ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 38
ಯತಿ ಧರ್ಮ
(ದಿ. 1-11-1991 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಒದುಗರಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಪ್ರಶ್ನೆ1 :- ನಾನು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಒಬ್ಬ ಉಪಾಧ್ಯಾಯರು ಇದ್ದರು. ಅವರು ಆಗಾಗ್ಗೆ “ನಾನು ಮಾಡಿದಂತೆ ಮಾಡಬೇಡಿ, ನಾನು ಹೇಳಿದಂತೆ ಮಾಡಿ” ಎಂದು ಹೇಳುತ್ತಿದ್ದರು. ಅಂದರೆ ಅವರು ಶಾಲೆಯಲ್ಲಿ ಬೀಡಿ ಸೇದುತ್ತಿದ್ದರು, ಕೆಲವು ಸಮಯದಲ್ಲಿ ಟೇಬಲ್ಲಿನ ಮೇಲೆ ತಲೆ ಇಟ್ಟು ನಿದ್ರೆ ಮಾಡುತ್ತಿದ್ದರು, ಬೇರೆಯವರು ಹೇಳಿದ ಚಾಡಿ ಮಾತುಗಳನ್ನು ಕೇಳಿ ಅನಾವಶ್ಯಕವಾಗಿ ಉತ್ತಮರಿಗೆ ಏಟು ಕೊಡುತ್ತಿದ್ದರು – ಇತ್ಯಾದಿ. ಇದೇ ರೀತಿ ಕೆಲವು ಮಠಾದಿಪತಿಗಳು ಮತ್ತು ಸ್ವಾಮಿಗಳು ಕಾರ್ಯತಃ ಮಾಡುವುದು ಒಂದು ನುಡಿಯುವುದೇ ಒಂದು ಅಂದರೆ ಬಾಯಿಯಲ್ಲಿ ಹೇಳುವುದು ಒಂದಾದರೆ ಕೃತಿಯಲ್ಲಿ ಮಾಡುವುದೇ ಒಂದು, ಈ ರೀತಿ ನಡೆದುಕೊಳ್ಳುತ್ತಿರುವ ಕಾವಿಬಟ್ಟೆ ಧರಿಸಿರುವ ಸ್ವಾಮಿಗಳಿಗೆ ಪಾದ ಮುಟ್ಟಿ ನಮಸ್ಕಾರ ಮಾಡಬಹುದೇ?
ಪ್ರಶ್ನೆ 2. ವಿರಕ್ತಮಠ, ವಿರಕ್ತ ಸ್ವಾಮಿಗಳು ಎಂದರೆ ಏನು? ಹಾಗೂ ಅವರ ಕರ್ತವ್ಯಗಳೇನು? ಅವರು ಲೌಕಿಅ ವ್ಯವಹಾರಗಳನ್ನು ಅಂದರೆ, ಪ್ರಾಪಂಚಿಕ, ಲೇವಾದೇವಿ, ಭೂಮಿಕಗಳಿಕೆ, ಹೊನ್ನು ಗಳಿಕೆ ಇತ್ಯಾದಿ ಮಾಡಬಹುದೇ ಎಂಬುವುಗಳನ್ನು ವಿವರವಾಗಿ ತಿಳಿಸಬೇಕಾಗಿ ಪ್ರಾರ್ಥನೆ.
ಉತ್ತರ:-
ಪ್ರಶ್ನೆ 1:- ಕೆಳದಿ ಬಸವಭೂಪಾಲ ವಿರಚಿತವಾದ ಶಿವತತ್ವ ರತ್ನಾಕರವೆಂಬ ಗ್ರಂಥದಲ್ಲಿ ಯತಿ ಧರ್ಮಗಳನ್ನು ಕುರಿತು ಹೇಳುವ ಸಂದರ್ಭದಲ್ಲಿ ಹೀಗೆ ಉಕ್ತವಾಗಿದೆ:-
ಯದಾ ಮನಸಿ ವೈರಾಗ್ಯಂ ಜಾತಂ ಸರ್ವೇಷುವಸ್ತು ಷು I
ತದೈವ ಸನ್ಯಸೇದ್ವಿದ್ವಾನ್ ಅನ್ಯಥಾ ಪತಿತೋಭವೇತ್ II
ಮನಸ್ಸಿನಲ್ಲಿ ಎಲ್ಲ ವಸ್ತುಗಳ ವಿಷಯದಲ್ಲಿ ವೈರಾಗ್ಯವು ಹುಟ್ಟಿದಾಗ ಮಾತ್ರ ವಿದ್ವಾಂಸರು ಸಂನ್ಯಾಸ ದೀಕ್ಷೆಯನ್ನು ಪಡೆಯಬೇಕು. ಇಲ್ಲದಿದ್ದರೆ ಆತನು ಪತಿತನಾಗುತ್ತಾನೆ.
ಅದೇ ಗ್ರಂಥದಲ್ಲಿ ಯಾರು ನಮಸ್ಕಾರ ಯೋಗ್ಯರಲ್ಲವೆಂದು ಹೇಳುವ ಸಂದರ್ಭದಲ್ಲಿ ಹೀಗೆ ಹೇಳಿರುತ್ತೆ.
ಸ್ತೇನಂ ಚ ಕಿತವಂ ಚೈವ ಕದಾಚಿನ್ನಾ ಭಿವಾದಯೇತ್
ಪಾಷಂಡಂ ಪತಿತಂ ವ್ರಾತ್ಯಂ ತಥಾ ನಕ್ಷತ್ರ ಜೀವಿನಮ್
ಕಳ್ಳನನ್ನೂ, ಮೋಸ ಮಾಡುವವನನ್ನೂ ಜೂಡಾಡುವವನನ್ನೂ, ನಾಸ್ತಿಕನನ್ನೂ ಪತಿತನನ್ನು(ನಿಷಿದ್ಧಕರ್ಮಮಾಡಿ ಪತಿತನಾದವನು) ಆಚಾರಹೀನನನ್ನೂ ಜ್ಯೌತಿಷದಿಂದ ಜೀವನ ಮಾಡುವವನನ್ನೂ ಯಾವಾಗಲೂ ನಮಸ್ಕರಿಸಬಾರದು.
