ಮಹಾಮಸ್ತಕಾಭಿಷೇಕ
ಲೇಟ್ ಲಂಕಾ ಕೃಷ್ಣಮೂರ್ತಿ
ಧರ್ಮಪ್ರಭ ಮಾಸಪತ್ರಿಕೆ(ಜನವರಿ 1994) ರಲ್ಲಿ ಪ್ರಕಟಿತವಾಗಿದ್ದ ಲೇಖನ
ಇಡೀ ಪ್ರಪಂಚದಲ್ಲೇ ಅತ್ಯಂತ ಎತ್ತರವಾದ ಏಕಶಿಲಾ ವಿಗ್ರಹ ಗೋಮಟೇಶ್ವರ ವಿಗ್ರಹ. ಇದಕ್ಕೆ ಅತಿ ವೈಭವದಿಂದ ನಡೆಸುವ ಮಹಾಮಸ್ತಕಾಭಿಷೇಕವು ಪ್ರತಿ ಒಬ್ಬರೂ ಸಾಧ್ಯವಾದರೆ ಸ್ವತಃ ಖುದ್ದಾಗಿ ಇಲ್ಲದಿದ್ದರೆ ದೂರದರ್ಶನದಲ್ಲಾದರೂ ನೋಡಿ ಆನಂದಿಸಬೇಕಾದ ಭಕ್ತಿ ಭಾವುಕ ಪುಣ್ಯಕಾರ್ಯ. ಇತ್ತೀಚೆಗೆ ನಡೆದ ಈ ವಿಶಿಷ್ಟ ಕಾರ್ಯದ ಹಿನ್ನೆಲೆಯಲ್ಲಿರುವ ಧರ್ಮದ ಮೂಲಭೂತ ಅಂಶಗಳನ್ನು ಕುರಿತು ಆಲೋಚಿಸುವುದೂ, ಅವುಗಳನ್ನು ಆಚರಣೆಗೆ ಅಳವಡಿಸಿಕೊಳ್ಳಲು ಪ್ರಯತ್ನಿಸುವುದೂ ಮಾನವರೆಲ್ಲರ ಕರ್ತವ್ಯವಾಗಿದೆ. ಗೋಮಟೇಶ್ವರ ವಿಗ್ರಹವಿರುವುದು ಶ್ರವಣಬೆಳೊಗೊಳದಲ್ಲಿನ ವಿಂಧ್ಯಗಿರಿಯ ಮೇಲೆ. ಇದು ಜೈನರ ಯಾತ್ರಾಸ್ಥಳ. ಬಾಹುಬಲಿ ಎಂಬ ಜಿನರಾಜನು ಗರ್ವದಿಂದ ತನ್ನ ಯುದ್ಧಕ್ಕೆ ಬಂದ ತನ್ನಣ್ಣ ಭರತನೊಡನೆ ದ್ವಂದ್ವಯುದ್ಧ ಮಾಡಿ ಗೆದ್ದು, ವೈರಾಗ್ಯವನ್ನು ಹೊಂದಿ ಭರತನಿಗೇ ರಾಜ್ಯವನ್ನು ಕೊಟ್ಟು ತಪಸ್ಸು ಮಾಡಲು ಹೊರಟನೆಂಬ ಕಥಯಲ್ಲಿನ ಬಾಹುಬಲಿಯ ವಿಗ್ರಹವೇ ಇದು. ಇದನ್ನು ಗಂಗರಾಜನಾದ ರಾಚಮಲ್ಲ ಸತ್ಯವಾಕ್ಯನ ಮಂತ್ರಿಯಾದ ಚಾವುಂಡರಾಯನು ಕ್ರಿ.ಶ. 943 ರಲ್ಲಿ ಕೆತ್ತಿಸಿದನು.
