ಲಂಕಾ ಕೃಷ್ಣಮೂರ್ತಿ
ಅರ್ಪಣೆ
ಈ ಕಾದಂಬರಿಯನ್ನು ಗುರುತುಲ್ಯರೂ, ಸೌಶೀಲ್ಯ ಸೌಜನ್ಯ ಸೌಹಾರ್ದ ಮೂರ್ತಿಗಳೂ ಸುಪ್ರಸಿದ್ಧ ಸಾಹಿತಿಗಳೂ ಆದ ದಿವಂಗತ ಕೆ. ಗೋಪಾಲ ಕೃಷ್ಣರಾಯರಿಗೆ ಭಕ್ತಿಪೂರ್ವಕವಾಗಿ ಅರ್ಪಿಸುತ್ತಿದ್ದೇನೆ.
ಲಂಕಾ ಕೃಷ್ಣಮೂರ್ತಿ
ಆವಿರ್ಭಾವ
ನನ್ನ ಜನ್ಮಸ್ಥಳವಾದ ಪೆನುಗೊಂಡ (ಘನಗಿರಿ) ಎಂಬ ಊರಿನಲ್ಲಿ ನಾನು ವಿದ್ಯಾರ್ಥಿಯಾಗಿರುವಾಗ ಹಿರಿಯರಿಂದ ಒಂದು ಕಥೆಯನ್ನು ಕೇಳಿದ್ದೆ. “ಹಿಂದೆ ಆ ಪಟ್ಟಣದ ಅರಸನಿಗೆ ಕೊಡೆ ಹಿಡಿಯುತ್ತಿದ್ದ ಒಬ್ಬನು, ಆ ಅರಸನು ಬೇರೆ ಊರಿನಿಂದ ಕುದುರೆಯನ್ನೇರಿ ಆತುರವಾಗಿ ತನ್ನ ರಾಜಧಾನಿಗೆ ಹಿಂತಿರುಗಿ ಬರುವಾಗ, ಅರಸನಿಗೆ ಕೊಡೆ ಹಿಡಿಯುವುದು ತನ್ನ ಕರ್ತವ್ಯವಾದುದರಿಂದ, ಆತನಿಗೆ ಕೊಡೆ ಹಿಡಿದು ಕುದುರೆಯ ಸಮವಾಗಿ ಓಡಿ ಬಂದನು. ಘನಗಿರಿ ಪಟ್ಟಣದ ಪೂರ್ವದ ಬಾಗಿಲಿಗೆ ಬಂದ ಕೂಡಲೇ ರಾಜನಿಗಾಗಿ ಕಾದಿದ್ದ ಪ್ರಧಾನಿ ಮೊದಲಾದವರು ರಾಜನನ್ನು ಅಂತಃಪುರಕ್ಕೆ ಕರೆದುಕೊಂಡು ಹೋದರು. ಓಡಿ ಬಂದಾತನು ಬಹಳ ಆಯಾಸಪಟ್ಟಿದ್ದು ಏನು ಮಾಡಲೂ ತೋಚದೆ ಅಲ್ಲಿಯೇ ಇದ್ದ ವಿಘ್ನೇಶ್ವರನ ಗುಡಿಯಲ್ಲಿ ಪ್ರವೇಶಿಸಿದನು. ಅದರ ದ್ವಾರದ ಎತ್ತರ ಕಡಿಮೆ ಇದ್ದು ಅದು ಆತನ ತಲೆಗೆ ತಾಕಿ ರಕ್ತ ಸುರಿಯಿತು. ಸುಸ್ತಾಗಿ ದೇವರ ಮುಂದೆ ಕುಸಿದು ಬಿದ್ದ ಆತನಿಗೆ, ಅಲ್ಲಿ ಯಾರೋ ದೇವರಿಗೆ ಅರ್ಪಿಸಿ ಬಿಟ್ಟಿದ್ದ ತಂಬಿಟ್ಟೂ, ಪಾನಕವೂ ಸಿಕ್ಕಿದವು. ಬಹಳ ಹಸಿದಿದ್ದ ಆತನು ಅವನ್ನು
