ಕೊಡೆಯ ಗೋಪಾಲ – 5
ಲಂಕಾ ಕೃಷ್ಣಮೂರ್ತಿ
೩
“ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯ
ವೈ ನಮೋ ನಮಃ………………………….”
“ ಈಶಾನಸ್ಸರ್ವ ವಿದ್ಯಾನಾಂ ಈಶ್ವರಸ್ಸರ್ವ
ಭೂತಾನಾಂ ಬ್ರಹ್ಮಾಧಿಪತಿಃ ಬ್ರಹ್ಮಣೋಧಿಪತಿ
ರ್ಬ್ರಹ್ಮಾ ಶಿವೋಮೇ ಅಸ್ತು ಸದಾಶಿವೋಂ….”
ಎಂದು ಪರಮಾತ್ಮ ಭಾವನೆಯಿಂದ ಮೈಯೆಲ್ಲಾ ವಿಭೂತಿಯನ್ನು ವರದಪ್ಪ ಸ್ವಾಮಿಗಳೂ, ಅವರ ಶಿಷ್ಯರೂ ಬಳಿದುಕೊಳ್ಳುತ್ತಿದ್ದರು. ಪಂಚ ಉಷಃ ಕಾಲದಲ್ಲಿಯೇ ಎಚ್ಚತ್ತು ಅವರು ಅಷ್ಟು ಹೊತ್ತಿಗೆ ಸ್ನಾನ ಮಾಡಿದ್ದರು. ಪೂರ್ವ ಶೈಲದ ಹಿಂದೆ ಇದ್ದು ಉದಯಿಸಲಿರುವ ಸೂರ್ಯನ ಮುಂಬೆಳಕು ಎಲ್ಲ ಕಡೆಗಳಲ್ಲೂ ವ್ಯಾಪಿಸಿತ್ತು. ಪಟ್ಟಣಕ್ಕೆ ಸ್ವಲ್ಪ ದೂರದಲ್ಲಿದ್ದುದರಿಂದ ಸ್ವಾಮಿಗಳ ಆಶ್ರಮದಲ್ಲಿ ಆ ಹೊತ್ತಿನಲ್ಲಿ ಕೇವಲ ಪಕ್ಷಿಗಳ ಸ್ವಲ್ಪ ಇಂಚರ ಅಲ್ಲಲ್ಲಿ ಕೇಳಿ ಬರುತ್ತಿತ್ತು. ಆ ಪ್ರಶಾಂತ ಸಮಯದಲ್ಲಿ ಬ್ರಹ್ಮಚಾರಿಗಳ ಹೋಮಾದಿ ಕಾರ್ಯಗಳಿಗೆ ಬೇಕಾದ ಸಾಮಿಗ್ರಗಳನ್ನು ಕಮಲಮ್ಮ ಸಿದ್ಧ ಪಡಿಸುತ್ತಿದ್ದಳು. ಅವಳು ಇತರ ಶಿಷ್ಯರಂತೆಯೇ ಅಲಸ್ಯವನ್ನು ತೊರೆದು ಮುಂಜಾನೆಯೇ ಎದ್ದು ಆಶ್ರಮವನ್ನು ಗುಡಿಸಿ, ಸಾರಿಸಿ ಆಗಲೇ ರಂಗೋಲೆಯಿಂದ ಅಲಂಕರಿಸಿದ್ದಳು. ಸ್ವಾಮಿಗಳು ಮತ್ತು ಶಿಷ್ಯರು ಸಂಧ್ಯಾವಂದನೆಯನ್ನು ಸಕಾಲಕ್ಕೆ ಮಾಡಿದರು.
ಸೂರ್ಯೋದಯಾನಂತರ ಸ್ವಲ್ಪ ಹೊತ್ತಿಗೆ ಶಿಷ್ಯರು ಅಗ್ನಿ ಕಾರ್ಯವನ್ನು ಮಾಡಿದ ಮೇಲೆ ಸ್ವಾಮಿಗಳು ಅವರಿಗೆ ಸ್ವಲ್ಪ ಹೊತ್ತು ವೇದಪಾಠವನ್ನು ಹೇಳಿಕೊಟ್ಟರು. ಅದಾದ ಮೇಲೆ ಅವರು ಸಾಹಿತ್ಯಪ್ರವಚನವನ್ನು ಪ್ರಾರಂಭಿಸಿದರು.
ಆಗ ಅವರು ಕಮಲಮ್ಮನನ್ನೂ ಶಿಷ್ಯರ ಜೊತೆಗೆ ಕುಳ್ಳಿರಿಸಿ ಅವಳಿಗೂ ಸಾಹಿತ್ಯ ಬೋಧನೆಯನ್ನು ಮಾಡುತ್ತಿದ್ದರು. ಕಮಲಮ್ಮನಿಗೆ ವಿದ್ಯಾಭ್ಯಾಸದಲ್ಲಿ ಆಗಲೇ ಆರೇಳು ವರ್ಷಗಳು ಕಳೆದಿದ್ದವು. ಅವಳು ಇತರ ಶಿಷ್ಯರಿಗೆ ಸಮಾನವಾಗಿ ಸಂಸ್ಕೃತಾಭ್ಯಾಸದಲ್ಲಿ ಮುಂದುವರಿದಿದ್ದಳು. ಅಷ್ಟರೊಳಗೆ ನಗರದಿಂದ ಇನ್ನೂ ಕೆಲವರು ವಿದ್ಯಾರ್ಥಿಗಳು ಆಶ್ರಮಕ್ಕೆ ಬಂದರು. ಆ ದಿನ ಅವರೆಲ್ಲರೂ ತಡವಾಗಿ ಬಂದರು. ಎಲ್ಲರ ಮುಖಗಳಲ್ಲೂ ತಡೆಗಟ್ಟಿದ ದುಃಖವು ಉಕ್ಕಿ ಬರುವುದಕ್ಕೆ ಸಿದ್ಧವಾಗಿ ನಿಂತಂತೆ ಇತ್ತು. ಅವರು ಬಂದ ಕೂಡಲೇ ಅವರಲ್ಲಿ ಸುಮಾರು ಹದಿನೈದು ವರ್ಷ ವಯಸ್ಸಿನ ಒಬ್ಬ ವಿದ್ಯಾರ್ಥಿಯು ದುಃಖ ಪರವಶನಾಗಿ ಓಡಿ ಬಂದು ಗುರುಗಳ ಪಾದಗಳ ಮೇಲೆ ಬಿದ್ದು ಗೊಳೋ ಎಂದು ಅಳತೊಡಗಿದನು. ಉಳಿದ ವಿದ್ಯಾರ್ಥಿಗಳೆಲ್ಲರೂ ನಿಂತುಕೊಂಡೇ ಆಳ ತೊಡಗಿದರು. ಗುರುಗಳೂ, ಬ್ರಹ್ಮಚಾರಿಗಳೂ, ಕಮಲಮ್ಮನೂ ವಿಸ್ಮಯದೊಂದಿಗೆ ಸೇರಿದ ದುಃಖದಿಂದ ಕ್ಷಣಮಾತ್ರ ಸ್ತಬ್ಧರಾದರು. ಕಮಲಮ್ಮನು ಗಾಭರಿಯಿಂದ ‘ಅಯ್ಯೋ’ ಎಂದು ಕಿರುಚಿಕೊಂಡಳು. ಗುರುಗಳು ದುಃಖಾವೇಶವನ್ನು ತಡೆದುಕೊಂಡು, ಆತುರದಿಂದ ಕೇಳಿದರು – “ಏನು, ಕುಮಾರಾ, ಏಕೆ. ಹೀಗೆ ದುಃಖಿಸುತ್ತೀಯೆ? ಏನಾಯಿತು ಹೇಳು. ಕುಳಿತುಕೋ, ದುಃಖವನ್ನು ಸ್ವಲ್ಪ ನಿಲ್ಲಿಸಿಕೋ” ಎಂದು ತಮ್ಮ ಪಾದದ ಮೇಲೆ ಬಿದ್ದಿದ್ದ ಕುಮಾರನನ್ನೆಬ್ಬಿ ಕುಳ್ಳಿರಿಸಿದರು. ಕುಮಾರನಿಗೆ ಮಾತಾಡಲು ಆಗಲಿಲ್ಲ. ಅವನ ಜತೆಯಲ್ಲಿ ಬಂದಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬನು ಹೇಳಿದನು – “ಗಣಪತಿಗೆ ಕಣ್ಣುಗಳನ್ನು
ಕೀಳಿಸಿಬಿಟ್ಟರು. ಗುರುಗಳೇ, ಎಂತಹ ಅನ್ಯಾಯ! ಏನು ಮಾಡಬೇಕು ? ಅಯ್ಯೋ ಇನ್ನೇನು ಗತಿ ?”
