ಕೊಡೆಯ ಗೋಪಾಲ – 10
೮
ಕೋಟಿಗೆ ವಾಯವ್ಯ ದಿಕ್ಕಿನಲ್ಲಿ ವಿಶಾಲವಾದ ಯುದ್ಧ ಭೂಮಿಯಲ್ಲಿ ಸ್ಪರ್ಧಾರಂಗವು ಏರ್ಪಾಟಾಗಿತ್ತು. ಸುಮಾರು ಇನ್ನೂರು ಅಡಿ ಅಗಲ, ಆರುನೂರು ಅಡಿ ಉದ್ದ ಇರುವಷ್ಟು ಮೈದಾನವನ್ನು ಸಮತಲಗೊಳಿಸಿ ನೆಲವನ್ನು ಗಟ್ಟಿಮಾಡಿ, ಅದರ ಸುತ್ತಲೂ ತಡಿಕೆಗಳನ್ನು ಕಟ್ಟಿದರು. ಒಳಗಡೆ ಒಂದು ಪಕ್ಕದಲ್ಲಿ ಸ್ಪರ್ಧೆಗಳನ್ನು ವೀಕ್ಷಿಸುವುದಕ್ಕೆ ರಾಜನೂ ಅವರ ಪರಿವಾರವೂ ಕುಳಿತುಕೊಳ್ಳಲು ತಡಕೆಗಳಿಂದ ಒಂದು ಮಂಟಪವನ್ನು ತಯಾರು ಮಾಡಿದ್ದರು. ಹೊರಗಡೆ ಬಣ್ಣ ಬಣ್ಣದ ಡೇರಗಳನ್ನು ಹಾಕಿದ್ದರು. ಹಿನ್ನೆಲೆಯಲ್ಲಿ ಕೋಟೆಯ ಮೇಲೆ ರಾಮ ಬುರುಜೂ ಅದರ ಹಿಂದೆ ಎತ್ತರವಾದ ಘನಗಿರಿಯೂ ಕಾಣಿಸುತ್ತಿದ್ದವು, ಸ್ಪರ್ಧಾರಂಗದಲ್ಲಿ ಎಲ್ಲೆಲ್ಲೂ ತಳಿರುತೋರಣಗಳನ್ನೂ ಹೂಮಾಲೆಗಳನ್ನೂ ಕಟ್ಟಿದ್ದರು, ಉತ್ಸಾಹವನ್ನು ತುಂಬುವ ರಣಭೇರಿಗಳನ್ನು ಸಹ ಬಾರಿಸುತ್ತಿದ್ದರು. ಸಾಹಸಿಗಳನ್ನು ಆಯ್ಕೆ ಮಾಡಿ ಅವರನ್ನು ಸೈನ್ಯಕ್ಕೆ ಸೇರಿಸಿ ಕೊಳ್ಳುವುದಕ್ಕೂ ಅವರಿಗೆ ಬಹುಮಾನಗಳನ್ನು ಕೊಡುವುದಕ್ಕೂ ಇಂತಹ ಸ್ಪಧೆಗಳನ್ನು ನರಸಿಂಹ ಪ್ರಭುವಿನ ಕಾಲದಿಂದಲೂ ಆಗಾಗ್ಗೆ ನಡೆಸಲಾಗುತ್ತಿತ್ತು. ಈ ಸಲ ಏರ್ಪಾಟಾಗಿದ್ದ ಸ್ಪರ್ಧೆಗಳಲ್ಲಿ ಮುಖ್ಯವಾದ ವಿಶೇಷವೆಂದರೆ, ರುದ್ರಸಿಂಹನು ಅಲ್ಲಿ ನೆರೆದಿದ್ದ ಪ್ರಜೆಗಳಿಗೂ ಸಾಹಸಿಗಳಿಗೂ ಹೇಮಗಿರಿ ರಾಜ್ಯವನ್ನು ವಶಪಡಿಸಿಕೊಳ್ಳುವುದಕ್ಕಾಗಿ ತಾನು ತೀವ್ರವಾದ ಸೈನ್ಯಾಭಿವೃದ್ಧಿಯನ್ನು ಮಾಡಲು ಸಂಕಲ್ಪವನ್ನು ಮಾಡಿರುವುದನ್ನು ಪ್ರಕಟಿಸಿದುದು. ಬಲದೇವನು ಆನೆಯಿಂದ ಬಿದ್ದನೆಂಬ ವಾರ್ತೆಯೇ ಈ ಸಂಕಲ್ಪಕ್ಕೆ ಸಮೀಪ ಕಾರಣವಾಗಿತ್ತು.
