ಕೊಡೆಯ ಗೋಪಾಲ – 6
ಲಂಕಾ ಕೃಷ್ಣಮೂರ್ತಿ
೪
ಆ ದಿನ ಹಗಲೆಲ್ಲಾ ಕಮಲಮ್ಮನು ತನ್ನ ಕೆಲಸಗಳಲ್ಲಿ ತೊಡಗಿದ್ದರೂ, ಆಕೆಯ ಮನಸ್ಸೆಲ್ಲಾ ಗುರುಗಳು ತಿಳಿಸಿದ ವಿಷಯಗಳಲ್ಲಿಯೇ ಮಗ್ನವಾಗಿತ್ತು. ಅವಳು ಆ ವಿಷಯಗಳನ್ನು ಕುರಿತು ನಾನಾ ವಿಧಗಳಲ್ಲಿ ಪರ್ಯಾಲೋಚನೆ ಮಾಡುತ್ತಿದ್ದಳು. ರಾತ್ರಿಯೆಲ್ಲಾ ಅವಳು ಅದನ್ನೇ ಯೋಚಿಸುತ್ತಾ ಇದ್ದುದರಿಂದ ಮಲಗಿದ್ದರೂ ಅವಳಿಗೆ ನಿದ್ರೆ ಬರಲಿಲ್ಲ. ಮಾರನೇ ದಿನ ಬೆಳಗ್ಗೆ ತನ್ನ ಕೆಲಸಗಳನ್ನು ನಿರ್ವಹಿಸಿ ಗುರುಗಳ ಅನುಮತಿಯನ್ನು ಪಡೆದು ರಾಮಕ್ಕನ ಮನೆಗೆ ಹೊರಟಳು.
ರಾಮಕ್ಕನ ಮನೆಯು ಕೋಟೆಯಲ್ಲಿ ಉತ್ತರ ದಿಕ್ಕಿನಲ್ಲಿ ಕಟ್ಟಿದ್ದ ಪರಿಚಾರಕರ ಕೇರಿಯಲ್ಲಿತ್ತು. ಕಮಲಮ್ಮನು ಆಶ್ರಮದಿಂದ ಹೊರಟವಳು ನಗರದಲ್ಲಿನ ಹೂಗಳ ಪೇಟೆಯ ಮಾರ್ಗವಾಗಿ ಕೋಟೆಯ ಉತ್ತರದ ಬಾಗಿಲಿಗೆ ಬಂದಳು. ಅದೇ ಸಮೀಪದ ಮಾರ್ಗವಾಗಿತ್ತು. ಅಲ್ಲಿ ಅವಳು ಸೈನಿಕರ ಸುಳಿದಾಟವನ್ನು ಕಂಡಳು. ಕೆಲವರು ಸೈನಿಕರು ಹೂ ಮಾರುವ ಹೆಣ್ಣುಗಳೊಂದಿಗೆ ಮಾಡುತ್ತಿದ್ದ ಗ್ರಾಮ್ಯ ಮತ್ತು ಆಶ್ಲೀಲವಾದ ಸಂಭಾಷಣೆ ಅವಳ ಕಿವಿಯಲ್ಲಿ ಬಿದ್ದಿತು. ಅವಳು ಇವುಗಳಿಗೆ ವಿಮುಖಳಾಗಿ ತಲೆಬಾಗಿಸಿಕೊಂಡು ಯಾರ ಕಣ್ಣಿಗೂ ಬೀಳದಂತೆ ಆ ಬೀದಿಯನ್ನು ದಾಟಿ ಕೋಟೆಯ ಉತ್ತರದ ಬಾಗಿಲಿನಿಂದ ಕೋಟೆಯನ್ನು ಪ್ರವೇಶ ಮಾಡಿದಳು. ಅಲ್ಲಿಂದ ರಾಮಕ್ಕನ ಮನೆಯನ್ನು ತಲುಪಿದಳು.
ರಾಮಕ್ಕ ಗೋಪಾಲನಿಗೆ ತಿಂಡಿಯನ್ನು ಕೊಡುತ್ತಿದ್ದವಳು ಕಮಲಮ್ಮ ಬರುವುದನ್ನು ನೋಡಿ ಹಾಗೆಯೇ ಮನೆಯಿಂದ ಹೊರಗೆ ಬಂದು ಅವಳನ್ನು ಮನೆಯೊಳಕ್ಕೆ ಕರೆದುಕೊಂಡು ಹೋದಳು. ಅವಳ ಮುಖದಲ್ಲಿನ ಗಾಬರಿ ಯನ್ನೂ, ಕಳವಳವನ್ನೂ, ದುಃಖವನ್ನೂ ನೋಡಿ ರಾಮಕ್ಕನೂ, ಗೋಪಾಲನೂ ಚಕಿತಗೊಂಡರು. ರಾಮಕ್ಕ ಅವಳಿಗೆ ಕೈ ಕಾಲುಗಳನ್ನು ತೊಳೆದು ಕೊಳ್ಳುವಂತೆ ಹೇಳಿ ಅಡುಗೆಯ ಮನೆಯಲ್ಲಿ ಒಂದು ಚಾಪೆಯನ್ನು ಹಾಸಿ ಅದರ ಮುಂದೆ ತಿಂಡಿಯನ್ನು ಇಟ್ಟಳು. ಗೋಪಾಲನು ಅಡುಗೆ ಮನೆಯ ಬಾಗಿಲಿನಿಂದ ಹೊರಗೆ ಆಗಲೇ ಹಾಕಿದ್ದ ಚಾಪೆಯ ಮೇಲೆ ಪುನಃ ಬಂದು ಕುಳಿತುಕೊಂಡನು. ರಾಮಕ್ಕ ಅವನಿಗೂ ತಿಂಡಿಯನ್ನು ಕೊಟ್ಟಳು. ಆದರೆ ಗೋಪಾಲನು ಕಮಲಮ್ಮನು ತಿಂಡಿಯನ್ನು ತೆಗೆದು ಕೊಳ್ಳುವವರೆಗೂ ತಾನು ತೆಗೆದು ಕೊಳ್ಳಲಿಲ್ಲ.
ಕಮಲಮ್ಮನು ಬಂದು ಚಾಪೆಯ ಮೇಲೆ ಕುಳಿತುಕೊಂಡಳು. ರಾಮಕ್ಕ ಕಮಲಮ್ಮನನ್ನು ಕೇಳಿದಳು –
“ಏನಾಯಿತು ಕಮಲಾ? ನಿನ್ನ ಮುಖ ಯಾಕೋ ಸಪ್ಪಗಿದೆ, ನಿನ್ನ ಗುರುಗಳು ಚೆನ್ನಾಗಿದ್ದಾರಲ್ಲಾ ?”
ಕಮಲಮ್ಮನು ಮೆದುವಾದ ಧ್ವನಿಯಲ್ಲಿ ಹೇಳಿದಳು –
“ಗುರುಗಳು ಚೆನ್ನಾಗಿದ್ದಾರೆ. ಆದರೆ ನಿನ್ನೆ ಕೆಲವು ವಿಷಯಗಳನ್ನು ತಿಳಿದು ನನ್ನ ಮನಸ್ಸಿಗೆ ತೀರಾ ಬೇಸರವಾಗಿದೆ. ನಮ್ಮ ರಾಜರ ಆಳ್ವಿಕೆ ಸರಿ ಯಾಗಿಲ್ಲ, ಜನರಿಗೆ ಬರುತ್ತಾ ಬರುತ್ತಾ ಇನ್ನೂ ಹೆಚ್ಚು ಕಷ್ಟಗಳು ಬರುವಂತಿವೆ”
ರಾಮಕ್ಕ – “ಏನಮ್ಮಾ ಅಷ್ಟು ಮನಸ್ಸಿಗೆ ಬೇಸರವಾಗುವಂತಹ ವಿಷಯಗಳು ನಿನಗೆ ತಿಳಿದಿದ್ದು ? ಯಾರು ಹೇಳಿದ್ದು, ಏನು ನಡೆಯಿತು ?”
