ಕೊಡೆಯ ಗೋಪಾಲ – 4
ಲಂಕಾ ಕೃಷ್ಣಮೂರ್ತಿ
೨
ಗಗನ ಮಹಲಿನಲ್ಲಿ ಎರಡನೆಯ ಅಂತಸ್ತಿನಲ್ಲಿ ಒಂದು ಪಡಸಾಲೆ. ಅದರಲ್ಲಿ ಒಂದು ಮೂಲೆಯಲ್ಲಿ ಉಪಯೋಗದಲ್ಲಿಲ್ಲದ ಆಸನಗಳೂ, ಕೋಲುಗಳೂ, ಛತ್ರಗಳೂ, ಚಾಮರಗಳೂ, ಪಾದ ಪೀಠಗಳೂ, ಪಲ್ಲಕ್ಕಿಗಳೂ ಇಡಲ್ಪಟ್ಟಿದ್ದವು. ಅವುಗಳ ಮೇಲೆ ಧೂಳು ತುಂಬಿತ್ತು. ಒಬ್ಬ ಮುದುಕ ಪರಿಚಾರಕನು ಅವುಗಳನ್ನು ಜರುಗಿಸುತ್ತ ‘ಏನನ್ನೋ ಹುಡುಕುತ್ತಿದ್ದನು. ಧೂಳು ಎದ್ದಾಗ ಆವನು ಸ್ವಲ್ಪ ಕೆಮ್ಮುತ್ತಿದ್ದನು. ಸುತ್ತಲೂ ಇದ್ದ ಉದ್ಯಾನದ ಪಕ್ಷಿಗಳ ಕಲಕಲವಲ್ಲದೆ ಇನ್ನಾವ ಶಬ್ದವೂ ಕೇಳಿ ಬರುತ್ತಿರಲಿಲ್ಲ. ವಿಜಯನಗರ ರಾಜ್ಯ ಉದಯಿಸುವುದಕ್ಕಿಂತಲೂ ಹಿಂದಿನ ಕಾಲವದು. ಆಗ ಗಗನ ಮಹಲೇ ಸ್ಥಳೀಯ ರಾಜನ ಅರಮನೆಯಾಗಿತ್ತು. ರಾಜನು ಸಂಚಾರಕ್ಕೆ ಹೋಗಿದ್ದುದರಿಂದ ಅಂದು ಜನರ ಸಂದಣಿ ‘ಏನೂ ಇರಲಿಲ್ಲ. ಆ ಸಮಯದಲ್ಲಿ ಒಬ್ಬ ಯುವಕನು ಹಠಾತ್ತಾಗಿ ಆ ಪಡಸಾಲೆಯೊಳಕ್ಕೆ ಓಡಿ ಬಂದು ನಾಲ್ಕೂ ಕಡೆ ನೋಡುತ್ತಾ “ಚಿನ್ನಾ, ಚಿನ್ನಾ’ ಎಂದು ಕೂಗಿದನು. ಕೂಡಲೇ ಇನ್ನೊಂದು ಕಡೆಯಿಂದ ಹದಿಮೂರು ವರುಷದ ಬಾಲಿಕೆಯೊಬ್ಬಳು ನಗುತ್ತ ಓಡಿ ಬಂದು ಹೀಗೆ ಹೇಳಿದಳು:
“ಸ್ವಲ್ಪ ಹೊತ್ತು ನಾನು ಜತೆಯಲ್ಲಿಲ್ಲದಿದ್ದಕ್ಕೆ ಗಾಬರಿ ಬಿದ್ದೆಯಾ? ಹೌದು. ರಾಜರ ಅಂತಃ ಪುರ ಅಂದರೆ ಏನು? ಇದೆಲ್ಲಾ ನೀನು ಯಾವತ್ತು ನೋಡಿದ್ದೀಯೆ? ನೋಡಿದೆಯಾ? ಅಂತಃ ಪುರಕ್ಕೆ ಎಲ್ಲಿಂದ ಪ್ರವೇಶ ಮಾಡ ಬೇಕು? ಒಂದು ಅಂತಸ್ತಿನಿಂದ ಇನ್ನೊಂದು ಅಂತಸ್ತಿಗೆ ಯಾವ ಮೆಟ್ಟಿಲಲ್ಲಿ ಹತ್ತ ಬೇಕು? ಒಂದು ಸಾಲೆಯಿಂದ ಇನ್ನೊಂದು ಸಾಲೆಗೆ ಯಾವ ಬಾಗಿಲಲ್ಲಿ ಹೋಗಬೇಕು? ಯಾವ ಯಾವ ಕೋಣೆಗಳ ಕಡೆ ನೋಡಬಾರದು? ಎಲ್ಲೆಲ್ಲಿ ಹೆಚ್ಚು ಕಾಲ ನಿಲ್ಲಬಹುದು? ಎಲ್ಲಿ ನಿಲ್ಲಬಾರದು? ಇವೆಲ್ಲಾ ರೂಢಿಯಾಗಿರ ಬೇಕು. ತಿಳಿದುಕೊಳ್ಳುವುದಕ್ಕೆ ಗಮನ ಇರಬೇಕು. ಕೇವಲ ಬುದ್ದಿವಂತನಾಗಿ ಮನೆಯಲ್ಲೇ ಇದ್ದು ವಿದ್ಯೆಯನ್ನು ಕಲಿತರೆ ಇವೆಲ್ಲಾ ತಿಳಿಯುವುದಿಲ್ಲ. ಇದಕ್ಕೆಲ್ಲಾ ತಿಳುವಳಿಕೆ ಬೇಕು. ಚಾಲಾಕು ಬೇಕು, ಗಂಡುತನ ಬೇಕು”
