ಶ್ ಶ್ ಶ್ ಶ್ ಶ್ ಶ್ ಶ್ ಶ್
(ಡಿಸೆಂಬರ್ 1992 ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದ ಲೇಖನ)
ಇಂದಿನ ನಾಗರಿಕ ಯುವಕರು ಅಪರಿಚಿತರ ಗಮನ ಸೆಳೆಯಲು ಮಾಡುವ ಶಬ್ದವಿದು. ನಾವು ಯುವಕರಾಗಿದ್ದಾಗ ಯಾರಾದರೂ ಅಪರಿಚಿತರು ಮುಂದೆ ಹೋಗುತ್ತಿದ್ದರೆ ಅವರ ಗಮನ ಸೆಳೆಯಲು ‘ರೀ‘, ‘ರೀ‘ ಅಥವಾ ‘ಅಯ್ಯಾ‘ ಅಥವಾ ‘ಅಪ್ಪೋಯ್‘ ಎಂಬುದಾಗಿ, ಮತ್ತು ಹೆಂಗಸರಾದರೆ ‘ಅಮ್ಮಾ‘ ‘ಅವ್ವಾ‘ ಎಂದು ಕೂಗುತ್ತಿದ್ದೆವು. ಹಳ್ಳಿ ಜನರಾದರೆ ಇನ್ನೂ ಅಕ್ಕರೆಯ ಪದಗಳಾದ ‘ಅಣ್ಣಾ‘, ‘ಅಕ್ಕಾ‘ ಎಂಬುವನ್ನು ಉಪಯೋಗಿಸುತ್ತಿದ್ದರು. ಈಗಲೂ ಉಪಯೋಗಿಸುತ್ತಿದ್ದಾರೆ. ಆದರೆ ಇಂದಿನ ನವನಾಗರಿಕರಲ್ಲಿ ಮೇಲ್ಕಂಡ ಶಬ್ದದ ಪ್ರಯೋಗ ಜಾರಿಗೆ ಬರಲು ಕಾರಣವೇನೆಂದು ಆಲೋಚಿಸಬೇಕಾಗಿದೆ. ಆಂಗ್ಲ ಭಾಷೆಯಲ್ಲಿ ‘Sir’, ‘Madam’ ಮುಂತಾದ ಗೌರವಸೂಚಕ ಶಬ್ದಗಳಿವೆಯೇ ಹೊರತು ಮೇಲ್ಕಂಡ ಶಬ್ದವಿದ್ದ ಹಾಗಿಲ್ಲ. ಈ ಶಬ್ದ ನವನಾಗರಿಕ ಮನುಷ್ಯನ ಒಳಗಿರುವ ಪಶುಪ್ರವೃತ್ತಿ ಯಿಂದ ಬಂದಿದೆ ಎಂದೇ ಹೇಳಬೇಕಾಗಿದೆ. ಈ ನವನಾಗರಿಕರಲ್ಲಿ ಸಂಯಮದ, ಗೌರವದ, ಪ್ರೀತಿಯ ಭಾವನೆ ಕಡಿಮೆಯಾಗಿ ಸ್ವಾರ್ಥದ ಮತ್ತು ಜಂಭದ ಪ್ರವೃತ್ತಿ ಬೆಳೆಯುತ್ತಿರುವುದಕ್ಕೆ ಇದೊಂದು ನಿದರ್ಶನ.
ಪಶುಪ್ರವೃತ್ತಿಯ ಬೆಳವಣಿಗೆಗೆ ಇನ್ನೊಂದು ಹೊಸ ನಿದರ್ಶನ ಕಂಡುಬರುತ್ತಿದೆ. ವಿದ್ಯಾರ್ಥಿಗಳು ಜೊತೆಯಲ್ಲಿ ಹೋಗುತ್ತಿರುವಾಗ ಅಥವಾ ಒಬ್ಬರನ್ನೊಬ್ಬರು ಭೇಟಿ ಮಾಡಿದಾಗ ಒಬ್ಬನ ಕಾಲು ಇನ್ನೊಬ್ಬನ ಕಾಲುಗಳನ್ನು ಹಿಂದೆಯಿಂದ ಒದೆಯಲು ಚಲಿಸುವುದನ್ನು ನಾವು ಗಮನಿಸಬಹುದು. ಕರಾಟೆ ಶಿಕ್ಷಣ ಇದಕ್ಕೆ ಮೂಲವಲ್ಲ. ಸಂಯಮದ, ಗೌರವದ, ಅಭಾವ ಮತ್ತು ಪಶುಪ್ರವೃತ್ತಿಯೇ ಇದಕ್ಕೆ ಮೂಲ. ಕರಾಟೆ ಶಿಕ್ಷಣ ಉತ್ತೇಜನ ಮಾತ್ರ ನೀಡುತ್ತದೆ ಎಂದು ಭಾವಿಸಬಹುದು. ಪ್ರಾಚೀನ ಕಾಲದಿಂದ ನಮ್ಮ ದೇಶದ ಜನರಲ್ಲಿ ಬೆಳೆದು ಬಂದಿರುವ ಸಂಸ್ಕಾರವಿರುವವರಿಂದಿಗೂ ಕಾಲನ್ನು ಇತರರಿಗೆ ಸೋಂಕಿಸುವುದಿಲ್ಲ. ಬಸ್ಸುಗಳಲ್ಲಿ ನಿಂತು ಪ್ರಯಾಣ ಮಾಡುವಾಗ ಅಕಸ್ಮಾತ್ ನಮ್ಮ ಪಾದ ಇನ್ನೊಬ್ಬರಿಗೆ ತಗುಲಿದರೆ ನಾವು ಕೈಯಿಂದ ಅವರನ್ನು ಮುಟ್ಟಿ ಕೈಯನ್ನು ಕಣ್ಣಿಗೆ ಒತ್ತಿಕೊಳ್ಳುತ್ತೇನೆ. ಆಗ ಅವರೂ ಹಾಗೆಯೇ ಮಾಡುತ್ತಾರೆ. ಈ ಪರಸ್ಪರ ಗೌರವ ಭಾವದ ಸಂಸ್ಕೃತಿಗೆ ವಿರುದ್ಧವಾಗಿ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿರುವ “ಒದೆದಾಟ“ವನ್ನು ಶಿಕ್ಷಕರು ಮತ್ತು ತಂದೆ ತಾಯಿಗಳು ತಪ್ಪಿಸಲು ಪ್ರಯತ್ನಿಸಬೇಕಾಗಿದೆ.