ಸ್ಪರ್ಧೆಗಳಲ್ಲಿ ಭಾಗವಹಿಸಲು ಘನಗಿರಿ ರಾಜ್ಯದ ಎಲ್ಲ ಭಾಗಗಳಿಂದಲೂ ಶಕ್ತಿವಂತರಾದ ಸಾಹಸಿಗಳು ಬಂದಿದ್ದರು. ಅವರ ಜೊತೆಗೆ ಅವರ ಅಭಿಮಾನಿಗಳೂ, ಸ್ಪರ್ಧೆಗಳಲ್ಲಿ ಜಯಾಪಜಯಗಳ ಮೇಲೆ ಪಣತೊಟ್ಟು ಜೂಜಾಡುವ ಜೂಜುಗಾರರೂ ಇವರನ್ನಾಶ್ರಯಿಸಿದ ವಾರಾಂಗನೆಯರೂ ಎಲ್ಲ ಕಡೆಗಳಿಂದಲೂ ಬಂದಿದ್ದರು. ಅಲ್ಲಿ ನೆರೆದಿದ್ದ ಜನಸಮೂಹವೆಲ್ಲ ಸಂಸ್ಕೃತಿ ಇಲ್ಲದುದರಿಂದ ಸ್ವೇಚ್ಛಾ ಪ್ರವರ್ತಕವಾಗಿತ್ತು. ಎಲ್ಲಿ ನೋಡಿದರೂ ಗ್ರಾಮ್ಯ ಭಾಷೆಯಲ್ಲಿಯೇ ಹೊಗಳಿಕೆಗಳೂ, ತೆಗಳಿಕೆಗಳೂ, ಹಾಸ್ಯವೂ ಕೇಳಿಬರುತ್ತಿದ್ದವು. ಮದ್ಯ ಮಾಂಸಾದಿಗಳ ಮಾರಾಟವೂ ಉಪಯೋಗವೂ ಮಿತಿಮೀರಿ ನಡೆಯುತ್ತಿತ್ತು. ಅಲ್ಲಲ್ಲಿ ಅಲ್ಪ ಕಾರಣಗಳಿಗೆಲ್ಲ ದೊಡ್ಡ ಜಗಳಗಳೂ ಹೊಡೆದಾಟಗಳೂ ನಡೆಯುತ್ತಿದ್ದವು.
ಅಲ್ಪ ವಿದ್ಯಾವಂತರಾದ ಮೇಧಾವಿಗಳು ಹುಟ್ಟಿಸಿ ಬೆಳೆಸುತ್ತಿದ್ದ ಭಾಷಾ-ಮತ ಕುಲ ದ್ವೇಷಗಳು ಅಲ್ಲಲ್ಲಿ ಕಾಣುತ್ತಿದ್ದವು. ಬೇರೆ ಬೇರೆ ಭಾಷಾ ಮತ – ಕುಲಗಳವರು ತಮ್ಮ ತಮ್ಮ ಪಂಗಡಗಳಿಗೆ ಚಿಹ್ನೆಗಳಾಗಿ ಇಟ್ಟಿದ್ದ
ಬಾವುಟಗಳು, ಎಲ್ಲೆಲ್ಲೂ ಕಾಣುತ್ತಿದ್ದವು. ಬಿರುದು ವಾಕ್ಯಗಳೂ, ಜಯ ಘೋಷಗಳೂ ಎಲ್ಲೆಲ್ಲೂ ಕೇಳಿಬರುತ್ತಿದ್ದವು.
ಕುಸ್ತಿ, ಕತ್ತಿಯುದ್ಧ, ಗದಾಯುದ್ಧ, ಚಿರತೆಗಳ ಜೊತೆಯಲ್ಲಿ ಕುಸ್ತಿ, “ಉಟ್ಲ ಮಾನು”, ಓಟ, ಭಾರಗಳನ್ನು ಎತ್ತುವುದು, ಆನೆ ಸವಾರಿ, ಕುದುರೆ ಸವಾರಿ ಮುಂತಾದ ಆನೇಕ ಸಾಹಸ ಕೃತ್ಯಗಳಲ್ಲಿ ಸ್ಪರ್ಧೆಗಳು ನಡೆದವು. ಸ್ಪರ್ಧೆಗಳಲ್ಲಿ ಜಯಶೀಲರಾದವರಿಗೂ, ಯೋಗ್ಯರೆಂದು ಪರಿಗಣಿಸಲ್ಪಟ್ಟವರಿಗೂ ತಕ್ಕ ಬಹುಮಾನಗಳನ್ನು ಕೊಡಲಾಯಿತಲ್ಲದೆ, ಅವರನ್ನು ಸೈನ್ಯಕ್ಕೆ ಸೇರಿಸಿ ಕೊಳ್ಳಲಾಯಿತು.
