ಜ್ಞಾನ ಮತ್ತು ವಿನೋದ
(ದಿನಾಂಕ 1 – 5- 1996 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಈ ನಡುವೆ ದೂರದರ್ಶನದಲ್ಲಿ ಬರುವ ಚಿತ್ರಗಳನ್ನು ನೋಡಿದರೆ ಅವು ತಾತ್ಕಾಲಿಕವಾದ ವಿನೋದವನ್ನು ಕೊಡುತ್ತವೆಯೇ ಹೊರತು ಜ್ಞಾನದ ಅಂಶ ಅವುಗಳಲ್ಲಿ ಕಂಡುಬರುವುದು ಬಹಳ ಅಪರೂಪವಾಗಿದೆ. ಮಾನವನು ತನ್ನ ಜೀವನದಲ್ಲಿ ಜ್ಞಾನವನ್ನಾಚರಿಸದಿದ್ದರೆ ಅವನು ಎಷ್ಟು ವಿದ್ಯಾವಂತನಾದರೂ, ವಿನೋದವನ್ನನುಭವಿಸಿದರೂ, ವ್ಯರ್ಥ. ಜ್ಞಾನದಲ್ಲಿ ಎರೆಡು ಅಂಶಗಳಿವೆ. ಒಂದು ಧರ್ಮ. ಮತ್ತೊಂದು ಪರಮ ಸತ್ಯ. ಮಾನವರು ಧರ್ಮವನ್ನು ಅನುಸರಿಸಲೇಬೇಕು. ಇಲ್ಲದಿದ್ದರೆ ಮಾನವರಲ್ಲಿ ಜಗಳಗಳೂ, ಅಶಾಂತಿಯು ಹೆಚ್ಚುತ್ತವೆ. ಧರ್ಮವೆಂದರೆ ಮತವೆಂಬ ಅರ್ಥದಲ್ಲಿ ಬಳಕೆಗೆ ಬಂದು ಹಿಂದೂಧರ್ಮ, ಕ್ರೈಸ್ಥ ಧರ್ಮ, ಮುಸ್ಲಿಂಧರ್ಮ ಇತ್ಯಾದಿ ಹೆಸರುಗಳು ರೂಢಿಯಲ್ಲಿದ್ದು ಮಾನವರನ್ನು ತಪ್ಪುದಾರಿಗೆಳಿಗೆಳೆಯುತ್ತಿವೆ. ಮತದ ಹೆಸರಿನಲ್ಲಿ ದುರಭಿಮಾನವನ್ನೂ ದ್ವೇಷಗಳನ್ನೂ ಬೆಳೆಸಿಕೊಳ್ಳುವುದು ಪರಮ ಅಜ್ಞಾನ. ಮತಗಳಲ್ಲಿ ಕೆಲವು ಭಿನ್ನಾಭಿಪ್ರಾಯಗಳಿದ್ದರೂ ಮೂಲಭೂತವಾಗಿ ಎಲ್ಲ ಮತಗಳಲ್ಲಿಯು ಇರುವ ಜ್ಞಾನವನ್ನು ಕೊಡುವ ಭಾವಗಳಲ್ಲಿ ವ್ಯತ್ಯಾಸವೇನು ಕಂಡುಬರುವುದಿಲ್ಲ. ನಿಜವಾದ ಜ್ಞಾನಿಗಳು ಮತ ಭೇದವನ್ನು ದೂರೀಕರಿಸಿ ಎಲ್ಲ ಮತಗಳಲ್ಲಿನ ಜ್ಞಾನವನ್ನೂ ಪ್ರೀತಿಯಿಂದ ಸ್ವೀಕರಿಸುತ್ತಾರೆ.
ಪರಮ ಸತ್ಯವೆಂದರೆ ಈ ಪ್ರಪಂಚವೆಲ್ಲವೂ ದೇವರ ಸೃಷ್ಟಿ. ಪ್ರಕೃತಿ ನಿಯಮಗಳನ್ನನುಸರಿಸಿಕೊಂಡು ನಡೆಯುತ್ತಿದೆ. ನಮ್ಮ ದೇಹದ ವ್ಯಾಪಾರ, ಮನಸ್ಸಿನ ವ್ಯಾಪಾರವು ಸಹ ಪ್ರಕೃತಿ ನಿಯಮಗಳಿಗೆ ಒಳಪಟ್ಟಿದೆ. ಹೀಗಿರುವಾಗ ಎಲ್ಲ ಮಾನವರೂ ಅವರವರ ಪ್ರಕೃತಿಯಂತೆ ನಡೆಯುತ್ತಿರುತ್ತಾರೆ. ಇವರಲ್ಲಿ ಉಚ್ಛನೀಚ ಭೇದವಿಲ್ಲ. ಧರ್ಮದಲ್ಲಿ ಒಳ್ಳೆಯದು ಕೆಟ್ಟದ್ದು ಎಂಬ ಭೇದವಿದೆಯೇ ಹೊರತು ಪರಮ ಸತ್ಯದಲ್ಲಿ ಒಳ್ಳೆಯದು ಕೆಟ್ಟದ್ದು ಎಂಬ ಭೇದವು ಸಹ ಇಲ್ಲ. ಎಲ್ಲವೂ ಆ ದೇವರ ಅಥವಾ ಪರಮಾತ್ಮನ ಲೀಲೆ. ಈ ಪರಮ ಸತ್ಯವನ್ನು ನೋಡುತ್ತ ತಮ್ಮ ಆಚರಣೆಯಲ್ಲಿ ನಿಸ್ಸಂಗವಾಗಿ ಧರ್ಮವನ್ನು ಅನುಸತ್ತಿರುವುದೇ ಪರಮ ಜ್ಞಾನ.
ತಾತ್ಕಾಲಿಕ ವಿನೋದಗಳನ್ನು ಅನುಭವಿಸುತ್ತಿದ್ದರೂ, ಮೇಲ್ಕಂಡ ಜ್ಞಾನ ದೃಷ್ಟಿಯಿಂದ ಎಲ್ಲವನ್ನೂ ನೋಡುವುದನ್ನು ಮಾನವರು ಕಲಿಯಬೇಕು. ಇದಕ್ಕೆ ಕಲೆಗಳೂ, ಕಾವ್ಯ ನಾಟಕಗಳೂ ಪ್ರೋತ್ಸಾಹ ನೀಡಬೇಕು.
- ಲಂಕಾ ಕೃಷ್ಣಮೂರ್ತಿ