(ದಿ. 1-1-1991 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಒದುಗರಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಶ್ರಾದ್ಧಾದಿ ಅಪರ ಕರ್ಮಗಳು
ಪ್ರಶ್ನೆ:- ಶ್ರಾದ್ಧಾದಿ ಅಪರ ಕರ್ಮಗಳು ಅಗತ್ಯವೇ? ಅಗತ್ಯವಾದರೆ ಅದು ಗತಿಸಿದವರ ಹಿತಕ್ಕಾಗಿಯೇ ಅಥವಾ ಕರ್ಮಗಳನ್ನು ಮಾಡುವ ಹಿತಕ್ಕಾಗಿಯೇ? ಅದು ಇಬ್ಬರ ಹಿತದೃಷ್ಟಿಯಿಂದಲೂ ಅಗತ್ಯವೇ? ದಯಮಾಡಿ ವಿವರಣೆ ನೀಡಬೇಕಾಗಿ ಪ್ರಾರ್ಥಿಸುತ್ತೇನೆ. ಈ ಬಗ್ಗೆ ಶಾಸ್ತ್ರಗಳು ಹೇಳುವುದೇನು?
ಉತ್ತರ:- ದೂರದರ್ಶನ, ಅದರಲ್ಲೂ ವಿ.ಸಿ.ಪಿ, ಅದರಲ್ಲೂ ವಿ.ಸಿ.ಪಿ, ಅಗತ್ಯವಿಲ್ಲದೆ ದಿನಕ್ಕೆ ಒಂದು, ಅಥವಾ ಎರಡು ಸಿನಿಮಾಗಳನ್ನು ನೋಡುವ ಏರ್ಪಾಡು ಇವೆಲ್ಲಾ ಗಮನಿಸುತ್ತಿದ್ದರೆ ನನಗೆ ಪುರಾಣ ಸಾಹಿತ್ಯದ ಮೇಲೆ ಗೌರವ ಹೆಚ್ಚುತ್ತಾ ಹೋಗುತ್ತಿದೆ. ಉತ್ತಮವಾದ ಧಾರ್ಮಿಕ ಜೀವನವನ್ನು ನಡೆಸಬೇಕಾದರೆ ವಾಸ್ತವಿಕತೆಯ ಮೇಲೆ ನಿಂತಿರುವ ಶೃತಿ(ವೇದಗಳು) ಮತ್ತು ಸ್ಮೃತಿಗಳು, ಮತ್ತು ಇತರ ಮತಗಳ ಮೂಲಗ್ರಂಥಗಳ ಅಧ್ಯಯನ ಅಗತ್ಯ. ಈ ಅಧ್ಯಯನ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಭಾಷಾಜ್ಞಾನ ವಾಸ್ತವಿಕತೆಯ ಮೇಲೆ ಹೆಚ್ಚಿನ ಕುತೂಹಲ, ಧರ್ಮದಲ್ಲಿ ಆಸಕ್ತಿ ಇವೆಲ್ಲಾ ಇರುವವರಿಗೆ ಮಾತ್ರ ಇದು ಸಾಧ್ಯ. ಸಾಮಾನ್ಯ ಜನತೆಗೆ ಇದು ಸಾಧ್ಯವಿಲ್ಲ. ಇವರಿಗಾಗಿ ಕಥಾರೂಪದಲ್ಲಿ, ಕಾವ್ಯರೂಪದಲ್ಲಿ, ನಾಟಕ ರೂಪದಲ್ಲಿ ಪುರಾಣ ಸಾಹಿತ್ಯ ಹುಟ್ಟಿರುವುದು. ಇದು ಎಲ್ಲ ದೇಶಗಳಲ್ಲಿಯು, ಎಲ್ಲ ಕಾಲಗಳಲ್ಲಿಯು, ಎಲ್ಲ ಮತಗಳಲ್ಲಿಯು ಇರುವುದೇ. ಅದು ಕಲ್ಪನೆ ಮತ್ತು ಆಕರ್ಷಣೆ ಪ್ರಧಾನವಾದ ಸಾಹಿತ್ಯ.
ಈ ಕಲ್ಪನಾತ್ಮಕವಾದ ಸಾಹಿತ್ಯವು ಇಂದು ವೀಡಿಯೋ ಕ್ಯಾಸೆಟ್ಟುಗಳಲ್ಲಿ ಬಹಳ ಪ್ರಚಾರವಾಗುತ್ತಿದೆ. ಇದು ಕೇವಲ ವಿನೋದಾತ್ಮಕವಾಗಿದೆಯೇ ಹೊರತು ಪುರಾಣ ಸಾಹಿತ್ಯದಂತೆ ವಿನೋದವೂ ಧರ್ಮಜ್ಞಾನವೂ ಸೇರಿರುವುದಿಲ್ಲ. ವಿನೋದದಲ್ಲೂ ಇದು ಹೆಂಡದಂತೆ ಚಟವನ್ನು ಹುಟ್ಟಿಸುವುದು ಅನೇಕ ದುಷ್ಪರಿಣಾಮಗಳಿಗೆ ಮೂಲವಾಗಿರುವುದೂ ಆಗಿದೆ ಎಂಬ ವಿಷಯವನ್ನು ಒತ್ತಿ ಹೇಳಬೇಕಾಗಿಲ್ಲ. ದುಷ್ಪರಿಣಾಮಗಳಿಲ್ಲದೆ, ವಿನೋದಾತ್ಮಕವಾಗಿದ್ದು ಧರ್ಮ ಬೋಧಕವಾಗಿರುವಂತೆ ಪುರಾಣ ಸಾಹಿತ್ಯವನ್ನು ಬೆಳಿಸಿದ, ಮತ್ತು ಉಪಯೋಗಿಸಿದ ನಮ್ಮ ಹಿರಿಯರು ಇಂದಿನವರಿಗಿಂತಲೂ ಎಷ್ಟು ವಿವೇಕಿಗಳು ಎಂಬ ಆಶ್ಚರ್ಯವುಂಟಾಗಿ ನನಗೆ ಪುರಾಣ ಸಾಹಿತ್ಯದ ಮೇಲೆ ಗೌರವ ಹೆಚ್ಚುತ್ತಿದೆ.
ಸಾಮಾನ್ಯ ಜನರ ಮನಸ್ತತ್ವವೆಂತಹುದು ಎಂಬ ವಿಷಯವನ್ನು ಮೇಲಿನ ಕಲ್ಪನಾ ಸಾಹಿತ್ಯದ ಪ್ರಭಾವದ ವಾಸ್ತವಿಕತೆಯಿಂದ ಎಲ್ಲರೂ ತಪ್ಪದೆ ಅರಿಯಬೇಕಾಗಿದೆ. ವಾಸ್ತವಿಕತೆಯನ್ನು ಅರಿಯದೆ ಧರ್ಮಜಿಜ್ಞಾಸೆ ಮಾಡಿದರೆ ಸಂದೇಹಗಳಾಗಿಯೇ ಉಳಿಯುತ್ತವೆ.
ಈ ಹಿನ್ನಲೆಯಲ್ಲಿ ನನ್ನ ಮಿತ್ರರ ಪ್ರಶ್ನೆಗಳನ್ನು ವೀಕ್ಷಿಸಬೇಕಾಗಿದೆ. ಸತ್ತಮೇಲೆ ಏನಾಗುತ್ತೆ ಎಂದು ಹೇಳುವುದು ಯಾರಿಗೂ ಸಾಧ್ಯವಿಲ್ಲ. ಕಾರಣ ಸತ್ತವನು ಬದುಕಿ ಬಂದು ವರ್ಣಿಸಿದ್ದಿಲ್ಲ. ಒಂದು ವೇಳೆ ಅಂತಹ ಘಟನೆಗಳಿದ್ದರೆ ಅವರು ಪೂರ್ತಿ ಸತ್ತಿಲ್ಲವೆಂದೇ ಭಾವಿಸಬೇಕು. ಪುನರ್ಜನ್ಮ ಪಡೆದವರ ವಿಷಯಗಳು ಪತ್ರಿಕೆಗಳಲ್ಲಿಯು ಬರುತ್ತಲೇ ಇವೆ. ಇವುಗಳಿಂದ ಪುನರ್ಜನ್ಮವಿದೆಯೆಂದು ಅನೇಕರು ಒಪ್ಪುತ್ತಿದ್ದಾರೆ. ಒಪ್ಪದಿರುವರೂ ಇದ್ದರೆ. ಈ ವಿಷಯದಲ್ಲಿ ಆಗಲಿ ಸತ್ತಮೇಲೆ ಏನಾಗುತ್ತದೆ ಎಂಬ ವಿಷಯದಲ್ಲಾಗಲಿ ನಾನು ಆಪ್ತ ವಾಕ್ಯವಾದ ಶೃತಿ ಸ್ಮೃತಿಗಳನ್ನು ನಂಬುತ್ತೇನೆ. ಆದರೆ ನಿರೂಪಿಸಿ ಎಂದರೆ ನನಗೆ ಸಾಧ್ಯವಿಲ್ಲ. ಆದರೆ ಶಾಸ್ತ್ರಗಳಲ್ಲಿ ಹೇಳಿರುವ ವಿಷಯಗಳನ್ನು ಬದುಕಿರುವವರ ಮನಸ್ತತ್ವಕ್ಕೆ ಅನ್ವಯಿಸಿ ಸಮರ್ಥಿಸುವುದು ಸಾಧ್ಯವೆಂದು ನನ್ನ ಅಭಿಪ್ರಾಯ.