ಆ ಸ್ಪರ್ಧೆಗಳಲ್ಲಿ ಮಹಾರಾಜನು ಯುದ್ಧಕ್ಕೆ ಸಿದ್ಧತೆಯನ್ನು ಮಾಡುವ ತನ್ನ ಸಂಕಲ್ಪವನ್ನು ಪ್ರಕಟಿಸಿದುದರಿಂದ ಸಾಹಸಿಗಳಿಗೆ ಹಾಗೂ ಅವರನ್ನು ಅವಲಂಬಿಸಿದ್ದ ಕೆಲವರಿಗೆ ಮಾತ್ರ ಸಂತೋಷವಾಯಿತೇ ಹೊರತು ಜನ ಸಾಮಾನ್ಯರಿಗೆ ಭೀತಿಯೂ, ದುಃಖವೂ ಉಂಟಾದವು. ಯುದ್ಧಕ್ಕೆ ರಾಜನು. ಸಿದ್ಧನಾಗುವನೆಂದು ಸೂಚನೆ ಬಂದ ಕೂಡಲೆ ತೆರಿಗೆಗಳು ಏರುವುದು ಜನರಿಗೆಲ್ಲ ಅನುಭವವಿದಿತವಾಗಿತ್ತು. ತೆರಿಗೆಗಳನ್ನು ಕೇವಲ ಹಣದ ರೂಪದಲ್ಲಿ ಮಾತ್ರ ವಸೂಲು ಮಾಡುತ್ತಿರಲಿಲ್ಲ. ಪ್ರಜೆಗಳಿಗೆ ಜೀವನಕ್ಕಾಗಿ ಬೇಕಾದ ಮತ್ತು ಶೇಖರಿಸಿಟ್ಟಿದ್ದ ಧಾನ್ಯ, ದವಸ, ಬಟ್ಟೆಗಳು ಮುಂತಾದ ಎಲ್ಲ ವಸ್ತುಗಳನ್ನು ಎಲ್ಲಿದ್ದರೂ ಪತ್ತೆ ಹಚ್ಚಿ ರಾಜಭಟರು ಕೊಳ್ಳಿ ಹೊಡೆಯುತ್ತಿದ್ದರು. ನಿಜವಾಗಿ ಸೈನ್ಯಕ್ಕೆ ಎಷ್ಟು ಬೇಕಾಗಿತ್ತೋ ಅದಕ್ಕೆ ಎರಡು ಮೂರರಷ್ಟಾದರೂ ರಾಜಭಟರು ವಸೂಲಿ ಮಾಡಿ, ಅವುಗಳ ಸ್ವಾರ್ಥೋಪಯೋಗವನ್ನು ದುರುಪಯೋಗವನ್ನೂ ಮಾಡುತ್ತಿದ್ದರು. ಯುದ್ಧದ ನೆವದಿಂದ ರಾಜಭಟರು ನಡೆಸುತ್ತಿದ್ದ ದಬ್ಬಾಳಿಕೆ ಜನರಿಗೆ ಭೀಕರವಾಗಿತ್ತು.