ಗೋಪಾಲ – “ಮೊದಲು ತಿಂಡಿ ತೆಗೆದುಕೋ, ಕಮಲಾ ಸ್ವಲ್ಪ ಮನಸ್ಸನ್ನು ಸಮಾಧಾನ ಮಾಡಿಕೋ. ಆ ಮೇಲೆ ಹೇಳುವೆಯಂತೆ.”
ಇಬ್ಬರೂ ಮೌನವಾಗಿ ತಿಂಡಿಯನ್ನು ತಿಂದರು. ರಾಮಕ್ಕನೂ ಮೌನ ವಾಗಿದ್ದಳು. ಆ ಮೇಲೆ ರಾಮಕ್ಕನು ಪುನಃ ಕೇಳಿದಳು. ಕಮಲಮ್ಮ ಗಣಪತಿಗೆ ಕಣ್ಣುಗಳನ್ನು ಕೀಳಿಸಿರುವ ವಿಷಯವನ್ನೂ ಗುರುಗಳು ಹೇಳಿದ ರಾಜರ ಚರಿತ್ರೆಯನ್ನೂ ದೇಶದಲ್ಲಿ ಹಿಂದೆ ವಿದ್ಯೆಗಳಿಗೆ ಇದ್ದ ಪ್ರೋತ್ಸಾಹವನ್ನೂ, ಅವುಗಳಿಗೆ ಬಂದ ವಿನಾಶವನ್ನೂ, ಅದರಿಂದಾದ ಪರಿಣಾಮಗಳನ್ನೂ, ಹೊಸದಾಗಿ ಪುಂಡರು ಎಬ್ಬಿಸಿದ್ದ ಭಾಷಾ ದ್ವೇಷವನ್ನೂ, ಮುಂದೆ ಸಂಭವಿಸಬಹುದಾದ ಅನರ್ಥಗಳನ್ನೂ ವಿದ್ಯಾವತಿಯಾದುದರಿಂದ ಮನ ಮುಟ್ಟುವಂತೆ ತಿಳಿಸಿ, ತೆರಿಗೆಗಳನ್ನು ತೆಗೆದುಕೊಂಡು ಜನರ ಕ್ಷೇಮವನ್ನರಿಯದ ದೊರೆಯನ್ನು ಆಕ್ಷೇಪಿಸಿದಳು.
ರಾಮಕ್ಕ- “ಒಳ್ಳೆಯವನೋ ಕೆಟ್ಟವನೋ, ದೊರೆ ಒಬ್ಬನಿರಬೇಕು. ಅವನಿಲ್ಲದಿದ್ದರೆ ದೇಶ ಅರಾಜಕವಾಗಿ ಜನರಿಗೆ ಕ್ಷೋಭೆ ಉಂಟಾಗುವುದು. ಈಗಿನ ದೊರೆ ಜನರನ್ನು ಪೀಡಿಸುವವನಲ್ಲ, ಅವಿವೇಕಿಯಾಗಿರಬಹುದು. ತಮ್ಮ ಕ್ಷೇಮವನ್ನು ನೋಡಿಕೊಳ್ಳುವುದು ಜನರ ಕರ್ತವ್ಯವೂ ಆಗಿದೆ. ಈಗಿನ ದೊರೆಯು ಸಾಹಸಪ್ರಿಯ ಹೌದು. ಆತನೂ ಒಬ್ಬ ಮನುಷ್ಯನೇ. ಆತನಿಗೂ ಎಲ್ಲರಂತೆಯೇ ಕಾಮ ಕ್ರೋಧಗಳಿವೆ. ತನ್ನ ಕ್ಷೇಮಕ್ಕೆ ಮತ್ತು ಪ್ರಜೆಗಳ ಕ್ಷೇಮಕ್ಕೆ ತನಗೆ ಯುಕ್ತವೆಂದು ತೋರಿದ ಶಾಸನವನ್ನು ಮಾಡಿ ಅದರಂತೆ ಪಕ್ಷಪಾತವಿಲ್ಲದೆ ರಾಜ್ಯ ನಡೆಸುತ್ತಿದ್ದಾನೆ.”
ಕಮಲಮ್ಮ – “ಏನೂ ಅರಿಯದ ಹಿರಿಯರು ಹೇಳುವುದು ಹಾಗೆಯೇ. ನಾನು ಈ ವಿಷಯದಲ್ಲಿ ಎಷ್ಟೋ ಪರ್ಯಾಲೋಚನೆ ಮಾಡಿದ್ದೇನೆ. ರಾಜನು ಜನರಿಂದ ತೆರಿಗೆಗಳನ್ನು ತೆಗೆದುಕೊಂಡ ಮೇಲೆ ಜನರ ಕ್ಷೇಮಕ್ಕೆ ಯಾವ ತೊಂದರೆ ಆದರೂ ಜವಾಬ್ದಾರಿ ಆತನದೇ. ‘ಯಥಾರಾಜಾ ತಥಾಪ್ರಜಾ,’ ‘ರಾಜಾ ಕಾಲಸ್ಯ ಕಾರಣಂ’ ಎಂದು ನುಡಿದಿದ್ದಾರೆ ಪಂಡಿತರು. “
ಗೋಪಾಲ – “ಕಮಲಾ, ಹಾಗಾದರೆ ನೀನು ಇದಕ್ಕೆ ಏನು ಮಾಡ ಬೇಕೆಂದಿದ್ದೀಯೆ? ನಿನ್ನ ಓದನ್ನೆಲ್ಲಾ ಖರ್ಚು ಮಾಡಿ ರಾಜನ ವಿರುದ್ಧ ಪ್ರಚಾರ ಮಾಡಬೇಕೆಂದಿದ್ದೀಯಾ? ಪಾಪ, ಆ ಗಣಪತಿ ಏನು ಮಾಡಿದನೋ? ಏನಿಲ್ಲವೋ? ರಾಜನ ಶಾಸನವನ್ನು ಉಲ್ಲಂಘಿಸಿದನೆಂದು ಆತನ ಕಣ್ಣು ಕಿತ್ತು ಹಾಕಿಬಿಟ್ಟರು. ನೀನೇನಾದರೂ ಆತನಿಗೆ ಸಹಾಯ ಮಾಡಬೇಕೆಂದು
ಭಾವಿಸಿದೆಯಾ? ಇಲ್ಲವೇ ರಾಜನ ವಿರುದ್ಧ ಪ್ರಚಾರ ಮಾಡಿ ನಿನ್ನ ಬಾಳು ಹಾಳು ಮಾಡಿಕೊಳ್ಳಬೇಕೆಂದಿದ್ದೀಯಾ?*
ಕಮಲಮ್ಮ “ಹೌದು, ನೀನು ನೆನಪಿಗೆ ತಂದಿದ್ದು ಒಳ್ಳೆಯದಾಯಿತು. ನಾವೆಲ್ಲರೂ ಕೂಡಲೇ ಹೋಗಿ ಗಣಪತಿಯನ್ನು ನೋಡಿಕೊಂಡು ಬರೋಣ. ಆತನಿಗೆ ಚಿಕಿತ್ಸೆ ಮಾಡುವ ವೈದ್ಯರೇ ಈಗ ಈ ಊರಿನಲ್ಲಿಲ್ಲವಂತೆ. ಗುರುಗಳು ಗೋವಿಂದಪುರದಲ್ಲಿರುವ ವೆಂಕಟಸ್ವಾಮಿಯಿಂದ ಚಿಕಿತ್ಸೆ ಮಾಡಿಸಬೇಕೆಂದು ಹೇಳಿದರು. ಆತನು ಬಂದನೋ ಇಲ್ಲವೋ?”
