ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 10
ಮಠಾಧಿಪತಿಯ ಕರ್ತವ್ಯ.
(ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಓದುಗರಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಪ್ರಶ್ನೆ:-
ಅ) ಒಬ್ಬ ಮಠಾಧಿಪತಿಯು ತನ್ನ ಸ್ಥಾನಕ್ಕೆ ಒಬ್ಬ ಶಿಷ್ಯನನ್ನು ಸ್ವೀಕರಿಸಿ ಅವನ ಪಾದೋದಕವನ್ನು ತೆಗೆದುಕೊಂಡು ಹಸ್ತಮಸ್ತಕ ಪ್ರಯೋಗ ಮಾಡಿ ಆಶೀರ್ವದಿಸಿದ ಮೇಲೆ ತನ್ನ ಶಿಷ್ಯನನ್ನು ಆ ಸ್ಥಾನದಿಂದ ತೆಗೆಯುವುದಕ್ಕೆ ಸಾಧ್ಯವೇ?
ಆ) ಒಂದು ಅಮೃತ ವಚನದಲ್ಲಿ “ಗುರುವು ತನ್ನ ಒಬ್ಬ ಶಿಷ್ಯನನ್ನು ತಿದ್ದುವುದಕ್ಕಾಗದವನು ಗುರುವೇ ಅಲ್ಲ” ಎಂದು ಉಚ್ಛರಿಸಿದೆ. ಈರೀತಿ ಇರುವಾಗ ಒಬ್ಬ ಮಠಾಧಿಪತಿಯು ತನ್ನ ಶಿಷ್ಯನನ್ನು ತಿದ್ದದೆ, ಸಲ್ಲದ ಆರೋಪಗಳನ್ನು ಹೊರಿಸಿ ಮಠದಿಂದಲೇ ಓಡಿಸುವುದು ಸರಿಯೇ?
ಉತ್ತರ:
ಅ) ಶಿಷ್ಯನನ್ನು ಯಾವ ಪರಿಸ್ಥಿತಿಯಲ್ಲೂ ತೆಗೆಯುವುದಕ್ಕೇ ಸಾಧ್ಯವಿಲ್ಲವೆಂದು ಹೇಳಲಾಗುವುದಿಲ್ಲ. ಸಾಧ್ಯವಾದಷ್ಟೂ ಇದನ್ನು ತಪ್ಪಿಸಲು ಪ್ರಯತ್ನಿಸಬೇಕಾದುದು ಮಠಾಧಿಪತಿಯ ಕರ್ತವ್ಯ.
ಆ) ಶಿಷ್ಯನನ್ನು ತಿದ್ದಲು ಸರ್ವ ಪ್ರಯತ್ನವನ್ನೂ ಮಾಡಲೇಬೇಕು. ಅದರಲ್ಲಿ ಲೋಪ ಮಾಡಿದರೆ ಮಠಾಧಿಪತೆಯದೇ ತಪ್ಪು. ಸಲ್ಲದ ಆರೋಪಗಳನ್ನು ಹೊರಿಸುವುದಂತೂ ಖಂಡಿತ ಅನುಚಿತ. ಹಾಗೆ ಮಾಡಿ ಮಠದಿಂದಲೇ ಓಡಿಸುವುದು ಮಗನನ್ನು ಮನೆಯಿಂದ ಓಡಿಸುವುದಕ್ಕಿಂತಲೂ ಹೆಚ್ಚಿನ ಅಪರಾಧ.
“ಪುತ್ರಾದಿಚ್ಛೇತ್ಪರಾಜಯಂ” ಎಂಬ ಸುಭಾಷಿತವನ್ನು ಆಧಾರವಾಗಿಟ್ಟುಕೊಂಡು “ಶಿಷ್ಯಾದಿ ಚ್ಛೇತ್ಪರಾಜಯಂ” ಎಂಬ ಸುಭಾಷಿತವನ್ನು ಹೇಳುವುದುಂಟು. ಅಂದರೆ ತಂದೆಯು ತನ್ನ ಮಗನು ತನಗಿಂತಲೂ ಸಮರ್ಥನಾಗಿ ತನಗೆ ಅವನಿಂದ ಸೋಲು ಬರಲಿ ಎಂದು ಬಯಸಬೇಕು ಎಂದು ಅರ್ಥ. ಹಾಗೆಯೇ ಗುರು ಸಹ ಶಿಷ್ಯನ ವಿಷಯದಲ್ಲಿ ಬಯಸಬೇಕು.
