ಅನ್ನವಿಕ್ರಯ ಮತ್ತು ವಿದ್ಯಾವಿಕ್ರಯ
–ಲಂಕಾ ಕೃಷ್ಣಮೂರ್ತಿ
(ಧರ್ಮಪ್ರಭ ಸಂಚಿಕೆಯಲ್ಲಿ ಓದುಗರ ವೇದಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಪ್ರಶ್ನೆ:- ಭಾರತೀಯ ಭವ್ಯಪರಂಪರೆಯಲ್ಲಿ ಹಾಗೂ ಹಿಂದೂ ಧರ್ಮದ ದೃಷ್ಟಿಯಲ್ಲಿ ಅನ್ನವಿಕ್ರಯ ಮತ್ತು ವಿದ್ಯಾವಿಕ್ರಯಕ್ಕೆ ಅವಕಾಶವಿದೆಯೆ? ಹಾಗೆ ಮಾಡುವವರು ನಮ್ಮಲ್ಲಿ ಯಾವ ಗುಂಪಿಗೆ ಸೇರುತ್ತಾರೆ? ಅವರನ್ನು ಹೇಗೆ ಸಂಬೋಧಿಸಬೇಕು?
ಉತ್ತರ :- ನಮಗೆಲ್ಲರಿಗೂ ತಿಳಿದಿರುವಂತೆ ಇಂದಿನ ವಿಜ್ಞಾನ ಯುಗಕ್ಕೆ ಹಿಂದೆ ನಮ್ಮ ದೇಶದಲ್ಲಿ ಅನ್ನವಿಕ್ರಯವೂ ವಿದ್ಯಾವಿಕ್ರಯವೂ ಅಪರೂಪವಾಗಿತ್ತು. ಅತಿಥಿ
ಸತ್ಕಾರವು ಶ್ರೇಷ್ಠ ಧರ್ಮವೆಂದು ಜನ ಭಾವಿಸುತ್ತಿದ್ದು ಅದು ರೂಢಿಯಲ್ಲಿದ್ದ ಆ ಕಾಲದಲ್ಲಿ ಅನ್ನವಿಕ್ರಯವು ಹೀನವೆಂದು ಭಾವಿಸಲ್ಪಡುವುದು ಸಹಜವಾಗಿತ್ತು. ಹಾಗೆಯೇ ಗುರುಕುಲಗಳಲ್ಲಿ ವಿದ್ಯಾಭ್ಯಾಸ ನಡೆಯುತ್ತಿದ್ದ ಕಾಲದಲ್ಲಿ ವಿದ್ಯಾವಿಕ್ರಯವು ಸಹ ಹೀನವೆಂಬ ಭಾವನೆ ರೂಢಿಯಲ್ಲಿತ್ತು. ಹಾಗೆಂದು ಹಿಂದೂ ಸಮಾಜದಲ್ಲಿ ಈ ಎರಡೂ ಇರಲೇ ಇಲ್ಲವೆಂದಾಗಲಿ, ಇವುಗಳನ್ನು ಮಾಡಿದ ಎಲ್ಲ ಜನರಿಗೂ ಪಾಪ ಬರುತ್ತಿತ್ತು ಎಂದಾಗಲಿ ಹೇಳಲು ಆಧಾರವಿಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಸಂಪರ್ಕ ಬರುವುದಕ್ಕೆ ಹಿಂದಿನ ಕಾಲದಲ್ಲಿಯೇ ನಮ್ಮ ದೇಶದಲ್ಲಿ ಹಣ ತೆಗೆದುಕೊಂಡು ಊಟ ಒದಗಿಸುವ ಮನೆಗಳಿದ್ದವು. ಅತಿಥಿ ಸತ್ಕಾರ ಸಿಗಲಿಲ್ಲವೆಂದರೆ ಪರಸ್ಥಳದವರು ಉಪವಾಸವಿದ್ದು ನರಳಬೇಕಾಗಿರುವುದನ್ನು ತಪ್ಪಿಸಲು ಆ ಕಾಲದಲ್ಲೇ ಪಟ್ಟಣಗಳಲ್ಲಿ ಇಂತಹ ವ್ಯವಸ್ಥೆ ರೂಢಿಯಲ್ಲಿತ್ತು. ಸ್ಮೃತಿಗಳ ಕಾಲದಲ್ಲಿಯು ಇಂತಹ ವ್ಯವಸ್ಥೆ ಇದ್ದಿರಬೇಕೆಂದು ಊಹಿಸಲು ಆಧಾರವಿದೆ.
ವಿದ್ಯಾವಿಕ್ರಯವನ್ನು ಕುರಿತು ಹೇಳಬೇಕಾದರೆ ಹಿಂದಿನ ಕಾಲದಲ್ಲಿಯೇ ಕೂಲಿ ಮಠಗಳೆಂಬ ಹೆಸರಿನ ಪಾಠಶಾಲೆಗಳು ಇದ್ದವೆಂದು ಎಲ್ಲರಿಗೂ ತಿಳಿದೇ ಇರುತ್ತದೆ. ಸ್ಮೃತಿಗಳ ಕಾಲದಲ್ಲಿ ವೇದ ವಿದ್ಯೆಯನ್ನು ಬಿಟ್ಟು ಉಳಿದ ವಿದ್ಯೆಗಳ ವಿಷಯದಲ್ಲಿ ಕೂಲಿಗೆ ವಿದ್ಯಾಬೋಧನೆ ಮಾಡುವುದು ಸಹ ಜಾರಿಯಲ್ಲಿತ್ತೆಂದು ಕಾಣುತ್ತದೆ.
ಮನುಸ್ಮೃತಿಯ 11ನೇ ಅಧ್ಯಾಯದ 62ನೇ ಶ್ಲೋಕವು ಹೀಗಿರುತ್ತದೆ:-
ವ್ರಾತ್ಯತಾ ಬಾಂಧವತ್ಯಾಗೋ ಭೃತ್ಯಾಧ್ಯಾಪನ ಮೇವಚI
ಭೃತ್ಯಾಚಾಧ್ಯಯನಾದಾನ ಮಪಣ್ಯಾನಾಂಚ ವಿಕ್ರಯಃII
ಉಪನಯನವಿಲ್ಲದಿರುವಿಕೆ, ಬಂಧುಗಳನ್ನು ಪರಿತ್ಯಜಿಸುವುದು, ಸಂಬಳಕ್ಕೆ ವೇದ ವಿದ್ಯೆಯನ್ನು ಬೋಧಿಸುವುದು, ಸಂಬಳ ಕೊಟ್ಟು ವೇದ ವಿದ್ಯೆಯನ್ನು ಕಲಿಯುವುದು, ಮಾರಬಾರದ ವಸ್ತುಗಳನ್ನು ಮಾರುವುದು ಇವೆಲ್ಲವೂ ಸಹ ಉಪಪಾತಕಗಳು.
ಇಲ್ಲಿ ಅಧ್ಯಯನ ಮತ್ತು ಅಧ್ಯಾಪನ ಎಂಬ ಪದಗಳು ದ್ವಿಜರಿಗೆ ವಿಹಿತವಾದ ವೇದಾಧ್ಯಯನ, ಮತ್ತು ವೇದದ ಅಧ್ಯಾಪನವೆಂದು ನನ್ನ ಅಭಿಪ್ರಾಯ. ಉಪವೇದಗಳನ್ನು ಸಹಸೇರಿಸಬಹುದು. ಅದನ್ನು ಬಿಟ್ಟು ಉಳಿದ ವಿದ್ಯೆಗಳ ವಿಷಯದಲ್ಲಿ ಧನವನ್ನು ತೆಗೆದುಕೊಂಡು ವಿದ್ಯೆಯನ್ನು ಕೊಡುವುದು ಪಾಪವಲ್ಲ ಎಂದು ಕಾಣುತ್ತದೆ. ಕಾರಣ ಮನುಸ್ಮೃತಿಯ 2ನೇಅಧ್ಯಾಯ 109 ನೇ ಶ್ಲೋಕವು ಹೀಗಿದೆ:-
ಆಚಾರ್ಯಪುತ್ರಃ ಶುಶ್ರೂಷಃ ಜ್ಞಾನದೋ ಧಾರ್ಮಿಕಃ ಶುಚಿಃ I
ಆಪ್ತಃ ಶಕ್ತೋರ್ಥದಃ ಸಾಧುಃ ಸ್ವೋಧ್ಯಾಪ್ಯಾದಶ ಧರ್ಮತಃ II
ಆಚಾರ್ಯನ ಮಗ, ಶುಶ್ರೂಷೆ ಮಾಡುವವನು, ವಿದ್ಯಾವಿನಿಮಯ ಕರ್ತೃ, ಧರ್ಮಶ್ರದ್ಧಾಳು, ಶುಚಿ, ಆಪ್ತ, ವಿದ್ಯೆಗೆ ಅರ್ಹನು, ಧನ ಕೊಡುವವನು, ಹಿತಕೋರುವವನು, ತನ್ನ ಕುಲದವನು – ಈ ಹತ್ತು ಮಂದಿಯು ವಿದ್ಯಾದಾನ ಪಾತ್ರರು.
ಇಲ್ಲಿ ಧನ ಕೊಟ್ಟು ವಿದ್ಯೆ ಪಡೆಯುವುದನ್ನು ಸಹ ಸೇರಿಸಲಾಗಿದೆ.
ಅನ್ನವಿಕ್ರಯದ ವಿಷಯದಲ್ಲಿ ಮನುಸ್ಮೃತಿಯ 10 ನೇ ಅಧ್ಯಾಯದ 86ನೇ ಶ್ಲೋಕವು ಹೀಗಿರುತ್ತದೆ:-
ಸರ್ವಾನ್ ರಸಾನಪೋಹೇತ ಕೃತಾನ್ನಂಚ ತಿಲೈ ಸಹ I
ಅಶ್ಮನೋ ಲವಣಂಚೈವ ಪಶವೋಯೇಚ ಮಾನುಷಾಃ II
ರಸಗಳು, ಸಿದ್ಧಾನ್ನ, ಎಳ್ಳು, ಕಲ್ಲು, ಉಪ್ಪು, ಮನುಷ್ಯರ ಪಶುಗಳು ಇವೆಲ್ಲವನ್ನು ಬ್ರಾಹ್ಮಣ ಕ್ಷತ್ರಿಯರು ಆಪತ್ಕಾಲದಲ್ಲಿ ವೈಶ್ಯ ವೃತ್ತಿಯಿಂದ ಜೀವಿಸುತ್ತಿದ್ದರೂ ಮಾರಬಾರದು.
ಆದುದರಿಂದ ಅನ್ನವಿಕ್ರಯದ ನಿಷೇಧವು ಬ್ರಾಹ್ಮಣ ಕ್ಷತ್ರಿಯರಿಗೆ ಮಾತ್ರ ಅನ್ವಯಿಸುತ್ತದೆ. ಇವರು ಮಾತ್ರ ಇದನ್ನು ಉಲ್ಲಂಘಿಸಿದರೆ ಪಾಪ ಬರುತ್ತದೆ.
ಆದುದರಿಂದ ಅನ್ನವಿಕ್ರಯ ಮತ್ತು ವಿದ್ಯಾವಿಕ್ರಯವು ಸಾಧ್ಯವಾದಷ್ಟು ಸಮಾಜದಲ್ಲಿ ನಡೆಯದಿರಲಿ ಇದಕ್ಕೆ ಬದಲಾಗಿ ಅತಿಥಿ ಸತ್ಕಾರ, ಬ್ರಹ್ಮಚಾರಿಗಳ ಭಿಕ್ಷಾಟನೆ, ಮುಂತಾದವು ಮತ್ತು ವಿದ್ಯಾಭ್ಯಾಸಕ್ಕೆ ಗುರುಕುಲದ ಪದ್ಧತಿ ಮತ್ತು ವಿದ್ಯಾವಂತರಾದವರು ಅರ್ಹರಿಗೆ ವಿದ್ಯಾದಾನ ಮಾಡುತ್ತ, ಅವರು ಕೊನೆಗೆ ಕೊಡುವ ಗುರುದಕ್ಷಿಣೆ ಮತ್ತು ಇತರರು ಪ್ರೀತಿ ಪೂರ್ವಕವಾಗಿ ಕೊಡುವ ದಾನ ಇವುಗಳಿಂದ ಬಡತನದ ಜೀವನವನ್ನು ನಡೆಸುತ್ತ ತೃಪ್ತರಾಗಿ ಸದ್ಭ್ರಾಹ್ಮಣರ ಲಕ್ಷಣಗಳುಳ್ಳವರಾಗಿರಬೇಕು, ಎಂಬುದೇ ಧರ್ಮ ಶಾಸ್ತ್ರಗಳ ಧ್ಯೇಯ. ಇದೇ ಭಾರತಿಯ ಸಂಸ್ಕೃತಿಯ ಭವ್ಯವಾದ ಲಕ್ಷ್ಯ.
ಹಾಗೆಂದು ಇಂದಿನ ವಿಜ್ಞಾನ ಯುಗದಲ್ಲಿ ಪಾಶ್ಚಾತ್ಯ ಜೀವನ ಪದ್ಧತಿಯ ಅನುಕರಣೆಯಲ್ಲಿ ಅನ್ನವಿಕ್ರಯ ಮತ್ತು ವಿದ್ಯಾವಿಕ್ರಯ ಮಾಡುತ್ತಿರುವವರನ್ನು ದೂಷಿಸುವುದು ಸರಿಯಲ್ಲ. ಇಂದು ಅನ್ನವಿಕ್ರಯ ಶಾಲೆಗಳಿಲ್ಲದಿದ್ದರೆ ಜನರು ಸತ್ತುಹೋಗುವ ಪರಿಸ್ಥಿತಿ ಬರುತ್ತದೆ. ವಿದ್ಯಾವಿಕ್ರಯಕ್ಕೆ ಸರಿಯಾದ ಪ್ರತ್ಯಾಮ್ನಾಯವು ಯಾವುದೂ ಕಂಡುಬರುತ್ತಿಲ್ಲ. ಆದರೆ ಇಂದಿನ ಜನರು ನಮ್ಮ ಭವ್ಯ ಪರಂಪರೆಯಿಂದ ಧರ್ಮದ ಮೂಲ ತತ್ವಗಳಲ್ಲಿ ಆಸಕ್ತಿಯನ್ನು ಬೆಳಸಿಕೊಳ್ಳಬೇಕಾಗಿದೆ, ಮತ್ತು ಸಾಧ್ಯವಾದಷ್ಟು ಅರ್ಥದ ವಿಷಯದಲ್ಲಿ ಶುಚಿಗಳಾಗಿ ಸ್ವಾರ್ಥ ಪರರಾಗದೆ, ಅಲ್ಪತೃಪ್ತರಾಗಿ, ಬಡಬಗ್ಗರಿಗೆ ಸಹಾಯ ಮಾಡುವವರಾಗಿರಬೇಕಾಗಿದೆ.
ಇಂದು ಅನ್ನವಿಕ್ರಯ ಮಾಡುವವರನ್ನೇ ಧರ್ಮದ ದೃಷ್ಟಿಯಿಂದ ಒಂದು ಹೆಸರಿಟ್ಟು ಸಂಬೋಧಿಸಲು ಸಾಧ್ಯವಿಲ್ಲ. ಹಾಗೆಯೇ ವಿದ್ಯಾವಿಕ್ರಯದ ವಿಷಯದಲ್ಲೂ. ಈ ಜನರಲ್ಲೂ ಸಹ ದೊಡ್ಡ ಧರ್ಮಿಷ್ಠರಿದ್ದಾರೆ. ಅವರವರನ್ನು ಗುರುತಿಸದೆ ವೃತ್ತಿಯಿಂದಲೇ ದೂಷಿಸುವುದು ಯುಕ್ತವಲ್ಲ. ಕಾರಣ ಹಿಂದಿನ ಜೀವನ ವಿಧಾನಕ್ಕೂ ಇಂದಿನ ಜೀವನ ವಿಧಾನಕ್ಕು ಅಜಗಜಾಂತರ ವ್ಯತ್ಯಾಸವಾಗಲೇ ಉಂಟಾಗಿದೆ.
ಈ ಸಂದರ್ಭದಲ್ಲಿ ಹಿಂದಿನ ಕಾಲದಲ್ಲಿ ಒಂದು ಕೆಲಸವು ಅಧರ್ಮವೆಂಬುದಾಗಿ ಭಾವಿಸಲ್ಪಟ್ಟಿರುವಾಗ ಅದು ಇಂದಿನ ವಿಜ್ಞಾನ ಯುಗದಲ್ಲಿ ಅಧರ್ಮವಲ್ಲವೆಂದು ಹೇಳುವುದು ಸಾಧ್ಯವೆ? ಎಂಬ ಸಂಶಯವು ಹುಟ್ಟುವುದು ಸಹಜ. ವಿಜ್ಞಾನ ಯುಗದಲ್ಲಿ ಸೂರ್ಯಚಂದ್ರರು, ನಕ್ಷತ್ರಗಳು ಮತ್ತು ದ್ವಾದಶಗ್ರಹಗಳು ತಮ್ಮ ಚಲನೆಯಲ್ಲಿ ಮತ್ತು ಕಿರಣಗಳನ್ನು ಹೊರಹೊಮ್ಮುವುದರಲ್ಲಿ ಬದಲಾವಣೆ ಮಾಡಿವೆಯೇ? ಹಾಗೆಯೇ ಪಂಚಮಹಾಭೂತಗಳಾದ ಪೃಥ್ವಿ ಅಪ್ ತೇಜಸ್ ವಾಯ್ವಾಕಾಶಗಳು ತಮ್ಮ ಗುಣಗಳಲ್ಲಿ ಬದಲಾವಣೆ ಹೊಂದಿವೆಯೇ? ಭಾರತದಲ್ಲಿ ವಿಜ್ಞಾನ ಯುಗವಿರಲಿಲ್ಲವೇ? ಹಿಂದೂ ಧರ್ಮವು ವೈಜ್ಞಾನಿಕವಲ್ಲವೇ? ಎಂಬ ಪ್ರಶ್ನೆಗಳಿಗೆ ಉತ್ತರವನ್ನು ನನ್ನ ಮಿತ್ರರು ಅಪೇಕ್ಷಿಸುತ್ತಾರೆ. ನನ್ನ ಅಲ್ಪಮತಿಗೆ ತೋಚಿದ ವಿಷಯಗಳನ್ನು ಓದುಗರ ಮುಂದೆ ಇಡುತ್ತಿದ್ದೇನೆ.
ವಸ್ತುಗಳ ಸ್ಥಿತಿಯು ಕಾಲದಲ್ಲಿ ಬದಲಾವಣೆ ಆಗುವುದು ಪ್ರಕೃತಿ ನಿಯಮವೇ? ಅಥವಾ ಬದಲಾವಣೆ ಆಗದಿರುವುದು ಪ್ರಕೃತಿ ನಿಯಮವೇ ಎಂಬುದನ್ನು ಕುರಿತು ಮೊದಲು ಆಲೋಚಿಸಬೇಕಾಗಿದೆ. ಸೂಕ್ಷ್ಮವಾಗಿ ಪರಿಶೀಲಿಸಿದರೆ ಬದಲಾವಣೆ ಆಗುವುದೇ ಪ್ರಕೃತಿನಿಯಮವೆಂದು ಹೇಳಬೇಕಾಗಿರುತ್ತದೆ. ಸ್ಥೂಲವಾಗಿ ನೋಡಿದರೆ ಬದಲಾವಣೆಯು ಮತ್ತು ಬದಲಾವಣೆ ಆಗದೆ ಇರುವಿಕೆಯೂ ಎರಡೂ ಇರುತ್ತವೆ. ಸೂಕ್ಷ್ಮದೃಷ್ಟಿಗೆ ಸೃಷ್ಟಿಸ್ಥಿತಿ ಲಯಗಳು ಸದಾ ನಡೆಯುತ್ತಲೇ ಇರುವುದು ಗೊತ್ತಾಗುತ್ತದೆ. ಇಂದಿನ ಸೂರ್ಯಚಂದ್ರರು ಇಲ್ಲದ ಕಾಲವಿತ್ತು. ಈಗ ಇರುವ ಕಾಲ ಮುಂದೆ ಅವರಿಲ್ಲದ ಕಾಲವೂ ಬರುತ್ತದೆ. ಅನಂತವಾದ ಕಾಲದಲ್ಲಿ ಸೂರ್ಯಚಂದ್ರರು, ನಕ್ಷತ್ರಗಳು ಸಹ ತಮ್ಮ ಚಲನೆಯಲ್ಲಿಯು ಕಿರಣಗಳನ್ನು ಹೊರಹೊಮ್ಮುವುದರಲ್ಲಿಯು ಬದಲಾವಣೆಯನ್ನು ತಪ್ಪದೇ ತೋರಿಸುತ್ತವೆ. ಪಂಚ ಮಹಾಭೂತಗಳು ಸಹ ತಮ್ಮ ಸ್ವರೂಪವನ್ನೇ ಕಳೆದುಕೊಳ್ಳುತ್ತವೆ. ಭೂಮಿ, ನೀರು, ಅಗ್ನಿವಾಯುಗಳು ಮೊದಲು ಶಕ್ತಿಯರೂಪದಲ್ಲಿದ್ದು ಈ ರೂಪತಾಳಿದವು. ಮುಂದೆಯೂ ಶಕ್ತಿಯ ರೂಪಕ್ಕೆ ಹೊರಟು ಹೋಗುತ್ತವೆ. ಆಕಾಶದ ವಿಷಯದಲ್ಲಿ ಅದರ ಸ್ವರೂಪವು ಸ್ಥಿರವೆಂದು ಭಾವಿಸಲ್ಪಡುತ್ತಿರುವ ಕಾಲ ಈಗಿಲ್ಲ. ವಿಜ್ಞಾನಿಗಳೇ ಈಗ ಹೊಸ ಭಾವಗಳನ್ನು ಪ್ರಕಟಿಸುತ್ತಿದ್ದಾರೆ.
