ಸನಾತನ ಧರ್ಮದ ಮೂಲ
(ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಓದುಗರಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಪ್ರಶ್ನೆ:- ಸನಾತನ ಧರ್ಮಕ್ಕೆ ಮೂಲ ಯಾವುದು? ಸನಾತನ ಧರ್ಮದ ಮೌಲ್ಯಗಳು ಹಿಂದಿನ ಪೀಳಿಗೆಗೂ ಈಗ ನವ ಪೀಳಿಗೆಗೂ ಹೋಲಿಸಿದರೆ ರೂಪಾಯಿ ಅಪಮೌಲ್ಯವಾದಂತಾಗಲು ಕಾರಣವೇನು?
ಈ ನವೀನ ಪ್ರಪಂಚದ ಹಿಂದೂ, ಬೌದ್ಧ, ಕ್ರೈಸ್ತ, ಮುಸಲ್ಮಾನ್ ಈ ಎಲ್ಲ ಮತಗಳಲ್ಲಿಯೂ ಉಜ್ವಲಿಸಲು ಮಾಡಬೇಕಾದ ಕರ್ತವ್ಯಗಳೇನು?
ಉತ್ತರ:- ಮನುಸ್ಮೃತಿಯ ಕೆಳಕಂಡ ಶ್ಲೋಕವನ್ನು ಇಲ್ಲಿ ಸ್ಮರಿಸಬೇಕಾಗಿದೆ.
ವೇದೋಖಿಲೋ ಧರ್ಮಮೂಲಂ
ಸ್ಮೃತಿ ಶೀಲೇ ಚ ತತ್ವಿದಾಂ
ಆಚಾರಶ್ಚೈವ ಸಾಧೂನಾಂ
ಆತ್ಮನಸ್ತುಷ್ಟಿ ರೇವಚ
ಸಮಸ್ತ ವೇದವೂ ಧರ್ಮಮೂಲವೆಂದು ಮೇಲಿನ ಶ್ಲೋಕ ತಿಳಿಸುತ್ತಿದೆ. ನನ್ನ ಅಭಿಪ್ರಾಯದಲ್ಲಿ ಪ್ರಪಂಚದಲ್ಲಿನ ಎಲ್ಲ ದೇಶ ಕಾಲಗಳಲ್ಲಿಯು ಜ್ಞಾನಿಗಳೂ, ಸ್ವಾರ್ಥರಹಿತರೂ, ಲೋಕಹಿತಾಸಕ್ತರೂ, ತಪಸ್ವಿಗಳೂ ಆದವರು ಬೋಧಿಸಿರುವ ಜ್ಞಾನವೇ ವೇದ. ಆದುದರಿಂದ ನಾನಾ ಮತಗಳ ಸ್ಥಾಪಕರಲ್ಲಿ ಮೇಲ್ಕಂಡ ಅರ್ಹತೆ ಉಳ್ಳವರ ಬೋಧನೆಗಳೆಲ್ಲವೂ ಸನಾತನ ಧರ್ಮಕ್ಕೆ ಮೂಲವಾಗಿ ಗಣಿಸಬಹುದು. ಅಲ್ಲದೆ ಆ ವೇದವನ್ನು ತಿಳಿದವರು ಅದನ್ನು ಚೆನ್ನಾಗಿ ಸ್ಮರಣೆ ಮಾಡಿ ಅರ್ಥಮಾಡಿಕೊಂಡು ಅದರಂತೆ ಆಚರಿಸಿ ಲೋಕಹಿತ ಬುದ್ಧಿಯಿಂದ ಮಾಡಿದ ಹಿತೋಪದೇಶವೂ, ತೋರಿಸಿದ ಶೀಲವೂ ಧರ್ಮಮೂಲ. ಮೇಲ್ಕಂಡ ಮೂಲಗಳ ಸಹಾಯದಿಂದ ಧರ್ಮನಿರ್ಣಯ ಮಾಡಲು ಆಗದಿದ್ದರೆ ಸಜ್ಜನರ ಆಚಾರವುಸಹ ಧರ್ಮಮೂಲ. ಇದರಿಂದಲೂ ನಿರ್ಣಯ ಸಾಧ್ಯವಾಗದಿದ್ದರೆ ಅಂತರಾತ್ಮನ ಒಪ್ಪಿಗೆ ಧರ್ಮಮೂಲ.
ಮೇಲ್ಕಂಡ ಶ್ಲೋಕದಲ್ಲಿ ಹೇಳಿರುವ ಧರ್ಮ ಮೂಲಗಳ ಕಡೆ ಭಕ್ತಿ ಶ್ರದ್ಧೆಗಳು ಕಡಿಮೆಯಾಗಿರುವುದೇ ಸನಾತನ ಧರ್ಮದ ಮೌಲ್ಯಗಳ ಅಪಮೌಲ್ಯಕ್ಕೆ ಕಾರಣ. ಇದಕ್ಕೆ ಕಾರಣ ಅದ್ಭುತವಾಗಿ ಬೆಳೆದ ಇಂದಿನ ಭೌತಿಕ ವಿಜ್ಞಾನ ಮತ್ತು ಇದರ ಫಲಗಳಲ್ಲಿನ ವ್ಯಾಮೋಹ. ಪುನಃ ಧರ್ಮವು ಪ್ರಪಂಚಾದ್ಯಂತ ಪ್ರಜ್ವಲಿಸಲು ಮೇಲಿನ ಶ್ಲೋಕದಲ್ಲಿ ಹೇಳಿರುವ ಧರ್ಮಮೂಲಗಳ ಕಡೆ ಹೆಚ್ಚಿನ ಗಮನ ಕೊಡುವುದೊಂದೇ ಮಾರ್ಗ.