ಆದುದರಿಂದ ಮೇಲ್ಕಂಡಂತಹ ವಿಪರೀತ ಪರಿಸ್ಥಿತಿ ಬಂದಾಗ ಗುರು ಮೇಲೆ ಹೇಳಿದಂತೆ ಬಯಸಬೇಕು. ಒಂದು ವೇಳೆ ಶಿಷ್ಯನಲ್ಲಿ ದೋಷಗಳಿದ್ದರೆ ಅದನ್ನು ಆತನಿಗೆ ತಿಳಿಸಿ ಆತನನ್ನು ತಿದ್ದಲು ಸಾಮ ದಾನಗಳೆರಡರಿಂದಲೂ ಪ್ರಯತ್ನಿಸಬೇಕು. ಆದರಿಂದಲೂ ಸಾಧ್ಯವಾಗದೆ ಶಿಷ್ಯನು ದುಷ್ಟನಾಗಿ ಅದರಿಂದ ಮಠಕ್ಕೆ, ಧರ್ಮಕ್ಕೆ, ಅಪಾಯವೊದಗುವ ಸಂಭವವಿದ್ದರೆ ಮಾತ್ರ ಕೊಳೆತ ಅಂಗವನ್ನು ಕತ್ತರಿಸಿಕೊಂಡಂತೆ ಆತನನ್ನು ತೊಲಗಿಸಿಕೊಂಡು ತಾನು ಸಹ ಅಂಗವಿಕಲನಂತೆ ದುಃಖಿಸಿ ಅಗತ್ಯವಾದರೆ ತಾನೂ ಮಠವನ್ನು ಬಿಟ್ಟು ತನಗಿಂತಲೂ ಅರ್ಹರಾದವರಿಗೆ ಅದರ ವಹಿವಾಟನ್ನು ಒಪ್ಪಿಸುವುದು ಒಳ್ಳೆಯದು ಎಂದು ಅಲ್ಪಮತಿಗೆ ತೋಚುತ್ತದೆ.
ಪ್ರಶ್ನೆ:- ಒಬ್ಬ ಗುರುವು ಶಿಷ್ಯನನ್ನು ಪಟ್ಟಕ್ಕೇರಿಸುವಾಗ ಹಸ್ತಮಸ್ತಕ ಸಂಯೋಗದ ನಂತರ ತನ್ನ ಶಿಷ್ಯನ ಪಾದೋದಕವನ್ನು ಸ್ವೀಕರಿಸಿ ತನ್ನ ಸರಿಸಮಾನವೆಂದು ಪರಿಗಣಿಸಿದ ನಂತರ ತನ್ನ ಶಿಷ್ಯನಲ್ಲಿ ದೋಷ ಎಣಿಸಬಹುದೇ? ವೀರಶೈವ ಧರ್ಮದಲ್ಲಿ ಈ ರೀತಿ ಅದ ನಂತರ ಇಬ್ಬರೂ ಸರಿಸಮಾನರು ಎಂದು ರೂಢಿಯಲ್ಲಿದೆ. ಆದರೆ ಧರ್ಮ ಏನು ಹೇಳುತ್ತದೆ ?
ಉತ್ತರ:- ಅನುಗ್ರಹವೆಂಬುದು ಒಂದು ಮಾನಸಿಕ ಕ್ರಿಯೆ. ಅನುಗ್ರಹ ಮಾಡುವ ಗುರು ಹಾಗೂ ಪಡೆಯುವ ಶಿಷ್ಯ ಇಬ್ಬರ ಮಾನಸಿಕ ಸ್ಥಿತಿಗಳು ಇಲ್ಲಿ ಬಹಳ ಮುಖ್ಯವಾಗುತ್ತವೆ. ಹಸ್ತ ಮಸ್ತಕ ಸಂಯೋಗದ ಸಫಲತೆಯೂ ಸಹ ಈ ಮಾನಸಿಕ ವ್ಯಾಪರವನ್ನೇ ಅವಲಂಬಿಸಿರುತ್ತದೆ. ಗುರುಶಕ್ತಿಯ ಆವರಣದ ಜೊತೆಗೆ ಶಿಷ್ಯನ ಶ್ರದ್ಧಾಸಕ್ತಿಯ ಉದ್ಧರಣವೂ ಅಷ್ಟೇ ಮುಖ್ಯವೆನ್ನುತ್ತದೆ ಧರ್ಮಶಾಸ್ತ್ರ. ಇವೆರಡರಲ್ಲಿ ಯಾವುದರಲ್ಲಿ ಊನವಿದ್ದರೂ ಸಮರಸವೇರ್ಪಡದು.
