(ದಿ. 1-7-1991 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಸ್ಥೂಲ ಸೂಕ್ಷ್ಮ ಕಾರಣ ಶರೀರಗಳು
ಬಹು ಜನಪ್ರಿಯರಾಗಿದ್ದ ರಾಜೀವಗಾಂಧೀ ಅವರ ಅಕಾಲ, ಅಮಾನವೀಯ ಘೋರ ಮರಣವನ್ನು ಕುರಿತು ಈ ಪತ್ರಿಕೆಯು ತನ್ನ ಸಂತಾಪವನ್ನು ವ್ಯಕ್ತಪಡಿಸುತ್ತಿದೆ. ಇದು ಆತುರದ, ಅವಿವೇಕದ, ಸಹನೆ, ಸಂಯಮವನ್ನು ಮೀರಿದ ಅಕೃತ್ಯದ ಪರಮಾವಧಿಯೇ ಸರಿ. ಹೊಸ ಪ್ರಧಾನಮಂತ್ರಿಗಳಾದ ಶ್ರೀ ಪಿ. ವಿ. ನರಸಿಂಹರಾವ್ ಅವರನ್ನು ನಮ್ಮ ಪತ್ರಿಕೆಯು ಅಭಿನಂದಿಸುತ್ತಿದೆ.
ಭಯೋತ್ಪಾದಕರ ಚಟುವಟಿಕೆಗಳು ಕ್ರಮೇಣ ಹೆಚ್ಚುತ್ತಿರುವುದು ಬಹಳ ವಿಷಾದಕರವಾಗಿದೆ. ರಾಜಕೀಯ ವೈಷಮ್ಯಗಳು, ಆಡಳಿತದಲ್ಲಿ ಅಸಮರ್ಥತೆ, ಭ್ರಷ್ಟಾಚಾರ ಮತ್ತು ಭಯೋತ್ಪಾದಕರ ಹಾವಳಿ ದೇಶಕ್ಕೆ ದೊಡ್ಡ ಸಮಸ್ಯೆಗಳಾಗಿ ನಿಂತಿದೆ. ಈ ಸ್ಥಿತಿಗೆ ಕಾರಣವೇನು? ನಿವಾರಣವೇನು? ಎಂದು ಆಲೋಚಿಸಿ ಪ್ರತಿಯೊಬ್ಬ ಭಾರತೀಯನೂ ತನ್ನ ಕೈಲಾದಷ್ಟು ಪ್ರಯತ್ನಿಸುವುದು ಅವನ ಆದ್ಯ ಕರ್ತವ್ಯವಾಗಿದೆ.
ಸಾಮಾನ್ಯ ಪ್ರಜೆಗಳು ಮತದಾನದಿಂದ ಅನರ್ಹರನ್ನು ತೊಲಗಿಸಿ ಅರ್ಹರಿಗೆ ಅಧಿಕಾರ ಕೊಡಬಹುದು. ಇದರಿಂದ ಮೇಲ್ಕಂಡ ಸಮಸ್ಯೆಗಳ ಪರಿಹಾರವಾಗಬಹುದು ಎಂದು ಭಾವಿಸಬಹುದೇ? ಇದಕ್ಕೆ ಉತ್ತರವನ್ನು ಗೋಡೆಗಳ ಮೇಲೆ ಮತದಾನ ನಡೆಯುವುದಕ್ಕೆ ಮುಂಚೆಯೇ ನೋಡುತ್ತಿದ್ದೇವೆ. ಯಾರ ಯಾರ ಕಾಂಪೌಂಡ್ ಗೋಡೆಗಳ ಮೇಲೋ ಅಭ್ಯರ್ಥಿಗಳ ಹೆಸರುಗಳನ್ನು ಪಕ್ಷದ ಚಿಹ್ನೆಗಳನ್ನು ಇಷ್ಟಾನುಸಾರ ಬರೆಯುವುದು ಕಾನೂನು ಒಪ್ಪುತ್ತದೆಯೇ? ಇದು ನಾಗರೀಕತೆಯೇ? ಹೀಗೆ ಬರೆಯದಿರುವ ಪಕ್ಷವಿದೆಯೇ? ಇದೇ ಉತ್ತರ. ಈ ದುಸ್ಥಿತಿಗೆ ಕಾರಣವೇನು? ಜನರಲ್ಲಿ ಸಂಸ್ಕೃತಿಯ ನಾಶವೇ ಈ ದುಸ್ಥಿತಿಗೆ ಕಾರಣ. ಬಹುಸಂಖ್ಯಾತರಾದ ಸಜ್ಜನರು ಕಾಲ ದೇಶಗಳಿಗೆ ಮೀರಿದ ಭಾರತೀಯ ಸಂಸ್ಕೃತಿಯನ್ನು ಬೆಳೆಸುವುದೇ ಇದಕ್ಕೆ ನಿವಾರಣೋಪಾಯ.
