ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 16
ಮಾನವಧರ್ಮದ ಅನುಯಾಯಿ ಪ್ರಧಾನಮಂತ್ರಿ ಆಗಬೇಕು
(ದಿನಾಂಕ 1 – 7- 1996 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಇತ್ತಿಚೆಗೆ ನಡೆದ ಚುನಾವಣೆಗಳ ವಿಷಯವಾಗಿ ದೂರದರ್ಶನದಲ್ಲಿ ಸಾಕಷ್ಟು ಕಾರ್ಯಕ್ರಮಗಳು ಪ್ರಸಾರವಾಗಿವೆ. ಆದರೆ ಪ್ರಧಾನಮಂತ್ರಿಯ ಸ್ಥಾನಕ್ಕೆ ಯಾರು ಅರ್ಹರು ಎಂಬ ವಿಷಯವಾಗಿ ವ್ಯಕ್ತಿಯ ಧಾರ್ಮಿಕತೆಯ ವಿಷಯವಾದ ಚರ್ಚೆಗೆ ಪ್ರಾಧಾನ್ಯ ಕೊಡದೆ ಪಕ್ಷಗಳ ಬಲಾಬಲಗಳ ಮತ್ತು ಪಕ್ಷಗಳ ಪರಸ್ಪರ ಸಹಕಾರದ ವಿಷಯವಾದ ಚರ್ಚೆಯೇ ಹೆಚ್ಚಾಗಿ ನಡೆದಿದೆ. ಹೀಗಿರುವುದರಿಂದ ಯಾವ ಪಕ್ಷಗಳು ಜೊತೆಗೆ ಸೇರಿ ಸರ್ಕಾರವನ್ನು ನಡೆಸಿದರೂ ಬೇರೆ ಪಕ್ಷಗಳು ಅಸೂಯೆಯಿಂದ ಆ ಸರ್ಕಾರವನ್ನುರುಳಿಸಲು ಪ್ರಯತ್ನಿಸುವುದು ಖಚಿತ. ಈ ಪರಿಸ್ಥಿತಿ ದೇಶದ ಹಿತಕ್ಕೆ ಒಳ್ಳೆಯದಲ್ಲ. ಈಗಲಾದರೂ ಆಯ್ಕೆಯಾಗಿರುವ ಲೋಕಸಭೆಯ ಸದಸ್ಯರು ಧರ್ಮದ ಮೂಲ ತತ್ವಗಳಿಗೆ ಬೆಲೆ ಕೊಟ್ಟು ಧರ್ಮಿಷ್ಠನಾದ ವ್ಯಕ್ತಿಯನ್ನು ಪ್ರಧಾನ ಮಂತ್ರಿಯ ಸ್ಥಾನದಲ್ಲಿ ನಿಲ್ಲಿಸಿ ಯಾವ ಜಾತಿ ಮತ ಭೇದಗಳಿಲ್ಲದೆ ಎಲ್ಲ ಜನರ ಹಿತಸಾಧನೆಯನ್ನು ಮಾಡಲು ಪ್ರಯತ್ನಿಸಬೇಕು.
ಇದಕ್ಕೆ ಜಾತಿ ಮತಗಳನ್ನು ಸಂಪೂರ್ಣವಾಗಿ ಮನಸ್ಸಿನಿಂದ ತೊಲಗಿಸಿ ಮಾನವ ಧರ್ಮಗಳಾದ ಸತ್ಯ, ಅಹಿಂಸೆ, ಪರೋಪಕಾರ, ಧರ್ಮಮಾರ್ಗದಲ್ಲಿ ಮಾತ್ರ ಧನಸಂಚಯ, ಸಂಚಿತವಾದ ಧನವನ್ನು ಬಡವರ ಹಿತಕ್ಕಾಗಿ ಉಪಯೋಗಿಸುವುದು, ನಿರಾಡಂಬರತೆ, ಇಂದ್ರಿಯನಿಗ್ರಹ, ಧನಿಕರ ಮತ್ತು ಬಡವರ ಅಂತರ ಕಡಿಮೆ ಆಗುವುದು, ಎಲ್ಲರ ಸಂತೋಷ, ಮುಂತಾದವುಗಳಿಗೆ ಈಗಲಾದರೂ ಪ್ರಾಧಾನ್ಯ ಕೊಟ್ಟು, ಸರ್ಕಾರವು ಯೋಜನೆಗಳನ್ನು ನಿರೂಪಿಸಬೇಕು. ಲಂಚ ತೆಗೆದುಕೊಳ್ಳುವುದೂ, ಧನಿಕನಾಗಬೇಕೆಂಬ ದುರಾಸೆ ಮುಂತಾದ ಕೆಟ್ಟ ಗುಣಗಳು ಲೋಕಸಭಾ ಸದಸ್ಯರಿಂದ ದೂರವಾಗಬೇಕು. ಈ ದಿಶೆಯಲ್ಲಿ ಪ್ರಯತ್ನ ನಡೆಯಲೇಬೇಕು.
- ಲಂಕಾ ಕೃಷ್ಣಮೂರ್ತಿ