(ದಿ. 1-6-1986 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಓದುಗರ ಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಪ್ರಶ್ನೆ:- “ಓಂ” ಕಾರವು ಪರಬ್ರಹ್ಮವೆಂದು ಶೃತಿಯು ಸಾರುತ್ತದೆ.
“ಸರ್ವದ್ವಾರಾಣಿ ಸಂಯಮ್ಯ ಮನೋ ಹೃದಿ ವಿರುಧ್ಯ ಚ I
ಮೂರ್ಧ್ನ್ಯಾಧಾಯಾತ್ಮನಃ ಪ್ರಾಣಮಾಸ್ಥಿತೋ ಯೋಗಧಾರಣಾಮ್ II
ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ ಮಾಮನುಸ್ಮರನ್ I
ಯಃ ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಮರಮಾಂ ಗತಿಮ್ II
(ಭಗವದ್ಗೀತಾ : ಅಧ್ಯಾಯ ೮. ೧೨ ಮತ್ತು ೧೩ ನೇ ಶ್ಲೋಕಗಳು)
“ಸರ್ವೇಂದ್ರಿಯಗಳನ್ನು ಸಂಯಮಿಸಿ ಮನಸ್ಸನ್ನು ಹೃದಯದಲ್ಲಿ ನಿರೋಧಿಸಿ, ತನ್ನ ಪ್ರಾಣವಾಯುವನ್ನು ಶಿರಸ್ಸಿನಲ್ಲಿ ನಿಲ್ಲಿಸಿ, ಯೋಗಧಾರಣೆಯಲ್ಲಿ ಸ್ಥಿತನಾಗಿ ‘ಓಂ’ ಎಂಬ ಏಕಾಕ್ಷರವನ್ನು ಅಂದರೆ ಓಂ ಎಂಬ ಬ್ರಹ್ಮವನ್ನು ಉಚ್ಚರಿಸುತ್ತಾ, ನನ್ನನ್ನು ಸ್ಮರಿಸುತ್ತಾ ಯಾವನು ದೇಹವನ್ನು ಬಿಟ್ಟು ಹೋಗುತ್ತಾನೆಯೋ ಅವನು ಪರಮ ಗತಿಯನ್ನು ಹೊಂದುತ್ತಾನೆ” ಹೀಗೆಂದು ಗೀತಾಚಾರ್ಯನು ಅಪ್ಪಣೆ ಕೊಡಿಸಿರುವನು.
‘ಓಂ ಕಾರ ಪಂಜರ ಶುಕೀಂ’
ಓಂ ಕಾರವೆಂಬ ಪಂಜರದೊಳಗಿನ ಗಿಣಿ ಎಂದು ದೇವಿಯನ್ನು ಆಚಾರ್ಯರು ಧ್ಯಾನಿಸುವರು. ಹೀಗಿದ್ದರೂ, ಹೇಗೆ ಇದ್ದರೂ ನಮ್ಮಲ್ಲಿ ಅನೇಕ ಹಿರಿಯರು ಸ್ತ್ರೀಯರಿಗೆ ‘ಓಂ’ ಕಾರದಿಂದ ದೂರವಿಟ್ಟಿರುವರು. ಶ್ರೀ ಕೃಷ್ಣನು ಸ್ತ್ರೀ ಮತ್ತು ಪುರುಷರಿಗೆ ಭಿನ್ನ ಭಿನ್ನವಾದ ಉಪದೇಶವಿತ್ತನೇ? ಅಥವಾ ಬೇರಾವುದಾದರೂ ಅಧಾರವಿರುವುದೇ? ಸ್ತ್ರೀಯಾದ ನನಗೆ, ಭಗವಂತನ ಆರಾಧನೆಯ ವಿಷಯದಲ್ಲೂ ಸ್ತ್ರೀಯರನ್ನು ಸಮಾಜವು ಕೆಳಗಿನ ಸ್ಥಾನದಲ್ಲಿಟ್ಟಿರುವುದೇ ಎಂಬುದಕ್ಕೆ ಸಮಾಧಾನ ದೊರೆಯಲೆಂದು ಪ್ರಾರ್ಥಿಸುತ್ತೇನೆ.
