ಅರಿಸಿನ ಕುಂಕುಮದ ಅಕ್ಷತೆಗಳು
(ದಿನಾಂಕ 1-11-1985 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಓದುಗರ ವೇದಿಕೆಯಲ್ಲಿ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಅರಿಸಿನ ಕುಂಕುಮದ ಅಕ್ಷತೆಗಳು
ಇದು ಉಪಾಸನೆಗೆ ಸಂಬಂಧಿಸಿರುವ ವಿಷಯ. ಉಪಾಸನೆಯಲ್ಲಿ ಉಪಾಸಕ ಮತ್ತು ಇಷ್ಟದೇವತೆ ಎಂದು ಎರಡು ಚೈತನ್ಯಗಳಿರುತ್ತವೆ. ಈ ಎರಡೂ ಬೇರೆ ಬೇರೆಯಾಗಿ ಕಂಡುಬಂದರೂ, ಬಾಹ್ಯದಲ್ಲಿ ಉಪಾಸಕನೇ ಬೇರೆ, ದೇವತಾ ವಿಗ್ರಹವೇ ಬೇರೆ ಇದ್ದರೂ ಚೈತನ್ಯದಲ್ಲಿ ಎರಡೂ ಒಂದೇ ಕಡೆ ಇರುತ್ತವೆ. ಈ ಎರಡರ ಸ್ಥಾನವೂ ಉಪಾಸಕನ ಮನಸ್ಸೇ. ಉಪಾಸನೆ ನಡೆಯಬೇಕಾದುದು ಉಪಾಸಕನ ಮನಸ್ಸಿನಲ್ಲಿ. ಮನಸ್ಸಿಗೂ ವಾಕ್ಕಿಗೂ ಅವಿನಾಭಾವ ಸಂಬಂಧವಿದೆ. ಈ ವಾಕ್ಕೇ ಮಂತ್ರಗಳು. ಮಂತ್ರಗಳು ದೇವತಾಪರವಾಗಿರುತ್ತವೆ. ಮಂತ್ರಗಳ ಭೇದದಿಂದ ದೇವತೆಗಳಲ್ಲಿ ಭೇದವುಂಟಾಗುತ್ತದೆ. ಈ ದೇವತೆಗಳು ಅನ್ನುವವು ಏನು? ಬಾಹ್ಯ ಪ್ರಪಂಚವೆಲ್ಲಾ ಅಣುಗಳ ಸ್ವರೂಪದಲ್ಲಿದೆ. ಅಣುಗಳು ಶಕ್ತಿಯ ವಿಭಿನ್ನ ರೂಪಗಳು ಎಂಬುದು ಇಂದು ವಿಜ್ಞಾನದಿಂದ ಸಿದ್ಧವಾಗಿದೆ. ಈ ಮೂಲಶಕ್ತಿ ವಿನ್ಯಾಸಗಳನ್ನು ಪಡೆದು, ಬಾಹ್ಯ ಪ್ರಪಂಚದ ರೂಪದಲ್ಲಿ ಆವರ್ಭವಿಸಬೇಕಾದರೆ ಮತ್ತು ಹೀಗೆ ಆಗುವುದರಲ್ಲಿ ಕೆಲವು(ಪ್ರಕೃತಿ) ನಿಯಮಗಳನ್ನು ಅನುಸರಿಸಬೇಕಾದರೆ ಅದರೊಳಗೆ ಒಂದು ಸಂಕಲ್ಪ ಚೈತನ್ಯವಿರಲೇಬೇಕು. ಪ್ರಾಣಿಗಳು ಸಂಕಲ್ಪದಿಂದ ತಾನೆ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿರುವುದು? ಹೀಗೆ ಶಕ್ತಿಯ ಹಂತಕ್ಕಿಂತಲೂ ಮೂಲಭೂತವಾಗಿ ಮನೋಮಯವಾಗಿರುವ ಒಂದು ಒಳಪ್ರಪಂಚವಿರಲೇಬೇಕು. ಬಾಹ್ಯಪ್ರಪಂಚದ ವ್ಯಾಪಾರವನ್ನೂ, ಪ್ರಾಣಿಗಳ ವ್ಯಾಪಾರವನ್ನೂ, ಬುದ್ಧಿ ಜೀವಿಗಳ ವ್ಯಾಪಾರವನ್ನೂ ಎಲ್ಲವನ್ನೂ ನಿರ್ವಹಿಸಿತ್ತಿರುವ ಕೆಲವು ಮೂಲ ಚೈತನ್ಯಗಳು ಈ ಒಳ ಪ್ರಪಂಚದಲ್ಲಿದ್ದು ಇದನ್ನೆಲ್ಲಾ ನಡೆಸುತ್ತಿವೆ. ಇವೇ ದೇವತೆಗಳು. ವಿದ್ಯುಚ್ಛಕ್ತಿಗೆ ಹೇಗೆ ವಾಹಕ ಪದಾರ್ಥಗಳು ಬೇಕೋ ಹಾಗೆ ಈ ಮೂಲಶಕ್ತಿಗೆ ವಾಹಕ ಪದಾರ್ಥಗಳು ಬೇಕು. ಈ ವಾಹಕ ಪದಾರ್ಥಗಳ ಸರಿಯಾದ ವಿಧವಿಧವಾದ ಜೋಡಣೆಯಿಂದ ಬೇರೆ ಬೇರೆ ವಿದ್ಯುದ್ಯತ್ರಗಳನ್ನು ತಯಾರಿಸಿ ಬೇರೆ ಬೇರೆ ಕೆಲಸಗಳನ್ನು ಮಾಡಿಸುವಂತೆ, ದೇವತಾ ಶಕ್ತಿಗೆ ಸಂಬಂಧಿಸಿರುವ ಮೂಲಭಾವನೆ ಎಂಬ ಒಂದು ವಾಹಕ ಪದಾರ್ಥದಿಂದ ಈ ದೇವತಾಶಕ್ತಿಯನ್ನು ಉಪಯೋಗಿಸಿಕೊಳ್ಳಬಹುದು, ಸಂಕಲ್ಪವೆನ್ನುವುದು ಹೊರಗಿನ ವಲಯದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೋಟಾರು ಕಾರನ್ನು ನಡೆಸುವುದನ್ನು ಒಬ್ಬನು ಕಲಿಯುತ್ತಿದ್ದಾನೆಂದು ಭಾವಿಸೋಣ. ಮೊದಲು ಅವನು ಪ್ರತಿಯೊಂದು ಸಂದರ್ಭದಲ್ಲೂ ಆಲೋಚಿಸಿ ನಿರ್ಣಯ ಮಾಡಿ ಸಂಕಲ್ಪವನ್ನು ಮಾಡಿ ಕೆಲಸ ಮಾಡುತ್ತಾನೆ ಅಭ್ಯಾಸ ಮುಗಿದ ಮೇಲೆ ಅವನ ಅಂಗಗಳು ತಮ್ಮಷ್ಟಕ್ಕೆ ತಾವೇ ಕೆಲಸ ಮಾಡುತ್ತವೆ. ಇಲ್ಲಿ ಬರುವ ಭಾವನೆ ಮೂಲಭಾವನೆ ಇದಕ್ಕೆ ಈ ಶಕ್ತಿ ಹೇಗೆ ಬಂತು? ಉಪಾಸನೆಯಿಂದ ಬಂತು. ಈ ದೃಷ್ಟಾಂತದಿಂದ ಉಪಾಸನೆಯಿಂದ ದೇವತಾ ಶಕ್ತಿಗಳನ್ನು ವಶಪಡಿಸಿಕೊಳ್ಳಲು ಸಾಧ್ಯವೆಂಬುದು ಗೊತ್ತಾಗುತ್ತದೆ. ಒಂದು ಯಂತ್ರಕ್ಕೆ ನಿರ್ದಿಷ್ಟವಾದ ಒಂದು