ಸೃಷ್ಟಿ ಸ್ಥಿತಿ ಲಯಗಳು
(ದಿನಾಂಕ 1 – 1- 1996 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಈ ವಿಶಾಲ ವಿಶ್ವದಲ್ಲಿನ ಪ್ರತಿಯೊಂದು ವಸ್ತುವಿಗೂ ಮತ್ತು ಪ್ರತಿಯೊಂದು ಜೀವಿಗೂ ಸೃಷ್ಟಿ ಸ್ಥಿತಿ ಲಯಗಳೆಂಬ ಮೂರು ಅವಸ್ಥೆಗಳು ಇದ್ದೇ ಇವೆ. ಇದು ವೇದಾಂತದ ಸತ್ಯಮಾತ್ರವಲ್ಲದೆ ವೈಜ್ಞಾನಿಕ ಸತ್ಯವೂ ಆಗಿದೆ. ಸತ್ಯದ ಕಡೆ ದೃಷ್ಟಿಯಿರುವ ಪ್ರತಿ ಒಬ್ಬ ಮಾನವನೂ ಇದನ್ನು ಗಮನಿಸಬೇಕು. ಶರೀರದ ವ್ಯಾಮೋಹ, ಧನದ ವ್ಯಾಮೋಹ, ಕೀರ್ತಿಯ ವ್ಯಾಮೋಹ, ಸುಖದ ವ್ಯಾಮೋಹ, ಧನದ ವ್ಯಾಮೋಹ, ಕೀರ್ತಿಯ ವ್ಯಾಮೋಹ, ಸುಖದ ವ್ಯಾಮೋಹ ಮುಂತಾದ ವ್ಯಾಮೋಹಗಳಲ್ಲಿ ಮೇಲ್ಕಂಡ ಸತ್ಯದ ದೃಷ್ಟಿಗೆ ಧಕ್ಕೆ ಬರುತ್ತದೆ. ಇದಕ್ಕೇ ಮಾಯೆಯೆಂದು ಹೆಸರು. ಮಾಯೆ ಎಂಬುದು ಪೂರ್ಣ ಸತ್ಯವೂ ಅಲ್ಲ . ಅಸತ್ಯವೂ ಅಲ್ಲ. ನಿಜವಾದ ಸ್ವರೂಪವನ್ನು ಗಮನಿಸದೆ ಆ ಸ್ವರೂಪಕ್ಕೆ ಸಂಬಂಧಿಸಿದ ಕಲ್ಪನೆಗಳಿಂದ ಕೂಡಿರುವುದೇ ಮಾಯೆ.
ಈ ಮಾಯೆಯಿಂದಲೇ ಸುಖ, ದುಖಃ, ಪ್ರೀತಿ, ದ್ವೇಷ, ಮುಂತಾದ ದ್ವಂದ್ವಗಳು ಹುಟ್ಟುವುದು. ಇದರಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಮನಶ್ಯಾಂತಿಯಿಂದ ಲಭಿಸುವಷ್ಟು ಆನಂದವು ದ್ವಂದ್ವಗಳಿಂದ ಕೂಡಿದ ಜೀವನದಲ್ಲಿ ಲಭಿಸುವುದಿಲ್ಲ. ಆದುದರಿಂದ ಪ್ರತಿ ಒಬ್ಬ ಮಾನವನೂ ಮನಶ್ಯಾಂತಿಗಾಗಿ ಮತ್ತು ಅದರಿಂದ ಬರುವ ಪರಮಾನಂದಕ್ಕಾಗಿ ಪ್ರಯತ್ನಿಸಬೇಕು. ಅದಕ್ಕೆ ಆತನು ಸೃಷ್ಟಿ ಸ್ಥಿತಿ ಲಯಗಳೆಂಬ ಮೂರು ಅವಸ್ಥೆಗಳ ಇರುವಿಕೆಯನ್ನು ಪ್ರತಿ ಒಂದು ವಿಷಯದಲ್ಲಿಯೂ ಗಮನಿಸುತ್ತಿರಬೇಕು.