ಹೊಟ್ಟೆಗೆ ಹಾಕಿಕೊಂಡನು. ಆತನಿಗೆ ನಿದ್ರೆ ಬಂತು. ಗರ್ಭಗುಡಿಯ ಅಗಲ ತೀರ ಕಡಿಮೆಯಿದ್ದುದರಿಂದ ಆತನು ಕಾಲುಗಳನ್ನು ವಿಗ್ರಹದಮೇಲೆ ಇಟ್ಟು ಕೊಂಡು ಮಲಗಿ ನಿದ್ರೆಯಲ್ಲಿ ಮೈಮರೆತನು. ರಾಜನಿಗೆ ತನ್ನ ಕಾರ್ಯ ಮುಗಿದ ಮೇಲೆ ಕೊಡೆಹಿಡಿಯುವವನು ಕುದುರೆಯ ಸಮವಾಗಿ ಓಡಿ ಬಂದಹಾಗೆ ನೆನಪಿಗೆ ಬಂತು. ಆತನ ಗತಿ ಏನಾಯಿತೋ ನೋಡಿಕೊಂಡು ಬರಬೇಕೆಂದು ರಾಜನು ಬೇರೆ ಪರಿಚಾರಕರನ್ನು ಕಳುಹಿಸಿದನು. ಅವರು ಬಂದು ಗುಡಿಯಲ್ಲಿ ನಿದ್ರಿಸುತ್ತಿದ್ದವನನ್ನು ಎಬ್ಬಿಸಿದರು. ಆತನು ಎದ್ದು ಎಂದಿನಂತೆ ಕೈಯಲ್ಲಿ ಕೊಡೆ ಹಿಡಿದುಕೊಂಡು ಅನಾಯಾಸವಾಗಿ ಅಂತಃಪುರಕ್ಕೆ ನಡೆದುಕೊಂಡು ಬಂದನು. ಇಷ್ಟರೊಳಗೆ ದೊರೆ ವೈದ್ಯರನ್ನು ಕರೆಯಿಸಿ ಅತಿ ಓಟದಿಂದ ಬಳಲಿದವನಿಗೆ ಏನು ಚಿಕಿತ್ಸೆ ಮಾಡಬೇಕೆಂದು ಕೇಳಿದನು. ಅವರು ಅಂತಹವನ ತಲೆಗೆ ಗಾಯ ಮಾಡಿ ರಕ್ತ ಸುರಿಸಿ, ಗಟ್ಟಿಯಾದ ಆಹಾರವನ್ನುಣಿಸಿ ಅವನನ್ನು ಕಾಲುಗಳು ಸ್ವಲ್ಪ ಮೇಲಕ್ಕಿಟ್ಟು ಮಲಗಿಸಬೇಕೆಂದು ಹೇಳಿದರು. ಬಂದ ಪರಿಚಾರಕನಿಗೆ ದೇವರೇ ಇಂತಹ ಚಿಕಿತ್ಸೆಯಾಗುವಂತೆ ಮಾಡಿರುವುದನ್ನು ತಿಳಿದು ಆಶ್ಚರ್ಯ ಪಟ್ಟು ರಾಜನು ಆತನ ರಾಜಭಕ್ತಿಗೆ ಮೆಚ್ಚಿ ವರ ಕೇಳಬೇಕೆಂದು ಹೇಳಿದನು. ಆತನು ತನಗೆ ಮೂರು ಮುಕ್ಕಾಲು ಘಳಿಗೆಗಳ ಕಾಲ ರಾಜ್ಯಭಾರವನ್ನು ಕೊಡಬೇಕೆಂದು ಬೇಡಿದನು. ರಾಜನು ಆ ವರವನ್ನು ಕೊಟ್ಟನು. ಮೂರುಮುಕ್ಕಾಲು ಘಳಿಗೆ ರಾಜನಾದ ಆತನು ಅನೇಕರಿಗೆ ಮಾನ್ಯಗಳನ್ನು ಕೊಟ್ಟನು. ‘ಗೊಡುಗು ಗೋಪಾಲ’ನು (ಕೊಡೆಯ ಭೂಪಾಲನು) ಕೊಟ್ಟ ಆ ಮಾನ್ಯಗಳು ಇಂದಿಗೂ ಇವೆ.” ಎಂಬುದೇ ಆ ಕಥೆ.