ಆದರೆ ಸ್ಥೂಲವಾದ ದೃಷ್ಟಿಗೆ ಇವೆಲ್ಲಾ ಬದಲಾವಣೆಯಿಲ್ಲದ ವಿಷಯಗಳೆಂದು ಇಟ್ಟುಕೊಳ್ಳಬಹುದು. ಆದರೆ ಕ್ಷಣ ಕ್ಷಣವೂ ಬದಲಾಗುತ್ತಿರುವ ವಿಷಯಗಳು ಪ್ರಕೃತಿಯಲ್ಲೇ ಎಷ್ಟಿಲ್ಲ. ಹಗಲು, ರಾತ್ರಿ, ಋತುಗಳು, ಉಲ್ಕಾಪಾತಗಳು, ಧೂಮಕೇತುಗಳು, ಜನ್ಮ, ಮೃತ್ಯುಗಳು, ಬಾಲ್ಯ ಮುಂತಾದ ಅವಸ್ಥೆಗಳು ಸುಖ ದು:ಖಗಳು, ಅದೃಷ್ಟ, ದುರದೃಷ್ಟಗಳು ಇತ್ಯಾದಿ ಅನೇಕ ಬದಲಾವಣೆಗಳು ಸಹ ಸಹಜವಾಗಿರುವುದರಿಂದ ಬದಲಾವಣೆಯೂ ಪ್ರಕೃತಿ ಸಹಜವೇ. ಬದಲಾವಣೆಗಳ ಹಿಂದೆ ಅವುಗಳನ್ನು ನಡೆಸುವ ಕೆಲವು ಶಾಶ್ವತವಾದ ಮೂಲತತ್ವಗಳಿರುತ್ತವೆ. ಈ ಮೂಲತತ್ವಗಳನ್ನರಿಯುವುದು, ಅದಕ್ಕೂ ಬದಲಾವಣೆಗಳಿಗೂ ಇರುವ ಸಂಬಂಧವನ್ನರಿಯುವುದು ಮತ್ತು ಈ ಜ್ಞಾನವನ್ನು ಜನರ ಹಿತಕ್ಕಾಗಿ ಬಳಸಿಕೊಳ್ಳುವ ವಿಧಾನಗಳನ್ನು ಕಂಡುಹಿಡಿಯುವುದು ಇದೇ ವಿಜ್ಞಾನ. ಇದು ಪ್ರಕೃತಿಗೆ ಮಾತ್ರವಲ್ಲದೆ ಧರ್ಮಕ್ಕೂಅನ್ವಯಿಸುತ್ತದೆ. ಧರ್ಮದಲ್ಲಿ ಬದಲಾವಣೆಯಿಲ್ಲದ ಕೆಲವು ಮೂಲತತ್ವಗಳಿರುತ್ತವೆ. ಆದರೆ ಇವುಗಳನ್ನು ಆಯಾ ಸಂದರ್ಭಗಳಿಗೆ ತಕ್ಕಂತೆ ಉಪಯೋಗಿಸಿಕೊಳ್ಳುವ ವಿಧಾನಗಳೂ ಇರುತ್ತವೆ. ವೈಜ್ಞಾನಿಕವಾದ ಧರ್ಮಕ್ಕೆ ಈ ಎರಡರ ಅರಿವೂ ಬೇಕು. ದೇಶ ಕಾಲ ಪರಿಸ್ಥಿತಿಗಳನ್ನು ಅನುಸರಿಸಿ ಮೂಲತತ್ವಗಳಿಗೆ ಧಕ್ಕೆ ಇಲ್ಲದಂತೆ ಆಚರಣೆಯ ವಿಧಾನವನ್ನು ನಿರೂಪಿಸಿಕೊಂಡು ಎಲ್ಲ ಭೂತಗಳ ಹಿತವನ್ನು ಸಾಧಿಸುವುದೇ ವೈಜ್ಞಾನಿಕ ಉದ್ದೇಶ.
ಈ ದೃಷ್ಟಿಯಲ್ಲಿ ಹಿಂದೂ ಧರ್ಮವು ವೈಜ್ಞಾನಿಕವಾದ ಧರ್ಮವೆಂಬುದು ನಿಸ್ಸಂದೇಹವಾದ ವಿಷಯ. ಆದುದರಿಂದಲೇ ಹಿಂದೂಧರ್ಮದಲ್ಲಿ ಧರ್ಮ ಗ್ರಂಥಗಳಲ್ಲಿ ಹೇಳಿರುವ ಮಾತನ್ನು “ಈದಿದೆ ಎಂದರೆ ಕೊಟ್ಟಿಗೆಗೆ ಹಾಕು” ಎಂಬಂತೆ ಉಪಯೋಗಿಗಿಸಿಕೊಳ್ಳಬಾರದೆಂಬ ನಿಯಮವು ಒತ್ತಿ ಹೇಳಲ್ಪಟ್ಟಿದೆ.
ಧರ್ಮ ನಿರ್ಣಯವನ್ನು ಸ್ಥೂಲ ದೃಷ್ಟಿಯಿಂದ ಮಾಡಬಾರದೆಂದೂ ಸೂಕ್ಷ್ಮ ದೃಷ್ಟಿಯಿಂದ ಮಾಡಬೇಕೆಂದೂ ಹೇಳಲ್ಪಟ್ಟಿದೆ. ಮನುಸ್ಮೃತಿಯ ಕೊನೆಯ ಭಾಗದಲ್ಲಿ:
ಪ್ರತ್ಯಕ್ಷಂ ಚಾನುವತಾನಂಚ ಶಾಸ್ತ್ರಂಚ ವಿವಿಧಾಗಮಂ I
ತ್ರಯಂ ಸುವಿದಿತಂ ಕಾರ್ಯಂ ಧರ್ಮಂ ಶುದ್ಧಿಮಭೀಪ್ಸತಾ
ಆರ್ಷಂ ಧರ್ಮೋಪದೇಶಂಚ ವೇದಶಾಸ್ತ್ರಾ ವಿರೋಧಿನಾ I
ಯಸ್ತರ್ಕೇಣಾನುಸಂಧತ್ತೇ ಸಧರ್ಮಂ ವೇದ ನೇತರಃ II
ಎಂದು ಹೇಳಲ್ಪಟ್ಟಿದೆ. ಪ್ರತ್ಯಕ್ಷವನ್ನು ಅಂದರೆ ನಾವು ಅನುಭವದಿಂದ ತಿಳಿಯುತ್ತಿರುವ ಸತ್ಯಗಳನ್ನೂ, ಅನುಮಾನವನ್ನು ಅಂದರೆ ನಮ್ಮ ಬುದ್ಧಿಶಕ್ತಿಯಿಂದ ಸರಿಯಾಗಿ ಊಹೆ ಮಾಡುವುದನ್ನು ಅನೇಕ ಪಂಡಿತರು ಚರ್ಚಿಸಿ ಮಾಡಿರುವ ಶಾಸ್ತ್ರಗಳ ಅಭ್ಯಾಸವನ್ನೂ, ಧರ್ಮ ಜ್ಞಾನದ ಸಲುವಾಗಿ ಉಪಯೋಗಿಸಿಕೊಳ್ಳಬೇಕು. ಋಷಿಗಳ ಉಪದೇಶವನ್ನು ವೇದಗಳ ಮತ್ತು ಶಾಸ್ತ್ರಗಳ ಮೂಲತತ್ವಗಳಿಗೆ ವಿರೋಧವಿಲ್ಲದ ತರ್ಕದಿಂದ ವಿಮರ್ಶೆ ಮಾಡಿದವನಿಗೆ ಮಾತ್ರ ಧರ್ಮವು ತಿಳಿದುಬರುತ್ತದೆಯೇ ಹೊರತು ಇತರರಿಗೆ ತಿಳಿದುಬರುವುದಿಲ್ಲವೆಂದು ಇದರ ಅಭಿಪ್ರಾಯ.
ಅಲ್ಲದೆ ಯುಗಗಳ ಭೇದದಿಂದ ಆಚಾರ ಧರ್ಮಗಳಲ್ಲಿ ಭೇದವಿರುತ್ತದೆಂಬುದು ಹಿಂದೂಧರ್ಮದ ಮೂಲತತ್ವಗಳಲ್ಲೊಂದು. ಮನುಸ್ಮೃತಿಯ 1ನೇ ಅಧ್ಯಾಯದಲ್ಲಿ ಕೃತಯುಗದಲ್ಲಿ ಮನುಷ್ಯರ ಆಯುಃ ಪ್ರಮಾಣವು 400 ವರ್ಷವಿತ್ತೆಂದೂ ಇದು ಕ್ರಮೇಣ ಕ್ರಮೇಣ ಕಡಿಮೆಯಾಯಿತೆಂದೂ, ಬೇರೆ ಬೇರೆ ಯುಗಗಳಲ್ಲಿ ಧರ್ಮಗಳು ಬೇರೆಯಾಗಿರುತ್ತವೆಂದೂ ಹೇಳಲ್ಪಟ್ಟಿರುತ್ತದೆ.