ಉತ್ತರ:- ಓಂಕಾರವು ಪರಬ್ರಹ್ಮವೆಂದು ಸಾರುವ ಶೃತಿಯಲ್ಲಿ ಓಂಕಾರದ ಉಚ್ಚಾರಣೆ ಮತ್ತು ಉಪಾಸನೆಯ ವಿಷಯದಲ್ಲಾಗಲಿ ಸ್ತ್ರೀಯರಿಗೆ ಅಧಿಕಾರವಿಲ್ಲವೆಂದು ಹೇಳಿಲ್ಲ. ಸ್ತ್ರೀಯರಿಗೂ ಉಪನಯನ ಸಂಸ್ಕಾರ ಮತ್ತು ವೇದಾಧ್ಯಯನಗಳಿದ್ದವು. ಇದು ಎಲ್ಲರೂ ಒಪ್ಪಿರುವ ವಿಷಯ. ಆದರೆ ಸ್ತ್ರೀಯರಿಗೆ ಉಪನಯನ ಮಾಡುವ ಪದ್ಧತಿ ಆಮೇಲೆ ತಪ್ಪಿಹೋಯಿತು. ಆಗ ಅವರಿಗೆ ಪೌರಾಣಿಕವಾದ ಉಪಾಸನಾ ಪದ್ಧತಿಯಲ್ಲಿ ಮಾತ್ರ ಅಧಿಕಾರವನ್ನು ಕೊಟ್ಟರು. “ಹ್ರೀಂ” ಎಂಬುದು ಓಂಕಾರದಷ್ಟೇ ಅರ್ಥಗರ್ಭಿತವಾದ ಮಂತ್ರ. ಇದನ್ನು ಉಚ್ಚರಿಸುವುದಕ್ಕಾಗಲಿ, ಉಪಾಸನೆ ಮಾಡುವುದಕ್ಕಾಗಲಿ ಯಾವ ಮಹಿಳೆಗೂ ಅಡ್ಡಿ ಇಲ್ಲ. ಅಲ್ಲದೆ ಪೌರಾಣಿಕಗಳಾದ ಅನೇಕ ಸ್ತೋತ್ರಗಳೂ, ಉಪಾಸನಾ ಕ್ರಮಗಳೂ ವೇದ ಮಂತ್ರಗಳಷ್ಟೇ ಪ್ರಯೋಜನಕರವಾಗಿವೆ.
ವೇದ ಮಂತ್ರಗಳ ಉಚ್ಚಾರಣೆಗೆ ಅನೇಕ ನಿಯಮಗಳಿವೆ. ವರ್ಣದಲ್ಲಾಗಲಿ ಸ್ವರದಲ್ಲಾಗಲಿ ಸ್ವಲ್ಪ ವ್ಯತ್ಯಾಸವುಂಟಾದರೆ ಉಪಾಸಕನನ್ನು ವೇದಮಂತ್ರಗಳು ಬಾಧಿಸುತ್ತವೆ. ಪೌರಾಣಿಕ ಮಂತ್ರಗಳಲ್ಲಿ ಇಂತಹ ನಿಯಮವಿಲ್ಲ. ಭಕ್ತಿ ಜ್ಞಾನಗಳಿಂದ ಅರ್ಥಭಾವನೆ ಮಾಡಿದರೆ ಸಾಕು. ದೇವರ ಕೃಪೆಯನ್ನು ಪಡೆಯಲು, ಸಂಸ್ಕೃತಿಯನ್ನು ಪಡೆಯಲು, ಪುಣ್ಯ ಸಂಪಾದಿಸಲು, ಜ್ಞಾನಾರ್ಜನೆ ಮಾಡಲು ಪೌರಾಣಿಕವಾದ ಉಪಾಸನೆ ವೈದಿಕವಾದ ಉಪಾಸನೆಯಷ್ಟೇ ಫಲಕಾರಿ. ಆದರೆ ಮಂತ್ರಶಕ್ತಿಯಿಂದ ಮಾಡಬಹುದಾದ ಅದ್ಭುತಗಳ ವಿಷಯದಲ್ಲಿ ಮಾತ್ರ ವೇದಮಂತ್ರಗಳು ಒಂದು ಪ್ರತ್ಯೇಕ ಸ್ಥಾನವನ್ನು ಹೊಂದಿವೆ. ವೇದಮಂತ್ರದಲ್ಲಿ ಆನುಪೂರ್ವಿ ಎಂಬ ಒಂದು ನಿಯಮವಿದೆ. ಇದರಂತೆ ಅರ್ಥಕ್ಕೆ ಭಂಗವಿಲ್ಲವೆಂದು ಮಂತ್ರದಲ್ಲಿನ ಪದಗಳ ಕ್ರಮವನ್ನು ಬದಲಾಯಿಸುವುದಕ್ಕೆ ಅವಕಾಶವಿಲ್ಲ. ಹೀಗೆ ವೇದ ಮಂತ್ರಗಳ ಉಚ್ಚಾರಣೆಯ ಮತ್ತು ಅಧ್ಯಯನದ ನಿಯಮಗಳು ಅನೇಕವಿವೆ, ಅವುಗಳನ್ನು ಆಳವಾಗಿ ಅಧ್ಯಯನ ಮಾಡಿದರೆ ವೈದಿಕ ಉಪಾಸನೆ ಲೌಕಿಕ ಹಿತಾರ್ಥಕ್ಕಾಗಿ ಕೆಲವು ಶಕ್ತಿಗಳನ್ನು ಪಡೆಯಲು ಬೆಳೆಸಿಕೊಂಡ ಒಂದು ಮಹಾ ವಿಜ್ಞಾನವೆಂದು ತಿಳಿದು ಬರುತ್ತದೆ.
ಇಷ್ಟು ನಿಯಮಗಳನ್ನು ಅನುಸರಿಸಲು ಶಕ್ತಿ ಉಳ್ಳ ಹೆಂಗಸರಿದ್ದ ಕಾಲದಲ್ಲಿ ಅವರಿಗೆ ಪೂರ್ಣ ಅಧಿಕಾರವಿತ್ತು. ಕಾಲ ಬದಲಾವಣೆಯಾಗಿ ಮತ್ತು ವೈದಿಕಮತವು ಇತರ ಜನಾಂಗಗಳಲ್ಲಿ ವ್ಯಾಪ್ತವಾಗುವ ಸಂದರ್ಭದಲ್ಲಿ ಅನೇಕ ಸ್ತ್ರೀಯರಿಗೆ ಈ ನಿಯಮಗಳನ್ನು ಪರಿಪಾಲಿಸುವ ಶಕ್ತಿ ಇಲ್ಲವೆಂದು ತಿಳಿದ ಮಹರ್ಷಿಗಳು ಅವರಿಗೆ ವೇದಾಧಿಕಾರವನ್ನು ತಪ್ಪಿಸಿದರು. ಆಗಲೂ ಕೆಲವರು ಮಹಿಳಿಯರಿಗೆ ಶಕ್ತಿ ಇದ್ದಿರಬಹುದು. ಆದರೆ ಧರ್ಮದಲ್ಲಿ ಅನೇಕ ಜನರಿಗೆ ಅನ್ವಯಿಸುವುದನ್ನು ಉಳಿದ ಕೆಲವರೂ ಅನುಸರಿಸಬೇಕಾಗುವ ಸಂಭವವುಂಟಾಗುತ್ತದೆ. ಬಹುಜನ ಹಿತಕರವಾದ ನಿಯಮಗಳನ್ನು ಎಲ್ಲರೂ ಒಪ್ಪಬೇಕಾಗುತ್ತದೆ. ಬಹುಜನ ಹಿತಕ್ಕೆ ಸಹಕರಿಸುವುದು ಬಹಳ ದೊಡ್ಡ ಧರ್ಮ. ಈ ರಹಸ್ಯ ಅನೇಕರಿಗೆ ಅರ್ಥವಾಗದೆ ಹಕ್ಕುಗಳಿಗಾಗಿ ಸ್ಪರ್ಧಿಸುತ್ತಾರೆ. ಸಂಸ್ಕೃತ ನಾಟಕಗಳಲ್ಲಿ ಸ್ತ್ರೀ ಪಾತ್ರಗಳಿಗೆ ಪ್ರಾಕೃತ ಭಾಷೆಯನ್ನು ಬಳಸುವ ಪದ್ಧತಿಯಿರುವುದರಿಂದ ಆ ಕಾಲದ ಸ್ತ್ರೀಯರಿಗೆ ಉಚ್ಚಾರಣೆಯಲ್ಲಿ ಸಾಕಷ್ಟು ಅಧಿಕಾರವಿರಲಿಲ್ಲವೆಂದು ತಿಳಿದು ಬರುವುದಿಲ್ಲವೇ !
ಇಂದಿನ ವೈಜ್ಞಾನಿಕಯುಗದಲ್ಲಿ ಸ್ತ್ರೀಪುರುಷರು ಸರಿಸಮಾನವಾಗಿ ವಿದ್ಯಾವಂತರಾಗಿದ್ದಾರೆ; ಅತ್ಯುತ್ತಮವಾದ ವರ್ಣಧರ್ಮವೂ, ಜಾತಿಧರ್ಮವೂ ಮಾಯವಾಗಿ ಬಿಟ್ಟಿವೆ. ಇಂದು ಇಂತಹವರಿಗೆ ಅರ್ಹತೆ ಇದೆ. ಇಂತಹವರಿಗಿಲ್ಲವೆಂದು ಜಾತಿಯ ಮೇಲೆ ನಿರ್ಣಯಿಸುವ ಕಾಲವಲ್ಲ. ಇಂದು ವೇದೋಚ್ಚಾರಣೆಗೆ ಅರ್ಹರಾದ ಪುರುಷರೇ ಇದ್ದಾರೋ ಇಲ್ಲವೋ. ಆದುದರಿಂದ ಇಂದು ಸ್ತ್ರೀಯರ ಅರ್ಹತೆಯ ಪ್ರಶ್ನೆಯೇ ಉದ್ಭ್ವಿಸುವುದಿಲ್ಲ. ಅಲ್ಲದೆ ಅರಣ್ಯಗಳಿಗೂ ಆಶ್ರಮಗಳಿಗೂ ಅಧಿಕಾರವುಳ್ಳವನ ಬಾಯಿಗೂ ಸೀಮಿತವಾಗಿರಬೇಕಾದ ವೇದ ಮಂತ್ರಗಳನ್ನು ಈ ದಿನ ಅಚ್ಚು ಹಾಕಿಸಿ ಎಂತೆಂಥವರೂ ಬಳಸುತ್ತಿದ್ದಾರೆ. ತಾವು ಕೇಳಿರುವ ಪ್ರಶ್ನೆಗೆ ಸಮಾಧಾನ ತಮ್ಮ ಉದ್ದೇಶದ ಮೇಲೆ ನಿಂತಿದೆ. ವೈದಿಕ ಮಂತ್ರಗಳ ಶಕ್ತಿಯನ್ನು ಪಡೆಯುವ ಉದ್ದೇಶವಾದರೆ ಇದರಲ್ಲಿ ಆಸಕ್ತಿಯಿರುವ ಸ್ತ್ರೀಪುರುಷರೆಲ್ಲರೂ ಸೇರಿ ಈ ವಿಷಯದಲ್ಲಿ ಆಳವಾದ ಪರಿಶೋಧನೆಯನ್ನು ಮಾಡಿ ವೈಜ್ಞಾನಿಕವಾದ ಮತ್ತು ಪ್ರಯೋಗಸಿದ್ಧವಾದ ತತ್ವಗಳನ್ನು ಕಂಡುಹಿಡಿದು ವೇದ ಮಂತ್ರಗಳಿಗೆ ಅರ್ಹವಾದ ಮಾನವ ತಳಿಗಳನ್ನು ಅರಣ್ಯಗಳಲ್ಲೋ ಆಶ್ರಮಗಳಲ್ಲೋ ಬೆಳೆಸಿ ಆಮೇಲೆ ತದನುಗುಣವಾಗಿ ಅರ್ಹರಾದವರು ಉಪಾಸನೆಗೆ ತೊಡಗಬಹುದು. ಉದ್ದೇಶವು ಕೇವಲ ಪರಮಾತ್ಮನನ್ನು ಭಕ್ತಿ ಭಾವದಿಂದ ಸ್ಮರಿಸಿ, ಜ್ಞಾನವನ್ನೂ ಮೋಕ್ಷವನ್ನು ಪಡೆಯುವುದಾದರೆ, ಇಂದಿನ ಸ್ತ್ರೀ ಪುರುಷರೆಲ್ಲರೂ ಸ್ವರಸಹಿತವಾದ ವೇದ ಮಂತ್ರಗಳ ಉಪಾಸನೆಗೆ ಕೈಹಾಕದೆ, ಅದೇ ಮಂತ್ರಗಳನ್ನೇ ಶ್ಲೋಕಗಳೆಂದೋ ವಾಕ್ಯಗಳೆಂದೋ ಭಾವಿಸಿಕೊಂಡು ಅರ್ಥಭಾವನೆಯೊಂದಿಗೆ ಪೌರಾಣಿಕ ಶ್ಲೋಕಗಳಂತೆ ಪಾರಾಯಣ ಮಾಡಿಕೊಳ್ಳಬಹುದು. ಈ ದೃಷ್ಟಿಯಿಂದ ಓಂಕಾರದ ಅರ್ಥಭಾವನೆಯೊಂದಿಗೆ ಹೆಂಗಸರೂ ಸೇರಿ ಎಲ್ಲರೂ ಅದನ್ನು ಉಪಾಸನೆ ಮಾಡಬಹುದು. ಕ್ರಮ ತಿಳಿಯದವರು ಇಲ್ಲಿ ಯೋಗವನ್ನು ಸೇರಿಸದೆ ಕೇವಲ ಭಕ್ತಿಭಾವದಿಂದ ಉಪಾಸನೆ ಮಾಡುವುದು ಒಳ್ಳೆಯದು. ‘ಓಂ’ ಎಂಬುದಕ್ಕೆ ಸಂಸ್ಕೃತ ಭಾಷೆಯಲ್ಲಿ ಹೌದು ಎಂಬ ಅರ್ಥವೂ ಇದೆ. ‘ಓಂ’ ಎಂಬುದು ತಾವು ಹೇಳಿರುವ ಗೀತಾ ಶ್ಲೋಕದಲ್ಲೂ ಇದೆ. ಆದುದರಿಂದ ಸ್ತ್ರೀಯರು ‘ಓಂ’ ಎಂಬ ಪದವನ್ನೇ ಉಚ್ಚರಿಸಬಾರದೆಂಬ ನಿಷೇಧವೆಲ್ಲೂ ಇಲ್ಲ.
– ಲಂಕಾ ಕೃಷ್ಣಮೂರ್ತಿ.