ಬಹಳ ವರ್ಷಗಳು ಕಳೆದ ನಂತರ ರಾಮನಗರದಲ್ಲಿದ್ದ ನಮ್ಮ ಬಂಧುಗಳಾದ ಶ್ರೀಮಾನ್ ಟಿ. ಎಸ್, ವಾಸುದೇವರಾಯರು ಒಂದು ಸಂದರ್ಭದಲ್ಲಿ ಪುನಃ ಇದೇ ಕಥೆಯನ್ನು ನನಗೆ ಹೇಳಿದರು. ಆದರೆ ಅವರು ಆ ರಾಜನ ಕಾಲದಲ್ಲಿ ವಿದ್ವಾಂಸರಿಗೆ ತುಂಬ ಅನಾದರವಿತ್ತೆಂದೂ ಕೊಡೆ ಹಿಡಿಯುವವನು ರಾಜನ ಜೊತೆಯಲ್ಲಿ ದೇಶ ಸಂಚಾರ ಮಾಡಿದಾಗೆಲ್ಲ ಅವರ ದೀನ ಸ್ಥಿತಿಯನ್ನು ನೋಡಿದ್ದನೆಂದೂ ಆತನು ಮೂರುಮುಕ್ಕಾಲುಘಳಿಗೆ ರಾಜನಾಗಿ ಪೋಷಣೆಯಿಲ್ಲದ ವಿದ್ವಾಂಸರಿಗೆ ಮಾನ್ಯಗಳನ್ನು ಕೊಟ್ಟನೆಂದೂ ಹೇಳಿದರು. ಅವರು ಹೇಳಿದ ಈ ವಿಷಯ ನನಗೆ ತಿಳಿದಿದ್ದ ಕಥೆಗೆ ಪ್ರಾಣ ಕೊಟ್ಟಿತು. ಅಂದಿನಿಂದ ಯಾರಾದರೂ ಈ ಕಥೆಯನ್ನು ಬರೆದರೆ ಎಷ್ಟು ಚೆನ್ನಾಗಿರುತ್ತೆ ಎಂದು ನನಗೆ ಅನ್ನಿಸುತ್ತಿತ್ತು.
ನಾನು ಈ ಕಥೆಯನ್ನು ಕೆಲವರು ಸಾಹಿತಿಗಳಿಗೆ ಹೇಳಿ ಇದನ್ನು ಕಾದಂಬರಿಯ ರೂಪದಲ್ಲಿ ಬರೆಯಬಹುದೆಂದು ಸಲಹೆ ಕೊಟ್ಟೆ. ಆದರೆ ಅವರು ಬರೆಯಲಿಲ್ಲ. ನನಗೆ ಕನ್ನಡ ಭಾಷೆಯಲ್ಲಿ ಆಸಕ್ತಿಯನ್ನುಂಟುಮಾಡಿ ಬರೆಯಲು ಪ್ರೋತ್ಸಾಹಕೊಟ್ಟ ಸುಪ್ರಸಿದ್ದ ಕನ್ನಡ ಸಾಹಿತಿಗಳಾದ ದಿ|| ಕೆ. ಗೋಪಾಲ ಕೃಷ್ಣರಾಯರಲ್ಲಿ ನನಗೆ ಸದಾ ಗುರುಭಾವವಿದೆ. ಒಂದು ದಿನ ಜೊತೆಯಲ್ಲಿ ಪ್ರಯಾಣ ಮಾಡುವಾಗ ಈ ಕಥೆಯನ್ನು ನಾನು ಅವರಿಗೆ ಹೇಳಿದೆ. ಹಿಂತಿರುಗಿದ ಮೇಲೆ ಅವರು ಇದನ್ನು ಒಂದು ಪುಟ್ಟ ಕಥಾಕವನದ ರೂಪದಲ್ಲಿ ಬರೆದರು.