“ಸಾಕೇ ಗಂಡುಬೀರೀ, ಹೆಂಗಸಾಗಿ ಹುಟ್ಟಿ ಇಷ್ಟು ಮಾತಾಡಬಾರದು. ಯಾರೂ ಇಲ್ಲವೆಂದು ವಿಜೃಂಭಿಸುತ್ತಿದ್ದೀಯೆ. ನೋಡು, ಆ ಮುದುಕಪ್ಪನಿಗೆ ಎಷ್ಟು ವಯಸ್ಸಾಗಿದೆ. ಆತನು ಏನು ತಿಳಿದುಕೊಂಡಾನು? ‘ನಾರ್ಯಾ ಲಜ್ಜೈವ ಭೂಷಣಂ’ ಎಂದು ಹೇಳಿದ್ದಾನೆ ಕವಿ. ಅಂದರೆ ಹೆಂಗಸಿಗೆ ನಾಚಿಕೆ ಇದ್ದರೇನೆ ಭೂಷಣವೆಂದು. ಇನ್ನೇನು ಸ್ವಲ್ಪ ದಿವಸ ಹೋದರೆ ನಿಮ್ಮ ತಂದೆ ನಿನ್ನನ್ನು ನನಗೇ ಕೊಟ್ಟು ಮದುವೆ ಮಾಡುತ್ತಾನೆ. ಆಮೇಲೂ ನನ್ನಲ್ಲಿ ಹೀಗೆಯೇ ಪ್ರವರ್ತಿಸುತ್ತೀಯಾ?” ಎಂದು ಆ ಯುವಕನು ಹೇಳಿದನು.
“ಬಹಳ ಚೆನ್ನಾಗಿದೆ ರಂಗಯ್ಯ ಭಾವಾ, ಬಹಳ ಚೆನ್ನಾಗಿದೆ. ನನಗೂ ನಿನಗೂ ಮದುವೆ ಆದ ಹಾಗೆ ಮಾತಾಡುತ್ತೀಯೆ. ನಿನ್ನ ಬಂಧುತ್ವ, ವಿದ್ಯೆ ಇವನ್ನೆಲ್ಲಾ ನಮ್ಮ ತಂದೆ ಮೆಚ್ಚಿಕೊಂಡಿರುವುದೇನೋ ಸರಿ. ನಮ್ಮ ಅಂತಸ್ತಿಗೆ ನಿನ್ನ ಅಂತಸ್ತೂ ಪರವಾಯಿಲ್ಲ. ನಾನು ಘನಗಿರಿ ರಾಜ್ಯದ ಸೈನ್ಯಾಧಿಪತಿ ವೀರಪ್ಪನ ಒಬ್ಬಳೇ ಮಗಳು. ನೀನು ಕೋಶಾಧಿಪತಿ ರಾಮಪ್ಪನ ಒಬ್ಬನೇ ಮಗ, ಸೈನ್ಯಾಧಿಪತಿಯ ಅಂತಸ್ತು ಕೋಶಾಧಿಪತಿಗಿಂತಲೂ ಸ್ವಲ್ಪ ಮೇಲೇನೇ.” ಎಂದು ಅವಳು ಹೇಳಿ ಪಕ್ಕಕ್ಕೆ ತಿರುಗಿ “ಹೌದೋ ಅಲ್ಲವೋ ಮುದುಕಪ್ಪಾ, ನೀನೇ ಹೇಳು” ಎಂದಳು.
ಮುದುಕ ಪರಿಚಾರಕನು ಚಿನ್ನಕ್ಕನ ಗಟ್ಟಿಧ್ವನಿಯನ್ನು ಕೇಳಿ ಮೆಲ್ಲನೆ ಎದ್ದು ಅವರ ಹತ್ತಿರಕ್ಕೆ ಬಂದನು.
ಚಿನ್ನಕ್ಕ …..“ನಿನ್ನ ಈ ರೂಪ, ನಿನ್ನ ಈ ಬಲಹೀನ ಶರೀರ, ನೋಡಿದರೆ ನಮ್ಮ ತಂದೆ ನನ್ನನ್ನು ನಿನಗೆ ಕೊಡುವುದಕ್ಕೆ ಖಂಡಿತವಾಗಿಯೂ ಒಪ್ಪುವುದಿಲ್ಲ.”
ಮುದುಕ…… “ಯಾರಮ್ಮಾ ನೀನು? ಏನು ಕರೆದೆ?”
ರಂಗಯ್ಯ…. “ಅವಳು ಗಂಡಸಾಗಿ ಹುಟ್ಟಬೇಕಾಗಿತ್ತು ಮುದುಕಪ್ಪಾ, ಹೇಗೋ ಆ ಬ್ರಹ್ಮ ದೇವನು ಹೆಣ್ಣು ಜನ್ಮ ಕೊಟ್ಟಿದ್ದಾನೆ. ಅವಳ ಮಾತು ಕಟ್ಟಿಕೊಂಡು ನಿನಗೇನು? ಬಾಯಿಗೆ ಬಂದ ಹಾಗೆ ಮಾತಾಡುತ್ತಾಳೆ. ನೀನು ಏನೋ ಹುಡುಕುತ್ತಾ ಇದ್ದೀಯಲ್ಲಾ ಹುಡುಕಿಕೋ ಹೋಗು.”