ಈ ವಿಗ್ರಹದ ಮುಖವು ವ್ಯಸನಪೂರಿತವಾದ ನಗುವಿನಿಂದ ಕೂಡಿದಂತೆ ನಮಗೆ ಭಾಸವಾಗುತ್ತದೆ. ಕಷ್ಟಕಾರ್ಪಣ್ಯಗಳಿಂದ ಕೂಡಿದ ಮಾನವನ ಜೀವನದಲ್ಲಿ ಸಹಾನುಭೂತಿಯನ್ನೂ, ಅಂತರಂಗದಲ್ಲಿ ಶಾಂತಿಯನ್ನೂ ಮತ್ತು ತ್ಯಾಗವನ್ನೂ ಈ ಮೂರ್ತಿ ಎತ್ತಿ ತೋರಿಸುತ್ತಿದೆ ಎಂದು ವಿದ್ವಾಂಸರ ಅಭಿಪ್ರಾಯ. ಇದಲ್ಲದೆ ನಾವು ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ವಿಗ್ರಹದ ಮೈಮೇಲೆ ಹಬ್ಬಿಕೊಂಡಿರುವ ಬಳ್ಳಿಗಳ ಬಾಹುಬಲಿಯ ಶರೀರದಲ್ಲಿ ಬಳ್ಳಿಗಳು ಹಬ್ಬಿಕೊಳ್ಳುವಷ್ಟು ನಿಶ್ಚಲನಾಗಿ ನಿಂತು ತಪಸ್ಸು ಮಾಡಿದನೆಂದು ಈ ಶಿಲ್ಪದಿಂದ ವ್ಯಕ್ತವಾಗುತ್ತದೆ. ಇದಲ್ಲದೆ ಇದು ದಿಗಂಬರ ವಿಗ್ರಹವಾಗಿ ವೈರಾಗ್ಯದ ತುದಿಯ ಹಂತವನ್ನು ಸೂಚಿಸುತ್ತಿದೆ. ಜೈನ ವಿಗ್ರಹವಾದುದರಿಂದ ಅಹಿಂಸಾ ಸಂದೇಶವು ಸಹ ಇದರಿಂದ ಮೂಡಿಬರುತ್ತದೆ. ಬಲಿಷ್ಟವಾದ ಬಾಹುಗಳನ್ನು ಸುಮ್ಮನೆ ಇಟ್ಟುಕೊಂಡಿರುವುದು ಸಹ ಈ ಅಹಿಂಸಾ ತತ್ವವನ್ನು ಸೂಚಿಸುತ್ತದೆ. ನಿರ್ವೇದ, ಕರುಣೆ, ಶಾಂತಿ, ಜ್ಞಾನ, ಸತ್ಯ, ತಪಸ್ಸು, ಅಹಿಂಸೆ, ಭೂತದಯೆ ಮುಂತಾದ ಧರ್ಮದ
ಶಿಖರಪ್ರಾಯವಾದ ಭಾವನೆಗಳ ಪ್ರತೀಕವಾಗಿದೆ ಈ ಶಿಲಾಮೂರ್ತಿ.
ಅದರಲ್ಲೂ ಧರ್ಮಕ್ಕೆಲ್ಲಾ ಶಿಖರಪ್ರಾಯವಾಗಿರುವ ಅಹಿಂಸಾಚರಣೆಗೆ ಅಂದಿನಿಂದ ಇಂದಿನವರೆಗೂ ಅತ್ಯಂತ ಮಾನ್ಯತೆಯನ್ನು ಕೊಟ್ಟು ಆಚರಣೆಯಲ್ಲಿಟ್ಟುಕೊಂಡಿರುವ ಜೈನಧರ್ಮವು ಪ್ರಪಂಚದ ಇತರ ಎಲ್ಲ ಧರ್ಮಗಳಿಗಿಂತಲೂ ಹೆಚ್ಚು ಮುಂದುವರಿದಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. “ಅಹಿಂಸಾ ಪರಮೋ ಧರ್ಮಃ” ಎಂಬುದಕ್ಕೆ ಜೈನಧರ್ಮ ಸಾಹಿತ್ಯ ಅತ್ಯುತ್ತಮ ನಿದರ್ಶನವಾಗಿರುವುದು ಲೋಕವಿದಿತ.