ಗುರುಗಳು – ಅಷ್ಟು ಕ್ರೂರ ಶಿಕ್ಷೆಯನ್ನು ವಿಧಿಸಿದರೇ ಅವನಿಗೆ ? ಪಾಪ,
ಕುಮಾರಾ, ಕಣ್ಣುಗಳಿಗೆ ಚಿಕಿತ್ಸೆಯನ್ನು ಕೂಡಲೇ ಮಾಡಿಸಿದೆಯಲ್ಲಾ?
ಕುಮಾರನು ಗದ್ಗದ ಕಂಠನಾಗಿ ಬಹು ಪ್ರಯತ್ನದಿಂದ ಹೇಳಿದನು – “ಆ ಭಾಗ್ಯವು ಗಣಪತಿಗೆ ಇಲ್ಲ ಗುರುಗಳೇ. ನಗರದಲ್ಲಿ ಕೀಳಿಸಿರುವ ಕಣ್ಣುಗಳ ಗಾಯಗಳಿಗೆ ತಕ್ಷಣ ಔಷಧಿಯನ್ನು ಹಾಕಿ ಅಪಾಯವಿಲ್ಲದೆ, ನೋವಿಲ್ಲದೆ, ಪ್ರಾಣವನ್ನಾದರೂ ಕಾಪಾಡಬಲ್ಲ ವೈದ್ಯರು ಯಾರಿದ್ದಾರೆ?” ಗುರುಗಳು – ” ಹೌದಪ್ಪಾ, ಈಗ ಅಂತಹ ನಿಪುಣರಾದ ವೈದ್ಯರು ನಗರದಲ್ಲೇ ಇಲ್ಲ.”
ತುಸು ಹೊತ್ತು ಆಲೋಚಿಸಿ ಗುರುಗಳು ಮತ್ತೆ ಹೀಗೆ ನುಡಿದರು – ನೀವೆಲ್ಲರೂ ತಕ್ಷಣ ನಗರಕ್ಕೆ ಓಡಿ ಹೋಗಿ ಕುದುರೆಯನ್ನು ಏರ್ಪಾಟು ಮಾಡಿಕೊಂಡು ಇಲ್ಲಿಗೆ ನಾಲ್ಕು ಕ್ರೋಶಗಳ ದೂರದಲ್ಲಿರುವ ಗೋವಿಂದಪುರವೆಂಬ ಹಳ್ಳಿಗೆ ಹೋಗಿ. ಅಲ್ಲಿ ಒಬ್ಬ ವೈದ್ಯನಿದ್ದಾನೆ. ಅವನನ್ನು ತಕ್ಷಣ ಕರೆದು ಕೊಂಡು ಬಂದು ಗಣಪತಿಗೆ ಚಿಕಿತ್ಸೆಯನ್ನು ಮಾಡಿಸಿ. ಆ ವೈದ್ಯನ ಹೆಸರು ವೆಂಕಟಸ್ವಾಮಿ, ಅವನು ಬಹಳ ಬುದ್ದಿವಂತ. ಬಹಳ ಒಳ್ಳೆಯವನು. ಮೊನ್ನೆ ದೇವೀ ನವರಾತ್ರಿಗಳಲ್ಲಿ ಇಲ್ಲಿಗೆ ಆತನೂ ಬಂದಿದ್ದ. ಜಾಗ್ರತೆಯಾಗಿ ಹೊರಡಿ.”
‘ಕೂಡಲೇ ನಗರದಿಂದ ಬಂದಿದ್ದ ವಿದ್ಯಾರ್ಥಿಗಳು ನಗರಕ್ಕೆ ವಾಪಸು ಓಡಿಹೋದರು. ಇತ್ತ ಆಶ್ರಮದಲ್ಲಿ ಅಂದಿನ ಪಾಠವು ಮುಂದುವರೆಯಲಿಲ್ಲ. ಗಣಪತಿ ಯಾರು ? ಗಣಪತಿಗೆ ಕಣ್ಣುಗಳನ್ನು ಕೀಳಿಸಲು ಕಾರಣವೇನು ? ಇದೆಲ್ಲ ಅರಿಯದ ಆಶ್ರಮವಾಸಿಗಳಿಗೆ ಗುರುಗಳು ನಿಟ್ಟುಸಿರನ್ನು ಬಿಟ್ಟು ಹೀಗೆ ಹೇಳಲಾರಂಭಿಸಿದರು.
“ ಶಿಷ್ಯರೇ, ನಮಗೆಲ್ಲಾ ಪರೀಕ್ಷೆಯ ಕಾಲ ಸಮೀಪಿಸಿದ ಹಾಗೆ ಕಾಣುತ್ತದೆ. ರಾಜ್ಯ ವ್ಯವಹಾರಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವುದು ಕೇಡೆಂದು ಇದುವರೆವಿಗೂ ನಿಮಗೆ ಇದರ ಹಿನ್ನೆಲೆಯನ್ನು ತಿಳಿಸಿಲ್ಲ. ಈಗಾಗಲೇ ನೀವು ತಕ್ಕಮಟ್ಟಿಗೆ ವಿದ್ಯೆಯನ್ನು ಕಲಿತಿರುವುದಲ್ಲದೆ ವಿವೇಕವನ್ನೂ ಸಂಪಾದಿಸಿದ್ದೀರಿ. ಸಂಯಮವನ್ನು ಅಭ್ಯಾಸ ಮಾಡಿದ್ದೀರಿ. ಆದುದರಿಂದ ನೀವು ಈ ವಿಷಯವನ್ನು ತಿಳಿದುಕೊಂಡು ತಕ್ಕ ರೀತಿಯಲ್ಲಿ ನಡೆದುಕೊಳ್ಳ ಬೇಕಾಗಿರುವುದರಿಂದ ತಿಳಿಸುತ್ತಿದ್ದೇನೆ. ನೀವು ಈ ವಿಷಯಗಳನ್ನು ತಿಳಿದು ಆವೇಶಪೂರಿತರಾಗುವುದಿಲ್ಲವೆಂದೂ ಸಂಯಮದಿಂದ ಲೋಕ ಕಲ್ಯಾಣಕ್ಕೆ ನಿಮ್ಮಿಂದಾಗುವ ನೆರವು ನೀಡುವಿರೆಂದೂ ನಂಬಿದ್ದೇನೆ.