ಮುದುಕ…. “ಹುಡುಕುತ್ತಾ ಇದ್ದೇನೆ, ನನಗೆ ಪ್ರಿಯವಾದ ಒಂದು ವಸ್ತುವನ್ನು, ಕಣ್ಣು ಸರಿಯಾಗಿ ಕಾಣುವುದಿಲ್ಲ. ಸಾಮಾನುಗಳನ್ನು ಎತ್ತುವುದಕ್ಕೆ ಶಕ್ತಿಯಿಲ್ಲ, ನೀವಾದರೂ ಸ್ವಲ್ಪ ಸಹಾಯ ಮಾಡಿ. “
ಚಿನ್ನಕ್ಕ…. “ಏನಪ್ಪಾ ಅಷ್ಟು ಪ್ರಿಯವಾದ ವಸ್ತು? ಏನು ಚಿನ್ನಾನೋ, ಬೆಳ್ಳಿನೋ? ಏನು ಬಿದ್ದಿದೆ?”
ಮುದುಕ…” ಬೆಳ್ಳಿ, ಚಿನ್ನಾ ಯಾರಿಗೆ ಬೇಕು ತಾಯೀ. ನಮ್ಮವನಿಗೊಬ್ಬನಿಗೆ ಕೆಲಸ ಹುಡುಕುತ್ತಾ ಇದ್ದೇನೆ. ಕೆಲಸವಿದ್ದರೆ ಬಾಳೆಲ್ಲಾ ನಿಶ್ಚಿಂತೆಯಾಗಿ ತೃಪ್ತಿಯಾಗಿ ಧರ್ಮದಿಂದ ಕಳೆಯಬಹುದು. ನೀವಿಬ್ಬರೂ ಸ್ವಲ್ಪ ಸಹಾಯ ಮಾಡಿ”
ರಂಗಯ್ಯ….“ಭಲೇ ಮುದುಕಪ್ಪಾ, ನೀನು ಶಾಸ್ತ್ರಗಳನ್ನು ಓದಿದ್ದೀಯಾ?
ಧರ್ಮವಾದ ಜೀವನಕ್ಕೆ ಕರ್ಮವೇ ಆಧಾರವೆಂದೆ. ಆದರೆ ವಯಸ್ಸಾಗಿ ಅರುಳು ಮರುಳಾದ ಹಾಗೆ ಕಾಣುತ್ತೀಯೆ. ಈ ಹಳೆಯ ಸಾಮಾನುಗಳಲ್ಲಿ ಬಿದ್ದಿರುವುದಕ್ಕೆ ಕೆಲಸವೆಂದರೆ ಏನು ಒಂದು ಹಾಳು ಕೊಡೆಯೇ?”
ಚಿನ್ನಕ್ಕ – “ಎಂತಹ ಗಂಡಸು ಭಾವಾ ನೀನು?. ಮುದುಕನೊಡನೆ ವಾದಾ ಮಾಡುತ್ತೀಯೇ ಹೊರತು ಸೊಂಟ ಬಗ್ಗಿಸಿ ಆತನಿಗೆ ಸಹಾಯ ಮಾಡಬೇಕೆಂದು ನೀನು ಮುಂದೆ ಬರುತ್ತಾ ಇಲ್ಲವಲ್ಲಾ.”
ಮುದುಕ – “ಹೌದಪ್ಪಾ, ನಾನು ಹುಡುಕುತ್ತಿರುವುದು ಒಂದು ಕೊಡೆಯನ್ನೇ. ಹಳೆಯ ಕೊಡೆಯನ್ನು, ಹಾಳು ಕೊಡೆಯನ್ನಲ್ಲ. ನಿನ್ನ ಪಾಲಿಗೆ ಹಾಳು ಕೊಡೆಯಾದರೂ ನಮ್ಮ ಗೋಪಾಲನಿಗೆ ಆ ಹಳೆಯ ಕೊಡೆಯೇ ಮೇಲು ಕೊಡೆ. ಅದೇ ಅವನಿಗೆ ಕೆಲಸ, ಅದೇ ಅವನಿಗೆ ಜೀವನಾಧಾರ. ಅವನು ಬಂದಿದ್ದರೆ ನೀನೂ ನಾನೂ ಮಾತಾಡುವಷ್ಟರೊಳಗೆ ಈ ಸಾಮಾನನ್ನೆಲ್ಲಾ ಈಚೆಗೆಳೆದು ಆ ಕೊಡೆಯನ್ನು ತೆಗೆದು ಕೊಡುತ್ತಿದ್ದ. ಅವನ ಶಕ್ತಿ ಎಂದರೆ, ಯಾರಿಗಿದೆ ಅಂತಹ ಶಕ್ತಿ? ನಮ್ಮ ನಾಡಿನಲ್ಲೇ ಯಾರಿಗೂ ಇಲ್ಲ. ಸೈನಿಕರಂತೆ, ಸೈನ್ಯಾಧಿಪತಿಗಳಂತೆ, ಸಂಬಳ ತೆಗೆದುಕೊಳ್ಳುತ್ತಾರೆ, ಕಸರತ್ತು ಮಾಡುತ್ತಾರೆ. ಅವರದ್ದೆಲ್ಲಾ ಸಾಧಾರಣ ಶಕ್ತಿ, ನಮ್ಮ ಗೋಪಾಲನ ಶಕ್ತಿ ಅಸಾಧಾರಣವಾದದ್ದು. ಅವನ ತಂದೆ ಸೀನಪ್ಪ ತೀರಿಕೊಂಡು