(ದಿ. 1-1-1989 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಒದುಗರಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಪ್ರಶ್ನೆ 1- ಚಕ್ರವರ್ತಿ ಶಂತನು ಗಂಗಾದೇವಿಯನ್ನು ಒಲಿದು ಬಾಳ ನಡೆಸಿ ಅನೇಕ ಪುತ್ರಸಂತಾನ ಪಡೆದ ವಿಚಾರ ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ವೇದ ಮಾತೆ ಗಂಗೆ ಶ್ರೀ ಪರಮೇಶ್ವರನ ಪತ್ನಿ ಎಂಬುದು ಸರ್ವವಿದಿತ. ಹೀಗಿರುವಲ್ಲಿ ಮಾನವನಾದ ಶಂತನುವಿನ ಪತ್ನಿಯಾಗುವುದು ಎಲ್ಲೆಲ್ಲಿಯ ಸಂಬಂಧ? ಅದೂ ವೇದಮಾತೆಯಾಗಿಯೇ ಅಲ್ಲವೇ? ದೇವಮಾತೆಯಾಗಿ, ಸಾಕ್ಷಾತ್ ಪರಮೇಶ್ವರನ ಹೆಂಡತಿ ಮಾನವನಾದ ಶಂತನುವನ್ನು ವರಿಸಲು ಶಕ್ಯವೇ ಪರಮೇಶ್ವರನಿಗೆ? ಮಹಾಭಿಷ ರಾಜನು ದೇವ ಸಭೆಯಲ್ಲಿ ಗಂಗೆಯನ್ನು ನೋಡಿದೊಡನೆ ಹೀಗಾಗುವುದೇ? ಪರಮೇಶ್ವರನಿಗೆ ಇದು ಹಿಡಿಸುವುದೇ? ಈ ಬಗ್ಗೆ ಊಹಾ ಪೋಹ ಸಂಶಯಗಳು ಅನೇಕವಾಗಿ ಉದ್ಭವಿಸುವುದು. ಸಮಾಧಾನ ಕೊಟ್ಟು ಪರಿಹರಿಸಿ.
ಪ್ರಶ್ನೆ 2:- ಎರಡನೆಯದಾಗಿ ಗಂಗಾಮಾತೆ ತಾನು ಹೆತ್ತ ಏಳು ಮಕ್ಕಳು ಹುಟ್ಟಿದೊಡನೆ ನೀರಿನ ಪಾಲೂ ಮಾಡುವುದರಿಂದ ಶಿಶುಹತ್ಯೆ ಬರುವುದಿಲ್ಲವೆ? ವಿಧಿ, ನಿಯಮ, ಧರ್ಮ, ನ್ಯಾಯ, ಪುಣ್ಯ, ಪಾಪಗಳು ಭಿನ್ನಭೇದವಿಲ್ಲದ ಎಲ್ಲರಿಗೂ ಒಂದೇ ಅಲ್ಲವೆ? ಗಂಗೆಗೆ ಶಿಶುಹತ್ಯಾ ದೋಷ ಬರುವುದಿಲ್ಲವೆ? ಇದನ್ನು ಪ್ರತ್ಯಕ್ಷವಾಗಿ ನೋಡುತ್ತಿದ್ದ ಚಕ್ರವರ್ತಿಯಾದ ಶಂತನುವಿಗೆ ಧರ್ಮರಕ್ಷಣೆ ಮಾಡದ ದೋಷವುಂಟಾಗುವುದಿಲ್ಲವೆ? ಶಂತನು ಇಲ್ಲಿ ತನ್ನ ರಾಜ ಧರ್ಮವನ್ನು ಪಾಲಿಸದೆ ಇದ್ದುದಕ್ಕೆ ಸಮಾಧಾನವೇನು? ಇದೇ ಸಮಾಧಾನ ಇತರರಿಗೂ ಅನ್ವಯಿಸುವುದೇ? ದಯವಿಟ್ಟು ತಿಳಿಸಿ, ಸಂಶಯ ಪರಿಹರಿಸಿ ಸನಾತನ ಧರ್ಮದ ಪತಾಕೆ ಕಳೆ ಗುಂದದೆ ಇರುವಂತೆ ದಯವಿಟ್ಟು ಮಾಡಿ.
ಇದು ನಮ್ಮ ಧರ್ಮ ಹಾಗೂ ನಮ್ಮ ಧರ್ಮಪ್ರಭಾ ಪತ್ರಿಕೆಯ ಕರ್ತವ್ಯ.