“ನಾವಿರುವ ಘನಗಿರಿ” ರಾಜ್ಯಕ್ಕೆ ಈಗಿನ ದೊರೆಗಳು ರುದ್ರಸಿಂಹ ಪ್ರಭು ಗಳು. ಇವರ ತಂದೆಯವರು ನರಸಿಂಹ ಪ್ರಭುಗಳು. ಅವರ ತಂದೆಯವರು ಪ್ರತಾಪಸಿಂಹ ಪ್ರಭುಗಳು. ಪ್ರತಾಪಸಿಂಹ ಪ್ರಭುಗಳ ಕಾಲದಲ್ಲಿಯೇ ಈ ಘನಗಿರಿಯ ಕೋಟೆ ನಿರ್ಮಿತವಾಯಿತು. ಆತನ ಕಾಲದಲ್ಲಿಯೇ ಘನಗಿರಿ ಪಟ್ಟಣವು ಬಹಳ ಸಂಪದ್ಭರಿತವಾಗಿ ಇಂದಿನದಕ್ಕಿಂತ ಮೂರರಷ್ಟು ವೈಭವದಿಂದ ಮೆರೆಯುತ್ತಿದ್ದಿತು. ಪ್ರತಾಪ ಸಿಂಹನು ಬಹಳ ಧೈರ್ಯ ಸಾಹಸಗಳಿಂದಲೂ ಯುಕ್ತಿಯಿಂದಲೂ ಕೂಡಿದ್ದು, ಬುದ್ದಿವಂತರಾದ ಮಂತ್ರಿಗಳ ಸಹಾಯ ದಿಂದಲೂ, ಯೋಗ್ಯನಾದ ಪುರೋಹಿತನ ನೆರವಿನಿಂದಲೂ ಬಹಳ ವಿಜೃಂಭಣೆಯಿಂದ ರಾಜ್ಯಪಾಲನೆ ಮಾಡುತ್ತಿದ್ದನು. ಆತನು ಪ್ರಜೆಗಳಲ್ಲಿ ವಿನಯವನ್ನೂ ಐಕ್ಯಮತ್ಯವನ್ನೂ, ವಿವೇಕವನ್ನೂ, ಉತ್ಸಾಹವನ್ನೂ, ದೈವಭಕ್ತಿಯನ್ನೂ ಸಂತೋಷವನ್ನೂ ಅಭಿವೃದ್ಧಿ ಪಡಿಸಲು ಅನೇಕ ವಿದ್ವಾಂಸರಿಗೂ, ಕಲೆಗಾರರಿಗೂ ಪ್ರೋತ್ಸಾಹಕೊಟ್ಟನು. ಸ್ವತಃ ಆತನು ವಿದ್ಯಾವಂತನಾಗಿದ್ದನು. ಆತನ ಕಿರಿಯ ತಂಗಿಯ ಹೆಸರು ವಿಜಯಾಂಬಿಕೆ. ವಿಜಯಾಂಬಿಕೆಯು ಕಾಂಚೀಪುರದಲ್ಲಿ ಲೋಕಪ್ರಸಿದ್ಧನಾದ ಸುಂದರಾಚಾರ್ಯರ ಹತ್ತಿರ ಸಾಹಿತ್ಯವನ್ನು ಕಲಿಯುತಿದ್ದಳು.
“ಮೊದಲು ಹೇಮಗಿರಿ ರಾಜ್ಯವೂ ಘನಗಿರಿ ರಾಜ್ಯಕ್ಕೆ ಸೇರಿತ್ತು. ಅಲ್ಲಿನ ಬಲದೇವ ಪ್ರಭುವು ಪ್ರತಾಪ ಸಿಂಹನಿಗೆ ಸಾಮಂತನಾಗಿದ್ದನು. ಆದರೆ ಪ್ರತಾಪ ಸಿಂಹನು ಅಕಾಲ ಮೃತ್ಯುವನ್ನು ಹೊಂದಿದ ಕೂಡಲೇ ಬಲದೇವನು ಸ್ವತಂತ್ರನಾಗಿಬಿಟ್ಟನು. ನರಸಿಂಹ ಪ್ರಭುವು ಆಗ ಇನ್ನೂ ಚಿಕ್ಕ ಹುಡುಗನಾಗಿದ್ದುದರಿಂದ ಅವನ ತಾಯಿ ನಾಗಲಾಂಬಿಕೆಯೇ ಮಂತ್ರಿಗಳ ಸಹಾಯದಿಂದ ಘನಗಿರಿ ರಾಜ್ಯವನ್ನು ಆಳತೊಡಗಿದಳು. ಅವಳು ಸ್ತ್ರೀಯಾಗಿದ್ದುದರಿಂದಲೂ ಬಲದೇವನು ಬಹಳ ಪರಾಕ್ರಮಶಾಲಿ ಆಗಿದ್ದುದರಿಂದಲೂ ಸ್ವತಂತ್ರನಾದ ಬಲದೇವನ ಮೇಲೆ ಯುದ್ಧ ಮಾಡಿ ಹೇಮಗಿರಿಯನ್ನು ಸಾಮಂತರಾಜ್ಯವಾಗಿಯೇ ಉಳಿಸಿಕೊಳ್ಳಲು ನಾಗಲಾಂಬಿಕೆಯು ಪ್ರಯತ್ನಿಸಲಿಲ್ಲ. ಯುದ್ಧಮಾಡದಿರುವುದಕ್ಕೆ ಇದಕ್ಕಿಂತಲೂ ಪ್ರಬಲವಾದ ಮತ್ತೊಂದು ಕಾರಣವೂ ಇತ್ತು.
“ವಿಜಯಾಂಬಿಕೆಯು ಕಾಂಚೀಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಬಲದೇವನ ಬಂಧುವರ್ಗದಲ್ಲಿ ಒಬ್ಬನಾದ ಕೃಷ್ಣದೇವನು ಕೂಡ ಅಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದನು. ಆತನು ಪ್ರಸಿದ್ಧನಾದ ವಿಷ್ಣು ತೀರ್ಥನೆಂಬ ಸಂಗೀತ ವಿದ್ವಾಂಸನ ಶಿಷ್ಯನಾಗಿ ಸಂಗೀತವನ್ನು ಕಲಿಯುತ್ತಿದ್ದನು. ಒಮ್ಮೆ ವರದರಾಜ ಸ್ವಾಮಿಗಳ ಉತ್ಸವಗಳಲ್ಲಿಯೂ ಮತ್ತೊಮ್ಮೆ “ಏಕಾಮ್ರನಾಥನ” ಉತ್ಸವಗಳಲ್ಲಿಯೂ ಆತನು ವಿಜಯಾಂಬಿಕೆ ರಚಿಸಿದ್ದ ಗೀತೆಗಳನ್ನು ಹಾಡಿದನು. ಆತನ ಗಾನ ಕಲೆಯು ವಿಜಯಾಂಬಿಕೆಯನ್ನು ಮುಗ್ಧಗೊಳಿಸಿತು. ವಿಜಯಾಂಬಿಕೆಯು ತನ್ನ ಅಣ್ಣನಾದ ಪ್ರತಾಪಸಿಂಹನ ಅನುಮತಿಯನ್ನು ಪಡೆದು ಆತನನ್ನು ವಿವಾಹವಾಗುವೆನೆಂದು ಆತನಿಗೆ ಮಾತು ಕೊಟ್ಟು ಘನಗಿರಿಗೆ ಹಿಂತಿರುಗಿದಳು.
