ವಿಜ್ಞಾನ ಯುಗದಲ್ಲಿ ಅಜ್ಞಾನ(ದಿನಾಂಕ 1 – 12- 1995 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ನಮ್ಮ ದೇಶವು ಸ್ವತಂತ್ರವಾಗುವುದಕ್ಕೆ ಮೊದಲು ಮಹಾತ್ಮಾ ಗಾಂಧಿ ಅಂತಹ ನಾಯಕರು ಒಂದುಕಡೆ ದೇಶದ ಸ್ವಾತತ್ರ್ಯಕ್ಕಾಗಿ ಹೋರಾಡುತ್ತಿದ್ದರೂ ಅತ್ಯುತ್ತಮರಾದ ಧರ್ಮಾನುಯಾಯಿಗಳಾಗಿದ್ದರು. ಅಹಿಂಸೆ, ಸತ್ಯ, ಸಮಾನತೆ, ಭೂತದಯೆ, ಇಂದ್ರಿಯನಿಗ್ರಹ, ದೈವಭಕ್ತಿ ಮುಂತಾದ ಧರ್ಮದ ಪ್ರಧಾನಾಂಶಗಳಿಗೆ ಬೆಲೆಕೊಟ್ಟು ಧರ್ಮ ಪ್ರಚಾರ ಮಾಡುತ್ತಿದ್ದರು. ಆದರೆ ಅನುಯಾಯಿಗಳು ಸಹ ಸುಸಂಸ್ಕೃತರಾಗಿದ್ದು ಅವರು ಬೋಧಿಸಿದ ಅಹಿಂಸಾ ಮಾರ್ಗದಲ್ಲೇ ನಡೆಯುತ್ತಿದ್ದರು. ಇಂತಹ ನಾಯಕರ ನಾಯಕತ್ವದಲ್ಲಿ ದೇಶವು ಸರಿಯಾದ ಮಾರ್ಗದಲ್ಲಿ ಮುಂದುವರಿದು ಸ್ವಾತಂತ್ರ್ಯಯವನ್ನು ಸಾಧಿಸಿತು. ಸ್ವಾತಂತ್ರ್ಯ ಬಂದ ಮೇಲೆ ಸ್ವಲ್ಪಕಾಲ ಪರಿಸ್ಥಿತಿ ಚೆನ್ನಾಗಿತ್ತು. ಆದರೆ ಈಗ ಬರಬರುತ್ತ ಧರ್ಮವು ನಶಿಸಿಹೋಗುತ್ತಿದೆ. ವಿಜ್ಞಾನವು ಬೆಳೆಯುತ್ತಿದ್ದರೂ ಅಜ್ಞಾನವು ಅದರ ಹಿಂದೆ ಬೆಳೆಯುತ್ತಲೇ ಇದೆ.
ಈಗ ಪ್ರತಿದಿನ ನಾವು ನೋಡುವ ವಾರ್ತಾಪತ್ರಿಕೆಗಳಲ್ಲಿ ರಾಜಕೀಯ ಸ್ಪರ್ಧೆಗಳು, ಕುನೀತಿಗಳು, ಸ್ವಾರ್ಥವೂ, ವೈಷಮ್ಯಗಳೂ, ಹಿಂಸಾಚಾರಗಳೂ ಕಂಡುಬರುತ್ತವೆಯೇ ಹೊರತು ಸತ್ಯಧರ್ಮಗಳ ಅನುಸರಣೆ ಕಾಣುವುದೇ ಇಲ್ಲ. ಬುದ್ಧಿವಂತರೂ, ಪಂಡಿತರೂ, ಆದವರು ಸಹ ಮತ, ಕೋಮು, ಇತ್ಯಾದಿಗಳ ವಿಷಯದಲ್ಲಿ ಭೇದಬುದ್ಧಿವುಳ್ಳವರಾಗಿ ಕಂಡುಬರುತ್ತಿದ್ದಾರೆ. ಆ ಪ್ರಪಂಚಕ್ಕೆಲ್ಲಾ ಇರುವುದು ಒಬ್ಬನೇ ದೇವರು. ಆ ದೇವನ ತತ್ವವನ್ನು ವೈಜ್ಞಾನಿಕವಾಗಿ ತಿಳಿದುಕೊಂಡು ಪ್ರಚಾರ ಮಾಡುವವರೇ ಕಂಡುಬರುತ್ತಿಲ್ಲ. ಅಂತಹವರಿದ್ದರೂ ಅವರ ಅಭಿಪ್ರಾಯಗಳಿಗೆ ಪ್ರಚಾರವೇ ಇಲ್ಲ. ವೈಜ್ಞಾನಿಕ ದೃಷ್ಟಿಯಿಂದ ಮಾನವ ಸ್ವಭಾವವನ್ನು ಪರೀಕ್ಷಿಸಿದರೆ ದೇಶ ಕಾಲಗಳಲ್ಲಿ ಭಿನ್ನತೆ ಇರುವುದು ಸಹಜ. ಈ ಭಿನ್ನತೆಗೆ ಪ್ರಾಶಸ್ತ್ಯವನ್ನು ಕೊಡದೆ ಅದನ್ನು ಆ ದೇವರ ಲೀಲೆಯನ್ನಾಗಿ ನೋಡುತ್ತ ಎಲ್ಲ ಮತಗಳೂ ಬೋಧಿಸುವ ಧರ್ಮದ ಮೂಲ ತತ್ವಗಳಿಗೂ, ದೈವಭಕ್ತಿಗೂ ಪ್ರಾಶಸ್ತ್ಯವನ್ನು ಕೊಟ್ಟು ಎಲ್ಲ ಮತಗಳವರೂ ವಿಶಾಲ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಮತವೈಷಮ್ಯಗಳನ್ನು ರಾಜಕೀಯದಲ್ಲಿ ಬಳಸಿಕೊಳ್ಳುವ ಕೆಲಸ ಪೂರ್ಣವಾಗಿ ನಿಲ್ಲಬೇಕಾಗಿದೆ.
ಇಂದಿನ ವಿಜ್ಞಾನ ಯುಗದಲ್ಲಿ ವಿಜ್ಞಾನವನ್ನು ಲೋಕದ ಹಿತಕ್ಕಾಗಿ ಬಳಸಿಕೊಳ್ಳಲು ವಿಶ್ವಮಾನವ ಧರ್ಮದ ಮೂಲತತ್ವಗಳ ಪ್ರಚಾರವನ್ನು ನಿಜವಾದ ಜ್ಞಾನಿಗಳು ಕೈಕೊಳ್ಳಬೇಕಾಗಿದೆ.