ಉತ್ತರ:-
1. ಮಹಾಭಿಷನೆಂಬ ರಾಜನು ಪುಣ್ಯರಾಶಿಯಿಂದ ದೇವಲೋಕಕ್ಕೆ ಹೋಗುವನು. ಅಲ್ಲಿ ದೇವತೆಗಳು ಮತ್ತು ಋಷಿಗಳ ಜೊತೆಯಲ್ಲಿ ಬ್ರಹ್ಮದೇವನ ಸಭೆಯಲ್ಲಿರುವಾಗ ಗಂಗಾದೇವಿಯು ಸ್ತ್ರೀ ರೂಪವನ್ನು ಧರಿಸಿ ಬರುವಳು, ಗಾಳಿಯಿಂದ ಆಕೆಯ ಸೀರೆಯು ಸರಿದು ಆಕೆಯ ಊರುಮೂಲ ಕಾಣಿಸಿಕೊಂಡಾಗ ಇತರ ದೇವತೆಗಳೆಲ್ಲರೂ ಮುಖವನ್ನು ತಿರಿಗಿಸಿಕೊಂಡರು. ಆದರೆ ಮಹಾಭಿಷನು ಅದನ್ನು ಅಭಿಲಾಷೆಯಿಂದ ನೋಡುತ್ತಿದ್ದನು. ಬ್ರಹ್ಮ ದೇವನು ಆತನಿಗೆ ಮನುಷ್ಯ ಜನ್ಮ ಬರುವಂತೆ ಶಾಪ ಒಟ್ಟನು. ಆತನೇ ಶಂತನು, ಆತನ ಅಪರಾಧ ಅಲ್ಪವಲ್ಲ. ಬ್ರಹ್ಮದೇವನ ಶಾಪವು ಅಪರಾಧಕ್ಕೆ ತಕ್ಕದ್ದಾಗಿದೆ. ಇದು ಮಹಾಭಿಷನಲ್ಲಿ ಒಂದು ಲೋಪವಾಗಿತ್ತು. ಎಂತಹ ಮಹಾತ್ಮರಲ್ಲೂ ಲೋಪಗಳು ಇರುವುದು ಸಹಜ. ಗಂಗೆಯು ಸ್ತ್ರೀರೂಪಧಾರಿಣಿಯಾಗಿ ದೇವಲೋಕಕ್ಕೆ ಬಂದಾಗ ಆಕೆಯಲ್ಲಿಯು ಕಾಮದ ಅಂಶವಿತ್ತು. ಆಕೆಯು ಮಹಾಭಿಷನ ರೂಪ ಮತ್ತು ಇತರ ಗುಣಗಳಿಗೆ ವಶಳಾಗಿ ಆತನನ್ನು ವರಿಸುವಳು. ಭೂಲೊಕಕ್ಕೆ ಆತನನ್ನು ಹುಡುಕುತ್ತ ಬರುವಳು. ಪರಮೇಶ್ವರನ ಜಟಾಜೂಟದಲ್ಲಿರುವ ಗಂಗೆಯೇ ತಪ್ಪಿಸಿಕೊಂಡು ದೇವಸಭೆಗೆ ಬಂದು ಬಿಡಲಿಲ್ಲ. ಹಾಗೆ ಬಂದಿದ್ದರೆ ಪರಮೇಶ್ವರನಿಗೆ ಕೋಪ ಬರುತ್ತಿತ್ತು. ಆದರೆ ಗಂಗೆಯು ದೇವಲೋಕದಲ್ಲಿಯು, ಭೂಲೋಕದಲ್ಲಿಯು, ವಿಷ್ಣುಪಾದದಲ್ಲಿಯು ಸದಾ ಇದ್ದೇ ಇರುತ್ತಾಳೆ. ದೇವಲೋಕಕ್ಕೆ ಬಂದದ್ದು ಗಂಗೆಯ ಒಂದು ಅಂಶ ಮಾತ್ರವೆಂದು ಊಹಿಸಬೇಕು. ಶ್ರೀ ಮಹಾವಿಷ್ಣುವು ಅವತಾರಗಳನ್ನು ಮಾಡಿದಾಗ ವೈಕುಂಠದಲ್ಲಿ ವಿಷ್ಣು ಮತ್ತು ಲಕ್ಷ್ಮಿ ಇರಲಿಲ್ಲವೆಂದು ಎಂದೂ ಹೇಳಿಲ್ಲ. ದೇವತೆಗಳು ಅದ್ಭುತ ಶಕ್ತಿ ಸಂಪನ್ನರು. ಅವರನ್ನು ಮಾನವರಿಗೆ ಹೋಲಿಸಲು ಸಾಧ್ಯವಿಲ್ಲ. ಗಂಗೆಯು ಶಂತನುವಿನ ಭಾರ್ಯೆಯಾಗಿ ಆತನ ಜೊತೆಯಲ್ಲಿದ್ದಾಗ ಗಂಗಾನದಿಯು ಬತ್ತಿರಲಿಲ್ಲ. ಆದುದರಿಂದ ಪರಮೇಶ್ವರನ ಪತ್ನಿ ಇಲ್ಲಿ ಬರುವುದೇ ಇಲ್ಲ. ದೇವತೆಗಳು ಅಥವಾ ಅವರ ಅಂಶಗಳು ಭೂಲೋಕದಲ್ಲಿ ಅವತರಿಸುವುದು ಭೂಲೋಕದ ಹಿತಕ್ಕಾಗಿ ಶಂತನುವಿನಂಥಹ ಧರ್ಮಾತ್ಮನಿಗೆ ಗಂಗೆಯ ಅಂಶವು ಭಾರ್ಯೆಯಾಗುವುದರಲ್ಲಿ ಯಾವ ಅನೌಚಿತವೂ ಇಲ್ಲ. ಮಹಾಭಾರತದ ಕತೆಯಲ್ಲಿನ ಎಲ್ಲ ಪಾತ್ರಗಳು ದೇವತೆಗಳ ಮತ್ತು ರಾಕ್ಷಸರ ಅಂಶವೆಂದು ಸ್ಪಷ್ಟವಾದ ವಿವರಣೆಯೇ ಇರುತ್ತೆ. ಗಂಗಾದೇವಿಯ ಅಂಶವು ಭೂಲೋಕದಲ್ಲಿ ಭೀಷ್ಮನಂತಹ ಮಹಾತ್ಮನ ಜನ್ಮಕ್ಕೆ ಕಾರಣ ಗಂಗೆಯು ಸ್ತುತ್ಯರ್ಹಳು.
2. ವಸುಗಳೆಂಬ ದೇವತೆಗಳು ಎಂಟುಜನ. ಅವರು ಪತ್ನೀ ಸಮೇತರಾಗಿ ವಸಿಷ್ಠನ ಆಶ್ರಮಕ್ಕೆ ವಿಹಾರಾರ್ಥವಾಗಿ ಹೋಗುವರು. ವಸಿಷ್ಠನ ಬಳಿ ಅದ್ಭುತ ಶಕ್ತಿಯುಳ್ಳ ನಂದಿನಿ ಎಂಬ ಕಾಮಧೇನು ಇರುವುದು, ಎಂಟನೆಯ ವಸುವಿನ ಹೆಂಡತಿ ಅದನ್ನು ನೋಡಿ ತನ್ನ ಗೆಳತಿಗೆ ಅದನ್ನು ಕೊಟ್ಟರೆ ಚೆನ್ನಾಗಿರುತ್ತೆಂದು ಗಂಡನಿಗೆ ಸೂಚನೆ ಕೊಡುವಳು. ಅವನು ಇತರ ವಸುಗಳ ಸಹಾಯದಿಂದ ನಂದಿನಿಯನ್ನು, ಅಪಹರಿಸುವನು. ವಸಿಷ್ಠನು ಇವರಿಗೆ ಮಾನವ ಜನ್ಮ ಬರಲೆಂದು ಶಾಪಕೊಡುವನು. ಇವರ ಪ್ರಾರ್ಥನೆಗೆ ಮೃದುವಾದ ಎಂಟನೆಯ ವಸುವಿನ ಅಪರಾಧ ಹೆಚ್ಚಾದುದರಿಂದ ಆತನು ಮಾತ್ರ ಭೂಲೊಕದಲ್ಲಿ ದೀರ್ಘಕಾಲ ಬದುಕಿರಬೇಕೆಂದೂ ಇತರ ವಸುಗಳು ಹುಟ್ಟಿದ ಕೂಡಲೇ ಹಿಂತಿರುಗಿ ಬರಬಹುದೆಂದೂ ನಿಯಮಿಸುವನು. ಗಂಗೆಯು ಮಹಾಭಿಷನ ಪತ್ನಿಯಾಗಲು ಭೂಲೋಕಕ್ಕೆ ಇಳಿದು ಬರುತ್ತಿರುವಾಗ ದಾರಿಯಲ್ಲಿ ವಸುಗಳನ್ನು ಭೇಟಿಯಾಗುವಳು. ಅವರ ಕೋರಿಕೆಯಂತೆ ವಸುಗಳಿಗೆ ಮಾತೆಯಾಗಲು ಒಪ್ಪಿ, ಏಳು ಮಕ್ಕಳನ್ನು ಹುಟ್ಟಿದ ಕೂಡಲೆ ಗಂಗೆಯಲ್ಲಿ ಹಾಕಿ ಪುನಃ ದೇವಲೋಕಕ್ಕೆ ಹೋಗುವಂತೆ ಸಹಾಯಮಾಡಲು ಒಪ್ಪಿಕೊಳ್ಳುವಳು. ಆದುದರಿಂದ ಗಂಗೆಯು ಮಕ್ಕಳನ್ನು ನೀರಿಗೆ ಹಾಕಿದಲ್ಲಿ ಹಿಂಸೆಗೆ ಬದಲು ಉಪಕಾರವೇ ಇದೆ. ಅದು ಅಧರ್ಮ ಹೇಗೆ? ಶಂತನುವಿಗೆ ಮೊದಲು ಈ ವಿಷಯ ಗೊತ್ತಿರಲಿಲ್ಲ. ಕೊನೆಗೆ ಗಂಗೆ ಹೇಳುವಳು. ಶಂತನುವಿನ ತಂದೆ ಆತನಿಗೆ ಗಂಗೆಯನ್ನು ಮದುವೆಯಾಗಿ ಆಕೆಯ ಇಷ್ಟದಂತೆ ನಡೆದುಕೊಳ್ಳಬೇಕೆಂದು ಹಿಂದೆಯೇ ಹೇಳಿದ್ದನು. ದೇವತೆಗಳ ವಿಷಯದಲ್ಲಿ ಮಾನವರ ಧರ್ಮಾ ಧರ್ಮಗಳು ಯಥಾತಥವಾಗಿ ಅನುವರ್ತಿಸುವುದಿಲ್ಲವೆಂಬ ಧರ್ಮ ಸೂಕ್ಷವನ್ನರಿತಿದ್ದ ಶಂತನು ತಡೆಯಲಿಲ್ಲ. ಕೊನೆಗೆ ತಡೆಯುತ್ತಾನೆ. ಆಗ ಗಂಗೆಯು ಏಂಟನೆಯ ಮಗುವನ್ನು ಉಳಿಸುವಳು. ವಸಿಷ್ಠನ ನಿಯಮವೂ, ಗಂಗಾ ವಸುಗಳ ಒಪ್ಪಂದವೂ ಹಾಗೆಯೇ ಇತ್ತು. ಅದರಂತೆಯೇ ಶಂತನುವಿಗೆ ತಡೆಯುವ ಬುದ್ಧಿ ಉಂಟಾಯಿತು. ದೈವೀಶಕ್ತಿ ಮಾನವರ ಬುದ್ಧಿಯನ್ನು ಕರ್ಮಾನುಸಾರವಾಗಿ ಪ್ರಚೋದಿಸುವುದು ಪ್ರಕೃತಿ ನಿಯಮ. ಇಲ್ಲದಿದ್ದರೆ ಕರ್ಮಕ್ಕೆ ತಕ್ಕ ಫಲವೆಂಬುದನ್ನು ನಡೆಸಿಕೊಡುವುದು ಅಸಾಧ್ಯ.