ಹದಿನೆಂಟು ವರುಷಗಳಾದವು. ಇವನು ಆಗ ಇನ್ನೂ ಚಿಕ್ಕ ಹುಡುಗ. ಸೀನಪ್ಪ ರಾಜನಿಗೆ ಕೊಡೆ ಹಿಡಿಯುವ ಕೆಲಸ ಮಾಡುತ್ತಾ ಇದ್ದ. ಅವನಿಗೆ ಆ ಕೆಲಸಕ್ಕಾಗಿ ರಾಜರು ಮಾನ್ಯವನ್ನು ಕೊಟ್ಟಿದ್ದಾರೆ. ಅದೇ ಅವನ ಕುಟುಂಬಕ್ಕೆ ಜೀವನಾಧಾರ. ಆತನ ಹೆಂಡತಿ ರಾಮಕ್ಕ ಗೋಪಾಲನನ್ನು ಹೇಗೋ ಕಷ್ಟಪಟ್ಟು ಬೆಳೆಸಿದ್ದಾಳೆ. ಅವನಿಗೆ ಈಗ ಇಪ್ಪತ್ತು ವರುಷ ಇನ್ನು ಸ್ವಲ್ಪ ದಿವಸಕ್ಕೆ ತುಂಬುತ್ತದೆ. ತಕ್ಷಣ ಅವನು ತನ್ನ ವಂಶದ ಕೆಲಸಕ್ಕೆ ಅಂತಃಪುರದಲ್ಲಿ ಬಂದು ಸೇರಬೇಕು. ಸೇರದಿದ್ದರೆ ಅವನ ಮಾನ್ಯವನ್ನು ರಾಜರು ಕಿತ್ತುಕೊಳ್ಳುತ್ತಾರೆ. ಅವನು ಅಷ್ಟು ಶಕ್ತಿವಂತನಾದರೂ ಅವನನ್ನು ಸೈನ್ಯಕ್ಕೆ ಸೇರಿಸುವುದಕ್ಕೆ ರಾಮಕ್ಕ ಒಪ್ಪುವುದಿಲ್ಲ. ವಂಶವೃತ್ತಿಯನ್ನು ಬಿಡಬಾರದೆಂದು ಅವಳ ಧ್ಯೇಯ. ನಾನೂ ಅದನ್ನು ಒಪ್ಪುತ್ತೇನೆ. ಅವನಿಗಾಗಿ ಅವನ ತಂದೆಯ ಕೊಡೆಯನ್ನು ಇಲ್ಲಿ ಹುಡುಕುತ್ತಾ ಇದ್ದೇನೆ. ”
ಚಿನ್ನಕ್ಕ – “ಗೋಪಾಲನು ಅಷ್ಟು ಶಕ್ತಿವಂತನೇ? ಸೈನ್ಯಾಧಿಪತಿಗಳ ಹೆಸರು ಹೇಳುತ್ತೀಯಲ್ಲಾ ಮುದುಕಪ್ಪಾ, ನಾನು ಯಾರೆಂದು ತಿಳಿದುಕೊಂಡೆ? ನಾನು ಸೈನ್ಯಾಧಿಪತಿ ವೀರಪ್ಪನ ಮಗಳು. ವೀರಪ್ಪ ನಿನಗೆ ಗೊತ್ತಿಲ್ಲವಾ? ಅವರು ಮೊದಲು ಸಾಮಾನ್ಯ ಸೈನಿಕರಾಗಿದ್ದು ತಮ್ಮ ಶಕ್ತಿಯಿಂದ ಪ್ರಭುಗಳ ಮೆಚ್ಚಿಗೆ ಪಡೆದು ಸೈನ್ಯಾಧಿಪತಿಗಳಾದರು. ಅಂತಹ ಸೈನ್ಯಾಧಿಪತಿಗಳೆಲ್ಲಿ? ಬಡಹುಡುಗ ಗೋಪಾಲನೆಲ್ಲಿ ? ಏನು ಅಂತಹ ಶಕ್ತಿ ಅವನದು ? ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದೀಯೆ.”
ಮುದುಕ – “ಕೋಪ ಮಾಡಿಕೋ ಬೇಡ ತಾಯಿ, ನಾನು ಇಷ್ಟು ಹೊತ್ತಿಗೆ ಒಂದು ಎಂಭತ್ತು ಉಗಾದಿಗಳನ್ನಾದರೂ ನೋಡಿದ್ದೇನೆ. ನನಗೆ ಗೊತ್ತಿಲ್ಲವೇ ಸೈನ್ಯಾಧಿಪತಿ ವೀರಪ್ಪ? ಅದೃಷ್ಟ ಶಾಲಿ. ನೀನು ಆತನ ಮಗಳೇ? ಸಾಕು ಮಗಳಲ್ಲವೇ ನೀನು ? ನಿನ್ನನ್ನು ಎಲ್ಲರೂ ಕರೆಯುವುದು ಭಾಗ್ಯಲಕ್ಷ್ಮಿ ಎಂದಲ್ಲವೇ?
ಚಿನ್ನಕ್ಕ – “ಹೌದು. ಇದೇನಾಶ್ಚರ್ಯ ! ಈ ವಿಷಯ ನಿನಗೆ ಹೇಗೆ ಗೊತ್ತು?”