“ಅವಳು ಅಲ್ಲಿಗೆ ವಾಪಸಾಗುವ ವೇಳೆಗೆ ಸರಿಯಾಗಿ ಪ್ರತಾಪಸಿಂಹನು ಮೃತನಾಗಿದ್ದನು. ಘನಗಿರಿಯಲ್ಲಿ ವಿಜಯಾಂಬಿಕೆಯ ನೆಂಟರೆಲ್ಲರೂ, ಸ್ವತಂತ್ರನಾಗಿ ಘನಗರಿಗೆ ಶತ್ರುವಾಗಿದ್ದ ಬಲದೇವನ ನೆಂಟನಾದ ಕೃಷ್ಣದೇವನನ್ನು ವಿಜಯಾಂಬಿಕೆಯು ಮದುವೆ ಆಗುವುದನ್ನು ವಿರೋಧಿಸಿದರು. ಆದರೆ ವಿಜಯಾಂಬಿಕೆ ಕೃಷ್ಣ ದೇವನನ್ನೂ, ಕೃಷ್ಣದೇವನು ವಿಜಯಾಂಬಿಕೆಯನ್ನೂ, ಪರಸ್ಪರ ಪ್ರೇಮಿಸಿದ್ದುದರಿಂದಲೂ, ಕೃಷ್ಣದೇವನು ಕೇವಲ ಸಂಗೀತಕಲೋಪಾಸಕನಾಗಿ ಘನಗಿರಿ ಅರಸುಗಳ ಮೇಲಾಗಲಿ ಇನ್ನಾರಮೇಲಾಗಲಿ ಶತ್ರುತ್ವವಿಲ್ಲದವನಾದ್ದರಿಂದಲೂ, ವಿಜಯಾಂಬಿಕೆಯು ಆತನಿಗೆ ಮಾತು ಕೊಟ್ಟಿದ್ದರಿಂದಲೂ ಅವಳು ಘನಗಿರಿಯಲ್ಲಿನ ನೆಂಟರನ್ನೆಲ್ಲಾ ಬಿಟ್ಟು ಕೆಲವು ಪರಿಚಾರಿಕರೊಂದಿಗೆ ಹೇಮಗಿರಿಯನ್ನು ಸೇರಿ ಅಲ್ಲಿಯೇ ಕೃಷ್ಣ ದೇವನನ್ನು ಮದುವೆಯಾಗಿಬಿಟ್ಟಳು. ವಿಜಯಾಂಬಿಕೆಯು ಹೇಮಗಿರಿಯಲ್ಲಿ ಕೆಲವು ಸಂಸ್ಕೃತ ಕಾವ್ಯಗಳನ್ನು ರಚಿಸಳೆಂದು ತಿಳಿದುಬರುತ್ತದೆ. ಆದರೆ ಅಂದಿನಿಂದ ಘನಗಿರಿಯ ಅರಸುಗಳಿಗೂ ದೇವಗಿರಿಯ ಅರಸುಗಳಿಗೂ ಶತ್ರುತ್ವ ಬೆಳೆದು ಬಂದಿದ್ದರಿಂದಲೂ ಎರಡು ಪಟ್ಟಣಗಳಿಗೂ ಹೆಚ್ಚು ದೂರವಿದ್ದಿದ್ದರಿಂದಲೂ ಘನಗಿರಿ ರಾಜ್ಯದಲ್ಲಿ ತೆಲುಗು ಮಾತನಾಡುವ ಜನಗಳು ಹೆಚ್ಚಾಗಿದ್ದು ಹೇಮಗಿರಿ ರಾಜ್ಯದಲ್ಲಿ ಕನ್ನಡ ಮಾತಾಡುವ ಜನರು ಹೆಚ್ಚಾಗಿ ಇದ್ದುದರಿಂದಲೂ ವಿಜಯಾಂಬಿಕೆಯ ಕಾವ್ಯ ಗಳು ಘನಗಿರಿ ರಾಜ್ಯದಲ್ಲಿ ಪ್ರಚಾರ ಹೊಂದಲಿಲ್ಲ.
“ವಿಜಯಾಂಬಿಕೆಯು ಶತ್ರು ರಾಜ್ಯದಲ್ಲಿ ಇದ್ದುದರಿಂದ ಬಲದೇವನ ಮೇಲೆ ಯುದ್ಧಕ್ಕೆ ಹೋದರೆ ವಿಜಯಾಂಬಿಕೆಯು ಬಲದೇವನಿಗೆ ನೆರವಾಗಿ ನಿಲ್ಲಬಹುದೆಂಬ ಆಶಂಕೆಯು ನಾಗಲಾಂಬಿಕೆಗೆ ಇತ್ತು. ಪರಾಕ್ರಮಿಯಾದ ಶತ್ರುವಿನೊಡನೆ ಹೋರಾಡುವಾಗ ಜಯವು ಯಾರಿಗೆ ಲಭಿಸುವುದೋ ಹೇಳು ವುದು ಕಷ್ಟ. ಒಂದು ವೇಳೆ ಯುದ್ಧದಲ್ಲಿ ಬಲದೇವನು ಜಯಿಸಿದರೆ, ವಿಜಯಾಂಬಿಕೆಯ ಪ್ರೋತ್ಸಾಹದಿಂದ ಆತನು ಘನಗಿರಿಯ ಮೇಲೆಯೇ ಧಾಳಿ ನಡೆಸಬಹುದು. ಎಂಬ ಭಯವೂ ನಾಗಲಾಂಬಿಕೆಗೆ ಇದ್ದಿತು. ಆದುದರಿಂದ ಅವಳು ಬಲದೇವನ ಮೇಲೆ ಯುದ್ದಕ್ಕೆ ಹೋಗಲಿಲ್ಲ.
“ನರಸಿಂಹನಿಗೆ ವಯಸ್ಸು ಬಂದ ಮೇಲೆ ಆತನಿಗೆ ಪಟ್ಟವನ್ನು ಕಟ್ಟಿದರು. ನರಸಿಂಹನಿಗೆ ಸೋದರತ್ತೆಯಾದ ವಿಜಯಾಂಬಿಕೆಯ ಪ್ರವರ್ತನೆ ತನ್ನ ಚಿಕ್ಕಂದಿನಿಂದಲೂ ಅವನಿಗೆ ಸರಿ ಬೀಳುತ್ತಿರಲಿಲ್ಲ. ಆಕೆ ಕೃಷ್ಣದೇವನನ್ನು ಮದುವೆಯಾಗುವುದನ್ನು ನರಸಿಂಹನು ಪ್ರಬಲವಾಗಿ ವಿರೋಧಿಸಿದನು. ಆದರೂ ಆಕೆ ನೆಂಟರ ಮಾತನ್ನು ಕೇಳದೆ ಶತ್ರು ರಾಜ್ಯಕ್ಕೆ ಓಡಿಹೋಗಿ ಶತ್ರುಸಂಬಂಧಿಯನ್ನು ಮದುವೆಯಾಗಲು ಅವಳ ಸಾಹಿತ್ಯ ವ್ಯಾಸಂಗ ಮತ್ತು ಸಂಗೀತ ಕಲಾ ಪ್ರೇಮನೇ ಕಾರಣಗಳೆಂಬ ಭಾವನೆ ನರಸಿಂಹನ ಮನಸ್ಸಿನಲ್ಲಿ ಬೇರೂರಿಬಿಟ್ಟಿತು. ಆಕೆಯ ಕೆಲಸವನ್ನು ಆತನೂ, ಮಿಕ್ಕ ನೆಂಟರೂ ತಮಗೆ ಅವಮಾನಕರವಾದ ಕೃತ್ಯವೆಂದು ಭಾವಿಸುತ್ತಿದ್ದರು. ನರಸಿಂಹನಿಗೆ ಸ್ವತಃ ವಿದ್ಯಾಭಿರುಚಿಯಾಗಲಿ, ಕಲಾಭಿರುಚಿಯಾಗಲಿ ಇರಲಿಲ್ಲ. ಆತನು ಬಹಳ ಸ್ವಾಭಿಮಾನಿ. ತನ್ನ ಮಾನಕ್ಕೆ ಕುಂದು ಬಂದರೆ ಆತನು ಎಳ್ಳಷ್ಟೂ ಸಹಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನಿಗೆ ವಿದ್ಯೆಯೆಂದರೆ, ಕಲೆಗಳೆಂದರೆ, ಅಭಿಮಾನಕ್ಕೆ ಬದಲಾಗಿ ದ್ವೇಷವಿತ್ತು. ಆದುದರಿಂದ ಕ್ರಮ ಕ್ರಮವಾಗಿ ಘನಗಿರಿ ರಾಜ್ಯದಲ್ಲಿ ವಿದ್ಯೆಗೂ, ಕಲೆಗಳಿಗೂ ರಾಜಪೋಷಣೆ ತಪ್ಪಿ ಹೋಗಿ, ಅವುಗಳ ಸ್ಥಾನವನ್ನು ಸಾಹಸ ಕೃತ್ಯಗಳು ಅಕ್ರಮಿಸಿ ಕೊಂಡವು. ನರಸಿಂಹನು ಸ್ವತಃ ಸಾಹಸಪ್ರಿಯನಾದುದರಿಂದ ಧೈರ್ಯಸಾಹಸಗಳುಳ್ಳ ಜನರಿಗೆ ಪ್ರೋತ್ಸಾಹ ಕೊಟ್ಟು ಹೇಗಾದರೂ ಸೈನ್ಯ ಬಲವನ್ನು ಬೆಳೆಸಿ, ಬಲದೇವನ ಮೇಲೆ ಯುದ್ಧ ಮಾಡಿ ಅವನನ್ನು ನಾಶಮಾಡಬೇಕೆಂಬ ಹಠವೂ, ಹಂಬಲವೂ ಅವನ ಮನಸ್ಸಿನೊಳಗೆ ಅಗ್ನಿಯಂತೆ ಪ್ರವರ್ಧಿಸುತ್ತಿತ್ತು.