ಈಚೆಗೆ ನನಗೆ ಕಾಲಾವಕಾಶ ಲಭಿಸಿ ನಾನೇ ಈ ಕಥೆಯನ್ನು “ಕೊಡೆಯ ಗೋಪಾಲ” ಎಂಬ ಈ ಕಾದಂಬರಿಯ ರೂಪದಲ್ಲಿ ಬರೆದೆ. ಮೇಲೆ ಹೇಳಿದ ಕಥೆಯಲ್ಲಿ ಚಾರಿತ್ರಿಕ ಸತ್ಯವಿದೆ ಎಂದು ನನ್ನ ನಂಬಿಕೆ. ಅಲ್ಲದೆ ಬಿಲ್ಲಿನ ಸಹಾಯದಿಂದ ಮಾಳಿಗೆಯಿಂದ ಮಾಳಿಗೆಗೆ ಹಾರುತ್ತಿದ್ದ ಒಬ್ಬ ಕಳ್ಳನಿದ್ದನೆಂಬ ಕಥೆಯೊಂದನ್ನು ನಾನು ಕೇಳಿದ್ದೆ. ಈ ಕಥೆಗಳನ್ನು ಬಿಟ್ಟರೆ ಈ ಕಾದಂಬರಿಯಲ್ಲಿ ಬರುವ ಇತರ ಎಲ್ಲ ಅಂಶಗಳೂ ನನ್ನ ಕಲ್ಪನೆ.
ಇದನ್ನು ನಾನು ತೆಲುಗಿನಲ್ಲಲ್ಲದೆ ಕನ್ನಡದಲ್ಲಿ ಬರೆಯುವುದಕ್ಕೆ ಕಾರಣ ನನ್ನ ಮಕ್ಕಳ ವಿದ್ಯಾಭ್ಯಾಸವೆಲ್ಲ ಕನ್ನಡದಲ್ಲಿ ಆಗಿರುವುದು. ಅಂದರೆ ನಾನು ಕಥೆಯನ್ನು ಹೇಳುತ್ತಿದ್ದರೆ ಬರೆದಿಡುವುದಕ್ಕೆ ಅವರ ಸಹಾಯ ನನಗಿರುವಿಕೆ. ಅಷ್ಟೇ ಹೊರತು ಕನ್ನಡದಲ್ಲಿ ಕಾದಂಬರಿಯನ್ನು ಬರೆಯುವಷ್ಟು ಶಕ್ತಿ ನನಗಿದೆ ಎಂಬ ನಂಬಿಕೆಯಲ್ಲ. ನಿಜ ಹೇಳಬೇಕಾದರೆ ನಾನು ತೆಲುಗಿನಲ್ಲಿ ಸಹ, ಕಾವ್ಯ ರಚನೆ ಮಾಡಿದ್ದೇನೆಯೇ ಹೊರತು, ಕಾದಂಬರಿಯನ್ನಾಗಲಿ ಕಥೆಗಳನ್ನಾಗಲಿ ಬರೆದಿಲ್ಲ. ಆದುದರಿಂದ ಈ ಕಾದಂಬರಿಯಲ್ಲಿ ಭಾಷೆಯಲ್ಲಾಗಲಿ ಸನ್ನಿವೇಶ ಚಿತ್ರಣದಲ್ಲಾಗಲಿ ಕಂಡು ಬರುವ ತೊಡಕುಗಳನ್ನು ಓದುಗರು ಕ್ಷಮಿಸಬೇಕೆಂದು ಪ್ರಾರ್ಥಿಸುತ್ತಿದ್ದೇನೆ.