ಶ್ರೀ ಕೃಷ್ಣನು ಗೋಪಿಕೆಯರೊಡನೆ ರಾಸಕ್ರೀಡೆ ಮಾಡಿದ ಸಂದರ್ಭದಲ್ಲಿ ಪರೀಕ್ಷಿನ್ಮಹರಾಜನು ಶುಕನನ್ನು ಕುರಿತು, ಶ್ರೀಕೃಷ್ಣನು ಪತಿಗಳಿರುವ ಗೋಪಿಕೆಗಳೊಡನೆ ವಿಹರಿಸಿದ್ದು ಅಧರ್ಮವಲ್ಲವೇ? ಎಂದು ಪ್ರಶ್ನಿಸುತ್ತಾನೆ. ಅಲ್ಲಿ ಜಗತ್ತನ್ನು ನಡೆಸುತ್ತಿರುವ ದೇವತಾ ಶಕ್ತಿಗಳ ವಿಚಿತ್ರ ವರ್ತನೆಗಳನ್ನು ಮಾನವರು ಅನುಕರಿಸಬಾರದೆಂಬ ಸತ್ಯವನ್ನು ಶುಕನು ಪ್ರತಿಪಾದಿಸಿದ್ದಾನೆ. ದೇವತಾಶಕ್ತಿಗಳಿಗೆ ಇಂತಹ ಧರ್ಮವಿರುದ್ದವಾಗಿ ಕಂಡು ಬರುವ ಕೆಲಸಗಳನ್ನು ಮಾಡುವುದರಲ್ಲಿ ಸ್ವಾರ್ಥವಿಲ್ಲವೆಂಬುದೂ ಅಲ್ಲಿ ಉಕ್ತವಾಗಿದೆ. ಅಗ್ನಿಯು ಸರ್ವಭಕ್ಷಕನಾಗಿ ಅಶುಚಿ ಅಲ್ಲ. ಶ್ರೀಕೃಷ್ಣನು ಒಬ್ಬೊಬ್ಬಳಿಗೆ ಒಂದೊಂದು ರೂಪ ಧರಿಸಿದವನು. ಅಲ್ಲದೆ ಗೋಪಿಕೆಯರ, ಮತ್ತು ಅವರ ಪತಿಗಳ ಅಂತರಾತ್ಮನು. ಅಲ್ಲದೆ ಇಂತಹ ದೇವತಾ ಪ್ರಭುಗಳ ಉಪದೇಶವು ಸತ್ಯವೇ ಹೊರತು ಅವರ ಆಚರಣೆ ಎಲ್ಲೋ ಒಂದು ಕಡೆ ಮಾತ್ರ ಸತ್ಯ ಎಂದೂ ಹೇಳಲ್ಪಟ್ಟಿದೆ. ಈ ಮಾತಿನಲ್ಲಿ ಗೂಢಾರ್ಥವಿದೆ. ಪುರಾಣ ಕಥೆಗಳೆಲ್ಲವೂ ಭೂಲೋಕದಲ್ಲಿ ನಡೆದ ಐತಿಹಾಸಿಕ ಘಟನೆಗಳೆಂದು ಭಾವಿಸಬಾರದು. ಆದರೆ ಆ ಕಥೆಗಳ ಸಂದೇಶವನ್ನು ಮಾತ್ರ ತೆಗೆದುಕೊಳ್ಳಬೇಕು ಎಂಬುದೇ ಇದರ ರಹಸ್ಯ. ಮದುವೆಯಲ್ಲಿ ಹೇಳುವ ಒಂದು ವೇದ ಮಂತ್ರದಲ್ಲಿ ವಧುವನ್ನು ಕುರಿತು ಹೀಗೆ ಹೇಳಲಾಗಿದೆ. ಸೋಮನು ನಿನ್ನ ಮೊದಲನೆಯ ಗಂಡ, ಎರಡನೆಯ ಗಂಡ ಗಂಧರ್ವನು, ಅಗ್ನಿಯು ಮೂರನೇ ಗಂಡ. ಈ ಮನುಷ್ಯನಾದ ಪತಿಯು ನಿನಗೆ ನಾಲ್ಕನೆಯವನು. ಇದನ್ನು ಬುದ್ಧಿಹೀನರು ಅಪಾರ್ಥ ಮಾಡಿಕೊಳ್ಳುವ ಸಂಭವವಿದೆ. ಪರಮಾತ್ಮನು ಹೆಂಗಸರಿಗೂ ಸೇರಿ ಎಲ್ಲರಿಗೂ ಮೊದಲನೇ ಪತಿ ಅಂದರೆ ರಕ್ಷಕನು ಆಮೇಲೆ ಮನಸ್ಸು ಆಮೇಲೆ ವಾಕ್ಕು ಎಂಬುವ ನಿತ್ಯಸತ್ಯವನ್ನು ವಧುವಿಗೆ ಬೋಧಿಸುವ ಮಂತ್ರವಿದು. ಆದುದರಿಂದ ಪುರಾಣ ಕಥೆಗಳ ವಿಷಯದಲ್ಲಿ ಅನವಸರವಾದ ಚರ್ಚೆಯನ್ನು ಬಿಟ್ಟು ಅವುಗಳ ಉದ್ದಿಷ್ಟಾರ್ಥವನ್ನು ಮಾತ್ರ ಗ್ರಹಿಸಬೇಕು.
– ಲಂಕಾ ಕೃಷ್ಣಮೂರ್ತಿ