“ಹೀಗಿರುವಲ್ಲಿ ವಿಧಿಯ ವೈಪರೀತ್ಯದಿಂದಲೂ, ಬಲದೇವನ ಕುಹಕದಿಂದಲೂ, ನರಸಿಂಹನ ಆವೇಶದಿಂದಲೂ ಘನಗಿರಿ ರಾಜ್ಯದಲ್ಲಿ ಬಾಯಿಂದ ಉಚ್ಚರಿಸಲಾರದಂತಹ ಒಂದು ಘೋರ ಕೃತ್ಯವು ನಡೆಯಿತು. ಅದನ್ನು ಕೇಳಿ ನೀವು ಉದ್ರಿಕ್ತರಾಗಬೇಡಿ. ಒಮ್ಮೆ ನರಸಿಂಹನು ಬಲದೇವನ ಮೇಲೆ ತನ್ನ ಅಧಿಪತ್ಯವನ್ನು ಪ್ರಕಟಿಸಲು ಪ್ರಯತ್ನಿಸಿ ಅವನ ಆಸ್ಥಾನಕ್ಕೆ ದೂತನೊಬ್ಬನನ್ನು ಕಳುಹಿಸಿದನು. ನರಸಿಂಹನ ಆಜ್ಞೆಯಂತೆ ದೂತನು ಹೋಗಿ ಬಲದೇವನಿಗೆ, ಘನಗಿರಿ ಪ್ರಭುಗಳಿಗೆ ಹೇಮಗಿರಿ ರಾಜನು ಯಾವಾಗಲೂ ಸಾಮಂತನೆಂದೂ ಹಿಂದಿನ ಕಪ್ಪ ಕಾಣಿಕೆಗಳನ್ನು ಕೂಡಲೇ ಕೊಟ್ಟು ನರಸಿಂಹನಿಗೆ ಶರಣಾಗತ ನಾಗಬೇಕೆಂದೂ, ಇಲ್ಲದಿದ್ದರೆ ನರಸಿಂಹನು ಪ್ರಬಲವಾದ ಸೈನ್ಯದೊಂದಿಗೆ ಬಂದು ಬಲದೇವನನ್ನು ನಾಶ ಮಾಡುವನೆಂದೂ ಹೇಳಿದನು. ಅಭಿಮಾನಿಯಾದ ಬಲದೇವನು ಇದನ್ನು ಕೇಳಿ ಬಹಳ ಕೋಪೋದ್ರಿಕ್ತನಾದನು. ಆದರೆ ಆತನು ಕುಹಕಿ ಆದುದರಿಂದ ದೂತನಿಗೆ ತನ್ನ ಪ್ರತ್ಯುತ್ತರವನ್ನು ಕೂಡಲೇ ಹೇಳದೆ ಒಂದು ತಂತ್ರವನ್ನು ಹೂಡಿದನು. ಪ್ರತ್ಯುತ್ತರವನ್ನು ನಾಲ್ಕು ದಿನಗಳ ನಂತರ ಹೇಳುವುದಾಗಿ ದೂತನನ್ನು ಅಲ್ಲಿಯೇ ನಿಲ್ಲಿಸಿಕೊಂಡನು. ಆಗ್ಗೆ ಬಲದೇವನು ಅರವತ್ತು ವರ್ಷದ ಮುದುಕನಾಗಿದ್ದನು. ಆದರೂ ಅವನ ಕುಹಕತನ ಕಡಿಮೆಯಾಗಿರಲಿಲ್ಲ. ಅಲ್ಲದೆ, ತಾನು ವಯಸ್ಸಿನಲ್ಲಿ ದೊಡ್ಡವನೆಂದೂ, ನರಸಿಂಹನು ತನಗಿಂತಲೂ ಚಿಕ್ಕವನಾಗಿ ಹೀಗೆ ಹೇಳಿ ಕಳುಹಿಸುವುದು ತನಗೆ ಅವಮಾನಕರವೆಂದೂ ಆತನು ಭಾವಿಸಿದನು. ಅದಕ್ಕೆ ಕೆಲವು ವರ್ಷಗಳ ಮುಂಚೆಯೇ ಕೃಷ್ಣದೇವನೂ, ವಿಜಯಾಂಬಿಕೆಯೂ ತೀರಿಕೊಂಡಿದ್ದರು. ಆತನು ಒಬ್ಬ ಶೀಲವಿಲ್ಲದ ಯುವಕ ಕವಿಯನ್ನು ಕರೆಸಿಕೊಂಡು ಎರಡು ದಿನಗಳಲ್ಲಿಯೇ ಘನಗಿರಿಯ ರಾಜರನ್ನು ಅಪಮಾನಗೊಳಿಸುವಂತಹ ಒಂದು ಪ್ರಹಸನವನ್ನು ಬರೆಯಿಸಿದನು. ಅದರಲ್ಲಿ ವಿಜಯಾಂಬಿಕೆಯನ್ನು ತಮ್ಮ ಮಾತಿನಲ್ಲಿ ನಿಲ್ಲಿಸಿಕೊಳ್ಳಲು ಅಸಮರ್ಥರಾದ ಹೇಡಿಗಳೆಂದು ಘನಗಿರಿ ರಾಜಮನೆತನದವರನ್ನು ಅಪಹಾಸ್ಯಕ್ಕೆ ಈಡು ಮಾಡಲ್ಪಟ್ಟಿತ್ತು. ಹಣದಾಸೆಗೆ ಅ ಕ್ಷುದ್ರ ಕವಿಯು ಸ್ವಲ್ಪ ಸತ್ಯಾಂಶದ ಆಧಾರದ ಮೇಲೆ ಅನೇಕ ಸುಳ್ಳುಗಳನ್ನು ಸೃಷ್ಟಿಸಿ ಘನಗಿರಿ ರಾಜರನ್ನು ಸಿಕ್ಕಾಪಟ್ಟ ಅವಮಾನಗೊಳಿಸುವ ಪ್ರಹಸನವನ್ನು ತಯಾರುಮಾಡಿದ್ದನು. ಆ ಕ್ಷುದ್ರ ಕವಿ ಕನ್ನಡಿಗನಾಗಿದ್ದು, ಕನ್ನಡಿಗರು ಆಂಧ್ರರಿಗಿಂತಲೂ ಉತ್ತಮರೆಂಬ ದುರಭಿಮಾನವುಳ್ಳವನಾಗಿದ್ದನು. ಆಂಧ್ರರಾದ ಘನಗಿರಿಯ ಅರಸರನ್ನು ಅವಮಾನಿಸುವ ಪ್ರಹಸನದಲ್ಲಿ ಆತನು ಇದನ್ನು ತೋರಿಸಿದ್ದನು. ನಾಲ್ಕು ದಿನಗಳ ನಂತರ ಒಂದು ರಾತ್ರಿ ರಾಜ ಸಭೆಯಲ್ಲಿ ದೂತನ ಎದುರಿನಲ್ಲಿ ಆ ಪ್ರಹಸನವನ್ನು ನಟ ನಟಿಯರು ಅಭಿನಯಿಸಿದರು. ಆ ಪ್ರಹಸನದ ಒಂದು ತಾಳ ಪತ್ರ ಪ್ರತಿಯನ್ನು ತಯಾರು ಮಾಡಿಸಿ ಬಲದೇವನು ದೂತನಿಗೆ ಕೊಟ್ಟು, ಇದೇ ನನ್ನ ಪ್ರತ್ಯುತ್ತರ. ನಿಮ್ಮ ರಾಜನಿಗೆ ಕೊಡು ಎಂದು ಹೇಳಿ ಅವನನ್ನು ಘನಗಿರಿಗೆ ಕಳುಹಿಸಿಬಿಟ್ಟನು. ಸ್ವಾಮಿ ಭಕ್ತನಾದ ದೂತನು ಬಹಳ ಕಷ್ಟದಿಂದ ತನ್ನ ಸ್ವಾಮಿಯ ದೂಷಣವನ್ನೂ, ಅವಮಾನವನ್ನೂ ಸಹಿಸಿಕೊಂಡು ಘನಗಿರಿಗೆ ಹಿಂದಿರುಗಿ ಬಂದು ನರಸಿಂಹನಿಗೆ ನಡೆದ ವಿಚಾರಗಳನ್ನೆಲ್ಲ ತಿಳಿಸಿದನು. ಆ ಪ್ರಹಸನದ ತಾಳ ಪತ್ರ ಪ್ರತಿಯನ್ನು ಆತನ ಮುಂದೆ ಇಟ್ಟನು. ಕೋಪೋ ದ್ರಿಕ್ತನಾದ ನರಸಿಂಹ ಆ ಪ್ರಹಸನವನ್ನು ಮಂತ್ರಿಯಿಂದ ಓದಿಸಿ ಕೇಳುತ್ತ ಕೇಳುತ್ತಲೇ ಅದನ್ನು ಮಂತ್ರಿಯ ಕೈಯಿಂದ ಕಿತ್ತುಕೊಂಡು ಬೆಂಕಿಯಲ್ಲಿ ಹಾಕಿ ಸುಡಿಸಿದನು. ಆತನ ಕೋಪ ಅಷ್ಟಕ್ಕೇ ತಗ್ಗಲಿಲ್ಲ. ಆತ ಭಟರಿಗೆ ಆಜ್ಞೆ ಮಾಡಿ ದೇಶದಲ್ಲಿ ಎಲ್ಲೆಲ್ಲಿ ಕಾವ್ಯ ನಾಟಕಗಳು ಇರುವುವೋ ಅವನ್ನೆಲ್ಲಾ ಸುಟ್ಟು ಹಾಕ ಬೇಕೆಂದು ಕ್ರೂರವಾದ ಆಜ್ಞೆಯನ್ನು ಮಾಡಿದನು. ಬಲದೇವನ ಮೇಲೆ ದಂಡೆತ್ತಿ ಹೋಗಿ ಅವನನ್ನು ನಾಶಮಾಡಬೇಕೆಂದು ಯೋಚಿಸಿದನು. ಆದರೆ ಮಂತ್ರಿಗಳೂ, ಸೈನ್ಯಾಧಿಪತಿಯೂ ಕೆಲವು ಕಾರಣಗಳಿಂದ ಅದು ಅಸಾಧ್ಯವಾದ ಕೆಲಸವೆಂದೂ ಅದಕ್ಕೆ ಸರಿಯಾದ ಸಮಯವು ಒದಗುವವರೆವಿಗೂ ಕಾದಿರಬೇಕೆಂದೂ, ಸಲಹೆ ಯನ್ನಿತ್ತರು.