ಸ್ಮೃತಿಗಳ ಕಾಲದಲ್ಲಿ ಇಂದಿನ ಯಂತ್ರಗಳು ಬಳಕೆಯಲ್ಲಿರಲಿಲ್ಲ. ಮನುಸ್ಮೃತಿಯು ಮಹಾಯಂತ್ರ ಪ್ರವರ್ತನವನ್ನು ಪಾಪವೆಂದು ಹೇಳುತ್ತದೆ. ಪುರಾಣ ಕಥೆಗಳಿಂದಲೂ, ಇನ್ನೂ ಕೆಲವು ಆಧಾರಗಳಿಂದಲೂಧರ್ಮವು ಮಾತ್ರ ವೈಜ್ಞಾನಿಕವಾಗಿದ್ದುದಲ್ಲದೆ, ಇಂದಿನ ವಿಜ್ಞಾನವನ್ನು ಮೀರಿದ ವಿಜ್ಞಾನವು ಒಂದಾನೊಂದು ಕಾಲದಲ್ಲಿದ್ದು ನಾಶವಾಗಿ ಯಂತ್ರರಹಿತವಾದ ಸಂಸ್ಕೃತಿಯು ಸ್ಮೃತಿಗಳ ಕಾಲದಲ್ಲಿತ್ತೆಂದು ಹೇಳಲು ಅವಕಾಶವಿದೆ. ಹಿಂದಿನ ಕಾಲದಲ್ಲಿ ಕುದುರೆಗಿಂತಲೂ ವೇಗವಾದ ವಾಹನವಿರಲಿಲ್ಲ. ಈಗ ನಾವು ರಾತ್ರಿ ಹಗಲು ಎಂತಹ ವೇಗವಾದ ವಾಹನಗಳಲ್ಲಿ ಸಂಚರಿಸುತ್ತಿದ್ದೇವೆ? ಎಣ್ಣೆ ದೀಪಗಳನ್ನು ಬಿಟ್ಟರೆ ಹಿಂದಿನ ಕಾಲದವರಿಗೆ ಬೇರೆ ಗತಿಯಿರಲಿಲ್ಲ. ಇಂದು ಎಂತಹ ವಿದ್ಯುದ್ದೀಪಗಳು ಹಳ್ಳಿಹಳ್ಳಿಯಲ್ಲೂ ಹಬ್ಬಿಕೊಂಡಿವೆ. ಇಂದಿನ ಜೀವನ ವಿಧಾನಕ್ಕೂ ಹಿಂದಿನ ಜೀವ ವಿಧಾನಕ್ಕೂ ಅಜಗಜಾಂತರ ವ್ಯತ್ಯಾಸವಿರುವಾಗ ಹಿಂದಿನ ಆಚಾರಗಳೇ ಇಂದು ಸಾಧ್ಯವೇ? ಆದರೆ ಧರ್ಮದ ಮೂಲತತ್ವಗಳಲ್ಲಿ ಮಾತ್ರ ಭೇದಕ್ಕೆ ಅವಕಾಶವಿಲ್ಲ.
ಅನ್ನವನ್ನು ಹಣ ತೆಗೆದುಕೊಂಡು ಮಾರುವುದೇ ದೋಷವಾಗುವುದಿಲ್ಲ. ಆ ಮಾರಾಟದಲ್ಲಿ ಅತಿ ಲಾಭದ ಆಸೆ ಅಧರ್ಮ. ಹಾಗೆಯೇ ವಿದ್ಯಾವಿಕ್ರಯದಲ್ಲೂ, ಬೇರೆ ಕಸಬುಗಳು ಮಾಡುತ್ತಿರುವವರಿಗೆ ಸಹ ಅನ್ವಯಿಸುವ ಮೂಲತತ್ವವಿದು. ಯಾರೂ ತಮ್ಮ ವೃತ್ತಿಯಿಂದ ಅಕ್ರಮ ಲಾಭವನ್ನು ಪಡೆಯಬಾರದು. ಇಂದೂ ಅತಿಥಿ ಸತ್ಕಾರ ಮತ್ತು ಗುರುಕುಲ ಪದ್ಧತಿಗಳನ್ನು ಜನರು ಅಳವಡಿಸಿಕೊಳ್ಳಬಹುದು. ಆದರೆ ಹಾಗೆ ಮಾಡುವುದು ಒಬ್ಬನ ಕೈಲಿ ಸಾಧ್ಯವೇ? ಒಂದು ಆಚಾರವು ಅಸಾಧ್ಯವಾದಾಗ ಇನ್ನೊಂದು ಆಚಾರವನ್ನು ಗ್ರಹಿಸುವುದು ಆಪದ್ಧರ್ಮ. ಆದುದರಿಂದ ಇಂದು ಅನ್ನವಿಕ್ರಯ ವಿದ್ಯಾವಿಕ್ರಯ ವೃತ್ತಿಯವರನ್ನು ವೃತ್ತಿಯ ಕಾರಣದಿಂದಲೇ ದೂಷಿಸುವುದು ಯುಕ್ತವಲ್ಲ. ಹಾಗೆ ದೂಷಿಸಬೇಕಾದರೆ ಯರ್ಯಾರಲ್ಲೋ ಏನೇನೋ ತಪ್ಪುಗಳು ಸಿಗುತ್ತವೆ. ಧರ್ಮದ ಮೂಲತತ್ವಗಳನ್ನು ಬಿಟ್ಟವರು ಯಾವ ವೃತ್ತಿಯವರಾದರೂ ನಿಂದ್ಯರು. ಸಮಾಜದ ಇಂದಿನ ಸ್ವರೂಪದಲ್ಲಿ ಆಪದ್ಧರ್ಮವಾಗಿ ನಡೆಯುತ್ತಿರುವ ವೃತ್ತಿಗಳನ್ನು ವೃತ್ತಿಯ ದೃಷ್ಟಿಯಿಂದಲೇ ದೂಷಿಸುವುದು ಸರಿಯಲ್ಲವೆಂದು ನನ್ನ ಅಭಿಪ್ರಾಯ.
ಈಗ ಹಿಂದುಗಳೊಬ್ಬರೇ ಅಲ್ಲದೆ ವಿಚಾರವಾದಿಗಳಾದ ಸಮಸ್ತ ಮಾನವರೂ ಧರ್ಮದ ವಿಷಯವಾಗಿ ನಿಷ್ಪಕ್ಷಪಾತವಾದ ಮತ್ತು ವೈಜ್ಞಾನಿಕವಾದ ವಿಚಾರ ಮಾಡಿ ಸಮಾಜದಲ್ಲಿ ಮುಂದೆಯಾದರೂ ಸದಾಚಾರಗಳನ್ನು ಜಾರಿಗೆ ತರಲಿ.
ಪ್ರಶ್ನೆ:- ತಾವು ವಿದ್ಯಾವಿಕ್ರಯ ಅನ್ನವಿಕ್ರಯ ಮತ್ತು ಕನ್ಯಾ ವಿಕ್ರಯಗಳ ಬಗ್ಗೆ ವ್ಯಾಖ್ಯಾನ ಮಾಡುವಾಗ ಹಿಂದಿನ ಕಾಲ ಎಂಬ ಪದವನ್ನು ಬಳಸಿದ್ದೀರಿ. ಹಿಂದಿನ ಕಾಲವೆಂದರೆ ವೇದಗಳ ಕಾಲವೇ? ಪುರಾಣಗಳ ಕಾಲವೆ? ಐತಿಹಾಸಿಕ ಕಾಲವೇ ಅಥವಾ ಇವೆಲ್ಲಕ್ಕಿಂತ ಹಿಂದಿನದೆ ಎಂಬುದರ ಬಗ್ಗೆ ವಿವರಣೆ ಕೊಟ್ಟು ಓದುಗರಿಗೆ ಸಹಾಯ ಮಾಡಬೇಕಾಗಿ ಪ್ರಾರ್ಥಿಸುತ್ತೇನೆ. ಈ ವಿಷಯದಲ್ಲಿ ಸ್ವಾಮಿವಿವೇಕಾನಂದರು ಹೇಳಿರುವ ಒಂದು ವಾಕ್ಯವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ ಅದೆಂದರೆ,
“I want the orthodoxy of the Vedic times but not the present.”
ವೈದಿಕಧರ್ಮವು ಅತಿ ಪ್ರಾಚೀನವಾದುದು. ನಾನು ಬರೆದ ವ್ಯಾಖ್ಯಾನದಲ್ಲಿ ಹಿಂದಿನ ಕಾಲವೆಂದರೆವೈದಿಕ ಧರ್ಮವು ಭಾರತ ದೇಶದಲ್ಲಿ ಪ್ರಾರಂಭವಾದ ಕಾಲದಿಂದ ರೈಲು ಪ್ರಯಾಣ ಜಾರಿಗೆ ಬರುವವರೆಗೂ ಇರುವ ಕಾಲ. ಅಲ್ಲಿಂದೀಚೆಗೆ ಯಂತ್ರ ಯುಗವು ಪ್ರಾರಂಭವಾಗಿ ಜನರಲ್ಲಿ ಪ್ರಯಾಣ ಸೌಕರ್ಯಗಳೇ ಅಲ್ಲದೆ ಅನೇಕ ಇತರ ಯಂತ್ರಗಳ ಬಳೆಕೆಯು ಹೆಚ್ಚಿ ಜನರ ಜೀವನ ವಿಧಾನವೇ ಬದಲಾಗಿದೆ. ವೇದಗಳ ಕಾಲಕ್ಕಿಂತಲೂ ಹಿಂದಿನ ಕಾಲವನ್ನು ನಾನು ಉದ್ದೇಶಿಸಿಲ್ಲ. ನಾನು ಉದ್ದೇಶಿಸಿರುವ ಹಿಂದಿನ ಕಾಲದುದ್ದಕ್ಕೂ ಅನ್ನವಿಕ್ರಯಕ್ಕೆ ಅಷ್ಟು ಅಗತ್ಯವಿರಲಿಲ್ಲ. ಆದರೆ ಅದರಿಂದೀಚಿನ ಕಾಲದಲ್ಲಿ ಅನ್ನವಿಕ್ರಯ ಪರಿಸ್ಥಿತಿಗಳ ಬಲಾತ್ಕಾರದಿಂದ ಜರುಗಲೇಬೇಕಾಯಿತು. ಆದುದರಿಂದ ಈ ಕಾಲದಲ್ಲಿ ಅನ್ನವಿಕ್ರಯ ಮಾಡುವವರನ್ನು ದೂಷಿಸುವುದು ಸರಿಯಲ್ಲವೆಂದು ನನ್ನ ಅಭಿಪ್ರಾಯ.
