ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 18
ಯುಗಾದಿ
(ದಿನಾಂಕ 1 – 4- 1996 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಶ್ರೀ ಧಾತೃ ಸಂವತ್ಸರದ ಯುಗಾದಿ ಹಬ್ಬವನ್ನು ದಿನಾಂಕ 20-3-1996ನೇ ಬುಧವಾರ ನಾವೆಲ್ಲರೂ ಆಚರಿಸುತ್ತೇವೆ. ಈ ಹಬ್ಬದ ದಿನ ನಾವೆಲ್ಲರೂ ಮಾಡುವ ನಿಂಬದಳ ಭಕ್ಷಣ.
ಕಾಲವು ಯಾವ ಮಾನವನ ಅದೀನದಲ್ಲೂ ಇಲ್ಲ. ಸೆಕೆಂಡುಗಳು, ನಿಮಿಷಗಳು, ಗಂಟೆಗಳು, ದಿನಗಳು, ವರ್ಷಗಳು, ಯುಗಗಳು ಈ ರೀತಿಯಾಗಿ ಕಾಲವು ಕಳೆದುಹೋಗುತ್ತಲೇ ಇರುತ್ತದೆ. ಈ ಕಾಲವನ್ನನುಸರಿಸಿಕೊಂಡು ವಿಶ್ವದಾದ್ಯಂತ ಸೃಷ್ಟಿ ಸ್ಥಿತಿ ಲಯಗಳನ್ನು ಗಮನಿಸಬೇಕು. ನಾವೆಲ್ಲರೂ ಸ್ವಲ್ಪ ಕಾಲದ ಹಿಂದೆ ನಾವೀಗ ಇರುವ ರೂಪದಲ್ಲಿರಲಿಲ್ಲ. ನಾವೆಲ್ಲರೂ ತಾಯಿಯ ಗರ್ಭದಲ್ಲಿ ಒಂದು ಕಣದಂತೆ ಪ್ರಾರಂಭವಾಗಿ ಬೆಳೆದು ಮಾನವ ಶರೀರವನ್ನು ಪಡೆಯುತ್ತೇವೆ. ಶೈಶವ, ಕೌಮಾರ, ಯೌವನ, ವಾರ್ಧಕ್ಯವೆಂಬ ನಾಲ್ಕು ದಶೆಗಳನ್ನು ಹೊಂದಿ ಕೊನೆಗೆ ಮರಣಿಸುತ್ತೇವೆ. ಜನ್ಮವು ನಮಗೆ ಹೇಗೆ ಬಂತೋ ಮರಣವೂ ಹಾಗೆಯೇ ತಪ್ಪದೆ ಬರುತ್ತದೆ. ಆದರೆ ಇವುಗಳ ನಡುವೆ ನಾವು ಶಾಶ್ವತವಾಗಿರುತ್ತೇವೆ ಎಂಬ ಒಂದು ಸುಳ್ಳು ಭಾವನೆಯಿಂದ ಜೀವನವನ್ನು ನಡೆಸುತ್ತಿರುತ್ತೇವೆ. ತಾತ್ಕಾಲಿಕ ಪ್ರಯೋಜನಕ್ಕಾಗಿ ಹಾತೊರೆಯುತ್ತಿರುತ್ತೇವೆ. ಆದರೆ ಕಾಲವನ್ನೂ ಅದರ ಪರಿಣಾಮವಾದ ಸೃಷ್ಟಿ ಸ್ಥಿತಿ ಲಯಗಳನ್ನೂ ಗಮನಿಸಿದರೆ ನಮ್ಮ ಈ ಸ್ವಾರ್ಥವು ಅರ್ಥರಹಿತವೆಂದು ಕಂಡುಬರುತ್ತದೆ. ಸುಖ ದುಃಖಗಳು ಎಲ್ಲರಿಗೂ ಬರುತ್ತಲೇ ಇರುತ್ತವೆ. ಸಮಾಜದ ಸುಖದ ಅಂಗವಾಗಿ
ನಮಗೆ ಸುಖ ಲಭಿಸಲಿ ಎಂದು ಧರ್ಮವನ್ನನುಸರಿಸಿ ಜೀವಿಸುವುದು ಬುದ್ಧಿವಂತರ ಲಕ್ಷಣ. ಇದಲ್ಲದೆ ಕಾಲವನ್ನು ಗಮನಿಸುತ್ತ ನಾವೆಲ್ಲರೂ ಪ್ರಪಂಚದ ಎಲ್ಲ ಜೀವಿಗಳ ಸೃಷ್ಟಿ ಸ್ಥಿತಿ ಲಯಗಳನ್ನೂ ಪರಮಾತ್ಮನ ಲೀಲೆಯನ್ನಾಗಿ ಕಾಣುತ್ತ ಆನಂದ ಪಡುತ್ತಿರುವುದೇ ನಿಜವಾದ ಜ್ಞಾನ.
ನಿಂಬದಳ ಭಕ್ಷಣವೆಂದರೆ ಬೇವಿನ ಚಿಗುರನ್ನು ಯುಗಾದಿಯ ದಿನ ನಾವು ತಿನ್ನುವುದು. ಇದು ಕಹಿಯಾಗಿರುತ್ತದೆ. ಆದುದರಿಂದ ನಾವು ಇದಕ್ಕೆ ಬೆಲ್ಲ ಸೇರಿಸಿ ತಿನ್ನುತ್ತೇವೆ. ಇದರ ಸಂಕೇತವೇನೆಂದರೆ ಸುಖ ದುಃಖಗಳು ಕಾಲದಲ್ಲಿ ಎಲ್ಲರಿಗೂ ಬರುತ್ತಲೇ ಇರುತ್ತವೆ. ಹೇಗೆ ನಾವು ಬೇವಿನ ಚಿಗುರನ್ನು ಬೆಲ್ಲ ಸೇರಿಸಿ ದೇವರ ಮುಂದೆ ಇಟ್ಟು ಆಮೇಲೆ ತೆಗೆದುಕೊಂಡು ತಿನ್ನುತ್ತೇವೆಯೋ ಹಾಗೆಯೇ ಜೀವನದಲ್ಲಿನ ಸುಖ ದುಃಖಗಳನ್ನು ದೈವ ನಿರ್ಮಿತವೆಂದು ತಿಳಿದು ದುಃಖವಾದ ಮೇಲೆ ಸುಖ ಬಂದೇ ಬರುತ್ತದೆಯೆಂದೂ ತಿಳಿದು ಶಾಂತಿಯಿಂದ ಜೀವನವನ್ನು ನಡೆಸುತ್ತಿರಬೇಕು.
- ಲಂಕಾ ಕೃಷ್ಣಮೂರ್ತಿ