“ಆದರೆ ಪವಿತ್ರವಾದ ಭರತ ಖಂಡದಲ್ಲಿಯೇ ಎಂದಿಗೂ ನಡೆಯದಂತಹ ಘೋರ ಕೃತ್ಯವು ಇಲ್ಲಿ ನಡೆದೇ ಹೋಯಿತು. ನಗರದಲ್ಲಿಯೂ ಕೆಲವು ಪಟ್ಟಣಗಳಲ್ಲಿಯೂ, ಹಳ್ಳಿಗಳಲ್ಲಿಯೂ ಕ್ರೂರರಾದ ರಾಜ ಭಟರು ಬಂದು ತಾಳ ಪತ್ರ ಗ್ರಂಥಗಳನ್ನು ಸುಡಲು ಆರಂಭಿಸಿದರು. ಕೆಲವರು ಈ ಸಮಾಚಾರವನ್ನು ತಿಳಿದು ತಾಳ ಪತ್ರ ಗ್ರಂಥಗಳನ್ನು ನೆಲದಲ್ಲಿ ಹೂತುಬಿಟ್ಟರು. ಇದರ ಪರಿಣಾಮವು ಅಷ್ಟಕ್ಕೆ ನಿಲ್ಲಲಿಲ್ಲ. ರಾಜ ಭಟರಿಗೆ ಕಾವ್ಯವಾವುದು, ನಾಟಕವಾವುದು, ಶಾಸ್ತ್ರವಾವುದು ಎಂಬ ವಿಚಕ್ಷಣೆ ಎಲ್ಲಿಂದ ಬರಬೇಕು?ಅವರು ಸಿಕ್ಕಿದ ಹಾಗೆಲ್ಲ ತಾಳಪತ್ರ ಗ್ರಂಥಗಳನ್ನು ಸುಟ್ಟುಬಿಟ್ಟರು. ಅದರಲ್ಲಿ ರಾಜ ವೈದ್ಯನ ಮನೆಯಲ್ಲಿನ ವೈದ್ಯ ಶಾಸ್ತ್ರ ಗ್ರಂಥಗಳು ಕೂಡ ಸುಟ್ಟು ಹೋದವಂತೆ. ಇನ್ನು ಯಾವ ಯಾವ ಶಾಸ್ತ್ರಗಳು ಸುಟ್ಟು ಹೋದವೋ ? ಆದುದರಿಂದಲೇ ಈ ತಲೆ ಮಾರಿನಲ್ಲಿ ರಾಜ ವೈದ್ಯನಿಗಾಗಲೀ, ನಗರದಲ್ಲಿನ ಇತರ ವೈದ್ಯರಿಗಾಗಲಿ ಕಣ್ಣುಗಳನ್ನು ಕೀಳಿಸಿರುವ ಅಪರಾಧಿಗೆ ಏನು ಚಿಕಿತ್ಸೆಯನ್ನು ಮಾಡಬೇಕೆಂಬ ಜ್ಞಾನವೇ ಇಲ್ಲದಂತಾಗಿದೆ. ಎಲ್ಲೋ ಹಳ್ಳಿಗಳಲ್ಲಿ ಅಪರೂಪವಾಗಿ ಶಾಸ್ತ್ರಗಳ ಜ್ಞಾನವೂ, ಕಲೆಗಳ ಅಭಿ ರುಚಿಯ ಉಳಿದಿದೆ.
“ಸ್ವಲ್ಪ ದಿನಗಳಲ್ಲಿಯೇ ಚಿಂತೆಯಿಂದ ನರಳಿ ನರಳಿ ನರಸಿಂಹನು ತೀರಿ ಕೊಂಡನು. ಆಮೇಲೆ ಈಗಿನ ರುದ್ರಸಿಂಹನು ರಾಜನಾದನು. ರುದ್ರಸಿಂಹನು ನರಸಿಂಹನಂತೆಯೇ ಸಾಹಿತ್ಯ ದ್ವೇಷಿ ಮತ್ತು ಕಲಾದ್ವೇಷಿ. ಆತನಂತೆಯೇ ಈತನೂ ಸಾಹಸ ಪ್ರಿಯ, ಹಟಮಾರಿ. ತನ್ನ ವಂಶದವರು ಸತ್ಯವಾಕ್ಯ ಪರಿ ಪಾಲಕರೆಂದೂ ತಾನು ಆ ಕೀರ್ತಿಯನ್ನು ಉಳಿಸಿಕೊಳ್ಳಬೇಕೆಂದೂ ಆತನ ಹಟ. ಆತನು ಒಳ್ಳೆಯ ಮಾತನ್ನಾಡಲಿ, ಕೆಟ್ಟ ಮಾತನ್ನಾಡಲಿ ಬಾಯಿಂದ ಹೀಗೆ ಮಾಡುತ್ತೇನೆಂದು ಒಮ್ಮೆ ಹೇಳಿ ಬಿಟ್ಟರೆ ಸಾಕು ಹಾಗೆ ನಡಿಸಿಯೇ ತೀರಬೇಕು. ಅದಕ್ಕಾಗಿ ಆತನು ಏನಾದರೂ ತ್ಯಾಗ ಮಾಡುವನು.