ಸಂಸ್ಕೃತಿ ಎಂಬುದು ಅಂಗಡಿಗಳಲ್ಲಿ ಸಿಗುವ ವಸ್ತುವಲ್ಲ. ಇದು ಜನರ ವೇಷ ಭೂಷಣಗಳಲ್ಲಿಲ್ಲ. ಶರೀರದ ನಿರ್ಮಾಣದಲ್ಲಿಲ್ಲ. ಆಟಪಾಟಗಳಲ್ಲಿಲ್ಲ. ಇವೆಲ್ಲ ಸ್ಥೂಲ ಜಗತ್ತು ಮತ್ತು ಸ್ಥೂಲ ಶರೀರಕ್ಕೆ ಸೇರಿರುವವು. ಇವುಗಳಲ್ಲಿ ಸಂಸ್ಕೃತಿಯಿಲ್ಲ. ಈ ಸ್ಥೂಲ ಜಗತ್ತು ಇಷ್ಟು ದೊಡ್ಡದಾದರೂ ಜಡವಾದುದು. ಸ್ಥೂಲ ಶರೀರವು ಅಷ್ಟೇ. ಇದರೊಳಗಿನ ಸೂಕ್ಷ್ಮ ಮತ್ತು ಕಾರಣ ಶರೀರಗಳಲ್ಲಿ ನಾವು ಸಂಸ್ಕೃತಿಯನ್ನು ಹುಡುಕಬೇಕಾಗಿದೆ. ಇಲ್ಲಿ ಒಂದು ವೈಪರೀತ್ಯವನ್ನು ನಾವು ಗಮನಿಸಬೇಕಾಗಿದೆ. ಸ್ಥೂಲ ಶರೀರದಲ್ಲಿ ಶಕ್ತಿ ಹೆಚ್ಚು. ಸೂಕ್ಷ್ಮ ಶರೀರದಲ್ಲಿ ಕಡಿಮೆ. ಕಾರಣ ಶರೀರದಲ್ಲಿ ಇನ್ನು ಕಡಿಮೆ ಎಂದು ಭಾವಿಸುತ್ತೇವೆ. ಆದರೆ ಇದು ತಪ್ಪು ಕಲ್ಪನೆ. ಯಥಾರ್ಥಸ್ಥಿತಿಯು ತದ್ವಿರುದ್ಧವಾಗಿದೆ. ಸ್ಥೂಲಕ್ಕಿಂತಲೂ ಸೂಕ್ಷ್ಮದಲ್ಲಿ ಮತ್ತು ಅದಕ್ಕಿಂತಲೂ ಕಾರಣದಲ್ಲಿ ಶಕ್ತಿ ಹೆಚ್ಚು.
ಸಮಸ್ತ ಲೋಕವನ್ನೂ ಜಯಿಸುವ ಕಾಮದೇವನು ನಿಜವಾಗಿ ಯಾವ ಬಲ ಇಲ್ಲದವನು. ಆದರೂ ಜಯಿಸಲು ಕಾರಣ ಆದಿಶಕ್ತಿಯ ಅನುಗ್ರಹಲೇಶವೆಂದು ಸೌಂದರ್ಯಲಹರಿಯಲ್ಲಿ ಹೇಳಲ್ಪಟ್ಟಿದೆ.
ಧನುಃ ಪೌಷ್ಟಂ ಮೌರ್ವೀ ಮಧುಕರಮಯೀ ಪಂಚವಿಶಿಖಾ
ವಸನ್ತ ಸ್ಸಾಮಂತೋ ಮಲಯಮರುದಾಯೋ ಧನರಥಃ
ತಥಾಪ್ಯೇಕಸ್ಸರ್ವಂ ಹಿಮಗಿರಿಸುತೇ ಕಾನುಪಿ ಕೃಪಾ
ಮಪಾಂಗಾತ್ತೇ ಲಬ್ಧ್ವಾ ಜಗದಿದಮನಂಗೋ ವಿಜಯತೇ
ಕಾಮನು ಶರೀರವಿಲ್ಲದವನು. ವಸಂತನನ್ನು ಬಿಟ್ಟರೆ ಯಾವ ಸಹಾಯಕರೂ ಇಲ್ಲ. ಆತನ ಬಿಲ್ಲು ಹೂಗಳಿಂದ ನಿರ್ಮಿತವಾದುದು. ಅದರ ಹೆದೆ ದುಂಬಿಗಳ ಸಾಲು. ಐದು ಹೂ ಬಾಣಗಳನ್ನು ಬಿಟ್ಟರೆ ಬೇರೆ ಗತಿಯಿಲ್ಲ. ಮಲಯ ಮಾರುತವೇ ಆತನ ರಥ. ಆದರೂ ದೇವಿಯ ಕೃಪಾಕಟಾಕ್ಷದಿಂದ ಜಗವನ್ನೆಲ್ಲಾ ಗೆಲ್ಲುತ್ತಿದ್ದಾನೆ.
ಇದರಲ್ಲಿ ನಾವು ಗಮನಿಸಬೇಕಾದ ವಾಸ್ತವಾಂಶವೆಂದರೆ ಈ ಜಗತ್ತಿನಲ್ಲಿ ಸ್ಥೂಲಕ್ಕಿಂತಲೂ ಸೂಕ್ಷ್ಮಕ್ಕೆ ಶಕ್ತಿ ಹೆಚ್ಚು. ಆ ಶಕ್ತಿಯು ಸೂಕ್ಷ್ಮ ತರವಾದ ಪರತತ್ವದಿಂದ ಬಂದಿರುವುದು ಎಂಬ ವಿಷಯ. ಕಾಮವಿಕಾರವನ್ನು ಉದ್ದೀಪನೆ ಮಾಡುವ ಪುಷ್ಪಗಳು, ವಸಂತಋತು, ಮಲಯಾನಿಲ, ದುಂಬಿಗಳು ಮುಂತಾದ ವಸ್ತುಗಳು ಮೃದುವಾದವು. ಇವುಗಳು ಸಹ ಸೂಕ್ಷ್ಮ ಶರೀರಕ್ಕೆ ಸೇರಿದ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರಿತ್ತವೆ ಎಂಬುದು ಅನುಭವವಿದಿತವಾಗಿರುವ ವಿಷಯ. ಇದು ಒಂದು ನಿದರ್ಶನ ಮಾತ್ರ. ಅಸಂಸ್ಕೃತಿಯಲ್ಲಿನ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಾದಿ ಸಮಸ್ತ ವಿಕಾರಗಳಿಗೂ ಇದನ್ನು ಅನ್ವಯಿಸಿಕೊಳ್ಳಬೇಕು. ಸಂಸ್ಕೃತಿ ಅಥವಾ ಅಸಂಸ್ಕ್ಟತಿ ಎಂಬುದು ಸೂಕ್ಷ್ಮ ಶರೀರಕ್ಕೆ ಸೇರಿರುವ ಮನಸ್ಸಿಗೆ ಸಂಬಂಧಿಸಿದ್ದು ಮತ್ತು ಕಾರಣ ಶರೀರಕ್ಕೆ ಸೇರಿದ ಒಳ್ಳೆಯ ಮತ್ತು ಕೆಟ್ಟ ವಾಸನೆಗಳಿಗೆ ಸಂಬಂಧಿಸಿದ್ದು. ಈ ವಿಷಯವನ್ನು ಚೆನ್ನಾಗಿ ಗಮನಿಸಬೇಕಾಗಿದೆ.
ಆದುದರಿಂದ ಇಲ್ಲಿಯವರೆಗೂ ಬೆಳೆದು ಬಂದಿರುವ ಅಸಂಸ್ಕೃತಿಯನ್ನು ಹೋಗಲಾಡಿಸಿ ಸಂಸ್ಕೃತಿಯನ್ನು ಮೂಡಿಸುವ ಪ್ರಯತ್ನವು ಮನಸ್ಸು ಮತ್ತು ವಾಸನೆಗಳ ಹಂತದಲ್ಲಿ ನಡೆಯಬೇಕಾಗಿದೆ. ಇದಕ್ಕೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಜ್ಞಾನದ ಪ್ರಸಾರವಲ್ಲದೆ ಬೇರೆ ಮಾರ್ಗವಿಲ್ಲ.
– ಲಂಕಾ ಕೃಷ್ಣಮೂರ್ತಿ