ರಚನೆ ಇರುತ್ತದೆ. ಇನ್ನೊಂದು ಯಂತ್ರಕ್ಕೆ ಇನ್ನೊಂದು ರಚನೆ. ಈ ರಚನೆ ಶುದ್ಧವಾಗಿಲ್ಲದಿದ್ದರೆ ಯಂತ್ರ ಕೆಲಸ ಮಾಡುವುದಿಲ್ಲ. ಅಥವಾ ವಿದ್ಯುಚ್ಛಕ್ತಿ ಇಲ್ಲದಿದ್ದರೂ ಕೆಲಸ ಮಾಡುವುದಿಲ್ಲ. ಹೀಗೆ ಉಪಾಸನೆ ಫಲಿಸಬೇಕಾದರೆ ಅದರ ಕ್ರಮವನ್ನು ಸರಿಯಾಗಿ ಅನುಸರಿಸಬೇಕು. ಇದಕ್ಕೆ”ಮಂತ್ರ ಶುದ್ಧಿ” ಎಂದು ಹೆಸರು. ಇದು ಪ್ರಪಂಚವನ್ನೇ ನಡೆಸುತ್ತಿರುವ ಪರಮಾತ್ಮನ ಸಂಕಲ್ಪಕ್ಕೆ ವಿರುದ್ಧವಾಗಿದ್ದರೆ ಫಲಿಸುವುದಿಲ್ಲ. ಅದಕ್ಕಾಗಿ ‘ದ್ರವ್ಯಶುದ್ಧಿ’ ಮತ್ತು ‘ಆತ್ಮಶುದ್ಧಿ’ ಇರಬೇಕು. ದ್ರವ್ಯಶುದ್ಧಿಗೆ ಮುಖ್ಯವಾಗಿ ಬೇಕಾಗಿರುವುದು “ಅರ್ಥಶುಚಿತ್ವ” “ಆತ್ಮಶುದ್ಧಿಗೆ” ಬೇಕಾಗಿರುವುದು “ಸಮತಾಭಾವ” ಅಥವಾ “ಯೋಗ”. ದುಷ್ಟರು ಮಾಡುವ ಮಾಟಮಂತ್ರಗಳು ಫಲಿಸುತ್ತವೆಯಲ್ಲಾ ಎಂದರೆ ಅದು ಅವರ ನಾಶಕ್ಕಾಗಿ ಫಲಿಸಿದಂತೆ ಕಾಣುತ್ತದೆ. ಅಧರ್ಮಿಷ್ಠನು ಎತ್ತರಕ್ಕೆ ಹೋಗಿ ಒಂದೇ ಸಲ ಬಿದ್ದು ಸರ್ವನಾಶ ಹೊಂದುತ್ತಾನೆ ಎಂಬುದು ಮನುವಿನ ವಾಕ್ಯ.
ವೇದಸ್ತ್ಯಾಗಶ್ಚ ಯಜ್ಞಾಶ್ಚ ನಿಯಮಾಶ್ಚ ತಪಾಂ ಸಿ ಚ I
ನ ವಿಪ್ರ ದುಷ್ಟಭಾವಸ್ಯ ಸಿದ್ಧಿಂಗಚ್ಛತಿ ಕರ್ಹಿಜಿತ್ II
ಕೆಟ್ಟ ಭಾವನೆಯುಳ್ಳವನು ಮಾಡುವ ವೇದಾಭ್ಯಾಸ, ತ್ಯಾಗ, ಯಜ್ಞಗಳು, ನಿಯಮಗಳು, ತಪಸ್ಸು ಇವೆಲ್ಲಾ ಸಿದ್ಧಿಯನ್ನು ಮುಟ್ಟುವುದಿಲ್ಲ ಎಂದು ಮನುಸ್ಮೃತಿ ತಿಳಿಸುತ್ತಿದೆ.
ಧರ್ಮದ ತಳಹದಿಯ ಮೇಲೆ ದೇವತೋಪಾಸನೆಯನ್ನು ವೇದಗಳು ಬೋಧಿಸಿವೆ. ವೇದ ಮಂತ್ರಗಳಿಂದ ಉಪಾಸನೆ ಮಾಡಲು ಶಕ್ತಿ ಇಲ್ಲದವರು ಆಗಮ ಮತ್ತು ಪೌರಾಣಿಕ ಮಾರ್ಗಗಳಲ್ಲಿ ಉಪಾಸನೆ ಮಾಡಬಹುದು.