“ಹೀಗೆ ಪ್ರಾರಂಭವಾಗಿ ಬೆಳೆದು ಬಂದ ರಾಜರ ಅನಾದರ ಮತ್ತು ದ್ವೇಷಗಳಿಂದ ಘನಗಿರಿ ರಾಜ್ಯದಲ್ಲಿ ಸಾಹಿತ್ಯವೂ, ಕಲೆಗಳೂ ನಾಶವಾಗುತ್ತಾ ಬಂದವು. ಹಿಂದೆ ಘನಗಿರಿ ರಾಜ್ಯದಲ್ಲಿ ಎಂತಹ ವಿದ್ವಾಂಸರಿದ್ದರು ! ಒಳ್ಳೆಯ ವಿದ್ವಾಂಸನಿಗೆ ಮತ್ತು ಒಳ್ಳೆಯ ಕಲೆಗಾರನಿಗೆ ಎಷ್ಟು ಗೌರವ ಪ್ರೋತ್ಸಾಹಗಳಿದ್ದವು ! ಆಗ ವಿದ್ಯೆಗಳಲ್ಲಿ ಮತ್ತು ಕಲೆಗಳಲ್ಲಿ ಒಂದು ಸತ್ಸಂಪ್ರದಾಯವು ರೂಢಿಯಲ್ಲಿತ್ತು. ಅಭಿರುಚಿಯನ್ನೂ ಅರ್ಹತೆಯನ್ನೂ ಅನುಸರಿಸಿ ವಿದ್ಯೆ ಭೋಧಿಸಲ್ಪಡುತ್ತಿತ್ತು, ಉತ್ತಮ ವಿದ್ಯಾವಂತರಿಗೆ ಮತ್ತು ಕಲೆಗಾರರಿಗೆ ವಿದ್ಯೆಯೂ, ಕಲೆಯೂ ಆರಾಧ್ಯವಾದ ವಸ್ತುಗಳಾಗಿದ್ದವೇ ಹೊರತು ಕೇವಲ ಹೊಟ್ಟೆ ಪಾಡಿಗಾಗಿ ಮಾಡಬೇಕಾದ ಕೆಲಸವಾಗಿರಲಿಲ್ಲ. ಅವರಿಗೆ ಜೀವನಕ್ಕೆ ರಾಜರು ಮಾನ್ಯಗಳನ್ನು ಕೊಟ್ಟಿದ್ದರು. ಎಲ್ಲಿಗೆ ಹೋದರೂ ಆವರಿಗೆ ಗೌರವವಿತ್ತು. ಆದುದರಿಂದ ಅವರು ವಿದ್ಯೆಗಳನ್ನಾಗಲಿ, ಕಲೆಗಳನ್ನಾಗಲಿ, ಕೀಳುಮಟ್ಟಕ್ಕೆ ಇಳಿಸುವುದಕ್ಕೆ ಹೋಗುತ್ತಿರಲಿಲ್ಲ. ಅವರ
ಜೀವನವು ವಿದ್ಯೋಪಾಸನೆ ಮತ್ತು ಕಲೋಪಾಸನೆಗೆ ಮೀಸಲಾಗಿ ಅವರು ಲಾಭಾಲಾಭಗಳ ಮತ್ತು ಸುಖ ದುಃಖಗಳ ಅಲೆದಾಟವಾದ ವ್ಯವಹಾರದಲ್ಲಿ ಮಗ್ನರಾಗುತಿರಲಿಲ್ಲ. ಅವರು ಸತ್ಯವಾದಿಗಳಾಗಿದ್ದು ರಾಜಕೀಯ ಪಕ್ಷಗಳ ಮತ್ತು ಬಡವ ಬಲ್ಲಿದರ ಪಕ್ಷಗಳಲ್ಲಿ ಯಾವ ಕಡೆಯೂ ಬಗ್ಗುತ್ತಿರಲಿಲ್ಲ. ಅವರು ನಿತ್ಯ ತೃಪ್ತರಾಗಿದ್ದರು. ಅವರ ಸತ್ಯ ಸಂಧತೆ ಮತ್ತು ಪ್ರಾಮಾಣಿಕತೆಯಿಂದ ವಿವಾದಾಸ್ಪದವಾದ ವಿಷಯಗಳಲ್ಲಿ ಅವರ ತೀರ್ಮಾನವನ್ನು ಜನರೂ, ರಾಜರೂ ಸಹ ಮನ್ನಿಸುತಿದ್ದರು. ಉತ್ತಮ ವಿದ್ಯಾವಂತರ ಮತ್ತೆ ಕಲಾವಂತರ ಪ್ರಭಾವದ ಎದುರಿನಲ್ಲಿ ಸತ್ವ ಹೀನರಾದ ಅಲ್ಪ ವಿದ್ಯಾವಂತರ ಆಡಂಬರಗಳಾಗಲಿ, ಭ್ರಮೋತ್ಪಾದನೆಗಳಾಗಲಿ ನಿಲ್ಲುತ್ತಿರಲಿಲ್ಲ. ಎಂತಹ ಮೇಧಾವಿಯಾದರೂ ಹೊಸ ಹೊಸ ಪಂಥಗಳನ್ನು ಸೃಷ್ಟಿಸಿ ಜನರಲ್ಲಿ ಭಾವ ಭೇದಗಳನ್ನು ಸೃಷ್ಟಿಸಲು ಅವಕಾಶವಾಗುತ್ತಿರಲಿಲ್ಲ.
“ಆದರೆ ಕೆಲ ಕಾಲದಿಂದ ನಡೆದು ಬಂದ ವಿದ್ಯಾದ್ವೇಷದಿಂದ ಮೇಲಿನ ಲಾಭಗಳು ಪ್ರಜೆಗಳಿಗೆ ಇಲ್ಲದಂತಾಗಿದೆ. ಅಧಿಕ ವಿದ್ಯಾವಂತರ ಮಾನ್ಯಗಳೆಲ್ಲಾ ಕಿತ್ತುಕೊಳ್ಳಲ್ಪಟ್ಟಿವೆ. ಅವುಗಳನ್ನು ಸಾಹಸಿಗಳಿಗೆ ರಾಜರು ಕೊಡುತ್ತಿದ್ದಾರೆ. ಆದುದರಿಂದ ಅಧಿಕ ವಿದ್ಯಾವಂತರು ಅಪ್ರಯೋಜಕರೆನಿಸಿಕೊಂಡು ಕೆಲವರು ಜೀವನಕ್ಕೆ ಬೇರೆ ಬೇರೆ ಮಾರ್ಗಗಳನ್ನು ಹುಡುಕಿಕೊಂಡರು. ಕೆಲವರು ವಿರಕ್ತರಾದರು. ಹಿಂದಿನ ತಲೆಮಾರಿನಲ್ಲಿ ಇದು ಪ್ರಾರಂಭವಾಗಿ ಈ ತಲೆಮಾರಿನವರೆಗೆ ಗುರು ಶಿಷ್ಯ ಸಂಪ್ರದಾಯವಾಗಲಿ, ಸರಿಯಾದ ವಿದ್ಯಾರ್ಜನೆಗೆ ಉತ್ಸಾಹ ಅನುಕೂಲತೆಗಳಾಗಲಿ ಇಲ್ಲದಂತಾಗಿದೆ. ನಾವು ಈಗ ರಾಜ್ಯದಲ್ಲಿ ನೋಡುವುದು ವಿದ್ಯಾ ವಿಹೀನತೆ ಅಥವಾ ಅಲ್ಪ ವಿದ್ಯೆ. ವಿದ್ಯಾರ್ಜನೆಯು ಈಗ ಕೆಲವರಿಂದ ಕೇವಲ ಸ್ವಾರ್ಥಕ್ಕಾಗಿ ಅಥವಾ ಉದರ ಪೋಷಣೆಗಾಗಿ ಮಾಡಲ್ಪಡುತ್ತಿದೆ. ನಿಜವಾದ ವಿದ್ಯೆಯಿಂದ ಮಾನವನು ಹೊಂದಬೇಕಾದ ವಿನಯವು ಹೋಗಿ ಯುವಕರಲ್ಲಿ ಮತ್ತು ತರುಣರಲ್ಲಿ ಅಹಂಕಾರವೂ, ಸ್ವಾರ್ಥವೂ, ತಲೆದೋರಿದೆ. ವಿವೇಕವು ಹೋಗಿ ಅವಿವೇಕವು ಆವರಿಸಿದೆ. ಇವುಗಳಿಂದ ಜನರಲ್ಲಿ ಸಹಕಾರವು ಹೋಗಿ ಸ್ಪರ್ಧೆ ಹೆಚ್ಚುತ್ತಿದೆ. ಇದರಿಂದ ದ್ವೇಷಗಳೂ, ಪಕ್ಷಗಳೂ ಹೆಚ್ಚುತ್ತಿವೆ. ಅಲ್ಪಜ್ಞರೂ, ಸತ್ವ ಹೀನರೂ ಆದ ಮೇಧಾವಿಗಳು ವಿವೇಕವಿಲ್ಲದೆ, ಆತ್ಮ ನಾಶವನ್ನೂ ಅರಿಯದೆ, ಕ್ಷಣಿಕವಾದ ಅವೇಶಗಳನ್ನು ಎಬ್ಬಿಸುತ್ತಾ ಜನರಲ್ಲಿ ಸತ್ಸಂಪ್ರದಾಯಗಳನ್ನು ಕೆಡಿಸಿ, ವಿಭೇದಗಳನ್ನು ಹಬ್ಬಿಸುತ್ತಿದ್ದಾರೆ. ಮತ, ಕುಲ, ಭಾಷೆ ಇವುಗಳಿಗೂ ವಿದ್ಯೆಗೂ ಏನು ಸಂಬಂಧವಿದೆ ? ಇಂತಹದರಲ್ಲಿ ಅಲ್ಪ ವಿದ್ಯಾವಂತರು ಮತ ಕುಲ ಭಾಷೆಗಳ ದುರಭಿಮಾನಗಳನ್ನು ಎಬ್ಬಿಸಿ ಸ್ವಾರ್ಥಕ್ಕಾಗಿ ಪಕ್ಷಗಳನ್ನು ಕಲ್ಪಿಸುತ್ತಿದ್ದಾರೆ. ಗಣಪತಿ ಇಂತಹ ಅಲ್ಪಜ್ಞರಾದವರನ್ನು ಎದುರಿಸಿ ಅವರಿಗೆ ವಿವೇಕವನ್ನು ಹೇಳಲು ಪ್ರಯತ್ನಿಸಿ ರಾಜ ಕೋಪಕ್ಕೆ ಅಹುತಿಯಾಗಿದ್ದಾನೆ.