ರಾಜನು ಮಾಡಿದ ಯುದ್ಧ ಪ್ರಯತ್ನದ ಸಂಕಲ್ಪದ ಘೋಷಣೆಯು ಬಹಳ ಬೇಗ ಘನಗಿರಿ ಪಟ್ಟಣದಿಂದ ಹಳ್ಳಿ ಹಳ್ಳಿಗೂ ವ್ಯಾಪಿಸಿತು. ಜನರು ರಾಜಭಟರ ದಬ್ಬಾಳಿಕೆಯಿಂದ ಧನಧಾನ್ಯಾದಿಗಳನ್ನು ಉಳಿಸಿಕೊಳ್ಳಲು ಏನೇನೋ ಉಪಾಯಗಳನ್ನು ಮಾಡತೊಡಗಿದರು. ನಿರ್ಬಂಧದಿಂದ ಸತ್ಯವಂತರೂ, ಸುಳ್ಳು ಹೇಳಬೇಕಾಗಿ ಬಂತು. ದುಷ್ಟ ಜನರು ತಮಗೆ ವಿರೋಧಿಗಳಾದ ಅಮಾಯಕರಮೇಲೆ ನಿಂದಾರೋಪಗಳನ್ನು ಮಾಡತೊಡಗಿದರು. ಕೆಲ ಅಮಾಯಕರು ಇದರಿಂದ ರಾಜದಂಡಕ್ಕೆ ಗುರಿಯಾದರು. ರಾಜ್ಯದಲ್ಲಿ ವಿದ್ಯಾವಿಹೀನತೆಯಿಂದಲೂ ಅಲ್ಪ ವಿದ್ಯಾವಂತರಾದ ಮೇಧಾವಿಗಳ ಪ್ರಚೋದನೆಗಳಿಂದಲೂ ಕುಲ, ಮತ, ಭಾಷೆಗಳ ಸಂಬಂಧವಾದ ವಿವಾದಗಳು ಆಗಲೇ ಹುಟ್ಟಿದ್ದವು. ಯುದ್ದ ಪ್ರಯತ್ನದ ಘೋಷಣೆಯು ಈ ವಿವಾದಗಳಿಗೆ ಬೆಂಬಲವನ್ನು ಕೊಟ್ಟಿತು. ಜನರಲ್ಲಿ ಬಹು ಕಾಲದಿಂದ ಕುಲಧರ್ಮದ ಸ್ವರೂಪದಲ್ಲಿ ನೆಲೆಗೊಂಡಿದ್ದ ಸಹಕಾರವು ಅಲ್ಲಲ್ಲಿ ಪೆಟ್ಟು ತಿಂದು, ಕುಲಗಳ ನಡುವೆ ಉಚ್ಚ ನೀಚ ಭಾವನೆಗಳೂ ಅಸಹಕಾರವೂ ಈರ್ಷ್ಯಾಯಾಸೂಯೆಗಳೂ ಸ್ಪರ್ಧೆಗಳೂ ತಲೆದೋರಿದವು. ಅಲ್ಲದೆ, ಸ್ವಕುಲವೃತ್ತಿಯಿಂದ ತೃಪ್ತರಾಗದೆ ಕೆಲವರು ಪರಕುಲವೃತ್ತಿಯನ್ನು ಅವಲಂಬಿಸಿ, ಇತರ ಕುಲದವರೊಂದಿಗೆ ಸ್ಪರ್ಧೆ ನಡೆಸಿದುದು ಇನ್ನಷ್ಟು ವಿಭೇದಗಳಿಗೆ ಸಹಕಾರಿ ಆಯಿತು. ಇಂತಹ ಸ್ಪರ್ಧೆಯನ್ನು ಕೆಲವರು ಪರಿಸ್ಥಿತಿಯ ಒತ್ತಾಯದಿಂದಲೂ ಮಾಡಬೇಕಾಗಿ ಬಂದಿತು. ತಮ್ಮ ತಮ್ಮ ಮತಗಳ ಪರಮ ಧ್ಯೇಯವನ್ನು ಅರಿಯದೆ ಮೂಢರಾಗಿ ಜನರು ಪರಮತ ದ್ವೇಷವನ್ನೂ ಮಾಡತೊಡಗಿದರು. ಕೇವಲ ಸ್ವಾರ್ಥಿಗಳಾದ ವಾಚಾಳರು ಎಬ್ಬಿಸಿದ್ದ ಅವೇಶಕ್ಕೊಳಗಾಗಿ ಕೆಲವರು ಪರಭಾಷಾ ದ್ವೇಷವನ್ನೂ ಮಾಡತೊಡಗಿದರು. ಈ ಪರಿಸ್ಥಿತಿಯಲ್ಲಿ ಜನರಲ್ಲಿ ಶಾಂತಿ ಮತ್ತು ಕಾರ್ಯನಿಷ್ಠೆಗಳಿಗೆ ಧಕ್ಕೆಯುಂಟಾಗಿ ದಾರಿದ್ರ್ಯವೂ, ಕ್ಷೋಭೆಯೂ, ಬೆಳೆಯುತ್ತ ಬಂದವು. ನಿಜವಾದ ಜ್ಞಾನಿಗಳ ಮತ್ತು ವಿದ್ಯಾವಂತರ ಉದಾರ ಭಾವಗಳೂ, ಕಲಾಕಾರರ ರಸಭಾವಗಳೂ, ಸತ್ಸಂಪ್ರದಾಯದ ಅಭಯಭಾವವೂ ಜನರಿಗೆ ದುರ್ಲಭವಾದವು.