ಧರ್ಮ ಶಾಸ್ತ್ರಗಳ ಅಭಿಪ್ರಾಯದಂತೆ ಯಾರೂ ಮಾಡಬಾರದ ಅಕೃತ್ಯಗಳನ್ನು ಬಿಟ್ಟರೆ ಉಳಿದ ವಿಷಯಗಳಲ್ಲಿ ಲೋಕವ್ಯವಹಾರವು ಆಯಾ ದೇಶ ಕಾಲ ಪರಿಸ್ಥಿತಿಗಳನ್ನನುಸರಿಸಿ ಭಿನ್ನ ಭಿನ್ನವಾಗಿರಿರುವುದು ಸಹಜ. ಇದರಲ್ಲಿ ಉತ್ತಮವಾದ ಪದ್ಧತಿಗಳನ್ನನುಸರಿಸುವವರನ್ನು ದೂಷಿಸುವುದು ಶಾಸ್ತ್ರವು ಒಪ್ಪುವುದಿಲ್ಲ. ಬೇರೆ ಬೇರೆ ಜನಾಂಗಗಳಲ್ಲಿ ಆಹಾರ, ಸ್ತ್ರೀ ಪುರುಷ ಸಂಬಂಧ, ಪರಸ್ಪರ ವ್ಯವಹಾರ ಇವುಗಳಿಗೆ ಸಂಬಂಧಿಸಿದ ಆಚಾರಗಳು, ರೂಢಿಗಳು, ಭಿನ್ನವಾಗಿರುವುದನ್ನು ಧರ್ಮಶಾಸ್ತ್ರವು ಅಂಗೀಕರಿಸುತ್ತೆ. “ಶಾಸ್ತ್ರಾದ್ರೂಢಿರ್ಬಲೀಯಸೀ” ಎಂದರೆ ಶಾಸ್ತ್ರಕ್ಕಿಂತಲೂ ರೂಢಿ ಬಲವತ್ತರವಾದುದು. ಧರ್ಮದಲ್ಲಿ ಆಸಕ್ತಿ ಇರುವ ವರೆಲ್ಲರೂ ಈ ರಹಸ್ಯವನ್ನು ತಪ್ಪದೆ ಅರಿತು ತಮಗೆ ಉತ್ತಮವಾಗಿ ಕಂಡುಬಂದುದನ್ನು ತಾವು ಆಚರಿಸುತ್ತ ಇತರರನ್ನು ದೂಷಿಸದೆ, ದ್ವೇಷಿಸದೆ, ಇರಬೇಕೆಂಬುದೇ ಶಾಸ್ತ್ರಗಳ ಅಭಿಪ್ರಾಯ. ಮನುಸ್ಮೃತಿಯಲ್ಲಿನ ಕೆಳಗಿನ ಶ್ಲೋಕವು ಈ ರಹಸ್ಯವನ್ನು ತೋರಿಸುತ್ತಿದೆ.
ನ ಮಾಂಸ ಭಕ್ಷಣೇ ದೋಷಃ ನಮದ್ಯೇ ನಚಮೈಥುನೇ
ಪ್ರವೃತ್ತಿ ರೇಷಾಭೂತಾನಾಂ ನಿವೃತ್ತಿಸ್ತು ಮಹಾಫಲಾ.
ಮಾಂಸಭಕ್ಷಣ, ಮದ್ಯ ಮತ್ತು ಕಾಮುಕತೆಗಳಲ್ಲಿ ದೋಷವಿಲ್ಲ. ಇದು ಪ್ರಾಣಿಗಳ ಪ್ರವೃತ್ತಿ. ಆದರೆ ನಿವೃತ್ತಿ ಮಾತ್ರ ಹೆಚ್ಚಿನ ಫಲವನ್ನು ಕೊಡಬಲ್ಲುದು. ವೈದಿಕಮತದಿಂದ ಹಿಡಿದು ಅನೇಕ ಉತ್ತಮ ಮತಗಳು ಪ್ರಪಂಚದಲ್ಲಿ ಬಂದು ಎಷ್ಟು ಕೆಲಸ ಮಾಡಿದರೂ ಈವತ್ತು ಮಾಂಸಭಕ್ಷಣ, ಮದ್ಯಪಾನ, ಮತ್ತು ಕಾಮೋದ್ರೇಕ ಪ್ರಪಂಚದ ಎಲ್ಲೆಡೆಗಳಲ್ಲೂ ತುಂಬು ತುಳುಕುತ್ತಿವೆ. ಪಾಶ್ಚಾತ್ಯ ದೇಶಗಳಲ್ಲಿನ ವಿವಾಹ ಜೀವನದ ಇಂದಿನ ಪರಿಸ್ಥಿತಿಯನ್ನು ತಿಳಿಯದವರಾರೂ ಇಲ್ಲ. ಈ ಸತ್ಯವನ್ನು ಗಮನಿಸಿಯೇ ಮೇಲಿನ ಶ್ಲೋಕವು ರಚಿತವಾಗಿರುವುದು. ಧರ್ಮಾಸಕ್ತರು ಈ ಸತ್ಯವನ್ನು ಗಮನಿಸಿ ಪ್ರವೃತ್ತಿಯಲ್ಲಿರುವವರನ್ನು ದೂಷಿಸದೆ ತಾವು ಮಾತ್ರ ಆದಷ್ಟು ನಿವೃತ್ತಿ ಮಾರ್ಗವನ್ನು ಅನುಸರಿಸುತ್ತಿರಬೇಕು. ಧರ್ಮ ಜಿಜ್ಞಾಸೆಗಳಿಗೆ ಮಾತ್ರ ಬೋಧಿಸಬೇಕು. ಬಾಯಲ್ಲಿ ಹೇಳುವುದಕ್ಕಿಂತ ಆಚರಿಸಿ ತೋರಿಸಬೇಕು. ನಿವೃತ್ತಿಮಾರ್ಗದಲ್ಲಿ ಅತ್ಯುತ್ತಮ ಧರ್ಮಗಳನ್ನು ಆಚರಿಸುವವರನ್ನು ಎಲ್ಲರೂ ಗೌರವಿಸಬೇಕು. ಅಷ್ಟೇಹೊರತು ಸಮಾಜವನ್ನೆಲ್ಲಾ ಒಂದೇ ಮಟ್ಟದಲ್ಲಿರಲು ಒತ್ತಾಯಿಸುವುದರಲ್ಲಿ ಅರ್ಥವಿಲ್ಲ.
ಮನುಸ್ಮೃತಿಯಲ್ಲಿ ಮೇಲಿನ ಶ್ಲೋಕದ ಸಂದರ್ಭದಲ್ಲಿಯೇ ಮಾಂಸಭಕ್ಷಣವು ಮಹಾಪಾವೆಂಬ ಶ್ಲೋಕಗಳೂ, ಅದನ್ನು ಬಿಡುವುದು ಮಹಾ ಪುಣ್ಯಕರವೆಂಬ ಶ್ಲೋಕಗಳೂ ಇವೆ. ಆದುದರಿಂದ ಲೋಕದಲ್ಲಿ “ಧರ್ಮದ” ವಿವಿಧ ಹಂತಗಳಲ್ಲಿರುವ ಜನರು ಯಾವಾಗಲೂ ಇರುತ್ತಾರೆ. ಎಲ್ಲರೂ “ನಿವೃತ್ತಿ” ರೂಪವಾದ ಧರ್ಮಕ್ಕೆ ಗೌರವ ಕೊಟ್ಟು ತಾವಿರುವ ಮಟ್ಟಕ್ಕಿಂತಲೂ ಉನ್ನತ ಮಟ್ಟಕ್ಕೆ ಹೋಗಲು ಸದಾ ಪ್ರಯತ್ನಿಸುತ್ತಿರಬೇಕು.
ಮೇಲೆ ಹೇಳಿದುದು ಎಲ್ಲರಿಗೂ ನಿಷಿದ್ಧವಾದ ಕೆಲಸಗಳಿಗೆ ಅನ್ವಯಿಸುವುದಿಲ್ಲ.
ಸ್ವಾಮಿ ವಿವೇಕಾನಂದರು ಹೇಳಿರುವ ಮಾತು ಬಹಳ ಬೆಲೆ ಉಳ್ಳದ್ದು. ಇದನ್ನು ಅರ್ಥ ಮಾಡಿಕೊಳ್ಳಲು ಚಾರಿತ್ರಿಕ ಸತ್ಯದ ಹಿನ್ನೆಲೆಯನ್ನು ಮೊದಲು ಗಮನಿಸಬೇಕು.