ಮುದುಕ – “ನನಗೆಲ್ಲಾ ಗೊತ್ತಿದೆಯಮ್ಮಾ ನಾನೂ ನಿಮ್ಮ ತಂದೆ ವೀರಪ್ಪನೂ, ಗೋಪಾಲನ ತಂದೆ ಸೀನಪ್ಪನೂ, ಈಗ ಕೋಶಾಧಿಕಾರಿ ಆಗಿದ್ದಾನಲ್ಲ ಆ ರಾಮಪ್ಪನೂ, ನಾವೆಲ್ಲರೂ ಒಬ್ಬರಿಗೊಬ್ಬರು ನೆಂಟರೇ.”
ರಂಗಯ್ಯ – “ನಾನೇ ರಾಮಪ್ಪನ ಮಗ ರಂಗಯ್ಯ.”
ಮುದುಕ – ‘ನನಗೆಲ್ಲಾ ಗೊತ್ತಪ್ಪಾ. ಅಲ್ಲಿ ಯಾರು ಬರುತ್ತಿರುವುದು?”
ಅಷ್ಟರೊಳಗೆ ಗೋಪಾಲನು ಅಲ್ಲಿಗೆ ಬಂದನು.
ಗೋಪಾಲನು ದೂರದಿಂದಲೇ – “ನಾನು ತಾತಾ, ಗೋಪಾಲ.”
ಮುದುಕನು “ಬಂದೆಯಾ ಗೋಪಾಲಾ” ಎಂದು ಗೋಪಾಲನನ್ನು ಕೈ ಹಿಡಿದು ಹತ್ತಿರಕ್ಕೆ ಎಳೆದುಕೊಂಡನು.
ಗೋಪಾಲನು ಇಪ್ಪತ್ತು ವರುಷದ ಯುವಕ, ಸ್ಫುರದ್ರೂಪಿ. ತಕ್ಕಮಟ್ಟಿಗೆ ಎತ್ತರವಾದ ಆಕಾರ. ಮುಖದಲ್ಲಿ ತೇಜಸ್ಸು ತುಳುಕುತ್ತಿತ್ತು. ಅದು ಗಾಂಭೀರ್ಯ ಸಹಿಷ್ಣುತೆ, ಪ್ರಶಾಂತತೆ, ಸ್ಥೈರ್ಯ, ಧೈರ್ಯ ಇವುಗಳಿಂದ ತುಂಬಿತ್ತು. ಕ್ಲಿಷ್ಟವಾಗಿಯೂ, ಪುಷ್ಟವಾಗಿಯೂ, ಸ್ಪಷ್ಟವಾಗಿಯೂ ಕಾಣುತ್ತಿರುವ ಸ್ನಾಯುಗಳು
ಆತನದೇಹಶಕ್ತಿಯನ್ನು ಸೂಸುತ್ತಿದ್ದವು. ಆತನು ಸಾಮಾನ್ಯ ಬಡತನದ ಉಡುಪುಗಳನ್ನು ಧರಿಸಿದ್ದನು. ಆದರೂ ತನ್ನ ನೈಜವಾದ ತೇಜಸ್ಸಿನಿಂದ ಆತನು ಸಿರಿವಂತಿಕೆಯ ಉಡುಪುಗಳನ್ನು ಧರಿಸಿದ್ದ ರಂಗಯ್ಯ ಮತ್ತು ಭಾಗ್ಯಲಕ್ಷ್ಮಿಗಳಿಗಿಂತಲೂ ಹೆಚ್ಚು ಪ್ರಕಾಶಮಾನನಾಗಿದ್ದನು.
ಭಾಗ್ಯಲಕ್ಷ್ಮಿಯು ಗೋಪಾಲನನ್ನು ಆಪಾದಮಸ್ತಕ ಕುತೂಹಲದಿಂದಲೂ, ಮೆಚ್ಚುಗೆಯಿಂದಲೂ ನೋಡಿ, ಆತನ ಶಕ್ತಿ ಸೌಂದರ್ಯಗಳಿಂದಲೂ ಧೈರ್ಯ ಸ್ಥೈರ್ಯಗಳಿಂದಲೂ ವಿಸ್ಮಿತಳಾದಳು.
