ಅಗ್ನಿವ್ರತ ಮತ್ತು ಪೃಥಿವೀ ವ್ರತ
ಮನುಸ್ಮೃತಿಯು ರಾಜಧರ್ಮಗಳನ್ನು ಲೋಕದ ಹಿತದೃಷ್ಟಿಯಿಂದ ಬಹಳ ವಿವರವಾಗಿ ಮತ್ತು ನಿಷ್ಪಕ್ಷ ಪಾತವಾಗಿ ವರ್ಣಿಸಿರುತ್ತದೆ. ಇಂದಿನ ಪ್ರಭುತ್ವದವರು ಆ ಧರ್ಮಗಳನ್ನು ತಿಳಿದುಕೊಂಡು ಅನುಸರಿಸಿದರೆ ಲೋಕಕ್ಕೆ ಬಹಳ ಉಪಕಾರವಾಗುತ್ತದೆ. ರಾಜನು ಇಂದ್ರವ್ರತ, ಸೂರ್ಯವ್ರತ, ವಾಯುವ್ರತ ಮುಂತಾದ ವ್ರತಗಳನ್ನು ಮಾಡಬೇಕೆಂದು ಹೇಳುವ ಮಾತುಗಳು ಬಹಳ ಲೋಕೋಪಕಾರಕಗಳಾಗಿವೆ. ಈ ವ್ರತಗಳಲ್ಲಿ ಅಗ್ನಿವ್ರತ ಮತ್ತು ಪೃಥವೀವ್ರತಕ್ಕೆ ಸಂಬಂಧಿಸಿರುವ ಶ್ಲೋಕಗಳನ್ನು ಕೆಳಗೆ ಕೊಟ್ಟಿರುತ್ತೆ.
ಪ್ರತಾಪಯುಕ್ತ ತೇಜಸ್ವೀ ನಿತ್ಯಂ ಸ್ಯಾತ್ ಪಾಪಕರ್ಮಸು I
ದುಷ್ಟ ಸಾಮಂತ ಹಿಂಸ್ರಶ್ಚ ತದಾಗ್ನೇಯಂ ವ್ರತಂ ಸ್ಮೃತಂ II
ಪಾಪಕಾರ್ಯಗಳನ್ನು ಮಾಡುವವರ ವಿಷಯದಲ್ಲಿ ರಾಜನು ಯಾವಾಗಲೂ ಪ್ರತಾಪಶಾಲಿಯಾಗಿಯು ತೇಜಸ್ವಿಯಾಗಿಯು ಇರಬೇಕು. ಕೆಟ್ಟ ಸಾಮಂತರನ್ನು ಹಿಂಸಿಸುವವನಾಗಿರಬೇಕು. ಇದೇ ಅಗ್ನಿವ್ರತ.
ಪಾಪದ ಕೆಲಸಗಳಿಂದ ಲೋಕಕಂಟಕರಾಗಿರುವವರ ವಿಷಯದಲ್ಲಿ ಪ್ರಭುತ್ವವು ಅವರಿಗೆ ಹೆದರಿಕೆಯನ್ನುಂಟು ಮಾಡುವ ರೀತಿಯಲ್ಲಿಯೇ ವರ್ತಿಸಬೇಕು. ಪ್ರಭುತ್ವದ ಕೆಳಗೆ ಅಧಿಕಾರ ಜಲಾಯಿಸುವವರು ಸಾಮಂತರು. ಅವರು ದುಷ್ಟರಾಗಿದ್ದರೆ ಅವರನ್ನು ಪ್ರಭುತ್ವವು ನಿರ್ಣಾಕ್ಷಿಣ್ಯವಾಗಿ ಶಿಕ್ಷಿಸಬೇಕು. ಇದೇ ಪ್ರಭುತ್ವ ಅನುಸರಿಸಬೇಕಾದ ಅಗ್ನಿ ವ್ರತ. ಕೆಟ್ಟವರ ವಿಷಯದಲ್ಲಿ ಪ್ರಭುತ್ವವು ಎಷ್ಟು ತೀಕ್ಷವಾಗಿ ವರ್ತಿಸಿದರೆ ಲೋಕಕ್ಕೆ ಅಷ್ಟು ಒಳ್ಳೆಯದು. ಆ ಕೆಟ್ಟವನು ಆತ್ಯುನ್ನ ತಾಧಿಕಾರಿಯೇ ಆಗಿರಲಿ, ದಯೆ, ದಾಕ್ಷಿಣ್ಯ ತೋರಿಸಲೇಬಾರದು. ಅವನನ್ನು ಶಿಕ್ಷಿಸಬೇಕು. ಈ ನಿಯಮವನ್ನು ವ್ರತದಂತೆ ಪ್ರಭುತ್ವವು ಪರಿಪಾಲಿಸಲೇಬೇಕು.
ಯಥಾ ಸರ್ವಾಣಿ ಭೂತಾನಿ ಧರಾ ಧಾರಯತೇ ಸಮಂ I ತಥಾ ಸರ್ವಾಣಿ ಭೂತಾನಿ ಬಿಧ್ರತಃ ಪಾರ್ಥಿವಂ ವ್ರತಂ II
ಭೂಮಿಯು ಸರ್ವಪ್ರಾಣಿಗಳನ್ನೂ ಯಾವ ಭೇದ ಭಾವನೆಯಿಲ್ಲದೆ ಹೊತ್ತುಕೊಂಡು ಅವರಿಗೆ ಆಶ್ರಯವನ್ನು ಕೊಡುತ್ತಿದೆ. ಅದೇ ರೀತಿಯಾಗಿ ರಾಜನು ಸರ್ವಪ್ರಾಣಿಗಳನ್ನೂ ಸಮಾನ ದೃಷ್ಟಿಯಿಂದ ಸಂರಕ್ಷಿಸು ವವನಾಗಿರಬೇಕು. ಇದೇ ಪೃಥಿವೀ ವ್ರತ,
ಭೂಮಿತಾಯಿಯನ್ನು ನೋಡಿ ಪ್ರಭುತ್ವವು ಪ್ರಜೆಗಳ ಪೋಷಣೆಯಲ್ಲಿ ಸಮಾನದೃಷ್ಟಿ ಉಳ್ಳದ್ದಾಗಿರ ಬೇಕು. ಎಲ್ಲರಿಗೂ ಅವರವರ ಶಕ್ತಿಗೆ ತಕ್ಕಂತೆ ಜೀವನೋಪಾಯವನ್ನು ಪ್ರಭುತ್ವವು ಒದಗಿಸಬೇಕು. ಬಡವ ಬಲ್ಲಿದರೆಂಬ ಭೇದಭಾವನೆಯಿಲ್ಲದೆ ಎಲ್ಲ ಪ್ರಜೆ ಗಳಿಗೂ ಸಮಾನವಾದ ಗೌರವವು ಸಮಾಜದಲ್ಲಿ ದೊರೆಯುವಂತೆ ಪ್ರಭುತ್ವವು ಶ್ರಮಿಸಬೇಕು.
ಲಂಕಾ ಕೃಷ್ಣಮೂರ್ತಿ
ಸಹಾಯಕ ಸಂಪಾದಕ