ವೈದಿಕ ಧರ್ಮವು ಪ್ರಾರಂಭದಲ್ಲಿ ಭಾರತ ದೇಶದ ಒಂದು ಸಣ್ಣ ಭಾಗದಲ್ಲಿತ್ತು. ಅದರ ಪ್ರಾರಂಭದ ದೆಶೆಯಲ್ಲಿ ವರ್ಣಭೇದವಿರಲಿಲ್ಲ. ಒಂದು ಸಣ್ಣ ಸಮಾಜದವರೆಲ್ಲರೂ ಬುದ್ಧಿವಂತರೂ ವಿಚಾರಪರರೂ ಆಗಿದ್ದು ಪ್ರವೃತ್ತಿ ಮಾರ್ಗದ ಅಸಾರತೆಯನ್ನರಿತು ನಿವೃತ್ತಿ ಮಾರ್ಗವನ್ನು ಹಿಡಿದವರಾಗಿದ್ದರು. ಅವರೇ ಬ್ರಾಹ್ಮಣರು. ಇದೊಂದು ವರ್ಣವೇ ಪ್ರಾರಂಭದಲ್ಲಿತ್ತು. ಆಗಲೂ ಪ್ರವೃತ್ತಿ ಮಾರ್ಗದಲ್ಲಿದ್ದ ಜನ ಇರಲಿಲ್ಲವೆಂದಲ್ಲ. ಅವರು ಈ ಬ್ರಾಹ್ಮಣರ ಮಾತನ್ನು ಕೇಳಿ ಅವರು ಹೇಳಿದಂತೆ ನಡೆದು ಕೊಳ್ಳುತ್ತಿದ್ದರು. ಆಗ ರಾಜನಿರಲಿಲ್ಲ. ಆ ಕಾಲಕ್ಕೆ ಕೃತಯುಗವೆಂಬ ಹೆಸರು ಆಮೇಲೆ ಬಂತು. ಆಗ ಆ ಸಮಾಜದ ಆ ಬ್ರಾಹ್ಮಣರು ತಮ್ಮ ತಪಸ್ಸಿನಿಂದ 400 ವರ್ಷಗಳು ಜೀವಿಸುತ್ತಿದ್ದರು. ಕ್ರಮೇಣ ಸಂಸ್ಕೃತ ಭಾಷೆಯಲ್ಲಿ ವೇದರೂಪದಲ್ಲಿದ್ದ ಇವರ ಜ್ಞಾನವು ಇತರ ಜನಾಂಗಗಳಲ್ಲಿ ವ್ಯಾಪಿಸುತ್ತ ಬಂತು. ಈ ಜನಾಂಗಗಳ ಸಂಪರ್ಕಕ್ಕೇ ಯುಗವೆಂದು ಹೆಸರು. ಮುಂದಿನ ಯುಗವಾದ ತ್ರೇತಾಯುಗದಲ್ಲಿ ವೈದಿಕ ಧರ್ಮವು ಒಂದು ಕಡೆ ವ್ಯಾಪ್ತಿಯನ್ನು ಹೊಂದಿದರೆ ಇನ್ನೊಂದು ಕಡೆ ತನ್ನ ಉತ್ತಮತ್ವವನ್ನು ಕಳೆದುಕೊಳ್ಳುತ್ತಾ ಬಂತು. ಜನರಲ್ಲಿ ಉತ್ತಮ ಧರ್ಮವನ್ನುಳ್ಳವರು ಬ್ರಾಹ್ಮಣರೆನಿಸಿಕೊಂಡರು.ಇವರ ಸಂಖ್ಯೆ ಕಡಿಮೆಯಾಗಿ ಉಳಿದವರ ಸಂಖ್ಯೆ ಹೆಚ್ಚಾಗುತ್ತ ಉಳಿದ ವರ್ಣಗಳೇರ್ಪಟ್ಟವು. ಆ ಕಾಲದ ಸಮಾಜದ ಜನರ ಸಂಸ್ಕೃತಿಯ ಮಟ್ಟಗಳ ವೈವಿಧ್ಯದ ಆಧಾರದ ಮೇಲೆ ನಾಲ್ಕು ವರ್ಣಗಳಾದವು. ವೈದಿಕ ಸಾಹಿತ್ಯಕ್ಕೆ ಅರ್ಹತೆ ಇಲ್ಲದವರಿಗಾಗಿ ಪುರಾಣಗಳು ರಚಿಸಲ್ಪಟ್ಟವು. ಹೀಗೆಯೇ ಮುಂದುವರಿದು ಬುದ್ಧನ ಕಾಲದವರೆಗೂ ಬಂತು. ಅಲ್ಲಿಯವರೆಗೂ ಜ್ಞಾನಿಗಳು(ಋಷಿಗಳು) ಆಯಾ ಕಾಲದ ಪರಿಸ್ಥಿತಿಗಳನ್ನನುಸರಿಸಿ ಆಯಾ ಮಟ್ಟಗಳಲ್ಲಿರುವವರಿಗೆ ಅನುವಾದ ಧರ್ಮಗಳನ್ನು ಬೋಧಿಸಿದರು. ಆಮೇಲೆ ಬೌದ್ಧಧರ್ಮದ ವ್ಯಾಪ್ತಿಯಲ್ಲಿ ವೈದಿಕ ಧರ್ಮಕ್ಕೆ ಅವನತಿ ಬಂತು. ಪುನಃ ಉದ್ದಾರ ಬಂತು. ಆದರೆ ಜೀವಂತವಾಗಿದ್ದ ವೈದಿಕಧರ್ಮ ಅಲ್ಲಿಂದ ದೇಶ ಕಾಲ ಪರಿಸ್ಥಿತಿಗಳಿಗನುಸಾರವಾಗಿ ಹೊಸ ಹೊಸ ರೂಪಗಳನ್ನು ತಾಳುವುದನ್ನು ಬಿಟ್ಟು ಶಾಸ್ತ್ರದ ಪಂಕ್ತಿಗೆ ಶರಣು ಹೊಕ್ಕಿತು. ಇಸ್ಲಾಂ ಮತ ವ್ಯಾಪ್ತಿ ಆಂಗ್ಲೇಯರ ಆಗಮನ ಇತ್ಯಾದಿಗಳಿಂದ ವೈದಿಕ ಮತದಲ್ಲಿ ಸ್ತಬ್ಧತೆ ಇನ್ನೂ ಹೆಚ್ಚಾಯಿತು. ಆಂಗ್ಲೇಯರ ಪಾಲನೆಯಲ್ಲಿ ಬ್ರಾಹ್ಮಣರು ಉದ್ಯೋಗಗಳಿಗೆ ಸೇರಿ ವರ್ಣಸಂಕರ ಪ್ರಾರಂಭವಾಯಿತು. ಈಗ ವರ್ಣಸಂಕರವು ಬಹುಶಃ ಪೂರ್ತಿಯಾಗಿದೆ ಎಂದೇ ಹೇಳಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಸ್ವಾಮಿವಿವೇಕಾನಂದರ ಮಾತು ತುಂಬ ಮಹತ್ವದ್ದಾಗಿದೆ. ಇಂದಿನ ವಿಜ್ಞಾನ ಯುಗವನ್ನು ಗಮನದಲ್ಲಿಟ್ಟುಕೊಳ್ಳದೆ ವೈದಿಕ ಮತದ ಚರ್ಚೆ ಮಾಡುವುದು ಸರಿಯಲ್ಲ. ಹಿಂದೆ ಎಂದಿಗಿಂತಲೂ ಇಂದು ಬುದ್ಧಿಶಕ್ತಿ, ವಿಜ್ಞಾನ, ಪ್ರಪಂಚಜ್ಞಾನ ಇವುಗಳಲ್ಲಿ ಎಲ್ಲರೂ ಮುಂದುವರಿದಿದ್ದಾರೆ. ಆದುದರಿಂದ ಇಂದು ಶೂದ್ರವರ್ಣವಿಲ್ಲ. ಬ್ರಾಹ್ಮಣರು ಬಹುಪಾಲು ತಮ್ಮ ಬ್ರಾಹ್ಮಣತ್ವವನ್ನು ಕಳೆದುಕೊಂಡಿದ್ದಾರೆ. ಕ್ಷತ್ರಿಯರ ಸ್ಥಿತಿಯೂ ಹಾಗೆಯೇ ಇರುತ್ತೆ. ಆದುದರಿಂದ ಈಗ ಇರುವುದೆಲ್ಲಾ ವೈಶ್ಯವರ್ಣವೊಂದೇ. ಆದುದರಿಂದ ವೈದಿಕ ಧರ್ಮದ ಅತ್ಯುತ್ತಮ ಬೆಳವಣಿಗೆಯಾದ ದ್ವಿಜ ಧರ್ಮವನ್ನು(ಅಂದರೆ ಮೂರು ವರ್ಣಗಳು ಮತ್ತು ನಾಲ್ಕು ಆಶ್ರಮಗಳು) ವೈಜ್ಞಾನಿಕದೃಷ್ಟಿ ಉಳ್ಳ ಧರ್ಮಜ್ಞರೆಲ್ಲರೂ ಪ್ರಪಂಚದಾದ್ಯಂತ ನೆಲೆಗೊಳಿಸಲು ಪ್ರಯತ್ನಿಸುವುದು ಒಳ್ಳೆಯದೆಂದು ನನ್ನ ಅಭಿಪ್ರಾಯ. ಇದೇ ಮೇಲ್ಕಂಡ ವಿವೇಕಾನಂದ ವಾಣಿಯ ಉದ್ದೇಶವೆಂದು ಕಾಣುತ್ತದೆ.
ಜ್ಞಾನಿಗಳೂ, ಲೋಕಹಿತಾಸಕ್ತರೂ, ಚರಿತ್ರವನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸುವವರು ಶೃತಿ ಸ್ಮೃತಿಗಳು ಮಾತ್ರವಲ್ಲದೆ ಎಲ್ಲ ಧರ್ಮ ಗ್ರಂಥಗಳ ನಿಷ್ಪಕ್ಷಪಾತವಾದ ಮತ್ತು ಆಳವಾದ ಅಧ್ಯಯನ ಮಾಡಿ ಮೂಲತತ್ವಗಳನ್ನರಿತು ಪ್ರಪಂಚದಲ್ಲೆಲ್ಲಾ ವೈಜ್ಞಾನಿಕವಾದ ಮತ್ತು ಉತ್ತಮವಾದ ಧರ್ಮವನ್ನು ನೆಲೆಗೊಳಿಸಲು ಮುಂದೆ ಬರಲೆಂದು ನನ್ನ ಹಾರೈಕೆ. ಈ ಸಂದರ್ಭದಲ್ಲಿ ವೈದಿಕಧರ್ಮ ಗ್ರಂಥಗಳನ್ನು ದೂಷಿಸುವುದೂ ಬ್ರಾಹ್ಮಣ ವರ್ಣವನ್ನು ದೂಷಿಸುವುದೂ, ನಿಲ್ಲಿಸಿ ಧರ್ಮದ ಮೂಲ ತತ್ವಗಳ ಅಧ್ಯಯನಕ್ಕೆ ಎಲ್ಲರೂ ಮುಂದೆ ಬರಬೇಕಾಗಿದೆ.
ಪ್ರಶ್ನೆ:- ನವೆಂಬರ್ ತಿಂಗಳ ಸಂಚಿಕೆಯಲ್ಲಿ ತಾವು ವಿದ್ಯಾ ವಿಕ್ರಯ ಮತ್ತು ಕನ್ಯಾ ವಿಕ್ರಯಗಳ ಬಗ್ಗೆ ಕೊಟ್ಟಿರುವ ಉತ್ತರಗಳ ಬಗ್ಗೆ ಕೊಟ್ಟಿರುವ ಉತ್ತರಗಳನ್ನು ನೋಡಿದ್ದೇನೆ. ಕೊನೆಯದಾಗಿ ಈ ಕೆಳಕಂಡ ಪ್ರಶ್ನೆಗಳನ್ನು ತಮ್ಮ ಮುಂದಿಡುತ್ತಿದ್ದೇನೆ. ತಾವು ದಯಮಾಡಿ ಉತ್ತರಿಸಬೇಕಾಗಿ ಪ್ರಾರ್ಥನೆ. ತಮ್ಮ ಉತ್ತರಗಳು ದೇಶ, ಕಾಲ ಮತ್ತು ಸನ್ನಿವೇಶದ ಮೇಲೆ ಕೊಟ್ಟಿರುವುದಾಗಿವೆ. ಅವುಗಳು ತಾತ್ವಿಕ ಹಾಗೂ ಸಾಮಾನ್ಯ ಉತ್ತರಗಳು ಅಲ್ಲ ಎಂಬುದು ನನ್ನ ಅನಿಸಿಕೆ.
