಗುವುದು ಹೇಗೆ? ಸುಧಾರಣೆ ಬೇಕು. ಅದನ್ನು ಎಲ್ಲಿಂದ ಆರಂಭಿಸುವುದು? ಹೇಗೆ? ಮಾಡುವವರು ಯಾರು? ಸುಧಾರಣಾ ನಿಯತಿ ಹೊರಗಡೆಯಿಂದ ಬರಬಾರದು: ಪ್ರತಿಯೊಬ್ಬನ ಅಂತರಂಗದಲ್ಲಿ ಮೂಡಬೇಕು. ನಾವು ಆಡುವ ಮಾತಿನತ್ತ, ಮಾಡುವ ಕ್ರಿಯೆಯತ್ತ ಒಮ್ಮೆ ಪ್ರಾಮಾಣಿಕವಾಗಿ ಪ್ರಾಂಜಲಮನದಿಂದ ನೋಡಿ ಕಲಿಯೋಣ. ಆಗ ನಾವು ನಮ್ಮ ಇಬ್ಬಂದಿ ಬದುಕಿಗೆ ವಿದಾಯ ಹೇಳಿ ಋಜುಜೀವನ ನಡೆಸುತ್ತೇವೆ: ಮಾತು ನಿಲ್ಲಿಸಿ, ಕರ್ತವ್ಯಮುಖರಾಗುತ್ತೇವೆ ವ್ಯಕ್ತಿ ಜೀವನ ಸುಧಾರಿಸಿದರೆ ಸಮಾಜದ, ದೇಶದ ಸುಧಾರಣೆಯಾಗುವುದು ಎಷ್ಟು ಹೊತ್ತು?
ಸಹಾಯಕ ಸಂಪಾದಕ