“ಗಣಪತಿಯ ತಂದೆಯ ಹೆಸರು ‘ಮಹೇಶ್ವರ ಗಣಕ’ ಎಂದು. ಆತನು ಗಣಕರ ವಂಶಕ್ಕೆ ಸೇರಿ ಗಣಿತದಲ್ಲಿ ಒಳ್ಳೆಯ ಜ್ಞಾನವನ್ನು ಹೊಂದಿದ್ದ. ಆತನ ಹಿರಿಯ ಮಗನೇ ಗಣಪತಿ. ಕಿರಿಯ ಮಗನೇ ನಿಮ್ಮ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡುವ ಕುಮಾರನು. ಗಣಪತಿಯೂ, ಕುಮಾರನೂ ಬಹಳ ಬುದ್ದಿ ವಂತರು. ಇವರಿಗೆ ಅಪಾರವಾದ ಜ್ಞಾಪಕಶಕ್ತಿ ಇದೆ. ಮಹೇಶ್ವರ ಗಣಕನ ಮನೆಯಲ್ಲಿ ಅನೇಕ ಗಣಿತಶಾಸ್ತ್ರ ಗ್ರಂಥಗಳಿದ್ದವು. ಅವನ್ನೆಲ್ಲಾ ರಾಜಭಟರು ಸುಟ್ಟು ಬಿಟ್ಟರು. ಆತನು ಕವಿಯೂ ಆಗಿದ್ದನು. ಆದುದರಿಂದ ಗಣಕನಾಗಿ ಆತನಿಗೆ ಕೊಟ್ಟಿದ್ದ ಮಾನ್ಯವನ್ನು ಕಿತ್ತುಕೊಂಡು ಬಿಟ್ಟರು. ಆತನು ತೀರಿ ಹೋದ ಮೇಲೆ ಆತನ ಹೆಂಡತಿಯೇ ಹೇಗೋ ಕಷ್ಟ ಪಟ್ಟು ಇಬ್ಬರು ಮಕ್ಕಳನ್ನೂ ಸಾಕುತ್ತಿದ್ದಾಳೆ.
“ಇತ್ತೀಚೆಗೆ ಕೆಲವರು ಸ್ವಾರ್ಥಿಗಳಾದ ಅಲ್ಪ ವಿದ್ಯಾವಂತರು, ರಾಜನ ದೌರ್ಬಲ್ಯವನ್ನು ದುರುಪಯೋಗ ಮಾಡಿಕೊಂಡು ರಾಜನಿಗೆ “ನೀನು ಅಂಧ್ರನು. ತೆಲುಗು ಮಾತನಾಡುತ್ತೀಯೆ. ಹೇಮಗಿರಿ ರಾಜ್ಯದ ಬಲದೇವನೂ, ಕೃಷ್ಣ ದೇವನೂ ಕನ್ನಡದವರು.” ಎಂದು ಬೋಧಿಸಿ ರಾಜನಿಗೆ ಕನ್ನಡಿಗರ ಮೇಲೆ ದ್ವೇಷಾಸೂಯೆಗಳನ್ನು ಕಲ್ಪಿಸಲು ಪ್ರಯತ್ನ ಮಾಡಿರುತ್ತಾರೆ. ರಾಜನು ಅಲ್ಪ ಬುದ್ಧಿಯಾದುದರಿಂದಲೂ, ವಿದ್ಯಾ ವಿಹೀನನಾದುದರಿಂದಲೂ ಇಂತಹವರ ಮಾತಿಗೆ ಕಿವಿಗೊಟ್ಟಿದ್ದಾನೆ. ಹೇಮಗಿರಿ ರಾಜನ ಮೇಲೆ ಈತನಿಗಿರುವ ಹಗೆ ಈತನಲ್ಲಿ ಆಂಧ್ರನೆಂಬ ದುರಭಿಮಾನವನ್ನು ಹೆಚ್ಚಿಸುತ್ತಾ ಇದೆ.
“ಸ್ವಾರ್ಥಿಗಳ ದುರ್ಬೋಧೆಗೆ ಒಳಗಾಗಿ ಕನ್ನಡ ಮಾತಾಡುವ ಜನರನ್ನು ಶತ್ರು ರಾಜನ ಸಹಕಾರಿಗಳೆಂದು ಶಂಕಿಸುತ್ತಿದ್ದಾನೆ. ಆದುದರಿಂದಲೇ ಕನ್ನಡ ಜನರ ಮೇಲೆ ಇಲ್ಲದ ನಿರ್ಬಂಧಗಳನ್ನು ಹೊರಿಸಿ ಅವುಗಳ ಉಲ್ಲಂಘನೆಗೆ ತೀವ್ರಶಿಕ್ಷೆಯನ್ನು ವಿಧಿಸಿದ್ದಾನೆ. ಗಣಪತಿ ಇಂತಹ ಪಕ್ಷಪಾತವನ್ನು ವಿರೋಧಿಸಿ ರಾಜಾಜ್ಞೆಯನ್ನು ಉಲ್ಲಂಘಿಸಿರುವುದರಿಂದಲೇ ಆತನ ಕಣ್ಣುಗಳನ್ನು ಕಿತ್ತಿರುತ್ತಾರೆ.
“ಇದೆಲ್ಲಾ ಅವಿವೇಕದ ಮತ್ತು ವಿದ್ಯಾಕಲಾ ದ್ವೇಷದ ಘೋರ ಪರಿಣಾಮ ವಾಗಿದೆ. *
ಹೀಗೆ ಹೇಳಿ ನಿಟ್ಟುಸಿರನ್ನು ಬಿಟ್ಟು ಗುರುಗಳು ಸ್ವಲ್ಪ ಹೊತ್ತು ಮೌನ ತಾಳಿದರು. ವಿದ್ಯಾರ್ಥಿಗಳೆಲ್ಲರೂ ಮೌನವಾಗಿ ಕುಳಿತು ಆಲೋಚನಾ ಮಗ್ನರಾಗಿದ್ದರು. ಆ ಮೇಲೆ ಗುರುಗಳು ಅಂದಿನ ಪಾಠವನ್ನು ಮುಂದುವರಿಸಿದರು. ಅವರು ಅಭಿಜ್ಞಾನ ಶಾಕುಂತಲದಲ್ಲಿನ ತೃತೀಯಾಂಕವನ್ನು ಆ ದಿನ ಮುಗಿಸಿದರು.