ಈ ಕಾದಂಬರಿಯನ್ನು ಮೊದಲು ಓದಿ ಅನುಮೋದಿಸಿದವರೂ, ಕೊನೆಗೆ ಕನ್ನಡ ಪ್ರಭದ ಕಛೇರಿಗೆ ನನ್ನನ್ನು ಕರೆದುಕೊಂಡು ಹೋಗಿ ಇದನ್ನು ಸಂಪಾದಕ ವರ್ಗದವರಿಗೆ ಕೊಡಿಸಿದವರೂ, ಪೂಜ್ಯರಾದ ಡಾಕ್ಟರ್ ಧನ್ವಂತರಿ ರಘೋತ್ತಮಾಚಾರ್ಯರು. ಇಷ್ಟರೊಳಗೆ ಇದನ್ನು ಓದಿ ನನ್ನ ಹಿತೈಷಿಗಳೂ, ಸುಪ್ರಸಿದ್ದ ಕನ್ನಡ ಸಾಹಿತಿಗಳೂ ಆದ ದಿ|| ಅರ್ಚಿಕ ವೆಂಕಟೇಶ್ ಅವರು ಕೂಡಲೇ ನನಗೆ ಹೀಗೆಂದು ಪತ್ರ ಬರೆದರು.
ತೆಲಗು ಕವಿಗಳಾದ ನಿಮ್ಮ ಕನ್ನಡ ಕಾದಂಬರಿ ಹೇಗಿದೆ ನೋಡೋಣ ಎಂದು ನಿನ್ನೆ ಮಧ್ಯಾಹ್ನ ಓದಲು ಆರಂಭಿಸಿದೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಅದು ನನ್ನನ್ನು ಸಂಪೂರ್ಣ ಸೆರೆ ಹಿಡಿದು ಬಿಟ್ಟಿತು. ಕೆಳಗೆ ಇಡಲು ಸಾಧ್ಯವಾಗಲೇ ಇಲ್ಲ. ಕತ್ತಲಾದ್ದರಿಂದ ನಿರ್ವಾಹವಿಲ್ಲದೆ ಓದು ನಿಲ್ಲಿಸಿದೆ. ಈ ಬೆಳಿಗ್ಗೆ ಸ್ನಾನ, ಆಹ್ನಿಕಗಳ ನಂತರ ಮತ್ತೆ ಕೈಗೆತ್ತಿಕೊಂಡೆ. ಪೂರ್ತಿ ಓದಿದ ಕೂಡಲೇ ಈ ಪತ್ರ ಬರೆಯುತ್ತಿದ್ದೇನೆ.
ಕೊಡೆಯಗೋಪಾಲ ನಿಜಕ್ಕೂ ಧೀರನೂ, ತ್ಯಾಗಶೀಲನೂ, ದೇಶವತ್ಸಲನೂ ಆದ ಪುಣ್ಯಪುರುಷೋತ್ತಮ. ಅಂಥ ಅಪ್ರತಿಮ ಮಹಾ ಪುರುಷವನ್ನು ಕಥಾನಾಯಕನನ್ನಾಗಿ ಮಾಡಿಕೊಂಡು, ನೀವು ಬರೆದಿರುವ ಕಾದಂಬರಿ ನಿಜಕ್ಕೂ ಅತ್ಯಪೂರ್ವವಾಗಿದೆ. ಇಂದಿನ ಕಾಲದ ನೈತಿಕ ಅಧಃಪತನವನ್ನು ಕಂಡು, ದೇಶೋದ್ಧಾರಕ್ಕಾಗಿಯೇ ಈ ಕೃತಿ ನಿಮ್ಮಿಂದ ರಚಿಸಲ್ಪಟ್ಟಂತೆ ತೋರುತ್ತದೆ. ಮಹಾ ಆದರ್ಶವಾದಿಯಾದ ನನಗೆ ಇದನ್ನು ಓದಿ ಆಗಿರುವ ಆನಂದಕ್ಕೆ ಮಿತಿ ಇಲ್ಲ. ಕನ್ನಡದಲ್ಲಿ ನೀವು ಸೊಗಸಾಗಿ, ದಿವ್ಯವಾಗಿ ಬರೆಯಬಲ್ಲಿರಿ ಎಂಬುದನ್ನು ಕಂಡು ನನಗೆ ಹೇಳತೀರದ ಸಂತೋಷವಾಗಿದೆ.