ದೂರದರ್ಶನದಲ್ಲಿ, ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದ ಬಂದಿರುವ ಸತ್ಸಂಪ್ರದಾಯಗಳಿಗೆ ವಿರುದ್ಧವಾಗಿ ಪಾಶ್ಚಾತ್ಯ ದೇಶಗಳಲ್ಲಿ ಬೆಳೆಯುತ್ತಿರುವ ಗಂಡಸರು ಮತ್ತು ಹೆಂಗಸರು ಒಬ್ಬರನ್ನೊಬ್ಬರು ತಬ್ಬಿಕೊಂಡು ಮಾಡುವ ಕುಣಿತ, ಇಷ್ಟಾನುಸಾರ ವಾದ ವಾದ್ಯ ಸಂಗೀತದ ಜೊತೆ ಕುಣಿತ ಮು೦ತಾದವು ಗಳನ್ನು ಪ್ರದರ್ಶಿಸಿ ನಮ್ಮ ಸತ್ಸಂಪ್ರದಾಯಗಳನ್ನು ಹಾಳುಮಾಡುತ್ತಿರುವುದನ್ನು ಸೂಕ್ತ ಕಾನೂನಿನಿಂದ ಕೂಡಲೇ ನಿಷೇಧಿಸಬೇಕಾಗಿದೆ.
ನಮ್ಮ ದೇಶದ ರಾಜಕೀಯಗಳಲ್ಲಿ ಬರು ಬರುತ್ತ ಹೆಚ್ಚಾಗುತ್ತಿರುವ ಗುಂಪುಗಾರಿಕೆಯ ಮನೋಭಾವ ಪಶುಪ್ರವೃತ್ತಿ ಅಲ್ಲದೆ ಮತ್ತೇನು? ಈ ಗುಂಪುಗಾರಿಕೆಯನ್ನು ನೋಡಿದಾಗೆಲ್ಲಾ ನನಗೆ ನಮ್ಮೂರಿನ ಕೋತಿಗಳ ಗುಂಪುಗಳು ನೆನಪಿಗೆ ಬರುತ್ತವೆ. ನಮ್ಮ ಊರು ಒಂದು ಬೆಟ್ಟದ ಅಡಿಯಲ್ಲಿರುವ ಚಾರಿತ್ರಿಕ ಪ್ರದೇಶ. ಅಲ್ಲಿ ಕೋತಿಗಳು ಹೆಚ್ಚು. ನಾನು ಚಿಕ್ಕ ಹುಡುಗನಾಗಿದ್ದಾಗ ಕೈಯಲ್ಲಿ ಏನಾದರೂ ತಿನಿಸನ್ನಿಟ್ಟುಕೊಂಡಿದ್ದರೆ ಕೋತಿ ಬಂದು ಕಿತ್ತುಕೊ೦ಡು ಹೋಗುತ್ತಿತ್ತು. ಕೋತಿಗಳು ಮನೆಯ ಅಂಗಳದಲ್ಲಿ ಧಾರಾಳವಾಗಿ ಓಡಾಡುತ್ತ ಕೈಗೆ ಸಿಕ್ಕಿದ್ದನ್ನು ಬಾಚಿಕೊಂಡು ಹೋಗುತ್ತಿದ್ದವು. ಅವು ಮನೆಯ ಒಳಕ್ಕೆ ಬರುತ್ತಿರಲಿಲ್ಲ. ಆದರೆ ಒಂದೊಂದು ಸಲ ಯಾವುದಾದರೂ ಒಂದು ಕೋತಿ ಸೀದಾ ಮನೆಯೊಳಕ್ಕೆ ನುಗ್ಗಿ ಅಡಿಗೆ ಮನೆಗೆ ಹೋಗಿ ಕುಳಿತುಕೊಳ್ಳುತ್ತಿತ್ತು. ಕೋಲಿನಿಂದ ಹೆದರಿಸಿದರೂ ಅದು ಹೊರಕ್ಕೆ ಹೋಗುತ್ತಿರಲಿಲ್ಲ. ಯಾವ ಪದಾರ್ಥವನ್ನೂ ಅದು ಮುಟ್ಟುತ್ತಿರಲಿಲ್ಲ. ಕೂಡಲೇ ಎಂಟು ಹತ್ತು ಕೋತಿಗಳು ಮನೆಯ ಹತ್ತಿರಕ್ಕೆ ಓಡಿ ಬಂದು ಕಿಚ ಕಿಚ ಶಬ್ದ ಮಾಡುತ್ತಾ ಒಳಹೊಕ್ಕ ಕೋತಿಯು ಹೊರ ಬರುವುದಕ್ಕೆ ಕಾದಿರುತ್ತಿದ್ದವು. ಅನೇಕ ಕಪಿ ಚೇಷ್ಟೆಗಳನ್ನು ಮಾಡುತ್ತಾ ಬಹಳ ಹೊತ್ತು ಹಾಗೆಯೇ ಇರುತ್ತಿದ್ದವು. ಅಡಿಗೆ ಮನೆಯಲ್ಲಿ ಕೂತಿದ್ದ ಕೋತಿ ಎಷ್ಟು ಹೊತ್ತಾದರೂ ಅಲ್ಲಿಯೇ ఇರುತ್ತಿತ್ತು. ಹೊತ್ತಾದ ಮೇಲೆ ಹೊರಗಿನ ಕೋತಿಗಳು ಬೇಸತ್ತು ಹಿಂತಿರುಗಿದ ಮೇಲೆ ಅದು ಹುಷಾರಾಗಿ ಹೊರಕ್ಕೆ ಬಂದು ಎಲ್ಲಿಗೋ ಹೊರಟು ಹೋಗುತ್ತಿತ್ತು. ಆಗ ದೊಡ್ಡವರು ಅದು ಬೆಟ್ಟದ ಕೋತಿಯೋ ಮಾರ್ಕೆಟ್ಟಿನ ಕೋತಿಯೋ ಇರಬೇಕೆಂದು ಹೇಳುತ್ತಿದ್ದರು.
ವಾಸ್ತವಿಕ ಸ್ಥಿತಿ ಏನೆಂದರೆ ಆ ಊರಿನಲ್ಲಿ ಕೋಟೆಯಲ್ಲಿನ ಕೋತಿಗಳದೇ ಒಂದು ಗುಂಪು, ಬೆಟ್ಟದಲ್ಲಿನ ಕೋತಿಗಳದೇ ಒಂದು ಗುಂಪು, ಮತ್ತು ಕೋಟೆಯ ಹೊರಗೆ ಮಾರ್ಕೆಟ್ ಪ್ರದೇಶದಲ್ಲಿದ್ದ ಕೋತಿಗಳದೇ ಒಂದು ಗುಂಪು ಹೀಗೆ ಮೂರು ಗುಂಪುಗಳಿದ್ದವು. ಒಂದು ಪ್ರದೇಶಕ್ಕೆ ಬೇರೆ ಪ್ರದೇಶದ ಒಂದು ಕೋತಿ ಬಂದರೆ ಆ ಮೊದಲ ಪ್ರದೇಶದ ಕೋತಿಗಳೆಲ್ಲವೂ ಸೇರಿಕೊಂಡು ಅದನ್ನು ಕಚ್ಚಿಬಿಡುತ್ತಿದ್ದವು. ಅದಕ್ಕೆ ಹೆದರಿ ಆ ಕೋತಿ ಅಡಿಗೆ ಮನೆಯಲ್ಲಿ ಬಂದು ಕುಳಿತುಕೊಳ್ಳುತ್ತಿತ್ತು.
ಕೋತಿಗಳ ಗುಂಪುಗಳಲ್ಲಿನ ದ್ವೇಷ, ನಾಯಿಗಳಲ್ಲಿನ ದ್ವೇಷ ಇತ್ಯಾದಿಗಳನ್ನು ನಾವು ನಮ್ಮ ನಾಯಕರಲ್ಲಿಂದು ಪ್ರತ್ಯಕ್ಷವಾಗಿ ನೋಡುತ್ತಿದ್ದೇವೆ.
ಇದನ್ನು ಕೇವಲ ನಗೆ ಬರಹವನ್ನಾಗಿ ಭಾವಿಸಿ ವಿನೋದಿಸದೆ ಇಲ್ಲಿನ ಒಂದೊಂದು ವಿಷಯವನ್ನು ಕುರಿತು ವಿವೇಚಿಸಬೇಕೆಂದು ಓದುಗರನ್ನು ಬೇಡಿಕೊಳ್ಳುತ್ತಿದ್ದೇನೆ.
ಲಂಕಾ ಕೃಷ್ಣಮೂರ್ತಿ
(ಸಹಾಯಕ ಸಂಪಾದಕರು ಧರ್ಮಪ್ರಭ)