ಸಂಪನ್ನ ಗುರುವಿನ ಅನುಗ್ರಹ ಸ್ವಾತಿಹನಿ ಬೀಳುವಾಗ ಸರಿಯಾಗಿ ಶಿಷ್ಯನು ತನ್ನ ಮನವೆಂಬ ಕಪ್ಪೆಚಿಪ್ಪನ್ನು ಸರಿಯಾಗಿ ಶಿಷ್ಯನು ತನ್ನ ಮನವೆಂಬ ಕಪ್ಪೆಚಿಪ್ಪನ್ನು ತೆರೆದಿಟ್ಟರೆ ಅದು ಮುತ್ತೆಂಬ ಅನರ್ಘ ಫಲವಾಗುತ್ತದೆ. ಸ್ವಾತಿಹನಿ ಪಾತದಲ್ಲಿ, ಕಪ್ಪೆಚಿಪ್ಪು ಬಾಯ್ತೆರೆಯುವಲ್ಲಿ ಅಸಂಗತಗಳಾದರೆ ಆಚರಣೆಗೆ ಎಷ್ಟೇ ಮಹತ್ವವಿದ್ದರೂ ಪರಿಣಾಮವಾಗದು. ಒಂದು ಕಡೆ ಶಿಷ್ಯವತ್ಸಲತೆ, ಮತ್ತೊಂದು ಕಡೆ ಗುರುಭಕ್ತಿ, ಧರ್ಮಶ್ರದ್ಧೆ– ಇವೆರಡರ ಅನನ್ಯ ಕೂಟದಿಂದ ಅದ್ಭುತವೊಂದು ಘಟಿಸುತ್ತದೆ. ಅದರ ಫಲವನ್ನು ಸಮಾಜ, ನಾಡು ಉಂಡು ಕೃತಾರ್ಥವಾಗುತ್ತದೆ.
ನೀವು ಗಮನದಲ್ಲಿಟ್ಟುಕೊಂಡು ಹೇಳುವ ವಿಚಾರವೂ ಇದಕ್ಕೆ ಹೊರತಲ್ಲವೆನಿಸುತ್ತದೆ. ಬಹಿರಂಗದ ಕ್ರಿಯೆ ಅಂತರಂಗವನ್ನು ಮಾಗಿಸುವ, ಸಂಬಂಧವನ್ನು ಅನ್ಯೋನ್ಯವಾಗಿಸುವ ಸಾಧನ ಅಷ್ಟೆ. ಮನಗಳೊಂದಾಗದೆ ಮಂತ್ರ– ತಂತ್ರಗಳು ಯಾಂತ್ರಿಕವಾಗುತ್ತವೆ, ಶುಷ್ಕವೆನಿಸುತ್ತವೆ. ಫಲ ಶೂನ್ಯವಾಗುತ್ತದೆ.
ಸನ್ಯಾಸಿಗಳಲ್ಲಿ ಸಮಾನತೆ ಅಸಮಾನತೆಗಳ ಪ್ರಶ್ನೆಯೇ ಬರುವುದಿಲ್ಲ. ವಿಶ್ವನ್ನೆಲ್ಲಾ ಆತ್ಮ ಸಮಾನವಾಗಿ ನೋಡುವವನೇ ಸನ್ಯಾಸಿ. ವ್ಯಾವಹಾರಿಕವಾಗಿ ಸಮಾನತೆ ಅಸಮಾನತೆಗಳ ಪ್ರಶ್ನೆ ಬಂದರೆ ಹೆಚ್ಚು ಧರ್ಮಿಷ್ಠನಾದವನು ಉತ್ತಮ. ಇಲ್ಲಿ ವಯಸ್ಸು, ಗುರುಶಿಷ್ಯನ ಸಂಬಂಧ ಇತ್ಯಾದಿಗಳು ಯಾವುವು ಕೆಲಸ ಮಾಡಲಾರವು. ಇಬ್ಬರೂ ತಮ್ಮ ತಮ್ಮ ಅಭಿಪ್ರಾಯವನ್ನು ಆತ್ಮ ಸಾಕ್ಷಿಯಾಗಿ ಹೇಳುವ ಅಧಿಕಾರ ಹೊಂದಿರುತ್ತಾರೆ ಎಂದು ನನ್ನ ಅಭಿಪ್ರಾಯ.
– ಲಂಕಾ ಕೃಷ್ಣಮೂರ್ತಿ