ಪರಮ ಸತ್ಯ
(ದಿನಾಂಕ 1 – 8- 1996 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಈ ವಿಶಾಲವಾದ ವಿಶ್ವದಲ್ಲಿ ನಡೆಯುವ ಎಲ್ಲ ಕೆಲಸಗಳೂ ಪ್ರಕೃತಿ ನಿಯಮಗಳಿಗನುಸಾರವಾಗಿ ನಡೆಯುತ್ತಿವೆ ಎಂಬುದು ಪರಮ ಸತ್ಯ. ನಿರ್ಜೀವ ಪದಾರ್ಥಗಳಲ್ಲದೆ ಜೀವಸಹಿತವಾದ ಪ್ರಾಣಿಗಳಲ್ಲಿ ಸಹ ನಡೆಯುವ ಎಲ್ಲ ಕೆಲಸಗಳೂ ಪ್ರಕೃತಿ ನಿಯಮಗಳಿಗೆ ಒಳಪಟ್ಟಿವೆ. ಪ್ರಾಣಿಗಳಲ್ಲಿ ಶ್ರೇಷ್ಠವಾದ ಮಾನವರ ಮನಸ್ಸಿನ ಕೆಲಸವು ಸಹ ಪ್ರಕೃತಿ ನಿಯಮಗಳಿಗೆ ಒಳಪಟ್ಟಿದೆ ಎಂಬುದು ಪರಮ ಸತ್ಯ. ಆದರೆ ಮಾನವರಾದ ನಾವು ಹೀಗೆ ಯೋಚಿಸದೆ “ಅವನು ಹಾಗೆ ಮಾಡಿದ. ನಾನು ಹೀಗೆ ಮಾಡುತ್ತೇನೆ. ಅವನು ಕೆಟ್ಟವನು. ಇನ್ನೊಬ್ಬನು ಒಳ್ಳೆಯವನು.” ಎಂಬುದಾಗಿ ಭಾವಿಸುತ್ತೇವೆ. ಆದರೆ ಇದು ಪರಮಸತ್ಯವಲ್ಲ. ಈ ದೇಹದಲ್ಲಿ ನಾವಿರುವುದು ಸ್ವಲ್ಪಕಾಲ ಮಾತ್ರ. ಮೃತ್ಯುವನ್ನು ಗೆದ್ದವನು ಯಾರೂ ಇಲ್ಲ. ಪ್ರಕೃತಿಯ ಹಿಂದೆ ಇದ್ದು ಪ್ರಕೃತಿಯನ್ನು ನಡೆಸುತ್ತಿರುವ ಪರಮಾತ್ಮನೊಬ್ಬನೇ ಶಾಶ್ವತನಾಗಿರುವವನು. ನಮ್ಮಲ್ಲಿರುವ ಮೂಲಭೂತವಾದ ಆತ್ಮ ಸಹ ಪರಮಾತ್ಮನ ಅಂಶವಾಗಿ ಶಾಶ್ವತವಾಗಿದೆ. ಆದರೆ ನಾವು ಆತ್ಮಜ್ಞಾನವನ್ನು ಬಿಟ್ಟು ಯಾವಾಗಲೂ ತಾತ್ಕಾಲಿಕ ಸತ್ಯವಾದ ಮಾಯೆಯೊಳಗಿರುವವರೆಗೂ ನಾವು ಧರ್ಮವನ್ನನುಸುತ್ತಿರಬೇಕು. ಧರ್ಮವನ್ನು ತ್ರಿಕರಣ ಶುದ್ಧಿಯಿಂದ ಅನುಸರಿಸುತ್ತ ಪರಮಸತ್ಯದ ಜ್ಞಾನವನ್ನು ಸಹ ಆರ್ಜಿಸಬೇಕು.
ಪರಮಸತ್ಯದಲ್ಲಿ ಯಾರೂ ಒಳ್ಳೆಯವರಲ್ಲ. ಯಾರೂ ಕೆಟ್ಟವರಲ್ಲ. ಎಲ್ಲರೂ ಪರಮಾತ್ಮನ ಲೀಲೆಯಾದ ಪ್ರಕೃತಿ ನಿಯಮಗಳಂತೆ ನಡೆಯುತ್ತದೆ. ಭಿನ್ನ ಭಿನ್ನ ಮತಗಳಲ್ಲಿ ಹೇಳಿರುವ ಭಿನ್ನವಾದ ವಿಚಾರಗಳು ಸಹ ಆ ಪರಮಾತ್ಮನ ಲೀಲೆಯ ಸ್ವರೂಪವೆಂದು ನಾವು ಭಾವಿಸಬೇಕು.
ಸಂಧ್ಯಾವನೆಯಲ್ಲಿ ಬೆಳಗ್ಗೆ ಹೇಳುವ ಮಂತ್ರಗಳಲ್ಲಿ “ಸೂರ್ಯೇ ಜ್ಯೋತಿಷಿ ಜುಹೋಮಿ ಸ್ವಾಹಾ” ಎಂದು ಹೇಳುತ್ತೇವೆ. ಬೆಳಗ್ಗೆ ನಾವು ಮಾಡುವ ಕೆಲಸಗಳೆಲ್ಲವೂ ಸೂರ್ಯಕಾಂತಿ ಇರುವುದರಿಂದ ನಡೆಯುತ್ತಿವೆ. ಈ ಸೂರ್ಯಕಾಂತಿಯಲ್ಲಿ ನಾವು ಮಾಡುವ ಕೆಲಸಗಳು ಧರ್ಮಸಹಿತವಾಗಿರಬೇಕು. ಸಾಯಂಕಾಲದ ಸಂಧ್ಯಾವನೆಯಲ್ಲಿ ನಾವು ಹೇಳುವ ಮಂತ್ರ “ಸತ್ಯೇ ಜ್ಯೋತಿಷಿ ಜುಹೋಮಿ ಸ್ವಾಹಾ” ಎಂಬುದು ಸಾಯಂಕಾಲವಾದ ಮೇಲೆ ನಾವು ಕತ್ತಲಲ್ಲಿ ನಿದ್ರೆ ಹೋಗುತ್ತೇವೆ. ಆದರೆ ಈ ರಾತ್ರಿಯಲ್ಲಿ ನಾವು ಪರಮ ಸತ್ಯವನ್ನುನೋಡಬೇಕು ಎಂಬುದೇ ಮೇಲಿನ ಮಂತ್ರದ ಉದ್ದೇಶ. ಆಗ ನಮ್ಮ ಮನಸ್ಸಿನಲ್ಲಿ ಎಲ್ಲವನ್ನೂ ಪರಮಾತ್ಮನ ಲೀಲೆಯನ್ನಾಗಿ ಭಾವಿಸುತ್ತ ಯಾವ ಮಾನವರನ್ನು ದ್ವೇಶಿಸದೆ, ಎಲ್ಲರನ್ನೂ ಪರಮಾತ್ಮನ ಆಟದ ಬೊಂಬೆಗಳಂತೆ ಭಾವಿಸಿ ಪರಮಾನಂದವನ್ನನುಭವಿಸಬೇಕು.
ಪರಮಾನಂದಕ್ಕೆ ಪರಮಾತ್ಮನ ಭಾವನೆ ಬಿಟ್ಟರೆ ಬೇರೆ ಮಾರ್ಗವಿಲ್ಲ.
- ಲಂಕಾ ಕೃಷ್ಣಮೂರ್ತಿ