ಗೋಪಾಲ- “ಅಮ್ಮಾ ನೀನೂ ಬಾ. ನಾವೆಲ್ಲರೂ ಕೂಡಲೇ ಗಣಪತಿ ಯನ್ನು ನೋಡಿಕೊಂಡು ಬರೋಣ.”
ಎಲ್ಲರೂ ಗಣಪತಿಯ ಮನೆಗೆ ಹೋದರು. ಹಿಂದಿನ ದಿನವೇ ವೆಂಕಟಸ್ವಾಮಿ ಬಂದು ಗಣಪತಿಯ ಕಣ್ಣುಗಳಿಗೆ ಚಿಕಿತ್ಸೆ ಮಾಡಿ ಪಟ್ಟಿಯನ್ನು ಕಟ್ಟಿದ್ದನು. ಗಣಪತಿಗೆ ವಿಪರೀತ ಜ್ವರ ಬಂದಿತ್ತು. ಕಣ್ಣಿನ ನೋವು ಕಡಿಮೆಯಾಗುವುದಕ್ಕೂ ಜ್ವರ ಇಳಿಯುವದಕ್ಕೂ ವೆಂಕಟಸ್ವಾಮಿ ಒಂದು ಔಷಧಿಯನ್ನು ಕೊಟ್ಟಿದ್ದನು. ಆ ಔಷಧಿಯ ಪ್ರಭಾವದಿಂದ ಗಣಪತಿಗೆ ಅಮಲೇರಿತ್ತು. ಆ ಅಮಲನ್ನು ಹೋಗಲಾಡಿಸುವುದಕ್ಕೆ ವೆಂಕಟಸ್ವಾಮಿಯ ಬಳಿ ಇದ್ದ ಒಂದು ವೈದ್ಯಶಾಸ್ತ್ರ ಗ್ರಂಥದಲ್ಲಿ ಒಂದು ಮೂಲಿಕೆಯ ಹೆಸರನ್ನು ಕೊಟ್ಟಿತ್ತು. ಆ ಶಾಸ್ತ್ರವು ಸಂಸ್ಕೃತ ಭಾಷೆಯಲ್ಲಿ ಇತ್ತು. ವೆಂಕಟಸ್ವಾಮಿಗೆ ದೇಶ ಭಾಷೆಯಲ್ಲಿ ಆ ಮೂಲಿಕೆಯ ಹೆಸರೇನೆಂದು ತಿಳಿದಿರಲಿಲ್ಲ.
ಗೋಪಾಲ, ಕಮಲಮ್ಮ, ರಾಮಕ್ಕ ಇವರು ಗಣಪತಿಯ ಸ್ಥಿತಿಯನ್ನು ನೋಡಿ ಬಹಳ ಮರುಗಿದರು. ಕುಮಾರನಿಗೆ ತಮ್ಮಿಂದ ಏನಾದರೂ ಸಹಾಯವಾಗುವುದಿದ್ದರೆ ಮಾಡುವೆವೆಂದು ಹೇಳಿದರು. ವೆಂಕಟಸ್ವಾಮಿಯನ್ನು ಆತನ ವೈದ್ಯ ಜ್ಞಾನಕ್ಕಾಗಿಯೂ ಪರೋಪಕಾರ ಬುದ್ದಿಗಾಗಿಯೂ ಕೊಂಡಾಡಿದರು. ಆತನನ್ನು ಗಣಪತಿಯ ದೇಹಸ್ಥಿತಿಯನ್ನು ಕುರಿತು ವಿಚಾರಿಸಿದರು. ವೆಂಕಟಸ್ವಾಮಿಯೂ ತನಗೆ ವೈದ್ಯ ಚೆನ್ನಾಗಿ ತಿಳಿದಿದೆಯೆಂಬ ಅಹಂಕಾರವಿಲ್ಲದವನು. ಕೂಡಲೇ ಆತನು ತಾನು ಮಾಡಿದ ಚಿಕಿತ್ಸೆಯನ್ನೂ, ಗಣಪತಿಯ ದೇಹಸ್ಥಿತಿಯನ್ನೂ ತಿಳಿಸಿ ವೈದ್ಯ ಶಾಸ್ತ್ರದಲ್ಲಿ ಹೇಳಿದ್ದ ಮೂಲಿಕೆ ಯಾವುದೆಂದು ತಿಳಿದು ಅದು ಸಿಕ್ಕಿದರೆ ಅದರಿಂದ ಗಣಪತಿಗೆ ಬಹಳ ಉಪಕಾರವಾಗುವುದೆಂದು ಹೇಳಿದನು. ಆ ಮೂಲಿಕೆಯ ಸಂಸ್ಕೃತ ಭಾಷೆಯಲ್ಲಿನ ಹೆಸರನ್ನು ಹೇಳಿದನು. ಇವರ ಅರ್ಥವನ್ನು ತಿಳಿಯಲು ಈ ಊರಿನಲ್ಲಿ ವೈದ್ಯರಾಗಲಿ, ಪಂಡಿತರಾಗಲಿ ಇದ್ದಾರೆಯೇ ಎಂದು ಕೇಳಿದನು.
ಕಮಲಮ್ಮನಿಗೆ ಮೂರು ಕಾಂಡಗಳ ಅಮರಕೋಶ ಬಾಯಿಗೆ ಬರುತಿತ್ತು. ‘ವಿಘ್ನಕಾರಿ’ ಎಂದು ಹೇಳಲ್ಪಡುವ ವನೌಷಧಿ ವರ್ಗವನ್ನೂ ಅವಳು ಕಂಠಪಾಠ ಮಾಡಿದ್ದಳು. ಆ ಮೂಲಿಕೆಯ ಹೆಸರನ್ನು ಕೇಳಿದ ಕೂಡಲೇ ಕಮಲಮ್ಮನು ವನೌಷಧಿ ವರ್ಗದಲ್ಲಿ ಆ ಹೆಸರು ಬರುವ ಶ್ಲೋಕವನ್ನು ಹೇಳಿದಳು. ಅದರಿಂದ ವೆಂಕಟಸ್ವಾಮಿಗೆ ಆ ಮೂಲಿಕೆಗೆ ಇರುವ ಇನ್ನೊಂದು ಹೆಸರು ತಿಳಿಯಿತು. ಆ ಹೆಸರು ಆತನಿಗೆ ಪರಿಚಿತವಾಗಿತ್ತು. ಕೂಡಲೇ ಅದರ ದೇಶ ಭಾಷೆಯ ಹೆಸರನ್ನು ಹೇಳಿ ಆ ಮೂಲಿಕೆಯನ್ನು ಯಾರಾದರೂ ತಂದು ಕೊಡುವರೇ ಎಂದು ಕೇಳಿದನು. ಗೋಪಾಲನಿಗೆ ಓದು ಬರಹ ಬಾರದಿದ್ದರೂ, ಆತನು ವಿದ್ಯೆಯನ್ನು ಕಲಿಯದಿದ್ದರೂ, ಅನುಭವದಿಂದ ಎಷ್ಟೋ ಜ್ಞಾನವನ್ನು ಸಂಪಾದಿಸಿದ್ದನು. ಆತನು ಘನಗಿರಿಯಲ್ಲಿದ್ದ ಎಲ್ಲಾ ಪ್ರದೇಶ ಗಳನ್ನೂ ಎಷ್ಟೋ ಸಲ ಸುತ್ತಿದ್ದನು. ಎಲ್ಲೆಲ್ಲಿ ಯಾವ ಯಾವ ಗಿಡಮರಗಳೂ ಮೂಲಿಕೆಗಳೂ ಇದ್ದವೋ ಅವೆಲ್ಲವೂ ಆತನಿಗೆ ನೆನಪಿನಲ್ಲಿದ್ದುವು. ಆತನ ದೇಹ ಶಕ್ತಿ ಎಷ್ಟು ಹೆಚ್ಚಾಗಿತ್ತೋ, ಜ್ಞಾಪಕಶಕ್ತಿಯೂ ಅಷ್ಟೇ ಹೆಚ್ಚಾಗಿತ್ತು. ಪರೋಪಕಾರಕ್ಕೆ ಆತನು ಯಾವಾಗಲೂ ಬದ್ಧನಾಗಿದ್ದನು. ಆತನು ಕೂಡಲೇ ತಾನು ಮೂಲಿಕೆಯನ್ನು ತಂದು ಕೊಡುವುದಾಗಿ ಹೇಳಿ ಓಡಿಹೋದನು.