ಮುದುಕ – “ಇವನೇ ನಮ್ಮ ಗೋಪಾಲ. ಇವನ ತಂದೆ ಸೀನಪ್ಪನೂ (ಭಾಗ್ಯಲಕ್ಷ್ಮಿಯನ್ನು ಕುರಿತು) ನಿನ್ನ ತಂದೆ ವೀರಪ್ಪನೂ (ರಂಗಯ್ಯನನ್ನು ಕುರಿತು) ನಿನ್ನ ತಂದೆ ರಾಮಪ್ಪನೂ, ನಾನೂ, ನಾವೆಲ್ಲಾ ನೆಂಟರೆಂದು ಆಗಲೇ ಹೇಳಿದೆನಲ್ಲಾ. ಇಷ್ಟೇ ಅಲ್ಲ. ಇನ್ನೊಬ್ಬ ಶಂಕರಪ್ಪನೂ ಇದ್ದನು. ಆತನೂ ನಮ್ಮ ನೆಂಟನೇ. ಭಾಗ್ಯಲಕ್ಷಮ್ಮಾ, ನೀನು ಆ ಶಂಕರಪ್ಪನ ಮಗಳು. ನಿನ್ನ ತಾಯಿಯ ಹೆಸರು ಗಂಗಮ್ಮ. ಗಂಗಮ್ಮನಿಗೆ ಇಬ್ಬರು ಹೆಣ್ಣು ಮಕ್ಕಳು ಅವಳಿ ಜವಳಿಯಾಗಿ ಹುಟ್ಟಿದರು. ನೀನೊಬ್ಬಳು, ಕಮಲಮ್ಮ ಮತ್ತೊಬ್ಬಳು. ಆದರೆ ಗಂಗಮ್ಮನು ನಿಮ್ಮನ್ನು ಹೆತ್ತ ಕೂಡಲೇ ತೀರಿಕೊಂಡಳು. ಶಂಕರಪ್ಪನು ನಿಮ್ಮನ್ನು ಸಾಕಲಾರದೆ ಯೋಚಿಸುತ್ತಿದ್ದನು. ಆಗ ನೆಂಟರೆಲ್ಲಾ ಸೇರಿ ಒಂದು ಏರ್ಪಾಡು ಮಾಡಿದೆವು. ನಿನ್ನನ್ನು ವೀರಪ್ಪನ ಪಾಲಿಗೆ ಕೊಟ್ಟೆವು. ವೀರಪ್ಪನಿಗೆ ಮಕ್ಕಳಿರಲಿಲ್ಲ. ಇನ್ನೊಬ್ಬಳನ್ನು ಈ ಗೋಪಾಲನ ತಾಯಿ ರಾಮಕ್ಕನ ವಶಕ್ಕೆ ಕೊಟ್ಟೆವು. ಆಗ ವೀರಪ್ಪ ಸಾಮಾನ್ಯ ಸೈನಿಕನಾಗಿದ್ದ. ನಿನ್ನನ್ನು ಮನೆಗೆ ತೆಗೆದುಕೊಂಡು ಹೋಗಿ ಆತನು ನಿನಗೆ ‘ಚಿನ್ನಕ್ಕ’ ಎಂದು ಹೆಸರಿಟ್ಟನು. ರಾಮಕ್ಕ ಇನ್ನೊಬ್ಬಳಿಗೆ ‘ಕಮಲಮ್ಮ’ ಎಂದು ಹೆಸರಿಟ್ಟು ಸಾಕಿದಳು. ಸ್ವಲ್ಪಕಾಲಕ್ಕೆ ವೀರಪ್ಪನಿಗೆ ಉದ್ಯೋಗದಲ್ಲಿ ಮೇಲಿನ ಕೆಲಸ ಸಿಕ್ಕಿತು. ಹಾಗೆಯೇ ಮುಂದುವರಿಯುತ್ತಾ ವೀರಪ್ಪನು ಸೈನ್ಯಾಧಿಪತಿಯಾದನು. ಈ ಭಾಗ್ಯವೆಲ್ಲಾ ನೀನು ಮನೆಗೆ ಬಂದ ಮೇಲೆ ಬಂದಿದ್ದುದರಿಂದ ವೀರಪ್ಪ ನಿನಗೆ ‘ಭಾಗ್ಯಲಕ್ಷ್ಮಿ’ ಎಂದು ಹೆಸರನ್ನು ಕೊಟ್ಟನು. ರಾಮಕ್ಕ ಕಮಲಮ್ಮನನ್ನು ಏಳೆಂಟು ವರ್ಷ ವಯಸ್ಸಾಗುವವರೆಗೂ ಸಾಕಿ ವರದಪ್ಪ ಸ್ವಾಮಿಗಳ ಆಶ್ರಮದಲ್ಲಿ ಬಿಟ್ಟಳು. ಅವಳು ಅಲ್ಲೇ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾಳೆ. ವಿದ್ಯೆಯನ್ನೂ ಕಲಿಯುತ್ತಾ ಇದ್ದಾಳೆ. ವರದಪ್ಪ ಸ್ವಾಮಿಗಳ ಆಶ್ರಮ ಎಲ್ಲಿದೆ ಅಂತ ತಿಳಿದಿದ್ದೀರಿ? ಆಗೋ, ಆ ಪೂರ್ವ ದಿಕ್ಕಿನಲ್ಲಿ ಆ ಗುಡ್ಡಗಳಿವೆಯಲ್ಲಾ, ಅಲ್ಲಿ ಒಂದು ಶಿವನ ದೇವಸ್ಥಾನವಿದೆ. ಅದರಿಂದ ಹಾಗೆಯೇ ಮುಂದಕ್ಕೆ ಹೋದರೆ ಅರ್ಧ ಕೂಗಿನಷ್ಟು ದೂರದಲ್ಲಿ ಒಂದು ಭಾವಿ ಇದೆ. ಅಲ್ಲಿಯೇ ಅವರ ಆಶ್ರಮ. ಗೋಪಾಲಾ, ಇವರನ್ನು ನೋಡು. ಇವರೆಲ್ಲಾ ನಿಮ್ಮ ನೆಂಟರೇ, ರಂಗಯ್ಯ, ಸ್ವಲ್ಪ ಸಹಾಯ ಮಾಡುತ್ತೀಯಾ, ಕೊಡೆಯನ್ನು ಹುಡುಕುವುದಕ್ಕೆ?”
ಗೋಪಾಲ – “ಏನು ಸಹಾಯ ಮಾಡಬೇಕು ತಾತಯ್ಯಾ?”
ಮುದುಕ – ‘ಆಗಲೇ ಹೇಳಿದೆನಲ್ಲಪ್ಪಾ, ಇನ್ನು ಸ್ವಲ್ಪ ದಿವಸಕ್ಕೆ ನಿನಗೆ ಇಪ್ಪತ್ತು ವರ್ಷ ತುಂಬುತ್ತೆಂದು. ಅದಾದ ಕೂಡಲೇ ನೀನು ನಿಮ್ಮ ತಂದೆ ಹಿಡಿಯುತ್ತಿದ್ದ ಕೊಡೆಯನ್ನು ಸಿದ್ಧವಾಗಿಟ್ಟುಕೊಂಡು ಕೆಲಸಕ್ಕೆ ಸೇರಬೇಕು ಎಂದು ಹೇಳಿದೆನಲ್ಲಾ ಆ ಕೊಡೆಯನ್ನೇ ಇಲ್ಲಿ ಹುಡುಕುತ್ತಿದ್ದೇನೆ. ಎಲ್ಲೋ
ಕೆಳಗೆ ಬಿದ್ದಿರಬೇಕು.’