ಭಾಷಾ ದೃಷ್ಟಿಯಿಂದ ಕೆಲವು ಬದಲಾವಣೆ ಅವಶ್ಯವಾಗಿದೆ. ದೋಷವೆಂದಲ್ಲ. ಸೌಂದರ್ಯವನ್ನು ಇನ್ನೂ ಹೆಚ್ಚಿಸುವ ದೃಷ್ಟಿಯಿಂದ ತಾವು ಸ್ವತಃ ಬಂದಾಗ ನನ್ನ ಅಲ್ಪಮತಿಗೆ ತಿಳಿದಂತೆ ಸೂಚನೆ ಮಾಡುತ್ತೇನೆ. ತಮಗೆ ಒಪ್ಪಿಗೆಯಾದರೆ ಅವನ್ನು ಸ್ವೀಕರಿಸಿ. ನೀವು ಯಾವಾಗ ಬೇಕಾದರೂ ಬರಬಹುದು.
ನಿಮಗೆ ಸರ್ವದಾ ಅಭ್ಯುದಯ, ಮಂಗಳ ಮತ್ತು ಶುಭ ಕೋರುವ ಕನ್ನಡ ಬಂಧು,
ಅರ್ಚಿಕ ವೆಂಕಟೇಶ
ಕನ್ನಡ ಅಧ್ಯಾಪಕರೂ, ಸಾಹಿತಿಗಳೂ, ವಿಮರ್ಶಕರೂ ಆದ ನನ್ನ ಮಿತ್ರರು ಶ್ರೀ ಆ. ಸೂ. ವೆಂಕಟರಾಮಯ್ಯನವರು ಸಹ ಈ ಕಾದಂಬರಿಯನ್ನು ಓದಿ ಗುಣದೋಷ ಪರಿಶೀಲನೆ ಮಾಡಿ ನನಗೆ ತಿಳಿಸಿದರು. ಆಮೇಲೆ ಕನ್ನಡಪ್ರಭದ ಸಂಪಾದಕರು ಇದನ್ನು ತಮ್ಮ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿ ನನಗೆ ಪ್ರೋತ್ಸಾಹ ಕೊಟ್ಟರು. ಈಗ ಅವರ ಸೌಜನ್ಯದಿಂದ ಇದು ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ.
ಮೇಲೆ ನೆನೆಸಿಕೊಂಡ ಎಲ್ಲ ಹಿರಿಯರಿಗೂ ಹಿತೈಷಿಗಳಿಗೂ ನನ್ನ ಕೃತಜ್ಞತಾ ಪೂರ್ವಕ ವಂದನಗಳನ್ನರ್ಪಿಸುತ್ತಿದ್ದೇನೆ.
ಈ ಕಾದಂಬರಿಯನ್ನು ಪ್ರಕಟಿಸಲು ನೆರವಾದ ಪ್ರಸಿದ್ಧ ಸಾಹಿತಿಗಳೂ, ಮಿತ್ರರೂ ಆದ ಶ್ರೀ ಟಿ. ಜಿ. ಅಶ್ವತ್ಥನಾರಾಯಣ ಅವರಿಗೂ, ತಮ್ಮ ಅಮೂಲ್ಯವಾದ ಅಭಿಪ್ರಾಯವನ್ನು ಕೊಟ್ಟಿರುವ ಶ್ರೀ ಹೆಚ್. ಎನ್. ಮೂರ್ತಿ ಅವರಿಗೂ, ಪ್ರಕಾಶಕರಿಗೂ, ಮುದ್ರಕರಿಗೂ ನಾನು ಚಿರಋಣಿಯಾಗಿದ್ದೇನೆ.
ಬೆಂಗಳೂರು
15-12-1978
ಲಂಕಾ ಕೃಷ್ಣಮೂರ್ತಿ