ಅಕ್ಷತೆಗಳು ಪೂಜಾ ಸಾಮಗ್ರಿಯಲ್ಲಿ ಒಂದು ಭಾಗ, ಉಪಾಸನೆಗೂ ಪೂಜಾಸಾಮಗ್ರಿಗೂ ಇರುವ ಸಂಬಂಧವೇನು? ಬಾಲಕನು ಚಿತ್ರಗಳನ್ನು ನೋಡಿ ಅಕ್ಷರಗಳನ್ನು ಕಲಿಯುವುದಿಲ್ಲವೇ? ಅಕ್ಷರಗಳಾದ ಮೇಲೆ ಭಾಷೆಯನ್ನು ಭಾವನೆಗಳನ್ನೂ ಕಲಿತು, ತಾನೇ ದೊಡ್ಡ ಕವಿ ಆಗುವುದಿಲ್ಲವೇ? ಈ ಕ್ರಮದಲ್ಲಿ ಉಪಾಸಕನಿಗೆ ಬಾಹ್ಯ ಆಂತರಿಕ ಜಗತ್ತಿನ ಎಲ್ಲ ವಸ್ತುಗಳೂ ಸಹಕಾರಿಗಳಾಗುತ್ತವೆ. ಉಪಾಸನೆ ಎಂದರೆ ಪ್ರತಿದಿನ ಕಾಲು ಘಂಟೆ ಹೊತ್ತು ಮಾಡಿ ಆಮೇಲೆ ಹೇಗೆ ಬೇಕಾದರೆ ಹಾಗೆ ಇರುವುದಲ್ಲ. ಜೀವನವೇ ಅದಕ್ಕೆ ಅರ್ಪಿತವಾಗಬೇಕು. ಎಲ್ಲ ಕಾಲದಲ್ಲೂ ಉಪಾಸನೆ ನಡೆಯುತ್ತಲೇ ಇರಬೇಕು.
ಆದುದರಿಂದ ಪೂಜಾಸಾಮಗ್ರಿ ಮುಂತಾದವುಗಳೆಲ್ಲಾ ಉಪಾಸಕನ ಉಪಾಸನೆಗೆ ಅನುಗುಣವಾಗಿರಬೇಕು. ಉಪಾಸಕನು ಪ್ರಪಂಚದ ವೈವಿಧ್ಯದಲ್ಲಿ ವಿವಿಧ ದೇವತಾ ಶಕ್ತಿಗಳನ್ನೇ ನೋಡುತ್ತಾ ಉಪಾಸನೆ ಮಾಡುತ್ತಿರುತ್ತಾನೆ. ವಿವಿಧ ವರ್ಣಗಳು, ಆಕಾರಗಳ, ಗುಣಗಳ, ಶಬ್ದಗಳ ಪ್ರಭಾವ ಎಲ್ಲರ ಮೇಲೂ ಎಲ್ಲ ಕಾಲದಲ್ಲೂ ಇದ್ದೇ ಇರುತ್ತೆ. ಆದರೆ ಬೇರೆಯವರಲ್ಲಿ ಇವು ಒಂದು ರಚನೆಯ ಚೌಕಟ್ಟಿಗೆ ಒಳಪಡದೆ ಇರುವುದರಿಂದ ನದಿಯ ಪ್ರವಾಹದ ಶಕ್ತಿಯಂತೆ ವ್ಯರ್ಥವಾಗುತ್ತಿವೆ. ಅದೇ ಪ್ರವಾಹ ಶಕ್ತಿಯನ್ನೇ ವಿಜ್ಞಾನಿ ವಿದ್ಯುತ್ತನ್ನು ತಯಾರಿಸಲು ಬಳಸುವುದಿಲ್ಲವೇ?