ಗೋಪಾಲ “ನಾನು ಹುಡುಕಿ ಕೊಡುತ್ತೇನೆ ಬನ್ನಿ. *
ಗೋಪಾಲನು ಹೋಗಿ ಭಾರವಾದ ಹಳೆಯ ಸಿಂಹಾಸನಗಳನ್ನೂ, ಪಲ್ಲಕ್ಕಿ ಗಳನ್ನೂ, ಇತರ ಸಾಮಾನುಗಳನ್ನೂ ಸುಲಭವಾಗಿ ಈಚೆ ಇಟ್ಟು ಅವನ ತಂದೆ ಹಿಡಿಯುತ್ತಿದ್ದ ಕೊಡೆಯನ್ನು ಹುಡುಕಿ ತೆಗೆದನು. ಮುದುಕನಿಂದ ಅದೇ ತನ್ನ ತಂದೆಯ ಕೊಡೆ ಎಂದು ಸ್ಪಷ್ಟ ಮಾಡಿಸಿಕೊಂಡು, ಸಂತೋಷದಿಂದ ಅದರ ಮೇಲಿನ ಧೂಳು ಕೊಡವಿ, ಅದನ್ನು ಬಿಚ್ಚಿ “ಹೀಗೆ ತಾನೇ ರಾಜರಿಗೆ ಕೊಡೆ ಹಿಡಿಯುವುದು” ಎಂದು ಅದನ್ನು ಹಿಡಿದು ಮುದುಕನಿಗೆ ತೋರಿಸಿದನು.
ಭಾಗ್ಯಲಕ್ಷ್ಮೀ – “ಕೊಡೆ ಎಷ್ಟು ಚೆನ್ನಾಗಿದೆ ! ಎಂತಹ ಒಳ್ಳೆಯ ರೇಷ್ಮೆ ಬಟ್ಟೆಗಳಿಂದ ಇದನ್ನು ತಯಾರಿಸಿದ್ದಾರೆ! ಇದರ ಸುತ್ತಲೂ ಮುತ್ತಿನ ಹಾರಗಳನ್ನುಎಷ್ಟು ಚೆನ್ನಾಗಿ ಜೋಡಿಸಿದ್ದಾರೆ! ಗೋಪಾಲನು ಕೊಡೆಯನ್ನು
ಎಷ್ಟು ಚೆನ್ನಾಗಿ ಹಿಡಿದಿದ್ದಾನೆ!
ರಂಗಯ್ಯ (ಗೋಪಾಲನನ್ನು ಈರ್ಷ್ಯೆಯಿಂದ ನೋಡುತ್ತ ಕುಹಕಿಯಾಗಿ) – ಏನು ಗೋಪಾಲಾ, ನಮ್ಮ ಭಾಗ್ಯಲಕ್ಷ್ಮಿ ನೀನು ಕೊಡೆ ಹಿಡಿಯುವ ರೀತಿಯನ್ನು ಎಷ್ಟು ಮೆಚ್ಚುತ್ತಿದ್ದಾಳೆ! ಆದರೆ ನೀನು ಬರಿ ಬಯಲಿಗೆ ಕೊಡೆ ಹಿಡಿದು ಏನು ಪ್ರಯೋಜನ ? ಇಲ್ಲಿ ರಾಜರೂ ಇಲ್ಲ, ರಾಣಿಯೂ ಇಲ್ಲ. ಬಯಲಿಗೆ ಕೊಡೆ ಹಿಡಿದು ಏನು ಪ್ರಯೋಜನ ?”
ಭಾಗ್ಯಲಕ್ಷ್ಮಿ- “ನಾಳೆ ಮಾಡಬೇಕಾಗಿರುವ ಕೆಲಸವನ್ನು ಈ ದಿನ ಅಭ್ಯಾಸ ಮಾಡುವುದು ಒಳ್ಳೆಯದೇ ಗೋಪಾಲಾ, ನಾಳೆ ನೀನು ರಾಣಿಗೂ ಕೊಡೆ ಹಿಡಿಯಬೇಕಾಗಿರುವುದು. ಅದನ್ನು ಈಗಲೇ ಸ್ವಲ್ಪ ಅಭ್ಯಾಸ ಮಾಡಿಕೊಂಡಿರು. ಆ ಕೊಡೆಯನ್ನು ಇಲ್ಲಿ ತೆಗೆದು ಕೊಂಡು ಬಾ. ನಾನು ರಾಣಿಯ ಹಾಗೆ ಈಕಡೆಯಿಂದ ಆಕಡೆಯವರೆಗೂ ಮಂದಗಮನದಲ್ಲಿ ಠೀವಿಯಿಂದ ನಡೆಯುತ್ತೇನೆ. ನೀನು ನನ್ನ ಹಿಂದೆ ಕೊಡೆ ಹಿಡಿದುಕೊಂಡು ಬಂದು ಅಭ್ಯಾಸ ಮಾಡಿಕೋ.”
ಈ ಜಂಭದ ಮಾತುಗಳನ್ನು ಕೇಳಿ ಗೋಪಾಲನು ನಸುನಕ್ಕು ಗಾಂಭೀರ್ಯದಿಂದ ಮೆಲ್ಲಗೆ ಹೇಳಿದನು “ಅಂತಃಪುರದಲ್ಲಿ ಹಾಗೆ ಮಾಡುವುದು ನನಗೆ ಉಚಿತವಲ್ಲ.”
ರಂಗಯ್ಯ – (ಈರ್ಷ್ಯೆಯಿಂದ) “ಚಿನ್ನಾ, ನೀನು ನನ್ನ ರಾಣಿಯಾಗು ವವಳು, ಗೋಪಾಲನು ನಿನಗೆ ಕೊಡೆ ಹಿಡಿಯುವುದು ಅನುಚಿತವಲ್ಲವೇ ? ನಾನೇ ಆ ಕೆಲಸವನ್ನು ನಿನಗಾಗಿ ಮಾಡುತ್ತೇನೆ. ಆ ಮೂಲೆಗೆ ಹೋಗಿ ರಾಣಿಯಂತೆ ಅಲ್ಲಿ ನಿಂತುಕೋ. ನಾನು ಆ ಕೊಡೆಯನ್ನು ತಂದು ನಿನಗೆ ಹಿಡಿಯುತ್ತೇನೆ. ಅಲ್ಲಿಂದ ಮುಂದಕ್ಕೆ ನಾವಿಬ್ಬರೂ ನಡೆಯೋಣ.”
ಹೀಗೆ ಹೇಳಿ ರಂಗಯ್ಯನು ಕೂಡಲೇ ಗೋಪಾಲನ ಹತ್ತಿರಕ್ಕೆ ಹೋದನು. ಗೋಪಾಲನು ಕೊಡೆಯನ್ನು ಮುಚ್ಚಿ ಇಳಿಸಿದನು. ರಂಗಯ್ಯನು ಕೊಡೆಯನ್ನು ತೆಗೆದುಕೊಳ್ಳುವುದಕ್ಕೆ ಹೋದಾಗ ಗೋಪಾಲನು ಅದನ್ನು ಆತನಿಗೆ ಕೊಡಲಿಲ್ಲ. ರಂಗಯ್ಯನು ಒಳ್ಳೆಯ ಮಾತುಗಳಿಂದ ಗೋಪಾಲನನ್ನು ಕೇಳಿದನು. ಆದರೂ ಗೋಪಾಲನು ಕೊಡೆಯನ್ನು ಕೊಡಲಿಲ್ಲ. ರಂಗಯ್ಯನು ಮುದುಕನನ್ನು ಕೊಡೆಯನ್ನು ಕೊಡಿಸಬೇಕೆಂದು ಒತ್ತಾಯ ಮಾಡಿದನು. ಮುದುಕನಿಗೆ ಕೊಡೆಯನ್ನು ಬಿಚ್ಚುವುದು ಈತನಿಗೆ ಬರುವುದಿಲ್ಲ, ಕೊಡೆಯನ್ನು ಎತ್ತಿ ಹಿಡಿಯುವುದು ಈತನ ಕೈಲಾಗದು, ಸ್ವಲ್ಪ ಕೊಡೆಯನ್ನು ಈತನ ಕೈಗೆ ಕೊಡಿಸಿ ನೋಡೋಣ ಎನ್ನಿಸಿತು.
ಮುದುಕ- (ಗೋಪಾಲನನ್ನು ಕುರಿತು)
“ಸ್ವಲ್ಪ ಕೊಡು, ನಾನಿದ್ದೇನೆ.”
ಗೋಪಾಲನು ರಂಗಯ್ಯನ ಕೈಗೆ ಕೊಡೆಯನ್ನು ಕೊಟ್ಟನು. ಆತನು ಅದನ್ನು ಬಿಚ್ಚಲಾರದೆ ಹೋದನು.
ಮುದುಕ ಹೇಳಿದನು- “ಇದನ್ನು ಎತ್ತಿ ಬಿಚ್ಚುವುದೂ, ಸರಿಯಾಗಿ ಹಿಡಿದುಕೊಳ್ಳುವುದೂ ನಿನ್ನಂತಹ ಬಲಹೀನರಿಗೆ ಸಾಧ್ಯವಾಗದು. ಕೊಡೆಯನ್ನು ನಮ್ಮ ಗೋಪಾಲನಿಗೆ ಕೊಟ್ಟು ಬಿಡು.”
ಗೋಪಾಲನು ಕೊಡೆಯನ್ನು ತೆಗೆದುಕೊಂಡನು. ರಂಗಯ್ಯನಿಗೆ ನಾಚಿಕೆಯಾಯಿತು. ಭಾಗ್ಯಲಕ್ಷ್ಮಿಯು ರಂಗಯ್ಯನ ಹತ್ತಿರಕ್ಕೆ ಓಡಿಬಂದು ಹೇಳಿದಳು.
“ರಾಣಿಯ ಸೇವೆಯನ್ನು ಚೆನ್ನಾಗಿ ಮಾಡಿದೆ. ನಿನ್ನಂತಹ ಬಲಹೀನನಿಗೆ ರಾಣಿಯಾದರೆ ಸೈನ್ಯಾಧಿಪತಿಯ ಮಗಳ ಗತಿ ಅಧೋಗತಿಯೇ.” ಹೀಗೆಂದು ಅವಳು ಕಿಲ ಕಿಲನೆ ನಕ್ಕು ಬಿಟ್ಟಳು.
