(ದಿ. 1-8-1989 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಒದುಗರಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ವಾಲಿಯ ಪ್ರಸಂಗ – ವಾಲ್ಮೀಕಿಯ ಉದ್ದೇಶ
ಪ್ರಶ್ನೆ:- ಶ್ರೀರಾಮನು ವಾಲಿಯನ್ನು ಕೊಂದ ಪ್ರಸಂಗದಲ್ಲಿ ವಾಲಿಯ ಕ್ಷಮೆಯನ್ನು ಯಾಚಿಸುವುದರಿಂದ ಶ್ರೀರಾಮನ ಹಿರಿಮೆಗೆ ಸ್ವಲ್ಪವಾದರೂ ಕುಂದಾಗುವುದಿಲ್ಲ. ಅದರ ಬದಲು ಶ್ರೀರಾಮ ಎಂತಹ ಮಹಾತ್ಮ ಎಂದು ಎಲ್ಲರಿಗೂ ಮನವರಿಕೆಯಾಗುತ್ತದೆ. ಇದರಲ್ಲಿ ನಿಜವಾದ ಧರ್ಮ ಪ್ರಭೆಯನ್ನು ಕಾಣಬಹುದು. ಓದುಗ ಸಹೋದರರಿಗೆ ಇದನ್ನು “ಧರ್ಮ ಪ್ರಭ” ಮೂಲಕ ತಿಳಿಸಿದರೆ ಒಳ್ಳೆಯದೆಂದು ನನಗೆ ಅನಿಸುತ್ತದೆ.
ಉತ್ತರ:- ವಾಲಿಯ ಪ್ರಸಂಗವು ಅನೇಕ ಸಹೃದಯರಲ್ಲಿ ಭಿನ್ನಾಭಿಪ್ರಾಯಗಳನ್ನುಂಟು ಮಾಡಿದೆ ಎಂಬ ವಿಷಯವು ಎಲ್ಲರಿಗೂ ಗೊತ್ತೇ ಇದೆ. ಒಬ್ಬ ಮಹಾಕವಿಯ ಕಾವ್ಯವನ್ನು ಓದಿ ರಸಾಸ್ವಾದನ ಮಾಡುವವರು ಶೃದತೆಯಿಂದ ಆ ಕಾವ್ಯವನ್ನು ನೋಡಬೇಕು. ಆಗಲೇ ಅವರು ನಿಜವಾದ ಸಹೃದಯರಾಗುತ್ತಾರೆ. ಕವಿಯು ಒಂದು ಸನ್ನಿವೇಶವನ್ನು ನಿರ್ಮಿಸಿದ್ದರೆ ಅದರ ಉದ್ದೇಶವೇನಿರಬಹುದೆಂದು ವಿಶಾಲ ಹೃದಯದಿಂದ ಆಲೋಚಿಸಬೇಕು. ಅಲ್ಲಿಗೂ ತಿಳಿಯದಿದ್ದರೆ ಇತರ ಸಹೃದಯರೊಂದಿಗೆ ಚರ್ಚಿಸಬೇಕು. ಅಷ್ಟೇಹೊರತು ಆತುರಪಟ್ಟು ಅಕ್ಷೇಪಿಸಬಾರದು.
ವಾಲ್ಮೀಕಿ ರಾಮಾಯಣವು ಮೂರು ದೃಷ್ಟಿಕೋನಗಳಿಂದ ರಚಿಸಲ್ಪಟ್ಟಿದೆ. ಅದು ಒಂದು ಕಾವ್ಯ. ಕಾವ್ಯದ ದೃಷ್ಟಿಯಿಂದ ನಾಯಕೋತ್ತಮನಾದ ರಾಮನು ವಾಲಿಯ ವಧೆಯಲ್ಲಿ ತಪ್ಪು ಮಾಡಿದನೆಂದು ತೋರಿಸುವುದು ಅಷ್ಟು ಸಮಂಜಸವಲ್ಲವೆಂದು ನನಗೆ ಕಾಣುತ್ತದೆ. ಎರಡನೆಯದಾಗಿ ಅದು ಧರ್ಮಶಾಸ್ತ್ರ. ಧರ್ಮಶಾಸ್ತ್ರಗಳು ಧರ್ಮದ ಸ್ಥೂಲಸ್ವರೂಪವನ್ನು ಮಾತ್ರ ಬೋಧಿಸಿದರೆ ಸಾಲದು. ಅದರ ಸೂಕ್ಷ್ಮ ವಿಷಯಗಳನ್ನು ಬೋಧಿಸಬೇಕು. ವಾಲಿಯ ಪ್ರಸಂಗ ಸೂಕ್ಷ್ಮಧರ್ಮವನ್ನು ಬೋಧಿಸುವಂತಹುದು. ಮೂರನೆಯದಾಗಿ ಅದು ವೇದಾಂತ್ರ ಶಾಸ್ತ್ರವೂ ಆಗಿದೆ. ಇಲ್ಲಿ ವಾಲಿಯನ್ನು ಮರೆಯಿಂದ ರಾಮನು ಕೊಲ್ಲುವುದರಲ್ಲಿ ಸಂಕೇತವಿದೆ.
ಧರ್ಮ ಸೂಕ್ಷ್ಮದ ವಿಷಯವನ್ನು ಚೆನ್ನಾಗಿ ಪರಿಶೀಲಿಸಿದರೆ ವಾಲಿ ಸುಗ್ರೀವರ ಕಥೆಯಲ್ಲಿ ನಮಗೆ ಕಡು ಬರುವ ಒಂದು ದೊಡ್ಡ ತತ್ವವು ಹೀಗಿರುತ್ತೆ. ಇವರಿಬ್ಬರೂ ಶಾಖಾಮೃಗಗಳು(ಕಪಿಗಳು). ಆದರೆ ಮನುಷ್ಯರಂತೆ ವ್ಯವಹರಿಸಬಲ್ಲರು. ಇವರಿಬ್ಬರಲ್ಲಿ ವಾಲಿಯ ಪ್ರವೃತ್ತಿ ಪಶುಪ್ರವೃತ್ತಿ. ಸುಗ್ರೀವನದು ಮಾನವಪ್ರವೃತ್ತಿ. ಆದುದರಿಂದ ಶ್ರೀರಾಮನು ವಾಲಿಯನ್ನು ಮೃಗದಂತೆ ಕೊಂದ. ಸುಗ್ರೀವನೊಂದಿಗೆ ಮಾನವನಂತೆ ಮೈತ್ರಿಮಾಡಿದ. ಇದರಿಂದ ನಾವು ತಿಳಿಯ ಬೇಕಾದುದೇನೆಂದರೆ ಒಬ್ಬನು ಮಾನವನಾಗಿದ್ದರೂ ಮೃಗದಂತೆ ವರ್ತಿಸಿದರೆ ಅವನು ಮೃಗಸಮಾನನು. ಒಂದು ಮೃಗವು ಮಾನವತತ್ವವನ್ನು ತೋರಿಸಿದರೆ ಅದು ಮಾನವನಿಗೆ ಸಮಾನ ಎಂಬುದೇ, ಜಾತಿಗಿಂತಲೂ ಗುಣ ಮುಖ್ಯ. ಈ ವಿಷಯವು ಜಟಾಯು, ಶಬರಿ, ವಿಭೀಷಣ ಇತ್ಯಾದಿ ಪಾತ್ರಗಳಲ್ಲಿ ರಾಮಾಯಣದ ತುಂಬಾ ಹರಡಿಕೊಂಡಿರುತ್ತೆ.
– ಲಂಕಾ ಕೃಷ್ಣಮೂರ್ತಿ