ನಮ್ಮ ಶರೀರವು ನಾವು ಹುಟ್ಟಿದಾಗ ಅಸ್ತಿತ್ವಕ್ಕೆ ಬಂತು. ಸ್ವಲ್ಪ ದಿನವಿದ್ದು ನಾವು ಸಾಯುವಾಗ ನಾಶವಾಗುತ್ತದೆ. ಇದರಲ್ಲಿನ ಸೃಷ್ಟಿ ಸ್ಥಿತಿ ಲಯಗಳನ್ನು ನಾವು ಗಮನಿಸಿ ನಾಶವಿಲ್ಲದ ಆತ್ಮವನ್ನು ಧ್ಯಾನಿಸುತ್ತ ಪರಮಾನಂದವನ್ನು ಅನುಭವಿಸಬೇಕು. ನಾವು ಎಚ್ಚತ್ತಿರುವಾಗಲೂ, ನಿದ್ರಿಸುವಾಗಲೂ ನಮ್ಮಲ್ಲಿರುವ ಆತ್ಮ ನಮ್ಮ ಜನನಕ್ಕಿಂತಲೂ ಹಿಂದೆ ಮತ್ತು ಮರಣಕ್ಕಾಚೆ ಇರಬೇಕಲ್ಲವೆ? ಹಾಗೆಯೇ ಸೃಷ್ಟಿ, ಸ್ಥಿತಿ ಲಯಗಳಗೀಗಿರುವ ಈ ವಿಶ್ವದ ಹಿನ್ನೆಲೆಯಲ್ಲಿ ನಾಶರಹಿತವಾದ ಆತ್ಮವೊಂದಿದ್ದೇ ಇದೆ. ಅದೇ ಪರಮಾತ್ಮ. ಅಣುಗಳ ಹಿಂದೆ ಒಂದು ಮಹಾ ಶಕ್ತಿಯಿರುವುದನ್ನು ವಿಜ್ಞಾನವು ತೋರಿಸಿಕೊಟ್ಟಿರುವಾಗ ಅದಕ್ಕೂ ಹಿಂದೆ ಈ ವಿಶ್ವದ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣವಾಗಿ ನಾಶರಹಿತವಾದ ಒಂದು ಆತ್ಮವಿರಬೇಕಲ್ಲವೆ? ಆತನೇ ಮರಮಾತ್ಮನು. ಈ ಪರಮಾತ್ಮನಿಗೆ ಹೋಲಿಸಿದರೆ ಜೀವಾತ್ಮಗಳು ಅಣುಗಳಿದ್ದಂತೆ. ವೈಜ್ಞಾನಿಕವಾಗಿ ವಿವಿಧ ರೂಪಗಲ್ಲಿರುವ ಈ ವಿಶ್ವವೆಲ್ಲಾ ಶಕ್ತಿಮಯವಾಗಿರುವಾಗ ಈ ಜೀವಾತ್ಮಗಳು ಸಹ ಪರಮಾತ್ಮನ ಅಂಶಗಳೇ ಎಂದು ಭಾವಿಸಬೇಕಾಗಿದೆ. ಹೀಗೆ ಭಾವಿಸುತ್ತ ದ್ವಂದಗಳಿಗೆ ಅತೀತರಾಗಿ ಪರಮಾನಂದದಿಂದ ಸಮಸ್ತ ವಿಶ್ವವನ್ನು ಇದರಲ್ಲಿನ ಒಳ್ಳೆಯ ಮತ್ತು ಕೆಟ್ಟ ಕೆಲಸಗಳನ್ನು, ಎಲ್ಲವನ್ನು ಪರಮಾತ್ಮನ ಲೀಲೆಯನ್ನಾಗಿ ಭಾವಿಸುತ್ತ ಮತ್ತು ನಮ್ಮ ಶರೀರದ ಸೃಷ್ಟಿ ಸ್ಥಿತಿ ಲಯಗಳನ್ನುಭಾವಿಸುತ್ತ ಇದರ ಮೇಲಿನ ಮಮಕಾರವನ್ನು ಬಿಟ್ಟು ವರ್ತಿಸುವುದೇ ಪರಮಾನಂದಕ್ಕೆ ಮಾರ್ಗ. ಇದೇ ಮೋಕ್ಷ ಮಾರ್ಗ. ಇದೇ ಪರಮ ಭಕ್ತಿ ಮಾರ್ಗ.
- ಲಂಕಾ ಕೃಷ್ಣಮೂರ್ತಿ