1. ಜ್ಞಾನಿಗಳೂ ಸಹ ಆಪತ್ಕಾಲದಲ್ಲಿ ಅನ್ನವನ್ನು ತಿನ್ನಬಹುದು ಎಂಬುದಾಗಿ ಹೇಳಿದೆ ಅಂದಮಾತ್ರಕ್ಕೆ ಅನನ್ನವನ್ನು ತಿನ್ನಬಹುದು ಎಂಬುದು ಸರಿಯಾದ ಉತ್ತರವೆ?
2. ಒಬ್ಬ ಚಿಲ್ಲರೆ ಅಂಗಡಿಯನ್ನು ಚಿಲ್ಲರೆ ಬೇಕಾದಾಗ ಒಂದು ರೂಪಾಯಿಗೆ 5 ಪೈಸೆ ಕಮಿಷನ್ ಕೊಟ್ಟು ಅಂದರೆ ಒಂದು ರೂಪಾಯಿ ಕೊಟ್ಟು ಭಿಕ್ಷುಕನಿಂದ ಅಥವಾ ಚಿಲ್ಲರೆ ಇರುವವರಲ್ಲಿ 95 ಪೈಸೆ ಪಡೆಯುತ್ತಾನೆ. ಅದರಂತೆ ಚಿಲ್ಲರೆ ಹೆಚ್ಚಾಗಿರುವವರು 105 ಪೈಸೆ ಕೊಟ್ಟು ಒಂದು ರೂಪಾಯಿ ಪಡೆಯುತ್ತಾನೆ. ಅಂದರೆ ಒಂದು ರೂಪಾಯಿಗೆ 100 ಪೈಸೆಯೋ, 95 ಪೈಸೆಯೋ ಎಂಬುದನ್ನು ತಿಳಿಸಬೇಕು.
Every rule has an exception ಎಂಬುದಾಗಿ ನಾವು ಹೇಳುತ್ತೇವೆ. ಇದು ಸರಿಯೇ? ಅಥವಾ ಸಾಮಾನ್ಯ ಸಂದರ್ಭಗಳಲ್ಲಿ ನಾವು ಅನುಸರಿಸುವುದು ಸರಿಯೇ?
ನಾನು ಕೇಳಿರುವ ಪ್ರಶ್ನೆಗಳು ಬೇರೆಯವರನ್ನು ದೂಷಿಸುವುದಕ್ಕೆ ಅಲ್ಲ ಎಂಬುದನ್ನು ಶೃತಪಡಿಸಿದ್ದೇನೆ. ಮತ್ತೊಮ್ಮೆ ಅದನ್ನೇ ಹೇಳುತ್ತೇನೆ.
ವಿದ್ಯಾ ವಿಕ್ರಯ, ಅನ್ನ ವಿಕ್ರಯಗಳ ಬಗ್ಗೆ ತಾವು ಕೊಟ್ಟಿರುವ ಉತ್ತರಕ್ಕೂ ಆಧಾರ ವಿಷಯವಾಗಿದೆ ಎಂಬುದು ನನ್ನ ಅನಿಸಿಕೆ. ತಮ್ಮ ಸಹನೆಯನ್ನು ಪರೀಕ್ಷಿಸುವುದಕ್ಕೆ ಈ ಪತ್ರ ಬರೆಯುತ್ತಿಲ್ಲ. ದಯವಿಟ್ತು ಕ್ಷಮಿಸಿ
ಉತ್ತರ
ನನ್ನ ಉತ್ತರಗಳು ದೇಶ, ಕಾಲ ಮತ್ತು ಸನ್ನಿವೇಶದ ಮೇಲೆ ಕೊಟ್ಟಿರುವುದಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಧರ್ಮ ಶಾಸ್ತ್ರಗಳೆಲ್ಲವೂ ಧರ್ಮವನ್ನು ಸಾಮಾನ್ಯ ಧರ್ಮಗಳೆಂದೂ ಬೇರೆ ಬೇರೆ ರೀತಿಯಲ್ಲಿ ಹೇಳಿದ್ದರೂ ಯಾಜ್ಞವಲ್ಕ್ಯ ಸ್ಮೃತಿಯಲ್ಲಿ ಕೆಳಕಂಡ ಎರಡು ಶ್ಲೋಕಗಳಲ್ಲಿ ಅವುಗಳ ನಿರೂಪಣೆ ಬಹಳ ಸಮರ್ಥವಾಗಿ ಮಾಡಲ್ಪಟ್ಟಿದೆ.
ಅಹಿಂಸೆ ಸತ್ಯಮಸ್ತೇಯಂ ಶೌಚಮಿಂದ್ರಿಯ ನಿಗ್ರಹಃದಾನಂದ ಮೋದಯಾಕ್ಷಾನ್ತಿಃ ಸರ್ವೇಷಾಂ ಧರ್ಮ ಸಾಧನಂ I
ವಯೋಬುದ್ಧ್ಯರ್ಥವಾಗ್ವೇಷ ಶ್ರುತಾಭಿಜನ ಕರ್ಮಣಾಂ ಅಚರೇತ್ಸದೃತೀಂ ವೃತ್ತಿಮ ಜಿಹ್ಮಾ ಮಶಠಾಂ ತಥಾ II
ಇವುಗಳಿಗೆ ಮಿತಾಕ್ಷರಾ ವ್ಯಾಖ್ಯಾನವನ್ನು ಕನ್ನಡದಲ್ಲಿ ಹೀಗೆ ಹೇಳಬಹುದು:
ಹಿಂಸೆ ಎಂದರೆ ಪ್ರಾಣಿಪೀಡೆ. ಅದನ್ನು ಮಾಡದಿರುವಿಕೆಯೇ ಅಹಿಂಸೆ. ಸತ್ಯವೆಂದರೆ ಪ್ರಾಣಿ ಪೀಡಕರವಲ್ಲದ ಯತಾರ್ಥ ವಚನ. ಆಸ್ತೇಯವೆಂದರೆ ಕೊಡಲ್ಪಡದಿರುವುವಿಕೆ, ಶೌಚ ಅಥವಾ ಶುಚಿತ್ವವೆಂಬುದು ಬಾಹ್ಯ ಮತ್ತು ಅಭ್ಯಂಕರವೆಂಬ ಎರಡು ಬಗೆಯದು. ಬುದ್ಧೀಂದ್ರಯ ಕರ್ಮೇಂದ್ರಿಯಗಳನ್ನು ನಿಯಮಿಸಲ್ಪಟ್ಟ ವಿಷಯಗಳಲ್ಲಿ ಮಾತ್ರ ತೊಡಗಿಸುವುದು ಇಂದ್ರಿಯ ನಿಗ್ರಹ, ತನ್ನ ಶಕ್ತಿಯನ್ನನುಸರಿಸಿ ಪ್ರಾಣಿಗಳಿಗೆ ಅನ್ನೋದಕಾದಿಗಳನ್ನು ಕೊಟ್ಟು ಆರ್ಥಿಕ ಪರಿಹಾರ ಮಾಡುವುದೇ ದಾನ. ಅಂತಃಕರಣ ಸಂಯಮವೇ ದಮ, ಕಷ್ಟದಲ್ಲಿರುವವರನ್ನು ರಕ್ಷಿಸುವುದೇ ದಯೆ. ತನಗೆ ಅಪಕಾರವಾದರೂ ಚಿತ್ತ ವಿಕಾರವಾಗದಿರುವಿಕೆಯೇ ಕ್ಷಾಂತಿ ಅಥವ ಕ್ಷಮೆ ಎಂಬ ಇವು ಬ್ರಾಹ್ಮಣರಿಂದ ಹಿಡಿದು ಚಂಡಾಲರವರೆಗೂ ಇರುವ ಸಮಸ್ತ ಮಾನವರಿಗೂ ಧರ್ಮ ಸಾಧನವಾಗಿರುತ್ತವೆ.
ಬಾಲ್ಯ ಯೌವನ ಮುಂತಾದುದು ವಯಸ್ಸು, ವೈದಿಕ ವ್ಯವಹಾರದಲ್ಲಿಯು ಅವರವರು ತೋರಿಸುವ ಅವರವರಿಗೆ ಸಹಜವಾದ ಬುದ್ಧಿಯೇ ಇಲ್ಲಿ ಬುದ್ಧಿ ಎಂಬುದು. ದನ, ಮನೆ, ಜಮೀನು ಮುಂತಾದುದು ಅರ್ಥ. ವಾಕ್ಕು ಅಂದರೆ ಅವರವರ ಮಾತಿನ ಶಕ್ತಿ, ವಸ್ತ್ರ ಮಾಲ್ಯ ಮುಂತಾದುವುಗಳನ್ನು ಧರಿಸುವ ರೀತಿಗೆ ವೇಷವೆಂದು ಹೆಸರು. ನಾಲ್ಕು ಪುರುಷಾರ್ಥಗಳಿಗೆ ಸಂಬಂಧಿಸಿದ ಶಾಸ್ತ್ರಗಳ ಜ್ಞಾನವೇ ಶ್ರುತ. ಕುಲವೇ ಅಭಿಜನ. ಜೀವನ ವೃತ್ತಿಯೇ ಕರ್ಮ. ಪ್ರತಿಯೊಬ್ಬರೂ ಅವರವರ ವಯಸ್ಸು ಮುಂತಾದ ಮೇಲ್ಕಂಡ ವಿಷಯಗಳಿಗೆ ಅನುಗುಣವಾದ ಆಚರಣೆಯನ್ನು ಸ್ವೀಕರಿಸಬೇಕು. ಉದಾಹರೆಣೆಗೆ ಮುದುಕನು ವೃದ್ಧರಿಗೆ ಉಚಿತವಾದ ಆಚರಣೆಯನ್ನು ಸ್ವೀಕರಿಸಬೇಕೇ ಹೊರತು ಯುವಕರಿಗೆ ಉಚಿತವಾದುದ್ದನ್ನಲ್ಲ. ಇದೇ ರೀತಿಯಾಗಿ ಬುದ್ಧಿ ಮುಂತಾದ ವಿಶಯಗಳಲ್ಲೂ ಸಹ ಗ್ರಹಿಸಬೇಕು ಮತ್ತು ಈ ಆಚರಣೆಯು ಅಜಿಹ್ಮ ಅಂದರೆ ಅವಕ್ರವಾಗಿರಬೇಕು ಮತ್ತು ಅಶನ ಅಂದರೆ ಮಾತ್ಸರ್ಯರಹಿತವಾಗಿರಬೇಕು.