ಅಮಲೇರಿದ್ದ ಗಣಪತಿಯು ಮೈಮೇಲೆ ಎಚ್ಚರವಿಲ್ಲದೆ ಒಂದು ಹಾಸಿಗೆಯ ಮೇಲೆ ನಿದ್ರಾಪರವಶನಂತೆ ಬಿದ್ದಿದ್ದನು. ಹಗಲಿನ ಎರಡನೆಯ ಯಾಮವು ಇನ್ನು ಸ್ವಲ್ಪ ಹೊತ್ತಿನಲ್ಲೇ ಮುಗಿಯಲಿತ್ತು. ಗಣಪತಿಯ ಸುತ್ತಲೂ ವೆಂಕಟಸ್ವಾಮಿ, ಕುಮಾರ, ರಾಮಕ್ಕ ಮತ್ತು ಕಮಲಮ್ಮ ಮೌನವಾಗಿ ಕುಳಿತುಕೊಂಡು ಗಣಪತಿಯ ಮುಖವನ್ನೇ ನೋಡುತ್ತಿದ್ದರು. ಗಣಪತಿಯ ಉಸಿರಾಡುವಿಕೆಯನ್ನು ಗಮನಿಸುತ್ತಿದ್ದರು. ಗಣಪತಿಯ ತಾಯಿ ಕತ್ತಲಿನಿಂದ ತುಂಬಿದ ಅಡುಗೆಯ ಮನೆಯಲ್ಲಿ ಅಳುತ್ತ ವಿಧಿಯಿಲ್ಲದೇ ಆಡುಗೆಯ ಶಾಸ್ತ್ರವನ್ನು ಮಾಡುತ್ತಿದ್ದಳು. ಅವಳು ಪದೇ ಪದೇ ಗಾಬರಿಯಿಂದ ಹೊರಕ್ಕೆ ಬಂದು ಗಣಪತಿಯ ಸ್ಥಿತಿಯನ್ನು ದೀನದೃಷ್ಟಿಯಿಂದ ನೋಡಿಕೊಂಡು ಹೋಗುತ್ತಿದ್ದಳು. ವೆಂಕಟಸ್ವಾಮಿಯು ಆಗಿಂದಾಗ್ಗೆ ಗಣಪತಿಯ ನಾಡಿಯನ್ನು ಪರೀಕ್ಷಿಸುತ್ತಿದ್ದನು. ಬರಬರುತ್ತಾ ಗಣಪತಿಯ ಉಸಿರಾಟವು ಮಂದವಾಗುತ್ತಿತ್ತು. ಅವನ ತಾಯಿ ಬಂದು ಆತನ ಕಾಲುಗಳನ್ನೂ, ಕೈಗಳನ್ನೂ ಮುಟ್ಟಿ “ಅಯ್ಯೋ, ಏನಪ್ಪಾ ಗತಿ? ಕೈ ಕಾಲುಗಳು ಬರಬರುತ್ತಾ ತಣ್ಣಗಾಗುತ್ತಿವೆಯಲ್ಲಾ? ನೀವೆಲ್ಲರೂ ಏನಾದರೂ ಮಾಡಿ ನನ್ನ ಗಣಪತಿಯನ್ನು ನನಗೆ ಉಳಿಸಿ ಕೊಡಿ. ನಿಮಗೆ ಬಹಳ ಪುಣ್ಯ ಬರುತ್ತದೆ.” ಎಂದು ಎಲ್ಲರನ್ನೂ ನೋಡಿ ದೀನವಾಗಿ ಆಕ್ರೋಶಿಸಿದಳು. ಅವಳ ದೀನಸ್ಥಿತಿ ಎಲ್ಲರ ಮನಸ್ಸನ್ನೂ ಕರಗಿಸಿತು. ಕಮಲಮ್ಮನು ತಟಕ್ಕನೆ ಎದ್ದು ಬೀದಿಗೆ ಓಡಿಹೋಗಿ ಗೋಪಾಲನು ಬರುತ್ತಿರುವನೇ ಎಂದು ನೋಡಿದಳು. ದೂರದಲ್ಲಿ ಗೋಪಾಲನು ಓಡಿ ಬರುತ್ತಾ ಇರುವುದನ್ನು ನೋಡಿ ಮನೆಯೊಳಗೆ ಓಡಿ ಬಂದು “ಗೋಪಾಲ ಬಂದುಬಿಟ್ಟ” ಎಂದು ಉತ್ಸಾಹದಿಂದ ಹೇಳಿದಳು. ಅವಳು ಈ ಮಾತನ್ನು ಹೇಳುತ್ತಿರುವಷ್ಟರಲ್ಲಿಯೇ ಗೋಪಾಲನು ಮೂಲಿಕೆಯೊಂದಿಗೆ ಪ್ರವೇಶಿಸಿದನು. ವೆಂಕಟಸ್ವಾಮಿಯು ಆತನ ಕೈಯಿಂದ ಮೂಲಿಕೆಯನ್ನು ಎಳೆದುಕೊಂಡು ಪರೀಕ್ಷಿಸಿ ಅದರ ರಸವನ್ನು ತೆಗೆದು ಗಣಪತಿಗೆ ಕುಡಿಸಿದನು. ಗಣಪತಿಯ ತಾಯಿಯು ಅವನ ಕಾಲುಗಳ ಮೇಲೆ ಕೈಯಿಂದ ಸವರುತ್ತಲೇ ಇದ್ದವಳು ಸ್ವಲ್ಪ ಹೊತ್ತಿಗೆ ಕಾಲುಗಳಲ್ಲಿ ಶಾಖವು ಪ್ರಸರಿಸುವುದನ್ನು ನೋಡಿ ಉತ್ಸಾಹದಿಂದ ಅದನ್ನು ವೆಂಕಟಸ್ವಾಮಿಗೆ ತಿಳಿಸಿದಳು. ವೆಂಕಟ ಸ್ವಾಮಿಯು ನಾಡಿಯ ಪರೀಕ್ಷೆಯಿಂದ ಗಣಪತಿಗೆ ಅಪಾಯ ಸ್ಥಿತಿ ತಪ್ಪಿತೆಂದು ತಿಳಿದು ಎಲ್ಲರಿಗೂ ಅದನ್ನು ತಿಳಿಸಿದನು. ಎಲ್ಲರೂ ಬಹಳ ಸಂತೋಷಪಟ್ಟರು. ಗಣಪತಿಗೆ ಎಚ್ಚರವೂ ಬಂದಿತು. ರಾಮಕ್ಕನು ಹೋಗಿ ಬರುವೆವೆಂದು ಗಣಪತಿಯ ತಾಯಿಗೆ ಹೇಳಿದಳು. ಗಣಪತಿಯ ತಾಯಿ, ವೆಂಕಟಸ್ವಾಮಿ ಮತ್ತು ಕುಮಾರನು ಗೋಪಾಲನನ್ನೂ, ಕಮಲಮ್ಮನನ್ನೂ ಅವರು ಮಾಡಿದ ಉಪಕಾರಕ್ಕಾಗಿ ಬಹಳ ಪ್ರಶಂಸಿಸಿದರು. ಈ ಮೂವರೂ ಮನೆಗೆ ಹಿಂತಿರುಗಿದರು.