ಪ್ರಾಚೀನ ಕಾಲದ ಮನುಷ್ಯರ ಮನೋಧರ್ಮ ಈ ಉಪಾಸನೆಗೆ ಅನುಕೂಲವಾಗಿತ್ತು. ನಮ್ಮ ಮನೋಧರ್ಮ ತುಂಬ ಬದಲಾವಣೆಯನ್ನು ಹೊಂದಿದೆ. ಆದುದರಿಂದ ಉಪಾಸನಾ ಮಾರ್ಗದಲ್ಲಿನ ಕೆಲವು ಅಂಶಗಳು ನಮಗೆ ವಿಚಿತ್ರವಾಗಿಯೂ ಅರ್ಥಹೀನವಾಗಿಯೂ ಕಂಡು ಬರುತ್ತವೆ. ನಮ್ಮ ಅಜ್ಜಿಯ ತಂಗಿ ಒಬ್ಬಾಕೆ ಇದ್ದಳು. ನಾವು ಚಿಕ್ಕ ಹುಡುಗರಾಗಿದ್ದಾಗ ಚಲನಚಿತ್ರಗಳು ಹೊಸದಾಗಿ ಬಂದವು. ಆಕೆ ಚಲನಚಿತ್ರ ನೋಡಿ ಮನೆಗೆ ಬಂದಾಗೆಲ್ಲಾ ಅದರಲ್ಲಿ ಒಂದು ವಿಷಯವನ್ನು ಕುರಿತು ಆಕ್ಷೇಪಣೆ ಮಾಡುತ್ತಿದ್ದಳು. ಚಲನಚಿತ್ರದಲ್ಲಿ ಒಂದೊಂದು ಸಲ ಪರದೆಯ ತುಂಬಾ ಒಂದು ಮುಖವೇ ಕಾಣಿಸುತ್ತೆ. ಇದು ಆಕೆಕೆ ಭೂತಾಕಾರವಾಗಿ ಅಸಹ್ಯವಾಗಿ ಕಾಣುತ್ತಿತ್ತು. ನಾಟಕಗಳಲ್ಲಿ ಈ ರೀತಿಯಾದ ಕೃತಿಮತೆ ಇರುವುದಿಲ್ಲ. ಆಕೆಯ ಮನಸ್ಸು ಈ ವಿಷಯವನ್ನು ಗಮನಿಸಿದ ಮಾರ್ಗದಲ್ಲಿ ಈ ದಿನ ಗಮನಿಸುವವರು ಪ್ರಪಂಚದಲ್ಲೆಲ್ಲಾ ಹುಡುಕಿದರೂ ಸಿಗುವುದಿಲ್ಲ. ಕಾರಣ, ನಾವು ಚಿತ್ರಗಳನ್ನು ನೋಡಿ ನೋಡಿ ಬೇರೆ ವಿಧವಾದ ರೂಢಿ ಉಂಟಾಗಿ ನಾವು ಸಹಜವಾದ ಒಂದು ದೃಷ್ಟಿ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ಹೀಗೆ ನಾವು ಪ್ರಕೃತಿ ಮಾತೆಯ ಲಾಲನೆಯ ರುಚಿಯನ್ನೇ ಅರಿಯಲಾರದ ಅಭಾಗಿಗಳಾಗಿ ಕುಳಿತಿರುವಾಗ ನಮಗೆ ವೇದಗಳಲ್ಲಿ ಹೇಳಿರುವ ಉಪಾಸನೆಗಳು ಹೇಗೆ ಅರ್ಥವಾಗುತ್ತವೆ?
ಅಗ್ನಿಯ ಉಪಾಸನೆ ಅತಿ ಪ್ರಾಚೀನವಾದದ್ದು ಮತ್ತು ವೈದಿಕವಾದದ್ದು. ಸಂಸ್ಕೃತ ಭಾಷೆಯಲ್ಲಿರುವ ಈ ವೇದಗಳು ವೈದಿಕರ ಮೇಧಾ ಶಕ್ತಿಗೆ ಒರೆಗಲ್ಲಿನಂತಿದೆ. ಆಪಸ್ತಂಬ ಶ್ರೌತ ಸೂತ್ರಗಳಲ್ಲಿ ಒಂದು ವರ್ಣನೆ ಇದೆ. ಆಹುತಿಯನ್ನು ಅಗ್ನಿಗೆ ಅರ್ಪಿಸುತ್ತೇವೆ. ಅದು ದೇವತೆಗಳಿಗೆ ಸೇರಬೇಕು. ಅಗ್ನಿಯನ್ನು ಸೌದೆ, ಬೆಂಕಿ, ಹೊಗೆ ಎಂಬ ದೃಷ್ಟಿಯಿಂದ ನೋಡಿದರೆ ಆಹುತಿ ದೇವತೆಗಳಿಗೆ ತಲುಪುವುದಿಲ್ಲ. ಇವುಗಳನ್ನು ದೇವಾತ್ಮಕ ದೃಷ್ಟಿಯಿಂದ ಹೇಗೆ ನೋಡಬೇಕೆಂಬುದನ್ನು ಈ ವರ್ಣನೆ ತಿಳಿಸುತ್ತದೆ. ಉಧ್ಭವಿಸುತ್ತಿರುವ ಅಗ್ನಿ ಆಹುತಿಯನ್ನು ‘ವಸು’ಗಳಿಗೆ ತಲುಪಿಸುತ್ತದೆ. ಹೊಗೆಯಿಂದ ಕೂಡಿರುವ ಎರಡನೇ ಸ್ಥಿತಿಯ ಅಗ್ನಿ ಆಹುತಿಯನ್ನು ‘ರುದ್ರ’ನಿಗೆ ತಲುಪಿಸುತ್ತದೆ.ಒಂದು ಕಟ್ಟಿಗೆಯಿಂದ ಜ್ವಾಲೆಯಾಗಿ ಬಂದಿರುವ ಮೂರನೇ ಸ್ಥಿತಿಯ ಅಗ್ನಿ ‘ಆದಿತ್ಯ’ನಿಗೆ ತಲುಪಿಸುತ್ತೆ. ಎಲ್ಲಾ ಕಟ್ಟಿಗೆಗಳೂ ಅಂಟಿಕೊಂಡು ಜ್ವಾಲಾಕಾರವಾಗಿರುವುದು ‘ವಿಶ್ವದೇವ’ನಿಗೆ ತಲುಪಿಸುತ್ತದೆ. ಇದೇ ಇನ್ನೂ ಬಿಳಿಯ ಕೆಂಪು ಬಣ್ಣದಲ್ಲಿರುವ ದೊಡ್ಡ ಅಗ್ನಿ ಇಂದ್ರನಿಗೆ ತಲುಪಿಸುತ್ತದೆ. ಕಟ್ಟಿಗೆಗಳು ಉರಿದು ಕೆಂಡಗಳು ಬೀಳುತ್ತವೆ. ಈ ಕೆಂಡಗಳ ಅಗ್ನಿ ಪ್ರಜಾಪತಿಗೆ ತಲುಪಿಸುತ್ತದೆ. ಈ ಕೆಂಡಗಳಿಂದ ಬೂದಿ ಉಂಟಾಗುವ ಸ್ಥಿತಿ ಯಲ್ಲಿರುವ ನೀಲಿ ಬಣ್ಣದ ಅಗ್ನಿ ಬ್ರಹ್ಮನಿಗೆ ತಲುಪಿಸುತ್ತದೆ.
ಇದರಿಂದ ಬಣ್ಣಗಳಿಗೂ ದೇವತೆಗಳಿಗೂ ಇರುವ ಸಂಬಂಧವನ್ನು ಸೃಷ್ಟಿ ರಹಸ್ಯಗಳನ್ನು ಕಂಡ ಮಹರ್ಷಿಗಳು ತಿಳಿದಿದ್ದರು ಎಂದು ಗೊತ್ತಾಗುತ್ತದೆ.
ಅಕ್ಷತೆಗಳಲ್ಲಿ ನಾವು ಗಮನಿಸಬೇಕಾದ ಅಂಶ ಅವು ನಾಶರಹಿತವಾದವುಗಳು ಎಂಬುದನ್ನು. ಏಕೆಂದರೆ ಅವು ಬೀಜಗಳು! ಬಿತ್ತನೆ ಫಲವಾಗಿ ಪುನಃ ಬೀಜಗಳನ್ನು ತಯಾರಿಸಬಲ್ಲವು. ಹಳದಿ ಮತ್ತು ಕೆಂಪು ಬಣ್ಣಗಳು ದೇವತೆಗಳಿಗೆ ಪ್ರಿಯವಾದ ಬಣ್ಣಗಳು. ರಾಕ್ಷಸರಿಗೆ ಪ್ರಿಯವಾದವುಗಳಲ್ಲ. ಈ ಬಣ್ಣಗಳು ಅಗ್ನಿಯಲ್ಲಿವೆ. ಸೂರ್ಯನ ಬೆಳಕಿನಲ್ಲಿವೆ. ಇವು ಜ್ಯೋತಿಸ್ವರೂಪಗಳು ಅಮೃತ ಸ್ವರೂಪವಾದ ಅಕ್ಷತೆಗಳಲ್ಲಿ ಜ್ಯೋತಿ ಸ್ವರೂಪಗಳಿಂದ ಈ ಬಣ್ಣಗಳನ್ನು ಸೇರಿಸಿ ಪರಮಾತ್ಮನಿಗರ್ಪಿಸುವುದಕ್ಕಿಂತಲೂ ಶ್ರೇಷ್ಠವಾದ ಉಪಾಸನೆ ಇದೆಯೇ?
–ಲಂಕಾ ಕೃಷ್ಣಮೂರ್ತಿ