ಹೀಗೆಯೇ ನಾಲೈದು ವರುಷಗಳು ಕಳೆದವು. ರಾಜನು ತನ್ನ ಸೈನ್ಯವನ್ನು ಎಷ್ಟು ಅಭಿವೃದ್ಧಿ ಪಡಿಸಿದರೂ ಅದು ಹೇಮಗಿರಿ ರಾಜ್ಯದ ಸೈನ್ಯದಷ್ಟಾಗಲಿಲ್ಲ. ಚಾರಚಕ್ಷುಗಳಾದ ಮಂತ್ರಿಗಳೂ, ಪ್ರಧಾನಿಯೂ, ಸೈನ್ಯಾಧಿಪತಿಯೂ, ಘನಗಿರಿ ರಾಜ್ಯದ ಸೈನ್ಯವು ಹೇಮಗಿರಿ ರಾಜ್ಯದ ಸೈನ್ಯದೊಂದಿಗೆ ಯುದ್ಧಮಾಡಿ ಜಯಿಸಬಲ್ಲದೆಂಬ ಭರವಸೆಯನ್ನು ಎಳ್ಳಷ್ಟೂ ಪಡೆಯಲಿಲ್ಲ. ಆನೆಯಿಂದ ಬಿದ್ದ ಬಲದೇವನು ಸ್ವಲ್ಪ ಚೇತರಿಸಿಕೊಂಡು, ತೀರಾ ಮುದುಕನಾದರೂ ರಾಜ್ಯವನ್ನಾಳುತ್ತಿದನು. ಆತನಿಗೆ ಮಂತ್ರಿಗಳ ಮತ್ತು ಸೈನ್ಯಾಧಿಪತಿಯ ಪೂರ್ಣ ಬೆಂಬಲವೂ ಪ್ರಜೆಗಳ ಬೆಂಬಲವೂ ಇತ್ತು. ಆತನಿಗೆ ಮಕ್ಕಳಿರಲಿಲ್ಲ. ಆತನು ಅಷ್ಟು ಮುದುಕನಾದರೂ ತಾನು ಇನ್ನೂ ಬಹುಕಾಲ ಜೀವಿಸವುದಾಗಿ ಧೃಡವಾಗಿ ನಂಬಿಕೊಂಡಿದ್ದದು. ಯಾರನ್ನೂ ಆತನು ಯುವರಾಜನನ್ನಾಗಿ ಆರಿಸಲಿಲ್ಲ. ಆತನು ಆನೆಯಿಂದ ಬಿದ್ದ ಮೇಲೆ ಸುಮಾರು ಐದು ವರುಷಗಳ ಕಾಲಬದುಕಿದ್ದು ಹಠಾತ್ತನೆ ಒಂದು ದಿನ ಮೃತಪಟ್ಟನು. ಪ್ರಬಲನಾಗಿದ್ದ ಸೈನ್ಯಾಧಿಪತಿಯೇ ರಾಜ್ಯದ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡನು. ಆದರೆ ಪ್ರಧಾನಿಯೂ, ಇತರ ಮಂತ್ರಿಗಳೂ, ಪ್ರಜೆಗಳಲ್ಲಿ ಪ್ರಮುಖರಾದವರೂ ಸೈನ್ಯಾಧಿಪತಿ ರಾಜನಾಗುವುದನ್ನು ಒಪ್ಪುತ್ತಿರಲಿಲ್ಲ. ಸೈನ್ಯಾಧಿಪತಿಗೆ ತಾನು ರಾಜನಾಗಬೇಕೆಂಬ ಆಸೆಯೂ ಇರಲಿಲ್ಲ. ಸೈನ್ಯಾಧಿಪತಿಗೂ, ಮಂತ್ರಿಗಳಿಗೂ ಪ್ರಜಾಮುಖ್ಯರಿಗೂ, ಸರ್ವಪ್ರಿಯನಾದ ಯಾರಾದರೊಬ್ಬನು ರಾಜನಾಗಬೇಕೆಂಬ ಉದ್ದೇಶವು ಇತ್ತು. ಈ ಉದ್ದೇಶವನ್ನು ಇವರೆಲ್ಲರೂ ಒಂದು ಸಮ್ಮೇಳನದಲ್ಲಿ ಪ್ರಕಟಿಸಿದರು. ಹೀಗೆ ಒಬ್ಬ ಜನಪ್ರಿಯನಾದ ರಾಜನನ್ನು ಆರಿಸಿಕೊಳ್ಳುವವರೆಗೂ ಸೈನ್ಯಾಧಿಪತಿಯೇ ಆಡಳಿತವನ್ನು ನಡೆಸಲು ಜನರು ಒಪ್ಪಿಕೊಂಡರು.