ಮೇಲೆ ಹೇಳಿರುವುದೇ ಧರ್ಮದ ಸಾರಾಂಶ. ಇದನ್ನು ಯಾವಾಗಲೂ ಗಮನದಲ್ಲಿಟ್ಟುಕೊಂಡು ಇವುಗಳ ಉದ್ದೇಶಗಳಾದ 1) ಸರ್ವಜನ ಕಲ್ಯಾಣ ಮತ್ತು 2) ತನ್ನ ಆಧ್ಯಾತ್ಮಿಕ ಬೆಳವಣಿಗೆ ಇವುಗಳ ಸಾಧನೆಗೆ ಅನುಗುಣವಾಗಿ ಆಯಾ ದೇಶ ಕಾಲ ಪರಿಸ್ಥಿತಿಗಳನ್ನನುಸರಿಸಿ ಕಾರ್ಯಾಚರಣೆ ಮಾಡುವುದೇ ಧರ್ಮ. ಈ ಕಾರ್ಯಾಚರಣೆಗೆ ಮಾರ್ಗದರ್ಶಕವಾಗುವಂತೆ ಆಯಾ ಕಾಲದವರಿಗೆ ವಿಶೇಷ ಧರ್ಮಗಳನ್ನು ಬೋಧಿಸಿರುತ್ತಾರೆ. ಇವೇ ವರ್ಣ ಧರ್ಮಗಳು, ಆಶ್ರಮ ಧರ್ಮಗಳು,ಕುಲಧರ್ಮಗಳು, ಜಾತಿ ಧರ್ಮಗಳು, ನೈಮಿತ್ತಿಕ ಧರ್ಮಗಳು ಮುಂತಾದುವು. ಇವೇ ಕಾಲಾನುಸಾರ ಬದಲಾವಣೆ ಆಗಿವೆ. ಆಗುತ್ತಲೇ ಇರುತ್ತವೆ. ಅನ್ನ ವಿಕ್ರಯ ನಿಷೇಧ. ವಿದ್ಯಾ ವಿಕ್ರಯ ನಿಷೇಧ. ಕನ್ಯಾ ವಿಕ್ರಯ ನಿಷೇಧ. ಇವೆಲ್ಲವೂ ಈ ವಿಶೇಷ ಧರ್ಮಗಳ ಗುಂಪಿಗೆ ಸೇರಿರುವುವು. ಇವುಗಳ ವಿಷಯದಲ್ಲಿ ಧರ್ಮದ ಮೂಲ ತತ್ವಗಳಿಗೆ ಪೋಷಕವಾಗುವ ರೀತಿಯಲ್ಲಿ ಪರಿಸ್ಥಿತಿಗಣುಗುಣವಾಗಿ ಆಚರಣೆಯನ್ನು ತರ್ಕದಿಂದ ನಿರ್ಣಯಿಸಬೇಕೆಂಬುದು ಧರ್ಮಶಾಸ್ತ್ರದ ವಿಧಿ. ಹೊಸ ಪರಿಸ್ಥಿತಿಯನ್ನನುಸರಿಸಿ ಕಾನೂನಿನಲ್ಲಿ ಹೊಸ ಹೊಸ ಪರಿಸ್ಥಿತಿಯನ್ನನುಸರಿಸಿ ಕಾನೂನಿನಲ್ಲಿ ಬದಲಾವಣೆಗಳೂ, ಹೊಸ ಹೊಸ ಕಾನೂನುಗಳೂ ಹೇಗೆ ಬರುತ್ತಿರುತ್ತವೋ ಹಾಗೆಯೇ ಆಚಾರ ಧರ್ಮದಲ್ಲೂ. ಆದುದರಿಂದ ಅನ್ನವಿಕ್ರಯ, ವಿದ್ಯಾವಿಕ್ರಯ ಮತ್ತು ಕನ್ಯಾವಿಕ್ರಯಗಳ ವಿಷಯವಾಗಿ ತಾತ್ವಿಕ ಹಾಗೂ ಸಾಮಾನ್ಯ ಉತ್ತರಗಳನ್ನು ಕೊಡಲು ಸಾಧ್ಯವೇ ಇಲ್ಲ.
ಜ್ಞಾನಿಗಳು ಅನನ್ನವನ್ನು ತಿನ್ನಬಾರದು, ಇದು ಇಂದ್ರಿಯನಿಗ್ರಹಕ್ಕೆ, ದಮಕ್ಕೆ, ಅಸ್ತೇಯಕ್ಕೆ, ಅಹಿಂಸೆಗೆ, ಶೊಚಕ್ಕೆ ಸಂಬಂಧಿಸಿದ ವಿಷಯ. ಅನನ್ನವೆಂದರೆ ಅಶುಚಿಯಾಗಿರಬಹುದು. ಮಾಂಸರೂಪದಲ್ಲಿ ಹಿಂಸಾಮೂಲವಾಗಿರಬಹುದು. ಕಳ್ಳತನ ಮಾಡಿದ ಅನ್ನವಾಗಬಹುದು ಮಾದಕವಾಗಿರಬಹುದು. ಹೀಗೆ ನಾನಾ ಬಗೆಯ ಅನ್ನಗಳಿವೆ. ಆದರೆ ಪ್ರಾಣ ಹೋಗುವ ಸಂದರ್ಭದಲ್ಲಿ ಜ್ಞಾನಿಯು ಅನನ್ನವನ್ನು ತಿನ್ನಬಹುದು. ಕಾರಣ ಆತನು ಅದನ್ನು ತಿಂದು ಮಾಡಿದ ಅಧರ್ಮಕ್ಕಿಂತಲೂ ಆತನು ಪ್ರಾಣ ಉಳಿಸಿಕೊಂಡು ಮುಂದೆ ಮಾಡುವ ಧರ್ಮವು ಅತ್ಯಧಿಕವಾದುದು. ಈ ಕಾರಣದಿಂದ ಇದಕ್ಕೆ ಅನುಮತಿ ಕೊಟ್ಟಿರುವುದು. ಆದರೆ ಇಂದಿನ ಸಮಾಜ ವ್ಯವಸ್ಥೆಯಲ್ಲಿ ಅನ್ನವಿಕ್ರಯ ವಿದ್ಯಾವಿಕ್ರಯಗಳು ಅಹಿಂಸಾವಾದಿಗಳಾದ ಯಾವ ಧರ್ಮಕ್ಕೂ ಬಾಧಕಗಳೆಂದು ಹೇಳುವುದು ಕಷ್ಟ. ದಾನಕ್ಕೆ ವಿರುದ್ಧವಾದುದೆಂದು ಸಹ ಹೇಳಲು ಸಾಧ್ಯವಿಲ್ಲ. ತನ್ನ ಶಕ್ತಿಯನ್ನನುಸರಿಸಿ ಅನ್ನೋದಕಗಳನ್ನು ಕೊಡುವುದೇ ದಾನ. ಮನೆಯ ಹೊರಗೆ ಊಟ ಮಾಡುವುದು ಸರ್ವೇಸಾಧಾರಣವಾಗಿರುವಾಗ ಅನ್ನವಿಕ್ರಯ ಶಾಲೆಗಳಿಲ್ಲದಿದ್ದರೆ ಜನ ಬದುಕಿರಲು ಸಾಧ್ಯವೇ? ಹಾಗೆಯೇ ಇಂದಿನ ಪರಿಸ್ಥಿತಿಗಳಲ್ಲಿ ವಿದ್ಯಾವಿಕ್ರಯವೂ ಅಲ್ಲದೆ ದಾನ ಮಾಡುವುದು ಧರ್ಮವಾದರೂ ಲೋಕ ವ್ಯವಹಾರವೆಲ್ಲಾ ದಾನದ ರೂಪದಲ್ಲೇ ನಡೆಯಲು ಸಾಧ್ಯವಿಲ್ಲ. ಆದುದರಿಂದ ವಿಕ್ರಯವು ಅಧರ್ಮವಲ್ಲ.
ಕನ್ಯಾವಿಕ್ರಯಕ್ಕೂ ಅನ್ನ ಮತ್ತು ವಿದ್ಯಾ ವಿಕ್ರಯಕ್ಕೂ ಭೇದವಿದೆ. ಕನ್ಯೆ, ಒಬ್ಬ ಮಾನವಪ್ರಾಣಿ. ಮಾನವನಿಗೆ ಇನ್ನೊಬ್ಬ ಮಾನವನನ್ನು ವಸ್ತುವಿನಂತೆ ಮಾರಲು ಅಧಿಕಾರವಿಲ್ಲ. ಈ ಮೂಲ ವ್ಯತ್ಯಾಸದಿಂದ ಇವುಗಳ ಅರ್ಜಿಯಲ್ಲಿ ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡುವುದು ಅಗತ್ಯ.
ಒಂದು ರೂಪಾಯಿಗೆ ನೂರು ಪೈಸೆಯೇ ಅಥವಾ ೧೦೫ ಪೈಸೆಯೇ ಎಂಬುವ ಉಪಮಾನವು ಆಪತ್ಕಾಲದ ಧರ್ಮಕ್ಕೆ ಸರಿಹೋಗುತ್ತದೆಯೇ ಹೊರತು ಯುಗ ಧರ್ಮಕ್ಕೆ ಸರಿಹೋಗುವುದಿಲ್ಲ. ಇದಕ್ಕೆ ಸರಿಯಾದ ಉಪಮಾನವು ಹಿಂದಿನ ಕಾಲದಲ್ಲಿ ಒಂದು ರೂಪಾಯಿಗೆ ೧೬ ಆಣೆಯಿತ್ತು. ಈಗ ೧೦೦ ಪೈಸೆ ಆಗಿದೆ ಎಂಬುದು.
ಧರ್ಮಜಿಜ್ಞಾಸೆಯಿರುವವರ ವಾದ ಜ್ಞಾನದ ಬೆಳವಣಿಗೆಗೆ ಪೋಷಕ. ಆದುದರಿಂದ ಇದನ್ನು ನಾನು ಯಾವಾಗಲೂ ಸ್ವಾಗತಿಸುತ್ತೇನೆ. ನನ್ನ ಅಲ್ಪಮತಿಗೆ ತೋಚಿದ ವಿಷಯವನ್ನು ಬರೆದಿರುತ್ತೇನೆ.
ಲಂಕಾ ಕೃಷ್ಣಮೂರ್ತಿ.