ಸಾಮಾನ್ಯ ಜನರ ಮನಸ್ತತ್ವದಲ್ಲಿ ಯಾರೂ ಸಾಯಲು ಬಯಸುವುದಿಲ್ಲ. ಆದುದರಿಂದ ಜೀವಿತದುದ್ದಕ್ಕೂ ಇದ್ದ ಈ ಪ್ರವೃತ್ತಿ ಸಾವಿನಿಂದ ಸಾಯುತ್ತದೆಂದು ಭಾವಿಸುವುದು ತಪ್ಪು. ಮುಕ್ಕಾಲು ಭಾಗ ಪ್ರಾಣ ಹೋಗಿರುವವನು ಚೇತರಿಸಿಕೊಂಡರೆ ಅವನಲ್ಲಿ ಈ ಪ್ರವೃತ್ತಿ ಪೂರ್ಣವಾಗಿದ್ದೇ ಇರುತ್ತದೆ. ಆದುದರಿಂದ ಆತ್ಮ ಸಾಯುವುದಿಲ್ಲವೆಂದು ನಂಬಬಹುದು. ಆ ಆತ್ಮದ ಇನ್ನೊಂದು ಲಕ್ಷಣವೇನೆಂದರೆ ಬೇರೆಯವರು ಹೊಗಳಿದರೆ ಅದರಿಂದ ಹಿಗ್ಗುವುದು. ಈ ಹೊಗಳಿಕೆಯಲ್ಲಿ ಅವನ ಹೆಸರು ಮುಂತಾದುವು ಸೇರಿಕೊಂಡೇ ಇರುತ್ತವೆ. ಆದುದರಿಂದ ಸಾಯದೆ ಇರಬೇಕೆಂಬ ಆತ್ಮವು ಹೋಗಳಿಸಿಕೊಳ್ಳುತ್ತಲೇ ಇರಬೇಕೆಂದು ಬಯಸುತ್ತದೆ. ಆದುದರಿಂದ ಈ ಆತ್ಮವು ದೇಹ ಹೋದಮೇಲೆ ಜನ ಹೊಗಳುತ್ತಿದ್ದರೆ ಸಂತೋಷ ಪಡುತ್ತಿರುತ್ತದೆ ಎಂಬ ಭಾವನೆ ಹುಟ್ಟಿರುತ್ತದೆ. ಇದನ್ನೇ ಸ್ವರ್ಗದಲ್ಲಿರುವುದು ಎಂದು ಪುರಾಣ ಸಾಹಿತ್ಯ ಹೇಳುತ್ತಿದೆ. ಒಟ್ಟಿನಲ್ಲಿ ಸಾಮಾನ್ಯ ಮಾನವನ ಮನಸ್ತತ್ವದಂತೆ ಅವನು ತಾನು ಸತ್ತಮೇಲೂ ತನ್ನ ಹೆಸರು ಉಳಿದಿರಬೇಕು ಎಂಬುದನ್ನು ಬಯಸುತ್ತಿರುತ್ತಾನೆ ಎಂಬುದರಲ್ಲಿ ನನಗಂತೂ ಸಂದೇಹವಿಲ್ಲ.
ಈಗಿನ ಪಾಪಿಷ್ಠ ಕಾಲದ ಮಾತನ್ನು ಬಿಡಿ. ಹಿಂದಿನ ಕಾಲದಲ್ಲಿ ಮಕ್ಕಳು ತಾಯಿತಂದೆಯರು ಮಡಿಲಲ್ಲಿ ಹಾಗೂ ಆಜ್ಜ ಅಜ್ಜಿಯರ ಮಡಿಲಲ್ಲಿ ಬೆಳೆಯುತ್ತಿದ್ದರು. ಒಂದೊಂದು ಸಲ ಮುತ್ತಜ್ಜ ಮುತ್ತಜ್ಜಿಯರ ದರ್ಶನದ ಭಾಗ್ಯವೂ ಅವರಿಗಿತ್ತು. ಆದುದರಿಂದ ಪರಸ್ಪರ ಪ್ರೀತಿ ಇವರ ನಡುವೆ ಹೆಚ್ಚಾಗಿತ್ತು. ಅವರನ್ನು ತಿಂಗಳಿಗೊಂದು ಸಲವೋ ವರ್ಷಕ್ಕೊಂದು ಸಲವೋ ನೆನಪು ಮಾಡಿಕೊಳ್ಳದಿದ್ದರೆ ಇವರಿಗೆ ತೃಪ್ತಿ ಇರುತ್ತಿರಲಿಲ್ಲ. ಅವರಿಗೆ ಸಹ ಬದುಕಿರುವಾಗ ನನ್ನ ಮಕ್ಕಳು ನನ್ನ ಮೊಮ್ಮಕ್ಕಳು ಅವರ ಮಕ್ಕಳು ನನ್ನ ಹೆಸರನ್ನು ಹೇಳುತ್ತಾರೆ ಎಂಬ ಆಕಾಂಕ್ಷೆಯಿತ್ತು. ಆ ತೃಪ್ತಿ ಆ ಆಕಾಂಕ್ಷೆ ಮತ್ತು ಅದು ತಪ್ಪದೆ ನಡೆಯುತ್ತದೆ ಎಂಬ ಭರವಸೆ. ಈ ಎರಡೂ ಶ್ರಾದ್ಧ ಪದ್ಧತಿಯನ್ನವಲಂಬಿಸಿದ್ದವು. ಆದುದರಿಂದ ಶ್ರಾದ್ಧವು ವಾಸ್ತವವಾಗಿ ಈ ಇಬ್ಬರಿಗೂ ತೃಪ್ತಿಯನ್ನು ಕೊಡುತ್ತಿದ್ದವು.
ಇನ್ನು ಈ ಪಿತೃಗಳಿಗೆ ವಸು, ರುದ್ರ, ಆದಿತ್ಯ ಎಂಬ ಮೂರು ಹೆಸರುಗಳನ್ನು ಕೊಟ್ಟಿರುವ ವಿಚಾರ ಸ್ವಲ್ಪ ಮಾಡಬೇಕಾಗಿದೆ. ಒಬ್ಬನಿಗೆ ತಂದೆ ತಾಯಿಗಳು ವಸು ರೂಪರು. ತಾತ, ಅಜ್ಜಿ, ರುದ್ರ ರೂಪರು, ಮುತ್ತಜ್ಜ, ಮುತ್ತಜ್ಜಿ ಆದಿತ್ಯ ರೂಪರು. ವಸು ಅಂದರೆ ಧನ. ಇದು ಬರುವುದು ತಂದೆ ತಾಯಿಗಳಿಂದ ಮಾತ್ರ. ತಾತನ ಆಸ್ತಿ ಬಂದರೂ ತಂದೆ ಉಳಿಸಿದ್ದರೆ ತಾನೇ. ಆದುದರಿಂದ ಇವರು ವಸು ರೂಪರು. ರುದ್ರ ಅಂದರೆ ಅಳುವಂತೆ ಮಾಡುವವನು ಎಂದರ್ಥ. ತಾತ ಸತ್ತರೆ ಅಳು ಬರುತ್ತೆ. ಏಕೆಂದರೆ ಸಾಧಾರಣವಾಗಿ ಇವರೇ ಮಕ್ಕಳನ್ನು ತಂದೆ ತಾಯಿಗಳಿಗಿಂತಲೂ ಹೆಚ್ಚಾಗಿ ಲಾಲಿಸುವವರು. ಪ್ರೀತಿಯಿಂದ ಅಳು ಬರುತ್ತದೆ. “ವಸು”ವಾದ ತಂದೆಯಲ್ಲಿಯು ಪ್ರೀತಿ ಇದೆ. ಆದರೆ “ವಸು” ಸಹ ವಿಶೇಷವಾಗಿ ಬರುವುದರಿಂದ ಅವರಿಗೆ ಆ ಹೆಸರು. “ರುದ್ರ” ಎಂಬ ಹೆಸರು ಪ್ರೀತಿ ಮಾತ್ರವಾದರೂ ತಪ್ಪದೆ ಇರುವುದರಿಂದ ತಾತನಿಗೆ ಮುತ್ತಜ್ಜನು ಆದಿತ್ಯ ಅಂದರೆ ಅದಿತಿಯ ಮಗ. “ದಿತಿ” ಅಂದರೆ ಕತ್ತರಿಸುವುದು ಅಥವಾ ಬೇರ್ಪಡಿಸುವುದು ಎಂಬ ಅರ್ಥ. ಅದಕ್ಕೇ ದೈತ್ಯರಲ್ಲಿ ಒಗ್ಗಟ್ಟಿಲ್ಲ. ಅದಿತಿ ಎಂದರೆ ಸಂಬಂಧ ಧೃಢವಾಗಿರುವುದು ಎಂದು ಅರ್ಥ. ಆದುದರಿಂದ ಮುತ್ತಜ್ಜನ ತಲೆಮಾರಿನವರ ಹಂತದಲ್ಲಿ ಆ ಕಾಲದಲ್ಲಿ ಒಟ್ಟು ಕುಟುಂಬಗಳು ಹೆಚ್ಚಾಗಿರಬಹುದು. ಆದುದರಿಂದ ಆತನು ಆದಿತ್ಯ ರೂಪ. ಹೀಗೆ ಧನ,ಪ್ರೀತಿ, ಬಾಂಧವ್ಯಗಳ ಸಂಬಧ್ವಿರುವವರ ಪರಸ್ಪರ ವಾಸ್ತವಿಕ ತೃಪ್ತಿಗಾಗಿ ಏರ್ಪಟ್ಟಿರುವುದೇ ಪಿತೃಯಜ್ಞ.
ಇದಲ್ಲದೆ ಇದಕ್ಕೆ “ಯಜ್ಞ”ವೆಂಬ ವಿಶೇಷವು ಬೇರೆ ಸೇರಿಕೊಂಡಿದೆ. ಸಂಪಾದಿಸಿದ ಹಣವನ್ನು ಕೇವಲ ಸ್ವಾರ್ಥಕ್ಕಗಿ ವಿನಿಯೋಗಿಸುವವನು ಭೋಗಲಾಲಪನಾಗಿ ವೀಡಿಯೋಗಳಲ್ಲಿ ದಿನ ಎರಡು ಚಿತ್ರಗಳನ್ನು ನೋಡುವವನಂತೆ ಧರ್ಮ ಶೂನ್ಯನಾಗಿ ತೃಪ್ತಿ, ಇತರರ ಪ್ರೀತಿ, ಕೀರ್ತಿ ಮುಂತಾದ ಮುಂತಾದ ಐಹಿಕ ಸುಖಗಳಿಂದಲೂ ಸಾಯುವಾಗ ಹೆದರಿಕೆ ಇಲ್ಲದಂತೆ ಆನಂದವಾಗಿರಲು ಪೂರ್ವ ಸಿದ್ಧತೆಯ ರೂಪದಲ್ಲಿರುವ ಶಮದಮಾದಿಗಳಿಂದಲೂ ವಂಚಿತನಾಗುತ್ತಾನೆ. ಅದನ್ನೇ ಇತರರ ಪ್ರೀತಿಗಾಗಿ ಉಪಯೋಗಿಸುವವನು ಮೇಲ್ಕಂಡ ಎರಡು ಫಲಗಳನ್ನು ಹೊಂದುತ್ತಾನೆ. ಈ ಕೆಲಸಕ್ಕೇ ಯಜ್ಞವೆಂದು ಹೆಸರು. ಪಿತೃ ಯಜ್ಞದಲ್ಲಿ ವಿದ್ಯಾವಂತರೂ, ಸೇವಾವೃತ್ತಿಯನ್ನು ಮಾಡದವರೂ, ಇತರರ ದಾನದ ಮೇಲೆ ಜೀವಿಸುವರೂ, ನಿಯಮವಂತರೂ ಆದ ಬ್ರಾಹ್ಮಣರಿಗೆ ಊಟ ಇಡಬೇಕೆಂದು ವಿಧಿಸಲ್ಪಟ್ಟಿದೆ. ಇದರಿಂದ ಅವರಿಗೆ ತೃಪ್ತಿ ಆಗಿ ಅವರು “ಧರ್ಮ”ವನ್ನು ಸರಿಯಾದ ರೀತಿಯಲ್ಲಿ ಲೋಕದಲ್ಲಿ ನಡೆಸುತ್ತಾರೆ. ಇಷ್ಟು ತೃಪ್ತಿಗಳು ಶ್ರಾದ್ಡದ ಉದ್ದೇಶ. ಇದು ಸಕ್ರಮವಾಗಿ ನಡೆದು ಫಲ ಕೊಡಬೇಕಾದರೆ, ಸಂಬಂಧಿಸಿದ ಎಲ್ಲರಲ್ಲಿಯು ಅವರ ವಸ್ತುಗಳಲ್ಲಿಯು ಶುದ್ಧಿ ಇರಬೇಕು. ಶ್ರದ್ಧೆ ಇರಬೇಕು.
– ಲಂಕಾ ಕೃಷ್ಣಮೂರ್ತಿ