ತಾವು ಹೇಳಿದಂತಹ ಮಠಾಧಿಪತಿಗಳೂ, ಸ್ವಾಮಿಗಳೂ, ವೈರಾಗ್ಯವಿಲ್ಲದೆ ಕಾವಿ ಉಟ್ಟಿರುವುದರಿಂದ ಪತಿತರು. ಅವರು ನಮಸ್ಕಾರ ಯೋಗ್ಯರಲ್ಲವೆಂದು ಮೇಲಿನ ಶ್ಲೋಕಗಳ ಅಭಿಪ್ರಾಯ.
ಪ್ರಶ್ನೆ 2.:- ಸನ್ಯಾಸಾಶ್ರಮ ಧರ್ಮಗಳನ್ನು ತಿಳಿಸುವ ಮನುಸ್ಮೃತಿಯ ಶ್ಲೋಕಗಳು ಹಿಂದಿನ ಸಂಚಿಕೆಯಲ್ಲಿ ಪ್ರಕಟವಾಗಿವೆ. ಶಿವತತ್ವ ರತ್ನಾಕರದಲ್ಲಿನ ಕೆಳಗಿನ ಶ್ಲೋಕಗಳು ಸಹ ಯತಿ ಧರ್ಮಗಳನ್ನು ತಿಳಿಸುತ್ತಿವೆ:-
ವೇದಾಂತಾಭ್ಯಾಸ ನಿರತಃ ಶಾಂತೋ ದಾಂತೋ ಜಿತೇಂದ್ರಿಯಃ II
ಶಮಾದಿ ಗುಣ ಸಂಯುಕ್ತಃ ಕಾಮಕ್ರೋಧವಿ ವರ್ಜಿತಃ I
ನಗ್ನೋವಾ ಜೀರ್ಣಕೌಪೀನೋಭವೇನ್ಮುಂಡೀಯತಿರ್ದ್ವಿಜಾಃ II
ಸಮಃ ಶತ್ರೌಚ ಮಿತ್ರೇಚ ತಥಾ ಮಾನಾಪಮಾನಯೋಃ
ಏಕರಾತ್ರಂ ವಸೇದ್ಗ್ರಾಮೇ ತ್ರಿರಾತ್ರಂನಗರೇತಥಾ II
ಯಾವಾಗಲೂ ಪರಮಾತ್ಮನ ಚಿಂತೆಯಲ್ಲಿರಬೇಕು. ಶಾಂತನಾಗಿರಬೇಕು. ಮನೋನಿಗ್ರಹವಿರಬೇಕು. ಇಂದ್ರಿಯಗಳನ್ನು ಜಯಿಸಬೇಕು. ಶಮ, ಕ್ಷಮೆ ಮುಂತಾದ ಗುಣಗಳಿರಬೇಕು. ಕಾಮಕ್ರೋಧಗಳನ್ನು ಬಿಡಬೇಕು. ತಲೆ ಬೋಳಿಸಿಕೊಂಡು ದಿಗಂಬರನಾಗಬಹುದು ಅಥವಾ ಕೌಪೀನಧಾರಿಯಾಗಬೇಕು. ಮಿತ್ರನನ್ನೂ ಶತ್ರುವನ್ನೂ ಒಂದೇ ದೃಷ್ಟಿಯಿಂದ ನೋಡಬೇಕು. ಮಾನ ಅವಮಾನಗಳನ್ನು ಒಂದೇ ರೀತಿ ಗ್ರಹಿಸಬೇಕು. ಒಂದು ಹಳ್ಳಿಯಲ್ಲಿ ಒಂದು ರಾತ್ರಿಗಿಂತ ಹೆಚ್ಚಾಗಿ, ಒಂದು ಪಟ್ಟಣದಲ್ಲಿ ಮೂರು ರಾತ್ರಿಗಳಿಗಿಂತ ಹೆಚ್ಚಾಗಿ ಇರದೆ ಯಾವಾಗಲೂ ಸಂಚರಿಸುತ್ತಿರಬೇಕು.
ಇದು ವಿರಕ್ತ ಸ್ವಾಮಿಗಳ ಮತ್ತು ವಿರಕ್ತ ಮಠದ ಲಕ್ಷಣಗಳು. ಪ್ರಾಪಂಚಿಕ ವ್ಯವಹಾರಗಳನ್ನು ಮಠಾದಿಪತಿಗಳು ಮಾಡಲೇಬಾರದು. ಮಠದ ವ್ಯವಸ್ಥೆಯೇ ಶಾಸ್ತ್ರಗಳ ಕಾಲದಲ್ಲಿರಲಿಲ್ಲವೆಂದೂ ಅದು ಆಮೇಲೆ ಬಂದದ್ದೆಂದೂ ಹಿಂದೆಯೇ ಬರೆದಿರುತ್ತೇನೆ. ಸಂನ್ಯಾಸಿಯು ಮಠಾದಿಪತಿ ಆದರೂ ವ್ಯವಹಾರವನ್ನು ಮಠದ ಅಧಿಕಾರಿಗೆ ಬಿಟ್ಟು ತಾನು ಅಗತ್ಯವಿದ್ದಾಗ ಮಾತ್ರ ಧರ್ಮದ ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಿರಬೇಕು.
– ಲಂಕಾ ಕೃಷ್ಣಮೂರ್ತಿ